‘ನಮ್ಮ ವೃತ್ತ ಪತ್ರಿಕೆಗಳು ಹೇಗಿರಬೇಕು’ ಎಂಬ ವಿಷಯ ನಿಜವಾಗಿ ವಾದಗ್ರಸ್ತವೂ ಅಲ್ಲ, ಚರ್ಚಾಸ್ಪದವೂ ಅಲ್ಲ. ಕಾರಣ ಪತ್ರಿಕೋದ್ಯಮದ ಮೂಲ ಸೂತ್ರಗಳೇ ಅಷ್ಟು ಸ್ಪಷ್ಟವಾಗಿವೆ. ಆ ಸೂತ್ರಗಳೆಂದರೆ ಸತ್ಯ ಮತ್ತು ಸಂಕ್ಷೇಪ ಸತ್ಯಸಂಗತಿಗಳನ್ನೇ ಹೇಳಬೇಕು. ಇವುಗಳನ್ನು ಅತಿರಂಜನೆಗೊಳಿಸದೆ. ವಿರೂಪಗೊಳಿಸದೆ, ವಿಕ್ಷಿಪ್ತಗೊಳಿಸೆ, ವಿಚಿತ್ರಗೊಳಿಸದೆ, ವಿಶೇಷಗೊಳಿಸದೆ, ವಿಡಂಬಿಸದೆ ಹೇಳಬೇಕು. ಅಂದರೆ ಯಥಾಪ್ರತಿಯಾಗಿ ಯಥಾಮತಿಯಾಗಿ, ಯಥಾವತ್ತಾಗಿ ಹೇಳಬೇಕು. ಹೀಗೆ ಹೇಳುವುದೆಂದರೆ ಸಂಕ್ಷಿಪ್ತವಾಗಿ ಹೇಳಿದಂತೆ, ಸತ್ಯಸೂತ್ರದ ಗಾತ್ರ ಎಂದಿಗೂ ಕಿರಿದಂತೆ ಎಂಬ ಕವಿವಾಣಿ ಇದೆ. ಹಾಗೆಯೇ ಒಂದು ಪತ್ರಿಕೆ ಲೋಕ ವ್ಯವಹಾರದ ಬಗ್ಗೆ ಹೇಳುವಾಗ ಸತ್ಯ ಸಂಗತಿಗಳನ್ನೇ ಸಂಕ್ಷಿಪ್ತವಾಗಿ ಹೇಳಬೇಕೆನ್ನುವುದು ಮೂಲಸೂತ್ರ, ಮುಖ್ಯಸೂತ್ರ, ನಮಗಿಂದು ಬೇಕಾಗಿರುವುದು ಇಂಥ ಪತ್ರಿಕೆಗಳು.

ಆದರೆ ನಮ್ಮ ಪತ್ರಿಕೆಗಳು ಹೇಗಿವೆ ? ಸತ್ಯ ಸಂಕ್ಷೇಪಗಳ ಸೂತ್ರಗಳನ್ನೇ ಮರೆತು ಬಿಟ್ಟಿವೆ. ಸಂಗತಿಗಳನ್ನು ಸತ್ಯದಂತೆ ಪ್ರತಿನಿಧಿಸುವುದಿಲ್ಲ. ವಿಪರ್ಯಾಸಗೊಳಿಸಿ ಪ್ರಕಟಿಸುವುದೇ ಜಾಸ್ತಿ. ಹಾಗೆಯೇ ಸಂಕ್ಷಿಪ್ತತೆಯ ಪ್ರಶ್ನೆಯೇ ಇಲ್ಲ. ವ್ಯಕ್ತಿ ಕೋಮು ಸ್ವಾರ್ಥಗಳಿಂದ ಹಿಡಿದು ಮಾಲೀಕರ ಮತ್ತು ಪತ್ರಕರ್ತರ ಲಾಭಗಳಿಗೆ ಅನುಗುಣವಾಗಿ ಸಂಗತಿಗಳನ್ನು ಹಿಗ್ಗಿಸಿ, ಮುಗ್ಗಿಸಿ, ಕುಗ್ಗಿಸಿ ಬರೆಯುವುದು ಮಾಮೂಲಾಗಿಬಿಟ್ಟಿದೆ. ಹೀಗಾಗಿ ಬಹುತೇಕ ವರದಿಗಳು ಸತ್ಯ ಸಂಕ್ಷೇಪಗಳ ಸೂತ್ರಗಳಿಗೆ ಬದ್ಧವಾಗಿಲ್ಲ. ಎಂತಲೆ ನಡೆದ ಸಂಗತಿಗಳ ಸುದ್ದಿಗಳೆಲ್ಲ ತಪ್ಪು ತಪ್ಪಾಘಿ ಓದುಗ ಜನರಲ್ಲಿ ತಿಳಿಸಲಾಗಿರುವುದರಿಂದ ವಸ್ತುಸ್ಥಿತಿಯ ಯಥಾರ್ಥ ಜ್ಞಾನ ಬೆಳೆದಿರುವುದಿಲ್ಲ. ಲೋಕದ ಸಂಗತಿಗಳ ಸಂಗ್ರಹದಲ್ಲಿ ಜನತೆಯಲ್ಲಿ ತಪ್ಪು ತಿಳಿವಳಿಕೆಯಿಂದಾಗಿ ಸಮಾಜ ಮತ್ತು ರಾಷ್ಟ್ರ ಜೀವನದಲ್ಲಿ ತಪ್ಪು ತಡೆಗಳೇ ಹೆಚ್ಚಾಗುತ್ತಿರುವುದು. ಜನಾಂಗದ ಪ್ರಗತಿ ಪುರೋಭಿವೃದ್ಧಿಗಳಾಗುತ್ತಿಲ್ಲ. ಇದರಿಂದ ಪ್ರಜಾಪ್ರಭುತ್ವವು ಅವ್ಯವಸ್ಥಿತವಾಗಿದೆ.

ಇದಕ್ಕೆ ಕೆಲವು ಉದಾಹರಣೆಗಳನ್ನು ಕೊಡುವುದು ಅವಶ್ಯ. ನಮ್ಮ ದೇಶದಲ್ಲಿ ಶೇಕಡ ೧೫ರಷ್ಟು ಹರಿಜನರಿದ್ದಾರೆ. ೫ ರಷ್ಟು ಗಿರಿಜನರಿದ್ದಾರೆ. ಆದರೆ ಅವರ ಸಮಾಜಗಳಲ್ಲಿ ನಡೆಯುವ ಸಂಗತಿಗಳ ವರದಿಗಳೇ ನಮ್ಮ ಪತ್ರಿಕೆಗಳಲ್ಲಿ ಬರುವುದಿಲ್ಲ. ಹರಿಜನ ಗಿರಿಜನರ ಮೇಲೆ ಹಲ್ಲೆಯಾಗಿ ಜೀವ ವಿತ್ತಗಳ ಹಾನಿಯಾಗಿ ಅದರ ಬಗ್ಗೆ ಗುಲ್ಲು ಗಲಭೆಗಳೆದ್ದಾಗ ತಡವಾಗಿ ಆ ಸುದ್ದಿ ಪ್ರಕಟವಾಗುತ್ತದೆ. ಅದನ್ನು ಬಿಟ್ಟರೆ ಅವರ ಬಗ್ಗೆ ಸುದ್ದಿಯೇ ಇರುವುದಿಲ್ಲ. ದೇಶದ ಶೇಕಡ ೨೦ ರಷ್ಟು ಇರುವ ಈ ಜನರ ಸಮಾಜಗಳಲ್ಲಿ ಏನೂ ಸಂಗತಿಗಳು ನಡೆಯುವುದೇ ಇಲ್ಲವೇ ? ಅಷ್ಟೇಕೆ ಅವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ಕಂಡಿದ್ದ ನಮ್ಮ ಧರ್ಮ-ಶಾಸ್ತ್ರ-ಪುರಾಣ-ವರ್ಣ ಎಲ್ಲ ವಸ್ತುಗಳಿಂದ ನಿತ್ಯ ಅವರಿಗಾಗುವ ಅನ್ಯಾಯ ಅಷ್ಟಿಷ್ಟಲ್ಲ. ಇದನ್ನೆಲ್ಲಾ ಬಣ್ಣಿಸುವ ಎಷ್ಟು ಬರಹಗಳು ನಮ್ಮ ಪತ್ರಿಕೆಗಳಲ್ಲಿ ಬಂದಿವೆ.

