ಅಖಿಲ ಭಾರತ ೭೧ನೆಯ ಕನ್ನಡ ಸಾಹಿತ್ಯ ಸಮ್ಮೇಳನ : ಮೂಡಬಿದರೆ
೧೮, ೧೯, ೨೦, ೨೧ ಡಿಸೆಂಬರ್ ೨೦೦೩

ಸಮ್ಮೇಳನಾಧ್ಯಕ್ಷರ ಭಾಷಣ
೧೮-೧೨-೨೦೦೩

ಆಲೋಚನೆಯ ನೆಲೆಗಳ ಕೇಂದ್ರಪ್ರಜ್ಞೆ ಮತ್ತು ಪರಿಕ್ಷೇತ್ರ

ಧನ್ಯತೆಯ ಧ್ಯಾಸ

ಕನ್ನಡ – ಕರ್ನಾಟಕ : ಒಳನಾಡು, ಗಡಿನಾಡು, ಹೊರನಾಡು

ನೆಲ, ಜಲ, ರೈತ : ಅನುಸಂಧಾನ

ಮಹಿಳೆಯ ಸುತ್ತ ಮುತ್ತ : ಪರಿಭಾವನೆ

ತಂತ್ರಜ್ಞಾನ : ಸವಾಲು, ಜವಾಬು

ಪುಸ್ತಕದ ಸಂಸ್ಕೃತಿ

ಕನ್ನಡ ಸಾಹಿತ್ಯ ಪರಿಷತ್ತು

ಸಂಕೀರ್ಣ ಚಿಂತನೆಗಳು

ಧನ್ಯತೆಯ ಧ್ಯಾಸ

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ ಈ ಮಣೆ ಹತ್ತಿ ಪ್ಲಾವಿತಳಾಗಿ, ತುಸು ಭಾವುಕಳೂ ಆಗಿ ನಿಂತಿದ್ದೇನೆ. ಮೂಡಬಿದರೆಯ ಈ ಮಂಜುಳ ಹರ್ಷಾಭಿಷೇಕದ ಮಂಗಳಮಯ ಸಮ್ಮೇಳನ ನನಗೆ ಪುರಾಣಗಳು ಹೇಳುವ ದೇವಪುಷ್ಪ ವೃಷ್ಟಿಯ ಪುಳಕಾನುಭವವೂ ಆಗುತ್ತಿದೆಯೆಂದು ಪ್ರಾಂಜಲವಾಗಿ ನಿವೇದಿಸುತ್ತೇನೆ.

ನನ್ನ ನಿಡುಬಾಳಿನಲ್ಲಿ ಕಂಡುಂಡ ಋತಸತ್ಯಗಳನ್ನು, ನಂಬಿ ನಡೆದ ಸಿದ್ಧಾಂತಗಳನ್ನು, ಯೋಗ್ಯ ಹಾಗೂ ಮೌಲಿಕವೆಂದು ಹೊಳೆದ ಚಿಂತನೆಗಳನ್ನು ಮನಬಿಚ್ಚಿ ನುಡಿಯಲು ನೀವೆಲ್ಲ ಸ್ಫೂರ್ತಿಯಾಗಬೇಕೆಂದು ಪ್ರಾರ್ಥಿಸುತ್ತೇನೆ. ಎಲ್ಲ ವಿಷಯಗಳನ್ನು ಕುರಿತು ಹೇಳುವ ಪ್ರಜ್ಞಾಪ್ರಭುತ್ವವಾಗಲಿ ಸರ್ವಜ್ಞತ್ವವಾಗಲಿ ನನಗೆ ಇಲ್ಲ. ನಾನು ಬಲ್ಲ ಹಾಗೂ ಗ್ರಹಿಸಿದ ವಿಚಾರಗಳನ್ನು ನಿರೂಪಿಸುವಾಗ ಕೂಡ ಸರ್ವಜ್ಞತ್ವನ್ನು ಆರೋಪಿಸಿಕೊಂಡು ಹೂಂಕರಿಸುವ ಅಹಂಕಾರ ನನ್ನನ್ನು ಆಕ್ರಮಿಸದಿರಲಿ.

ಅಧ್ಯಕ್ಷಭಾಷಣದ ಆರಂಭದಲ್ಲಿಯೇ ಹೇಳಬೇಕಾದ ಕೆಲವು ಸಂಗತಿಗಳನ್ನು ಮೊದಲು ಪ್ರಸ್ತಾಪಿಸುತ್ತೇನೆ. ನಾನು ನಿಂತಿರುವ ವೇದಿಕೆಗೆ ಹೆಸರಿಟ್ಟಿರುವ ಮಹಾಕವಿ ರತ್ನಾಕರವರ್ಣಿಗೂ ನನ್ನ ಅಧ್ಯಯನ-ಅಧ್ಯಾಪನ ಶಿಸ್ತಿಗೂ ಅರ್ಧಶತಮಾನದ ಬೆಸುಗೆಯಿದೆ. ಪ್ರೌಢಶಾಲೆಯಲ್ಲಿ ಭರತೇಶ ವೈಭವದ ಸಾಂಗತ್ಯ ಪದ್ಯಗಳ ವಾಚನ ಪರಿಚಯವಾಗಿ, ಕಾಲೇಜು ತರಗತಿಯಲ್ಲಿ ಶತಕಗಳ ಹಾಗೂ ಸಮಗ್ರ ಭರತೇಶ ವೈಭವದ ಅನುಸಂಧಾನವಾಯಿತು. ಆ ಮಹಾಕಾವ್ಯವನ್ನು ೧೯೬೭ರಲ್ಲಿ ಪ್ರೊ.ಜಿ. ಬ್ರಹ್ಮಪ್ಪ, ಪ್ರೊ. ಹಂಪನಾ ಮತ್ತು ನಾನು, ಹೊಸ ಓಲೆಗರಿಗಳ ನೆರವಿನಿಂದ ಸಂಪಾದಿಸಿದ್ದೆವು. ಇದೀಗ ಅದರ ಮರುಮುದ್ರಣ ಮಾಡಿ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಈ ಸಮ್ಮೇಳನದಲ್ಲಿ ಬಿಡುಗಡೆ ಆಗುತ್ತಿದೆ. ೧೯೭೯ರಲ್ಲಿ ಡಾ. ಹಂಪನಾ ೨೩೮ ರತ್ನಾಕರನ ಹಾಡುಗಳನ್ನು ಏಕೈಕ ಹಸ್ತ ಪ್ರತಿಯ ಸಹಾಯದಿಂದ ಸಂಪಾದಿಸಿದಾಗಲೂ ನನು ಸಹಕರಿಸಿದ್ದೆ. ರತ್ನಾಕರನ ಕಾವ್ಯಗಳನ್ನು ಕುರಿತು ಇದೇ ಮೂಡಬಿದರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಚಾರ ಸಂಕಿರಣ ನಡೆಸಿದಾಗಲೂ ನಾನು ಭಾಗವಹಿಸಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಏರ್ಪಾಡಾಗುತ್ತಿದ್ದ ಉಪನ್ಯಾಸಗಳಿಗೆ ಇಲ್ಲಿಗೆ ನಾನು ಆಗಮಿಸಿದ ನೆನಪು ಹಸಿರಾಗಿದೆ. ಈ ೭೧ನೆಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪೋಷಕರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು ಪಟ್ಟಾಭಿಷಕ್ತರಾದ ಶುಭ ದಿವಸ ಕೂಡ, ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನನ್ನನ್ನೂ ಬರಮಾಡಿಕೊಂಡಿದ್ದರು.

ಸಾವಿರ ಕಂಬದ ಬಸದಿ ಹೆಸರಿನ ಇಲ್ಲಿಯ ಉತ್ಕೃಷ್ಟ ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯ ಮತ್ತು ಇತರ ಬಸದಿಗಳ ವಾಸ್ತುಶಿಲ್ಪದ ದರ್ಶನದಿಂದ ರೋಮಾಂಚಗೊಂಡಿದ್ದೇನೆ. ಆಳುಪರು, ಚೌಟರು, ಅಜಿಲರು ಮತ್ತು ಬಂಗರು ಹೊಂದಿದ್ದ ಧಾರ್ಮಿಕ ಶ್ರದ್ಧೆ, ಕಲಾಪ್ರೇಮವನ್ನು ಇಲ್ಲಿಯ ೧೮ ಜಿನಾಲಯಗಳಲ್ಲದೆ ಇನ್ನಿತರ ೧೮ ದೇವಾಲಯಗಳು ಕೆರೆಗಳು ಶಾಸನಗಳೂ ಸಾರುತ್ತಿವೆ. ಸಮಸ್ತ ಆಗಮ ಪರಂಪರೆಯ ಸಾರ ಸಮಸ್ತವನ್ನು ಗರ್ಭೀಕರಿಸಿದ ಧವಲ, ಜಯಧವಲ, ಮಹಾಧವಲದ ಏಕೈಕ ಸಂರಕ್ಷಿತ ಹಸ್ತಪ್ರತಿ ಇಲ್ಲಿನ ಶ್ರುತಭಂಡಾರದ ತವನಿಧಿಯಾಗಿ ಬೆಳಗಿದ್ದನ್ನೂ ಹಾಗೂ ವಿದ್ವನ್ಮಣಿಗಳಾದ ಶಾಸ್ತ್ರಿಗಳ ಪರಂಪರೆಯಿಂದ ಸುಶೋಭಿತವಾದುದನ್ನೂ ಇನ್ನು ಎಂದೆಂದಿಗೂ ಸಿಗಲಾರದೆಂದು ತಿಳಿದಿದ್ದ ನಾಗವರ್ಮನ ವರ್ಧಮಾನಪುರಾಣ ಇಲ್ಲಿನ ಶ್ರುತ ಭಂಡಾರದಿಂದ ಬೆಳಕು ಕಂಡಿತೆಂಬುದನ್ನೂ, ಕನ್ನಡ ಸಾಹಿತ್ಯ ಪರಂಪರೆಯ ಉಜ್ವಲ ದೀಪಸ್ತಂಭವಾದ ವಡ್ಡಾರಾಧನೆಯ ಪರಿಷ್ಕಾರಕ್ಕೆ ಇಲ್ಲಿನ ತಾಳೆಗರಿ ಗ್ರಂಥಗಳು ಮುಖ್ಯ ಆಕರವೆಂಬುದನ್ನೂ ಕನ್ನಡ ವಿದ್ವತ್ತು ಬಲ್ಲುದು. ಕನ್ನಡ ಸಾಹಿತ್ಯ, ಸಂಸ್ಕೃತಿ, ವಾಸ್ತು, ಶಿಲ್ಪ ಮತ್ತು ಕಲೆಗಳಿಗೆ ತನ್ನ ವಿಶಿಷ್ಟ ಕೊಡುಗೆ ನೀಡಿ ಅಕ್ಷಯ ಭಂಡಾರವೆನಿಸಿದ ಮೂಡಬಿದರೆಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಸರ್ವಾನುಮತದಿಂದ ಆರಿಸಿದ್ದರ ಹಿಂದೆ ಅತೀತ ಶಕ್ತಿಯೊಂದು ಪ್ರವರ್ತನಶೀಲವಾಗಿರಬೇಕೆಂದು ಊಹಿಸುತ್ತೇನೆ. ರತ್ನಾಕರವರ್ಣಿಯ ಹೆಸರಿನ ವೇದಿಕೆ ಹತ್ತಿಸಿ, ಮಹಾಕವಿಯ ಹೆಗಲಮೇಲೆ ಕೂಡಿಸಿ, ಸಾಹಿತ್ಯ ಜಗತ್ತಿಗೆ ನಾನು ಕಾಣುವಂತೆ ಅಕ್ಕರೆ ತೋರಿದವರಿಗೆಲ್ಲ ಸಾರ್ದ್ರ ಹೃದಯಳಾಗಿ ನಮಸ್ಕರಿಸುತ್ತೇನೆ.

