ಗಂಡು ಹೆಣ್ಣಿನ ಅವತಾರವಾದಂದಿನಿಂದಲೇ ಅವರಿಬ್ಬರ ಪರಸ್ಪರ ಆಕರ್ಷಣೆ ಪ್ರಾರಂಭವಾಯಿತು. ಗಂಡು ತನ್ನ ಗಡಸುತನ, ಪೌರಷತ್ವಕ್ಕೆ ಹೆಸರಾದಂತೆ ಹೆಣ್ಣು ತನ್ನ ಲಜ್ಜೆ, ಕೋಮಲತ್ವ, ಸೌಂದರ್ಯಕ್ಕೆ ಹೆಸರುವಾಸಿಯಾದಳು. ಹೆಣ್ಣು ಗಂಡಿಗೊಂದು ರಹಸ್ಯದ ಬೀಡು, ಕನಸಿನ ಗೂಡು. ಆಕೆಯನ್ನು ಅನೇಕ ವಿಧಗಳಲ್ಲಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ಪುರುಷನಿಗೆ ಅವಳೊಂದು ಸವಾಲೇ ಆದಳು. ಮೀನಿನ ಹೆಜ್ಜೆಯನ್ನು ಗುರುತಿಸಿದ, ನಕ್ಷತ್ರಗಳನ್ನು ಎಣಿಸಿದ ಮಾನವನಿಗೆ ಹೆಣ್ಣಿನ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕಟ್ಟಕಡೆಗೆ ಆತ ಆಕೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ ಪರಿ ಮುಖಸ್ತುತಿಯಿಂದ. ಹೆಣ್ಣಿನ ಬಹಿರಂಗ – ಅಂತರಂಗಗಳನ್ನು ಹೊಗಳಲು ಗಂಡು ಬಾಯಿ ತೆರೆದಂದಿನಿಂದ ಇಂದಿನವರೆಗೂ ಆತ ತನ್ನ ಬಾಯನ್ನು ಮುಚ್ಚಿಲ್ಲ. ಹೆಣ್ಣಿನ ಅಂಗಾಂಗಳನ್ನು ಹೊಗಳಿ ವರ್ಣಿಸುವ ಆತ ಬಹುಶಃ ತನ್ನ ನಾಲಗೆಗೆ ಮುಂದೆ ಎಂದೂ ವಿರಾಮ ಕೊಡಲಾರ.

ಹೆಣ್ಣು ಎಷ್ಟೇ ಗಹನಳಾದರೂ ಗಂಭೀರಳಾದರೂ ಹೊಗಳಿಕೆಗೆ ಬಹುಬೇಗ ಸೋಲುವ ಸ್ವಭಾವದವಳು. ಪುರುಷ ಹೆಣ್ಣಿನ ಈ ದುರ್ಬಲ ಗುಣವನ್ನು ತನ್ನ ಸುಖ-ಸಂತೋಷಕ್ಕೆ ಚೆನ್ನಾಗಿ ಉಪಯೋಗಿಸಿಕೊಂಡ. ಹೊಗಳಿ ಹೊಗಳಿ ಆಕೆಯನ್ನು ತನ್ನ ದಾಸಿಯನ್ನಾಗಿ ಮಾಡಿಕೊಂಡ. ಸುಖಲೋಲುಪತೆಗೆ ಒಡ್ಡಿದ ಮೈ-ಮನ ಎರಡೂ ಹೆಣ್ಣನ್ನು ಸುಲಭದಲ್ಲಿ ಗಂಡಿನ ಗುಲಾಮಳನ್ನಾಗಿ ಮಾಡಿದವು. ಬುದ್ಧಿವಂತ ಪುರಷ ತನ್ನೆಲ್ಲ ಪ್ರತಿಭೆಯನ್ನು ಉಪಯೋಗಿಸಿ, ನೀನೇ ಶೃಂಗಾರದ ರಸದೇವತೆ ರತಿ ಎಂದೂ ಶಕ್ತಿದೇವಿ ಪಾರ್ವತಿ ಎಂದೂ ಸಂಪತ್ತಿನ ಒಡತಿ ಲಕ್ಷ್ಮಿ ಎಂದೂ ಸಂಗೀತದ ರಸವಾಹಿನಿ ಸರಸ್ವತಿ ಎಂದೂ ಸಾಹಿತ್ಯ-ಕಾವ್ಯದ ಅಧಿದೇವತೆ ಶಾರದೆ ಎಂದೂ ವಿಶೇಷ ರೀತಿಯಿಂದ ವರ್ಣಿಸಿದ.

