ಪುಸ್ತಕ ಸಂಸ್ಕೃತಿ

ಮನುಷ್ಯರನ್ನು ಹತ್ತಿರವಾಗಿಸುವ ಹಾಗೂ ಮನಸ್ಸುಗಳನ್ನು ಕೂಡಿಸುವ ಸಾಹಿತ್ಯ ನಿರ್ಮಿತಿ ಅಚ್ಯುತವಾಗಿ ನಡೆಯಬೇಕು. ಉದಾರೀಕರಣ ಹಾಗೂ ಜಾಗತೀಕರಣದ ಪರಿಣಾಮ ಪುಸ್ತಕ ಸಂಸ್ಕೃತಿಯ ಸಂದರ್ಭದಲ್ಲಿ ಯಾವ ಸ್ವರೂಪದ್ದಾಗಿ ಪರಿಣಮಿಸೀತೆಂಬ ಸಮೀಕ್ಷೆ ನಡೆಯಲಿ. ಪುಸ್ತಕ ಸಂಸ್ಕೃತಿ ಅವಿನಾಶಿಯೆಂದು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಪುಸ್ತಕಗಳ ಸ್ವರೂಪ, ಬಳಸುವ ಸಾಮಗ್ರಿ ಬದಲಾಗುತ್ತ ಬಂದಿದೆ. ಓಲೆಗರಿಯಿಂದ ಕಾಗದಕ್ಕೆ ಮುದ್ರಣ ಕಲೆ ನಾಗಲೋಟದಿಂದ ಬೆಳೆಯುತ್ತ ಬದಲಾಗುತ್ತ ಚಲನಶೀಲವಾಗಿದೆ. ಇಂದು ಅಚ್ಚಾಗಿ ಹೊರಬರುತ್ತಿರುವ ಪುಸ್ತಕಗಳ ಚೆಲುವಿಗೆ ಮಾರುಹೋಗುತ್ತೇವೆ. ಹಿಂದೆಂದೂ ಕಾಣದಂಥ ಅಂದ ಚೆಂದದ ಬೊಂಬೆಗಳಂತೆ ಮನಮೋಹಕ ಹೊರಪುಟ ಹೊದಿಕೆಯೊಂದಿಗೆ ಕನ್ನಡ ಪುಸ್ತಕಗಳು ಹೊರಬರುತ್ತಿವೆ. ಸತ್ವಶಾಲಿ ಒಳಹೂರಣವೂ ಉಂಟು. ಓಲೆಗರಿ, ಕಾಗದಗಳ ಯುಗ ಮುಗಿದು ಕ್ಯಾಸೆಟ್ಟು, ಫ್ಲಾಪಿ, ಸಿಡಿರಾಂಗಳ ಕಾಲದಲ್ಲಿದ್ದೇವೆ. ಸಾಹಿತಿಗಳು ಅಕ್ಷರ ಸಂಸ್ಕೃತಿಯ ವಕ್ತಾರರು ಹಾಗೂ ಪುಸ್ತಕ ಸಂಸ್ಕೃತಿಯ ವಾರಸುದಾರರು.

ಹೈಟೆಕ್ ಮತ್ತು ಮಾಹಿತಿ ತಂತ್ರಜ್ಞಾನದ ನೆರಳು ಎಲ್ಲ ಕ್ಷೇತ್ರಗಳ ಮೇಲೆ ಬೀಳುತ್ತಿರುವಾಗ ಸಾಹಿತಿಗಳೂ ಕಲಾವಿದರೂ ಚಲನಚಿತ್ರ ನಿರ್ಮಾಪಕರೂ ಪುಸ್ತಕ ಪ್ರಕಾಶಕರೂ ತಟಸ್ಥರಾಗುವುದು ಅಸಾಧ್ಯ. ಪುಸ್ತಕ ಸಂಸ್ಕೃತಿಯ ಅಪಾಯಗಳನ್ನು ನಿವಾರಿಸುವುದಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ. ನಾಡಿನ ಸಂಸ್ಕೃತಿಯ ಅಂತಸ್ಸತ್ವವನ್ನು ಅರಿಯಲೂ ಪರಿಚಯಿಸಲೂ ಸೂಕ್ತ ಪರಿಸರವನ್ನು ನಿರ್ಮಿಸುವ ಸದುದ್ದೇಶ ಪ್ರೇರಿತವಾಗಿ ಹಿಂದೆ ಕೆಂಗಲ್ ಹನುಮಂತಯ್ಯನವರು ಕನ್ನಡ – ಸಂಸ್ಕೃತಿ ಇಲಾಖೆಯನ್ನು ತೆರೆದರು, ಹಳ್ಳಿಗಳಲ್ಲಿ ಉಪನ್ಯಾಸಗಳಿಗೆ ಎಡೆಮಾಡಿದರು, ಎರಡು ರೂಪಾಯಿಗೆ ಕುಮಾರವ್ಯಾಸ ಭಾರತ ಕಾವ್ಯ ಜನರಿಗೆ ಎಟುಕುವಂತೆ ಮಾಡಿದರು. ಇಂದು ಪುಸ್ತಕ ವಿತರಣಾ ನೀತಿ ಸಂಹಿತೆಯನ್ನು ರೂಪಿಸಿ ಗ್ರಂಥ ಉದ್ಯಮವನ್ನು ಸಶಕ್ತವಾಗಿಸಬೇಕಾಗಿದೆ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ಪುಸ್ತಕ ಪ್ರಾಧಿಕಾರ – ಇವೆಲ್ಲದರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿ. ಓದುಗನಿಗೆ ಒಂದೇ ಸೂರಿನಡಿ ತನಗೆ ಬೇಕಾದ ಪುಸ್ತಕ ಸಿಗುವ ಹಾಗೆ ಅನುಕೂಲ ಕಲ್ಪಿಸುವುದೆಂದರೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಮಾರಾಟ ಮಳಿಗೆ ತೆರೆಯಲಿ.

ಲೇಖಕ, ಪ್ರಕಾಶಕ, ಮುದ್ರಕ, ವಿತರಕ, ವಾಚನ – ಇವು ಅಯ್ದು ಪುಸ್ತಕ ಸಂಸ್ಕೃತಿಯ ಪಂಚಾಂಗ, ಲೇಖಕ – ಪ್ರಕಾಶಕರಿಗೆ ಪ್ರಶಸ್ತಿಗಳಿರುವಂತೆ ಮುದ್ರಕರಿಗೂ ವಿತರಕರಿಗೂ, ಅದರಲ್ಲಿಯೂ ಏಕವ್ಯಕ್ತಿ ವಿತರಕರಿಗೂ, ಪ್ರಶಸ್ತಿಯ ಪ್ರೋತ್ಸಾಹವಿರಲಿ.

ಪುಸ್ತಕ ಸಂಸ್ಕೃತಿ ಸಂವರ್ಧನೆಗೆ ಸಾಹಿತ್ಯ ಸಮ್ಮೇಳನ ಗಟ್ಟಿ ಅಡಿಪಾಯವಾಗುತ್ತಿದೆ. ಓದುಗರ ಸಂಖ್ಯೆ ಇಳಿಮುಖವಾಗಿಲ್ಲ ಮತ್ತು ವಾಚನಾಭಿರುಚಿ ಒಣಗಿಲ್ಲ ಎಂಬುದಕ್ಕೆ ಪುಸ್ತಕ ಮಳಿಗೆಗಳು ಕನ್ನಡಿ ಹಿಡಿದಿವೆ. ಆದರೆ ಪೋಷಕರೂ ಅಧ್ಯಾಪಕರೂ ಶಾಲಾ ಮಕ್ಕಳಿಗೆ ರಜೆ ಬಂದರೆ ಪ್ರವಾಸ, ಪಿಕ್ ನಿಕ್, ಚಲನಚಿತ್ರ, ಮನರಂಜನೆಗೆ ಕರೆದುಕೊಂಡು ಹೋಗುತ್ತಾರೆ. ಗ್ರಂಥಾಲಯಗಳಿಗಂತೂ ಹೋಗುವುದಿಲ್ಲ. ಹೀಗಿರುವಾಗ ಪುಸ್ತಕ ಪ್ರೀತಿ ಬತ್ತದೆ ಹಸಿರಾಗುವುದು ಹೇಗೆ. ಬುದ್ಧಿವಮತಿಕೆಯೊಂದಿಗೆ ಹೃದಯವಂತಿಕೆಗೆ, ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ ಪಕ್ವತೆಗೆ ಓದು ಸಹಕಾರಿ. ಯಂತ್ರಮಾನವನಾಗದೆ ಹೃದಯ ಸಿರಿಯ ನಾಗರಿಕರಾಗಲು ಪುಸ್ತಕ ಪ್ರೀತಿ ಸಹಾಯವಾಗುತ್ತದೆ.

ಕರ್ನಾಟಕದಲ್ಲಿ ಚಲನಚಿತ್ರೋದ್ದಯಮ ಪ್ರತಿಭಾ ಸಂಪನ್ನರ ಕ್ಷೇತ್ರವಾಗಿ ವರ್ಧಿಸುತ್ತಿದೆ. ನಟನಟಿಯರೂ ನಿರ್ದೇಶಕ ನಿರ್ಮಾಪಕರೂ ಕರ್ನಾಟಕದ ಸಾಂಸ್ಕೃತಿ ಪರಂಪರೆಯನ್ನು ಜನತೆಗೆ ಪ್ರಭಾವಶಾಲಿಯಾಗಿ ತಲಪಿಸುವ ದಿಕ್ಕಿನಲ್ಲಿ ಪ್ರಶಂಸಾರ್ಹ ರೀತಿಯಲ್ಲಿ ಶ್ರಮಿಸುತ್ತಿರುವ ಈ ಇಡೀ ಸಮುದಾಯವನ್ನು ಅಭಿನಂದಿಸುತ್ತೇನೆ. ಕಿರುತೆರೆಯ ಕ್ಷೇತ್ರದವರೂ ಹಿರಿತೆರೆಯವರಿಗಿಂತ ಕಡಿಮೆಯಿಲ್ಲದಂತೆ ಧಾರವಾಹಿಗಳಿಂದ ಮನುಷ್ಯ ಸಮಾಜದ ಕತ್ತಲೆ ಬೆಳಕನ್ನು ಬಿಂಬಿಸುತ್ತಿದ್ದಾರೆ. ಅತ್ಯಾಚಾರ, ಕಳ್ಳತನ, ಕ್ರೌರ್ಯ, ದರೋಡೆ, ವಂಚನೆ, ಹಿಂಸೆಗಳಿಂದ ಸಮಾಜದ ನೆಮ್ಮದಿಯನ್ನು ಕೊಲ್ಲುವ ವ್ಯಕ್ತಿ, ಶಕ್ತಿ, ಪ್ರವೃತ್ತಿಗಳನ್ನು ಈ ಮಾಧ್ಯಮಗಳು ಬಯಲಿಗೆಳೆಯುತ್ತಿವೆ. ಆದರೆ ಇವನ್ನು ಅತಿಯಾಗಿ ಉತ್ಪ್ರೇಕ್ಷಿಸಿ ವೈಭವೀಕರಿಸುವುದಕ್ಕೆ ನಿಯಂತ್ರಣವಿರಬೇಕು.

