೨೦ನೆಯ ಶತಮಾನದಲ್ಲಿ ಕನ್ನಡ ನಾಡು ಕಂಡ ಒಬ್ಬ ಶ್ರೇಷ್ಠ ಸಾಹಿತಿ, ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು. ಸಾಹಿತಿಯಾಗಿ ಕುವೆಂಪು ಮೇರುಶೃಂಗಾರವಾಗಿರುವಂತೆ ಸಾಮಾಜಿಕ ಕ್ರಾಂತಿಯ ಹರಿಕಾರರಾಗಿ ಅವರು ಏರಿರುವ ಎತ್ತರ ಹಿಮಾಲಯ ಸದೃಶ ಉತ್ತುಂಗ ಶಿಖರ. ಕನ್ನಡ ನಾಡು-ನುಡಿಯ ಅನನ್ಯ ಪ್ರೀತಿಯನ್ನು ಮನದುಂಬಿ ಮೈದುಂಬಿಸಿಕೊಂಡವರು. ಅವರ ಮೊದಲ ಪ್ರೀತಿಯೂ ಕನ್ನಡ, ಕಡೆಯ ಮಜಲೂ ಕನ್ನಡ. ಯಾರು ತನ್ನ ನಾಡು, ನುಡಿ ಹಾಗೂ ತನ್ನ ಜನತೆಯನ್ನು ಅದಮ್ಯವಾಗಿ ಪ್ರೀತಿಸಿ ಗೌರವಿಸುವರೊ ಅಂಥವರು ಮಾತ್ರ ಜಗತ್ತಿನ ಇತರ ದೇಶಗಳನ್ನು, ಎಲ್ಲರ ನುಡಿಯನ್ನು ಹಾಗೂ ವಿಶ್ವದ ಜನತೆಯನ್ನು ಪ್ರೀತಿಸಿ ಗೌರವಿಸಲು ಸಾಧ್ಯ ಎನ್ನುವ ಸತ್ಯವನ್ನು ಕುವೆಂಪು ತಮ್ಮ ಬದುಕಿನಲ್ಲಿ ತೋರಿಸಿಕೊಟ್ಟವರು. ಅದರಿಂದಲೇ ಅವರು ವಿಶ್ವಮಾನವ ಪ್ರಜ್ಞೆಯನ್ನು ಮೂಡಿಸಿಕೊಂಡವರು.

ಕುವೆಂಪುಅವರ ದೃಷ್ಟಿ ಅಲ್ಪದರದಲ್ಲಿ ತೃಪ್ತಿಯನ್ನು ತಂದುಕೊಂಡದ್ದಲ್ಲ. ಅವರು, ಅಖಂಡ ದೃಷ್ಟಿ ಪರಿಪೂರ್ಣತೆಯ ಸಂತೃಪ್ತಿ. ಆದುದರಿಂದಲೇ ಅವರ ಬದುಕುಬರಹ ಎರಡೂ ವಸುಂಧರೆಯಂತೆ ವಿಸ್ತಾರವೂ ಗಗನಚುಂಬಿ ಪರ್ವತದಂತೆ ಎತ್ತರವೂ ಗಂಭೀರ ನಿನಾದದ ಸಾಗರದಂತೆ ಸುಪ್ತವು ಆಗಿ ಜನಮನವನ್ನು ಸೂರೆಗೊಂಡಿದೆ. ಪ್ರಕೃತಿ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದ ಈ ಸಾಹಿತಿ ಅದಕ್ಕಿಂತಲೂ ಮಿಗಿಲಾದ ವೈಚಾರಿಕ ಕ್ರಾಂತಿಗೆ ಕಹಳೆಯೂದಿದ್ದು ಅವರ ಜನಮುಖಿಸಮಾಜಮುಖಿ ನಿಲುವಿಗೆ ಸಾಟಿಯಾಗಿದೆ. ಅವರ ಬಹುಮುಖಿ ಸಾಹಿತ್ಯದ ವೈವಿಧ್ಯಮಯ ವಿಚಾರಗಳನ್ನು ನೋಡಿದಾಗ ಸಾಹಿತ್ಯದಲ್ಲಿ ಅವರದ್ದು ಒಂದು ದೈವ ಪ್ರತಿಭೆಯು ಹೌದು ಮತ್ತು ದೈತ್ಯಪ್ರತಿಭೆಯೂ ಹೌದು. ಕುವೆಂಪು ಈ ಸೋಜಿಗದಲ್ಲಿ ಓದುಗ – ಸಹೃದಯರನ್ನು ನಿಲ್ಲಿಸುತ್ತಾರೆ.

ಕವನ, ನಾಟಕ, ಪ್ರಬಂಧ, ಸಣ್ಣಕತೆ, ಕಾದಂಬರಿ, ಕಥನ-ಕವನ, ಖಂಡಕಾವ್ಯ, ಮಹಾಕಾವ್ಯ, ಅನುವಾದ, ಶಿಶುಸಾಹಿತ್ಯ, ಕಾವ್ಯಮೀಮಾಂಸೆ, ವಿಮರ್ಶೆ, ವೈಚಾರಿಕ ಬರಹ – ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ, ಮೌಲಿಕೆಯನ್ನು ತುಂಬಿಕೊಟ್ಟವರು. ‘ನಾನೃಷಿ ಕುರತೆ ಕಾವ್ಯಂ’ – ಎನ್ನುವ ಪ್ರಸಿದ್ಧ ಹೇಳಿಕೆಗೆ ಒಂದು ಪ್ರತಿಮೆಯಾಗಿ ನಿಂತವರು. ವಿಚಾರಕ್ರಾಂತಿಯ ಹರಿಕಾರರಾಗಿ ಕಾಣುವ ರಸ ಋಷಿ ಕುವೆಂಪು ಅವರ ಬದುಕು – ಬರಹ ಸಮಾಜಮುಖಿಯಾಗಿ ತೆರೆದುಕೊಳ್ಳುವ ಪರಿ ವಿಸ್ಮಯಕಾರಿಯಾದುದು. ಅವರ ವೈವಿಧ್ಯಮಯ ಬರಹಗಳಲ್ಲೆಲ್ಲಾ ಪ್ರಧಾನವಾಗಿ ಎದ್ದು ಕಾಣುವ ಮುಖ್ಯ ಸ್ತೋತ್ರ, ಸಮಾಜಮುಖಿ ಚಿಂತನೆಗಳು.

ಕುವೆಂಪು ಅವರ ವಿದ್ಯಾಭ್ಯಾಸ ಹಾಗೂ ಸಾಹಿತ್ಯ ರಚನೆಯ ಕಾಲ, ಎರಡು ರೀತಿಯ ಆಡಳಿತಾತ್ಮಕ ಭಾರದಿಂದ ಕುಸಿದಿತ್ತು. ಒಂದು, ಆಂಗ್ಲರ ವಸಾಹತುಶಾಯಿಯ ಆಡಳಿತದ ದಬ್ಬಾಳಿಕೆಯಾದರೆ ಅದನ್ನೂ ಒಳಗೊಂಡಂತೆ ಅರಸೊತ್ತಿಗೆಯ ಭಾಗ ಮತ್ತೊಂದು ಕಡೆ, ಇವೆರಡರ ಮಧ್ಯೆ ಸಾಮಾನ್ಯ ಜನರ ಜೀವನದಲ್ಲಿ ಇರಬೇಕಾಗಿದ್ದ ಅವಶ್ಯಕತೆಗಳಿಗಿಂತ ಅನಿವಾರ್ಯತೆಗಳೇ ಹೆಚ್ಚಾಗಿದ್ದವು. ಇವುಗಳಿಂದ ಉಸಿರುಗಟ್ಟಿದ ವಾತಾವರಣದಲ್ಲಿ ವೈಚಾರಿಕತೆ ಮಂಕಾಗಿ ಮೌಢ್ಯತೆ, ಮೂಢನಂಬಿಕೆ, ಹುಸಿಭ್ರಮೆಗಳು ಬಡವಬಲ್ಲಿದ ತಾರತಮ್ಯ, ಜಾತಿ ಮೇಲು ಕೀಳು, ಅಕ್ಷರನಿರಕ್ಷರತೆಯ ತುಲನೆ, ಕಾಯಕ ತಾರತಮ್ಯ, ಭಾಷೆಯ ಶ್ರೇಷ್ಠನಿಕೃಷ್ಠ ಭಾವನೆ ಇಂಥ ಅನೇಕ ಜಂಜಾಟಗಳಲ್ಲಿ ಜನ ನರಳ ತೊಡಗಿದ್ದರು. ಕೆಲವು ಹಿಂದಿನಿಂದಲೂ ಬಂದ ಪೀಡೆಗಳು ಮತ್ತೆ ಕೆಲವು ಕುವೆಂಪು ಕಾಲದಲ್ಲಿ ಉಲ್ಬಣಗೊಂಡವು. ಇನ್ನೂ ಕೆಲವು ಹೊಸದಾಗಿ ಮೂಡಿದುವುಗಳಾಗಿದ್ದವು.

ವಸಾಹತುಶಾಯಿಯಾದ ಇಂಗ್ಲಿಷ್ ಭಾಷೆ ಶಿಕ್ಷಣ ಭಾಷೆಯೂ ಆಗಿ ನಾಡ ಜನತೆಯ ಭಾಷೆಯಾದ ಕನ್ನಡ ಭಾಷೆಯ ಮೇಲೆ ಸವಾರಿ ಮಾಡಲಾರಂಭಿಸಿತ್ತು. ಇಂದಿಗೂ ಅದೇ ಪರಿಸ್ಥಿತಿ ಇದೆ ನಿಜ, ಬ್ರಿಟಿಷರು ಹೋದರು. ಅವರ ಭಾಷೆ – ಸಂಸ್ಕೃತಿ ನಮ್ಮನ್ನು ಇನ್ನೂ ಗುಲಾಮರನ್ನಾಗಿಯೇ ನಡೆಸಿಕೊಳ್ಳುತ್ತಿರುವುದು ಕನ್ನಡಿಗರ ವಿಪರ್ಯಾಸವೇ ಸರಿ. ಅದರೆ ಅಂದು ಇಂಗ್ಲಿಷ್ ಆಳುವವರ ಭಾಷೆಯಾಗಿ ತನ್ನೆಲ್ಲ ಮೇಲೈಯನ್ನು ಗಳಿಸಿತ್ತು. ಅದೇ ರೀತಿ ಸಮಾಜದಲ್ಲಿ ವಿದ್ವಾಂಸರ, ಮೇಲ್ಜಾತಿಯವರ ಭಾಷೆಯಾಗಿ ಸಂಸ್ಕೃತ ಭಾಷೆ ಶ್ರೇಷ್ಠಸ್ಥಾನ ಪಡೆದಿತ್ತು. ಈ ಎರಡೂ ಭಾಷೆಗಳ ಮೇಲಾಳಿಕೆಯಲ್ಲಿ ಕನ್ನಡ ಭಾಷೆ ಕೀಲರಿಮೆಯಿಂದ ತತ್ತರಿಸಿತ್ತು, ಕಣ್ ಕಾಣದೆ ಕಂಗೆಟ್ಟಿತ್ತು.

ಕುವೆಂಪು ಸಹ ವಿದ್ಯಾರ್ಥಿ ದೆಸೆಯಲ್ಲಿ ತಮ್ಮ ರಚನೆಯನ್ನು ಆಂಗ್ಲಭಾಷೆಯಲ್ಲಿಯೇ ಪ್ರಾರಂಭಿಸಿದವರು. ಕಾರಣ ಆಗ ವಸಾಹತುಶಾಯಿ ಸಂಸ್ಕೃತಿಗೆ ಇಡೀ ದೇಶ ಅಧೀನವಾಗಿತ್ತು. ಕುವೆಂಪು ಸಹ ಅದರಿಂದ ಹೊರತಾಗಿರಲಿಲ್ಲ. ಅವರನ್ನೂ ಇಂಗ್ಲಿಷ್ ಭಾಷೆಯ ವ್ಯಾಮೋಹ ಕಾಡದೆ ಇರಲಿಲ್ಲ. ಭಾಷೆಯಲ್ಲಿ ಪ್ರಭುತ್ವ ಪಡೆದು ಇಂಗ್ಲೀಷಿನಲ್ಲೇ ಕವಿತೆಗಳನ್ನು ಬರೆದರು. ಆದರೆ ಜೇಮ್ಸ್ ಕಸಿನ್ಸ್ ರವರ ಮಾರ್ಗದರ್ಶನದಿಂದ ಕನ್ನಡಕ್ಕೆ ಹೊರಳಿದ ಕುವೆಂಪು ಅವರ ಬದುಕಿನಲ್ಲಿ, ಒಂದು ದಿವ್ಯ ತಿರುವು ಮೂಡಿತು. ಅದೊಂದು ಕನ್ನಡ ಸಾಹಿತ್ಯದ ಅಮೃತ ಘಳಿಗೆಯೂ ಹೌದು.

