ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಬೆಳೆ ಸರಿಯಾಗಿಲ್ಲ. ನೀರೂ ಇಲ್ಲ, ವಿದ್ಯುತ್ತೂ ಇಲ್ಲ. ಸಾಲಸೋಲ ಅಧಿಕವಾಗಿದ್ದುದು ಕ್ರಮೇಣ ಅಧಿಕತರವಾಗಿ, ಕಡೆಗೆ ಅಧಿಕತಮಯವಾಯಿತು. ಒಂದು ವರ್ಷ ಸುಧಾರಿಸಿದರು, ಎರಡನೆಯ ವರ್ಷ ಕೂಡಿಟ್ಟ ಆಪದ್ಧನ ಮುಗಿಯಿತು, ಮೂರನೆಯ ವರ್ಷ ದನಕರು ಮಾರಿದರು. ನಾಲ್ಕನೆಯ ವರ್ಷ ಪಾತ್ರೆ ಪಗಡೆ ಆಸ್ತಿ ಮಾರಿದರು. ಈಗ ಇನ್ನೇನೂ ಉಳಿಯದೆ ತ್ರಾಣ ಇರುವ ಕೆಲವರು ಗುಳೆ ಹೋದರು. ಅನೇಕರು ಪ್ರಾಣ ತೆತ್ತರು. ಮಳೆಯಾಗಿ ಬೆಳೆ ಬರುತ್ತದೆ, ಮಾಡಿದ ಸಾಲ ತೀರಿಸೋಣ ಎಂಬ ಕನಸುಗಳೊಂದಿಗೆ ಇಟ್ಟ ಬೆಳೆಯು ಒಟ್ಟೊಟ್ಟಿಗೆ ಒಣಗಿದವು. ಕಡು ಬಡತನದ ಸಿಡಿಲ ಹೊಡೆತ ತಾಳಲಾರದೆ ಪ್ರಾಣತೆತ್ತ ರೈತರ ಸರಣಿ ಆತ್ಮಹತ್ಯೆ ನೆನೆದಾಗ ನನಗೆ ಜನಪದ ಗೀತೆಯೊಂದು ನೆನಪಾಗುತ್ತದೆ :

            ಬಡವರು ಸತ್ತರೆ ಸುಡಲಿಕೆ ಸೌದಿಲ್ಲೊ
            ಒಡಲ ಬೆಂಕೀಲಿ ಹೆಣ ಬೆಂದೊ
            ದೇವರೆ ಬಡವರಿಗೆ ಸಾವ ಕೊಡಬೇಡೊ ||

ಇಂಥ ರೈತರು ಬೆಳೆದು, ಕೊಟ್ಟ ಅನ್ನ ತಿಂದು ಬೆಳೆದ ನಾನು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವನ್ನು ಕೃತಜ್ಞತೆಯಿಂದ ರೈತರ ಚಿರಸ್ಮರಣೆಗೆ ಸಮರ್ಪಿಸುತ್ತೇನೆ. ಆದರೆ ಅದೇ ಉಸಿರಿನಲ್ಲಿ ನಮ್ಮ ರೈತರು ಬದುಕಿನ ಸವಾಲನ್ನು ಎದುರಿಸುತ್ತ ಬಂದ ಎದೆಗಾರಿಕೆಯನ್ನು ಕಳೆದುಕೊಳ್ಳಬಾರದೆಂದೂ ಕೋರುತ್ತೇನೆ. ತಮ್ಮನ್ನು ಕಾಪಾಡುವವರೂ ಕೇಳುವವರೂ ಯಾರೂ ಇಲ್ಲವೆಂಬ ಹತಾಶೆ ಕಾಡಿ, ‘ಭೂಮಿ ನಂಬಿ ನಾವು ಕೆಟ್ಟೆವು. ಈ ನೆಲ ಉಳೋದು ಬಿಟ್ಟು ನೌಕರಿ ಚಾಕರಿ ಮಾಡಲು ಹೋಗಿದ್ದರೆ ಬದುಕುತ್ತಿದ್ದೆವು’ ಎಂಬ ಭಾವನೆ ಬಲವಾಗುತ್ತಿದೆ. ಹೆಂಗಸರು ‘ಇನ್ನು ಅಡುಗೆ ಮನೆ ಬೇಡ’ ಎಂದೂ, ರೈತರು ‘ಇನ್ನು ಭೂಮಿ ಬೇಡ, ಹೊಲಕ್ಕೆ ಹೋಗುವುದಿಲ್ಲ’ ಎಂದೂ ವಿದಾಯ ಹೇಳಿದರೆ ಮನೆಗೂ ನೆಲಕ್ಕೂ ಬೆಂಕಿ ಬಿದ್ದ ಹಾಗೆ. ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ ಎಂದು ನಾಡು ಚಿಂತಿಸಬೇಕು. ಕರುಣೆ, ಅನುಕಂಪ, ಸಹಾನುಭೂತಿಗಳು ಸಾಲುವುದಿಲ್ಲ. ಆತನ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಹಾಗೆ ಶಾಶ್ವತ ಪರಿಹಾರದ ದಾರಿಗಳನ್ನು ಹುಡುಕಬೇಕು.

೨೫-೩೦ ಎಕರೆಗಿಂತ ಕಡಿಮೆ ಭೂಮಿಯ ಸಣ್ಣ ರೈತರಿಗೆ ಸಾಲವನ್ನು ಮನ್ನಾಮಾಡಿ ಉತ್ತೇಜಿಸಬೇಕು. ಹಸಿರು ಕ್ರಾಂತಿ ಎಂಬುದು ಹೆಸರಿಗಷ್ಟೆ. ಹಳ್ಳಿಗಳ ಅಭಿವೃದ್ಧಿ ತೃಪ್ತಿಕರವಾಗಿಲ್ಲ. ಕೃಷಿವಲಯಕ್ಕೆ ಹೊಸ ಚೈತನ್ಯ ತುಂಬಬೇಕಾಗಿದೆ. ರೈತರಿಗೆ ಕೃಷಿ ಆಧಾರಿತ ಉದ್ಯೋಗಗಳು ಗ್ರಾಮಪರಿಸರದಲ್ಲಿಯೇ ಕಲ್ಪಿತವಾದರೆ ಗುಳೆ ಹೋಗುವುದು ತಪ್ಪಿ ಸ್ವಾವಲಂಬಿತ ಬದುಕಿಗೆ ದಾರಿಯಾಗುತ್ತದೆ. ಸರ್ಕಾರದೊಂದಿಗೆ ಸಾಹಿತಿಗಳೂ ರೈತರ ಸಮಸ್ಯೆಗೆ ಮುಖಾಮುಖಿಯಾಗಿ ನಿಂತು ಸಾಂತ್ವನ ಹೇಳಬೇಕು. ಸಾಹಿತಿಗಳಾದ ನಾವೆಲ್ಲ ನಿಮ್ಮ ಜೊತೆಗೆ ಇದ್ದೀವಿ ಎಂದು ಧೈರ್ಯ ಹೇಳಬೇಕು.

ಮುನ್ನೂರು ವರ್ಷ ಆಳಿದ ಪರಕೀಯರ ಗುರುತು ಗಾಯಗಳು ಪೂರಾ ಅಳಿಸುವ ಮೊದಲೆ ಮತ್ತೆ ಹೊರಗಿನವರ ಪ್ರವೇಶದ ಹಿಂದೆ ಪ್ರವರ್ತಿಸುವ ಮೂಲ ಆಶಯಗಳನ್ನು ಗುಮಾನಿಯಿಂದ ಹೆಕ್ಕಬೇಕಾಗಿದೆ. ಏಕೆಂದರೆ ಹಾಲಿ ಎದುರಿಸುತ್ತಿರುವ ಇಕ್ಕಟ್ಟಿನ ನಡುವೆ ‘ಗ್ಯಾಟ್’ ಒಪ್ಪಂದದಿಂದ ದೂರಗಾಮಿ ದುಷ್ಪರಿಣಾಮಗಳಿಗೆ ಒಳಗಾಗುವ ಅಪಾಯವೂ ಎದುರಾಗಿದೆ. ಈಸ್ಟ್ ಇಂಡಿಯಾ ಕಂಪನಿ ಮಾರು ವೇಷಗಳಲ್ಲಿ ಮರುಕಳಿಸಿ ಭಾರತವನ್ನು ನುಂಗಿ, ಆಪೋಷನಕ್ಕೆ ಕಾಯುತ್ತಿವೆ. ಗ್ಯಾಟ್ ಎಂಬುದು ಅದರ ಒಂದು ಸುಧಾರಿತ ಆವೃತ್ತಿ. ಮೆಟ್ರೊ ಎಂಬುದು ಅದರದೇ ಇನ್ನೊಂದು ರೂಪ. ಬಹುರಾಷ್ಟ್ರೀಯ ಕಂಪನಿಗಳ ಈ ವಿವಿಧೋದ್ದೇಶಗಳಿಗೆ ವಿವಿಧ ದೇಶಗಳನ್ನು ಕಬಳಿಸಿ ನುಂಗಿ ನೀರು ಕುಡಿಯುವ ಆಶಯವಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶಭಾಷೆಗಳ ಬಗ್ಗೆ ಅಸಡ್ಡೆ, ಸ್ಥಳೀಯ ವಿಚಾರದಲ್ಲಿ ನಿರ್ದಯಿಗಳು. ಇಲ್ಲಿನ ಸಂಪತ್ತು ಮಾತ್ರ ಬೇಕೆಂಬುದು ಹಗಲು ದರೋಡೆಯಲ್ಲದೆ ಮತ್ತೇನು ? ಕರ್ನಾಟಕವನ್ನು ಕಡೆಗಣಿಸಿ ವಿಜೃಂಭಿಸ ಬಯಸುವ ಪ್ರವೃತ್ತಿಗಳನ್ನು ಹತ್ತಿಕ್ಕಿದರೆ ತಪ್ಪಲ್ಲ. ಕೃಷಿಯೇ ಭಾರತದ ಶಕ್ತಿ ಎಂಬುದನ್ನು ವಿದೇಶಿ ಜಾಣರು ಚೆನ್ನಾಗಿ ಬಲ್ಲರು. ಕಡಿಮೆ ದರದಲ್ಲಿ ವಿದೇಶಿ ಸರಕುಗಳನ್ನು ಆರಂಭದ ವರ್ಷ ಒದಗಿಸುತ್ತ ಕ್ರಮೇಣ ಇಲ್ಲಿನ ವ್ಯವಸಾಯ ಮತ್ತು ಮಾರುಕಟ್ಟೆಯನ್ನು ದಾಸ್ಯಕ್ಕೆ ತಳ್ಳುವ ಷಡ್ಯಂತ್ರಜಾಲ ಸಿದ್ಧವಾಗುತ್ತಿದೆ. ಹತ್ತು ದಿನ ಇಟ್ಟರೂ ಕೆಡದಂಥ ಹಾಲನ್ನು ಡೆನ್ಮಾರ್ಕಿನವರು ಇಲ್ಲಿಯೂ ಹಂಚಿದರೆ ಇಲ್ಲಿನ ಎಮ್ಮೆ ಹಸುಗಳನ್ನೂ ಹಾಲನ್ನೂ ಕೇಳುವವರು ಯಾರು ? ಇಳುವರಿ ಹೆಚ್ಚಲೆಂಬ ಕಾರಣಕ್ಕೆ ವಿದೇಶಿ ಮಿಶ್ರತಳಿ ಕಾಳು ಬಳಸುತ್ತಾರೆ. ಆದರೆ ಮುಂದಿನ ಬೆಳೆಗೆ ಅವು ನಿರುಪಯೋಗಿ, ಮರು ಉತ್ಪಾದಕವಲ್ಲ. ಅದರಿಂದ ಮತ್ತೆ ವಿದೇಶಿ ಮಾಲಕರ ಬಳಿ ಬಿತ್ತನೆ ಕಾಳಿಗೆ ಕೈಯೊಡ್ಡಿ ಪಾಳಿ ನಿಲ್ಲುವುದು ತಪ್ಪುವುದಿಲ್ಲ. ಈ ದಿಕ್ಕಿನ ಲೆಕ್ಕಾಚಾರವನ್ನು ನಮ್ಮ ರೈತ ಸಂಘಗಳು ಪರಿಭಾವಿಸಬೇಕಾದ ಸಂಕ್ರಮಣಾವಸ್ಥೆ ಬಂದಿದೆ. ಹೀಗೆ ಹೇಳುವಾಗ ಮತ್ತೆ ಹಳೆಯ ಪದ್ಧತಿಗಳಿಗೇ ಗಂಟು ಬೀಳಬೇಕೆಂದು ನಾನು ಸೂಚಿಸುತ್ತಿಲ್ಲ.ಕಾಲಕಾಲಕ್ಕೆ ತಕ್ಕ ಬದಲಾವಣೆ ಆಗುವಾಗಲೂ ನಾಳೆಗಳ ಮುನ್ನೋಟವೂ ನೆನಪಿರಲೆಂಬ ಗ್ರಹಿಕೆಯಿಂದ ಈ ನಾಲ್ಕು ಮಾತು ಆಡಿದ್ದೇನೆ.

