ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದಲಿತ ಸಾಹಿತ್ಯದ ಸಮಸ್ಯೆ, ಸ್ವರೂಪ, ಧೋರಣೆ ಕುರಿತು ಕೆಲವು ಅನಿಸಿಕೆಗಳನ್ನು ಪ್ರಸ್ತಾಪಿಸುವ ಮೊದಲೇ ಹೇಳಬೇಕಾದ ಮಾತೊಂದಿದೆ. ಅದೆಂದರೆ, ಚಿಕ್ಕಮಗಳೂರಿನಲ್ಲಿ ೧೯೮೧ರ ಮಾರ್ಚಿ ತಿಂಗಳಲ್ಲಿ ನಡೆದ ಅಖಿಲ ಭಾರತ ೫೩ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಏರ್ಪಾಟಾಗಿದ್ದ ದಲಿತ ಸಾಹಿತ್ಯ ಗೋಷ್ಠಿಯನ್ನು ನಾನು ಉದ್ಘಾಟಿಸಿ ಮಾಡಿದ ಭಾಷಣ ಆಗ ನಾಡಿನ ಪತ್ರಿಕೆಗಳಲ್ಲಿ ವರದಿಯಾಗಿದೆ. ‘ಸಮುದಾಯ’ ಪತ್ರಿಕೆಯಲ್ಲಿ ಅಚ್ಚಾಗಿದೆ. ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ‘ಚಿಕ್ಕಮಗಳೂರು ಸಾಹಿತ್ಯ ಸಂಪುಟ’ದಲ್ಲೂ ಪ್ರಕಟವಾಗಿದೆ. ದಲಿತರನ್ನು, ದಲಿತ ಸಾಹಿತ್ಯವನ್ನು ಕುರಿತು ನನ್ನ ಚಿಂತನೆಗಳನ್ನು ಅದರಲ್ಲಿ ಸ್ಪಷ್ಟವಾಗಿ ದಾಖಲಿಸಿದ್ದೇನೆ. ಇಂದು ಸಿರ್ಸಿಯಲ್ಲಿ ನಡಯುತ್ತಿರುವ ೫೫ನೇ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯದ ಧೋರಣೆಗಳನ್ನು ಕುರಿತು ಮಾತನಾಡುತ್ತಿದ್ದೇನೆ. ಈ ವಿಷಯವಾಗಿ ನಾನು ಈಗಾಗಲೇ ಚಿಕ್ಕಮಗಳೂರು ಸಮ್ಮೇಳನದಲ್ಲಿ ಪ್ರಸ್ತಾಪಿಸಿರುವ ವಿಷಯಗಳಿಗಿಂತ ಭಿನ್ನವಾಗಿ ಹೊಸತಾಗಿ ಏನನ್ನಾದರೂ ಹೇಳುವುದು ಸಾಧ್ಯವಿದೆಯೇ ಎಂದು ಗಂಭೀರವಾಗಿ ಆಲೋಚಿಸಿದ್ದೇನೆ. ಈ ಬಗೆಯ ವಿವೇಚನೆಯ ಪರಿಣಾಮವಾಗಿ ಮೂಡಿದ ಭಾವನೆಗಳನ್ನು ಇಲ್ಲಿ ಮಂಡಿಸುತ್ತಿದ್ದೇನೆ. ಈ ಕಾರಣದಿಂದಾಗಿ ನನ್ನ ಇಂದಿನ ಉಪನ್ಯಾಸ ಹಿಂದಿನ ಭಾಷಣಕ್ಕೆ ಸೇರಿಸಿದ ಒಂದು ಅನುಬಂಧ ಎಂದು ಭಾವಿಸಿದರೆ ತಪ್ಪಾಗಲಾರದು.

ದಲಿತ ಸಾಹಿತ್ಯವನ್ನು ಕುರಿತು ನನ್ನ ಒಟ್ಟು ನಿಲುವು ಏನೆಂಬುದನ್ನು ಅರ್ಥೈಸಿಕೊಳ್ಳಬೇಕಾದರೆ ಚಿಕ್ಕಮಗಳೂರು ಹಾಗೂ ಸಿರ್ಸಿ ಎರಡೂ ಸಮ್ಮೇಳನಗಳ ಭಾಷಣಗಳನ್ನು ಓದಿಕೊಳ್ಳಬೇಕು. ಇಲ್ಲವಾದರೆ ಇಂದಿನ ನನ್ನ ಪ್ರಬಂಧದಿಂದ ಸಿಗುವ ವಿವರಣೆ ಏಕಮುಖವಾದೀತು ಪಾರ್ಶ್ವಿಕವಾದೀತು.