ಅಂದು, ಆ ಘಳಿಗೆಯ ನಂತರ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗೆಗೆ ಕಂಕಣ ಕಟ್ಟಿಕೊಂಡ ಕುವೆಂಪು ತಮ್ಮ ಬದುಕಿನ ಕಡೆಯ ಕ್ಷಣದವರೆಗೂ ಕನ್ನಡವೇ ಉಸಿರಾಗಿ ಈ ದೀಕ್ಷೆಯನ್ನು ಪಾಲಿಸಿಕೊಂಡು ಬಂದರು. ಕನ್ನಡ ಭಾಷೆ ಸರ್ವಮಾನ್ಯ ಭಾಷೆಯಾಗಬೇಕು, ಶಿಕ್ಷಣದ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣವೂ ಸೇರಿದಂತೆ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲೂ ಕನ್ನಡ ಮಾಧ್ಯಮದ ಭಾಷೆಯಾಗಬೇಕೆಂದು ಹೋರಾಡಿದವರು. ಅದಕ್ಕಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಕನ್ನಡವನ್ನು ಶಿಕ್ಷಣ ಮಾಧ್ಯಮದ ನೆಲೆಯಲ್ಲಿ ಹಾಗೂ ಆಡಳಿತಾತ್ಮಕ ನೆಲೆಯಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಕನ್ನಡ ಆಡುಭಾಷೆಯಾಗಿ ಜನಮನ್ನಣೆ ಗಳಿಸಬೇಕು, ಶಿಕ್ಷಣ ಭಾಷೆಯಾಗಿ ಅರಿವು ಮೂಡಿಸಬೇಕು. ಆಡಳಿತ ಭಾಷೆಯಾಗಿ ಪ್ರಭುತ್ವ ಪಡೆಯಬೇಕು. ಇವು ಮೂರು ಮೂಲಮಂತ್ರಗಳಾದುವು ಕುವೆಂಪು ಅವರಿಗೆ.

ಇಂಗ್ಲಿಷ್ ಭಾಷೆಯ ಪ್ರಭುತ್ವದಿಂದ ಕನ್ನಡಭಾಷೆಗೆ ಕೀಳರಿಮೆ ಮೂಡಿಭಾಗ ಕನ್ನಡದ ದಿಂಡಿಮವನ್ನು ಬಾರಿಸಿ ಜನತೆಯನ್ನು ಎಚ್ಚರಿಸಿದರು. ಕನ್ನಡಿಗರ ಭಾಷಾ ಜಡನಿದ್ರೆಯನ್ನು ಹೋಗಲಾಡಿಸಲು ಹೃದಯ ಶಿವನ ಡಿಂಡಿಮ ನುಡಿಸಿದರು.

ಬಾರಿಸು ಕನ್ನಡ ಡಿಂಡಿಮವ
ಕರ್ನಾಟಕ ಹೃದಯಶಿವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಇಡೀ ಜನತೆ ಕನ್ನಡ ಭಾಷೆಯ ಬಗೆಗೆ ಜಾಗೃತರಾಗಬೇಕಾದ ಸಂದರ್ಭವನ್ನು ಒತ್ತಾಯಪೂರ್ವಕವಾಗಿ ಹೇಳಿದರು.

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು – ಎಂದು ಕನ್ನಡಿಗರಿಗೆ ಕನ್ನಡ ಭಾಷೆಯ ಆದ್ಯತೆಯನ್ನು ಅಧಿಕೃತತೆಯನ್ನು ಮನಮುಟ್ಟುವಂತೆ ಹೇಳಿದರು.

ಶಿಕ್ಷಣ ಮಾಧ್ಯಮದ ಬಗೆಗೆ ಕುವೆಂಪು ಅಭಿಪ್ರಾಯ ಹೀಗಿತ್ತು :

“ಬಲತ್ಕಾರದ ಇಂಗ್ಲಿಷ್ ಭಾಷೆಯಿಂದಲೂ, ಇಂಗ್ಲಿಷ್ ಮಾಧ್ಯಮದಿಂದಲೂ ವರ್ಷವರ್ಷವೂ ಪರೀಕ್ಷೆಯ ಗಿಲೋಟಿನ್ನಿಗೆ ಕೋಟ್ಯಾಂತರ ಬಾಲಕರ ಮತ್ತು ತರುಣರ ತಲೆಯನ್ನು ಬಲಿ ಕೊಡುತ್ತಿದ್ದಾರೆ. ಅದು ಪ್ರಚ್ಛನ್ನವಾದ ಬಲಾತ್ಕಾರ. ಈಗಲೇ ನಾವು ಎಚ್ಚರಗೊಳ್ಳದೆ ತಟಸ್ಥರಾರಿದ್ದರೆ ಮುಂದೆ ಮಹಾಪಶ್ಚಾತ್ತಾಪಕ್ಕೆ ಒಳಗಾಗಬೇಕಾಗುತ್ತದೆ” (ಮನುಜಮತ – ವಿಶ್ವಪಥ) ಈ ಅಪಾಯವನ್ನು ಕುವೆಂಪು ೧೯೩೫ ರಲ್ಲೇ ಮನಗಂಡಿದ್ದರು.

ಸಾಯಿತಿದೆ ನಿಮ್ಮ ನುಡಿ ಕನ್ನಡದ ಕಂದರಿರಾ
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ
ರಾಜನುಡಿಯೆಂದೊಂದು ಹತ್ತಿ ಜಗ್ಗಿ
ನಿರಿ ನಿಟಿಲು ನಿಟಿಲೆಂದು ಮೂಳೆ ಮುರಿಯುತಿದೆ
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ
ಕೂಗಿಕೊಳ್ಳಲು ಕೂಡ ಬಲವಿಲ್ಲ ; ಮಕ್ಕಳೆ
ಬಾಯ್ಮುಚ್ಚಿ ಹಿಡಿದಿಹರು ಕೆಲರು ನುಗ್ಗಿ!

ಆದರೂ ಜನ ಕೇಳುತ್ತಿಲ್ಲವೆಂಬ ಕೂಗು ಕವಿಗೆ, ಇಂಗ್ಲೀಷಿನ ಮರುಭೂಮಿಯಲ್ಲಿ ನಿನ್ನ ಮಕ್ಕಳ ಶಕ್ತಿಬುದ್ಧಿಪ್ರತಿಭೆ ಇಂಗಿ ಹೋಗುತಿದೆ ಎಂದು ೭೦ ವರುಷಗಳ ಹಿಂದೆಯೇ ಸಾರಿ ಸಾರಿ ಹೇಳಿದರು. ‘ಬೇಡ ಬೇಡ ಬೇಡ ಮಕ್ಕಳ ಈ ಕೊಲೆ ಬೇಡ, ತುಸು ಯೋಚಿಸೊ ವಿದ್ವನ್ಮೂಢ ತಪ್ಪಿಸು ಈ ಇಂಗ್ಲೀಷ ಕೇಡ’ (ಮಂತ್ರಾಕ್ಷತೆ ಪುಟ ೮೭) ಆದರೆ ಇಂದಿನ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಇದೇ ಸಂದರ್ಭದಲ್ಲಿ ಜನಭಾಷೆಯಲ್ಲದ, ಸಾಮಾನ್ಯ ಜನತೆಗೆ ಅರ್ಥವಾಗದ ಪುರೋಹಿತಶಾಯಿ ಸಂಸ್ಕೃತ ಭಾಷೆಯನ್ನು ತಿರಸ್ಕರಿಸುತ್ತಾರೆ. ಮತ್ತು ರಾಷ್ಟ್ರದ ಹೆಸರಿನಲ್ಲಿ, ರಾಷ್ಟ್ರಭಾಷೆಯ ಸೋಗಿನಿಂದ ಹುಟ್ಟಿದ ತ್ರಿಭಾಷಾ ಸೂತ್ರವನ್ನು ತೀವ್ರವಾಗಿ ಖಂಡಿಸುತ್ತಾರೆ. ಉತ್ತರ ಹಿಂದಿಭಾಷೆಯ ಹೇರಿಕೆಯ ಪ್ರತಿಭಟನೆಯ ಹಿಂದಿರುವ ಜನಪರ ಕಾಳಜಿಯನ್ನು ಅರ್ಥೈಸಿಕೊಳ್ಳಬೇಕಾಗುತ್ತುದೆ.

ಭಾಷಾತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿಣೇತ್ರ !
ಚೂರು ತಿಂಡಿಗೆ ಸಿಕ್ಕಿಸಿಹರೊ ಮೂರು ಗಾಳ
ನುಂಗದಿದ್ದರೆ ಹಸಿವೆ; ನುಂಗಿದರೆ ಪ್ರಾಣಶೂಲ !

ಹಿಂದಿ ಭಾಷೆಯ ಬಗೆಗಿನ ತೀವ್ರತರ ಸಂಕಟವನ್ನು ದಾಖಲುಗೊಳಿಸುತ್ತಲೇ ದ್ವಿಭಾಷಾ ಸೂತ್ರವೆ ಕನ್ನಡ ನಾಡಿಗೆ ಸಾಕೆಂದು ಪ್ರತಿಪಾದಿಸಿದರು.

ಭಾಷೆಯಿಂದ ನಾಡು – ನಾಡಿನಿಂದ ಜನ. ಜನ ಬದುಕಲು ಜನಭಾಷೆಯೊಂದೆ ಮುಖ್ಯವಾಹಿನಿ. ಆದುದರಿಂದ ಕನ್ನಡ ಜನತೆ ಕನ್ನಡ ಭಾಷೆಗಾಗಿ ಕಂಕಣ ಕಟ್ಟು ಇಂದೇಎಂದು ಕರೆಕೊಟ್ಟರು; ‘ಇಡು ಸತಿಯ ಮೇಲಾಣೆ ಪತಿಯ ಮೇಲಾಣೆ’ – ಎಂದು ಆಣೆ ಇಡಿಸುವ ಹಂತಕ್ಕೆ ತಲುಪುವ ಕುವೆಂಪು ಅವರ ಕನ್ನಡ ಪ್ರೀತಿ ಎಣೆ ಇಲ್ಲದ್ದು. ಕನ್ನಡ ಭಾಷೆಯೊಂದೇ ಎಲ್ಲ ಕನ್ನಡಿಗರನ್ನು ಸಮಾನವಾಗಿ ಕಾಣಬಲ್ಲದು ಎನ್ನುವ ಸಮಾನ ತತ್ವದ ಮೇಲೆ ಸಮಾಜಮುಖಿ ಚಿಂತನೆ ಹರಿಸಿದರು.

ವರ್ಗ ತಾರತಮ್ಯದಲ್ಲಿನ ಭೀಕರ ಸ್ವರೂಪವನ್ನು ಕುರಿತ ಕುವೆಂಪು ಚಿಂತನೆ, ಪ್ರಖರತೆಯ ಬೆಳಕನ್ನು ಹಾಯಿಸಿದೆ. ಬಡವ ಶ್ರೀಮಂತನ ಅಂತರ ಕಡಿಮೆಯಾಗದ ಹೊರತು  ಸುಖೀಸಮಾಜವನ್ನು ಕಾಣಲು ಸಾಧ್ಯವಿಲ್ಲ ಎನ್ನುವ ಋತುಸತ್ಯವನ್ನು ಸಾರಿದರು. ಹಸಿದವರ ಕೂಗು, ಆಕ್ರಂದನ ನಿಲ್ಲದ ಹೊರತು ಸಾಮರಸ್ಯದ ಸಾಮಗಾನ ಹಾಡಲು ಸಾಧ್ಯವಿಲ್ಲ, ಸಮಾಜದಲ್ಲಿನ ಅಸಮಾನತೆ, ದಾರಿದ್ಯ್ರ, ದುಃಖಗಳ ನಿರ್ಮೂನವ ಆಗಬೇಕೆಂಬ ಆದಮ್ಯ ಹೋರಾಟಕ್ಕೆ ಧ್ವನಿಯಾದರು ಕುವೆಂಪು :

ಧನಿಕರ ಮನೆಗಳು ಒಂದೆಡೆ ನಿಂತಿವೆ
ಬಡವರ ಗುಡಿಸಲು ಒಂದಡೆ ನಿಂತಿವೆ
ಜ್ಯೋತಿಯ ಮಣಿ ದೀಪಗಳಲ್ಲಿ !
ಕತ್ತಲು ಕಗ್ಗತ್ತಲು ಇಲ್ಲಿ !
ಹಾಡಿನ ನುಣ್ದನಿಯತ್ತ !
ಗೋಳಿನ ನೀಳದನಿಯಿತ್ತ !
ಕೂಳನು ಹೆಮ್ಮೆಗೆ ಬಿಸುಟುವರಲ್ಲಿ
ಹೊಟ್ಟಗೆ ಇಲ್ಲದೆ ಕೊರಗುವರಿಲ್ಲಿ
ಕಡೆ ಉದ್ಯಾನ
ಕಡೆ ಸ್ಮಶಾನ
ಪೀತಾಂಬರಗಳ ಹೊದೆಯುವರಲ್ಲಿ
ಕೌಪೀನಕೆ ಚಿಂದಿಯು ಸಿಗದಿಲ್ಲಿ

ಈ ತಾರತಮ್ಯಕ್ಕೆ ಅಂತ್ಯ ಹಾಡದ ಹೊರತು ಸುಖೀ ಸಮಾಜದ ಕನಸು ನನಸಾಗದು ಎನ್ನುವ ಕೊರಗು ಕುವೆಂಪು ಅವರದ್ದು.

