ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನಕಪುರದ ಕರ್ನಾಟಕ ಸಂಘದವರು ಸಂಯುಕ್ತ ಆಶ್ರಯದಲ್ಲಿ (೨೮-೪-೮೫) ಏರ್ಪಾಟಾಗಿರುವ ‘ಕಾಲು ಶತಮಾನದ ಕನ್ನಡ ಕಾವ್ಯ’ (೧೯೬೦-೧೯೮೫) ಎಂಬ ವಿಚಾರ ಸಂಕಿರಣದ ಎರಡನೆಯ ಗೋಷ್ಠಿ ಅಧ್ಯಕ್ಷಳಾಗಿ ಮಾತನಾಡುವುದು ನನಗೆ ಪ್ರಿಯವಾದ ಕೆಲಸ. ಯೋಗಾಯೋಗವೆಂದರೆ ಸರಿಯಾಗಿ ಕಳೆದ ಕಾಲು ಶತಮಾನದಿಂದ ನಾನು ಬರವಣಿಗೆ ಮಾಡಿಕೊಂಡು ಬಂದಿದ್ದೇನೆ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿ ೧೯೫೯ರಲ್ಲೇ ಕೆಲಸಕ್ಕೆ ಸೇರಿದರೂ ಗಂಭೀರವಾಗಿ ಲೇಖನಿ ಹಿಡಿದದ್ದು ೧೯೬೦ ರಿಂದ. ಎರಡನೆಯದಾಗಿ ಮತ್ತು ಬಹುಮುಖ್ಯವಾಗಿ ಹುಟ್ಟಿನಿಂದಲೂ ಮನೋವೃತ್ತಿಯಿಂದಲೂ ನಾನು ದಲಿತಳು, ಬಂಡಾಯಗಾರಳು. ಇದನ್ನು ಸಾರ್ವಜನಿಕ ವೇದಿಕೆಯಿಂದ ಹೇಳಿಕೊಳ್ಳಲು ನಾನು ಈ ೨೫ ವರ್ಷಗಳಲ್ಲಿ ಎಂದೂ ಮುಜುಗರ ಅನುಭವಿಸಿಲ್ಲ. ಹಾಗೆ ನೋಡುವುದಾದರೆ ದಲಿತ ಮತ್ತು ಬಂಡಾಯ ಧೋರಣೆಯ ಲೇಖಕಿಯೆಂದು ಹೇಳಿಕೊಳ್ಳಲು ನಾನು ಹೆಮ್ಮೆಪಟ್ಟುಕೊಂಡಿದ್ದೇನೆ.

ಮಂಡ್ಯದಲ್ಲಿ ೧೯೭೩ ರಲ್ಲಿ ನಡೆದ ಅಖಿಲ ಭಾರತ ೪೮ ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಸಂಗಿಕವಾಗಿಯೂ ಚಿಕ್ಕಮಗಳುರಲ್ಲಿ ೧೯೮೧ರಲ್ಲಿ ನಡೆದ ಅಖಿಲ ಭಾರತ ೫೩ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಶಿರಸಿಯಲ್ಲಿ ೧೯೮೨ ರಲ್ಲಿ ನಡೆದ ಅಖಿಲ ಭಾರತ ೫೫ನೆಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ, ಲಿಖಿತ ಉಪನ್ಯಾಸಗಳಲ್ಲೂ ನಾನು ತಳೆದ ಈ ಸಾಹಿತ್ಯ ಧೋರಣೆಗಳನ್ನು ಸ್ಪಷ್ಟಪಡಿಸಿದ್ದೇನೆ. ಆ ಭಾಷಣಗಳು ಅಚ್ಚಾಗಿರುವುದರಿಂದ ಸಾಹಿತ್ಯ ವಿಮರ್ಶಕರ ವಿವೇಚನೆಗೆ ಅವಕಾಶವಾಗಿದೆ. ಈ ಪೂರ್ವಸಿದ್ಧತೆ ಮತ್ತು ಹಿನ್ನಲೆಯನ್ನು ಗಮನಿಸಿರುವ ನನ್ನ ಸಾಹಿತ್ಯ ಮಿತ್ರರು ಇಂದಿನ ಗೋಷ್ಠಿಗೆ ಬರಮಾಡಿ ಕೊಂಡಿದ್ದಾರೆಂಬುದು ನನ್ನ ತಿಳಿವಳಿಕೆ. ಇದಕ್ಕಾಗಿ ನಾನು ಸಂಬಂಧಪಟ್ಟವರಿಗೆ ಕೃತಜ್ಞಳಾಗಿದ್ದೇನೆ.

ಈ ಗೋಷ್ಠಿಯನ್ನು ‘ನವ್ಯೋತ್ತರ ಕಾವ್ಯ ಮಾರ್ಗ’ ಎಂದು ಕರೆದಿದ್ದಾರೆ. ಅಕಾಡೆಮಿಯವರು ಇಲ್ಲಿನ ಕರ್ನಾಟಕ ಸಂಘದವರು ಏಕೆ ಇಂಥ ಮಡಿವಂತಿಕೆ ತೋರಿದ್ದಾರೆಂದು ನನಗೆ ಅರ್ಥವಾಗದು, ದಲಿತ ಹಾಗೂ ಬಂಡಾಯ ಕಾವ್ಯಮಾರ್ಗ ಎಂದು ನೇರವಾಗಿ ಕರೆಯಬಹುದಿತ್ತು. ಜೀವನದಂತೆ ಸಾಹಿತ್ಯದಲ್ಲೂ ಬದಲಾವಣೆ ಅನಿವಾರ್ಯ ಹಾಗೂ ಅದು ಜೀವಂತಿಕೆಯ ಮುಖ್ಯ ಲಕ್ಷಣ. ಒಂದೊಂದು ಕಾವ್ಯಪಂಥದ ಸಾಧ್ಯತೆಗಳು ಮುಗಿದಂತೆ ತೋರುತ್ತಿದ್ದ ಹಾಗೆ ಅದರ ಬೆನ್ನಹಿಂದೆಯೇ ಇನ್ನೊಂದು ಪಂಥ ಸಿದ್ಧವಾಗಿರುತ್ತದೆ. ಮುಂದಿನ ಬದಲಾವಣೆಯ ಬೀಜಗಳು ಹಿಂದಿನ ಪಂಥಗಳು ಒಡಲಲ್ಲೇ ಅಡಗಿರುತ್ತದೆ. ಕನ್ನಡ ಕಾವ್ಯ ನಡೆದುಬಂದ ದಾರಿ ನಮಗೆ ಗೊತ್ತಿದೆ. ಅದರ ಬೆಳವಣಿಗೆ ಮತ್ತು ಬದಲಾವಣೆಗಳನ್ನು ಬಲ್ಲೆವು. ಅದರ ಪ್ರೇರಣೆ ಮತ್ತು ಪರಿಕಲ್ಪನೆಗಳನ್ನೂ ಅರಿತಿದ್ದೇವೆ. ಪ್ರಾರಂಭದಿಂದ ೨೦ನೆಯ ಶತಮಾನದವರೆಗಿನ ಬಹುಪಾಲು ಕನ್ನಡ ಕಾವ್ಯಕ್ಕೆ ಧಾರ್ಮಿಕ ಪ್ರೇರಣೆಗಳಿದ್ದುವು. ಈ ಶತಮಾನದ ಕಾವ್ಯದಲ್ಲೂ ರಾಮಕೃಷ್ಣ, ವಿವೇಕಾನಂದ, ಅರವಿಂದ, ಮಹಾತ್ಮಗಾಂಧಿ ನೀಡಿದ ಸ್ಫೂರ್ತಿಯಿಂದ ಬಂದ ಕಾವ್ಯದಲ್ಲಿಯೂ ಹಿಂದಿನ ಧೋರಣೆಯ ಸೂಕ್ಷ್ಮ ಮುಂದುವರಿಕೆಯಿರುವುದನ್ನು ಗುರುತಿಸಬಹುದು.

