ಅಖಿಲ ಭಾರತ ೫೩ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ದಲಿತ ಸಾಹಿತ್ಯ’ ಗೋಷ್ಠಿಯನ್ನು ಉದ್ಘಾಟಿಸಿ ಮಾಡಿದ ಭಾಷಣ.

ಹಿಂದುಳಿದ ಜನಾಂಗದಲ್ಲಿ ಹುಟ್ಟಿ, ಹಿಂದುಳಿದವರ ಸಮಸ್ಯೆಗಳ ನಡುವೆ ಬಾಳಿ – ಬೆಳೆದು ಬಂದ ನಾನು ಒಬ್ಬ ಸಾಹಿತ್ಯ ವಿದ್ಯಾರ್ಥಿಯಾಗಿ, ಸಾಹಿತಿಯಾಗಿ, ದಲಿತರ ಹೋರಾಟ ಅದಕ್ಕೆ ಸಂಬಂಧಿಸಿದ ಸಾಹಿತ್ಯದ ಬೆಳವಣಿಗೆಯನ್ನು ತುಂಬ ಗಂಭೀರವಾಗಿ ಸಹಜ ಕಾಳಜಿಯಿಂದ ಗಮನಿಸುತ್ತಾ ಬಂದಿದ್ದೇನೆ. ಇಂದು ಕನ್ನಡ ಸಾಹಿತ್ಯ ಪರಿಷತ್ತಿನವರು ದಲಿತ ಗೋಷ್ಠಿಯನ್ನು ಉದ್ಘಾಟಿಸಲು ಅವಕಾಶ ಮಾಡಿಕೊಟ್ಟು, ಪ್ರಮುಖಃ ದಲಿತ ಸಾಹಿತ್ಯವನ್ನು, ಅದಕ್ಕೆ ಪೂರಕವಾದ ಸಮಸ್ಯೆಗಳನ್ನು ಚರ್ಚಿಸಲು ಮುಕ್ತ ವೇದಿಕೆಯನ್ನು ಒದಗಿಸಿ ಕೊಟ್ಟಿದ್ದಾರೆ. ಅದಕ್ಕಾಗಿ ವೈಯಕ್ತಿಕವಾಗಿ ಪ್ರಾರಂಭದಲ್ಲಿಯೇ ಅವರಿಗೆ ನನ್ನ ಕೃತಜ್ಞಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ.

ಈ ದಲಿತವೆಂದರೆ ಯಾರು ? ಇವರ ಸಮಸ್ಯೆಗಳೇನು ? ಈ ದಲಿತರಲ್ಲಿ ಒಂದು ಬರಹ ಬಲ್ಲವರೆಷ್ಟು ಮಂದಿ ? ಅದರಲ್ಲಿ ಸಾಹಿತ್ಯ ಸೃಷ್ಟಿಗೆ ತೊಡಗಿರುವವರು ಎಷ್ಟು ಜನ ? ಹೆಚ್ಚು ಸಂಖ್ಯೆಯಲ್ಲಿ ನಿರಕ್ಷರಕುಕ್ಷಿಗಳಾಗಿರುವ ಈ ಜನಾಂಗಕ್ಕೆ ಸಾಹಿತ್ಯ ಎಷ್ಟರ ಮಟ್ಟಿಗಿನ ಪರಿಹಾರ ಸೂಚಿಸಬಹುದು ? ಈ ಸಾಹಿತ್ಯದ ಧೋರಣೆಗಳೇನು ? ಅದರಿಂದ ಆಗಿರುವ ಆಗುತ್ತಿರುವ ಪ್ರಯೋಜನಳೇನು ? ಇಲ್ಲಿಯವರೆಗೆ ಅದು ಯಾವ ಯಾವ ಹಂತದ ಸಫಲತೆಯನ್ನು ಪಡೆದಿದೆ ? ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಶೈಕ್ಷಣಿಕವಾಗಿ ಇನ್ನೂ ತೀರ ಕೆಳಹಂತದಲ್ಲಿಯೇ ಇರುವ ಈ ಜನಾಂಗವನ್ನು ಎಚ್ಚರಿಸಲು ಇರುವ ಇತರ ಸುಲಭ ಸಾಹಿತ್ಯದ ಮಾರ್ಗಗಳು, ಮಾಧ್ಯಮಗಳು ಯಾವುವು?

ಇತರ ದೇಶಗಳ ದಲಿತ ಸಾಹಿತ್ಯಿಕ ಹೋರಾಟಗಳಿಗೂ ನಮ್ಮ ಭಾರತದ ಪ್ರಮುಖತಃ ಕರ್ನಾಟಕದ ಹೋರಾಟಗಳಿಗೂ ಇರುವ ತಾರತಮ್ಯವೇನು? ನಮ್ಮ ಕನ್ನಡ ನಾಡಿನ ಪರಿಸರದಲ್ಲಿ ಈ ಹೋರಾಟಕ್ಕೆ ಸಿಗಬಹುದಾದ ಅನುಕೂಲತೆ ಸವಲತ್ತುಗಳು ಏನು? ಇತರ ದೇಶದವರ ಈ ಜನಾಂಗದ ಹೋರಾಟಗಳಿಂದ ನಾವು ಎಷ್ಟೆಷ್ಟನ್ನು ಸ್ವೀಕರಿಸಬಹುದು? ಹಾಗೆ ಸ್ವೀಕರಿಸಿದ್ದನ್ನು ನಮ್ಮದನ್ನಾಗಿಸಿಕೊಳ್ಳುವುದು ಹೇಗೆ? ಹಗೆ ಮಾಡುವುದರಿಂದ ದೊರೆಯುವ ಪ್ರಯೋಜನ ಯಾವ ಹಂತದ್ದು? ಈಗ ಹೋರಾಟ ಎಲ್ಲಿಯವರೆಗೆ ಸಾಗಿದೆ? ಇದು ಮುಂದೆ ಮಾಡಬೇಕಾಗಿರುವ ಇನ್ನೂ ಜವಾಬುದಾರಿಯುತವದ ಕೆಲಸಗಳೇನು? ಸಂಘಟನೆ ಯಾವ ಯಾವ ಹಂತದಲ್ಲಿ ಎಲ್ಲೆಲ್ಲಿ ಹೇಗೆ ಹೇಗೆ ನಡೆಯಬೇಕು? ಇಂತಹ ಹತ್ತಾರೆ ಪ್ರಶ್ನೆಗಳು ಎದುರಾಗುತ್ತವೆ. ಏಕೆಂದರೆ ಇದು ತುಂಬಾ ಸಂಕೀರ್ಣವಾದ ವಿಷಯ. ಈ ಗೋಷ್ಠಿ, ಈ ಪ್ರಶ್ನೆಗಳಿಗೆ ಸ್ವಲ್ಪ ಮಟ್ಟಿಗಾದರೂ ಸಮರ್ಪಕ ಉತ್ತರ ಹಾಗೂ ಸಾಕಷ್ಟು ಪರಿಹಾರ ನೀಡಬಹುದು ಎನ್ನುವ ಭರವಸೆಯನ್ನು ನಾನು ಹೊಂದಿದ್ದೇನೆ.

