ಕರ್ನಾಟಕದ ನಂದನವನದಲ್ಲಿ ಸೌರಭ ಸೂಸಿ ಅರಳಿ ನಿಂತ ಆಧ್ಯಾತ್ಮ ಮಂದಾರಪುಷ್ಪ ಮಹದೇವಿಯಕ್ಕ, ಉಡುತಡಿಯ ವಸುಂಧರೆಯಲ್ಲಿ ಮೊಳಕೆಯೊಡೆದ ಕಲ್ಪವೃಕ್ಷ, ಭಕ್ತಿಯ ಆರ್ಣವದಲ್ಲಿ ತೇಲಿ ಬಂದ ಶುಕ್ತಿಕೆ. ಸೌಜನ್ಯ – ಸಂಸ್ಕೃತಿಗಳ ಮಾವಿಗೆ ಹಬ್ಬಿ ನಿಂತ ಮಲ್ಲಿಗೆ.

ಜೀವನದ ರೀತಿಯಿಂದ ಅಕ್ಕಮಹಾದೇವಿ ವೀರ ವಿರಕ್ತೆ, ಬೋಧನೆಯಿಂದ ತತ್ವಜ್ಞಾನಿ, ವಿಚಾರ ಸರಣಿಯಿಂದ ಕ್ರಾಂತಿಕಾರಿ, ವಚನಗಳಿಂದ ಹಿರಿಯ ಸಾಹಿತಿ, ದಾರ್ಶನಿಕಳೂ, ಸಂತಳೂ ಆದ ಮಹಾದೇವಿಯಕ್ಕ ಚೆನ್ನಮಲ್ಲಿಕಾರ್ಜುನನ ಚೆಲುವರಸಿ, ಅಕೆಯ ಬದುಕೇ ಒಂದು ಮಹಾಕಾವ್ಯ. ಆಕೆಯ ಒಂದೊಂದು ವಚನವೂ ಒಂದೊಂದು ಭಾವದ ಬಿಂದು, ಸಂಸ್ಕಾರಗೊಂಡ ಚೇತನ ಆಕೆಯದು. ಸಂಸ್ಕೃತಿಯ ಹಾಲುಗಲ್ಲಿನಲ್ಲಿ ಕಡೆದ ಅಮೃತಪುತ್ಥಳಿ ಅಕ್ಕ, ಆಕೆಯಲ್ಲಿ ಕಾಣಬಹುದಾದ ದೃಢನಿರ್ಧಾರ ವೀರವೈರಾಗ್ಯ, ನಿಶ್ಚಲಭಕ್ತಿ, ಧರ್ಮಶ್ರದ್ಧೆ, ಕಷ್ಟ ಸಹಿಷ್ಣುತೆ, ಗುರುಹಿರಿಯರಲ್ಲಿ ಭಕ್ತಿ – ಈ ಒಂದೊಂದು ಸದ್ಗುಣಗಳು ಆಕೆಯ ವ್ಯಕ್ತಿತ್ವಕ್ಕೆ ಹೆಚ್ಚಿನ ಮಹತ್ವವನ್ನುಂಟುಮಾಡಿವೆ.

ಅಕ್ಕಮಹಾದೇವಿ ಚಿಕ್ಕಂದಿನಿಂದಲೇ ಪರಶಿವನೇ ಪರದೈವವೆಂದು ಆರಾಧಿಸುತ್ತಾ ಆತನೇ ತನಗೆ ಪತಿಯಾಗಬೇಕೆಂದು ಬಯಸಿ ನಿಶ್ಚಯಿಸಿಕೊಂಡ ಹೆಣ್ಣು, ಪ್ರಾಪ್ತವಯಸ್ಕಳಾಗಿ, ನವ ಯೌವ್ವನೆಯಾಗಿ ಸೌಂದರ್ಯದ ನೆಲವೀಡಾಗಿ ಬೆಳೆದ ಅವಳ ಮೋಹಕ ರೂಪಕ್ಕೆ ಮರುಳಾಗದವರಾರು? ಮಾರು ಹೋಗದವರಾರು? ಚೆಲುವಿನ ರೂಪದ ಅವಳನ್ನು ಮೋಹಿಸಿದವರೆಷ್ಟು ಮಂದಿಯೋ! ಹೆತ್ತ ಅಬ್ಬೆ-ಅಯ್ಯಗಳಿಗೆ ಮಗಳ ಮದುವೆಯ ಚಿಂತೆ ಆವರಿಸಿತು. ಅದೇ ವೇಳೆಗೆ ಆ ಊರಿನ ದೊರೆಯಾದ ಕೌಶಿಕ ಒಂದು ದಿವಸ ವೈಹಾಳಿಯಿಂದ ಹಿಂದಿರುಗುತ್ತಾ ಇರುವಾಗ ಪುಟಕ್ಕಿಕ್ಕಿದ ಅಪರಂಜಿಯಂತಿದ್ದ ಸೌಂದರ್ಯದ ಪುತ್ಥಳಿಯಾದ ಅಕ್ಕ ಮಹಾದೇವಿಯನ್ನು ನೋಡಿದ, ಒಡನೆಯೇ ಆ ರಜನನ್ನು ‘ಕಾಮಂಚಲಂ ಮಾಡಿದಂ’. ಆಕೆಯೊಡನೆ ಮದುವೆ ನಿಲಬಯಸಿದ ರಾಜ ಪ್ರೇಮ ಭಿಕ್ಷೆಗೆ ಸಿದ್ಧನಾದ. ಆದರೆ ಅಕ್ಕನಿಂದ ದೊರೆತ ಉತ್ತರ ನಿರಾಶೆಯ ಕಾರ್ಮೋಡ! ಶಿವನನ್ನು ಒಲಿದ ಅಕ್ಕನ ಚೇತನಕ್ಕೆ ಯಾವ ಹಂಗೂ ಇಲ್ಲದಾಯಿತು. ಕೆಚ್ಚೆದೆಯ ಸ್ಪಷ್ಟ ನಿರ್ಧಾರ ಅವಳಿಂದ ಹೊರಹೊಮ್ಮಿತು.

            ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೊಲಿದೆ,
            ಎಡೆ ಇಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ, ಚೆಲುವಂ ಗಾನೊಲಿದೆ
            ಎಲೆ ಅವ್ವಾ ನೀನು ಕೇಳಾ ತಾಯೇ
            ಭವವಿಲ್ಲದ, ಭಯವಿಲ್ಲದ ನಿರ್ಭಯ ಚೆಲುವಂಗೆ ಒಲಿದೆ ನಾನು
            ಕುಲ ಸೀಮೆಯಿಲ್ಲದ ನಿಸ್ಸೀಮ ಚೆಲುವಂಗೆ ನಾನೊಲಿದೆ
            ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡ ನನಗೆ
            ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕ,

ಲೌಕಿಕ ದೃಷ್ಟಿಯಿಂದ ಮದುವೆಯಾಗಬೇಕೆಂದು ಮಹಾದೇವಿಯಕ್ಕ ಪರಿತಪಿಸಲಿಲ್ಲ. ಆಕೆಯದು ಪಾರಮಾರ್ಥಿಕ ದಾಂಪತ್ಯ ಸಂಬಂಧ.