ನಮ್ಮ ಪ್ರಾಚೀನ ಕವಿಗಳು ಜೈನ, ವೀರಶೈವ, ಬ್ರಾಹ್ಮಣ ಎಂದು ತಮ್ಮ ತಮ್ಮ ಮತಧರ್ಮಗಳ ಮೇಲ್ಮೆಯನ್ನು ಮನಗಾಣಿಸಲು ಕಾವ್ಯ ರಚಿಸಿದರೆ ಕೆಲವು ನವೋದಯ ಕವಿಗಳು ಅದನ್ನು ಸ್ವಲ್ಪ ಮಾರ್ಪಾಟು ಮಾಡಿ, ಹೊಸ ಕಾಲದ ಚಿಂತನೆಗೆ ಹೊಂದಿಕೊಂಡು, ಒಟ್ಟು ಸಾಮೂಹಿಕ ರೂಪದ ಹಿಂದೂ ಧರ್ಮದ ಹಿರಿಮೆ ಕುರಿತು ಹಾಡಿದರು. ಇಂಥ ಪ್ರೇರಣೆಗಳಿಂದ, ವಾತಾವರಣದಿಂದ ಬಿಡಿಸಿಕೊಂಡು ದೂರ ನಿಂತು, ಕಾವ್ಯ ಬರೆದವರೂ ಇದ್ದಾರೆ ಈ ಎರಡೂ ಮನೋಧರ್ಮದ ಕವಿಗಳನ್ನು ಒಮ್ಮೊಮ್ಮೆ ಒಬ್ಬನೇ ಕವಿಯಲ್ಲಿ ಈ ಎರಡೂ ಬಗೆಯ ಅಭಿವ್ಯಕ್ತಿಯನ್ನು ನವೋದಯ ಕಾವ್ಯ ಮಾರ್ಗದಲ್ಲಿ ಕಾಣುತ್ತೇವೆ. ನವೋದಯ ಕಾವ್ಯ ಪ್ರಧಾನವಾಗಿ ಪಾಶ್ಚಾತ್ಯ ಕಾವ್ಯರೂಪದಿಂದ ಸ್ಫೂರ್ತಿ ಪಡೆದಿದ್ದು, ಪಾಶ್ಚಿಮಾತ್ಯ ಪ್ರೇರಣೆಯೊಂದಿಗೆ. ಒಮ್ಮೊಮ್ಮೆ ಅದೇ ಧೋರಣೆಯೂ ಮಾದರಿಯಾಯಿತು. ಕಾವ್ಯದ ನಡಿಗೆ ಬೆಡಗು ಪಾಶ್ಚಾತ್ಯ ಪ್ರೇರಣೆಯಿಂದ ಬಂದ ಸಂದರ್ಭದಲ್ಲೂ ಭಾರತೀಯ ವಸ್ತುವನ್ನು ಬಹುಬೇಗ ಅಳವಡಿಸಿಕೊಂಡು ನವೋದಯ ಕಾವ್ಯ ಈ ನೆಲದ ರುಚಿ ಬಣ್ಣ ಆಕಾರ ಪಡೆಯಿತು. ನಮ್ಮ ನೀರು ನೆಲ ಬಾನು ನಿಸರ್ಗ ಕುರಿತು ನವೋದಯ ಕವಿಗಳು ಬರೆದದ್ದು ದಿಟ. ನವೋದಯ ಕವಿಗಳು ಪಾಶ್ಚಾತ್ಯ ಪ್ರೇರಣೆಯ ಪರಿಣಾಮವಾಗಿ ಭಾಷೆ ಛಂದಸ್ಸು ವಸ್ತು ಅಭಿವ್ಯಕ್ತಿ ಕ್ರಮ ಹೀಗೆ ಒಟ್ಟು ಕಾವ್ಯಪಥವನ್ನೂ ಅಭಿವ್ಯಕ್ತಿಯ ದಿಕ್ಕನ್ನೂ ಸಾಕಷ್ಟು ಬದಲಾಯಿಸಿದರು. ಇದರಿಂದ ಕನ್ನಡ ಕಾವ್ಯಕ್ಕೆ ವೈಭವದ ಜತೆಗೆ ವೈವಿಧ್ಯವೂ ಬಂತು.

ನವೋದಯ ಕಾವ್ಯಕ್ಕೆ ಮಿತಿಗಳೂ ಇದ್ದವು. ನವೋದಯ ಸಾಹಿತ್ಯ ಸ್ಥಗಿತಗೊಂಡಂತೆ ಕೆಲವು ಪ್ರತಿಭಾಶಾಲಿಗಳಿಗೆ ತೋರಿತು. ಏಕತಾನತೆಯಿಂದ ಸೊರಗಿದ ಕನ್ನಡ ಕಾವ್ಯಕ್ಕೆ ಕಾಯಕಲ್ಪ ಮಾಡುವ ಪ್ರಯತ್ನ ನಡೆಯಿತು. ಹೊಸಹಾದಿ ಹದವಾಯಿತು. ಅದರ ಪರಿಣಾಮವಾಗಿ ಪ್ರಗತಿಶೀಲ, ನವ್ಯ ಚಳುವಳಿಗಳು ಕಾಣಿಸಿಕೊಂಡವು. ಪ್ರಗತಿಶೀಲ ಕೇವಲ ಒಂದು ಸಂಧಿಕಾಲದ ಪ್ರಯತ್ನ. ನವೋದಯ ಕಾವ್ಯ ನವ್ಯಕಾವ್ಯ ಮಾರ್ಗಕ್ಕೆ ಹೊರಳುವ ದಾರಿಯಲ್ಲಿ ಪ್ರಗತಿಶೀಲ ತಂಗುದಾಣವಾಗಿ ಕಾಣಿಸಿಕೊಂಡಿತೆನ್ನಬಹುದು. ಅಲ್ಲದೆ ಪ್ರಗತಿಶೀಲ ಲೇಖಕರು ಕಥೆ ಕಾದಂಬರಿಗಳಿಗೆ ಸೀಮಿತರಾದ್ದರಿಂದ ಕಾವ್ಯ ಹೆಚ್ಚು ಬರಲಿಲ್ಲ. ನವ್ಯ ಕಾವ್ಯ ಸಾಕಷ್ಟು ಶಕ್ತಿಶಾಲಿಯಾಗಿ ನಿಲ್ಲುವ ಲಕ್ಷಣಗಳನ್ನು ಪ್ರಕಟಿಸಿತು. ಈ ಸಂದರ್ಭದಲ್ಲಿ ನವ್ಯ ಕಾವ್ಯ ಕನ್ನಡ ಕಾವ್ಯಕ್ಕೆ ಹೊಸ ದಿಕ್ಕು ತೋರಿಸಿತು. ನವೋದಯದ ಆಕಾಶಮನ ಕಾವ್ಯವನ್ನು ನೆಲಕ್ಕೆ ಹಾಗೂ ವ್ಯಕ್ತಿಯ ನೆಲೆಗೆ ಜಗ್ಗಿ ಎಳೆದವರು ನವ್ಯಕವಿಗಳು. ನವ್ಯಕಾವ್ಯದ ಪ್ರೇರಣೆಯೂ ಪಾಶ್ಚಾತ್ಯ ಸಾಹಿತ್ಯದಿಂದ ಬಂದದ್ದೇ. ಆದರೆ ಸ್ವಲ್ಪಮಟ್ಟಿಗೆ ಅಂತರ್ಮುಖಿಯಾದ ಹಾಗೂ ಬಹುಮಟ್ಟಿಗೆ ವ್ಯಕ್ತಿನಿಷ್ಠವಾದ ನವ್ಯಕಾವ್ಯ ವಿಮರ್ಶನ ಪ್ರಜ್ಞೆಗೆ ಹಿಡಿದ ತುಕ್ಕನ್ನು ತೊಳೆದುಹಾಕಿತು. ಇಷ್ಟಾದರು ನವ್ಯಕಾವ್ಯ ಬಂದ ಹಾದಿಗೆ ಸುಂಕವಿಲ್ಲವೆಂಬಂತೆ ಹಿಂತಿರುಗಿತು. ಅದು ನವೋದಯದಂತೆ ಪ್ರಭಾವಶಾಲಿಯಾಗಲಿಲ್ಲ. ನವ್ಯದ ಧೋರಣೆಗೆ ರೋಗಿಷ್ಠ ಗುಂಪುಗಾರಿಕೆ ವಸ್ತು ಜನ್ಮದೂರದೃಷ್ಟಿಯ ಶಾಪತಟ್ಟಿದ್ದರಿಂದ ಅದು ಕಾವ್ಯ ಪ್ರೇಮಿಗಳೊಂದಿಗೆ ಹೃದಯಸಂವಾದ ಬೆಳೆಸಲಿಲ್ಲ. ಕನ್ನಡ ಕಾವ್ಯ ಮತ್ತೆ ತನ್ನ ಚಿಪ್ಪಿನೊಳಗೆ ಸೇರಿಹೋಯಿತು.