ಶತಮಾನಗಳಿಂದ ಸ್ವಾಭಿಮಾನಿಗಳಾಗಿ ಬಾಳುತ್ತ ಬಂದಿರುವ ನೇಗಿಲಯೋಗಿಗಳು ಮರ್ಯಾದಾ ಪುರುಷೋತ್ತಮರು. ಈ ನಮ್ಮ ಅನ್ನದಾತರು ಇಂದು ಸರಣಿ ಆತ್ಮಹತ್ಯೆಯತ್ತ ಅಭಿಮುಖರಾಗಿರುವುದು ಕಳವಳಕಾರಿಯಾದ ಬೆಳವಣಿಗೆ. ಅಲ್ಲೊಬ್ಬ ಇಲ್ಲೊಬ್ಬರೆಂದು ಆರಂಭವಾಗಿ ಒಟ್ಟೊಟ್ಟಿಗೆ ಕುಟುಂಬಗಳೇ ಉರುಳಿಗೆ ಕೊರಳೊಡ್ಡಿದ ವರದಿಗಳು ತಲ್ಲಣಗೊಳಿಸುತ್ತಿವೆ. ಈ ದಾರುಣ ಘಟನೆಗಳಿಗೆ ವಿಷಣ್ಣರಾಗಿ ಮೊಸಳೆ ಕಣ್ಣೀರು ಸುರಿಸಿ ವಿರಮಿಸದೆ ನಾವೀಗ ಈ ಇಡೀ ಪ್ರಸಂಗಗಳ ಹಿಂದಿರುವ ವಾಸ್ತವವನ್ನು ಸರಿಯಾಗಿ ಅರಿತು ಪರಿಹಾರದ ದಾರಿಗಳನ್ನು ಹುಡುಕುವ ವಿವೇಕ ತೋರಬೇಕೆನಿಸಿದೆ. ರೈತರೇ ಅಲ್ಲದೆ ಇದೇ ಬಗೆಯ ಬವಣೆ ಬೇಗುದಿಯಲ್ಲಿ ಬೇಯುತ್ತಿರುವ, ಕೈಮಗ್ಗಗಳನ್ನು ನಂಬಿದ ನೇಕಾರರನ್ನೂ ಗಿರಣಿಗಳನ್ನು ಅವಲಂಬಿಸಿದ ಕಾರ್ಮಿಕರನ್ನೂ ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುವವರನ್ನೂ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಾಗಿದೆ. ಬೇಕಾಬಿಟ್ಟಿ ಬಂದ್ ಗೆ ಕರೆಕೊಡುವುದರಿಂದ ಇವರೆಲ್ಲರಿಗೂ ಆಗುವ ಬೃಹತ್ ಪ್ರಮಾಣದ ನಷ್ಟವನ್ನೂ ಗಮನಿಸಬೇಕು.

ಪುರುಷ ಪ್ರಧಾನವಾದ ಕುಟುಂಬಗಳಲ್ಲಿ ಆರ್ಥಿಕ ವಹಿವಾಟು ಬಹುವಾಗಿ ಯಜಮಾನ ಗಂಡಸಿನ ಕಾರ್ಯಭಾರವಾಗಿರುವುದರಿಂದ ಈಗಿನ ಆತ್ಮಹತ್ಯೆಯು ಅದಕ್ಕೆ ಆತ ತೆತ್ತಬೆಲೆಯೆ ಎಂಬುದನ್ನೂ ಪರಾಮರ್ಶಿಸಬೇಕು. ಹಾಲಿ ಇರುವ ಸಾಂಸಾರಿಕ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಟು ತಂದುಕೊಂಡು ಹೆಂಗಸರಿಗೂ ಮನೆಯ ಆರ್ಥಿಕ ವಹಿವಾಟನ್ನು ವಹಿಸಿದ ಪಕ್ಷದಲ್ಲಿ ಈ ದುರಂತ ನಿವಾರಣೆಯಾದೀತೆ ಎಂದೂ ಪರಿಶೀಲಿಸಬೆಕು. ಇತ್ತೀಚೆಗೆ ಪ್ರಬಲ ಚಳವಳಿಯಾಗಿ ಹಳ್ಳಿಗಳವರೆಗೂ ಹಬ್ಬುತ್ತಿರುವ ಸ್ತ್ರೀಶಕ್ತಿ ಸಂಘಟನೆಯ ಸಬಲೀಕರಣ ಪ್ರಗತಿಯನ್ನು ಗಮನಿಸಿದಾಗ ಹೆಣ್ಣಿಗೆ ಆರ್ಥಿಕ ಸಬಲತೆ ತರುವ ನಿಟ್ಟಿನಲ್ಲಿಯೂ ಕಾರ್ಯತತ್ಪರರಾಗಬಹುದು. ರೈತರಿಗೂ ಕೂಲಿನಾಲಿಗಳಿಗೂ ಕಾರ್ಮಿಕರಿಗೂ ನೀಡುವ ಸಾಲಗಳಿಗೆ ಬಡ್ಡಿದರ ಬಹಳ ಕಡಿಮೆ ಇರಬೇಕು. ಚಕ್ರಬಡ್ಡಿ ಹಾಕಬಾರದು ಮತ್ತು ದೀರ್ಘಾವಧಿ ಸಾಲ ಸುಲಭವಾಗಿ ಶೀಘ್ರವಾಗಿ ಸಿಗುವಂತಾಗಬೇಕು ಮಧ್ಯವರ್ತಿಗಳ ಬೋನುಗಳಿಂದ ಬಿಡಿಸಿ ಕೃಷಿ ಮಾರುಕಟ್ಟೆ ಸಂಘಗಳ ಮೂಲಕ ರೈತನ ಬೆಳೆಗೆ ನ್ಯಾಯಬೆಲೆ ಸಿಗುವಂತೆಕೊಳ್ಳಬೇಕು. ಆತ ಇಡೀ ವರ್ಷ ಬಂಡವಾಳ ಹೂಡಿ ಸರಿಯಾದ ಬೆಲೆ ಸಿಗಲಿಲ್ಲವೆಂದು ಹತಾಶನಾಗಿ ಹೊಲದಲ್ಲೂ ರಸ್ತೆ ಬದಿಯಲ್ಲೂ ತನ್ನ ಬೆಳೆಯನ್ನು ಬಿಸಾಕಿ ಕೈಚೆಲ್ಲುತ್ತಿದ್ದಾನೆ. ದಲ್ಲಾಳಿಗಳೊಂದಿಗೆ ಪೈಪೋಟಿಯಿಂದ ಸ್ಪರ್ಧಿಸಲಾಗದೆ ಮುಗ್ಗರಿಸುತ್ತಿದ್ದಾನೆ.

ರೈತರು ಬರ್ಬರತೆಗೆ ಒಲಿದವರಲ್ಲವಾದರೂ ಸಿಟ್ಟಿಗೇಳುವ ರಟ್ಟೆ ಬಲ ಇಲ್ಲವೆಂದಲ್ಲ. ಆದರೆ ಭೂಮಿಯನ್ನು ನಂಬಿದ ಅವರಿಗೆ ಭೂಮಿತೂಕದ ತಾಳ್ಮೆಯೂ ಸಹಜವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರೈತರ ಸಂಘಟನೆಯನ್ನು ಪುರಸ್ಕರಿಸಬೇಕು. ತಾನು ಬೆಳೆದದ್ದಕ್ಕೆ ಸರಿಯಾದ ಬೆಲೆ, ಪ್ರತಿಫಲ ಸಿಗಬೇಕೆಂಬುದು ನ್ಯಾಯ. ಕಾಯಕ ಜೀವಿಗಳ ಹೊಟ್ಟೆಯ ಮೆಲೆ ಬರೆ ಹಾಕಬಾರದು. ದಳ್ಳಾಳಿಗಳ ಬೋನಿಗೆ ಬೀಳದಂತೆ ರಕ್ಷಿಸುತ್ತ ಕಡಿಮೆ ಬಡ್ಡಿಯಲ್ಲಿ ಸುಲಭವಾಗಿ ಸಾಲ ಸಿಗುವಂತಾಗಬೇಕು.

ಮಹಿಳೆ : ಲೇಖಕಿಯ ಸುತ್ತಮುತ್ತ

ನಾನು ಮೊದಲಿಂದ ಸ್ತ್ರೀವಾದಿಯೆಂಬ ಠಸ್ಸೆ ಒತ್ತಿದ್ದಾರೆ. ಇದನ್ನು ಬೇಷರತ್ತಾಗಿ ಒಪ್ಪಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ಮಹಿಳೆಯರ ಪರವಾಗಿ ಮುಂದೆ ನಿಂತು ಮಾತಾಡುವುದು ನನಗೆ ದಣಿವರಿಯದ ಪ್ರಿಯವಾದ ಕಾಯಕ. ಮಹಿಳೆಯನ್ನು ಎಲ್ಲೆಡೆ ಎರಡನೆಯ ದರ್ಜೆಯವಳೆಂದು ತಿಳಿಯುವ ಪರಿಪಾಟಿ ಈಗಲೂ ನಿಂತಿಲ್ಲ. ಹೆಣ್ಣು ಭ್ರೂಣಹತ್ಯೆ ವ್ಯವಸ್ಥಿತವಾಗಿ ಮುಂದುವರಿದಿದೆ. ಹೆಂಗಸರೇ ಹೆಂಗಸರಿಗೆ ಹಗೆಗಳಾಗದೆ, ತಮ್ಮನ್ನು ಕೀಳಾಗಿ ಕಾಣುವ ಕೀಳರಿಮೆಯಿಂದ ನರಳದೆ ಸಂಘಟಿತರಾಗಿ ಆತ್ಮಸ್ಥೈರ್ಯ ತಾಳಬೇಕು. ಹೆಣ್ಣು, ಲೋಕ ಹೇಳುವಷ್ಟು ದುರ್ಬಲಳೇನಲ್ಲ. ಕಳೆದ ಮೂರು ದಶಕಗಳಿಂದ ಈಚೆಗೆ ಸ್ತ್ರೀಪರವಾದ ಹೋರಾಟ ಹುರಿಗೊಳ್ಳುತ್ತಿದೆ. ವಿದೇಶಗಳಲ್ಲಿಯೂ ಸ್ತ್ರೀಯ ಶೋಷಣೆ ಅವ್ಯಾಹತವಾಗಿ ನಡೆದಿದೆ. ಆದರೆ ಹೆಣ್ಣಿಗೆ ಸರಿಸಮಾನ ಸ್ಥಾನಮಾನ ಸಿಗಬೇಕೆಂಬ ಹೋರಾಟ ಅಲ್ಲಿ ದಟ್ಟವಾಗಿದೆ. ಇಲ್ಲಿಗಿಂತ ಅಲ್ಲಿ ಸ್ತ್ರೀ ಆರ್ಥಿಕವಾಗಿ ಸಬಲೆ.

ಇಪ್ಪತ್ತು ಮೂವತ್ತು ವರ್ಷಗಳ ಹಿಂದಣ ಮಹಿಳಾ ಸಾಹಿತ್ಯದೊಂದಿಗೆ ಇಂದಿನ ಲೇಖಕಿಯರ, ಕೃತಿಗಳನ್ನು ಹೋಲಿಸಿದರೆ ಸ್ತ್ರೀಯರ ಬರೆಹ ನಿಚ್ಚಳವಾಗಿ ಗುಣಾತ್ಮಕವಾಗಿ ಮೌಲಿಕವಾಗುತ್ತಿರುವುದು ಕಾಣುತ್ತದೆ. ಅದರಲ್ಲಿಯೂ ೧೯೮೫-೯೦ ರಿಂದ ಈಚೆಗಿನ ಲೇಖಕಿಯರ ಬರವಣಿಗೆ ಮಹತ್ತರವಾದ ಬೆಳವಣಿಗೆಯನ್ನು ಬಿಂಬಿಸಿದೆ. ಹೀಗಿದ್ದೂ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆ, ಪುರಸ್ಕಾರ ಸಿಕ್ಕಿಲ್ಲ.