ಕಳೆದ ದಶಕದಲ್ಲಿ ಕನ್ನಡ ಸಾಹಿತ್ಯ ನಿಂತ ನೀರಾಗಿ ಜಡ್ಡುಗಟ್ಟಿತೊಡಗಿತ್ತು. ಆದರೆ ಕನ್ನಡದಂಥ ಜೀವಂತ ಭಾಷೆಯ ಸಾಹಿತ್ಯ ಒಂದರ್ಥದಲ್ಲಿ ಬಹುಕಾಲ ನಿಂತ ನೀರಾಗುವುದು ಸಾಧ್ಯವಿಲ್ಲ. ಹೊಸ ಕೃತಿಗಳು, ಹೊಸ ಪಂಥಗಳು ಸಾಹಿತ್ಯಕ ಚಳುವಳಿಗಳು ಹುಟ್ಟಿಕೊಳ್ಳುತ್ತಿರುತ್ತವೆ. ಆಯಾಕಾಲದ ಜನಮನದ ಲೇಖಕರ ಪ್ರಗತಿಪರ ಧೋರಣೆಗಳು ಸಾಹಿತ್ಯಕ್ಕೆ ಸ್ಥಿತ್ಯಂತರಗಳನ್ನು ತಂದುಕೊಡುತ್ತವೆ, ದಿವ್ಯ ತಿರುವನ್ನು ಉಂಟುಮಾಡುತ್ತವೆ. ಇದರಿಂದ ಸಾಹಿತ್ಯಕ್ಕೆ ಹೊಸ ಆಯಾಮ ದೊರೆತಂತಾಗುತ್ತದೆ.

ಕಳೆದ ನಾಲ್ಕು ವರುಷಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಕಾಯಕಲ್ಪ ನಡೆದು, ಹೊಸ ಚಾಲನೆ ಬಂದದ್ದು ದಲಿತ ಸಾಹಿತ್ಯದಿಂದ. ಒಂದರ್ಥದಲ್ಲಿ ನವ್ಯಕಾವ್ಯ ಕನ್ನಡ ಸಾಹಿತ್ಯಕ್ಕೆ ಉಂಟು ಮಾಡಿದ್ದ ಅಪಾಯದಿಂದ ಪಾರು ಮಾಡಿದ್ದು ದಲಿತ ಸಾಹಿತ್ಯವೇ! ಓದುಗರನ್ನು ಸಾಹಿತ್ಯದಿಂದ ದೂರ ತಳ್ಳಿ ಶಾಪಗ್ರಸ್ತವಾಗಿದ್ದ ವರ್ತಮಾನದ ಕನ್ನಡ ಸಾಹಿತ್ಯಕ್ಕೆ ಶಾಪ ವಿಮೋಚನೆ ಮಾಡಿದ್ದು ಈ ದಲಿತ ಸಾಹಿತ್ಯ. ಈ ಅಂಶವನ್ನು ಇನ್ನೂ ಸ್ವಲ್ಪ ಸ್ಪಷ್ಟಪಡಿಸಲಿಚ್ಛಿಸುತ್ತೇನೆ. ನವ್ಯ ಸಾಹಿತ್ಯ ಜನಪರವಾದ ಸಾಹಿತ್ಯವಾಗಿ ಬೆಳೆಯಲಿಲ್ಲ. ಅದು ಜನ ದೂರವಾದ ಕೂಪಮಂಡೂಕ ಸಾಹಿತ್ಯವಾಯಿತು. ತನ್ನ ಸಾವನ್ನು ತನ್ನ ಸೆರಗಲ್ಲೇ ಕಟ್ಟಿಕೊಂಡು ಹುಟ್ಟಿದ ರೋಗಗ್ರಸ್ತ ನವ್ಯ ಸಾಹಿತ್ಯದ ಸಾವು ನಿರೀಕ್ಷಿತವೆ! ಮಡಿಯ ಸಾಹಿತ್ಯ ಬೇಗ ಮಡಿಯಲೇಬೇಕಲ್ಲವೆ? ಸಮಾಜವನ್ನು ಸಮಗ್ರವಾಗಿ ನೋಡದೆ ಕಣ್ಣುಮುಚ್ಚಿಕೊಂಡು, ಬಾಗಿಲು ಹಾಕಿಕೊಂಡು ಬರೆದ ಸಾಹಿತ್ಯ ಜನಾಂಗದ ಕನ್ಣನ್ನು ತೆರೆಸಲು ಹೇಗೆ ಸಾಧ್ಯವಾಗುತ್ತದೆ. ಒಂದು ಕೈ ಬೆರಳೆಣಿಕೆಯ ಕೆಲವೇ ಮಂದಿ ನವ್ಯರು ಕಟ್ಟಿಕೊಂಡಿದ್ದ ಅಭದ್ರ ಕೋಟೆಯನ್ನು ಸುಲಭವಾಗಿ ಭೇದಿಸಿದವರು ದಲಿತ ಮತ್ತು ಬಂಡಾಯ ಸಾಹಿತಿಗಳು. ನವ್ಯ ಸಾಹಿತ್ಯ ಮತ್ತು ಜನತೆಯ ನಡುವೆ ಕಂದರ ಉಂಟು ಮಾಡಿತ್ತು. ರಾಹುಗ್ರಸ್ತ ನವ್ಯ ಕಾವ್ಯವನ್ನು ಅರ್ಥಮಾಡಿಕೊಳ್ಳದ ಅಬುದ್ಧಿವಂತ ವಿದ್ಯಾವಂತರ ವರ್ಗ ಇನ್ನೊಂದು ಕಡೆ! ಹೀಗೆ ಸಾಹಿತಿಗಳ ನಡುವೆಯೇ ಎರಡು ವರ್ಗವನ್ನು ನಿರ್ಮಿಸಿ ಸಾಹಿತ್ಯವನ್ನು ಕೊಂದರು. ಮತ್ತೆ ಈಗ ಸಾಹಿತ್ಯವನ್ನು ಜನರ ಹತ್ತಿರಕ್ಕೆ ತರಬಲ್ಲವರು ದಲಿತರು, ಎಲ್ಲಿ ನವ್ಯ ಸಾಹಿತ್ಯ ಸೋತಿತೋ ಅಲ್ಲಿ ದಲಿತ ಸಾಹಿತ್ಯ ತನ್ನ ಗೆಲುವನ್ನು ಪಡೆಯಿತು. ಇದು ಕೇವಲ ಅಭಿಮಾನದ ಮಾತಲ್ಲ, ಸತ್ಯೋಕ್ತಿ, ದಲಿತ ಸಾಹಿತ್ಯ ಇಂದು ಕನ್ನಡಕ್ಕೆ ಅನಿವಾರ್ಯದ ಪ್ರಸಂಗ; ಐತಿಹಾಸಿಕ ಅಗತ್ಯ.

