ಈ ವಿಮರ್ಶೆಯನ್ನು ಬರೆದಿರುವ ಶ್ರೀಮಾನ್ ವೆಂಕಟೇಶ್ವರರಾವ್ ನಾರ್ಲ ಅವರು ‘ಆಂಧ್ರ ಜ್ಯೋತಿ’ ಸಂಪಾದಕರು. ಸ್ವತಃ ಕತೆಗಾರರು, ಲೇಖಕರು, ಇಂಗ್ಲಿಷ್ – ತೆಲುಗು ಭಾಷೆಗಳೆರಡರಲ್ಲೂ ಪುಸ್ತಕ, ಲೇಖನಗಳನ್ನು ಬರೆದಿದ್ದಾರೆ. ಇವರು ೧೯೮೫ ರಲ್ಲಿ ನಿಧನರಾದರು.

ಇದು ಅವರ ಲೇಖನದ ಕನ್ನಡಾನುವಾದ.

೧೯೬೦ ರ ಅವಧಿಯ ತೆಲುಗು ಸಾಹಿತ್ಯ ರಂಗದಲ್ಲಿ ಮಹಿಳೆಯರ ಪ್ರಾಬಲ್ಯವೇ ಮೊಟ್ಟಮೊದಲು ಎದ್ದುಕಾಣುವ ಪ್ರಮುಖ ಲಕ್ಷಣವೆಂಬುದರಲ್ಲಿ ಅನುಮಾನವಿಲ್ಲ. ಹೀಗೆಂದರೆ ಇದಕ್ಕೂ ಮೊದಲು ಲೇಖಕಿಯರು ಇರಲಿಲ್ಲವೆಂದಲ್ಲ. ನಮ್ಮ ಮಹಿಳಾವರ್ಗವನ್ನು ಉದ್ದೇಶಪೂರ್ವಕವಾಗಿಯೇ ಅವಿದ್ಯಾವಂತರನ್ನಾಗಿ ಇರಿಸಿದ ಮಧ್ಯಕಾಲದಲ್ಲೂ ಮೊಲ್ಲ, ತರಿಗೊಂಡ ವೆಂಕಮಾಂಬ, ರಂಗಾಜಮ್ಮ, ಮುದ್ದು, ಪಳನಿ ಮತ್ತು ಇತರ ಕವಯತ್ರಿಯರಿದ್ದರು. ಆಧುನಿಕ ಕಾಲದಲ್ಲಿ ಧಾರ್ಮಿಕ ಸಾಮಾಜಿಕ ಹಾಗೂ ಸಾಹಿತ್ಯಿಕ ಮುಂದಾಳು, ರಾಜ್ಯಲಕ್ಷ್ಮಿಯವರೇ ಮೊತ್ತಮೊದಲ ಲೇಖಕಿ. ವೀರೇಶ ಲಿಂಗಂ ಪ್ರಯೋಗವೆಸಗಿದ ಹಲವು ಚಳುವಳಿಗಳಲ್ಲಿ ಮಹಿಳೆಯರು ವಿದ್ಯಾವಂತರಾಗುವ ಅಧಿಕಾರ ದೊರಕಿಸಿ ಕೊಡುವುದೂ ಒಂದು. ಅವರ ಈ ಚಳುವಳಿಯ ಆಟದ ಮೊದಲ ದಾಳವೇ ತಮ್ಮ ಅವಿದ್ಯಾವಂತ ಹೆಂಡತಿಯನ್ನು ವಿದ್ಯಾವಂತಳನ್ನಾಗಿ ಮಾಡಿದ್ದು. ಈ ವಿಚಾರದಲ್ಲಿ ಅವರು ತಮ್ಮ ಮಾರ್ಗದರ್ಶಕ ಈಶ್ವರಚಂದ್ರ ವಿದ್ಯಾಸಾಗರರಿಗಿಂತ ಹೆಚ್ಚು ಸ್ಥಿರವೂ ಸ್ಥೈರ್ಯಶಾಲಿಯೂ ಆಗಿದ್ದರು. ವಿದ್ಯಾಸಾಗರರು ತಮ್ಮ ಸಂಪ್ರದಾಯಸ್ಥ ತಂದೆ ವಿರೋಧಿಸಿದ ಕೂಡಲೇ, ತಾವು ತಮ್ಮ ಹೆಂಡತಿಗೆ ಕೊಡುತ್ತಿದ್ದ ಶಿಕ್ಷಣವನ್ನು ನಿಲ್ಲಿಸಿಬಿಟ್ಟರು. ಆದರೆ ವೀರೇಶಲಿಂಗಂ ತಮ್ಮ ತಾಯಿಯ ಅಸಂತೃಪ್ತಿಯನ್ನು ಕಡೆಗಣಿಸಿ ತಮ್ಮ ಹೆಂಡತಿಗೆ, ಆಕೆ ದೈವಭಕ್ತಿಗೀತೆಗಳನ್ನು ರಚಿಸುವಷ್ಟರ ಮಟ್ಟಿಗೆ, ತಾವೇ ಖುದ್ದಾಗಿ ಶಿಕ್ಷಣ ಕೊಟ್ಟರು. ಆಕೆಯ ಈ ಗೀತರಚನೆಯ ಸಾಹಿತ್ಯಿಕ ಮೌಲ್ಯ ಏನೇ ಇರಲಿ, ಆಧುನಿಕ ಕಾಲದಲ್ಲಿನ ಮೊತ್ತಮೊದಲ ಲೇಖಕಿಯೆಂಬ ಅಪೂರ್ವ ಗೌರವ ಪಡೆದರು. ಅನೇಕರು ಅವರನ್ನು ಹಿಂಬಾಲಿಸಿದರು. ಅಂಥವರಲ್ಲಿ ಬಂಡಾರು ಅಚ್ಚುಮಾಂಬ, ಕನುಪರ್ತಿ ವರಲಕ್ಷ್ಮಮ್ಮ, ತಲ್ಲಾಪ್ರಗಡ ವಿಶ್ವಸುಂದರಮ್ಮ, ಬಸವರಾಜು ರಾಜ್ಯಲಕ್ಷ್ಮಮ್ಮ ಮತ್ತು ಚಾವಲಿಬಂಗಾರಮ್ಮ – ಇವರು ತುಂಬ ಹೆಸರಾಂತವರು. ಇಷ್ಟಾದರು ಈಗ ಇರುವಂತೆ ಹಿಂದೆ ಎಂದೂ ಲೇಖಕಿಯರು ಸಾಹಿತ್ಯ ಕ್ಷೇತ್ರದಲ್ಲಿ ಪ್ರಧಾನವಾಗಿರಲಿಲ್ಲ.

