ಇಂದು ನಮ್ಮ ದೇಶ ಅನೇಕ ಸಮಸ್ಯೆಗಳ ಗೊಂದಲದಲ್ಲಿ ಸಿಲುಕಿದ್ದು ಅದರಲ್ಲಿ ಭಾಷಾ ಸಮಸ್ಯೆಯೂ ಒಂದಾಗಿದೆ. ಭಾಷಾ ಸಮಸ್ಯೆಯಲ್ಲಿ ಗಡಿ ಸಮಸ್ಯೆಯಷ್ಟೇ ಜಟಿಲವಾದ ಸಮಸ್ಯೆ ಎಂದರೆ ‘ಶಿಕ್ಷಣದಲ್ಲಿ ರಾಜ್ಯಭಾಷೆಗಳ ಸ್ಥಾನ’.

ನನ್ನ ಪ್ರಬಂಧದ ಮೊದಲಲ್ಲೆ ನಾನು ಸ್ಪಷ್ಟವಾಗಿ ತಿಳಿಸಬೇಕೆಂದಿರುವ ಅಭಿಪ್ರಾಯವೆಂದರೆ ಮಾನವಿಕ ವಿಭಾಗದಲ್ಲಿ ಅಂದರೆ ಚರಿತ್ರೆ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ದರ್ಶನಶಾಸ್ತ್ರ, ತತ್ವಶಾಸ್ತ್ರ ಹಾಗೂ ಮನಶಾಸ್ತ್ರ ಮೊದಲಾದ ವಿಷಯಗಳಲ್ಲಿ ಪದವಿ ಹಂತದಲ್ಲಿ ಕನ್ನಡ ಬಳಕೆ ಅಗತ್ಯವಾಗಿ ಸಂಪೂರ್ಣವಾಗಿ ಆಗಬೇಕು ಎನ್ನುವುದು. ನನ್ನ ಅಭಿಪ್ರಾಯವನ್ನು ಇಷ್ಟು ಖಚಿತವಾಗಿ ದಾಖಲಿಸುವ ಉದ್ದೇಶದಿಂದ ಕನ್ನಡ ಬಳಕೆಯನ್ನು ತರುವ ವಿಷಯದಲ್ಲಿ ಅದಕ್ಕೆ ಇರುವ ಬಾಧಕಗಳಿಗಿಂತ ಸಾಧಕಗಳೇ ಅನುಕೂಲಕರವಾಗಿರುವುದು.

ರಾಷ್ಟ್ರದ ಶಿಕ್ಷಣ ತಜ್ಞರೆಲ್ಲ ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯ ಶಿಕ್ಷಣ ಪೂರ್ತಿ ದೇಶಭಾಷೆಯಲ್ಲಿಯೇ ನಡೆಯಬೇಕೆಂದು ಸ್ಪಷ್ಟಪಡಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಯಾವುದೇ ಭಾಷೆಯ ಬಳಕೆಯಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಾವು ಆಲೋಚಿಸುವಾಗ ಮುಖ್ಯವಾಗಿ ಮೂರು ಸಂಗತಿಗಳನ್ನು ಗಮನಿಸಬೇಕಾದುದು ಅತ್ಯಗತ್ಯ. ಒಂದು ಬೋಧನ ಮಾಧ್ಯಮ, ಮತ್ತೊಂದು ಜ್ಞಾನದ ಮಾಧ್ಯಮ, ಇನ್ನೊಂದು ಅಭಿವ್ಯಕ್ತಿ ಮಾಧ್ಯಮ.

ಭಾರತದಲ್ಲಿ ಭಾಷಾವಾರು ಪ್ರಾಂತರಚನೆ ಆದದ್ದೇ ಆಯಾ ಪ್ರಾಂತದ ಭಾಷೆಗೆ ಸಾರ್ವಭೌಮತ್ವ ಕೊಡಲು. ಕನ್ನಡನಾಡಿನಲ್ಲಿ ಕನ್ನಡಕ್ಕೆ ಪಟ್ಟಕಟ್ಟಬೇಕಾದ್ದು ನ್ಯಾಯ. ಇಲ್ಲವಾದರೆ ಕನ್ನಡ ಜನತೆಯ ಆಶೋತ್ತರಗಳಿಗೆ ಅನ್ಯಾಯವಾಗುತ್ತದೆ. ಕುಂಟುನೆಪಗಳನ್ನು ಹೇಳಿ ಸುಧಾರಣೆಯನ್ನು ಮುಂದೆ ಹಾಕುವುದು ಸಮರ್ಪಕವಾದುದಲ್ಲ. ಖಚಿತವಾದ ಭಾಷಾ ಧೋರಣೆಯನ್ನು ಅನುಸರಿಸಬೇಕು. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು. ಈ ಧೋರಣೆ ಶಿಕ್ಷಣ ವ್ಯವಸ್ಥೆಗೂ ಅವಶ್ಯಕ.

ಪದವಿ ಪೂರ್ವ ತರಗತಿಗಳವರೆಗೂ ಅಂದರೆ ಪ್ರೌಢಶಾಲಾ ಶಿಕ್ಷಣ ಪೂರ್ತಿ ಪ್ರಾಂತ ಭಾಷೆಯಲ್ಲೇ ನಡೆಯಬೇಕೆಂಬ ಸಿದ್ಧಾಂತಕ್ಕೆ ಎಲ್ಲರೂ ಸೈದ್ಧಾಂತಿಕವಾಗಿ ಒಪ್ಪಿಕೊಂಡಂತೆ ಆಗಿದೆ. ಆದರೆ ಕಾರ್ಯಾಚರಣೆಯಲ್ಲಿ ಅದು ಬಂದಿದೆಯೆ ? ಈ ಪ್ರಶ್ನೆಗೆ ದೊರೆಯುವ ಉತ್ತರ ಅತ್ಯಂತ ನಿರಾಶಾದಾಯಕವಾದುದು. ಮಂತ್ರಿ ಮಹೋದಯರನೇಕರು ಸಾರ್ವಜನಿಕ ವೇದಿಕೆಗಳಿಂದ ಹೇಳುತ್ತಲೆ ಇರುತ್ತಾರೆ. ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸಿ. ಅವರು ನಮ್ಮ ರಾಜ್ಯ ಭಾಷೆ ಕನ್ನಡದಲ್ಲಿಯೇ ಶಿಕ್ಷಣ ಕಲಿಯಬೇಕು ಎಂದು. ಅವರ ಮಕ್ಕಳೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಓದುತ್ತಿರುತ್ತಾರೆ.

ಇನ್ನು ಬುದ್ಧಿಜೀವಿಗಳೆಂದು ಹೇಳಿಕೊಳ್ಳುವವರು. ಕನ್ನಡ ಚಳುವಳಿಗಳಲ್ಲಿ ನಾಯಕತ್ವ ವಹಿಸಿ ಮುಂದಾಳುಗಳಾಗಿ ಕಾಣಿಸಿಕೊಳ್ಳುವವರಲ್ಲಿ ಕೆಲವರು‘ನಿಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸಬೇಕು’ ಎಂದು ವೇದಿಕೆಗಳಿಂದ ಒಂದೇ ಸಮನೆ ಕರೆಕೊಡುತ್ತಾರೆ. ಅವರನ್ನು ‘ಸ್ವಾಮಿ, ನಿಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ? ಎಂದು ಕೇಳಿದರೆ, ಹಾರಿಕೆಯ ಉತ್ತರವನ್ನು ಕೊಡುತ್ತಾರೆ, ಇನ್ನೂ ಒತ್ತಾಯಿಸಿದರೆ ಕನ್ನಡದಲ್ಲಿ ಕಲಿತವರು ಎರಡನೆಯ ದರ್ಜೆಯ ಪ್ರಭುಗಳಾಗುತ್ತಾರೆ’, ಎಂದು ಉತ್ತರ ಕೊಟ್ಟು ಗೊಂದಲದಲ್ಲಿ ಸಿಕ್ಕಿಕೊಳ್ಳುತ್ತಾರೆ.