ದಕ್ಷಿಣ ಕನ್ನಡ ಜಿಲ್ಲೆಯಂತೂ ಕರ್ನಾಟಕಕ್ಕೇ ಅಲ್ಲದೆ ಭಾರತಕ್ಕೂ ಜಗತ್ತಿಗೂ ಹಲವು ವಿಷಯಗಳಲ್ಲಿ ಮಾದರಿ. ಬಹು ಭಾಷೆಗಳವರು ಒಟ್ಟೊಟ್ಟಿಗೆ ನಗುನಗುತ್ತ ಸಾಮರಸ್ಯದಿಂದ ಬಾಳುವುದು ಸಾಧ್ಯವಿದೆ ಎಂಬ ಲಕ್ಷಣಕ್ಕೆ ಈ ಜಿಲ್ಲೆ ಲಕ್ಷ್ಯವಾಗಿದೆ. ಅನನ್ಯ ಯಕ್ಷಗಾನ ಕಲೆಯ ತಾಯಿನೆಲ ಆಗಿರುವುದಲ್ಲದೆ ಬ್ಯಾಂಕಿಂಗ್ ಮತ್ತು ಹೋಟೆಲ್ ಉದ್ಯಮಗಳಿಗೆ ಮೇಲ್ಪಂಕ್ತಿಯಾಗಿದೆ. ಇಲ್ಲಿನ ಧರ್ಮ ಸಮನ್ವಯ, ಹೊಸದರತ್ತ ತುಡಿಯುವಿಕೆ, ಸಾಹಸಕ್ಕಾಗಿ ದೂರ ದೂರದ ಊರು-ನಾಡುಗಳಿಗೆ ದಾಂಗುಡಿಯಿಡುವ ವಿಜಗೀಷು ಪ್ರವೃತ್ತಿ ಅನುಕರಣಯೋಗ್ಯವಾದುದು. ಮುಂಬಯಿಯಲ್ಲಿರುವ ಲಕ್ಷಾಂತರ ಕನ್ನಡಿಗರಲ್ಲಿ ಬಹುಪಾಲಿನವರು ತುಳುನಾಡಿನವರು. ಪರಮದೇವಕವಿಯ ತುರಂಗಭಾರತ ಮೊದಲು ಬೆಳಕು ಕಂಡಿದ್ದು ಅಲ್ಲಿ, ತೌಳವರ ನೆರವಿನಿಂದ. ಮುಂಬಯಿ ನಗರಸಭೆ ಬ್ರಿಟಿಷರಿಗೆ ಒಪ್ಪಿಸಿದ ಮಾನಪತ್ರ ಕನ್ನಡದಲ್ಲಿದ್ದುದಕ್ಕೆ ಕಾರಣ ಇಲ್ಲಿಂದ ಅಲ್ಲಿಗೆ ಹೋಗಿ ಹೆಸರು ಮಾಡಿದ ವೀರಾಭಿಮಾನಿ ತೌಳವರು.

ಬಹುಭಾಷೆಯ ಈ ನೆಲದಲ್ಲಿ ತುಳು ಹೆಚ್ಚು ಜನರ ತಾಯಿನುಡಿ, ಕೊಂಕಣಿ ಮಾತೃಭಾಷೆಯಾಗಿರುವ ಸಹಸ್ರಾರು ಜನರಿದ್ದಾರೆ. ಬ್ಯಾರಿಗಳಿದ್ದಾರೆ. ಮೋಯ ಮಾತಾಡುವವರಿದ್ದಾರೆ. ಹೀಗೆ ಮನೆಯ ಮಾತು ತುಳುವೊ ಕೊಂಕಣಿಯೊ ಮತ್ತೊಂದೊ ಇದ್ದರೂ ಈ ಜಿಲ್ಲೆಯ ಜನರು ಶಾಲೆಯಲ್ಲಿ ಓದುವುದು ಕಲಿಯುವುದು ಬರೆಯುವುದು. ಕನ್ನಡ ಭಾಷೆ. ಇವರೆಲ್ಲ ತಮ್ಮ ತುಳು ಅಥವಾ ಕೊಂಕಣಿಯಲ್ಲಿ ಪತ್ರ ಬರೆಯುವಾಗ ಬಳಸುವುದು. ಕನ್ನಡ ಲಿಪಿಯನ್ನು ಹೀಗೆ ಇಲ್ಲಿನ ಜನಪದರು ಭಾವಿಸುವುದು, ಬಾಳಿಸುವುದು ಕನ್ನಡವನ್ನು. ಮಾತೃಭಾಷೆಯಾದ ತುಳು, ಕೊಂಕಣಿಯನ್ನು ಉಳಿಸಿಕೊಂಡು ಕನ್ನಡದ ಮೇಲಾಳಿಕೆಯನ್ನು ಮಾನ್ಯಮಾಡಿದ ಇಂಥ ಹೃದಯ ಸಂಪನ್ನರ ಸಿರಿಗಂಧದ ನೆಲದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಅದರ ಕೇಂದ್ರದಲ್ಲಿ ನಿಲ್ಲುವ ಗೌರವ ಪ್ರಾಪ್ತಿಗಾಗಿ ಹರ್ಷಪುಳಕಿತಳಾಗಿದ್ದೇನೆ.

ಕನ್ನಡಕರ್ನಾಟಕ : ಒಳನಾಡು

ಕನ್ನಡ ನಿನ್ನೆ ಮೊನ್ನೆ ಹುಟ್ಟಿದ ಕೂಸುಕಂದಯ್ಯನಲ್ಲ. ಅದು ಎರಡೂವರೆ ಸಾವಿರ ವರ್ಷಗಳ ಸಾತ್ಯ, ಸತ್ವ ಮತ್ತು ಸತ್ಯ. ಅದರ ಬೆಳಕಿನಲ್ಲಿ ಕೋಟಿಕೋಟಿ ಕನ್ನಡಿಗರು ಬಾಳಿದ್ದಾರೆ. ಶತಮಾನಗಳ ಹಾಸಿನಲ್ಲಿ ರಾಜರು ಆಳಿದರು, ಸಾಹಿತ್ಯ ಕೃತಿಗಳು ಬೆಳಗಿದುವು. ಸಂಸ್ಕೃತ, ಪ್ರಾಕೃತಗಳ ಶ್ರೇಷ್ಠ ಕಾವ್ಯಗಳ ಸಾರಸಮಸ್ತವನ್ನೂ ಹೀರಿ ಸೂರೆ ಮಾಡಿ ಅದನ್ನು ಕನ್ನಡದ ಕಾಲುವೆಯಲ್ಲಿ ಹರಿಸಿದರು. (ಇದೇ ತತ್ವ ಇಂಗ್ಲಿಷ್ ಹಾಗೂ ಇತರ ವಿದೇಶೀಯ ಭಾಷೆಗಳಿಗೂ, ತಮಿಳು, ತೆಲುಗು, ಬಂಗಾಳಿ, ಮರಾಠಿ, ಹಿಂದಿ ಮೊದಲಾದ ದೇಶೀ ಭಾಷೆಗಳಿಗೂ ಅನ್ವಯವಾಗಬೇಕು). ಸಂಸ್ಕೃತ ಪ್ರಾಕೃತಗಳಿಗೆ ಕನ್ನಡ ಎಲ್ಲ ರೀತಿಯಲ್ಲೂ ಸರಿಸಮವೆಂದು ತೊರಿಸಿದ ಆದ್ಯರು ಶ್ರಮಣರು, ಶರಣರು, ದಾಸರು. ಅವರೆಲ್ಲ ಕನ್ನಡದಲ್ಲಿ ಭಾವಿಸಿ ಅನುಭವಿಸಿದರಲ್ಲದೆ ಕನ್ನಡಕ್ಕಿರುವ ಅಗಾಧ ಹಸಿವು, ಜೀರ್ಣಶಕ್ತಿ ಮತ್ತು ಅಸ್ಮಿತೆಯನ್ನು ತೋರಿಸಿದರು. ಕನ್ನಡದ ಮೂಲಕ ದುಃಖ ದುಮ್ಮಾನ ತೋಡಿಕೊಂಡರು, ಸುಖ ಸುಮ್ಮಾನ ಪಡೆದರು. ಮಾತೃಭಾಷೆಯನ್ನು ಸಂಪನ್ನಗೊಳಿಸಿದರು. ಕುತ್ತಿಗೆಯವರೆಗೆ ಬಂದ ಕುತ್ತಗಳಿಂದ ಕನ್ನಡವನ್ನು ಬದುಕಿಸಿದ ಮೃತ್ಯುಂಜಯರವರು. ಚಿರಂಜೀವ ಕೃತಿಗಳ ಅಮೃತ ಕಲಶ ತಂದ ವೈನತೇಯರವರು.