ಈ ಪರಿಸ್ಥಿತಿಯಲ್ಲಿ ಕಾವ್ಯ ಭಿನ್ನದಾರಿ ಹಿಡಿಯಬೇಕಾಯಿತು. ಕನ್ನಡ ಕಾವ್ಯಕ್ಕೆ ಮುಸುಕಿದ ಇಂಥ ಮಬ್ಬಿನಿಂದ ಅದನ್ನು ಕೈಹಿಡಿದು ನಡೆಸುವ ಕರುಣಾಳು ಬೆಳಕಾಗಿ ಬಂದದ್ದು ದಲಿತ ಮತ್ತು ಬಂಡಾಯ ಕಾವ್ಯ. ಇದು ನವ್ಯದಂತೆ ಸ್ಪರ್ಧೆಯಿಂದ ಬಂದ ಗಾಂಧಾರಿ ಕಾವ್ಯವಲ್ಲ. ಹೊಟ್ಟೆಯಲ್ಲಿ ಕಿಚ್ಚು ಹಚ್ಚಿಕೊಂಡು ಹಾಡುವ ಹಕ್ಕಿಯ ಕೊರಳು ಹಿಚುಕಿ ಹುಟ್ಟಿದ್ದಲ್ಲ. ಸಮಕಾಲೀನ ಬದುಕಿಗೆ ನೈಜವಾಗಿ ಪ್ರತಿಸ್ಪಂದಿಸಿ ಕ್ರೂರವಾಸ್ತವ ಬದುಕಿನಲ್ಲಿ ಬದಲಾವಣೆಗೆ, ವಿಮೋಚನೆಗೆ ಬದ್ಧರಾಗಿ ಹೋರಾಡುವ ಛಲ ಹೊತ್ತು ಹೊಸಕವಿಗಳು ಹೊರ ಬಂದಿದ್ದಾರೆ. ಇವರು ರಾಜಕೀಯ ಧೋರಣೆಯನ್ನು ಮತ್ತು ಸಾಮಾಜಿಕ ಬದ್ಧತೆಯನ್ನು ಒಪ್ಪಿಕೊಂಡೇ ಹೊರಡಿದ್ದಾರೆ. ಹೊಸಮಾರ್ಗದ ಈ ಕಾವ್ಯವನ್ನು ದಲಿತ ಇಲ್ಲವೇ ಬಂಡಾಯ ಎಂದು ಬೇರೆ ಹೆಸರುಗಳಿಂದ ಕರೆಯದೆ ದಲಿತಕಾವ್ಯ ಎಂಬ ಒಂದು ಹೆಸರಿನಿಂದ ನಿರ್ದೇಶಿಸುವುದುರಲ್ಲಿ ಹೆಚ್ಚು ಔಚಿತ್ಯವಿಲ್ಲ.

ದಲಿತಕಾವ್ಯ ದಲಿತ ವರ್ಗದ ದುಃಖ ದುಮ್ಮಾನ ನಲಿವು ಆಲೋಚನೆಗಳ ಅಭಿವ್ಯಕ್ತಿಯಾದರೆ ಬಂಡಾಯಕಾವ್ಯದ ವ್ಯಾಪ್ತಿ ಅಸೀಮವಾದದ್ದು. ಜೀವನದಲ್ಲಿ ಸಮಾಜದ ಶ್ರೇಣಿಗಳಲ್ಲಿ ಕ್ರಾಂತಿಯಾಗಬೇಕೆಂಬುದು ಬಂಡಾಯದ ಕರೆ. ಎಲ್ಲ ವರ್ಗದಲ್ಲೂ ಬಂಡಾಯಕ್ಕೆ ಕಾರಣಗಳೂ ದಾರಿಗಳೂ ಇರುತ್ತವೆ. ಹರಿಜನ ಗಿರಿಜನರ ದಲಿತಕಾವ್ಯದಲ್ಲಿ ಕೇಳುವ ಶೋಷಿತರ ತಪ್ತನುಡಿಗಳು ಇಲ್ಲಿಯೂ ಕೇಳಬಹುದು. ದಲಿತಕಾವ್ಯ ಕೇವಲ ದಲಿತರ ಮುಖವಾಣಿ. ಅಂತೂ ದಲಿತ ಕಾವ್ಯ ಇಂದು, ಅತ್ಯಂತ ಕಡಿಮೆ ಅವಧಿಯಲ್ಲಿಯೇ, ಜಾಗತಿಕ ಗಮನ ಸೆಳೆದಿದೆ.