ಇಂದಿನ ಗೋಷ್ಠಿಯ ಅಧ್ಯಕ್ಷರಾಗಿರುವ ಡಾ. ಅನುಪಮಾ ನಿರಂಜನ ಅವರು ಹಿಂದುಳಿದ ಜನಾಂಗದಲ್ಲಿ ಒಂದು ಧ್ರುವತಾರೆ. ನಮ್ಮ ಕನ್ನಡ ನಾಡಿನಲ್ಲಿ ಕೇವಲ ಕೆಲವೇ ವರುಷಗಳ ಹಿಂದೆ ಮೈತಳೆದ ಈ ದಲಿತ ಹೋರಾಟಕ್ಕೆ ತಕ್ಷಣವೇ ಸ್ಪಂದಿಸಿ, ಪ್ರತಿಕ್ರಿಯೆ ತೋರಿ ತಮ್ಮ ಸಾಹಿತ್ಯದ ಧ್ವನಿಯನ್ನು ಅವರು ಅತ್ತಕಡೆ ಹರಿಸಿದ್ದು ಗಮನಾರ್ಹ ಸಂಗತಿ. ಅವರ ‘ಎಳೆ’ ಕಾದಂಬರಿ ಅದಕ್ಕೆ ಒಂದು ಉತ್ತಮ ನಿದರ್ಶನ. ದಲಿತರ ಸಮಸ್ಯೆಗಳಿಗೆ ದುಡಿಯುವ, ಅವರ ಹೋರಾಟಕ್ಕೆ ಬೆಂಬಲಿಸುವ, ಸಾಹಿತ್ಯ ಮಾಧ್ಯಮದ ಮೂಲಕ ಪರಿಹಾರ ಸೂಚಿಸಲು ಪ್ರಯತ್ನಿಸುವ ಆ ಹೃದಯಶ್ರೀಯ ಸೋದರಿ ಅನೇಕ ಹೊಸ ವಿಚಾರಗಳನ್ನು ತಮ್ಮ ಅಧ್ಯಕ್ಷ ಭಾಷಣದಲ್ಲಿ ಹೇಳುವವರಿದ್ದಾರೆಂದು ಭಾವಿಸಿದ್ದೇನೆ.

ಈ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲು ಆಹ್ವಾನಿತರಾಗಿರುವ ನಾಲ್ಕು ಜನ ಭಾಷಣಕಾರರು ಈ ಜನಾಂಗದ ಬಗ್ಗೆ ಸಾಕಷ್ಟು ಕಾಳಜಿ ಇರುವವರು ಮತ್ತು ಕಳಕಳಿಯಿಂದ ಕೆಲಸ ಮಾಡುತ್ತಿರುವವರು. ಇವರೆಲ್ಲರ ವಿಚಾರ ಬದ್ಧ ಅಭಿವ್ಯಕ್ತಿಯಿಂದ ಈ ಗೋಷ್ಠಿ ದಲಿತ ಸಾಹಿತ್ಯದ ತಿಳಿವಳಿಕೆಗೆ ವೈಚಾರಿಕ ನೆಲೆಗಟ್ಟು ಕಟ್ಟಿಕೊಡಬಹುದೆಂದು ನಿರೀಕ್ಷೆ ಹೊಂದಿದ್ದೇನೆ.

ಕನ್ನಡ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಕಳೆದ ಎರಡು ವರುಷಗಳಿಂದ ಸಾಕಷ್ಟು ಕೆಲಸ ಮಾಡಿದೆ. ಹಿಂದೆ ಇದ್ದ ಅಭಿಪ್ರಾಯ ಧೋರಣೆಯನ್ನು ಅದು ಬದಲಾಯಿಸಿಕೊಂಡಿದೆ. ಎನ್ನುವುದು ಆಶಾದಾಯಕ ಸಂಗತಿ. ಧರ್ಮಸ್ಥಳ ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲದಿಂದ ಪ್ರಾರಂಭವಾದ ಈ ವಿಷಯ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಸಾಕಷ್ಟು ಪ್ರಾತಿನಿಧ್ಯ ಪಡೆಯಿತು. ಸಾಹಿತ್ಯ ಪರಿಷತ್ತಿನಲ್ಲಿ ನಡೆದ ದಲಿತ ಮಕ್ಕಳು’ ವಿಚಾರ ಸಂಕಿರಣ ತುಂಬಾ ಉಪಯುಕ್ತತೆಯನ್ನು ದೊರಕಿಸಿ ಕೊಟ್ಟಿತು. ಆ ದಿವಸ ಬಿಡುಗಡೆಯಾದ ‘ದಲಿತ ಮಕ್ಕಳು’ ಅತ್ಯಂತ ವಿಚಾರಪೂರ್ಣ ಲೇಖನಗಳಿಂದ ಕೂಡಿದ್ದು ಈ ದಿಸೆಯಲ್ಲಿ ಒಂದು ಉತ್ತಮ ಗ್ರಂಥವಾಗಿದೆ. ಅದಕ್ಕಾಗಿ ಪರಿಷತ್ತಿನವರು ನಮ್ಮ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ‘ದಲಿತ’ ಎಂಬ ಪದ ವ್ಯಾಪಕವಾದ ಬಳಕೆಯಲ್ಲಿದೆ. ಇದಕ್ಕೆ ಕಾರಣ ದಲಿತ ಹೋರಾಟ ಅಥವಾ ದಲಿತರ ಹೆಸರಿನಲ್ಲಿ ನಡೆಯುತ್ತಿರುವ ಹೋರಾಟಗಳು. ‘ದಲಿತ’ ಶಬ್ದಕ್ಕೆ ಕೆಲವು ಅರ್ಥವಿವರಗಳು ವ್ಯಾಖ್ಯಾನಗಳೂ ಪ್ರತಿಪಾದಿತವಾಗಿವೆ. ಶ್ರೀ ಕಲ್ಲೆಶಿವೋತ್ತಮರಾಯರು ‘ದಲಿತರು’ ಎನ್ನುವ ಸಂಸ್ಕೃತ ಶಬ್ದದಿಂದ ಬಂದಿದೆ. ದಲ ಮಾಡುವ ಕೆಲಸ ‘ದಲನ’. ದಲದ ಕೆಳದಳ ದಲನಕ್ಕೆ ಒಳಗಾದವರು ಈ ದಲಿತರು. ‘ದಲ’ ಎಂದರೆ ಚುರು. ತುಂಡು, ಭಾಗ, ಸೈನ್ಯ, ಕತ್ತಿರ ಒರೆ ಇನ್ನೂ ಮುಂತಾದ ಅರ್ಥಗಳಿವೆ. ಇಲ್ಲಿ ಮುಖ್ಯವಾಗಿ ಸೈನ್ಯ. ಹರಿತವಾದ ಶಸ್ತ್ರ ಎನ್ನುವ ಅರ್ಥ ಸಮಂಜಸವಗುತ್ತದೆ. ಅಂದರೆ ಸೈನ್ಯ ಬಲದಿಂದ ಕತ್ತಿಯ ಅಲಗಿನಿಂದ ಚೂರು ಚೂರಾದವರು, ಛಿದ್ರವಾದವರು, ಈ ದಲನದ ಕ್ರಿಯೆಗೆ ಈಡಾದವರೇ ದಲಿತರು. ಧ್ವನ್ಯಾರ್ಥಗಳನ್ನು ಗುರುತಿಸಿ ಹೇಳುವುದಾದರೆ ಯಾರು ಶೋಷಿತರೋ ಅವರು ದಲಿತರು.