ಸಾಹಿತ್ಯದಂತೆ ಮಾಧ್ಯಮಗಳೂ ಮನೆ ಮನಸ್ಸುಗಳನ್ನು ಮುರಿಯುವ ಹಾಗೂ ಹುರಿದುಮುಕ್ಕುವ ದಿಕ್ಕಿಗೆ ಹೆಜ್ಜೆ ಹಾಕುವುದಕ್ಕೆ ಪ್ರಚೋದನೆಯಾಗಬಾರದು. ಜನಮುಖಿ ಹಾಗೂ ಜೀವಪರ ತುಡಿತದ ತರಂಗಗಳಿಗೆ ಅಂತರಂಗ ಪುಟಿಯುವಂಥ ಪ್ರೇರಣೆ ಬರಲಿ. ಹೊಸಪೀಳಿಗೆಯ ಅರಳುವ ಪ್ರತಿಭೆಗಳಿಗೆ, ಸೃಜನಶೀಲ ಕರ್ಷಣಕ್ಕೆ ಎಂಥ ಪ್ರತಿಕೂಲ ಆತಂಕಗಳಿವೆ ಎಂಬುದನ್ನು ಬಲ್ಲೆ. ಇಡೀ ಭಾರತೀಯ ಪ್ರಜ್ಞಾವಲಯದಲ್ಲಿ ತುಂಬಿ ತುಳುಕುತ್ತ ಒಳಗೊಳಗೇ ಹಬ್ಬುತ್ತಿರುವ ಮಾಫಿಯ ಷಡ್ಯಂತ್ರ ಜಾಲ ಈ ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಆವರಿಸಿರುವುದು ಗೊತ್ತಿದೆ. ಆದರೆ ಇಮಥ ಇಕ್ಕಟ್ಟುಗಳ ಅಡಕತ್ತರಿಗೆ ಸಿಲುಕದೆ, ಪೂರ್ವಗ್ರಹದ ವಿಮರ್ಶೆಗಲ ಬುತ್ತಿಯನ್ನು ಬೆನ್ನಲ್ಲಿ ಕಟ್ಟಿಕೊಳ್ಳದೆ ಆರೋಗ್ಯಕರ ಸಮಾಜಕ್ಕೆ ಆಮ್ಲಜನಕ ತುಂಬುವ ಒತ್ತಾಸೆಯೇ ಮುಖ್ಯ ಪ್ರೇರಣೆಯಾಗಿರಲಿ. ಯಾವುದೇ ವೃತ್ತಿಯ ಪಾವಿತ್ರ್ಯ, ಘನತೆ ಮತ್ತು ಕ್ರಮವನ್ನು ಅಬದ್ಧವಾಗಿ ಯದ್ವಾತದ್ವಾ ತೋರಿಸುವುದು ಅರ್ಥಹೀನವಾಗುತ್ತದೆ. ಪೊಲೀಸರನ್ನು ನಿಷ್ಪ್ರಯೋಜಕರು, ದಡ್ಡರು ಎಂಬಿತ್ಯಾದಿಯಾಗಿ ಅಪಹಾಸ್ಯ ಹಾಗೂ ಗೇಲಿ ಮಾಡಿ ತೋರಿಸುವ ಪ್ರವೃತ್ತಿ ವಾಡಿಕೆಯಲ್ಲಿದೆ. ನ್ಯಾಯಾಲಯದ ನಡವಳಿಕೆಯಲ್ಲಿ ವಕೀಲರು ಮೇಜು ಮುರಿಯುವ ಹಾಗೆ ಗುದ್ದಿ ಕಟ್ಟಡ ಬಿರಿಯಂತೆ ಕೂಗಾಡುವುದು ಅವಾಸ್ತವ ಚಿತ್ರನ. ಆಸ್ಪತ್ರೆ ಮತ್ತು ವೈದ್ಯ ವೃತ್ತಿಯನ್ನು ಪ್ರತಿನಿಧಿಸುವ ರೀತಿಯೂ ಅಷ್ಟೆ. ರೋಗಿಗೆ ನೇರವಾಗಿ ಒಬ್ಬನಿಂದ ಇನ್ನೊಬ್ಬನಿಗೆ ರಕ್ತ ಕೊಡುವಂತೆ ತೋರಿಸುವುದು ಅಪಹಾಸ್ಯವಾಗುತ್ತದೆ.

ಕನ್ನಡ ಅಧ್ಯಾಪಕರನ್ನು ಗೇಲಿ ಮಾಡುವುದು, ಶಾಲಾ ಕಾಲೇಜುಗಳನ್ನೂ ಚುಡಾಯಿಸಿ ಅಸಭ್ಯವಾಗಿ ರೌಡಿಗಳಂತೆ ವರ್ತಿಸುವುದೊಂದೇ ಇಂದಿನ ಹುಡುಗರು ನಡೆದುಕೊಳ್ಳುವ ಸಹಜ ನಡೆವಳಿಕೆ – ಎಂಬಂತೆ ಬಿಂಬಿಸುವುದು ಸರಿಯಲ್ಲ. ಇವೆಲ್ಲವೂ ಪ್ರೇಕ್ಷಕರ ಗುಣಮಟ್ಟವನ್ನು ಕೀಳಾಗಿ ತಿಳಿದು ಚಿತ್ರಿಸುವ ವಿಧಾನ. ವಾಸ್ತವತೆಯನು ಕೊಲ್ಲದೆ ಕಥೆಯ ಹಂದರವನ್ನು ಪ್ರಭಾವಶಾಲಿಯಾಗಿ ಮಾಡುವ ಸಾಮರ್ಥ್ಯ ಬಳಕೆಯಾಗಲಿ ಎಂದು ಹೇಳುವಾಗ ಚಿತ್ರಣ ಆದರ್ಶಗಳ ಮುದ್ದೆಯಾಗಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಯಾವುದೇ ವೃತ್ತಿಗಳಲ್ಲಿ ತಾಂಡವವಾಡುವ ಕೊರಮರನ್ನು ಬಯಲಿಗೆಳೆಯುವಾಗ ವಸ್ತುಸ್ಥಿತಿಯ ತಪ್ಪು ಚಿತ್ರಣ, ದೋಷಗಳು ನುಸುಳಬಾರದೆಂಬ ಪ್ರೇಕ್ಷಕರ ಪರವಾದ ಸೂಚನೆಯಿದೆ. ಕನ್ನಡದ ಮಾತುಗಳನ್ನು ಮುಳುಗಿಸಿ ಅದರ ಮೇಲೆ ಅತಿಯಾಗಿ ಅನಗತ್ಯವಾಗಿ ಇಂಗ್ಲಿಷ್ ಸವಾರಿ ಮಾಡಿಸುವುದನ್ನು ದೃಶ್ಯ ಮಾಧ್ಯಮಗಳು ನಿಯಂತ್ರಿಸಬೇಕು.

ಕನ್ನಡ ಸಾಹಿತ್ಯ ಪರಿಷತ್ತು

ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗ ಅನಭಿಷಿಕ್ತ ಸಾರ್ವಭೌಮ ಸಂಸ್ಥೆ. ನಾಡು ನುಡಿ ಕಲೆ ಸಂಸ್ಕೃತಿಗಳ ಸರ್ವಾಂಗೀಣ ಸಂವರ್ಧನೆಗಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಸ್ಥೆ. ಲೇಖಕರಿಗೂ ಸಾಹಿತ್ಯಾಸಕ್ತರಿಗೂ ಅಂತರ್ಜಾಲವನ್ನು ನೇಯುವ, ಸಾಂಸ್ಕೃತಿಕ ಚೈತನ್ಯವನ್ನು ಉಕ್ಕಿಸುವ ಸಂಸ್ಥೆ. ನಾಡಿನ ಉದ್ದಗಲಗಳಲ್ಲಿ ಇದರ ಕೊಂಬೆ ರೆಂಬೆಗಳು ಪಲ್ಲವಿಸಿವೆ. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಲ್ಲದೆ ಇತರ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿವೆ. ಆದರೆ ಅಲ್ಲಿಯೂ ಸಾಹಿತಿಗಳಿಗೇ ವೇದಕೆಗಳು ಸಲ್ಲುವಂತೆ ನಿಗಾ ವಹಿಸುವುದು ಒಳ್ಳೆಯದು.