ಜೀವನದ ಅರ್ಥಪೂರ್ಣವಾದ ಮೌಲಿಕ ಸಂಬಂಧವನ್ನು ಕಲ್ಪಿಸಿಕೊಡುವ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದ್ದಾಗಿದೆ. ಹಳ್ಳಿಗರನ್ನು ಕುರಿತು, ಹೊಲೆ ಮಾದಿಗರನ್ನು ಕುರಿತು ಬರೆದ ಮಾತ್ರಕ್ಕೆ ಗಣ್ಯ ಸಾಹಿತ್ಯವಾಗುತ್ತದೆಂಬ ಭ್ರಾಂತಿಯನ್ನೇನೂ ನಾವು ಇಟ್ಟುಕೊಂಡಿಲ್ಲ. ಇದುವರೆಗೆ ‘ಅಕ್ಷರ ಜ್ಞಾನ ಲೋಕ’ದ ಹೊಸ್ತಲಿಂದ ಆಚೆಗೇ ನಿಂತವರ ನೋವು – ನಲಿವನ್ನು ಹೇಳುವ ಬಾಯನ್ನು ಕಟ್ಟಿಹಾಕಲಾಗಿತ್ತು. ಹಾಡುವ ನಾಲಗೆಯನ್ನು ಕಿತ್ತುಕೊಳ್ಳಲಾಗಿತ್ತು. ಸಮರ್ಥ ಸಂವೇದನೆ, ಅನಂತ ಅನುಭವವಿದ್ದರೂ ಅಭಿವ್ಯಕ್ತಿಗೆ ಅವಕಾಶವಿರಲಿಲ್ಲ. ಅವರ ದುಃಖ ಯಾರ ಕರುಳನ್ನೂ ತಟ್ಟಲಿಲ್ಲ. ಈಗ ಅವನು ಸಾಹಿತ್ಯದ ಒಳಕ್ಕೇ ಬಂದಿದ್ದಾನೆ. ಕರಿಯ, ಚೋಮ, ಬೂದನ ಮಕ್ಕಳು ಬರೆಯತೊಡಗಿದ್ದಾರೆ. ಮಧ್ಯವರ್ತಿ ದಳ್ಳಾಳಿಗಳನ್ನು ತಳ್ಳಿ ತಾವೇ ಧ್ವನಿಸುತ್ತಿದ್ದಾರೆ. ಅನಾವರಣವಾಗಿಯೇ ಇದ್ದ ತನ್ನ ಜೀವನ ವೈಶಿಷ್ಟ್ಯವನ್ನು ದಲಿತನೇ ನುಡಿಯತೊಡಗಿದ್ದಾನೆ. ಅವನ ಆರಂಭದ ಆಕ್ರೋಶ ಅಸಹಾಯಕತೆಯ ಉದ್ಗಾರಗಳೆಲ್ಲ ಶೋಧನೆಗೊಂಡು, ತೋಡಿಕೊಳ್ಳುವ ತೊಳಲಾಟಗಳು ಕಲಾತ್ಮಕವಾಗಿ ಮೈ ಪಡೆಯತೊಡಗಿವೆ. ತನ್ನ ಜನಾಂಗದ ಧ್ವನಿಯಾಗುವ ಸೃಜನಶೀಲ ಕಲಾಕೃತಿಗಳಿಗೆ ಸಾಹಿತಿ ವಾತಾವರಣವಿಂದು ಅಣಿಯಾಗಿದೆ, ಹದವಾಗಿದೆ.