ಭಾಷೆಯ ಸಂರಚನೆಯಲ್ಲಿ ತರಬಹುದಾದ ಸುಧಾರಣೆಯ ದಿಕ್ಕಿನತ್ತ ಹೊರಟವರು ಸಹಜ ಪ್ರಕ್ರಿಯೆಯಿಂದ ಕೂಡಿದ ವ್ಯತ್ಯಾಸಗಳನ್ನು ಚಿಂತಿಸುವಾಗ ಮೂಲ ಬೇರು, ಬುಡ ಒಣಗದಂತೆ, ಅದರ ಪಸಿಮೆ ಇರುವಂಥೆ ನೋಡಿಕೊಳ್ಳುವುದೂ ಮುಖ್ಯವೆ. ಕನ್ನಡ ಭಾಷೆ ಯಾವತ್ತೂ ನಿಂತ ನೀರಾಗದೆ ಹರಿಯುವ ತೀರ್ಥವಾಗಿದೆ. ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಇಂಗ್ಲಿಷ್ ಶಬ್ದಗಳು ವಿಲೀನಗೊಳ್ಳುವ ಪ್ರಕ್ರಿಯೆ ದಟ್ಟವಾಗುತ್ತದೆ. ಕನ್ನಡದ ಕುಂದಣದಲ್ಲಿ ಅನೇಕ ಇಂಗ್ಲಿಷ್ ಹರಳುಗಳನ್ನು ಈಗಾಗಲೆ ಕೂಡಿಸಲಾಗಿದೆ. ಕನ್ನಡ ನಿಘಂಟಿನಲ್ಲಿ ಸಾವಿರಾರು ಇಂಗ್ಲಿಷ್ ಮಾತುಗಳು ಕೋದುಕೊಂಡಿವೆ. ಪ್ರಾಕೃತ ಮತ್ತು ಸಂಸ್ಕೃತ ಶಬ್ದಗಲು ಕನ್ನಡದಲ್ಲಿ ಹಾಸುಹೊಕ್ಕಾಗಿ ಬೆರೆಯುವ ಕಾರ್ಯ ಹತ್ತನೆಯ ಶತಮಾನದ ವೇಳೆಗೆ ಪೂರೈಸಿತ್ತು. ನಡುಗನ್ನಡದ ಕಾಲಘಟ್ಟದಲ್ಲಿ ಅರಬ್ಬಿ ಮತ್ತು ಪಾರಸಿ ಭಾಷೆಗಳ ಪ್ರಭಾವವನ್ನು ಕನ್ನಡ ಅರಗಿಸಿಕೊಂಡಿತು. ಕನ್ನಡ – ಇಂಗ್ಲಿಷ್ ಭಾಷಾಸಂಕರ ಇನ್ನೂರು ವರ್ಷಗಳಿಂಗ ಆಮವೇಗದಿಂದ ಆರಂಭವಾಗಿ ಇದೀಗ ಮೊದಲ ವೇಗ ಪಡೆಯುತ್ತಿದೆ. ಈ ಕನ್ನಡ ಇಂಗ್ಲಿಷ್ ಬೆರಸಿದಿ ‘ಕಂಗ್ಲಿಷ್’ ಬಳಕೆ ಹಳ್ಳಿಗಳವರೆಗೆ ದಾಂಗುಡಿಯಿಟ್ಟಿದೆ. ಅರಬ್ಬಿ, ಪಾರಸಿ, ಇಂಗ್ಲಿಷ್, ಹಿಂದಿ ಬೆರಸಿದಿ ‘ಹಿಂಗ್ಲಿಷ್’ ಬೇರೆ ಚಾಲ್ತಿಯಲ್ಲಿದೆ. ಇವೇನೂ ಗಾಬರಿಯ ವಿಷಯಗಳಲ್ಲ. ಭಾಷೆಯಲ್ಲಿ ಮಡಿವಂತಿಕೆಗೆ ಜಾಗವಿಲ್ಲ ಎಂಬುದು. ನಿತ್ಯದ ವ್ಯವಹಾರಕ್ಕೆ ಅನಿವಾರ್ಯವಾದ ಹೊಸ ಶಬ್ದಗಳು ಬರಲಿ. ಆದರೆ ಅನಗತ್ಯವಾಗಿ ಇದನ್ನು ಉತ್ತೇಜಿಸಬಾರದು, ನಮ್ಮಲ್ಲಿರುವ ಮಾತುಗಳನ್ನು ಮೂಲೆಗೊತ್ತಿ ಅನಗತ್ಯವಾಗಿ ಅನ್ಯಭಾಷೆಯ ಶಬ್ದಗಳನ್ನು ಬಳಸುವುದನ್ನು ಖಂಡಿಸಬೇಕು.

ಸಾಹಿತಿಗಳಲ್ಲದೆ ವಿಶೇಷವಾಗಿ ಜನಸಾಮಾನ್ಯರು ಕನ್ನಡವನ್ನು ಸಾವಿರಾರು ವರ್ಷಗಳಿಂದ ಸಲಹಿದ್ದಾರೆ. ಅವರ ಅಸೀಮ ಅಕ್ಕರೆಯಿಂದಾಗಿ ಇಂದಿಗೂ ಕನ್ನಡ ಕೋಟಿಕೋಟಿ ಜನರ ತಾಯ್ನುಡಿಯಾಗಿದೆ. ಜನಮನ ತನ್ನ ನಾಡು ನುಡಿ ಪ್ರೇಮವನ್ನೂ ನುಡಿಜಾಣರಿಗೆ ಹೆಚ್ಚಿನ ಮನ್ನಣೆಯನ್ನೂ ಬಗೆ ಬಗೆಯಲ್ಲಿ ಪ್ರಕಟಿಸಿದ್ಧರೆ. ಕುವೆಂಪು, ಬೇಂದ್ರೆ, ಮಾಸ್ತಿ, ವಿಸೀ ಮೊದಲಾದವರ ಹೆಸರುಗಳನ್ನು ಬಡಾವಣೆಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡಿದ್ದಾರೆ. ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಕನ್ನಡಿಗರ ಈ ಉತ್ಕಟ ನಾಡುನುಡಿ ಅಭಿಮಾನ, ನುಡಿಜಾಣರಿಗೆ ನಮನ ಅನನ್ಯವೆನಿಸುವಷ್ಟಿದೆ. ಕುರಿತೋದದ ಜನರೂ ಪರಂಪರೆಗೆ ಪ್ರಾಂಜಲವಾಗಿ, ಒಮ್ಮೊಮ್ಮೆ ಅತಿಭಾವುಕವೆನಿಸುವಷ್ಟು ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ.

ಕನ್ನಡಕ್ಕೆ ಸಾರ್ವಭೌಮಸ್ಥಾನ ಇರಬೇಕೆಂಬುದಕ್ಕೆ ಯಾವ ರಾಜಕೀಯ ಪಕ್ಷವೂ ವಿರೋಧವಾಗಿಲ್ಲ. ಕನ್ನಡವನ್ನು ಬಾಲವಾಡಿ ಮತ್ತು ಪ್ರಾಥಮಿಕ ಹಂತದಿಂದಲೇ ಗಟ್ಟಿಗೊಳಿಸಬೇಕೆಂಬುದನ್ನು ಉತ್ಪ್ರೇಕ್ಷಿಸಬೇಕಾಗಿಲ್ಲ. ಕನ್ನಡದ ಕಾಳುಗಳನ್ನು ಮಕ್ಕಳ ಮನಸ್ಸಿನ ಹೊಲದಲ್ಲಿ ಬಿತ್ತಬೇಕು. ಚಿಕ್ಕವರಿಗೆ ಪ್ರಾಮುಖ್ಯ ಕೊಡುವುದನ್ನು ರಾಷ್ಟ್ರಾಧ್ಯಕ್ಷರಾದ ಎ.ಪಿ.ಜೆ. ಅಬ್ದುಲ್ ಕಲಾಂರಿಂದ ಕಲಿಯಬೇಕು. ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡದಿಂದ ಕಿತ್ತು ಬೇರೆ ಕಡೆ ನಾಟಿ ಮಾಡಲಾಗುತ್ತಿದೆ. ಕಿರಿಯ ಪ್ರಾಥಮಿಕ ತರಗತಿಯಿಂದ ಕನ್ನಡ ಪಠ್ಯ ಕಡ್ಡಾಯವಾಗುವುದು ಸಮಂಜಸವಾದ ನಿರ್ಧಾರ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಂತೂ ಇದು ಅತ್ಯಗತ್ಯ. ಕನ್ನಡ ಕಲಿಕೆ ಕಡ್ಡಾಯವಾಗುವುದರೊಂದಿಗೆ ಅದನ್ನು ಕಾಟಾಚಾರವಾಗಿ ಕಲಿಸಿದಂತೆ ಕಣ್ಣೊರಸುವುದಾಗಬಾರದು.

ಕನ್ನಡ ಕಲಿಸದಿದ್ದರೆ ಎಲ್ಲ ಕಾನ್ವೆಂಟುಗಳನ್ನೂ ಇಂಗ್ಲಿಷ್ ಮಾಧ್ಯಮಶಾಲೆಗಳನ್ನೂ ಸರ್ಕಾರ ತಕ್ಷಣ ರಾಷ್ಟ್ರೀಕರಣಗೊಳಿಸಿ ತನ್ನ ಆಡಳಿತ ಕಕ್ಷೆಗೆ ತೆಗೆದುಕೊಳ್ಳುವುದು ಸೂಕ್ತ. ಕನ್ನಡ ಶಾಲೆಗಳ ಸ್ಥಿತಿಗತಿ ಆಮೂಲಾಗ್ರವಾಗಿ ಸುಧಾರಣೆಯಾಗುವ ಜರೂರಿದೆ. ವಿದ್ಯೆ ಇಂದು ವಾಣಿಜ್ಯವಾಗಿದೆ. ಸಂಪಾದನೆಗೆಂದು ಹೋಟೆಲೊ ಅಂಗಡಿಯೊ ಕಲ್ಯಾಣಮಂಟಪವೊ ಪ್ರಾರಂಭ ಮಾಡುವುದಕ್ಕಿಂತ ಇಂಗ್ಲಿಷ್ ಮಾಧ್ಯಮಶಾಲೆ ತೆರೆಯುವುದು ಧಿಡೀರ್ ಧನಾಢ್ಯತೆಗೆ ರಾಜಮಾರ್ಗ. ಅದರಿಂದ ಅಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಸುಲಭವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕನ್ನಡಶಾಲೆಗಳ ದುಸ್ಥಿತಿ ಕಣ್ಣಿಗೆ ಬಡಿಯುತ್ತದೆ. ಈ ದುರವಸ್ಥೆಯನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ ಇಂಗ್ಲಿಷ್ ಶಾಲೆಗಳಿಗಿಂತ ಕನ್ನಡ ಶಾಲೆಗಳು ಶುಭ್ರವಾಗಿದ್ದು ಸಮವಸ್ತ್ರವೂ ಜಾರಿಗೆ ಬರಲಿ ಎಂಬುದು ಕನ್ನಡಪರ ಚಿಂತಕರ ಅಪೇಕ್ಷೆ.