ನಿನ್ನನ್ನು ತಲೆಯಲ್ಲಿ ಹೊತ್ತಿದ್ದಾನೆ ಶಿವನೆಂದೂ ಮೈಯ ಅರ್ಧ ಭಾಗದಲ್ಲೆ ಸೇರಿಸಿಕೊಂಡಿದ್ದಾನೆ ಶಂಕರನೆಂದೂ ವಕ್ಷಸ್ಥಳದಲ್ಲೆ ದಕ್ಷತೆಯಿಂದ ಇರಿಸಿಕೊಂಡಿದ್ದಾನೆ ವಿಷ್ಣುವೆಂದೂ ಚಿತ್ರಿಸಿದ. ಹೆಣ್ಣಿಗೆ ಇದಕ್ಕಿಂತಾ ಮಿಗಿಲಾದುದು ಏನಿದೆ ಎಂದು ಕೇಳಿದ. ಸೌಂದರ್ಯದಲ್ಲಂತೂ ನೀನೇ ಇಂದ್ರಾಣಿ, ರಂಭೆ, ಊರ್ವಶಿ, ತಿಲೋತ್ತಮೆ, ಮೇನಕೆ ಎಂದೂ ವರ್ಣಿಸಿ ಮೈಮರೆತ ಗಂಡು ಒಂದು ಕಡೆ. ಅದನ್ನು ನಿಜವೆಂದು ನಂಬಿ ಈ ಭ್ರಾಮಕ ಪ್ರಪಂಚದಲ್ಲಿ ತನ್ನ ಅಸ್ತಿತ್ವವನ್ನೇ ಮರೆತ ಹೆಣ್ಣು ಇನ್ನೊಂದು ಕಡೆ.

ವೇದ-ಉಪನಿಷತ್ತುಗಳ ಕರ್ತೃ-ಪುರುಷ. ಹೆಣ್ಣನ್ನು ಹೊಗಳುವುದರ ಮೂಲಕ, ಆಕೆಯ ತಲೆಯಲ್ಲಿನ ವೈಚಾರಿಕ ಪ್ರಜ್ಞೆಯನ್ನೆಲ್ಲಾ ಕ್ರಮೇಣ ಮಸುಳಿಸಿದ. ಹಂತಹಂತವಾಗಿ ಅತ್ಯಂದ ಬುದ್ಧಿವಂತಿಕೆಯಿಂದ ಹೆಣ್ಣಿನ ಎಲ್ಲ ಶಕ್ತಿಯನ್ನು ನಿರ್ನಾಮಗೊಳಿಸಿದ. ಧರ್ಮಗ್ರಂಥಗಳಿಂದ, ಶಾಸ್ತ್ರ ಉಪನಿಷತ್ತುಗಳಿಂದ ಒಂದೊಂದೇ ಬಂಧನಗಳಿಂದ ಹೆಣ್ಣನ್ನು ಕಟ್ಟುತ್ತಾ ಬಂದ. ಕಟ್ಟಕಡೆಗೆ ಆಕೆಯನ್ನು ಒಂದು ದಿನ ಸಂಪೂರ್ಣವಾಗಿ ಸೆರೆಮನೆಗೆ ತಳ್ಳಿದ. ಅಂತ್ಯದಲ್ಲಿ ಹೆಣ್ಣು, ನಿರಂತರವಾಗಿ ತನ್ನ ಸಂಪೂರ್ಣ ಅಧೀನದಲ್ಲೇ ಉಳಿಯುವಂತೆ ಮಾಡಿಕೊಂಡ; ತನ್ನ ಮಾತನ್ನಷ್ಟೆ ಕೇಳಿ ಅದರಂತೆ ನಡೆಯುವ ಒಂದು ಪ್ರಾಣಿಯನ್ನಾಗಿ ಪರಿವರ್ತಿಸಿಕೊಂಡ. ಈ ಎಲ್ಲ ಪರಿವರ್ತನೆ ಒಂದೆರಡು ದಿವಸಗಳಲ್ಲಿ ಆದುದಲ್ಲ. ಇದಕ್ಕೆ ಶತಮಾನಗಳೇ ಹಿಡಿಯಿತು.