ನವ್ಯೋತ್ತರ ಕಾವ್ಯ ಚಳುವಳಿಗಳಲ್ಲಿ ಪ್ರಧಾನವಾದ ದಲಿತಕಾವ್ಯ ಮತ್ತು ಬಂಡಾಯ ಕಾವ್ಯದ ಪ್ರೇರಣೆಗಳು ಅನುಷಂಗಿಕವಾಗಿ ಯುರೋಪು ಮತ್ತು ಆಫ್ರಿಕಾದ ವಸಾಹತುಶಹಿಗಳಲ್ಲಿನ ಸಾಹಿತ್ಯದಲ್ಲಿ ಅಡಗಿದ್ದರು ಮುಖ್ಯವಾದ ಪ್ರೇರಣೆಗಳು ಈ ಮಣ್ಣಿನ ಅನಿವಾರ್ಯ ಪರಿಸ್ಥಿತಿಯೇ ಎಂಬುದನ್ನು ಗಮನಿಸಬೇಕು. ಇದು ಏಕೆ ಅಷ್ಟು ಮಹತ್ವದ್ದೆಂಬುದಕ್ಕೆ ಬಲವಾದ ಕಾರಣಗಳಿವೆ. ನವೋದಯ ಮತ್ತು ನವ್ಯಕಾವ್ಯದ ಹಾಗೆಯೇ ಪ್ರಗತಿಶೀಲ ಚಳುವಳಿಯ ಪ್ರೇರಣೆಗಳು ಪಾಶ್ಚಾತ್ಯ ಸಾಹಿತ್ಯದಿಂದ ಬಂದದ್ದು, ಹೊರಗಿನಿಂದ ಆಮದು ಮಾಡಿಕೊಂಡಿದ್ದು. ನವ್ಯೋತ್ತರ ಹೊಸಕಾವ್ಯದ ಪ್ರೇರಣೆ ಪರಿಕಲ್ಪನೆಗಳು ಇಲ್ಲಿ ನೆಲದಲ್ಲಿ ಸಹಜವಾಗಿ ಕಾಣಿಸಿಕೊಂಡಿದೆಯೆಂಬುದು ಮೌಲಿಕವಾಗಿದೆ. ಇದು ಖುಷಿಗಾಗಿ ರಚಿಸಿದ ಕಾವ್ಯವಲ್ಲ. ಸಾಮಾಜಿಕ ಪ್ರಗತಿಯಲ್ಲಿ ನಂಬುಗೆಯುಳ್ಳ ನಿಷ್ಠಾವಂತರ ಬದ್ಧತೆಯ ಕಾವ್ಯ. ಇದು ಜನಪರವಾದ ಧೋರಣೆಯ ಕಾವ್ಯ. ಜನಪದರು ತೊಟ್ಟ ಸಂಕೋಲೆಗಳನ್ನು ಕಿತ್ತೊಗೆಯಲು ಕರೆನೀಡುವ ಮಾನವತೀಯ ಕಾವ್ಯ. ಇಲ್ಲ ಪಂಥ – ಪ್ರಣಾಳಿಕೆಯ ಕಾವ್ಯದಲ್ಲೂ ಮಾನವೀಯವೆನಿಸುವ ಮಾತುಗಳನ್ನು ಹುಡುಕಬಹುದು. ಆದರೆ ಅಮಥ ಸಂಚಾರಿಭಾವದ ಭೋಳೆತನಗಳಲ್ಲದೆ ಮಾನವೀಯತೆಯೇ ಮುಖ್ಯವಾಗಿ, ಸ್ಥಾಯಿಯಾಗಿ, ಸಮಸ್ತವಾಗಿ ಆವರಿಸಿ ಕೊಂಡಿರುವುದನ್ನು ನವ್ಯೋತ್ತರ ಹೊಸಕಾವ್ಯದಲ್ಲಿ ದಟ್ಟವಾಗಿ ಸ್ಪಷ್ಟವಾಗಿ ಕೇಳಬಹುದಾಗಿದೆ. ಮನುಷ್ಯನೇ ಇಲ್ಲಿ ಕೇಂದ್ರಬಿಂದು. ಹೀಗೆ ಸಾಮೂಹಿಕ ಹಿತದ ಸಾಮಾಜಿಕ ಹೊಣೆಗಾರಿಕೆ ಹೊತ್ತಿರುವ ಇಂಥ ಹೊಸ ಕಾವ್ಯ ಭರತಖಂಡದ ಇಂದಿನ ಸಂದರ್ಭದಲ್ಲಿ ಸಕಾಲಿಕವಾಗಿರುವಂತೆ ಅನಿವಾರ್ಯವೂ ಆಗಿದೆಯೆಂಬ ಗಟ್ಟಿ ಗ್ರಹಿಕೆಯಿಂದ ಈ ಮಾತು ಹೇಳುತ್ತಿದ್ದೇನೆ. ಇಂಥ ಅಸಲೀ ಕಾವ್ಯವೇ ಹೆಚ್ಚು ಜೀವಂತವಾದದ್ದು ಮತ್ತು ಅಷ್ಟೇ ಅರ್ಥಪೂರ್ಣವಾದದ್ದು.

ಇನ್ನೂ ಒಂದೆರಡು ಅಂಶಗಳನ್ನು ನಾನಿಲ್ಲಿ ಸ್ಪಷ್ಟಪಡಿಸಬೇಕಾಗಿದೆ. ದಲಿತ ಮತ್ತು ಬಂಡಾಯ ಕಾವ್ಯದ ಪ್ರಧನ ಪ್ರೇರಗಣೆಗಳು ಹೊರಗಿನಿಂದ ಬಂದ ಎರವರಲು ಸರಕಲ್ಲವೆಂದು ಹೇಳಿದಾಗ ಕರ್ನಾಟಕದ ನೆರೆಹೊರೆಯ ನಾಡುಗಳಲ್ಲಾದ ಚಳುವಳಿಗಳ ನಿಚ್ಚಳವಾದ ಪ್ರಭಾವವನ್ನು ಉಲ್ಲೇಖಿಸಬೇಕಾಗಿದೆ. ಮಹರಾಷ್ಟ್ರದಲ್ಲಾಗುತ್ತಿರುವ ದಲಿತ ಪ್ಯಾಂಥರ್ಸ್ ಚಳುವಳಿ ಗಣ್ಯವಾದ ಸ್ಥಾನ ಪಡೆದಿದೆ. ಶಂಕರರಾವ್ ಖರಾತ್, ಢಸಾಳ, ರಾಮದೊನತೊಂಡೆ, ಅರ್ಜುನ ಡಾಂಗಳೆ, ಬಾಬೂರಾವ ಬಾಗೂಲ, ಅವಿನಾಶ ಢೂಳಸ, ಯೋಗಿರಾಜ ವಾಘಮಾರೆ, ಧರ್ಮರಾಜ ನಿಮಸರಕಾರ, ಅಮಿತಾಬ್, ಲಕ್ಷ್ಮಣ್ ಮಾನೆ, ಸೋನ ಕಾಂಬಳೆ, ಮಾಧಮ ಕೊಂಡಬಿಲಕರ್, ದಯ ಪವಾರ್, ಯಶವಂತ ಮನೋಹರ್ ಮೊದಲಾದ ಮರಾಠಿ ದಲಿತ ಲೇಖಕರ ಬರವಣಿಗೆ ಗೌರವಾಸ್ಪದವೆನಿಸಿದೆ. ದಲಿತಸಾಹಿತ್ಯ ತನ್ನ ಪ್ರತ್ಯೇಕತೆಯನ್ನು ಇಂಥ ಶಕ್ತಿಶಾಲಿ ಲೇಖಕರಿಂದ ಪಡೆದುಕೊಂಡಿದೆ. ಇವರಿಗೂ ಉಳಿದ ದಲಿತ ಲೇಖಕರಿಗೂ ಗುರುವಿನ ಸ್ಥಾನದಲ್ಲಿರುವವರು ಡಾ. ಬಾಬಾ ಸಾಹೇಬ ಅಂಬೇಡ್ಕರ್, ಡಾ. ಅಂಬೇಡ್ಕರರಲ್ಲದೆ ಪೂರಕವಾಗಿ ಡಾ. ರಾಮ ಮನೋಹರ ಲೋಹಿಯಾ, ಪೆರಿಯಾರ್ ರಾಮಸ್ವಾಮಿ ನಾಯ್ಕರ್, ಜಯಪ್ರಕಾಶ್ ನಾರಾಯಣ್ ಮೊದಲಾದವರ ನೇತೃತ್ವದ ಸಾಂಸ್ಕೃತಿಕ ಪರಿಕಲ್ಪನೆಗಳು ಕೂಡ ಪ್ರೇರಣೆಗಳಾಗಿ ಕೆಲಸ ಮಾಡಿವೆ. ಶಾಲಾಕಾಲೇಜುಗಳ ಶಿಕ್ಷಣ ಪಡೆದ ಯುವಕರೇ ಈ ದಲಿತಕಾವ್ಯದ ಮುಂಚೂಣಿಯಲ್ಲಿದ್ದಾರೆಂಬುದೂ ಗಮನಾರ್ಹ. ದಲಿತರು ಮೊದಲು ಶಿಕ್ಷಣ ಪಡೆದು ವಿದ್ಯಾವಂತರಾಗಬೇಕೆಂದು ಡಾ. ಬಾಬಾಸಾಹೇಬ ಅಂಬೇಡ್ಕರರು ಕರೆಕೊಟ್ಟಿದ್ದರ ಹಿನ್ನೆಲೆಯನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು.

