ಕೆಲವು ಭಾರತೀಯ ಭಾಷೆಗಳಿಗೆ ಸಹಸ್ರಾರು ವರುಷಗಳ ಅಖಂಡ ಚರಿತ್ರೆಯಿದೆ. ಅಂಥ ಭಾಷೆಗಳಲ್ಲಿ ಕನ್ನಡವೂ ಒಂದು. ಎರಡು ಸಾವಿರ ವರುಷಕ್ಕೂ ಹೆಚ್ಚು ದೀರ್ಘವಾದ ಚರಿತ್ರೆಯಿರುವ ಕನ್ನಡ ಭಾಷೆ ಕೋಟ್ಯಾಂತರ ಜನರಾಡುವ ಜೀವಮತ ಭಾಷೆಯಾಗಿದೆ. ಹಿಂದೆ ಉದ್ದಕ್ಕೂ ಕನ್ನಡಕ್ಕೆ ರಾಜಾಶ್ರಯ ದೊರಕಿತ್ತು. ಬ್ರಿಟಿಷರ ಕಾಲದಲ್ಲಿ ಮತ್ತೆ ಹೊಸದಾಗಿ ಜನರೇ ಗುಂಪುಗಳಾಗಿ ಸೇರಿ ತಮ್ಮ ಭಾಷೆ, ಸಂಸ್ಕೃತಿ, ಕಲೆ, ಸಂಗೀತ ಇವುಗಳ ರಕ್ಷಣೆಗೆ ಮುಂದಾದರು. ಇಂಥ ಪ್ರಯತ್ನದ ಫಲವೇ ಕನ್ನಡ ಸಂಘಗಳ ಸ್ಥಾಪನೆ.

ಸಂಘ ಸಂಸ್ಥೆಗಳು ಕನ್ನಡ ನಾಡು, ನುಡಿ, ಕಲೆ, ಸಂಸ್ಕೃತಿ ಮತ್ತು ಒಟ್ಟು ಕನ್ನಡತನದ ಪ್ರಸಾರ ಕೇಂದ್ರಗಳು, ವಾಹಕಗಳು. ಈ ಶತಮಾನದಲ್ಲಿ ಕರ್ನಾಟಕದ ಪ್ರತಿಯೊಂದು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲೂ ಒಂದಿಲ್ಲೊಂದು ಕನ್ನಡ ಸಂಘವೋ ಸಂಸ್ಥೆಯೋ ಸ್ಥಾಪಿತಗೊಂಡು ಆಯಾ ಕಾಲದ ಅಗತ್ಯ ಪೂರೈಸಲು ಶ್ರಮಿಸುತ್ತಾ ಬಂದಿದೆಯೆಂಬುದನ್ನು ಇತಿಹಾಸ ಮರೆಯುವಂತಿಲ್ಲ.

ವ್ಯಕ್ತಿಯ ಜೀವನದಂತೆ ಸಂಸ್ಥೆಯ ಚರಿತ್ರೆಯೂ ಒಂದೇ ಪ್ರಕಾರವಾಗಿ ಇರುವುದಿಲ್ಲ. ಏಳು ಬೀಳುಗಳು ಇರುತ್ತವೆ. ಇದುವರೆಗೆ ಪ್ರಾರಂಭವಾದ ಕನ್ನಡ ಸಂಘಗಳೆಲ್ಲ ಉಳಿದಿವೆ ಎಂದು ಹೇಳುವುದು ಸಾಧ್ಯವಾಗದ ಮಾತು. ಒಳ್ಳೆಯ ಉದ್ದೇಶದಿಂದಲೇ ಬಹುಕಾಲ ಬಾಳಬೇಕೆಂಬ ಬಯಕೆಯಿಂದಲೇ ಸ್ಥಾಪಿತವಾದ ಎಷ್ಟೋ ಸಂಘ ಸಂಸ್ಥೆಗಳು ಹೇಳಹೆಸರಿಲ್ಲದಂತೆ ನಾಮಾವಶೇಷವಾಗಿವೆ. ಕೆಲವು ಇಂದಿಗೂ ಆಗಲೋ ಈಗಲೋ ಎಂಬಂತೆ ಕುಂಟುತ್ತಾ ನಡೆದಿವೆ. ಮತ್ತೆ ಕೆಲವು ಹಿಂದೆ ಎದುಸಿರು ಬಿಡುತ್ತಿದ್ದರೂ ಇಂದು ಸ್ವಲ್ಪ ಚೇತರಿಸಿಕೊಂಡಿರುವುದುಂಟು. ಲಕ್ಷಾಂತರ ಪ್ರಜೆಗಳ ರಾಜ್ಯ ಸಾಮ್ರಾಜ್ಯಗಳೇ ಮಣ್ಣು ಮುಕ್ಕಿರುವಾಗ ಕೆಲವೇ ವ್ಯಕ್ತಿಗಳ ನೆರವಿನಿಂದ ಹೊರಟ ಸಂಘ ಸಂಸ್ಥೆಗಳು ಸಾರೋದ್ದಾರವಾಗಿರಬೇಕೆಂಬುದು ತೀರದ ಬಯಕೆಯಾಗಬಹುದು.

ಯಾವುದೇ ಒಂದು ಸಂಘವಾಗಲೀ ಅಥವಾ ಸಂಸ್ಥೆಯಾಗಲೀ ಒಂದು ವ್ಯವಸ್ಥಿತ ರೂಪದಲ್ಲಿ ಕಾರ್ಯೋನ್ಮುಖವಾಗಬೇಕಿದ್ದರೆ, ತನ್ನ ಉದ್ದೇಶಿತ ಫಲಗಳನ್ನು ಹೊಂದಬೇಕಾದರೆ ಕೆಲವು ನಿಯಮಗಳನ್ನು ಪ್ರಾರಂಭದಲ್ಲಿಯೇ ರೂಪಿಸಿಕೊಳ್ಳುವುದು ಬಹಳ ಮುಖ್ಯವಾದುದು. ಅವುಗಳಲ್ಲಿ ಮುಖ್ಯವಾದ ಕೆಲವು ಅಂಶಗಳನ್ನಾದರೂ ಗಮನದಲ್ಲಿಡಬೇಕಾದುದು ತೀರಾ ಅಗತ್ಯ.

ಯಾವುದೇ ಸಂಘ ಆರೋಗ್ಯಕರವಾಗಿ ಬೆಳೆಯಬೇಕಾದರೆ ಅದು ಪರಿಮಿತ ಸಂಖ್ಯೆಯ ಸದಸ್ಯರಿಂದ ಕೂಡಿರಬೇಕು. ಅಪಾರ ಸದಸ್ಯರ ಸಂಖ್ಯೆ ಅನಗತ್ಯವಾದ ಅಡಚಣೆಗಳಿಗೆ ಅನೇಕ ಬರಿ ಅವಕಾಶವೀಯುವ ಸಂಭವವೇ ಹೆಚ್ಚು.

ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಆಸಕ್ತಿ, ಅಭಿರುಚಿ ಇರುವವರು ಮಾತ್ರ ಸದಸ್ಯರಾಗಬೇಕು. ಸದಸ್ಯರೆಲ್ಲರೂ ಆಗಾಗ ಒಟ್ಟಾಗಿ ಸೇರಬೇಕು, ಕಾರ್ಯಕ್ರಮಗಳ ಬಗ್ಗೆ ವಿಚಾರ ವಿನಿಮಯ ಮಾಡಬೇಕು. ಶಾಂತರೀತಿಯಿಂದ ಚರ್ಚಿಸಿ ವಿಷಯಗಳನ್ನು ಚರ್ಚಿಸಬೇಕು. ಹಿಂದಿನ ಸದಸ್ಯರು ಮಾಡಿದ ಕಾರ್ಯಾಚರಣೆಗಳನ್ನು ಆದಷ್ಟೂ ಮುಂದುವರಿಸಿಕೊಂಡು ಬರುವ ಪ್ರಯತ್ನ ಮಾಡಬೇಕು. ಕಾಲಕ್ಕೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಮಡುವ ಅಗತ್ಯ ಕಂಡುಬಂದರೂ ಕ್ರಾಂತಿಕಾರ ಬದಲಾವಣೆ ಸಂಘದ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ‘ಹಳೇಬೇರು-ಹೊಸಚಿಗುರು ಕೂಡಿರಲು ಮರ ಸೊಗಸು’ ಎನ್ನುವಂತೆ ಉತ್ತಮ ಅಂಶಗಳು ಹಳೆಯದಿರಲಿ ಅಥವಾ ಹೊಸದಿರಲಿ ಅದನ್ನು ಉಳಿಸಿಕೊಳ್ಳುವ ಅಥವಾ ಸ್ವೀಕರಿಸುವ ಮುಕ್ತ ವಾತಾವರಣವಿರಬೇಕು. ಹಿರಿಯ ಸದಸ್ಯರ ಅನುಭವ ಅಭಿಪ್ರಾಯಗಳಿಗೆ ಮನ್ನಣೆ ಇರಬೇಕು‌‌. ಅಗತ್ಯವಾದಲ್ಲಿ ಅವರ ಮಾರ್ಗದರ್ಶನ ಪಡೆಯಬೇಕು.