ಪ್ರಣಯ-ಪ್ರೀತಿಯ ವಿಷಯದಲ್ಲಿ ಹೆಣ್ಣು-ಗಂಡಿನ ಹೊಣೆ ಸಮಾನವಾಗಿದ್ದರೂ ಮಕ್ಕಳನ್ನು ಹೆರುವ, ಹೊರುವ, ಸಾಕಿ ಸಲಹುವ ಹೆಚ್ಚಿನ ಜವಾಬ್ದಾರಿ ಹೆಣ್ಣಿನದೇ ಆಗಿರುತ್ತದೆ. ಹಾಗೆ ಆಗುವುದು ಪ್ರಕೃತಿ ನಿಯಮವೇ ಆದರೂ ಗಂಡ ಮಾತ್ರ ಅದನ್ನು ಆಕೆಯ ದೌರ್ಬಲ್ಯವೆಂದು ಭಾವಿಸಿದ. ಆ ಮೂಲಕವೂ ಆಕೆಯನ್ನು ನಾಲ್ಕು ಗೋಡೆಗಳ ಮಧ್ಯೆ ಇರಿಸಿ, ತಾನು ಮಾತ್ರ ಮಿತಿಮೀರಿದ ಸ್ವೇಚ್ಛೆಯಿಂದ ವರ್ತಿಸಲು ಪ್ರಾರಂಭಿಸಿದ. ಹೆಣ್ಣಿಗೆ ‘ಪತಿಯೇ ಪರದೈವ’ಎನ್ನುವ ಮಂತ್ರವನ್ನು ಉಪದೇಶಿಸಿದ ‘ಈತನೇ ನನಗೆ ಏಳು ಏಳು ಜನ್ಮಗಳಿಗೂ ಪತಿಯಾಗಿರಲಿ’ ಎಂದು ಬೇಡುವಂತೆ ಆಕೆಗೆ ಬಲತ್ಕಾರದಿಂದ ಹೇಳಿಕೊಟ್ಟ. ಹೆಣ್ಣಿಗೆ ಇಷ್ಟವಿರಲಿ, ಇಲ್ಲದಿರಲಿ ಆಕೆ ಅದನ್ನೇ ಬೇಡುವಂತೆ ಧಾರ್ಮಿಕ ಕಟ್ಟುಗಳಿಂದ ಆಕೆಯನ್ನು ಚೆನ್ನಾಗಿ ಶೋಷಿಸಿದ. ತಾನೇ ರಚಿಸಿದ ವೇದ, ಉಪನಿಷತ್ತುಗಳ ಆಧಾರಗಳಿಂದ ಈ ಭಾವನೆಗಳನ್ನು ಪುಷ್ಟೀಕರಿಸಿದ. ಇದೆಂಥ ವಿಪರ್ಯಾಸ! ಸಾಮಾಜಿಕ ವ್ಯವಸ್ಥೆಯನ್ನೇ ತನ್ನೆಲ್ಲಾ ಸುಖಸಂತೋಷಕ್ಕೆ ಮಾರ್ಪಡಿಸಿಕೊಂಡ. ಏರ್ಪಡಿಸಿಕೊಂಡ. ಇದು ಶತ ಶತಮಾನಗಳ ಹಿಂದಿನ ಮಾತಾದರೂ ಪುರುಷ ಇಂದಿಗೂ ಹೆಣ್ಣನ್ನು ಹಂತ ಹಂತವಾಗಿ ಎಲ್ಲ ಸ್ತರಗಳಲ್ಲಿಯೂ ಶೋಷಿಸುತ್ತಾ ಬಂದಿರುವುದು ಅತ್ಯಂತ ಶೋಚನೀಯ ಸಂಗತಿ.

ಕಾಲ ವ್ಯತ್ಯಾಸ ಆಗಿರಬಹುದು, ಕಾನೂನುಗಳು ಕಣ್ತೆರೆದಿರಬಹುದು. ಸುಧಾರಣೆಗಳು ಸೂಚಿಸಬಹುದು, ಘೋಷಣೆಗಳು ಕೂಗು ಕೇಳುತ್ತಿರಬಹುದು, ಆದರೆ ಹೆಣ್ಣು ಇಂದಿಗೂ ಈ ಕ್ಷಣಕ್ಕೂ ಗುಲಾಮಳಾಗಿಯೇ ಬದುಕುತ್ತಿರುವುದು ದುಃಖದ ಸಂಗತಿ, ಪುರುಷಪ್ರಧನ ಸಮಾಜದ ಅಮಾನವೀಯ ವರ್ತನೆಯಲ್ಲಿ ಹೆಣ್ಣು ಒಂದು ಮಾರಾಟದ ವಸ್ತುವಾಗಿದ್ದಾಳೆ, ಭೋಗದ ಬೊಂಬೆಯಾಗಿದ್ದಾಳೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ ನಮ್ಮ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ದೇವದಾಸಿ ಪದ್ಧತಿ.