ಹಾಗೆಯೇ ಮುಸ್ಲಿಂ, ಕ್ರಿಶ್ಚಿಯನ್, ಪಾರಸೀ, ಯೆಹೂದಿಗಳಾಗಿ ಧಾರ್ಮಿಕ ಮತಪಂಥೀಯ ಅಲ್ಪಸಂಖ್ಯಾತರಿದ್ದಾರೆ. ಅವರಲ್ಲಿ ಮುಸ್ಲಿಂರ ಸಂಖ್ಯೆ ತುಂಬ ಜಾಸ್ತಿ. ಅಷ್ಟೇ ಮಟ್ಟಿಗೆ ಅವರು ಹಿಂದುಳಿದವರು ಕೂಡ. ಮಿಕ್ಕ ಅನುಕೂಲಸ್ಥ ಅಲ್ಪಸಂಖ್ಯಾತರ ಮಾತು ಹೋಗಲಿ. ಮುಸ್ಲಿಂರ ಕುರಿತಾದರೂ ನಮ್ಮ ಪತ್ರಿಕೆಗಳಲ್ಲಿ ಎಷ್ಟು ಬರಹಗಳು ಬರುತ್ತಿವೆ ? ಅಷ್ಟೊಂದು ದೊಡ್ಡ ಸಮಾಜದಲ್ಲಿ ಏನೂ ನಡೆಯುವುದಿಲ್ಲವೇ? ಮತೀಯ ಗಲಭೆಗಳಾದಾಗ ತಲೆಬಾಲ ತಿಳಿಯದ ಕೆಲವು ವರದಿಗಳು ಬರುತ್ತವೆ. ಅವನ್ನು ಬಿಟ್ಟರೆ ಬೇರೆ ಸುದ್ದಿಯೇ ಇಲ್ಲ. ಈ ಅಲ್ಪಸಂಖ್ಯರು ರಾಷ್ಟ್ರೀಯ ಸಮಾಜದ ಸಾಕಷ್ಟು ದೊಡ್ಡ ಅಂಗ. ಇದರ ಬಗ್ಗೆ ಪತ್ರಿಕೆಗಳು ಸಂಪೂರ್ಣ ನಿರ್ಲಕ್ಷ್ಯ ಮಾಡಿವೆ. ಇದು ರಾಷ್ಟ್ರಬಾಧಕವಲ್ಲವೇ? ಇದನ್ನು ನೋಡಿದರೆ ನಮ್ಮ ಪತ್ರಿಕೆಗಳು ಎಂಥ ಘೋರ ಅನ್ಯಾಯ ಮಾಡುತ್ತಿವೆಯೆಂದು ಗೊತ್ತಾಗುತ್ತದೆ.

ಭಾರತದಲ್ಲಿ ಶೇಕಡಾ ೫೦ರಷ್ಟು ಸ್ತ್ರೀಯರಿದ್ದಾರೆ. ಅವರಲ್ಲಿ ಹಿಂದೂ ಮುಸ್ಲಿಂ ಸ್ತ್ರೀಯರಿಬ್ಬರೂ ನಿಸ್ವತಂತ್ರರಾಗಿಯೇ ಬಂದವರು. ಮಿಕ್ಕ ಸ್ತ್ರೀಯರ ಸಂಖ್ಯೆಯೇನೂ ದೊಡ್ಡದಲ್ಲ. ಈ ಹಿಂದೂ ಮುಸ್ಲಿಂ ಸ್ತ್ರೀಯರ ಜೀವನದ ಸ್ಥಿತಿಗತಿಗಳ ಬಗ್ಗೆ ಎಷ್ಟು ವರದಿಗಳು ಬರುತ್ತಿವೆ ? ಕೆಲವು ಪತ್ರಿಕೆಗಳು ಮಹಿಳೆಯರಿಗಾಗಿ ಎಂದು ಒಂದೊಂದು ಪುಟ ಮೀಸಲಿಟ್ಟಿವೆ. ಅವುಗಳಲ್ಲಿ ಬರುವ ಹಿಪ್ಪಿಜಿಡ್ಡಿನಂಥ ಬರಹ. ಅವನ್ನೂ ಬಿಟ್ಟರೆ ಒಂದಿಷ್ಟು ಲೈಂಗಿಕ ವಿಷಯಗಳು. ಮಹಿಳೆಯರೆಂದರೆ ಲೈಂಗಿಕ ವಿಷಯ ಬಿಟ್ಟರೆ ಬೇರೇನೂ ಇಲ್ಲವೇ ? ಇದೇನನ್ನು ತೋರಿಸುತ್ತದೆ. ಸ್ತ್ರೀಯನ್ನು ಲೈಂಗಿಕ ವಸ್ತುವನ್ನಾಗಿ ದಾಸ್ಯದಲ್ಲಿಟ್ಟ ಯುಗ ಯುಗೀಯ ಮನೋಭಾವ. ರಾಜ್ಯಾಂಗ ಸಂವಿಧಾನವು ಭಾರತೀಯ ಸ್ತ್ರೀಯರಿಗೆ, ಪುರುಷರ ಸಮಾನತೆ ಕೊಟ್ಟರೂ ನಮ್ಮ ಪತ್ರಕರ್ತರು ಕೊಟ್ಟಿಲ್ಲ. ಅವರಿನ್ನೂ ಸ್ತ್ರೀಯರನ್ನು ದಾಸ್ಯದಲ್ಲಿಟ್ಟಿದ್ದಾರೆ.