ಎಲ್ಲ ಕ್ಷೇತ್ರಗಳಲಲೂ ಮಹಿಳೆಯನ್ನು ಪಕ್ಕಕ್ಕೆ ಸರಿಸುವ ರೂಢಿ ಈಗಲೂ ಇದೆ. ಆದರೆ ಸ್ತ್ರೀಯ ಸ್ವಾಭಿಮಾನ ಜಾಗೃತವಾಗಿದೆ. ಆಕೆ ಮಹಿಳೆಯೆಂಬ ರಿಯಾಯತಿ ಅಥವಾ ಸಹಾನುಭೂತಿ ಬೇಡವೆಂದು ಹೇಳುವ ಸ್ಥಿತಿಯಲ್ಲಿದ್ದಾಳೆ. ಸಾಹಿತ್ಯದಲ್ಲಿ ಲಿಂಗಭೇದ ಆಧಾರಿತ ತಾರತಮ್ಯವನ್ನೂ ವಿರೋಧಿಸಬೇಕು. ಆತ್ಯಂತಿಕವಾಗಿ ನಿಲ್ಲುವುದು ಮಾಡಿದ ದೊಡ್ಡ ಸಾಧನೆಗಳ ಗುಣಮಟ್ಟ ತನ್ನ ಅರ್ಹತೆಯಿಂದಲೇ ಸೋಪಾನಗಳನ್ನೇರಿ ಎತ್ತರಗಳನ್ನು ಎಟುಕಿಸುವ ಈ ಆರೋಗ್ಯಕರ ಧೋರಣೆ ಶ್ಲಾಘವಾದುದು. ಅಮೂರ್ತ ಸಿದ್ಧಾಂತಗಳಲ್ಲಿ ಸಾಹಿತ್ಯ ಅರಳುವುದಿಲ್ಲ. ಅದಕ್ಕೆ ಈ ನೆಲದ ಬದುಕಿನ ಬದ್ಧತೆ ಇರುತ್ತದೆ. ಶ್ರೇಷ್ಠ ಸಾಹಿತ್ಯ ಪ್ರಾದೇಶಿಕ ಹಾಗೂ ರಾಷ್ಟ್ರೀಯ ತುರ್ತುಗಳಿಗೆ ಸ್ಪಂದಿಸುತ್ತ ಕಡೆಗೆ ಎಲ್ಲ ಪರಿಮಿತ ಒತ್ತಡಗಳನ್ನು ಮೀರಿ ಜಾಗತಿಕ ಎತ್ತರಗಳಿಗೆ ಎಟುಕಬೆಕು. ಅಂದರೆ ಸಮಸ್ತ ಮನುಷ್ಯರ ಪರವಾಗಿ ನಿಂತು ಎಲ್ಲ ರೀತಿಯಿಂದ ಶೋಷಣೆಯನ್ನೂ ಸರ್ವಾಧಿಕಾರವನ್ನೂ ತುಳಿತವನ್ನೂ ಧಿಕ್ಕರಿಸಬೇಕೆಂಬ ಅರಿವು ಲೇಖಕಿಯರಿಗಿದೆ.

ದೇಶದ ಮುಖ್ಯ ವಾಹಿನಿಯೆಂದರೆ ಅದು ಪುರುಷ ವಾಹಿನಿಯೆಂಬ ಗ್ರಹಿಕೆಯಲ್ಲಿ ತಿದ್ದುಪಡಿ ಬರಲಿ. Main stream ಎಂದರೆ Male stream ಮಾತ್ರ ಎಂಬ ಹೇಳಿಕೆಗೆ ಸಾಹಿತ್ಯವೂ ಹೊರತಲ್ಲ. ‘ಸಾಹಿತ್ಯ ಪುರುಷ ಪ್ರಧನ ಹಾಗೂ ಪುರುಷ ಕೇಂದ್ರಿತವಾಗಿದ್ದು ಸ್ತ್ರೀ ಅದರ ಅಂಚಿನಲ್ಲಷ್ಟೇ ಸಂಚರಿಸಬಹುದು, ಬಟ್ಟೆಯ ತುದಿಗಳಲ್ಲಿ ಅಲಂಕಾರಕ್ಕೆ ಇಳಿಯಬಿಟ್ಟ ಬಣ್ಣದ ಎಳೆಗಳಂತೆ. ಕಳೆದ ಎರಡು ದಶಕಗಳಿಂದ ಹಲವಾರು ಮಹಿಳೆಯರು ಲೇಖನಿ ಹಿಡಿದಿದ್ದಾರೆ – ಎಂದಾಕ್ಷಣ ಪೊರಕೆ, ಲಟ್ಟಣಿಗೆ, ಸೌಟು ಕೆಳಗಿಟ್ಟಿದ್ದಾಳೆ ಎಂದು ಅರ್ಥವಲ್ಲ, ಈ ಶತಮಾನದಲ್ಲಿ ಬರೆಹಗಾರ್ತಿಯರ ಬಳಗ ದಟ್ಟವಾಗಿದ್ದು ಅವರ ಬರೆಹವೂ ಮಹತ್ವದಾಗುತ್ತಿದೆ. ಕಳೆದ ಶತಮಾನ ಮಹಿಳೆಯರು ಸಹಸ್ರಮಾನಗಳ ಮೌನ ಮುರಿದು ಮಾತಾಡಿದ ಹಾಗೂ ಬರೆಯತೊಡಗಿದ ಕಾಲಮಾನವಾದರೆ, ಈ ಶತಮಾನ ಆ ಬರೆಹ ಮತ್ತು ಮಾತನ್ನು ಶ್ರೇಷ್ಠ ಕಲಾಕೃತಿಯಾಗಿಸುವ ಹಂತ. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪ್ರಗತಿಗೆ ಪಾಲುದಾರಳೆಂಬ ಗ್ರಹಿಕೆ ಸ್ಥಾಪಿತವಾಗುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಅಸ್ಪಶ್ಯರೆಂದೂ ಶೂದ್ರರೆಂದೂ ಕೆಲವರನ್ನು ಕೀಳಾಘಿ ಕಂಡಂತೆ ಲೇಖಕಿಯರನ್ನು ಕಡೆಗಣಿಸುವುದು ಅಸಾಧ್ಯವೆಂಬ ವಾಸ್ತವತೆ ಮನವರಿಕೆ ಆಗುತ್ತಿದೆ. ಮಾನದಂಡದ ಈ ಪಲ್ಲಟದಿಂದಾಗಿ, ಸಮಗ್ರ ಭಾರತೀಯ ಚರಿತ್ರೆಯನ್ನು, ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯ ಚರಿತ್ರೆಯನ್ನು ಮತ್ತೆ ಬರೆದು ಲೇಖಕಿಯರಿಗೆ ತೋರಿರುವ ಅನಾದವರನ್ನು ಸರಿಪಡಿಸಬೇಕಾಗಿದೆ. ನ್ಯಾಯವಾಗಿ, ಅರ್ಹತೆಯಿಂದ ಸಲ್ಲಬೇಕಾದ ನಮ್ಮ ಪಾಲನ್ನು ನಮಗೆ ಕೊಡಿ ಎಂದು ಲೇಖಕಿಯರು ಆಗ್ರಹಿಸುವ ತನಕ ಕಾಯಬೇಕಾಗಿಲ್ಲ.

ಮಹಿಳೆಯರನ್ನು ಮಾರಾಟದ ಸರಕು ಎಂಬಂತೆ ಬಿಂಬಿಸುತ್ತ ಇಂದಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ಜಾಹೀರಾತು ಲೋಕದ ಪಾಪದ ಮುಖವನ್ನು ಕುರಿತು ನಾನು ಹೇಳಲೇಬೇಕಾದ ಪ್ರತಿಕ್ರಿಯೆ ಇದೆ. ಪ್ರತಿ ದಿವಸ ಮಾಧ್ಯಮಗಳಲ್ಲಿ ಮುದ್ರಣವಾಗುವ, ದೂರದರ್ಶನದಲ್ಲಿ ಪ್ರಸಾರವಾಗುವ ಅರ್ಥಹೀನ ಜಾಹೀರಾತುಗಳು ವಾಕರಿಕೆ ತರುತ್ತವೆ. ಗಂಡಸರು ಮುಕಕ್ಷೌರ ಮಾಡಿಕೊಳ್ಳುವ ರೇಜರ್ ಮತ್ತು ಬ್ಲೇಡುಗಳ, ಧರಿಸುವ ಒಳ ಚಡ್ಡಿಯ ಜಾಹೀರಾತಿಗ ಮಹಿಳೆಯನ್ನು ಬಳಸಿಕೊಳ್ಳುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಸುವಾಸನೆಯ ದ್ರವ್ಯಗಳನ್ನು ಪುರುಷ ಮೈಗೆ ಸಿಂಪಡಿಸಿಕೊಂಡ ಕೂಡಲೆ ಹೆಂಗಸರು ಮೈಮರೆತು ಓಡೋಡಿ ಬರುತ್ತಾರೆಂದೂ, ತಂಪುಪಾನೀಯ ನಿಷೆಯನ್ನು ಗಂಡಸರ ಕೈಯಲ್ಲಿ ನೋಡುವುದೆ ತಡ ಸ್ತ್ರೀಯರು ದಡದಡಿಸಿ ಬಂದು ಮುತ್ತಿಕೊಳ್ಳುತ್ತಾರೆಂದೂ ತುಚ್ಛವಾಗಿ ತೊರಿಸಲಾಗುತ್ತಿದೆ. ಇಂಥ ಜಾಹೀರಾತುಗಳು ಆರೋಗ್ಯಕರ ಸಮಾಜಕ್ಕೆ ಶತ್ರುಗಳು. ಮಹಿಳೆಯರಿಗೇ ಅಲ್ಲದೆ ಪುರಷರಿಗೂ ಅಪಮಾನಕರವಾದ ಈ ಬಗೆಯ ಜಾಹೀರಾರುತಗಳನ್ನು ಖಂಡಿಸಬೇಕು. ಮಹಿಳೆಯರನ್ನು ಕೀಲಾಗಿ ಕಾಣಿಸುವ ಈ ದುರ್ಬಳಕೆಯನ್ನು ನಿಯಂತ್ರಿಸುವಂತೆ, ಪ್ರಪಂಚದಾದ್ಯಂತ ಅನ್ವಯಿಸುವಂತೆ ಜಾಹೀರಾತು ನೀತಿಸಂಹಿತೆಯನ್ನು ಜಾರಿಗೆ ತರಬೇಕೆಂದು ಈ ವೇದಿಕೆಯಿಂದ ಆಗ್ರಹಪಡಿಸುತ್ತೇನೆ. ಕೆಲವು ಮಾನವೀಯ ಘನತೆಯನ್ನು ಮಾನ್ಯಮಾಡಿ ಸ್ತ್ರೀಪುರುಷರೆಂಬ ತಾರತಮ್ಯಗಳಿಲ್ಲದೆ ಮಾನವತೆಯ ಮಣೆಯ ಮೇಲೆ ನಿಲ್ಲಿಸುವ ವಿವೇಕ ಆಳಬೇಕು.