ತಲತಲಾಂತರದಿಂದಲೂ ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ, ದೇವರಿಗಾಗಿ ಬಸವಿ ಬಿಡುವ, ಸೂಳೆ ಬಿಡುವ ಪದ್ಧತಿಯನ್ನು ವ್ಯವಸ್ಥಿತವಾಗಿ ಆಚರಿಸಿಕೊಂಡು ಬಂದಿರುವುದು ಕಂಡುಬರುತ್ತದೆ. ಸುಂದರಿಯರಾದ ಶೂದ್ರ ಹೆಣ್ಣು ಮಕ್ಕಳು ಸಂಗೀತ ನೃತ್ಯವನ್ನು ಕಲಿತು ಆ ಸೇವೆಯನ್ನು ದೇವರಿಗೆ ಅರ್ಪಿಸುವುದರ ಮೂಲಕ ಅವರು ದೇವದಾಸಿಯರಾಗುತ್ತಿದ್ದರು. ಮೊದ ಮೊದಲು ದೇವರ ಹೆಸರಿನಲ್ಲಿ ಪ್ರಾರಂಭವಾದ ಈ ಪದ್ಧತಿ ಅನಂತರ ಪುರೋಹಿತರ, ಅರಸೊತ್ತಿಗೆಯರ, ಸಿರಿವಂತರ ಪಾಲಾಯಿತು. ಒಟ್ಟಿನಲ್ಲಿ ಹೆಣ್ಣನ್ನು ಬಿಟ್ಟಿದ್ದು ದೇವರಿಗೆ ಆದರೆ ಆಕೆಯ ಅಂಗಾಂಗ ಸುಖವನ್ನು ಅನುಭವಿಸಿದ್ದು ಇಂಥ ಪಟ್ಟಭದ್ರರು. ದೇವರ ಪವಿತ್ರ ಸೇವೆ ಮಾಡುವುದು ಪುಣ್ಯದ ಕೆಲಸವೆಂದು ಹೇಳುತ್ತಾ ಅವರನ್ನು ಚೆನ್ನಾಗಿ ಉಪಯೋಗಿಸಿಕೊಂಡದ್ದು ಇಂಥ ದುಷ್ಟಕೂಟದ ವ್ಯಕ್ತಿಗಳು. ಆದರೆ ತಾನು ಮಾಡುತ್ತಿದ್ದ ಈ ಕೆಟ್ಟ ಕೆಲಸಕ್ಕೆ ಸಮಾಜದಲ್ಲಿ ಒಂದು ಗೌರವ, ಮನ್ನಣೆ ಉಂಟಾಗುವಂತೆ ಸಾಮಾಜಿಕ ವ್ಯವಸ್ಥೆಯನ್ನೆ ಭದ್ರಗೊಳಿಸಿದ್ದು ಪಟ್ಟಭದ್ರರ ಸ್ವೇಚ್ಛಾಚಾರ ಜೀವನಕ್ಕೆ ಒಂದು ಒಳ್ಳೆಯ ನಿದರ್ಶನ.

ದೇವದಾಸಿಯರು, ಜೋಗತಿಯರು, ಬಸವಿಯರು, ಸೂಳೆಯರು ಹಾಗೂ ಪಾತ್ರದವು ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆದು ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ದುರುಪಯೋಗಪಡಿಸಿಕೊಂಡಿದ್ದಾರೆ. ಈ ಅವಸ್ಥೆ ಎಲ್ಲ ಹೆಣ್ಣುಮಕ್ಕಳಿಗೂ ಬರಲಿಲ್ಲ. ಸಿರಿವಂತ, ಅನುಕೂಲವಂತ ಮನೆತನದ, ಮೇಲುಜಾತಿಯರವಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಗದವರ ಹೆಣ್ಣು ಮಕ್ಕಳು ಈ ಅನಿಷ್ಟ ಪದ್ಧತಿಗೆ ಒಳಗಾಗದಂದೆ ಮೇಲುಜಾತಿಯ ಪುರುಷ ವರ್ಗ ಎಚ್ಚರಿಕೆ ವಹಿಸಿತು. ಸಮಾಜದ ಪ್ರತಿಷ್ಠಿತರೂ ಉಳ್ಳವರೂ ಸಂಪೂರ್ಣವಾಗಿ ಅನ್ಯಾಯ ಮಾಡಿದ್ದು ಈ ಶೂದ್ರ, ಹರಿಜನ, ಗಿರಿಜನ ಹೆಣ್ಣು ಮಕ್ಕಳಿಗೆ !

ವರ್ಣ ವ್ಯವಸ್ಥೆಯಲ್ಲಿಯೂ ಹೇಗೆ ಬ್ರಾಹ್ಮಣ ಪುರುಷನೊಬ್ಬ ತನ್ನ ಹಾಗೂ ಇತರ ಮೂರು ವರ್ಗಗಳಲ್ಲಿನ ಹೆಣ್ಣನ್ನು ಆತ ಮದುವೆಯಾಗಬಹುದೆಂದು ಶಾಸನ ಮಾಡಿದನೊ ಅದೇ ರೀತಿ ಶೂದ್ರ, ಹರಿಜನ ಗಿರಿಜನ ಹೆಣ್ಣುಮಕ್ಕಳು ಮಾತ್ರ ದೇವದಾಸಿಯರಾಗುವಂತೆ ಧರ್ಮ ಶಾಸನವನ್ನು ಬರೆದ.