ಸದಸ್ಯರ ಬಹುಮುಖ ಪ್ರತಿಭೆ, ಸುಪ್ತ ಪ್ರತಿಭೆ ಅರಳಲು ಹೆಚ್ಚಿನ ಅವಕಾಶ ಇರಬೇಕು. ಎಲ್ಲ ಸದಸ್ಯರೂ ಸಮನಾಗಿ ಕೆಲಸವನ್ನು ಹಂಚಿಕೊಂಡು ಮಾಡಬೇಕು. ಕಡೆಯ ಬಹಳ ಮುಖ್ಯವಾದ ಅಂಶವೆಂದರೆ ಯಾವುದೇ ಸಂಘ ಸ್ತ್ರೀ ಸದಸ್ಯರಿಂದ ಕೂಡಿರಬೇಕು. ಸಮಾಜದಲ್ಲಿ ಸ್ತ್ರೀಯು ಬಹು ಮುಖ್ಯವಾದ ಒಂದು ಅಂಗವಾಗಿದ್ದು ಹೆಚ್ಚಿನ ಸಂದರ್ಭಗಳಲ್ಲಿ ಸ್ತ್ರೀಯರ ದೃಷ್ಟಿಕೋನಗಳಿಂದ ಸಮಸ್ಯೆಗಳಿಗೆ ಸುಲಭ ಪರಿಹಾರ ದೊರೆಯುತ್ತದೆ. ಈ ಕೆಲವು ಸೂಚನೆಗಳು ಕೇವಲ ಕನ್ನಡ ಸಂಘ ಸಂಸ್ಥೆಗಳಿಗೆ ಮಾತ್ರ ಅನ್ವಯವಾಗುವವಂಥವಲ್ಲ. ಇವು ಯಾವುದೇ ಸಂಘ ಸಂಸ್ಥೆಗಳಿಗೂ ಸಂಬಂಧಿಸಿದವು.

ಕನ್ನಡ ಸಂಘ ಸಂಸ್ಥೆಗಳನ್ನು ವಿವೇಚಿಸುವ ಪ್ರಾರಂಭದಲ್ಲಿಯೇ ಎರಡು ಅಂಶಗಳನ್ನು ಪ್ರಧಾನವಾಗಿ ಸ್ಪಷ್ಟಪಡಿಸುವುದು ಬಹಳ ಮುಖ್ಯವಾದುದು. ಒಂದು ಕನ್ನಡ ನಾಡಿನ ಬೆಳ್ಳಿ ಹಬ್ಬಕ್ಕೆ ಸಂಬಂಧಿಸಿದ್ದು. ಎರಡು ಗೋಕಾಕ ವರದಿಯ ಸಂದರ್ಭದ್ದು. ೧೯೮೧ ನವೆಂಬರ್ ಕರ್ನಾಟಕದ ಬೆಳ್ಳಿಹಬ್ಬವನ್ನು ಆಚರಿಸುವ ಒಂದು ಪ್ರಮುಖ ತಿಂಗಳು. ಯಾವುದೇ ಒಂದು ನಾಡಿನ ಇತಿಹಾಸದಲ್ಲಿ ಇಂಥ ಒಂದು ಆಚರಣೆ  ಹೆಚ್ಚಿನ ಮಹತ್ವದಿಂದ ಕೂಡಿರುವುದು ಸಹಜ. ಅದು ಆ ನಾಡಿನ ಜನತೆಯ ಭಾಗ್ಯ. ಆ ಬೆಳ್ಳಿಹಬ್ಬದ ಆಚರಣೆಗೆ ಒಂದು ವಿಶೇಷ ಅರ್ಥವಿದೆ. ಇದು ಅದರ ಒಂದು ಮುಖವಾದರೆ ಇನ್ನೊಂದು ಆ ಆನಂದದ ಉದ್ರೇಕದಲ್ಲಿ ಬೀದಿಗೊಂಡು, ಗಲ್ಲಿಗೊಂದು ಕನ್ನಡ ಸಂಘಗಳು ಸ್ಥಾಪನೆಯಾದುದು. ಜೊತೆಗೆ ಯಾವ ಯಾವ ಕಚೇರಿಗಳಲ್ಲಿ, ಕಾಲೇಜುಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಕ್ಕೆ ಕಡೆಯ ಮಣೆ ಇತ್ತೋ ಇದೆಯೋ ಅಲ್ಲೆಲ್ಲ ಕನ್ನಡ ಸಂಘಗಳು ಹುಟ್ಟಿಕೊಂಡವು. ಇಡೀ ಕನ್ನಡ ನಾಡು ಬೆಳ್ಳಿ ಹಬ್ಬವನ್ನು ಆಚರಿಸುವಾಗ ನಾವೇನು ಕಡಿಮೆ ? ಕನ್ನಡ ಅಭಿಮಾನಕ್ಕೆ ನಮ್ಮಲ್ಲಿ ಕೊರತೆಯೇ ? ಎನ್ನುವುದು ಒಂದು ದೃಷ್ಟಿಯಾದರೆ; ಕನ್ನಡದ ಬಗೆಗೆ ನಾವೇನೂ ಮಾಡದಿದ್ದರೆ ಕನ್ನಡಿಗರ ಎದುರಿನಲ್ಲಿ ನಾವು ಅಲ್ಪರಾಗುತ್ತೇವೆ ಎಂದು ಒಣ ಹೆಮ್ಮೆಯನ್ನು ತೋರ್ಪಡಿಸಿ ಕೊಳ್ಳಲು ಹುಟ್ಟಿದ ಕನ್ನಡ ಸಂಘ ಸಂಸ್ಥೆಗಳೆಷ್ಟೋ. ಅವುಗಳಲ್ಲಿ ಎಷ್ಟೋ ಈಗಾಗಲೇ ಹೇಳಹೆಸರಿಲ್ಲದಂತೆ ಅಳಿಸಿಹೋಗಿವೆ ಎಂದರೆ ಆಶ್ಚರ್ಯವಲ್ಲ. ಆದರೆ ಈ ಹೇಳಿಕೆಗೆ ಅಪವಾದವಿಲ್ಲದೆಯೂ ಇಲ್ಲ.

ಇನ್ನು ಎರಡನೆಯದು ಗೋಕಾಕ್ ವರದಿಯ ಸಂದರ್ಭದಲ್ಲಿ ಜನ್ಮ ತಳೆದ ಕೆಲವು ಸಂಘ ಸಂಸ್ಥೆಗಳು, ಸಮಿತಿಗಳು. ಇವುಗಳಲ್ಲಿ ಕೆಲವು ಕನ್ನಡದ ಕಳಕಳಿಗಾಗಿ ನಡೆದ ನಿಜವಾದ ಪ್ರಯತ್ನದಲ್ಲಿ ತೊಡಗಿದರೆ, ಮತ್ತೆ ಆ ಸಂಘದ ಸದಸ್ಯರಲ್ಲಿ ಕೆಲವರು ತಮ್ಮ ಹೆಸರನ್ನು ದೊಡ್ಡದು ಮಾಡಿಕೊಳ್ಳುವ ಒಂದು ಸುವರ್ಣಾವಕಾಶಕ್ಕಾಗಿ ಕಾಯುತ್ತಿದ್ದು ಈ ಸಂದರ್ಭವನ್ನು ಚೆನ್ನಾಗಿ ಉಪಯೋಗಿಸಿ ಕೊಂಡರು. ಮೇಲಿನ ಎರಡು ನಿದರ್ಶನಗಳಲ್ಲಿಯೂ ಜೊಳ್ಳನ್ನು ತೂರಿ ಕೇವಲ ಗಟ್ಟಿ ಕಾಳನ್ನು ಮಾತ್ರ ಆಯ್ದುಕೊಳ್ಳಬೇಕಾಗಿದೆ.