ಕನ್ನಡ ಚೈತನ್ಯಕ್ಕೆ ಎಲ್ಲವನ್ನೂ ತಾಳಬಲ್ಲ ಕಸುವು ಇದೆ. ಎಂಥದೇ ಕಠಿಣಗಳನ್ನು ಜೀರ್ಣಿಸಿಕೊಂಡು ಪುಷ್ಟವಾಗುವ ವಿಶೇಷ ಮಹಿಮೆಯಿದೆ. ಪರ ಭಾಷೆಗಳನ್ನು, ಪರ ಸಂಸ್ಕೃತಿ ಮತ್ತು ವಿಚಾರಗಳನ್ನೂ ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುತ್ತ ಕನ್ನಡ ಬೆಳೆದುಬಂದಿದೆ. ಕನ್ನಡದ ಸಾಂಸ್ಕೃತಿಕ ಪರಂಪರೆಯ ನಿಜದನಿಯನ್ನು ಮೊದಲು ದಾಖಲಿಸಿದ ಕವಿ ಶ್ರೀವಿಜಯ. ಕವಿರಾಜಮಾರ್ಗದಲ್ಲಿ ಆತ ಈ ಸಂಗತಿಯನ್ನು ಹಿಡಿದಿಟ್ಟ ಪದ್ಯ ಹೀಗಿದೆ:

            ಕಸವರಮೆಂಬುದು ನೆರೆ ಸೈ
            ರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮಮುಮಂ
            ಕಸವೇಂ ಕಸವರಮೇನು
            ಬ್ಬಸಮಂ ಬಲಮಲ್ಲದಿರ್ದು ಮಾಡುವರೆಲ್ಲಂ ||

ನಮಗೆ ಬೇಕಾದದ್ದು ಎಲ್ಲ ಭಾಷೆಯವರೂ ಎಲ್ಲ ಧರ್ಮದವರೂ ಎಲ್ಲ ವಯಸ್ಸಿನವರೂ ಒಟ್ಟಿಗೆ ಸೌಹಾರ್ದದಿಂದ ಬಾಳಬಹುದಾದ ಸಂತೋಷ. ಅಂತರಂಗದಲ್ಲಿ ಪ್ರೀತಿಯ ಅಂತರ್ಜಲ ಪಾತಾಳಕ್ಕಿಳಿದಿದೆ, ರಿಗ್ ಹಾಕಿ ನೂರಾರು ಅಡಿ ಆಳಕ್ಕಿಳಿದರೂ ಇದು ಚಿಮ್ಮುವುದು ಕಷ್ಟವಾಗಿದೆ. ಶಬ್ದಗಳ ಅಳವಡಿಕೆಯಲ್ಲಿ ತೀರ ಮಡಿವಂತಿಕೆ ಬೇಡ. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಹೊಸ ನುಡಿಗಳು ಸೇರ್ಪಡೆ ಆದರೆ ತಪ್ಪಿಲ್ಲ. ಆಯ್ದ ಅನ್ಯಭಾಷೆಯ ಮಾತುಗಳು ಕನ್ನಡ ನೇಯಿಗೆಯಲ್ಲಿ ಧಾರಾಳವಾಗಿ ಹೆಣೆದುಕೊಳ್ಳಲಿ. ಸಾವಿರಾರು ವರ್ಷಗಳಿಂದ ಕನ್ನಡ ಬಾಳಿದ್ದು ಹೀಗೆ, ಬೆಳೆದದ್ದು ಹಾಗೆ. ಜನಪ್ರಿಯ ನಿಘಂಟಿನ ಆವೃತ್ತಿಗಳು ಹೊಸ ಶಬ್ದಗಳ ಸೇರ್ಪಡೆಯಿಂದ ಪರಿಷ್ಕೃತಗೊಂಡು ಸಾಹಿತ್ಯ ಪರಿಷತ್ತಿನ ಪ್ರಕಟನೆಯಾಗಿ ಪ್ರತಿವರ್ಷ ಹೊರಬರುತ್ತಿರಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಸುಲಭ ಬೆಲೆಯಲ್ಲಿ ಸಿಗಲಿ. ಜನಕ್ಕೆ ಕನ್ನಡದಲ್ಲಿ ಅಕ್ಕರೆಯಿದೆ ಎಂಬುದಕ್ಕೆ ಇಂಥ ಸಾಹಿತ್ಯ ಸಮ್ಮೇಳನಗಳು ಜ್ವಲಂತ ಸಾಕ್ಷಿ. ಹಾಸನದ ಸಮ್ಮೇಳನದಂತೆ ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನಗಳ ನೇರ ಪ್ರಸಾರವಾಗಬೇಕು. ಕೋಟ್ಯಂತರ ಜನ ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ಸಾಹಿತ್ಯ ಸಮ್ಮೇಳನವನ್ನು ನೋಡಿ ಸವಿಯುವಂತಾಗಲಿ.

ಪ್ರಾದೇಶಿಕ ಭಾಷೆಗೆ ಸಂಸ್ಕೃತಿಗೆ ತನ್ನದೇ ಆದೊಂದು ಸೊಗಡು, ಮೊಹರು, ಘಾಟು ಇರುತ್ತದೆ. ಭಾಷಾ ಏಕರೂಪತೆಗೆ ಗದ್ದುಗೆ ಹತ್ತಿಸುವುದಕ್ಕಿಂತ ಸ್ಥಳೀಯ ವೈವಿಧ್ಯಗಳನ್ನು ಉಳಿಸಿ ಬಾಳಿಸುವುದು ಒಳ್ಳೆಯದು. ಇದನ್ನು ಪತ್ರಿಕೆಗಳೂ ಬಳಸಿ ಪ್ರೋತ್ಸಾಹಿಸಬೇಕು. ಪತ್ರಿಕೆಗಳಿಂದಾಗಿ ಕನ್ನಡ ಭಾಷೆ, ಒಂದು ಶಿಷ್ಟರೂಪಕ್ಕೆ ಹೆಜ್ಜೆ ಹಾಕುತ್ತಲಿದೆ. ಆದರೆ ಉತ್ತರ ಕರ್ನಾಟಕದ ಪತ್ರಿಕೆಗಳು ಅಲ್ಲಿಯ ಜನಭಾಷೆಯ ವಿಶಿಷ್ಟತೆಯನ್ನು ಬಿಂಬಿಸುವುದು ಚೆನ್ನು. ಹೀಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೆಗಳು ಅಲ್ಲಿಯ ಪ್ರಾದೇಶಿಕ ಭಾಷೆಯ ಸ್ವರೂಪವನ್ನು ಬಳಸಲು ಯಾವ ಕೀಳರಿಮೆಯೂ ಕಾಡಬಾರದು.

ಸಮ್ಮೇಳನ ಇನ್ನಷ್ಟು ಪ್ರಭಾವಶಾಲಿ ಆಗಲು ಸಾಧ್ಯವಿದೆ. ಗೋಷ್ಠಿಗಳ ವಿನ್ಯಾಸ ಅರ್ಥಪೂರ್ಣವಾಗಿಸಬಹುದು ನಾಲ್ಕೈದು ತಿಂಗಳ ಮುಂಚೆಯೇ ಪತ್ರವ್ಯವಹಾರ ನಡೆಸಿದರೆ ಪ್ರಬಂಧಕಾರರಿಗೆ ಸಿದ್ಧತೆಗೆ ಹೆಚ್ಚು ಸಮಯಾವಕಾಶವಿರುತ್ತದೆ.

ಸಾಹಿತ್ಯ ಪರಿಷತ್ತಿನ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನಕ್ಕೆ ತಕ್ಕ ತಳಪಾಯವೆಂದರೆ ಕನ್ನಡ ಭವನಗಳ ನಿರ್ಮಾಣ. ಬಹೂಪಯೋಗಿ ಜಿಲ್ಲಾ ಕನ್ನಡ ಭವನಗಳ ಪರಿಕಲ್ಪನೆಯನ್ನು ೧೯೭೮-೭೯ರಲ್ಲಿ ಆಗಿನ ಪರಿಷತ್ ಅಧ್ಯಕ್ಷರು ಸರಕಾರಕ್ಕೆ ಒಪ್ಪಿಸಿದ್ದರೂ ಇದುವರೆಗೆ ನಾಲ್ಕೈದು ಜಿಲ್ಲಾ ಕನ್ನಡ ಭವನಗಳು ರೂಪುಗೊಂಡಿವೆ. ಇದು ಇನ್ನೂ ಬೇಗ ವ್ಯಾಪಕವಾಗಿ ಎಲ್ಲ ಜಿಲ್ಲೆ – ತಾಲ್ಲೂಕುಗಳಿಗೆ ಹಬ್ಬಿದರೆ ಆಗ ಕನ್ನಡಪರ ಸಾಹಿತ್ಯ ಸಂಸ್ಕೃತಿ ಚಟುವಟಿಕೆಗಳಿಗೆ ಕಾಯಕಲ್ಪವಾಗುತ್ತದೆ. ಕನ್ನಡದ ಪುಸ್ತಕಗಳು, ಪ್ರಕಾಶಕರು ಯಾರೇ ಇರಲಿ, ಎಲ್ಲ ಲೇಖಕರ ಪುಸ್ತಕಗಳು ಕನ್ನಡ ಭವನದಲ್ಲಿ ದೊರೆಯುವಂತಾಗಲಿ. ಕನ್ನಡ ಕಾರ್ಯಕ್ರಮಗಳಿಗೆ ಅದರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಭಾಂಗಣವಿರಲಿ. ಲಾಭ-ನಷ್ಟ ಇರದ ಕಡಿಮೆ ಬಾಡಿಗೆ ದರದಲ್ಲಿ ಆ ಸಭಾಂಗಣ ಎಲ್ಲ ಕನ್ನಡ ಚಟುವಟಿಕೆಗಳಿಗೆ ಸಿಗಬೇಕೆ ವಿನಾ ಅದು ಮದುವೆಗಳಿಗೆ ತೆರೆದ ಇನ್ನೊಂದು ಕಲ್ಯಾಣಮಂಟಪ ಆಗಬಾರದು.

ಕನ್ನಡ ಸಾಹಿತ್ಯ ಮೊದಲು ಧರ್ಮಕೇಂದ್ರಿತವಾಗಿತ್ತು, ಸಂಸ್ಕೃತ ಪ್ರಾಕೃತ ಪ್ರೇರಿತವಾಗಿತ್ತು. ಅನಂತರ ಅದರ ಪ್ರೇರಣೆ ಪರಿಕಲ್ಪನೆ ಇಂಗ್ಲಿಷ್ ಸಾಹಿತ್ಯದಿಂದ ಮೂಡಿ ಕನ್ನಡ, ಇಂಗ್ಲೀಷ್ ಕೇಂದ್ರಿತವಾಯಿತು. ಈಗೀಗ ಅದು ಹೈಟೆಕ್ ಕೇಂದ್ರಿತವಾಗುತ್ತಿದೆ. ಅನಿವಾರ್ಯವಾಗಿ ಆಗುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಬರಮಾಡಿಕೊಳ್ಳೋಣ. ಸುಗಮ ಜೀವನ ಮುಕ್ತದ್ವಾರವಾಗಿರಲಿ. ಆದರೆ ಇವೆಲ್ಲವು ಮಾನವ ಹಾಗೂ ಕನ್ನಡ ಕೇಂದ್ರಿತವಾಗಿಯೇ ಕ್ರಿಯಾಶೀಲವಾಗಿರುವಂತೆ ನಿರ್ವಹಿಸುವ ಹೊಣೆ ಜ್ಞಾನಿಗಳನ್ನು ಅವಲಂಬಿಸಿದೆ.

ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮನ್ವಂತರದ ಮತ್ತೊಂದು ವೈಶಿಷ್ಟವೂ ಪರಿಭಾವನ ಯೋಗ್ಯವಾಗಿದೆ. ಹತ್ತನೆಯ ಶತಮಾನದಲ್ಲಿದ್ದ ಪಂಪನ ೧೧೦೦ ನೆಯ ಜನ್ಮೋತ್ಸವ ಮುಗಿದು ಇಪ್ಪತ್ತನೆಯ ಶತಮಾನದ ಕುವೆಂಪು ಅವರ ಶತಮಾನೋತ್ಸವ ಪ್ರಾರಂಭವಾದದ್ದು ಆಕಸ್ಮಿಕವಿರಲಾರದು. ಹೊಸಗನ್ನಡಕ್ಕೆ ಹೊಸದಿಕ್ಕು, ದನಿ, ಬಿಗಿಬನಿ ನೀಡಿದ ಕುವೆಂಪುರವರು ಆದಿಕವಿ ಪಂಪನ ಮಹಾನ್ ಪರಂಪರೆ ವಿಚ್ಛಿನ್ನವಾಗದಂತೆ ಮುಂದುವರಿಸಿದವರು. ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಭಾವಗೀತೆ ಕರ್ನಾಟಕದ ನಾಡಗೀತೆಯಾಗಿರುವುದು ಔಚಿತ್ಯಪೂರ್ಣವಾಗಿದೆ. ಭಾರತ ಅಸ್ತಿತ್ವದಲ್ಲಿ ಇದ್ದರೆ ಈಗ ಕರ್ನಾಟಕವು ಅಸ್ತಿತ್ವದಲ್ಲಿ ಇರುತ್ತದೆ. ಹಾಗೆಂದು ಪ್ರಾದೇಶಿಕ ಸ್ವಂತಿಕೆಯನ್ನು, ವ್ಯಕ್ತಿತ್ವವನ್ನು ಮಾರಿಕೊಳ್ಳುವುದು ಅಂತ ಅರ್ಥವಲ್ಲ. ಕುವೆಂಪು ಪ್ರತಿಷ್ಠಾನ ನೊಂದಾವಣೆ ಆದದ್ದು ಮತ್ತು ಪ್ರತಿಷ್ಠಾನದ ವಿಳಾಸ ನಮ್ಮ ಮನೆಯದೇ ಆಗಿದ್ದುದು ಮರೆಯಲಾಗದ ನೆನಪು. ಕುವೆಂಪು ಶತಮಾನೋತ್ಸವ ಆರಂಭವಾಗುತ್ತಿರುವ ಡಿಸೆಂಬರ್ ತಿಂಗಳಲ್ಲಿ ಮತ್ತು ಆಮಹಾಕವಿಯ ಕವಿತೆ ಜಯಭಾರತ ಜನನಿಯ ತನುಜಾತೆ ಕನ್ನಡ ನಾಡಗೀತೆ ಆದ ಸುಸಂದರ್ಭದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದೂ, ಇದರ ಅಧ್ಯಕ್ಷತೆಯ ಗೌರವ ನನಗೆ ಪ್ರಾಪ್ತವಾಗಿರುವುದೂ ನನಗೆ ದಕ್ಕಿದ ಸಿರಿಸಂಪದ.

ಹಳ್ಳಿಗಳ ಅಚ್ಚಗನ್ನಡದ ಹಳೆಯ ಹೆಸರುಗಳನ್ನು ಸಂಸ್ಕೃತಮಯವಾಗಿಸುವುದು ತರವಲ್ಲ. ಸಾಂಸ್ಕೃತಿಕ ಇತಿಹಾಸ ಹಿನ್ನೆಲೆ ಇರುವ ಎಮ್ಮೆಯೂರು, ಬೆಳ್ಳೂರುಗಳನ್ನು ಸುರಧೇನುಪುರ, ಶ್ವೇತಪುರ ಎಂದೇಕೆ ಬದಲಾಯಿಸಬೇಕು. ದೊಮ್ಮಲೂರನ್ನು ಭಗತ್ ಸಿಂಗ್ ನಗರ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡ ಪರಂಪರೆಯ ಮೇಲೆ ಆಗುವ ಈ ಬಗೆಯ ಗದಾಪ್ರಹಾರವನ್ನು ತಡೆಯುವ ಭೀಮ ಬಲ ಸಾಹಿತ್ಯ ಪರಿಷತ್ತಿನಿಂದ ವ್ಯಕ್ತವಾಗಬೇಕು. ನಮ್ಮ ನಾಡಿನ ಮೂಲೆ ಮುಡುಕುಗಳಿಗೆ ಕನ್ನಡವನ್ನು ಬೆಳಗಿಸುವ ನಂದಾದೀಪವಾಗುವುದರ ಜೊತೆಗೆ ಅವಿರತ ಎಚ್ಚರಿಸುವ ದುಂದುಭಿಯೂ ಆಗಿರಬೇಕು.

ಸಂಕೀರ್ಣ ಚಿಂತನೆಗಳು

ರಾಜಕಾರಣದ ಸ್ವರೂಪ ಇಂದು ಹಿಂದೆ ಇದ್ದಂತಿಲ್ಲ. ಏಕಪಕ್ಷದ ಬದಲು ಬಹುಪಕ್ಷಗಳ ಸಖ್ಯದಿಂದ ಆಡಳಿತ ನಡೆಸುವುದು ಶಕ್ಯವಾಗಿದೆ. ಒಂದು ದೇಶದ ಭಯೋತ್ಪಾದಕತೆಯನ್ನು ಇನ್ನೊಂದು ದೇಶ ತಟಸ್ಥ ಪ್ರೇಕ್ಷಕನಾಗಿ ನೋಡುವುದು ತಪ್ಪೆಂಬ, ಕಷ್ಟ ಸುಖಗಳಲ್ಲಿ ಪರಸ್ಪರರು ನೆವಿಗೆ ಒದೆಗಲ್ಲಾಗಿ ನಿಲ್ಲಬೇಕೆಂಬ ತವಕ ಬಂದಿದೆ. ಅಸ್ತ್ರಶಕ್ತಗಳ ಬಲ, ಸೈನ್ಯ ಬಲ, ಆರ್ಥಿಕ ಬಲಗಳ ಪ್ರಮತ್ತತೆಗೆ ಧಕ್ಕೆಯಾಗಿದೆ. ಒಟ್ಟಾರೆ ಪಶ್ಚಿಮದ ಸಾಂಸ್ಕೃತಿಕ ಯಾಜಮಾನ್ಯ ನೆಲಕಚ್ಚುತ್ತಿದೆ. ಸಾಮ್ರಾಜ್ಯಶಾಹಿಗಳ ಠೇಂಕಾರ ಮುಗಿಯಿತು. ತಾನೇ ಲೋಕನಾಯಕನೆಂಬ ಅಮಲಿನಿಂದ ಸೊಕ್ಕಿದವರು ಬಾಗಿ ನಡೆಯುವುದರ ವಿವೇಕಕ್ಕೆ ಸ್ಪಂದಿಸಿದ್ದಾರೆ. ತನ್ನ ಬೆಂಕಿಯಿಂದಲೇ ಬೆಳಕು, ತನ್ನ ಕೋಳಿಯಿಂದಲೇ ಬೆಳಗು – ಎಂಬ ಭ್ರಾಂತಿಯಿಂದ ಮೆರೆಯುವುದು ಇನ್ನು ಸಾಧ್ಯವಾಗದೆಂಬ ತಿಳಿವಳಿಯ ತರಂಗಗಳು ಅನುರಣಿಸುತ್ತ ಗೋಳವನ್ನು ಅವರ್ತಿಸಿವೆ.

ಲೋಕಸಭೆಯ ಮಧ್ಯಂತರ ಚುನಾವಣೆಯ ದಿನಾಂಕವನ್ನು ಗೊತ್ತುಪಡಿಸುವ ಮೊದಲೆ ಪ್ರಚಾರ ಪ್ರಾರಂಭವಾಗಿದೆ. ತಪ್ಪೇನಲ್ಲ. ಆದರೆ ಆಡಳಿತಾರೂಢರೂ ಇತರರೂ ಮಾಡುತ್ತಿರುವ ಆರೋಪ ಪ್ರತ್ಯಾರೋಪಗಳು ಘನತೆ ತರುವಂತಹುದಲ್ಲ. ಈ ಬಗೆಯ ಚುನಾವಣೆಯ ಪ್ರಚಾರ ವೈಖರಿ ಅಸಹ್ಯ ಹುಟ್ಟಿಸುತ್ತದೆ. ಪರಸ್ಪರ ಕಚ್ಚಾಡುತ್ತ ಮಣ್ಣೆರಚುವ ಈ ಜನಕ್ಕೆ ಮತಕೊಡಬೇಕೆ ಎಂದು ಚಿಂತಿಸುವುದಾಗಿದೆ. ತಮ್ಮ ಪಕ್ಷದ ಸಿದ್ಧಿ ಸಾಧನೆಗಳನ್ನು ವೈಭವೀಕರಿಸಿ ಹೇಳಿದರೂ ಸಹಿಸಬಹುದು. ಆದರೆ ಎದುರು ಪಕ್ಷಗಳನ್ನು ಹಳಿಯುವುದು ಸರಿಯಲ್ಲ. ಅದರಲ್ಲಿಯೂ ವ್ಯಕ್ತಿನಿಂದನೆ ಕೆಳಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ಚುನಾವಣಾ ಆಯೋಗವು ಎಲ್ಲ ಪಕ್ಷಗಳಿಗೂ ಒಂದು ಏಕರೂಪದ ಪ್ರಚಾರ ಸಂಹಿತೆಯನ್ನು ಅನುಶಾಸನವಾಗಿಸಬೇಕು. ಚುನಾವಣಾ ಸಂಹಿತೆಯಲ್ಲಿ

            ಯಾರೂ ಯಾವ ಪಕ್ಷವನ್ನೂ ಖಂಡಿಸಕೂಡದು
            ಯಾರೂ ಯಾವ ವ್ಯಕ್ತಿಯನ್ನೂ ನಿಂದಿಸಕೂಡದು

ಎಂಬ ಎರಡು ಅಂಶಗಳಿಗೆ ಒತ್ತುಕೊಡಬೇಕು. ಈ ಲಕ್ಷಣರೇಖೆಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಚುನಾವಣಾ ಅಭ್ಯರ್ಥಿತನಕ್ಕೆ ಅನರ್ಹಗೊಳಿಸಬೇಕು. ವಿಧಾನಸಭೆಗಾಗಲಿ, ಲೋಕಸಭೆಗಾಗಲಿ ಎಲ್ಲ ಚುನಾವಣೆಯೂ ಆರೋಗ್ಯಕರ ನೆಲೆಯಲ್ಲಿ ಗಂಭೀರವಾಗಿ ನಡೆಯಬೇಕೆಂದು ಮತದಾರರು ಬಯಸುತ್ತಾರೆ. ಎಲ್ಲ ಪಕ್ಷಗಳೂ ಜನಸೇವೆಗೆಂದು ಹುಟ್ಟಿದ ಶ್ರೇಷ್ಠ ಪಕ್ಷಗಳು. ನಾನು ಯಾವ ಪಕ್ಷಕ್ಕೂ ಸೇರಿದವಳಲ್ಲ ಎನ್ನುವುದಕ್ಕಿಂತಾ ಎಲ್ಲ ಪಕ್ಷಗಳಿಗೂ ಸೇರಿದವಳು ಎಂದು ಹೇಳುವುದರಲ್ಲಿ ಅರ್ಥವಿದೆ. ಜನಪರ ಜೀವಪರ ತುಡಿತದ, ಮಾನವೀಯ ಕಾಳಜಿಯ ಪಕ್ಷಗಳಿಗೆ ನನ್ನ ಸಹಮತ ಉಂಟು.