ಹೆಣ್ಣುಮಕ್ಕಳಿಗಾದ ಅನ್ಯಾಯಗಳನ್ನು ಕಂಡ ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರು ಹೆಣ್ಣು ಮಕ್ಕಳನ್ನು ದಲಿತರೆಂದು ಕರೆದರು. ಆದರೆ ಆ ದಲಿತದಲ್ಲಿ ದಲಿತರೆಂದರೆ, ಅವರಲ್ಲಿ ಮತ್ತೂ ನತದೃಷ್ಟರೆಂದರೆ ಆ ಹರಿಜನ ಗಿರಿಜನ ಕನ್ಯೆಯರು. ಅವರಿಗಾಗಿರುವ ಅನ್ಯಾಯಗಳು ಅಪಾರ! ಆದರೆ ದಾಖಲೆಗಳು ಸಿಗುವುದು ಬಹಳ ಕಡಿಮೆ. ಸಿಕ್ಕಿದರೂ ಮೇಲು ನೋಟದ, ತೇಲು ಮಾತುಗಳು ಅಷ್ಟೆ ! ಏಕೆಂದರೆ ದಲಿತ ಪರವಾದ ವಾಣಿಕೇಳಲು ಅಂದು ಸಾಧ್ಯವೇ ಇರುತ್ತಿರಲಿಲ್ಲ ಎಂದಮೇಲೆ ಈ ಅನ್ಯಾಯಗಳನ್ನು ಇನ್ನು ದಾಖಲಿಸುವವರ್ಯಾರು?

ದೇವದಾಸಿ, ಬಸವಿ, ಸೂಳೆ, ಜೋಗತಿ – ಈ ಹೆಸರುಗಳಲ್ಲಿ ವ್ಯತ್ಯಾಸವಿದ್ದರೂ ಮೂಲತಃ ಇವರೆಲ್ಲರ ಕಸುಬು ಅಲ್ಪಸ್ವಲ್ಪ ವ್ಯತ್ಯಾಸದೊಂದಿಗೆ ತಮ್ಮ ದೇಹವನ್ನು ಅರ್ಪಿಸಿಕೊಳ್ಳುವುದೇ ಆಗಿದೆ. ಹೋಗುವ ದಾರಿಯಲ್ಲಿ ಸ್ವಲ್ಪ ವ್ಯತ್ಯಾಸವಿರಬಹುದು, ಆದರೆ ಪರಿಣಾಮದಲ್ಲಿ ಎಲ್ಲ ಒಂದೇ. ದೇವದಾಸಿ ಎಂದಾಗ ದೇವರ ಸೇವೆಗೆ ಮೀಸಲಾದವಳು ಎಂದು. ದೇವರಿಗೆ ಕೊಟ್ಟು ಮದುವೆಯಾದ ಈಕೆ ದೇವರ ಮುಂದೆ ನರ್ತನ ಮಾಡುವ, ಹಾಡುವ ಸಂಪ್ರದಾಯವಿತ್ತು. ಜೊತೆ ಜೊತೆಯಲ್ಲೇ ಪುರೋಹಿತ ವರ್ಗದವರ ಊರಿನ ಗಣ್ಯರ ಸ್ವತ್ತೂ ಅವರಾಗುತ್ತಿದ್ದರು. ಕ್ರಿ.ಶ. ೧೦೦೪ ರ ಶಿಲಾಶಾಸನ ಒಂದರಲ್ಲಿ ತಂಜಾವೂರಿನ ಚೋಳರಜನದ ಶ್ರೀ ರಾಜರಾಜಚೋಳನಿಗೆ ೪೦೦ ಜನ ದೇವದಾಸಿಯರು ಇದ್ದರೆಂದು ತಿಳಿದುಬರುತ್ತದೆ. ಅಂದು ಅದಕ್ಕೆ ಧಾರ್ಮಿಕ ಬೆಂಬಲವಿತ್ತೆಂದು ಹೇಳಿದೆ. ಅಂದು ಅಂಥ ಸಂಬಂಧ ನೈತಿಕತೆಗೆ ಹೊರತು ಎಂದು ಭಾವಿಸಿರಲಿಲ್ಲವೆಂದು ತಿಳಿಸಿದೆ. ಆದರೆ ಅನಂತರದ ಅವಸ್ಥೆಯನ್ನು ಮಾನವ ಶಾಸ್ತ್ರಜ್ಞನೊಬ್ಬ ಅಬ್ಬೆ. ಜೆ.ಎ.ದುಬಾಯಿಸ್ ಎಂಬಾತ ‘೧೯ನೇ ಶತಮಾನದ ಪೂರ್ವಭಾಗದಲ್ಲಿ ದಕ್ಷಿಣ ಹಿಂದೂ ದೇವಾಲಯಗಳು ವೇಶ್ಯಾಗೃಹಗಳಂತೆ ಪರಿವರ್ತಿತವಾಗಿವೆ’ ಎಂದು ವರ್ಣಿಸಿದ್ದಾನೆ.

