(ಸಂಖ್ಯಾದೃಷ್ಟಿಯಿಂದ ಕನ್ನಡದಲ್ಲಿ ಈ ಐವತ್ತು ವರ್ಷಗಳಲ್ಲಿ ಜೀವನ ಚರಿತ್ರೆಗಳು ಸಾಕಷ್ಟು ಬಂದಿರಬಹುದು. ಇವುಗಳಲ್ಲಿ ಬೇರೆಯ ಭಾಷೆಗಳಿಂದ ಅನುವಾದಗೊಂಡ ಕೃತಿಗಳನ್ನೂ ಅನೇಕ ಪುಸ್ತಕಗಳನ್ನು ಆಧರಿಸಿ ಬರೆದ ಗ್ರಂಥಗಳನ್ನೂ ಬಿಟ್ಟರೆ – ಕಂಡು ಕೇಳಿದ ಸಂಗತಿಗಳು, ಮೂಲ ದಾಖಲೆಗಳು, ಕೃತಿನಾಯಕನ ಪತ್ರವ್ಯವಹಾರ ಮುಂತಾದ ಮೂಲಾಧಾರಗಳನ್ನು ಆಶ್ರಯಿಸಿ ಬರೆದ ಸ್ವತಂತ್ರ ಜೀವನ ಚರಿತ್ರೆಗಳು ವಿರಳವೆಂದೇ ಹೇಳಬೇಕು. ಹೀಗಿದ್ದರೂ ‘ಸಾಹಿತ್ಯ ಮೌಲ್ಯ ಹಾಗೂ ಅಂತಸ್ಸತ್ವದ ದೃಷ್ಟಿಯಿಂದ ತುಂಬ ಅಮೂಲ್ಯವಾದ ಕೆಲವು ಜೀವನ ಚರಿತ್ರೆಗಳು ಕನ್ನಡದಲ್ಲಿ ಪ್ರಕಟವಾಗಿವೆ’ ಎಂಬ ಲೇಖಕಿಯ ಮಾತನ್ನು ಒಪ್ಪಬೇಕಾಗುತ್ತದೆ.)

ಬಾಳಿನ ಏಳುಬೀಳುಗಳ ಹೋರಾಟದಲ್ಲಿ ಮಾನವ ತೋರುವ ಸಾಹಸ – ಯುಕ್ತಿಗಳ ಪ್ರತಿಪಾದನೆಯೇ ಜೀವನಚರಿತ್ರೆ. ಅದು ಒಂದು ದೇಶ ಅಥವಾ ಒಂದು ಜನಾಂಗದ ಚರಿತ್ರೆಯಲ್ಲ. ಒಬ್ಬ ವ್ಯಕ್ತಿಯ ಚರಿತ್ರೆ. ಆತ ದೇಶ ಇಲ್ಲವೆ ಜನಾಂಗವನ್ನು ರೂಪಿಸಿದವನಾಗಿರಬಹುದು. ಆ ವ್ಯಕ್ತಿಯ ಬದುಕನ್ನು ಸಾಹಿತ್ಯಿಕವಾಗಿ ನಿರೂಪಿಸಿದಾಗ ಜೀವನ ಚರಿತ್ರೆ ರೂಪುಗೊಳ್ಳುತ್ತದೆ. ಹೀಗಾಗಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಜೀವನ ಚರಿತ್ರೆಯೂ ಒಂದು. ಜೀವನ ಚರಿತ್ರೆ ಕೆಲವೊಮ್ಮೆ ಕಾದಂಬರಿಯಂತೆ ಮೇಲುನೋಟಕ್ಕೆ ಕಂಡುಬಂದರು ಅಪಾತತಃ ಅವೆರಡೂ ಬೇರೆ. ಜೀವನ ಚರಿತ್ರೆಯಲ್ಲಿ ಕಾದಂಬರಿಯ ಸ್ವಾತಂತ್ರ್ಯ ಕಲ್ಪನೆಗಳಿಗೆ ಅವಕಾಶವಿಲ್ಲ. ನಡೆದುದನ್ನು ನಡೆದಂತೆ ನಿರೂಪಿಸಬೇಕಾಗುತ್ತದೆ ಜೀವನ ಚರಿತ್ರೆಯಲ್ಲಿ. ಈ ದೃಷ್ಟಿಯಿಂದ ಇದು ಚರಿತ್ರೆಗೆ ಹತ್ತಿರವಾಗುತ್ತದೆ.

ಉತ್ತಮವಾದ ಜೀವನ ಚರಿತ್ರೆಯಿಂದ ಆನಂದಾನುಭವವೂ ಅದರಲ್ಲಿನ ಲೋಕ ಸ್ವರೂಪ ನಿರೂಪಣದಿಂದ ಬೋಧೆಯೂ ಜ್ಞಾನೊದಯವೂ ಚರಿತ್ರಾರ್ಹ ಆದರ್ಶ ವ್ಯಕ್ತಿಯ ಜೀವನಾದರ್ಶವೂ ದೊರೆಯುತ್ತವೆ. ಆ ಬಗೆಯಾದ ರಸಸ್ಯಂದಿಯದ ಜೀವನ ಚರಿತ್ರೆಯನ್ನು ರಚಿಸಬೇಕಾದರೆ, ಲೇಖಕ ತನ್ನ ಧ್ಯೇಯ ಧೋರಣೆಗೆ ಅನುಗುಣವಾದ ವ್ಯಕ್ತಿಯನ್ನೇ ಆರಿಸಿಕೊಳ್ಳುವುದು ಲೇಸು. ಇದರಿಂದ ಮನೋಧರ್ಮದಲ್ಲಿ ಹೊಂದಾಣಿಕೆ ಮೂಡಿರುತ್ತದೆ. ಎರಡನೆಯದಾಗಿ, ಕೃತಿನಾಯಕನಿಗೆ ಸಂಬಂಧಿಸಿದ ದಿನಚರಿ, ಕಾಗದಪತ್ರ, ಕೃತಿಗಳು, ಸಮಕಾಲೀನರ ಮತ್ತು ಸ್ನೇಹಿತರ ಹೇಳಿಕೆಗಳು ಸಂವಾದ ಸಂಭಾಷಣೆ ಸಂದರ್ಶನ – ಇವೆಲ್ಲವನ್ನು ಸಂಗ್ರಹಿಸಬೇಕಾಗುತ್ತದೆ. ಸಂಗ್ರಹ ಕಾರ್ಯದಲ್ಲಿ ಎಚ್ಚರದೊಡನೆ ಔಚಿತ್ಯ ಪ್ರಾಮಾಣಿಕತೆಗಳೂ ಬೆರೆತಿರಬೇಕು. ಇತಿಹಾಸ ಸೇರಿದರು ಅದೇ ಪ್ರಧಾನವಾಗಬಾರದು. ಚರಿತ್ರೆ, ಹಾಸಾಗಿ, ಜೀವನ ಹೊಕ್ಕಾಗಿ ಜೀವನ ಚರಿತ್ರೆಯ ನೇಯ್ಗೆ ಸಿದ್ಧವಾಗಬೇಕು. ಒಳ್ಳೆಯ ಬದುಕು ಬಾಳಿದ ವ್ಯಕ್ತಿಗಳು ಕಡಿಮೆಯಾದರೂ ಒಳ್ಳೆಯ ಜೀವನ ಚರಿತ್ರಕಾರರು ಇನ್ನೂ ಕಡಿಮೆ ಎಂದು ಹೇಳಲು ಇದೇ ಕಾರಣ.

ಮಹಾಪುರುಷ ಜೀವನ ಚರಿತ್ರೆಗಳು ಸಾಹಿತ್ಯವನ್ನು ಪುಷ್ಟಿಗೊಳಿಸುವುದರ ಜೊತೆಗೆ ಜನತೆಗೆ ಶ್ರೇಷ್ಠವಾದ ಮಾರ್ಗದರ್ಶನ ತೋರುತ್ತವೆ. ಹಾಗೆ ನೋಡುವುದಾದರೆ ಜನಜೀವನದ ನಾನಾ ಕ್ಷೇತ್ರಗಳಲ್ಲಿ ಹಿರಿಯ ಹೆಸರು ಗಳಿಸಿದ ಮಹಾವ್ಯಕ್ತಿಗಳ ಜೀವನ ಚರಿತ್ರೆಗಳು ಇತಿಹಾಸದ ತಿರುಳು ಕೂಡ ಹೌದು. ಒಂದು ದೇಶದ ಚರಿತ್ರೆಯೆಂದರೆ, ಒಂದು ದೃಷ್ಟಿಯಿಂದ ನೋಡಿದರೆ, ಅದನ್ನು ಬೆಳಗಿದ ತ್ಯಾಗಜೀವಿಗಳ ಜೀವನ ಚರಿತ್ರೆಯೇ ಆಗಿರುತ್ತದೆ. ಸಮಾಜ ಸುಧಾರಣೆಯ ವಿಚಾರದಲ್ಲಾಗಲಿ, ರಾಜಕೀಯ ಹೋರಾಟದಲ್ಲಾಗಲಿ, ಆಡಳಿತ ನಿರ್ವಹಣ ಸಾಮರ್ಥ್ಯದಲ್ಲಾಗಲಿ, ಗ್ರಂಥ ರಚನಾ ನೈಪುಣ್ಯದಲ್ಲಾಗಲಿ, ಸಾಹಿತ್ಯ ಸಾಮ್ರಾಜ್ಯದಲ್ಲಾಗಲಿ ಸರ್ವಶ್ರೇಷ್ಠರೆನಿಸಿದ ಮಹನೀಯರ ಬದುಕು ಅನಂತರದ ಜನತೆಗೆ ದಾರಿದೀಪ. ಒಂದು ಗುರಿಯನ್ನು ಮುಟ್ಟಬೇಕೆಂಬ ಉತ್ಕಟೇಚ್ಛೆಯಿಂದ ಏನೇ ಕಷ್ಟನಷ್ಟಗಳು ಬರಲಿ ಅವುಗಳನ್ನೆಣಿಸದೆ, ನದಿಯು ಎದುರಿಗೆ ಬಂದ ಬೆಟ್ಟಗುಡ್ಡಗಳನ್ನು ಬಳಸಿಯೋ ಕೊರೆದುಕೊಂಡೋ ಮುಂದೆ ಸಾಗುವಮತೆ, ಎಡರುತೊಡರುಗಳನ್ನು ಜಯಿಸುವ ಆ ಧೀಮಂತರ ಬಾಳು ಸ್ಫೂರ್ತಿಯ ಚಿಲುಮೆ.

ಸಾಹಿತಿಗಳ ರಾಜಕಾರಣಿಗಳ, ರಾಜಮಹಾರಾಜರ ಜೀವನ ಚರಿತ್ರೆಗಳು ಹಲವು ದೃಷ್ಟಿಗಳಿಂದ ಅವಶ್ಯ ಹಾಗೂ ಅಭ್ಯಸನೀಯ. ವ್ಯಕ್ತಿ ಹಾಗೂ ಅವನ ಕೃತಿಗಳಲ್ಲಿ ಕಾರ್ಯಕಾರಣ ಸಂಬಂಧವಿದ್ದೇ ಇರುತ್ತದೆ. ಸಾಮಾನ್ಯವಾಗಿ ಬರವಣಿಗೆ ಬಹುಮಟ್ಟಿಗೆ ವಸ್ತುನಿಷ್ಠವಾಗಿರುತ್ತದೆ. ಅದರ ಲೇಖಕನಿಗೂ ಬರಹಕ್ಕೂ ಹೊಕ್ಕಳಬಳ್ಳಿ ಸಂಬಂಧ ಅನಿವಾರ್ಯವಾಗಿ ಮೇಳಗೊಂಡಿರುತ್ತದೆ. ಈ ತೆರನಾದ ಜನಕ – ಜನ ಸಂಬಂಧ ಕೃತಿಗಳಲ್ಲಿ ಅಂತರ್ನಿಹಿತವಾಗಿರುವುದರಿಂದಲೇ ಸಾಹಿತಿಗಳ ಹಾಗೂ ಇತರ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ಆತ್ಮಚರಿತ್ರೆ ಅಮೂಲ್ಯವೆಂದು ಪರಿಗಣಿತವಾಗಿರುವುದು. ಇದಲ್ಲದೆ ಜೀವನ ಚರಿತ್ರೆಗಳ ನೆರವಿನಿಂದ ಸಾಹಿತ್ಯ ಸಂಶೋಧನೆ, ಸಾಹಿತ್ಯ ಚರಿತ್ರೆಗಳ ರಚನೆ ಲಾಭದಾಯಕವಾಗುತ್ತದೆ.

ಜೀವನ ಚರಿತ್ರೆಗಳು ಇನ್ನೂ ಹಲವು ವಿಧವಾದ ಸಾಮಗ್ರಿಗಳನ್ನು ದೊರಕಿಸಿ ಕೊಡುವುದುಂಟು. ವ್ಯಕ್ತಿಯ ನಿಡುಬಾಳಿನ ವ್ಯಕ್ತಿತ್ವವೆಲ್ಲ ಆ ಆತ್ಮಕಥೆಯಲ್ಲಿ ವ್ಯಾಪಿಸಿಕೊಂಡಿರುವುದರಿಂದ ಒಂದು ಸಮಗ್ರ ಚಿತ್ರ ರೂಪಿಸಲು ಸಾಧ್ಯ. ಮಮಕಾರರಹಿತನಾಗಿ ಕೃತಿಕಾರ ಕೃತಿರಚನೆ ಮಾಡಿದರು ಲೇಖಕನ ವ್ಯಕ್ತಿತ್ವದ ವರ್ಚಸ್ಸು ಅದರಲ್ಲಿ ಮುದ್ರಿತವಾಗಿರುತ್ತದೆ. ಇದಕ್ಕೆ ಮೂಲಕಾರಣ, ಮೇಲೆ ಹೇಳಿದಂತೆ, ಕೃತಿ ಹಾಗೂ ಕೃತಿಕಾರರಲ್ಲಿ ಕಾಣುವ ಗುಪ್ತಗಾಮಿನಿಯಾಗಿ ಗಮಿಸುವ ಜನ್ಯಜನಕ ಸಂಬಂಧ. ಬರಹಗಾರನ ರುಚಿಶುಚಿಗಳಿಗೆ, ಅಭಿರುಚಿ ಅನಿಸುವಿಕೆಗಳಿಗೆ ಅನುಗುಣವಾಗಿ ಪಾತ್ರ, ಅಭಿನಯ ಸನ್ನಿವೇಶ, ಸಂದರ್ಭಗಳು ಸೃಷ್ಟಿಯಾಗುತ್ತವೆ. ಬರಹಗಾರನೇ ಕೃತಿಯ ನಿರ್ದೇಶಕ; ಅದರ ಸಂಪೂರ್ಣ ಸೂತ್ರಧಾರಿ, ಪಾತ್ರಧಾರಿ. “ಒಟ್ಟಿನಲ್ಲಿ ಕೃತಿಕಾರನ ರಕ್ತದ ರುಚಿ, ಬೆವರಿನ ಸೊಗಡು, ನಾಡಿಯ ಮಿಡಿತ (ಕೃತಿಯಲ್ಲಿ) ಸೇರಿಕೊಂಡಿರುತ್ತವೆ” (ದೇಜಗೌ, ‘ಸಾಹಿತಿಗಳ ಸಂಗದಲ್ಲಿ’; ೧೯೬೪).