ಸಾಹಿತ್ಯ ಎಲ್ಲ ಪ್ರಕಾರಗಳಲ್ಲೂ ಇಂದು ಮಹಿಳಾ ಬರೆಹಗಾರರಿದ್ದಾರೆ. ಆದರೂ ಅವರ ವಿಶೇಷ ಯಶಸ್ಸು ಇದುವರೆಗೆ ಕಾದಂಬರಿಕಾರರಾಗಿ, ಓದುಗರ ಸಂಖ್ಯೆಯೊಂದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ ತುಂಬ ಜನಪ್ರಿಯ ಪುರುಷ ಕಾದಂಬರಿಕಾರರಿಗಿಂತ ಮಹಿಳೆಯರು ಬಹಳ ಮುಂದೆ ಹೋಗಿದ್ದಾರೆ. ವಾಸ್ತವವಾಗಿ ಅವರೇ ನಮ್ಮ ವಾರ ಪತ್ರಿಕೆ ಹಾಗೂ ಮಾಸಿಕಗಳ ಕೇಂದ್ರ ಆಕರ್ಷಣೆ. ಅವರ ಕಾದಂಬರಿಗಳ ಧಾರಾವಾಹಿಯಿರದೆ ಆ ಪತ್ರಿಕೆಗಳು ತಮ್ಮ ವಿಪುಲ ಪ್ರಸಾರವನ್ನು ಉಳಿಸಿಕೊಳ್ಳುವುದು ಕಡುಕಷ್ಟವಾಗಿದೆ. ಅವರ ಕೃತಿಗಳು ಚಿರಕಾಲಿಕವಾಗಿ ಇರಬಲ್ಲವೇ ಎಂಬುದನ್ನು ಕಾಲ ನಿರ್ಧರಿಸಬೇಕು. ಆದರೆ ಸದ್ಯಕ್ಕೆ ಅವನ್ನು ಕುತೂಹಲದಿಂದ ಜನ ಓದುವರು, ತೀಕ್ಷ್ಣವಾಗಿ ಮಾತನಾಡುವರು, ಉತ್ಸಾಹದಿಂದ ಮಾತನಾಡಿಸುವರು. ಅವರ ಬಹುಸಂಖ್ಯೆಯ ಓದುಗರು ಅವರ ಮಹಿಳಾವರ್ಗ. ಆದರೆ ಪುರುಷವರ್ಗ ಹುರುಪಿನ ಮೆಚ್ಚುಗೆ ಸೂಚಿಸುವಲ್ಲಿ ಹಿಂದುಳಿದಿಲ್ಲ. ವಾಸ್ತವವಾಗಿ ಲೇಖಕಿಯರ ಘನತೆ ಎಷ್ಟು ದೊಡ್ಡದಿದೆಯೆಂದರೆ ಕೆಲವು ಪುರುಷರು ಕೂಡ ತಮ್ಮ ಕೃತಿಗಳನ್ನು ಮಹಿಳೆಯರ ಮರೆಹೆಸರಿನಿಂದ ಪ್ರಕಟಿಸುತ್ತಿದ್ದಾರೆ.

ಮಹಿಳಾ ಕಾದಂಬರಿಕಾರರಲ್ಲಿ ಹೆಚ್ಚು ಸಫಲರಾದವರೆಂದರೆ ಮುಪ್ಪಾಳ ರಂಗ ನಾಯಕಮ್ಮ, ಯುದ್ದನಪೂಡಿ ಸುಲೋಚನಾರಾಣಿ, ಕೋಡೂರಿ ಕೌಸಲ್ಯಾದೇವಿ, ದ್ವಿವೇಮಲ ವಿಶಾಲಾಕ್ಷಿ, ವಾಸಿರೆಡ್ಡಿ ಸೀತಾದೇವಿ ಮತ್ತು ಸಿ. ಆನಂದಾರಾಮಮ್. ಅವರೆಲ್ಲ ಮಧ್ಯಮ ವರ್ಗದ ಸಮಾಜದಿಂದ ಬಂದವರು. ಅವರು ಹೆಚ್ಚಾಗಿ ಮಧ್ಯಮ ವರ್ಗದವರ ಆಶೆನಿರಾಶೆ ಸುಖದುಃಖ ಮುಳ್ಳುಮಲ್ಲಿಗೆಗಳನ್ನೇ ಕುರಿತು ಬರೆಯುವರು. ಈ ಮಧ್ಯಮವರ್ಗದಾಚೆಯ ಬಣ್ಣನೆಗೆ ತೊಡಗಿದಾಗ ಅವರ ಬರೆಹ ಎಡವುತ್ತದೆ. ಅವರ ಜ್ಞಾನದ ಪರಿಧಿ, ಅನುಭವದ ವ್ಯಾಪ್ತಿ ಮತ್ತು ಸಂವೇದನೆ ಕೂಡ ಸೀಮಿತ. ಆದರೆ ಅವರು ಈ ನೇಮಿಯಲ್ಲಿ ತಮ್ಮ ಕಲಾಕೌಶಲದ ಯಾಜಮಾನ್ಯ ಮೆರೆದಿದ್ದಾರೆ.