ಭಾರತದಲ್ಲಿ ದ್ರಾವಿಡರೇ ಮೊದಲಾದ ಈ ದೇಶದ ಮೂಲ ಜನರನ್ನು ಆರ್ಯರು ಪ್ರಾಚೀನ ಕಾಲದಲ್ಲಿ ಗೆದ್ದಾಗ, ದ್ರಾವಿಡರ ವಿಷಯದಲ್ಲಿ ಅಮಾನುಷ ರೀತಿಯಿಂದ ವರ್ತಿಸಿದರು. ಸೋತ ದ್ರಾವಿಡರೇ ಮೊದಲಾದ ಜನರನ್ನು ಚಂಡಾಲ, ಪಂಚಮ ಮತ್ತು ಶೂದ್ರ ಎಂದು ವಿಂಗಡಿಸಿದರು. ಚಂಡಾಲರೇ ಮೊದಲಾದವರು ಸೋತು ಕಾಡಿಗೆ ಓಡಿಹೋದವರು ಮತ್ತು ಅಪರಾಧಗಳು ಎಂದು ಪರಿಗಣಿಸಲಾದ ಕೆಲವು ಕೃತ್ಯಗಳ ಆಧಾರದಿಂದ ಆ ವರ್ಗಕ್ಕೆ ಸೇರಿಸಲಾದವರು. ಪಂಚಮರೆಂದರೆ ಸೋತು ಸೆರೆಹಿಡಿಯಲಾದವರು. ಇವರ ಮೇಲೆ ನಾನಾ ನಿರ್ಬಂಧಗಳನ್ನು ಹಾಕಿ ತೊತ್ತಳ ತುಳಿಸಿದ್ದರಿಂದ ಇವರ ಸ್ಥಿತಿ ಪ್ರಾಣಿಗಳಿಗಿಂತ ಕಡೆಯಾಯಿತು. ಇನ್ನೂ ಕೆಲವರು ಸೋಲುವಾಗ ಹೊಂದಿಕೊಂಡು ಊಳಿಗಕ್ಕೆ ನಿಂತವರು ಶೂದ್ರರೆನಿಸಿಕೊಂಡರು. ಆದರೆ ಮೂಲತಃ ಮೂರು ವರ್ಣಗಳನ್ನು ಹೊರಗಿಟ್ಟು ಇವರೆಲ್ಲರನ್ನೂ ವರ್ಣ ವ್ಯವಸ್ಥೆಯಲ್ಲಿ ಶೂದ್ರರೆಂದೇ ಗುಂಪು ಮಾಡಲಾಗಿದೆ. ಪಂಚಮ ಮತ್ತು ಚಂಡಾಲರನ್ನು ಅತಿಶೂದ್ರರೆಂದು ಅನಂತರ ಕರೆಯಲಾಯಿತು. ಇವರಿಗೆ ಷಟ್ಕರ್ಮಾಧಿಕಾರಗಳಿಲ್ಲ. ಷೋಡಶ ಸಂಸ್ಕಾರಗಳೂ ಇಲ್ಲ. ಆಳರಸರಿಗೆ ಹತ್ತಿಕೊಂಡಿದ್ದ ಗುಲಾಮರು ಇವರಾದರು. ಆದ್ದರಿಂದಲೇ ಇವರಿಗೆ ‘ಶೂದ್ರ’ ಎಂದರೆ ಆಳರಸರು ಇಟ್ಟುಕೊಂಡವರ ಮಕ್ಕಳು ಎಂದು ಕರೆಯಲಾಯಿತು.