ಒಂದು ಬಗೆಯ ಅವಿನಾಭಾವದ ಬಾಂಧವ್ಯ, ಕೃತಿ ಮತ್ತು ಕೃತಿಕಾರನ ನಡುವೆ ಅಲ್ಪಸ್ವಲ್ಪ ಪ್ರಮಾಣದಲ್ಲೇ ಆಗಲಿ ಅಡಗಿರುತ್ತದೆ. ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಕುಲದ ವಿಚಾರವಾಗಿ ಕರ್ಣನ ಬಾಯಿಂದ ಆಡಿಸಿದ ಮಾತುಗಳಿಂದ ಅವನ ಕಾಲದ ಸಮಾಜದಲ್ಲಿದ್ದ ಜಾತಿಮತಕ್ಕೆ ಸಂಬಂಧಿಸಿದ ಕಟ್ಟುಪಾಡುಗಳ ಒಂದು ಚೌಕಟ್ಟು ದೊರೆಯುತ್ತದೆ. ಆಂಡಯ್ಯ ಕನ್ನಡದ ಕೆಚ್ಚನ್ನೇ ರೊಚ್ಚಿಗೆದ್ದಂತೆ ಮೂಡಿಸಿರುವುದನ್ನು ನೋಡಿದರೆ ಆತ ತನ್ನ ಸುತ್ತಮುತ್ತನ ಸನ್ನಿವೇಶ ಹಾಗೂ ಆತ ಬೆಳೆದ ವಾತಾವರಣದ ಒತ್ತಡ ಸಂಸ್ಕೃತದ ಪರವಾಗಿ ಎಷ್ಟು ತೀವ್ರವಾಗಿತ್ತೆಂಬುದು ತಿಳಿದು ಬರುತ್ತದೆ. ಕಾಳಿದಾಸನ ಕಾವ್ಯಗಳಲ್ಲಿ ಸಮಗ್ರ ಭಾರತದ ಸುಂದರ ನಿಸರ್ಗದ ವರ್ಣನೆಯನ್ನು ಪರಿಭಾವಿಸಿದರೆ ಅವರು ಆಸೇತು ಹಿಮಾಚಲದವರೆಗೆ ಸಂಚರಿಸಿರಬೇಕೆಂದು ಭಾಸವಾಗುತ್ತದೆ. ನಯಸೇನನ ಜಾನಪದ ಶೈಲಿಯ ವಿವರಣೆಕಂಡಾಗ ಆತ ಸಮಕಾಲೀನ ಸಮಾಜದ ನಿಕಟ ಸಂಪರ್ಕವನ್ನೂ ಜನಜೀವನದ ವಿಚಾರ ಸಮ್ಮಥನದ ಜಾಡನ್ನೂ ಗುರುತಿಸಿರುವುದು ಗಮನಕ್ಕೆ ಬರುತ್ತದೆ.

ಈ ಮಾತುಗಳಿಂದ ಬರಹಗಾರನ ಬಾಳಿನ ಯಥಾವತ್ತಾದ ಪ್ರತಿಬಿಂಬ ಅವನ ಬರವಣಿಗೆಯಲ್ಲಿ ಕಾಣಸಿಗುತ್ತದೆಂದು ತಿಳಿಯಬಾರದು. ಇದರಲ್ಲೂ ಹಲಕೆಲವು ಇತಿಮಿತಿಗಳುಂಟು. ಏನೇ ಆದರೂ ಜೀವನ ಚರಿತ್ರೆಗಳು ಸ್ವಾಗತಾರ್ಹ ಸಾಹಿತ್ಯ ವಿಭಾಗ, ಕನ್ನಡ ಕವಿಗಳ ಜೀವನ ಚರಿತ್ರೆಯ, ಆತ್ಮಚರಿತ್ರೆಯ ಮಾತು ಹಾಗಿರಲಿ, ತೀರ ಅವರೂಪ ಕವಿಯ ಜೀವಿತ ವೃತ್ತಾಂತದಲ್ಲಿ ಸಾಹಿತ್ಯೋಪಾಸಕರಿಗೆ ಆಸಕ್ತಿಯಿರುವುದು ಸ್ವಾಭಾವಿಕ. ಯುದ್ಧವೀರನ, ದೇಶಾಟನ ಸಾಹಸಿಯ, ರಾಜ್ಯನಿರ್ವಾಹಿಯ, ರಾಜ ಮಹಾರಾಜರ, ಕ್ರಾಂತಿಕಾರರ, ಮಹಾತ್ಮರ ಜೀವನ ಮಾಗದಲ್ಲಿ ಸಾಮಾನ್ಯ ಲೋಕವನ್ನು ಚಕಿತಗೊಳಿಸುವ ಸೋಜಿಗದ ಸಂಗತಿಗಳು ಒದಗುವುದು ಸಹಜ. ಇಂಥ ಬೆರಗುಗೊಳಿಸುವ ಬಾಹ್ಯ ಘಟನೆಗಳು ಕವಿಯ ಬಾಳಿನಲ್ಲೇ ಕಾಣದಿರಬಹುದು. ಆದರೆ ಅವನ ಅಂತರಂಗದ ಒಲತೊಟಿ, ಅಲ್ಲೋಲಕಲ್ಲೋಲದ ವಿವರ, ಆದರಿಂದಲೇ ಹುಟ್ಟಿದ ಕಾವ್ಯದ ಭಾವಸೌಂದರ್ಯ ಸ್ವಾರಸ್ಯ ಸತ್ಯಗಳನ್ನು ಸವಿಯಲು, ತಿಳಿವಿರಬೇಕಾಗುತ್ತದೆ.

ಸಂಸ್ಕೃತದ ಕೆಲವು ಕಾವ್ಯಗಳು ಚಾರಿತ್ರಿಕ ಸಾಮಗ್ರಿಯನ್ನೂ ಜೀವನ ಚರಿತ್ರೆಯ ಪರಿಚಯವನ್ನೂ ಮಾಡಿಕೊಡುತ್ತವೆ. ಬಾಣನ ‘ಹರ್ಷಚರಿತೆ’, ಬಿಲ್ಹಣನ ‘ವಿಕ್ರಮಾಂಕ ದೇವನ ಚರಿತೆ’, ಕಲ್ಹಣನ‘ರಾಜತರಂಗಿಣಿ’, ಸೋಮದೇವನ ‘ಯಶಸ್ತಿಲಕಚಂಪೂ’ ಮೊದಲಾದುವನ್ನು ಇಲ್ಲಿ ಉದಾಹರಿಸಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಜೀವನ ಚರಿತ್ರೆಯನ್ನು ತಾವೇ ಬರೆದಿಡುವುದು ಬಲು ಲೇಸೆಂದು ಪಾಶ್ಚಾತ್ಯ ಪಂಡಿತ ಡಾ|| ಜಾನ್ಸನ್ ಹೇಳಿದ್ದುಂಟು. ಆದರೆ ಸಂಸ್ಕೃತದಲ್ಲೇ ಆಗಲಿ ಕನ್ನಡದಲ್ಲೇ ಆಗಲಿ ಸಾಹಿತ್ಯ, ಕಲ್ಪನೆ, ಇತಿಹಾಸ – ಎಲ್ಲವೂ ಬೆರೆತುಕೊಂಡಿದ್ದು ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸುವುದು, ಆಧಾರಗಲ ಅಭಾವದಿಂದಾಗಿ ಕಷ್ಟ. ನಮ್ಮ ಕವಿಗಳಿಗಮತು ತಮ್ಮ ಬಗೆಗೆ, ಕೆಲವೊಮ್ಮೆ ಹೆಸರನ್ನೂ ಕೂಡ ಹೇಳಿಕೊಳ್ಳದಷ್ಟು ನಿರ್ಲಿಪ್ತತೆ, ಉದಾಸೀನ ಇಲ್ಲವೆ ವಿನಯ. ಹಿಂದಿನವರು ತಮ್ಮ ವಿಚಾರ ಪ್ರಚಾರಕ್ಕೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ಅನೇಕ ವೇಳೆ ಜನರಲ್ಲಿ ರೂಢಿಯಲ್ಲಿರುವ ಐತಿಹ್ಯಗಳೇ ಅವರ ವಿಚಾರ‍ಕ್ಕೆ ಸಿಗುವ ಆಧಾರ. ಕಲ್ಪಿತ ಕತೆಗಳೂ ಇರುತ್ತವೆ. ಆದರೆ ಇವನ್ನೆಲ್ಲಾ ಪ್ರಮಾಣಾರ್ಹವೆಂದು ನಂಬುವುದು ಕಷ್ಟವಾಗುತ್ತದೆ.

ಕನ್ನಡದಲ್ಲಿ ಕೆಲವು ಕವಿಗಳಾದರೂ ನಮ್ಮ ಪುಣ್ಯಕೆ, ತಂದೆ ತಾಯಿ ಅಣ್ಣ ತಮ್ಮ ಹೆಂಡತಿ ಮಕ್ಕಳು ಗುರುಗಳ ಮತ್ತು ಬಿರುದುಗಳ ಬಗೆಗೆ ಅಲ್ಪಸ್ವಲ್ಪವಾದರೂ ತಿಳಿಸಿದ್ದಾರೆ. ಕನ್ನಡದಲ್ಲಿ ಉಪಲಬ್ಧವಾಗಿರುವ ಮೊಟ್ಟಮೊದಲನೆಯ ಗ್ರಂಥ ‘ಕವಿ ರಾಜಮಾರ್ಗ’. ಅದರಲ್ಲಿ ಅದಕ್ಕೂ ಹಿಂದೆ ಆಗಿ ಹೋದ ಕನ್ನಡ ಗದ್ಯಪದ್ಯ ಕವಿಗಳನ್ನು ಹೆಸರಿಸಿದೆ. ಆದರೆ ಅವರ ಜೀವನ ವಿಚಾರ ಹೆಚ್ಚಿಗೆ ಏನೂ ತಿಳಿಯದಾಗಿದೆ. ಕನ್ನಡದ ಮೊದಲ ಮಹಾಕವಿ ಪಂಪನ ಜೀವನ ಚರಿತ್ರೆಗೆ ಸಹಾಯಕ ಸಾಮಗ್ರಿ ಸಿಕ್ಕಂತಾಗಿದೆ. ಪಂಪನ ‘ವಿಕ್ರಮಾರ್ಜುನವಿಜಯ’ದಲ್ಲಿ ಕನ್ನಡದ ಮೊಟ್ಟ ಮೊದಲ ಜೀವನ ಚರಿತ್ರೆ ಎನ್ನಬಹುದಾದ, ಎರಡನೆಯ ಅರಿಕೇಸರಿಯ ಕಿರುಪರಿಚಯವಿದೆ. ಪೊನ್ನನ ‘ಶಾಂತಿನಾಥಪುರಾಣ’ದಲ್ಲಿ ಮಲ್ಲಪಯ್ಯನ ಮನೆತನದ ಚರಿತ್ರೆಯಿದೆ.

ರನ್ನನ ಜೀವನದ ಬಗೆಗೆ ಪಂಪನಿಗಿಂತ ಹೆಚ್ಚು ತಿಳಿದುಬರುತ್ತದೆ. ಜೊತೆಗೆ ರನ್ನ ಕೊಡುವ ಅತ್ತಿಮಬ್ಬೆಯ ಜೀವನ ಚರಿತ್ರೆ ಇಂದಿಗು ಒಂದು ಸೊಗಸಾದ ಜೀವನ ಚರಿತ್ರೆಯ ಚಿತ್ರಣವಾಗಿದೆ. ಸತ್ಯಾಶ್ರಯ ಇರೆವಬೆಡಂಗನ ವಿಚಾರಕ್ಕಿಂತ ಅತ್ತಿಮಬ್ಬೆಯ ಚರಿತ್ರೆಯೇ ಉತ್ಕೃಷ್ಟವಾಗಿದೆ. ನಮ್ಮ ಹಳಗನ್ನಡ ಕವಿಗಳಲ್ಲಿ ಅಷ್ಟು ವ್ಯಾಪಕವಾದ ಜೀವನ ಚರಿತ್ರೆ ಕೊಟ್ಟವರು ತುಂಬ ಕಡಿಮೆ. ಅನಂತರದ ಕವಿಕಾವ್ಯಗಳಲ್ಲಿ ದೇವಚಂದ್ರ ‘ರಾಜಾವಳಿ ಕಥೆ’ ಅನೇಕ ಕವಿಗಳ, ರಾಜರ ಜೀವನ ಚರಿತ್ರೆಯ ಸಂಕಲನ. ‘ರಾಜಾವಳಿ ಕಥೆ’(೧೭೬೦) ಗದ್ಯರೂಪದಲ್ಲಿದೆ. ಇದರಲ್ಲಿ ಮೈಸೂರು ರಾಜರ ವಂಶಾವಳಿಯೂ ಸಂಗ್ರಹವಾಗಿ ನಿರೂಪಿತವಾಗಿದೆ. ಆದರೂ ದೇವಚಂದ್ರನ ವಿವರಗಳನ್ನು ಸಂಪೂರ್ಣ ಸತ್ಯವೆಂದೂ ಸ್ವೀಕರಿಸುವುದು ಸಾಧ್ಯವಿಲ್ಲ.