ಇತರರು ಅಸ್ಪೃಶ್ಯರ ಬಗ್ಗೆ, ದಲಿತರ ಬಗ್ಗೆ ಎಷ್ಟೇ ಬರೆದರು ಎಷ್ಟೇ ಕಲಾತ್ಮಕವಾಗಿದ್ದರೂ ಅದು ದಲಿತ ಅನುಕಂಪ ಸಾಹಿತ್ಯವಾಗುತ್ತದೆಯೇ ಹೊರು ದಲಿತ ಸಾಹಿತ್ಯವಾಗುವುದಿಲ್ಲ. ಈ ದೃಷ್ಟಿಯಿಂದ ‘ಮನುಷ್ಯಜಾತಿ ತಾನೊಂದೆ ವಲಂ’ ಎಂದು ಹಾಡಿದ ಪಂಪನಿಂದ ಹಿಡಿದು ‘ಕೊಲ್ಲುವವನೇ ಮಾದಿಗ ಹೊಲಸು ತಿನ್ನುವವನೇ ಹೊಲೆಯ’ ಎಂದು ಹೇಳಿ ಕೀಳಾಗಿ ಕಾಣುತ್ತಿದ್ದ ಹೊಲೆಯ ಮಾದಿಗರನ್ನು ಮತ್ತಷ್ಟೂ ಕೀಳು ಮಾಡಿದ ಭಕ್ತಿಭಂಡಾರಿ ಬಸವಣ್ಣನ ಸಾಹಿತ್ಯ ದಲಿತ ಸಾಹಿತ್ಯವಾಗಲಾರದು.

ಅಸ್ಪೃಶ್ಯನಾದುದರಿಂದ ಕವಿಯಾದರೂ ಕನಕದಾಸನನ್ನು ದೇವಾಲಯದ ಹೊರಗೆ ನಿಲ್ಲಿಸಿದರು. ಅವನ ಸ್ಥಾನವೇನು ಎನ್ನುವ ಅರಿವನ್ನು ಅವನಲ್ಲಿ ತೀವ್ರವಾಗಿ ಉಂಟು ಮಾಡಿದರು. ಅವನು ಆ ಅನಿವಾರ್ಯತೆಯನ್ನು ಒಪ್ಪಿಕೊಳ್ಳಲೇಬೇಕು ಎನ್ನುವ ಹಂತಕ್ಕೆ ತಂದರು. ಕಡೆಗೆ ಅವನ ಬಾಯಿಯಿಂದಲೇ

ಹೊರಸುತ್ತು ಪ್ರಾಕಾರವ ನಾ ಸುತ್ತಿ ಬರುವೆ
ತೊತ್ತು ತೊಂಡನಾಗಿ ಬಾಗಿಲ ಕಾಯ್ವೆ
ಚಿತ್ರದ ಚಾವಡಿ ರಜವಾ ಬಳಿವೆ
ಎಂಜಲ ಹರಿವಾಣಗಲ ನಾ ಬೆಳಗುವೆ

ಎಂದು ಹಾಡಿಸಿದ ಈ ಕ್ರೂರ ಮೇಲ್ವಗ್ ಜನತೆಗೆ ಧಿಕ್ಕಾರ ಹಾಡಲೇಬೇಕು.

ಆಧುನಿಕ ಸಾಹಿತ್ಯದಲ್ಲೂ ಗೌಡರಮಲ್ಲಿಯಾಗಬಹುದು, ಬೆಸ್ತರ ಕರಿಯನಾಗಬಹುದು, ಚೋಮನದುಡಿಯ ಚೋಮನೇ ಆಗಬಹುದು. ಇವೆಲ್ಲವರು ದಲಿತರ ಬಗೆಗೆ ಸಹಾನಭೂತಿಪರವಾದ ಸಾಹಿತ್ಯವಾಗುತ್ತದೆ. ಈ ವಾಕ್ಯವನ್ನು ಒತ್ತಿ ಹೇಳುವ ಅಗತ್ಯವಿಷ್ಟೇ : ಇತ್ತೀಚೆಗೆ ನಮ್ಮ ಕೆಲವು ಲೇಖಕರು ‘ತಾವು ಈಗಾಗಲೇ ದಲಿತ ಸಾಹಿತ್ಯ ರಚಿಸಿ ಆಗಿದೆ’ ಎಂದು ಹೇಳುತ್ತಿರುವುದರಿಂದ !