ಕಾಡಿಗೆ ಓಡಿಹೋಗಿ ಕಾಡಾಡಿಗಳಾದವರು ಇಂದಿನ ಗಿರಿಜನರು, ಇವರೆಲ್ಲಾ ದಲಿರೆನಿಸಿಕೊಳ್ಳುತ್ತಾರೆ ಎನ್ನುವುದು ಒಂದು ಅಭಿಪ್ರಾಯವಾದರೆ ಎಲ್ಲ ಜಾತಿ ವರ್ಗಗಳ ಶೋಷಿತರೆಲ್ಲಾ ದಲಿತರೇ ಎನ್ನುವುದು ಇನ್ನೊಂದು ಅಭಿಪ್ರಾಯ. ಈ ವರ್ಗದಲ್ಲಿ ಪ್ರತಿಷ್ಠಿತರೆಂದು ಕರೆಸಿಕೊಳ್ಳುವ ಬ್ರಾಹ್ಮಣರು ಸೇರಬಹುದು. ಆದರೆ ಬ್ರಾಹ್ಮಣೇತರ ಚಳವಳಿಯ ಹಲಕೆಲವರು ಪೆರಿಯಾರ್ ರಾಮಸ್ವಾಮಿ, ಡಾ. ಅಂಬೇಡ್ಕರ ಮತ್ತು ಡಾ. ರಾಮಮನೋಹರ ಲೋಹಿಯಾರೇ ಮೊದಲಾದವರು ಶೂದ್ರರು, ಹರಿಜನರು, ಗಿರಿಜನರು, ಮುಸ್ಲಿಮರು, ಕ್ರಿಶ್ಚಿಯನ್ನರು, ಮಹಿಳೆಯರು – ಇವರೆ ಮೊದಲಾದವರು ಬಹುಮಟ್ಟಿಗೆ ದಲಿತ ವರ್ಗಕ್ಕೆ ಸೇರಿದವರು ಎಂದು ಸಾರಿದ್ದಾರೆ.

ದಲಿತ ಜನಾಂಗದಲ್ಲಿಯೇ ಹುಟ್ಟಿ ಅದರ ನೋವನ್ನುಂಡ ಜನತೆಯ ಅನುಭವವನ್ನು ದಲಿತರೇ ಚಿತ್ರಿಸಿದಾಗ ಅತ್ಯಂತ ಸಂಕೀರ್ಣವಾಗಿ, ಸಮರ್ಪಕವಾಗಿ ಸಾಹಿತ್ಯ ಮೂಡಿಬರಬಹುದು. ಇತರರು ಎಷ್ಟೇ ಆಳವಾಗಿ ಆ ಅನುಭವವನ್ನು ತನ್ನದಾಗಿಸಿಕೊಂಡರೂ ಅದರಲ್ಲಿನ ದೃಷ್ಟಿಕೋನ ಬೇರೆಯೇ ಆದೀತು ಎನ್ನುವುದು ಇನ್ನೊಂದು ಮುಖ. ಉದಾಹರಣೆಗೆ ಶಿವರಾಮ ಕಾರಂತರ ಚೋಮನ ಕಥೆ, ಒಬ್ಬ ಚೋಮನೇ ಅದನ್ನು ಬರೆದಿದ್ದರೆ ಇನ್ನೂ ಸತ್ವಯುತವಾಗಿ ಜೀವಂತವಾಗಿ ಮೂಡುವ ಸಾಧ್ಯತೆಯಿತ್ತು ಎನ್ನುವುದು, ಡಾ. ಕೆ.ವಿ. ಪುಟ್ಟಣ್ಣನವರ ಕೆಲವು ಕೃತಿಗಳಲ್ಲಿ ಇತರೆ ಜನಾಂಗ ಬ್ರಾಹ್ಮಣವರ್ಗದಿಂದ ಶೋಷಣೆ ಹೊಂದುವುದನ್ನು ಕಾಣುವಂತೆ ಒಂದು ಸಿರಿವಂತ ಒಕ್ಕಲು ಮನೆತನ ತಮ್ಮ ಕಾಫೀ, ಅಡಿಕೆ ತೋಟಗಳಲ್ಲಿ ದುಡಿಯುವ ಕೂಲಿಗಾರರನ್ನು ಶೋಷಿಸುವ ಚಿತ್ರವನ್ನು ಕಾಣುವುದು ಅಪರೂಪವಾಗುತ್ತದೆ.

ನಿರ್ಗತಿಕ ಬ್ರಾಹ್ಮಣನೊಬ್ಬ ಒಂದು ತಂಬಿಗೆ, ಒಂದು ಉದ್ಧರಣೆ ಹಿಡಿದು ಹೊರಟು, ಮನೆ ಮನೆ ಹೊಕ್ಕು, ಅವರಿಂದ ಕಾಲು ಮುಟ್ಟಿಸಿ ನಮಸ್ಕಾರ ಮಾಡಿಸಿಕೊಂಡು ದಿನಕ್ಕೆ ಹತ್ತು ರೂ.ಗಳಾದರೂ ಸಂಪಾದಿಸಬಲ್ಲ. ಅವನನ್ನು ಒಬ್ಬ ದಲಿತನಾಗಲೀ ಇತರ ವರ್ಗದ ಯವ ವ್ಯಕ್ತಿಯೇ ಆಗಲಿ ಮನೆ ಬಾಗಿಲಿನಿಂದ ಹೊರನಿಲ್ಲು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಅದೆ ಒಬ್ಬ ದಲಿತ ಆರ್ಥಿಕವಾಗಿ ಸ್ವಲ್ಪ ಮುಂದುವರೆದಿದ್ದರು ಅವನ ಜಾಗ ಮನೆ ಹೊಸ್ತಿಲಿನ ಹೊರಗೇ ಮಾತ್ರ : ಪ್ರಾಣಿಗಳ ಸ್ಥಾನ.

