‘ಬೊಮ್ಮನ ಹಳ್ಳಿ ಕಿಂದರಿಜೋಗಿ’ ಕತನ ಕವನದ ಮೂಲಕ ಮಾಧ್ಯಮಿಕ ಶಾಲೆಯಲ್ಲಿಯೇ ನನ್ನಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಿದವರು ರಾಷ್ಟ್ರಕವಿ ಕುವೆಂಪು. ಕುವೆಂಪು ಅವರ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರಗಳನ್ನು ಕುರಿತು ವಿವೇಚಿಸುವ, ಚಿಂತಿಸುವ, ಮತಿಸುವ ಅವಕಾಶ ಇಂದು ದೊರಕಿದ್ದು ನನಗೆ ಹೆಚ್ಚಿನ ಸಂತಸ ತಂದಿದೆ. ಇಂಥ ಸಂತಸವನ್ನು ಒದಗಿಸಿಕೊಟ್ಟ ಕನ್ನಡ ಸಂಘರ್ಷ ಸಮಿತಿಯ ಎಲ್ಲ ಪದಾಧಿಕಾರಿಗಳಿಗೂ ನನ್ನ ಹಾರ್ದಿಕ ವಂದನೆಗಳು.

ಕುವೆಂಪು ಅವರ ಸಾಹಿತ್ಯ ತನ್ನೆಲ್ಲ ಬಣ್ಣ ಬಣ್ಣದ ಬೆರಗಿನಲ್ಲಿ, ಕಲ್ಪನೆಯ ವಿಹಾರದಲ್ಲಿ, ಪ್ರತಿಭೆಯ ಸೌಂದರ್ಯದಲ್ಲಿ, ಪಾಂಡಿತ್ಯದ ಗಾಂಭೀರ್ಯದಲ್ಲಿ ರಸ ಋಷಿಯ ಔನ್ನತ್ಯದಲ್ಲಿ, ವೈಚಾರಿಕತೆಯ ನಿಕಷದಲ್ಲಿ, ನನ್ನಲ್ಲಿದ್ದ ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿದೆ. ನಾನೂ ಒಬ್ಬ ಲೇಖಕಿಯಾಗಿ ಮಹಿಳೆಯರ ಸಮಸ್ಯೆಗಳ ಬಗೆಗೆ ಪ್ರತಿಕ್ರಿಇಸುವವಳಾಗಿ, ಸಹಜವಾಗಿಯೇ ಮಹಿಳೆಯರ ಪಾತ್ರಗಳ ಬಗೆಗೆ ಹೆಚ್ಚಿನ ಕಾಳಜಿಯಿಂದ ಗಮನ ಹರಿಸಿದ್ದೇನೆ. ಕುವೆಂಪು ಸಾಹಿತ್ಯವನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನಾನು ಅಭ್ಯಾಸ ಮಾಡಿರುವಂತೆ ಅವರು ಚಿತ್ರಿಸಿರುವ ಮಹಿಳಾ ಪಾತ್ರಗಳ ಬಗೆಗೂ ತಕ್ಕಮಟ್ಟಿಗೆ ಅಭ್ಯಾಸ ಮಾಡಿದ್ದೇನೆ.

ಕುವೆಂಪು ಸಾಹಿತ್ಯದಲ್ಲಿನ ಎಲ್ಲ ಮಹಿಳಾ ಪಾತ್ರಗಳನ್ನು ಇಲ್ಲಿ ವಿವೇಚಿಸುವುದು ಸಾಧ್ಯವೂ ಇಲ್ಲ. ಸಾಧುವೂ ಅಲ್ಲ. ಆದ್ದರಿಂದ ಈ ಪ್ರಬಂಧದ ವಿವಕ್ಷೆಯಲ್ಲಿ ಎರಡು ರೀತಿಯ ವಿಷಯ ಪ್ರತಿಪಾದನೆಗೆ ಗಮನ ಹರಿಸಲಾಗಿದೆ. ಒಂದು; ಕುವೆಂಪು ಸಹಿತ್ಯ ಪ್ರಕಾರಗಳಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಸ್ತ್ರೀ ಪರವಾದ ಧೋರಣೆಗಳು, ಎರಡು; ಮೂಲ ವಾಲ್ಮೀಕಿ ರಾಮಾಯಣದಲ್ಲಿ ತೀರಾ ಅಪಜ್ಞೆಯ ಪಾತ್ರಗಳಾಗಿ ಕಾಣಿಸಿಕೊಳ್ಳುವ ಊರ್ಮಿಳೆ, ಅಹಲ್ಯೆ, ಮಂಡೋದರಿ ಮೊದಲಾದ ಪಾತ್ರಗಳಲ್ಲಿ ಮಂಡೋದರಿ ಪಾತ್ರ ಒಂದನ್ನು ಕುರಿತ ಮಹಾಕವಿಯ ಪ್ರತಿಭೆ ಯಾವ ರೀತಿ ಸ್ಪಂದಿಸಿದೆ ಎನ್ನುವುದನ್ನು ಸ್ವಲ್ಪವೇ ವಿವರವಾಗಿ ವಿವೇಚಿಸುವ ನಮ್ರಪ್ರಯತ್ನ ನನ್ನದಾಗಿದೆ.

ಸಮಾಜದಲ್ಲಿ ಸಂಸಾರ ಒಂದು ಪ್ರಮುಖ ಘಟಕ, ಒಂದು ಸುಂದರ ಸಂಸಾರ ಚಿತ್ರದ ಕಲ್ಪನೆ ಬಂದಾಗ ಅದರಲ್ಲಿನ ಗಂಡು – ಹೆಣ್ಣು ಇಬ್ಬರೂ ಮುಖ್ಯರಾಗುತ್ತಾರೆ. ಆದರೆ ಸಮಾಜದಲ್ಲಿ ಗಂಡು ಹೆಣ್ಣನ್ನು ಗುರುತಿಸುವ ರೀತಿ ಬೇರೆಯೇ ಆಗಿದೆ. ಆಕೆ ಎಂದೆಂದಿಗು ಪುರುಷನ ದಾಸಿ, ಅವನ ಭೋಗದ ವಸ್ತು ಎನ್ನುವ ಭಾವನೆಯೇ ಹೆಚ್ಚಾಗಿ ಬೇರೂರಿದೆ.