ಬಾಲವಾಡಿಯಿಂದ ಸ್ನಾತಕೋತ್ತರದವರೆಗೆ, ಅಡಿಯಿಂದ ಹಿಡಿದು ಮುಡಿಯತನಕ ಇಂಗ್ಲಿಷ್ ಮಾಧ್ಯಮದ್ದೇ ದರಬಾರು. ‘ತುರ್ತುನಿಗಾ ಕೊಡಬೇಕಾದ ಆಲಯ’ದೊಳಗೆ ದೂಡಿರುವ ಕನ್ನಡ ಮಾಧ್ಯಮಕ್ಕೆ ಆಮ್ಲಜನಕವಿತ್ತು ಉಳಿಸಬೇಕಾಗಿ ಬಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಆಳುತ್ತಿದ್ದಾಗ ಕನ್ನಡಕ್ಕೆ ಇದ್ದ ಶೈಕ್ಷಣಿಕ ಸ್ಥಾನ ಮನ್ನಣೆ, ನಮ್ಮವರೇ ಆಳುವ ಸಂದರ್ಭದಲ್ಲಿ ತಪ್ಪಿಹೋಗಿರುವುದು ವಿಪರ್ಯಾಸ.

ಇಂಗ್ಲಿಷ್ ಎಂಬುದು ಅಧಿಕಾರ, ಘನತೆ, ಗೌರವ, ಮನ್ನಣೆ, ಪ್ರತಿಷ್ಠೆ ಹಾಗೂ ಪ್ರಚಾರ ಇರುವ ಹಾಗೂ ಹೆರುವ ಭಾಷೆಯೆಂಬ ಪ್ರತೀತಿ ಪ್ರಬಲವಾಗಿ ಹಬ್ಬಿದೆ. ಕನ್ನಡಕ್ಕೆ ಕೀಳರಿಮೆ ಅಂಟಿಕೊಂಡಿದೆ. ಇದು ಸರಿದೂಗಬೇಕಾದರೆ ಇರುವ ದಾರಿ ಒಮದೇ, ಇಂಗ್ಲಿಷಿನ ಸ್ಥಾನಮಾನವನ್ನು ಕನ್ನಡವೂ ಕರ್ನಾಟಕದಲ್ಲಿ ಪಡೆಯಬೇಕು. ಕನ್ನಡವನ್ನು ಪುಷ್ಟವಾಗಿಸುವ ಸಬಲೀಕರಣದ ಕೆಲಸ ನಮ್ಮಿಂದಲೇ ಆಗಬೇಕು. ಮಕ್ಕಳಿಗಿಂತ ಹೆಚ್ಚಾಗಿ ತಾಯಿತಂದೆ ನೆಂಟರು ಇಂಗ್ಲಿಷನ್ನು ಧ್ಯಾನಿಸುತ್ತಾರೆ. ಇಂಗ್ಲಿಷಿಗೆ ಅಧಿಕಾರರೂಢರ ಕುಮ್ಮಕ್ಕಿನೊಂದಿಗೆ ಬಂಡವಾಳಶಾಹಿಗಳ ಬೆಂಬಲವಿದೆ. ದೇಸೀಯ ಸಂಸ್ಕೃತಿಯ ಬುಡಕ್ಕೆ ಸಿಡಿಲು ಬಡಿಯಲು ಬಿಡಬಾರದು. ಇಂಗ್ಲಿಷು ವಸಾಹತುಶಾಹಿಯ ಪರಿಣಾಮವಾಗಿ ತಲೆಯೆತ್ತಿತ್ತು. ಇಂಗ್ಲಿಷನ್ನು ನಿರಾಕರಿಸುವುದು ಸಾಧುವಲ್ಲ, ಸಾಧ್ಯವಿಲ್ಲ. ಜ್ಞಾನದ ಆ ಕಿಟಕಿಯನ್ನು ಮುಚ್ಚಬೇಕಾಗಿಲ್ಲ. ಸಾಹಿತ್ಯ ಎಲ್ಲರಿಗೂ ಅಲ್ಲ ಎಂದು ಸರ್ವಜ್ಞ ಹೇಳಿದ ಹಾಗೆ, ಇಂಗ್ಲಿಷು ಎಲ್ಲರಿಗೂ ಅಲ್ಲ. ಅದು ಕೆಲವರಿಗಷ್ಟೇ ಬೇಕು. ಆ ಕೆಲವರಿಗಾಗಿ ಕೋಟ್ಯಂತರರು ಗೊಬ್ಬರವಾಗಬೇಕಾಗಿಲ್ಲ. ಕನ್ನಡವನ್ನು ಬಿಡದೆ ಇಂಗ್ಲಿಷ್ ಶಿಕ್ಷಣ ಬಯಸುವವರು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಎಲ್ಲ ಪರ್ಯಾಯ ಅನುಕೂಲಗಳಿರಲಿ.

ಬಹು ಭಾಷೆಗಳ ಭಾರತದಲ್ಲಿ ಶಿಷ್ಟ, ಪ್ರತಿಷ್ಠಿತ ಎಂದು ಮಾನ್ಯತೆ ಪಡೆದ ಸಾಹಿತ್ಯಕ ಭಾಷೆಗಳು ಸಾಕಷ್ಟಿವೆ. ಕೇಂದ್ರ ಸಹಿತ್ಯ ಅಕಾಡೆಮಿ ಡೋಗ್ರಿ, ಮೈಥಿಲೀ, ರಾಜಸ್ಥಾನಿ ಮತ್ತು ಸಿಂಧಿ ಭಾಷೆಗಳೂ ಸೇರಿ ೨೨ ಭಾಷೆಗಳಿಗೆ ಮಣೆಹಾಸಿದೆ. ಭಾರತದ ಯಾವೊಂದು ಅಧಿಕೃತ ಮನ್ನಣೆ ಪಡೆದ ಭಾಷೆಯಲ್ಲಿ ಬರೆದರೂ ಲೇಖಕರು ಪ್ರಾದೇಶಿಕರಾಗಿ ಪರಿಣಿತರಾಗುತ್ತಾರೆ. ಪ್ರಾದೇಶಿಕ ಪ್ರಗತಿಗೆ ಕೊಡುವ ಆದ್ಯತೆ ಅರಾಷ್ಟ್ರೀಯವಲ್ಲ. ವಿಚಿತ್ರವೆಂದರೆ ಯುರೋಪು ರಾಷ್ಟ್ರಗಳಲ್ಲಿ ವ್ಯವಹಾರದಲ್ಲಿರುವ, ನಮಗಿಂತ ಬಹಳ ಕಡಿಮೆ ಸಂಖ್ಯೆಯ ಜನರಾಡುವ ಭಾಷೆಯಲ್ಲಿ ಬರೆದರೂ “ರಾಷ್ಟ್ರೀಯ ಲೇಖಕ’ರೆಂಬ ಮಾನ್ಯತೆಗಳಿಸುತ್ತಾರೆ. ಹಿಂದಿಯಲ್ಲಿ ಬರೆದವರಿಗೆ ಸಿಗುವ ಪ್ರಸಾರ-ಪ್ರಚಾರ ಹಿಂದಿಯೇತರ ಭಾರತೀಯ ಭಾಷೆಗಳವರಿಗೂ ಸಿಗಬೇಕು. ಇನ್ನೂ ವಿರೋಧಾಭಾಸವೆಂದರೆ, ಭಾರತದಲ್ಲಿಯು, ಕೇವಲ ಶೇಕಡಾ ಇಬ್ಬರು ಮಾತಾಡುವ ಇಂಗ್ಲಿಷ್ ಭಾಷೆಯಲ್ಲಿ ಬರೆದವರಿಗೆ ಬಹುದೂರದವರೆಗೆ, ಭಾರತಬೇ ಅಲ್ಲದೆ ಅದರ ಆಚೆಗೂ ಚಾಚಿಕೊಳ್ಳುವ ಅವಕಾಶವಿದೆ. ಇದು ಇಂದು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಬರೆಹಗಾರರಗಿಗೆ ಇರುವ ವ್ಯಾಪ್ತಿಯ ಮಿತಿ ಮತ್ತು ಸವಾಲು. ಲೇಖಕರು, ಅದರಲ್ಲಿಯೂ ಲೇಖಕಿಯರು, ಈ ಪ್ರಸಾ(ಚಾ)ರ ಪ್ರವಾಹದ ಎದುರು ಈಜಿ, ದಾಟಿ “ರಾಷ್ಟ್ರೀಯ ಭಾಷೆ”, “ರಾಷ್ಟ್ರೀಯ ಸಾಹಿತಿ” ಎಂಬ ಎರಡು ಮಿಥ್ ಗಳನ್ನು ಮೀರಬೇಕಾದ ದೊಡ್ಡ ಸವಾಲಿದೆ.