ಸುಂಸ್ಕೃತ ಚೇತನ ನಿರಂತರ ಒಳ್ಳೆಯದನ್ನೇ ಬಯಸುವುದು, ಇದು ಮೊದಲ ಮೆಟ್ಟಲಾದರೆ, ಅದನ್ನು ಸಾಧಿಸುವುದು ಎರಡನೆಯ ಮಜಲು, ಅದನ್ನು ಪಡೆಯುವುದು ಅಂತಿಮ ಗುರಿಯಾಗಿ ನಿಲ್ಲುತ್ತದೆ, ಆ ಸಾಧನೆಗೆ ಸವಾಲಾಗಿ ಹಿಮಾಲಯ ಸದೃಶ ಕಷ್ಟ ಪರಂಪರೆಗಳು ನಿಂತರೂ, ಆ ಹಿರಿಯ ಚೇತನ ತಲೆ ಬಾಗುವುದಿಲ್ಲ. ಅಕ್ಕ ಈ ಶ್ರೇಣಿಯಲ್ಲಿ ನಿಂತವಳು, ತನ್ನ ನಿರ್ಧಾರಕ್ಕೆ ಚಂಚಲತೆಯ ಸೋಂಕು ತಾಕದಂತೆ ಎಚ್ಚರ ವಹಿಸಿದಳು. ತನ್ನ ಅಂತರಾತ್ಮ ಅರಿಸಿದ ಶಿವನನ್ನೇ ಪತಿಯಾಗಿ ಪಡೆಯುತ್ತೇನೆ ಎನ್ನುವ ನಿರ್ಧಾರ ದೃಢವಾಗಿತ್ತು. ಈ ನಿರ್ಧಾರ ಅಕ್ಕನನ್ನು ಗರಗಸದ ಇರಿತಕ್ಕೆ ಒಳಗು ಮಡಿತು. ಅಕ್ಕನ ಬಯಕೆಯಾದರೋ ಅಸೀಮವಾದುದು. ‘ಭೂಮತ್ಸುಖಂ, ನ ಅಲ್ವೆ ಸುಖಮಸ್ತಿ’, ಎಂದು ಬಯಸುವುದು ಜೀವಿಯ ಲಕ್ಷಣ, ಅದರೆ ಅಲ್ಪವಾದುದನ್ನು ಬಯಸದೆ ಹಿರಿದಾದುದನ್ನೇ ಬಯಸುವುದು ಸುಸಂಸ್ಕೃತಳಾದ ಅಕ್ಕನಿಗೆ ಮಾತ್ರ ಸಾಧ್ಯ. ಕಿರಿದಾದ ಬಯಕೆಯನ್ನು ನಿರಾಕರಿಸಿ, ಹಿರಿದಾದ ಸಿದ್ಧಿಗೆ ಆಹ್ವಾನವಿತ್ತಳು. ಇದು ಖಚಿತವಾದಂತೆ ಕಷ್ಟಗಳ ಕಲ್ಲುಮಳೆ ಸುರಿಯಲಾರಂಭಿಸಿತು.

ರಾಮಾಯಣದಲ್ಲಿ ತುಂಬು ಗರ್ಭಿಣಿಯಾದ ಸೀತಾದೇವಿಯನ್ನು ಪ್ರಜೆಗಳ ಹಿತಕ್ಕಾಗಿ ತ್ಯಾಗ ಮಾಡಿದ ಶ್ರೀರಾಮನ ನಿರ್ಧಾರದಂತೆ ಅಚಲವಾದುದು ಅಕ್ಕನ ನಿರ್ಧಾರ. ತನ್ನ ಆಧ್ಯಾತ್ಮದ ಈ ಗುರಿಸಾಧನೆಗೆ ವಿಘ್ನವನ್ನೂ, ವಿಪತ್ತನ್ನೂ ತಂದೊಡ್ಡುವ ಲೌಕಿಕದ ಅನೇಕ ಅಮೂಲ್ಯ ವಸ್ತುಗಳನ್ನು ಆಕೆ ತ್ಯಾಗ ಮಾಡಬೇಕಾಯಿತು. ಲೌಕಿಕದ ಆಸೆ ಆಮಿಷಗಳು ಆಕೆಯ ದಿಟ್ಟತನದ ಹೆಜ್ಜೆಗೆ ಹಂತ ಹಂತದ ತಡೆಗಳು. ಸಂಸಾರ ಬಂಧನ ತನ್ನ ಗುರಿಗೆ ಅಡ್ಡಿಯಾಗಿದೆ ಎನ್ನುವುದನ್ನು ತಿಳಿದ ವೀರ ಭಕ್ತೆ, ವಿರಕ್ತೆ ಅಕ್ಕಮಹಾದೇವಿ. ಅದಕ್ಕೆ ಸೆಟೆದು ನಿಂತಳು. ನಿಂತ ನಿಲುವಿನಲ್ಲಿ ಎಲ್ಲವನ್ನು ತೊರೆದು, ಕಡೆಗೆ ಮೈ ಮೇಲಿನ ಅರಿವೆಗೂ ಜಲಾಂಜಲಿಯಿತ್ತು ಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾ ಹೊರಟಳು.

ಯೌವನ ಜಾರಿ ವೃದ್ಧಾಪ್ಯ ತೋರಿದ ಮೇಲೆ, ‘ಊರು ಹೋಗು ಕಾಡು ಬಾ’ ಎಂದಾಗ ಸಂಸಾರದಲ್ಲಿ ವಿರಕ್ತಿ ಹೊಂದಿ, ಕಾವಿಧರಿಸಿ ಕಾಡಿಗೆ ಹೋಗುವುದು ಹೆಚ್ಚಿನದಲ್ಲ, ಏರು ಜವ್ವನದ ಹೊಸ್ತಿಲಿನಲ್ಲಿ ನಿಂತಿದ್ದು ಭೋಗದ ಅರಮನೆಯ ಬಾಗಿಲು ತೆರೆದು, ‘ನನ್ನನ್ನು ಅನುಭವಿಸು ಬಾ, ಬಾ’ ಎಂದು ಆಹ್ವಾನಿಸುತ್ತಿದ್ದಾಗ ಅದರಿಂದ ವಿಮುಖರಾಗಿ ಹೊರಡುವುದು ಸುಲಭದ ಮಾತಲ್ಲ, ಏರು ವಯಸ್ಸಿನಲ್ಲಿ ದೇಹದ ಒಂದೊಂದು ಅಂಗಾಂಗಗಳೂ, ರಕ್ತದ ಒಂದೊಂದು ಕಣಗಳು ವಿಷಯ ಲೋಲುಪತೆಗೆ, ಭೋಗದ ಸುಖಕ್ಕೆ ಬಯಸುವುದು ಸಹಜ. ಅದು ಪ್ರಕೃತಿ ಸಹಜ ಧರ್ಮವೂ ಹೌದು. ಆದರೆ ಅಂಥ ಸಮಯದಲ್ಲಿ ಭೋಗಕ್ಕೆ ವಿಮುಖರಾಗಿ, ಯೋಗದ ಕಡೆಗೆ ಮುಖ ಮಾಡುವುದು, ಸಂಯಮ ಶೀಲೆ ಅಕ್ಕಮಹಾದೇವಿಯಂಥವರಿಗೆ ಮಾತ್ರ ಸಾಧ್ಯ, ಜೀವನದಲ್ಲಿ ಎಲ್ಲ ರೀತಿಯ ಆಸೆ ಆಕಾಂಕ್ಷೆಗಳೂ, ಬಯಕೆಯ ಬೀಜಗಳೂ ಬತ್ತಿ ಹೋದ ಮೇಲೆ ಬದುಕಿನಲ್ಲಿ ಯಾವ ಆಸಕ್ತಿಯೂ ಉಳಿಯದೆ ಇದ್ದಾಗ, ‘ಭಗವಂತನನ್ನು ಬಾ’ ಎಂದು ಕರೆಯುವುದರಲ್ಲಿ ಅರ್ಥವಿಲ್ಲ. ಇಂಥವರನ್ನು ಕಂಡೇ ಭಕ್ತಿ ಭಂಡಾರಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಹೀಗೆ ಹೇಳಿದರು :