ನಮ್ಮ ಊರಿನಲ್ಲೊಂದು ದೇವಾಲಯವಿದೆ. ಅದರ ಅರ್ಚಕ ವರ್ಗದವರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಊರಿನಲ್ಲಿ ಇರುವ ಊರು ಬಿಟ್ಟು ಇತರ ಊರುಗಳಲ್ಲಿ ನೆಲೆಸಿರುವ ಎಲ್ಲರ ಬಳಿಗೂ ಬಂದು ವಂತಿಕೆ ಹಣ ಪಡೆದು ಹೋಗುತ್ತಾರೆ. ಊರಿನ ಹರಿಜನರ ಕೇರಿಯಿಂದಲೂ ವಂತಿಕೆ ವಸೂಲು ಮಾಡುತ್ತಾರೆ. ರಥೋತ್ಸವದ ಸಂದರ್ಭದಲ್ಲಿ ನಡೆಯುವ ಮೂರು ದಿವಸಗಳ ವೈಭವದ ಪೂಜೆಯಲ್ಲಿ ಅನ್ನ ಸಂತರ್ಪಣೆಲ್ಲಿ ಬ್ರಾಹ್ಮಣವರ್ಗ ಬಿಟ್ಟು ಬೇರೆ ಯಾರಿಗೂ ಅಲ್ಲಿ ಪ್ರವೇಶವಿಲ್ಲ. “ಇದು ಅನ್ಯಾಯ ಎಲ್ಲಿ ನಿಮಗೆ ಕಿಂಚಿತ್ತಾದರೂ ಸಹಭಾಗತ್ವವಿಲ್ಲವೋ ಅದನ್ನು ಷೋಷಿಸಲು ನೀವೇಕೆ ವಂತಿಕೆ ಕೊಡುವಿರಿ, ಕೊಡಲು ಮನಸ್ಸಿದ್ದರೆ ಸಹಭಾಗಿತ್ವ ಕೇಳಿ” ಎಂದು ಎಷ್ಟೇ ರೀತಿಯಿಂದ ಸಾಮಾಜಿಕ ಕಾಳಜಿಯ ಕೆಲವರು ತಿಳಿಸಿದರೂ ಈ ಜನರಿಗೆ ಅದು ಅರ್ಥವಾಗುವುದಿಲ್ಲ. ಎಲ್ಲಿಯವರೆಗೆ ಈ ನನ್ನ ದಲಿತರು ಇಷ್ಟು ದಡ್ಡರಾಗಿರುವರೋ ಅಲ್ಲಿಯವರೆಗೂ ಅವರ ಉದ್ಧಾರ ಕನ್ನಡಿಯ ಕೈಗಂಟು. ಇತ್ತೀಚೆಗೆ ನಡೆದ ಆ ದೇವಾಲಯದ ಜೀರ್ಣೋದ್ಧಾರ ಸಂದರ್ಭದಲ್ಲಿ ಹೊರ ತಂದ ಸ್ಮರಣ ಸಂಚಿಕೆಯಲ್ಲಿ ಅದೇ ಊರಿನ ದಲಿತ ಸಾಹಿತಿಗಳಲ್ಲಿ ಒಬ್ಬರ ಲೇಖನವದರು ಪ್ರಕಟವಾಗಿಲ್ಲದಿರುವುದು ಶೋಚನೀಯ ಸಂಗತಿ. ಸಾಹಿತ್ಯದಲ್ಲೂ ಮಡಿವಂತಿಕೆ, ಶೋಷಣೆ!

ಸಾಹಿತ್ಯದಲ್ಲಿ ದಲಿತರಿಗೆ ಸೇರಿದ ಇಂಥ ಜೀವಂತ ಸಮಸ್ಯೆಗಳು ಮಾತಾಡುವಂತಾಗಬೇಕು. ಅಲ್ಲದೆ ಈ ದುರಂತದ ತೀವ್ರತೆ ಎಷ್ಟಿದೆಯೆಂದರೆ ಈ ದಲಿತರ ತಲೆಯನ್ನು ಮೆದುಳನ್ನು ಯಾರು ನುಣ್ಣಗೆ ಬೋಳಿಸುತ್ತಾರೋ ಆ ಜನಾಂಗದ ಕಾಲೆ ಹಿಡಿಯುತ್ತಾರೆ ಇವರು. ಈ ಶಿಷ್ಟ ಜನಾಂಗ ರಚಿಸುವ ಚಕ್ರವ್ಯೂಹದಿಂದ ದಲಿತರು ಇನ್ನೂ ಬಿಡಿಸಿಕೊಳ್ಳಲು ಅಸಮರ್ಥರಾಗಿದ್ದಾರೆ.  ದಲಿತರ ಈ ಆರ್ತನಾದ, ಅಸಹಾಯಕತೆಯ ಸ್ವರ, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಉಜ್ವಲವಾಗಿ ಇನ್ನು ಬಂದಿಲ್ಲ. ಸಾವಿರಾರು ವರುಷಗಳ ನಮ್ಮ ದೇಶದ ಚರಿತ್ರೆಯಲ್ಲಿ ಉದ್ದಕ್ಕೂ ಕೇಳುತ್ತಾ ಬರುವ ಧ್ವನಿಯೆಂದರೆ ತಿಂದವರ ತೇಗು ಹಸಿದವರ ಕೂಗು. ಈ ತೇಗು – ಕೂಗು ಎರಡನ್ನೂ ಶೋಧಿಸಿ ಬರುವ ಸಾಹಿತ್ಯಧ್ವನಿಗಾಗಿ ನಿರೀಕ್ಷಿಸಬೇಕು.

ಹದಿನೆಂಟನೇ ಶತಮಾನದ ಫ್ರಾನ್ಸ ದೇಶದ ಕ್ರಾಂತಿಯಾಗಬಹುದು, ಹತ್ತೊಂಬತ್ತನೇ ಶತಮಾನದ ಅಮೆರಿಕೆಯ ಬಿಳಿಯರ ವಿರುದ್ಧದ ನಿಗ್ರೋ ಜನಾಂಗದ ಬ್ಲಾಕ್ ಪ್ಯಾಂಥರ್ಸ್ ಚಳವಳಿಯಾಗಹುದು, ಇಪ್ಪತ್ತನೆಯ ಶತಮಾನದ ಆದಿಯಲ್ಲಿ ರಷ್ಯಾದಲ್ಲಿ ನಿರ್ಮಾಣವಾದ ಸಮಾಜವಾದದ ಕ್ರಾಂತಿಯಾಗಬಹುದು. ಅವುಗಳಿಂದ ಸ್ಫೂರ್ತಿ ಪಡೆದು ಭರತಖಂಡದ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳುವಳಿಯಾಗಬಹುದು. ಆಂಧ್ರದ ದಿಗಂಬರ ಸಾಹಿತ್ಯ, ತಮಿಳುನಾಡಿನ ಹೋರಾಟ ಇವೆಲ್ಲಾ ನಮ್ಮ ಕನ್ನಡ ನಾಡಿನ ದಲಿತ ಹೋರಾಟಕ್ಕೆ ನಾಂದಿ ಹಾಡಿದವು. ಕನ್ನಡ ನಾಡಿನ ಇತಿಹಾಸದಲ್ಲಿ ಈ ದಲಿತರ ಹೋರಾಟ ಒಂದು ಹೊಸ ಅಲೆ. ಈ ಹೋರಾಟ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದಲೂ ಅಲ್ಲಲ್ಲಿ ತನ್ನ ಸ್ವರೂಪ ದರ್ಶನ ಮಾಡಿಸಲು ಹೋಗಿ ಸೋತ ನಿದರ್ಶನಗಳೇ ಹೆಚ್ಚು. ಆದರೆ ಇಂದು ತನ್ನೆಲ್ಲಾ ಶಕ್ತಿಯನ್ನು ಮೈಗೂಡಿಸಿಕೊಂಡು ತ್ರಿವಿಕ್ರಮನಂತೆ ಅಚಲವಾಗಿ ನಿಂತಿದ್ದಾನೆ. ಈ ದಲಿತ, ಇದು ಅತ್ಯಂತ ಸಂತೋಷದ ಸಂಗತಿ, ಚೆನ್ನಾಗಿ ನೆನಪಿರಲಿ ಇನ್ನು ಮುಂದಿನ ದಿನಗಳು ದಲಿತರವು.