ಶೂದ್ರಪ್ರಜ್ಞೆ :  ಕನ್ನಡನಾಡಿನ ಶೂದ್ರಪ್ರಜ್ಞೆಯಾಗಿ ಮೂಡಿದ ಕುವೆಂಪು ಶೂದ್ರರ ಮುಖವಾಣಿಯಾಗಿ ಮೊಳಗಿದ್ದಾರೆ. ಭಾರತದ ಜಾತಿ ವ್ಯವಸ್ಥೆಯಲ್ಲಿನ ತಾರತಮ್ಯದ ಬಗೆಗೆ ಕವಿ ಕುವೆಂಪು ಅವರಿಗೆ ಮಾತ್ರವಲ್ಲ. ಅಲ್ಪ – ಸ್ವಲ್ಪ ಮಾನವೀಯ ಮಿಡಿತ ಉಳ್ಳವರು ನೋವಿನಿಂದ ತಲೆ ತಗ್ಗಿಸುತ್ತಾರೆ; ಅಂಥ ಗಂಭೀರ ವಿಷಯ ಇದಾಗಿದೆ. ಮೇಲ್ಜಾತಿಯ ಹೆಸರಿನಲ್ಲಿ ಶೂದ್ರ ಜನಾಂಗನವನು ಶತ ಶತಮಾನಗಳಿಂದಲೂ ಶೋಷಣೆ ಮಾಡಿರುವ ರಿತಿ ಅಮಾನವೀಯವಾದುದು. ಅಕ್ಷರ ಜ್ಞಾನದಿಂದ ದೂರವಿಟ್ಟು ದೇಶದ ಇತಿಹಾಸವನ್ನೇ ಬದಲು ಮಾಡಿದ ವ್ಯವಸ್ಥೆ ಹೇಸಿಗೆ ತರುವಂಥದು. ಮನಧರ್ಮ ಶಾಸ್ತ್ರ, ಮೇಲ್ಜಾತಿ, ಇವುಗಳನ್ನು ಮುಂದೆ ಮಾಡಿ ಭಾರತ ದೇಶದ ಬಹುಸಂಖ್ಯಾತ ಶೂದ್ರರನ್ನು, ಪಂಚಮರನ್ನು ಶೋಷಣೆ ಮಾಡಿ ಮೃಗ-ಪಕ್ಷಿಗಳಿಗಿಂತಾ ಕೀಳಾಗಿ ಕಂಡ ವ್ಯವಸ್ಥೆಯನ್ನು ದಿಟ್ಟತನದಿಂದ ಕುವೆಂಪು ಝಾಡಿಸಿದ್ದಾರೆ. ಸಮಾಜದ ಕಳಂಕಿತ ವ್ಯವಸ್ಥೆಯನ್ನು ತೆರೆದಿಡುತ್ತಲೇ ಅದನ್ನು ಹೋಗಲಾಡಿಸುವ ಮಾರ್ಗವನ್ನು ಸೂಚಿಸಿದ್ದಾರೆ. ಮೇಲ್ಜಾತಿಯವರ ದುರ್ನಡತೆಯನ್ನು ಪ್ರತಿಭಟಿಸುವ ಧೈರ್ಯ ತುಂಬಿ ಕೆಳಜಾತಿಯವರಿಗೆ ದಾರಿಗಂಬವಾಗಿದ್ದಾರೆ.

ಯಾವ ಕಾಲದ ಶಾಸ್ತ್ರವೇನ ಹೇಳಿದರೇನು ?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇ ?
ಎಂದೋ ಮನು ಬರೆದಿಟ್ಟಿದ್ದು ಇಂದು ಎಮಗೆ ಕಟ್ಟೇನು ?
ನಿನ್ನೆದೆಯ ದನಿಯೇ ಋಷಿ ! ಮನು ನಿನಗೆ ನೀನು !
ನೀರಡಿಸಿ ಬಂದ ಸೋದರಗೆ ನೀರನುಕೊಡಲು
ಮನುಧರ್ಮಶಾಸ್ತ್ರವೆನಗೊರೆಯ ಬೇಕೇನು ?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವು ಅದಕೆ ಇರಲೇಬೇಕೇನು ?
ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರ ಸಮ್ಮತವದೇನು ?

ಶಾಸ್ತ್ರದ ಕಟ್ಟುಪಾಡುಗಳು ಅನೇಕ ಬಾರಿ ಜನಸಾಮಾನ್ಯರ ಬದುಕನ್ನು ಹಿಂಡಿಬಿಡುತ್ತವೆ. ಹುಟ್ಟಿನಿಂದ ಸಾವಿನವರೆಗೂ ಈ ಶಾಸ್ತ್ರದ ನಂಟು ಗಂಟು ಬಿದ್ದಿರುತ್ತದೆ. ಮಾನವತೆಯನ್ನೇ ಮುಕ್ಕಿ ತಿನ್ನುವ ಶಾಸ್ತ್ರ ಅದನ್ನು ವಿಧಿಸುವ ಪುರೋಹಿತಶಾಯಿಯ ವರ್ತನೆಯನ್ನು ಕುವೆಂಪು ದಿಟ್ಟತನದ ಪ್ರಶ್ನೆಗೆ ಒಡ್ಡುತ್ತಾರೆ. ಕೆಲವೊಮ್ಮೆ ಮನು ಹೀಗೆ ಮಾಡಿರಬಹುದೆ? ಮಾಡಿದ್ದರೆ ನಮ್ಮ ಪ್ರತಿಕ್ರಿಯೆ ಏನು? ಅವರ ವಿಶ್ಲೇಷಣೆ ಹೀಗಿದೆ :

ಅಂತು ಮನು ಹಾಗ ಹೇಳಿರನಾರನಯ್ಯಯ್ಯೊ
ಹೇಳಿದ್ದರವನನು ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ, ಮತ್ತೆ ನರಕ ಬಂದರು ಬರಲಿ
ಎದೆಯ ಧೈರವ ಮಾಡಿ ಬಿಸಾಡಾಚೆಗೆತ್ತಿ
ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ (ಯಾವ ಕಾಲದ ಶಾಸ್ತ್ರ)

ಪುರೋಹಿತಶಾಯಿಯ ಕ್ರೌರ್ಯವನ್ನು ಬಯಲಿಗೆಳೆಯುವ ಸಂದರ್ಭದಲ್ಲಿಯೇ ಶೂದ್ರಪ್ರಜ್ಞೆಗೆ ಸತ್ಯ ತುಂಬುವಂತೆ ಗೊಬ್ಬರ ಮೇಲೆ ಕವಿತೆ ಕಟ್ಟುತ್ತಾರೆ. ರೈತರನ್ನು ನೇಗಿಲಯೋಗಿ ಎನ್ನುವ ಗೌರವದಿಂದ ಸಂಬೋಧಿಸಿದ್ದಾರೆ. ಶೂದ್ರಶಕ್ತಿಶ್ರಮಶಕ್ತಿಗೆ ನಮಿಸುತ್ತಾರೆ. ಇಂಥ ಸಂದರ್ಭದಲ್ಲೆಲ್ಲಾ ಕವಿ ಕುವೆಂಪು ಜನಪರ ನಿಲುವನ್ನು ಪ್ರಕಟಿಸುತ್ತಲೆ ದುಡಿಯುವ ಜನತೆಗೆ ಇಂಬಾಗಿ ನಿಲ್ಲುತ್ತಾರೆ. ಅವರಲ್ಲಿ ಸತ್ಯ, ಧೈರ್ಯ, ಶಕ್ತಿ – ತುಂಬುತ್ತಾರೆ. ರೈತನೆದುರಲಿ ನಿಂತು ಅವನನ್ನು ಹೊಲದ ಗಾಂಧಿ ಎಂದು ಕರೆದು ‘ನೆಹರು ದೇಶಪ್ರೇಮಕ್ಕಿಂತಾ ನಿನ್ನ ದೇಶಪ್ರೇಮ ಯಾವ ರೀತಿ ಕಿರಿದು’ – ಎಂದು ಪ್ರಶ್ನಿಸುತ್ತಾರೆ. ಆದರೂ ರೈತನ ಬವಣೆ ಕವಿಯನ್ನು ಕೆಣಕಿದೆ, ದುಡಿಯುವ ರೈತನ ನೋವನ್ನು ಪ್ರಕಟಿಸುತ್ತಾ ಅವನ ಮುಖವಾಣಿಯಾಗಿ ಹೀಗೆ ಪ್ರತಿಕ್ರಿಯಿಸಿದ್ದಾರೆ. ರೈತ ಅಂದೂ ಇಂದೂ ಎಂದೆಂದೂ ನೋವಿಗೆ ಈಡದವನೆ, ತನ್ನ ಅಳಲನ್ನು ಹೀಗೆ ತೋಡಿಕೊಂಡಿದ್ದಾನೆ.

ಕರಿಯರದೊ ಬಿಳಿಯರದೊ ಯಾರದಾದರೆ ಏನು?
ಸಾಮ್ರಾಜ್ಯವಾವಗಂ ಸುಲಿಗೆ ರೈತರಿಗೆ
ವಿಜಯನಗರವೊ? ಮೊಗಲರಾಳಿಕೆಯೊ? ಇಂಗ್ಲೀಷರೊ?
ಎಲ್ಲರೂ ಜಿಗಣಿಗಳೆ ನನ್ನ ನೆತ್ತರಿಗೆ !
ಕತ್ತಿ ಪರದೇಶಿಯಾದರೆ ಮಾತ್ರ ನೋವೆ?
ನಮ್ಮವರೆ ಹದಹಾಕಿ ತಿವಿದರದು ಹೂವೆ?

ಭಾರತ ಹಳ್ಳಿಗಳ ದೇಶ, ಹಳ್ಳಿಗಳೆ ದೇಶದ ಪ್ರಗತಿಯ ಅಸ್ತಿಭಾರ, ಅದರ ಕೇಂದ್ರ ಶಕ್ತಿ ರೈತ. ಅವನು ನೆಲವನ್ನು ಉತ್ತಿ ಬಿತ್ತಿ ಬೆಳೆ ತೆಗೆಯುವಲ್ಲಿ ದೇಶದ ಹಣೆಬರಹ ಬರೆದಿದೆ ಎಂದು ಸಾರಿದರು.

ಬರಿಯ ಉಳುವ ಕುಳದ ಗೆರೆಯೆ?
ನಾಡ ಹಣೆ ಬರಹ ಬರೆವೆ!
ಹೊಲದಗಾಂಧಿ ನೆಲದ ನಾಂದಿ
ನೀನೆ ರಾಷ್ಟ್ರಶಕ್ತಿ
ನೆಹರುಗೇನು ಕಡಿಮೆಯೇನು
ನಿನ್ನ ದೇಶಭಕ್ತಿ?
ಅವರೋ ಹೆಸರು, ನೀನೋ ಉಸಿರು
ನಾಡದೇವಿಗೆ

ಈ ಕವನ ಕೇವಲ ಭೌತಿಕ ಸ್ಥಿತಿಯನ್ನು ಮಾತ್ರ ತಿಳಿಸುವುದಲ್ಲ. ಪ್ರಜಾಪ್ರಭುತ್ವದ ಶಕ್ತಿಯನ್ನೂ ಸೂಚಿಸುವಂತದ್ದು. ದೇಶದ ಕನಿಷ್ಠ ಪ್ರಜೆಗೆ ಮನ್ನಣೆ ದೊರೆಯಬೇಕು, ಶ್ರಮ ಸಂಸ್ಕೃತಿಗೆ ಸಮಾನ ಸ್ಥಾನ ನೀಡಬೇಕು. ಯಾರೂ ಕೀಳಲ್ಲ ಯಾರೂ ಮೇಲಲ್ಲ. ದೇವಾಲಯದ ಪುರೋಹಿತನಿಗಿಂತಲೂ ಅನ್ನ ಕೊಡುವ ರೈತ ಕುವೆಂಪು ಅವರಿಗೆ ಮಿಗಿಲಾಗಿ, ಗೌರವದ ವ್ಯಕ್ತಿಯಾಗಿ ಕಂಡಿದ್ದಾನೆ. ಆದ್ದರಿಂದಲೇ ರೈತನಿಗೆ ಬೇಕಾದ ವಸ್ತುಗಳನ್ನು ಕಾವ್ಯಪ್ರತಿಮೆಯಲ್ಲಿ ಹಿಡಿದು ಅವುಗಳ ಘನತೆಯನ್ನು ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಕೈಹಾಕಿದ್ದಾರೆ, ಆ ದೃಷ್ಟಿಯಿಂದ ಗೊಬ್ಬರದ ಕವಿತೆ ಅತ್ಯಂತ ಮಹತ್ವದ್ದಾಗುತ್ತದೆ.