ಹೆಣ್ಣನ್ನು ಗುರುತಿಸುವ ಪುರುಷವರ್ಗವನ್ನು ಮೂರು ರೀತಿಯಲ್ಲಿ ವಿಭಜಿಸಿ ನೋಡಬಹುದು ಒಂದು; ತೀರಾ ಸಾಮಾನ್ಯ ಸ್ತರದ ಪುರುಷರ ಗುಂಪು, ಎರಡು, ಸ್ವಲ್ಪ ವಿವೇಚನೆ ಇರುವ ಪುರುಷ ಸಮೂಹ, ಮೂರು; ಸಂಸ್ಕಾರಗೊಂಡ ಪುರುಷವರ್ಗ. ಇದರಲ್ಲಿ ಒಂದನೆಯ ವರ್ಗಕ್ಕೆ ಸೇರಿದವನು ಹೆಣ್ಣನ್ನು ಯಾವಾಗಲೂ ತನಗಿಂತ ಕೀಳು ಎಂದು ಭಾವಿಸುತ್ತಾನೆ. ಅದೇ ರೀತಿ ಅವಳೊಡನೆ ವರ್ತಿಸುತ್ತಾನೆ. ಎರಡನೆಯ ವರ್ಗದ ಪುರುಷ. ಸ್ವಲ್ಪವಾದರೂ ವಿವೇಚನೆಯಿಂದ ಆಲೋಚಿಸುವವನು, ಹೆಣ್ಣು ತನಗೆ ಸರಿಸಮಾನಳು ಎಂದು ಭಾವಿಸುತ್ತಾನೆ. ಮೂರನೆ ವರ್ಗದ ಸಂಸ್ಕಾರಗೊಂಡ ಮನಸ್ಸಿನ ಗಂಡು, ಹೆಣ್ಣನ್ನು ಉದಾತ್ತತೆಯಿಂದ ಗೌರವಿಸುತ್ತಾನೆ. ಕುವೆಂಪು ಅವರು ಕಂಡಿರುವ ಸ್ತ್ರೀ ಪಾತ್ರಗಳು ಬಹುವಾಗಿ ಈ ಮುರನೆಯ ವರ್ಗಕ್ಕೆ ಸೇರಿದವುಗಳಾಗಿವೆ. ಹೀಗೆಂದ ಒಡನೆಯೇ ಇತರ, ಸ್ತರಗಳ ಸ್ತ್ರೀ ಪಾತ್ರಗಳು ಇಲ್ಲವೆಂದಲ್ಲ. ಆದ್ದರಿಂದಲೇ ಬಹುವಾಗಿ ಎನ್ನುವ ಪದವನ್ನು ಹೆಚ್ಚು ಒತ್ತುಕೊಟ್ಟು ಬಳಸಿದ್ದೇನೆ.

ಕುವೆಂಪು ಅವರ ಒಟ್ಟು ಸಾಹಿತ್ಯ ಸಮುದಾಯದಲ್ಲಿ ಕಾಣುವ ಬಹುತೇಕ ಸ್ತ್ರೀಪಾತ್ರಗಳು ಸಹಾನುಭೂತಿ ಪರವಾಗಿರುತ್ತವೆ. ಅವು ಉನ್ನತ ಪಾತ್ರವಾಗಲೀ ಸಾಮಾನ್ಯ ಪಾತ್ರವಾಗಲೀ, ಮುಖ್ಯವೇ ಆಗಲಿ ಅಮುಖ್ಯವೇ ಆಗಲಿ ಇವೆಲ್ಲವು ಅನುಕಂಪವನ್ನು ಬಯಸುತ್ತವೆ; ಕೆಲವಂತೂ ಉದಾತ್ತತೆಯ ಹಂತಕ್ಕೆ ಏರುತ್ತವೆ.

ಈ ಹಿನ್ನೆಲೆಯನ್ನು ಆಧಾರವಾಗಿ ಇಟ್ಟುಕೊಂಡು ಕುವೆಂಪು ಅವರ ಸ್ತ್ರೀಪಾತ್ರಗಳನ್ನು ಮೂರು ರೀತಿಯಿಂದ ಸಮೀಕ್ಷಿಷಬಹುದು. ಒಂದು; ಕಾವ್ಯ ಮಹಾಕಾವ್ಯ ಇತಿಹಾಸಗಳ ಆಧಾರದಿಂದ ರಚಿತವಾದ ಕಾವ್ಯ ನಾಟಕಗಳು ಇಲ್ಲಿ ಕಾಣುವ ಸ್ತ್ರೀ ಪಾತ್ರಗಳು, ಎರಡು; ಅವರ ಸ್ವತಂತ್ರ ರಚನೆಗಳಾದ ಭಾವಗೀತೆಗಳಲ್ಲಿನ ಸ್ತ್ರೀಪಾತ್ರಗಳು, ಮೂರು; ಅವರ ಕಾದಂಬರಿಗಳಲ್ಲಿನ ಸ್ತ್ರೀಪಾತ್ರಗಳು, ಇಲ್ಲೆಲ್ಲಾ ಕುವೆಂಪು ಅವರು ಸ್ತ್ರೀಪಾತ್ರಗಳ ಬಗೆಗೆ ತೋರುವ ಸ್ಥಾಯೀಭಾವವೆಂದರೆ, ಅನುಕಂಪೆ, ಗೌರವ, ಪೂಜ್ಯ ಭಾವನೆಗಳು. ಆದರೆ ಸಂಚಾರೀಭಾವಗಳೂ ಪ್ರಬಲವಾಗಿದ್ದು, ಪಾತ್ರಗಳು ಹೆಚ್ಚಿನ ವೈವಿಧ್ಯತೆ ಪಡೆಯುವಲ್ಲಿ ಸಮರ್ಥವಾಗಿವೆ; ಸಫಲವಾಗಿವೆ.

ಮೂಲ ಮಹಾಭಾರತ, ಮೂಲ ರಾಮಾಯಣ ಹಾಗೂ ಮೂಲ ಕಾವ್ಯಗಳಲ್ಲಿನ ದುಷ್ಟ ಪಾತ್ರಗಳನ್ನು, ಗರ್ವಿಷ್ಟ ಪಾತ್ರಗಳನ್ನು ಉದಾತ್ತೀಕರಿಸಿ ಮಾನವ, ಮಹಾಮಾನವವನ್ನಾಗಿ ಚಿತ್ರಿಸುವ ಒಂದು ಪರಂಪರೆ ಜೈನ ಕವಿಗಳಾದ ಪಂಪ, ರನ್ನ, ನಾಗಚಂದ್ರ, ರತ್ನಾಕರವರ್ಣಿ ಮೊದಲಾದವರಿಂದ ಬೆಳೆದು ಬಂದುದಾದರೂ ಹಾಗೆ ಉದಾತ್ತೀಕರಿಸುವುದನ್ನು ಸ್ತ್ರೀ ಪಾತ್ರಗಳಿಗೂ ವಿಸ್ತರಿಸಿ ಹೆಚ್ಚು ಅರ್ಥಪೂರ್ಣಗೊಳಿಸುವಲ್ಲಿ ಕುವೆಂಪು ಅವರು ಯಶಸ್ವಿಯಾಗಿದ್ದಾರೆ.