ಶಾಸನಗಳಲ್ಲಿ ಕೂಡ ಕೆಲವು ಜೀವನ ಚರಿತ್ರೆಗಳು ಸಿಗುತ್ತವೆ. ಕಪ್ಪೆ ಅರಭಟ್ಟ ಹಾಗೂ ಚಾವುಂಡರಾಯ ಮುಂತಾದವರ ಬಗೆಗೆ ಅಂಥ ಉಲ್ಲೇಖಗಳಿವೆ. ಶ್ರವಣ ಬೆಳಗೊಳದ ಶಾಸನವೊಂದರಲ್ಲಿ ಹುಳ್ಳನ ವ್ಯಕ್ತಿಚಿತ್ರಣ ಸೊಗಸಾಗಿ ಒಡಮೂಡಿದೆ ಶಾಂತಲಾ ಮಹಾರಾಣಿಯ ವಿಚಾರವಾಗಿ ಮತ್ತು ಸಲ್ಲೇಖನ ಪಡೆದವರ ಬಗೆಗೆ ಸಿಗುವ ವಿವರಗಳೂ ಮಾಸ್ತಿಗಲ್ಲು, ವೀರಗಲ್ಲುಗಳಲ್ಲಿ ಸಿಗುವ ಚಿತ್ರಣಗಳೂ ವ್ಯಕ್ತಿಚಿತ್ರಗಳ ಮಾದರಿಗೆ ಸೇರುತ್ತವೆ.

ಇಂಗ್ಲಿಷ್ ಭಾಷೆಯಲ್ಲಿ ಬಹಳ ಹಿಂದಿನಿಂದಲೂ ಜೀವನ ಚರಿತ್ರೆಗಳನ್ನು ಬರೆಯುವ ರೂಢಿಯಿದೆ. ಇಂಗ್ಲಿಷ್ ಸಾಹಿತ್ಯಾಭ್ಯಾಸಿಗಳಿಗೆ ವಿಫುಲವಾದ ಜೀವನ ಚರಿತ್ರೆಗಲು ಕಣ್ಣಿಗೆ ಬೀಳುತ್ತವೆ. ಇದಿರಂದಾಗಿ ಅವರಿಗೆ ಸಾಹಿತಿಗಳ ಹಾಗೂ ಇತರ ಸುಪ್ರಸಿದ್ಧ ವ್ಯಕ್ತಿಗಳ ಕೃತಿಗಳನ್ನು ವ್ಯಾಸಂಗ ಮಾಡಲು ವಿಶೇಷ ಸಹಾಯವಾಗುತ್ತದೆ. ಬಾಸ್ವೆಲ್ ಬರೆದ ಡಾ. ಜಾನ್ಸನ್ನನ ಜೀವನ ಚರಿತ್ರೆ, ಎಮಿಲ್ ಲುಡ್ವಿಗ್, ಆಂದ್ರೆ ಮೌರಾ, ಕೇನ್ಸ್, ಲಿಟ್ಟನ್ ಸ್ಟ್ರಾಚೆ, ಎ. ಜೆ. ಗಾರ್ಡಿನರ್ ಮೊದಲಾದವರು ಬರೆದ ಉಜ್ವಲ ಜೀವನ ಚರಿತ್ರೆಗಳಲ್ಲಿ ಚೆಲುವೂ ಚಾತುರ್ಯವೂ ಕೂಡಿಕೊಂಡು ಓದುಗರಿಗೆ ಹೊಸ ದರ್ಶನಭಾಗ್ಯ ದೊರಕಿಸುತ್ತವೆ. ಕನ್ನಡದಲ್ಲಿ ಇಂಥ ಕೃತಿಗಳು ಇಲ್ಲವೆಂದಲ್ಲ, ಆದರೆ ಸಾಲದು.

ಭಾರತದಲ್ಲಿ ಕೆಲವು ಆತ್ಮಕಥೆಗಳು ಇತ್ತೀಚೆಗೆ ಬಂದಿದೆ. ಅವುಗಳಲ್ಲಿ ಮಹಾತ್ಮಾ ಗಾಮಧಿ, ನೆಹರೂ ಮುಂತಾದವರ ಆತ್ಮಕಥೆಗಳು ಮುಖ್ಯವಾದವು. ಕನ್ನಡದಲ್ಲಿ ನಮ್ಮ ಹಳೆಯ ಕವಿ – ಮಹಾಕವಿಗಳ ಬಾಳನ್ನು ಬಣ್ಣಿಸುವ ಹೊತ್ತಗೆಗಳು ಆ ಕಾಲಕ್ಕೆ ರಚಿತವಾಗಲಿಲ್ಲ. ಅಂದಿನವರಿಗೆ, ಆಗಲೇ ಹೇಳಿದಂತೆ, ಅತ್ತ ಅಪೇಕ್ಷೆ ಹುಟ್ಟಲಿಲ್ಲ. ಇನ್ನು ನಡುಗನ್ನಡದ ಕವಿಗಳೂ ಈ ಮಾತಿಗೆ ಹೊರತೇನೂ ಅಲ್ಲ. ಇನ್ನೂ ದುರ್ದೈವವೆಂದರೆ ಹೊಸಗನ್ನಡದ ಸಾಹಿತಿಗಳ ಜೀವನ ಚರಿತ್ರೆಯಾದರೂ ಕ್ರಮವಾಗಿ ವಿಪುಲವಾಗಿ ದೊರೆಯುತ್ತದೆಯೇ ಎಂದರೆ ಅದು ಸಾಲದು. ಒಂದು ಸಮಾಧಾನವೆಂದರೆ ಹಿಂದಿಗಿಂತ ಇಂದು ಮೇಲು. ಇನ್ನೂ ಹೆಚ್ಚಿನ ಪ್ರಯತ್ನಗಳಾಗಬೇಕೆಂದು ಮಾತ್ರ ಇಲ್ಲಿ ಸೂಚಿಸಬಹುದು.

ಕನ್ನಡದಲ್ಲಿ ಕಥೆ, ಕಾದಂಬರಿ, ಕವನಗಳು ಹೆಚ್ಚಾಗಿ ಹೊರಬರುತ್ತಿರುವಂತೆ ಜೀವನ ಚರಿತ್ರೆಗಳು ಪ್ರಕಟವಾಗುತ್ತಿಲ್ಲವೆಂಬ ಹೇಳಿಕೆಯಲ್ಲಿ ಅರ್ಧ ಸತ್ವವಿದೆ. ಕಳೆದ ಐವತ್ತು ವರ್ಷಗಳಲ್ಲಿ ಸುಮಾರು ೧೭೫ ಜೀವನ ಚರಿತ್ರೆಗಳು[1] ಕನ್ನಡದಲ್ಲಿ ಪ್ರಕಟವಾಗಿವೆ. ಸಂಖ್ಯೆಯ ದೃಷ್ಟಿಯಲ್ಲಿ ಇದು ಸಾಲದು ನಿಜ. ಆದರೆ ತೀರ ಕಡಿಮೆಯೇನೂ ಅಲ್ಲ. ಸಾಹಿತ್ಯಿಕ ಮೌಲ್ಯ ಹಾಗೂ ಅಂತಸ್ಸತ್ವದ ದೃಷ್ಟಿಯಿಂದ ತುಂಬ ಅಮೂಲ್ಯವಾದ ಕೆಲವು ಜೀವನ ಚರಿತ್ರೆಗಳು ಕನ್ನಡದಲ್ಲಿ ಪ್ರಕಟವಾಗಿವೆ. ಕನ್ನಡದಲ್ಲಿ ಪ್ರಕಟವಾಗಿರುವ ಈ ಜೀವನ ಚರಿತ್ರೆಗಳನ್ನು ವರ್ಗೀಕರಿಸಿಕೊಂಡು ಅಭ್ಯಾಸ ಮಾಡುವುದು ಸೂಕ್ತ.

ಇಲ್ಲಿ, ಲೇಖನದ ಪರಿಮಿತಿಯಿಂದಾಗಿ, ಈ ಜೀವನ ಚರಿತ್ರೆಗಳನ್ನು ಮುಖ್ಯವಾಗಿ : ೧. ಮತಧರ್ಮ ಸಂಬಂಧವಾದ ಮಹಾತ್ಮರ ಜೀವನ ಚರಿತ್ರೆಗಳು. ೨. ವಚನಕಾರರು. ೩. ಪಾಶ್ಚಾತ್ಯರು. ೪. ಸ್ವಾತಂತ್ರ್ಯ ಸಂಗ್ರಾಮ ಕಾಲದ ಯೋಧರು. ೫. ವಿಜ್ಞಾನಿಗಳು. ೬. ಸಾಹಿತಿಗಳು (ಪಾಶ್ಚಾತ್ಯರು, ಕನ್ನಡಿಗರು), ೭. ಸಾಹಸಿಗಳು (ಪರ್ವತಾರೋಹಿಗಳು, ದೊರೆಗಳು). ೮. ರಾಜಕಾರಣಿಗಳು, ೯. ಪ್ರಶಸ್ತಿ ಗ್ರಂಥಗಳು. ೧೦. ಆತ್ಮಕಥೆಗಳು ಮತ್ತು ಇತರೆ – ಹೀಗೆ ಹತ್ತು ಬಗೆಯಾಗಿ ವಿಂಗಡಿಸಿ ವಿವರಿಸಿದೆ. ಇದರಲ್ಲಿಯೂ ಮತ್ತೆ ವಿಭಜಿಸಿ ವಿಶ್ಲೇಷಿಸುವುದು ಸಾಧ್ಯವಿದೆ. ಆದರೆ ಇಲ್ಲಿ ಆ ಸೂಕ್ಷ್ಮ ವಿಭಜನೆಗೆ ತೊಡಗಿಲ್ಲ. ಮುಂದೆ ಕೊಡುವ ವಿವರದಲ್ಲೂ ಕೃತಿಗಳನ್ನು ಹೆಸರಿಸಿದೆಯೇ ಹೊರತು ವಿಮರ್ಶಿಸಿಲ್ಲ.

ಕನ್ನಡದಲ್ಲಿ ಸಣ್ಣಪುಟ್ಟ ಹೊತ್ತಗೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ಹೇಳುವುದಾದರೆ ಸಾಧುಸಂತರ, ಋಷಿಯೋಗಿಗಳ, ಧಾರ್ಮಿಕ ಪುರುಷರ ಜೀವನ ಚರಿತ್ರೆಗಳೇ ಹೆಚ್ಚು. ಭಗವಾನ್ ಮಹಾವೀರ, ಬುದ್ಧ ಮೊದಲಾದ ಧಾರ್ಮಿಕ ಆಚಾರ್ಯರ ಬಾಳಿನ ಮೇಲೆ ಬೆಳಕು ಬೀರಬಲ್ಲ ಆಧಾರಗಳ ಅಭಾವವಿದೆ. ಅದರಿಂದಾಗಿ ಅವರನ್ನು ಕುರಿತ ಜೀವನ ಚರಿತ್ರೆಗಳು ಬೆರಳೆಣಿಕೆಗೇ ಸೀಮಿತ. ಧಮಾನಂದ ಕೋಸಂಬಿ ಅವರ ಹೆಸರಾಂತ ಹೆಬ್ಬೊತ್ತಗೆ ‘ಭಗವಾನ್ ಬುದ್ಧ’ (೧೯೫೯) ಸಾಹಿತ್ಯ ಅಕಾಡೆಮಿ ಪ್ರಕಟಣೆಯಾಗಿ ಕನ್ನಡದಲ್ಲಿ ಬಂದಿದೆ. ಎಸ್. ಬಿ. ವಸಂತರಾಜು ಅವರ ‘ಅಹಿಂಸಾಜ್ಯೋತಿ ಮಹಾವೀರ’ (೧೯೫೯) ; ಎಂ. ಪಿ. ಪೂಜಾರರ ‘ಹಜರತ್ ಮಹಮದ್ ಪಯಗಂಬರರು’ (೧೯೨೦) ; ಸಿ. ಕೆ. ವೆಂಕಟರಾಮಯ್ಯನವರ ಪೈಗಂಬರ ಮಹಮ್ಮದನು’ (೧೯೩೯) ಹಾಗೂ ಮಕ್ಕಳಿಗಾಗಿ ಬರೆದ ‘ಯೇಸುಕ್ರಿಸ್ತ’ (೧೯೪೧); ಉ. ಕಾ. ಸುಬ್ಬರಾಯಾಚರ್ ಅವರು ಕುವೆಂಪು ಅವರ ಉತ್ತೇಜನದಿಂದ ಬರೆದ ‘ಯೇಸುಕ್ರಿಸ್ತ’ (೧೯೬೦); ಹೆಸರಾಂತ ಆಂಗ್ಲಕವಿ ಖಲಿಲ ಗ್ರೀಬ್ರಾನನ[2] ಕೃತಿಯ ಕನ್ನಡಾನುವಾದ (ದೇವದತ್ತ) ಮಾನವಪುತ್ರ ಜೀಸಸ್ (೧೯೫೫)’ ಮಿರ್ಜಿ ಅಣ್ಣಾರಾಯರ ‘ಭಗವಾನ್ ಮಹಾವೀರ’ – ಈ ಬಗೆಯ, ತೆಳು ಎಳೆಯಿಂದ ನೇಯ್ದ ಜೀವನ ಚರಿತ್ರೆಗಳು.

ಸಂತರ ಚರಿತ್ರೆಯ (೧೯೬೦) ಕನ್ನಡ ಅನುವಾದ, ಮಹರ್ಷಿಗಳ ಜೀವನ ಚರಿತ್ರೆ (೧೯೬೦), ಆರ್ಯಾವರ್ತದ ಮಹಿಳೆಯರು, ಪಂಡಿತ ರಜನೀಕಾಂತ ಗುಪ್ತರು ವಂಗ ಭಾಷೆಯಲ್ಲಿ ಬರೆದ ಮೂಲಕೃತಿಯನ್ನು ಚ. ವಾಸುಚೇವಯ್ಯನವರು ಕನ್ನಡಕ್ಕೆ ಅನುವಾದ ಮಾಡಿರುವ ‘ಆಯಕೀರ್ತಿ’ (೧೯೬೬), ಆಚಾರ್ಯ ರಾಮಾನುಜರು (೧೯೬), ಸಾಯಣಾಚಾರ್ಯರು ಮೊದಲಾದ ಜೀವನ ಚರಿತ್ರೆಗಳಲ್ಲಿ ಜೀವನ ಚರಿತ್ರೆಯಷ್ಟೇ ಪ್ರಧಾನವಾಗಿ ಅವರ ಬೋಧನೆ – ಸಿದ್ಧಾಂತ ಪ್ರತಿಪಾದನೆಯೂ ಬಂದಿದೆ.