ಕನ್ನಡದಲ್ಲಿ ದಲಿತ ಲೇಖಕರು ಸಾಕಷ್ಟಿದ್ದಾರೆ. ಕಥೆ ಕಾದಂಬರಿ ಲೇಖನ ಬರೆದವರಿದ್ದಾರೆ. ಅವರಲ್ಲಿ ಮುಖ್ಯವಾಗಿ ನಾನು ಕೆಲವು ದಲಿತ ಕವಿಗಳನ್ನಾದರು ಇಲ್ಲಿ ಹೆಸರಿಸಬೇಕಾಗುತ್ತದೆ. ಈ ಹೊಸಕಾವ್ಯದ ಮುಂಗೋಳಿ ದಲಿತ ಕವಿ ಸಿದ್ಧಲಿಂಗಯ್ಯ, ಈಗಾಗಲೇ ಅವರು ಹೊಲೆಮಾದಿಗರ ಹಾಡು, ಸಾವಿರಾರು ನದಿಗಳು, ಕಪ್ಪು ನಾಡಿನ ಹಾಡು ಸಂಕಲನಗಳಿಂದ ಕೀರ್ತಿಶಾಲಿಗಳಾಗಿದ್ದಾರೆ. ಚೆನ್ನಣ್ಣ ವಾಲೀಕಾರ ಕೂಡ ಕರಿ ತಲೆಮಾನವ ಹಾಡಿಕ್ಕಿ ಅವರ ಇತರ ಪದಗಳು, ಬಂಡೆದ್ದ ದಲಿತರ ಬೀದಿ ಹಾಡುಗಳು ಎಂಬ ಮೂರು ಕವನ ಸಂಕಲನಗಳನ್ನು ಪ್ರಕಟಿಸಿ ಬಂಡಾಯಕಾವ್ಯಕ್ಕೆ ಪುಷ್ಟಿಕೊಟ್ಟಿದ್ದಾರೆ. ಎಂ. ಗೋವಿಂದಯ್ಯ, ಮ. ನ. ಜವರಯ್ಯ, ಸುಕನ್ಯಾ ಮಾರುತಿ, ಬಿ. ಟಿ. ಲಲಿತಾ ನಾಯಕ, ಸರಜೂ ಕಾಟಕರ, ಕಮಲಾ ಹಂಪನಾ ಮೊದಲಾದ ಹತ್ತಾರು ಕವಿಗಳು ಈ ಹೊಸ ಹಾದಿಗೆ ಹೆಜ್ಜೆ ಹಾಕಿದ್ದಾರೆ. ದಲಿತ ಬಂಡಾಯ ಕಾವ್ಯ ಕನ್ನಡದಲ್ಲೇ ಇಲ್ಲದೆ ಇತರ ಕೆಲವು ಭಾರತೀಯ ಭಾಷೆಗಳಲ್ಲೂ ಕಾಣಿಸಿಕೊಂಡಿದೆ.

ದಲಿತಕಾವ್ಯವೂ ಪ್ರತಿಭಟನೆ ಕಾವ್ಯವೇ. ಆದರೆ ದಲಿತ ಕಾವ್ಯ ಪ್ರತೀಕಾರದ ಕಾವ್ಯವಲ್ಲ. ದಲಿತ ಮತ್ತು ಬಂಡಾಯ ಕಾವ್ಯ ಅಭಿವ್ಯಕ್ತಿ ರೂಪದಲ್ಲಿ ಕಲಾತ್ಮಕತೆ ಮತ್ತು ಭಾಷೆಗಿಂತ ವಸ್ತು ಪ್ರಮುಖವೆಂದು ಭಾವಿಸಿದೆ. ಕಾವ್ಯದ ಬಾಹ್ಯ ಸ್ವರೂಪಕ್ಕೆ ಪ್ರಾಧಾನ್ಯ ಕೊಡಬೇಕಾಗಿಲ್ಲ. ಅದು ಕೃತಕ ಪ್ರಯತ್ನ ಎಂಬುದು ಈ ಕವಿಗಳ ಗ್ರಹಿಕೆ. ಏಕೆಂದರೆ ಅಕೃತಕವಾದ ಸಹಜಾನುಭವ ಅಭಿವ್ಯಕ್ತಿಗೊಳ್ಳುವಾಗ ಅದು ತನ್ನ ಸಹಜ ಹಾಗೂ ವಿಶಿಷ್ಟ ಆಧಾರ ಪಡೆದುಕೊಳ್ಳುತ್ತದೆ. ಜನಭಾಷೆಯನ್ನೇ ಕಾವ್ಯದ ಭಾಷೆಯನ್ನಾಗಿ ಇಟ್ಟುಕೊಳ್ಳುವುದು ಈ ಕಾರಣಕ್ಕಾಗಿ ಎಮ್ಮೆ, ಕೋಳಿ, ಕುರಿ, ಕೋಣ, ಬಲಿ, ಹೆಂಡ, ಬಾಡು, ಚೆಕ್ಕಳ, ಮಾಂಸ, ಮಜ್ಜೆ, ಮೂಳೆ, ಮಾರಮ್ಮ, ಹಾರೆ ಗುದ್ದಲಿ ಪಿಕಾಸಿ ಮೊದಲಾದ ಮಾತುಗಳು ಮತ್ತೆ ಮತ್ತೆ ಸಲೀಸಾಗಿ ಇವರ ಕಾವ್ಯದಲ್ಲಿ ಬರುತ್ತವೆ.