ಮಹಿಳೆ ಹಿಂದುಳಿದವರಲ್ಲಿ ಬಹು ಹಿಂದುಳಿದವರಲ್ಲಿ ಬಹು ಹಿಂದುಳಿದವಳು, ಶೋಷಿತರಲ್ಲಿ ಬಹು ಶೋಷಿತಳು. ಸಾಮಾಜಿಕವಾಗಿ ಮುಂದುವರಿದ ಸಮಾಜವಿರಲಿ, ಧಾರ್ಮಿಕವಾಗಿ ಮೇಲು ಜಾತಿಯ ಸಂಸಾರಗಳಾಗಲಿ, ಆರ್ಥಿಕವಾಗಿ ಸದೃಢವಾದ ಕುಟುಂಬಗಳಿರಲಿ – ಎಲ್ಲೆಲ್ಲೂ ಮಹಿಳೆಗೆ ಎರಡನೆಯ ಸಾಲು. ಸುಲಿಗೆಯ ರೂಪ ಸ್ವರೂಪ ವ್ಯತ್ಯಾಸಗೊಳ್ಳಬಹುದೇ ಹೊರತು ಶೋಷಣೆ ನಿಂತಿಲ್ಲ. ಕೊಳಚೆ ಪ್ರದೇಶಗಳ ಹೆಂಗಸರು, ಮಕ್ಕಳು ಶಿಕ್ಷಣ ಸೌಲಭ್ಯದಿಂದ ದೂರ ಇದ್ದಾರೆ. ಲೈಂಗಿಕ ಕಿರುಕುಳ ಹಾಗೂ ಕೌಟುಂಬಿಕ ಕಲಹಗಳಿಗೆ ಮೀಸಲಾದ ಕಾನೂನನ್ನು ಸಾಮಾಜಿಕ, ಮಾನಸಿಕ ದೃಷ್ಟಿಯಿಂದ ವಿಶ್ಲೇಷಿಸುವತ್ತ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಮಹಿಳಾ ಆಯೋಗ ಇನ್ನೂ ಸಶಕ್ತವಾಗಬೇಕು. ಇಂದು ಹೆಣ್ಣಿಗೆ ಸ್ವಾಭಿಮಾನದ ಹಸಿವು ಮುಖ್ಯವೆನಿಸಿದೆಯೆಂಬ ಅರಿವು ಪುರುಷರಲ್ಲೂ ಉಂಟಾಗಿ ಸಹಕರಿಸುತ್ತಿರುವುದು ಸ್ವಾಗತಾರ್ಹ. ಇಷ್ಟಿದ್ದೂ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಲೋಕಸಭಾ ಸದಸ್ಯರು, ಒಂದಿಲ್ಲೊಂದು ಕಾರಣಗಳನ್ನು ಮುಂದಿಟ್ಟು, ಮುಂದೂಡುತ್ತಿರುವುದು ದುರಂತ. ರಾಜಕೀಯ ಇಚ್ಛಾಶಕ್ತಿ ಮಹಿಳಾಪರ ಧೋರಣೆಗೆ ಓಗೊಟ್ಟು ಬೇಗ ಸ್ಪಂದಿಸಿದರೆ ಸ್ತ್ರೀಶಕ್ತಿಯ ಸಂಘಟನೆಗೆ ಸಿಂಹಬಲ ಬರುತ್ತದೆ.

ಭಾರತದಲ್ಲಿ ಅಕ್ಷರಸ್ಥ ಸ್ತ್ರೀಯರ ಸಂಖ್ಯೆ ಕಡಿಮೆ. ಲೇಖಕಿಯರು ಮತ್ತೂ ಕಡಿಮೆ. ಸ್ತ್ರೀಯರ ಲೇಖನಕ್ಷೇತ್ರದ ಹಸಿರು ಕ್ರಾಂತಿಗೆ ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರೇರಣೆಯಾದದ್ದು ನಿಜ. ಮಹಿಳಾ ಸಾಹಿತ್ಯದ ನೆಲೆಬೆಲೆಯ ಪರಾಮರ್ಶೆಗೂ ಆತ್ಮಾವಲೋಕನಕ್ಕೂ ಭೂಮಿಕೆ ಸೃಷ್ಟಿಯಾದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ೧೯೭೫ರಲ್ಲಿ ನಡೆಸಿದ ಲೇಖಕಿಯರ ಸಮ್ಮೇಳನದಲ್ಲಿ. ಅದು ಮೊತ್ತಮೊದಲ ಐತಿಹಾಸಿಕ ಹೆಜ್ಜೆ. ಅಲ್ಲಿಂದ ವೈಚಾರಿಕ, ವೈಜ್ಞಾನಿಕ ಬುದ್ಧಿ ಭಾವಗಳ ಸಿದ್ಧತೆಯ ಮಶಾಲು ಹಿಡಿದು ಹೊರಟ ಲೇಖಕಿಯರ ಗಂಭೀರ, ಸೃಜನಶೀಲ ಕೃತಿಗಳು ಹೊರಬರಲು ಸಾಧ್ಯವಾಯಿತು. ಸಾಹಿತ್ಯದಲ್ಲಿ ಲಿಂಗಭೇದ ಆಧರಿಸಿದ ತಾರತಮ್ಯ ಇಲ್ಲವೆಂಬ ಅರಿವಿನಿಂದ ಸತ್ವಶಾಲಿ ಬರವಣಿಗೆಯೇ ಮೌಲಿಕವೆಂಬ ಗ್ರಹಿಕೆ ಗಟ್ಟಿಯಾಯಿತು. ಸಾಹಿತ್ಯದ ಪಲ್ಲಟಗಳ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಅರಿವಿನ ಸ್ಪೋಟದಿಂದ ಲೇಖಕಿಯರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.

ನಾನು ಅದೃಷ್ಟಶಾಲಿ. ನನ್ನ ಕೆಲವು ಕನಸುಗಳು ನನಸಾದವು, ಪ್ರಯತ್ನಗಳು ಫಲಿಸಿದವು. ಕರ್ನಾಟಕ ಸರ್ಕಾರ ಪ್ರತಿವರ್ಷ ಅತ್ತಿಮಬ್ಬೆಯ ಹೆಸರಿನಲ್ಲಿ ಸಾಹಿತ್ಯಕವಾಗಿ ದೀರ್ಘಕಾಲಿಕ ಮಹತ್ಸಾಧನೆ ಮಾಡಿದ ಮಹತ್ವದ ಲೇಖಕಿಗೆ ಒಂದು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ಪ್ರಶಸ್ತಿಯಿಂದ ಪುರಸ್ಕರಿಸಬೇಕೆಂದು ಎಡೆಬಿಡದೆ ಸರಕಾರವನ್ನು ಕಾಡಿದೆ. ನನ್ನ ಹೋರಾಟದ ಸಾಂಸ್ಕೃತಿಕ ಆಯಾಮವನ್ನು ಮನಗಂಡು ಘನ ಕರ್ನಾಟಕ ಸರ್ಕಾರ ನಾನಿತ್ತ ಸೂಚನೆಯನ್ನು ಪೂರ್ತಿಯಾಗಿ ಮಾನ್ಯಮಾಡಿತು. ನನ್ನ ಮನವಿಗೆ ಸಂಪೂರ್ಣ ಸ್ಪಂದಿಸಿದ, ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರನ್ನೂ ಸಂಸ್ಕೃತಿ ಸಚಿವೆಯಾಗಿದ್ದ ಬಿ.ಟಿ. ಲಲಿತನಾಯಕ ಅವರನ್ನೂ ಇಂದೂ ಸಹ ಕೃತಜ್ಞತೆಯಿಂದ ನೆನೆಯುತ್ತೇನೆ.

ಅಬ್ಬಕ್ಕರಾಣಿಯ ಸಾಹಸ ಆಕೆಯ ಜೀವಿತ ಕಾಲದಲ್ಲಿ ಜಾಗತಿಕ ವೇದಿಕೆಗೆ ಸಂದಿತ್ತು. ಆ ತಾಯಿ ಮಗಳು ಧೈರ್ಯ ಸಾಹಸ ತೋರಿರದಿದ್ದರೆ ದೇಶದ ಇತಿಹಾಸ ಪಲ್ಲಟಗೊಂಡು ಇಂದು ಭಾರತವನ್ನು ಬ್ರಿಟಿಷರ ಬದಲು ಪೋರ್ಚುಗೀಸರು ಆಳುತ್ತಿದ್ದರು. ಅಂಥ ಸ್ವಾಭಿಮಾನಿ ರಾಣಿಯ ನೆನಪನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಹಲವು ಸಲ ಸೂಚಿಸಿದ್ದೇನೆ. ಮಂಗಳೂರು ಬಂದರಿಗೂ, ಮಂಗಳೂರಿಂದ ಹೊರಡುವ ಅಥವಾ ಬರುವ ರೈಲು ಒಂದಕ್ಕೆ ಅಬ್ಬಕ್ಕರಾಣಿಯ ಹೆಸರಿಡುವುದರಲ್ಲಿ ಔಚಿತ್ಯವಿದೆ.

ದೀರ್ಘಕಾಲ ಆಳಿದ ಏಕಮೇವಾದ್ವಿತೀಯ ಮಹಾಮಂಡಲೇಶ್ವರಿ, ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ನೆನಪನ್ನು ಚಿರಸ್ಥಾಯಿಗೊಳಿಸುವ ದಿಕ್ಕಿನಲ್ಲಿ ಈ ನಾಡು ಮಾಡಬೇಕಾದ ಕೆಲಸಗಳನ್ನು ಸರಕಾರದ ಹಾಗು ಜನತೆಯ ಗಮನಕ್ಕೆ ತಂದಿದ್ದು ಇನ್ನೂ ನೆನೆಗುದಿಗೆ ಬಿ‌ದ್ದಿವೆ. ಹೊನ್ನಾವರ, ಹಾಡುವಳ್ಳಿ, ಬಾರಕೂರು, ಭಟ್ಕಳ ನಗಿರೆ ರಾಜ್ಯಗಳನ್ನು ಒಳಗೊಂಡ ವ್ಯಾಪಕ ಪ್ರದೇಶವನ್ನು ಗೇರುಸೊಪ್ಪೆ ರಾಜಧಾನಿಯಿಂದ ಆಳಿದ ಈ ಮಹಾರಾಣಿ ಕರ್ನಾಟಕದ ಸಾಹಿತ್ಯ, ಶಿಲ್ಪ, ಕಲೆ, ವಾಣಿಜ್ಯ ವ್ಯವಹಾರ, ಸಂಸ್ಕೃತಿ ಪುರೋಭಿವೃದ್ಧಿಗೆ ನೀಡಿದ ಕೊಡುಗೆ ದೊಡ್ಡದು.

ಮಹಿಳಾ ವಿಶ್ವವಿದ್ಯಾಲಯ ಆಗಬೇಕೆಂದು ನಿರಂತರವಾಗಿ ೧೯೯೩ ರಿಂದ ಒಕ್ಕೊರಲಿಂದ ಸಾರುತ್ತ ಬಂದಿದ್ದೆ. ನೂರಾರು ವೇದಿಕೆಗಳಿಂದ ಹಕ್ಕೊತ್ತಾಯ ಮಾಡುತ್ತ ಸರಕಾರದ ಮೇಲೆ ಒತ್ತಡ ಏರಿದ್ದಲ್ಲದೆ ಸಾರ್ವಜನಿಕ ಅಭಿಪ್ರಾಯವನ್ನೂ ರೂಪಿಸಿದೆ. ನಮ್ಮ ಘನ ಸರಕಾರ ಈ ವರ್ಷದಿಂದ ಮಹಿಳಾ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸಲು ಹರ್ಷಿಸುತ್ತೇನೆ.

ಜನಭಾಷೆಯಾದ ಕನ್ನಡವನ್ನು ಮಹಾಕಾವ್ಯದ ಭಾಷೆಯನ್ನಾಗಿಸಿದ ಆದಿಕವಿ ಪಂಪನ ೧೧೦೦ ನೆಯ ಹುಟ್ಟುಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲು ಜನತೆಗೂ ಸರಕಾರಕ್ಕೂ ಕರೆ ಕೊಟ್ಟಿದ್ದು ಬಹುವಾಗಿ ಈಡೇರಿದೆ. ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮಗಳಾದುವು. ಸಾರ್ವಜನಿಕ ಸಂಘ ಸಂಸ್ಥೆಗಳೂ ಶಾಲಾ ಕಾಲೇಜುಗಳೂ ವಿಶ್ವವಿದ್ಯಾನಿಲಯಗಳೂ ಪಂಪನ ಕಾವ್ಯಗಳ ಚಿಂತನ ಮಂಥನ ನಡೆಸಿವೆ. ನನಗೆ ತಿಳಿದಂತೆ ೯೦ ಕಾರ್ಯಕ್ರಮಗಳಾಗಿವೆ. ಪ್ರತಿವರ್ಷ ಪಂಪ ಪ್ರಶಸ್ತಿಯನ್ನು ಸಹ ಸರಕಾರ ನೀಡುತ್ತ ಬಂದಿದೆ.