ಗೊಬ್ಬರದ ಮೇಲೆ ಬರೆವುದೆ ಕಬ್ಬಮಂ ? ಹಾ
ಕಡುಕಷ್ಟ ! ಕಲಿಕಾಲಕೇನೇನು ಬಂದಪುದೋ ?
ನಿರ್ಮಲ ಸರಸ್ವತಿಯ ವೀಣೆಯಂ ಶೂದ್ರಂ
ಕಸಿದುಕೊಂಡು ಗೊಬ್ಬರದ ಗುಂಡಿಯನ್ನಗಿಯೆ
ಗುದ್ದಲಿಯ ಮಾಡಿಹನಲ್ಲ!

ಸಮಾಜದಲ್ಲಿನ ಅತ್ಯಂತ ಕೆಳಸ್ತರದ ಜನಾಂಗವನ್ನು ಮೇಲೆತ್ತುವ ಪ್ರಯತ್ನ ಕುವೆಂಪು ಅವರ ನಿರಂತರ ಕಾಳಜಿಯಾಗಿತ್ತು.

ಪ್ರಭುತ್ವ : ಇಲ್ಲಿಯೇ ಪ್ರಸ್ತಾಪಿಸಬೇಕಾದ ಮತ್ತೊಂದು ಅಂಶವಿದೆ. ಕುವೆಂಪು ಅವರು ಎತ್ತಿದ ಆಂಗ್ಲರ ವಿರುದ್ಧದ ದನಿ. ಪ್ರಭುತ್ವ ನಿರಾಕರಣೆ ಹಾಗೂ ಅರಸೊತ್ತಿಗೆಯ ಧಿಕ್ಕಾರ. ಮೈಸೂರು ಅರಸರ ಮನೆಯಿಂದ ಅರಸು ಮಕ್ಕಳಿಗೆ ಕನ್ನಡ ಭಾಷೆ – ಸಾಹಿತ್ಯ ಕಲಿಸಬೇಕೆಂಬ ಆದೇಶ ಬಂದಾಗ ಅದನ್ನು ನಿರಾಕರಿಸಿದ ಧೀಮಂತ ವ್ಯಕ್ತಿ. ಅರಮನೆಯ ಬಾಗಿಲು ಕಾದು ಅವರಿವರ ಬೇಡಿ ಮಹಾರಾಜರ ಕೃಪೆಗೆ ಒಳಗಾಗಿ ಬದುಕಲು ಬಯಸುತ್ತಿದ್ದ ಅಂದಿನ ಕಲದ ಜನರ ಮಧ್ಯೆ ಕುವೆಂಪು ಅವರ ನಿರ್ಧಾರ ಅಚ್ಚರಿ ಮೂಡಿಸುವಂಥದು. ‘ರಾಜ ಪ್ರತ್ಯಕ್ಷ ದೈವ’ – ಎಂದು ಭಾವಿಸಿ ದೊರೆಗಳ ಕಾಲಿಗೆ ಬಿದ್ದು ಅವರ ಕರುಣೆಯ ಕೃಪೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆಡಳಿತೆಯ ಪ್ರಭುಗಳ ಆಹ್ವಾನವನ್ನು ತಿರಸ್ಕರಿಸಲು ಎಂಟೆದೆಯ ಕೆಚ್ಚು ಇರಬೇಕಿತ್ತು. ಅಂಥ ಕ್ರಾಂತಿಕಾರಿ ನಿರ್ಧಾರವನ್ನು ತೆಗೆದುಕೊಳ್ಳಲು ಕುವೆಂಪು ಅವರಿಗೆ ಎರಡು ಪ್ರಬಲ ಕಾರಣಗಳಿದ್ದವು. ಒಂದು ಬ್ರಿಟಿಷರ ವಿರುದ್ಧ, ಇನ್ನೊಂದು ರಜರ ವಿರುದ್ಧ. ಆಳುವವರಿಗೂ ಆಳಿಸಿಕೊಳ್ಳುವವರಿಗೂ ಇದ್ದ ಅಂತರವನ್ನು ಗುರುತಿಸಿದ್ದರು. ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ನಿಂತಿರುವ ಆಡಳಿತದ ಇಂದಿನ ದಿನಗಳಲ್ಲಿಯೆ ಸರ್ಕಾರ ಹಾಗೂ ಜನತೆಯ ಅಂತರ ಅಗಾಧವಾಗಿದೆ. ಇಂದು ಪ್ರಜೆಯೇ ಯಜಮಾನ ಎನ್ನುವ ಸಂವಿಧಾನದತ್ತ ಶಾಸನದ ಅಡಿಯಲ್ಲಿಯೇ ನಾವುಗಳು ಅರ್ಥಾತ್ ಪ್ರಜೆಗಳು ನರಳುತ್ತಿದ್ದೇವೆ. ಇನ್ನು ಅಂದು ರಾಜಾಡಳಿತವೇ ಇದ್ದ ಕಾಲದಲ್ಲಿ ಕುವೆಂಪು ನಿರ್ಧಾರ ಅಂದಿನ ಸಮಾಜವನ್ನೇ ತಲ್ಲಣಗೊಳಿಸಿ ದಿಗ್ಭ್ರಮೆಗೊಳಿಸಿದ್ದು ಅಚ್ಚರಿಯ ಸಂಗತಿಯಾಗಿತ್ತು. ಆ ನಿರ್ಧಾರದ ಮೂಲಕ ಜನತೆಯ ದೃಷ್ಟಿಯಲ್ಲಿ ಅಸಮಾನ್ಯರಾದರು ಕುವೆಂಪು. ಸಾಮಾನ್ಯ ಜನತೆಯಲ್ಲಿಯೂ ಆತ್ಮಾಭಿಮಾನವನ್ನು, ಸಮಾಜದಲ್ಲಿ ಆತ್ಮಶಕ್ತಿಯನ್ನು ತುಂಬಿದರು.

ಇನ್ನು ಅಂದಿನ ಮೈಸೂರು ರಾಜ್ಯ ಕಳೆದುಕೊಂಡಿದ್ದ ತನ್ನ ಭಾಗಗಳನ್ನು ಪಡೆದು ಏಕೀಕರಣಗೊಂಡು ವಿಶಾಲ ಕರ್ನಾಟಕವಾಗಬೇಕು ಎನ್ನುವ ಕನಸನ್ನು ಕಂಡ ಮಹನೀಯರನೇಕರು ಅಂದು ಮುಂಚೂಣಿಯಲ್ಲಿದ್ದರು. ಅದಕ್ಕಾಗಿ ಅಹರ್ನಿಶಿ ದುಡಿಯುತ್ತಿದ್ದರು. ಅದೊಂದು ಕಾಯಾವಾಚಾ ಮನಸ್ಸಿನ ಕಾಯಕವಾಗಿತ್ತು ಅವರಿಗೆ. ಈ ವಿಷಯದಲ್ಲಿ ಕುವೆಂಪು ಅವರು ಉಗ್ರರಾಗಿ ತಮ್ಮ ಸಾಹಿತ್ಯದ ಮೂಲಕ ಜನತೆಯನ್ನು ಹುರಿದುಂಬಿಸುತ್ತಿದ್ದರು. ಆಗ ಸರ್ಕಾರ ಅವರಿಗೆ ಒಂದು ನೋಟೀಸ್ ನೀಡಿತು. ಕುವೆಂಪು ಅದಕ್ಕೆ ಕೊಟ್ಟ ಉತ್ತರದಿಂದ ಅಂದಿನ ಸರ್ಕಾರ ನಡುಗಿತ್ತು. ಅಖಂಡ ಕರ್ನಾಟಕ ಎಂದರೇನು? ಎಂದು ಪ್ರಶ್ನಿಸುತ್ತಾ ಕನ್ನಡಿಗರೆಲ್ಲರ ಜನಪರ ಅತ್ಯತ್ಸಾಹದ ನಿಲುವನ್ನು ಕವನದ ಮೂಲಕ ಸರ್ಕಾರಕ್ಕೆ ಸೂಚಿಸಿ ಗುಡುಗಿದರು; ಎಚ್ಚರಿಸಿದರು. ಪ್ರಜೆಗಳ ವಿಶ್ವಾಸ ಕುಂದಿದಾಗ ಬಿದ್ದುಹೋಗುವ ಸರ್ಕಾರಕ್ಕೆ ಸಾಹಿತ್ಯದ ಶಾಶ್ವತ ಮಂತ್ರಿಮಂಡಲ ರಚನೆ ಮಾಡಿ ತೋರಿಸಿದರು. ಶಾಸಕರು, ಮಂತ್ರಿರವರೇಣ್ಯರು ಐದು ಹತ್ತು ವರುಷಗಳ ಅಶಾಶ್ವತ ಪದವಿಗೂ ಕವಿಗಳೂ ಸಾಹಿತಿಗಳೂ ಗಳಿಸಿಕೊಂಡಿರುವ ಶಾಶ್ವತ ಸಂಪತ್ತಿಗೂ ತಾಳೆ ಹಾಕಿಕೊಟ್ಟರು.

ಕುವೆಂಪು ಅವರಲ್ಲಿ ಕಾಣಬಹುದಾದ ಬಹುದೊಡ್ಡ ವಿಚಾರವೆಂದರೆ ವಸ್ತು, ವಿಷಯದ ನಿರಾಕರಣೆಯ ಜೊತೆಯಲ್ಲಿಯೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವ ಯೋಚನೆ – ಯೋಜನೆಯ ತಂತ್ರಗಾರಿಕೆ. ನಮ್ಮಲ್ಲಿ ಅನೇಕ ಬಾರಿ ನಿರಾಕರಣೆಯ ಕೂಗಿ ದಟ್ಟವಾಗಿ ಕೇಳಿಬರುತ್ತದೆ. ಆದರೆ ಆ ನಿರಾಕರಣೆಯನ್ನು ತುಂಬುವ ಪರ್ಯಾಯ ವ್ಯವಸ್ಥೆಯನ್ನು ಅನೇಕ ಸಂದರ್ಭದಲ್ಲಿ ಅನೇಕರು ಮಾಡುವುದಿಲ್ಲ. ಮಾಡಿದರೂ ಸಮರ್ಪಕವಾಗಿರದೆ ಸೋಲುವ ಸಂದರ್ಭಗಳೇ ಹೆಚ್ಚು. ಆದರೆ ನಿರಾಕರಣೆಯ ಜೊತೆಯಲ್ಲಿಯೆ ಸಾಕಾರಗೊಳ್ಳಬೇಕಾದ ಮತ್ತೊಂದು ವ್ಯವಸ್ಥೆಗೆ ದಾರಿ ತೋರುವುದರಿಂದಲೇ ಕುವೆಂಪು ನಮಗೆ ಹೆಚ್ಚು ಪ್ರಸ್ತುತರಾಗುತ್ತಾರೆ. ಅವರ ಆಲೋಚನೆಗಳು, ಆಚರಣೆಗಳು ವಿಭಿನ್ನ ರೀತಿಯಿಂದ ಪ್ರಭಾವ ಬೀರುತ್ತವೆ, ಸರ್ಕಾರದ ನೋಟೀಸಿಗೆ ಅವರು ಕೊಟ್ಟ ಉತ್ತರ, ರಾಜಕೀಯವನ್ನು ಒಂದು ನಾಟಕವೆಂದು ವ್ಯಂಗ್ಯವಾಡಿ ತರಾಟೆಗೆ ತೆಗೆದುಕೊಂಡದ್ದು ; ಹೀಗೆ ಅವರ ಪ್ರತಿಕ್ರಿಯೆ;

ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟಿಕೆಯ ರಾಜಕೀಯ ನಾಟಕ !
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸಿದೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ ವಜ್ರಕುಂಡಲ !
ಅಖಂಡ ಕರ್ನಾಟಕ : ಅಲ್ತೊ ನಮ್ಮ ನಾಲ್ಕು ದಿನದ ರಾಜಕಿಯ ನಾಟಕ !
ನೃಪತುಂಗನೆ ಚಕ್ರವರ್ತಿ |
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಾಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ !
ಕರ್ನಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರಕಣಾ! ಶಕ್ತಿಕಣಾ!
ಕಾವಕೊಲುವ ಒಲವ ಬಲವ
ಪಡೆವ ಫಲದ ಚಂಡಿಕಣಾ
ಋಷಿಯ ಕಾಣ್ಬ ಕಣ್ಣಿಗೆ

ಹೀಗೆ ಅಂದಿನ ಸರ್ಕಾರಕ್ಕೆ ಎಚ್ಚರಿಕೆಯ ಉತ್ತರ ಕೊಟ್ಟಿದ್ದಲ್ಲದೆ ಸಾಹಿತ್ಯ ಲೋಕಕ್ಕೆ ಸಾಹಿತ್ಯ ಶಕ್ತಿಗೆ ಎಂಥ ಸತ್ವವಿದೆ ಎನ್ನುವುದನ್ನು ತೋರಿದರು. ಎರಡು ಸಾವಿರ ವರುಷಗಳು ಸಂದರೂ ಬದುಕಿ, ಉಳಿದು ಬೆಳೆಯುತ್ತಿರುವ ಶಾಶ್ವತ ಕವಿಗಳ ಮುಂದೆ ರಾಜಕೀಯದ ಅಶಾಶ್ವತ ವ್ಯಕ್ತಿಗಳನ್ನು ನೀವಾಳಿಸಿ ಎಸೆದರು. ಕುವೆಂಪು ಅವರ ಈ ವಿಚಾರಧಾರೆಗಳು ಅರ್ಧಶತಮಾನಗಳ ಹಿಂದೆಯೇ ಪುಟಿದಿದ್ದವು. ಅವರ ಇಂಥ ಮಹತ್ವದ ವೈಚಾರಿಕ ಕ್ರಾಂತಿಯನ್ನು ನಾವು ಅರಿಯಬೇಕಿದೆ ಮನನ ಮಾಡಬೇಕಿದೆ.

