ಪಲವುಂ ನಾಲಗೆಯುಳ್ಳವಂ ಬಗೆವೊಡೆಂದುಂ ಬಣ್ಣಿಸಲ್ಕಾರನಾ
ನೆಲನಂ ಮತ್ತಿನ ಮಾನಿಸರ್ ಪೊಗಳಲೇನಂ ಬಲ್ಲರೆಂಬೊಂದು
ಲ್ಲುಲಿಯಂ ನೆಟ್ಟನೆ ತಾಳ್ದು ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು ಮೆ
ಲ್ಲೆಲರಿಂ ಪೂತಕೊಳಂಗಳಿಂ ಕೆರೆಗಳಿಂ ಕಾಲೂರ್ಗಳಿಂ ಕಯ್ಗಳಿಂ

ಅಚ್ಚಕನ್ನಡದ ಕೆಚ್ಚನ್ನೂ ಒಲವನ್ನೂ ಎದೆತುಮಬ ತುಂಬಿಕೊಂಡು ನಾಡು ನುಡಿಗಳ ಅಭಿಮಾನದಿಂದ ಆಂಡಯ್ಯ ಕವಿ ಎಂಟನೂರು ವರ್ಷಗಳ ಹಿಂದೆ ಈ ಹಾಡು ಹಾಡಿದ. ಆದರೆ ಈ ಹಾಡನ್ನು ಎಲ್ಲ ಕನ್ನಡಿಗರೂ ಒಟ್ಟಿಗೆ ಕೂಡಿಗೊಟ್ಟಿಗಾನವಾಗಿ ಹಾಡುವ ಅಗತ್ಯ ಎಂದಿಗಿಂತ ಇಂದು ಹೆಚ್ಚಾಗಿದೆ.

ಪ್ರಾಚೀನ ಸಂಸ್ಕೃತಿಯ ಮೇಲೆ ನಿಂತ ನವೀನ ಸಂಸ್ಕೃತಿಯ ಪುಣ್ಯಭೂಮಿ ನಮ್ಮದು. ನಾವು ಪುಣ್ಯವಂತರೆಂಬ ಮಾತು ನೂರಕ್ಕೆ ನೂರು ನಿಜ. ಏಕೆಂದರೆ ನಾವು ನಮ್ಮ ಜೀವಿತ ಕಾಲದಲ್ಲಿಯೇ ಭಾರತ ಸ್ವಾತಂತ್ರ್ಯವನ್ನು ಕಂಡೆವು. ಕನ್ನಡ ನಾಡಿನ ಬೇರೆ ಎಡೆಗಳು ಕೂಡಿ ಒಂದಾದುದನ್ನೂ ನೋಡಿದೆವು. ಗೋವಾದ ಬಿಡುಗಡೆಯೂ ಆಯಿತು. ಇವೆಲ್ಲ ಸರಿಯೆ, ಸಂತೋಷವೆ. ಆದರೆ ಇವೆಲ್ಲದರ ಸ್ವಾತಂತ್ರ್ಯ ಬಂದು, ಏಕೀಕರಣ ಆದ ಮಾತ್ರಕ್ಕೆ ಸಮಸ್ಯೆಗಳು ಮುಗಿಯಲಿಲ್ಲ. ಅಷ್ಟರಿಂದಲೇ ಎಲ್ಲ ಕಷ್ಟಗಳೂ ನಿವಾರಣೆ ಆಗಲಿಲ್ಲ.

ಇಂದು ಕನ್ನಡ ನಾಡಿನಲ್ಲಿ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳು ಏನೂ ಕಡಿಮೆ ಇಲ್ಲ. ಆದರೆ ಅವುಗಳಲ್ಲಿ ಬರೆವಣಿಗೆಯಲ್ಲಿ ನಿರತರಾದವರ ಹಾಗೂ ನಾಡು ನುಡಿಗಳ ಮೇಲ್ಮೆಗಾಗಿ ಹಗಲಿರುಳೂ ದುಡಿಯುವವರೆಲ್ಲರ ನೋಟದಲ್ಲಿ, ಮೊಟ್ಟ ಮೊದಲನೆಯದಾಗಿ ಕಾಣುವುದು ನುಡಿಯ ಉಳಿವಿನ ಮಾತು. ಕನ್ನಡ ನಾಡಿನಲ್ಲಿ ಕನ್ನಡಿಗರ, ಕನ್ನಡದ ಬದುಕು ತುಂಬ ಬರಡಾಗಿ ಬಡಕಲಾಗಿ ತೋರುತ್ತಿದೆ. ಕನ್ನಡ ಎಂದರೆ ‘ಎನ್ನಡ?’ ಎಂದು ಹೇಳುವವರು ‘It is Canada?’ ಎಂದು ಹುಬ್ಬು ಏರಿಸುವವರ ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚುತ್ತಿದ್ದಾರೆ. ಪರಭಾಷೆಗೆ ಪಟ್ಟ ಕಟ್ಟಿ ನಮ್ಮ ನುಡಿಗೆ ಚಟ್ಟ ಕಟ್ಟುವ ಕೆಟ್ಟ ಕೆಲಸ ನಡೆಯುತ್ತಿದೆ.

ಕನ್ನಡ ಭಾಷೆ ಶ್ರೀಮಂತವಾಗಿರುವುದರ ಜೊತೆಗೆ ಶಕ್ತಿಯುತವೂ ಆಗಿದೆ. ಯಾವುದೇ ವಿಚಾರದ ಪ್ರತಿಪಾದನೆಯ ಪ್ರಣಾಳಿಕೆ ಇಲ್ಲವೇ ಮಾಧ್ಯಮ ಆಗಬಲ್ಲ ಸಾಮರ್ಥ್ಯ ಪಡೆದಿದೆ. ಎರಡು ಸಾವಿರ ವರುಷಗಳ ಹಿರಿಮೆಗರಿಮೆಗಳನ್ನೂ ವೈಭವವಿಲಾಸಗಳನ್ನೂ ಮೆರೆದ ಭಾಷೆಯಿದು. ಪಂಪ ಪೊನ್ನ ರನ್ನ ಜನ್ನರಿಂದ ಕುವೆಂಪುರವರ ತನಕ ಮಹಾಕವಿಗಳ ಮೆರವಣಿಗೆಯೇ ಎದೆಯುಬ್ಬಿಸುವಂತಿದೆ. ಮಹಾಕವಿಗಳೂ ಮಹಾಕಾವ್ಯಗಳೂ ಈ ನುಡಿಗೆ ಬಿಗಿಬನಿಗಳನ್ನು ತಂದುಕೊಟ್ಟಿದ್ದಾಗಿದೆ.

ಇತ್ತೀಚೆಗೆ ಕನ್ನಡದಲ್ಲಿ ಆಗುತ್ತಿರುವ ಕೆಲಸ ಬೇರೆ ಯಾವುದೇ ಮುಂದುವರಿದ ಭಾಷೆಗೂ ಕಡಿಮೆಯಿಲ್ಲ. ಸರಿದೊರೆಯಾಗಿದೆ, ಕೆಲವೊಮ್ಮೆ ಸರಿಮಿಗಿಲಾಗಿಯೂ ಇದೆ. ಕನ್ನಡ ಸಾಹಿತ್ಯ ಪರಿಷತ್ತು ಸಿದ್ಧಪಡಿಸುತ್ತಿರುವ ನಿಘಂಟು ಮೇಲ್ಮಟ್ಟದ್ದಾಗಿದೆ. ಕನ್ನಡ ವಿಶ್ವಕೋಶದ ಮೊದಲ ಸಂಪುಟ ಹೊರಬಂದಿದೆ. ಉಳಿದವು ಹೊರಬರಲು ಅಣಿಯಾಗುತ್ತಿವೆ. ವಸ್ತುಕೋಶ ಬೇರೆ ತಯಾರಾಗುವುದರಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಪ್ರಕಟವಾಗಿರುವ ವಿಜ್ಞಾನ ಮತ್ತು ಇತರ ಸಾಹಿತ್ಯೇತರ ಪುಸ್ತಕಗಳು ಬೆರಗುಗೊಳಿಸುವಷ್ಟಿವೆ. ಇತ್ತೀಚೆಗೆ ಪ್ರಕಟವಾದ ಪ್ರಬುದ್ಧ ಕರ್ನಾಟಕದ ಚಿನ್ನದ ಹಬ್ಬದ ವಿಜ್ಞಾನ ವಿಶೇಷಾಂಕ ಕನ್ನಡಕ್ಕೆ ಹೊಸ ಕಸುವು ಕೊಟ್ಟಂತಿದೆ. ವಿಜ್ಞಾನ ಕರ್ನಾಟಕ ಪತ್ರಿಕೆ ಬೇರೆ ಹೊರಬರುತ್ತಿದೆ. ಮಹಾಕವಿ ಕುವೆಂಪು ಕಂಡ ಕನಸು ಕನಸುಗಳು ನನಸಾಗತೊಡಗಿವೆ.