            ನೆರೆ ಕೆನ್ನೆಗೆ, ತೆರೆಗಲ್ಲಕೆ, ಶರೀರ ಗೂಡು ಹೋಗದ ಮುನ್ನ,
            ಹಲ್ಲು ಹೋಗಿ ಬೆನ್ನು ಬಾಗಿ, ಅನ್ಯರಿಗೆ ಹಂಗಾಗದ ಮುನ್ನ
            ಕಾಲ ಮೆಲೆ ಕೈಯನೂರಿ ಕೋಲು ಹಿಡಿಯದ ಮುನ್ನ
            ಮುಪ್ಪಿಂಧ ಒಪ್ಪವಳಿಯದ ಮುನ್ನ
            ಮೃತ್ಯು ಮುಟ್ಟದ ಮುನ್ನ
            ಪೂಜಿಸು ನಮ್ಮ ಕೂಡಲ ಸಂಗಮದೇವನ

ಸುತ್ತ ಮುತ್ತ ಬಯಕೆಗಳು ಬಳಸಿರುವಾಗ, ಅನುಭವಿಸುವ ಅವಕಾಶವಿರುವಾಗ ಅವೆಲ್ಲವನ್ನೂ ಒತ್ತಟ್ಟಿಗಿಟ್ಟು ಶಿವನನ್ನು ಅರ್ಚಿಸು ಎಂದು ಉಪದೇಶಿಸಿದರೆ ಅದನ್ನು ಸಾರ್ಥಕಗೊಳಿಸದ ಹಿರಿಮೆ ಅಕ್ಕನದು. ಅಕ್ಕನ ವೀರ ವೈರಾಗ್ಯ ಎಂಥ ಎಂಟೆರ್ದೆಯ ಕೆಚ್ಚೆದೆಯ ಗಂಡನ್ನೂ ನಡುಗಿಸುವಂತದ್ದಾಗಿದೆ.

ಅಕ್ಕನೇನೋ  ಎಲ್ಲವನ್ನೂ ತೊರೆದಳು. ಆದರೆ ಅರಿಷಡ್ವರ್ಗಗಲು ಅಷ್ಟು ಸುಲಭದಲ್ಲಿ ಆಕೆಯನ್ನು ತೊರೆಯಲು ಸಾಧ್ಯವೇ? ಬಿಟ್ಟೆನೆಂದರೆ ಬಿಡದೀ ಮಾಯೆ! ಆಂತರಿಕ ಚಿಂತಕರು ಇವರಾದರೆ ಬಹ್ಯ ಚಿಂತಕರಿಗೆನು ಕಡಿಮೆಯೇ? ಅವರ ದೃಷ್ಟಿಯಲ್ಲಿ, ಸ್ಫುರದ್ರೂಪಿಯಾದ ಕೌಶಿಕ ಮೇಲಾಗಿ ರಾಜ, ಆಸ್ತಿವಂತ, ಗುಣವಂತ, ಅಧಿಕಾರಸ್ಥ ಎಲ್ಲಕ್ಕಿಂತಲೂ ಮಿಗಿಲಾಗಿ ಅಕ್ಕನನ್ನು ಒಲವರಸಿಯಾಗಿ ಬಯಸಿದ ರಸಿಕರಾಜ, ಉಳಿದವರ ಪಾಲಿಗೆ ಇದು ಅಪೂರ್ವ ಅದೃಷ್ಟವಾದರೆ ಅಕ್ಕನ ಪಾಲಿಗೆ ಇದೊಂದು ದುರದೃಷ್ಟ. ಆಕೆನೊಂದು ನುಡಿದಳು :

            ಎರದ ಮುಳ್ಳಿನಂತೆ ಪರಗಂಡರೆನಗವ್ವಾ
            ಸೋಲಂಕಲಮ್ಮೆ, ಸುಳಿಯಲಮ್ಮೆ
            ನಂಬಿನಚ್ಚಿ ಮಾತನಾಡಲಮ್ಮೆನವ್ವಾ
            ಚನ್ನಮಲ್ಲಿಕಾರ್ಜುನನಲ್ಲದೆ ಉಳಿದ ಗಂಡರ ಉರದಲ್ಲಿ
            ಮುಳ್ಳುಂಟೆಂದು ನಾನಪ್ಪಲಮ್ಮೆನವ್ವಾ

ಆಕೆಯ ಹಿತಚಿಂತಕರು ಆಕೆಯನ್ನು ಅಷ್ಟಕ್ಕೇ ಬಿಡುವರೆ? ಅವರು ಅಕ್ಕನನ್ನು ಕೇಳಿರಬಹುದು, ‘ನಿನ್ನ ಊಟವೆಲ್ಲಿ? ನಿನ್ನ ಶಯನವೆಲ್ಲಿ? ಒಬ್ಬಂಟಿಗಳಾದ ನಿನ್ನ ಪಾಡು ಏನೆಂದು?’ ಅಕ್ಕನ ಉತ್ತರ ಸದಾ ಸಿದ್ಧವಾದುದೇ. ಸಂತಸದಿಂದಲೇ ಉತ್ತರ ಕೊಟ್ಟಿದ್ದಾಳೆ, ತಾನು ನಡೆಯುವ ದುರ್ಗಮದಾರಿಗೂ, ಮಾರ್ಗ ಕಂಡಿದ್ದಾಳೆ. ಆ ಕಾಣ್ಕೆ ಅವಳಿಂದ ಹೀಗೆ ನುಡಿಸಿತು :

            ಹಸಿವಾದಡೆ ಭಿಕ್ಷಾನ್ನಗಳುಂಟು
            ತೃಷೆಯಾದೊಡೆ ಕೆರೆಹಳ್ಳ ಬಾವಿಗಳುಂಟು,
            ಶಯನಕ್ಕೆ ಹಾಳು ದೇಗುಲಗಳುಂಟು
            ಚೆನ್ನಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ ನೀನೆನಗುಂಟು