ನಾಗರಿಕ, ಅನಾಗರಿಕ ಪ್ರಶ್ನೆ, ಶೂದ್ರ ಬ್ರಾಹ್ಮಣ ತಾರತಮ್ಯ, ಮತಮೌಢ್ಯ ಶೋಷಣೆ, ಹೆಣ್ಣಿನ ಅಸಮಾನತೆ – ಇಂಥ ಅನೇಕ ಸಾಮಾಜಿಕ ಪಿಡುಗುಗಳಿಗೆ ಸ್ಪಂದಿಸಿ, ಪ್ರಶ್ನೆ ಎತ್ತಿ, ಸೂಕ್ತ ಉತ್ತರ ಕೊಟ್ಟಿದ್ದಾರೆ. ವೈಜ್ಞಾನಿಕ ದೃಷ್ಟಿಕೋನದ, ಹೊಸಕಾಲದ ಕರೆಗೆ ಧ್ವನಿಯಾಗಿದ್ದಾರೆ.

‘ಬೆರಳ್ಗೆ ಕೊರಳ್’ – ನಾಟಕದಲ್ಲಿನ ಏಕಲವ್ಯ – ಅರ್ಜುನರ ಸಂಭಾಷಣೆ, ನಾಗರಿಕ – ಅನಾಗರಿಕ ಪ್ರಶ್ನೆಗೆ ಸರಿಯಾದ ಉತ್ತರ ನೀಡುತ್ತದೆ. ವಿಲ್ವಿದ್ಯೆಯಲ್ಲಿ ಅತ್ಯಂತ ಪಾರಂಗತನೂ ಪರಾಕ್ರಮಿಯೂ ಪ್ರಕೃತಿ ಪ್ರಿಯನೂ, ತಾಯಿಯ ಪ್ರೀತಿಯ ಪುತ್ರನೂ ನಿರಹಂಕಾರಿಯೂ ನಾಗರೀಕತೆಯ ಪ್ರತಿರೂಪನೂ ಮಾನವತೆಯ ಸಾಕಾರನೂ ಕಾಡಿನ ಸುಂದರ ಕುಸುಮವೂ ಆದ ಏಕಲವ್ಯನನ್ನು ಕೆಣಕುವ ದುರಂಹಕಾರಿ ಅನಾಗರಿಕ ಅರ್ಜುನನ ಪ್ರಶ್ನೆಗಳಿಗೆ ಏಕಲವ್ಯನ ಉತ್ತರಗಳು ನಾಗರೀಕತೆಯ ಪ್ರತೀಕ ಪ್ರತಿಮೆಗಳಾಗಿ ವಿಜೃಂಭಿಸಿವೆ. ಇವರೀರ್ವರ ಸಂಭಾಷಣೆ ಒಂದು ಮುಕ್ತ ಚರ್ಚೆಯಾಗಿ ಸಂವಾದ ರೂಪದಲ್ಲಿ ಮೈದಳೆದು ನಾಗರಿಕ – ಅನಾಗರಿಕ ಸಂಸ್ಕೃತಿಯ ವ್ಯಾಖ್ಯಾನವಾಗಿ ಪರಿಣಮಿಸಿದೆ.

‘ಶೂದ್ರ ತಪಸ್ವಿ’ – ನಾಟಕದಲ್ಲಿ ಶೂದ್ರ – ಬ್ರಾಹ್ಮಣ, ಕೀಳು ಮೇಲಿನ ಅಂತರವನ್ನು ನಾಟಕಕಾರ ಕುವೆಂಪು ಹೋಗಲಾಡಿಸಿದ್ದಾರೆ. ಮತ ಮೌಢ್ಯತೆಯಿಂದ ಬಳಲುತ್ತಿರುವ ಜನತೆಯನ್ನು ಬಡಿದು ಎಬ್ಬಿಸುತ್ತಾರೆ. ವೈಚಾರಿಕ ಅರಿವಿನ ಬೀಜಗಳನ್ನು ಅವರ ಬುದ್ಧಿಭಾವಗಳಲ್ಲಿ ಬಿತ್ತಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಯತ್ನಿಸಿದ್ದಾರೆ.

ಶಂಬೂಕಮುನಿ ಶೂದ್ರ. ತನ್ನ ಆಶ್ರಮದಲ್ಲಿ ತಪಸ್ಸು ಮಾಡುತ್ತಿದ್ದಾನೆ. ಆತನನ್ನು, ಆತನ ಆಶ್ರಮವನ್ನು ಕಾಯುವವರು ಭೈರವ. ಅಲ್ಲಿಗೆ ಮೃತ್ಯದೇವ, ಶಂಬೂಕ ಋಷಿಗೆ ಗೌರವ ತೋರಲು ಬರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಹುವ್ವನ್ನು ಆರಿಸಲು ಬಂದ ಬ್ರಾಹ್ಮಣ ಬಾಲಕ ತಪಸ್ವಿ ಶಂಬೂಕನನ್ನು ಕಂಡು ಕೈಮುಗಿಯುತ್ತಾನೆ. ಮಕ್ಕಳ ಮನಸ್ಸಿನ ನಿರ್ಮಲತೆಯಿಂದ. ಒಡನೆಯೇ ಆ ಬಾಲಕನ ತಂದೆ ಬ್ರಾಹ್ಮಣ ಹೇಳುತ್ತಾನೆ ಶೂದ್ರನಿಗೆ ಕೈ ಮುಗಿಯಬಾರದು ಎಂದು. ಈ ಮಾತನ್ನು ಕೇಳಿ

ಭೈರವ : ಏನ್ ಗರ್ವಂ ಆ ಪಾರ್ವಂಗೆ?

ಮೃತ್ಯು : ಪುಟ್ಟೊಳಾತಂ ಶೂದ್ರನಾಗಿರ್ದನೆಂದು|

ಭೈರವ : ಶಿವಶಿವಾ| ಏನ್ ಭಯಂಕರಂ ಪಾಪಂ
ಶ್ರೀರಾಮನಾಳುತಿರ್ಪ ಈ ಧರ್ಮರಾಜ್ಯದೊಳ್

ರಾಮಾಯಣದಲ್ಲಿ ಚಿತ್ರಿತವಾಗಿರುವ ಸನ್ನಿವೇಶವನ್ನು ಸಂಪೂರ್ಣವಾಗಿ ವ್ಯತ್ಯಯಗೊಳಿಸಿ ಬ್ರಾಹ್ಮಣನ ಮತ ಮೌಢ್ಯವನ್ನು ಹೋಗಲಾಡಿಸಿ, ಶೂದ್ರಕನನ್ನು ಉದ್ಧರಿಸಿ, ತಾನೂ ಪಕ್ಷಪಾತರಹಿತನೆಂದು ತೋರಿಸಿಕೊಳ್ಳುವ ರಾಮನ ನಡವಳಿಕೆ ಎಲ್ಲರ ಮೆಚ್ಚಿಗೆಗೆ ಪಾತ್ರವಾಗುತ್ತದೆ. ರಾಮನಿಗೆ ಶೋಭೆ ತರುತ್ತದೆ, ಶೂದ್ರರಿಗೆ ಆತ್ಮವಿಶ್ವಾಸ ಮೂಡುತ್ತದೆ.

ಮೂಲರಾಮಾಯಣದಲ್ಲಿ ಶೂದ್ರನೊಬ್ಬ ತಪಸ್ಸು ಮಾಡುತ್ತಿದ್ದಾನೆ ಎನ್ನುವುದೇ ಒಂದು ದೊಡ್ಡ ಅಪರಾಧವಾಗಿ ಪರಿಣಮಿಸುತ್ತದೆ. ದೂರುವ ಬ್ರಾಹ್ಮಣನ ಮಾತಿಗೆ ಶ್ರೀರಾಮಚಂದ್ರ ಓಗೊಟ್ಟು ಶೂದ್ರ ತಪಸ್ವಿ ಶಂಬೂಕನನ್ನು ಸಂಹರಿಸುತ್ತಾನೆ. ಇಲ್ಲಿ ಜಾತಿ ತಾರತಮ್ಯ ತೋರಿದ ಬ್ರಾಹ್ಮಣ, ಅವನ ಮಾತನ್ನು ಪುರಸ್ಕರಿಸಿ ಶ್ರೀರಾಮಚಂದ್ರ ಇಬ್ಬರು ಜಗತ್ತಿನ ಕಣ್ಣಿನಲ್ಲಿ ಸಂಕುಚಿತ ಸ್ವಭಾವದ ಮೇಲು ಕೀಳು ಮತಮೌಢ್ಯದಿಂದ ಕುಬ್ಜರಾಗುತ್ತಾರೆ, ಜೊತೆಗೆ ಮಾನವಕುಲ ನಾಚುವಂತಹ ಕಾರ್ಯವೆಸಗುತ್ತಾರೆ, ಆದರೆ ಕುವೆಂಪು ಇಲ್ಲಿ ಎಲ್ಲರನ್ನೂ ಉದಾತ್ತೀಕರಿಸಿ ಉದ್ಧರಿಸಿದ್ದಾರೆ.

‘ಶೂದ್ರ ತಪಸ್ವಿ’ ನಾಟಕದಲ್ಲಿ ತಪಸ್ವಿ ಶಂಬೂಕನ ಮುಂದೆ ಶ್ರೀರಾಮಚಂದ್ರ ಹಾಗೂ ಬ್ರಾಹ್ಮಣ ನಿಂತಿದ್ದಾರೆ ; ಅವರೀರ್ವರ ಸಂಭಾಷಣೆ ಹೀಗಿದೆ ;

ಶ್ರೀರಾಮ : ತಪಂ ಪೂಜ್ಯಕರಮಲ್ತೆ ದ್ವಿಜೇಂದ್ರ

ಬ್ರಾಹ್ಮಣ : ತಪಕ್ಕೆಣೆಯುಂಟೆ, ರಾಘವೇಂದ್ರ ?

ಶ್ರೀರಾಮ : ತಪಂಗೈವನುಂ ಪೂಜ್ಯನಲ್ತೆ ವಿಬುಧವರ್ಯ ?

ಬ್ರಾಹ್ಮಣ : ದಿಟಾ, ಧರ್ಮಮೂರ್ತಿ

ಶ್ರೀರಾಮ : ಪೂಜ್ಯ ಹನನಂ ಪಾಪಕರಮಲ್ತೆ ಸತ್ವಶೀಲ ?

ಬ್ರಾಹ್ಮಣ : ನಿಸ್ಸಂಶಯಂ ವಾಲಿಸಂಹಾರಿ

ಶ್ರೀರಾಮ : ಅಂತೆವೋಲ್ ಈ ತಪಸ್ವಿಯಂ ಕೊಲ್ಪುದು ಪಾಪಮಾಗದೆ?