ಇಂದು ನಮ್ಮ ಕನ್ನಡ ನಾಡಿನಲ್ಲಿ ನಾಲ್ಕು ವಿಶ್ವವಿದ್ಯಾನಿಲಯಗಳಿವೆ. ನಾಲ್ಕೂ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳೂ ಕನ್ನಡಿಗರೇ ಆಗಿದ್ದಾರೆ. ಸರ್ವಶ್ರೀಗಳಾದ ತ.ಕು.ತುಕೋಲರು, ದೇ. ಜವರೇಗೌಡರು, ಕೆ. ಸಿ. ನಾಯಕರು ಮತ್ತು ಅಡಕೆಯವರು ಎಲ್ಲರೂ ಕನ್ನಡದ ಹೆಮ್ಮೆಯ ಮಕ್ಕಳು. ಸರಕಾರದಲ್ಲಿ ಕೂಡ ಕನ್ನಡದ ವಾತಾವರಣ ಕಾಣತೊಡಗಿದೆ. ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲರು, ವಿದ್ಯಾ ಸಚಿವರಾದ ಕೆ.ವಿ. ಶಂಕರೇಗೌಡರು, ಸಚಿವರುಗಳಾದ ಬಿ. ರಾಚಯ್ಯ, ರಾಜಶೇಖರಮೂರ್ತಿ, ಅಂದಾನಪ್ಪ ದೊಡ್ಡಮೇಟಿ, ಕೆ. ಪುಟ್ಟಸ್ವಾಮಿ, ಉಪಸಚಿವರಾದ ಎನ್. ಎಂ. ಕೆ. ಸೋಗಿ, ಬಿ.ಎಲ್. ಗೌಡ, ಹೊ.ಚಿ. ಬೋರಯ್ಯ ಮೊದಲಾದವರೆಲ್ಲ ಕನ್ನಡಾಭಿಮಾನಿಗಳು, ರಾಷ್ಟ್ರಕವಿ ಕುವೆಂಪುರವರ ಪದಪುಂಜವೊಂದನ್ನು ಬಳಸಿಕೊಂಡು ಹೇಳುವುದಾದರೆ, ಇದು ಸರಸ್ವತಿಯೆ ರಚಿಸಿದೊಂದು ಸಚಿವ ಮಂಡಲವಾಗಿದೆ.

ಇಷ್ಟೆಲ್ಲ ಅನುಕೂಲಗಳಿದ್ದರೂ ಮೈಯೆಲ್ಲ ಚಿನ್ನ, ಕಿವಿ ಮಾತ್ರ ಹಿತ್ತಾಳೆ ಎಂಬಂತಾಗಿದೆ ಕನ್ನಡದ ಬಾಳು. ತೋರವಾಗಿ ಹೊರವಾಗಿ ಬೆಳೆದು ಕಣ್ಮಣಿಯಂತೆ ಕಂಗೊಳಿಸುತ್ತಿದ್ದ ಕನ್ನಡದ ಇರುವಿಕೆಯ ಬುಡಕ್ಕೆ ಅನೇಕ ಕೊಡಲಿ ಏಟುಗಳು ಬೀಳುತ್ತಲೇ ಇವೆ. ಅವುಗಳಲ್ಲಿ ಕಾನ್ವೆಂಟುಗಳು ಕೊಟ್ಟ ಪೆಟ್ಟು ಬಲವಾದವು. ಅವರಂತೆ ಕೇವಲ ಇಂಗ್ಲೀಷನ್ನೇ ಕಲಿಸುತ್ತಿರುವ ಕೆಲವು ಶಾಲಾ ಕಾಲೇಜುಗಳು ಕನ್ನಡದ ಕನ್ನಡಿಗೆ ಬಳಿದ ಮಸಿಯಾಗಿವೆ. ಬೀದಿ ಬೀದಿಗಳಲ್ಲಿ ಇಂಗ್ಲೀಷ್ ಮಾಧ್ಯಮದ ಪತಾಕೆ ಹಾರಾಡುತ್ತಿದೆ. ಈ ನಾಡಿನ ನೆಲದಲ್ಲಿ ಆ ಓದಿನ ಗುಡಿಗಳನ್ನು ಕಟ್ಟಿದ್ದರೂ ಅವುಗಳ ಬೇರು ಕೊಂಬೆರೆಂಬೆಗಳು ಬೇರೆಡೆಗೇ ಧಾವಿಸುತ್ತ ಬಂದಿವೆ. ಇದು ತುಂಬ ನೋವಿಗೆ ಕಾರಣವಾಗಿದೆ. ಇಲ್ಲಿ ಶುಲ್ಕ ಕೂಡ ಬೇರೆ ಕಡೆಗಿಂತ ದುಬಾರಿ. ಗಂಟುನಂಟು ಎರಡೂ ಕಳವು !

ಕೇವಲ ಇಂಗ್ಲೀಷನ್ನೇ ಕಲಿಸುತ್ತಿರುವ ಈ ಸಂಸ್ಥೆಗಳಲ್ಲಿ ಎಲ್ಲಿಯೂ ಈ ಮಣ್ಣಿಗೆ ಅನುಗುಣವಾದ ಒಗ್ಗುವ ಪರಿಸರವೇ ಇಲ್ಲ. ಕನ್ನಡನಾಡಿನಲ್ಲಿ ಕನ್ನಡದ ವಾತಾವರಣ ಇನ್ನೂ ಮೂಡಿಬರಬೇಕಾಗಿದೆ. ಮಗುವಾಗಿದ್ದಾಗ ಕಲಿತದ್ದು ಮುದುಕನಾಗುವ ತನಕ ಅಚ್ಚು ಅಳಿಯದಂತೆ ನೆಲೆ ನಿಲ್ಲುತ್ತದೆ. ಆದರೆ ಈಗ ಇರುವ ನಿಜವಾದ ವಸ್ತುಸ್ಥಿತಿಯಾದರೂ ಹೇಗಿದೆ? ಶಿಶುವಿಹಾರ ಮತ್ತು ಪ್ರಾಥಮಿಕ ಶಾಲೆಗಳಲ್ಲಿ, ಕನ್ನಡನಾಡಿನಲ್ಲಿ ವಿಶೇಷವಾಗಿ ಬೆಂಗಳೂರು ಅರ್ಥಾತ್ ರಾಜಧಾನಿಯಲ್ಲಿ ಇರುವ ಸ್ಥಿತಿಯನ್ನು ಅವಲೋಕಿಸಿ, ಅಲ್ಲಿ ಕನ್ನಡಕ್ಕೆ ಕಡೆಯ ಮಣೆ. ಅದು ಎಲ್ಲರ ಅಸಡ್ಡೆಗೆ ಮೀಸಲು.

ಕೆಲವು ಕಡೆ ಇಂಗ್ಲೀಷಿನ ಶಾಲೆಗಳಲ್ಲೂ ಕನ್ನಡ ಕಲಿಸುತ್ತೇವೆಂಬ ಸೋಗು ಹಾಕಿ ಸೊಗಸಾದ ನಾಟಕ ಆಡುತ್ತಾರೆ. ಕೆಲಸಕ್ಕೆ ಬಾರದ ಕಟ್ಟಡಗಳು, ಗುಡಿಸಲುಗಳು ದೊಡ್ಡ ಕಟ್ಟಡದ ಆವರಣದಲ್ಲಿದ್ದರೆ ಆಗ ಅಲ್ಲಿ ಮಾತ್ರ ಕನ್ನಡಕ್ಕೆ ಅವಕಾಶ. ದೊಡ್ಡ ಕಟ್ಟಡ, ಎಲ್ಲ ಅನುಕೂಲಗಳಿರುವ ಆಧುನಿಕ ಶಾಲಾ ಕಾಲೇಜುಗಳು, ಇಲ್ಲೆಲ್ಲ ಕನ್ನಡಕ್ಕೆ ಬಹುವಾಗಿ ಪ್ರವೇಶವೇ ಇಲ್ಲ. ಕನ್ನಡ ಇಲ್ಲಿ ಒಳಕ್ಕೆ ಬರುವಂತಿದ್ದರೂ ಅದು ನಯವಿನಯ ಭಯಭಕ್ತಿಗಳಿಂದ ಅಡಿಯಾಳಿನಂತೆ ಮೂಲೆಯಲ್ಲಿ ಮೈಮುದುರಿ ಇಕ್ಕಟ್ಟಿನ ಇರುಕಿನಲ್ಲಿ ಬಾಳಬೇಕು ಇಲ್ಲವೇ ಬಿದ್ದಿರಬೇಕು. ಇಂಗ್ಲೀಷಿಗೆ ಇಲ್ಲಿ ಅಗ್ರಪೂಜೆ, ಮೊದಲ ವೀಳೆಯ. ತಮಿಳಿಗೆ ಎರಡನೆಯ ಮನ್ನಣೆ. ಹಿಂದಿಗೆ ಮೂರನೆಯ ಜಾಗ. ಸಂಸ್ಕೃತ, ಉರ್ದು ಆದಮೇಲೆ ಮನಸ್ಸು ಬಂದರೆ ಕನ್ನಡಕ್ಕೂ ಬದುಕು.