ಕಾವ್ಯ, ಮಹಾಕಾವ್ಯ ಇತಿಹಾಸಗಳ ಆಧಾರದಿಂದ ರಚನೆಗೊಂಡಿರುವ, ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯ ಬೆರಳ್ ಗೆ ಕೊರಳ್, ಬಿರುಗಾಳಿ, ರಕ್ತಾಕ್ಷಿ, ಚಂದ್ರಹಾಸ ಮುಂತಾದ ನಾಟಕಗಳು ದ್ರೌಪದಿಯ ಶ್ರೀಮುಡಿ, ಮಹಾಶ್ವೇತೆಯ ತಪಸ್ಸು, ಸೀತಾ ಪರಿತ್ಯಾಗ ಮೊದಲಾದ ವಿಮರ್ಶೆಯ ಪ್ರಬಂಧಗಳು ಇಲ್ಲೆಲ್ಲಾ ಕವಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲ. ಆದರೂ ಸ್ತ್ರೀ ಸಹಾನುಭೂತಪರವಾದ ತನ್ನ ಧೋರಣೆಗೆ ಕವಿ ತನ್ನ ಪ್ರತಿಭೆಯ ಸಾಮರ್ಥ್ಯದಿಂದ, ಕಲ್ಪನೆಯ ಕುಂಚದಿಂದ ಮೂಲಕಾವ್ಯದ ಪಾತ್ರಗಳಿಗೆ ಕುಂದು ಬರದಂತೆ ಪರಿವರ್ತಿಸಿದನ್ನು, ಉದಾತ್ತೀಕರಿಸಿರುವುದನ್ನು ಕಾಣಬಹುದು. ಕಾವ್ಯದಲ್ಲಿ ಒಂದು ಕ್ವಚಿತ್ ರೇಖೆಯಂತೆ ಮಿಂಚಿ ಮಾಯವಾಗುವ, ನೆರಳಿನಂತೆ ಕಂಡು ಸರಿದು ಹೋಗುವ ಪಾತ್ರಗಳಿಗೆ ಮಾಂಸ ಮಜ್ಜೆ ತುಂಬಿ ಆಕಾರಕೊಟ್ಟು, ಜೀವಕೊಟ್ಟು ಉಸಿರಾಡಿಸಿ ಭಾವನೆಗಳಿಗೆ ಸ್ಪಂದಿಸಿ, ಪ್ರತಿ ಸ್ಪಂದಿಸುವ ಚೇತನಗಳಾಗಿ, ಅಚ್ಚಳಿಯದ ಜೀವಂತ ಪಾತ್ರಗಳಾಗಿ ಕಡೆದಿರುವ ಹಿರಿಮೆ ಕುವೆಂಪು ಅವರದು. ಒಂದು ಸಣ್ಣ ಉದಾಹರಣೆ ಎಂದರೆ ಚಂದ್ರನಖಿ ರಾಮಾಯಣದ ಎಲ್ಲ ಅನರ್ಥಗಳಿಗೂ ಕಾರಣಳಾದವಳು. ಆದರೆ ಅದೇ ಚಂದ್ರನಖಿ ಸಂಪೂರ್ಣ ಪರಿವರ್ತಿತಳಾಗಿ ತನ್ನ ಅಣ್ಣನ ಬಳಿ ಬಂದು ಪಶ್ಚಾತ್ತಾಪದಿಂದ ನುಡಿಯುತ್ತಾಳೆ “ಅಣ್ಣಾ, ನನ್ನ ಆಸೆ, ಅಹಂಕಾರಗಳೇ ಈ ಎಲ್ಲಾ ಅನಾಹುತಗಳಿಗೆ ಕಾರಣಗಳಾದವು, ಇನ್ನು ಸೀತೆಯನ್ನು ರಾಮನಿಗೊಪ್ಪಿಸಿ ಬಿಡು ಎಂದು ವಿನಮ್ರಳಾಗಿ ಪ್ರಾರ್ಥಿಸುತ್ತಾಳೆ, ಕಾವ್ಯದ ಪ್ರಾರಂಭದಲ್ಲಿ ಕಾಣುವ ಈ ರಕ್ಕಸಿಯ ಕೋಪ, ಕ್ರೋಧ, ಆಕ್ರೋಶ, ಮಾತ್ಸರ್ಯಗಳೆಲ್ಲಿ? ಕಾವ್ಯದ ಕಡೆಯಲ್ಲಿ ಪಶ್ಚಾತ್ತಾಪದ ಮುದ್ದೆಯಾಗಿ ರಾವಣನ ಬಳಿ ಬಂದ ಬೇಡುವ ಚಂದ್ರನಖಿ ಎಲ್ಲಿ?

ಕಾವ್ಯ, ಮಹಾಕಾವ್ಯ, ನಾಟಕಗಳಲ್ಲಿನ ಸ್ತ್ರೀ ಪಾತ್ರಗಳ ಧೋರಣೆ ಈ ರೀತಿಯದಾದರೆ ಅವರ ಭಾವಗಿತೆಗಳಲ್ಲಿ ಕವಿ ಪ್ರತಿಭೆ ಕಂಡುಕೊಂಡ ಸ್ತ್ರೀ ಚಿತ್ರಗಳು ಇದಕ್ಕಿಂತಲೂ ವಿಭಿನ್ನವಾಗಿ ಔನ್ನತ್ಯದ ಶಿಖರದಲ್ಲಿ ಮೆರೆಯುತ್ತವೆ. ಇಲ್ಲೆಲ್ಲಾ ಕವಿ ಹೆಣ್ಣನ್ನು ದೇವತೆಯಾಗಿ, ಜನ್ಮದಾತೆ ತಾಯಿಯಾಗಿ, ಪ್ರೇಮದ ಸಾಕಾರಮೂರ್ತಿಯಾಗಿ ಪ್ರೀತಿಯ ಪ್ರಣಯಿನಿಯಾಗಿ ಶಕ್ತಿ ಪ್ರದಾಯಿನಿಯಾಗಿ ಕಂಡಿದ್ದಾರೆ.

ರಾಮಕೃಷ್ಣ ಪರಮ ಹಂಸರ ಪ್ರಭಾವಕ್ಕೆ ಒಳಗಾದ ಕುವೆಂಪು ಹೆಣ್ಣನ್ನು ಕಂಡಿದ್ದು ದೇವತೆಯಾಗಿ. “ಸತಿಯ ಧ್ಯಾನ ತಪಸ್ಸುಗಳೇ ಪತಿಯ ರಕ್ಷೆ” ಎಂಬ ಭಾವವನ್ನು ಬೆಳೆಸಿಕೊಂಡವರು. ತಮ್ಮ ಪತ್ನಿ ಹೇಮಾವತಿಯಲ್ಲಿಯೇ ಜಗನ್ಮಾತೆಯ ಶಕ್ತಿಯನ್ನು ಗುರುತಿಸಿಕೊಂಡವರು. ಪ್ರಕೃತಿಯಲ್ಲಿ ಕಂಡ ಅದ್ಭುತ ಶಕ್ತಿಗಳೆಲ್ಲಾ ಮಹಾಮಾತೆ, ಜಗನ್ಮಾತೆಯ ಕರುಣೆಯ ಪ್ರಸಾದಗಳಾಗಿ ಕಂಡಿವೆ. ಪತ್ನಿ ಹೇಮಾವತಿಯಲ್ಲಿಯೇ ಹೆಣ್ಣಿನ ಅನೇಕ ಶಕ್ತಿಗಳನ್ನು ಗುರುತಿಸಿದರು. ಪ್ರೀತಿಸಿದರು, ಗೌರವಿಸಿದರು, ನಮಿಸಿದರು.

‘ಸಂಸಾರಿಯನು ಸಲಹು ನೀನು! ಆಶೀರ್ವದಿಸು ನಮ್ಮೀತ್ವರೆದೆಗಳೊಂದಾಗುವಂತೆ’ ಎಂದು ಗುರುದೇವನನ್ನು ಪ್ರಾರ್ಥಿಸಿ ಸಂಸಾರ ಜೀವನಕೆ ಕಾಲಿರಿಸಿದ, ಕವಿ ಪತ್ನಿಯಾಗಿ ಬಂದ ಹೆಣ್ಣನ್ನು ಹೇಗೆ ಕಾಣಬೇಕು, ಹೇಗೆ ಸಹಬಾಳ್ವೆ ನಡೆಸಬೇಕು ಎನ್ನುವುದನ್ನು “ನಾ ನಿನಗೆ ನೀ ನೆನಗೆ ಜೇನಾಗುವ’ ಎಂದು ಹೇಳಿ ಶ್ರುತಪಡಿಸಿದ್ದಾರೆ. ‘ಬಾ, ಬಾರಾ ಸಖಿ’ ಎಂದು ದಾಂಪತ್ಯ ಜೀವನದ, ಸಾಂಸಾರಿಕ ವಿಷಯಗಳ ಎಲ್ಲ ಅನುಭವಗಲು ಅತ್ಯಂತ ಮಧುರವಾಗಿ, ಹಿತಮಿತವಾಗಿ, ಅನುಭಾವಗಳಾಗಿ ಇವರ ಪ್ರಣಯಗೀತೆಗಳಲ್ಲಿ ಒಡಮೂಡಿವೆ. ಹೇಮಾವತಿ ಬಳಿ ಇಲ್ಲದ ಕವಿಗೆ

“ನೀನು ಬಳಿ ಇಲ್ಲದಿರೆ, ಓನಲ್ಲೆ ಹೇಮಾಕ್ಷಿ, ಜಗವೆಲ್ಲ

ಜಡಬಂಡೆ ಬೇಸರದ ಬೀಡು’ ಎನಿಸಿದೆ. ಈ ವಿರಹದ ಜೊತೆಯಲ್ಲಿಯೇ ಪತ್ನಿ ಪ್ರೇಮದ ಆಳದ ಅರಿವು ಆಗುತ್ತದೆ.