ತಮ್ಮ ಕೈಕಾಲುಗಳನ್ನು ಕಟ್ಟಿಹಾಕಿ ಬಾಯಿ ಮುಚ್ಚಿಸಿದ್ದ, ಉಸಿರಾಟ ಕಷ್ಟಕರವಾಗಿಸಿದ್ದ ಹಿಂದೂ ಪುರಾಣಗಳ ದೈವಗಳ, ಪೂಜಾರಿಗಳ, ಶಾಸ್ತ್ರ ಹೇಳಿಕೆಗಳ ಲೇವಡಿ ಮಾಡುವುದು. ಇವರಿಗೆ ಅಗತ್ಯವೆನಿಸಿತು. ಚಾತುರ್ ವರ್ಣದ ಪಿರಮಿಡ್ಡುಗಳನ್ನು ಪುಡಿಮಾಡಿ ನೆಲಸಮಗೊಳಿಸುವ ಹವಣಿಕೆ ಇವರದು. ಬದಲಾದ ಸಮಾಜ ವ್ಯವಸ್ಥೆಗೆ ಅಪ್ರಸ್ತುತರೆನಿಸಿದ ದೇವಾನುದೇವತೆಗಳನ್ನು ನಿರಾಕರಿಸುವುದು ಈ ಧೋರಣೆಗೆ ಸುಲಭವಾಯಿತು. ತಮ್ಮ ಸುತ್ತ ಶತಮಾನಗಳಿಂದ ಬಳಸಿದ್ದ ಮೂಢನಂಬಿಕೆಯ ತೆರೆಗಳನ್ನು ಕಿತ್ತು ಪೊರೆಕಳಚಿ ಸರಿಯಾಗಿ ನೋಡುವುದನ್ನು ಕಲಿಸಿದರು. ಕಾವ್ಯವನ್ನು ಪ್ರಸ್ತುತತೆಗೆ ಹತ್ತಿರವಾಗಿಸಿದರು. ವೈಚಾರಿಕ ನೆಲೆಗೆ ನಿಲ್ಲಿಸಿದರು. ಮನುಷ್ಯ ಮನುಷ್ಯರ ನಡುವೆ ಎದ್ದು ನಿಂತಿದ್ದ ಎಲ್ಲ ಗೋಡೆ ಕಂದರಗಳನ್ನು ನಿರ್ನಾಮ ಮಾಡುವ ಮಾತುಗಳು ಸಲೀಸಾದವು. ಸರ್ವ ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯಗಳ ನವ ಸಮಾಜದ ನಿರ್ಮಾಣಕ್ಕೆ ಇವರ ಕಾವ್ಯ ಖಡ್ಗವಾಯಿತು.

ಮೇಲು ಜಾತಿಯವರ ಪೊಳ್ಳು ಪ್ರತಿಷ್ಠೆಗಳನ್ನೂ ಅರ್ಥಹೀನ ಸೋಗಲಾಡಿತನವನ್ನು ಡಂಬಾಚಾರಗಳನ್ನೂ ಬಯಲಿಗೆಳೆಯುವ ತಾಕತ್ತನ್ನು ಮೊತ್ತ ಮೊದಲ ಬಾರಿಗೆ ಈ ಹೊಸಕಾವ್ಯ ಪಡೆಯಿತು. ಹೀಗೆ ವಿಡಂಬಿಸುವಾಗ ದಲಿತಕಾವ್ಯ ಹೊಸಧ್ವನಿಗಳನ್ನು ಕೇಳಿಸುತ್ತದೆ. ಭಾಷೆಗೆ ವಿಡಂಬನೆಯ ಅಲಗು ಮೊನಚು ಅತ್ಯಂತ ಪರಿಣಾಮಕಾರಿಯಾಗಿ ಬೆಸೆದುಕೊಳ್ಳುತ್ತದೆ. ಇದುವರೆಗಿನ ಸುಲಿಗೆಯ ತಂತ್ರಗಳನ್ನು ವಿಚಾರದ ಬೆಳಕಿಗೆ ಹೊಸ ಕಾವ್ಯ ಹಿಡಿದಿದೆ. ದೇಶದ ಯಾವುದೊ ಅಜ್ಞಾತ ಮೂಲೆಯ ಹಳ್ಳಿಯೊಂದರ ದಲಿತನ ಗುಡಿಸಲಿಗೆ ನಿತ್ಯ ಬೀಳುವ ಬೆಂಕಿ, ಹದಿಹರೆಯದ ಹೆಣ್ಣಿನ ಅತ್ಯಾಚಾರ, ಆಸ್ತಿ ಲಪಟಾಯಿಸುವಿಕೆ – ಇಂಥ ಹತ್ತು ಹದಿನಾರು ಅಮಾನುಷ ಕ್ರಿಯೆಗೆ ಹೊಸ ಕಾವ್ಯ ವಾಣಿಯಾಗುತ್ತದೆ. ಕನ್ನಡದ ಉದಾಹರಣೆಗಳನ್ನು ನಿಮ್ಮಲ್ಲಿ ಕೆಲವರು ಓದಿರುವಿರಿ, ಮರಾಠಿಯ ಇಬ್ಬರು ದಲಿತ ಕವಿಗಳ ಒಂದೊಂದು ಕವನವನ್ನು ಕನ್ನಡಕ್ಕೆ ನಾನು ಅನುವಾದಿಸಿ ಕೊಡುತ್ತಿದ್ದೇನೆ : ಆದ್ದರಿಂದ ದಲಿತ ಕಾವ್ಯದ ಸ್ವರೂಪ ಸ್ಪಷ್ಟವಾಗಲು ಸಹಾಯವಾಗಬಹುದು.

ಕಾಮನಬಿಲ್ಲು

೧)      ಆಕಾಶದಲ್ಲಿನ ಕಾಮನಬಿಲ್ಲು ಕಾಣಿಸಿದಾಗಲೆಲ್ಲ
            ನನ್ನ ಹೃದಯ ಆನಂದದಿಂದ ಕುಣಿಯುವುದಿಲ್ಲ
            ಬಹುಬಣ್ಣಗಳ ಜೂಲು ಚಿಂದಿ ತೊಟ್ಟಿ
            ನನ್ನ ಹೆತ್ತಬ್ಬೆ ನೆನಪಿಗೆ ಬರುತ್ತಾಳೆ
            – ನಾಮದೇವ ಮೋಘೆ
            (ವರ್ಡ್ಸ್‌ವರ್ಥ್ ಕವಿಯ ಕವನದ ಛಾಯೆ)

೨)      ಅಮ್ಮಾ,
            ಅಗೋ ನೋಡು ಗುಡ್ಡ ಮಳೆ,
            ಬಡತನದ ಘೋರ ಜಲಪ್ರಳಯ ನೋಡು ಹೇಗೆ
            ನಮ್ಮ ಗುಡಿಸಲುಗಳನ್ನು ಕೊಚ್ಚಿ ಹೋಗುತ್ತಿದೆ;
            ಬೆಳಿನ ಪ್ರಭಾತಭೇರಿಯ ಸದ್ದು ಕೇಳಿದೆಯಾ?