ಈ ಚೌಕಟ್ಟಿನಲ್ಲಿ ಸುಳಿದಾಡುವ ವಿದ್ಯಾರ್ಥಿಗಳು ಕೂಡ ಮರೆತೂ ಕನ್ನಡ ಮಾತಾಡರು. ವಾಟ್ ಮ್ಯಾನ್, ಕಮ್ ಮ್ಯಾನ್, ಗೋಮ್ಯಾನ್, ಲೆವೆನ್ ಮ್ಯಾನ್, ಬಸ್ ಮ್ಯಾನ್, ಕೇಮ್ ಮ್ಯಾನ್, ವೆಂಟ್ ಮ್ಯಾನ್, ನೋ ಮ್ಯಾನ್ ಇದು ಇಲ್ಲಿಯ ಶಿಷ್ಟಪ್ರಯೋಗ. ಹುಡುಗಿಯರು ಕೂಡ ಹಲೊಮ್ಯಾನ್ ಎಂದೇ ಪ್ರಾರಂಭಿಸುತ್ತಾರೆ. ಅನೇಕ ಮಕ್ಕಳ ಮನೆಯ ಮಾತು, ತಾಯಿನುಡಿ ಕನ್ನಡವೇ. ಆದರೂ ಕನ್ನಡದಲ್ಲಿ ಮಾತನಾಡುವುದು ಅವರಿಗೆ ಅಪಮಾನ. ಅವರ ಘನತೆಗೆ(?) ಕುಂದು. ಇಂಗ್ಲೀಷಿನ, ಇಂಗ್ಲೆಂಡಿನ ದತ್ತು ಮಕ್ಕಳಂತೆ ದೌಲಿನಿಂದ ಮೆರೆಯುವರು. ಅವರ ಸಂಭಾಷಣೆಯೆಲ್ಲ ಇಲ್ಲಿಗೆ ಸಂಬಂಧಪಡದ ವಿಚಾರದಲ್ಲೇ ಸೀಮಿತವಾಗಿರುತ್ತದೆ. ಇಲ್ಲಿನ ಆಗುಹೋಗುಗಗಳ ಬೆಳವಣಿಗೆಯ ಪರಿವೆಯೇ ಅವರಿಗಿರದು. ನಮ್ಮ ನಾಡಿನ ಕವಿಗಳ, ಕಲಿಕೆಯು, ಜನತೆಯ, ಅರಿವು ಇಲ್ಲ. ಇಂಗ್ಲೀಷ್ ಕವಿಗಳ ಸಾಹಿತ್ಯದ, ವಿದೇಶಗಳ ನಾಗರಿಕತೆ ಗಾಳಿಗೋಪುರಗಳಲ್ಲೇ ವಿಹರಿಸುತ್ತಿರುತ್ತಾರೆ. ಅವರಿಗೆ ಕೊಡುವ ಶಿಕ್ಷಣವೂ ಹಾಗೆಯೇ ಅದಕ್ಕೆ ಅನುಗುಣವಾಗಿಯೇ ಇರುತ್ತದೆ.

ಈ ಇಂಗ್ಲೀಷ್ ಕೂಸುಗಳ ನಂಬಿಕೆಗಳೆಲ್ಲ ಪೊಳ್ಳೆಂದೂ ಸುಳ್ಳೆಂದೂ ಜಳ್ಳೆಂದೂ ಅವರಿಗೆ ತಿಳಿಯುವುದು ಅವರು ಬದುಕಿಗೆ ಕಾಲಿಟ್ಟಾಗಲೇ, ಜನರೊಡನೆ ಬೆರೆತಾಗಲೇ. ಆದರೆ ಆ ವೇಳೆಗಾಗಲೆ ಆಗಬಹುದಾದ ಅನ್ಯಾಯಗಳೆಲ್ಲ ಆಗಿ ಹೋಗಿಬಿಟ್ಟಿರುತ್ತವೆ. ಈ ವಾಟ್ ಮ್ಯಾನ್ ಗಳೆಲ್ಲ ಕನ್ನಡದ ಶತ್ರುಗಳಾಗುವರು ಇಲ್ಲವೇ ನಮ್ಮ ನಾಡು ನುಡಿಗಳ ನೆರವಿಗೇ ಬಾರದ ನಿರುಪಯೋಗಿ (ಅ) ನಾಗರಿಕರಾಗಿ ಭೂಮಿಗೂ ಬದುಕಿಗೂ ಪ್ರಗತಿಗೂ ಭಾರವಾಗಿ ಬಾಳುತ್ತಾರೆ.

ಇಂದು ವಿದ್ಯಾರ್ಥಿಗಳಲ್ಲಿ ಸಂಯಮರಹಿತ ವರ್ತನೆಯಿದೆಯೆಂದು ತಿಳಿದು ಬರುತ್ತದೆ, ನಿಜ. ಅವರ ಬಹುಮಟ್ಟಿನ ಅಶಿಸ್ತಿಗೆ ಅಜ್ಞಾನಕ್ಕೆ ಈ ಪರಭಾಷಾ ಮಾಧ್ಯಮವೇ ಕಾರಣವಾಗಿದೆ. ಪರಭಾಷೆಯ ಮಾಧ್ಯಮ ಜ್ಞಾನಾರ್ಜನೆಗೆ ಅಡಚಣೆ. ವಿದ್ಯಾರ್ಥಿಗೆ ಕಷ್ಟವಾಗಿರುವುದು ವಿಷಯವಲ್ಲ, ವಿಷಯ ಪ್ರತಿಪಾದನೆಯ ಭಾಷೆ, ಭಾವನೆಗಿಂತ ಭಾಷೆ ಪೆಡಸಾಗಿದೆ. ಈ ಇಂಗ್ಲೀಷ್ ಭಾಷೆಯ ಪಾಶಕ್ಕೆ ಉಪಾಧ್ಯಾಯರೂ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗಿದ್ದಾರೆ. ‘ಉಪಾಧ್ಯಾಯರೂ ಪಾಠ ಪ್ರವಚನದಲ್ಲಿ ಮತ್ತು ವ್ಯವಹಾರದಲ್ಲಿ ಕನ್ನಡವನ್ನು ಬಳಸದೇ ಹೋಗಿರುವುದು ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷೆಯ ವಿಷಯದಲ್ಲಿ ಅನುಚಿತವಾದ ಅದರ ವಿಶ್ವಾಸಗಳನ್ನು ಮೂಡಿಸಲು ಪ್ರೇರಕವಾಗಿದೆ’ ಎಂದು ಡಾ|| ಎಚ್. ನರಸಿಂಹಯ್ಯ ನವರು ಸಮಂಜಸವಾಗಿ ಸಾರಿದ್ದಾರೆ. ಅವರು ಮುಂದುವರಿದು ಹೇಳುತ್ತಾರೆ : “ಈ ಸಂದರ್ಭದಲ್ಲಿ ನನ್ನ ಅನುಭವವನ್ನು ತಿಳಿಸಿದರೆ ಅಪ್ರಕೃತವಾಗಲಾರದೆಂದು ಭಾವಿಸುತ್ತೇನೆ. ನಾನು ಭೌತಶಾಸ್ತ್ರದ ಉಪಾಧ್ಯಾಯ. ಇಪ್ಪತ್ತುನಾಲ್ಕು ವರ್ಷಗಳಿಂದ ಶಿಕ್ಷಕನಾಗಿದ್ದೇನೆ. ನಮ್ಮ ಕಾಲೇಜಿನಲ್ಲಿ ಶಿಕ್ಷಣ ಇಂಗ್ಲಿಷ್ ಮಾಧ್ಯಮದ ಮೂಲಕ ಉಪಾಧ್ಯಾಯನಾದಾಗಿನಿಂದಲೂ ನಾನು ತರಗತಿಯಲ್ಲಿ ಧಾರಾಳವಾಗಿ ನಿಸ್ಸಂಕೋಚವಾಗಿ ಕನ್ನಡವನ್ನು ಉಪಯೋಗಿಸುತ್ತಿದ್ದೇನೆ. ಕ್ಲಿಷ್ಟವಾದ ವಿಷಯಗಳನ್ನು ಇಂಗ್ಲೀಷ್ ನಲ್ಲಿ ವಿವರಿಸುತ್ತಿದ್ದಾಗ ಬಹುಮಂದಿ ವಿದ್ಯಾರ್ಥಿಗಳು ಮಂಕಾಗಿ ಕುಳಿತಿರುವುದನ್ನು ನೋಡಿದ್ದೇನೆ. ಆಗ ಸಹಜವಾಗಿ ನನ್ನ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಕನ್ನಡ ಮಿಶ್ರಣದ ಭಾಷೆಯಾಗಿರುತ್ತದೆ, ಆಗ ವಿದ್ಯಾರ್ಥಿಗಳ ಮುಖದ ಮೇಲೆ ಹಾದು ಹೋಗುವ ಮಿಂಚು ಕನ್ನಡ ಮಾಧ್ಯಮದ ಅವಶ್ಯಕತೆಗೆ ಸಾಕ್ಷಿ”.