ಕೌಟಿಲ್ಯನ ಅರ್ಥ ಶಾಸ್ತ್ರದ ಪ್ರಕಾರ ಈ ದೇವದಾಸಿ ಪದ್ಧತಿ ಸರಕಾರದ ವಿಭಾಗಗಳಿಂದ ಸುವ್ಯವಸ್ಥಿತಗೊಳಿಸಲ್ಪಟ್ಟಿತ್ತು ಎಂದು ತಿಳಿಯುತ್ತದೆ. ಕೆಲವೊಮ್ಮೆ ದೇವಾಲಯಗಳಿಗೆ ಹಣ ಗಳಿಸಲು ಈ ಪದ್ಧತಿಯು ಬೆಳೆದಂತೆ ಕಂಡು ಬರುತ್ತದೆ ಎಂದು ವಿಲ್ ಡುರ್ಯಾಂಡ್ (Will Durant) ಎಂಬ ಇತಿಹಾಸತಜ್ಞ ಅಭಿಪ್ರಾಯಪಟ್ಟಿದ್ದಾನೆ. ಭಾರತದಲ್ಲಿ ಮಾತ್ರವಲ್ಲದೆ ಈ ಪದ್ಧತಿ ಸುಮೇರಿಯಾ, ಪ್ರಾಚೀನ ಈಜಿಪ್ಟ್, ಪ್ರಾಚೀನ ಬ್ಯಾಬಿಲೋನಿಯಾ, ಸಿರಿಯಾ, ಇಸ್ರಾಯಿಲ್, ಘೋನೇಸಿಯಾ, ಲಿಡಿಯಾ, ಚೀನ, ಗ್ರೀಕ್ ಹಾಗೂ ಜಪಾನ್ ಮೊದಲಾದ ಜಗತ್ತಿನ ಇತರ ದೇಶಗಳಲ್ಲಿಯೂ ಈ ಪದ್ಧತಿ ಇದ್ದುದು ತಿಳಿದುಬರುತ್ತದೆ.

ಭಾರತದಲ್ಲಿ ದತ್ತ, ವಿಕೃತ, ಬ್ರತ್ಯಾ, ಭಕ್ತ, ಹೃತಾ, ಅಲಂಕಾರ ಗೋಪಿಕ ಹೀಗೆ ಏಳು ರೀತಿಯ ದೇವದಾಸಿಯನ್ನು ಕಾಣಬಹುದು. ಕರ್ನಾಟಕದಲ್ಲಿ ಈ ಪದ್ಧತಿ ಸುಮಾರು ೯ನೆಯ ಶತಮಾನದಿಂದ ನಡೆದು ಬಂದಿರುವುದಕ್ಕೆ ದಾಖಲೆಗಳು ದೊರಕುತ್ತವೆ.

ಕರ್ನಾಟಕದಲ್ಲಿ ಮುಖ್ಯವಾಗಿ ಬೇಡ, ಬೋಯಾ ಮತ್ತು ಹರಿಜನ ಜಾತಿಯಲ್ಲಿ ಈ ಪದ್ಧತಿ ಇರುವುದು ಕಂಡುಬರುತ್ತದೆ. ಈ ಜನಾಂಗದಲ್ಲಿ ಗಂಡು ಸಂತಾನವಿಲ್ಲದವರು ಬಸವಿ ಬಿಟ್ಟು ಅಥವಾ ದೇವದಾಸಿ ಒಳಪಡಿಸಿದ ಹೆಣ್ಣುಮಕ್ಕಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಳ್ಳುವರು. ದೇವರನ್ನು ಮದುವೆಯಾದ ಆಕೆ ಎಂದೆಂದೂ ಮುತ್ತೈದೆಯೇ. ಇತರ ವರ್ಗದ ಸ್ತ್ರೀಯರು ತಮ್ಮ ಮುತ್ತೈದೆತನ ಶಾಶ್ವತವಾಗಿರಲೆಂದು ಈ ಬಸವಿಯರ ಕೊರಳಿನ ಕರಿಮಣಿಯನ್ನು ಆಕೆಯಿಂದ ಪೋಣಿಸಿಕೊಳ್ಳುತ್ತಾರೆ.