ಹುತಾತ್ಮರಿಗೆಲ್ಲ ಗೌರವಾರ್ಪಣೆ ಮಾಡುತ್ತಿದ್ದಾರೆ
ದೇಶ ಗೌರವಸೂಚಕ ಇಪ್ಪತ್ತೊಂದು ತೋಪುಗಳನ್ನು ಹಾರಿಸಿದ್ದಾರೆ
ಅಮ್ಮಾ, ತಬ್ಬಿಬ್ಬಾಗಬೇಡ
ನೆರೆಯವರ ರೇಡಿಯೊ ಬಹುಮಹಡಿಗಳ ಕಟ್ಟಡಗಳ ಕಟ್ಟಡದಿಂದ ಗಟ್ಟಿಯಾಗಿ ಹೇಳುತ್ತಿದೆ;
ಅಮ್ಮಾ ಕಕ್ಕಾಬಿಕ್ಕಿಯಾಗಬೇಕಾದ ಕಾರಣವಿಲ್ಲ ;
ಇಂದು ಅತ್ಯಾಚಾರಕ್ಕೊಳಗಾದ ಹೆಣ್ಣುಗಳಿಗೆ ಈ ದಿನ ಸ್ವಾತಂತ್ರ್ಯವನ್ನು ಸಾರಲಾಗುತ್ತಿದೆ

ಇದೇ ದಿನ ಯಾರ ಗುಡಿಸಲುಗಳು ಸುಟ್ಟು ಬೀದಯಾದುವೊ
ಅವರಿಗೆಲ್ಲ ಸ್ವಾತಂತ್ರ್ಯವನ್ನು ಇಂದೆ ಸಾರಿ ಹೇಳಲಾಗಿದೆ.
ನೀನು ನೋಡಲಾರೆಯಾ ಅಗೊ ಅಲ್ಲಿ
ಕಾಗದದ ರಾಷ್ಟ್ರಧ್ವಜ ಹಿಡಿದು ಅಡ್ಡಾಡುತ್ತಿರುವ ನಗ್ನ ಬಾಲಕರನ್ನು?
ನಿನಗೂ ಒಂದು ಬಾವುಟವಿದೆ
ಇದೇ ಯೋಜನೆಯಲ್ಲೊಂದು ಬೃಹತ್ ಪ್ರಶ್ನಾರ್ಥಕ ಚಿಹ್ನೆಯಾಗಿ
ಯುಗಯುಗಳ ನರಳಾಟದ ಹೊರೆಯಾಗಿ
ಬಾಗಿರುವ ಶರೀರವನ್ನು ಮರೆತುಬಿಡು
ನೀನು ನಿಜವಾಗಿ ಸತ್ತಿರುವೆಯೊ ಅಥವಾ ಬದುಕಿರುವೆಯೊ?
ಆ ಚಿಂದಿಬಟ್ಟೆ ರಾಶಿಯಿಂದ ಒಂದು ಚೆಲುವಾದ ಸೀರೆ ಹೊರತೆಗೆದು
ಈ ಸ್ವಾತಂತ್ರ್ಯೋತ್ಸವದ ಧ್ವಜ ಕೈಯಲ್ಲಿ ಹಿಡಿದು
ಅಶೋಕ ಚಕ್ರವನ್ನು ಅದರ ಮೇಲಿಡು
ನಿನ್ನ ಎದೆಗೂಡಿನಲ್ಲಿ ಪ್ರತಿಷ್ಠಾಪಿಸಿ,
ಅದು ಚಲನಶೀಲವಾಗಿರಿಸಲು ಮರೆಯದಿರು ;
ಅದು ಸಮಾನತೆ, ಸ್ವಾತಂತ್ರ್ಯಗಳ ಆಶ್ವಾಸನೆ ಕೊಡುತ್ತದೆ.
ಕೆಂಪು ಕೋಟೆಯ ಉತ್ಕೃಷ್ಟ ಭಾಷಣಕಾರರು
ಕಾಳಸಂತೆ ಖದೀಮರ ಮೇಲೆ ಎರಗಿ ಬಿದ್ದಿದ್ದಾರೆ ;
ಪ್ರತಿವರ್ಷವು, ಇದೇ ದಿನ, ಹೀಗೆ ಆಗುತ್ತಿರುತ್ತದೆ ;
ಅಮ್ಮಾ, ಈಗ ಕೇಳು,
ನಯವಾದ ಬಟ್ಟೆ ಚೀಲಗಳನ್ನು ಹಿಡಿದಿರುವ ಗಡ್ಡದ ಆ ಯುವಕರು
ಗುಲಾಮಗಿರಿಯ ರಜತ ಅಥವಾ ಸುವರ್ಣ ಅಥವಾ ವಜ್ರ –
ಯಾವುದೆಂಬುದು ನನಗೆ ತಿಳಿಯದು –
ಮಹೋತ್ಸವವೊಂದನ್ನು ಆಚರಿಸುತ್ತಿದ್ದಾರೆ
ಅವರು ಬಂದಾಗ
ನೋವಿನಿಂದ ಅವರನ್ನು ಪಾರುಮಾಡು
ನಿನ್ನ ಎದೆಯೊಳಗಿನ ಅಶೋಕಚಕ್ರ ತೋರಿಸು
ಅದನ್ನ ಚಲಿಸುತ್ತಿರುವ ಹಾಗೆ ಇಡಬೇಕು ಎಂದು ಹೇಳುವುದನ್ನು ಮರೆಯಬೇಡ.
ಈ ಬೆಳಿಗ್ಗೆಯ ತುತ್ತೂರಿ ಧ್ವನಿ
ಅವರು ಉಡಾಯಿಸಿದ ಕುಶಾಲುತೋಪಿನ ಹಾರುಧ್ವನಿ
ಕುರಿತೂ ಹೇಳು.
ಇನ್ನು ನನ್ನ ವಿಚಾರ ಏನು ಎಂದೆಯಾ
ಬೋಧಿ ವೃಕ್ಷದ ಕೆಳಗೆ ಕುಳಿತಿರುವ ಬುದ್ಧನ ದರ್ಶನಕ್ಕೆ ಹೊರಟಿರುವೆ
– ಮಂಚರ್ ಅಂಕುಶ್

ನವೋದಯ ಕಾವ್ಯಸೃಷ್ಟಿಯಾದ ಸಂದರ್ಭವನ್ನು ವಿಶ್ಲೇಷಿಸಿದರೆ, ಭಾರತವನ್ನು ಗುಲಾಮಗಿರಿಯಿಂದ ಪಾರುಮಾಡುವ ಗುರಿಯನ್ನು ಆ ಕವಿಗಳು ಹೊಂದಿದ್ದರೆಂಬುದು ಸ್ಪಷ್ಟವಾಗುತ್ತದೆ. ಇಂದು ದಲಿತಕಾವ್ಯ ರಚನೆಯ ಸಂದರ್ಭವನ್ನು ಸೂಕ್ಷ್ಮವಾಗಿ ಹಾಗೂ ವಸ್ತುನಿಷ್ಠವಾಗಿ ನೋಡಿದರೆ, ಅಂತಹುದೇ ಒಂದು ಸವಾಲನ್ನು ಎದುರಿಸುತ್ತಿರುವುದು ಕಂಡುಬರುತ್ತದೆ. ದಲಿತರು ಕೇವಲ ಆರ್ಥಿಕ ಸದೃಢತೆಗಾಗಿ ಹೋರಾಡುತ್ತಿದ್ದಾರೆಂಬುದು ಪೂರ್ಣಸತ್ಯವಲ್ಲ, ನಿಜ, ಬದುಕು ನಿಂತಿರುವುದು. ಆರ್ಥಿಕ ಬುನಾದಿಯ ಮೇಲೆ, ಅದರಿಂದ ದಲಿತರು ಆರ್ಥಿಕ ಅಸಮಾನತೆಯ ವಿರುದ್ಧ ನಡೆಸುತ್ತಿರುವ ಹೋರಾಟ ಅರ್ಥಪೂರ್ಣವಾದುದು. ಆದರೆ ಅದರೊಂದಿಗೇ ದಲಿತರು ಸಾಮಾಜಿಕ ಸಮಾನತೆಗೂ ಕ್ರಿಯಾಶೀಲರಾಗಿ ಅಭಿಮುಖರಾಗಿದ್ದಾರೆ. ಹೀಗಾಗಿ ದಲಿತರು ಒಟ್ಟು ಇಂಡಿಯಾದ ಸಂದರ್ಭದಲ್ಲಿಯೇ ಒಂದು ಬಿಡುಗಡೆಗಾಗಿ ಸಾಂಸ್ಕೃತಿಕ ಲೇಖನ ಹಿಡಿದಿದ್ದಾರೆಂಬುದು ನಿಜವೂ ಸಹಜವೂ ಆಗಿದೆ. ಅವರ ಈ ಸಾಮೂಹಿಕ ಸ್ವಾತಂತ್ರ್ಯದ ಅಂದೋಲನದಲ್ಲಿ ಸಾಂಸ್ಕೃತಿಕ ಮಹತ್ವವು ಅಡಗಿದೆ.