ದಲಿತರಿಗೆ ಆಗುತ್ತಿರುವ ಸಾಮಾಜಿಕ ಅನ್ಯಾಯಗಳ ಒಂದು ದೊಡ್ಡ ಪಟ್ಟಿಯನ್ನು ಕೊಡುವುದು ನನ್ನ ಉದ್ದೇಶವಲ್ಲ. ಮುಖ್ಯವಾಗಿ ನಾವು ಇಲ್ಲಿ ವಿವೇಚಿಸಬೇಕಾಗಿರುವುದು ದಲಿತರ ಸಮಸ್ಯೆಗಳನ್ನಲ್ಲ. ದಲಿತ ಸಾಹಿತ್ಯವನ್ನು ಕುರಿತು ಎಂಬುದು ನಿಜ. ಆದರೆ ಸಮಾಜವನ್ನು ಬಿಟ್ಟು, ಜೀವನವನ್ನು ಬಿಟ್ಟು ಸಾಹಿತ್ಯ ಹೇಗೆ ಇರಬಲ್ಲದು? ದಲಿತರ ಸಮಸ್ಯೆಗಳ ಗೊಬ್ಬರದಿಂದಲೇ ದಲಿತ ಸಾಹಿತ್ಯ ಹುಟ್ಟಿ ಬರಬೇಕಾಗಿದೆ. ಅಲ್ಲವೆ? ಇಷ್ಟೆಲ್ಲ ಎಚ್ಚೆತ್ತಿದ್ದರೂ ದಲಿತ ಇನ್ನು ತುಂಬ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡಬೇಕಾಗಿದೆ. ಸಮಾಜದ ಎಲ್ಲ ರಂಗಗಳಲ್ಲಿಯೂ ಇಂದು ಶೋಷಿತನ ಸ್ಥಾನದಲ್ಲಿಯೇ ನಿಂತಿದ್ದಾನೆ ಎನ್ನುವುದನ್ನು ಮರೆಯುವಂತಿಲ್ಲ. ಸಾಹಿತ್ಯ ರಂಗವೂ ಇದರಿಂದ ಹೊರತಾಗಿಲ್ಲ. ದಲಿತರ ಹೆಸರಿನಲ್ಲಿ ತಮ್ಮ ಬಸಿರನ್ನು ದಲಿತೇತರರು ತುಂಬಿಕೊಳ್ಳುವ ಮುಖವಾಡದ ಸಾಹಿತಿಗಳಿಗೇನೂ ಕೊರತೆಯಿಲ್ಲ. ದಲಿತ ಸಾಹಿತಿಗಳನ್ನು ಅತಿಯಾಗಿ ಹೊಗಳಿಕೆಗೆ ಗುರಿಮಾಡಿ ಅವರ ಪ್ರತಿಭೆ ಚೆನ್ನಾಗಿ ಅರಳದಂತೆ ಪ್ರಾರಂಭದ ಹಂತದಲ್ಲಿಯೇ ನಿರ್ನಾಮ ಮಾಡುವ ಸಂಚು ನಡೆದಿದೆ. ಸಾಹಿತ್ಯ ರಂಗದಲ್ಲಿಯೂ ದಲಿತ ಸಾಹಿತಿ ದಲಿತನಲ್ಲದವನ ಮಾತನ್ನೇ ಕೇಳಿಕೊಂಡು ನಡೆಯುವಂತೆ ಈ ದಲಿತರ ಜುಟ್ಟನ್ನು ತನ್ನ ಅಧಿಕಾರ ಬಲದಿಂದಲೋ, ಅನುಕೂಲದ ಬಲದಿಂದಲೋ ಹಿಡಿದೇ ಇಟ್ಟುಕೊಂಡಿರುವುದನ್ನು ಇಂದು ದಲಿತ ಸಾಹಿತಿಗಳು ಕಂಡುಕೊಳ್ಳಬೇಕಾಗಿದೆ. ಸಮಾಜದ ಯಾವುದೇ ಕ್ಷೇತ್ರವಾಗಿರಲಿ, ಎಲ್ಲೆಲ್ಲಿ ದಲಿತನಿಗೆ ಪ್ರವೇಶವಿಲ್ಲವೋ ಅಲ್ಲೆಲ್ಲ ದಲಿತ ಕೆಚ್ಚೆದೆಯಿಂದ ಮುನ್ನುಗ್ಗಬೇಕು; ಅಲ್ಲಿ ನಿಲ್ಲಬೇಕು. ಶತಶತಮಾನಗಳಿಂದ ಜಡ್ಡುಗಟ್ಟಿನಿಂತ ಆ ವಾತಾವರಣದಲ್ಲಿ ಹೊಸಗಾಳಿ ಬೀಸುವಂತೆ ಮಾಡಬೇಕು. ಇದು ಸಾಹಿತ್ಯ ಕ್ಷೇತ್ರದಲ್ಲಿ ಮುಖ್ಯವಾಗಿ ಆಗಬೇಕಾಗಿದೆ. ಯಾವುದೇ ಸಂಘವಾಗಲೀ ಸಂಸ್ಥೆಯಾಗಲೀ ಅದರಿಂದ ಹೊರಗೆ ಉಳಿದು ಮಾಡುವ ಕೆಲಸದಿಂದ ಆಗುವ ಪ್ರಯೋಜನಕ್ಕಿಂತ ಅಲ್ಲಿ ಹೊಕ್ಕು ನಿಂತು, ಆಗುವ ಅನ್ಯಾಯವನ್ನು ಕಂಡುಹಿಡಿದು ಸರಿಪಡಿಸಬೇಕು. ಹತ್ತುಜನ ಸಮರ್ಥರು ಅಂಥಲ್ಲಿ ಸೇರಿದಾಗ ಆಗುವ ಕೆಲಸ ಬಹುಬೇಗನೆ ಸಮರ್ಪಕವಾಗಿ ಸಾರ್ಥಕವಾಗಲು ಸಾಧ್ಯವಾಗುತ್ತದೆ. ಇದು ಮಹತ್ವದ್ದೆನಿಸಲು ಕಾರಣವೇನೆಂದರೆ ದಲಿತರ ಸಂಘಟನೆಗೆ ಅವಕಾಶ ಕೊಡದೆ ಕೊಡಲಿಪೆಟ್ಟು ಕೊಡುವವರಿಗೇನೂ ಕೊರತೆ ಇಲ್ಲ. ಇದನ್ನು ದಲಿತ ಸಾಹಿತಿಗಳು ಇನ್ನೂ ಅರ್ಥಮಾಡಿಕೊಳ್ಳಬೇಕಾಗಿದೆ.