ಕನ್ನಡ ನಾಡು-ನುಡಿ, ಸಂಸ್ಕೃತಿ, ಕಲೆಗಳಿಗಾಗಿ ಸೇವೆ ಸಲ್ಲಿಸಿರುವ ಕೆಲವು ಸಂಸ್ಥೆಗಳು ಕನ್ನಡ ನಾಡಿನಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಂಡಿವೆ. ಅನೇಕ ದಶಕಗಳ ಹಿಂದೆಯೇ ಭರತ ಖಂಡದ ಅನೇಕ ಪ್ರಾಂತ್ಯಗಳಲ್ಲಿ ಹೋಗಿ ನೆಲೆಗೊಂಡ ಕನ್ನಡಿಗರು ಹೆಚ್ಚಿನ ಸಾಹಸದಿಂದ ತಮ್ಮ ತಾಯಿನುಡಿ ಸೇವೆಯನ್ನು ಮಾಡಲು ಕನ್ನಡ ಸಂಘಗಳನ್ನು ಕಟ್ಟಿಕೊಂಡು ದುಡಿದಿದ್ದಾರೆ. ಇಂಗ್ಲೆಂಡಿನಲ್ಲಿ, ಉತ್ತರ ಅಮೇರಿಕೆಯಲ್ಲಿ, ಆಫ್ರಿಕಾದಲ್ಲಿ, ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಇತ್ತೀಚೆಗೆ ದುಬೈನಲ್ಲಿಯೂ ಕನ್ನಡ ಜನ ನೆಲೆನಿಂತು, ಕನ್ನಡವನ್ನು ಮರೆಯದೆ ಕನ್ನಡಿಗರೆಲ್ಲಾ ಕಲೆತು ತಮ್ಮ ಕನ್ನಡತನವನ್ನು ಉಳಿಸಿಕೊಳ್ಳುವ ಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ನಾಡಿನಲ್ಲಿ ಇಂಗ್ಲಿಷಿನ ಹೆಸರಿಟ್ಟುಕೊಂಡರೂ ಕರ್ನಾಟಕದ ಕೆಲವು ಸಂಘಗಳು ಕನ್ನಡಕ್ಕಾಗಿ ಕೆಲಸ ಮಾಡಿವೆ. ಮೈಸೂರು ಮತ್ತು ಬೆಂಗಳೂರಿನ ‘ಲಿಟರರಿ ಯೂನಿಯನ್’ಗಳೆರಡೂ ಶತಮಾನೋತ್ಸವ ಆಚರಣೆ ಮಾಡಿ ನೂರರ ಗಡಿ ದಾಟಿರುವ ಹಳೆಯ ಸಂಸ್ಥೆಗಳಾಗಿವೆ. ಈ ಎರಡೂ ಯೂನಿಯನ್ನುಗಳು ಸದ್ದುಗದ್ದಲವಿಲ್ಲದೆ ಪರಿಮಿತ ವಲಯದಲ್ಲಿ ಕೆಲಸ ಮಾಡುತ್ತಾ ಬಂದಿವೆ. ಗ್ರಂಥ ಭಂಡಾರವನ್ನು ನೂರು ವರುಷ ನಡೆಸಿಕೊಂಡು ಬಂದಿರುವುದರ ಜೊತೆಗೆ ಇವು ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬಲ್ಲಿದರಿಂದ ಭಾಷಣಗಳನ್ನೂ ಏರ್ಪಡಿಸುತ್ತಾ ಬಂದಿವೆ.

ಮೈಸೂರಿನಲ್ಲಿ ಪ್ರಭುಗಳ ಕೃಪೆಯಿಂದ ಸ್ಥಾಪಿತವಾದ    ‘ಕರ್ನಾಟಕ ಭಾಷೋಜ್ಜೀವಿನಿ’ ಎಂಬ ಹೆಸರಿನ ಸಂಘವನ್ನು ಕನ್ನಡ ಪಂಡಿತರ ತರಬೇತಿಗೆಂದು ತೆರೆಯಲಾಯಿತು. ಇವೆಲ್ಲಕ್ಕೂ ಕಳಸಪ್ರಾಯವಾಗಿ ೧೮೯೦ ರಲ್ಲಿ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪಿತವಾಯಿತು. ಇದರ ಪ್ರಧಾನ ಉದ್ದೇಶ ಮತ್ತು ಮುಖ್ಯ ಧ್ಯೇಯ ನೇರವಾಗಿ ಕನ್ನಡಕ್ಕೆ ಸಂಬಂಧಿಸಿದೆ. ಇದು ಆರಂಭವಾದ ಹೊಸತರಲ್ಲೇ ‘ವಾಗ್ಭೂಷಣ’ ಎಂಬ ಹೆಸರಿನ ಮಾಸಿಕ ಪತ್ರಿಕೆಯನ್ನು ಹೊರಡಿಸಿತು, ತುಂಬಾ ಉಮೇದಿನಿಂದ ಕಾರ್ಯಕ್ಕಿಳಿದು ಕನ್ನಡ ಪುಸ್ತಕಗಳನ್ನು ಅಚ್ಚು ಮಾಡಿಸಿತು. ಕನ್ನಡವನ್ನು ಸಭೆ ಸಮಾರಂಭಗಳಲ್ಲಿ ಆತ್ಮವಿಶ್ವಾಸದಿಂದ ಬಳಸಿತು; ಬಲ್ಲಿದರು ಅಲ್ಲಿ ನೆರವಿಗೆ ನಿಂತಿತು. ಇವರ ಪ್ರಭಾವ ಎಷ್ಟಿತ್ತೆಂದರೆ ೧೯೧೫ ರಲ್ಲಿ ಬೆಳಗಾವಿಯಲ್ಲಿ ಹುಟ್ಟಿದ ಕರ್ನಾಟಕ ಸಂಘ ತನ್ನೆಲ್ಲ ಧ್ಯೇಯ ಉದ್ದೇಶಗಳು ವಿದ್ಯಾವರ್ಧಕ ಸಂಘದ ರೀತಿಯಲ್ಲೇ ಇರಬೇಕೆಂದು ಸ್ಪಷ್ಟವಾಗಿ ಸಾರಿಕೊಂಡಿತು.