ಹೇಮಾಂಗಿಸಿ, ಹೇಮಸತಿ
ಮಮಜೀವನ ಮಧುರತಿ
ಬಾರೆ, ಉಲಿವ ನಲಿವ ಬರಲಿ ವಿಸ್ಮೃತಿಯ
ರಸಮೃತಿ, ಕೇಲಾದಲಿ ತ್ರೈಭುವನು ರಸತರಂಗದಿ” –

ಹೇಮಾವತಿಯನ್ನು ವರ್ಣಿಸಲು ಕವಿಕುವೆಂಪುಗೆ ಶಬ್ದ ಭಂಡಾರ ಸಾಲದಂತೆ! ಹೇಮಾವತಿಯ ನಡೆ-ನುಡಿಯಿಂದ ಕವಿ ಕುವೆಂಪುವನ್ನು ಜನ ತೂಕ ಮಾಡಿ ಅಳೆಯುತ್ತರಂತೆ; ಅಂದರೆ ಹೇಮಾವತಿಯವರ ವ್ಯಕ್ತಿತ್ವದ ಹಿರಿಮೆಯ ಅರಿದಾಗುತ್ತದೆ, ಕವಿ ಕುವೆಂಪು ಅವರ

ರವಿಯುದಕಯೆ, ಶಶಿಯುದಯಕೆ
ಹೂದಿಂಗಳುದಯಕೆ
ಕೃತಿಯ ಮಧುರ ಸದುದಯಕೆ
ಹೇಮಲತೆಯೇ ಹೃದಯವಂತೆ!
ಕಲೆ, ಕೀರ್ತಿ ಸಿರಿಯೆಲ್ಲವೂ ಹೇಮಲತೆ ಇಲ್ಲದಿಲ್ಲ,
ಹೇಮಲತೆಯೇ ಎಲ್ಲ!

ಕವಿಯ ಎಲ್ಲ ಅನುಭವಗಳಿಗೂ, ಅವುಗಳ ಆವೀರ್ಭಾವಕ್ಕೂ ಚೈತನ್ಯ ಶಕ್ತಿಯಾಗಿದ್ದಾರೆ ಹೇಮಲತೆ ಕವಿಯ ಹೃದಯ ಹೇಮಲತೆಯ ವಿರಹದಲ್ಲಿ ಹಿಗೆ ಮೊರೆ ಇಟ್ಟಿದೆ;

ಹೇಮಲತೆ, ಪ್ರೇಮಲಕ್ಷ್ಮಿ
ನನ್ನ ಪಂಚ ಪ್ರಾಣಲಕ್ಷ್ಮಿ
ಗಾಳಿ, ನೀನೆ, ಬೆಳಕು ನೀನೆ
ನನಗೆ, ಮನೆಗೆ ಎಲ್ಲ ನೀನೆ!
ನೀನೆ ಕವಿಗೆ ಹೃದಯ ಭಾವ
ಮೇಣಾತ್ಮಕ ರಸದ ಜೀವ
ಗೃಹಿಣಿ ನೀನೆ ಗೃಹದ ದೇವಿ
ನೀನು ದೂರ ಹೋದರೆ
ಮನಸ್ಸಿದೊಂದು ಹಾಳುಭಾವಿ
ಗೃಹವಿದು ಮನೆ ಎಂಬರೆ,
ತಪ್ಪಲು ಗೃಹ ಲಕ್ಷ್ಮಿಯ ಜೊತೆ
ಒಪ್ಪಿದ ಮನೆಯ ವಿರಹಚಿತೆ

ಸತಿ, ಆಕೆ ಸತಿಯಲ್ಲ, ಕಣ್ಣು ಕೋರೈಸುವ ಮಿಂಚಿನಂತಲ್ಲ. ಧ್ರುವತಾರೆಯಮತೆ, ‘ನೀ ದೇವತಾ ಶಕ್ತಿ, ಹೇಮಾ ಸತಿಯೆ, ನೀನೆ ದೇವತೆ ಎನಗೆ’ – ಎಂದು ಪತ್ನಿಯನ್ನು ದೈವತ್ವಕ್ಕೇರಿಸುವ ಮೂಲಕ ಕುವೆಂಪು ಹೆಣ್ಣನ್ನು ಕಂಡ ಔನ್ನತ್ಯದ ಹಿರಿಮೆಯನ್ನು ಪರಿಚಯಿಸಿದ್ದಾರೆ.

ಕುವೆಂಪು ಅವರಿಗೆ ದಾಂಪತ್ಯ ಎನ್ನುವುದು ಕೇವಲ ಮಡದಿಯೆ? ಪ್ರೇಯಿಸಿ? ಸಹಧರ್ಮಿಣಿ ಹೆಂಡತಿ, ತಾಯಿ? ಲೌಕಿಕ ಸಂಬಂಧಕ್ಕೆ ಬಾಯಿ ತೊದಲಿದಂತೆ, ಆಕೆ ಶ್ರೀ ಜಗನ್ಮಾತೆಯ ವಕ್ಷದ ವಾತ್ಸಲ್ಯ, ಕವಿಯ ಜೀವನಕೆ ಜೀವನಾ, ಸಂಜೀವನಾ ಆಕೆಯಿಂದಲೇ ಕವಿ ಕುವೆಂಪುಗೆ ಮೋಕ್ಷ ‘ನಾನು, ನಾ-ನು, ನಾ…..ನು ಹೇಮಿಗಂಡ’ಎಂದು ಹೇಳಿದಾಗಲೇ ಸಗ್ಗದ ಬಾಗಿಲು ತೆಗೆಯಿತಂತೆ, ವೈಸ್ ಛಾನ್ಸಲರ್, ರಾಷ್ಟ್ರಕವಿ, ಕುವೆಂಪು ಅವರಿಗೆ ಧರ್ಮಪತ್ನಿ ಹೇಮಲತೆಯ ಗಂಡನಾದುದರಿಂದ ಮಾತ್ರಾ ಸಗ್ಗದ ಪ್ರವೇಶ ದೊರೆಯಿತು. ಕವಿಯ ಈ ಕಲ್ಪನೆ ಹೆಣ್ಣಿನ ಪವಿತ್ರ ಪ್ರೇಮದ ಗೌರವದ ದ್ಯೋತಕ.

ಹೇಮಾವತಿಯನ್ನು ಕುರಿತ ಈ ಭಾವನೆಗಳು ಅವರ ಪತ್ನಿಯನ್ನು ಕುರಿತ ಭಾವನೆಗಳು ಮಾತ್ರವೇ ಆಗಿರದೆ ಅವರು ಜಗತ್ತಿನ ಹೆಣ್ಣನ್ನು ಕಂಡ ಪೂಜ್ಯ ಭಾವನೆಯೂ ಆಗಿದೆ. ಈ ಭಾವಗೀತೆಗಳಲ್ಲೆಲ್ಲಾ ಹೆಣ್ಣನ್ನು ಸಹಜ ಸ್ವರೂಪದಲ್ಲಿ ಕಾಣುವಂತೆಯೇ ಆದರ್ಶಮಯವಾಗಿಯೂ ರೂಪಿಸಿರುವುದನ್ನು ಕಾಣುತ್ತೇವೆ.