ಇವರಿಗಿಂತ ಹೆಚ್ಚು ಆಧಾರ ಸಿಗುವ ವ್ಯಕ್ತಿಗಳ ಜೀವನ ಚರಿತ್ರೆಗಳು ಇಂತಿವೆ; ಶ್ರೀ ಅರವಿಂದರ ಜೀವನ ಚರಿತ್ರೆ ಸಾಧನೆ ಮತ್ತು ಉಪದೇಶಗಳನ್ನೊಳಗೊಂಡ ‘ಮಹಾಯೋಗಿ’ (೧೯೫೪); ಮಹರ್ಷಿ ಅರವಿಂದ ಘೋಷ (೧೯೨೧) ಮತ್ತು ಜೀವನ ಚರಿತ್ರೆಯನ್ನು ಪ್ರಧಾನವಾಗಿ ನಿರೂಪಿಸಿದ ಕೋ. ಚೆನ್ನಬಸಪ್ಪ ನವರ ‘ಸ್ವಾತಂತ್ರ್ಯ ಯೋಧ ಶ್ರೀ ಅರವಿಂಧ’ (೧೯೬೯); ಡಾ| ಪ್ರಭುಶಂಕರ ಅವರ ‘ನಿವೇದಿತಾ’; ‘ಶ್ರೀ ಚಂದ್ರಶೇಖರಭಾರತಿ’ (೧೯೬೬); ‘ಮಹರ್ಷಿ ದೇವೇಂದ್ರನಾಥ ಠಾಕೂರ್’ (೧೯೫೧) ; ‘ಟಿಬೆಟ್ಟಿನ ಯೋಗಿ ಮಿಲರೇಪಾ’ (೧೯೫೮); ಇವಲ್ಲದೆ ಹಂಪ, ನಾಗರಜಯ್ಯ ನವರ ‘ಶ್ರೀ ಶಂಭವಸಾಗರಚರಿತೆ’ (೧೯೬೮), ವಿದ್ಯಾಭೂಷಣ ಕೆ. ಭುಜಬಲಿಶಾಸ್ತ್ರಿಗಳ ‘ಆದರ್ಶ ಜೈನ ವೀರರು’ – ಭಾಗ ೧ (೧೯೫೪), ಕಮಲಾ ಹಂಪನಾ ಅವರ ‘ಆದಶ್ ಜೈನ ಮಹಿಳೆಯರು’ (೧೯೬೮) ಗೋವಿಂದ ಪೈ ಅವರ ಮುನ್ನುಡಿಯೊಡನೆ ರಾ. ನರಸಿಂಹಮೂರ್ತಿ ಅವರು ಬರೆದಿರುವ ‘ಶ್ರೀ ಶಾರದಾದೇವಿ’ (೧೯೪೫) ವೆಂಕಟಯ್ಯನವರ ‘ಮಹಾಮಾತೆ ಶ್ರೀ ಶಾರದಾಮಣಿದೇವಿ’ ಮೊದಲಾದ ಜೀವನ ಚರಿತ್ರೆಗಳು ಒಂದು ಬಗೆಯಲ್ಲಿ ಈ ವಿಭಜನೆಗೆ ಅಳವಡುತ್ತವೆ.

ಶ್ರೀ ರಾಮಕೃಷ್ಣರ ಹಾಗೂ ವಿವೇಕಾನಂದರ ಬಗೆಗೆ ಕೆಲವು ಅಮೂಲ್ಯ ಜೀವನ ಚರಿತ್ರೆಗಳು ಕನ್ನಡದಲ್ಲಿ ಹೊರಬಂದಿದೆ. ತ.ಸು. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರಿಗಳು ಬರೆದ ‘ಶ್ರೀ ರಾಮಕೃಷ್ಣ ಪರಮಹಂಸ ಚರಿತ್ರೆ’ (೧೯೧೯), ಮಾಸ್ತಿಯವರ ‘ಶ್ರೀ ರಾಮಕೃಷ್ಣ’ (೧೯೪೮), ಕುವೆಂಪು ಅವರ ‘ಶ್ರೀ ರಾಮಕೃಷ್ಣ ಪರಮ ಹಂಸ’ (೧೯೩೪), ಐದನೆಯ ಮುದ್ರಣ ೧೯೬೯), ಮತ್ತು ಕುವೆಂಪುರವರದೇ ಆದ ‘ಸ್ವಾಮಿ ವಿವೇಕಾನಂದ’ (೧೯೪೭) – ಈ ಗ್ರಂಥಗಳು ಪ್ರಮುಖವಾದವು. ‘ಶ್ರೀ ರಾಮಕೃಷ್ಣರ ಜೀವನ ಚರಿತ್ರೆ’ (೧೯೫೩) ಎಂಬ ಹೆಬ್ಬೊತ್ತಿಗೆ ಕೂಡ ಕನ್ನಡದಲ್ಲಿ ಅಚ್ಚಾಗಿದೆ. ಕುವೆಂಪು ಅವರ ‘ವಿವೇಕಾನಂದ’ ಮತ್ತು ‘ರಾಮಕೃಷ್ಣ ಪರಮಹಂಸ’ ಎಂಬ ಎರಡೂ ಜೀವನ ಚರಿತ್ರೆಗಳು ಜನಪ್ರಿಯವಾಗಿವೆ. ಅವುಗಳಲ್ಲಿ ಕಾವ್ಯದ ಬಿಗಿಯಿದೆ, ಗದ್ಯದ ಬನಿಯಿದೆ; ಅವುಗಳ ಶೈಲಿ ತೇಜೋಮಯವಾದ ಗಂಡುಗನ್ನಡ, ಕಥಾನಾಯಕರ ಚಿತ್ರ ಕಣ್ತುಂಬ ಎದೆತುಂಬ ತುಂಬಿಕೊಂಡಂತಾಗಿ ಓದುಗ ರಸಪರವಶನಾಗುತ್ತಾನೆ.

ಕನ್ನಡನಾಡಿನಲ್ಲಿ ಹನ್ನೆರಡನೆಯ ಶತಮಾನದಲ್ಲಿ ಶಿವಶರಣರು ಬದುಕಿನ ಎಲ್ಲರ ನೆಲಗಟ್ಟಿನಲ್ಲೂ ಕ್ರಾಂತಿಯೆಸಗಿದರು. ಬಸವಣ್ಣ ಹಾಗೂ ತನ್ನ ಸಮಕಾಲೀನರ ಬದುಕು ಬರಹ ಸಾಧನೆ ಅಗಾಧ, ಅಪಾರ, ಅವರಲ್ಲಿ ಕೆಲವರ ಜೀವನ ಚರಿತ್ರೆಗಳು ಕನ್ನಡದಲ್ಲಿ ಬಂದಿವೆ. ಎಂ.ಆರ್. ಶ್ರೀ ಅವರ ‘ಭಕ್ತಿಭಂಡಾರಿ ಬಸವಣ್ಣ’ (೧೯೩೧) ; ಕೆ.ಜಿ. ಕುಂದಣಗಾರರ ‘ಮಹಾದೇವಿಯಕ್ಕ’ (೧೯೩೭); ಸಿಂಪಿ ಲಿಂಗಣ್ಣ ನವರ ‘ಭಕ್ತರಾಜ’ (೧೯೪೫); ಗ.ಸ. ಹಾಲಪ್ಪ ನವರ ‘ವಿಶ್ವಮಾನವ’ (೧೯೫೭); ಚಿದಾನಂದಮೂರ್ತಿಯವರ ‘ಬಸವಣ್ಣನವರು’(೧೯೬೭); ಓ. ಎನ್. ಲಿಂಗಣ್ಣ ನವರು ‘ಶಿವಯೋಗಿ ಸಿದ್ಧರಾಮ’ (೧೯೬೫) ಮತ್ತು ಜಿ.ಎಸ್. ಶಿವರುದ್ರಪ್ಪರವರ ‘ಕರ್ಮಯೋಗಿ’ (೧೯೫೩); ಶಿವಮೂರ್ತಿಶಾಸ್ತ್ರಿಗಳವರ ‘ವೀರಶೈವ ಮಹಾಪುರುಷರು’ ಮತ್ತು ಕಮಲಾ ಹಂಪನಾ ಅವರ ‘ಅಕ್ಕ ಮಹದೇವಿ’ (೧೯೭೦); ಅಲ್ಲದೆ ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ‘ಶಿಸ್ತುಗಾರ ಶಿವಪ್ಪ ನಾಯಕ’ (೧೯೬೪) ಮತ್ತು ‘ಪರಿಪೂರ್ಣದಡೆಗೆ’ ಕೂಡ ವಿಶಾಲಾರ್ಥದಲ್ಲಿ ಈ ಗುಂಪಿಗೇ ಸೇರುತ್ತವೆ.

ಪರಕೀಯರ, ಆಂಗ್ಲರ ಆಡಳಿತ ದಬ್ಬಾಳಿಕೆಯ ನೊಗಕ್ಕೆ ಸಿಕ್ಕು ದಾಸ್ಯದಿಂದ ತೊಳಲಿ ಬಳಲಿ ಬೆಂಡಾಗುತ್ತಿದ್ದ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸಲು ನಡೆಸಿದ ಸ್ವಾತಂತ್ರ್ಯ ಸಂಗ್ರಾಮ ಕಾಲದ ಮುಂಚೂಣಿಯಲ್ಲಿ ನಿಂತು ಮಾರ್ಗದರ್ಶನ ಮಾಡಿದ ಮಹನೀಯರ ಜೀವನ ಚರಿತ್ರೆಗಳು ಭಾರತೀಯ ಭಾಷೆಗಳಲ್ಲಿ ಬಹಳ ಬಂದಿವೆ. ಕನ್ನಡದಲ್ಲೂ ಸಾಕಷ್ಟು ರಚಿತವಾಗಿವೆ. ಕನ್ನಡದಲ್ಲಿ ಹೊರಬಂದಿರುವ ಈ ಬಗೆಯ ಹೊತ್ತಗೆಗಳನ್ನು ಇರ್ತೆರನಾಗಿ ಕಾಣಬಹುದು. ಒಂದು ಸ್ವತಂತ್ರ ಕೃತಿಗಳು, ಇನ್ನೊಂದು ಅನುವಾದ ಗ್ರಂಥಗಳು.

ಈ ಬಿಡುಗಡೆಯ ಹೋರಾಟಗಾರರ ಬದುಕಿನ ಚಿತ್ರಣಗಳಲ್ಲಿ ಕೇಂದ್ರವ್ಯಕ್ತಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಅನಂತರಾವ ಮಂಟಗಣಿಕರ ಅವರ ‘ಮಹಾತ್ಮಾ ಗಾಂಧಿ’ (೧೯೧೯), ಡಿ. ವಿ. ಗುಂಡಪ್ಪ ನವರ ‘ಗೋಪಾಲಕೃಷ್ಣ ಗೋಖಲೆ’ (೧೯೧೫) ಇವು ಬಹಳ ಹಿಂದೆಯೇ ಬಂದಿವೆ. ಸ್ವಾತಂತ್ರ್ಯಪೂರ್ವಕಾಲಕ್ಕೆ ಸೇರಿದ ಗ್ರಂಥಗಳಲ್ಲಿ ಕೆಲವನ್ನು ಮೊದಲು ನೋಡಿ ಅನಂತರ ಸ್ವಾತಂತ್ರ್ಯೋತ್ತರ ಜೀವನ ಚರಿತ್ರೆಗಳನ್ನು ನೋಡೋಣ : ‘ಜವಹರಲಾಲ್ ನೆಹ್ರೂ’ (೧೯೩೬) ಎರಡು ಭಾಗಗಳಲ್ಲಿ ಪ್ರಕಟವಾಗಿದೆ. ಅವರ ಆತ್ಮಕಥೆಯೇ ಈ ಅನುವಾದ ಭಾರತದ ಇತ್ತೀಚಿನ, ಅಂದರೆ ೧೯೩೬ ರ ವರೆಗಿನ ಪ್ರಕಟಣೆಗಳನ್ನು ಕುರಿತ ಆಲೋಚನೆಗಳೊಡನೆ ಸಚಿತ್ರವಾಗಿ ಇದನ್ನು ಕನ್ನಡಿಸಿದವರು ಅಶ್ವತ್ಥನಾರಾಯಣ್ ರಾವ್. ಕಂದಾಡೆಯವರ ಕೃತಿ ‘ಜವಹರಲಾಲ ನೆಹರು’ (೧೯೪೫), ನಾ. ಸು. ಹರ್ಡೀಕರರ ಮುನ್ನುಡಿಯೊಡನೆ ಹೊರಬಿದ್ದಿದೆ. ಜಗತ್ ರಾಮ್ ದವೆ ಅವರು ಬರೆದ ‘ಗಾಂಧೀಜಿ’ (೧೯೪೬); ‘ಸ್ವಾತಂತ್ರ್ಯಪ್ರಿಯ’ರು ಬರೆದ, ನಾಡನ್ನು ಕಟ್ಟಿದ ೫೮ (ಜನರ ಕಿರುಪರಿಚಯಾತ್ಮಕ ಕೃತಿ ‘ರಾಷ್ಟ್ರಪತಿಗಳು’ (೧೯೪೬); ಬರ್ಲಾರವರು ಬರೆದ ಮೂಲದಿಂದ ಎ.ವಿ.ಎಸ್. ಮೂರ್ತಿಯವರು ಅನುವಾದಿಸಿರುವ ಸ್ವಾತಂತ್ರ್ಯ ಸಂಗ್ರಾಮ ಕಾಲದ ಮಹಾದೇಶಭಕ್ತ ‘ಶ್ರೀ ಚಮನಾಲಾಲಜಿ’ (೧೯೪೪) – ಇವು ೧೯೪೭ಕ್ಕೆ ಮೊದಲೇ ಪ್ರಕಟವಾದ ಜೀವನ ಚರಿತ್ರೆಗಳು.

ಡಿ. ರೇಣುಕಾಚಾರ್ಯರ ‘ಬ್ರಹ್ಮಾನಂದ ಕೇಶವ ಚಂದ್ರಸೇನ’ (೧೯೩೯) ಒಂದು ಮೇಲಾದ ಹೊತ್ತಗೆ, ಮೇಧಾವಿಯೂ ದೃಢಪ್ರತಿಜ್ಞನೂ ದೇಶಭಕ್ತನೂ ತತ್ತ್ವಜ್ಞಾನಿಯೂ ಸಹಿಷ್ಣುವೂ ಸತ್ಯವ್ರತನೂ ಆದ ಗಣ್ಯ ಕೇಶವ ಚಂದ್ರಸೇನನ ಜೀವನ ಚರಿತ್ರೆಯಿದು.