ಕನ್ನಡದ ಸರ್ವಾಂಗೀಣ ಪ್ರಗತಿಗಾಗಿ ಪ್ರಾರಂಭವಾದ ಮಹಾ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.) ೧೯೧೫ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪಲ್ಲವಿಸಿತು. ಕನ್ನಡ ಭಾಷೆ-ಸಾಹಿತ್ಯ, ನಾಡಿಗೆ ಸಂಬಂಧಿಸಿದಂತೆ ಕರ್ನಾಟಕವನ್ನು ಮಾತ್ರವಲ್ಲ ಇಡೀ ಭರತಖಂಡವನ್ನೇ ಪ್ರತಿನಿಧಿಸುವ ಏಕೈಕ ಸಂಸ್ಥೆ ಇದು. ಕರ್ನಾಟಕದ ಏಕೀಕರಣಕ್ಕಾಗಿ ಟೊಂಕಕಟ್ಟಿ ನಿಂತ ಸಂಸ್ಥೆ. ಏಕೀಕರಣಗೊಂಡ ಕನ್ನಡನಾಡಿಗೆ ‘ವಿಶಾಲ ಕರ್ನಾಟಕ’ ಎನ್ನುವ ನಾಮಕರಣಕ್ಕಾಗಿ ನಿರಂತರ ಶ್ರಮಿಸಿದ ಸಂಸ್ಥೆ. ಕರ್ನಾಟಕದ ಎಲ್ಲ ಹಂತಗಳಲ್ಲಿಯೂ ಆಡಳಿತ ಭಾಷೆ ಕನ್ನಡ ಆಗಬೇಕೆಂದು ಹೋರಾಟ ನಡೆಸಿದ, ಈಗಲೂ ನಡೆಸುತ್ತಿರುವ ಮಹಾಸಂಸ್ಥೆ. ಕನ್ನಡನಾಡು ನುಡಿ ಜನತೆಯ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಕಾಲಕಾಲದ ಕಾಯಕಲ್ಪದ ಕೈಂಕರ್ಯಕ್ಕೆ ಕೈಕಟ್ಟಿ ನಿಂತ ಕನ್ನಡನಾಡಿನ ಏಕೈಕ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್ತು. ತನ್ನ ನಿರಂತರ ಸೇವೆಯಿಂದ ಮುನ್ನಡೆದು ತನ್ನ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವವನ್ನು ಆಚರಿಸಿ ಕೊಂಡು ಪ್ಲಾಟಿನಂ ಉತ್ಸವ ಶತಮಾನೋತ್ಸವಕ್ಕೆ ಸಿದ್ಧವಾಗುತ್ತಿರುವ ಬೃಹತ್ ಸಂಸ್ಥೆ. ಸುವರ್ಣ ಮಹೋತ್ಸವ ಕಟ್ಟಡ, ಬಿ.ಎಂ.ಶ್ರೀ ಅಚ್ಚುಕೂಟ. ಚಿಕ್ಕದಾದರೂ ಅಚ್ಚುಕಟ್ಟಾದ ಸಭಾಂಗಣ ಇವುಗಳಿಂದ ಕನ್ನಡ ಜನತೆಯನ್ನು ನಿರಂತರ ತನ್ನತ್ತ ಆಕರ್ಷಿಸುವ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್ತು. ಪರಿಷತ್ತು ಪ್ರಕಟಿಸುತ್ತಿರುವ ಬೃಹತ್ ಕನ್ನಡ-ಕನ್ನಡ ನಿಘಂಟು ಕನ್ನಡ ಸಾರಸತ್ವಲೋಕಕ್ಕೆ ಅಮೂಲ್ಯ ಕೊಡುಗೆ.

ಹಳೆಗನ್ನಡ ಕಾವ್ಯಗಳ ಗ್ರಂಥಾನುವಾದಗಳ ಪ್ರಕಟಣೆ ಅಂತರ ರಾಷ್ಟ್ರೀಯ ಮಹಿಳಾ ವರ್ಷದಲ್ಲಿ ಲೇಖಕಿಯರಿಂದ ಪ್ರಕಟಗೊಂಟ ಹೊತ್ತಗೆಗಳು, ಅಂತರ ರಾಷ್ಟ್ರೀಯ ಮಕ್ಕಳ ವರ್ಷದಲ್ಲಿ ಮಕ್ಕಳಿಗಾಗಿ  ಪ್ರಕಟಿಸಿದ ೨೦೧ ವೈಜ್ಞಾನಿಕ, ವಿಚಾರಪೂರ್ಣ ಪುಸ್ತಕಗಳು, ಅದಕ್ಕೆ ಕಿರೀಟಪ್ರಾಯವಾಗಿ ಬಣ್ಣ ಬಣ್ಣಗಳಿಂದ, ಮುದ್ದಾದ ದೊಡ್ಡ ಅಕ್ಷರಗಳಿಂದ ಹೊರಬಂದ ‘ಪಿನೋಕಿಯೋ’, ಬೆಳ್ಳಿ ಬಿಟ್ಟ ಬಳ್ಳಿ ಮಾಲೆಯ ೧೦೧ ಪುಸ್ತಕಗಳೂ ಅತ್ಯಂತ ಕಡಿಮೆ ಬೆಲೆ, ಸತ್ವ ಹಾಗೂ ಗಾತ್ರದಿಂದ ಕೂಡಿದ ಅತ್ಯುತ್ತಮ ಪುಸ್ತಕಗಳನ್ನು ಕೊಟ್ಟು ಪರಿಷತ್ತು ಅಪಾರ ಸಾಹಿತ್ಯ ಸೇವೆ ಸಲ್ಲಿಸುತ್ತಿದೆ.

ಶ್ರೀ ಹಂಪನಾ ಅವರು ಅಧ್ಯಕ್ಷರಾದ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ವ್ಯಾಪ್ತಿ ಹೆಚ್ಚು ವಿಸ್ತಾರಗೊಂಡಿದೆ. ಜಿಲ್ಲಾ ಪರಿಷತ್ತು ಜೊತೆಗೆ ಕರ್ನಾಟಕದ ೧೫೨ ತಾಲ್ಲೂಕುಗಳಲ್ಲಿಯೂ ಪರಿಷತ್ತಿನ ಶಾಖೆಗಳು ವಿಸ್ತಾರಗೊಂಡಿವೆ. ಕರ್ನಾಟಕದ ಮೂಲೆಮೂಲೆಗೂ ಪರಿಷತ್ತಿನ ಕಾರ್ಯಚಟುವಟಿಕೆಗಳು ವ್ಯಾಪಿಸಿವೆ. ಪರಿಷತ್ತಿನ ಇತಿಹಾಸದಲ್ಲಿ ಕೇವಲ ಮೂರೂವರೆ ವರುಷಗಳಲ್ಲಿ ನಾಲ್ಕು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿರುವುದು ಒಂದು ವಿಶೇಷ ಗಮನಾರ್ಹ ಸಂಗತಿ. ಅಷ್ಟೇ ಅಲ್ಲದೆ ಇದೇ ವರುಷ ಡಿಸೆಂಬರ್ ತಿಂಗಳಿನಲ್ಲಿ (೧೯೮೨) ಅಖಿಲ ಭಾರತ ೫೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಿರ್ಸಿಯಲ್ಲಿ ನಡೆಯಲಿದ್ದು ಭರದಿಂದ ಸಿದ್ಧತೆಗಳು ನಡೆಯುತ್ತಿವೆ.

ಉತ್ತರ ಕನ್ನಡ ಜಿಲ್ಲೆ, ಕೋಲಾರ, ಕೊಡಗು, ಮಂಡ್ಯ, ಬಿಜಾಪುರ, ಶಿವಮೊಗ್ಗ, ತುಮಕೂರು, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಹಾಸನ ಈ ಜಿಲ್ಲೆಗಳಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿವೆ. ಈ ನಾಲ್ಕು ವರುಷಗಳ ಅವಧಿಯಲ್ಲಿ ಪರಿಷತ್ತಿನ ಹಿರಿಮೆ ಹೆಚ್ಚುವಮಥ ಇನ್ನೂ ಕೆಲವು ವಿಶಿಷ್ಟ ಕಾರ್ಯಕ್ರಮಗಳು ನಡೆದಿವೆ. ಕೆಲವನ್ನು ಹೆಸರಿಸಬಹುದಾದರೆ ಅಖಿಲ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಮ್ಮೇಳನ, ಕನ್ನಡ ಶೀಘ್ರಲಿಪಿ ಮತ್ತು ಬೆರಳಚ್ಚುಗಾರರ ಸಮ್ಮೇಳನ, ಕನ್ನಡ ಸಂಘ ಸಂಸ್ಥೆಗಳ ಸಮ್ಮೇಳನ, ಗಮಕ ಸಮ್ಮೇಳನ ಕೀರ್ತನಕಾರರ ಸಮ್ಮೇಳನ, ಮಕ್ಕಳ ಸಮ್ಮೇಳನ, ಲೇಖಕಿಯರ ಸಮ್ಮೇಳನಗಳು ಬೃಹತ್ ಪ್ರಮಾಣದಲ್ಲಿ ನಡೆದು ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸ್ಪೂರ್ತಿಯನ್ನು ತಂದುಕೊಟ್ಟಿದೆ.