ಇನ್ನು ಭಾರತೀಯ ಸಮಾಜದಲ್ಲಿ ಹಿಂದೂ ಶೂದ್ರರೆಂಬ ಜನವರ್ಗ. ಇವರೇ ಶೇಕಡ ೭೦-೮೦ ರಷ್ಟು ಹಿಂದೂ ಜನರಲ್ಲಿದ್ದಾರೆ. ಯಾವುದೇ ಪತ್ರಿಕೆಯ ಒಟ್ಟು ಬರಹಗಳಲ್ಲಿ ಇವರಿಗೆ ದೊರೆಯುವ ಜಾಗ ಎಷ್ಟು ? ತೀರ ಅತ್ಯಲ್ಪ. ಇವರೂ ಜೀವಂತ ಜನ. ಈ ಸಮಾಜದಲ್ಲಿ ಆಗುಹೋಗುವುದರ ಮೇಲೆ ಸಮಗ್ರ ರಾಷ್ಟ್ರೀಯ ಸಮಾಜವಿದೆ. ಆದರೆ ಈ ಜನರ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿಯೇ ಇರುವುದಿಲ್ಲ. ಅಂದರೆ ಶೂದ್ರ ಸಮಾಜದಲ್ಲಿ ಸುದ್ದಿಯಾಗುವಂತಹ ಸಂಗತಿಗಳೇ ನಡೆಯುವುದಿಲ್ಲವೇ ? ಪ್ರಾಯಶಃ ಶೂದ್ರಸಮಾಜದಲ್ಲಿ ನಡೆದಿರಲಾರದು. ಆದರೆ ಪತ್ರಿಕೆಗಳು ಇವರನ್ನು ಲೆಕ್ಕಕ್ಕಿಟ್ಟಿಲ್ಲ. ಅಂದರೆ ಸಂಪೂರ್ಣವಾಗಿ ದುರ್ಲಕ್ಷಿಸಿವೆ.

ಭಾರತವು ಹಳ್ಳಿಗಳ ದೇಶ. ಶೇಕಡಾ ೮೨ ರಷ್ಟು ಜನ ಹಳ್ಳಿಗಳಲ್ಲಿಯೇ ವಾಸಿಸುತ್ತಾರೆ. ಶೇಕಡ ೧೮ರಷ್ಟು ಪೇಟೆಗಳಲ್ಲಿ ವಾಸಿಸುತ್ತಾರೆ. ಅಮೇರಿಕಾದಲ್ಲಿಯಾದರೆ ಶೇಕಡಾ ೯೨ ಜನ ಪೇಟೆಗಳಲ್ಲಿ ವಾಸಿಸುತ್ತಾರೆ. ಹಳ್ಳಿಗಳಲ್ಲಿರುವವರು ಕೇವಲ ೮ ರಷ್ಟು ಜನ. ಅಲ್ಲಿಯ ಪತ್ರಿಕೆಗಳ ಹಾಗೆ ಇಲ್ಲಿ ಬರೇ ಪೇಟೆ ಪಟ್ಟಣಗಳ ಜನರ ಸುದ್ದಿಯೇ ಬರುತ್ತದೆ. ಹಳ್ಳಿಗಳ ಈ ದೇಶದಲ್ಲಿ ಹಳ್ಳಿಗರಿಗೆ ಕುಡಿಯುವ ನೀರೂ ಸಹ ಇಲ್ಲ. ರಸ್ತೆ, ಶಾಲೆ, ಆಸ್ಪತ್ರೆ, ಚಾವಡಿ, ನೆಮ್ಮದಿಯ ಊಟೋಪಚಾರದ ಬದುಕು, ಮನೆಮಾರು ಇವರಿಗೆ ಇಲ್ಲ. ಗಟ್ಟಿಗರ ಉಳ್ಳವರ, ಮೇಲ್ಜಾತಿ ಮೇಲ್ವರ್ಗಗಳವರ ದಬ್ಬಾಳಿಕೆಯಿಂದ ಕಾಯ್ದೆ ಕಾನೂನು ಪ್ರಕಾರ ರಕ್ಷಣೆಗಳ ಮಾತೂ ಕೇಳಬೇಡಿ. ಇಂಥ ಜನರ ಬಗ್ಗೆ ಪತ್ರಿಕೆಗಳಲ್ಲಿ ಎಷ್ಟು ಹಾಳೆ ಬಳಕೆಯಾಗುತ್ತಿದೆ. ಪತ್ರಿಕೆಗಳಲ್ಲಿ ಬರುವ ವರದಿಗಳಲ್ಲಿ ನೋಡಿದರೆ, ಈ ದೇಶದಲ್ಲಿ ಹಳ್ಳಿಗರೇ ಇಲ್ಲ. ಇದ್ದರೂ ಅವರಲ್ಲಿ ಸುದ್ದಿಯಾಗುವ ಸಂಗತಿಗಳು ನಡೆಯುವುದಿಲ್ಲ ಎನಿಸುತ್ತದೆ. ಇನ್ನು ಪೇಟೆ ಪಟ್ಟಣಗಳೀಗೆ ಬಂದರೂ ಅಲ್ಲಿ ಕೂಲಿನಾಲಿ ನೌಕರಿ-ಚಾಕರಿ ಮಾಡುವವರ ಸಂಖ್ಯೆಯೇ ಜಾಸ್ತಿ. ಅವರ ಸಂಪು ಮುಷ್ಕರ ಗಲಭೆಗಳಾದಾಗಲೇ ತಲೆಬಾಲವಿಲ್ಲದ ಸುದ್ದಿ. ಇಲ್ಲದಿದ್ದರೆ ಅವರ ಸುದ್ದಿಯೇ ಇಲ್ಲ. ಅವರ ಜೀವನ ಸ್ಥಿತಿಗತಿಗಳಿಂದ ಹಿಡಿದು ನಾನಾ ಸಮಸ್ಯೆಗಳು ಸಂಗತಿಗಳು ಇರುತ್ತವೆ. ಆದರೆ ಪತ್ರಿಕೆಗಳಲ್ಲಿ ಮಾತ್ರ ವರದಿಯೇ ಇಲ್ಲ. ಇವರ ಸಮಾಜದಲ್ಲಿ ಆಗು ಸಾವುನೋವುಗಳ ಸುದ್ದಿಗಳು ಬರುವುದಿಲ್ಲ. ನಾಯಿ, ಬೆಕ್ಕು, ಇಲಿಗಳು ಕಾದಾಡಿ ಸತ್ತ ಹಾಗೆ ಇಂಥ ಸಂಗತಿಗಳು ಲೆಕ್ಕಕ್ಕೆ ಇಲ್ಲ. ಆದರೆ ಉಳ್ಳವರ ಸಿರಿವಂತರ ಅಧಿಕಾರಸ್ಥರ, ಸಂಪತ್ ಸಮೃದ್ಧರ, ಮೇಲ್ವರ್ಗದವರ, ಮೇಲ್ಜಾತಿಯವರ ಸುದ್ದಿಗಳು ಮಾತ್ರ ವಿಜೃಂಭಿಸುತ್ತವೆ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಇದು ಎಲ್ಲರಿಗೂ ಗೊತ್ತಾಗುತ್ತದೆ. ಹೆಚ್ಚು ಉದಾಹರಣೆಗಳೂ ಬೇಕಿಲ್ಲ. ಇದರ ವಿಶ್ಲೇಷಣೆಯನ್ನು ಶಾಸ್ತ್ರೀಯವಾಗಿ ಮಾಡುವ ಅಗತ್ಯವಿದೆ.