ಬ್ರಾಹ್ಮಣ : ವಶಿಷ್ಟ ಶಿಷ್ಯ
ತರ್ಕಕೆ ಮಿಗಿಲ್ ಶ್ರುತಿವಾಕ್ಯಮೈಸೆ|
ತಪಕೆ ಅನಧಿಕಾರಿ ಶೂದ್ರಂ
ಎಂಬುದು ಶಾಸ್ತ್ರ ಪ್ರಸಿದ್ಧಂ
ಕೃತಯುಗದೊಳ್ ತಪಕ್ಕರ್ಹರ್ ಬ್ರಾಹ್ಮಣರ್ ಮಾತ್ರಂ
ಕೇಳ್ ! ವರ್ಣಾಶ್ರಮ ಧರ್ಮಪಾಲಕ
ಪಾಲ್ ಪೂಜ್ಯಮಾದೊಡಂ
ಜೀವಾತುವಾದೊಡಂ ತ್ಯಾಜ್ಯಮಾ ನಾಯಪಾಲ್
ನಾಯ ಪಾಲ್ಗೆಣೆ ಶುದ್ರನಾ ತಪಂ |

ಆಗ ಈ ಕರ್ಮಠ ಬ್ರಾಹ್ಮಣನಿಗೆ ಬುದ್ಧಿ ಕಲಿಸಲು ಶ್ರೀರಾಮಚಂದ್ರ ಬಾಣ ಹೂಡುತ್ತಾನೆ. ಆ ಬಾಣವಾದರೂ ಶಂಬೂಕನಿಗೆ ತಗುಲದ ಬ್ರಾಹ್ಮಣನನ್ನು ಬೆನ್ನಟ್ಟುತ್ತದೆ. ಆಗ ಬ್ರಾಹ್ಮಣನಿಗೆ ಜ್ಞಾನೋದಯವಾಗಿ ತನ್ನ ತಪ್ಪು ಒಪ್ಪಿಕೊಳ್ಳುತ್ತಾನೆ!

ಇದೇ ರೀತಿ ಜಲಗಾರ ನಾಟಕದಲ್ಲಿಯೂ ಜಲಗಾರ ಮತ್ತು ರೈತನೊಬ್ಬನೊಂದಿಗೆ ನಡೆಯುವ ಸಂಭಾಷಣೆ ಒಂದು ಮುಖ್ಯ ನೆಲೆಯಲ್ಲಿ ತೆರೆದುಕೊಳ್ಳುತ್ತದೆ.

ಜಲಗಾರ : ಮುಂಜಾನೆಯೊಳಗೆಲ್ಲಿ ಹೋಗುತಿಹೆ ರೈತ ?

ರೈತ : ಇಂದು ಶಿವಗುಡಿಯ ಜಾತ್ರೆ, ಬರುವುದಲ್ಲವೆ ನೀನು ?

ಜಲಗಾರ : ನನಗೇಕೆ ಶಿವಗುಡಿಯ ಜಾತ್ರೆ, ಜೋಯಿಸರು ದೇಗುಲದ ಬಳಿಗೆನ್ನ ಸೇರಿಸರು

ರೈತ : ದೂರದಲ್ಲಿಯೆ ನಿಂತು ಕೈಮುಗಿದು ಬಾ

ಜಲಗಾರ : ಕರ್ಮವಾರಾಧನೆ, ಸೇವೆಯೇ ಪೂಜೆ
ನನ್ನ ಭಾಗಕೆ ಪೊರಕೆ ಆರತಿ| ಗುಡಿಸುವುದೆ
ನನ್ನ ದೇವರ ಪೂಜೆ| ನಿನ್ನ ದೇಗುಲದಡೆಗೆ
ಹೋದೆನ್ನ ಕಂದನಂ ಬೈದಿರಿದು ನೂಕಿದರು,
ಶಿವಗುಡಿಯ ಶಿವನು ಜೋಯಿಸರ ಶಿವನಂತೆ;
ನನ್ನ ಶಿವನೀ ಮಣ್ಣಿನಲ್ಲಿಹನು, ನನ್ನ ಶಿವ
ಕೊಳೆತ ಕಸದೊಳಗಿಹನು ಕಪ್ಪುರದೊಳಿಲ್ಲ
ಮಂಗಾಳಾರತಿಯೊಳಿಲ್ಲ; ಹೂವುಗಳಲಿಲ್ಲ
ಯಾವೆಡೆಯೊಳಾನಿಹೆನೊ ಅವನಲ್ಲಿಯೇ ಇಹನು
ನನ್ನೆದೆಯೆ ದೇಗುಲ : ನನ್ನೊಲುಮೆ ಪೂಜೆ

ಶಿವಾಲಯದ ಜೋಯಿಸರ ಶಿವ ಅಲ್ಲಿಯೇ ಇರಲಿ, ಅಲ್ಲಿಗೆ ನಾ ಹೋಗಲಾರೆ ಎನ್ನುವ ಕೊರಗಿಗೆ ಜಲಗಾರನನ್ನು ಈಡುಮಾಡದೆ ತನ್ನದೆಯೆ ದೇವಾಲಯ, ತನ್ನ ಕಾಯಕವೇ ಪೂಜೆ ಎನ್ನುವ ಆತ್ಮವಿಶ್ವಾಸ ಹೊಸ ವ್ಯವಸ್ಥೆಗೆ ತೊಡಗಿಸುತ್ತಾರೆ. ಶೂದ್ರರಲ್ಲಿ ಪಂಚಮರಲ್ಲಿ ದಲಿತಾದಿ ಅಸ್ಪೃಶ್ಯರಲ್ಲಿ ಸ್ವಾಭಿಮಾನವನ್ನು ತುಂಬಿ ಸಮಾಜದಲ್ಲಿ ಸಮಾನತೆಯಿಂದ ತಲೆ ಎತ್ತಿ ಬದುಕುವ ಧೈರ್ಯ ಮೂಡಿಸಿದ್ದಾರೆ.

ಮತಮೌಢ್ಯದ ಅಡ್ಡಗೋಡೆಗಳನ್ನು ಕಿತ್ತೊಗೆಯುವಂತೆ ಸಾರಿದ ಬಹುಜನಪ್ರಿಯ ಕವನ ಹೀಗಿದೆ :

ಯಾವಮತದವನಲ್ಲ
ಬಹು ಮತದವನು
ಯಾವ ಪಂಥವೂ ಅಲ್ಲ
ಬಹುಪಂಥದವನು
ಎಲ್ಲ ಬಿಡಲೂ ಬಲ್ಲೆ
ಎಲ್ಲ ಹಿಡಿಯಲೂ ಬಲ್ಲೆ ಎನ್ನುತ್ತಲೇ
ಸಿಲುಕಿದಿರಿ ಮತವೆಂಬ ಮೋಹದಜ್ಞಾನಕ್ಕೆ’….
ಗುಡಿ ಚರ್ಚು ಮಸಿದೀಜಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮಟ್ಟಿ ಕೀಳಬನ್ನಿ
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ
ಬನ್ನಿ ಸೋದರರೆ ಬೇಗ ಬನ್ನಿ
ಸಿಲುಕದಿರಿ ಮತವೆಂಬ ಮೋಹದಜ್ಞಾನಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
ಮತ ಮತ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಬನ್ನಿ ಸೋದರರೆ, ವಿಶ್ವಪಥಕೆ ( ಬನ್ನಿ ಸೋದರರೆ)

ಎಲ್ಲವನ್ನೂ ಬಿಟ್ಟು ಎಲ್ಲ ಅಡ್ಡಗೋಡೆಗಳನ್ನೂ ಹೊಡೆದು ಬಟ್ಟಬಯಲಿನಲಿ ನಿರ್ಮಲ ಆಕಾಶದಡಿಯಲಿ ಅನಿಕೇತನರಾಗಿ ಮನುಜರೆಲ್ಲ ಒಂದೆ ಕಡೆ ಒಗ್ಗೂಡಿ ನಿಲ್ಲಬೇಕೆಂಬ ಬಯಕೆ ಮನುಕುಲ ಪ್ರದೀಪ ಕುವೆಂಪು ಅವರದು.

ವೈಚಾರಿಕ ಪ್ರಜ್ಞೆಯ ಜೊತೆಗೆ ಅವರ ವೈಜ್ಞಾನಿಕ ಪ್ರಜ್ಞೆಯೂ ಪ್ರಖರವಾದುದು, ಕ್ರಾಂತಿಕಾರಿಯಾದುದು. ಹೊಸ ಕಾಲಕ್ಕೆ ಅಣಿಯಾಗಬೇಕಿರುವ ಅನಿವಾರ್ಯತೆ ಹಗೂ ಅಗತ್ಯದ ಬಗೆಗೆ ಸಾರಿ ಹೇಳಿದ್ದಾರೆ.

ಹೋಗುತಿದೆ ಹಳೆಕಾಲ, ಹೊಸಕಾಲ ಬರುತಲಿದೆ
ಬರುತಲಿದೆ ಹೊಸ ದೃಷ್ಟಿ ಹೊಸ ಬಯಕೆಗಳಲಿ
ಹೋಗುತಿದೆ ಹಳೆಬಾಳು ಹೊಸಬಾಳು ಬರುತಲಿದೆ
ಬರುತಲಿದೆ ಕುದಿಗೊಂಡು ತರುಣರೆದೆಗಳಲಿ
ತರುಣರಿರ ಎದ್ದೇಳಿ ಎಚ್ಚರಗೊಳ್ಳಿ

ಕುವೆಂಪು ಅಪ್ಪನ ಆಲದ ಮರವೆಂದು ಹಳೆಯ ಕಾಲಕ್ಕೆ ಗಂಟು ಬಿದ್ದು ಕುಳಿತವರಲ್ಲ. ಹೊಸ ಹೊಸ ವಿಚಾರಗಳಿಗೆ ಸ್ಪಂದಿಸಿ ಕರೆಕೊಟ್ಟವರು.

ನಾಡುರಾಷ್ಟ್ರ ಯಾವಾಗಲೂ ತರುಣರ ಕಡೆ ಮುಖ ಮಾಡಿ ದಾಂಗುಡಿ ಇಡುತ್ತಿರುತ್ತದೆ. ದೇಶ ಕಟ್ಟುವ, ಬೆಳಸುವ, ಮುನ್ನೆಡೆಸುವ ಕರ್ತವ್ಯ ತರುಣರ ಹೆಗಲ ಮೇಲಿದೆ. ಹಾಗೆಯೇ ಮುಂದಿನ ವೈಜ್ಞಾನಿಕ ಯುಗಕ್ಕೆ ಅವರನ್ನು ಅಣಿಗೊಳಿಸಬೇಕಿದೆ. ಯುವಶಕ್ತಿ ಸಜ್ಜುಗೊಳಿಸಲು ಕುವೆಂಪು ಮುನ್ನಡೆದ ವಿಜ್ಞಾನಕ್ಕೆ ಶರಣಾಗುತ್ತಾರೆ. ವಿಜ್ಞಾನಿಯನ್ನು ಯಂತ್ರರ್ಷಿ, ಯಂತ್ರ ಋಷಿ ಎಂದು ಕರೆದರು ಹೊಸ ನಾಮಕರಣ ಮಾಡಿದ್ದಾರೆ.

ಯುಗಯುಗದ ಜ್ಞಾನದಿಂದೆಮ್ಮನುತ್ತರಿಸಿ
ವಿಜ್ಞಾನ ವಿದ್ಯೆಯನು ನೀಡಿ ಕಾಪಾಡಿರುವ
ಮಾನವ ಧೀರಮತಿಯೆ, ನೀನಿಂದೆಮಗೆ
ಆರಾಧ್ಯದೇವತೆಯು, ನಿನ್ನ ಪೂಜಿಪನರರು
ಯಂತ್ರರ್ಷಿ ಮಾನವರೆ, ಮಂತ್ರರ್ಷಿಗಳು ನಮಗೆ |
ಹೇ ಪುಣ್ಯ ಯಂತ್ರರ್ಷಿ ನೀನೆಮ್ಮ ವಿಜಗೀಷು
ಮತಿಗೆ ಪ್ರತಿಯಾಗಿ ನಿಂತಿರುವೆ,…..

ಅದರಿಂದ ಕಬ್ಬಿಗನ ವಾಣಿ ನಿನ್ನನು ಕುರಿತು ಹಾಡುತಿದೆ. ಕುವೆಂಪು, ಸಾಹಿತ್ಯ ರಚನೆಯ ಕಾಲದಲ್ಲಿ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಈಗಿನ ಪ್ರಮಾಣದಲ್ಲಿ ಜನಜೀವನಕ್ಕೆ ಲಗ್ಗೆ ಹಾಕಿರಲಿಲ್ಲ. ಇಲ್ಲದಿದ್ದಲ್ಲಿ ಅದಕ್ಕೂ ಸ್ಪಂದಿಸಿ, ಅದರ ನೇರನೇರ್ಪುಗಳನ್ನು ಮೆಚ್ಚಿಕೊಂಡು ಅನಿಷ್ಟಗಳನ್ನು ದಿಕ್ಕರಿಸಿ ನುಡಿಯುತ್ತಿದ್ದರು.