ಪರಿಷತ್ತು ಹೊರನಾಡ ಕನ್ನಡಿಗರ ಜೊತೆ ಆದಷ್ಟೂ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವುದರ ಕಡೆಗೆ ವಿಶೇಷ ಗಮನ ಹರಿಸಿದೆ. ಮುಂಬೈಯಲ್ಲಿ ೧೯೭೯ ಹಾಗೂ ೧೯೮೨ ರಲ್ಲಿ ಎರಡು ಸಮ್ಮೇಳನಗಳನ್ನು ನಡೆಸಲಾಯಿತು. ಹೈದರಾಬಾದ್ ಸಿಕಂದರಾಬಾದ್ ಕನ್ನಡಿಗರ ಸಮ್ಮೇಳನ, ಎರಡು ಬಾರಿ ಕಾಸರಗೋಡಿನಲ್ಲಿ ಸಮ್ಮೇಳನಗಳು ನಡೆದಿವೆ. ಈ ಸಮ್ಮೇಳನಗಳಿಂದ ಆಗುವ ಪ್ರಭಾವ ಬಹಳ ಹೆಚ್ಚಿನದು. ಇದಲ್ಲದೆ ನಾಸಿಕ್, ಉದಕಮಂಡಲ, ಪುಣೆ, ಕೊಲ್ಲಾಪುರ, ಗೊರೆಗಾಂವ್, ಮಧುರೆ, ಸೇಲಂ, ಕನ್ಯಾಕುಮಾರಿ, ಗೋವಾ ಮೊದಲಾದ ಕಡೆ ಇರುವ ಕನ್ನಡ ಸಂಘಗಳ ಜೊತೆ ವಿಚಾರ ವಿನಿಮಯ ಮಾಡಿ ಹೊರನಾಡ ಕನ್ನಡಿಗರಿಗೆ ಸಾಹಿತ್ಯ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸೂಕ್ತ ಸಹಾಯ, ಸಹಕಾರ ನೀಡಿದೆ.

೯, ೧೦ ಅಕ್ಟೋಬರ್ ೧೯೮೨ ನೇ ದಿನಾಂಕದಂದು ಕಾಶ್ಮೀರದ ರಾಜಧಾನಿಯಾದ ಶ್ರೀನಗರದಲ್ಲಿ ಕರ್ನಾಟಕ ಸಂಘವನ್ನು ಪ್ರಾರಂಭಿಸಲಾಯಿತು. ಅಲ್ಲಿನ ಮುಖ್ಯಮಂತ್ರಿಗಳಾದ ಡಾ|| ಫರೂಕ್ ಅಬ್ದುಲ್ಲಾ ಅವರು ಕರ್ನಾಟಕ ಸಂಘವನ್ನು ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಹಂಪ ನಾಗರಾಜಯ್ಯ ಅವರು ಮುಖ್ಯ ಅತಿಥಿಗಳಾಗಿದ್ದರು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕನ್ನಡದ ಕಂಪು ನಿರಂತರವಾಗಿ ಹರಡುವಂತೆ ಶ್ರಮಿಸಲು ತೊಡಗಿರುವ ಸಂಸ್ಥೆ ಈ ಕನ್ನಡ ಸಾಹಿತ್ಯ ಪರಿಷತ್ತು. ಶಾಲೆಯಿಂದ ಶಾಲೆಗೆ, ಕಾಲೇಜಿನಿಂದ ಕಾಲೇಜಿಗೆ ಯೋಜನೆಯಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆಗಳ ಪ್ರದರ್ಶನ ಹಾಗೂ ಮಾರಾಟವಿದ್ದು, ವಿದ್ಯಾರ್ಥಿಗಳಲ್ಲಿ ಕನ್ನಡದ ಒಲವನ್ನು ಹೆಚ್ಚು ಮಾಡಲು ಪರಿಷತ್ತಿನ ಸಂಪರ್ಕ ಬೆಳೆಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ.ಅಖಿಲ ಕರ್ನಾಟಕ ನಾಟಕ ಸ್ಪರ್ಧೆ, ರಂಗ ಭೂಮಿಯ ಹಿರಿಯ, ಕಿರಿಯ ಕಲಾವಿದರಿಂದ ‘ರಂಗಗೀತಾ ಸಂಧ್ಯಾ’ ಕಾರ್ಯಕ್ರಮ, ‘ಗೀತಸಂಧ್ಯಾ’ ಕಾರ್ಯಕ್ರಮ ಅತ್ಯಂತ ಯಶಸ್ವಿ ಕಾರ್ಯಕ್ರಮಗಳಾಗಿ ಪ್ರೇಕ್ಷಕರ ಹೃನ್ಮನಗಳನ್ನು ಸಂತೋಷಗೊಳಿಸಿದ್ದಲ್ಲದೆ ಮೂಲೆಗುಂಪಾಗುತ್ತಿರುವ ರಂಗಗೀತೆಗಳ ಪುನರುಜ್ಜೀವನಕ್ಕೆ ಒಂದು ಪ್ರಯತ್ನ ಮಾಡಿದಂತಾಯಿತು. ಕನ್ನಡ ನಾಡು ನುಡಿಯ ಬಗೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ವ್ಯಾಪ್ತಿ ಅತ್ಯಂತ ವಿಸ್ತಾರವಾದುದು ಮತ್ತು ಗಂಭೀರವಾದುದು. ಅದರ ಕಾರ್ಯ ಚಟುವಟಿಕೆಗಳ ಕೆಲವು ಅಂಶಗಳನ್ನು ಮಾತ್ರ ಇಲ್ಲಿ ಒಂದೊಂದು ವಾಕ್ಯದಲ್ಲಿ ಪರಿಚಯ ಮಾಡಿಕೊಡಲಾಗಿದೆ.

ಕನ್ನಡ ನಾಡಿನ ಇತರ ಸಂಘ-ಸಂಸ್ಥೆಗಳು, ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ, ಸಂಗೀತಗಳ ಬಗ್ಗೆ ಹೆಚ್ಚಿನ ಶ್ರದ್ಧೆ ವಹಿಸಿ ದುಡಿದಿದೆ. ಅವುಗಳನ್ನು ಪಟ್ಟಿ ಮಾಡಿ ಕೊಡುವ ಉದ್ದೇಶ ನನ್ನ ಲೇಖನದ್ದಲ್ಲ. ಆದರೆ ಇಲ್ಲಿ ಪ್ರತಿಪಾದಿಸುವ ಅಂಕಿ ಅಂಶಗಳು ಈ ಎಲ್ಲ ಸಂಘ ಸಂಸ್ಥೆಗಳ ಧ್ಯೇಯ ಧೋರಣೆಗಳನ್ನು ಗಮನಿಸಿದೆ ಎನ್ನುವುದು ಮುಖ್ಯ. ಪ್ರಾತಿನಿಧಿಕವಾಗಿ ಕೆಲವೊಮ್ಮೆ ಅಲ್ಲೊಂದು ಇಲ್ಲೊಂದು ಸಂಘ ಸಂಸ್ಥೆಯನ್ನು ಹೆಸರಿಸಿದಾಗ ಮಿಕ್ಕ ಸಂಘ ಸಂಸ್ಥೆಯವರು ತಪ್ಪಾಗಿ ಭಾವಿಸಲಾರರೆಂದು ತಿಳಿಯುವೆ.

ಕನ್ನಡ ನಾಡಿನ ಹಾಗೂ ಹೊರನಾಡಿನ ಕಾರ್ಖಾನೆಗಳಲ್ಲಿರುವ ಕನ್ನಡ ಸಂಘ ಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಈ ಕನ್ನಡದ ಸೇವೆ ಮಾಡಿರುವುದು ಸ್ತುತ್ಯಾರ್ಹವಾದ ಸಂಗತಿ. ಬೆಂಗಳೂರಿನ ವಿಮಾನ ಎಂಜಿನ್ ಕಾರ್ಖಾನೆ, ಭಾರತ್ ಅರ್ತ್ ಮೂವರ್ಸ್, ಐ.ಟಿ.ಐ., ಎಚ್.ಎಂ.ಟಿ., ಮೈಕೋ, ರಾಜ್ಯ ಸಾರಿಗೆ ಸಂಸ್ಥೆ ಮೊದಲಾದ ಕಾರ್ಖಾನೆಗಳಲ್ಲಿರುವ ಕನ್ನಡ ಸಂಘಗಳನ್ನು ಹೆಸರಿಸಬಹುದು. ಇದೇ ರೀತಿ ರಿಸರ್ವ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕನ್ನಡ ಸಂಘಗಳು ಇತ್ತೀಚೆಗೆ ಪ್ರಾರಂಭವಾದರೂ ಕನ್ನಡದ ಕೆಲಸವನ್ನು ಸಾಕಷ್ಟು ಕಾಳಜಿಯಿಂದ ಮಾಡುತ್ತಿವೆ.