ನಾವೆಲ್ಲ ಇಂದು ಪ್ರಚಾರಯುಗದಲ್ಲಿ ಬದುಕುತ್ತಿದ್ದೇವೆ. ದಲಿತರಲ್ಲಿ ವಿಚಾರವಿದ್ದರೂ ಅವರ ಸಮರ್ಪಕ ಪ್ರಚಾರವಿಲ್ಲವಾಗಿದೆ. ಅದು ಯಾರನ್ನು, ಹೇಗೆ ಏಕೆ ಮುಟ್ಟಿ ಹೆಚ್ಚು ಪರಿಣಾಮ ಬೀರಬೇಕಾಗಿದೆಯೋ ಅದರಿಂದ ಹೆಚ್ಚು ಪ್ರಯೋಜನ ಆಗಬೇಕಾಗಿದೆಯೋ ಆ ಮಟ್ಟದಲ್ಲಿ ಅದು ಆಗುತ್ತಿಲ್ಲ ಎನ್ನುವುದು ನನ್ನ ಭಾವನೆ. ಕಾರಣ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ ಎಲ್ಲ ಸಮೂಹ ಮಾಧ್ಯಮದ ಆಯಕಟ್ಟಿನ ಸ್ಥಳಗಳಲ್ಲಿ ಇಂದಿಗೂ ಅಧಿಕ ಪ್ರಮಾಣದಲ್ಲಿ ಮೇಲುವರ್ಗದ ಪ್ರತಿಷ್ಠಿತರೇ ಸೂತ್ರಗಳನ್ನು ಹಿಡಿದುಕುಳಿತಿರುವುದು. ಇದರಿಂದ ದಲಿತರ ಪ್ರತಿಭೆಗಳು ಪ್ರಕಾಶಕ್ಕೆ ಬರಲು ಸಿಗಬೇಕಾದ ಅವಕಾಶ ಸರಿಯಾದ ಪ್ರಮಾಣದಲ್ಲಿ ಇನ್ನೂ ಸಿಗುತ್ತಿಲ್ಲ. ಇಂಥ ಪ್ರತಿಕೂಲ ಪರಿಸ್ಥಿತಿಯ ಎದುರು ದಿಕ್ಕಿನಲ್ಲಿ ಈಸಿ ಮೇಲೆ ಬರುವುದರಲ್ಲೇ ದಲಿತನ ಆಯುಷ್ಯವೆಲ್ಲಾ ಸವೆದು ಹೋಗುತ್ತದೆ. ಬಾನುಲಿಯಲ್ಲಿ ಎಷ್ಟು ಜನ ದಲಿತರಿಗೆ ಪ್ರಾತಿನಿಧ್ಯವಿದೆ? ಪತ್ರಿಕೆಗಳಲ್ಲಿ ಎಷ್ಟು ಜನ ದಲಿತರಿಗೆ ಪ್ರಾತಿನಿಧ್ಯವಿದೆ? ಕೆಲವು ಪತ್ರಿಕೆಗಳ ಒಡೆತನವೆಲ್ಲ ಹಿಂದುಳಿದ ವರ್ಗದವರಿಗೆ ಸೇರಿದ್ದು, ಪತ್ರಿಕೆಗಳ ನಿರ್ವಹಣೆಯಲ್ಲಿ ಸಿಂಹಪಾಲನ್ನು ಇಂದಿಗೂ ಪ್ರತಿಷ್ಠಿತರೇ ಗಿಟ್ಟಸಿಕೊಂಡಿರುವುದು ಎಂಥ ವಿಡಂಬನೆ. ಇಲ್ಲಿಯವರೆಗೂ ದಲಿತರು ಪ್ರತಿಷ್ಠಿತರ ಬುಡಕ್ಕೆ ಗೊಬ್ಬರವಾದದ್ದು ಸಾಕು. ಇನ್ನು ಮುಂದಾದರೂ ಈ ಪ್ರತಿಷ್ಠಿತರ ಅಕ್ಟೋಪಸ್ ಹಿಡಿತದಿಂದ ದಲಿತರು ಬಿಡಿಸಿಕೊಳ್ಳಬೇಕಾಗಿದೆ. ಇಂಥ ಪರಿಸರದಿಂದ ಬೇಸತ್ತ ನಮ್ಮ ಸಮಕಾಲೀನ ಯುವ ಲೇಖಕರು ಬಂಡಾಯ ಪ್ರವೃತ್ತಿಯ ದಲಿತ ಸಾಹಿತ್ಯ ನಿರ್ಮಾಣಕ್ಕೆ ತೊಡಗಿರುವುದು ಇಂದು ಅನಿವಾರ್ಯವಾಗಿದೆ. ಒಂದು ಅರ್ಥದಲ್ಲಿ ಸಾಹಿತ್ಯ ಚರಿತ್ರೆಯನ್ನೂ ಭಾರತದ ಇತಿಹಾಸವನ್ನು ತಿರುವಿ ಹಾಕಿದರೆ ವ್ಯಾಸ, ವಾಲ್ಮೀಕಿ, ಕಾಳಿದಾಸ, ಕನಕದಾಸ, ಸರ್ವಜ್ಞ, ವಿವೇಕಾನಂದ ಇವರೆಲ್ಲಾ ದಲಿತ ವರ್ಗಕ್ಕೆ ಸೇರಿದ ಸಾಹಿತಿಗಳೆ. ಆದರೆ ಇಂದು ಕಾಣುತ್ತಿರುವ ಧೋರಣೆ ಅವರಲ್ಲಿ ಕಂಡಿತ್ತೆ? ಕಂಡಿದ್ದರೆ ಯಾವ ಪ್ರಮಾಣದಲ್ಲಿ ಎನ್ನುವುದು ಪ್ರಶ್ನಿಸಬೇಕಾದ ಅಂಶ. ಆದರೆ ಇಂದು ಡಾ|| ಅಂಬೇಡ್ಕರ್, ಪೆರಿಯಾರ್, ಮುಲ್ಕರಾಜ್ ಆನಂದ್, ಡಾ|| ಬಾಬು ರಾಜೇಂದ್ರ ಪ್ರಸಾದ್, ಲಾಲ್ ಬಹದ್ದೂರ್ ಶಾಸ್ತ್ರಿ, ಡಾ| ಲೋಹಿಯಾ, ಸುಭಾಷ್ ಚಂದ್ರ ಬೋಸ್, ಜಗಜೀವನರಾಮ್ ಇವರೆಲ್ಲ ದಲಿತ ಲೇಖಕರಾಗಿ ಮುಖ್ಯರಾಗಿದ್ದಾರೆ.