ನಮ್ಮ ಪ್ರಮುಖ ಮಹಿಳಾ ಕಾದಂಬರಿಕಾರರಲ್ಲಿ ವಿಶಾಲಾಕ್ಷಿಯವರು ಹೆಚ್ಚು ನಾಗರಿಕ ಹಾಗೂ ನವಿರು. ರಂಗನಾಯಕಮ್ಮ ಹೆಚ್ಚು ನಿಯಮಬದ್ಧ ಹಾಗೂ ಶಕ್ತಿಯುತ, ಸುಲೋಚನಾ ರಾಣಿ ಹೆಚ್ಚು ಭಾವಾತಿರೇಕ ಹಾಗೂ ಸೂಕ್ಷ್ಮಗ್ರಾಹಿ, ವಿಶಾಲಾಕ್ಷಿಯವರು ಮೇಲಿನ ವರ್ಗಕ್ಕೆ ಸೇರಿದವರು. ಅವರದು ವ್ಯಾಪಕವಾದ ಪ್ರವಾಸ. ಮೇಲುವರ್ಗದವರೆಂದು ಕರೆಸಿಕೊಳ್ಳುವವರ ಬದುಕಿನ ಒಳ್ಳೆಯ ತಿಳುವಳಿಕೆಯಿದೆ. ವಿಫುಲವಾಗಿ ಓದುತ್ತಾರೆ, ತಮ್ಮ ಕೃತಿಯನ್ನು ಎಚ್ಚರದಿಂದ ಯೋಚಿಸುತ್ತಾರೆ. ಅದನ್ನು ಕಡೆಗೆ ಎರಡು ಸಲವಾದರೂ ಪರಿಶೀಲಿಸದೆ ಪ್ರಕಟಿಸುವುದಿಲ್ಲ.

ರಂಗನಾಯಕಮ್ಮನವರಲ್ಲಿ ಅವರೊಡನೆ ಹೋಲಿಸಿದರೆ, ಸೂತ್ರನೇಮ ಕಡಿಮೆ. ಸಾಮಾನ್ಯವಾಗಿ ಅವರ ಮೊದಲ ಹಸ್ತಪತ್ರಿಕೆಯೇ ಕಡೆಯದು ಕೂಡ. ಆದೇನಾದರು ಇರಲಿ, ಅವರ ಬರೆಹ ಸಮೃದ್ಧ. ಅವರ ಓದುಗರೂ ಅಪಾರ. ರಂಗನಾಯಕಮ್ಮ ನವರ ವಿಶೇಷ ಲಕ್ಷಣವೆಂದರೆ ಅಂಕೆಯಿಲ್ಲದ ಹೆಚ್ಚು. ಮಾನವನಿರ್ಮಿತ ಜಗತ್ತಿನ ವಿರುದ್ಧ ಅವರು ದಂಗೆಯೇಳುತ್ತಾರೆ, ಹೆಣ್ಣು ಗಂಡಿಗಿಂತ ಯಾವ ವಿಧದಲ್ಲೂ ಕಡಿಮೆಯಲ್ಲವೆಂದು ಅವರು ಭಾವಿಸುತ್ತಾರೆ. ಹೆಣ್ಣಿನ ಮಾತಿಗೆ ಇನ್ನೂ ಹೆಚ್ಚಿನ ನಿರ್ಣಾಯಕ ಸ್ಥಾನ ಇದ್ದಿದ್ದೇ ಆದರೆ ಆಗ ನಮ್ಮ ಪ್ರಪಂಚ ಇನ್ನೂ ಉತ್ತಮ ಸ್ಥಿತಿಯಲ್ಲಿರುತ್ತಿತ್ತೆಂದು ದೃಢೀಕರಿಸುತ್ತಾರೆ. ಮಾನವ ಜಾತೀಯ ತಾರತಮ್ಯ, ವರ್ಗಸೌಲಭ್ಯ ಮತ್ತು ಮತೀಯ ಮೂಢನಂಬಿಕೆಗಳನ್ನು ಪ್ರತಿಭಟಿಸುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಅವರು ವಿಗ್ರಹ ಭಂಜಕರು, ಅವರಿಂದ ಎಷ್ಟು ಸಾಧ್ಯವೋ ಅಷ್ಟು ಹಳೆಯ ಹಾಗೂ ಗೊಡ್ಡುತತ್ತ್ವಗಳನ್ನು ಮುರಿಯಲೆತ್ನಿಸುತ್ತಾರೆ. ಅವರ ವಾದವಿವಾದಗಳು ಆಗಾಗ್ಗೆ ಅವರ ಕೃತಿಗಳ ಕಲೆಯ ಮೌಲ್ಯವನ್ನು ಮಲಿನಗೊಳಿಸುವುದುಂಟು. ಸುಲೋಚನಾ ರಾಣಿಯವರು ರಂಗನಾಯಕಮ್ಮ ನವರ ಹಾಗಲ್ಲ. ಇವರು ಈ ಕಾರಣ ಇಲ್ಲವೇ ಆ ಕಾರಣ ಎಂದು ಕಾರಣಗಳಿಗಾಗಿ ಪೇಚಾಡರು. ಮಾನವ ಸ್ವಭಾವದಲ್ಲಿ. ಅದರ ಎಲ್ಲ ವೈವಿಧ್ಯ ವರ್ಣ ಹಾಗೂ ಹೊರ ಆಕಾರ, ಬೆಳಕು ಹಾಗೂ ಕತ್ತಲೆ, ಎತ್ತರ ಹಾಗೂ ಆಳ – ಇವುಗಳಲ್ಲಿ ಆನಂದಿಸುತ್ತಾರೆ. ಬಹುಶಃ ಮಾನವ ಸ್ವಭಾವದಲ್ಲಿ ವ್ಯಕ್ತವಾಗುವ ಇವರ ಈ ತೀವ್ರ ತಾದಾತ್ಮವೇ ಓದುಗರನ್ನು ಪ್ರತಿಯೊಂದು ಧಾರಾವಾಹಿಯಲ್ಲೂ ಮುಂದಿನದನ್ನು ಕುತೂಹಲದಿಂದ ಕಾದುನೋಡುವಂತೆ ಮಾಡಿಸೆ. ದಿಟವಾಗಿಯೂ ಓದುಗರ ಎಷ್ಟೊಂದು ಕುತೂಹಲಾಸಕ್ತರಾಗಿರುವರೆಂದರೆ, ಒಮ್ಮೊಮ್ಮೆ ಮುದ್ರಣಾಲಯಗಳಿಂದ ಧಾರಾವಾಹಿಯಾಗಿ ಪ್ರಕಟವಾಗುವ ಪತ್ರಿಕೆಗಳ ಬಿಡಿಹಾಳೆಗಳನ್ನೇ ಎಗರಿಸುವುದುಂಟು.