ಕನ್ನಡ ಸಂಘಗಳಿಲ್ಲದ ಶಾಲಾ-ಕಾಲೇಜುಗಳಿಲ್ಲವೆಂದು ಹೇಳಬಹುದು. ಆದರೆ ಎಷ್ಟೋ ಸಂಘಗಳಲ್ಲಿ ಇಡೀ ವರುಷದಲ್ಲಿ ಎರಡೋ ಮೂರೋ ಕಾರ್ಯಕ್ರಮಗಳಾದರೆ ಹೆಚ್ಚು. ಆದರೆ ಕೆಲವು ಕನ್ನಡ ಸಂಘಗಳು ಇವಕ್ಕೆ ಅಪವಾದವಾಗಿವೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘ, ಟಿ.ಎಸ್.ವೆಮಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿ, ಬಿ.ಎಂ.ಶ್ರೀ. ಮೊದಲಾದ ಉದ್ಧಾಮ ಸಾಹಿತಿಗಳಿಂದ ಪ್ರಾರಂಭವಾಗಿ ವಿದ್ಯಾರ್ಥಿಗಳಲ್ಲಿ ನಾಡು-ನುಡಿಯ ಬಗ್ಗೆ ಉತ್ಸಾಹವನ್ನು ಮೂಡಿಸುವ ಜೊತೆಯಲ್ಲಿಯೇ ಸಾರ್ವಜನಿಕರಿಗೂ ಉಪನ್ಯಾಸ, ಸಭೆ, ಉತ್ಸವಗಳನ್ನು ಏರ್ಪಡಿಸಿತಲ್ಲದೆ ‘ಪ್ರಬುದ್ಧ ಕರ್ನಾಟಕ’ ಎನ್ನುವ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿತು. ಅಂದಿನ ಕಾಲದಲ್ಲಿ ತನ್ನ ಶಕ್ತಿಮೀರಿ ಕನ್ನಡದ ಕೆಲಸ ಮಾಡಿದ ಹಿರಿಮೆ ಈ ಸಂಘಕ್ಕಿದೆ. ಕೆಲವು ಪುಸ್ತಗಳನ್ನೂ ಈ ಸಂಘ ಪ್ರಕಟಿಸಿದೆ. ‘ಪ್ರಬುದ್ಧ ಕರ್ನಾಟಕ’ ಈಗ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟಗೊಳ್ಳುತ್ತಿದೆ.

ಬಹಳ ಇತ್ತೀಚೆಗೆ (೧೯೭೨) ಪ್ರಾರಂಭವಾದ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ. ವಿಶ್ವೇಶ್ವರಪುರ ಕಾಲೇಜಿನ ಕನ್ನಡ ಸಂಘ ವೈಚಾರಿಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಿವೆ. ಇಡೀ ಭಾರತದಲ್ಲಿಯೇ ಅತ್ಯಂತ ಪ್ರಾಚೀನ ಹಾಗೂ ಹಿರಿಯ ವಿದ್ಯಾಸಂಸ್ಥೆಯಾದ ಬೆಂಗಳೂರು ಮಹಾರಾಣಿ ಕಾಲೇಜಿನ ಕನ್ನಡ ಸಂಘ ವಿದ್ಯಾರ್ಥಿನಿಯರಲ್ಲಿರುವ ಎಲ್ಲ ರೀತಿಯ ಪ್ರತಿಭೆಗಳನ್ನು ಹೊರಚೆಲ್ಲಲು. ಕನ್ನಡದ ಬಗ್ಗೆ ಅತೀವ ಆತ್ಮೀಯತೆಯನ್ನು ಹೊಂದಲು ಅನೇಕ ವರುಷಗಳಿಂದ ದುಡಿಯುತ್ತಾ ಬಂದಿದೆ. ಬೆಂಗಳೂರು ಗಾಂಧಿ ಸಾಹಿತ್ಯ ಸಂಘ, ಗಾಂಧೀ ವಿಚಾರ ವೇದಿಕೆಗೆ ಹೆಚ್ಚಿನ ಗಮನ ಕೊಟ್ಟರೂ ಅದು ಆಗಾಗ ನಡೆಸುವ ಕನ್ನಡ ಕಾರ್ಯಕ್ರಮಗಳನ್ನು ಕಡೆಗಣಿಸುವಂತಿಲ್ಲ. ರಾಷ್ಟ್ರೋತ್ಥಾನ ಪರಿಷತ್ತು, ಇಂಡಿಯಾ ಬುಕ್ ಹೌಸ್ ಮಕ್ಕಳಿಗಾಗಿ ಕನ್ನಡ ಪುಸ್ತಕಗಳನ್ನು ಹೊರತರುವುದರಲ್ಲಿ ದಾಖಲೆಗಳನ್ನು ಸ್ಥಾಪಿಸಿವೆ. ಶಿವಮೊಗ್ಗ, ಚಿಕ್ಕಮಗಳೂರು, ವಿರಾಜಪೇಟೆ ಇಲ್ಲಿಯ ಕನ್ನಡ ಸಂಘಗಳೂ ಬೃಹತ್ ಪ್ರಮಾಣದಲ್ಲಿ ಕನ್ನಡದ ಸೇವೆ ಸಲ್ಲಿಸುತ್ತಿವೆ.

ಮೈಸೂರು ಕನ್ನಡ ಅಧ್ಯಯನ ಸಂಸ್ಥೆ, ಧಾರವಾಡ ಕನ್ನಡ ಅಧ್ಯಯನ ಪೀಠ, ಬೆಂಗಳೂರು ಕನ್ನಡ ಅಧ್ಯಯನ ಕೇಂದ್ರಗಳು ಅಪ್ರಕಟಿತ ಹಳಗನ್ನಡ ಹಾಗೂ ಜಾನಪದ ಗ್ರಂಥಗಳನ್ನು ಪ್ರಕಟಿಸಿ, ಅನೇಕ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಕನ್ನಡದ ಕೆಲಸವನ್ನು ಮಾಡುತ್ತಿವೆ. ಅದೇ ರೀತಿ ಸರ್ಕಾರದ ಅಕಾಡೆಮಿಗಳ ಕೆಲಸವೂ ನಿರಂತರ ನಡೆದಿದೆ. ಇವುಗಳೆಲ್ಲ ಯು.ಜಿ.ಸಿ. ಧನ ಸಹಾಯದಿಂದ ಹಾಗೂ ಸರ್ಕಾರದ ಹಣದ ನೆರವಿನಿಂದ ನೇರವಾಗಿ ನಡೆಯುವ ಸಂಸ್ಥೆಗಳು. ಇಲ್ಲಿ ದುಡಿಯುವವರೆಲ್ಲ ವೇತನವೇತ್ತರು. ಅಕಾಡೆಮಿಯ ಅಧ್ಯಕ್ಷರಗಳು ಹಾಗೂ ಸದಸ್ಯರುಗಳು ಮಾತ್ರ ಸರ್ಕಾರ ನೇಮಿಸಿದ ಗೌರವ ಪದವಿಯವರು.