ಆದರೆ ಹುಟ್ಟಿನಿಂದ ದಲಿತನಾದವ ತಾನೇ ಬರೆಯಲು ತೊಡಗಿದಾಗ ಏನು ಬರೆಯುತ್ತಾನೆ? ಅವನಿಂದ ಎಂಥ ಸಾಹಿತ್ಯ ರಚನೆಯಾಗುತ್ತದೆ? ಆ ಸಾಹಿತ್ಯದ ಧೋರಣೆಗಳೇನು? ಇದು ಇಂದು ನಮ್ಮ ಮುಂದೆ ಇರುವ ಜ್ವಲಂತ ಪ್ರಶ್ನೆ ಮತ್ತು ಇದಕ್ಕೆ ದೊರೆಯುವ ಉತ್ತರವೇ ನಿಜವಾದ ದಲಿತ ಸಾಹಿತ್ಯ. ನೋವು ಉಂಡವ ಬರೆದಾಗ ಅದರ ತೀವ್ರತೆ ಸಹಜವಾಗಿ ಪ್ರತಿಧ್ವನಿಸಲು ಸಾಧ್ಯವಾಗುತ್ತದೆ. ಈ ದಲಿತ ಸಾಹಿತ್ಯದ ಮೂಲಕ ಪ್ರತಿಕ್ರಿಯಿಸಿದಾಗ, ಪ್ರತಿಕ್ರಿಯಿಸಿರುವುದರಿಂದ ಅವನು ಏನನ್ನು ಹೇಳುತ್ತಿದ್ದಾನೆ? ಯಾರಿಗಾಗಿ ಹೇಳುತ್ತಿದ್ದಾನೆ? ಇವುಗಳ ಕಡೆಗೆ ಹೆಚ್ಚು ಒತ್ತು ಕೊಡಬೇಕಾಗಿದೆ.

ದಲಿತ ಸಾಹಿತ್ಯ ಏಕಕಾಲದಲ್ಲಿ ಬಹಳ ಮುಖ್ಯವಾಗಿ ಎರಡು ಕರ್ತವ್ಯಗಳನ್ನು ನಿರ್ವಹಿಸಬೇಕಾಗಿದೆ. ಒಂದು, ಪುರೋಹಿತಶಾಹಿ ಲೇಖಕರಿಂದ ಹಾಗೂ ಸಾಮಾಜಿಕವಾಗಿ ದಲಿತರಿಗೆ ಆಗುತ್ತಿರುವ ಶೋಷಣೆಯನ್ನು ಎತ್ತಿತೋರಿಸುವುದು. ಎರಡನೆಯ ದಲಿತರನ್ನು ಎಚ್ಚರಿಸಿ ಕಾರ್ಯೋನ್ಮುಖರಾಗುವಂತೆ ಮಾಡುವುದು. ಇಂಥ ಕಾರ್ಯಕ್ಕೆ ತೊಡಗಿದಾಗ ದಲಿತರ ಹೆಸರಿನಲ್ಲಿ ಇತರರು ದಲಿತರನ್ನು ಸಾವಿರಾರು ವರುಷಗಳಿಂದ ತುಳಿದಂತೆ ಇನ್ನೂ ತುಳಿಯುವ ಸನ್ನಾಹಕ್ಕೆ ಕಡಿವಾಣ ಹಾಕಬಹುದು. ದಲಿತ ಸಾಹಿತಿಗಳನ್ನು ಅಡ್ಡಮಾರ್ಗಕ್ಕೆ ಎಳೆಯುವ, ಅವರ ಆಶೋತ್ತರಗಳು ಮೊಳಕೆಯಲ್ಲಿಯೇ ಕಮರಿಹೋಗುವಂತೆ ಮಾಡುವ ಇತರ ಸಾಹಿತಿಗಳ ಅಪಾಯದ ಬಗ್ಗೆ ಇವರು ತುಂಬ ಎಚ್ಚರಿಕೆ ವಹಿಸಬೇಕಾಗಿದೆ.

ಇನ್ನು ದಲಿತರಾಗಿ ಹುಟ್ಟಿ ಆ ಪರಿಸರದಲ್ಲಿ ಬೆಳೆದ ಲೇಖಕರು ದಲಿತ ಜೀವನದ ಆಳವಾದ ಸಂಕೀರ್ಣ ಸಂವೇದನೆಗೆ ಸಾಕ್ಷಿಯಾಗಿ ನಿಲ್ಲಬಲ್ಲರು ಎನ್ನುವ ಆ ಭಾವನೆಯನ್ನೂ ಆತ್ಮ ವಿಶ್ವಾಸವನ್ನೂ ಅವರಿಗೆ ತಂದುಕೊಡುವುದು, ಜೊತೆಗೆ ಆ ಭಾವನೆಗಳನ್ನು ತಾವು ತೀವ್ರಗೊಳಿಸಿಕೊಳ್ಳುವುದೂ ಏಕಕಾಲದಲ್ಲಿ ನಡೆಯಬೇಕಾದ ಕ್ರಿಯೆಗಳಾಗಿವೆ. ಕಾರಣ ದಲಿತರ ಸಾಹಿತ್ಯದಲ್ಲಿ ಆಕ್ರೋಶ, ಆಗ್ರಹ ಹೆಚ್ಚಿ ಸಾಹಿತ್ಯ ಗುಣವನ್ನು ಕಲಾತ್ಮಕತೆಯನ್ನು ಇನ್ನೂ ಅದು ಪಡೆದಿಲ್ಲ ಎನ್ನುವ ಸಾಹಿತ್ಯ ವಿಮರ್ಶಕರ ಹೇಳಿಕೆಯನ್ನು ಸುಲಭವಾಗಿ ನಾವು ಕಡೆಗಣಿಸುವಂತಿಲ್ಲ. ಆದರೆ ಇದಕ್ಕೆ ಇತಿಮಿತಿಗಳು, ಅಪವಾದಗಳು ಇವೆ ಎನ್ನುವುದನ್ನು ಆ ವಿಮರ್ಶಕರೂ ಅರಿತಿದ್ದಾರೆ.