ಅವರಿಂದ ಬರುವ ಇನ್ನೂ ಸ್ವಾರಸ್ಯಕರ ಉತ್ತರವೆಂದರೆ, ನನಗೀಗ ಐವತ್ತು ವರ್ಷಗಳು ತುಂಬಿವೆ. ಇನ್ನು ನನಗೆ ಸಣ್ಣ ಮಗುವಾಗಿ ಅದನ್ನು ಕನ್ನಡ ಮಾಧ್ಯಮದ ಶಾಲೆಗೆ ಕಳುಹಿಸುವುದು ಹೇಗೆ ? ಈಗ ನನಗೆ ಯಾವ ಸಣ್ಣ ಮಕ್ಕಳೂ ಇಲ್ಲ ಮತ್ತು ಹದಿನೆಂಟು ವರುಷಗಳ ಹಿಂದೆ ಬೆಂಗಳೂರಿನಲ್ಲಿ ಒಳ್ಳೆಯ ಕನ್ನಡ ಮಾಧ್ಯಮದ ಶಾಲೆಗಳು ಎಲ್ಲಿ ಇದ್ದವು? ಎಂದು ಜನರನ್ನೇ ಪ್ರಶ್ನಿಸುತ್ತಾರೆ. ಅವರು ಕೊಡುವ ಹಾಗೂ ಜಾರಿಕೊಳ್ಳುವ ಇಂಥ ಅಪ್ರಬುದ್ಧ ಉತ್ತರಗಳಿಂದ ನಮಗೆ ಖಚಿತವಾಗಿ ತಿಳಿಯುವುದಷ್ಟೆ ; ಇವರೆಲ್ಲ ಇಪ್ಪತ್ತು ವರುಷಗಳು ಅದಕ್ಕಿಂತಲೂ ಹಿಂದಿನಿಂದ ಕನ್ನಡ ಚಳುವಳಿಗಳಲ್ಲಿ ಇದ್ದವರಲ್ಲ, ಭಾಗವಹಿಸಿದವರಲ್ಲ. ಇತ್ತೀಚೆಗಷ್ಟೆ ಹೆಚ್ಚು ವ್ಯಾಪಕತೆಯನ್ನು ಪಡೆದು ಹಬ್ಬಿದ ಗೋಕಾಕ್ ಚಳುವಳಿಯಿಂದ ಇಂಥ ನಾಯಕರು ಕೆಲವರು ಹುಟ್ಟಿಕೊಂಡಿದ್ದಾರೆ. ಪ್ರಚಾರ ಪಡೆದಿದ್ದಾರೆ ಎನ್ನುವುದು.

ಇಂಥ ವ್ಯಕ್ತಿಗಳು ತಾವು ಮಾಡುವುದು ಒಂದು, ಇತರರಿಗೆ ಹೇಳುವುದು ಮತ್ತೊಂದು. ಇಂಥ ದ್ವಂದ್ವ ವ್ಯಕ್ತಿತ್ವದ ವ್ಯಕ್ತಿಗಳಿಂದಲೇ ಕನ್ನಡ ಪರವಾದ ಅನೇಕ ಚಳುವಳಿಗಳು ಸಫಲವಾಗದೆ ಸಮಸ್ಯೆಯನ್ನು ಇನ್ನೂ ಜಟಿಲಗೊಳಿಸುತ್ತಿವೆ.

ಇದೇ ಸಂದರ್ಭದಲ್ಲಿ ನಾನು ಇನ್ನೊಂದು ಅಂಶವನ್ನು ಸ್ಪಷ್ಟಪಡಿಸಬಯಸುತ್ತೇನೆ. ಇದು ನನ್ನ ಸ್ವಂತ ವಿಷಯವಾದರೂ ನಾನು ಹೇಳಬೇಕಾದುದು ನನ್ನ ನೈತಿಕ ಹೊಣೆ ಎಂದು ನಾನು ಭಾವಿಸುವೆ. ಸುಮಾರು ಇಪ್ಪತ್ತೆರಡು ವರುಷಗಳ ಹಿಂದಿನಿಂದಲೂ ಅಂದರೆ ೧೯೬೨-೬೩ನೆಯ ಇಸವಿಯಿಂದಲೂ ನಾನು ಈ ಕನ್ನಡ ಪರವಾದ ಚಳುವಳಿಗಳಲ್ಲಿ ನಿರಂತರ ಪಾಲುಗೊಂಡಿದ್ದೇನೆ. ಆ ದಿವಸಗಳಲ್ಲಿ ಶನಿವಾರದ ಮಧ್ಯಾಹ್ನ ಹಾಗೂ ಭಾನುವಾರ ಇಡೀ ದಿವಸ ಬೆಂಗಳೂರಿನ ಬೇರೆ ಬೇರೆ ಬಡಾವಣೆಗಳಿಗೆ, ನಾನು ನನ್ನ ಯಜಮಾನರಾದ ಶ್ರೀ ಹಂಪನಾ ಅವರು ಹಾಗೂ ಕೆಲವು ಸ್ನೇಹಿತರು ಕೂಡಿ ಹೋಗಿ ಅಲ್ಲಿನ ಅಂಗಡಿಗಳ ನಾಮಫಲಕಗಳನ್ನು ಕನ್ನಡದಲ್ಲೂ ಬರೆಯುವಂತೆ ನಮ್ರರಾಗಿ ಒತ್ತಾಯಿಸುತ್ತಿದ್ದೆವು. ಕೆಲವೊಮ್ಮೆ ಗದರಿಸಿ ಹೇಳುತ್ತಿದ್ದೆವು. ಕನ್ನಡ ಹೊರರು ಬೇರೆ ಭಾಷೆಗಳಲ್ಲಿ ಮಾತನಾಡುತ್ತಿದ್ದ ಅಂಗಡಿಯ ವ್ಯಾಪಾರಗಾರರನ್ನು ಕನ್ನಡದಲ್ಲಿಯೇ ಮಾತನಾಡುವಂತೆ ಕೇಳಿಕೊಳ್ಳುತ್ತಿದ್ದೆವು. ೧೯೬೮ರಲ್ಲಿ ಕೋಲಾರ ಜಿಲ್ಲೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷ ಭಾಷಣದಲ್ಲಿ ಕನ್ನಡದ ಪರವಾದ ಉಗ್ರತರವಾದ ಅನೇಕ ಹೇಳಿಕೆಗಳನ್ನು ನಾನು ತಿಳಿಸಿದ್ದೇನೆ. ಅಂದಿಗೆ ಅವುಗಳಲ್ಲಿ ಪ್ರಮುಖವಾದ ಕೆಲವು ವಿಷಯಗಳೆಂದರೆ ಅಂದಿನ ಮೈಸೂರು ಪ್ರಾಂತ್ಯ ‘ಅಖಿಲ ಕರ್ನಾಟಕ’ ಎಂದು ನಾಮಕರಣಗೊಳ್ಳಬೇಕು. ಕರ್ನಾಟಕದ ಆಡಳಿತ ಪೂರ್ತಿ ಕನ್ನಡದಲ್ಲಿಯೇ ಆಗಬೇಕು. ಮಂತ್ರಿಗಳು, ಅಧಿಕಾರಿಗಳು ಕನ್ನಡದಲ್ಲೇ ಮಾತನಾಡಬೇಕು. ಭಾಷಣ ಮಾಡಬೇಕು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೇ ಕಳುಹಿಸಬೇಕು. ಕನ್ನಡ ಜನತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಕನ್ನಡದಲ್ಲಿಯೇ ನಡೆಸಬೇಕು ಇತ್ಯಾದಿ, ಇತ್ಯಾದಿ.