ಆತ್ಮ ಸಂಗಡಿಗನಾಗಿ ಚೆನ್ನಮಲ್ಲಿಕಾರ್ಜುನನು ಇರಬೇಕಾದರೆ ಅಕ್ಕನಿಗೆ ಅರಕೆಯಾದರೂ ಏನು? ಹೀಗೆ ಹಾಡಿದ ಆಕೆಯ ವೈರಾಗ್ಯ ಮುಂದೆ ಇನ್ನೂ ಹೆಚ್ಚಿನ ದಿಟ್ಟತನದ ಹೆಜ್ಜೆ ಇಡುತ್ತದೆ. ಹಸಿದಾಗ ಭಿಕ್ಷಾನ್ನ ದೊರೆತರೆ ಸರಿ, ಇಲ್ಲದಿದ್ದರೆ? ಬಾಯಾರಿದಾಗ ಕೆರೆಹಳ್ಳ ಬಾವಿಗಳು ಸಿಕ್ಕಿದರೆ ಒಳ್ಳೆಯದು. ಅವುಗಳು ಸಿಕ್ಕದಿದ್ದರೆ? ಮಲಗಬೇಕು ಎನಿಸಿದಾಗ ಹಾಳುದೇಗುಲ ಕಣ್ಣಿಗೆ ಬಿದ್ದರೆ ಆಯಿತು? ಕಣ್ಣಿಗೆ ಬೀಳದಿದ್ದರೆ? ಆದ್ದರಿಂದ ಅಕ್ಕ ಕೈಗೊಂಡ ದಾರಿ ಅಷ್ಟು ಸುಲಭದ್ದಲ್ಲ. ಇನ್ನೂ ದುರ್ಬರವಾದದು. ಆದರೆ ಆಕೆ ಅದಕ್ಕೆ ಅಂಜಿದಳೇ? ಮನಸ್ಸನ್ನು ವಜ್ರದಂತೆ ಕಠಿಣ ಮಾಡಿಕೊಂಡಳು. ತನಗೆ ತಾನೇ ಕಷ್ಟ ಪರಂಪರೆಗಳನ್ನು ಆಹ್ವಾನಿಸಿ, ದೇಹಕ್ಕೂ ಹಾಗೂ ಮನಸ್ಸಿಗೂ ಆ ನೋವನ್ನು ಒಗ್ಗಿಸಿಕೊಂಡಳು. ಆಗ ಅವಳ ಮನೋಭಾವ ಹೀಗೆ ವ್ಯಕ್ತವಾಯಿತು;

            ಮನೆ ಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯಾ
            ಬೇಡಿದರೆ ಇಕ್ಕದಂತೆ ಮಾಡಯ್ಯ
            ಇಕ್ಕಿದರೆ ನೆಲಕ್ಕೆ ಬೀಳುವಂತೆ ಮಾಡಯ್ಯ
            ನೆಲಕ್ಕೆ ಬಿದ್ದರೆ ನಾನೆತ್ತಿಕೊಂಬುದಕೆ ಮುನ್ನವೆ
            ಶುನಿ ಎತ್ತಿಕೊಂಬಂತೆ ಮಾಡಾ! ಚೆನ್ನ ಮಲ್ಲಿಕಾರ್ಜುನಯ್ಯ

ಅಕ್ಕ ತನ್ನ ಆತ್ಮಕ್ಕೆ ಭದ್ರವಾದ ವಜ್ರಕವಚವನ್ನೇ ತೊಡಿಸಿದಳು, ಮಹಾದೇವಿ ಕಷ್ಟಗಳನ್ನು ಆಹ್ವಾನಿಸಿದ ರೀತಿ ಒಂದು ತೆರನಾದರೆ, ಭಗವಂತ ಭಕ್ತರನ್ನು ಪರೀಕ್ಷಿಸುವ ವಿಧಾನ ಮತ್ತೂ ಕಠಿಣವಲ್ಲವೇ? ಇದು ಜ್ಞಾನ ಜ್ಯೋತಿ ಅಕ್ಕನಿಗೆ ಅರಿಯದೆ? ತನ್ನ ಪ್ರಾಣವನ್ನೇ ಪಣವೊಡ್ಡಿ ತನ್ನ ಸಾಧನೆಗೆ ತೊಡಗುತ್ತಾಳೆ.

ಕಿಡಿ ಕಿಡಿ ಕೆದರಿದರೆ ಹಸಿವು ತೃಷೆ ಅಡಗಿತೆಂದಳು, ಮುಗಿಲು ಹರಿದು ಬಿದ್ದರೆಪುಷ್ಪ ಬಿದ್ದಿತೆಂದಳು, ಶಿರ ಹರಿದು ಬಿದ್ದರೆ ಚೆನ್ನಮಲ್ಲಿಕಾರ್ಜುನನಿಗೆ ಪ್ರಾಣ ಅರ್ಪಿತವಾಯಿತೆಂದಳು. ಅಕ್ಕನ ಸಾಣೆ ಹಿಡಿದ ಆತ್ಮ ಸಂಸ್ಕಾರಕ್ಕೆ ದ್ಯೋತಕಗಳಾಗಿವೆ, ಈ ನುಡಿಗಳು!

ಅಕ್ಕ ತನಗೆ ಶಿವನಲ್ಲಿ ಇದ್ದ ನಿಶ್ಚಲ ಭಕ್ತಿಯಿಂದ ಆತನನ್ನು ತನ್ನ ಇಷ್ಟ ದೈವವಾಗಿ, ಮಿಗಿಲಾಗಿ ತನ್ನ ಪತಿಯಾಗಿ ಭಾವಿಸಿದಳು, ಶಿವನನ್ನು ಪತಿಯಾಗಿ ಕಂಡ ಅಕ್ಕನ ಅನುಭಾವಗೀತೆಗಳು ಶೃಂಗಾರ ಮಯವಾದವು. ಕಾಳಿದಾಸನ ವಿಕ್ರಮೋರ್ವಶಿಯ, ಮೇಘದೂತಗಳಲ್ಲಿ ಕಾಣುವ ವಿಪುಲಂಭ ಶೃಂಗಾರಕ್ಕೆ ಹೆಗಲೆಣೆಯಾಗಿ ನಿಲ್ಲುವ ಶೃಂಗಾರರಸ ಅಕ್ಕನ ವಚನಗಳಲ್ಲಿ ಮಡುಗಟ್ಟಿ ನಿಂತಿದೆ. ಇತರ ವಚನಕಾರರಲ್ಲಿ ಬಹುತೇಕ ಮಂದಿ ಧರ್ಮದ ಉಪದೇಶಕ್ಕಾಗಿ, ಜ್ಞಾನದ ಅರಿವಿಗಾಗಿ ವಚನಗಳನ್ನು ಸೃಷ್ಟಿಸಿದರು, ಹಾಡಿದರು, ಆದರೆ ಸಹಜ ಕವಯತ್ರಿಯಾದ ಹಿರಿಯ ಸಾಹಿತಿ ಅಕ್ಕನಿಗೆ ಆತ್ಮದ ಅನುಭಾವವೇ ಕಾವ್ಯಧಾರೆಯಾಗಿ ಹೊರಸೂಸಿತು, ತತ್ವ, ಧರ್ಮ, ಉಪದೇಶ ಈ ವಿಚಾರಗಳಿಂದ ಕೂಡಿದ ವಚನಗಳ ರಚನೆ ಅಕ್ಕನಿಂದ ಆಗಿಲ್ಲವೆಂದಲ್ಲ. ಆದರೆ ಈಕೆಯ ವಚನಗಳಲ್ಲಿ ಆಧ್ಯಾತ್ಮದ ಜೊತೆಗೆ ಶೃಂಗಾರ ಹಿತಮಿತವಾಗಿ ಮಿಳಿತವಾಗಿದೆ. ಆಧ್ಯಾತ್ಮ, ಶೃಂಗಾರದ ಲೇಪವನ್ನು ಪಡೆದಿದೆ. ಈ ಅಪೂರ್ವ ಸಂಗಮ, ಅಕ್ಕನ ಕಾವ್ಯಗುಣಕ್ಕೆ ಹೆಚ್ಚಿನ ಮೆರಗನ್ನು ಕೊಟ್ಟಿದೆ: ಮೃದು, ಮಧುರ ಕೋಮಲ ಪ್ರಣಾಳಿಕೆಯಲ್ಲಿ ಅಕ್ಕನ ತೀವ್ರ ಭಾವನೆಗಳು ಹರಿದಿವೆ. ಆಕೆಯ ವಚನಗಳು ಕೇಳುವವರ ಕಿವಿಗೆ ಇಂಪು, ಭಕ್ತರ ಮನಸ್ಸಿಗೆ ತಂಪು.