ಈ ಮಹಿಳಾ ಬರೆಹಗಾರರಲ್ಲಿ ಕೆಲವರು ಕೃತಿಚೌರ್ಯದ ಆಪಾದನೆಗೆ ಒಳಗಾಗಿರುವುದೊ ನಿಜ. ಆದರೆ ನಮ್ಮ ಹಲವಾರು ಬರೆಹಗಾರರ ಸಾಮಾನ್ಯ ದೋಷವಿಲ್ಲವೇ? ನಾನು ನಿಂತ ನಿಲುವಿನಲ್ಲೇ ಕನಿಷ್ಟ ಇಂಥ ಐವತ್ತು – ಅರವತ್ತು ಇಲ್ಲವೇ ಎಪ್ಪತ್ತು ಮೂಲ ಕವನಗಳು, ನಾಟಕಗಳು, ಸಣ್ಣ ಕತೆಗಳು ಮತ್ತು ಕಾದಂಬರಿಗಳನ್ನು ಹೆಸರಿಸಬಲ್ಲೆ. ನಮ್ಮ ಕೆಲವು ಹೆಸರಾಂತ ಲೇಖಕರು ಯಾವ ವಿಧವಾದ ಕೃತಜ್ಞತೆಯನ್ನೂ ವ್ಯಕ್ತಪಡಿಸದೆ ಈ ಕೃತಿಗಳನ್ನು ಇಲ್ಲವೇ ಆಧರಿಸಿದ್ದಾರೆ, ಇಲ್ಲವೇ ಅನುವಾದಿಸಿದ್ದಾರೆ.

ಇನ್ನೇನು ಮುಗಿಯಲಿರುವ ಈ ದಶಕದ ಎರಡನೆಯ ಪ್ರಮುಖ ಲಕ್ಷಣವೆಂದರೆ ಗದ್ಯಕಾವ್ಯ ಮುಂದಾಗಿರುವುದು. ಶಿಷ್ಟ್ಲಾ ಉಮಾಮಹೇಶ್ವರರಾವು ಬಹುಶಃ ಛಂದಸ್ಸಿನ ಸಂಕೋಲೆಯನ್ನು ಮುರಿದ ಮೊದಲ ತೆಲುಗು ಕವಿ. ಅವರು ೧೯೩೦ ರಲ್ಲೇ ಈ ಕೆಲಸ ಮಾಡಿದರು. ಅವರನ್ನು ಅನುಸರಿಸಿದ ಮೊದಲಿಗರು ಶ್ರೀರಂಗಮ ಶ್ರೀನಿವಾಸರಾವು (ಶ್ರೀ ಶ್ರೀ) ಅವರು, ಅವರ ನೆಂಟರಾದ ನಾರಾಯಣ ಬಾಬು ಮತ್ತು ಅವರ ಸೋದರಳಿಯ ಆರುದ್ರ. ಅಲ್ಲಿಂದೀಚೆಗೆ ತಮ್ಮ ಕಾವ್ಯ ಬರೆಯಲು ಅನೇಕರು ಒಮ್ಮೊಮ್ಮೆ ಮಾತ್ರ ಛಂದೋಬದ್ಧ ಗದ್ಯ ಇಷ್ಟಪಟ್ಟಿದ್ದಾರೆ. ಆದರೂ ಅದು ಒಂದು ಮುನ್ನಡೆಯ ಮಟ್ಟವನ್ನು ಈ ದಶಕದ ನಡುವಿನ ತನಕ ಮುಟ್ಟಲಿಲ್ಲ. ಕುಂದುರ್ತಿ ಅದರ ನಾಯಕರಲ್ಲಿ ಒಬ್ಬರು. ಅದನ್ನು ‘ಫ್ರೀವರ್ಸ್‌ ಫ್ರೆಂಟ್’ ಎಂದು ಕರೆದಿದ್ದಾರೆ. ಇತರರು ಇತರ ಹೆಸರುಗಳನ್ನು ಕೊಟ್ಟಿದ್ದಾರೆ. ‘ಚೇತನಾವರ್ತಮ್’ ಎಂಬುದು ಅವುಗಳಲ್ಲೊಂದು. ಅದನವನು ಯಾವುದೇ ಹೆಸರಿನಿಂದ ಕರೆದಿರಲಿ, ಅದರ ಎರಡು ಪ್ರಮುಖ ಲಕ್ಷಣಗಳೆಂದರೆ ಸಾಮಾಜಿಕ ಪ್ರಜ್ಞೆ ಮತ್ತು ಗದ್ಯದ ಬಳಕೆ. ಅದನ್ನು ನೀರಸಗೊಳಿಸದೆ ಬಳಸಬೇಕು, ಅಷ್ಟೆ. ಹೆಚ್ಚಾಗಿ ಅದು ನಿತ್ಯಜೀವನದ ಜನಸಾಮಾನ್ಯರ ಗದ್ಯವಾಗಿರಬೇಕು. ಅದರ ಬಳಕೆಯಲ್ಲಿ ಕೆಲವು ಸಹಜ ಸ್ವರಾವಲೋಹಣ ಮತ್ತು ಲಯ ಸಾಧಿಸಬೇಕು. ವಸ್ತು ಭಾವನಾಲೋಕದ್ದಾಗಿರಕೂಡದು, ಸುಲಭ ವಿಮೋಚನಾ ರೀತಯದಾಗಿರಕೂಡದು. ಸಮಕಾಲೀನ ಜೀವನದ ಮೇಲೆ ಅದರ ಸಂಬಂಧವಿರಬೇಕು. ಅದು ಕ್ಷಣಭಂಗುರವಾಗಿರದೆ ಸ್ಥಳೀಯವಾಗಿರಬೇಕು. ಸಾಧ್ಯವಾದ ಮಟ್ಟಿಗೂ ಅದರ ಪ್ರತಿಮೆ ಹೊಸದೂ ಸೆಳೆಯುವಂಥಾದ್ದೂ ಆಗಿರಬೇಕು. ಅದು ತನ್ನ ಬೇರನ್ನು ಮಾನವೀಯತೆಯಲ್ಲಿ ಬಿಟ್ಟಿರಬೇಕಲ್ಲದೆ ಮಾನವ ಆದರ್ಶಗಳಿಂದ ಸ್ವಾತಂತ್ರ್ಯ ಸಮಾನತೆ ಹಾಗೂ ಗೌರವಗಳನ್ನು ಪ್ರಚಾರ ಮಾಡಬೇಕು. ಸಾಮಾಜಿಕ, ಆರ್ಥಿಕ ಅಸಮಾನತೆ, ಧಾರ್ಮಿಕ ಡಂಭಾಚಾರ, ಜಾತಿಯ ದಬ್ಬಾಳಿಕೆ ಹಾಗೂ ಸಂಕುಚಿತ ರಾಷ್ಟ್ರೀಯ ಭಾವನೆಗಳ ವಿರುದ್ಧ ಅದು ನಿರ್ದಯವಾಗಿ ಹೋರಾಡಬೇಕು.

‘ಫ್ರೀವರ್ಸ್‌ ಫ್ರೆಂಟ್’ ಅದು ತನ್ನ ಪಾಡಿಗೆ ತಾನೇ ಹಾಕಿಕೊಂಡಿರುವ ಉನ್ನತ ಆದರ್ಶಗಳನ್ನು ಎಷ್ಟರಮಟ್ಟಿಗೆ ಸಾಧಿಸಿವೆಯೆಂಬುದನ್ನು ಹೇಳಲು ಇನ್ನೂ ಕಾಲಸಾಲದು. ನಮ್ಮ ಸಂಪ್ರದಾಯ ಶರಣರು ಆಗಾಗ್ಗೆ ಮಾಡುವಂತೆ ಅದನ್ನು ತೆಗಳುವುದಾಗಲಿ, ತಿರಸ್ಕರಿಸುವುದಾಗಲಿ ಮೂರ್ಖತನವೆಂದು ಮಾತ್ರ ಯಾರೊಬ್ಬರೂ ಹೇಳಬಹುದು. ಇತ್ತೀಚಿನ ವರ್ಷಗಳ ಕೆಲವು ಸೊಗಸಾದ ಕಾವ್ಯಗಳು ನೇರವಾಗಿ ಈ ‘ಫ್ರೀವರ್ಸ್‌ಫ್ರೆಂಟ್’ ಪರಂಪರೆಯ ಫಲ. ಈ ಸೊಗಸಾದುದರ ಜೊತೆಗೆ ಬುದ್ಧಿ ಶೂನ್ಯವಾದ ಹೊಲಸಾದ ಹಾಗೂ ದೂಷಣೀಯವಾದ ಬರೆಹವೇ ಬಹಳವಿದೆ ಎಂಬುದೂ ನಿಜ. ಆದರೆ ಈ ಮಾತು ಛಂದಸ್ಸಿನ ಎಲ್ಲ ನಿಯಮ ನಿಬಂಧನೆಗಳಿಗೆ ಅನುಸಾರವಾಗಿ ಬರೆದ ಸಂಪ್ರದಾಯಬದ್ಧ ಕಾವ್ಯಕ್ಕೆ ಅಥವಾ ಯಾವುದೇ ಕಾವ್ಯಕ್ಕೆ ಹೊರತಾದುದಲ್ಲ.