ಸ್ವಾತಂತ್ರ್ಯೋತ್ರ ಜೀವನ ಚರಿತ್ರೆಗಳೂ ಸಾಕಷ್ಟಿವೆ. ಬಾಬು ರಾಜೇಂದ್ರ ಪ್ರಸಾದ್ (೧೯೫೦), ಸರದಾರ ವಲ್ಲಭಬಾಯಿ (೧೯೫೧), ದಾದಾಭಾಯಿ ನವರೋಜಿ (೧೯೫೧), ಲೋಕಮಾನ್ಯ ಬಾಲ ಗಂಗಾಧರ ಟಿಳಕ (೧೯೫೭), ಮಹದೇವ ಗೋವಿಂದ ರಾನಡೆ (೧೯೫೯), ಮೌಲಾನಾ ಅಬ್ದುಲ್, ಜಯಪ್ರಕಾಶ ನಾರಾಯಣ (೧೯೬೬), ಮಕ್ಕಳ ಗಾಂಧಿ, ಕಸ್ತೂರಿ ಬಾ ಮೊದಲಾದವನ್ನು ಇಲ್ಲಿ ಹೆಸರಿಸಬಹುದು. ಆರ್. ಕೆ. ಪ್ರಭು ಅವರ ‘ಇವರು ಬಾಪು’ (೧೯೫೬), ಪಿ. ವೆಂಕೋಬರಾವ್ ಅವರ ‘ನೂತನ ಕ್ರಾಂತಿಶಿಲ್ಪಿ’ (೧೯೬೦), ಟಿ.ವಿ. ಪರ್ವತೆ ಅವರ ಹೊಬ್ಬೊತ್ತಗೆಯ ಕನ್ನಡ ಭಾಷಾಂತರವಾದ ‘ಬಾಲ ಗಂಗಾಧರ ತಿಲಕ್’ (೧೯೨೧), ಬಿ.ಆರ್. ನಂದಾ ಅವರ ಕನ್ನಡಾನುವಾದಗೊಂಡ ‘ಮಹಾತ್ಮಾ ಗಾಂಧಿ’ (೧೯೬೩); ಕಲ್ಲೆ ಶಿವೋತ್ತಮರಾವ್ ಮತ್ತು ಹಂಪ. ನಾಗರಾಜಯ್ಯ ಬರೆದ ಎರಡು ಜೀವನ ಚರಿತ್ರೆಗಳಾದ ‘ಅಜಾತಶತ್ರು’ (೧೯೬೮) ಮತ್ತು ‘ಗಡಿನಾಡು ಗಾಂಧಿ’ (೧೯೬೯) – ಇವು ಈ ಅವಧಿಯಲ್ಲಿ ಬಂದ ಜೀವನ ಚರಿತ್ರೆಗಳು. ಹಂಪ ನಾಗರಾಜಯ್ಯನವರ ‘ಯುಗಪುರುಷ ಗಾಂಧಿ’ (೧೯೭೦) ತೀರ ಇತ್ತೀಚೆಗೆ ಬಂದ ಜೀವನ ಚರಿತ್ರೆ.

‘ಮಹಾದೇವ ಭಾಯಿಯವರ ದಿನಚರಿ’ (೧೯೫೩) ಈ ವಿಧವಾದ ಕೃತಿಗಳಲ್ಲಿ ಬಹುಮುಖ್ಯವಾದ ಹೆಬ್ಬೊತ್ತಗೆ. ಇದರ ಮೂಲ ಲೇಖಕರು ನರಹರಿ ದ್ವಾ. ಪರೀಖ. ಕನ್ನಡಿಸಿದವರು ರಾಮಚಂದ್ರ ವಡವಿ. ಮಹಾದೇವ ಭಾಯಿಯವರು ಮಹಾತ್ಮಾ ಗಾಂಧಿಯವರ ಆಪ್ತರು. ಆತ್ಮೀಯರು, ಸದಾಚಾರಸಂಪನ್ನರೂ ಪರಮಪ್ರಾಮಾಣಿಕರು ಮಹಾನ್ ದೇಶಭಕ್ತರೂ ಆದ ಮಹಾದೇವ ಭಾಯಿ ಅವರನ್ನು ಕುರಿತ ಈ ಜೀವನ ಚರಿತ್ರೆಯಲ್ಲಿ ಪತ್ರವ್ಯವಹಾರನ್ನು ಕೂಡ ಆಧರಿಸಲಾಗಿದೆ. ಈ ಬಗೆಯ ಸಾಹಿತ್ಯ ಕನ್ನಡದಲ್ಲಿ ಕಡಿಮೆ.

‘ಮೋತಿಲಾಲ್ – ಜವಹರ್ ಲಾಲ್ ನೆಹರು’ (೧೯೬೫) ಇನ್ನೊಂದು ಪ್ರಮುಖ ಗ್ರಂಥ. ಮೂಲ ಬರಹಗಾರರು ಬಿ.ಆರ್. ನಂದಾ. ಸಮಗ್ರ ಭಾರತದ ಎಪ್ಪತ್ತು ವರ್ಷಗಳ ರಾಜಕೀಯ ಸಾಮಾಜಿಕ ಪರಿಸ್ಥಿತಿಯ ಯಥಾರ್ಥಚಿತ್ರವೂ ಇಲ್ಲಿದೆ. ಹದಿಮೂರು ಚಿತ್ರಗಳೂ ಬೇರೆ ಇವೆ. ನೆಹರೂಗಳ ಕಥೆ ಭಾರತ ಸ್ವಾತಂತ್ರ್ಯ ಚಳವಳಿಗೆ ಸಮಾನಾಂತರದಲ್ಲಿ ಬಂದು ಅದರಲ್ಲಿ ಲೀನವಾಯಿತು. ರಾಷ್ಟ್ರೀಯ ಸಂಗ್ರಾಮದಲ್ಲಿ ತಂದೆ – ಮಗ ಇಬ್ಬರ ಪಾತ್ರಗಳು ಬೇರೆ ಬೇರೆಯಾಗಿ ತುಸು ತೋರಿದರೂ ಒಂದರೊಡನೊಂದು ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ದೇಜಗೌ ಅವರು ಬರೆದ ‘ಮೋತಿಲಾಲ್ ನೆಹ್ರೂ’ (೧೯೬೧) ಒಂದು ಪೂರ್ಣ ಪ್ರಮಾಣದ ಜೀವನ ಚರಿತ್ರೆ. ಇಂಗ್ಲಿಷಿನಲ್ಲಾಗಲಿ, ಇತರ ಭಾರತೀಯ ಭಾಷೆಗಳಲ್ಲಾಗಲಿ ಆ ವೇಳೆಗೆ ಇಷ್ಟು ವ್ಯಾಪಕವಾದ ಜೀವನ ಚರಿತ್ರೆ ಮೋತಿಲಾಲರನ್ನು ಕುರಿತು ಇರಲಿಲ್ಲ. ಇವರ ‘ಗೋಪಾಲ ಕೃಷ್ಣ ಗೋಖಲೆ’ (೧೯೫೩), ‘ನಮ್ಮ ನೆಹರು’ ಇಲ್ಲಿ ಹೆಸರಿಸಬೇಕಾದ ಕೃತಿಗಳು. ರಾ. ವೆ. ಕರಗುದರಿಯವರ ‘ಸೇನಾಪತಿ ಡಾ|| ಹಡೀಕರರು’(೧೯೩೪) ಇದೇ ಗುಂಪಿಗೆ ಅಳವಡುವ ಹೊತ್ತಗೆ.

ಸುಮಾರು ಎರಡೂವರೆ ಸಾವಿರ ವರ್ಷಗಳಿಂದಲೂ ಭಾರತಕ್ಕೆ ಅರಬ್ಬರು, ಇಂಗ್ಲಿಷರು, ಡಚ್ಚರು, ಈಜುಪ್ಟಿಯನ್ನರು, ಗ್ರೀಕರು, ಚೀನಿಯರು, ಪಾರಸಿಗಳು, ಫ್ರೆಂಚರು, ಪೋರ್ಚುಗೀಸರು ಬಂದು ಹೋಗಿದ್ದಾರೆ. ಅವರಲ್ಲಿ ಅನೇಕರ ಸಂಬಂಧವಾಗಿ ಬಿಡಿಬಿಡಿಯಾದ ಉಲ್ಲೇಖಗಳ ಹೊರತು ಮತ್ತೇನೂ ಗೊತ್ತಿಲ್ಲ. ಎಚ್. ಎಲ್. ನಾಗೇಗೌಡರ ‘ಪ್ರವಾಸಿ ಕಂಡ ಇಂಡಿಯಾ’ ಮೂರು ಸಂಪುಟಗಳಲ್ಲಿ ಹೊರಬಂದಿದೆ; ಇದು ಪ್ರಧಾನವಾಗಿ ಪ್ರವಾಸ ಸಾಹಿತ್ಯವೆಂಬುದನ್ನು ಮರೆಯುವಂತಿಲ್ಲವಾದರೂ ಅನುಷಂಗಿಕವಾಗಿ ಜೀವನ ಚರಿತ್ರೆಗೆ ಸಂಬಂಧಿಸಿದ ಅಂಶಗಳನ್ನು ಒಳಗೊಂಡಿದೆ.

ಪಾಶ್ಚಾತ್ಯರನ್ನು ಕುರಿತ ಕನ್ನಡದ ಜೀವನ ಚರಿತ್ರೆಗಳಲ್ಲಿ ಕೆಲವು ಇಂತಿವೆ; ಮ್ಯಾಕ್ಸಿಂಗಾರ್ಕಿ (೧೯೪೪), ಸೋಕ್ರಟೀಸ್ (೧೯೪೯), ಜೋಸೆಫ್ ಸ್ಟಾಲಿನ್, ಜೇಮ್ಸ್ ಏಬ್ರಾಮ್ ಗಾರ್ ಫೀಲ್ಡ್ ನ ಚರಿತ್ರೆ (೧೯೧೭), ಲೆನಿನ್, ನಿಕ್ಸ್ ನ್ (೧೯೬೯) ಕಾರ್ಲ್‌ಮಾರ್ಕ್ಸ್ (೧೯೫೬), ಅತಾ ತುರ್ಕ್, ಜಾನ್ ಸ್ಟೂಯೆರ್ಟ್ ಮಿಲ್ (೧೯೫೭) ಪಾಶ್ಚಿಮಾತ್ಯ ಮಹಾಪುರುಷರು (೧೯೫೩), ಹೆಲನ್ ಕೆಲರ್ (೧೯೫೯), ಬೆಂಜಮಿನ್ ಫ್ಯ್ರಾಂಕ್ ಲಿನ್ (೧೯೨೬), ಬೆಂಜಮಿನ್ ಫ್ಯ್ರಾಂಕ್ಲಿನ್ ಆತ್ಮಕಥೆ (೧೯೫೮), ಪಾರಸೀ ಕವೀಂದ್ರರು (೧೯೪೭), ಡಾ. ಮಾರ್ಟಿನ್ ಲೂಥರ್ ಕಿಂಗ್ (೧೯೮), ಹುತಾತ್ಮ ಕಿಂಗ್ (೧೯೬೯), ಸ್ಯಾಮ್ಯುಯಲ್ ಜಾನ್ ಸನ್ (೧೯೭೦) ಏಬ್ರಹಾಂ ಲಿಂಕನ್ (೧೯೫೯), ವಿಖ್ಯಾತ ಆಂಗ್ಲ ಸಾಹಿತಿಗಳು (೧೯೪೬೪), ಚಾರ್ಲ್ಸ ವೆಸ್ಲಿಯವರ ಸಂಕ್ಷೇಪ ಜೀವನ ಚರಿತ್ರೆ, ಬರ್ನಾರ್ಡ್ ಷಾ, ಎಡ್ ಮಂಡ್ ಬರ್ಕ್ (೧೯೬೫) ಮತ್ತು ಟಾಲ್ ಸ್ಟಾಯ್ ಆತ್ಮಕಥೆ (೧೯೫೮).

ಕನ್ನಡದಲ್ಲಿ ವಿಜ್ಞಾನಿಗಳನ್ನು ಕುರಿತು ಪ್ರಕಟವದ ಜೀವನ ಚರಿತ್ರೆಗಳು ಹೆಚ್ಚಿಲ್ಲ. ಎನ್.ಎಸ್. ವೀರಪ್ಪ ನವರು ಬರೆದ ‘ಚಾರ್ಲ್ಸ್ ಡಾರ್ವಿನ್’ (೧೯೪೫). ‘ಮೈಕೇಲ್ ಫ್ಯಾರಡೆ’ ಮೊದಲು ಬಂದ ಹೊತ್ತಗೆಗಳು, ಜೀವೂಬಾಯಿ ಲಕ್ಷ್ಮಣರಾವ್ ಅವರು ‘ಚಾರ್ಲ್ಸ್ ಡಾರ್ವಿನ್ನನ ಜೀವನ ಚರಿತ್ರೆ’ (೧೯೬೧) ಬರೆದಿದ್ದಾರೆ. ಭೌತಶಾಸ್ತ್ರ ವಿಶಾರದನಾಗಿ ವಿಜ್ಞಾನಿ ತಪಸ್ವಿಯಾಗಿ ಪರಿಶುದ್ಧ ಚಾರಿತ್ರ್ಯ ಮತ್ತು ಅದ್ಭುತ ಧೀಃಶಕ್ತಿಗಳಿಂದ ಮಾನವ ಸಂಸ್ಕೃತಿಯನ್ನು ಬೆಳಗಿಸಿದ ಮಹಾಪುರುಷ ‘ಐನ್ ಸ್ಟೈನ್’ (೧೯೬೬), ‘ಥಾಮಸ್ ಜಫರ್ಸನ್’ (೧೯೬೪), ‘ಅಲೆಕ್ಸಾಂಡರ್ ಪ್ಲೆಮಿಂಗ್’ (೧೯೬೧), ‘ಥಾಮಸ್ ಎಡಿಸನ್’ (೧೯೬೫), ಶ್ರೀಮತಿ ರತ್ನಮ್ಮ ಅವರ ‘ಮೇರಿ ಕ್ಯೂರಿ, (೧೯೪೮), ‘ಪ್ರಫುಲ್ಲ ಚಂದ್ರರಾಯ್’ ಮೊದಲಾದ ಹೊತ್ತಗೆಗಳಲ್ಲದೆ, ಕೆ. ನಂಜುಂಡಯ್ಯ ನವರ ‘ಐವರು ಮಹಾವಿಜ್ಞಾನಿಗಳು’ (೧೯೬೦), ಹಂಪ ನಾಗರಾಜಯ್ಯ ನವರ ‘ಸಿ.ವಿ.ರಾಮನ್’(೧೯೬೮), ದೇಜಗೌ ಅವರ ‘ಮೇಡಂ ಕ್ಯೂರಿ’ (೧೯೬೧) – ‘ಸರ್ ಜಗದೀಶಚಂದ್ರ ಬೋಸರು’ (೧೯೩೯) ಡಿ.ಆರ್. ರಾಮಯ್ಯ ಇವೆಲ್ಲ ವಿಜ್ಞಾನಿಗಳನ್ನು ಕುರಿತು ಪ್ರಕಟವಾದ ಜೀವನ ಚರಿತ್ರೆಗಳು.