‘ಮಲೆನಾಡಿನ ಮಹಾಭಾರತವೆಂದು ಪ್ರಸಿದ್ದಿ ಪಡೆದಿರುವ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಮತ್ತು ‘ಮಲೆಗಳಲ್ಲಿ ಮದುಮಗಳು’ – ಕಾದಂಬರಿಗಳಲ್ಲಿ ಕಾಣುವ ಸ್ತ್ರೀ ಪಾತ್ರಗಳ ಚಿತ್ರ ವಿಭಿನ್ನ ರೀತಿಯಿಂದ ಹೆಚ್ಚು ನೈಜವಾಗಿ, ನಿಷ್ಠುರವಾಗಿ ಕಾಣುತ್ತೇವೆ. ಎರಡು ಕಾದಮಬರಿಗಳು ಕನ್ನಡದ ಮಹತ್ – ಕಾದಂಬರಿಗಳೂ ಹೌದು, ಇವುಗಳ ಶೀರ್ಷಿಕೆ ಕುವೆಂಪು ಅವರನ್ನು ಸ್ತ್ರೀಪರವಾದಿಗಳನ್ನಾಗಿ ಮಾಡಿದೆ.

ಮಲೆನಾಡಿನ ವಿಸ್ತ್ರೃತ, ವೈವಿಧ್ಯಮಯ ಬದುಕನ್ನು ಚಿತ್ರಿಸುವ ಈ ಕಾದಂಬರಿಗಳಲ್ಲಿ ಹೆಣ್ಣುಗಳೇ ಕೇಂದ್ರ ಪಾತ್ರಗಳು. ಎರಡೂ ಕಾದಂಬರಿಗಳಲ್ಲಿ ಬರುವ ಎಷ್ಟೊ ಪಾತ್ರಗಳು, ಅದೆಷ್ಟೊ ಘಟನೆಗಳು ಅದೆಷ್ಟೋ ಸಂಸಾರ ಚಿತ್ರಗಳು, ಗಂಡು – ಹೆಣ್ಣಿನ ಸಂಬಂಧದ ಸೂಕ್ಷ್ಮಗಳು, ಕಠೋರತೆಗಳು, ಮಲೆನಾಡಿನ ಐಸಿರಿ, ವೈಭವಗಳು ಹತ್ತಾರು ಕುಟುಂಬ ಜೀವನದ ವೈವಿಧ್ಯಮಯ ಬದುಕು ಒಂದೇ – ಎರಡೇ! ಈ ಎರಡು ಕಾದಂಬರಿಗಳೂ ಎರಡು ಮಹಾ ಗದ್ಯ – ಕಾವ್ಯಗಳೇ ಆಗಿವೆ. ಇವುಗಳಲ್ಲಿ ನೈಜ ಚಿತ್ರಕ್ಕೆ ಹೆಚ್ಚಿನ ಮಾನ್ಯತೆ. ಬದುಕಿನ ಹಾಗೂ ವ್ಯಕ್ತಿಗಳ, ಅತ್ಯಂತ ಸೂಕ್ಷ್ಮ ಸಂಕೀರ್ಣ ಭಾವನೆಗಳು ಇಲ್ಲಿ ಜೀವ ಪಡೆದಿವೆ.

ಕಾನೂರು ಸುಬ್ಬಮ್ಮ ಅತ್ಯಂತ ಕುಸಂಸ್ಕೃತಿಯ ಹೆಣ್ಣಾಗಿ ಅನೇಕರ ಬದುಕಿಗೆ ವಿಷ ಬೀಜವಾಗುತ್ತಾಳೆ. ಕೆಟ್ಟ ಹೆಣ್ಣಿನಲ್ಲಿರಬಹುದಾದ ಎಲ್ಲ ದುರ್ಗುಣಗಳಿಗೂ ಅವಳು ಆಕರವಾಗಿದ್ದಾಳೆ. ಈ ಎರಡು ಕಾದಂಬರಿಗಳಲ್ಲಿಯೂ ಗಂಡು – ಹೆಣ್ಣಿನ ಲೈಂಗಿಕ ವ್ಯವಹಾರ, ಸಾಮಾಜಿಕ ಕಟ್ಟು – ಕಟ್ಟಳೆ, ರೀತಿ – ನೀತಿ, ಸಂಪ್ರದಾಯ, ಮೂಢನಂಬಿಕೆಗಳು ತುಂಬಿವೆ; ಅವು ನೈಜತೆಗೆ ತೀರಾ ಹತ್ತಿರವಾಗಿವೆ. ‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿಯ ಜನ ಜೀವನ ಅಸಂಸ್ಕೃತವೇನೊ ಎಂದು ಭಾವಿಸಬಹುದಾದರೂ ಅದಕ್ಕಿಂತಲೂ ಹಿಂದೆ ಸರಿದರೆ ಇನ್ನೂ ನಿಸರ್ಗಸಹಜ, ರೋಚಕ ಜನಜೀವನದ ಪರಿಚಯ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕಾಣಬಹುದಾಗಿದೆ. ಲೇಖಕರೇ ಹೇಳಿದಂತೆ ಅದು ನಾಗರಿಕತೆಯ ಐತಿಹಾಸಿಕ ಪ್ರವಾಹಕ್ಕೆ ದುರವಾದ ಅರಣ್ಯಕ ಪ್ರಪಂಚದ ಕ್ಷುದ್ರ ಅಲ್ಪ ಜಟಿಲ ರಾಗ – ದ್ವೇಷ ಮಯ ಜೀವನ ಜಾಲ’ವಾಗಿದೆ. ಇಲ್ಲಿ ನಡೆಯುವ ಬದುಕಿನ ಬಹುಭಾಗ ಬಲದಿಂದಲೊ, ಕುಯುಕ್ತಿಯಿಂದಲೊ ಹೆಣ್ಣನ್ನು ಹಾರಿಸಿಕೊಂಡು ಹೋಗಿ ಕಾಮಕೇಳಿಯಲ್ಲಿ ಪ್ರವೃತ್ತವಾಗುವುದೇ ಆಗಿದೆ. ಇದು ಬದುಕಿನ ತೀರಾ ಸಹಜಕ್ರಿಯೆ. ಅಂಕ, ಜೂಜು, ಹಾದರ, ಅತ್ಯಾಚಾರ ಇತ್ಯಾದಿಗಳಿಗೆಲ್ಲಾ ಕುಪ್ರಸಿದ್ಧವಾದ ಆಗರದ ಚಿತ್ರ ಈ ಕಾದಂಬರಿಯಲ್ಲಿ ಬರುತ್ತದೆ.

ಈ ಎರಡು ಕಾದಂಬರಿಗಳ ಹೆಚ್ಚಿನ ಘಟನೆಗಳಿಗೆ ಸ್ತ್ರೀಯರೇ ಕಾರಣ. ಸ್ತ್ರೀಯೇ ಕೇಂದ್ರ ಬಿಂದು. ಇಲ್ಲಿ ವಿಭಿನ್ನ ಸ್ವಭಾವದ, ವಿಭಿನ್ನ ವೈಪರೀತ್ಯದ ಹೆಣ್ಣುಗಳನ್ನು ಕಾಣಬಹುದು ಅವರ ಸ್ವಚ್ಛಂಧ ಕ್ರಿಯೆಗಳು ಯಾವ ಮುಚ್ಚುಮರೆಯೂ ಇಲ್ಲದೆ ತೆರೆದುಕೊಂಡಿವೆ. ಸಮಾಜ – ವ್ಯವಸ್ಥೆಗೆ ಸಿಲುಕಿ ನಲುಗಿದ ಅನೇಕ ಸ್ತ್ರೀ ಪಾತ್ರಗಳೂ, ಕಾನೂರಿನ ಸುಬ್ಬಮ್ಮ ಸಹ, ಕಡೆಗೆ ಓದುಗರ ಅನುಕಂಪಕ್ಕೆ ಪಾತ್ರಳಾಗುವುದನ್ನು ಕಾಣುತ್ತೇವೆ.