ವಿಜಯನಗರದ ಅರಸರ ಕಾಲದಲ್ಲಿ ಬೋಯಾ ಜನಾಂಗದಲ್ಲಿ ಬಸವಿ ಬಿಡುವ ಪದ್ಧತಿ ವ್ಯಾಪಕವಾಗಿತ್ತೆಂದೂ ತಿಳಿಯುತ್ತದೆ. ೧೯೨೪ರಲ್ಲಿ ತಾವ್ನೆ (Tawney) ಯು ಎಂಬ ವಿದ್ವಾಂಸನು ಸೋಮದೇವನ ಕಥಾ ಸರಿತ್ಸಾಗರದ ಭಾಷಾಂತರದಲ್ಲಿ ‘ದೇವದಾಸಿ ಪದ್ಧತಿ ಪವಿತ್ರ ವೇಶ್ಯಾ ಪದ್ಧತಿ’ ಎಂದು ಹೇಳಿದ್ದಾನೆ. ಆತನ ವಿವರಣೆ ಪ್ರಕಾರ ಈ ಪದ್ಧತಿ ಕೇವಲ ಹರಿಹರ ದೇವಾಲಯಗಳಲ್ಲಿ ಮಾತ್ರವಲ್ಲದೆ ಜೈನರ ಬಸದಿಗಳಲ್ಲಿಯೂ ಬೌದ್ಧರ ಪಗೋಡಾಗಳಲ್ಲಿಯೂ ಇದ್ದುದು ತಿಳಿದು ಬರುತ್ತದೆ. ಗುಜರಾತಿನ ಸೋಮನಾಥ ದೇವಾಲಯದಲ್ಲಿ ಇಂಥ ನೂರಾರು ದೇವದಾಸಿಯರು ಇದ್ದರೆಂದೂ ಸಮಾಜ ಶಾಸ್ತ್ರಜ್ಞರು ತಿಳಿಸಿದ್ದಾರೆ. ಹತ್ತನೆಯ ಶತಮಾನದ ಒಂದು ಶಾಸನದಂತೆ ಕರ್ನಾಟಕದಲ್ಲಿ ಪಾತ್ರದವರು, ದೇವದಾಸಿಯರು, ಬಸವಿಯರು ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುತ್ತಿದ್ದರೆಂದು ತಿಳಿದುಬರುತ್ತದೆ. ಕರ್ನಾಟಕದ ಮತ್ತೊಂದು ಶಾಸನ ದೇವದಾಸಿಯರು ದೇವಾಲಯಗಳಲ್ಲಿ ಹೆಚ್ಚು ಜನಪತ್ರಿಯರಾಗಿದ್ದುದನ್ನು ತಿಳಿಸುತ್ತದೆ. ಬ್ರಿಟಿಷ್ ಸರಕಾರ ಈ ಪದ್ಧತಿಗೆ ಪ್ರೋತ್ಸಾಹ ಕೊಡದಿದ್ದರೂ ಅದನ್ನು ನಿಷೇಧಿಸುವ ಗೊಡವೆಗೆ ಹೋಗಲಿಲ್ಲ. ಕಾರಣ ಧಾರ್ಮಿಕ ಚಟುವಟಿಕೆಗಳಲ್ಲಿ ಹೈಹಾಕುವುದು ಬ್ರಿಟಿಷರಿಗೆ ಬೇಕಾಗಿರಲಿಲ್ಲ. ಆದರೆ ಕಾಲಕ್ರಮೇಣ ಇದು ತುಂಬಾ ಕೆಟ್ಟ ಸಂಪ್ರದಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ಇಂಥ ಪದ್ಧತಿಯನ್ನು ಕಾನೂನಿನಿಂದ ನಿಷೇಧಿಸುವ ಪ್ರಯತ್ನ ಅನಂತರ ನಡೆಯಿತು.

೧೯ನೆಯ ಶತಮಾನದ ಅಂತ್ಯದಲ್ಲಿ ಬಸವಿಯರಾಗಲು ಯುರೋಪಿಯನ್ ಮೆಜೆಸ್ಟ್ರೇಟರಿಗೆ ಅರ್ಜಿ ಸಲ್ಲಿಸಬೇಕೆಂದು ವಿಧಿಸಲಾಗಿತ್ತು. ಅದರಂತೆ ಅಂದು ಬಸವಿಯರಾಗುವ ಹೆಣ್ಣುಮಗಳಾಗಲೀ ಅಥವಾ ಆಕೆಯ ತಂದೆ ತಾಯಿಯಾಗಲೀ ಅನುಮತಿಗಾಗಿ ಅರ್ಜಿ ಸಲ್ಲಿಸಿದ ದಾಖಲೆಗಳು ಸಾಕಷ್ಟು ದೊರೆಯುತ್ತವೆ. ತಂದೆಯ ಆಸ್ತಿ ಹಕ್ಕುದಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪೊಂದು ಹೀಗೆ ಹೇಳಿದೆ : ‘ಅವಳು ದೇವದಾಸಿಯಾಗಿದ್ದರೂ ವೇಶ್ಯಾವೃತ್ತಿಯಿಂದ ಹಣಗಳಿಸುವುದು ಅವಳ ವೃತ್ತಿಯಾಗುವುದಿಲ್ಲ’ ಎಂದು. ಆದರೆ ಕಡೆಗೆ ಈ ಎಲ್ಲ ಪದ್ಧತಿಗಳೂ ಹೊಟ್ಟೆ ಹೊರೆದುಕೊಳ್ಳಲು, ಹಣ ಗಳಿಸುವ ವೇಶ್ಯಾವೃತ್ತಿಗೆ ದಾರಿ ಮಾಡಿಕೊಟ್ಟಿವೆ. ಈಗಲೂ ಧಾರ್ಮಿಕ ಚೌಕಟ್ಟಿನಲ್ಲಿ ಕಾನೂನು ಪ್ರವೇಶಿಸಲು ಸಂವಿಧಾನದ ಪ್ರಕಾರ ಅವಕಾಶವಿಲ್ಲ. ಇನ್ನು ವೇಶ್ಯಾವೃತ್ತಿಯಾದರೋ ಕಾನೂನಿಗೆ ಒಳಪಟ್ಟಿದ್ದರೂ ಸಹ ಅದನ್ನು ನಿಯಂತ್ರಿಸಲು ಅಸಾಧ್ಯವಾಗಿರುವುದು ಅಪ್ರಿಯವಾದರೂ ಸತ್ಯಸಂಗತಿಯಾಗಿದೆ.