೧೦

ಕನ್ನಡ ಬರಹಗಾರರ ಬದುಕನ್ನು ಬಿಂಬಿಸುವ ಹೊತ್ತಗೆಗಳು ಕೆಲವು ಈ ಶತಮಾನದಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಎಂ. ಜಿ. ನಂಜುಂಡಾರಾಧ್ಯರ ‘ಅಭಿನವ ಕಾಳಿದಾಸಬಸಪ್ಪ ಶಾಸ್ತ್ರಿ’ (೧೯೪೫) ಪ್ರಮುಖ ಉಲ್ಲೇಖ ಪಡೆಯುತ್ತದೆ. ‘ಕಂನಾಟ ಸಾಹಿತ್ಯಜ್ಞರ ಆತ್ಮಕಥನ’ (೧೯೫೨), ‘ಸರ್ದಾರ್ ಎಚ್. ಎಲ್. ದೇವರಾಜೇ ಅರಸ್ ನವರ ಜೀವನ ಚರಿತ್ರೆ’ (೧೯೫೨), ಕೈಲಾಸಂ ಅವರನ್ನು ಕುರಿತು ಸ್ಮರಣೆ (೧೯೫೨). ನಾನು ಕಂಡ ಕೈಲಾಸಂ (೧೯೪೫), ‘ಕೈಲಾಸಂ ಕಥನ’(೧೯೪೫), ಕೈಲಾಸಂ ನೆನಪು ಮತ್ತು ಕೈಲಾಸಂ ದರ್ಶನ’ (೧೯೫೦), ಬೇಂದ್ರೆಯವರನ್ನು ಕುರಿತ ನಾಲ್ಕು ಕೃತಿಗಳು’. ‘ದ.ಬಾ.ಕುಲಕರ್ಣಿ ಬದುಕಿದ ಬಾಳು (೧೬೬೩) ಅವರ ‘ಹಕ್ಕಿನೋಟ’ ಮತ್ತು ‘ಸೀಮಾಪುರುಷರು’, ವಸುದೇವ ಭೂಪಲಂ ಅವರ ‘ಗೊಂಚಲ್ ಮಿಂಚು’, ಹಾ. ಮಾ. ನಾಯಕರ ‘ಸಂಕೀರ್ಣ’ ಶ್ರೀರಂಗರ ‘ಕವಿ ವಿನಾಯಕ’, ಜಿ.ಎಸ್. ಹುರಳಿಯವರ ‘ಪೂಜ್ಯ ಉತ್ತಂಗಿಯವರ ಜೀವನ ಚರಿತ್ರೆ’, ವಿ. ಸೀ. ಅವರ ‘ಮಹನೀಯರು’ (೧೯೭೦); ‘ಧೀನಬಂಧು’ (೧೯೪೪), ‘ಶ್ರೀ ರಾಜಪುರೋಹಿತರು’ (೧೯೪೮), ಕಮಲಾ ಹಂಪನಾ ಅವರ ‘ಹೆಳವನಕಟ್ಟೆ ಗಿರಿಯಮ್ಮ’ (೧೯೭೦) ವರ್ಧಮಾನ ಶಾಸ್ತ್ರಿಗಳು ಬರೆದ ‘ಪಂಡಿತ ಲೋಕನಾಥ ಶಾಸ್ತ್ರಿಯವರು’ (೧೯೫೨); ಡಿ. ಪುಟ್ಟಸ್ವಾಮಿ ಮತ್ತು ಟಿ.ಕೆ. ಪಾಟೀಲರು ಸಂಪಾದಿಸಿರುವ ‘ಮಿರ್ಜಿ ಅಣ್ಣಾರಾಯ’ ಮೊದಲಾದುವು ಕೆಲವು ಜೀವನ ಚರಿತ್ರೆಗಳು ಹಗೂ ವ್ಯಕ್ತಿಚಿತ್ರಗಳು.

‘ನಡೆದು ಬಂದ ದಾರಿ’ಯಲ್ಲಿ (ಸಂಪುಟ ೩, ೧೯೬೧) ಹದಿನೈದು ಜನರ ಜೀವನ ಪರಿಚಯವಿದೆ. ಅವರಲ್ಲಿ ಸಾಹಿತಿಗಳು, ಗಾಯಕರು ಮತ್ತು ಚಿತ್ರಕಲಾವಿದರಿದ್ದಾರೆ. ಜೊತೆಗೆ ಅದರ ಕಡೆಯಲ್ಲಿ ‘ಚತುರ್ಮುಖ’ ಎಂಬ ಹೆಸರಿನಿಂದ ತಮ್ಮ ಆತ್ಮಕಥನವನ್ನು ಬೇಂದ್ರೆಯವರು ಬರೆದಿದ್ದಾರೆ. ದೇ.ಜಗೌ. ಅವರು ಬರೆದ ತೀ. ನಂ. ಶ್ರೀ’ (೧೯೬೭) ಚೆಲುವಾದ ಜೀವನ ಚರಿತ್ರೆಗಳಲ್ಲೊಂದು. ಅವರದೇ ಆದ ‘ಸಾಹಿತಿಗಳ ಸಂಗಲದಲಿ, (೧೯೬೪) ಕೂಡ ಹತ್ತು ಸಾಹಿತಿಗಳ ಜೀವನ ಮತ್ತು ಕೃತಿಗಳ ಪರಿಚಯ ಮಾಡಿಕೊಡುವ ಸುರಸ ಕೃತಿ, ದೇ. ಜವರೇಗೌಡರ ‘ರಾಷ್ಟ್ರಕವಿ ಕುವೆಂಪು’ (೧೯೬೮) ಕನ್ನಡದ ಅತ್ಯುತ್ತಮ ಜೀವನ ಚರಿತ್ರೆಗಳಲ್ಲಿ ಒಂದು. ಎರಡು ದಶಕಗಳ ಹಿಂದೆಯೇ ಪ್ರಕಟವಾದ ತ.ರಾ.ಸು. ಅವರ ‘ಅ.ನ.ಕೃ’ ಕೂಡ ಇದೇ ವರ್ಗಕ್ಕೆ ಸೇರುತ್ತದೆ. ಮಾಸ್ತಿಯವರ ಆತ್ಮಚರಿತ್ರೆ ‘ಭಾವ’ದ ಮೂರು ಸಂಪುಟಗಳು (೧೯೬೮) ಮತ್ತು ದೇ ಜವರೇಗೌಡರ ಆತ್ಮಚರಿತ್ರೆ ‘ಹೋರಾಟದ ಬದುಕು’ (೧೯೬೮), ಕನ್ನಡದ ಕೆಲವೇ ಸಾಹಿತಿಗಳ ಆತ್ಮಚರಿತ್ರೆಗಳಲ್ಲಿ ಪ್ರಮುಖ ಸ್ಥಾನ ಪಡೆಯುತ್ತವೆ. ರಾಜರತ್ನಂ ಅವರ ‘ಹತ್ತು ವರುಷ’, ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’, ಸಿಂಪಿ ಲಿಂಗಣ್ನನವರ ‘ಮೂವತ್ತೈದು ವರ್ಷ’ (೧೯೬೩) ಇದೇ ವರ್ಗದ ಆತ್ಮ ವೃತ್ತಾಂತ. ‘ಬಾಣಭಟ್ಟನ ಆತ್ಮಕಥೆ’ (೧೯೬೭) ಸಾಹಿತ್ಯ ಅಕಾಡೆಮಿ ಪ್ರಕಟನೆ.

ಬಹುಮಟ್ಟಿಗೆ ಕನ್ನಡಕ್ಕೇ ವಿಶಿಷ್ಟವಾದ ಶಿಷ್ಟ ಪರಂಪರೆಗಳಲ್ಲಿ ನಾಡು ನುಡಿಗಳ ಮೇಲ್ಮೆಗಾಗಿ ಮುನ್ನಡೆಗಾಗಿ ದುಡಿದ, ಹಿರಿಯರ ನೆನಪಿಗೆ ಹೊರತರುವ ಸಂಭಾವನೆ ಗ್ರಂಥಗಳಲ್ಲಿ ಜೀವನ ಚರಿತ್ರೆಯೂ ವಿಫುಲವಾಗಿ ದೊರೆಯುತ್ತದೆ. ಪಂಪ, ರನ್ನ, ನಾಗಚಂದ್ರ, ಲಕ್ಷ್ಮೀಶ, ಮುದ್ದಣ, ವಾಸುದೇವ (೬೪) ಮೊದಲಾದವರ ಪ್ರಶಸ್ತಿ ಗ್ರಂಥಗಳನ್ನು ಇಲ್ಲಿ ಸ್ಮರಿಸಬಹುದು. ಆದರೆ ಸಂಭಾವನ ಗ್ರಂಥಗಳು ಬೇರೆ ವಿಧ. ಜೆ.ಎಂ. ಶ್ರೀಯವರಿಗೆ ಕೊಟ್ಟ ‘ಸಂಭಾವನೆ’ (೧೯೪೧), ಧರ್ಮಸ್ಥಳದ ಮಂಜಯ್ಯ ಹೆಗ್ಗಡೆ ಅವರಿಗೆ ಕೊಟ್ಟ ‘ಸಮರ್ಪಣೆ’ (೧೯೫೦), ‘ಪಂಜೆಯವರ ನೆನಪಿಗಾಗಿ’ (೧೯೫೨), ಮುಳಿಯ ತಿಮ್ಮಪ್ಪಯ್ಯನವರಿಗೆ ಕೊಟ್ಟ ‘ಶ್ರದ್ಧಾಂಜಲಿ’, (೧೯೫೬) ರಂರಾ. ದಿವಾಕರ ಅವರಿಗೆ ಕೊಟ್ಟ ‘ಕರ್ನಾಟಕ ದರ್ಶನ’ , ಎ. ಆರ್. ಕೃ. – ‘ಅಭಿವಂದನೆ’(೧೯೫೬), ‘ಮಿರ್ಜಿ ಅಣ್ಣಾರಾಯ’. ಡಿ. ಪುಟ್ಟಸ್ವಾಮಿ, ‘ಮಧುರಸ್ಮೃತಿ’, ಶ್ರೀ ಸುತ್ತೂರು ಸ್ವಾಮಿಗಳ ಆಶೀರ್ವಾದ’, ವಿಭೂತಿ (೧೯೬೧), ದಾಸೋಹ’ (೬೨ ಕುವೆಂಪು ಅವರಿಗೆ ಕೊಟ್ಟ ‘ಉಡುಗೊರೆ’ (೧೯೫೬), ಗಂಗೋತ್ರಿ’ (೧೯೬೮). ಕವಿಶೈಲ (೬೫) ಮತ್ತು ‘ಉಪಾಯನ ಕೃತಿಕರಂಡ’ (೬೯), ಪೈಯವರಿಗೆ ದೀವಿಗೆ (೬೭), ‘ದೋಲನ’ ಅವರಿಗೆ ‘ಉಪಾಯನ’ (೧೯೬೭) ಮತ್ತು ‘ಜ್ಞಾನೋಪಾಸಕ’, ಕೆ.ಜಿ. ಕುಂದಣಗಾರರಿಗೆ ‘ಕುಂದಣ’, ಫ. ಗು. ಹಳಕಟಿ, ‘ವಚನಶಾಸ್ತ್ರಪಿತಾಮಹ’, ‘ವಾಸುದೇವ ಪ್ರಶಸ್ತಿ’, ಶ್ರೀ ನೇಮಿಸಾಗರ ವರ್ಣೀ ಅವರಿಗೆ ಅರ್ಪಿಸಿದ ‘ಅಭಿನಂದನೆ’ (೧೯೫೬) ಮೊದಲಾದುವು ಈ ಬಗೆಯ ಕೃತಿಗಳು. ಕಟ್ಟೀಮನಿ ‘ಬದುಕು-ಬರಹ’ (೧೯೭೦), ‘ವಿನಾಯಕ ವಾಙ್ಮಯ’, ಶಿವಮೂರ್ತಿ ಶಾಸ್ತ್ರಿಗಳು ‘ದೇವಗಂಗೆ’ (೧೯೬೮), ಬಸವನಾಳ ಸ್ಮಾರಕ ಸಂಪುಟ (೧೯೫೬) (೧೯೬೮), ಟಿ.ಎಸ್. ವೆಂಕಣ್ಣಯ್ಯ ನವರ ಸವಿನೆನಪು (೧೯೭೦) ಇಲ್ಲಿ ಉಲ್ಲೇಖಿಸಬೇಕಾದ ಇನ್ನೆರಡು ಗ್ರಂಥಗಳು.

೧೧

ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಜೀವನ ಚರಿತ್ರೆಗಳು : ‘ಅಕ್ಬರ ಚಕ್ರವರ್ತಿಯ ಚರಿತ್ರೆ’ (೧೯೧೯), ‘ಔರಂಗಜೇಬ’ (೪೬), ‘ಮಹಾರಾಣಿ ಲಕ್ಷ್ಮೀಬಾಯಿ’ (೬೭), ‘ಅಶೋಕ’ (೧೯೫೨), ‘ಯುಗಾವತಾರ’ (೧೯೬೭), ‘ಛತ್ರಪತಿ ಶಿವಾಜಿ’ (೧೮೯೮), ‘ಕರ್ನಾಟಕ ವೀರರತ್ನಗಳು’, ಆದರ್ಶ ‘ಮಹಿಳಾರತ್ನಗಳು’ (೧೯೫೨), ಕೆಮಾಲ್ ಪಾಶಾ, ‘ನೆಪೋಲಿಯನ್ ಬೋನಪಾರ್ಟ್’, ‘ಶ್ರೀಕೃಷ್ಣದೇವರಾಯ’ (೧೯೩೩), ‘ಚಿತ್ರದುರ್ಗದ’ ಪಾಳಯಗಾರರು, (೨೪) ಮೊದಲಾದ ಜೀವನ ಚರಿತ್ರೆಗಳು ಕನ್ನಡದಲ್ಲಿ ಬಂದಿವೆ. ಮಾಲಿ ಮುದ್ದಣ್ಣನವರು ಸಂಪಾದಕರಾಗಿ ಹೊರತಂದಿರುವ ‘ಮಾಲಿ ಮರಿಯಪ್ಪ’ (೧೯೬೯) ‘ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು.’ ಕೃತಿ, ತಾಂತ್ರಿಕ ಪ್ರಗತಿಗೆ ದುಡಿದ ವ್ಯಕ್ತಿಯ ಜೀವನ ಚರಿತ್ರೆ.