ಇಪ್ಪತ್ತು ವರ್ಷಗಳ ಹಿಂದೆ ಕರೆ ಕೊಡುತ್ತಿದ್ದ ನಮ್ಮ ಹೇಳಿಕೆಗಳಲ್ಲಿ ಕೆಲವು ಈಗಾಗಲೇ ಈಡೇರಿವೆ ಮತ್ತೆ ಕೆಲವು ಇನ್ನೂ ಸಮರ್ಪಕವಾಗಿ ನೆರವೇರೆದೆ ಇಂದಿಗೂ ಆ ಕರೆಗಳು ಕೇಳಿಬರುತ್ತಲೇ ಇವೆ. ಅವುಗಳಲ್ಲಿ ಬಹುಮುಖ್ಯವಾದ ಒಂದು ಸಂಗತಿ ಎಂದರೆ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸುವ ವಿಷಯ.

ಈ ಸಂದರ್ಭದಲ್ಲಿ ನಾನು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಸಂಗತಿ ಎಂದರೆ ಹದಿನೆಂಟು ವರುಷಗಳ ಹಿಂದೆಯೇ ನಾನು ನನ್ನ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗೆ ಸೇರಿಸಿದೆ ಎನ್ನುವುದು. ಇಂದಾದರೂ ಕೆಲವು ಕನ್ನಡ ಶಾಲೆಗಳು ಸುಧಾರಿಸಿವೆ. ಆದರೆ ೧೯೬೭-೬೮ರಲ್ಲಿ ಕನ್ನಡ ಶಾಲೆಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಊಹಿಸಬಹುದಾಗಿದೆ. ಅಂಥ ಸಂದರ್ಭದಲ್ಲಿಯೂ ನಾನು ನನ್ನ ಮೂವರು ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿ ಪ್ರೌಢಶಾಲೆಗೆ ಶಿಕ್ಷಣ ಪೂರ್ತಿ ಕನ್ನಡ ಮಾಧ್ಯಮದಲ್ಲಿಯೇ ನಡೆಯುವಂತೆ ಎಚ್ಚರವಹಿಸಿದೆ. ಅದು ನನಗೆ ಇಂದಿಗೂ ತುಂಬ ಸಂತೃಪ್ತಿಕೊಡುವ ವಿಷಯವಾಗಿದೆ. ಆದ್ದರಿಂದಲೇ ಅಂದೂ ಇಂದೂ ಎಂದೆಂದೂ ಕನ್ನಡ ಪರವಾದ ವಿಷಯ ಬಂದಾಗ ನನ್ನೆಲ್ಲ ನೈತಿಕಬಲದಿಂದ ನಾನು ಮಾತನಾಡಬಲ್ಲೆ. ಕನ್ನಡದ ವಿಷಯದಲ್ಲಿ ನನ್ನ ನಡೆ ನುಡಿಯಲ್ಲಿ ಯಾವ ದ್ವಂದ್ವವೂ ಕಾಣದು. ಅದು ನನಗೆ ಆತ್ಮಾಭಿಮಾನವನ್ನು ಮೂಡಿಸಿದೆ, ಸಂತೋಷವನ್ನು ತಂದುಕೊಟ್ಟಿದೆ.

ಇನ್ನು ಸಾರ್ವಜನಿಕ ಜೀವನದಲ್ಲಿ ತಂದೆ ತಾಯಿಗಳ ಪಾತ್ರ. ಇವರಂತೂ ತಮ್ಮ ಮಕ್ಕಳೆಲ್ಲರೂ ಅಮೆರಿಕ, ಇಂಗ್ಲೆಂಡ್ ಅಥವಾ ಚಂದ್ರಲೋಕದಲ್ಲಿಯೇ ಬದುಕು ನಡೆಸುವರೆಂದು ಭಾವಿಸಿದಂತಿದೆ. ನೂರಕ್ಕೆ ಇಬ್ಬರೂ ಸಹ ಪರದೇಶ ಪ್ರವಾಸ ಕೈಗೊಳ್ಳದ ವಿದ್ಯಾರ್ಥಿಗಳಿಗಾಗಿ ಇತರ ೯೮ ಜನ ವಿದ್ಯಾರ್ಥಿಗಳಿಗೆ ಬಲವಂತವಾಗಿ ಬೇರೆ ಭಾಷೆಯ ಶಿಕ್ಷಣದ ಮಾಘಸ್ನಾನ ಮಾಡಿಸಲಾಗುತ್ತಿದೆ. ಪರಭಾಷೆಯಲ್ಲಿ ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಲಾರರು. ತಂದೆ ತಾಯಂದಿರು ಆ ಭಾಷೆ ಬಿಡಲಾರರು. ಮಕ್ಕಳ ಮೇಲೆ ಕರುಣೆ, ಪ್ರೀತಿ ಇದ್ದರೆ ಅವರ ಶ್ರಮ ಮತ್ತು ಕಾಲವ್ಯಯ ಆಗುವುದನ್ನು ತಗ್ಗಿಸಬಹುದು, ತಪ್ಪಿಸಬಹುದು. ಅನ್ಯ ಭಾಷಾ ಮಾಧ್ಯಮದ ಜಾಗದಲ್ಲಿ ಸ್ವಭಾಷಾ ಮಾಧ್ಯಮವನ್ನು ಅನ್ವಯಿಸುವುದರ ಮೂಲಕ.

ಶಿಕ್ಷಣ ಮಾಧ್ಯಮಕ್ಕೆ ಸಂಬಂಧಿಸಿದಂತೆ ತಂದೆ ತಾಯಂದಿರ ಮನೋಭಾವ ಮೊದಲು ಬದಲಾಗಬೇಕು. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಎರಡನೆಯ ದರ್ಜೆಯ ಪ್ರಜೆಗಳಾಗುತ್ತಾರೆ ಎಂಬ ಕೀಳರಿಮೆಯನ್ನು ಅವರ ಹೃದಯದಿಂದ ಮೊದಲು ಕಿತ್ತೊಗೆಯಬೇಕು. ಅಂತರರಾಷ್ಟ್ರೀಯ ಖ್ಯಾತಿವೆತ್ತ ನಮ್ಮ ನಾಡಿನ ವಿಜ್ಞಾನಿ ಡಾ|| ಸಿ.ಎನ್.ಆರ್.ರಾವ್ ಅವರು ಪ್ರೌಢಶಾಲೆ ಶಿಕ್ಷಣ ಪಡೆದದ್ದು ಕನ್ನಡ ಮಾಧ್ಯಮದಲ್ಲಿ. ನಮ್ಮ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ || ಡಿ. ಶಂಕರ ನಾರಾಯಣ ಅವರು ಪ್ರೌಢಶಾಲಾ ಶಿಕ್ಷಣ ಪಡೆದದ್ದೂ ಕನ್ನಡ ಮಾಧ್ಯಮದಲ್ಲಿ. ಖ್ಯಾತ ವಿಜ್ಞಾನಿ, ಖ್ಯಾತ ಶಿಕ್ಷಣವೇತ್ತರಾದ ಇವರನ್ನು ಉದಾಹರಣೆಗೆ ಹೆಸರಿಸಿದೆ ಅಷ್ಟೆ. ಇವರೀರ್ವರನ್ನು ದ್ವಿತೀಯ ದರ್ಜೆಯ ಪ್ರಜೆಗಳೆಂದು ಹೇಳಲು ಸಾಧ್ಯವೇ ?