ಸಮಾಜದಲ್ಲಿನ ಗಂಡು ಹೆಣ್ಣಿನ ಮಾನಸಿಕ ಬದಲಾವಣೆಯಾಗದ ಹೊರತು ಈ ದುಷ್ಟಪದ್ಧತಿ ತೊಲಗುವುದು ಅಸಾಧ್ಯ. ಇಲ್ಲದವರು ಹೊಟ್ಟೆ ಪಾಡಿಗಾಗಿ, ಇರುವವರು ಒಂದು ಮೋಜಿಗೋ ಅಥವಾ ಇನ್ನೂ ಹೆಚ್ಚು ಪಡೆಯಲೋ ಈ ವ್ಯಭಿಚಾರಕ್ಕೆ ತೊಡಗುವುದು ಅತ್ಯಂತ ಶೋಚನೀಯ ಸಂಗತಿ. ದೇವರ, ಧರ್ಮದ ಹೆಸರಿನಲ್ಲಿ ನಡೆಯುವ ಈ ಅತ್ಯಾಚಾರಕ್ಕೆ, ಶೋಷಣೆಗೆ ಮೊದಲು ಮಂಗಳ ಹಾಡಬೇಕು. ಶೋಷಣೆಗೆ ಒಳಗಾಗುವ ಈ ಹೆಣ್ಣು ಮಕ್ಕಳಿಗೆ ಸರಿಯಾದ ತಿಳುವಳಿಕೆಯನ್ನು, ಆರ್ಥಿಕ ಸುಭದ್ರತೆಯನ್ನು ಒದಗಿಸಿಕೊಡಬೇಕಾದುದು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿ. ಈ ಪದ್ಧತಿಯನ್ನು ನಿಯಂತ್ರಿಸುವುದರಲ್ಲಿ ಕಾನೂನು ಸ್ವಲ್ಪ ಮಟ್ಟಿಗೆ ನರವಾಗಬಹುದಾದರೂ ಸಮಾಜದ ವ್ಯಕ್ತಿಗಳ ಪಾತ್ರ ಈ ದಿಸೆಯಲ್ಲಿ ಬಹುಮುಖ್ಯವಾದುದು. ಸರಕಾರ ಸಮಾಜದ ಮೇಲೆ ಸಮಾಜ ಪುರುಷರ ಮೇಲೆ, ಪುರುಷರು ಸ್ತ್ರೀಯರ ಮೇಲೆ ತಪ್ಪು ಹೊರಿಸುತ್ತಾ ಅಷ್ಟಷ್ಟರ ಮಟ್ಟಿಗೆ ಅವರವರ ಹೊಣೆಯಿಂದ ಕಳಚಿಕೊಳ್ಳುವುದರಲ್ಲಿ ಅರ್ಥವಿಲ್ಲ. ಸಮಸ್ಯೆಗೆ ಇದರಿಂದ ಪರಿಹಾರ ದೊರೆಯುವುದಿಲ್ಲ. ಎಲ್ಲ ಕಡೆಯಿಂದಲೂ ಸಾಮೂಹಿಕವಾಗಿ ಸಕ್ರಿಯ ಆಚರಣೆ ಈ ಅನಿಷ್ಟ ಪದ್ಧತಿಯ ವಿರುದ್ಧ ನಡೆದರೆ ಈ ಸಾಮಾಜಿಕ ಪಿಡುಗು ಮರೆಯಾದೀತು. ಹೆಣ್ಣು ಗಂಡು ಇಬ್ಬರೂ ನೈತಿಕತೆಯ ಚೌಕಟ್ಟಿನಲ್ಲಿ ಮಾನವಂತರಾಗಿ ಬದುಕಿಯಾರು.