ಅವರ ಗಮನ ಸೆಳೆದ ಮತ್ತೊಂದು ಸಮಾಜಮುಖಿ ಮುಖ್ಯ ಅಂಶವೆಂದರೆ ಭಾರತ ದೇಶದಲ್ಲಿನ ಜನಸಂಖ್ಯಾಸ್ಫೋಟ. ದೇಶದ ಪ್ರಗತಿಗೆ ಮಿತಿಮೀರಿದ ಜನಸಂಖ್ಯೆ ಒಂದು ಶಾಪವಾಗಿದೆ. ಹೊರದೇಶಗಳಲ್ಲಿ ಮಾನವ ಶಕ್ತಿಗೆ ಪರದಾಡಬೇಕಾದ ಸಂಖ್ಯೆಯಲ್ಲಿ ಜನಸಂಖ್ಯೆಯ ಇಳಿಮುಖವಾದರೆ, ನಮ್ಮ ದೇಶದಲ್ಲಿ ಜಾತಿ, ಧರ್ಮ, ಕೋಮು, ನಂಬಿಕೆ ಗಂಡುಮಗುವಿನ ವ್ಯಾಮೋಹ – ಇತ್ಯಾದಿ ವಿಷಯಗಳ ನೆಪವೊಡ್ಡಿ ಜನಸಂಖ್ಯೆಯನ್ನು ನಿಯಂತ್ರಿಸದೆ ಇರುವುದು ದೇಶದ ಪ್ರಗತಿಗೆ ಮಾರಕವಾಗಿದೆ. ಅನೇಕ ಜನಪರ ಧ್ಯೇಯೋದ್ದೇಶಗಳಿಗೆ ತೊಡರುಗಾಲಾಗಿದೆ. ದೇಶದ ಸಂಪತ್ತನ್ನು ಮೀರಿ ಬೆಳೆದಿರುವ ಜನಸಂಖ್ಯೆಯನ್ನು ತಡೆಯದಿದ್ದರೆ ದೇಸಕ್ಕೆ ಉಳಿಗಾಲವಿಲ್ಲ. ಈ ಋತುಸತ್ಯವನ್ನು ಕುವೆಂಪು ಅರವತ್ತು ವರುಷಗಳ ಹಿಂದೆಯೆ ಮನಗಂಡಿದ್ದರು. ಕುಂಟಿತಗೊಳ್ಳಲಿರುವ ಸಮಾಜದ ಏಳಿಗೆಗೆ ಕಂಟಕಪ್ರಾಯವಾಗಿರುವ, ಹುಟ್ಟುವ, ಹುಟ್ಟಲಿರುವ ಜೀವಗಳನ್ನು ತಮ್ಮ ‘ಪ್ರೇತಕ್ಕೂ’ – ಕವನದಲ್ಲಿ ಹೀಗೆ ಪ್ರಶ್ನಿಸಿದ್ದಾರೆ :

ಯಾಕಿಂತು ಕ್ಯೂ ನಿಂತು
ನುಗ್ಗುತ್ತಿರುವಿರಿ ಜನ್ಮಧಾರಣೆಗೆ
ನತದೃಷ್ಟ ಜೀವಿಗಳಿರಾ?
ನಿಮಗೆ ಕಾಣುವುದಿಲ್ಲ ?
ಭೂಮಿ ತುಂಬೆಲ್ಲ
ಜನಸಂಖ್ಯೆ ಏರಿ, ಕಿಕ್ಕಿರಿದು ಮೀರಿ
ಕಂಕಾಲ ಪಂಕ್ತಿ, ಹೊಟ್ಟೆಗಿಲ್ಲ!
ಏನು ಅವಸರ ನಿಮಗೆ?
ಯಾವ ಗರ್ಭವೂ ಏನೋ?
ಯಾರ ಯೋನಿಯೊ ಏನೊ?
ಅಂತು ಹುಟ್ಟಿದರಾಯ್ತು ಭೂಮಿಯಲ್ಲಿ
ಉಸಿರುಗಟ್ಟಿಹುದೇನು ನಿಮಗೆ ಅಲ್ಲಿ ?

ಎಂದು ಪ್ರಶ್ನಿಸಿದ್ದಾರೆ. ಮಿತಿ – ಮೀರಿದ ಜನಸಂಖ್ಯೆಗೆ ಕವಿಯ ತುಡಿತ ಮಿಡಿತಗಳು ಅಂದಿಗಿಂತಲೂ ಇಂದು ಹೆಚ್ಚು ಪ್ರಸ್ತತು ಎನ್ನುವುದನ್ನು ಮನಗಾಣಬೇಕಿದೆ.

ಕಡೆಯ ಹಾಗೂ ಈ ಪ್ರಬಂಧದ ಮುಖ್ಯಭಾಗವೆಂದು ನಾನು ಪರಿಗಣಿಸಿರುವ, ಮಹಿಳೆಯರ ಬಗೆಗಿನ ಕುವೆಂಪು ಅವರ ವಿಚಾರಧಾರೆಯನ್ನು ಸ್ಥೂಲವಾಗಿ ಪರಿಶೀಲಿಸುವ ಪ್ರಯತ್ನ ಮಾಡುತ್ತೇನೆ.

ಕುವೆಂಪು ಅವರ ಒಟ್ಟು ಸಾಹಿತ್ಯ ಸಮುದಾಯದಲ್ಲಿ ಕಾಣುವ ಬಹುತೇಕ ಸ್ತ್ರೀಪಾತ್ರಗಳು ಸಹಾನುಭೂತಿಪರವಾಗಿವೆ. ಆ ಪಾತ್ರಗಳು ಉನ್ನತವಿರಲಿ, ಸಾಮಾನ್ಯವಾಗಿರಲಿ, ಮುಖ್ಯವೊ ಅಮುಖ್ಯವೋ – ಈ ಎಲ್ಲ ಪಾತ್ರಗಳು ಅನುಕಂಪ ಬಯಸುತ್ತವೆ. ಕೆಲವು ಉದಾತ್ತತೆಯ ಮಜಲು ಮುಟ್ಟುತ್ತವೆ.

ಶತಮಾನಗಳಿಂದಲೂ ಜಗತ್ತಿನಲ್ಲಿ ಹೆಣ್ಣನ್ನು ಅತ್ಯಂತ ನಿಕೃಷ್ಟ ರೀತಿಯಲ್ಲಿ ಕಂಡಿರುವ ನಿದರ್ಶನಗಳೇ ಹೆಚ್ಚು. ಇಂದಿಗು ಈ ಭಾವನೆ ಇನ್ನೂ ಜೀವಂತವಿರುವುದು ಈ ಸಮಾಜಕ್ಕೆ ಗೌರವ ತರುವಂಥದ್ದಲ್ಲ. ಈ ಹಿನ್ನೆಲೆಯಲ್ಲಿ ಕುವೆಂಪು ಹೆಚ್ಚಿನ ಸ್ತ್ರೀಪಾತ್ರಗಳನ್ನು ಗೌರವದ ನೆಲೆಗೆ ತಂದು ನಿಲ್ಲಿಸಿ ಸ್ತ್ರೀಸಮುದಾಯ ಅವರನ್ನು ಸ್ಮರಿಸುವಂತೆ ಮಾಡಿದೆ.

ಕುವೆಂಪು ಸಾಹಿತ್ಯದಲ್ಲಿನ ಸ್ತ್ರೀ ಪಾತ್ರಗಳನ್ನು ಮೂರು ನೆಲೆಯಲ್ಲಿ ಸಮೀಕ್ಷಿಸಬಹುದು. ಒಂದು ಕಾವ್ಯ, ಮಹಾಕಾವ್ಯ ಹಾಗೂ ಇತಿಹಾಸದ ನೆಲೆಯಲ್ಲಿ, ಎರಡು : ಅವರ ಸೃಜನಶೀಲ ರಚನೆಗಳಾದ ಭಾವಗೀತೆಗಳಲ್ಲಿ ಮೂರು : ಅವರ ಕಾದಂಬರಿಗಳಲ್ಲಿನ ಸ್ತ್ರೀ ಪಾತ್ರಗಳು, ಇಲ್ಲೆಲ್ಲ ಕುವೆಂಪು ಅವರ ಸ್ಥಾಯೀಭಾವವೆಂದರೆ ಅನುಕಂಪೆ, ಗೌರವ ಹಾಗು ಪೂಜ್ಯ ಭಾವನೆಗಳು. ಆದರೆ ಸಂಚಾರಿ ಭಾವಗಳೂ ಪ್ರಬಲವಾಗಿದ್ದು ಪಾತ್ರಗಳು ಹೆಚ್ಚಿನ ವೈವಿಧ್ಯತೆ ಪಡೆಯುವಲ್ಲಿ ಸಫಲವಾಗಿದೆ.

ಮೂಲ ಮಹಾಭಾರತ, ರಾಮಾಯಣ ಹಾಗೂ ಇತರ ಕಾವ್ಯಗಳಲ್ಲಿನ ದುಷ್ಟಪಾತ್ರಗಳನ್ನು ಗರ್ವಿಷ್ಟ ಪಾತ್ರಗಳನ್ನು ಉದಾತ್ತೀಕರಿಸಿ ಮಾನವ, ಮಹಾಮಾನವನನ್ನಾಗಿ ಚಿತ್ರಿಸುವ ಒಂದು ಪರಂಪರೆ ಜೈನಕವಿಗಳಾದ ಪಂಪ, ರನ್ನ, ನಾಗಚಂದ್ರ, ರತ್ನಾಕರವರ್ಣಿ ಮೊದಲಾದವರಿಂದ ಬೆಳೆದು ಬಂದುದಾದರು ಹಾಗೆ ಉದಾತ್ತೀಕರಿಸುವುದನ್ನು ಸ್ತ್ರೀ ಪಾತ್ರಗಳಿಗೂ ವಿಸ್ತರಿಸಿ ಹೆಚ್ಚು ನ್ಯಾಯ ದೊರಕಿಸಿಕೊಡುವಲ್ಲಿ, ಅರ್ಥಪೂರ್ಣಗೊಳಿಸುವಲ್ಲಿ ಕುವೆಂಪು ಯಶಸ್ವಿಯಾಗಿದ್ದಾರೆ.

‘ಶ್ರೀರಾಮಾಯಣ ದರ್ಶನಂ’ ಬೆರಳ್ಗೆ ಕೊರಳ್, ಬಿರುಗಾಳಿ, ರಕ್ತಾಕ್ಷಿ, ಚಂದ್ರಹಾಸ, ದ್ರೌಪದಿಯ ಶ್ರೀಮುಡಿ, ಮಹಾಶ್ವೇತೆಯ ತಪಸ್ಸು, ಸೀತಾ ಪರಿತ್ಯಾಗ – ಈ ಕೃತಿಗಳಲ್ಲಿ ಕವಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ, ಆದರೂ ಸ್ತ್ರೀ ಸಹಾನುಭೂತಿಪರವಾದ ಧೋರಣೆಯನ್ನು ಮೂಲಪಾತ್ರಗಳಿಗೆ ಕುಂದು ಬರದಂತೆ ಪರಿವರ್ತಿಸಿ ಉದಾತ್ತೀಕರಿಸಿದ್ದಾರೆ. ಕಾವ್ಯದಲ್ಲಿ ಕ್ವಚಿತ್ ರೇಖೆಯಂತೆ ಮಿಂಚಿ ಮಾಯವಾಗುವ, ನೆರಳಿನಂತೆ ಕಂಡು ಸರಿದು ಹೋಗುವ ಪಾತ್ರಗಳಿಗೆ ಮಾಂಸ, ಮಜ್ಜೆ ತುಂಬಿ ಆಕಾರ ಕೊಟ್ಟು ಜೀವ ತುಂಬಿಸಿದ್ದಾರೆ, ಭಾವನೆಗಳಿಂದ ಸ್ಪಂದಿಸಿ – ಪ್ರತಿಸ್ಪಂದಿಸುವ ಚೇತನಗಳಾಗಿ ಅಚ್ಚಳಿಯದ ಜೀವಂತ ಪಾತ್ರಗಳಾಗಿ ಅವು ರೂಪುಗೊಂಡಿವೆ. ಒಂದು ಸಣ್ಣ ಉದಾಹರಣೆ ಎಂದರೆ ರಾಮಾಯಣದ ಎಲ್ಲ ಅನರ್ಥಗಳಿಗೆ ಕಾರಣಳಾದ ಚಂದ್ರನಖಿ ಸಂಪೂರ್ಣ ಪರಿವರ್ತಿತಳಾಗಿ ಕಡೆಗೆ ತನ್ನ ಅಣ್ಣ ರಾವಣನ ಬಳಿ ಬಂದು ಪಶ್ಚಾತ್ತಾಪದಿಂದ ನುಡಿಯುತ್ತಾಳೆ. ‘ಅಣ್ಣಾ, ನನ್ನ ಆಸೆ – ಆಕಾಂಕ್ಷೆ, ಅಹಂಕಾರಗಳೇ ಈ ಎಲ್ಲ ಅನಾಹುತಗಳಿಗೆ ಕಾರಣಗಳಾದುವು. ಇನ್ನು ಸೀತೆಯನ್ನು ರಾಮನಿಗೊಪ್ಪಿಸಿಬಿಡು’ – ಪ್ರಾರಂಭದಲ್ಲಿ ಕಂಡ ರಕ್ಷಸಿಯ ಕೋಪ, ಕ್ರೋಧ,ಆಕ್ರೋಶ, ಮಾತ್ಸಯ್ಗಳೆಲ್ಲಿ? ಕಾವ್ಯದ ಕಡೆಯಲ್ಲಿ ಪಶ್ಚಾತ್ತಾಪದ ಮುದ್ದೆಯಾಗಿ ರಾವಣನ ಬಳಿ ಬಂದು ಬೇಡುವ ಚಂದ್ರನಖಿ ಎಲ್ಲಿ?