ಕನ್ನಡ ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಆದಯತೆ ಮೇರೆಗೆ ಕಾರ್ಯಪ್ರವೃತ್ತವಾಗಲು ತಕ್ಷಣ ನಾನುಕೊಟ್ಟ ಮನವಿ ಪತ್ರದ ಮೇಲೇ ಸೂಚನೆಯಿತ್ತು ಚಾಲನೆ ನೀಡಿದ ಮುಖ್ಯಮಂತ್ರಿಯವರಿಗೆ ಈ ವೇದಿಕೆಯಿಂದ ವಂದನೆ ಹೇಳುತ್ತೇನೆ. ಅಲ್ಲದೆ ಅವರು ಈ ಸಂಬಂಧವಾಗಿ ತುರ್ತಾಗಿ ಮಾಡಲೇಬೇಕಾದ ಇನ್ನೊಂದು ಕಾರ್ಯಕ್ರಮಕ್ಕೂ ಮುಂದಾಗಬೇಕೆಂದು ಪ್ರಾರ್ಥಿಸುತ್ತೇನೆ. ನಾನು ಮಾಡಿದ ಮನವಿ ಹಾಗೂ ಮಂಡಿಸಿದ ಸೂಚನೆಗಳಲ್ಲಿ ಶಿಖರ ಪ್ರಾಯವಾದುವು ಎರಡು :

೧. ಕರ್ನಾಟಕಾಂಧ್ರ ಸರಕಾರಗಳು ಸಂಯುಕ್ತವಾಗಿ ಸಹಯೋಗದಿಂದ ಆಂಧ್ರದ ಕರೀಂನಗರ ಜಿಲ್ಲೆಯ ಗಂಗಾಧರಂ ತಾಲೂಕಿನ ಕುಕ್ಯಾಲ ಗ್ರಾಮದ ಹತ್ತಿರವಿರುವ ಜಿನವಲ್ಲಭನ ಶಾಸನ ಇರುವ ಮಹತ್ವದ ಗುಡ್ಡವನ್ನು ರಾಷ್ಟ್ರೀಯ ಸ್ಮಾರಕವಾಗಿ ಕಾಪಾಡುವುದು ಜರೂರು ಆಗಬೇಕು. ಅದನ್ನು ಸಾಹಿತ್ಯ, ಸಂಸ್ಕೃತಿ ಮಹತ್ವದ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು. ಮೂಲನಿಧಿಯಾದ ಶಿಲ್ಪ ಹಾಗೂ ಶಾಸನಕ್ಕೆ ಧಕ್ಕೆ ಆಗದಂತೆ ಆ ಬೆಟ್ಟವನ್ನು ಹತ್ತಲೂ ಇಳಿಯಲೂ ಮೆಟ್ಟಿಲನ್ನು ಮಾಡಿಸಬೇಕು, ಎರಡೂ ರಾಜ್ಯದ ಮುಖ್ಯಮಂತ್ರಿಗಳೊಮ್ಮೆ ಅಲ್ಲಿಗೆ ಸಂಸ್ಕೃತಿ ಸೌಹಾರ್ದವರ್ಧನ ಯಾತ್ರೆ ಮಾಡುವುದು ಅಗತ್ಯ. ತೆಲುಗು ಭಾಷೆಯ ಪ್ರಥಮ ಹಾಗೂ ಪ್ರಾಚೀನ ಪದ್ಯಗಳನ್ನು ಅಲ್ಲಿ ಪಂಪನ      ತಮ್ಮ ಜಿನವಲ್ಲಭನ ಹಾಗೂ ಕನ್ನಡದ ಆದಿಕವಿ ಪಂಪನ ನೆನಪನ್ನು ಹೊತ್ತು ಎತ್ತರದಲ್ಲಿ ನಿಂತಿರುವ ಈ ಭವ್ಯ ಸ್ಮಾರಕದ ಮಹತ್ವವನ್ನು ನಾನಿಲ್ಲಿ ಮತ್ತೆ ಉತ್ಪ್ರೇಕ್ಷಿಸಬೇಕಾದ ಅಗತ್ಯವಿಲ್ಲ. ಉಭಯ ಸರಕಾರಗಳಿಗೆ ಕೀರ್ತಿ ತರುವ ಈ ಕೆಲಸವನ್ನು ಅವಶ್ಯ ಮಾಡಬೇಕಾದ ಕರ್ತವ್ಯವೆಂದು ಪರಿಗಣಿಸಬೇಕು.

೨. ಪಂಪ ಕರ್ನಾಟಕಾಂಧ್ರವಲ್ಲದೆ ಇಡೀ ಭಾರತದ ರಾಷ್ಟ್ರಕವಿ. ಆತನ ಕಾವ್ಯಗಳ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಅಭಿವ್ಯಾಪಕ ಆಯಾಮವನ್ನು ಭಾರತಕ್ಕೆ ಬಿತ್ತರಿಸುವ ರೀತಿಯಲ್ಲಿ ದೆಹಲಿಯಲ್ಲಿ ಇಂಗ್ಲಿಷಿನಲ್ಲಿ ಮೂರು ದಿವಸಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಯೋಜಿಸಬೇಕೆಂದು ಸರಕಾರಕ್ಕೆ ಒಪ್ಪಿಸಿದ್ದ ಹಾಗೂ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರ ಸಹಿಯೊಂದಿಗೆ ಸಂಸ್ಕೃತಿ   ಇಲಾಖೆಗೆ ರವಾನೆಯಾದ ಪತ್ರದಲ್ಲಿ ನಮೂದಿಸಿದ್ದೆ. ಅದು ಇನ್ನೂ ಕಾರ್ಯಗತ ಆಗಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಕೃಪೆಯಿಟ್ಟು ಈ ವಿಚಾರದಲ್ಲಿ ಸೂಕ್ತ ಆದೇಶವನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇನೆ. ಕನ್ನಡವನ್ನೂ ಕರ್ನಾಟಕವನ್ನೂ ತನ್ನೆಲ್ಲ ರಾಜಕೀಯ ವೈಭವದೊಂದಿಗೆ ಪ್ರತಿಷ್ಠಾಪಿಸಿದ ಪಂಪನ ಪ್ರಯತ್ನ ಅನನ್ಯವಾದದ್ದು. ಪಂಪನ ಹೆಸರು ಹೇಳಿದರೆ, ಅವನ ಕಾವ್ಯ ಓದಿದರೆ ಮಿಂಚಿನ ಸಂಚಾರವಾಗುತ್ತದೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ ಚಿಮ್ಮುತ್ತದೆ. ಭಾರತೀಯ ಭಾಷೆಗಳಲ್ಲಿಯೇ ವ್ಯಾಸಭಾರತವನ್ನು ಸಂಸ್ಕೃತದಿಂದ ಜನಭಾಷೆಗೆ ಜಗ್ಗಿ ಇಳಿಸಿದವನು ಕನ್ನಡದ ಪಂಪನೇ ಮೊತ್ತಮೊದಲಿಗನೆಂಬುದನ್ನು ನೆನೆದಾಗ ಈಗಲೂ ಮೈನವಿರೇಳುತ್ತದೆ. ಅದರಿಂದ ಕನ್ನಡದ ಏಳಿಗೆಗೆ, ಕನ್ನಡದ ಮಹತ್ವವನ್ನು ಅನ್ಯಭಾಷಾ ಸಾಹಿತ್ಯ ವಲಯದಲ್ಲಿ ನಿಲ್ಲಿಸುವುದಕ್ಕೆ ಈ ರಾಷ್ಟ್ರೀಯ ವಿಚಾರ ಸಂಕಿರಣ ಅಧಿಷ್ಠಾನವಾಗುತ್ತದೆ.

ತಂತ್ರಜ್ಞಾನ : ಸವಾಲು, ಜವಾಬು

ನಮ್ಮ ಕಾಲದ ಸಾದನೆಗಳ ಬೃಹತ್ತು ಮಹತ್ತು ಅಸೀಮವಾದುದು. ದೀರ್ಘಕಾಲ ದೊಡ್ಡಬಾಳು ಬದುಕಿದ ಬಹುದೊಡ್ಡ ಲೇಖಕರು ಆಗಿಹೋದ ಶತಮಾನ. ಸಂಪರ್ಕ ಸುಲಭವಾಗಿದೆ, ಸಂವಹನ ಸೌಕರ್ಯ ಹೆಚ್ಚಿದೆ. ಇಂದು ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಮನುಷ್ಯ ಲೋಕವನ್ನು ತಬ್ಬಿದೆ. ಈ ವಿದ್ಯುನ್ಮಾನ – ಟೆಕ್ನಾಲಜಿಯೆಂಬ ಬಾಹುಬಂಧನ ಧೃತರಾಷ್ಟ್ರ ಆಲಿಂಗನ ಆಗದಂತೆ ಎಚ್ಚರ ಇರಬೇಕು. ಹೈಟೆಕ್ ನಮಗೆ ಶಾಪವಾಗದೆ ವರವಾಗಿ ಬರಬೇಕು. ಯಾವುದೇ ಆವಿಷ್ಕಾರ ಮನುಷ್ಯ ಸಂಬಂಧವನ್ನು ಹಾಗೂ ಪುಸ್ತಕ ಸಂಸ್ಕೃತಿಯನ್ನು ಅಳಿಸಿ ಹಾಕಲು ಬಿಡಬಾರದು. ಕನ್ನಡ ಭಾಷೆ ಹಾಗೂ ಲಿಪಿಯ ನಾಶ ಆಗಬಾರದು. ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಮೆಲ್ಲಗೆ ನುಸುಳುತ್ತಿವೆ. ಇದು ಬಿಡಾರದೊಳಗೆ ತಲೆಹಾಕಿದಂತೆ ಆಗಬಾರದು. ಮೆಟ್ರೊ ಬೃಹತ್ ಮಳಿಗೆ ಬೆಂಗಳೂರಲ್ಲಿ ಕಾಲೂರಿದೆ. ಇದು ಕೊಳ್ಳುಬಾಕತನದ ಚಟ ಹುಟ್ಟಿಸಿ ಆಮೇಲೆ ನಮ್ಮನ್ನು ಗುಲಾಮರನ್ನಾಗಿಸುವ ವಿದೇಶಿ ಹುನ್ನಾರ. ಪರ್ಯಾಯವಾಗಿ ಕನ್ನಡ ಸಂಸ್ಕೃತಿಯ ಮೆಲೆ ನಡೆಯುವ ಹಲ್ಲೆ.