ಒಟ್ಟಿನಲ್ಲಿ ನಮ್ಮ ಪತ್ರಿಕೆಗಳಲ್ಲಿ ಮಂತ್ರಿಮಾಗಧರಾದಿ ಅಧಿಕಾರದಲ್ಲಿರುವ ಅಥವಾ ಅವನ್ನು ವಿರೋಧಿಸಿ ಹೆದರಿಸುವ ಧುರೀಣರ, ಅವರ ಪಕ್ಷ ವ್ಯಕ್ತಿ ಗುಂಪು ರಾಜಕಾರಣಿಗಳ, ವ್ಯಾಪಾರೋದ್ಯಮದಾರರ ಸಂಬಂಧಗಳ, ಸಾಹಿತ್ಯ ವಾಙ್ಮಯ ಕ್ಷೇತ್ರಗಳ ಕೆಲವರ, ಸ್ವಾಮಿ ಸಂನ್ಯಾಸಿಗಳಾದಿ ಮಠ ಮಹಾಂತರ ಭಾಷಣ, ಹೇಳಿಕೆಗಳು, ವ್ಯಕ್ತಿ ಚಿತ್ರಗಳು, ಸರಕಾರೀ ಸುದ್ದಿಗಳು ಇವಿಷ್ಟು ಮಾತ್ರ ಬರುತ್ತವೆ. ಇವರು ಎಷ್ಟಿದ್ದಾರೆ. ಬೆರಳೆಣಿಕೆಯಷ್ಟು ಕೂಡಾ ಇಲ್ಲ. ಇಡೀ ಸಮಾಜದ ಮೇಲ್ತುದಿಯಲ್ಲಿರುವ ಈ ಬೆರಳೆಣಿಕೆಯಷ್ಟಿರುವ ಜನರದೇ ಸುದ್ದಿಗಳು ಇಡೀ ಜೀವನ ಪರ್ಯಂತ ಪೀಳಿಗೆ ಪೀಳಿಗೆಗಳೇ ಓದಬೇಕು. ಪತ್ರಕರ್ತ ತಲೆಯಲ್ಲಿ ಈ ಮೇಲ್ತುದಿಯ ಜನರದೇ ಎಲ್ಲಾ ವಿಷಯ ಮಿಕ್ಕವರದೇನೂ ಇಲ್ಲ ಎನ್ನುವಂತಾಗಿದೆ. ಮಿಕ್ಕ ಶೇಕಡಾ ೯೯ ಭಾಗ ಜನರಿಗೆ ಪತ್ರಿಕಾ ಸುದ್ದಿಯ ಜಗತ್ತಿನಲ್ಲಿ ಅಸ್ತಿತ್ವವೇ ಇಲ್ಲ. ಆ ಮಾನವ ಜೀವಿಗಳ ಪ್ರವೇಶದ ಕತೆಗಳಂತೆ ಅಪರೂಪಕ್ಕೊಮ್ಮೆ ಈ ಮಹಾ ಜನಸಮುದಾಯದ ಬಗ್ಗೆ ತುಣುಕು ಸುದ್ದಿಗಳು. ಆದ್ದರಿಂದ ನಮಗಿಂದು ಬೇಕಾಗಿರುವುದು ಈ ಸಣ್ಣ ಸಮಾಜದ ಪ್ರಚಾರ ಪತ್ರಿಕೆಗಳಲ್ಲ. ಮಹಾಜನ ಸಮುದಾಯದ ಕುರಿತು ಬರೆವ ಪತ್ರಿಕೆಗಳು ಅಂದರೆ ಹರಿಜನರು-ಗಿರಿಜನರು, ದೀನದಲಿತರು, ಹೀನದಮ್ನರು. ವಿಹೀನ ನಿಮ್ನರು, ಹಿಂದುಳಿದವರಾದ ಶೂದ್ರರು, ಸ್ತ್ರೀಯರು, ಕೂಲಿಕಾರರು ಮತ್ತು ರೈತರು ಇತ್ಯಾದಿ. ಈ ದೇಶದ ಶೇಕಡ ೯೯ ರಷ್ಟಿರುವ ಜನಸಮೂಹದ ಸುದ್ದಿಗಳು, ಸುದ್ದಿ ಪತ್ರಿಕೆಗಳಲ್ಲಿ ಓದಿದಂತಾಗಬೇಕು. ಇಲ್ಲದಿದ್ದರೆ ನಾವು ಓದುವುದೆಲ್ಲ ಬೆರಳೆಣಿಕೆ. ಕೆಲವರ ಪ್ರಚಾರ ಪತ್ರಿಕೆಗಳನ್ನು ಈಗ ನಮಗೆಂಥ ಪತ್ರಿಕೆಗಳು ಬೇಕು ಎಂಬುದು ತಂತಾನೆ ಸ್ಪಷ್ಟ. ಪ್ರಚಾರ, ಅಪಪ್ರಚಾರ, ಪೀತಪ್ರಚಾರದ ಬಹುಭಾಗವಾಗಿರುವ ಪತ್ರಿಕೆಗಳಿಂದೇನು ಪ್ರಯೋಜನ ? ಈ ಅಂಶಗಳನ್ನು ನಾವು ವಿವೇಚಿಸಬೇಕು.