ವಿಶ್ವವಿದ್ಯಾನಿಲಯದ ಕನ್ನಡ ಸಂಸ್ಥೆ, ಪೀಠ, ಕೇಂದ್ರ – ಇವುಗಳ ನಿಸ್ವಾರ್ಥ ಸೇವೆಯಿಂದ ದುಡಿಯುವ ಕನ್ನಡದ ಸಂಘ – ಸಂಸ್ಥೆಗಳ ಚೌಕಟ್ಟಿಗೆ ಸೇರುವುದಿಲ್ಲವಾದರೂ ಕನ್ನಡದ ನೆಲೆ-ಬೆಲೆಯನ್ನು ಗುರುತಿಸುವಲ್ಲಿ ಇವುಗಳ ಕಾರ್ಯವ್ಯಾಪ್ತಿಯನ್ನು ಕಡೆಗಣಿಸಲಾಗುವುದಿಲ್ಲ. ಹೊರನಾಡು ಕನ್ನಡ ಸಂಘಗಳನ್ನು ಗಮನಿಸಿದಾಗ ಮುಂಬೈ ಪ್ರಾಂತದಲ್ಲಿ ಇರುವಷ್ಟು ಕನ್ನಡ ಸಂಘ-ಸಂಸ್ಥೆಗಳು ಇನ್ನೆಲ್ಲೂ ಕಂಡುಬರುವುದಿಲ್ಲ. ಮುಂಬೈ ಒಂದರಲ್ಲಿಯೇ ಅಧಿಕ ಸಂಖ್ಯೆಯಲ್ಲಿರುವ ಈ ಸಂಘಗಳು ಹೆಚ್ಚಿನ ಪೈಪೋಟಿಯಿಂದ ಕನ್ನಡದ ಕೆಲಸವನ್ನು ಮಾರುತ್ತವೆ. ಮುಂಬೈ ಒಂದು ಪುಟ್ಟ ಪ್ರಪಂಚ. ಅಲ್ಲಿ ಈ ಸಂಘಗಳು ಪೈಪೋಟಿಯಿಂದ ಕೆಲಸ ಮಾಡಿದರೆ ಕನ್ನಡದ ಏಳಿಗೆಯ ದೃಷ್ಟಿಯಿಂದ ಬಹಳ ಒಳ್ಳೆಯದು.

ದೆಹಲಿ ಕರ್ನಾಟಕ ಸಂಘ, ಹೈದರಾಬಾದ, ಮಧುರೈ, ಗುಜರಾತ್, ನಾಸಿಕ್, ಕಾಂಚಿ, ಸೇಲಂ, ಹರಿದ್‌ಔಅರ, ನಾಗಪುರ, ಆಗ್ರಾ, ಅಹಮಾದಾಬಾದ್, ಭೂಪಾಲ್, ಕಲ್ಕತ್ತ, ಗುಂತಕಲ್, ನೈವೇಲಿ, ಭಿಲಾಯ್, ಬಿಹಾರ್, ಸೊಲ್ಲಾಪುರ, ಕಾಸರಗೋಡು, ಗೋವಾ – ಇವೆಲ್ಲಾ ಕನ್ನಡ ಸಂಘಗಳು ಕನ್ನಡಿಗರಲ್ಲಿ ಕನ್ನಡ ಭಾಷೆ. ಸಂಸ್ಕೃತಿ ಮರೆಯಾಗದಂತೆ ಕಾಪಾಡಲು ಪ್ರಯತ್ನಿಸುತ್ತಿವೆ. ಅದಕ್ಕಾಗಿ ಅಲ್ಲಲ್ಲಿ ವಾಸಿಸುವವರೆಲ್ಲ ಒಟ್ಟಾಗಿ ಸೇರುವುದು, ಸಾಧ್ಯವಾದ ಕಡೆಗಳಲ್ಲಿ ತಮ್ಮ ಮಕ್ಕಳಿಗೆ ಕನ್ನಡ ಶಾಲೆಗಳನ್ನು ಪ್ರಾರಂಭಿಸಿ ನಡೆಸುವುದು, ಕನ್ನಡ ಗ್ರಂಥ ಭಂಡಾರಗಳು ಕನ್ನಡನಾಡಿನ ಹಬ್ಬಗಳ ಆಚರಣೆ, ಆಗ ನಡೆಯುವ ಮನರಂಜನಾ ಕಾರ್ಯಕ್ರಮಗಳಲ್ಲಿ ಕನ್ನಡ ನಾಟಕ, ಕೋಲಾಟ, ಕನ್ನಡ ಗೀತೆಗಳು, ದೇವರನಾಮಗಳು, ವಚನಗಳು, ಉಪನ್ಯಾಸಗಳು – ಹೀಗೆ ಕನ್ನಡದ ವಾತಾವರಣವನ್ನು ನಿರ್ಮಿಸಿಕೊಂಡು ಬಾಳಲು ಯತ್ನಿಸಿದ್ದಾರೆ. ಕೆಲವು ಮಹಿಳಾ ಸಂಘ – ಸಂಸ್ಥೆಗಳು ಹೆಣ್ಣುಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಧೋರಣೆಯಿಂದ ನಡೆಯುತ್ತಿದ್ದರೂ ಕನ್ನಡದ ಕಾರ್ಯಕ್ರಮಗಳನ್ನು ಅವು ತಕ್ಕ ಮಟ್ಟಿಗೆ ನೆರವೇರಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ.

ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಕನ್ನಡಿಗರು ಹೋಗಿ ನೆಲೆಸಿರುವುದೂ ಇಂದಿನ ದಿವಸಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಕೆಲವು ದೇಶಗಳಲ್ಲಿ ಅನೇಕ ದಶಕಗಳಿಗೆ ಹಿಂದೆಯೇ ಕನ್ನಡದ ಜನ ಹೋಗಿ ನೆಲೆಸಿದ್ದಾರೆ. ತನ್ನ ನಾಡಿನಲ್ಲಿ ಇದ್ದಾಗ ವ್ಯಕ್ತಿ ತನ್ನ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗೆಗೆ ಹೆಚ್ಚಿನ ಚಿಂತನೆ ಮಾಡುವ ಅಗತ್ಯ ಬೀಳುವುದಿಲ್ಲ. ಸುತ್ತಲೂ ತುಂಬಿದ ತನ್ನತನದ ವಾತಾವರಣದಲ್ಲಿ ಆತನಿಗೆ ಭಾಷೆ-ಸಾಹಿತ್ಯಗಳ ಕೊರತೆ ಅಷ್ಟಾಗಿ ಕಂಡುಬರುವುದಿಲ್ಲ. ಆದರೆ ಪರದೇಶದಲ್ಲಿ ಪರಕೀಯ ವಾತಾವರಣದಲ್ಲಿ ವ್ಯಕ್ತಿ ಅನೇಕ ಸಂದರ್ಭಗಳಲ್ಲಿ ಪರಕೀಯವಾಗಿ ಅನಾಥಪ್ರಜ್ಞೆ ಅವನಿಗೆ ಕಂಡರೆ ಆಶ್ಚರ್ಯವಲ್ಲ. ಅಂಥ ಸನ್ನಿವೇಶಗಳಲ್ಲಿ ತನ್ನವರ, ತನ್ನ ಭಾಷೆಯವರ, ತನ್ನ ದೇಶದವರ ಸಹವಾಸಕ್ಕೆ, ಸಹಚರ್ಯಕ್ಕೆ ಮನಸ್ಸು ಹಾತೊರೆಯುವುದು ಸಹಜ. ಆಗ ದೇಶ-ಭಾಷೆಯ ಸಂಘ ಸಂಸ್ಥೆಗಳ ಸ್ಥಾಪನೆ ತೀರಾ ಅಗತ್ಯವಾಗುತ್ತದೆ, ಆ ಮೂಲಕ ತನ್ನ ವ್ಯಕ್ತಿ ತನ್ನ ಮಾನಸಿಕ ಕೊರತೆಯನ್ನು ಹೋಗಲಾಡಿಸಿಕೊಳ್ಳಲು ಸಮರ್ಥನಾಗುತ್ತಾನೆ. ಹೀಗೆ ಸ್ಥಾಪನೆಯಾದ ಕನ್ನಡ ಸಂಘ-ಸಂಸ್ಥೆಗಳು ಉತ್ತರ ಅಮೆರಿಕೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಅಲ್ಲಿ ಸುಮಾರು ಮೂವತ್ತು ಕನ್ನಡ ಸಂಘಗಳು, ಸುಮಾರು ಮೂವತ್ತು ವರ್ಷಗಳಿಗೂ ಮೀರಿ ಕನ್ನಡದ ಕೆಲಸವನ್ನು ಮಾಡುತ್ತಿವೆ. ಕನ್ನಡಿಗರನ್ನು ಒಂದೆಡೆ ಸಂಘಟಿಸುವುದರಲ್ಲಿ ಆ ಸಂಘಗಳ ಪಾತ್ರ ಅತಿ ಹೆಚ್ಚಿನದಾಗಿದೆ.