ಒಟ್ಟಿನಲ್ಲಿ ಈ ಮಾಧ್ಯಮದಲ್ಲಿ ಯಾರು ಹೆಚ್ಚಾಗಿ ಜಯಶಾಲಿಗಳಾಗಿದ್ದರೊ ಅವರು ಭಾಷೆ ಹಾಗೂ ಛಂದಸ್ಸು – ಎರಡರ ಮೇಲೂ ಪ್ರಭುತ್ವ ಪಡೆದವರೇ ಆಗಿದ್ದಾರೆ. ಅವರ ಭಾಷಾಪ್ರಭುತ್ವ, ಅವರಿಗೆ ಅರ್ಥದ ಬೇರೆ ಬೇರೆ ಛಾಯೆ ಹಾಗೂ ಅಂತರವನ್ನು ಹೊಂದಿರುವ ಶಬ್ದಗಳನ್ನು ಹವಣರಿತು ಬಳಸುವಂತೆ ನೆರವಾಗಿದೆ. ಅದರಂತೆ ಅವರ ಛಂದಸ್ಸಿನ ಪರಿಣತಿ ಕೂಡ ಅವರಿಗೆ, ಕಾವ್ಯದ ಲಯ ಮತ್ತು ಸ್ವರಾರೋಹಣವನ್ನು ಗದ್ಯಕ್ಕೂ ತುಂಬಿಕೊಡುವ ಶಕ್ತಿಯನ್ನು ತಂದುಕೊಟ್ಟಿದೆ. ಹೊಸಮಾಧ್ಯಮದ ಮರುಳುಗೊಳಿಸುವ ಸರಳತೆಯಿಂದ ಇತರ ಕೆಲವು ಕಡಿಮೆ ಪ್ರತಿಭಾವಂತರು ಇದರಲ್ಲಿ ತೊಡಗಿದ್ದಾರೆ. ಆದರೆ ಅವರ ಬರೆಹ ಇತ್ತ ಪದ್ಯವಲ್ಲ; ಅತ್ತ ಗದ್ಯವಲ್ಲ, ಕಡೆಗೆ ಅದು ಕಾವ್ಯವಂತೂ ಅಲ್ಲ. ಅದೆಲ್ಲ ಕೇವಲ ಶಬ್ದಚಮತ್ಕಾರ, ವಿಕಾರಭಾಷೆ ಮತ್ತು ಸಂಪೂರ್ಣ ನಟನೆಯಾಗಿದೆ.

ನಮ್ಮ ಗದ್ಯಕವಿಗಳಲ್ಲಿ ತುಂಬ ದೊಡ್ಡವರೆಂದರೆ ದಿವಂಗತ ದೇವರಕೊಂಡ ಬಾಲಗಂಗಾಧರ ತಿಲಕ. ಇನ್ನೂ ಸಾರ್ವಜನಿಕ ಮನ್ನಣೆ ಪಡೆಯುತ್ತಿರುವ ಕಾಲದಲ್ಲೇ ಅವರು ನಿಧನರಾದುದು ಶೋಚನೀಯ. ಕುಂದುರ್ತಿಯವರೂ ಅಷ್ಟೇ ಎತ್ತರದವರು. ಉಳಿದ ಹೆಚ್ಚು ಪ್ರತಿಭಾಶಾಲಿಗಳೆಂದರೆ ಗೋಪಾಲ ಚಕ್ರವರ್ತಿ, ವರವರರಾವು, ಮಾದಿರಾಜು ರಂಗರಾವು, ಸುಪ್ರಸನ್ನ, ಪಿ. ಜಗನ್ನಾಥಮ್, ಕೆ. ಸಂಪತ್ಕುಮಾರಾಚಾರ್ಯ, ಸೋಮಸುಂದರ್, ಶ್ರೀಲಾವೀರರಾಜು, ಸಿ. ವಿಜಯಲಕ್ಷ್ಮಿ, ಮೋಹನ್ ಪ್ರಸಾದ್ ಮತ್ತು ರಂಧಿ ಸೋಮರಾಜು. ಅವರಲ್ಲಿ ಹೆಚ್ಚು ಮಂದಿ ತೆಲಂಗಾಣದವರೆಂಬುದುಗಮನಾರ್ಹ. ೧೯೬೦ ಪ್ರಾರಂಭದಿಂದಲೂ ತೆಲಂಗಾಣ ಸಾಹಿತ್ಯ ಕ್ಷೇತ್ರದಲ್ಲಿ ನಿಶ್ಚಯವಾಗಿಯೂ ಬಹು ಕ್ರಿಯಾಶೀಲವಾಗಿದೆ. ಪ್ರಯೋಗದಲ್ಲಿ ಧೈರ್ಯಹೊಂದಿದೆ. ಸೃಜನಾತ್ಮಕವಾಗಿ ಸಂಪನ್ನವಾಗಿದೆ.

ದಿಗಂಬರ ಕವಿಗಳು, ಅವರು ಕೂಡ ಗದ್ಯಮಾಧ್ಯಮವನ್ನೇ ಬಳಸಿಕೊಂಡರೂ ಉಳಿದವರಿಂದ ಬೇರೆಯಾಗಿ ನಿಲ್ಲುವರು, ಅವರದು ಆರು ಜನರ ಒಂದು ಗುಂಪು. ಆರೂ ಜನರದು ಮಾರ್ಗಕ್ರಮಣ ಮಾಡಿದ ಹಾಗೂ ವಿಲಕ್ಷಣವಾದ ಕಾವ್ಯನಾಮ. ಅವರುಗಳು ನಗ್ಮಮುನಿ, ಜ್ವಾಲಾಮುಖಿ, ಚರಬಂಡರಾಜು, ನಿಖೀಲೇಶ್ವರ್, ಮಹಾಸ್ವಪ್ನ ಮತ್ತು ಭೈರವಯ್ಯ, ಸಾರ್ವಜನಿಕ ಗಮನವನ್ನು ಸೆಳೆಯುವ ಒಂದು ವಿಚಿತ್ರ ಶಕ್ತಿ ಅವರಲ್ಲಿದೆ. ಹೈದರಾಬಾದಿನಲ್ಲಿ ಅವರ ಮೊದಲ ಕವನಸಂಕಲದ ಬಿಡುಗಡೆಗೆ ರಿಕ್ಷಾಗಾಡಿ ಎಳೆಯುವವನನ್ನು ಆರಿಸಿದ್ದರು. ಎರಡನೆಯದಕ್ಕೆ ವಿಜಯವಾಡದಲ್ಲಿ ಚಹಾ ಅಂಗಡಿ ಮಾಣಿಯನ್ನೂ ಮೂರನೆಯದಕ್ಕೆ ವಿಶಾಖಪಟ್ಟಣದಲ್ಲಿ ತಿರುಪೆಯವಳೊಬ್ಬಳನ್ನೂ ಆರಿಸಿದ್ದರು. ಪ್ರತಿಯೊಂದು ಸಲವು ಅವರು ಆರಿಸಿಕೊಂಡ ಸ್ಥಳ ರಸ್ತೆ, ಕಾಲ ಮಧ್ಯರಾತ್ರಿ ಇವೆಲ್ಲ ಸುಲಭೋಪಾಯಗಳೆಂದು ತೋರಬಹುದು. ಆದರೆ ಈ ಗುಂಪಿನಲ್ಲಿ ನಿಜವಾದ ಪ್ರತಿಭೆಯಿದೆ, ಅವರ ಪ್ರಾರಂಭದ ಹೊತ್ತಗೆಯಲ್ಲಿ ಅನೇಕ ಧೀಮಂತ ಪ್ರತಿಮೆಗಳಿಗೆ. ಅದ್ಭುತ ಸಾಲುಗಳಿವೆ ಮತ್ತು ನಿಜವಾದ ಹುರುಪಿದೆ.