ದೀನದಲಿತರ ದುಃಖದುಮ್ಮಾನಗಳನ್ನು ಹೋಗಲಾಡಿಸಿ ಕಣ್ಣೀರನ್ನು ಒರೆಸುವುದಕ್ಕೆ ನಾಡು ಮುಂದಾಗಬೇಕೆಂದು ನೂರು ವರ್ಷಗಳ ಹಿಂದೆ ಸಿಂಹವಾಣಿ ಮೊಳಗಿಸಿದ್ದು ಸ್ವಾಮಿ ವಿವೇಕಾನಂದರು. ಅವರು ‘ದರಿದ್ರದೇವೋಭವ’ ಎಂಬ ವಾಕ್ಯ ಹೇಳಿದರು. ನಾವು ಅದರೊಂದಿಗೆ ಕೃಷಿಕ ದೇವೋಭವ, ಕಾರ್ಮಿಕ ದೇವೋಭವ, ಎಂದೂ ಸೇರಿಸಬಹುದು. ನಿಜ, ದುಡಿಯುವವರೇ ದೇವರು. ಶ್ರಮವೇ ದೇವರು. ಮೈಗಳ್ಳರು ಪ್ರೇತಗಳು. ದಶಾವತಾರಗಳಿಂದ ರಾಮನಾಗಿ ಕೃಷ್ಣನಾಗಿ, ಬುದ್ಧನಾಗಿ, ಯಾವುದಾದರೂ ಒಂದು ರೂಪದಲ್ಲಿ ದೇವರು ಬರುತ್ತಾನೆಂಬ ನಂಬಿಕೆಗೆ ಇಂಬುಕೊಟ್ಟು ಹೇಳುವುದಾದರೆ, ಇಂದು ದೇವರು ನಾಡಿಗಾಗಿ, ಜನರಿಗಾಗಿ ದುಡಿಯುವವರ ರೂಪದಲ್ಲಿ ಬಂದಿದ್ದಾನೆಂದು ತಿಳಿಯಬಹುದು.

ಜಾತಿಮತ ಮಠ, ಮಂದಿರ, ಮಸೀದಿ, ಚರ್ಚು, ಗುಡಿ ಗೋಪುರಗಳು ಅವುಗಳ ಪಾಡಿಗೆ ಅವು ಇರಲಿ, ಧರ್ಮಗಳೂ ಧರ್ಮಗುರುಗಳೂ ಮಠಾಧೀಶರೂ ಸಮಾಜದ ಹಿತಚಿಂತಕರು. ಧರ್ಮದಿಂದ ಧರ್ಮಸಂಸ್ಥೆಗಳಿಂದ ಅಶಾಂತಿ ಇಲ್ಲ. ಆದರೆ ಧರ್ಮಾಂಧರಾದ ಮೂಲಬೂತವಾದಿ ರಕ್ಕಸರಿಂದ ರಕ್ತಪಾತಗಳಾಗುತ್ತಿವೆ. ಮತಗಳಿಂದ ಅಪಾಯವಾಗಲಿಲ್ಲ. ಮತಾಂಧರಿಂದ ಗಂಡಾಂತರ ಬಂದಿದೆ. ಮತ ಧರ್ಮಗಳಲ್ಲಿ ಗುರುಪೀಠಗಳಲ್ಲಿ ಜನಮುಖಿ ಹಾಗೂ ಸಹಿಷ್ಣುತೆ – ಸಹಕಾರ – ಸಮನ್ವಯಗಳ ಧೋರಣೆ ಕಾಣಿಸದಿದ್ದಾಗ ಮುಖ ಮೋರೆ ನೋಡದೆ ಸಮಾಜ ಮತ್ತು ಸರಕಾರ ತನ್ನ ಗದಾಪ್ರಹಾರ ಮಾಡುವುದು ತಪ್ಪಲ್ಲ. ಪೂಜಾ ಸ್ಥಳಗಳೂ ಪ್ರಾರ್ಥನಾ ಮಂದಿರಗಳೂ ಸಿಡಿಮದ್ದು, ಬಂದೂಕು ತುಂಬಿದ ಆಯುಧಾಗಾರ ಆಗಬಾರದು. ಹೋಳಿ ಹಬ್ಬದ ದಿವಸ, ಮೊಹರಮ್ಮಿನ ಹಬ್ಬದಲ್ಲಿ, ಜಾತ್ರೆ ತೇರು ಹರಿಯುವಾಗ, ಉರುಸು ಸಾಗುವಾಗ ಅಣ್ಣತಮ್ಮಂದಿರೆಂದು ಅಪ್ಪಿ ಆಲಂಗಿಸುವುದು ಅದೊಂದು ಗಳಿಗೆಯ ತೋರಿಕೆಯ ನಾಟಕಾಭಿನಯ ಆಗಬಾರದು. ಬದುಕಿನುದ್ದಕ್ಕೂ ನಿತ್ಯ ನಡೆವಳಿಕೆಯಲ್ಲಿ ಭ್ರಾತೃತ್ವ, ಸೌಹಾರ್ದ ಬೇರು ಬಿಟ್ಟು ಜೀವಂತವಾಗಬೇಕು. ನನ್ನದೊಂದು ಕವಿತೆ ನೆನಪಾಗುತ್ತದೆ.

ನಾ ಬರೆದ ನಿನಗಾಗಿ
ನಾ ಬರೆದೆ ನನಗಾಗಿ
ನಾ ಬರೆದೆ ಜನಕ್ಕಾಗಿ
ನಾ ಬರೆದೆ ಜಗಕ್ಕಾಗಿ

ಎಲ್ಲರಿಗೂ ತಲುಪಲಿ ನನ್ನ ಕವನ
ಎಲ್ಲರಿಗೂ ಸೇರಲಿ ನನ್ನ ಕವನ
ಎಲ್ಲರಿಗೂ ದೊರಕಲಿ ನನ್ನ ಕವನ

ಶತ್ರುತ್ವ ತೊಲಗಳಿ
ಮಿತ್ರತ್ವ ಉಳಿಯಲಿ
ಭ್ರಾತೃತ್ವ ಬೆಳೆಯಲಿ
ಎಲ್ಲರಿಗೂ ಸೇರಲಿ ನನ್ನ ಕವನ

ಸಹನೆಯ ಬಿತ್ತೋಣ
ಶಾಮತಿಯ ಬೆಳೆಸೋಣ
ಮಾನವತೆ ಉಳಿಸೋಣ
ಎಲ್ಲರಿಗೂ ದೊರಕಲಿ ನನ್ನ ಕವನ

ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ ಸಂವಿಧಾನಾತ್ಮಕ ಹಕ್ಕು. ಇದಕ್ಕೆ ಯಾವತ್ತೂ ಚ್ಯುತಿ ಬರಬಾರದು. ತಮಗೆ ಇಷ್ಟ ಬಂದ ದೈವವನ್ನು ಮನಬಂದಂತೆ ಪೂಜಿಸುವ ಸ್ವಾತಂತ್ರಕ್ಕೆ ಧಕ್ಕೆಯಾಗದಿರಲಿ. ಆದರೆ ಧ್ವನಿವರ್ಧಕ ಬಳಸಿ ಇಡೀ ಪರಿಸರದ ಪ್ರಶಾಂತತೆಯನ್ನು ಕಲಕುವುದು, ಬಲವಂತ ಮಾಘಸ್ನಾನ ಮಾಡುವುದು ಬೇಡ. ಅವರವರ ಮನೆಯಲ್ಲಿ, ಮಂದಿರದಲ್ಲಿ ಮಾಡುವ ಮಂತ್ರ ಪಠನ, ಪೂಜೆ ಅವರವರಿಗಷ್ಟೇ ಸೀಮಿತವಾಗಿದ್ದು ಉಳಿದವರ ಮೇಲೆ ಹೇರುವ ದಬ್ಬಾಳಿಕೆ ಸರಿಯಲ್ಲ. ಪೂಜಾ ಮಂದಿರ ಹಾಗೂ ಪ್ರಾರ್ಥನಾ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಶಬ್ದ ಮಾಲಿನ್ಯಗೊಳಿಸುವುದು ತಕ್ಷಣ ನಿಲ್ಲಿಸುವುದು ಲೇಸು. ಯಾವುದೇ ಒಂದು ಧರ್ಮವನ್ನು ಕುರಿತು ನಾನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೂ ಪ್ರಾರ್ಥನಾ ಮಂದಿರಗಳಿಗೂ ಅನ್ವಯಿಸುವ ಏಕರೂಪದ ಶಾಸನ ತಂದು ಧ್ವನಿವರ್ಧಕಗಳನ್ನು ಅಳವಡಿಸದಂತೆ ನಿಯಂತ್ರಿಸಿದರೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಶಾಂತಿಪ್ರಿಯರಿಗೆ, ಕಾರ್ಯಮಗ್ನರ ನೆಮ್ಮದಿಗೆ ಪೂಜಾಸ್ಥಗಳಗಳು ಉಪಕಾರ ಮಾಡಿದಂತೆ ಆದೀತು.