ಈಗ ಹತ್ತು ವರುಷಗಳ ಹಿಂದೆ ಬೇರೆ ಬೇರೆ ಹೆಸರಿನಲ್ಲಿದ್ದ ಸುಮಾರು ಇಪ್ಪತ್ತು ಸಂಘಗಳು ಒಂದಾಗಿ ‘ಕನ್ನಡ ಕೂಟ’ ಎನ್ನುವ ಒಂದು ಪ್ರಮುಖ ಸಂಸ್ಥೆಯಾಯಿತು. ಅವೆಲ್ಲ ಈ ಪ್ರಮುಖ ಸಂಸ್ಥೆಯ ಶಾಖೆಗಳಾಗಿ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿವೆ. ಅಮೆರಿಕ ಕನ್ನಡ ಸಂಘದವರು ವರ್ಷವಿಡೀ ಆಗಾಗ ತಮ್ಮ ತಮ್ಮ ಶಾಖೆಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವರ್ಷದಲ್ಲಿ ಒಮ್ಮೆ ಬೇಸಿಗೆಯಲ್ಲಿ ಎಲ್ಲರೂ ಸೇರಿ ಎರಡು ದಿವಸಗಳು ವನವಿಹಾರಕ್ಕೆ ತೆರಳಿ ಆಡಿ, ಹಾಡಿ, ವನಭೋಜನ ಮಾಡಿ ಕನ್ನಡದ ವಾತಾವರಣವನ್ನು ನಿರ್ಮಿಸಿಕೊಂಡು ಸಂತೋಷದಿಂದ ಕಾಲ ಕಳೆಯುತ್ತಾರೆ. ಜೊತೆಗೆ ರಂಗೋಲಿ, ಚಿತ್ರ ಪ್ರದರ್ಶನ, ಗಮಕ ವಾಚನ, ದೇವರ ನಾಮ, ಜನಪದ ಗೀತೆ, ಫೋಟೋಗ್ರಪಿ, ಕನ್ನಡ ನಾಟಕಗಳು, ನೃತ್ಯ, ಕೋಲಾಟ ಮೊದಲಾದ ತಮ್ಮ ನಾಡು ನುಡಿಯ ಆಚರಣೆಗಳಿಂದ ಹೆಚ್ಚಿನ ಆನಂದವನ್ನು ತಂದುಕೊಳ್ಳುತ್ತಾರೆ. ಈ ಸಂಘಗಳು ಒಳ್ಳೆಯ ಕನ್ನಡ ಗ್ರಂಥ ಭಂಡಾರಗಳನ್ನು ಹೊಂದಿರುವುದರ ಜೊತೆಗೆ ಕನ್ನಡ ನಾಡಿನಿಂದ ಸಾಹಿತಿ, ಸಂಗೀತಗಾರರು, ಕಲೆಗಾರರನ್ನು ಕರೆಸಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಅಲ್ಲಿಯ ‘ಕನ್ನಡ ಕೂಟ’ದ ಉತ್ಸಾಹ ಹೆಚ್ಚಿನದು. ಅದರ ಅಧ್ಯಕ್ಷ ಶ್ರೀ ಚಂದ್ರಶೇಖರ್ ಅವರು. ಇಡೀ ಅಮೆರಿಕೆಯ ಕನ್ನಡ ಜನತೆಯ ಪರವಾಗಿ ಅಮೆರಿಕೆಯಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೆಳನ ನಡೆಸಿಕೊಡಲು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ಹಂಪನಾ ಅವರನ್ನು ಕೇಳಿಕೊಂಡಿದೆ. ಇದು ಅಲ್ಲಿಯ ಕನ್ನಡಿಗರ ಕನ್ನಡ ಅಭಿಮಾನದ ದ್ಯೋತಕ.

ಲಂಡನ್ನಿನಲ್ಲಿರುವ ಭಾರತೀಯ ವಿದ್ಯಾಭವನ ಇಡೀ ಭಾರತೀಯ ಸಂಸ್ಕೃತಿ ಪ್ರಸಾರವನ್ನು ಮುಖ್ಯ ಉದ್ದೇಶವಾಗಿ ಇಟ್ಟುಕೊಂಡಿದ್ದರೂ ಅದರಲ್ಲಿ ಕನ್ನಡದ ಕಾರ್ಯಕ್ರಮಗಳಿಗೂ ಅವಕಾಶವಿದೆ. ಕನ್ನಡ ಗ್ರಂಥ ಭಂಡಾರವಿದೆ. ಅನೇಕ ಕನ್ನಡಿಗರಿಗೆ ಅದು ವರವಾಗಿದೆ. ಆಫ್ರಿಕಾದ ನೈಜೀರಿಯಾದಲ್ಲಿ ಕನ್ನಡಿಗರು ಉತ್ಸಾಹದಿಂದ ಒಡಗೂಡಿ ಕನ್ನಡದ ಕೆಲಸಕ್ಕೆ ತೊಡಗಿದ್ದಾರೆ.

ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸುಮಾರು ನಾನೂರು ಐನೂರು ಸದಸ್ಯರಿಂದ ಕೂಡಿದ ಕನ್ನಡ ಸಂಘ ಕನ್ನಡ ನಾಡಿನ ಎಲ್ಲ ಹಬ್ಬಗಳನ್ನೂ ಆಚರಿಸುವ ಸಂದರ್ಭದಲ್ಲಿ ತನ್ನೆಲ್ಲ ಸದಸ್ಯರನ್ನು ಮೇಳವಿಸಿಕೊಳ್ಳುತ್ತದೆ. ಕನ್ನಡ ನಾಡಿನ ಕಲಾವಿದರು. ವಾಗ್ಮಿಗಳು, ಸಂಗೀತಗಾರರು, ಸಾಹಿತಿಗಳನ್ನು ಆಗಾಗ ಬರಮಾಡಿಕೊಂಡು ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಕನ್ನಡ ಚಲನಚಿತ್ರ ಪ್ರದರ್ಶನ ಅಲ್ಲಿನ ಜನತೆಗೊಂದು ಮನರಂಜನೆ.

ಕನ್ನಡ ನಾಡಿನಲ್ಲಿ, ನಾಡಿನಿಂದ ಹೊರಗೆ ಭರತ ಖಂಡದಲ್ಲಿ, ಅಲ್ಲಿಂದ ಪರದೇಶಗಳಲ್ಲಿ ಹಬ್ಬಿ ನಿಂತಿರುವ ಈ ಕನ್ನಡ ಸಂಘ ಸಂಸ್ಥೆಗಳ ಪಾತ್ರ ಅಲ್ಪದ್ದಾಗಿರಬಹುದು ಅಥವಾ ಮಹತ್ತರವಾದುದಾಗಿರಬಹುದು. ಆದರೆ ಅವುಗಳ ಹಿಂದೆ ಇರುವ ನಾಡು ನುಡಿಯ ಅಭಿಮಾನದ ಮನೋಭಾವ ಏನಿದೆ ಅದು ಅತ್ಯಂತ ಗೌರವಕ್ಕೆ ಪಾತ್ರವಾದುದು. ಕೇವಲ ಹೆಸರಿಗೆ ಇರುವ ಅನೇಕ ಕನ್ನಡ ಸಂಘ ಸಂಸ್ಥೆಗಳೂ ಕನ್ನಡದ ಕೆಲಸದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಕನ್ನಡ ನಾಡಿನ ಭಾಷೆ ಸಾಹಿತ್ಯ ಪರಂಪರೆಗೆ ಹೆಚ್ಚಿನ ಸೇವೆ ಸಲ್ಲುತ್ತದೆ. ಅವು ತಮ್ಮ ಗಟ್ಟಿತನವನ್ನು ಕಾಪಾಡಿಕೊಳ್ಳುವುದರಲ್ಲಿ ಸಫಲವಾಗುತ್ತವೆ, ಅವು ಎಲ್ಲೇ ಇರಲಿ, ಹೇಗೇ ಇರಲಿ ಕನ್ನಡದ ತೇರನ್ನು ಎಳೆಯುವಲ್ಲಿ ತಮ್ಮ ಕೈಯನ್ನೂ ಸೇರಿಸಲಿ.