ಕನ್ನಡ : ಗಡಿನಾಡು, ಹೊರನಾಡು

ಕನ್ನಡನಾಡು ಎಂದು ಹೇಳಿದಾಗ ಅದು ಬರಿಯ ಭೌತಿಕ ಜಗತ್ತಲ್ಲ. ಕನ್ನಡ ಎನ್ನುವುದು ಐದುಕೋಟಿ ಕನ್ನಡಿಗರ ಭಾವಪ್ರಪಂಚ. ಭಾವಜಗತ್ತಿನ ಮುಂದೆ ಮೂರುಲೋಕ ಕೂಡ ಹುಲ್ಲು ಕಡ್ಡಿ. ಹೊರನಾಡ ಕನ್ನಡಿಗರ ಕಡೆ ನಿಗಾ ಇರುವುದು ಅವಶ್ಯಕ. ಮಹಾರಾಷ್ಟ್ರದಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ದೆಹಲಿಯಲ್ಲಿ ಇರುವಂತೆ ಮುಂಬಬಯಿಯಲ್ಲಿಯೂ ಕರ್ನಾಟಕ ಸರಕಾರದ ಒಡೆತನವಿರುವ ಒಂದು ಕನ್ನಡ ಭವನ ಅವಶ್ಯವಿದೆ. ಒಳನಾಡಿನ ಚಟುವಟಿಕೆಯೊಂದಿಗೆ ಸಾಂಸ್ಕೃತಿಕ ಸಂಪರ್ಕ ಸದಾ ಜೀವಂತವಾಗಿದ್ದರೆ ಅಲ್ಲಿ ಕನ್ನಡ ಬಳಗ ಬಾಡುವುದಿಲ್ಲ. ಒಂದು ಕಾಲಕ್ಕೆ ಕನ್ನಡ ಶಾಲೆಗಳು ಮುಂಬಯಿಯಲ್ಲಿ ನೂರಾರಿದ್ದುವು. ಈಗಲೂ ಮುಂಬಯಿಯ ನಗರಪಾಲಿಕೆ ನೆರವಿನಿಂದ ೬೩ ಕನ್ನಡ ಶಾಲೆಗಳು ನಡೆಯುತ್ತಿವೆ. ಆದರೆ ಭಾರತದ ಎಲ್ಲ ಪ್ರಾಂತಗಳಂತೆ ಇಲ್ಲಿಯೂ ಇಂಗ್ಲಿಷ್ ಶಾಲೆಗಳು ಹಬ್ಬುತ್ತು ಕನ್ನಡ ಶಾಲೆಗಳನ್ನು ಕಬಳಿಸುತ್ತಿವೆ. ಗೋವಾದಲ್ಲಿ ಇಂದಿಗೂ ಕನ್ನಡ ಶಾಲೆಗಳಿವೆಯಾದರೂ ಅವರಿಗೆ ಬೇಕಾದ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಕನ್ನಡ ಪಠ್ಯಗಳನ್ನು ಉಚಿತವಾಗಿ ಪೂರೈಸುವ ಮೂಲಕ ಅಲ್ಲಿ ಕನ್ನಡದ ಕಲಿಕೆ ಬತ್ತದಂತೆ ನಿಲ್ಲಿಸಬಹುದು. ಮುಂಬಯಿ, ಕಾಸರಗೋಡು ಕನ್ನಡಿಗರ ಪ್ರತಿನಿಧಿಗಳು, ಸಾಹಿತ್ಯ ಪರಿಷತ್ತಿನಲ್ಲಿದ್ದಾರೆ. ಇದರಂತೆ ಎಲ್ಲ ಅಕಾಡೆಮಿಗಳಲ್ಲಿಯೂ ಒಬ್ಬೊಬ್ಬರು ಸದಸ್ಯರು ಇರುವುದು ಸೂಕ್ತ. ಗೋವಾಕ್ಕೂ ಒಂದು ಪ್ರಾತಿನಿಧ್ಯವಿರಲಿ. ಸಾಂಸ್ಕೃತಿಕ ಪರಂಪರೆಯ ಬೇರುಗಳ ಪಸಿಮೆ ಒಣಗದೆ ಇರಬೇಕಾದರೆ ಇಲ್ಲಿಂದ ಗೊಬ್ಬರ ನೀರು ಸರಬರಾಜು ನಿಲ್ಲಬಾರದು. ತೇವ ಇದ್ದರೆ ಜೀವ ಉಸಿರಾಡುತ್ತಿರುತ್ತದೆ.

ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕೆ ಆದ್ಯತೆ ಕೊಡುವ ನೆಲೆಯಲ್ಲೇ ಹೊರನಾಡ ಕನ್ನಡಿಗರೂ ಸೂಕ್ತ ಪ್ರಾತಿನಿಧ್ಯ ಇರಬೇಕೆಂಬುದನ್ನು ಮರೆಯುವಂತಿಲ್ಲ. ಮುಂಬಯಿ, ಮದರಾಸು, ಕಾಸರಗೋಡು, ಮದುರೈ, ಹೈದರಾಬಾದು ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಎಂ.ಎಂ., ಎಂ.ಫಿಲ್., ಪಿ.ಎಚ್.ಡಿ. ಓದುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ಹತ್ತು ಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿವೇತನ ಕೊಟ್ಟು ಅಲ್ಲಿ ಕನ್ನಡ ಕಲಿಯಲೂ ಕಲಿಸಲೂ ಕಾಲೂರಿ ನಿಲ್ಲಲು ಅನುವು ಮಾಡುವುದು ಒಳ್ಳೆಯದು. ಗಡಿಯ ಎಡೆಗಳಲ್ಲೂ ಈ ಹೊರನಾಡುಗಳಲ್ಲೂ  ಕನ್ನಡದ ಸೊಲ್ಲೂ ಸೊಗಡೂ ಸೂಸುವ ಹಾಗೆ ತಿಂಗಳಿಗೊಂದು ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಕಾಡೆಮಿಗಳ ಮೂಲಕ ಏರ್ಪಡಿಸುವುದು ಸೂಕ್ತ.

ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ಹಳ್ಳಿಯಲ್ಲಿ ವರ್ಷದುದ್ದಕ್ಕೂ ಮಿಡಿಯುವ ಕನ್ನಡ ನಾಡಿಯ ಸ್ಪಂದನ ಅನುಕರಣೀಯ ಯೋಗ್ಯವಾಗಿದೆ. ವಾಸ್ತವವಾಗಿ ಭಾಷೆಯ ಪ್ರೇಮ ಇನ್ನೂ ಬಲವಾಗಿ ಉಳಿದಿರುವುದು ಹಳ್ಳಿಗಳಲ್ಲೇ. ಅದರಿಂದ ಹೊಸ ಉಪಕ್ರಮಗಳು ಹಳ್ಳಿಯಿಂದಲೇ ಆರಂಭವಾಗಬೇಕು, ಪಟ್ಟಣಗಳು ಅದಕ್ಕೆ ಸ್ಪಂದಿಸಿ ಅನುರಣಿಸಲಿ. ಸಿಗರೇಟು ಪ್ಯಾಕುಗಳ ಮೇಲೆ ಸಣ್ಣಕ್ಷರಗಳಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಮುದ್ರಿಸಿದಂತಾಗಬಾರದು ‘ಕನ್ನಡ ಉಳಿಸಿ, ಕನ್ನಡ ಬಳಸಿ, ಎಂಬ ಗೋಡೆ ಬರಹ, ಕನ್ನಡ ರಾಜ್ಯೋತ್ಸವ ನವೆಂಬರೋತ್ಸವ ಮಾತ್ರ ಆಗದೆ ವರ್ಷವಿಡೀ ಆಚರಣೆಯಲ್ಲಿರುವ ನಿತ್ಯೋತ್ಸವವೆನಿಸುವತ್ತ ಅಣಿಯಾಗಲಿ, ಸಮಗ್ರ ಕರ್ನಾಟಕವೇ ಕನ್ನಡಗಿರ ಆಶೋತ್ತರಗಳ ವೇದಿಕೆಯಾಗಲಿ, ಕನ್ನಡಿಗರು ಅಭಿಮಾನಶೂನ್ಯರಾಗದಿರಲಿ ಎಂಬುದು ಅಂತರಂಗದ ಮಾತಾದರೆ ಅದಕ್ಕೆ ಪುಷ್ಟಿ ಬರುತ್ತದೆ.

ಭಾಷಾವಾರು ಪ್ರಾಂತ್ಯ ರಚನೆಯಿಂದ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಕರ್ನಾಟಕದ ಏಕೀಕರಣವಾಗಿ ನಮಗೆ ಬರಬೇಕಾದ ನೆಲವೆಲ್ಲ ಒಂದು ಆಡಳಿತದ ಕೆಳಗೆ ಬಂದಿದೆ ಎಂದಲ್ಲ ನಮಗೆ ಸೇರಬೇಕಾದ ಎಷ್ಟೋ ಭೂಮಿ, ಊರು ಕೇರಿ ಇನ್ನೂ ನೆರೆರಾಜ್ಯಗಳಲ್ಲಿ ಉಳಿದಿದೆ. ಏಕೀಕರಣಾನಂತರದ ಕರ್ನಾಟಕದಲ್ಲಿ ಅನ್ಯಭಾಷೆಗಳ ಪ್ರಾಬಲ್ಯ, ಪ್ರತಿಷ್ಠೆ, ಸವಲತ್ತು, ಶಿಕ್ಷಣನುಕೂಲ ತಗ್ಗಿಲ್ಲ. ಆದರೆ ಕರ್ನಾಟಕದ ಪಕ್ಕದ ಪ್ರಾಂತ್ಯಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿ ದಯನೀಯವಾಗಿದೆ. ಹಿಂದೆ ಇದ್ದುದಕ್ಕಿಂತ ಶೇಕಡಾ ಎಪ್ಪತ್ತೈದರಷ್ಟು ಕಡಿಮೆಯಾಗಿದೆ. ಕನ್ನಡ ಶಾಲಾ ಕಾಲೇಜುಗಳೂ, ಕನ್ನಡ ಶಿಕ್ಷಕರೂ ತಮಿಳುನಾಡು, ಆಂಧ್ರ ಮತ್ತು ಕೇರಳದಲ್ಲಿ ನಾಲ್ಕನೆಯ ಒಂದು ಭಾಗಕ್ಕೆ ಕುಗ್ಗಿದೆ. ಇಷ್ಟೆಲ್ಲ ಹೊಡೆತ ತಿಂದರೂ ಕನ್ನಡ ಮಾತ್ರ ತುಟಿಪಿಟಿಕ್ ಎನ್ನದೆ ತೆಪ್ಪಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರ್ನಾಟಕದಲ್ಲಿ ಅನುಕೂಲಗಳು ಅಧಿಕವಿದ್ದೂ ಹೊರಭಾಷೆಗಳವರು ಆಗಾಗ ಅನ್ಯಾಯವಾಗಿದೆಯೆಂದು ಬೊಬ್ಬೆ ಹಾಕುತ್ತಿದ್ದಾರೆ. ಬಾಯಿದ್ದವರು ಬರಗಾಲದಲ್ಲಿಯೂ ಬದುಕುತ್ತಾರೆ. ಸುಭಿಕ್ಷದಲ್ಲೂ ವಿಜೃಂಭಿಸುತ್ತಾರೆ. ಇಂದು ನಮ್ಮ ಯಾವ ಜಿಲ್ಲೆಯೂ ಶುದ್ಧ ಕನ್ನಡ ಜಿಲ್ಲೆಯಾಗಿ ಉಳಿದಿಲ್ಲ. ಈ ಉದಾಸೀನ ಪ್ರವೃತ್ತಿ ಹಿಗೆಯೇ ಮುಂದುವರಿದರೆ ನಮ್ಮ ಜೀವಿತ ಕಾಲದಲ್ಲಿಯೇ ಕನ್ನಡ ಕಣ್ಮರೆಯಾಗಬಹುದೆಂಬ ಭೀತಿ ಬಂದಿದೆ. ಗಡಿಗಳೆಡೆಯಲ್ಲಿ ಕಟ್ಟೆಚ್ಚರ ಸಡಿಲವಾಗಿದೆ. ಕೊಳ್ಳೆಗಾಲ ತಾಲೂಕಿಗೆ ಸೇರಿದ ೧೮೦೦ ಎಕರೆ ಭೂಮಿಯನ್ನು ತಮಿಳುನಾಡು ಒತ್ತರಿಸಿದೆಯೆಂದು ಗುಂಡ್ಲುಪೇಟೆ ಶಾಸಕರು ಶಾಸನಸಭೆಯಲ್ಲಿ ಪ್ರಸ್ತಾಪಿಸಿದ ವರದಿ ಗಾಬರಿ ತರುತ್ತದೆ. ಈ ವಿಚಾರದಲ್ಲಿ ನಿಜಾಂಶ ಏನು, ಕರ್ನಾಟಕ ಸರ್ಕಾರ ಕೈಗೊಂಡ ಕ್ರಮವೇನು ತಿಳಿಯದು. ಇಂತಹುದು ಆಗಬಾರದು ಮತ್ತು ಇದು ಮರುಕಳಿಸಬಾರದು.