ಅದೇನೇ ಇರಲಿ, ದಿಗಂಬರ ಗುಂಪಿನ ಕವಿಗಳು ಆಗಲೇ ಹತಾಶರಾಗಿದ್ದಾರೆ. ಬಿರುಗಾಳಿಯಂತಹ ರಭಸ ಪುರೋಭಿವೃದ್ಧಿಯಲ್ಲಿ ತೊಡಗುವುದಕ್ಕೆ ಮೊದಲು ಅವರು ಆಸ್ತಿಕತೆ – ನಾಸ್ತಿಕತೆ, ಪ್ರಜಾಪ್ರಭುತ್ವ – ಏಕಾಧಿಪತ್ಯ ಮೊದಲಾದ ಮೂಲದ್ವಂದ್ವಗಳ ಬಗೆಗೆ ಒಂದು ಸಮಾನದೃಷ್ಟಿ ಕೋನವನ್ನು ರೂಪಿಸಿಕೊಳ್ಳಲಿಲ್ಲವೆಂದು ಭಾವಿಸಬಹುದು ಈ ವಿವಾದಾಂಶಗಳೇ ಅವರನ್ನು ಅತಿ ಕ್ಷಿಪ್ರಗತಿಯಲ್ಲಿ ದೂರ ಸರಿಸಿದ್ದು, ಅವರಲ್ಲಿ ಮೂವರು ಮಾತ್ರ ಇಂದಿಗೂ ಕಾರ್ಯನಿರತರಾಗಿದ್ದಾರಲ್ಲದೆ ‘ವಿಪ್ಲವ ರಚಯಿತಲಸಂಘಂ’ಎಂಬ ಹೊಸದಾಗಿ ಸ್ಥಾಪಿತವಾದ ಸಂಘದೊಡನೆ ಸಂಪರ್ಕ ಪಡೆದಿದ್ದಾರೆ. ಈ ಸಂಘ ಮಾವೊ ಪರ ಮತ್ತು ನೆಕ್ಸ್ ಲೈಟ್ ಪರ. ಆದರೆ ಅವರ ನಾಯಕ ನಗ್ನಮುನಿ ಈ ಹೊಸ ಸಮಿತಿ ಬಗೆಗೆ ಉದಾಸೀನರಾಗಿದ್ದಾರೆ.

ಈ ಅರವತ್ತರ ಅವಧಿಯಲ್ಲಿ ಮೂರನೆಯ ಮತ್ತು ಕಡೆಯ ಮುಖ್ಯ ಲಕ್ಷಣವೆಂದರೆ ಸಾಹಿತ್ಯಿಕ ವಿಮರ್ಶೆ ತೋರುತ್ತಿರುವ ಹೊಸ ಹುರುಪು. ಕಳೆದ ಮೂರು ಇಲ್ಲವೇ ನಾಲ್ಕು ವರ್ಷಗಳಲ್ಲಿ ಸಾಹಿತ್ಯಿಕ ವಿಮರ್ಶೆಗೆಂದೇ ಮೀಸಲಾದ ಸಾಕಷ್ಟು ಪತ್ರಿಕೆಗಳು ಹುಟ್ಟಿಕೊಂಡಿವೆ. ಕಡಪದ ‘ಸಂವೇದನ’ ವಾರಂಗಲ್ಲಿನ ‘ಸೃಜನ’ ಮತ್ತು ‘ಜಿನಧರ್ಮ’, ಹೈದರಾಬಾದಿನ ‘ನವತ’ ಮತ್ತು ‘ಸ್ಪಂದನ’ ಮತ್ತು ಕಾಕಿನಾಡಾದ ‘ಕಳಾಕೇಳಿ’ – ಮುಖ್ಯವಾದವು. ಅವುಗಳ ಮುಖ್ಯ ಬಂಡವಾಳವೆಂದರೆ ಆದರ್ಶತ್ವ. ಅವುಗಳು ಇನ್ನೂ ಎಷ್ಟು ಕಾಲ ಉಳಿಯಬಲ್ಲವೆಂಬುದನ್ನು ಇನ್ನೂ ಕಾದುನೋಡಬೇಕು. ಆದರೆ ಸದ್ಯಕ್ಕೆ ಇಷ್ಟು ಮಾತ್ರ ನಿಜ; ಅವರು ಈಗಿನ ಸಾಹಿತ್ಯಿಕ ಕೃತಿಗಳನ್ನು ನಿರ್ಭಯವಾಗಿ ಅಳೆಯುವುದರಲ್ಲಿ, ಸಾಹಿತ್ಯದ ರೂಪು ಮತ್ತು ಆದರ್ಶಗಳನ್ನು ಅರ್ಥವತ್ತಾದ ರೀತಿಯಲ್ಲಿ ಚರ್ಚಿಸುವುದರಲ್ಲಿ ಹಾಗೂ ಸೃಜನಾತ್ಮಕ ಸಾಹಿತ್ಯಕ್ಕೆ ಸಂಬಂಧಿಸಿದ ಮುಖ್ಯ ವಿಚಾರಗಳಲ್ಲಿ ಪರಸ್ಪರ ಹುರುಡಿಸುತ್ತಿವೆ. ಗುಣದಲ್ಲಿ ‘ಸಂವೇದನೆ’ ಉಳಿದವುಗಳಿಗಿಂತ ಮೇಲೆಂದು ಧಾರಾಳವಾಗಿ ಹೇಳಬಹುದು. ಅದರ ಸಂಪಾದಕ ರಾಚಮಲ್ಲು ರಾಮಚಂದ್ರಾರೆಡ್ಡಿ ಮಾರ್ಕ್ಸವಾದಿ ಮತ್ತು ನಿಷ್ಠುರರು. ಕೆಲವೊಮ್ಮೆ ಅವರು ಅನಗತ್ಯವಾಗಿ ಖಾರವಾಗಿರುವರಲ್ಲದೆ ನಿಂದಿಸುವುದೂ ಉಂಟು. ಆದರೂ ಅವರು ಹೆಚ್ಚು ಬುದ್ಧಿವಂತರು. ಅವರ ವಿಮರ್ಶಕಶಕ್ತಿ ತೀಕ್ಷ್ಣ. ತಮ್ಮ ಅತ್ಯುತ್ತಮ ಚಿತ್ತಸ್ಥಿತಿಯಲ್ಲಿ ಅವರ ಪ್ರತಿಭೆ ಮಿರಮಿರನೆ ಮಿಂಚುವುದು.