ಹೊಸದೊಂದು ಸಂಘಟನೆ, ಹೊಸದೊಂದು ಪಂಥ ಪ್ರಾರಂಭವಾದಾಗ ಅದರಲ್ಲಿ ಅನೇಕರು ಅನೇಕ ರೀತಿಯಲ್ಲಿ ಪ್ರಯೋಜನ ಪಡೆಯಲು ಕಾತುರರಾಗಿದ್ದಾರೆ. ಆ ಹೊಸ ಪಂಥದ ಆಯಾಮಗಳಿಗೆ ತಾನು ಸ್ಪಂದಿಸಿಲ್ಲ ಎಂದರೆ, ಎಲ್ಲಿ ತನ್ನನ್ನು ಎರಡನೇ ದರ್ಜೆ ಸಾಹಿತಿ ಎನ್ನುವರೋ ಎನ್ನುವ ಭೀತಿ ಅನೇಕ ಲೇಖಕರಲ್ಲಿದ್ದು ಆ ಹೊಸ ಪಂಥದಲ್ಲಿ ಹೇಗೋ ತಾನು ನುಸುಳಿ ಹೆಸರು ಗಳಿಸಿಕೊಳ್ಳುವಲ್ಲಿ ಸಫಲನಾಗುತ್ತಾನೆ. ಇಂಥ ಸಂದರ್ಭದಲ್ಲಿ ಒಬ್ಬ ಪ್ರಾಮಾಣಿಕ ದಲಿತ ಸಾಹಿತಿಗೆ ನ್ಯಾಯವಾಗಿ ಸಲ್ಲಬೇಕಾದ ಫಲ ವೇಷಧಾರಿ ಸಾಹಿತಿಗೇ ಸಲ್ಲುವ ಸಾಧ್ಯತೆ ಇದೆ. ಇಂದು ದಲಿತರ ಹೆಸರಿನಲ್ಲಿ ದಲಿತರಲ್ಲದವರ ಆರ್ಭಟವೇ ಜಾಸ್ತಿಯಾಗಿದೆ. ಇದು ದಲಿತ ಸಾಹಿತಿಗಳ ಸವಲತ್ತಿಗೆ ಒಂದು ದೊಡ್ಡ ಪೆಟ್ಟಾಗಿದೆ. ತನಗೊಂದು ವೇದಿಕೆ ಬೇಕು, ಹೆಸರು ಬೇಕು ಎಂದು, ಕಾರಣವೋ ಆಕಾರಣವೋ ಕೂಗಾಡುವ, ದಲಿತರ ವೇದಿಕೆಗಳನ್ನು ಬಳಸಿಕೊಳ್ಳುವ ಹುಟ್ಟಿನಿಂದ ದಲಿತನಲ್ಲದ ಸಾಹಿತಿಗಳನ್ನು ಸಂಪೂರ್ಣವಾಗಿ ಹೊರತಳ್ಳದ ಹೊರತು ದಲಿತ ಸಾಹಿತಿಗಳ ಸಂಘಟನೆ, ಉದ್ಧಾರ ಕನಸಿನ ಗಂಟಾದಿತು.