ಕೇರಳ ಸರಕಾರ ಯಾವುದೇ ರೀತಿಯಲ್ಲಿ ಕಾಸರಗೋಡಿನ ಕನ್ನಡತನವನ್ನು ನಿರ್ವೀರ್ಯಗೊಳಿಸುತ್ತ ಕ್ರಮೇಣ ಕೊಲ್ಲದಂತೆ ನಿಗಾವಹಿಸಬೆಕಾದ ಅನಿವಾರ್ಯ ಬಂದಿದೆ. ಅಲ್ಲಿನ ಕನ್ನಡವೆಂದಾಗ ಕೇವಲ ಕನ್ನಡ ಭಾಷೆಯಷ್ಟೇ ಅಲ್ಲ. ಅವರೊಂದಿಗೆ ಅವಿಭಾಜ್ಯವಾಗಿ ಬೆಸೆದ ಇತಿಹಾಸ, ಕೋಟೆಕೊತ್ತಲ, ಯಕ್ಷಗಾನ, ಜಾನಪದ, ಪರಂಪರೆ, ಸಾಹಿತ್ಯ ಸಂಸ್ಕೃತಿಯೂ ಸಂರಕ್ಷಿಸಲ್ಪಡಬೇಕು. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಕಲ್ಪಿತವಾದ ಸವಲತ್ತುಗಳೂ ಕಾಸರಗೋಡು ಜಿಲ್ಲಾದ್ಯಂತ ಹಾಗೂ ಕೇರಳದ ಎಲ್ಲ ಕನ್ನಡಿಗರಿಗೂ ಸಿಗಬೇಕು. ಕಾಸರಗೋಡು ಜಿಲ್ಲೆ ಇಡಿಯಾಗಿ ಕನ್ನಡ ನಾಡಿನೊಂದಿಗೆ ಕೂಡಲಸಂಗಮವಾಗುವವರಿಗೆ ಈ ಎಲ್ಲ ಹಕ್ಕೊತ್ತಾಯ ಮಂಜೂರು ಮಾಡಲು ನಾನು ಆಗ್ರಹಪಡಿಸುತ್ತೇನೆ. ಅಲ್ಲಿನ ಕನ್ನಡ ಶಾಲೆಗಳು ಒಣಗದಂತೆ, ದುರ್ಬಲಗೊಳ್ಳದೆ ಚೈತನ್ಯದಿಂದ ಇರುವಂತೆ ಮಾಡುವ ಜವಾಬ್ದಾರಿ ಎರಡೂ ಸರಕಾರಗಳ ಮೇಲಿದೆ. ಕೇರಳದ ಮಲೆಯಾಳ ಮಾತಾಡುವ ಲಕ್ಷಾಂತರ ಪ್ರಜೆಗಳು ಕರ್ನಾಟಕದ ದೊಡ್ಡ ಕೊಡೆಯ ಅಡಿಯಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆಂಬ ಸಂಗತಿಯನ್ನು ಕೇರಳ ಸರ್ಕಾರ ಮರೆಯಬಾರೆಂಬುದನ್ನು ರಾಜಕೀಯ ಭಾಷೆಯ ನೆಲೆಯಲ್ಲಿ ಜ್ಞಾಪಿಸ ಬಯಸುತ್ತೇನೆ.

ಇದೇ ನೆಲೆಯ ಮಾತು ಮಹಾರಾಷ್ಟ್ರ ಸರಕಾರಕ್ಕೂ ಅನ್ವಯಿಸುತ್ತದೆ. ಮುಂಬಯಿಯಲ್ಲಿ ಹಾಗೂ ಇಡೀ ಮಹಾರಾಷ್ಟ್ರದಲ್ಲಿ ಕನ್ನಡಿಗರು ಎಂದೂ ಒಂದು ಭಾಷಾದ್ವೀಪವಾಗಿ ಪ್ರತ್ಯೇಕ ಹಕ್ಕೊತ್ತಾಯಗಳನ್ನು ಮುಂದಿಟ್ಟಿಲ್ಲ. ಅದರ ಬದಲು ಕನ್ನಡಿಗರು ಆ ರಾಜ್ಯದ ಮುಖ್ಯವಾಹಿನಿಯಲ್ಲಿ ವಿಲೀನವಾಗಿದ್ದಾರೆ. ಹೀಗಿದ್ದೂ ಅವರ ಮೇಲೆ ಆಗಾಗ ವಿನಾಕಾರಣ ಕಾಲುಕೆರೆದು ಹಲ್ಲೆ ಮಾಡುವುದು ನಿಲ್ಲಬೇಕು. ಬೆಳಗಾವಿ ಮಹಾನಗರದಲ್ಲೂ ಅದರ ಗಡಿಗಳಲ್ಲೂ ತಂಟೆ ತಕರಾರು ತೆಗೆದು ಗಲಾಟೆ ಮಾಡುವುದು ನಿಂತಿಲ್ಲ. ಇದು ಅವರ ತಪ್ಪೋ ಅಥವಾ ಅವರು ನಿಂತ ನೆಲದ ತಪ್ಪೊ ಎಂದು ಯೋಚಿಸುವಂತಿದೆ. ಇದಕ್ಕೆ ಇರುವ ಪರಿಹಾರ ಮಹಾಮಾರ್ಗವೆಂದರೆ ಮಹಾಜನ ವರದಿಯೇ ಐತೀರ್ಪೆಂದು ತಲೆಬಾಗುವುದು. ಅದು ಜಾರಿಗೆ ಬರುವವರೆಗೆ ಈಗ ಇರುವ ವ್ಯವಸ್ಥೆಯಲ್ಲಿ ಸೌಹಾರ್ದವನ್ನು ಕಲಕಿ ರಾಡಿಗೊಳಿಸದೆ ಒಟ್ಟಿಗೆ ಬಾಳುವುದು ಮುಖ್ಯ. ಮಹಾಜನ ವರದಿಯನ್ನು ಮತ್ತೆ ತಿರುಚುವ, ತೆರೆಯುವ ಪ್ರಶ್ನೆಯೇ ಇಲ್ಲ. ಒಂದು ರೂಪಕದ ಮೂಲಕ ಇದರ ಸೂಕ್ಷ್ಮವನ್ನು ಅನಾವರಣಗೊಳಿಸುತ್ತೇನೆ. ಒಬ್ಬ ಶಾಲಾ ಅಧ್ಯಾಪಕರಿಗೆ ಇಬ್ಬರು ಮಕ್ಕಳಿದ್ದರು. ಆ ಅಧ್ಯಾಪಕರು ಕರ್ನಾಟಕದಲ್ಲಿದಾಗ ಒಬ್ಬ ಮಗ ಹುಟ್ಟಿದ, ಮಹಾರಾಷ್ಟ್ರದಲ್ಲಿ ಇದ್ದಾಗ ಇನ್ನೊಬ್ಬ ಮಗ ಹುಟ್ಟಿದ. ಕರ್ನಾಟಕದಲ್ಲಿ ಹುಟ್ಟಿದ ಮಗನಿಗೆ ಎಷ್ಟು ಕೊಟ್ಟರೆ ಅಷ್ಟಕ್ಕೆ ತೃಪ್ತನಾಗುತ್ತಿದ್ದ್ದ. ಆದರೆ ಮಹಾರಾಷ್ಟ್ರದಲ್ಲಿ ಹುಟ್ಟಿದವನಿಗೆ ಎಷ್ಟು ಕೊಟ್ಟರೂ ತೃಪ್ತನಾಗದೆ ಅದು ಬೇಕು, ಇದು ಬೇಕು, ಇನ್ನೂ ಬೇಕು ಎಂದು ರಂಪ ಮಾಡುತ್ತಿದ್ದ. ಮಹಾಜನ ವರದಿಯ ಸಂಬಂಧದಲ್ಲಿಯೂ ಇದೇ ಬಗೆಯ ಗದ್ದಲ ಮಾಡುತ್ತಿರುವವರು ಯಾರು ಮತ್ತು ಯಾಕೆ ಎಂದು ನಾನು ವಿಸ್ತರಿಸುವುದು ಅನಗತ್ಯ. ಇಷ್ಟು ಮಾತ್ರ ನಿಜ. ಭಗವಂತ ಬಂದರೂ ಬೆಳಗಾವಿಯನ್ನು ಕನ್ನಡಿಗರಿಗೆ ಒಪ್ಪಿಸುತ್ತಾನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದು ಸತ್ಯಸ್ಯ ಸತ್ಯ.

ಕರ್ನಾಟಕದ ಏಕೀಕರಣವನ್ನು ೧.೧೧.೧೯೫೯ರಂದು ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದರು ಅಧಿಕೃತವಾಗಿ ಉದ್ಘಾಟಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ. ಜಯಚಾಮರಾಜ ಒಡೆಯರ್, ಎಸ್. ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ ಮೊದಲಾದ ನಾಡಿನ ಗಣ್ಯರು ಮತ್ತು ಸಹಸ್ರ ಸಹಸ್ರ ಸಂಖ್ಯೆಯ ಕನ್ನಡಿಗರು ಭಾಗವಹಿಸಿದ ಮರೆಯಲಾಗದ ಮಹತ್ವದ ಸಮಾರಂಭ ಅದು. ಆ ಐತಿಹಾಸಿಕ ಘಟನೆಯ ನೆನಪಿಗಾಗಿ ಇದುವರೆಗೆ ಏನೊಂದೂ ಸ್ಮಾರಕ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದ ಬಳಿ ನಿರ್ಮಾಣವಾಗಿಲ್ಲ. ಕನ್ನಡ ನಾಡಿನ ಇತಿಹಾಸದಲ್ಲಿ ಅಪೂರ್ವ ಕ್ಷಣವನ್ನು ಕಂಡ ಜಾಗದಲ್ಲಿ ಸೂಕ್ತ ಸ್ಮಾರಕ ಇರಬೇಕಾದ ಅಗತ್ಯ ಮತ್ತು ಮಹತ್ವವನ್ನು ಹೆಚ್ಚು ವಿಸ್ತರಿಸಿ, ಉತ್ಪ್ರೇಕ್ಷಿಸಿ ಹೇಳುವ ಅಗತ್ಯವಿಲ್ಲ. ಈ ಕೆಲಸಕ್ಕೆ ಸರ್ಕಾರ ಕೂಡಲೆ ಗಮನ ಕೊಡಬೇಕೆಂದು ಒತ್ತಾಯಿಸುತ್ತೇನೆ.