            ಗಿರಿಯಲ್ಲದೆ ಹುಲು ಮೊರಡಿಯಲ್ಲಾಡುವುದೇ ನವಿಲು
            ಕೊಳನಲ್ಲದೆ ಕಿರುವಳ್ಳಕ್ಕೆಳಸುವುದೆ ಹಂಸೆ
            ಮಾಮರ ತಳಿತಲ್ಲದೆ ಸ್ವರಗೈವುದೆ ಕೋಗಿಲೆ
            ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ
            ಎನ್ನದೇವ ಚನ್ನಮಲ್ಲಿಕಾರ್ಜುನನಲ್ಲದೆ ಅನ್ಯಕ್ಕೆಳಸುವುದೇ
            ಎನ್ನಮನ ಕೇಳಿರೇ ಕೆಳದಿಯರಾ!

ಚನ್ನಮಲ್ಲಿಕಾರ್ಜುನನಲ್ಲಿರುವ ಅಕ್ಕನ ಅನನ್ಯ ಪ್ರೀತಿಯ ಕುರುಹುಗಳು ನೂರಾರು ರೀತಿಯಿಂದ ಹೊರ ಹೊಮ್ಮಿವೆ, ಈ ದೃಷ್ಟಿಯಿಂದ ಸಮೀಕ್ಷಿಸಿದರೆ ಆಕೆಯ ಒಂದೊಂದು ವಚನವೂ ಒಂದೊಂದು ಸುಂದರ ಭಾವಗೀತೆಯಾಗಿದೆ. ತನ್ನ ನೋವು – ನಲಿವಿನ ಅಭಿವ್ಯಕ್ತಿ ಮನೆಮೆಚ್ಚುವಂತಿದೆ.

            ಬಂಜೆ ಬೇನೆಯನರಿಯಳು
            ಮಲತಾಯಿ ಮುದ್ದ ಬಲ್ಲಳೇ
            ನೊಂದ ನೋವ ನೋಯದವರೆತ್ತ ಬಲ್ಲರು
            ಚೆನ್ನಮಲ್ಲಿಕಾರ್ಜನ ನೀನಿರಿದ ಅಲಗು ಒಡಲಲ್ಲಿ
            ಮುರಿದು ಹೊರಳುವವಳ ನೀವೆತ್ತ ಬಲ್ಲಿರೆ ಎಲೆ ತಾಯಿಗಳಿರಾ?

ಈ ಮಾನಸಿಕ ಯತನೆಗೆ ಇದಕ್ಕಿಂತ ಸಮರ್ಪಕ ಹೋಲಿಕೆ ಇನ್ನೆಲ್ಲಿಯದು? ಹೇಳುವ ಸತ್ಯವನ್ನು ಸ್ಪಷ್ಟವಾಗಿ ಹೇಳಿದರೂ ಅದರಲ್ಲಿ ಕಾಣುವ ಮೃದುತ್ವ ಗಮನಾರ್ಹವಾದುದು. ಸತ್ಯವನ್ನು ನುಡಿದರೂ ಪ್ರಿಯವಾಗಿ ನುಡಿಯುವುದು ಸುಸಂಸ್ಕೃತನ ಲಕ್ಷಣ, ಸತ್ಯಂ ಬ್ರೂಯಾತ್, ಸತ್ಯಂ ಪ್ರಿಯಂ ಬ್ರೂಯಾತ್, ಸತ್ಯಂ ಅಪ್ರಿಯಂ ನಬ್ರುಯಾತ್ ಎಂದು ಆರ್ಯರ ವಾಣಿ ಸುಸಂಸ್ಕೃತನ ಲಕ್ಷಣವನ್ನು ಕುರಿತು ಹೆಳಿದೆ. ಈ ಹೇಳಿಕೆ ಅಕ್ಕನಿಗೆ ಅನ್ವರ್ಥವಾಗಿದೆ, ‘ತನ್ನ ಪತಿ ಶಿವ, ಇದರ ಬಗ್ಗೆ ಯರೂ ಏನೂ ಟೀಕೆ ಮಾಡಬೇಕಾದುದಿಲ್ಲ. ಯಾರ ಉಪದೇಶದ ಅಗತ್ಯವೂ ತನಗಿಲ್ಲ’ ಎಂದು ಹೇಳುವ ಸತ್ಯವನ್ನು ಅಕ್ಕ ಕಟುವಾಗಿ ನುಡಿಯಬಹುದಿತ್ತು, ಅದರೆ ಅಕ್ಕನದು ಸುಸಂಸ್ಕೃತ ಚೇತನ, ಆದ್ದರಿಂದ ಆಕೆ ಹಾಗೆ ಹೇಳಲು ಬರುವಂತಿಲ್ಲ. ಸತ್ಯವನ್ನೇ ಪ್ರಿಯವಾಗಿ ಮಧುರವಾಗಿ ಯರ ಮನಸ್ಸಿಗೂ ನೋವಾಗದಂತೆ ಹೇಳಿದ್ದಾಳೆ.