ಇರಲಿರಲಿ ಅವರವರ ಧರ್ಮಗುಡಿಗಳು
ಅಂತರ್ಮುಖಿಯಾಗಿರಲಿ ಆರಾಧಿಸುವ ಹಕ್ಕುಗಳು
ತಂತಂಮ್ಮ ಮಂತ್ರ ಪಠಣ ಪೂಜಾ ಘೋಷಗಳು
ನಿರಂತರ ನಡೆಯುತಿರಲಿ ನಿಲ್ಲದೆಯೆ ಹಗಲಿರುಳು
ಗುಡಿಗೋಪುರ ಚರ್ಚುಗಳಲ್ಲಿ ಮಸೀದಿಗಳಲ್ಲಿ
ಪರಮ ಪವಿತ್ರ ಪೂಜಾ ಮಂದಿರಗಳಲ್ಲಿ
ಹೊಮ್ಮಲಿ ಧೂಪಧೂಮ ಅಗರು ಕರ್ಪೂರ
ಆರತಿ ಬೆಳಗಲಿ ಗಂಟೆಜಾಗಟೆಯು ಮೊಳಗಲಿ
ಮುಗಿದು ಮಣಿಯುವ ಮನಸು ಕನಸುಗಳಿಗೆ
ಉಣಿಸಲಿ ಗ್ರಹಿಸಲಿ ದೈವ ಅನುಗ್ರಹಿಸಲಿ
ಬಾಳು ನೆಮ್ಮದಿಗೆ ಪ್ರಾರ್ಥನೆಗಳು ಘಟಿಸಲಿ
ಯಾರ ತಕರಾರು ಅಡ್ಡಿ ಹಂಗು ಹಸಾದ
ಜನರ ಮೌನ ಪ್ರಾರ್ಥನೆಗೆ ಅಡ್ಡ ಬರದಿರಲಿ
ನಿಶ್ಯಬ್ದ ಪರಮ ಪ್ರಾರ್ಥನೆಯ ಕದಡುವೀ
ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರಲಿ

ಕನ್ನಡ ಸಾಹಿತ್ಯದ ಉದ್ದಕ್ಕೂ ಭಿನ್ನಪಾತಳಿಗಳಲ್ಲಿ ಎದ್ದು ಕಾಣುವ ಬಂಡಾಯ ಸಹ ಸಾಂಸ್ಕೃತಿಕ ಸರ್ವಾಧಿಕಾರ ಧೋರಣೆಯ ವಿರುದ್ಧವಾಗಿತ್ತು. ಭಾಷೆಯ ದಬ್ಬಾಳಿಕೆಯನ್ನು ಧಿಕ್ಕರಿಸಿದ್ದು, ಮಾರ್ಗ-ದೇಸಿ ಹಾಗೂ ವಸ್ತುಕ-ವರ್ಣಕ ಪಲ್ಲಟ, ಛಂದಸ್ಸಿನಲ್ಲಾದ ಮಾರ್ಪಾಟು, ಜನಭಾಷೆಯನ್ನು ಮಹಾಕಾವ್ಯ ಮತ್ತು ಆಸ್ಥಾನದ ಭಾಷೆಯಾಗಿಸಿದಂತೆ ಮತ್ತೆ ಅದನ್ನು ಜನಭಾಷೆಗೇ ಜಗ್ಗಿದ್ದು – ಇವೆಲ್ಲ ಕನ್ನಡ ಸಾಹಿತ್ಯ ಕಂಡ ಸ್ಥಿತ್ಯಂತರಗಳು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಕನ್ನಡ ನಡೆದುಬಂದ ದಾರಿಯ ಈ ವೈವಿಧ್ಯಗಳ ದಿವ್ಯ ತಿರುವು ನಮ್ಮ ಸಾಹಿತ್ಯದ ಶಕ್ತಿ. ರತ್ನಾಕರವರ್ಣಿಯ ಸಂದೇಶ ಸಾರ್ವಕಾಲಿಕ ವಾಸ್ತವಕ್ಕೆ ಕೆತ್ತಿದ ಪ್ರತಿಮೆ, ಎತ್ತಿದ ಸೊಲ್ಲು:

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯ ಮಂಚಿದಿಯೆನೆ ತೆಲುಗರು
ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು
ಮೆಯ್ಯುಬ್ಬಿ ಕೇಳಬೇಕಣ್ಣ

ಇಡೀ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಹೀಗೆ ತನ್ನ ಭಾಷೆಯೊಂದಿಗೆ ನೆರೆಹೊರೆಯ ಜನರ ತಾಯಿಭಾಷೆಯನ್ನೂ ಪರಿಭಾವಿಸಿ ಅಕ್ಕರೆಯುಕ್ಕಿ ಹೀಗೆ ಚಿಂತಿಸಿದ ಹೃದಯಸಿರಿ ಅಪರೂಪ. ಸಾಹಿತಿಗಳಿಗೂ ಇದು ದಿಕ್ಸೂಚಿಯಾಗಿರುವ ಮಾತು. ದೂರದ ಇಂಗ್ಲೀಷ್ ಭಾಷೆಯಲ್ಲಿ ಏನಾಗುತ್ತಿದೆ ಎಂದು ವಾಗ್ವಾದ ನಡೆಸುತ್ತೇವೆ. ಅದು ತಪ್ಪಲ್ಲ ಎಂಬುದೂ ದಿಟವೆ. ಆದರೆ ನಮ್ಮ ಅಕ್ಕಪಕ್ಕದ ಭಾಷೆಗಲ್ಲಾಗುತ್ತಿರುವ ಪ್ರಗತಿ ಪಲ್ಲಟಗಳ ಪರಿಚಯವೇ ಇರುವುದಿಲ್ಲವೆಂಬುದು ವಿಷಾದನೀಯ. ನಮ್ಮ ಬದುಕಿನ ಸಾಂಸ್ಕೃತಿಕ ಬೇರುಗಳಿಗೆ ತಾಕಿದ, ಉಸಿರಿಗೆ ಹತ್ತಿರದ ಭಾಷಾ ಸಾಹಿತ್ಯದ ಪರಿಚಯ ಇರಬೇಕಾದುದು ಅನಿವಾರ್ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕೃತಿಕ ‘ಕೊಡು-ಪಡೆ’ಗಳಿಗೆ ಇದು ದಾರಿ ತೆರೆಯುತ್ತದೆ. ರತ್ನಾಕರವರ್ಣಿಯ ಈ ತಿಳಿವಳಿಕೆಯ ಬೆಳಕು ಇಂದಿನ ಯುಗಕ್ಕೆ ತೀರ ಅವಶ್ಯ. ರತ್ನಾಕರವರ್ಣಿಯ ಹಾಡುಗಳು ಮೈಲಿಗೆಯಲ್ಲ. ನಮ್ಮ ಸಂಗೀತಗಾರರು ಸಂಗೀತ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಡಬೇಕು. ಜೇನು ಸವರಿದ ಸುಮಧುರ ಕಂಠಸಿರಿಯಿಂದ ಸಂಗೀತ ಕಚೇರಿಗಳನ್ನು ಹಾಡಿ ಮನೆ ಮನಗಳನ್ನು ತಣಿಸಿ ಕುಣಿಸುತ್ತಿರುವ ಸುಗಮ ಸಂಗೀತಗಾರರನ್ನು ಅಭಿನಂದಿಸುತ್ತೇನೆ. ಈ ಕಲಾವಿದರು ಆಧುನಿಕ ಕವಿತೆಗಳ ಜೊತೆಗೆ ಪ್ರಾಚೀನ ಕಾವ್ಯಗಳಿಂದಲೂ ಆರಿಸಿದ ಅರ್ಥಪೂರ್ಣ ಪದ್ಯಗಳನ್ನು ಹಾಡುವುದು ಅಗತ್ಯ. ಆ ಮೂಲಕ ಪರಂಪರೆಯ ಸುವರ್ಣ ಕೊಂಡಿ ಕಳಚಿ ಹೋಗದೆ ಹಾಗೆ ಪುನರುಜ್ಜೀವಿಸಬೇಕು. ಕನ್ನಡ ಕಾವ್ಯಪರಂಪರೆಯ ಸಾತತ್ಯವನ್ನು ಪುನರುತ್ಥಾನಿಸುವುದಕ್ಕೆ ಗಮಕಿಗಳೂ ಪ್ರಯತ್ನಶೀಲರಾಗಿರುವುದು ಶ್ಲಾಘನೀಯ. ಗಮಕಿಗಳು ಚಂಪೂಕಾವ್ಯಗಳನ್ನು ರಗಳೆ ವಚನಗಳನ್ನೂ ಬೇರೆ ಬೇರೆಷಟ್ಪದಿ ಕಾವ್ಯಗಳನ್ನೂ ಹಾಡಿ ಗಮಕಕ್ಕೆ ವಿಸ್ತಾರ ಮತ್ತು ವೈವಿಧ್ಯ ತರಬೇಕು.

ಜೀವಸಂಕುಲವನ್ನು ಕಾಪಾಡಿದ, ಈಗಲೂ ರಕ್ಷಿಸುತ್ತಿರುವ ಅಮೃತ ಚೈತನ್ಯದ ಆಮ್ಲಜನಕಕ್ಕೆ ಚ್ಯುತಿ ಬಾರದಂತೆ ಉಳಿಸುವ ನೈತಿಕ ಹೊಣೆ ಹೊತ್ತು, ಪರಿಸರಮಾಲಿನ್ಯಕ್ಕೆ ಎಡೆಕೊಡುವುದಿಲ್ಲವೆಂಬ ದೃಢ ಪ್ರತಿಜ್ಞೆ ನಮ್ಮದಾಗಲಿ. ಗಿಡಮರಗಳ ಮಹತ್ವವನ್ನು ಮನಗಾಣಿಸುವ ಪಾಠಗಳು ಪಠ್ಯಗಳಲ್ಲಿ ಹೆಚ್ಚು ಸೇರಲಿ.