ನಾನು ಇಲ್ಲಿಯವರೆಗೂ ಕೊಟ್ಟ ವಿವರಣೆ, ಹೇಳಿದ ಮಾತುಗಳು ಪ್ರೌಢಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ್ದು, “ನೀವು ಪ್ರಬಂಧ ಮಂಡಿಸಬೇಕಾದ ವಿಷಯ ‘ಪದವಿ ಹಂತದಲ್ಲಿ ಕನ್ನಡ ಬಳಕೆ’ ಎನ್ನುವುದು ನೀವು ವಿಷಯಾಂತರ ಮಾಡುತ್ತಿದ್ದೀರಿ” ಎಂದು ನಿಮ್ಮಲ್ಲಿ ಕೆಲವರಾದರೂ ಯೋಚಿಸುತ್ತಿರಬಹುದು. ಆದರೆ ನಾನು ಈ ವಿಷಯದ ಹಿನ್ನೆಲೆಯಲ್ಲಿ ನಿಂತೇ ನನಗೆ ಕೊಟ್ಟಿರುವ ವಿಷಯವನ್ನು ವಿವೇಚಿಸಬೇಕಘಿದೆ. ನಾನು ಇಷ್ಟೆಲ್ಲ ಪ್ರಾಸ್ತಾವಿಕವಾಗಿ ಹೇಳಿದ ಕಾರಣವಿಷ್ಟೆ. ಸಾಕಷ್ಟು ಯೋಜನೆಗಳಾಗಿ, ಸಾಕಷ್ಟು ಚರ್ಚೆ ನಡೆದು ನಿರ್ಣಯಿಸಿರುವ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಶಿಕ್ಷಣ ಪೂರ್ತಿ ಪ್ರಾಂತಭಾಷೆಯಲ್ಲಿಯೇ ನಡೆಯಬೇಕೆಂದು ಖಚಿತವಾಗಿ ನಿರ್ಧಾರವಾಗಿದ್ದರೂ ಹಾಗೆ ನಿರ್ಧಾರವಾಗಿ ಕೆಲವು ವರ್ಷಗಳೇ ಕಳೆದುಹೋಗಿದ್ದರೂ ಅದು ಇನ್ನೂ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದಾಗ ಈ ಹಿನ್ನೆಲೆಯಲ್ಲಿ ‘ಪದವಿ ಹಂತದಲ್ಲಿ ಕನ್ನಡ ಬಳಕೆ’ ಎಷ್ಟರ ಮಟ್ಟಿಗೆ ಸಾಧ್ಯ? ಎನ್ನುವ ಪ್ರಶ್ನೆ ನಮ್ಮ ಮುಂದೆ ಬೃಹದಾಕಾರವಾಗಿ ನಿಲ್ಲುತ್ತದೆ. ನಮ್ಮ ರಾಷ್ಟ್ರದ ಶಿಕ್ಷಣ ಯೋಜನೆಯಲ್ಲಿ ಪದವಿ ಹಂತದಲ್ಲಿ ಶಿಕ್ಷಣ ಮಾಧ್ಯಮದ ವಿಷಯವನ್ನೇನೂ ಅದು ಖಚಿತಪಡಿಸಿಲ್ಲ. ಹಾಗಾಗಿ ಇದು ವಿದ್ಯಾರ್ಥಿಗಳ ಹಾಗೂ ಅವರ ತಂದೆ ತಾಯಿಗಳ ವಿವೇಚನೆಗೆ ಬಿಡಲಾಗಿದೆ. ಇಲ್ಲಿ ಶಿಕ್ಷಣ ಮಾಧ್ಯಮ ಐಚ್ಛಿಕವೇ ಹೊರತು ಕಡ್ಡಾಯವಲ್ಲ. ಮಾನವಿಕ ವಿಭಾಗವನ್ನು ಕುರಿತು ಯೋಚಿಸಿದಾಗ ಕನ್ನಡನಾಡಿನ ಇಂದಿನ ಸಂದರ್ಭದಲ್ಲಿ ಶಿಕ್ಷಣ ಮಾಧ್ಯಮ ಕನ್ನಡವಾಗುವುದು ಸೂಕ್ತವೆಂದು ಭಾವಿಸಿದ್ದೇನೆ. ಅದು ಕಡ್ಡಾಯವೇ ಆದರೆ ಇನ್ನೂ ಒಳ್ಳೆಯದು.

ಈ ವಿಷಯವನ್ನು ಕುರಿತು ಚರ್ಚಿಸುವುದಾದರೆ ಶಿಕ್ಷಣ ಮಾಧ್ಯಮ ಎಂದಾಗ ಒಡನೆಯೇ ಇಂದು ಯವ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನಡೆಯುತ್ತಿದೆ ಎನ್ನುವ ಕಡೆ ನಮ್ಮ ಗಮನ ಹರಿಯಬೇಕಾದುದು ಅನಿವಾರ್ಯ. ಬಹುತೇಕ ಕಾಲೇಜುಗಳಲ್ಲಿ ಇಂದು ಶಿಕ್ಷಣ ನಡೆಯುತ್ತಿರುವುದು ಇಂಗ್ಲಿಷ್ ಭಾಷೆಯ ಮೂಲಕ. ಅದರಲ್ಲೂ ನನ್ನ ಗಮನಕ್ಕೆ ಬಂದಿರುವಂತೆ ವಿಜ್ಞಾನ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದ ಶಿಕ್ಷಣ ಪದವಿ ಹಂತದಲ್ಲಿ ಎಲ್ಲಿಯೂ ಕನ್ನಡದಲ್ಲಿ ಬೋಧನೆ ಆಗುತ್ತಿಲ್ಲ. ಇನ್ನು ಮಾನವಿಕ ವಿಭಾಗವನ್ನು ಗಮನಿಸಿದಾಗ ಎಲ್ಲೋ ಒಂದೆರಡು ಖಾಸಗಿ ಸಂಜೆ ಕಾಲೇಜುಗಳಲ್ಲಿ, ಇನ್ನೂ ನಾಲ್ಕಾರು ಸರಕಾರಿ ಕಾಲೇಜುಗಳಲ್ಲಿ ಶಿಕ್ಷಣ ಕನ್ನಡ ಭಾಷೆಯ ಮೂಲಕ ನಡೆಯುತ್ತಿದೆ. ಏಕೆ ಹೀಗೆ ? ಅಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣ ಇಂಗ್ಲಿಷ್ ಮಾಧ್ಯಮದಲ್ಲೇ ಏಕೆ ನಡೆಯುತ್ತದೆ ?

ಪದವಿ ಪೂರ್ವ ಶಿಕ್ಷಣದ ಹಂತದಲ್ಲಿ ವಿಜ್ಞಾನವನ್ನು ಐಚ್ಛಿಕವಾಗಿ ಓದುವ ವಿದ್ಯಾರ್ಥಿಗಳು ಹೇಳಬಹುದು – ‘ನಾಳೆ ನಾವು ವೈದ್ಯಕೀಯ ಶಿಕ್ಷಣಕ್ಕೆ, ಎಂಜನಿಯರಿಂಗ್ ವಿದ್ಯಾಭ್ಯಾಸಕ್ಕೆ ಹೋಗಬೇಕಾದಾಗ ಇಂಗ್ಲಿಷ್ ಮಾಧ್ಯಮ ನಮಗೆ ಹೆಚ್ಚು ಸಹಕಾರಿ. ಕಾರಣ ವೈದ್ಯಕೀಯ, ಎಂಜನಿಯರಿಂಗ್ ಹಾಗೂ ಕೆಲವು ತತ್ಸಮ ವಿದ್ಯಾಭ್ಯಾಸವೆಲ್ಲ ಇಂಗ್ಲಿಷಿನಲ್ಲಿ ನಡೆಯುವುದರಿಂದ’ – ಈ ವಾದದಲ್ಲಿ ತಕ್ಕಮಟ್ಟಿಗೆ ಹುರುಳಿಯೆನ್ನೋಣ.