ಆಧುನೀಕರಣ, ಜಾಗತೀಕರಣ ಎಂಬುವು ಕನ್ನಡದ ಕುತ್ತಿಗೆ ಅದುಮಿ ಉಸಿರಾಟವನ್ನು ನಿಲ್ಲಿಸುವ ದಿಕ್ಕಿನಲ್ಲಿ ಹಬ್ಬಲು ಬಿಡಬಾರದು. ಕನ್ನಡ ರಾಷ್ಟ್ರೀಯತೆಯ ಗಟ್ಟಿ ಬುಡ ಬೇರುಗಳನ್ನು ಸಡಿಲಿಸಲು ತೊಡಗಿದರೆ ಒಡನೆಯೇ ಸಾಹಿತಿಗಳೂ ಕಲಾವಿದರೂ ತಮ್ಮ ಲೇಖನಿ ಕುಂಚಗಳನ್ನು ಖಡ್ಗವಾಗಿಸಿ ಝಳಪಿಸಲು ಸಿದ್ಧವಾಗಿರಬೇಕು. ಪ್ರಸ್ತುತಕ್ಕೆ ಬೇಕಾದ ಪ್ರಖರ ಸಾಹಿತ್ಯ ಪಥ ನಿರ್ಮಾಣವಾಗಿ ಹೊಸಪಂಥ ಹುಟ್ಟಿ ಸಮಾಜಮುಖಿ ನೆಲೆಗಳತ್ತ ಹುರಿಗೊಳ್ಳಲಿ. ತುಂಬ ಉಮೇದಿನಿಂದ ಭೋರ್ಗರೆದು ವೇಗವಾಗಿ ಹೊರಟಿರುವ ಮಾಹಿತಿ ತಂತ್ರಜ್ಞಾನದ ಓಘದಲ್ಲಿ ಕನ್ನಡದ ತಂತ್ರಾಂಶ ಸೊರಗದಂತೆ ವರ್ತಿಸೋಣ. ಕಂಪ್ಯೂಟರ್ ವಿದ್ಯುನ್ಮಾನದತ್ತವಾದ ಈ ಟಿ.ವಿ., ವಿಡಿಯೊ ಆಟಗಳು ಕನ್ನಡ ಭಾಷೆಗೆ ಮಾರಕವೊ ಪೂರಕವೊ ಎಂಬ ವಾಗ್ವಾದ ನಡೆದಿದೆ. ದೂರದರ್ಶನದ ಮುಂದೆ ಮುಂಜಾವಿನಿಂದ ಸಂಜೆಯತನಕ ಅಂಟಿಕೊಂಡ ಕಣ್ಣನ್ನು ಬೇರೆ ಕಡೆ ಹೊರಳಿಸದ ಆಬಾಲವೃದ್ದರು ಕೋಟಿಗಟ್ಟಲೆ ಇದ್ದಾರೆಂದು ಸಮೀಕ್ಷೆಗಳು ವರದಿಮಾಡಿವೆ. ಧಾರಾವಾಹಿಗಳಿಗೆ ತನ್ನನ್ನು ತೆತ್ತುಕೊಂಡ ಬುದ್ಧಿ ಭಾವಗಳಿಗೆ ಅವುಗಳ ಪ್ರಸಾರ ವೇಳೆಯಲ್ಲಿ ಎಂಥ ಹತ್ತಿರದ, ಆಪ್ತನೆಂಟರಿಷ್ಟರು ಬಂದರೂ ‘ಈ ಶನಿಗಳು ಯಾಕೆ ವಕ್ರಿಸಿದರೊ’ ಎಂದು ಗೊಣಗುವರು ಇದ್ದಾರೆ. ಕ್ಯಾಸೆಟ್ಟುಗಳೂ ಸೀಡಿಗಳೂ ಸುಲಭವಾಗಿ ಸಿಗುತ್ತವೆ. ಇವುಗಳೊಂದಿಗೆ ಟಿವಿ ಮುಂದೆ ಕುಳಿತರೆ ಅದೇ ಜಗತ್ತು. ಹೊರಗೆ ಬಾಂಬು ಹಾಕಿದರೂ ಅಲ್ಲಾಡರು.

ಹಳೆಯದೆಲ್ಲ ಹೊನ್ನಲ್ಲ ಎಂದು ಅಲ್ಲಗಳೆಯುವ, ಹಳತೆಲ್ಲ ಹಳಸಲಲ್ಲ ಎಂದು ಮೆಚ್ಚುವ ಎರಡು ತುದಿಗಳಿರುತ್ತವೆ. ಈ ತುದಿಗಳ ಸಮನ್ವಯದೊಂದಿಗೆ ವೈಚಾರಿಕ, ವೈಜ್ಞಾನಿಕ ಚಿಂತನ ಮಂಥನ ಜಗತ್ತಿನಲ್ಲಿ ವಿಪುಲವಾಗಿ ನಡೆದಿವೆ. ಪರಿಣಾಮವಾಗಿ ನಾನಾ ಜ್ಞಾನ ಕ್ಷೇತ್ರಗಳಲ್ಲಿ ವಿನೂತನ ಜಾಗತಿಕ ಪರಿಕಲ್ಪನೆಗಳು ಚಿಗುರಿವೆ. ಜಾಗತಿಕ ಚಿಂತನೆಗಳು ದೇಶೀಯ ಹಾಗೂ ಸ್ಥಳೀಯ ಕ್ರಿಯೆಗಳ ಹಾಸಿನಲ್ಲಿ ಹೆಣೆದುಕೊಳ್ಳಬೇಕು.

ತಂತ್ರಜ್ಞಾನದ ಅನನ್ಯ ಚೈತನ್ಯವನ್ನು ಅಲಕ್ಷಿಸುವಂತಿಲ್ಲ. ತಂತ್ರಜ್ಞಾನ ಹೊಸಕಾಲದ ಅನಿವಾರ್ಯತೆ. ಹೊಸಕಾಲವನ್ನು ಹೊಸ ತಂತ್ರಜ್ಞಾನದ ಮೂಲಕವೇ ಪಳಗಿಸಿ, ದುಡಿಸಿ ನಾಡು ಅಭಿವೃದ್ಧಿ ಹೊಂದಬೇಕು. ನಾವು ಮೀನುಗಳಂತೆ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುವುದು ಸಾಧ್ಯವಿಲ್ಲ.

ವಿಜ್ಞಾನವೇ ಸರ್ವಜ್ಞ ಅಥವಾ ಸರ್ವಸ್ವ ಅಲ್ಲ. ಅದರ ಗ್ರಹಿಕೆಗೂ ಮೀರಿದ ಸಂಗತಿಗಳು, ಸಂಬಂಧಗಳು ಸೃಷ್ಟಿಯಲ್ಲಿವೆ. ಅಕ್ಷರ ಜ್ಞಾನದ ಆಚೆಗು ಚಾಚಿರುವ ಅದ್ಭುತಗಳಿವೆ. ವಿದ್ಯಾವಂತರೆಲ್ಲ ವಿಚಾರವಂತರಲ್ಲ. ಅವಿದ್ಯಾವಂತರೆಲ್ಲ ಅಜ್ಞಾನಿಗಳಲ್ಲ. ಅವಿದ್ಯಾವಂತ ಜ್ಞಾನಿಗಳೂ ಅಶಿಕ್ಷಿತರ ಸಂಸ್ಕೃತಿಯೂ ಉಪಾದೇಯವೇ.

ಆಧುನೀಕರಣ ಎಂದೂ ಉದಾರೀಕರಣ, ಕೈಗಾರಿಕೀಕರಣ, ಜಾಗತೀಕರಣ, ಖಾಸಗೀಕರಣ, ನಗರೀಕರಣ ಎಂದೂ ಹೊಸ ಪಂಚಕರಣಗಳು ಮೊಳಗುತ್ತಿವೆ. ಇವುಗಳಿಗೆ ನಾವು ಸ್ಪಂದಿಸದಿರುವುದು ಸಾಧ್ಯವಿಲ್ಲ. ಹೊಸದನ್ನು ಬರಮಾಡಿಕೊಳ್ಳಲು ಅನುಮಾನಗಳೂ ಆತಂಕಗಳೂ ಇರುವುದು ಸಹಜ. ಒಂದು ವ್ಯವಸ್ಥೆಗೆ, ಜೀವನ ಶೈಲಿಗೆ, ಚಿಂತನಾಕ್ರಮಕ್ಕೆ ಒಗ್ಗಿದ ನಮ್ಮ ಬುದ್ಧಿ ಭಾವಗಳು ಬದಲಾವಣೆಗೆ ತಯಾರಾಗದೆ ತಕರಾರು ಮಾಡುತ್ತವೆ.

ಜಾಗತೀಕರಣ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳೂ ಕರಗಿ ಹೋಗಿ ಬಾಳು ಒಮ್ಮೆಲೇ ಸುಗಮಗೊಳ್ಳುತ್ತದೆಂಬುದು ಭ್ರಮೆಯೆನಿಸಿದರೂ ಅದು ಬೊಗಳೆಯಲ್ಲ. ಜಾಗತೀಕರಣದ ದೂರಗಾಮಿ ಪರಿಣಾಮದ ವಿಚಾರದಲ್ಲಿ ಗುಮಾನಿಗಳಿವೆ, ನಿಜ. ಹಾಗೆಂದು ಅದರ ಸಾಧಕ ಬಾಧಕಗಳನ್ನು ಈಗಲೇ ದಿಢೀರನೇ ತೀರ್ಪು ಕೊಡುವುದು ಬೇಡ. ಜ್ಞಾನಪಥ ಚಲನಶೀಲವಾಗಿರುತ್ತದೆ. ಹೊಸ ವಿಚಾರಗಳ ಬೀಜ ಚೆಲ್ಲುತ್ತ ಶಿಲಾಯುಗದಿಂದ ಮನುಷ್ಯ ಬಹಳ ದೂರ ಬಂದಿದ್ದಾನೆ. ತನ್ನ ಅರಿವನ್ನು ಸಮಾಜದ ಮೇಲ್ಮೆಗೆ ಬಳಸಿದಾಗ ಮೇಲೇರಿದ್ದಾನೆ, ಅಪಮಾರ್ಗದ ವಿನಾಶಕ್ಕೆ ಉಪಯೋಗಿಸಿದಾಗ ನೆಲಕಚ್ಚಿದ್ದಾನೆ. ಶ್ರೇಷ್ಠ ಮೌಲ್ಯಗಳ ಸದಭಿರುಚಿಯನ್ನು ಉಳಿಸುತ್ತ, ಸುಸಂಸ್ಕೃತ ಸಮಾಜದ ಹೃದಯದ ಬಡಿತ ನಿಲ್ಲದಂತೆ ಉಸಿರಾಡಿಸುವ ಚಿಂತಕರು ಎಲ್ಲ ದೇಶಗಳಲ್ಲೂ ಇದ್ದಾರೆ. ಕನ್ನಡ ಸಾಹಿತ್ಯದ ಸಂದರ್ಭದಲ್ಲೂ ಈ ಪರಂಪರೆಯಿದೆ. ಲೇಖಕರಿಗೆ ಬೇಕಾಗಿರುವುದು ಗನ್ ಅಲ್ಲ, ತ್ರಿಶೂಲ ಅಲ್ಲ, ಆಮಿಷಗಳಿಗೆ ಬಾಗದ ಪೆನ್ನು, ನಿಜದನಿಯ ಲೇಖನದ ಮೊನಚಿಗೆ ಹರಿಹರರೂ ಅಂಜುವರು. ನಮ್ಮ ಲೇಖಣಿಯ ಹರಿತವನ್ನು ಹೈಟೆಕ್ ವಿದ್ಯುನ್ಮಾನ ಮೊಂಡು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಂತಿಮವಾಗಿ ಲೇಖಕರದು.

ಜಾಗತಿಕ ಪ್ರಜ್ಞೆಗೆ ಸಮಾನಾಂತರವಾಗಿ ಕನ್ನಡ ತನ್ನ ಧಾರಣಶಕ್ತಿಗೆ ಸಜ್ಜಾಗದೆ ಗತ್ಯಂತರವಿಲ್ಲ. “ಇದು ವೈಜ್ಞಾನಿಕ ಯುಗ, ಹೈಟೆಕ್ ಕಾಲ. ಕೈಗಾರಿಕಾದಿ ಉದ್ಯಮಗಳಿಗೆ, ಗಣಕಯಂತ್ರಗಳಿಗೆ, ತಂತ್ರಾಂಶಗಳಿಗೆ, ಕಂಪ್ಯೂಟರಿಗೆ ಆದ್ಯತೆ. ಅದರಿಂದ ಸಾಹಿತ್ಯ ಅಗತ್ಯ ಇದೆಯೆ” – ಎಂಬ ಪ್ರಶ್ನೆ ಎದ್ದಿದೆ. ಯಾವ ಯುಗದಲ್ಲೂ ಸಾಹಿತ್ಯವನ್ನು ಗೌಣವೆಂದು ಗುಡಿಸಿ ಹಾಕುವಂತಿಲ್ಲ. ಸಾಹಿತ್ಯ ಶಾಸ್ತ್ರವು ಹೌದು, ವಿಜ್ಞಾನವೂ ಹೌದು, ಮನೋವಿಜ್ಞಾನವೂ ಹೌದು. ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಸ್ತ ಜ್ಞಾನಗಳ ಕಲಿಕೆಗೆ ಕನ್ನಡ ಸಶಕ್ತವಾಗಿದೆಯೆಂದು ಜಗತ್ತಿಗೆ ತೋರಿಸಲು ವಿಜ್ಞಾನಿಗಳು ಕನ್ನಡವನ್ನು ಬಳಸಬೇಕು.