ಚೆನ್ನಮಲ್ಲಿಕಾರ್ಜುನನ ಒಲವಿನ ಅಲಗು ಒಡಲಲ್ಲಿ ಮುರಿದು ನರಳುತ್ತಿರುವ ಅಕ್ಕ ಹಗಲು ನಾಲ್ಕು ಜಾವ ಚೆನ್ನಮಲ್ಲಿಕಾರ್ಜುನನ ಧ್ಯಾನದಲ್ಲಿದ್ದಾಳೆ. ಇರುಳು ನಾಲ್ಕು ಜಾವ ವಿಕಳಾವಸ್ಥೆಯಲ್ಲಿದ್ದಾಳೆ. ಹಗಲು – ಇರುಳೂ ಆತನ ಕಳವಳದಲ್ಲಿ ಮರೆದೊರಗಿದ್ದಾಳೆ. ಆತನ ಒಲುಮೆ ನಟ್ಟು ಹಸಿವೆ,ತೃಷೆ, ನಿದ್ರೆಯ ಮರೆತ್ತಿದ್ದಾಳೆ. ‘ಜಗತ್ ಸರ್ವಂ ಮಲ್ಲಿಕಾರ್ಜುನಮಯಂ’ ಆಗಿದೆ ಆಕೆಗೆ.

ಈ ಒಲವಿನ ಹಿಂಸೆಗೆ ಆಕೆ ಹೆದರುವಳೆ? ಅವಳಲ್ಲಿ ಪ್ರಾರಂಭದಲ್ಲಿ ಮೂಡಿದ ಆರ್ತಧ್ವನಿ ಮರೆಯಗತೊಡಗಿದಂತೆ ಕೆಚ್ಚಿನ, ಆತ್ಮವಿಶ್ವಾಸದ ನುಡಿ ಕೇಳಿಬರುತ್ತದೆ, ಶಿವ ಪರೀಕ್ಷೆಯ ಒರೆಗಲ್ಲಿಗೆ ಸಿದ್ಧಳಾಗುತ್ತಾಳೆ.

            ಚಂದನವ ಕಡಿದು ಕೊರೆದು ತೇಯ್ದಡೆ, ನೊಂದೆನೆಂದು ಕಂಪ ಬಿಟ್ಟಿತ್ತೆ
            ತಂದು ಸುವರ್ಣವ ಕಡಿದು ಒರೆದೊಡೆ ಕಳಂಕವ ಹಿಡಿದಿತ್ತೆ
            ಸಂದು ಸಂದು ಕಡಿದು ಕಬ್ಬು ಗಾಣದಲ್ಲಿ ಸಿಕ್ಕಿ ಅರೆದೊಡೆ ಬೆಂದು
            ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತೆ
            ನಾ ಹಿಂದೆ ಮಾಡಿದ ಹೀನಂಗಳೆಲ್ಲವರ ತಂದು ಮುಂದಿಳುಹಲು ನಿಮಗೆ ಹಾನಿಯೇ?
            ಎನ್ನದೇವ ಚೆನ್ನಮಲ್ಲಿಕಾರ್ಜುನಯ್ಯಾ, ನೀನು
            ಕೊಂದೆಡೆಯೂ ನಾನು ಶರಣೆಂಬುದ ಮಾಣೆ,

ತನ್ನ ಅಚಲ ಒಲವನ್ನು ಸ್ಪಷ್ಟಪಡಿಸಿದಳು ಶಿವನಿಗೆ ಅಕ್ಕ, ತಾನು ಶಿವನನ್ನು ಒಲಿದಿದ್ದಾಳೆ, ಆದರೆ ಶಿವ ತನ್ನನ್ನು ಒಲಿದಿರುವನೋ? ಇಲ್ಲವೋ? ತಿಳಿಯದು, ಹಾಗೆಂದು ಅಕ್ಕನ ಒಲವಿನ ಒರತೆ ಬತ್ತೀತೆ? ಅದು ನಿರಂತರ ಪುಟಿಯುವ ಸೆಲೆ, ಆಕೆಯ ಪಂಚೇಂದ್ರಿಯಗಳೂ ಪಂಚಾನನನನ್ನೇ ಹಮ್ಮಿ ನಿಂತಿವೆ;

            ಅಯ್ಯಾ ನೀ ಕೇಳಿದರೆ ಕೇಳು ಕೇಳದಿರ್ದಡೆ ಮಾಣು
            ನಾನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯಾ
            ಅಯ್ಯಾ ನೀ ಒಲಿದರೆ ಒಲಿ ಒಲಿಯದಿರ್ದಡೆ ಮಾಣು
            ನಾನಿನ್ನ ಪೂಜಿಸದಲ್ಲದೆ ಸೈರಿಸಲಾರೆನಯ್ಯಾ
            ಅಯ್ಯಾ ನೀ ಮೆಚ್ಚಿದರೆ ಮೆಚ್ಚು ಮೆಚ್ಚದಿರ್ದಡೆ ಮಾಣು
            ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯಾ
            ಅಯ್ಯಾ ನೀ ನೋಡಿದಡೆ ನೋಡು ನೋಡದಿರ್ದಡೆ ಮಾಣು
            ನಾನಿನ್ನ ನೋಡಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯಾ
            ಚೆನ್ನಮಲ್ಲಿಕಾರ್ಜುನಯ್ಯಾ, ನಾ ನಿಮ್ಮ ಪೂಜಿಸಿ
            ಹರುಷದಲೋಲಾಡುವೆನಯ್ಯಾ.

ಅಕ್ಕನ ಇಂಥ ಆತ್ಮ ಸಂಸಾರಕ್ಕೆ ಶರಣರ ಸಂಗವೂ ಸಹಾಯ ಮಾಡಿತು ‘ಸತ್ಯಂವದ ಧರ್ಮಂಚರ’ ಇದು ಅಕ್ಕನ ನುಡಿ-ನಡೆ. ಅಕ್ಕ ಸತ್ಯದ ಭಾಮೆ ಎನ್ನುವುದನ್ನು ನಾವು ಆಗಲೇ ನೋಡಿದೆವು. ಆಕೆ ನುಡಿದಂತೆ ನಡೆದಳು. ಅಂಥವರನ್ನೇ ಕಾಣ ಬಯಸಿದಳು, ಅಂಥವರ ದರ್ಶನ ಒಂದು ಸೌಭಾಗ್ಯವೇ ಸರಿ ಎಂದು ತಿಳಿದಳು.