ದಲಿತ ಸಾಹಿತ್ಯ – ದಲಿತ ಚಳುವಳಿ ಇವು ಸ್ವಲ್ಪ ಮಟ್ಟಿಗೆ ತನ್ನತನದಿಂದ ಗಟ್ಟಿಕಟ್ಟಿಕೊಳ್ಳುವ ಹಂತದಲ್ಲಿರುವಾಗಲೇ ಇನ್ನು ಕೆಲವು ಸಾಹಿತಿಗಳು ಬಂಡಾಯದ ಗುಂಪನ್ನು ಕಟ್ಟಿದವರು. ದಲಿತ ಸಾಹಿತ್ಯದ ವಿಸ್ತೃತ ರೂಪವೇ (Enlarged Edition) ಬಂಡಾಯ ಸಾಹಿತ್ಯವೆಂದರು. ದಲಿತ ಚಳುವಳಿ ಬಂಡಾಯದಲ್ಲಿಯೇ ಸೇರಿದೆ ಎಂದರು. ನಮ್ಮ ಚಳವಳಿಯೇ ನಿಮ್ಮ ಚಳುವಳಿ ಎಂದರು. ಇಲ್ಲೆಲ್ಲ ದಲಿತ ಸಾಹಿತಿಗಳು ತಮ್ಮ ನೆಲೆ-ಬೆಲೆಯನ್ನು ಖಚಿತಪಡಿಸಿಕೊಳ್ಳುವುದಕ್ಕೆ, ತಮ್ಮ ಧೋರಣೆಗಳನ್ನು ಗಟ್ಟಿಯಾಗಿ ಬೆಳೆಸಿಕೊಳ್ಳುವುದಕ್ಕೆ ಮೊದಲೇ ಇಂಥ ಆಮಿಷದ ಮಾತುಗಳನ್ನು ಒಡ್ಡಿ ದಲಿತ ಸಾಹಿತಿಗಳ ಉಸಿರನ್ನೂ ಉರಿಯನ್ನೂ ಕ್ಷೀಣಗೊಳಿಸುವ ಪ್ರಯತ್ನ ನಡೆದಿದೆ ಎಂದರೆ ತಪ್ಪಾಗಲಾರದು.

ಬಂಡಾಯ ಚಳುವಳಿ ಎಲ್ಲ ಶೋಷಕರ ವಿರುದ್ಧ ಎದ್ದಿರುವ ಚಳುವಳಿ. ಅದರ ಹತ್ತಾರು ಸಮಸ್ಯೆಗಳಲ್ಲಿ ದಲಿತರ ಸಮಸ್ಯೆಯೂ ಒಂದಾಗಬಹುದು. ಆದರೆ ಶೋಷಿತರಲ್ಲಿ ಶೋಷಿತರಾದ ದಲಿತರ ಕೂಗು ಬಂಡಾಯದ ಅನೇಕ ಆರ್ಭಟಗಳಲ್ಲಿ ಕೇಳದೆ ಹೋಗಬಹುದು. ಕೇಳಿದರೂ ಕ್ಷೀಣವಾಗಿ ಕೇಳಬಹುದು. ಅಂಥದ್ದರಲ್ಲಿ ದಲಿತನ ಪ್ರಜ್ಞೆ ಹರಿತವಾಗಿ ವಿಕಾಸಗೊಳ್ಳುವ ಬದಲು ಸಾಧಾರಣೀಕರಣವಾಗಿ ಎಲ್ಲರೊಡನೊಂದಾಗಿ ತನ್ನ ಬಾಯನ್ನು ಕಳೆದುಕೊಳ್ಳುವ ಸಂದರ್ಭವೇ ಹೆಚ್ಚು. ಅದಕ್ಕೆ ದಲಿತ ಸಾಹಿತಿಗಳು ಎಂದೂ ಬಲಿಯಾಗಬಾರದು. ಬಂಡಾಯದವರಿಂದ ಆಗಬಹುದೆಂಬ ಅನುಮಾನದ ನಂಬಿಕೆಯನ್ನು ಕಿತ್ತೊಗೆದು ತಾವೇ ತಮ್ಮ ಗಟ್ಟಿತನವನ್ನು ಗರ್ಭೀಕರಿಸಿಕೊಳ್ಳುವುದರ ಕಡೆಗೆ ತೀವ್ರ ಗಮನ ಹರಿಸಬೇಕಾಗಿದೆ.

ಈ ದೃಷ್ಟಿಯಿಂದಲೇ ದಲಿತ ಸಾಹಿತಿಗಳಿಗೆ ನಾನು ಯಾವಾಗಲೂ ಹೇಳುವ ಮಾತೊಂದಿದೆ. ಸಾಹಿತ್ಯಿಕ ಸಂದರ್ಭದಲ್ಲಿಯೂ ಯಾರೂ ನಮ್ಮನ್ನು ಉದ್ಧಾರ ಮಾಡಲಾರರು. ನಮ್ಮ ಉದ್ಧಾರ ನಮ್ಮಿಂದಲೇ ಆಗಬೇಕಾಗಿರುವುದು ಅನಿವಾರ್ಯ, ಸತ್ಯ. ಇತರರ ಅನುಕಂಪ, ಸಹಾನುಭೂತಿ ನಮ್ಮ ಬೆಳವಣಿಗೆಗೆ ಪೂರಕವಾಗುವುದಕ್ಕಿಂತ ಮಾರಕವಾಗುವ ಸಂದರ್ಭಗಳೇ ಹೆಚ್ಚು. ನಮ್ಮನ್ನು ಕರೆದು ಯಾರೂ ಗೌರವದ ಮಣೆ ಹಾಕಿ ಕೂಡಿಸಬೇಕಾಗಿಲ್ಲ. ನಮ್ಮ ಸಾಹಿತ್ಯದ ಗಟ್ಟಿತನದಿಂದ ನಾವು ಆ ಸ್ಥಾನವನ್ನು ಪಡೆಯಲೇಬೇಕಾಗಿದೆ. ಅಲ್ಲಿ ನಮ್ಮ ಹೋರಾಟ ಶತಸಿದ್ಧ. ಆದ್ದರಿಂದಲೇ ಕನ್ನಡ ಸಾಹಿತ್ಯ ಪರಿಷತ್ತಾಗಲೀ ಸಮುದಾಯವಾಗಲೀ ಬಂಡಾಯವಾಗಲೀ ಅಲ್ಲೆಲ್ಲ ನಾವು ನುಗ್ಗಿ ಹೋಗಲೇಬೇಕಾದ ಅನಿವಾರ್ಯತೆ ಇಂದು ಹೆಚ್ಚಾಗಿದೆ. ಆ ವೇದಿಕೆಗಳನ್ನು ಬಳಸಿಕೊಳ್ಳುವುದರಿಂದ ದಲಿತ ಸಾಹಿತ್ಯಗಳಿಗೆ ಹೆಚ್ಚಿನ ಲಾಭವಿದೆಯೆಂದು ನಾನು ಭಾವಿಸಿದ್ದೇನೆ.