ಆದರೆ ಮಾನವಿಕ ವಿದ್ಯಾರ್ಥಿಗಳಿಗೆ ಇಂಥ ತೊಂದರೆಯೇನೂ ಉದ್ಭವಿಸಲಾರದು. ಇಲ್ಲಿಯವರೆಗೂ ಕನ್ನಡ ನಾಡಿನಲ್ಲಿದ್ದ ಪರಿಸ್ಥಿತಿ ಬೇರೆಯೇ ಆಗಿತ್ತು. ಆಡಳಿತ ಬಹುಮಟ್ಟಿಗೆ ಇಂಗ್ಲಿಷಿನಲ್ಲಿ ನಡೆಯುತ್ತಿತ್ತು. ಇಂದು ಪರಿಸ್ಥಿತಿ ಹಾಗಿಲ್ಲ ಆಡಳಿತವನ್ನು ಆದಷ್ಟೂ ಕನ್ನಡದಲ್ಲಿ ನಡೆಸಲು ಸರ್ಕಾರ ಪ್ರಾರಂಭಿಸಿದೆ. ಇಂಥ ಸಂದರ್ಭದಲ್ಲಿ ಪದವಿ ಹಂತದ ವಿದ್ಯಾರ್ಥಿಗಳೂ ಕನ್ನಡದಲ್ಲಿಯೇ ಶಿಕ್ಷಣ ಪಡೆಯುವುದು ಸೂಕ್ತ.

ಇದೇ ಸಂದರ್ಭದಲ್ಲಿ ಮತ್ತೊಂದು ಮುಖ್ಯವಾದ ಅಂಶದತ್ತ ನಿಮ್ಮ ಗಮನವನ್ನು ಸೆಳೆಯ ಬಯಸುತ್ತೇನೆ. ಈಗ ಹಾಲಿ ಕನ್ನಡ ಶಿಕ್ಷಣ ಮಾಧ್ಯಮ ಜಾರಿಯಲ್ಲಿರುವ ನಾಲ್ಕಾರು ಕಾಲೇಜುಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆಂಬ ಏಕೈಕ ಕಾರಣಕ್ಕಾಗಿ, ವಿದ್ಯಾರ್ಥಿಗಳನ್ನು ಅತ್ಯಂತ ನಿಕೃಷ್ಟವಾಗಿ ಕಾಣಲಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಆಲೋಚನೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನೂ ಅಲ್ಲ. ಹೀಗೆ ಕನ್ನಡದಲ್ಲಿ ಕಲಿತವರನ್ನು ಕಾಣಲು ಕಾರಣ ಅವರೆಲ್ಲ ಶತದಡ್ಡರೆಂಬ ತಪ್ಪು ಗ್ರಹಿಕೆ. ಸಾಮಾನ್ಯವಾಗಿ ಸರಕಾರಿ ಕಾಲೇಜುಗಳಲ್ಲಿ ಕಲಿಯಲು ಬರುವವರು ಖಾಸಗಿ ಕಾಲೇಜುಗಳಲ್ಲಿ ಅರ್ಹತೆಯ ಆಧಾರದ ಮೇಲೆ ಪ್ರವೇಶ ಸಿಗದವರು, ಅದರಲ್ಲಿಯೂ ಕನ್ನಡ ಮಾಧ್ಯಮ ತರಗತಿಗಳಿಗೆ ಬರುವವರು ಇನ್ನೂ ಸೋಸಿ ತೆಗೆದವರು ಎನ್ನುವುದು, ಇಂಥ ವಿದ್ಯಾರ್ಥಿಗಳನ್ನೇ ತಮ್ಮೆಲ್ಲ ಶ್ರಮದಿಂದ ಮುಂದೆ ತಂದು ಉತ್ತಮ ರೀತಿಯಲ್ಲಿ ತೇರ್ಗಡೆಯಗುವಂತೆ ಮಾಢುವ ಶಿಕ್ಷಕರ ಶ್ರಮವನ್ನು ಎಷ್ಟು ಕೊಂಡಾಡಿದರೂ ಸಾಲದು. ಅನೇಕರು ಭಾವಿಸಿದಂತೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳೆಲ್ಲ ದಡ್ಡರಲ್ಲ. ಅವರನ್ನು ಸೋಸಿ ಸೋಸಿ ತೆಗೆದಿದ್ದರೂ ಅವರಿಂದ ಸಾಕಷ್ಟು ಉತ್ತಮ ರೀತಿಯ ಫಲಿತಾಂಶ ಬರುವುದು ವಿಶೇಷ ಗಮನಕ್ಕೆ ಅರ್ಹವಾಗಿದೆ. ಅದಕ್ಕೆ ಮುಖ್ಯವಾದ ಕಾರಣ ಅವರು ತಮ್ಮ ತಾಯ್ನುಡಿಯಾದ, ಅರ್ಥಾತ್ ರಾಜ್ಯಭಾಷೆಯಾದ ಕನ್ನಡದಲ್ಲಿಯೇ ಶಿಕ್ಷಣ ಪಡೆದದ್ದರಿಂದ. ಆದರೆ ಅವರನ್ನು ಬಹುಮಟ್ಟಿಗೆ ಕಾಡುವ ಸಮಸ್ಯೆ ಒಂದಿದೆ. ಅದೆಂದರೆ ಇಂಗ್ಲಿಷ್ ಭಾಷಾ ಸಾಹಿತ್ಯ. ಪರೀಕ್ಷೆಯ ಫಲಿತಾಂಶ ಪ್ರಕಟವಾದೊಡನೆ ವಿದ್ಯಾರ್ಥಿಗಳ ಬಹು ದೊಡ್ಡ ಕೊರಗು, ಕೊರತೆ ಕಾಣುವುದು ಇಲ್ಲೇ. ಎಲ್ಲ ವಿಷಯಗಳಲ್ಲೂ ಪ್ರಥಮ, ದ್ವಿತೀಯ ದರ್ಜೆಯ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದೂ ಇಂಗ್ಲೀಷಿನಲ್ಲಿ ಮಾತ್ರ ನಪಾಸಾಗಿದೆಯೆಂದು ಅವರು ಕಣ್ಣೀರು ಕರೆಯುವುದನ್ನು ನೋಡಿದಾಗ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಿಂಚಿತ್ತಾದರೂ ಯೋಚಿಸುವ ಅಧ್ಯಾಪಕರ ಮನಸ್ಸಿಗೂ ತುಂಬಾ ನೋವಾಗುತ್ತದೆ.