ಒಟ್ಟು ಕನ್ನಡಿಗರಲ್ಲಿ ದೇಸೀ ಕನ್ನಡಿಗರು ವಿದೇಶೀ ಕನ್ನಡಿಗರಿಗೆ ಬೆಂಬಲಿಗರೆಂಬುದಕ್ಕೆ ಅರೆಕೊರೆ ಇರಬಾರದು. ಒಳನಾಡು ಕನ್ನಡಿಗರಿಗೆ ಇರುವ ಪ್ರಮಾಣದಲ್ಲಿ ಹೊರನಾಡು ಕನ್ನಡಿಗರಿಗೆ ಸವಲತ್ತುಗಳನ್ನು ವಿಸ್ತರಿಸುವುದಕ್ಕೆ ಮಿತಿಗಳುಂಟು, ದಿಟವೆ. ಹಾಗೆಂದು ಹೊರನಾಡು ಮತ್ತು ಹೊರದೇಶಗಳ ಕನ್ನಡಿಗರತ್ತ ನಮ್ಮ ಲಕ್ಷ್ಯ ನಿಲ್ಲಬಾರದು. ಅಲ್ಲೆಲ್ಲ ಕನ್ನಡವನ್ನು ಜೀವಂತವಾಗಿರಿಸಲು ಸುಸಂಬದ್ಧ, ಪರಿಣಾಮಕಾರಿ ‘ಪ್ಯಾಕೇಜ್’ ಸಿದ್ಧಪಡಿಸುವುದು ಸೂಕ್ತ. ದೃಶ್ಯ – ಶ್ರವ್ಯ ಮಾಧ್ಯಮಗಳ ಪ್ರಭಾವಿಶಕ್ತಿಯನ್ನು ದುಡಿಸಿಕೊಳ್ಳುವುದರೊಂದಿಗೆ ಕಲಾವಿದರ ಪ್ರತಿಭೆಯನ್ನೂ ಬಳಸಬಹುದು. ಎಲ್ಲ ಅಕಾಡೆಮಿಗಳ ಒಟ್ಟು ಕಾರ್ಯಕ್ರಮಗಳಲ್ಲಿ ಮೂರನೆಯ ಒಂದು ಭಾಗ ಕಡ್ಡಾಯವಾಗಿ ಹೊರನಾಡು ಕನ್ನಡಿಗರ ನೆರವಿಗಿರಲಿ.

ಉದ್ಯೋಗಗಳಿಗೆ ನೇಮಕಾತಿಯ ನಿಯಮಗಳು ಕನ್ನಡಪರವಾಗಿಲ್ಲ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ನ್ಯಾಯ ಯಾವಾಗಲೂ ಲಭಿಸಿಲ್ಲ. ಸಿಬ್ಬಂದಿಯ ನೇಮಕದಲ್ಲಿ ಕರ್ನಾಟಕಕ್ಕೆ ‘ಶೂನ್ಯ ಸಂಪಾದನೆಯೊಂದೇ ಗ್ಯಾರಂಟಿ’ ಎನ್ನುವಂತಾಗಿದೆ. ಮೊದಲೇ ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿರುವಾಗ ಯುವ ಕನ್ನಡ ಚೇತನಗಳಿಗೆ ಉದ್ಯೋಗಾವಕಾಶದ ಬಾಗಿಲುಗಳು ಹೀಗೆ ಮುಚ್ಚಿದ್ದರೆ ನಾಡಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿ. ಕೇಂದ್ರ ಸರಕಾರ ನಡೆಸುವ ಪ್ರತಿಯೊಂದು ಪರೀಕ್ಷೆಯೂ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವುದು ಅನಿವಾರ್ಯ. ಕೇಂದ್ರದ ನೇಮಕಾತಿಗಳಲ್ಲಿ ಪ್ರತಿರಾಜ್ಯದವರಿಗೂ ಇಂತಿಷ್ಟು ನೌಕರಿಯೆಂದು ಶೇಕಡಾವಾರು ಪ್ರಮಾಣವನ್ನು ಗೊತ್ತುಪಡಿಸಿ ಸಮರ್ಪಕ ಪಾಲು ಕರ್ನಾಟಕಕ್ಕೆ ಸಿಗುವುದು ಅತ್ಯವಶ್ಯ. ಈ ದಿಶೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕದ ಶಾಸಕರು ತಮ್ಮ ಹಕ್ಕೊತ್ತಾಯಗಳನ್ನು ಅಂಕಿ ಅಂಶಗಳೊಂದಿಗೆ ಬಲಿಷ್ಠವಾಗಿ ಪ್ರತಿಪಾದಿಸುವುದು ಅತ್ಯಗತ್ಯ. ನೈಋತ್ಯ ರೈಲ್ವೆ ಕಾರ್ಯಾಲಯ  ಹೆಸರಿಗೆ ಹುಬ್ಬಳ್ಳಿಯಲ್ಲಿದ್ದರೂ ಅಲ್ಲಿಯ ಸಿಬ್ಬಂದಿಯವರು ಅನ್ಯಭಾಷಿಕರು, ಹೊರಗಿನವರು.

ಕರ್ನಾಟಕ ಏಕೀಕರಣ ಶ್ರಮ-ಪ್ರೇಮ ಮಿಶ್ರಿತ ಸಾಧನೆಯಿಂದ ಸಂಭವಿಸಿದೆ. ಬೇರೆ ಬೇರೆಯಾಗಿ ಹಂಚಿಹೋಗಿದ್ದ ನಾಡಿನ ಭಾಗಗಳು ಸೇರಿ ಒಂದಾಗಿರುವ ಕರ್ನಾಟಕವನ್ನು ಮತ್ತೆ ಸೀಳಿ ಹೋಳುಗಳಾಗಲು ಬಿಡಬಾರದು. ಪ್ರತ್ಯೇಕತೆಯ ಕೂಗು ಆರೋಗ್ಯಕರವಲ್ಲ.

ಪ್ರಾದೇಶಿಕ ಅಸಮಾನತೆ ಇದೆಯೆಂಬ ಭಾವನೆಯನ್ನು ಬೇರುಸಹಿತ ಮೊದಲು ಕಿತ್ತುಹಾಕುವುದಕ್ಕೆ ಆದ್ಯತೆಯಿರಲಿ. ನಮ್ಮನ್ನು ಅಲಕ್ಷ್ಯ ಮಾಡುತ್ತಿದ್ದಾರೆಂಬ ಅಪಸ್ವರ ಬಲಿತು ದೊಡ್ಡದಾಗಲು ಬಿಡಬಾರದು. ಇಷ್ಟು ವರ್ಷ ಒಟ್ಟಿಗೆ ಇದ್ದರೂ ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ. ಕಾಳಜಿ ತೋರಿಸುತ್ತಿಲ್ಲ, ಮುಖ್ಯ ವಾಹಿನಿಯಿಂದ ದೂರವಿಟ್ಟಿದ್ದಾರೆ – ಎಂಬಿತ್ಯಾದಿ ಸಂಶಯದ ಕೊರತೆಯ, ಕೊರಗಿನ ಮುಲುಕು ಮೂಡದಂತೆ ಅಕ್ಕರೆಯ ತೆಕ್ಕೆಯ ಮುತುವರ್ಜಿ ನೇವರಿಸುತ್ತಿರಲಿ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬಳಸುವಂತಾಗಬಾರದು.

ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ನ್ಯಾಯಪೀಠ ಬೇಗ ಆಗಲಿ. ಮೀನ ಮೇಷ ಎಣಿಸಿ ಗುಣಿಸಿ ನ್ಯಾಯಯುತ ಬೇಡಿಕೆಯನ್ನು ಮುಂದೂಡುವುದು ಬೇಡ. ಜೊತೆಗೆ ಮುಖ್ಯಮಂತ್ರಿಗಳ ಕಾರ್ಯಾಲಯ ಕಚೇರಿಯೊಂದು ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ತೆರೆದು ತಿಂಗಳಲ್ಲಿ ಒಂದು ದಿನ ಉತ್ತರ ಕರ್ನಾಟಕದ ಆ ಕಚೇರಿಯಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರುವುದು ತುಂಬು ಒಳ್ಳೆಯ ಮಾರ್ಗ. ಏಕೆಂದರೆ ವಿಶ್ವಾಸವಿದೆ ಎಂದು ಮಾತಿನಲ್ಲಿ ಹೇಳಿದರೆ ಸಾಲದು, ಜನಕ್ಕೆ ಅಂಥ ನಂಬಿಕೆ ಬರುವುದು ಬಹಳ ಮುಖ್ಯ ಸರಕಾರದ ಇಚ್ಛಾಶಕ್ತಿ ಕನ್ನಡಪರವಾಗಿದೆ ಎಂಬುದು ಜನಮನಕ್ಕೆ ನಾಟಬೇಕು.