ಇಂಥ ಆತ್ಮಪ್ರತ್ಯಯ ಮೂಡಲು ಕನ್ನಡ ನಡೆದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಬೇಕು. ಇಡೀ ದಕ್ಷಿಣ ಏಷಿಯಾರಾಷ್ಟ್ರಗಳ ಪ್ರಭುತ್ವದ ಭಾಷೆಯಾಗಿ ರಾಜರ ಒಡ್ಡೋಲಗಗಳಲ್ಲಿ ಸಂಸ್ಕೃತ ಪ್ರತಿಷ್ಠಿತವಾಗಿದ್ದ ಕಾಲಘಟ್ಟದಲ್ಲಿ ಶ್ರೀ ವಿಜಯ (೮೫೦), ಆದಿ ಗುಣವರ್ಮ (೯೦೦), ಪಂಪ (೯೪೧) ಪೊನ್ನ (೯೯೫), ರನ್ನ (೯೯೩) ಮೊದಲಾದವರು ಪುಟ್ಟ ಪ್ರದೇಶದ ಜನಭಾಷೆಯಾದ ಕನ್ನಡವನ್ನು ರಾಜಮನ್ನಣೆಯ ಆಸ್ಥಾನ ಭಾಷೆಯಾಗಿಸಿ, ಮಹಾಕಾವ್ಯಗಳ ಭಾಷೆಯಾಗಿಸಿ ಕೀಳರಿಮೆಯ ಬೇರುಗಳನ್ನು ಕತ್ತರಿಸಿದರು, ಕನ್ನಡದ ಸೃಷ್ಟಿ ಶಕ್ತಿಯನ್ನು ಎತ್ತರಿಸಿದರು. ಅದೇ ರೀತಿ ಇಂದು ಶ್ರೇಷ್ಠ ವಿಜ್ಞಾನಿಗಳು ಕನ್ನಡದಲ್ಲಿ ಸ್ವತಂತ್ರ, ಸ್ವೋಪಜ್ಞ, ಅನ್ಯಾವಲಂಬಿಯಲ್ಲದ, ಅನುಕರಣವಲ್ಲದ ಅಸಲು ಕೃತಿಗಳಿಗೆ ಜನ್ಮದಾತರಾಗಬೇಕು. ವಿನೂತನ ವೈಜ್ಞಾನಿಕ ಆವಿಷ್ಕಾರಗಳು ಹೀಗೆ ಕನ್ನಡದಲ್ಲಿಯೇ ಉದ್ಭವಿಸಿದರೆ ಆಗ ಕನ್ನಡ ಮಾತೃಕೆಯಾಗುತ್ತದೆ. ಜೊತೆಗೆ ವಿಜ್ಞಾನವನ್ನು ಕನ್ನಡದಲ್ಲಿ ಮನಮುಟ್ಟುವಂತೆ ಹೇಳಲು ಸಾಧ್ಯವಾದಾಗ ಸಹಜವಾಗಿ ಕನ್ನಡ ಮಾಧ್ಯಮಕ್ಕೆ ಶಕ್ತಿ ಬರುತ್ತದೆಯಲ್ಲದೆ ಕನ್ನಡ ಕಲಿಯುವವರಿಗೂ ಕಲಿಸುವವರಿಗೂ ವಿಶ್ವಾಸದೊಂದಿಗೆ ಉತ್ಸಾಹ ಗರಿಗೆದರುತ್ತದೆ.

ತಂತ್ರಜ್ಞಾನದ ನಿರಾಕರಣೆ ಸಲ್ಲದು. ಕನ್ನಡ ಜಗತ್ತಿಗೆ ತಂತ್ರಜ್ಞಾನದ ಪ್ರವೇಶ ಸ್ವಾಗತಾರ್ಹ. ಎರಡು ದಶಕಗಳಿಂದಲೂ ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಸಂತಸದಾಯಕ ಸಂಗತಿ. ತಂತ್ರಜ್ಞಾನವನ್ನು ಒಂದು ಭಾಷೆಗೆ ತರುವಾಗ ತಂತ್ರಜ್ಞಾನದ ಸಲಕರಣೆಗಳ (ಟೆಕ್ನಾಲಜಿ ಟೂಲ್ಸ್) ನಿರ್ಮಾಣ ಆಯಾ ಭಾಷೆಯ ಜಾಯಮಾನ ಮತ್ತು ಸಾಂಸ್ಕೃತಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನಿರ್ಮಿಸಬೇಕು. ಜೊತೆಗೆ ತಂತ್ರಜ್ಞಾನವೆಂದಾಕ್ಷಣ ಕನ್ನಡತನವನ್ನು ಕ್ಲಿಷ್ಟಗೊಳಿಸಲಾಗಲಿ ನಷ್ಟಗೊಳಿಸಲಾಗಲಿ ಸಂಯೋಜಿಸಲಾಗುತ್ತಿಲ್ಲ ಎಂಬ ಅಂಶ ಆದರ್ಶವಾಗಿರಬೇಕು. ಕನ್ನಡಕ್ಕೆ ಮಾರಕವಾಗದೆ ಪೂರಕವಾಗಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುವಾಗ ಗಮನಿಸಬಹುದಾದ ಕೆಲವು ಸಂಕೀರ್ಣ ಸಂಗತಿಗಳನ್ನು ಸಂಗ್ರಹವಾಗಿ ಪ್ರಸ್ತಾಪಿಸುತ್ತೇನೆ.

೧. ಒಸಿಆರ್ (OCR = OPTICAL CHARACTER RECOGNITION), ಅಂದರೆ ‘ಚಾಕ್ಷುಷ ಅಕ್ಷರ ಗುರಿತುಸುವಿಕೆ’ ಎಂಬ ತಂತ್ರಾಂಶದ ನಿರ್ಮಾಣ ಕನ್ನಡಕ್ಕೆ ಅತ್ಯವಶ್ಯಕವಾದದ್ದು. ಈ ತಂತ್ರಾಂಶದಿಂದ ನೂರಾರು ವರ್ಷಗಳ ಹಳೆಯ ಪ್ರತಿಯ ಮರು ಮುದ್ರಣ ಸುಲಭ ಸಾಧ್ಯವಾಗುತ್ತದೆ.          ಆದರೆ ಹಳೆಯ ಓಲೆಗರಿ ಪ್ರತಿಗಳನ್ನು ‘ಸ್ಕ್ಯಾನ್’ ಮಾಡಿ ಯಥಾವತ್ತಾಗಿ ಅದನ್ನು ಕಂಪ್ಯೂಟರ್ ಮುಖಾಂತರ ಸಂರಕ್ಷಿಸಬೇಕೇ ಹೊರತು ಮೂಲಪ್ರತಿಯನ್ನೇ ತಿದ್ದುವ ಪರಿಪಾಠವನ್ನು    ಪ್ರಾರಂಭಿಸಬಾರದು. ಅಂದರೆ ಒಸಿಆರ್ (OCR)ಅನ್ನು ಸಾಧಕವನ್ನಾಗಿ ಉಪಯೋಗಿಸಿಕೊಳ್ಳಬೇಕೇ ವಿನಾ ಬಾಧಕವಾಗಿ ಅಲ್ಲ.

೨. ಪಠ್ಯದಿಂದ ವಾಕ್ (TEXT TO SPEECH = TIS) ಮತ್ತು ವಾಕ್ ನಿಂದ ಪಠ್ಯ (SPEECH TO TEXT = STT) ಎಂಬ ತಂತ್ರಾಂಶ ನಿರ್ಮಾಣದಲ್ಲಿ ಕನ್ನಡ ಭಾಷೆಯ ವಾಕ್ಯ ವಿಜ್ಞಾನ (Syntax) ಮತ್ತು ಶಬ್ದಾರ್ಥ ವಿಜ್ಞಾನಕ್ಕೆ (Seminatics) ಲೋಪ ಬರದಂತೆ ಕಾರ್ಯನಿರ್ಮಾಣ ಸಮರ್ಪಕ ರೀತಿಯಲ್ಲಿ ಸಂಯೋಜಿತವಾಗಬೇಕು.

೩. ಸ್ವಯಂ ವಾಕ್ ಜ್ಞಾನ (AUTOMATIC SPEECH RECOGNITION = ASR) ತಂತ್ರಾಂಶ ನಿರ್ಮಾಣದಲ್ಲಿಯೂ ಕನ್ನಡ ಭಾಷಾ ಪ್ರಯೋಗದೊಂದಿಗೆ ಕನ್ನಡ ಉಪಭಾಷೆಗಳ ಪ್ರಯೋಗವನ್ನೂ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕಾದ ಜವಾಬ್ದಾರಿಯೂ ಇದೆ.

೪. ಯಂತ್ರ ಭಾಷಾಂತರವೂ ಸ್ವಾಗತಾರ್ಹವೇ ಆದರೂ ಇದು ‘ವಾಕ್’ನಿಂದ ‘ವಾಕ್’ಗೆ (SPEECH TO SPEECH) ರೂಪದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಂತ್ರಮುಖೇನ   ಪ್ರವಹನಗೊಳ್ಳುವುದರಿಂದ ಭಾಷೆಯ ಕಣ ಕಣವನ್ನೂ ಪರಿಗಣಿಸಿ, ಭಾಷೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.

೫. ಕನ್ನಡ ಭಾಷೆಗೊಂದು ಪ್ರತ್ಯೇಕ ವಿದ್ಯುನ್ಮಾನ ಅಂಚೆಯ (UNICODE) ಉಪಯೋಗ ಲಭ್ಯವಾಗಬೇಕು. ಇದಕ್ಕಾಗಿ ವಿದ್ಯುನ್ಮಾನ ನಿಘಂಟುಗಳು ನಿರ್ಮಾಣವಾಗಬೇಕಲ್ಲದೆ ವಿದ್ಯುನ್ಮಾನ ಕೃತಿಗಳ ಅವತರಣಿಕೆಯೂ ಆಗಬೇಕು. ವಿದ್ಯುನ್ಮಾನ ನಿಘಂಟುಗಳ ಉಪಯುಕ್ತತೆ ವ್ಯಾಪಕವಾಗಿರಲು         ಅವು ಏಕಭಾಷಾ ಆಗಿರದೆ ದ್ವಿಭಾಷಾ ತ್ರಿಭಾಷಾ ಬಹುಭಾಷಾ ನಿಘಂಟುಗಳಾಗಿರಬೇಕು. ಇಂಥ ವಿದ್ಯುನ್ಮಾನ ನಿಘಂಟುಗಳಿಂದ ಕನ್ನಡ ಭಾಷಾ ಸಾಹಿತ್ಯ ಕರ್ನಾಟಕ ದಾಟಿ ಹೊರನಾಡುಗಳಲ್ಲಿಯೂ ದಾಂಗುಡಿಯಿಡುತ್ತದೆ. ಇನ್ನು ಮುಂದೆ ಕರ್ನಾಟಕ ಪಸರಿಸುವ ಪರಿ ಇದಾದೀತು.

೬. ಈ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಕನ್ನಡ ವರ್ಣಮಾಲೆ ಕಳೆದುಹೋಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಕನ್ನಡ ಅಕ್ಷರಗಳಿಗೆ ಧಕ್ಕೆ ಆಗದೆ ಯಥಾವತ್ತಾಗಿ ಉಳಿಯಬೇಕೆಂದು ಹೇಳುವಾಗ ಕೆಲವು ದ್ವಂದ್ವಗಳೂ ಎದುರಾಗಬಹುದು. ಉದಾಹರಣೆಗೆ ಮೀ-ಮೀ, ಪು-ಪು, ಪೂ-ಪೂ, ಪೊ-ಪೊ           ಎಂಬ ಎರಡೆರಡು ಸಮಾನ ರೂಪಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳುವುದರಿಂದ          ಸುಭಗತೆ, ಸರಳತೆ ಬರುತ್ತದೆ. ಹೊಸದಾಗಿ ಕಲಿಯುವವರಿಗೆ ಗೊಂದಲಗಳಿರುವುದಿಲ್ಲ.

ಇಂದು ಅನೇಕ ಜಾಲತಾಣಗಳು ಲಬ್ಯವಿವೆ. ಕಾಲದ, ಸ್ಥಳದ, ಪರಿಸರದ ನಿರ್ಬಂಧಗಳನ್ನು ಸೀಮೋಲ್ಲಂಘನ ಮಾಡಿ ಮಾಹಿತಿಯು ವಿಶ್ವಾದ್ಯಂತ ಲಭ್ಯವಾಗುತ್ತಿದೆ. ಇದು ಅಯಾಚಿತವಾಗಿ ಅವಲೀಲೆಯಿಂದ ದಕ್ಕುತ್ತಿರುವ ಕಾರಣಕ್ಕಾಗಿಯೂ ಮಾಹಿತಿ ತಂತ್ರಜ್ಞಾನ ಸಲಕರಣೆಗಳ (INFORMATION TECHNOLOG TOOLS) ಅಳವಡಿಕೆಯಲ್ಲಿ ಅತ್ಯಂತ ಕಾಳಜಿ ವಹಿಸಬೇಕಾದ ಗುರುತರವಾದ ಹೊಣೆಯಿದೆ.