ಇಂಥ ಸಂದಿಗ್ಧ ಪರಿಸ್ಥಿತಿಯಿಂದ ವಿದ್ಯಾರ್ಥಿಯನ್ನು ಪಾರುಮಾಡಲು ಕುವೆಂಪು ಅವರ ಸಿದ್ಧಾಂತ ಸೂಕ್ತ ಪರಿಹಾರ ನೀಡುತ್ತದೆ. ಅವರು ಹೇಳುತ್ತಾರೆ; ‘ಇಂದಿನ ಪರಿಸ್ಥಿತಿಯನ್ನು ಇಂಗ್ಲಿಷನ್ನು ಬಿಡುವಂತಿಲ್ಲ, ಆದರೆ ಅದಕ್ಕೆ ಹಿಂದಿದ್ದ ಸ್ಥಾನವನ್ನು ಕೊಡುವಂತೆಯೂ ಇಲ್ಲ. ಇನ್ನು ಮುಂದೆ ಇಂಗ್ಲಿಷ್ ಹಲವರು ಕಲಿಯುವ ಭಾಷೆಯಲ್ಲ. ಕೆಲವರು ಮಾತ್ರ ಕಲಿಯಬೇಕಾದ ಭಾಷೆ. ಇನ್ನು ಮುಂದೆ ಅನೇಕರಿಗೆ ಬೇಕಾದ ಇಂಗ್ಲಿಷಿನ ಮಟ್ಟವೆಂದರೆ ಅದನ್ನೋದಿ ಅರ್ಥ ಮಾಡಿಕೊಳ್ಳುವುದಷ್ಟೇ ಹೊರತು, ಅದರಲ್ಲಿ ಸಂಭಾಷಿಸುವುದಾಗಲೀ ಭಾಷಣ ಮಾಡುವುದಾಗಲೀ ಬರೆಯುವುದಾಗಲೀ ಅಲ್ಲ. ಈ ದೃಷ್ಟಿಯಿಂದ ನಮ್ಮ ಅಧ್ಯಯನ ಕ್ರಮದಲ್ಲಿ ಗಾಂಧೀಜಿ ಇಂಗ್ಲೀಷಿಗೆ ಕೊಟ್ಟಿರುವ ಐಚ್ಛಿಕ ಭಾಷಾ ಸ್ಥಾನವೇ ಯೋಗ್ಯವಾದುದು. ಅದಕ್ಕೆ ಈಗ ಕೊಟ್ಟಿರುವ ಪ್ರಥಮ ಭಾಷಾಸ್ಥಾನ ದೇಶಕ್ಕೆ ಹಾನಿಕರ. ನಮ್ಮ ವಿದ್ಯಾರ್ಥಿಗಳ ಮನಶ್ಯಕ್ತಿಯನ್ನೆಲ್ಲ ಅಪವ್ಯಯಗೊಳಿಸಿ ಅವರನ್ನು ಪರೀಕ್ಷೆಗಳಲ್ಲಿ ಅನ್ಯಾಯವಾಗಿ ಅನುತ್ತೀರ್ಣರನ್ನಾಗಿ ಮಾಡುವುದರಿಂದ ಅವರ ಹೃದಯದ ಆಶಾಭಾವನೆಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಿ ನಿರಾಶೆಯನ್ನೂ ಅಧೈರ್ಯವನ್ನೂ ತಂದೊಡ್ಡಿ ಅವರ ಬದುಕನ್ನೆ ಬಯಲುಗೊಳಿಸುವ ಸಾಧನೆಯಾಗಿದೆ ಈ ಪರಭಾಷೆ. ನಮ್ಮ ಮಕ್ಕಳು ಸಹಜವಾಗಿ ನೆಲದ ನುಡಿಯನ್ನು ಕಲಿತು ಇನ್ನೇನು ಭಾಷೆಯಿಂದ ಭಾವಕ್ಕೂ ಜ್ಞಾನಕ್ಕೂ ಗರಿಗೆದರಿ ಹಾರಬೇಕು ಎನ್ನುವಷ್ಟರಲ್ಲಿ ಈ ಹೊರಭಾಷೆಯ ಕಲ್ಲುಚಪ್ಪಡಿಯನ್ನು ಅವರ ತಲೆಗಳ ಮೇಲೆ ಹೇರುತ್ತೇವೆ…. ಈ ದುರಂತ ನಾಟಕ ಇನ್ನು ಸಾಕು…….,’

ಇಂಗ್ಲಿಷ್ ಕಲಿಯುವುದನ್ನು ಎರಡು ಭಾಗ ಮಾಡಬೇಕು. ಒಂದು ಭಾಷಾ ದೃಷ್ಟಯಿಂದ ಕಲಿಯುವುದು, ಇನ್ನೊಂದು ಸಾಹಿತ್ಯ ದೃಷ್ಟಿಯಿಂದ ಕಲಿಯುವುದು. ಭಾಷಾ ದೃಷ್ಟಿಯಿಂದ ಕಲಿಯುವವರಿಗೆ ಇಂಗ್ಲಿಷಿನ ಪರಿಚಯ ಚೆನ್ನಾಗಿ ಆಗಬೇಕು, ಅವರು ಆ ಭಾಷೆಯಲ್ಲಿ ಚೆನ್ನಾಗಿ ಓದಲು ಬರೆಯಲು ಮಾತನಾಡಲೂ ಬಲ್ಲವರಾಗಬೇಕು. ಇಂಗ್ಲಿಷ್ ಸಾಹಿತ್ಯಕ್ಕಾಗಿ ಅಭ್ಯಾಸ ಮಾಡುವವರು ಅವರಿಗೆ ಬೇಕಾದುದು ಭಾಷೆಯಲ್ಲಿರುವ ಚಿಂತನಾಂಶಗಳು, ಸಾಹಿತ್ಯದ ಸೊಗಸು. ಅವುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಅವರಿಗೆ ಇಂಗ್ಲಿಷ್ ಬಂದರೆ ಸಾಕು. ಈ ದೃಷ್ಟಿಯಿಂದ ಇಂಗ್ಲಿಷನ್ನು ಐಚ್ಛಿಕ ವಿಷಯವನ್ನಾಗಿ ಇಟ್ಟರೆ ಸಾಕು. ಹಾಗಾದರೆ ಈಗ ಭಾಗ ಒಂದರಲ್ಲಿ ಎರಡು ಭಾಷೆ ಕಲಿಯುತ್ತಿರುವ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಗೆ ಬದಲಾಗಿ ಇನ್ನೊಂದು ಭಾಷೆಯಾಗಿ ಯಾವುದನ್ನು ಕಲಿಯಬೇಕು ಎನ್ನುವ ಪ್ರಶ್ನೆ ಏಳುತ್ತದೆ. ಅವರಿಗೆ ಇಚ್ಛೆ ಇದ್ದರೆ ಇಂಗ್ಲಿಷನ್ನೇ ಕಲಿಯಬಹುದು. ಇಲ್ಲದಿದ್ದಲ್ಲಿ ವಿಶ್ವವಿದ್ಯಾನಿಲಯ ಅಂಗೀಕರಿಸಿರುವ ಯಾವುದಾದರೂ ಎರಡು ಭಾಷೆಯನ್ನು ಕಲಿಯಬಹುದು. ಉದಾ: ಕನ್ನಡ, ಸಂಸ್ಕೃತ, ಉರ್ದು, ಹಿಂದಿ, ತಮಿಳು ಹೀಗೆ. ಇಂಥ ವ್ಯವಸ್ಥೆ ಈಗಾಗಲೇ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಜಾರಿಗೆ ಬಂದಿದೆ. ಈ ರೀತಿ ಇಂಗ್ಲಿಷಿನ ಹೊರೆಯಿಂದ ಕಳಚಿಕೊಂಡು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಲ್ಲಿ ಕಾಣುತ್ತಿದ್ದೇವೆ.