ಇನ್ನೂ ‘ರಾಮಾಯಣ ದರ್ಶನಂ’ ಕಾವ್ಯವನ್ನು ಅವಲೋಕಿಸಿದರೆ ಮೂಲ ರಾಮಾಯಣದಲ್ಲಿ ಅವಜ್ಞೆಯ ಪಾತ್ರವಾಗಿರುವ ಸ್ತ್ರೀಪಾತ್ರಗಳಲ್ಲಿ ಮಂಡೋದರಿಯ ಪಾತ್ರವೂ ಒಂದು. ಮೂಲ ಕೃತಿಯಲ್ಲಿ ಕೇವಲ ಎರಡು ಅಥವಾ ಮೂರು ಬಾರಿ ಮಾತ್ರಾ ಕಾಣಿಸಿಕೊಳ್ಳುವ ಮಂಡೋದರಿಯ ಪಾತ್ರ ಕಾವ್ಯದ ಕ್ರಿಯೆಯಾಗಲಿ ಬೀರುವ ಪ್ರಭಾವಕ್ಕಾಗಲೀ, ಕತೆಯ ತಿರುವಿಗಾಗಲೀ ಯಾವುದೇ ರೀತಿಯ ಸಹಾಯವಾಗಿಲ್ಲ. ಸೀತೆಯ ಮೇಲಿನ ಮೋಹದಿಂದ ಆಡುವ ರಾವಣನ ಮಾತುಗಳಲ್ಲಿಯೂ ಮಂಡೋದರಿಯ ಪ್ರಸ್ತಾಪ ಬರುವುದಿಲ್ಲ. ರಾವಣನ ಅಂತಃಪುರದಲ್ಲಿದ್ದ ನೂರಾರು ಸ್ತ್ರೀಯರ ನಡುವೆ ಮಂಡೋದರಿಯನ್ನು ಕಂಡ ಹನುಮಂತ, ಈಕೆಯೇ ಸೀತೆಯೆಂದು ಭ್ರಮಿಸುವ ಸನ್ನಿವೇಶ ಒಂದು. ರಾವಣನ ಮರಣಾನಂತರ ಶವದ ಬಳಿ ಕುಳಿತು ಆತನ ಗುಣ – ಅವಗುಣಗಳನ್ನು, ದೋಷ ದೌರ್ಬಲ್ಯಗಳನ್ನು ಕೊಂಡಾಡುತ್ತಾ ಉನ್ಮತ್ತಳಂತೆ ಪ್ರಲಾಪಿಸುವ ಸನ್ನಿವೇಶ ಎರಡು, ಮಂಡೋದರಿಯ ಪ್ರಲಾಪದಲ್ಲಿ ರಾಮನ ಪರಾಕ್ರಮ, ಸೀತೆಯ ಪಾತಿವ್ರತ್ಯದ ಪರಿಚಯ ಮಾಡಿಕೊಡುವುದರ ಜೊತೆಯಲ್ಲಿಯೇ ರಾವಣನ ಅನುಚಿತ ವರ್ತನೆ ಪಾಪಕರ್ಮದ ಫಲದ ವಾಚಕಿಯಾಗಿ ಕಾಣುತ್ತಾಳೆ.

ಮೂಲ ರಾಮಾಯಣದಲ್ಲಿ ಕಡೆಗಣಿಸಿದ ಪಾತ್ರವಾದ ಮಂಡೋದರಿ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಹೊಸ ಹುಟ್ಟನ್ನು ಪಡೆದಿದ್ದಾಳೆ. ಹೊಸ ರೀತಿಯಲ್ಲಿ ಸೃಷ್ಟಿಯಾಗಿ ಪುನರ್ ಜನ್ಮ ಪಡೆದು, ಉನ್ನತ ಪಾತ್ರವಾಗಿ ಶೋಭಿಸಿದ್ದಾಳೆ. ಈ ಪಾತ್ರವನ್ನು ಸೀತೆಯ ಪಾತ್ರಕ್ಕೆ ಹೊಯ್ ಕೈಯಾಗಿ ಚಿತ್ರೀಸಿರುವುದರಲ್ಲಿ ಕವಿ ಪ್ರತಿಭೆ, ಅವರ ಧೋರಣೆ ಉಜ್ವಲವಾಗಿ ಹೊರಹೊಮ್ಮಿದೆ.

ಈ ಪಾತ್ರವನ್ನು ಉನ್ನತಗೊಳಿಸುವಲ್ಲಿ ಕವಿಯ ಮೇಲೆ ಇತರ ರಾಮಾಯಣ ಕಾವ್ಯಗಳ ಪ್ರಭಾವವು ಇದೆ ಎನ್ನುವುದನ್ನು ಮರೆಯುವಂತಿಲ್ಲ. ಹಿಂದಿನ ಎಲ್ಲ ಕಾವ್ಯಗಳ ಹೆಗಲ ಮೇಲೆ ಕವಿ ನಿಂತಿರುವುದು ನಮಗೆ  ಗೊತ್ತು. ಈ ಋಣವನ್ನು ಹೊತ್ತು ಸಹ ಕವಿ ತುಂಬ ಉದಾರತೆಯಿಂದ ಮಂಡೋದರಿ ಪಾತ್ರವನ್ನು ಔನ್ನತ್ಯದ ತುದಿಗೆ ಮುಟ್ಟಿಸಿದ್ದಾರೆ. ಆಕೆ ಸೀತೆಯಷ್ಟೆ ಪತಿವ್ರತೆಯಾಗಿ, ಸಾಧಕಳಾಗಿ, ತಪಸ್ವಿನಿಯಾಗಿ, ಪತಿ ಹಿತೈಷಿಣಿಯಾಗಿ ಸಾಧಕಳಾಗಿ, ತಪಸ್ವಿನಿಯಾಗಿ, ರಾವಣನ ಉನ್ನತ ವ್ಯಕ್ತಿತ್ವಕ್ಕೆ, ಸಾಧನೆಗೆ, ಹಿರಿಮೆಗೆ, ವಿಜಯಕ್ಕೆ ಕಾರಣಳಾಗಿದ್ದಾಳೆ. ರಾವಣನಲ್ಲಿದ್ದ ಅನೇಕ ರೀತಿಯ ರಾಕ್ಷಸಿ ಸ್ವಭಾವಗಳನ್ನು ತಿದ್ದುವಲ್ಲಿ ಯಶಸ್ವಿಯಾಗಿದ್ದಾಳೆ. ರಾವಣನಿಗೆ ಹಲವಾರು ಹೆಂಡಿರಿದ್ದೂ, ಅವರಲ್ಲಿ ಮಂಡೋದರಿ ಒಬ್ಬಳಾಗಿಲ್ಲ. ರಾವಣ, ಮಂಡೋದರಿಯ ಹಿರಿತನ, ಸ್ಥಾನಮಾನ, ಪ್ರಭಾವಕ್ಕೆ ಸಂಪೂರ್ಣ ವಶನಾಗಿದ್ದಾನೆ.