ಮುಖ್ಯವಾಗಿ ಭಾರತೀಯ ವಿಜ್ಞಾನ ಸಂಸ್ಥೆಯಂಥ ತಜ್ಞರು ಕನ್ನಡ ಭಾಷೆಗೆ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಮಾಹಿತಿ ತಂತ್ರಜ್ಞಾನದ ಉಪಯೋಗ ಎಷ್ಟೆಂಬುದನ್ನು ಬಲ್ಲವರೆಲ್ಲ ಸ್ವಾಗತಿಸುತ್ತಾರೆ. ಒಂದೇ ಒಂದು ಅಯಸ್ಕಾಂತ ತಟ್ಟೆ (‘ಸಿಡಿ’)ಯಲ್ಲಿ ಸುಮಾರು ಐನೂರು ಪುಸ್ತಕಗಳನ್ನು ಅಳವಡಿಸಬಲ್ಲ ಸೌಕರ್ಯವಿದೆಯಂದ ಮೇಲೆ ಅದರ ಅನುಕೂಲ, ಮಿತವ್ಯಯಾಸಕ್ತಿ ದೊಡ್ಡ ಆಕರ್ಷಣೆಯಾಗಿದೆ. ಈ ಅನುಕೂಲ ನಾಳೆ ನಮ್ಮ ಮುದ್ರಣ ಕ್ಷೇತ್ರಕ್ಕೆ ಸವಾಲಾಘಿ ನಿಲ್ಲಲೂಬಹುದು. ಒಂದೊಂದು ಅಯಸ್ಕಾಂತ ತಟ್ಟೆ (‘ಸಿಡಿ’) ನೂರಾರು ಗ್ರಂಥಗಳನ್ನು ಹಿಡಿದುಕೊಡುವಾಗ ಇನ್ನು ಮುಂದೆ ಮುದ್ರಕರು, ಪ್ರಕಾಶಕರು, ವಿತರಕರು, ಲೇಖಕರು ಕಷ್ಟಗಳಿಗೆ ಸಿಕ್ಕಿ ಬೀಲಬಹುದಲ್ಲವೆ ? – ಈ ನಿಟ್ಟಿನಲ್ಲಿಯೂ ನಾವು ಇಂದೆ ಮುನ್ನೆಚ್ಚರಿಕೆ ವಹಿಸಬೇಕಾದ ಜರೂರು ಬಂದಿದೆ. ಒಂದರಿಮದ ೨೫ ರವರೆಗೆ ಮಗ್ಗಿ ಹೇಳುತ್ತ ಮಕ್ಕಳ ಜ್ಞಾಪಕ ಶಕ್ತಿಯನ್ನು ಹರಿತವಾಗಿಡಲು ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದರು. ಕ್ಯಾಲಿಕ್ಯುಲೇಟರ್ ನ ಬಹುಬಳಕೆಯಿಂದ ಆ ಪದ್ಧತಿಯಲ್ಲಿ ಆಸಕ್ತಿ ಬತ್ತಿ ಹೋಗಿದೆ. ಎರಡು ಎರಡು ಸೇರಿದರೆ ಎಷ್ಟು ಎಂಬುದಕ್ಕೂ ಕ್ಯಾಲಿಕ್ಯುಲೇಟರನ್ನು ಆಶ್ರಯಿಸುವಂತಾದರೆ ಬುದ್ಧಿಗೆ ತುಕ್ಕು ಹಿಡಿಯುತ್ತದೆ. ಈಗ ಕಂಪ್ಯೂಟರಿನ ಮೂಲಕ ಓದು, ಬರೆಹ, ಪತ್ರವ್ಯವಹಾರ ಜನಪ್ರಿಯವಾಗುತ್ತಿದೆ. ಇದರಿಂದ ಮುಂದೆ ಕೈಯಿಂದ ಅಕ್ಷರಗಳನ್ನು ಬರೆಯುವ ಪರಿಪಾಟಿಯೂ ತಪ್ಪಬಹುದು. ಇಂದು ಇರುವ ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂಬೆರಡು ವರ್ಗಗಳಿಗೆ ಸಮಾನಾಂತರವಾಗಿ ಕಂಪ್ಯೂಟರ್ ಇರುವವರು ಮತ್ತು ಇಲ್ಲದವರ ನಡುವೆ ಬಿರುಕು ಮೂಡಿ ಎರಡು ವರ್ಗಗಳು ಏರ್ಪಡಬಹುದು. ಆದ್ದರಿಂದ ತಂತ್ರಜ್ಞಾನವೆಂಬುದು ಕೇವಲ ಮಾಹಿತಿಯನ್ನು ‘ಕೊಳ್ಳೋದು – ಮಾರೋದು’ ಎಂಬ ಯಾಂತ್ರಿಕ ವ್ಯವಹಾರ ಆಗದೆ ವಿದ್ಯೆಯನ್ನು ಸೃಷ್ಟಿಸುತ್ತ ಕನ್ನಡವನ್ನು ಹದಗೊಳಿಸುವ ಕಾರ್ಯಗತಿಯಾಗಲಿ. ದೇಶೀಯ ಭಾಷೆಗಳನ್ನು ಒತ್ತರಿಸುತ್ತ ಇಂಗ್ಲಿಷಿನಂಥ ಪ್ರಪಂಚದ ಬಲಿಷ್ಠ ಭಾಷೆಯ ಮುನ್ನುಗ್ಗುವಿಕೆಯನ್ನು ಎದುರಿಸಿ ನಿಲ್ಲುವ ತಾಕತ್ತನ್ನು ಕನ್ನಡಕ್ಕೆ ಈ ವಿದ್ಯುನ್ಮಾನ ತಾಂತ್ರಿಕ ಸಲಕರಣೆ ತುಂಬಬೇಕಾಗಿದೆ. ಫ್ರೆಂಚ್, ಜರ್ಮನ್, ಹಂಗೇರಿಯನ್ ಮೊದಲಾದ ಯೂರೋಪಿಯನ್ ಭಾಷೆಗಳು ಇಂಥ ಸಾಮರ್ಥ್ಯದಿಂದ ಇಂಗ್ಲೀಷಿನ ದಾಳಿಯನ್ನು ಹಿಮ್ಮೆಟ್ಟಿಸಿ ನಿಂತಿರುವ ದೃಷ್ಟಾಂತಗಳಿಂದ ಸ್ಫೂರ್ತಿಗೊಳ್ಳೋಣ. ಸಹಸ್ರಮಾನಗಳ ಹಿಂದೆ ಶ್ರಮಣ ಪರಂಪರೆ ಜನಭಾಷೆಗೆ ನಾಲಗೆಯಾದದ್ದು ಇಂಥ ಜನಮುಖಿ ತುಡಿತಗಳಿಂದ. ಶತಮಾನಗಳ ಹಿಂದೆ ಸಂಸ್ಕೃತದ ಯಜಮಾನ್ಯವನ್ನು ದೂರವಿಟ್ಟು ‘ಅನ್ಯರ ಮನೆಯ ಬಾವಿಯ ಸಿಹಿನೀರಿಗಿಂತ ನಮ್ಮ ಮನೆಯ ಉಪ್ಪುನೀರೇ ಲೇಸೆಂದು’ ಕನ್ನಡವನ್ನು ಪೊರೆದ ಶರಣರ, ದಾಸರ ಮಾದರಿ ನಮಗೆ ದಾರಿದೀಪವಾಗಬೇಕು. ವಿದ್ಯುನ್ಮಾನ ಸಾಧನೆಗಳು ಕನ್ನಡಕ್ಕೆ ದಕ್ಕುವ ದಿಕ್ಕಿನಲ್ಲಿ ಏನೇನು ಮಾಡಬೇಕೆಂಬುದನ್ನು ಸೂಚಿಸುವಂಥ ಪರಿಣತಿ ಗಳಿಕೆಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಸಮಯ ಸಾಮರ್ಥ್ಯವನ್ನು ಕೇಂದ್ರೀಕರಿಸಬೇಕು.

ಬಹುತಾಂತ್ರಿಕ ಆಧುನೀಕರಣ ಮತ್ತು ಜಾಗತೀಕರಣದ ತುಡಿತದಿಂದಾಗಿ ಪ್ರಾದೇಶಿಕ ಭಾಷೆಯ ಯುವ ಪ್ರತಿಭೆಗಳು ಮಾತೃಭಾಷೆಯನ್ನು ತೊರೆದು ಇ-ಶಿಕ್ಷಣಕೆ ಪಲಾಯನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮೊದಲೇ ಪರಿಮಿತವಾಗಿದ್ದ ಪ್ರಾದೇಶಿಕ ಭಾಷೆಗಳ ಓದುಗರ ಪ್ರಮಾಣ ಈಗ ಮತ್ತಷ್ಟು ಇಳಿಮುಖಗೊಂಡಿದೆ. ಇಂಥ ಇಳಿಗಾಲದಲ್ಲಿ ಕನ್ನಡಕ್ಕೆ ಉಳಿಗಾಲ ಎಲ್ಲಿ, ಹೇಗೆ ಎಂಬುದು ಗಂಭೀರ ಪರಿಭಾವನೆಯ ಸಮಸ್ಯೆ. ಇದನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು ಹೊಸ ಪೀಳಿಗೆ ತಾಯಿಭಾಷೆಯ ಹೊಕ್ಕಳ ಬಳ್ಳಿಯಿಂದ ಕಳಚಿಕೊಳ್ಳುತ್ತಿರುವುದಲ್ಲದೆ ತಾಯಿಭಾಷೆಯ ಸಾಹಿತ್ಯದಿಂದಲೂ ದೂರ ಸರಿಯುತ್ತಿರುವುದು. ಸವಾಲುಗಳು ಹೀಗೆ ಸಂಕೀರ್ಣತರಗೊಳ್ಳುತ್ತ ಸಾಗುತ್ತಿರುವಾಗ ಅದಕ್ಕೆ ಸಡ್ಡು ಹೊಡೆದು ಸಜ್ಜಾಗಿ ನಿಲ್ಲುವ ಕಸುವು ಇದೆಯೆ ಎಂಬ ಶೋಧನೆಯ ತುರ್ತು ಒದಗಿದೆ. ಮಾತೃಭಾಷೆ ಯಾವುದೇ ಇರಲಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡವನ್ನು ಒಪ್ಪಿಕೊಳ್ಳಬೇಕು. ಕನ್ನಡವನ್ನು ಒಪ್ಪಿಕೊಳ್ಳದವರಿಗೆ ಇಲ್ಲಿ ಜಾಗ ಸಿಗುವುದಿಲ್ಲವೆಂಬ ಒತ್ತಡ ತರುವುದಲ್ಲದೆ ರಾಜಧಾನಿಯಾದ ಬೆಂಗಳೂರು ಮೊದಲು ಕನ್ನಡಮಯವಾಗಬೇಕು. ಈ ಸಿಲಿಕಾನ್ ನಗರ ಕನ್ನಡವಾದರೆ ಇಡೀ ಕರ್ನಾಟಕ ಕನ್ನಡವಾಗುತ್ತದೆ. ಆಡಳಿತ ಗಂಗೋತ್ರಿಯಾದ ವಿಧಾನಸೌಧ ಕನ್ನಡವಾದರೆ ಬೆಂಗಳೂರು ತನಗೆ ತಾನು ಕನ್ನಡವಾಗುತ್ತದೆ. ರಾಜಧಾನಿಯಲ್ಲಿ ಕನ್ನಡವನ್ನು ಜೀವಂತವಾಗಿಡಲು ಹಾಗೂ ಕನ್ನಡವನ್ನು ಜೀವಂತವಾಗಿಡಲು ಹಾಗೂ ಕನ್ನಡದ ಬೇರುಗಳು ಒಣಗದಂತೆ ಸತತವಾಗಿ ಎಚ್ಚರಿಸುತ್ತಿರುವ ಕನ್ನಡ ಚಳವಳಿಗಾರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.