ನೆಲ, ಜಲ, ರೈತ : ಸಮಸ್ಯೆಯ ಚಕ್ರತೀರ್ಥ

ನೆಲ, ಜಲ, ಮತ್ತು ವಿದ್ಯುತ್ತು ಇದ್ದರೆ ರೈತರು ಬಂಗಾರ ಬೆಳೆದಾರು. ಆದರೆ ಭೂಮಿಯಿದ್ದೂ ರೈತರು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಕ್ಷಾಮಡಾಮರಗಿಗೆ ನಾಂದಿ ಜಲಕ್ಷಾಮ. ಅಂತರ್ಜಲದ ಸೆಲೆಗಳು ಬತ್ತುತ್ತಾ ಪೂರಾ ನೀರು ಇಂಗಿಹೋಗುತ್ತಿದೆ. ಕೆರೆಗಳ ಹೂಳು ತೆಗೆಯುವ ಹಳೆಯ ರೂಢಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕನ್ನಡ ನಾಡು ಕೆರೆಗಳ ಬೀಡು. ಕೆರೆಗಳಲ್ಲಿ ಊಳು ತೆಗೆಸುವುದು ಅಪರೂಪವಾಗುತ್ತಿದೆ. ಜಲಾಶಯಗಳಲ್ಲಿ ತುಂಬಿದ ಊಳು ತೆಗೆಸುವುದು ಕಷ್ಟ. ಊಳು ತುಂಬಿದ ಕಾರಣ ಶೇಕಡಾ ೨೫ರಷ್ಟು ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆಯೆನ್ನಲಾಗಿದೆ. ಅದರಿಂದ ಈ ನಷ್ಟದ ಪ್ರಮಾಣಕ್ಕೆ ಅನುಗುಣವಾದ ಪರಿಹಾರಕ್ಕೆ ಅಂದರೆ ಈಗ ಕರ್ನಾಟಕಕ್ಕೆ ಗೊತ್ತು ಮಾಡಿರುವ ಪ್ರಮಾಣಕ್ಕೆ, ಈ ಊಳು ತುಂಬಿದ ಕಾರಣ ಕಡಿಮೆ ಆಗಿರುವ ಹೊರಹರಿವಿನ ಶೇಕಡಾ ಪ್ರಮಾಣದಷ್ಟು ನೀರಿಗೆ ಹಕ್ಕೊತ್ತಾಯ ನಿಲ್ಲಿಸಬಾರದು. ಜೊತೆಗೆ ಅನುತ್ಪಾದಕ ಹಾಗೂ ನಷ್ಟದ ಬಿಳಿ ಆನೆ ಸಾಕೊ ರೀತಿಯ ಯೋಜನೆಗಳಿಗೆ ದುಡ್ಡು ಸುರಿಯುವುದನ್ನು ತಪ್ಪಿಸೋಣ ಮತ್ತು ಅಂತರ್ಜಲ ಪುನರುತ್ಪಾದಕವಾಗಿಸುವ ಜಲಯೋಜನೆಗಳಿಗೆ ಚೈತನ್ಯ ತುಂಬೋಣ.

ಹೀಗೆ ಹೇಳುವಾಗ ನಾನು ಹೆಚ್ಚು ಒತ್ತು ಕೊಡುತ್ತಿರುವುದು ಹಮ್ಮಿಕೊಂಡಿರುವ ಯೋಜನೆಗಳನ್ನು ಬೇಗ ಬೇಗ ಪೂರೈಸುವುದಕ್ಕೆ. ಚಿತ್ರಾವತಿ ತೊರೆಗೆ ಪರಗೋಡು ಅಡ್ಡಕಟ್ಟೆ ಕಟ್ಟುವುದನ್ನು ಏನೇ ಆದರೂ ನಿಲ್ಲಸದೆ ಪೂರೈಸಲಾಗುವುದೆಂಬ ಕೆಚ್ಚು ತೋರಿದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರನ್ನು ಅಭಿನಂದಿಸುತ್ತೇನೆ. “ಅಭಿನವ ಭಗೀರಥ”ರೆಂಬ ಕೀರ್ತಿಗೆ ಪಾತ್ರರಾಗಬಹುದು. ಬಚಾವತ್ ನ್ಯಾಯಾಧಿಕರಣದ ‘ಎ ಸ್ಕೀಂ’ನ ಹೆಚ್ಚುವರಿ ನೀರನ್ನೂ ಕರ್ನಾಟಕ ಧಾರಾಳವಾಗಿ ಬಳಸುವ ಧೈರ್ಯ ಮತ್ತು ವಿವೇಕ ತೋರಬೇಕು. ಆಂಧ್ರ ಸರಕಾರ ಈ ಕೆಲಸ ಮಾಡಿದೆ. ಸಿಂಗಟಾಲೂರು ನೀರಾವರಿ ಯೋಜನೆಯ ಗಾತ್ರವನ್ನು ಹಿಗ್ಗಿಸಿದ್ದು ‘ಬಿ ಸ್ಕೀಂ’ಗೆ ಅನುಗುಣವಾಗಿರುವುದರಿಂದ ನಮ್ಮ ಆ ಯೋಜನೆ ಬೇಗ ಪೂರ್ಣಗೊಳ್ಳಬೇಕು.

ನಗರವಾಸಿಗಳು ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ. ದಿನನಿತ್ಯ ಬಕೆಟ್ಟುಗಟ್ಟಲೆ ನೀರು ಸುರಿದು ಮೀಯುವವರೊಂದು ಕಡೆ, ಮೂರು ನಾಲ್ಕು ದಿನಕ್ಕೊಮ್ಮೆ ಸ್ನಾನ ಮಾಡಲು ನೀರಿಗೆ ಬರ ಇರುವವರು ಇನ್ನೊಂದು ಕಡೆ. ಈ ಎರಡು ತುದಿಗಳ ಸಮನ್ವಯವೆಂದರೆ ಕೇವಲ ಸ್ನಾನಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ನೀರಿನ ಸದ್ವಿನಿಯೋಗ ಹೇಗೆಂಬ ಗಂಭೀರ ಪರಾಮರ್ಶೆಯ ಜರೂರು ಒದಗಿದೆಯೆಂಬತ್ತ ಗಮನ ಕೇಂದ್ರೀಕರಿಸುವುದು; ಹನಿಹನಿ ಕೂಡಿದರೆ ಹಳ್ಳ ಎಂಬ ಜಾಣ್ಣುಡಿಯು ವಾಸ್ತವವಾಗಲೆಂಬ ಗ್ರಹಿಕೆ.

ವ್ಯವಸಾಯ ಜಗತ್ತಿನ ಹಳೆಯ ವೃತ್ತಿ. ನಮ್ಮ ಸಂಸ್ಕೃತಿ ಐದು ಸಾವಿರ ವರ್ಷಗಳಷ್ಟು ಹಳೆಯದು ಎಂದು ಹೆಮ್ಮೆಯಿಂದ ಭಾಷಣ ಮಾಡುತ್ತೇವೆ. ಕೃಷಿ ಹನ್ನೆರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಈ ಉದ್ದನಡಿಗೆಯಲ್ಲಿ ರೈತರು ಬೇಸಾಯ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆ ಅಳವಡಿಸುತ್ತ ಬಂದಿದ್ದಾರೆ. ಎಷ್ಟೇ ಕಷ್ಟಗಳು ಎದುರಾದರೂ ವೃತ್ತಿಗೆ ವಿದಾಯ ಹೇಳದೆ, ನಂಬಿದೆ ನೆಲವನ್ನು ಕೈಬಿಡದೆ ಬಾಳಿದ್ದಾರೆ. ನೀರಿನ ಆಸರೆ ಹುಡುಕುತ್ತ ಆಗಾಗ ವಲಸೆ ಹೋಗಿರಬಹುದು. ಹೀಗಿದ್ದೂ ರೈತರು ಕಂಗಾಲಾಗಿ ಸರಣಿ ಆತ್ಮಹತ್ಯೆಗೆ ಹೊರಟಿದ್ದು ಇತ್ತೀಚಿನ ವರ್ಷಗಳಲ್ಲಿ. ಅದು ತನ್ನ ಪರಾಕಾಷ್ಠೆ ಮುಟ್ಟಿದ್ದು ಈ ವರ್ಷ. ಪರ್ಯಾಯ ಕಸುಬುಗಳನ್ನು ಕಲಿತಿಲ್ಲದ ರೈತರು ಗುಳೆ ಹೊರಟಿದ್ದಾರೆ. ಒಂದು ಅಂದಾಜಿನಂತೆ ಸುಮಾರು ಐವ್ವತ್ತು ಸಾವಿರ ರೈತರು ಕರ್ನಾಟಕ ಬಿಟ್ಟು ವಲಸೆ ಹೋಗಿದ್ದಾರೆ. ಪ್ರಪಂಚಕ್ಕೂ ಭಾರತಕ್ಕೂ ಬರಗಾಲ ಹೊಸದಲ್ಲ. ಹಾಗೆ ನೋಡುವುದಾದರೆ ಕರ್ನಾಟಕದ ಅಧಿಕೃತ ಇತಿಹಾಸ ಅನಾವರಣಗೊಳ್ಳುವುದೇ ಬರಗಾಲದ ಹಿನ್ನೆಲೆಯಲ್ಲಿ. ಉತ್ತರ ಭಾರತದಲ್ಲಿ ೧೨ ವರ್ಷಗಳ ಭೀಕರ ಬರಬಂದಾಗ ಮೌರ್ಯ ಸಾಮ್ರಾಟ  ಚಂದ್ರಗುಪ್ತನು ಶ್ರುತಕೇವಲಿ ಭದ್ರಬಾಹು ಮತ್ತು ಸಾವಿರಾರು ಮುನಿಗಳೊಂದಿಗೆ ಸುಭಿಕ್ಷ ಕನ್ನಡ ನಾಡಿಗೆ ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಆಗಮಿಸಿ ಶ್ರವಣಬೆಳಗೊಳದಲ್ಲಿ ನೆಲಸಿದನು. ಇಂತಹ ಸಮೃದ್ಧ ಕರ್ನಾಟಕ ಕಳೆದ ೨೦ ವರ್ಷಗಳಿಂದ ಸರಿಯಾದ, ಹದವಾದ ಮಳೆಗಾಲವನ್ನು ಕಾಣಲಿಲ್ಲ. ಹಿಂದೆಲ್ಲ ರಾಜಮಹಾರಾಜರು ಉಗ್ರಾಣಗಳ ದವಸಧಾನ್ಯವನ್ನು ಜನರಿಗೆ ಹಂಚಿದರು. ಮಠಮಾನ್ಯಗಳು ಜನತೆಗೆ ಗಂಜಿ ಊಟಕ್ಕೆ ನೆರವಾದರು. ಈಗ ಸರ್ಕಾರ ತನ್ನ ಕೈಲಾದುದನ್ನು ಮಾಡುತ್ತ ಬಂದಿದೆ. ಸಹಾಯ ಹಸ್ತ ಚಾಚಲು ಹಿಂದೆ ಬಿದ್ದಿಲ್ಲ. ಇಂಥ ಸಂದರ್ಭದಲ್ಲಿ ರೈತರ ಮಕ್ಕಳಾದ ಗ್ರಾಮೀಣ ಕನ್ನಡಿಗ ಯುವಕರಿಗೆ ಕೃಪಾಂಕವಿತ್ತು ನೇಮಕ ಮಾಡಿದ್ದ ಒಳ್ಳೆಯ ಉಪಕ್ರಮ. ಈ ನೆಲದ ಮಕ್ಕಳಿಗೆ ಉದ್ಯೋಗದಲ್ಲಿ ಯಾವಾಗಲೂ ಆದ್ಯತೆಯಿರಲಿ.