ಮುಖ್ಯವಾಗಿ ನಮ್ಮ ಮನೋಭಾವ ಬದಲಾಗಬೇಕು. ತಂದೆ ತಾಯಿಗಳು ಕೂಡ ಮಕ್ಕಳಲ್ಲಿ ಕನ್ನಡದ ಮೇಲಣ ಮಮತೆ ಮೂಡಿಸಬೇಕು, ಮನೆಯಲ್ಲಿ ಮೊದಲು ಕನ್ನಡದ ವಾತಾವರಣ ಬರಬೇಕು, ಎಷ್ಟೋ ಜನ ವಿದ್ಯಾವಂತರು ಕೂಡ ಕನ್ನಡದತ್ತ ಗಮನವೇ ಹರಿಸಿಲ್ಲ. ಅವರೇ ಅಜ್ಞಾನಿಗಳಾಗಿರುವಾಗ ಅವರ ಮಕ್ಕಳು ಜ್ಞಾನಿಗಳಾಗುವುದಾದರೂ ಹೇಗೆ? ಮಕ್ಕಳಿಗೆ ಕನ್ನಡದಲ್ಲಿ ಅಪಾರವಾದ ಶಿಶುಸಾಹಿತ್ಯ ಬಂದಿದೆ. ಶಿಶುವಿಹಾರಗಳವರೂ ಈ ಕಡೆಗೆ ನಿಗಾ ಕೊಡಬೇಕು. ಇಂಗ್ಲಿಷ್ ಬಾಯಿಪಾಠ ಪುಸ್ತಕಗಳನ್ನು ಕೊಂಡು ಕೊಡುವವರೆಲ್ಲ ಕನ್ನಡದ ಮಕ್ಕಳ ಪುಸ್ತಕಗಳ ಮೇಲೆ ಮಮತೆಯಿಟ್ಟುಕೊಳ್ಳಬೇಕು. ಆಗ ಇನ್ನೂ ಹೆಚ್ಚಾಗಿ ಮಕ್ಕಳ ಸಾಹಿತ್ಯವೂ ಕನ್ನಡದಲ್ಲಿ ಬೆಳೆದೀತು. ಜೊತೆಯಲ್ಲಿ ಕನ್ನಡದ ಪತ್ರಿಕೆಗಳನ್ನೂ ತರಿಸಬೇಕು.

ಹೀಗಾಗಿ ತಂದೆ-ತಾಯಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಎಲ್ಲರೂ ಕನ್ನಡಕ್ಕೆ ವಿಶೇಷ ಗಮನಹರಿಸಬೇಕಾಗಿದೆ. ಜನತೆ ಕನ್ನಡದಲ್ಲಿ ವ್ಯವಹರಿಸುವುದನ್ನು ಹೆಚ್ಚಿಸಬೇಕು. ವಿಶ್ವವಿದ್ಯಾನಿಲಯಗಳು ಕನ್ನಡಕ್ಕೆ ಆದ್ಯತೆ ಕೊಡಬೇಕು. ಕನ್ನಡ ಕಲಿಯುವವರಿಗೆ, ಕಲಿಸುವವರಿಗೆ ಹೆಚ್ಚಿನ ಸವಲತ್ತು ಸೌಲಭ್ಯ ಸದವಕಾಶಗಳನ್ನು ಕಲ್ಪಿಸಬೇಕು, ಸರಕಾರದ ಪಾತ್ರವಂತೂ ಇದರಲ್ಲಿ ಮಹತ್ತಾದುದು. ಅದನ್ನು ಮತ್ತೆ ಮುಂದೆ ಹೇಳುತ್ತೇನೆ. ಹೀಗೆಯೇ ಅಧಿಕಾರಿಗಳು ಕೂಡ ಕನ್ನಡಕ್ಕೆ ಬೆಲೆ ಕೊಡಬೇಕಾಗಿದೆ. ಅವರ ಕಚೇರಿಗಳಲ್ಲಿ ಎಲ್ಲರೊಡನೆ ಕನ್ನಡದಲ್ಲಿ ಮಾತಾಡಬೇಕು. ಅದು ಕೀಳಲ್ಲ ಎಂದು ತಿಳಿಯಬೇಕು, ತಿಳಿಸಬೇಕು. ಪುಸ್ತಕ ಈಗ ವ್ಯಾಪಾರಿಗಳು ಗಿರಾಕಿಗಳಲ್ಲಿ ಕನ್ನಡ ಗ್ರಂಥಗಳನ್ನೂ ಕೊಳ್ಳಲೂ ಗಮನ ಸೆಳೆಯಬೇಕು. ಕೇವಲ ಇಂಗ್ಲಿಷ್ ಪುಸ್ತಕಗಳನ್ನಷ್ಟೇ ಚೆನ್ನಾಗಿ ಷೋ ಮಾಡುವ ಬದಲು ಕನ್ನಡ ಕೃತಿಗಳನ್ನೂ ಪ್ರದರ್ಶಿಸಬೇಕು.

ಇನ್ನು ಕಾರ್ಮಿಕರು, ವಕೀಲರು, ವೈದ್ಯರು ಇದರಲ್ಲಿ ಆಸಕ್ತಿ ವಹಿಸದಿದ್ದರೆ ಆಗದು. ಅವರೆಲ್ಲ ಕನ್ನಡದಲ್ಲೇ ಮಾತುಕತೆ ಮುಂದುವರಿಸಿದರೆ ಎಷ್ಟೋ ಉಪಕಾರವಾದೀತು. ಎಲ್ಲಕ್ಕೂ ಮಿಗಿಲಾಗಿ ಮಹಿಳೆಯರು ಕನ್ನಡ ನಾಡಿನಲ್ಲೂ ಇಂಗ್ಲೀಷಿನ ವಿಷಮೂರ್ಛೆಗೆ ಅನೇಕ ಮಹಿಳೆಯರು ಬಲಿಯಾಗಿದ್ದಾರೆ. ಒಂದು ಭಾಷೆಯ ಅಳಿವು ಉಳಿವು ಬಹುವಾಗಿ ಮಹಿಳೆಯರನ್ನು ಅವಲಂಬಿಸಿದೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಈಗಲೂ ಕನ್ನಡಕ್ಕೆ ಹೊಸ ಹುರುಪು ತರಲು ಸಾಧ್ಯವಿದೆ. ಹಿಂದಿ ಕಲಿಯುವಂತೆ ಕನ್ನಡವನ್ನೂ ಕಲಿಯಬಹುದು. ಕಾವ, ಜಾಣ, ರತ್ನ ಮೊದಲಾದ ಸಾಹಿತ್ಯ ಪರಿಷತ್ತಿನ ಪರೀಕ್ಷೆಗಳೂ ಕುಳಿತುಕೊಳ್ಳುವುದು ಅಗತ್ಯ.

ಯಾರ ಮನೆಯಲ್ಲಿ ತಾಯಂದಿರು ಕಲಿತಿದ್ದಾರೆಯೋ ಆ ಮನೆಯಲ್ಲಿ ಅರಿವಿಗೆ ಮೇಲ್ಮೆಯಿದೆ. ಕಲಿತ ಮಾತೆಯರು ಇರುವ ಮನೆಗಳಲ್ಲ ಸ್ವಲ್ಪಮಟ್ಟಿಗೆ ವಿದ್ಯಾಲಯಗಳೇ ಇದ್ದಂತೆ. ಆದ್ದರಿಂದ ಹೆಣ್ಣುಮಕ್ಕಳು ಹೆಚ್ಚು ಹೆಚ್ಚು ವಿದ್ಯಾವಂತರಾಗಬೇಕು. ವಿದ್ಯಾವಂತರಾದ ಹೆಂಗಸರು ಕನ್ನಡದ ಒಲವು ತೋರಬೇಕು. ಕನ್ನಡದ ಬೇರು ಬಲವಾಗಿ ನೆಲೆಗೊಳ್ಳಲು ಅವರ ಪ್ರಯತ್ನ ಅತ್ಯಗತ್ಯ. ಮಮ್ಮಿ, ಡ್ಯಾಡಿ ಎಂದು ಕರೆಸಿಕೊಂಡು ಆನಂದಪಡುವ ತಂದೆತಾಯಿಗಳು ಕನ್ನಡ ನಾಡಿನಲ್ಲಿ ಹೆಚ್ಚಬಾರದು, ಕಿಚನ್, ಹಾಲ್, ಡೈನಿಂಗ್ ಹಾಲ್, ಬಾತ್ ರೂಮ್, ಲೆಟ್ರಿನ್ ಮುಂತಾದ ಮಾತುಗಳು ಅನಗತ್ಯವಾಗಿ ಬಳಕೆಗೆ ಬರುತ್ತಿವೆ. ಇದು ಅಪಮಾನ, ನಾಚಿಕೆಗೇಡು. ಕನ್ನಡದಲ್ಲಿರುವ ನಡುಮನೆ, ಪಡಸಾಲೆ, ಅಡಿಗೆಮನೆ, ಬಚ್ಚಲುಮನೆ, ಊಟದಮನೆ ಮೊದಲಾದ ಪದಗಳಿಗೆ ಮಂಗಳ ಹಾಡಿ, ಪರಭಾಷೆಯ ಪದಗಳಿಗೆ ಸ್ವಾಗತ ಹಾಡುವುದು ಸರಿಯಲ್ಲ. ತಮ್ಮ ಮಕ್ಕಳನ್ನು ಕೇವಲ ಇಂಗ್ಲಿಷನ್ನೇ ಕಲಿಸದೆ ಜೊತೆಗೆ ಕನ್ನಡವನ್ನೂ ಕಲಿಸುವ ಮನಸ್ಸು ಮಾಡಬೇಕೆಂದು ಕನ್ನಡ ನಾಡಿನ ತಾಯಂದಿರಲ್ಲಿ ಬೇಡುತ್ತೇನೆ.