ಹೈದರಾಬಾದು ಸಂಸ್ಥಾನದ ಮಂತ್ರಿಯಾಗಿದ್ದ ಸಾಲಾರ್ ಜಂಗ್ ನ ಚರಿತ್ರೆಯನ್ನು ಎಂ.ಎಸ್. ಪುಟ್ಟಣ್ಣನವರು ‘ಸಾಲಾರ್ ಜಂಗ್’ (೧೯೧೭) ಎಂಬ ಶಿರೋನಾಮೆಯಲ್ಲಿ ರಚಿಸಿದ್ದಾರೆ. ಶಾನುಭೋಗ ವೆಂಕಟರಮಣಯ್ಯನವರು ಬರೆದ ‘ಮೈಸೂರು ರಾಜರ ಚರಿತ್ರೆ’ (೧೭೯೦) ತುಂಬ ಹಳೆಯದು; ದೊಡ್ಡ ನವಾಬ ಹೈದರನ ಕಾಲದಲ್ಲಿದ್ದ ಚಾಮರಾಜ ಒಡೆಯರ ಕಾಲದವರೆಗಿನ ಚರಿತ್ರೆ ಅದರಲ್ಲಿದೆ. ಮುಮ್ಮಡಿ ಶ್ರೀ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಮುಖ್ಯ ವಿದ್ವಾಂಸರಾಗಿದ್ದ ‘ಕುಣಿಗಲ ರಾಮಾಶಾಸ್ತ್ರಿಗಳ ಚರಿತ್ರೆ’ (ಎಂ.ಎಸ್. ಪುಟ್ಟಣ್ಣ, ೧೯೧೦) ಈ ಶತಮಾನದಲ್ಲಿ ಬಂದ ಹಳೆಯ ಜೀವನ ಚರಿತ್ರೆಗಳಲ್ಲೊಂದು. ‘ಮಹಿಶೂರ ಮಹಾರಾಜ ಚರಿತ್ರಂ’ (೧೯೧೬) ಕೂಡ ಹಳೆಯದು. ಶ್ರೀಮನ್ನಾಲ್ವಡಿ ಕೃಷ್ಣರಾಜ ಒಡೆಯರ ಚರಿತ್ರೆಯನ್ನು ಸಿ.ಕೆ. ವೆಂಕಟರಾಮಯ್ಯನವರು ತಮ್ಮ ಶ್ರೇಷ್ಠ ಕೃತಿ ‘ಆಳಿದ ಮಹಾಸ್ವಾಮಿಯವರು’ ಗ್ರಂಥದಲ್ಲಿಯೂ ಓ. ಎನ್. ಲಿಂಗಣ್ಣಯ್ಯನವರು ‘ರಾಜರ್ಷಿ’ (೧೯೫೦) ಪುಸ್ತಕದಲ್ಲಿಯೂ ಕೊಟ್ಟಿದ್ದಾರೆ. ಎಂ. ಶಿಂಗ್ರಯ್ಯನವರು ಮೈಸೂರು ಆಳಿದ ಮಹಾಸ್ವಾಮಿಯವರಾದ ‘ಶ್ರೀ ಚಾಮರಾಜೇಂದ್ರ ಒಡೆಯರು’ (೧೯೩೧) ಸಿದ್ಧಪಡಿಸಿದ್ದಾರೆ. ‘ಮೋಕ್ಷಗುಂಡಂ ವಿಶ್ವೇಶ್ವರಯ್ಯ’ (೧೯೬೦) ಕಳೆದ ದಶಕದಲ್ಲಿ ಹೊರಬಂದಿದೆ.

ಮಹಾಮಹೋಪಾಧ್ಯಾಯ ದಾಕ್ಷಿಣಾತ್ಯ ಕಲಾನಿಧಿ ಮೊದಲಾದ ಬಿರುದಾಂಕಿತ ತಮಿಳು ಪ್ರಕಾಂಡ ಪಂಡಿತ,ಡಾ. ಉ. ಪೇ. ಸ್ವಾಮಿನಾಥಯ್ಯರ್ ಅವರ ಆತ್ಮ ಚರಿತ್ರೆಯ ಕನ್ನಡ ಅನುವಾದ ‘ನನ್ನ ಚರಿತ್ರೆ’ (೧೯೬೯) ಪ್ರಕಟವಾಯಿತು. ಬಂಗಾಲದ ವರಕವಿ ಹಾಗೂ ಭಾರತದಲ್ಲಿ ಸಾಹಿತ್ಯಕ್ಕೆ ಬಂದ ಏಕೈಕ ನೊಬೆಲ್ ಪಾರಿತೋಷಕ ವಿಜೇತ, ರವೀಂದ್ರನಾಥ ಠಾಕೂರ್ ರನ್ನು ಕುರಿತು ಕನ್ನಡದಲ್ಲಿ ಮೂರು ಗ್ರಂಥಗಳು ಬಂದಿವೆ : ಮಾಸ್ತಿಯವರ ಕೃತಿ ೧೯೩೧ ರಲ್ಲೂ ಶ್ರೀಧರರ ಕೃತಿ ೧೯೫೯ ರಲ್ಲೂ ಡಾ. ಹಾ. ಮಾ. ನಾಯಕರ ಕೃತಿ ೧೯೬೦ ರಲ್ಲೂ ಪ್ರಕಟಗೊಂಡಿವೆ. ‘ವಾಗ್ಗೇಯಕಾರ ವಾಸುದೇವಾಚಾರ್ಯ’ (೧೯೬೫) ಸಂಗೀತಗಾರರ ಜೀವನ ಚರಿತ್ರೆ. ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ, ಆಸ್ಥಾನವಿದ್ವಾನ್ ಬಿ. ದೇವೇಂದ್ರಪ್ಪ, ಹೊನ್ನಪ್ಪ ಭಾಗವತರ್ ಮೊದಲಾದವರ ಜೀವನ ಚರಿತ್ರೆಗಳೂ ಪ್ರಕಟವಾಗಿವೆ. ಕಲಾವಿದರನ್ನು ಕುರಿತ ಕನ್ನಡದಲ್ಲಿ ಪ್ರಕಟವಾದ ಜೀವನ ಚರಿತ್ರೆಗಳಲ್ಲಿ ಗುಬ್ಬಿ ವೀರಣ್ಣನವರ ಆತ್ಮ ವೃತ್ತಾಂತವಾದ ‘ಕಲೆಯೇ ಕಾಯಕ’ (೧೯೬೭) ಒಂದು ಮೈಲಿಗಲ್ಲು. ವರನಟ ನಟಸಾರ್ವಭೌಮ ರಾಜಕುಮಾರ್ ಅವರ ಆತ್ಮಕಥೆ (೧೯೭೦) ಕೂಡ ಬರೆದಿರುವಂತೆ, ಅವರನ್ನು ಕುರಿತು ಎರಡು ಮೂರು ಕಿರುಹೊತ್ತಗೆಗಳೂ ಹೊರಬಂದಿವೆ.

ಗ. ಸ. ಹಾಲಪ್ಪನವರು ಸಿದ್ಧಪಡಿಸಿದ ‘ರಾಷ್ಟ್ರಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪ’ (೧೯೬೬) ಒಂದು ವ್ಯಾಪಕವಾದ ಹೆಬ್ಬೊತ್ತಗೆ. ಇದರಲ್ಲಿ ಅವರ ಎಲ್ಲ ಬರಹಗಳನ್ನೂ ಒಂದೆಡೆ ಕೊಡುವ ಪ್ರಯತ್ನವಿದೆ. ಮುದ್ರಣವಿನ್ಯಾಸ ಹೊತ್ತಗೆಯ ಚೆಲುವನ್ನು ವೆಗ್ಗಳಿಸಿದೆ. ‘ಮೊಹರೆ ಹನುಮಂತರಾಯರು’ (೧೯೬೧) ಹಿರಿಯ ಪತ್ರಿಕಾಕರ್ತರೊಬ್ಬರ ಜೀವನ ಚಿತ್ರ. ಕನ್ನಡ ನಾಡಿನ ಮುಂದಾಳುಗಳಲ್ಲೊಬ್ಬರಾದ ‘ಕರ್ಮಯೋಗಿ’ ‘ಹಣವಂತರಾಯರು’ (೧೯೫೮) ಕೂಡಾ ಇದೇ ಬಗೆಯ ಜೀವನ ಚರಿತ್ರೆ. ‘ದೇಶಪಾಂಡೆ ಗಂಗಾಧರ ರಾಯರು’ (೧೯೮೮) ಕನ್ನಡದಲ್ಲಿ ಅನುವಾದವಾಗಿರುವ ಆತ್ಮಚರಿತ್ರೆ. ಧರ್ಮಸ್ಥಳದ ಹಿಂದಿನ ಹೆಗ್ಗಡೆಯವರಾದ ಮಂಜಯ್ಯ ಹೆಗ್ಗಡೆ ಅವರನ್ನು ಕುರಿತು ನಾಲ್ಕಾರು ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಮಿರ್ಜಿ ಅಣ್ಣಾರಾಯರು ಬರೆದ ‘ಮಹಾಪುರುಷ’ (೧೯೫೬) ಮತ್ತು ಮಾರ್ನಾಡು ವರ್ಧಮಾನ ಹೆಗ್ಗಡೆ ಅವರು ಬರೆದ ‘ಪೂಜ್ಯಮೂರ್ತಿ ಮಂಜಯ್ಯ ಹೆಗ್ಗಡೆ’ (೧೯೬೭) ಪ್ರಮುಖವಾಗಿದೆ.

೧೨

ಕನ್ನಡದಲ್ಲಿ ಪ್ರಕಟವಾಗಿರುವ ಜೀವನ ಚರಿತ್ರೆಗಳಿಗೆ ಸಂಬಂಧಿಸಿದಂತೆ ಒಂದು ಮುಖ್ಯವಾದ ಮಾತನ್ನು ಗಮನಿಸಬೇಕಾಗುತ್ತದೆ. ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಜೀವನ ಚರಿತ್ರೆ, ವ್ಯಕ್ತಿ ಚಿತ್ರಗಳಿಗಿಂತ ಹತ್ತು ಪಟ್ಟು ಹೆಚ್ಚಾಗಿ ಲೇಖನಗಳು ಅಚ್ಚಾಗಿವೆ. ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಅಚ್ಚಾಗಿರುವ, ಭಾನುವಾರದ ವಿಶೇಷ ಸಂಚಿಕೆ ಪುರವಣಿಗಳಲ್ಲಿ ಅಚ್ಚಾಗಿರುವ ವ್ಯಕ್ತಿಚಿತ್ರಗಳು ಗಮನಾರ್ಹ. ಅವುಗಳಲ್ಲಿ ಅನೇಕವು ಕಿರುಪರಿಚಯವಾಗಿರಬಹುದು. ಕೇವಲ ಸಾಮಯಿಕವಾಗಿರಬಹುದು. ಆದರೂ ಅಲ್ಲಿ ಸಿಗುವ ಸಾಮಗ್ರಿಯನ್ನು ಕಡೆಗಣಿಸುವಂತಿಲ್ಲ.

ಹೀಗೆಯೇ ವ್ಯಕ್ತಿಗಳು ಮರಣ ಹೊಂದಿದಾಗ ಪತ್ರಿಕೆಗಳಲ್ಲಿ ಪ್ರಕಟವಾಗುವ ಜೀವನ ಚರಿತ್ರೆ, ವ್ಯಕ್ತಿಚಿತ್ರಗಳನ್ನು ಇಲ್ಲಿ ಉಲ್ಲೇಖಿಸಬಹುದು. ಆಯಾ ವ್ಯಕ್ತಿಗಳನ್ನು ಕುರಿತು ಜೀವನ ಚರಿತ್ರೆ ಬರೆಯುವವರಿಗೆ ಇವು ಆಧಾರವಾಗಿ ಪರಿಣಮಿಸುತ್ತವೆ. ಜೀವನ ಚರಿತ್ರೆಗೆ ಅವರಿವರ ಹೇಳಿಕೆಗಿಂತ ಸ್ವಂತ ಪರಿಚಯ, ನಿಕಟಾನುವರ್ತಿ ಸಂಪರ್ಕ, ಸ್ವಾನುಭವ ವಿಶ್ವಾಸಾರ್ಹವೆಂಬುದು ನಿಜ. ಎಲ್ಲ ಸಂದರ್ಭಗಳಲ್ಲೂ ಇದು ಸಾಧ್ಯವಾಗದಿರಬಹುದು. ಈ ನಿಟ್ಟಿನಿಂದ ಪತ್ರಿಕೆಗಳಲ್ಲಿ ಪ್ರಕಟವಾದ ವಿವರಗಳು ಸಹಾಯಕವಾಗುತ್ತವೆ.