ಕುವೆಂಪು ಅವರು ತಮ್ಮ ಭಾವಗೀತೆಗಳಲ್ಲಿ ಕಂಡುಕೊಂಡ ಸ್ತ್ರೀ ಚಿತ್ರಗಳು ಇದಕ್ಕಿಂತಲೂ ವಿಭಿನ್ನವಾಗಿ ಔನ್ನತ್ಯದ ಶಿಖರದಲ್ಲಿ ಮೆರೆಯುತ್ತವೆ. ಇಲ್ಲೆಲ್ಲಾ ಕವಿ ಹೆಣ್ಣನ್ನು ದೇವತೆಯಾಗಿ, ಜನ್ಮದಾತೆ ತಾಯಿಯಾಗಿ, ಪ್ರಾಣದ ಪತ್ನಿಯಾಗಿ, ಪ್ರೀತಿಯ ಪ್ರಣಯಿನಿಯಾಗಿ ಶಕ್ತಿಪ್ರದಾಯಿನಿಯಾಗಿ ಕಂಡಿದ್ದಾರೆ; ಹೆಂಡತಿಯನ್ನು ‘ಮಂಚಯೋಗಿನಿ’ ಎಂದು ಗೌರವದಿಂದ ಸಂಬೋಧಿಸಿದ್ದಾರೆ.

ಕುವೆಂಪು ಮಲೆನಾಡಿನ ವಿಸ್ತೃತ, ವೈವಿಧ್ಯಮಯ ಬದುಕನ್ನು ಚಿತ್ರಿಸುವ ಕಾದಂಬರಿಗಳಲ್ಲಿ ಹೆಣ್ಣುಗಳೇ ಮುಖ್ಯಪಾತ್ರಗಳು. ಕಾನೂರು ಸುಬ್ಬಮ್ಮ ಅತ್ಯಂತ ಕುಸಂಸ್ಕೃತಿಯ ಹೆಣ್ಣಾಗಿ ಅನೇಕರ ಬದುಕಿಗೆ ವಿಷ ಬೀಜವಾಗುತ್ತಾಳೆ. ಕೆಟ್ಟ ಸ್ವಭಾವದ ಹೆಣ್ಣಿನಲ್ಲಿರಬಹುದಾದ ಎಲ್ಲ ದುರ್ಗುಣಗಳಿಗೂ ಆಕೆ ಆಕರವಾಗಿದ್ದಾಳೆ. ಎರಡು ಕಾದಂಬರಿಗಳಲ್ಲಿಯೂ ಗಂಡು – ಹೆಣ್ಣಿನ ಲೈಂಗಿಕತೆ, ಸಾಮಾಜಿಕ ಕಟ್ಟಳೆ, ರೀತಿ-ನೀತಿ, ಸಂಪ್ರದಾಯ, ಮೂಢನಂಬಿಕೆಗಳು – ತುಂಬಿವೆ. ಅವು ನೈಜತೆಗೆ ತೀರಾ ಹತ್ತಿರವಾಗಿವೆ. ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿಯಜನಜೀವನದ ಅಸಂಸ್ಕೃತವೇನೋ ಎಂದು ಭಾವಿಸಿದರೂ, ಅದಕ್ಕಿಂತಲೂ ಹಿಂದಿನದೋ ಎನ್ನಬಹುದಾದ ಇನ್ನೂ ಭೀಕರ – ರೋಚಕ ಜನಜೀವನದ ಪರಿಚಯ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕಾಣಬಹುದು. ಲೇಖಕರೇ ಹೇಳುವಂತೆ ‘ಅದು ನಾಗರಿಕತೆಯ ಐತಿಹಾಸಿಕ ಪ್ರವಾಹಕ್ಕೆ ದೂರವಾದ ಅರಣ್ಯಕ ಪ್ರಪಂಚದ ಕ್ಷುದ್ರ ಅಲ್ಪ ಜಟಿಲ ರಾಗ ದ್ವೇಷಮಯ ಜೀವನ ಜಾಲವಾಗಿದೆ. ಇಲ್ಲಿ ನಡೆಯುವ ಬದುಕಿನ ಬಹುಭಾಗ ಬಲದಿಂದಲೋ, ಕುಯುಕ್ತಿಯಿಂದಲೋ ಹೆಣ್ಣನ್ನು ಹಾರಿಸಿಕೊಂಡು ಹೋಗಿ ಕಾಮಕೇಳಿಯಲ್ಲಿ ಪ್ರವೃತ್ತವಾಗುವುದೇ ಆಗಿದೆ. ಇದು ಬದುಕಿನ ತೀರ ಸಹಜಕ್ರಿಯೆ ಎನ್ನುವಂತೆ ಕಾದಂಬರಿಯ ಉದ್ದಕ್ಕೂ ನಡೆಯುತ್ತದೆ. ಕುಡಿತ, ಕೋಳಿ ಅಂಕ, ಜೂಜು, ಹಾದರ, ಅತ್ಯಾಚಾರ – ಇತ್ಯಾದಿ ಕುಪ್ರಸಿದ್ಧ ಆಗರದ ಚಿತ್ತ ಈ ಕಾದಂಬರಿಯಲ್ಲಿ ಬರುತ್ತದೆ.

ಈ ಎರಡೂ ಕಾದಂಬರಿಗಳ ಹೆಚ್ಚಿನ ಘಟನೆಗಳಿಗೆ ಸ್ತ್ರೀಯರೆ ಕಾರಣ. ಸ್ತ್ರೀಯೆ ಕೇಂದ್ರಬಿಂದು. ಇಲ್ಲಿ ವಿಭಿನ್ನ ವೈಪರೀತ್ಯದ ಹೆಣ್ಣುಗಳನ್ನು ಕಾಣಬಹುದು. ಅವರ ಸ್ವಚ್ಛಂದ ಕ್ರಿಯೆಗಳು ಯಾವ ಮುಚ್ಚುಮರೆಯೂ ಇಲ್ಲದೆ ತೆರೆದುಕೊಂಡಿವೆ. ಸಮಾಜ ವ್ಯವಸ್ಥೆಗೆ ಸಿಲುಕಿ ನಲುಗಿದ ಅನೇಕ ಸ್ತ್ರೀಪಾತ್ರಗಳೂ ಕಡೆಗೆ ಕಾನೂರು ಸುಬ್ಬಮ್ಮಳೂ ಓದುಗರ ಅನುಕಂಪೆಗೆ ಪಾತ್ರವಾಗುವುದನ್ನು ಕಾಣಬಹುದು.

ಮಾನವರೆಲ್ಲ ಒಂದೇ ಮತದವರು. ಅದೇ ಮನುಜಮತವೆಂದರು ಕುವೆಂಪು ‘ಮನುಷ್ಯ ಜಾತಿ ತಾನೊಂದೆ ವಲಂ’ – ಎಂದು ಸಾವಿರದ ನೂರು ವರುಷಗಳ ಹಿಂದೆಯೇ ಸಾರಿದ ೧೦ನೆಯ ಶತಮಾನದ ಕನ್ನಡ ಸಾರಸ್ವತ ಲೋಕದ ಮೇರು ಕವಿ ಪಂಪನ ವಾಣಿಯನ್ನೇ ‘ಮನುಜಮತ’ ಎಂದು ಸಾರಿ ನಮ್ಮ ದಾರಿಗಳೆಲ್ಲ ವಿಶ್ವಪಥವಾಗಬೇಕು, ಮಾನವ ವಿಶ್ವಮಾನವನಾಗಬೇಕು’ – ಎನ್ನುವ ದಿವ್ಯವಾಣಿಯನ್ನು ಮೊಳಗಿದವರು ೨೦ ನೆಯ ಶತಮಾನದ ರಾಷ್ಟ್ರಕವಿ ಕುವೆಂಪು.

ನೂರಾರು ದೇವರುಗಳ ನೂಕಾಚೆ ದೂರ. ಭಾರತಾಂಬೆಯ ಪೂಜಿಸುವ ಬಾರ – ಎಂದು ವಿಶಾಲ ಭೂಮಿಕೆಗೆ ಜನತೆಯನ್ನು ಕೊಂಡೊಯ್ಯುವ, ದೇವರ ಪರಿಕಲ್ಪನೆಯನ್ನು ರಾಷ್ಟ್ರದೇವತೆ ಭಾರತಾಂಬೆಯಲ್ಲಿ ಮೂಡಿಸಿದ ಕವಿ ವಿಭೂತಿ ಕುವೆಂಪು. ಎಲ್ಲವನ್ನು ಸಮದೃಷ್ಟಿಯಿಂದ ಕಾಣುವ, ಏರು – ಪೇರುಗಳಿಲ್ಲದ ಸಮಭಾವ – ಸಮಚಿತ್ತದ ಸ್ವಾಸ್ಥ್ಯ ಸಮಾಜ ನಿರ್ಮಾಣದ ಕನಸು ಕಂಡವರು. ‘ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು’ ಎಂಬ ನವಯುಗವಾಣಿಯನ್ನು ಘೋಷಿಸಿ ನವಮನ್ವಂತರಕೆ ನಾಂದಿ ಹಾಡಿದವರು. ಕರಿಸಿದ್ಧ ಕವನದ ಕಡೆಯ ಭಾಗದ ಓದುವಿಕೆಯಿಂದ ನನ್ನ ಈ ಪ್ರಬಂಧವನ್ನು ಮುಗಿಸುತ್ತೇನೆ. ಕರಿಸಿದ್ದ – ಗಿಡ್ಡಿಯರ ಮಗ, ಬೈರ ಕೆರೆಯಲ್ಲಿ ಮುಳುಗಿ ಸತ್ತಿದ್ದಾನೆ. ಈ ಘಟನೆ ಜಾಗತಿಕ ವೇದಿಕೆಯ ಸುದ್ಧಿಯಾಗಬೇಕು ಎನ್ನುವ ಕವಿಯ ಹಂಬಲ ಸಾಮಾಜಿಕ ಸಮಾನತೆಯ ನೆಲೆಗಟ್ಟಿನ ಮೇಲೆ ನಿಂತ ಮುಕ್ತ ಚಿಂತೆ, ಕವಿಯ ವಿಶ್ವ ವಿಶಾಲ ಪ್ರತಿಭೆಗೆ ಹಿಡಿದ ಕನ್ನಡಿ.

ಯಮನ ಕರುಣಿಕನಾಗ ಕಾಲದೋಲೆಯ ಮೇಲೆ
ಚಿತ್ರಗುಪ್ತನು ಬರೆದು ಚಿತ್ರಿಸಿದನಿಂತೆಂದು
ಪಾರ್ಲಿಮೆಂಟಿನಲೊಬ್ಬ ಭಾಷನದ ಮಾಡಿದನು….
ವಂಗದೇಶದ ಕವಿಯು ನಾಟಕವನಾಡಿದನು….
ಹಿಮಗಿರಿಯ ಮೇಲೊಬ್ಬ ಸಾಧುವಾದನು ಸಿದ್ಧ
ಜರ್ಮನಿಯ ದೇಶದಲಿ ನಡೆದಿದೆ ಮಹಾಯುದ್ಧ
ಕುಪ್ಪಳಿಯ ಕೆರೆಯಲಿ ಬೈರ ಹುಡುಗನು ಬಿದ್ದ….
ಮಡಿದವಗೆ ಮರುಗುವರು ಗಿಡ್ಡಿಕರಿಸಿದ್ದ….
ಹಂಡೆ ನಾಯಿಯು ಮರುಗಿ ಕಣ್ಣೀರು ಕರೆದಿತ್ತು….
ಆಫ್ರಿಕದ ಕಂಬಿ ತಪ್ಪಿದ ರೈಲು ಬಿದ್ದಿತ್ತು….
ಕಾಶಿಯಲಿ ಹಾರವರು ಹೇಳುತಿರುವರು ವೇದ….
ಚಿತ್ರಗುಪ್ತನಿಗಿದೆಯೇ ಮೇಲುಕೀಳಿನ ಬೇಧ!

ಹೀಗೆ ಯಾವ ಮೇಲೂ – ಕೀಳೂ ಇಲ್ಲದ ಸಮಾನತತ್ವದ ಸಮಾಜಮುಖಿ ಚಿಂತಕರಾಗಿ ನವಸಮಾಜದ ನಿರ್ಮಾಣಕ್ಕೆ ಕರೆಕೊಟ್ಟ ಧೀಮಂತ ಕವಿ ಕುವೆಂಪು ಅವರಿಗೆ ನಮೋ ನಮಃ