ಮಾನವಿಕ ವಿಷಯಗಳನ್ನು ಕನ್ನಡದಲ್ಲಿ ಈಗಾಗಲೇ ಕೆಲವು ಕಾಲೇಜುಗಳಲ್ಲಿ ಅಧ್ಯಾಪಕರು ಅತ್ಯಂತ ಸಮರ್ಥ ರೀತಿಯಿಂದ ಬೋಧಿಸುತ್ತಿದ್ದಾರೆ. ಆ ವಿಷಯಗಳಿಗೆ ಸಂಬಂಧಿಸಿದ, ಕನ್ನಡ ಪುಸ್ತಕಗಳೂ ಕೆಲವು ಬಂದಿವೆ. ಡಾ|| ಜಿ.ಟಿ.ನಾರಾಯಣರಾವ್ ಹಾಗೂ ದೇವರಾಜ್ ಸರ್ಕಾರ್ ಮೊದಲಾದವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದು ಒಂದು ವಿಚಾರ ಸಂಕಿರಣದಲ್ಲಿ ಹೀಗೆ ಹೇಳಿದರು : “ನಾವು ಯಾವುದಾದರೂ ಒಂದು ವೈಜ್ಞಾನಿಕ ವಿಷಯಕ್ಕೆ ಸಂಬಂಧಿಸಿದ ಪುಸ್ತಕವನ್ನು ಕನ್ನಡದಲ್ಲಿ ಬರೆಯುವಾಗ ನಾಲ್ಕಾರು ಭಾಷೆಯ ಹತ್ತಾರು ಪುಸ್ತಕಗಳನ್ನು ತೀರ ಹೊಸದೆಂದು ಪರಿಗಣಿಸಿರುವ ಇತ್ತೀಚಿನ ಪುಸ್ತಕಗಳನ್ನು ಒಂದನ್ನೂ ಬಿಡದೆ ಓದಿ ಜೀರ್ಣಿಸಿಕೊಂಡು ಬರೆಯುತ್ತೇವೆ. ಹಾಗಾಗಿ ಅನೇಕ ಇಂಗ್ಲಿಷ್ ಪುಸ್ತಕಗಳಿಗಿಂತ, ಕನ್ನಡದಲ್ಲಿ ಬರುವ ವೈಜ್ಞಾನಿಕ ಪುಸ್ತಕಗಳು ಹೊಸ ಅಂಶಗಳನ್ನು ತಿಳಿಸುವಲ್ಲಿ ಯಶಸ್ವಿಯಾಗಿವೆ. ಇಂಥ ಪ್ರಯತ್ನ ವೈಜ್ಞಾನಿಕ ಕನ್ನಡ ಪುಸ್ತಕಗಳನ್ನು ಬರೆಯುವಲ್ಲಿ ಯಶಸ್ಸು ಪಡೆದಿದೆ ಎಂದಮೇಲೆ ಮಾನವಿಕ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಪುಸ್ತಕಗಳ ರಚನೆ ಏನೇನೂ ಕಷ್ಟವಾಗಲಾರದು”.

ನಮ್ಮಲ್ಲಿಯ ಮಾನವಿಕ ವಿಷಯ ಬೋಧಿಸುವ ಅಧ್ಯಾಪಕರು ಈಗಾಗಲೇ ಸಾಕಷ್ಟು ಪುಸ್ತಕ ಬರೆದಿದ್ದಾರೆ. ಇನ್ನೂ ಬರೆಯುವ ವಿದ್ವಾಂಸರೂ ಇದ್ದಾರೆ. ಬರೆಯುತ್ತಲೂ ಇದ್ದಾರೆ. ಪಠ್ಯಪುಸ್ತಕಗಳಿಲ್ಲ ಎನ್ನುವ ನೆಪವಾಗಲೀ ಕನ್ನಡದಲ್ಲಿ ಬೋಧಿಸಲು ಸಾಧ್ಯವಿಲ್ಲ ಎಂದು ಹೇಳುವ ಕಾರಣವಾಗಲೀ ಇಂದು ಉದ್ಭವಿಸುವುದಿಲ್ಲ.

ಇನ್ನು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಬಗ್ಗೆ ನಮ್ಮ ಅಂದರೆ ವಿಶೇಷವಾಗಿ ಅಧ್ಯಾಪಕರ ಮನೋಭಾವ ಬದಲಾಗಬೇಕು. ಅವರನ್ನು ದಡ್ಡರೆಂದು ಪರಿಗಣಿಸಿ ಕೀಳರಿಮೆಯಿಂದ ಕಾಣುವ ಮನೋವೃತ್ತಿ ಇಲ್ಲದಂತೆ ಆಗಬೇಕು. ನಾನು ಈ ಹಿಂದೆ ತಿಳಿಸಿದಂತೆ ಇಂಗ್ಲಿಷ್ ಹೊರೆಯಿಂದ ಅವರನ್ನು ವಿಮುಕ್ತಿಗೊಳಿಸಿದರೆ ಅವರು ಬುದ್ಧಿವಂತ ವಿದ್ಯಾರ್ಥಿಗಳ ಸಾಲಿನಲ್ಲಿ ಮೊದಲು ನಿಲ್ಲುತ್ತಾರೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವಾಗಲೂ ಅಷ್ಟೆ. ಕನ್ನಡದಲ್ಲಿ ಬರೆದ ಉತ್ತರ ಪತ್ರಿಕೆ ಎಂದ ಒಡನೆಯೇ ಇದು ದಡ್ಡ ವಿದ್ಯಾರ್ಥಿಯ ಉತ್ತರ ಪತ್ರಿಕೆ, ಏಕೆಂದರೆ ಅವ ಬುದ್ಧಿವಂತನಾಗಿದ್ದರೆ ಇಂಗ್ಲಿಷ್ ಶಿಕ್ಷಣ ಮಾಧ್ಯಮದಲ್ಲಿ ಬರೆಯುತ್ತಿದ್ದ ಎನ್ನುವ ಮನೋಭಾವ ಮತ್ತು ಪೂರ್ವ ಗ್ರಹಿಕೆಯಿಂದಲೇ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವ ಪ್ರವೃತ್ತಿ ಕೆಲವರಲ್ಲಿದೆ ಎಂದು ನಾನು ಅತ್ಯಂತ ವಿಷಾದದಿಂದ ಈ ಸಂದರ್ಭದಲ್ಲಿ ಹೇಳಬೇಕಾಗಿದೆ. ದಯಮಾಡಿ ತಾವು ಹಾಗೆ ಮಾಡಬೇಡಿ. ಆ ವಿದ್ಯಾರ್ಥಿಗಳು ಇಂಗ್ಲಿಷನ್ನು ಹೊರತುಪಡಿಸಿ ಇತರ ವಿಷಯಗಳಲ್ಲಿ ನಿಜಕ್ಕೂ ಬಹುಮಟ್ಟಿಗೆ ಬುದ್ಧಿವಂತರಾಗಿರುತ್ತಾರೆ. ಆದ್ದರಿಂದ ನನ್ನ ಸಹೋದ್ಯೋಗಿಗಳು ಕನ್ನಡದಲ್ಲಿ ಬರೆದ ಮಾನವಿಕ ವಿಷಯಗಳ ಉತ್ತರ ಪತ್ರಿಕೆಗಳನ್ನು ಅತ್ಯಂತ ಎಚ್ಚರದಿಂದ ಮೌಲ್ಯಮಾಪನ ಮಾಡಿರೆಂದು ಪ್ರಾರ್ಥಿಸುವೆ.