ಕಾದಂಬರೀ ರೂಪವಾಗಿ ಬಂದ ಜೀವನ ಚರಿತ್ರೆಗಳೂ ಕನ್ನಡದಲ್ಲಿ ಸಾಕಷ್ಟಿವೆ; ನನ್ನ ಲೆಕ್ಕದಲ್ಲಿ ಸುಮಾರು ಎಪ್ಪತ್ತೈದು ಕಾದಂಬರಿಗಳಿವೆ. ಅವುಗಳು ಶುದ್ಧಾಂಗವಾಗಿ ಜೀವನ ಚರಿತ್ರೆಗಳಲ್ಲ. ಆದರೂ ಅವುಗಳಲ್ಲಿ ಅಡಗಿ ಕುಳಿತಿರುವ ಜೀವನ ಚರಿತ್ರೆಯ ಅಂಶಗಳನ್ನು ಕಡೆಗಣಿಸುವಂತಿಲ್ಲ. ಈ ಬಗೆಯ ಕೆಲವು ಕಾದಂಬರಿಗಳ ಹೆಸರುಗಳನ್ನು ಮಾತ್ರ ಇಲ್ಲಿ ಸೂಚಿಸಿದೆ. ಅಯ್ಯರ್ ಅವರ ‘ಶಾಂತಲಾ’; ತ. ರಾ. ಸು. ಅವರ ‘ನೃಪತುಂಗ’, ‘ಹಂಸಗೀತೆ’, ‘ಶಿಲ್ಪಶ್ರೀ’ ಮತ್ತು ಚಿತ್ರದುರ್ಗದ ಕಾದಂಬರಿಗಳು; ಜಿ. ಬ್ರಹ್ಮಪ್ಪನವರ ‘ರತ್ನಾಕರ’ ‘ಖಾರವೇಲ’, ‘ದಾನಚಿಂತಾಮಣಿ’, ‘ಚೇಳಿನಿ’ಮತ್ತು ‘ಚಕ್ರೇಶ್ವರಿ’, ಎಂ. ವಿ. ಶ್ರೀನಿವಾಸ ಅವರ ‘ಮಸ್ತಾನಿ’; ಮಾಸ್ತಿಯವರ ‘ಚೆನ್ನಬಸವನಾಯಕ’ ಮುಂತಾದ ಚಾರಿತ್ರಿಕ ಕಾದಂಬರಿಗಳಲ್ಲಿ ಜೀವನ ಚರಿತ್ರೆಯ ಚಾರಿತ್ರಿಕಾಂಶಗಳು ಸಾಕಷ್ಟಿವೆ. ಇದರಂತೆ ಚಾರಿತ್ರಿಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಆಧರಿಸಿ ಒಂದು ಆಧುನಿಕ ನಾಟಕಗಳೂ ಕಥೆಗಳೂ ಕವನಗಳೂ ಪ್ರಬಂಧಗಳೂ ಕನ್ನಡದಲ್ಲಿ ಕೆಲವಿವೆ.

೧೯೫೩ ರ ಮೇ ೨೯ ರಂದು ಷೆರ್ಪಾ ತೇನ್ ಸಿಂಗ್ ಗೌರೀಶಂಕರ ಶಿಖರದ ನೆತ್ತಿ ಹತ್ತಿ ಇಳಿದ. ಶ್ರೀಸಾಮಾನ್ಯವಾಗಿ ಹತ್ತಿದ, ವಿರನಾಗಿ ವಿಖ್ಯಾತನಾಗಿ ಇಳಿದ. ಅವನ ಮತ್ತು ಸಂಗಡಿಗರ ಸಾಹಸ ಜೀವನದ (ಪರ್ವತಾರೋಹಣ ಜೀವನದ) ಕಥೆ. ಎವರೆಸ್ಟ್ ವೀರ ತೇನ್ ಸಿಂಗ್ ನ ಆತ್ಮಕಥೆ (೧೯೫೭) ಇದು ಜೇಮ್ಸ್ ರ್ಯಾಮ್ಸೆ ಉಲ್ಮನ್ ಗೆ ಹೇಳಿದ್ದು. ಇದರ ತರುವಾಯ ಬಂದು. ಪರ್ವತಪ್ರಿಯ ತೇನ್ ಸಿಂಗ್ (೧೯೬೪).

೧೯೭೦ ರ ಸುಮಾರಿನಲ್ಲಿ ಇಂಡಿಯಾ ಬುಕ್ ಹೌಸ್ ನವರು ಕನ್ನಡನಾಡಿನ ಸುಪ್ರಸಿದ್ಧ ಕಾದಂಬರಿಕಾರರಾದ ಅ. ನ. ಕೃಷ್ಣರಾಯರ ಸಂಪಾದಕತ್ವದಲ್ಲಿ ಒಂದು ಮಾಲೆಯನ್ನು ಪ್ರಾರಂಭಿಸಿದರು. (ಸುಮಾರು ಐನೂರಕ್ಕು ಮಿಗಿಲಾದ ಸಂಖ್ಯೆಯಲ್ಲಿ ಮಕ್ಕಳ ಸದಭಿರುಚಿಯ ಪುಸ್ತಕಗಳನ್ನು ಪ್ರಕಟಿಸುವ) ಯೋಜನೆ ಅದಾಗಿತ್ತು. ಅವು ಮಕ್ಕಳನ್ನು ಕುರಿತದ್ದಾದುದರಿಂದ ಭಾಷೆ ಸರಳ, ನಿರೂಪಣೆ ಸರಳವಾದರು ವಸ್ತುವಿನ ದೃಷ್ಟಿಯಿಂದ ಪ್ರಮುಖ ಮಾಹಿತಿ ಸಾಹಿತ್ಯವಾಗಿ ಆ ಮಕ್ಕಳ ಪುಸ್ತಕಗಳು ಹೊರಬಂದವು. ಅವು ಕೇವಲ ಮಕ್ಕಳ ಸಾಹಿತ್ಯ ಲೋಕದಲ್ಲಿ ಮಾತ್ರವಲ್ಲ, ಇಡೀ ಕನ್ನಡ ಸಾರಸ್ವತ ವಲಯದಲ್ಲಿಯೇ ಒಂದು ಹೊಸ ಸಂಚಲನವನ್ನು ಉಂಟುಮಾಡಿತು. ಆ ಮಾಲೆಯಲ್ಲಿ ಅನೇಕ ಮಹನೀಯರ ಜೀವನ ಚರಿತ್ರೆಗಳೂ ಪ್ರಕಟವಾದುವು. ಗಾತ್ರದಲ್ಲಿ ಕಿರಿದಾದರೂ ವಿಷಯ ಪ್ರತಿಪಾದನೆಯಲ್ಲಿ ಸತ್ವಯುತವಾಗಿ ಸತ್ಯಕ್ಕೆ ಹತ್ತಿರವಾಗಿ ಮೂಡಿ ಬಂದವು. ಆ ಮಾಲೆಯಲ್ಲಿ ನನ್ನದು ನಾಲ್ಕು ಪುಸ್ತಕಗಳು ಪ್ರಕಟವಾದ ಸಂತಸ ನನ್ನದು. ಅಕ್ಕಮಹಾದೇವಿ, ಹೆಳವನಕಟ್ಟೆ ಗಿರಿಯಮ್ಮ, ವೀರವನಿತೆ ಒಬವ್ವೆ – ಇವೆಲ್ಲ ಅದರ ಜೀವನ ಚರಿತ್ರೆಯನ್ನು ಪರಿಚಯಿಸುವ ಕಿರು ಹೊತ್ತಿಗೆಗಳು. ಹೀಗೆ ಇನ್ನೂ ಇತರ ಲೇಖಕರು ಬರೆದ ಅನೇಕರ ವ್ಯಕ್ತಿ ಚರಿತ್ರೆಯನ್ನು ಬಿಂಬಿಸುವ ಕೃತಿಗಳು ಹೊರಬಂದವು.

೧೯೮೦ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಖಿಲ ಕರ್ನಾಟಕ ಮಕ್ಕಳ ಪ್ರತಿಭೆಯ ಪ್ರದರ್ಶನ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿತು. ಆ ವರ್ಷ ಸಂದರ್ಭೋಚಿತ ರೀತಿಯಲ್ಲಿ ಅಂತರರಾಷ್ಟ್ರೀಯ ಮಕ್ಕಳ ವರ್ಷವನ್ನು ಗಮನದಲ್ಲಿಟ್ಟು ನೂರಾರು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿತು. ಈ ಮಾಲೆಯಲ್ಲಿ ನನ್ನದೊಂದು ಗ್ರಂಥ ಪುಷ್ಟವಾಗಿ ಡಾ. ಬಿ. ಆರ್. ಅಂಬೇಡ್ಕರ್ ಹೊರಬಂದಿತು, ಪುಸ್ತಕ ಕಿರಿದಾದರೂ ಮಾಹಿತಿಪೂರ್ಣ ಕೃತಿಯಾಗಿ ಅಂಬೇಡ್ಕರರ, ಸಮಗ್ರ ಜೀವನವನ್ನು ಪರಿಚಯಿಸಿದೆ.

ಸದಭಿರುಚಿಯನ್ನು ಕುದುರಿಸುವ ಮಕ್ಕಳ ಪುಸ್ತಕ ಮುದ್ರಿಸುವ ಕಾಯಕಕ್ಕೆ ರಾಷ್ಟ್ರೋತ್ಥಾನ ಪರಿಷತ್ತು ಈ ಅವಧಿಯಲ್ಲಿ ಮುಂದಾಯಿತು, ಅನೇಕಾನೇಕ ಪುಸ್ತಕಗಳ ಸುಗ್ಗಿ ತಂದಿತು. ಇಲ್ಲಿಯೂ ಅನೇಕರ ಜೀವನ ಚರಿತ್ರೆಗಳು ಹೊರ ಬಂದವು. ನಾನು ಬರೆದ ಜನ್ನ ಪುಸ್ತಕವು ಅವುಗಳಲ್ಲಿ ಒಂದು.

ಅ.ನ.ಕೃ., ತ.ರಾ.ಸು., ಕೆ.ವಿ. ಅಯ್ಯರ್, ಸಿ.ಕೆ. ನಾಗರಾಜರಾವ್ ಇನ್ನೂ ಮೊದಲಾದವರು ರಚಿಸಿರುವ ಐತಿಹಾಸಿಕ ಕಾದಂಬರಿಗಳಲ್ಲಿ ಕಥಾನಾಯಕ ಅಥವಾ ನಾಯಕಿಯರ ಸಾಕಷ್ಟು ಚಾರಿತ್ರಿಕ ಅಂಶಗಳಿದ್ದು ಅವು ಪರೋಕ್ಷ ಜೀವನ ಚರಿತ್ರೆಗಳಾಗಿವೆ.

ಇತ್ತೀಚಿನ ದಿನಗಳಲ್ಲಿ ಜೀವನ ಚರಿತ್ರೆಗಳ ವಿವಿಧ ಆಯಾಮಗಳನ್ನು ಕುರಿತ ಅಧ್ಯಯನ ಪೂರ್ಣ ಪಿ.ಎಚ್.ಡಿ. ಮಹಾಪ್ರಬಂಧಗಳು ಬಂದಿದೆ ಬರುತ್ತಿವೆ. ಹಾಗೆಯೆ ಇತ್ತೀಚೆಗೆ ಕರ್ನಾಟಕ ಸರ್ಕಾರ ಹಿಂದೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳ, ಹಿರಿಯ ಶಾಸಕರ ಜೀವನ ಚರಿತ್ರೆಗಳನ್ನು ವಿದ್ವಾಂಸರಿಂದ ಬರೆಸಿ ಪ್ರಕಟಿಸುತ್ತಿದೆ. ‘ಸಂಸದೀಯ ಪಟುಗಳು’ ಎನ್ನುವ ಮಾಲೆಯಡಿ ಈಗಾಗಲೇ ಕೆ.ಸಿ. ರೆಡ್ಡಿ, ಕಡಿದಾಳ್ ಮಂಜಪ್ಪ, ನಿಜಲಿಂಗಪ್ಪ, ದೇವರಾಜ ಅರಸು, ಬಿ.ಡಿ. ಜತ್ತಿ, ಕೆಂಗಲ್ ಹನುಮಂತಯ್ಯ, ಗುಂಡೂರಾವ್ – ಇವರುಗಳ ರಾಜಕೀಯ ಜೀವನದ ಪರಿಚಯದೊಂದಿಗೆ ವ್ಯಕ್ತಿಗತ ಅಂಶಗಳೂ ಸೇರಿದ ಜೀವನ ಚರಿತ್ರೆಗಳಾಗಿವೆ.

ಬದುಕಿನಲ್ಲಿ ಬಹು ದೊಡ್ಡ ವ್ಯಕ್ತಿಗಳಾಗಿ ಬಾಳಿದವರ ಜೀವನ ಚರಿತ್ರೆಗಳ ಓದು ನಮ್ಮ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುವುದಲ್ಲದೆ, ಜೀವನದಲ್ಲಿ ಏನನ್ನಾದರೂ ಪ್ರಬುದ್ಧವಾದುದನ್ನು ಸಾಧಿಸಬೇಕೆನ್ನುವ ಛಲ ಮೂಡುತ್ತದೆ. ಕೆಲವರ ಜೀವನ ಚರಿತ್ರೆಗಳು, ಅನೇಕರ ಬದುಕಿನಲ್ಲಿ ಒಂದು ಹೊಸ ತಿರುವನ್ನು ಉಂಟುಮಾಡಿದ ಪ್ರಸಂಗಗಳಿವೆ, ಹೊಸ ಮನ್ವಂತರಕ್ಕೆ ನಾಂದಿ ಹಾಡಿದ ಪರಿವರ್ತನೆಗಳೂ ಇಲ್ಲಿವೆ. ಮನುಷ್ಯನ ಬದುಕನ್ನು ರೂಪಿಸುವಲ್ಲಿ ಜೀವನ ಚರಿತ್ರೆಯ ಪ್ರಾಕಾರ ಮಹತ್ವದ ಸ್ಥಾನ ಪಡೆದಿದೆ.

ಜಗತ್ತಿನ ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟಗೊಂಡಿರುವ ಅನೇಕ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳು ಇತರ ಭಾಷೆಗಳಿಗೆ ಅನುವದಗೊಂಡಂತೆ, ಕನ್ನಡ ಭಾಷೆಗೂ ಭಾಷಾಂತರಗೊಂಡಿವೆ, ಕನ್ನಡಿಗರ ಮನ ಮುದಗೊಳಿಸಿವೆ, ಅರಳಿವೆ, ಬುದ್ಧಿ-ಭಾವಗಳು ವಿಕಸನಗೊಂಡಿವೆ.

[1] ಪರಿಷತ್ತಿನ ಗ್ರಂಥ ಪ್ರದರ್ಶನಗಳ (೧೯೩೪, ೧೯೩೫) ವರದಿಗಳ ಲೆಕ್ಕ: ೨೬೨-ಸಂ.

[2] ಖಲೀಲ್ ಗಿಬ್ರಾನನ್ನು ಕುರಿತ ಕವಿ-ಕಾವ್ಯ ಪರಿಚಯ ಗ್ರಂಥ ಡಾ. ಪ್ರಬುಶಂಕರ ಅವರಿಂದ ಈಚೆಗೆ (೧೯೭೦) ರಚಿತವಾಗಿ, ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗದಿಂದ ಪ್ರಕಟವಾಗಿದೆ. ಸಂ.