ಕೊನೆಯದಾಗಿ, ಸಮದೃಷ್ಟಿಯಿಂದ ನೋಡಿದಾಗ ಇನ್ನೇನು ಮುಗಿಯಲಿರುವ ಈ ದಶಕದಲ್ಲಿ ತೆಲುಗು ಬರೆಹಗಾರರ ಸಾಮಾಜಿಕ ಪ್ರಜ್ಞೆ ತುಂಬ ಬೆಳೆದಿದೆ ಎಂದು ಹೇಳಬಹುದು. ಸಂಪ್ರದಾಯವಾದಿಗಳನ್ನು ಬಿಟ್ಟು ಉಳಿದವರೆಲ್ಲ ಸಮಾಜದ ನ್ಯಾಯ ಹಾಗೂ ಉತ್ತಮ ವ್ಯವಸ್ಥೆಗಾಗಿ ಹಂಬಲ ತೋರಿದ್ದಾರೆ. ಈ ಅಂಶ ಅವರ ಬರಹಕ್ಕೆ ಒಂದು ಹೊಸ ವೀರ್ಯ, ಹೊಸ ಪ್ರಚೋದನೆ ಕೊಟ್ಟಿದೆ. ರೂಪ ವಸ್ತು, ಕಲ್ಪನೆ, ಪ್ರತಿಮೆ ಮತ್ತು ಬೇರೆ ಅನೇಕ ವಿಧದಲ್ಲಿ ಅವರು ಧೈರ್ಯವಾಗಿ ಪ್ರಯೋಗ ನಡೆಸುತ್ತಿದ್ದಾರೆ. ಅವರ ಗದ್ಯ ತುಂಬ ಶಕ್ತಿಯುತ, ಅವರ ಕಾವ್ಯ ತುಂಬ ಕಂಪನಶೀಲ. ಅವರಲ್ಲಿ ಯಾರೊಬ್ಬರೂ ವಿಸ್ಮಯಗೊಳಿಸುವಷ್ಟು ಯಶಸ್ವಿಯಾಗಿಲ್ಲದಿರಬಹುದು. ಆದರೆ ಒಟ್ಟಾರೆ ಅವರು ಅನೇಕ ಮುಖಗಳಲ್ಲಿ ಮುಂದೆ ಹೋಗಿದ್ದಾರೆ ಪೊನ್ನ ಮತ್ತು ರನ್ನ, ನನ್ನಯ ಮತ್ತು ಶ್ರೀನಾಥರ ಕಾಲದ ತನಕ ಹಿಂದಕ್ಕೆ ಹೋಗುವಷ್ಟು ನಿಕಟ ಸಂಪರ್ಕವುಳ್ಳ ಕರ್ನಾಟಕದಲ್ಲಿ ನಡೆಯುತ್ತಿರುವ ಸಾಹಿತ್ಯಿಕ ಬೆಳವಣಿಗೆಯನ್ನೂ ಅವರು ಆಸಕ್ತಿಯಿಂದ ಅಭ್ಯಸಿಸುತ್ತಿದ್ದಾರೆ. ಅಲ್ಲದೆ ಅವರು ಇನ್ನುಳಿದ ಭಾರತದ ಹಾಗೂ ಪ್ರಪಂಚದ ಸಂಪರ್ಕ ಕೂಡ ಪಡೆದಿದ್ದಾರೆ. ಎಲ್ಲ ರಾಷ್ಟ್ರಗಳ ಎಲ್ಲ ಬರಹಗಾರರೊಡನೆ ಅವರು ಕೂಡ ಮುಂಬರುವ ದಶಕ. ವಿಶ್ವಶಾಂತಿ ಹಾಗೂ ವಿಶ್ವ ಭ್ರಾತೃತ್ವ, ಮೇಲಾದ ಹಾಗೂ ಹುರುಳಾದ ಬಾಳ್ವೆಯತ್ತ, ಹೆಚ್ಚಾದ ಹೆಜ್ಜೆ ಇಟ್ಟೀತೆಂದು ನಂಬಿದ್ದಾರೆ.