ತನು ಶುದ್ಧ, ಮನ ಶುದ್ಧ, ಭಾವ ಶುದ್ಧರಾದವರ ಎನಗೊಮ್ಮೆ ತೋರಾ
ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ
ನಿತ್ಯ ಶುದ್ಧರಾದವರನೆನಗೊಮ್ಮೆ ತೋರಾ
ಕತ್ತಲೆಯ ಮೆಟ್ಟಿ ತಲೆವೆಳಗಾಗಿ ಹೊರಗೊಳಗೊಂದಾಗಿನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ

ಸದಾಚಾರದ ನಡಿಗೆ, ಶಿವಾಗಮದ ನುಡಿ ಅಕ್ಕನದು, ಗುರು ಹಿರಿಯರಲ್ಲಿ ಭಕ್ತಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದು ಸನ್ಮಾರ್ಗಿಗಳ ರೀತಿ. ಅದನ್ನು ಅಕ್ಕ ತನ್ನ ಜೀವನದಲ್ಲಿ ಬಹುಮಟ್ಟಿಗೆ ಅನುಸರಿಸಿದ್ದಾಳೆ. ನಮ್ಮ ಸಂಸ್ಕೃತಿ, ನಮ್ಮ ಹಿರಿಯರಿಂದ ನಮಗೆ ಹರಿದು ಬರುವ ಒಂದು ಪವಿತ್ರ ನದಿ, ಅವರಿಂದ ಪಡೆದ ಒಂದು ವಿಶಿಷ್ಟ ವರ. ಹಿರಿಯರನ್ನು ಅರ್ಥ ಮಾಡಿಕೊಳ್ಳದೆ ಅವರಲ್ಲಿರುವ ಒಳ್ಳೆಯ ಗುಣಗಳನ್ನು ಕಾಣದೆ ನಮ್ಮ ಸಂಸ್ಕೃತಿಯನ್ನು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲ; ನಮ್ಮ ಜೀವನ ಅನೇಕ ಋಣಗಳ ಕಣಿ, ಕೃತಘ್ನರೇ ತುಂಬಿರುವ ಜಗತ್ತಿನಲ್ಲಿ ಕೃತಜ್ಞತೆಗೆ ಅವಕಾಶವೆಲ್ಲಿ? ಆದರೆ ಅಕ್ಕ ಇದಕ್ಕೆ ಹೊರತಾಗಿದ್ದಾಳೆ, ಎಂದೇ ಅಕ್ಕ ಹೀಗೆ ನುಡಿದಿದ್ದಾಳೆ.

            ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
            ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
            ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
            ಒಕ್ಕ ಪ್ರಸಾದವ ಕೊಟ್ಟನು
            ಪ್ರಭುದೇವರ ತೊತ್ತಿನ, ತೊತ್ತಿನ ಮರಿದೊತ್ತಿನ ಮಗಳಾದ
            ಕಾರಣ ಜ್ಞಾನ ಪ್ರಸಾದವ ಕೊಟ್ಟನು
            ಸಿದ್ಧರಾಮಯ್ಯನ ಶಿಶು ಮಗಳಾದ ಕಾರಣ
            ಪ್ರಾಣ ಪ್ರಸಾದವ ಸಿದ್ಧಿಸಿಕೊಟ್ಟನು
            ಮಡಿವಳಯ್ಯನ ಮನೆ ಮಗಳಾದ ಕಾರಣ
            ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
            ಇಂತೀ ಅಸಂಖ್ಯಾತ ಗಣಂಗಳೆಲ್ಲರು ತಮ್ಮ ಕರುಣದ
            ಕಂದನೆಂದು ತಲೆದಡವಿದ ಕಾರಣ
            ಚೆನ್ನಮಲ್ಲಿಕಾರ್ಜುನಯ್ಯನ ಶ್ರೀ ಪಾದಕ್ಕೆ ಯೋಗ್ಯಳಾದೆನು

ಅಕ್ಕ ಇವರೆಲ್ಲರ ಅಭಯ ಹಸ್ತದ ಆಶ್ರಯದಲ್ಲಿ ಹಿರಿದಾಗಿ ಬೆಳೆದಳು, ಸುಸಂಸ್ಕೃತ ಜೀವ ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ, ಹೊಗಳಿದಾಗ ಹಿಗ್ಗದೆ, ತೆಗಳಿದಾಗ ದುಃಖಿಸದೆ ಶಾಂತ ಚಿತ್ತದಿಂದಿರುತ್ತದೆ. ಪ್ರಪಂಚದ ಪ್ರವಾಹದಲ್ಲಿ ಅವೆಲ್ಲವೂ ಒಂದನ್ನು ಒಂದು ಅಟ್ಟಿಬರುವ ಅಲೆಗಳು, ಅದನ್ನು ಅಕ್ಕ ತನ್ನ ಜೀವನದ ಅನುಭವದಿಂದ ಅರ್ಥ ಮಾಡಿಕೊಂಡಿದ್ದಾಳೆ, ಪಾಠ ಕಲಿತಿದ್ದಾಳೆ, ಕಷ್ಟ-ಸುಖಗಳ ಕುಲುಮೆಯಲ್ಲಿ ಬೆಂದು ಅಕ್ಕ ಅಪರಂಜಿಯಾಗಿದ್ದಾಳೆ, ಅನುಭವ ಅವಳಿಗೆ ಹೆಚ್ಚಿನ ಪಾಠ ಕಲಿಸಿದೆ; ಹೀಗೆ ಹಾಡಿಸಿತು;

            ಬೆಟ್ಟದ ಮೇಲೊಂದು ಮನೆಯ ಮಾಡಿ
            ಮೃಗಗಳಿಗಂಜಿದಡೆಂತಯ್ಯಾ
            ಸಮುದ್ರದ ತಡಿಯೊಳಗೊಂದು ಮನೆಯ ಮಾಡಿ
            ನೊರೆ ತೆರೆಗಳಿಗಂಜಿದಂಡೆಂತಯ್ಯಾ
            ಸಂತೆಯೊಳಗೊಂದು ಮನೆಯ ಮಾಡಿ
            ಶಬ್ಧಕೆ ನಾಚಿದಡೆಂತಯ್ಯಾ
            ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ
            ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದನೆಗಳು
            ಬಂದಡೆ ಮನದಲಿ ಕೋಪದ ತಾಳದೆ ಸಮಾಧಾನಿಯಾಗಿರಬೇಕು.

ಕಲ್ಯಾಣದಲ್ಲಿ ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭುವಿನ ಅಗ್ನಿಪರೀಕ್ಷೆಯಲ್ಲಿ ಅಕ್ಕನ ವಿಜಯದ ವೈಜಯಂತಿ ಹಾರಾಡಿತು. ಶಿವಶರಣರು ಕಂಡ ಚೆನ್ನಮಲ್ಲಿಕಾರ್ಜುನನೊಡನೆ ಆಕೆಯ ವಿವಾಹವನ್ನು ಏರ್ಪಡಿಸಿದರು.

ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ, ಪವಳದ ಚಪ್ಪರವಿಕ್ಕಿ, ಕಂಕಣ ಕೈದಾರ ಕಟ್ಟಿ, ಸ್ಥಿರ ಸೀಸೆಯನ್ನಿಟ್ಟು ಚೆನ್ನಮಲ್ಲಿಕಾರ್ಜುನನೆಂಬ ಗಂಡಿಗೆ ಮದುವೆ ಮಾಡಿದರು.