ಕಾಶ್ಮೀರದಲ್ಲಿ ದಿನನಿತ್ಯ ನಿರಂತರವಾಗಿ ನಡೆಯುತ್ತಿರುವ ಬರ್ಬರ ಹತ್ಯಾಕಾಂಡ ಕಲ್ಲೆದೆಗಳನ್ನೂ ತಲ್ಲಣಗೊಳಿಸುವಂಥದು. ಉಗ್ರಗಾಮಿ ಭಯೋತ್ಪಾದಕರು ಹಿಂಸಾಕಾಂಡದಲ್ಲಿ ವಿಜೃಂಭಿಸುತ್ತ ಅಮಾಯಕ ನಾಗರಿಕರನ್ನು, ಕಾಶ್ಮೀರಿ ಪಂಡಿತರನ್ನು ಹತ್ಯೆ ಮಾಡುತ್ತಿದ್ದಾರೆ. ಹಿಂಸೆಗೆ ಪ್ರತಿಹಿಂಸೆ ಪರಿಹಾರವಲ್ಲವೆಂಬ ದಿಟದ ಮನವರಿಕೆಯಾದರೂ ಜೀವಹಾನಿಗೆ ವಿರಾಮ ಸಾಧ್ಯವಾಗಿಲ್ಲ. ಒಮ್ಮೆ ಭಾರತದ ತೊಟ್ಟಿಲು ತೂಗುತ್ತ ಇನ್ನೊಮ್ಮೆ ಪಾಕಿಸ್ತಾನವನ್ನು ಚಿವುಟುತ್ತ, ಮದ್ದು ಗುಂಡು ಯುದ್ಧವಿಮಾನ ಸರಬರಾಜು ಮಾಡುತ್ತ, ಹಲವು ರಾಷ್ಟ್ರಗಳನ್ನು ಅಲ್ಲೋಲ ಕಲ್ಲೋಲಗೊಳಿಸುವ ಬಲಿಷ್ಠ ಗೋಮುಖ ವ್ಯಾಘ್ರಗಳನ್ನು ಸಂಪೂರ್ಣ ನಂಬಬಾರದು. ಭಾರತ, ಚೈನಾ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರು ಮುಂತಾದ ರಾಷ್ಟ್ರಗಳೆಲ್ಲ ಒಗ್ಗೂಡಿದರೆ ಅಮೆರಿಕವನ್ನು ಮೂಸುವವರು ಯಾರು ? ಈ ಕಾರಣಕ್ಕಾಗಿಯೇ ಅಭಿವೃದ್ಧಿ ಪಥದಲ್ಲಿರುವ ನಮ್ಮಂಥ ದೇಶಗಳ ನಡುವೆ ಹೊಂದಾಣಿಕೆ ಸಾಧ್ಯವಾಗದಂತೆ ಒಡಕು ಮೂಡಿಸಲು ಬಲಿಷ್ಠ ರಾಷ್ಟ್ರದ ಹುನ್ನಾರ. ಅಮೆರಿಕದ ಸೊಕ್ಕು ಮಣ್ಣು ಮುಕ್ಕುವ ದಿನಗಳು ಹತ್ತಿರ ಬಂದಿವೆ. ಭಯೋತ್ಪಾದಕತೆಯನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಮುಂದುವರಿದ ರಾಷ್ಟ್ರಗಳು ಪರಾವಲಂಬಿಗಳಾಗಿದ್ದಾರೆ. ಸಮೂಹಿಕ ಸಂಘಟನೆಯಿಂದಲೇ ಸಮೂಹ ಸನ್ನಿಯನ್ನು ಬಗ್ಗುಬಡಿಯಲು ಸಾಧ್ಯವೆಂಬ ವಾಸ್ತವ ಪ್ರಜ್ಞೆ ಎಚ್ಚೆತ್ತಿದೆ.

ರಾಷ್ಟ್ರೀಯ ಪಕ್ಷಗಳ ಅಟ್ಟಹಾಸದಲ್ಲಿ ಪ್ರಾಂತೀಯ ಪಕ್ಷಗಳು ಕುಸಿಯಬಾರದು. ಪ್ರಾಂತೀಯ ಪಕ್ಷಗಳ ಕುತ್ತಿಗೆ ಹಿಚುಕುವ ಹುನ್ನಾರಗಳಿಗೆ ಬಲಿಯಾಗಬಾರದು. ರಾಷ್ಟ್ರೀಯ ಭಾಷೆಗಳ ಮೆರವಣಿಗೆಯಲ್ಲಿ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಧರ್ಮದ ಸೋಗಿನಲ್ಲಿ ದೇಸೀಯ ಜನಪರ ಧರ್ಮಗಳೂ ಕಳೆದು ಹೋಗಬಾರದು. ರಾಷ್ಟ್ರೀಯ ಪ್ರಧಾನ ಸಂಸ್ಕೃತಿಯ ಹಮ್ಮು ಬಿಮ್ಮುಗಳಲ್ಲಿ ಪ್ರಾದೇಶಿಕ ಸಮಸಂಸ್ಕೃತಿಗಳ ಉಸಿರು ಕಟ್ಟಬಾರದು. ದೇಸೀಯ ಹಾಗೂ ಸ್ಥಳೀಯ ತತ್ವಗಳಿಗೆ ಸಲ್ಲಬೇಕಾದ ಮಹತ್ವ, ಮನ್ನಣೆ ಇತ್ತು ಉಳಿಸಿಕೊಳ್ಳುವುದು ಒಳ್ಳೆಯದು. ಪ್ರಾದೇಶಿಕ ವೈವಿಧ್ಯ ಅಪಾಯಕಾರಿಯಲ್ಲ.

ಭಾರತ ರಜಾದಿನಗಳ ಮಹಾರಾಜ. ಪ್ರಗತಿ ಬಯಸುವ ಯಾವ ರಾಷ್ಟ್ರದಲ್ಲಿಯೂ ಇಲ್ಲಿರುವಷ್ಟು ರಜಗಳಿಲ್ಲ. ಹೊಸವರ್ಷದ ಪಂಚಾಂಗ ಹಿಡಿದರೆ ಮೊದಲು ನೋಡುವುದು ಆ ವರ್ಷದಲ್ಲಿ ಎಷ್ಟು ರಜಗಳಿವೆ, ರಜದ ಹಬ್ಬಗಳು ಭಾನುವಾರ ಬಂದು ಎಷ್ಟು ರಜ ತಪ್ಪಿತು – ಎಂದು! ಹಾಲಿ ಇರುವ ರಜಗಳ ಏರ್ಪಾಟನ್ನು ಮುರಿದು ಮರುಸಂಯೋಜನೆ ಮಾಡುವುದರತ್ತ ಪರಿಭಾವಿಸುವ ಹಂತ ಮುಟ್ಟಿದ್ದೇವೆ. ಇಡೀ ದೇಶಕ್ಕೆ ಅನ್ವಯಿಸುವಂತೆ ವರ್ಷಕ್ಕೆ ಇಷ್ಟು ಎಂದು ರಜಗಳ ಸಂಹಿತೆ ಜಾರಿಗೊಳ್ಳುವುದು ಲೇಸು, ಸಾರ್ವತ್ರಿಕ ರಜಗಳು ರಾಷ್ಟ್ರೀಯ ಮಹತ್ವದ್ದಾಗುವುದು ಸೂಕ್ತ : ಆಗಸ್ಟ್ ೧೫, ಅಕ್ಟೋಬರ್ ೨, ಜನವರಿ ೨೬ – ಈ ಮೂರು ದಿನಗಳಷ್ಟೆ ಇಡೀ ಭಾರತಕ್ಕೆ ಅನ್ವಯಿಸುವ ರಜೆಯ ದಿನಗಳಾಗುವುದು ಸಮಂಜಸ, ಆಯಾ ಪ್ರಾಂತ್ಯದ ಸಾಂಸ್ಕೃತಿಕ ಮಹತ್ವದ ಹಾಗೂ ಜಾತಿಮತಧರ್ಮದ ಸೋಂಕು ಇರದ ಒಂದು ದಿನ ವರ್ಷದ ರಜಕ್ಕೆ ಅರ್ಹವಾಗಬಹುದು. ಕರ್ನಾಟಕದಲ್ಲಿ ನವೆಂಬರ್ ೧ ರಾಜ್ಯೋತ್ಸವ ಮಹತ್ವದ ರಜದ ದಿವಸವಾಗುವುದು ಸರಿ. ಉಳಿದಂತೆ ಉದ್ಯೋಗದಲ್ಲಿರುವ ಪ್ರತಿಯೊಬ್ಬರಿಗೂ ವರ್ಷದಲ್ಲಿ, ಅವರ ಗಳಿಕೆಯ ರಜವಲ್ಲದೆ, ಒಟ್ಟು ಇಪ್ಪತ್ತು ದಿನಗಳ ಸಾಂದರ್ಭಿಕ ರಜ ಪಡೆಯಲು ಅವಕಾಶವಿದ್ದರೆ ಸಾಕು. ಒಟ್ಟಾರೆ, ಎಲ್ಲ ಮತಧರ್ಮಗಳೂ ಶ್ರೇಷ್ಠವೆ ಆಗಿರುವುದರಿಂದ ಯಾವೊಂದನ್ನೂ ನಿಯಮ ಮುರಿದು ಓಲೈಸಬೇಕಾಗಿಲ್ಲ. ಆತ್ಯಂತಿಕವಾಗಿ ರಾಷ್ಟ್ರಧರ್ಮಕ್ಕೆ ಮನ್ನಣೆ ಸಲ್ಲಲಿ.