ದಲಿತ ಸಾಹಿತಿಗಳು ಎಲ್ಲೇ ಇರಲಿ, ಹೇಗೆ ಇರಲಿ ಯಾವುದೇ ಸಂಘ ಸಂಸ್ಥೆಗಳ ಮಧ್ಯದಲ್ಲಿರಲಿ, ತಮ್ಮ ದಲಿತ ಪ್ರಜ್ಞೆ ಮಾತ್ರ ಯಾವಾಗಲೂ ಜಾಗೃತವಾಗಿರಬೇಕು. ಪ್ರತಿಕೂಲ ಪರಿಸ್ಥಿತಿಯನ್ನು ಇಕ್ಕಿ ಮೆಟ್ಟಿ ನಿಲ್ಲಬೇಕು.

ಹೇಳು ಕವಿ, ಹೇಳು ಕವಿ ಹೇಗೆ ಕ್ರಾಂತಿ ಮಾಡಲಿ?
ಇಂಥ ಹಳ್ಳಿಗಳನ್ನು ನಾನು ನಡೆಯಲೇನು ಮಾಡಲಿ?

ಎಂದು ಹಾಡಿದ ದಲಿತ ಕವಿಯ ನಿರಾಸೆ (ಚೆನ್ನಣ್ಣ ವಾಲೀಕಾರ, ‘ಬಂಡೆದ್ದ ದಲಿತರ ಬೀದಿ ಹಾಡುಗಳು’) ಆ ಒಬ್ಬ ಕವಿಯ ನಿರಾಸೆಯಿಲ್ಲ. ಅದು ಅನೇಕ ದಲಿತ ಕವಿಗಳ ನಿರಾಶೆಯೂ ಅಹುದು. ಆದರೆ ಆ ಹಂತ ಗೆದ್ದು.

ಕೈ ಮುಗಿದು ಶಿರಬಾಗಿ ಅತಿವಿನಯ ತೋರಿದರೆ
ದೀನ ದಲಿತರು ಎಂದು ಚಾಕು ಬೀಸಿದಿರಿ
ಒಂದು ಸೇರಿಗೆ ನಾವು ಇಂದು ಸವ್ವಾಸೇರು
ಕಾಲ ಪಕ್ಕಾಗಿರಲು ಕಾಯಬೇಕಿನ್ಯಾರು?
ನಮ್ಮದೆಯ ಹುಪ್ಪುಗಳು ಬಂಗಾರ ಗುಜ್ಜುಗಳು
ಎಂಜಲದ ಎಲೆನೆಕ್ಕಿ ಕಣ್ಣೀರು ಕುಡಿಯುವವು
ಕಾಡಕಿಡಿ ಬೆಂಕಿ ದಾವಾನಲವಾದೀತು
ಇವರ ಜ್ವಾಲಾಭಾವ ಎಲ್ಲರನ್ನು ದಹಿಸೀತು
(ಪ್ರೊ. ವಜ್ರಮಟ್ಟಿ)

ಹೀಗೆ ಎಚ್ಚರಗೊಂಡಿರುವ ದಲಿತ ಪ್ರಜ್ಞೆ, ಅದರ ಧೋರಣೆ ಇದೆ ರಭಸದಿಂದ ಮುಂದೆ ನಡೆಯಲಿ, ತನ್ನೆಲ್ಲ ಸೂಕ್ಷ್ಮ ಸಂಕೀರ್ಣತೆಯಿಂದ ಸಾಹಿತ್ಯದಲ್ಲಿ ತನ್ನ ಸ್ಥಾನವನ್ನು ಅರ್ಥವತ್ತಾಗಿ ದಾಖಲಿಸುವ ಕಾಲ ಬಹುಬೇಗ ಬರಲಿ.