ಶ್ರೀಶೈಲದ ಕದಳೀ ವನದಲ್ಲಿ ನೆಲಸಿರುವ ಚೆಲುವ ಚೆನ್ನಿಗನನ್ನು ಕೂಡಲು ಅಕ್ಕ ಶಿವಶರಣರ ಅಪ್ಪಣೆ ಪಡೆದು ‘ನಿಮ್ಮ ಮಂಡೆಗೆ ಹುವ್ವ ತರುವೆನಲ್ಲದೆ ಹುಲ್ಲ ತಾರೆನು’ ಎಂದು ನುಡಿದು ಅವರಿಂದ ಬೀಳ್ಕೊಡುಗೆ ತೆಗೆದುಕೊಂಡಳು. ಶ್ರೀಶೈಲ ಆಕೆಯನ್ನು ಆದರದಿಂದ ಸ್ವಾಗತಿಸುತ್ತಿತ್ತು. ಉತ್ಸಾಹದ ಮೇರೆ ಮೀರಿತು, ಅಕ್ಕ ಮನದನ್ನನ ಓಲೆಯನ್ನು ಒಯ್ಯುತ್ತಿದ್ದಾಳೆ. ಸಕಲಾಚರ ಜಗತ್ತು ಅದಕ್ಕೆ ಆಗ ಸ್ತಬ್ಧ ಆಗಲೇ ಬೇಕು, ಅದು ಅಕ್ಕನ ಆಜ್ಞೆ, ಆ ಓಲೆಯನ್ನು ಒಯ್ಯುವ ಅಕ್ಕನ ಆನಂದಕ್ಕೆ ಪ್ರಕೃತಿ ಯವ ಅಡೆತಡೆಯನ್ನೂ ಉಂಟು ಮಾಡಬಾರದು; ಅದು ಚೆನ್ನಮಲ್ಲಿಕಾರ್ಜುನನಿಗೆ ಸಲ್ಲಬೇಕಾದ ಅವಸರದ ಓಲೆ; ಅದಕ್ಕೆಂದೇ ಅಕ್ಕನ ಕಟ್ಟಾಣತಿ :

            ಹಸಿವೇ ನಿಲ್ಲು ನಿಲ್ಲು, ತೃಷೆಯೇ ನಿಲ್ಲು ನಿಲ್ಲು
            ನಿದ್ರೆಯೇ ನಿಲ್ಲು ನಿಲ್ಲು, ಕಾಮವೇ ನಿಲ್ಲು ನಿಲ್ಲು
            ಕ್ರೋಧವೇ ನಿಲ್ಲು ನಿಲ್ಲು, ಮೋಹವೇ ನಿಲ್ಲು ನಿಲ್ಲು
            ಲೋಭವೇ ನಿಲ್ಲು ನಿಲ್ಲು, ಮದವೇ ನಿಲ್ಲು ನಿಲ್ಲು
            ಮಚ್ಚರವೇ ನಿಲ್ಲು ನಿಲ್ಲು, ಸಚರಾಚರವೇ ನಿಲ್ಲು ನಿಲ್ಲು
            ನಾನು ಚೆನ್ನಮಲ್ಲಿಕಾರ್ಜುನ ದೇವರ ಒಲವಿನ ಓಲೆಯ ನೊಯ್ವುತ್ತಲಿದ್ದೇನೆ

ಅರಿಷಡ್ವರ್ಗವೇ ಏಕೆ? ಇಡೀ ಜಗತ್ತೇ ಆಕೆಯ ಅಣತಿಯನ್ನು ಪರಿಪಾಲಿಸಿ, ಅವಳ ಕಾರ್ಯಕ್ಕೆ ಸಹಕಾರಿಯಾಗಿ ನಿಂತಿತು, ಶ್ರೀಶೈಲ ಪ್ರವೇಶವೂ ಆಯಿತು. ಕದಳೀವನ ದರ್ಶನವೂ ಆಯಿತು. ಚೆನ್ನಮಲ್ಲಿಕಾರ್ಜುನ ತನ್ನ ಒಲವರಸಿಯನ್ನು ಕರುಣದಿಂ ತೆಗೆದು ಬಿಗಿಯಪ್ಪಿದನು, ಅವನ ಹೃದಯಕಮಲದಲ್ಲಿ ಅಕ್ಕ ಅಡಗಿದಳು. ಚೆನ್ನಮಲ್ಲಿಕಾರ್ಜುನನ ಲಿಂಗದಲ್ಲಿ ಘನಲಿಂಗೈಕ್ಯಳಾದ ಬಳಿಕ ಅಕ್ಕ ಮಹಾದೇವಿ ಮೌನಿಯಾದಳು; ಕರಿಗೊರಲನಲ್ಲಿ  ಕರಗಿ ಕರ್ಪೂರವಾದಳು.

ಅಕ್ಕ ಮಹಾದೇವಿಯ ಕಾವ್ಯಶಕ್ತಿಯ, ಭಕ್ತಿ ತೀವ್ರತೆಯ ಆಧ್ಯಾತ್ಮದ ಸೊಬಗಿನ ಸೊಗಸನ್ನು ಕಂಡ ಚಿಕ್ಕದಣಾಯಕ ಚೆನ್ನ ಬಸವಣ್ಣ ಹೀಗೆ ಹಾಡಿದರು :

            ಆದ್ಯರ ಅರವತ್ತು ವಚನಕ್ಕೆ ದಣಾಯಕರ ಇಪ್ಪತ್ತು ವಚನ
            ದಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ
            ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣಗಳ ಐದು ವಚನ
            ಅಜಗಣ್ಣಗಳ ಐದು ವಚನಕ್ಕೆ ಕೂಡಲ ಚೆನ್ನಸಂಗಯ್ಯನಲ್ಲಿ
            ಮಹಾದೇವಿಯಕ್ಕಗಳ ಒಂದು ವಚನ ನಿರ್ವಚನ ಕಾಣಾ ಸಿದ್ಧರಾಮ!

ಅಕ್ಕನ ಬದುಕೇ ಒಂದು ಬೃಹತ್ ಸಂಪುಟ. ಆಕೆಯ ಒಂದೊಂದು ವಚನವೂ ಅದರಲ್ಲಿನ ಒಂದೊಂದು ಗರಿ, ಆಡುನುಡಿಯಲ್ಲಿ ಅಕ್ಕ ಆಧ್ಯಾತ್ಮಕ್ಕೆ ಪಟ್ಟ ಕಟ್ಟಿದಳು, ದೇವ ಭಾಷೆ ಜನ ಭಾಷೆಯಾಗದೆ ಉಳಿದಾಗ ಜನಭಾಷೆಯನ್ನೇ ದೇವ ಭಾಷೆಯನ್ನಾಗಿಸಿದಳು. ಮೇಲಿನ ಚನ್ನಬಸವಣ್ಣನವರ ವಚನ ಅಕ್ಕನ ಹಿರಿಯ ಸಮಗ್ರ ವ್ಯಕ್ತಿತ್ವಕ್ಕೆ ಹಾಗೂ ಸಾಹಿತ್ಯಕ್ಕೆ ಹಿಡಿದ ವಿಮರ್ಶೆಯ ಮಣಿ ದರ್ಪಣವಾಗಿದೆ. ಸಾಹಿತ್ಯಿಕ ಗುಣದಿಂದಲೂ ಅಕ್ಕನ ವಚನಗಳು ಉತ್ತಮವಾಗಿವೆ. ಆಕೆಯ ಪುನೀತ ವಚನ ಗಂಗೆಯಲ್ಲಿ ಮಿಂದು ನಾವೂ ಧನ್ಯರಾಗೋಣ.