ಭಾಷಾಭಿಮಾನ ದೇಶಾಭಿಮಾನಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹರಿಯುವ ವಿರೋಧಿ ಶಕ್ತಿಗಳೆಂದು ತಿಳಿಯಬಾರದು. ಇಂದು ಕನ್ನಡ ನಾಡು ನುಡಿಗಳನ್ನು ಉಳಿಸಿ ಬೆಳಸಿಕೊಳ್ಳುವ ವಿಚಾರದಲ್ಲಿ ಕನ್ನಡಿಗರಾದರೂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆಯೆ? ಎಂದು ಪ್ರಶ್ನಿಸಿದರೆ, ಅದಕ್ಕೆ ಉತ್ತರ ಅಷ್ಟೇನೂ ಆಶಾದಾಯಕವಾಗಿಲ್ಲ. ಕನ್ನಡಿಗನ ಲಕ್ಷಣ ಅಪಹಾಸ್ಯ ಅವಹೇಳನ ಮಾಡುವಂತೆ ಶೋಚನೀಯವಾಗಿದೆ. ಯಾರಾದರೂ ಒಬ್ಬನೇ ಸಪ್ಪೆಮುಖ ಹಾಕಿಕೊಂಡು ನಿಸ್ತೇಜನಾಗಿ ಹೋಗುತ್ತಿದ್ದರೆ ಅವನು ಕನ್ನಡಿಗನೆಂದು ಧಾರಾಳವಾಗಿ ಹೇಳಬಹುದು. ಇಬ್ಬರೋ ಮೂವರೋ ಜಗಳವಾಡಿಕೊಳ್ಳುತ್ತಿದ್ದರೆ ಅವರು ಕನ್ನಡಿಗರೆಂಬುದು ನಿಸ್ಸಂದೇಹವಂತೆ. ಕನ್ನಡಿಗ ಧಾರಾಳಿ, ಉದಾರಿ, ಸಭ್ಯ, ಸುಸಂಸ್ಕೃತ ಸಂಪನ್ನ ಎಲ್ಲ ಸರಿ. ಆದರೆ ಹೇಡಿ, ಪುಕ್ಕಲ, ಷಂಡ, ನಿರಭಿಮಾನಿ ಆಗಬಾರದು. ಔದಾರ್ಯಕ್ಕೆ ಎಲ್ಲೆ ಇದೆ. ಧಾರಾಳತನಕ್ಕೆ ಇತಿಯಿದೆ. ಸಭ್ಯತೆಗೆ ಮಿತಿಯಿದೆ.

ಕನ್ನಡ ಓಜಯ್ಯ ಒಬ್ಬರಿಗೆ ಒಂದು ಮಗು ಹುಟ್ಟಿತಂತೆ, ಕರ್ನಾಟಕದಲ್ಲಿ ಇರುವಾಗ, ಆ ಮಗು ಬೆಳೆದಾಗಲೂ ಏನು ಕೊಟ್ಟರೂ ಬೇಡ ಬೇಡ ಎನ್ನುತ್ತಿತ್ತಂತೆ. ಎಷ್ಟು ಕೊಟ್ಟರೆ ಅಷ್ಟೇ ಸಾಕು ಎನ್ನುತ್ತಿತ್ತಂತೆ. ಯಾರಾದರೂ ತಳ್ಳಿದರೂ ನೂಕಿದರೂ ಒತ್ತರಿಸಿದರೂ ಸುಮ್ಮನಿರುತ್ತಿತ್ತಂತೆ. ಅಳುವುದೇ ತಿಳಿಯುತ್ತಿರಲಿಲ್ಲವಂತೆ. ಆದರೆ ಆ ಅಧ್ಯಾಪಕರಿಗೆ ಮಹಾರಾಷ್ಟ್ರಕ್ಕೆ ವರ್ಗವಾಯಿತು. ಜೋರಾಗಿ ಅಳುತ್ತಿತ್ತು. ಎಷ್ಟು ಕೊಟ್ಟರೂ ಇನ್ನೂ ಬೇಕು ಎನ್ನುತ್ತಿತ್ತು. ಏನು ಕೊಟ್ಟರೂ ಸಾಲದಾಯಿತು. ಬೆಳಗಾಂ ಕಾರವಾರವೂ ಬೇಕಾಯಿತು. ಸೋಲಾಪುರ ಸಾಲದಾಯಿತು. ಹೀಗಿದೆ ನಮ್ಮ ಸ್ಥಿತಿಗತಿ.

ಕೇಂದ್ರದಲ್ಲಿ ಕೂಡ ಕನ್ನಡದ ಕೂಗು ಕೇಳುವವರಿಲ್ಲ. ಮೊದಲನೆಯದಾಗಿ ಅಲ್ಲಿ ಕನ್ನಡದ ಮಂತ್ರಿಗಳೇ ಇಲ್ಲ. ಹಿಂದೆ ಶಾಸ್ತ್ರಕ್ಕಾದರೂ ಎಚ್.ಸಿ. ದಾಸಪ್ಪ, ಪೂಣಚ್ಚ ಎಂದು ಒಬ್ಬಿಬ್ಬರು ಇದ್ದರು. ಆದರೆ ಇಂದು ಅದೂ ಇಲ್ಲ ಏಕೆ ಇಲ್ಲ? ಅಲ್ಲಿರುವ ನಮ್ಮ ಲೋಕಸಭಾ ಸದಸ್ಯರಾದರೂ ಗಲಾಟೆ ಮಾಡಿ ಗಟ್ಟಿಯಾಗಿ ಕೇಳಿದ್ದಾರೆಯೇ? ಇಲ್ಲ. ಅದೇಕೆ ? ಉತ್ತರ ಸ್ವಾರಸ್ಯವಾಗಿದೆ. ಎಲ್ಲಿ ತಮ್ಮನ್ನು ಬಿಟ್ಟು ಬೇರೆಯವರನ್ನು ಮಂತ್ರಿ ಮಾಡಿಬಿಟ್ಟಾರೋ ಎಂಬ ಸ್ವಾರ್ಥ ದೃಷ್ಟಿಯಿಂದ ಯಾರೂ ಒತ್ತಾಯಪಡಿಸಿಲ್ಲ. ‘ಆದರೆ ನಾನು ಸಚಿವನಾಗಬೆಕು ; ಇಲ್ಲವಾದರೆ ಬೇರೆಯವರು ಆಗುವುದು ಬೇಡ !’ ಹೇಗಿದೆ ಈ (ಅ)ನ್ಯಾಯ? ಹೀಗಿದೆ ಕನ್ನಡ ಜನರ ವಿವೇಕ.