ದಲಿತ ಸಾಹಿತ್ಯದಲ್ಲಿ ಇಂದಿನ ಯುವಜನ ಹೆಚ್ಚು ಒಲವನ್ನು ತೋರುತ್ತಿದೆ. ಒಂದು ಕೃತಿ ನಿಜವಾಗಿಯೂ ಮಹತ್ವದ ಕೃತಿಯಾಗಿದ್ರೆ ಸತ್ವಶಾಲಿಯಾದ ಕಲಾಕೃತಿಯಾಗಿದ್ದರೆ ಎಲ್ಲ ಕಾಲಕ್ಕೂ ಬೆಲೆಕಟ್ಟಿಸಿಕೊಳ್ಳುತ್ತಾ ಹೋಗುತ್ತದೆ. ಹೀಗೆ ಕಾಲದ ಪರೀಕ್ಷೆಯಲ್ಲಿ ಗೆದ್ದು ನಿಲ್ಲಬಲ್ಲ ಸಾಹಿತ್ಯ ಕೃತಿಗಳು ದಲಿತ ಸಾಹಿತಿಗಳಿಂದ ಇನ್ನೂ ರಚನೆಯಾಗಬೇಕಾಗಿದೆ. ದಲಿತ ಸಾಹಿತ್ಯ ತನ್ನ ಪ್ರಾರಂಭದ ಸ್ಥಿತಿಯನ್ನು ದಾಟಿ ತನ್ನ ಮುಖ ಮೈಗಳನ್ನು ಪಡೆದುಕೊಳ್ಳುತ್ತಿದೆ. ತನ್ನ ಧ್ವನಿಯನ್ನು ಕಂಡುಕೊಂಡು, ತನ್ನ ಸ್ವರೂಪವನ್ನು ಪಡೆದು ಕೊಳ್ಳುತ್ತಿದೆ. ಜಾತಿ-ಮತ-ಕೋಮು ಕುರಿತು ಬರೆಯಲಾದ ಪುಟಗಳನ್ನು ಇತಿಹಾಸದ ಸಂಪುಟಗಳಿಂದ ಇನ್ನಾದರೂ ಕಿತ್ತು ಗಾಳಿಪಟ ಹಾರಿಸಬೇಕಾಗುವ ಕಾಲ ಸನ್ನಿಹಿತವಾಗಿದೆ. ಪ್ರತಿಷ್ಠಿತರ ಜತಿ ಹುತ್ತವನ್ನು ನಮ್ಮ ಲೇಖಕರು ಇನ್ನಾದರೂ ಕಿತ್ತು ಹಾಕಬೇಕು, ಜನಪರವಾದ ಧೋರಣೆಯನ್ನು ಬೆಳೆಸಬೇಕು. ಸಮಾಜದಲ್ಲಿ ಕೊಳೆತು ನಾರುತ್ತಿರುವ ಸಂಪ್ರದಾಯ, ಮೂಢನಂಬಿಕೆಗಳನ್ನು ಕಳಚಿ ಕೊಡವಿ ಹಾಕುವ ಧೈರ್ಯ ಬರಬೇಕು. ಹಿಂದಿನ ಅನ್ಯಾಯಗಳನ್ನು ಅರ್ಥಹೀನ ಪದ್ಧತಿಗಳನ್ನು ಪುರಸ್ಕರಿಸಿ ಎತ್ತಿಹಿಡಿಯುವ ಪಟ್ಟಭದ್ರರ ವಿರುದ್ಧ ಸಿಡಿದೇಳಬೇಕು. ಹಾಗೆ ಮಾಡಿದಾಗ ಮಾತ್ರ ನಮ್ಮ ಲೇಖನಿ ನಿಜವಾದ ಅರ್ಥದಲ್ಲಿ ಖಡ್ಗವಾದೀತು.

ದಲಿತ ಸಾಹಿತ್ಯ ಇಂದು ತನ್ನ ನೋವು, ಸಮಸ್ಯೆ, ಪ್ರತಿಭಟನೆ ಮುಂದಿನ ಮಾರ್ಗವನ್ನು ಕುರಿತು ಮಾತ್ರ ಚಿಂತಿಸುತ್ತದೆ. ದಲಿತ ಸಾಹಿತ್ಯ ಎಂದ ಮಾತ್ರಕ್ಕೆ ನೋವಿನ ಹಾಳೆಗಳು ಉರುಳಬೇಕೆಂದಲ್ಲ. ಅವರು ತೊತ್ತಳ ತುಳಿತಕ್ಕೆ ಒಳಗಾಗಿದ್ದರೂ ದಲಿತ ತನ್ನದೇ ಆದ ಆನಂದ, ಸುಖ, ಸಂತೋಷಗಳನ್ನು ಕಂಡಿದ್ದಾನೆ. ಅದು ಅವನ ಮದುವೆ, ಮಗು ಹುಟ್ಟುವುದು, ಹಬ್ಬ ಅವರದೇ ಆದ ಆನಂದದ ಆಚರಣೆಯಲ್ಲಿ ಮಿಂಚುತ್ತದೆ. ಈ ಭಾವನೆಗಳೂ ದಲಿತ ಸಾಹಿತ್ಯದ ವಸ್ತುವಾಗಲಿ ಎಂದು ಹಾರೈಸಿ ಈ ಗೋಷ್ಠಿ ಯಶಸ್ವಿಯಾಗಿ ನಡೆಯಲೆಂದು ಸಂತೋಷದಿಂದ ಉದ್ಘಾಟಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.