ಸೀತೆಯ ಬಗೆಗೆ ರಾವಣನಿಗೆ ಎಷ್ಟೇ ಮೋಹವಿದ್ದರೂ ಆಕೆ ಮಂಡೋದರಿಗೆ ದಾಸಿ ಇದ್ದಂತೆ. ‘ನಿನಗೆ ದಾಸಿಯಂ, ಮತ್ತೋರ್ವಳಂ ತರ್ಪೆನಾ ಜನಕ ಜಾತೆಯಂ” ಎಂದು ಹೇಳಿ ಮಂಡೋದರಿಯ ಬಗ್ಗೆ ತನಗಿದ್ದ ಗೌರವವನ್ನು ಸೂಚಿಸಿದ್ದಾನೆ. ಆಕೆ ಆತನ ಹೃದಯವಲ್ಲಭೆ. ಸೀತೆಯನ್ನು ಅಪಹರಿಸಲು ಜನಸ್ಥಾನಕ್ಕೆ ಹೊರಡುವ ರಾವಣ ಸಕಾರಣಗಳನ್ನು ಕೊಟ್ಟು ‘ಸೀತಗೋಸುಗಮೆ ನಾಂ ತಪದಿಂ ಪಡೆದೆನಿತೋ ಶಕ್ತಿಯಂ ತವಿಯಲಾ ಸಂಪದಂ ಸೀತೆಗಾಗಿಯೆ” ಎಂದು ಮಂಡೋದರಿಯ ಅಪ್ಪಣೆಗೆ ಕಾಯುತ್ತಾನೆ. ಆದರೆ ಮಂಡೋದರಿ ತುಟಿ ಬಿಚ್ಚುವುದಿಲ್ಲ. ಕಣ್ಣೀರು ಹರಿಯುತ್ತದೆ. ಅಂದು ಪ್ರಾರಂಭವಾದ ಕಣ್ಣೀರು ಕಡೆಯವರೆಗೂ ಇಂಗುವುದಿಲ್ಲ. ಸವತಿಯರನ್ನು ಸವತಿಯರ ಮೇಲೆ ಪಡೆದ ದುಃಖದ ಬಾಳು ಅವಳದು. ಆದರೂ ಪತಿಯ ಶ್ರೇಯೋಭಿವೃದ್ಧಿಗೆ ನಿರಂತರ ತಪಸ್ವಿನಿ ಆಕೆ. ಸೀತೆಗೆ ತನ್ನನ್ನು ಪರಿಚಯಿಸಿಕೊಳ್ಳುವ ರೀತಿ ಹೀಗಿದೆ :

ನಿನಗೆ ತಂಗೆ, ನಾನಕ್ಕನೆನ್, ವಯಸ್ಸಿನಿಂದಂತೆ ದುಃಖದಿಂ
ನನ್ನವೊಲ್ ಅತಿದುಃಖಿ ಲಂಕೆಯೊಳಗಂತಿಕ್ಕೆ
ಸೃಷ್ಟಿಯೊಳಗಿಲ್ಲಮೆಂದರಿ……

ಇಲ್ಲಿ ಸೀತೆ ದುಃಖಿತೆ ನಿಜ, ಆದರೆ ಅವಳಿಗೆ ಪತಿಯ ಒಲವಿದೆ. ಅದು ಎಂಥ ದುಃಖವನ್ನು ನಿವಾರಿಸಬಲ್ಲದು. ಆದರೆ ಮಂಡೋದರಿಯ ದುಃಖವೇ ಬೇರೆ ರೀತಿಯದು. ಯವ ಗಂಡ ಹೆಂಡತಿಯ ದುಃಖವನ್ನು ಹೋಗಲಾಡಿಸಬೇಕೊ ಅವನೇ ಅವಳ ದುಃಕದ ಮೂಲವಾದರೆ ಅದಕ್ಕೆ ನಿವಾರಣೆ ಎಲ್ಲಿ? ಮಂಡೋದರಿಯ ಪರಿಸ್ಥಿತಿ ಇದು, ಆದರೆ ಮಂಡೋದರಿಯ ದುಃಖವನ್ನು ರಾವಣ ಸಹಿಸಲಾರ. ‘ದೇವಿ, ನಿನಗೆ ಏನು ಕೊರತೆ, ನಿನ್ನ ಕಣ್ಣೀರಿನ ಸೋಂಕಿಗೆ ಭೂದೇವಿ ಬೆಂದು ಹೋಗುತ್ತಾಳೆ’ ಎಂದು ಸಮಾಧಾನ ಪಡಿಸುತ್ತಾನೆ.

‘ಪತಿಯ ಹೃದಯವನ್ನು ಪಡೆಯುವುದಲ್ಲದೆ ಸತಿಗೆ ಬೇರಾವ ಕೊರತೆ ಇರುತ್ತದೆ’ ಎಂದು ಹೇಳುವ ಮಂಡೋದರಿ ಜಗತ್ತಿನ ಎಲ್ಲ ಪತ್ನಿಯರ ಪರವಾಗಿ, ಅವರೆಲ್ಲರ ಮುಖವಾಣಿಯಾಗಿ ಈ ಮಾತುಗಳನ್ನು ಹೇಳಿದ್ದಾನೆ. ಆಗ ರಾವಣ ‘ನಿನ್ನವನೆ ನಾನೇಗಳುಂ’ ಎಂದು ನುಡಿದು ಸಮಾಧಾನ ಪಡಿಸುತ್ತಾನೆ. ಪತಿವ್ರತೆಯ ಹಿರಿಮೆಯನ್ನು ಕೇಳಿದ ಮಂಡೋದರಿ ರಾವಣನಿಗೆ ಎಚ್ಚರಿಕೆ ಕೊಡುತ್ತಾಳೆ; ‘ಹದಿ ಬದೆಯ ಹೃದಯದುರಿ ಲಂಕೆಯಂ ದಹಿಸದೇ? ಕುಲಕ್ಷಯಕ್ಕೆ ಕೂಣೀಯೊಡ್ಡಿದೆ ಮಿಳ್ತು’, ‘ಪ್ರಾಣೇಶ, ದೈತ್ಸೇಂದ್ರ ಮತ್ತೊರ್ವನಿದ್ದಿದ್ದರೆ ಈ ತೆರನ ರಾವಣಂ ತೋರುದಿರ್ದಳ್ ನಿನಗೆ ಹದಿಬದೆಯರಿರ್ಪುದಂ’ ಈ ಹದಿಬದೆಯ ಮಾತಿಗೆ ರಾವಣ ನಿಜಕ್ಕೂ ಹೆದರುತ್ತಾನೆ. ಸತಿಯ ಮುಂದೆ ತನ್ನ ದೀನತೆಯನ್ನು ಪ್ರಾಮಾಣಿಕನಾಗಿ ಒಪ್ಪಿಕೊಳ್ಳುತ್ತಾನೆ.