ಸ್ವಾರ್ಥಲಾಲಸೆ ಬಿಟ್ಟು ಪ್ರಧಾನಿಯನ್ನು ಕೇಳುವ ಕನ್ನಡಿಗರು ಮುಂದೆ ಬರಲಿ. ಬ್ರಿಟಿಷರಿಗೆ ಗಾಂಧೀಜಿ ಕೊಟ್ಟ ಉತ್ತರ ನೆನಪಾಗಲಿ. ಆಂಗ್ಲರು ಈ ನಾಡು ಬಿಟ್ಟು ತೊಲಗಲಿ ಎಂದಾಗ, ಅವರು ಗಾಂಧೀಜಿಯವರನ್ನೂ ಕೇಳೀದರಂತೆ ‘ಸರಿ ಹೋಗುತ್ತೇವೆ, ಆದರೆ ಈಗ ಯಾರ ಕೈಗೆ ಆಡಳಿತ ಕೊಟ್ಟು ಹೋಗೋಣ?’ ಎಂದು. ಹಾಗೆಂಧರೆ ನನಗೆ ತನಗೆಂದು ಭಾರತೀಯರು ಮತ್ತೆ ಕಿತ್ತಾಡಲೆಂಬುದು ಉದ್ದೇಶ. ಆದರೆ ಬಾಪೂಜಿ ಅಂದರು ‘ನಮ್ಮಲ್ಲಿ ಯಾವ ಭಾರತೀಯನಿಗಾದರೂ ಆಡಳಿತ ವಹಿಸಿ, ಕಡೆಗೆ ಒಬ್ಬ ಭಾರತೀಯ ಚಪರಾಸಿಗೆ ಕೊಡಿ. ನೀವು ಮೊದಲು ಇಲ್ಲಿಂದ ಕಾಲ್ತೆಗೆಯಿರಿ’ ಎಂಬುದಾಗಿ, ಈ ಆಂತರ್ಯ ಔದಾರ್ಯ ನಮ್ಮದಾಗಬೇಕು.

ನಮ್ಮೆಲ್ಲರ ದೌರ್ಭಾಗ್ಯ ಕಾಂಗ್ರೆಸ್ಸಿನಲ್ಲಿ ಬಿರುಕು ಮೂಡಿದ್ದು, ನಾಡಿನ ಗೋಡೆಗೆ, ಒಗ್ಗಟ್ಟಿಗೆ ಮೂಡಿದ ಬಿರುಕು ಇದು. ಇದರಿಂದ ಕೇಂದ್ರದವರಿಗೆ ಕನ್ನಡ ನಾಡನ್ನು ಕಂಡರೆ ಅಲರ್ಜಿಯಾಯಿತು. ಕರ್ನಾಟಕಕ್ಕೆ ಕೇಂದ್ರದಿಂದ ಬರುವ ನೆರವು ಕಡಿಮೆಯಾಯಿತು. ನೀರಿನ ಸಮಸ್ಯೆ ಉಲ್ಬಣವಾಯಿತು. ಗಡಿ ಸಮಸ್ಯೆ ತೀವ್ರತರವಾಯಿತು. ವೈಯಕ್ತಿಕ ರಾಗದ್ವೇಷ ಕರೆಕೊರೆಗಳಲ್ಲಿ ನಾಡು ಯಾರಿಗೂ ಬೇಡವಾಯಿತು. ಸ್ವಪ್ರತಿಷ್ಠೆ ಬೆಳೆದರೆ ಬೆಳಗಿದರೆ ಸಾಕಾಯಿತು.

ಕನ್ನಡ ನಾಡಿನಲ್ಲಾದರೂ ನಾಡು ನುಡಿಯ ಅಭಿಮಾನವುಳ್ಳ ನಾಯಕರು ಇದ್ದಾರೆಯೇ? ಎರಡು ಕರ್ನಾಟಕದ ಒಡಕು ತಲೆದೋರಿದೆ. ಇದಕ್ಕೆ ರಾಜಕಾರಣಿಗಳೊಬ್ಬರೇ ಕಾರಣರಲ್ಲ. ಕೆಲವು ಮೀರ್ ಸಾದಕ ಜಾತಿಗೆ ಸೇರಿದ ಸಮಯದ ಸಾಧಕ ಸಾಹಿತಿಗಳೂ ಕುಮ್ಮಕ್ಕಾಗಿದ್ದಾರೆ. ಮೊಳಕೆಯಲ್ಲೇ ಈ ವಿಷವೃಕ್ಷ ಸದೃಶ ಅವಿಚಾರ ಧರೆಯನ್ನು ಚಿವುಟಿಹಾಕಬೇಕು. ಇದೂ ಕೂಡ ಮಂತ್ರಿ ಪದವಿಗಾಗಿ ಹೂಡಿದ ನಾಟಕ. ಇಂಥ ಕುತಂತ್ರ ಕುಯುಕ್ತಿಗಳಿಗೆ ಬಲಿಯಾಗಬಾರದು, ನಾಯಕರು ಎನ್ನಿಸಿಕೊಂಡವರು ನಾಯಿಕರು ಆಗಬಾರದು. ಅನುಯಾಯಿಗಳು ಅನುನಾಯಿಗಳಾಗಬಾರದು. ಮುಂದಾಳುಗಳೆನ್ನಿಸಿಕೊಂಡವರು ತಮ್ಮ ಸ್ವಾರ್ಥಕ್ಕಾಗಿ ಸ್ವಚ್ಛಂದಕ್ಕಾಗಿ ಭಾಷೆಯ ಮುಖವಾಡ ಧರಿಸಿ ಬೇಳೆ ಬೇಯಿಸಿಕೊಳ್ಳಬಾರದು, ಆಂಧ್ರದಲ್ಲಿ ಕೂಗು ಧೂಳೂ ಎದ್ದಿದೆ. ರಾಜ್ಯ ತುಂಡು ಮಾಡುವ ಹಠಬೇಡ. ಭಾಷೆ ನೆಪಮಾಡಿ ರಾಜ್ಯಗಳಲ್ಲಿ ರಾಜ್ಯ, ವ್ಯಾಜ್ಯ ಹುಟ್ಟಿಸಬಾರದು. ಪಂಜಾಬ್ ಹರಿದು ಹರಿಯಾಣ ಹುಟ್ಟಿದ್ದು ಸಾಲದೆ? ಅಲ್ಲದೆ ನಾಡು ಒಡೆಯುವ ಮಾತು ಆಡಲು ಯಾರಿಗೆ ಅಧಿಕಾರವಿದೆ? ಏರುಪೇರುಗಳಾಗಿದ್ದರೆ ಕೇಳಿ ಹೇಳಿ ಸರಿಪಡಿಸಬೇಕು. ಮೂಗಿಗೆ ನೆಗಡಿಯಾದರೆಮೂಗನ್ನೇ ಕೊಯ್ಯುವುದುಂಟೆ ? ಅನೇಕ ಜನ ಹಿರಿಯರ ಅಭಿಮಾನಿಗಳ ತ್ಯಾಗ ಬಲಿದಾನಗಳಿಂದ ಕಟ್ಟಿದ ನಾಡನ್ನು ತೃಣಕ್ಕಾಗಿ ಚೂರು ಮಾಡುವುದು ಅಸಾಧು, ಅನ್ಯಾಯ, ಕನ್ನಡಿಯಲ್ಲಿ ಕೊಳೆ ಕಂಡರೆ ಅದನ್ನು ಶುದ್ಧಗೊಳಿಸಬೇಕೇ ಹೊರತು ಒಡೆಯಬಾರದು. ಒಡೆದ ಕನ್ನಡಿ ಕೂಡದು.

ಬೆಂಗಳೂರು ಕನ್ನಡ ನಾಡಿನ ರಾಜಧಾನಿಯಂತೆ ! ಯಾವ ಬಾಯಿಂದ ಇದನ್ನು ಹೇಳುವುದು? ಇನ್ನು ಐವ್ವತ್ತು ವರ್ಷಗಳಲ್ಲಿ ಇಲ್ಲಿ ಕನ್ನಡದ ಬಾಳು ಹೇಗೆ? ಕನ್ನಡದ ಕಲೇಬರವನ್ನು ಕಾಣುವ ಕರಾಳ ದಿನ ಬರದಿರಲಿ ಎಂದು ಬೇಡಿಕೊಳ್ಳುವಂತಾಗಿದೆ. ಇಲ್ಲಿ ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳದೇ ಬೆಂಬಲವಿಲ್ಲವೆಂಬ ಮಾಯಬಜಾರ್ ಬೇರೆ ! ಇದೆಲ್ಲಾ ಕಪಟನಾಟಕದ ಮಾತುಗಳು. ಇಲ್ಲಿ ಸಚಿವರ ಮಾತುಕತೆ ವ್ಯವಹಾರ, ಪತ್ರ, ಎಲ್ಲ ಇಂಗ್ಲಿಷಿನಲ್ಲೇ ಕೆಲಸಕ್ಕೆ ಅಭ್ಯರ್ಥಿಗಳನ್ನು ತೆಗೆದುಕೊಳ್ಳಲು ನಡೆಸುವ ಸಂದರ್ಶನ ಕಾಲದಲ್ಲಿ ಇಂಗ್ಲಿಷಿನಲ್ಲೇ ಪ್ರಶ್ನೆ ಕೇಳುವರು. ಈ ಎಲ್ಲ ಪರಿಸರ ಕನ್ನಡಕ್ಕೆ ಮುಳುವಾಗಿದೆ. ಇದು ನೆರ್ಪುಗೊಳ್ಳಬೇಕು.