ಇನ್ನು ಕೆಲವು ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಓದುವ ಆಸಕ್ತಿ ಇದ್ದರೂ ಅನುಕೂಲತೆಗಳು ಇರುವುದಿಲ್ಲ. ಬಲವಂತವಾಗಿ ಇಂಗ್ಲಿಷ್ ಮಾಧ್ಯಮದ ತರಗತಿಗಳಿಗೆ ಸೇರಿ ಪದವಿಯನ್ನು ಮುಗಿಸದೆ ಅರ್ಧಕ್ಕೆ ವಿದ್ಯಾಭ್ಯಾಸವನ್ನು ನಿಲ್ಲಿಸುವವರ ಸಂಖ್ಯೆ ಏನೂ ಕಡಿಮೆ ಇಲ್ಲ. ಅಂಥ ಆಸಕ್ತ ವಿದ್ಯಾರ್ಥಿಗಳಿಗಾಗಿ ಇನ್ನು ಮುಂದೆ ಎಲ್ಲ ಕಾಲೇಜುಗಳಲ್ಲಿಯೂ ಅವು ಸರ್ಕಾರದ್ದಾಗಲೀ ಅಥವಾ ಖಾಸಗಿಯಾಗಲೀ ಒಂದು ಅಥವಾ ಎರಡು ವಿಭಾಗಗಳನ್ನು ಪದವಿ ಹಂತದಲ್ಲಿ ಕನ್ನಡದಲ್ಲಿ ತೆರೆಯುವ ವ್ಯವಸ್ಥೆಯಾಗಬೇಕು. ಸಾಧ್ಯವಾದರೆ ವಾಣಿಜ್ಯ ವಿಜ್ಞಾನ ಹಂತದಲ್ಲಿಯೂ ಶಿಕ್ಷಣ ಮಾದ್ಯಮ ಕನ್ನಡವಾದರೆ ಒಳ್ಳೆಯದು.

ಕನ್ನಡ ಮಾಧ್ಯಮದಲ್ಲಿ ಪದಿವ ಪಡೆದವರಿಗೆ ಸರ್ಕಾರ ಉದ್ಯೋಗ ಕೊಡುವಲ್ಲಿ ಆದ್ಯತೆ ನೀಡಬೇಕು. ಇಂತಿಷ್ಟು ಸ್ಥಾನಗಳು ಕನ್ನಡ ಮಾಧ್ಯಮದಲ್ಲಿ ಓದಿದ ಪದವೀಧರರಿಗೆ ಎಂದು ಮೀಸಲಿರಿಸಬೇಕು. ಈ ವಿಷಯವನ್ನು ಪ್ರಚಾರ ಮಾಧ್ಯಮಗಳಾದ ದೂರದರ್ಶನ ಆಕಾಶವಾಣಿ ಪ್ರಸಿದ್ಧ ಪ್ರಮುಖ ಪತ್ರಿಕೆಗಳ ಮೂಲಕ ಜಾಹಿರಾತುಗಳಿಸಬೇಕು. ಆಗ ವಿದ್ಯಾಭ್ಯಾಸ ಹಾಗೂ ರಾಜ್ಯದ ಆಡಳಿತದಲ್ಲಿ ಸಾಹಚರ್ಯ ಮೂಡಿ ಸಮಸ್ಯೆಗಳು ಕೆಲವಾದರೂ ಪರಿಹಾರವಾಗುವುದರಲ್ಲಿ ಸಂದೇಹವಿಲ್ಲ.

ಒಂದು ಕಾಲದಲ್ಲಿ ಇಂಗ್ಲಿಷ್ ಭಾಷೆ ಜ್ಞಾನದ ಒಂದು ಗವಾಕ್ಷಿಯಾಗಿತ್ತು ನಿಜ. ನಮ್ಮನ್ನು ಬ್ರಿಟಿಷರು ಆಳಿದ್ದರಿಂದ, ನಾವು ಇಂಗ್ಲಿಷ್ ಭಾಷೆಯನ್ನು ಕಲಿತಿದ್ದರಿಂದ ಅನೇಕ ವಿಷಯಗಳಲ್ಲಿ ನಮಗೆ ಪ್ರಯೋಜನವಾಗಿದೆ. ಆದರೆ ಇಂದು ನಾವು ಕೇವಲ ಇಂಗ್ಲಿಷ್ ಭಾಷೆ ಒಂದನ್ನೇ ನಂಬಿ ಕುಳಿತರೆ ಆಗದು. ಇಂದಿನ ಪ್ರಸ್ತುತ ಬದುಕಿಗೆ ತೀರ ಸಮೀಪದಲ್ಲಿ ಸ್ಪಂಧಿಸುವ ಇತರ ಭಾಷೆಗಳ, ಇತರ ಸಾಹಿತ್ಯಗಳ ಅಭ್ಯಾಸವೂ ಆಗಬೇಕಾಗಿದೆ. ಅವುಗಳೆಂದರೆ ಫ್ರೆಂಚ್ ಸಾಹಿತ್ಯ, ರಷ್ಯಾ ಸಾಹಿತ್ಯ, ಆಫ್ರಿಕಾ ಸಾಹಿತ್ಯ ಇವತ್ತು ಜಗತ್ತಿನ ಬುದ್ಧಿ ಜೀವಿಗಳ ಹಾಗೂ ಸಾಮಾನ್ಯ ಜನತೆಯನ್ನು ಆಕರ್ಷಿಸುತ್ತಿವೆ; ಅವರ ಕಣ್ಣನ್ನು ತೆರೆಸುತ್ತಿವೆ. ಆದ್ದರಿಂದ ಈ ಇತರ ಭಾಷೆಗಳೂ ಅವುಗಳ ಸಾಹಿತ್ಯವೂ ಇಂದು ನಮಗೆ ತುರ್ತಾಗಿ ಇಂದು ನಮಗೆ ತುರ್ತಾಗಿ ಬೇಕಾಗಿದೆ.

ಇಂಗ್ಲಿಷ್ ಭಾಷೆ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆಂದು ಹೇಳಿ ಈಗ ಫ್ರೆಂಚ್, ರಷ್ಯನ್, ಆಫ್ರಿಕನ್ ಭಾಷೆ ಹಾಗೂ ಸಾಹಿತ್ಯ ಬೇಕು ಎಂದು ಹೇಳುತ್ತೀರಿ. ಇದು ವಿರೋಧಾಭಾಸವೆಂದು ನೀವು ತಿಳಿಯಬಹುದು. ನಾನು ಹೇಳುವ ಉತ್ತರವಿಷ್ಟೆ. ಈ ಎಲ್ಲಾ ಭಾಷೆಗಳೂ ಬರಲಿ, ಇನ್ನೂ ಹೆಚ್ಚಿನ ಪರಭಾಷೆಗಳು ಬರಲಿ, ಅವೆಲ್ಲ ಐಚ್ಛಿಕವಾಗಿರಲಿ. ಇಚ್ಛಿಸಿದವರು ಮತ್ತು ಅಗತ್ಯ ಇರುವವರು ಕಲಿಯುವ ಅವಕಾಶವಿರಲಿ, ಆದರೆ ನಮಗೆ ಕನ್ನಡವೇ ಸಾಕು ಎಂದು ತೀರ್ಮಾನಿಸಿದವರಿಗೆ ಸ್ನಾತಕೋತ್ತರ ತರಗತಿಯವರೆಗೂ ಎಲ್ಲವನ್ನೂ ಕನ್ನಡದಲ್ಲೇ ಕಲಿಯಲು ಪೂರ್ಣ ಅವಕಾಶ ಇರಬೇಕು. ಈ ದಾರಿಯಲ್ಲಿ ಮೊದಲ ಹೆಜ್ಜೆಯಾಗಿ ಮಾನವಿಕ ವಿಷಯಗಳನ್ನು ಕನ್ನಡದಲ್ಲಿ ಕಲಿಯಲು ಹೆಚ್ಚು ತೊಡಕುಗಳಿಲ್ಲದಿರುವುದನ್ನು ಮನಗಾಣಬಹುದು.