ನಿನ್ನೊನ್ಮೆ ಹುಬ್ಬು ಗಂಟಿಕ್ಕಿ ಧೈರ್ಯಚ್ಸುತನ್
ದೆಸೆಗೇಡಿ ತಾನ್ ಪರದೇಶಿ ಮೇಣ್ ಶೂನ್ಯ
ಚಿತ್ತಂ ನೀನೆನಗೆ ಶಾಂತಿ, ಸತ್ವಂ, ಆತ್ಮಂ
ನೀನೆನಗೆ ತುತ್ತು ತುದಿಯಾಸೆ, ನೆಲೆ ಕೆಚ್ಚು ಸೈಪು!
ದೇವನೇ ಪೇಸಿ ಬಿಟ್ಟೊಡಂ ಕೆಟ್ಟನಲ್ಲನೆ,
ಪ್ರೇಮಮಯಿ ನೀ ತೊರೆಯೆ ಅನ್ಯೊ ಶೂನ್ಯನೇಂ

ಸೀತೆಯನ್ನು ನೋಡಬೇಕೆನ್ನುವ ಮಂಡೋದರಿಗೆ ರಾವಣ ಹೇಳುತ್ತಾನೆ; ನಿನ್ನ ದರ್ಶನದಿಂದ ಪಾಣ್ಬೆಯಂ ಪತಿವ್ರತೆಯಾಗುತ್ತಾಳೆ ಇನ್ನು ಸೀತೆಯ ಮಾತಿರಲಿ, ಎನ್ನುತ್ತಾನೆ. ಮಂಡೋದರಿಯ ಪತಿಪ್ರತಾ ಶಕ್ತಿಯ ಮೌಲಿಕತೆಗೆ ಇನ್ನೆಂಥ ಉದಾಹರಣೆ ಬೇಕು.

ಮಂಡೋದರಿ ಕೊಟ್ಟ ಪ್ರಸಾದವನ್ನು ಹಣೆಗೊತ್ತಿಗೊಂಡು ‘ನೀಂ ಮಹಿಮಳ್ ಆನ್ ಅಲ್ಪನೆಂ, ದೇವಿ ನಿನ್ನೊಳ್ದು ಶಿಕ್ಷಿಸಲಿ, ರಕ್ಷಿಸಲಿ ಧನ್ಯನಾಂ’ ಎನ್ನುವ ರಾವಣನ ಮಾತುಗಳಲ್ಲಿ ಮಂಡೋದರಿಯ ಆತ್ಮಶಕ್ತಿ ಎಷ್ಟು ಉನ್ನತವಾದುದು ಎನ್ನುವುದರ ಅರಿವಾಗುತ್ತದೆ.

ಮಂಡೋದರಿಯ ಕೀರ್ತಿ ಕೇಳಿದ್ದ ಸೀತೆ ಮಂಡೋದರಿಗೆ ನಮಿಸಿದಾಗ ‘ನಾನಸುರಿ, ನಮಿಸದಿರೆನಗೆ ಆರ್ಯೆ, ಎಂದು ತಡೆಯುತ್ತಾಳೆ. ‘ಹದಿಬದೆತನಕೆ ಮೀರ್ವ ಸಾಧನೆಯಿಲ್ಲ ತಂಗಿ’, ಎಂದು ‘ನೀನು ಅಗ್ನಿ, ನಿನ್ನ ಅಗ್ನಿ ಸ್ಪರ್ಶದಿಂದ ತನ್ನ ಪತಿ ರಾವಣನ ಪಾಪದ ಕೊಳೆ ನಾಶವಾಗಲಿ, ಎಂದು ಪ್ರಾರ್ಥಿಸುತ್ತಾಳೆ. ಒಬ್ಬ ಪತಿವ್ರತೆ ಮಾತ್ರಾ ಮತ್ತೊಬ್ಬ ಪತಿವ್ರತೆಯ ಶಕ್ತಿಯನ್ನು ಅರ್ಥಮಾಡಿಕೊಳ್ಳಬಲ್ಲವಳಾಗುತ್ತಾಳೆ.

ತನ್ನಲ್ಲಿ ನಯ ವಿನಯ ಪ್ರೀತಿ ಗೌರವಗಳಿಂದ ತಪಶ್ಸಕ್ತಿಯಿಂದ ಗಂಡನನ್ನು ತಿದ್ದುವ ಎಚ್ಚರಿಸುವ ಕ್ರಿಯೆಯಿಂದಾಗಿ ಕಡೆಗೆ ರಾವಣ ಪರಿವರ್ತಿತವಾಗುತ್ತಾನೆ. ‘ಸೀತೆಯಂ ಸೇವಿಸುತ್ತಿರು ರಾಮನಂ ಗೆಲ್ದು ಸೆರೆವಿಡಿದು ತರ್ಪನ್ನೆಗಂ’ ಎಂದು ಮಡಿದಿಗೆ ಬಿನ್ನವಿಸಿ ಹೋದ ರಾವಣ ರಾಮಬಾಣಕ್ಕೆ ಗುರಿಯಾಗಿ, ಸಾವು ಸಮೀಪಿಸುವಲ್ಲಿ ಮಂಡೋದರಿಯ ಬಳಿಗೆ ಬಂದು, ತನಗೆ ನಾಟಿದ್ದ ರಾಮ ಬಾಣವನ್ನೇ ರಾಮನೆಂದು ಭಾವಿಸಿ, ಅದಕ್ಕೆ ಸೀತೆಯನ್ನು ಅರ್ಪಿಸುವಂತೆ ಮಂಡೋದರಿಗೆ ತಿಳಿಸಿ ಅಸು ನೀಗುತ್ತಾನೆ. ತಾನು ಗೆಲ್ಲಲಾರದ ರಾಮನಿಗೆ ಸೀತೆಯನ್ನು ಅರ್ಪಿಸಲಾಗದಿದ್ದರೂ ಅವನ ಬಾಣಕ್ಕೇ ಸೀತೆಯನ್ನು ಅರ್ಪಿಸುವಂತೆ ಕೇಳಿಕೊಳ್ಳುವ ಪರಿವರ್ತನೆ ಹೊಂದಿದ ರಾವಣನ ಪಾತ್ರ, ಸಂಪೂರ್ಣವಾಗಿ ಕುವೆಂಪು ಅವರ ಮಂಡೋದರಿಯಿಂದ ಮಾತ್ರ ಸಾಧ್ಯವಾಗಿದೆ.

ಕುವೆಂಪು ಅವರ ರಸ ಋಷಿ ಪ್ರತಿಭೆ ಮಂಡೋದರಿ ಪಾತ್ರದಿಂದ ಜಡವನ್ನು ಚೇತನಗೊಳಿಸಿದೆ. ಅಲ್ಪವನ್ನು ಕಲ್ಪವಾಗಿಸಿದೆ. ಮೂಲಕ ತೆಳುರೇಖೆ ತನ್ನೆಲ್ಲಾ ಆಕಾರ, ಶಕ್ತಿ ಚೇತನ ಪಡೆದು, ಸೌಂದರ್ಯ, ಗೌರವ ಮನ್ನಣೆಗಳಿಗೆ ಪಾತ್ರವಾಗಿದೆ; ಗಟ್ಟಿತನ ಪಡೆದಿದೆ. ಅಲ್ಪದರಲ್ಲಿಯೂ ಬೃಹತ್ತನ್ನೂ, ಮಹತ್ತನ್ನು ಖಂಡರಿಸುವ ದಾರ್ಶನಿಕ ಕವಿ ಕುವೆಂಪು ಮಂಡೋದರಿಯನ್ನು ಧನ್ಯಳಾಗಿಸಿದ್ದಾರೆ; ಅಮರತ್ವಕ್ಕೇರಿಸಿದ್ದಾರೆ. ಕುವೆಂಪು ಅವರ ಪ್ರತಿಭೆ ಹಾಗೂ ಧೋರಣೆ, ಹೆಚ್ಚಿನ ಧೀನಶಕ್ತಿಯನ್ನು ಹೆಚ್ಚಿಸಿರುವುದು ಮಾತ್ರವಲ್ಲ. ಆಕೆಗೆ ವಿಶೇಷ ಗೌರವ ಮನ್ನಣೆಯನ್ನು ನೀಡಿ ಸ್ತ್ರೀ ಪರ ಹೋರಾಟದ ಕ್ರಿಯೆಗಳಾಗಿ ಮೂಡಿವೆ.