ಭಾರತದಲ್ಲಿ ಸುಮಾರು ೭೨ ವಿಶ್ವವಿದ್ಯಾಲಯಗಳು ಇವೆ. ಅವುಗಳಲ್ಲಿ ೫೦ ವಿಶ್ವವಿದ್ಯಾನಿಲಯಗಳಲ್ಲಿ ಆಯಾ ಪ್ರಾಂತ್ಯದ ಭಾಷೆಯನ್ನೇ ಬೋಧನ ಭಾಷೆಯನ್ನಾಗಿ ಮಾಡಿದ್ದಾರೆ. ಆದರೆ ಕನ್ನಡ ನಾಡಿನಲ್ಲಿ ಏನು ವಿಪರ್ಯಾಸ! ಕನ್ನಡ ಮಾಧ್ಯಮ ಕುಂಟುತ್ತಾ ತೆವಳುತ್ತಾ ಸಾಯದೆ ಬದುಕದೆ ಹೇಗೋ ನಡೆದಿದೆ. ಕನ್ನಡದ ಬಗ್ಗೆ ಕೇವಲ ಅಭಿಮಾನವಿದ್ದರೆ ಸಾಲದು. ಅದರ ಜೊತೆಗೆ ಉತ್ಸಾಹವೂ ಬೇಕು. ಮೊದಲು ಕಾರ್ಯೋನ್ಮುಖರಾಗಬೇಕು. ಕನ್ನಡಿಗರ ಮನೆ ಮನೆಗಳಲ್ಲೂ ಕನ್ನಡತನದ ವಾತಾವರನ ಬೆಳೆಯಬೇಕು. ವಾಚನಾಭಿರುವಿ ಸಹಜಸಿದ್ಧವೆಂಬಂತೆ ರೂಢವಾಗಬೇಕು. ಕನ್ನಡದಲ್ಲಿ ಮಾತನಾಡುವುದು ಅಗೌರವವೆಂದೂ Dignityಗೆ ಕಡಿಮೆ ಎಂದೂ ತಪ್ಪಾಗಿ ತಿಳಿಯುವ ಮೌಢ್ಯ ಮಾಯವಾಗಿ ಕನ್ನಡದಲ್ಲಿ ಮಾತನಾಡುವುದು ಗೌರ ಮತ್ತು ಕರ್ತವ್ಯವೆಂದು ತಿಳಿಯಬೇಕು. ಈ ಪ್ರಜ್ಞೆಯ ಬುನಾದಿ ಭದ್ರವಾಗಬೇಕು. ಇದರಂತೆ ಇಂಗ್ಲಿಷ್ ಮಾತನಾಡಿದರೆ ಘನತೆ ಹೆಚ್ಚುತ್ತದೆ, ಇಂಗ್ಲಿಷ್ ಮಾತನಾಡುವವ ಬುದ್ಧಿವಂತ ಎಂಬ ಭ್ರಾಂತಿಯೂ ತೊಲಗಬೇಕು. ಇಂಗ್ಲಿಷ್ ಕಲಿಕೆಯನ್ನು ವಿರೋಧಿಸುತ್ತಿಲ್ಲ, ತೆಗಳುತ್ತಿಲ್ಲ. ವಿನಾಕಾರಣ ಇಂಗ್ಲಿಷನ್ನು ಹೊಗಳುವುದು ಇಲ್ಲವೆ ಕನ್ನಡದತ್ತ ತಿರಸ್ಕಾರದಿಂದ ಕಾಣುವುದು ಸರಿಯೆ? ಒಣ ಅಭಿಮಾನ ಬೇಡ. ಅಂಧಾನುಕರಣೆ ಬೇಕಿಲ್ಲ, ಗಂಟಲು ಬಿರಿಯುವ ಆರ್ಭಟವೂ ಸರಿಯಲ್ಲ, ನಿರ್ಮಲ ಮಮತೆ ಅಭಿಮಾನ ಸಾಕು. ಕನ್ನಡಾಭಿಮಾನ ಕೇವಲ ಚಲನಚಿತ್ರಗಳನ್ನೂ ನೋಡುವಷ್ಟಕ್ಕೆ ಸೀಮಿತಗೊಳ್ಳದಿರಲಿ. ಸಾಹಿತ್ಯ ಪರಂಪರೆಯ ಪ್ರಜ್ಞೆ ಹುಟ್ಟಲಿ, ಹೆಚ್ಚಲಿ.

ರೈತರಿಗೆ ಕನ್ನಡ ಬೇಕು. ವರ್ತಕರಿಗೂ ಅಷ್ಟೆ. ಜನಸಾಮಾನ್ಯರೆಲ್ಲ ಕನ್ನಡದಲ್ಲೇ ವ್ಯವಹಾರ ನಡೆಸುತ್ತಿದ್ದಾರೆ. ಆಳುಕಾಳುಗಳ ಭಾಷೆ ಕನ್ನಡ. ಗುಮಾಸ್ತರು ಆಡುವುದು ಕನ್ನಡ. ವಿಧಾನಸಭಾ ಸದಸ್ಯರೂ ಮಂತ್ರಿಗಳೂ ಉಪಮಂತ್ರಿಗಳೂ ಚೆನ್ನಾಗಿ ತಿಳಿದಿರುವುದು ಕನ್ನಡವನ್ನೇ. ಇನ್ನೂ ಯಾರಿಗಾಗಿ ಇಂಗ್ಲಿಷ್ ಆಡಳಿತ ಭಾಷೆಯಾಗಬೇಕಾಗಿದೆ ? ಕೇವಲ ನೂರಕ್ಕೆ ಸಾವಿರಕ್ಕೆ ಒಬ್ಬರಂತೆ ಇರುವ ಮೇಲಧಿಕಾರಿಗಳ ಸ್ವಾರ್ಥಕ್ಕೆ ಇಂಗ್ಲಿಷ್ ಬೇಕಾಗಿದೆ ! ಜನತೆ ಇದನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಯಾರಿಗಾಗಿ ಇಂಗ್ಲಿಷ್ ಆಡಳಿತ ಭಾಷೆಯಾಗಿ ಇಟ್ಟುಕೊಂಡಿದ್ದೀರಾ ? ಎಂದು ಕೇಳಬೇಕು.

ಹೊರನಾಡ ಕನ್ನಡಿಗರ ಸ್ಥಿತಿಗತಿಗಳು ಮಾತ್ರ ತೀರಾ ಶೋಚನೀಯ. ಕನ್ನಡ ನಾಡಿಗೆ ಬಂದ ಹೊರ, ಪರ ನಾಡಿಗರೆಲ್ಲ ತಮ್ಮ ತಾಯಿನಾಡಿನಲ್ಲಿದ್ದುದಕ್ಕಿಂತ ಹೆಚ್ಚು ಕ್ಷೇಮವಾಗಿದ್ದಾರೆ. ಆದರೆ ಹೊರನಾಡಿನಲ್ಲಿರುವ ಕನ್ನಡಿಗರಿಗೆ ಅನೇಕ ಕಷ್ಟಗಳಿವೆ. ವಿದ್ಯಾರ್ಥಿವೇತನ, ಶುಲ್ಕ ರಿಯಾಯಿತಿಗಳಿಲ್ಲ, ಕೆಲಸಗಳಿಲ್ಲ. ಸಿದ್ಧರಾಮನ ಸಾಧನೆಯ ನೆಲ ತಪ್ಪಿ ಹೋಯಿತು. ಅಕ್ಕಲಕೋಟೆ ನಮಗೆ ಬರಬಹುದೆಂದು ಊಹಿಸಿ ಅಲ್ಲಿ ಆಗಬೇಕಾಗಿದ್ದ ೩೦ ಲಕ್ಷ ಯೋಜನೆ ಅಣೆಕಟ್ಟೊಂದನ್ನು ಬೇರೆಡೆಗೆ ಆಗುಮಾಡಿಸಿಕೊಂಡರು.

ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇಕ್ಕೆಲಗಳಲ್ಲೂ ಕನ್ನಡಿಗರ ಕೈಬಿಟ್ಟು ಪರದೇಶಿಗಳ ಪರಿಭಾಷಿಗಳ ಪಾಲಾಗುತ್ತಿವೆ. ಬೆಂಗಳೂರಿನಿಂದ ಮಂಗಳೂರಿಗೆ ಧಾರವಾಡಕ್ಕೆ ತೆರಳಿದರೆ ಉದ್ದಕ್ಕೂ ಏನೇನೂ ಆಗುತ್ತಿದೆಯೆಂಬುದನ್ನು ಕಣ್ಣಿಟ್ಟು ಕಂಡರೆ ಇದು ಮನದಟ್ಟಾಗುತ್ತದೆ. ಬೆಂಗಳೂರಿನಲ್ಲಿ ಇನ್ನೂ ನೂರಾರು ಎಕರೆಗಳಲ್ಲಿ ಹತ್ತಾರು ದೊಡ್ಡ ಕಾರ್ಖಾನೆಗಳು ಇಷ್ಟರಲ್ಲೇ ಆಗಲಿವೆಯಂತೆ. ಅವು ಬಂದರಂತೂ ಕನ್ನಡಿಗರ ಕತೆ ಮುಗಿದಂತೆ. ಇದಕ್ಕೆಲ್ಲಾ ಏಕೈಕ ದವ್ಯೌಷಧಿ ಆಡಳಿತ ಭಾಷೆ, ಅಧಿಕಾರ ಭಾಷೆ, ಅಧ್ಯಯನ ಭಾಷೆ ಕನ್ನಡ ಆಗುವುದು. ಕನ್ನಡ ಬಾವುಟವನ್ನು ಎತ್ತಿ ಹಾರಿಸಬೇಕು. ನಮ್ಮಲ್ಲೇ ಒಗ್ಗಟ್ಟು ಇಲ್ಲವಾಗಿದೆ. ಬೆಂಗಳೂರಿಗೆ ಬನ್ನಿ, ಒಮ್ಮೆ ಊರೆಲ್ಲ ಸುತ್ತಿ ನೋಡಿ. ಕಣ್ಣು ಬಿಟ್ಟು ನೋಡಿ. ಕಿವಿ ತೆರೆದು ಕೇಳಿ, ಭಾಷೆ ಬೇರೆ, ವೇಷ ಬೇರೆ, ಭೂಮಿ ಬೇರೆ, ಬೆಳೆ ಬೇರೆ, ಜನ ಬೇರೆ, ಉಡುಗೆ ಬೇರೆ. ವೈಚಿತ್ರ್ಯ ಗೊತ್ತಾಯಿತಲ್ಲವೆ? ಮಂಗಳೂರು ಕಡೆಯಿಂದ ಬಂದವರು ಒಂದು ಕಡೆ ಜಮಾಯಿಸಿದ್ದಾರೆ. ಧಾರವಾಡದ ಮಂದಿಯೆಲ್ಲ ಇನ್ನೊಂದು ಕಡೆ ಸೇರಿದ್ದಾರೆ. ತಮಿಳರೇ, ಅವರೇ ಒಂದು ಪ್ರದೇಶ. ಮುಸಲ್ಮಾನರೇ ಒಂದು ಕೇರಿ. ಹೀಗಾದರೆ ಹ್ಯಾಗೇರಿ ? ಇಡೀ ಜಗತ್ತೇ ಒಂದು ಎಂದು ತಿಳಿದು ಜೈ ಜಗತ್ ಎಂಬ ಕೂಗೂ ಮೊಳಗುತ್ತಿದೆ. ಇಲ್ಲಿ ಬದುಕು ಮಾತ್ರ ವಿಪರೀತ. ತಾಳವಿಲ್ಲ ತಕ್ಕ ಮೇಳವಿಲ್ಲ.

ಆದುದರಿಂದ ಕನ್ನಡ ಬಾಳಿ ಬೆಳಗಬೇಕಾದರೆ ಮಾಡಬೇಕಾದ ಕೆಲಸಗಳು ಅಪಾರ. ಕೆಲವನ್ನು ಮಾತ್ರ ನಾನು ಸೂಚಿಸಿದ್ದೇನೆ.

೧. ಆಡಳಿತ ಭಾಷೆ ಸಂಪೂರ್ಣವಾಗಿ ಎಲ್ಲ ಮಟ್ಟಗಳಲ್ಲೂ ಈ ರಾಜ್ಯೋತ್ಸವದಂದು ಕನ್ನಡ ಆಗಬೇಕು.

೨. ಬೋಧನ ಮಾಧ್ಯಮ ಕನ್ನಡ ಆಗಬೇಕು. ಇದು ಹಲವಾರು ವರ್ಷಗಳಿಂದ ಹೇಳಿ ಹೇಳಿ ಹಳಸಿದ ಮಾತಾಗಿದೆ. ಮಾತು ಹಳೆಯದಾದರೂ ಕೃತಿ ಆಗಿಲ್ಲ.

೩. ನ್ಯಾಯಾಲಯದಲ್ಲಿ ಕೂಡ ಆಪಾದನೆ ವಿಚಾರಣೆ ತೀರ್ಪು ಕನ್ನಡದಲ್ಲಿ ನಡೆಯಬೇಕು.

೪. ಬ್ಯಾಂಕು ವ್ಯವಹಾರ ಕನ್ನಡದಲ್ಲಿ ನಡೆಸಲು ಕನ್ನಡಿಗರು ಮನಸು ಮಾಡಬೇಕು.

೫. ಕರ್ನಾಟಕದಲ್ಲಿ ನಾವು ನೀವು ಎಲ್ಲ ಕನ್ನಡಿಗರೂ ನಡೆಸುವ ಪತ್ರ ವ್ಯವಹಾರ ಕಾರ್ಯಕಲಾಪಗಳೆಲ್ಲ

ಕನ್ನಡದಲ್ಲಿರಬೇಕು.

೬. ಪುಸ್ತಕಗಳ ಮೇಲೆ ಮತ್ತು ಅಂಚೆಯಲ್ಲಿ ಹಾಕುವ ಕಾಗದ ಪತ್ರಗಳ ಮೇಲೆ ವಿಳಾಸ ಒಕ್ಕಣೆ ಕನ್ನಡದಲ್ಲೇ  ಬರೆದಿರಬೇಕು.

೭. ಕೇವಲ ಇಂಗ್ಲೀಷನ್ನೇ ಕಲಿಸುವ ಶಾಲೆಗಳಿಗೆ ಮಾನ್ಯತೆ ಕೊಡಬಾರದು. ಕೊಟ್ಟಿರುವ ಮನ್ನಣೆ ರದ್ದಾಗಬೇಕು.

೮. ಸಾಧ್ಯವಾದರೆ ಕಾನ್ವೆಂಟು ಮೊದಲಾದ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡುವುದು ಒಳಿತು. ಇಲ್ಲವೇ ಅಲ್ಲೆಲ್ಲ ಕನ್ನಡ ತರಗತಿಗಳನ್ನು ಕಡ್ಡಾಯವಾಗಿ ನಡೆಸು ವ್ಯವಸ್ಥೆಯಾಗಬೇಕು.

೯. ಕನ್ನಡದ ಪತ್ರಿಕೆ ಪುಸ್ತಕಗಳನ್ನೇ ಕೊಂಡು ಓದಬೇಕು.

೧೦. ಕನ್ನಡದ ಚಲನಚಿತ್ರಗಳನ್ನೇ ಪ್ರೋತ್ಸಾಹಿಸಬೇಕು.

೧೧. ಫಲಹಾರ ಮಂದಿರಗಳಲ್ಲಿ ಕನ್ನಡದಲ್ಲೇ ಬಿಲ್ಲು ಮಾಡಿಸಲು, ಪ್ರಕಟಣೆಗಳನ್ನು ಪ್ರದರ್ಶಿಸಲು ಒತ್ತಾಯಮಾಡುವುದು ಲೇಸು.

೧೨. ಅಗಸರ ಅಂಗಡಿ, ಕ್ಷೌರಿಕರ ಅಂಗಡಿ ಇಲ್ಲೆಲ್ಲ ಕನ್ನಡದಲ್ಲೇ ರಶೀತಿ ಕೊಡುವಂತೆ ಕೇಳಬೇಕು.

೧೩. ಮಂತ್ರಿಗಳು ಮೊದಲು ಕನ್ನಡ ಕಲಿಯಬೇಕು. ಸಭೆ ಸಮಾರಂಭಗಳಲ್ಲಿ ಅವರು ಕನ್ನಡದಲ್ಲೇ ಮಾತನಾಡಬೇಕು.

೧೪. ಜನತೆ ಕೂಡ ಕನ್ನಡದ ದೀಕ್ಷೆ, ಕಂಕಣ ತೊಟ್ಟವರಿಗೆ ಮಾತ್ರ ಚುನಾವಣೆಗಳಲ್ಲಿ ಮತದಾನ ನೀಡಬೇಕು.

೧೫. ಕೆಲವು ಕಾಲ ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಕನ್ನಡ ಕಲಿಸುವ-ಕಲಿಯುವ ಅಭ್ಯರ್ಥಿಗಳಿಗೆ ವಿಶೇಷ ಸೌಲಭ್ಯ ಸವಲತ್ತುಗಳನ್ನು ವಿಶ್ವವಿದ್ಯಾನಿಲಯ ಸರಕಾರ ನೀಡಬೇಕು.

೧೬. ಕನ್ನಡ ಕೃತಿಗಳ ಮಾರಾಟ ಏರ್ಪಾಡು ಸಾಲದು. ಮಲೆಯಾಳದವರಿಂದ ಪಾಠ ಕಲಿತು ಅವರ ಮಾದರಿ ಅನುಸರಿಸಬೇಕು.

೧೭. ಆಡಳಿತ ಭಾಷೆ ಕನ್ನಡ ಆಗಬೇಕೆಂದು ವಿದ್ಯಾರ್ಥಿಗಳು, ಯುವಜನಾಂಗ ಶಾಂತಿಯುತ ಚಳವಳಿ ನಡೆಸಿದರೂ ತಪ್ಪಲ್ಲ.