ಸಮೂಹ ಸನ್ನಿಯಿಂದ ಸಾಂಸ್ಕೃತಿಕ ಚಳವಳಿಗಳು ಹದ್ದು ಮೀರಿ, ದಾರಿತಪ್ಪಿದ್ದುಂಟು. ಅತಿಭಾವುಕತೆಯ ಅಪಸ್ಮಾರದಿಂದ ಪಥಭ್ರಷ್ಟರಾಗುವ ಅಪಾಯ ತಪ್ಪಿದ್ದಲ್ಲ. ಮುಷ್ಕರ, ಧರಣಿ, ಪ್ರತಿಭಟನೆ, ಬಂದ್ ಮೊದಲಾದುವು ಇಂದು ಮೂಲಾರ್ಥದಿಂದ ಬಹುದೂರ ಬಂದು, ತಮ್ಮ ಶಕ್ತಿಯ ಪಾವಿತ್ರ್ಯವನ್ನು ಕೆಡಿಸಿ ದುರುಪಯೋಗ ಮಾಡುತ್ತಿವೆ. ನಮ್ಮ ಯಾವುದೇ ವಿರೋಧಾಭಿವ್ಯಕ್ತಿಯ ವಿಧಾನ ಪ್ರಗತಿಚಕ್ರದ ಚಾಲನೆಯನ್ನು ನಿಲ್ಲಿಸಬಾರದು. ಮಾತತ್ತಿದರೆ ಬಂದ್ ಗೆ ಕರೆ ಕೊಡುವುದು ವಿಪರ್ಯಾಸ, ಸಮಾಜದ ಸೌಷ್ಠವ ಚಲನೆಯನ್ನೇ ಅಸ್ತವ್ಯಸ್ತಗೊಳಿಸುವ ‘ಬಂದ್’, ಜೀವವಿರೋಧಿಯಾದ ಉಪಕ್ರಮ. ಅದರಿಂದ ಆಗುವ ಅನಾಹುತ, ನಷ್ಟ ನೋವು ಊಹಾತೀತ. ಮುನ್ನಡೆಯನ್ನು ಬಯಸುವ ರಾಷ್ಟ್ರಗಳ, ಶತ್ರುಗಳು ಬಂದ್ ಮತ್ತು ಮುಷ್ಕರ. ಹೀಗೆ ಹೇಳುವಾಗ ಧರಣಿ, ಮುಷ್ಕರ, ಪ್ರತಿಭಟನೆ ತೋರದೆ ಎಲ್ಲ ದಬ್ಬಾಳಿಕೆಯನ್ನು ಮೌನವಾಗಿ ಸಹಿಸಿಕೊಳ್ಳಬೇಕೆಂದು ಅರ್ಥವಲ್ಲ. ಮಾನವ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳನ್ನು ಸುಲಿಗೆ ಮಾಡುವ, ದಮನಗೊಳಿಸುವ ಎಲ್ಲ ಹುನ್ನಾರಗಳನ್ನು ಬಯಲಿಗೆ ಎಳೆದು ಖಂಡಿಸಬಾರದೆಂದಲ್ಲ. ಸಾಮ್ರಾಜ್ಯಷಾಹಿ ಪ್ರಮತ್ತತೆಯನ್ನು ಬಗ್ಗು ಬಡಿಯುವುದು ಅನಿವಾರ್ಯ. ಆದರೆ ವಿರೋಧವನ್ನು ದಾಖಲಿಸುವ ವಿಧಾನದ ಸ್ವರೂಪ ಉತ್ಪಾದಕವಾಗಿರಬೇಕು. ಪ್ರತಿಭಟನೆಯ ಪ್ರತೀಕವಾಗಿ ಕಪ್ಪು ಪಟ್ಟಿಯನ್ನು ಧರಿಸಿ ಕೆಲಸಕ್ಕೆ ಹಾಜರಾಗಬಹುದು, ಕೆಲಸದ ಅವಧಿ ಮುಗಿಸಿ ಅನಂತರ ಜನತಾಂತ್ರಿಕವಾದ ಸಂಧಾನದ ಮಾರ್ಗಗಳಿಂದ ಪ್ರತಿಭಟನೆ ಸಂಬಂಧದ ಸಭೆ ನಡೆಸಬಹುದು.

ಹೀಗೆಯೇ ಭಾರತದ ಸರ್ವಾಂಗೀಣ ಪ್ರಗತಿಗಾಗಿ ಸಂವಿಧಾನಾತ್ಮಕವಾಗಿ ಅಳವಡಿಸಬೇಕಾದ ಇನ್ನೊಂದು ಜರೂರು ಜನಸಂಖ್ಯಾಸ್ಫೋಟ ನಿಯಂತ್ರಣ. ಜಾತಿಮತ ಧರ್ಮ ಪಕ್ಷ ಪ್ರದೇಶಗಳ ತಾರತಮ್ಯ ತೋರದೆ, ಒಬ್ಬರು ಅಥವಾ ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ಅವಕಾಶ ಕೊಡದಂತೆ ಜನಸಂಖ್ಯೆಯನ್ನು ನಿಯಂತ್ರಿಸುವ ಕಾಯಿದೆ ೨೦೦೫ ರಿಂದ ಜಾರಿಗೆ ಬರಬೇಕು.

ಉಲ್ಬಣಿಸುತ್ತಿರುವ ಪ್ರಜಾಸಂಖ್ಯೆಯ ನಿಯಂತ್ರಣ ಗೋಳದ ಅಗತ್ಯಗಳಲ್ಲೊಂದು. ಭಾರತದ ಹಲವು ಸಮಸ್ಯೆಗಳಿಗೆ ಜನಸಂಖ್ಯಾಸ್ಫೋಟ ಕಾರಣ. ಜನರಿಗೆ ಇದರ ಅರಿವನ್ನು ಮೂಡಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ, ಜನರೂ ಇದರಲ್ಲಿ ಕೈಜೋಡಿಸಿ ಸಹಕರಿಸಬೇಕು. ಜನಸಂಖ್ಯೆಯನ್ನು ಹತೋಟಿ ಮೀರದಂತೆ ಹಿಡಿತಕ್ಕೆ ತರಬೇಕಾದರೆ ಕಠಿಣ ಕ್ರಮಕ್ಕೂ ಮುಂದಾಗಬೇಕು. ಯಾವ ಧರ್ಮವೂ ಪ್ರಜೆಯೂ ದೇಶಕ್ಕಿಂತ ದೊಡ್ಡದಾಗಬಾರದು. ಮುಂದಿನ ವರ್ಷದಿಂದಲೇ ಸುಗ್ರೀವಾಜ್ಞೆ ಹೊರಡಿಸಿ ವಿಧಿಸಬೇಕಾದ ಷರತ್ತು :

೧. ಯಾವ ಪಕ್ಷವೇ ಆಗಲಿ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಬೇಕಾದರೆ ಇಬ್ಬರಿಗಿಂತ ಹೆಚ್ಚು ಮಕ್ಕಳಿರಬಕೂಡದು. ಚುನಾವಣೆ ಸಮೀಪಿಸುತ್ತಿದೆ, ಚುನಾವಣೆಗೆ ನಿಲ್ಲುವವರು ಕನ್ನಡ ಬಲ್ಲವರಾಗಿಬೇಕು ಕನ್ನಡ ಬಲ್ಲವರಿಗೆ ಸೀಟು ಕನ್ನಡ ತಿಳಿದವರಿಗೆ ಓಟು ಎನ್ನುವುದು ಚುನಾವಣೆಯ ಒಂದು ತಾರಕ ಮಂತ್ರವಾಗಬೇಕು. ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗೆ ಕೂಡ ಇದೇ ನಿಯಮ.

೨. ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ದರೆ ಅಂಥ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿವೇತನ ಕೊಡಬಾರದು.

೩. ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರ ಸಾಲ ಕೊಡಬಾರದು. ಕೆಲಸಕ್ಕೆ ಸೇರುವಾಗ ಎರಡು ಮಕ್ಕಳಿದ್ದು ಆಮೇಲೆ ಹೆಚ್ಚು ಮಕ್ಕಳಾದರೆ ಯಾವುದೇ ಮುಂಬಡ್ತಿಗಳು ಸಿಗುವುದಿಲ್ಲವೆಂಬಂತಾಗಬೇಕು.

೪. ಅಲ್ಪಸಂಖ್ಯಾತ ಅಥವಾ ಧಾರ್ಮಿಕ ಕಾರಣಗಳ ರಿಯಾಯಿತಿ ಖಂಡಿತ ಇರಬಾರದು.

೫. ಕಾರ್ಮಿಕರೂ ರೈತರೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಈ ನಿಯಮವಿರಬೇಕು.

೬. ಈ ನಿಯಮ ಪಾಲನೆಯಿಂದ ರೈತ ಕುಟುಂಬಗಳಿಗೆ ಹೆಚ್ಚು ಸುಖಪ್ರಾಪ್ತಿಯಿದೆ. ಆಸ್ತಿಯ ಹಂಚಿಕೆಯೂ ದೊಡ್ಡ ಕುಟುಂಬ ನಿರ್ವಹಣೆಯ ಹೊಣೆಯೂ ನಿವಾರಣೆ ಆಗುತ್ತದೆ. ಸಾಲಗಾರರಾಗುವುದು ತಪ್ಪುತ್ತದೆ.

ಅನೇಕಾನೇಕ ಪ್ರಶ್ನೆಗಳ ಸರಮಾಲೆ ಹಿಡಿದು ಅಧ್ಯಕ್ಷಭಾಷಣವನ್ನು ಲಂಬಿಸುವ ಅಪೇಕ್ಷೆ ಇಲ್ಲ. ನನಗೆ ನನ್ನ ಮಿತಿಯ ಅರಿವು ಇದೆ. ಕೆಲವೇ ಸಂಕೀರ್ಣ ಸಮಸ್ಯೆಗಳಿಗೆ ಸ್ಪಂದಿಸಿ ನನ್ನ ಗ್ರಹಿಕೆಗಳ ನಿರ್ವಚನಕ್ಕೆ ಸೀಮಿತಗೊಲಿಸಿದ್ದೇನೆ. ಸಮಾಜ, ಸಾಹಿತ್ಯ, ಸಂಸ್ಕೃತಿ, ಭಾಷೆ ಕುರಿತು ನನ್ನೊಳಗೆ ಮಿಡುಕುತ್ತ ಚಿಮುಗುಡುವ ಭಾವನೆಗಳನ್ನು ನಿಮ್ಮ ಮಡಿಲಿಗಿಟ್ಟಿದ್ದೇನೆ. ನಾನು ಹುಟ್ಟಿದಂದಿನಿಂದ ಕನ್ನಡದ ಶಿಷ್ಯೆ. ಸಮಗ್ರ ಕನ್ನಡ ಪರಮಪರೆಯೇ ನನ್ನ ಪಠ್ಯ ಕರ್ನಾಟಕವೇ ನನ್ನ ಪಾಠಶಾಲೆ. ಈ ಕನ್ನಡ ಶಾಲೆಯಲ್ಲಿ ನಾನು ಜೀವನ ಪಾಠಗಳನ್ನು ಕಲಿತು ಬೆಳೆದ ವಿದ್ಯಾರ್ಥಿನಿ. ಹತ್ತಾರು ಸಂಗತಿಗಳಿಗೆ ಮುಖಾಮುಖಿಯಾಗುತ್ತ ಮಾನಾಡಿದ್ದೇನೆ. ಇದು ನನಗೆ ನಾನು ಗಟ್ಟಿಯಾಗಿ ಹೇಳಿಕೊಂಡ ಉಪನ್ಯಾಸವೂ ಹೌದು. ಆಶಾವಾದಿಯಾದ ನನ್ನ ಕಳಕಳಿಯನ್ನು ಪ್ರಾಮಾಣಿಕ ಪರಿಭಾವನೆಯನ್ನು ಆಲಿಸುವ ಔದಾರ್ಯ ತೋರಿದ ತಮ್ಮ ಹೃದಯಸಿರಿಗೆ, ಸುಹೃದ್ ಗಣಾವೃತ ಕನ್ನಡ ಜನ ಸಂಸದಾಂತರ್ಗತ ನಿರ್ಮಲ ಜ್ಯೋತಿಗೆ ನಮಸ್ಕರಿಸುತ್ತೇನೆ.