ಈ ಸಮಸ್ಯೆ ಹಾಗೂ ಪ್ರಯತ್ನದ ಇನ್ನೊಂದು ಮುಖವನ್ನು ಉಪೇಕ್ಷಿಸಲಾಗದು. ಸಾಮಾಜಿಕ ಚಳವಳಿಯೇ ಬೇರೆ, ಸಾಹಿತ್ಯ ಚಳವಳಿಯೇ ಬೇರೆ; ಸಾಹಿತ್ಯೇತರ ಪ್ರಯತ್ನಗಳು ಸಾಹಿತ್ಯ ಪ್ರಕಾರದ ಹೊರಗೇ ಉಳಿಯುತ್ತವೆ ಎಂಬ ಹೇಳಿಕೆಯಿದೆ. ಆದರೆ ಬದುಕಿನ ಒಟ್ಟು ಅನುಭವದ ಫಲಶ್ರುತಿಯಾದ ಸಾಹಿತ್ಯವನ್ನು ಸಾಮಾಜಿಕ ಸ್ಥಿತಿಗತಿಗಳ ಹಿನ್ನೆಲೆಯಿಂದ ಕಿತ್ತು ಹಾಕಿ ನೋಡುವುದು ಎಷ್ಟರಮಟ್ಟಿಗೆ ಸರಿ ಎಂಬ ಸಂಶಯ ಎದುರಾಗುತ್ತದೆ. ಆದ್ದರಿಂದ ಯಾವುದೇ ಚಳವಳಿಯಾದರೂ ನಮ್ಮ ಈ ಕಾವ್ಯದ ವಿವೇಚನೆಯ ಕಕ್ಷೆಗೆ ಬಂದಾಗ, ಅಸಾಹಿತ್ಯದ ಧೋರಣೆ ಇರಬಾರದೆಂಬ ಮಾತನ್ನು ಒಪ್ಪಿಕೊಳ್ಳುತ್ತೇವೆ. ಚಳವಳಿಗಳು ಕಲಾತ್ಮಕ, ವಸ್ತುನಿಷ್ಠೆಯನ್ನು ಕೊಲ್ಲಬಾರದು. ಪ್ರಚಾರ ಪ್ರಿಯತೆ ಪ್ರತಿಭೆಯನ್ನು ಕಬಳಿಸುವ ರಾಕ್ಷಸ ಎಂಬುದು ನೆನಪಿನಲ್ಲಿಡಬೇಕಾದ ಎಚ್ಚರದ ಮಾತು.

ದಲಿತ – ಬಂಡಾಯ ಕಾವ್ಯ ಎಂದು ಹೇಳಿದಾಗ ಕೆಲವರಿಗೆ ಜಾತಿನೆಲೆಯ ಮಾತುಗಳೆಸಬಹುದು. ವಾಸ್ತವವಾಗಿ ಅದು ಸರಿಯಲ್ಲ. ದಲಿತರ ಕಾವ್ಯವೆಂದು ಹೇಳಿದಾಗ ದಲಿತವರ್ಗವೇ ದೃಷ್ಟಿಯಲ್ಲಿರಬಹುದೆಂಬುದು ನಿಜ. ಆದರೆ ಅದರಲ್ಲಿ ಕೇವಲ ಜಾತಿಯಷ್ಟೇ ಮುಖ್ಯ ಹಾಗೂ ಅಂತಿಮ ಆಗಿರುವುದಿಲ್ಲ ಅದರ ಸುತ್ತ ಹತ್ತು ಸಂಗತಿಗಳು ಹೆಣೆದುಕೊಂಡಿರುತ್ತವೆ. “ನಾವು ಸೃಷ್ಟಿಸಿಕೊಂಡಿದ್ದು ಬ್ರಾಹ್ಮಣ ಸಂದರ್ಭ, ನಮ್ಮ ಸಂಸ್ಕೃತಿಯಲ್ಲಿರುವ ಎಲ್ಲ ಬ್ರಾಹ್ಮಣ ಅಂಶಗಳನ್ನು ನಿರ್ಮೂಲನ ಮಾಡಬೇಕು”… ಎಂದು ಪೂರ್ಣಚಂದ್ರ ತೇಜಸ್ವಿ ಗುಡುಗಿ ಬರೆಹಗಾರರ (೧೯೭೨) ರಲ್ಲಿ ಒಕ್ಕೂಟ ಹುಟ್ಟಿಕೊಂಡಿತು. ಪೂರ್ವಗ್ರಹ ಕೆಂಡಗಳನ್ನು ಸೆರಿಗಿಗೆ ಕಟ್ಟಿಕೊಂಡೇ ಹೆಜ್ಜೆಯಿಟ್ಟ, ಒಕ್ಕೂಟ ಭಸ್ಮವಾಯಿತು. ಬ್ರಾಹ್ಮಣ ಬರೆದ ಕಾವ್ಯ ಚೆನ್ನಾಗಿದ್ದರೆ ಚೆನ್ನಾಗಿದೆ ಎನ್ನುತ್ತೇವೆ. ಇಲ್ಲವಾದರೆ ಇಲ್ಲ ಎನ್ನುತ್ತೇವೆ. ಅಷ್ಟೇ ಹೊರತು ಅದನ್ನು ಬ್ರಾಹ್ಮಣ ಕಾವ್ಯ ಎಂದು ಹೇಳುವುದಿಲ್ಲ. ಪಂಪನ ಕಾವ್ಯವನ್ನು ಅದು ಉತ್ಕೃಷ್ಟವೂ ಆಗಿರುವುದರಿಂದ, ಶ್ರೇಷ್ಠ ಕಾವ್ಯವೆನ್ನುತ್ತೇವೆಯೇ ಹೊರತು ಜೈನ ಎಂಬ ಕಾರಣಕ್ಕಾಗಿ ಅಲ್ಲ. ದಲಿತ ಬರೆದ ಕಾವ್ಯ ಚೆನ್ನಾಗಿದ್ದರೆ ಕಲಾತ್ಮಕವಾಗಿ ಯಶಸ್ವಿಯಾದರೆ ಹಾಗೆ ಹೇಳಬೇಕು. ಅದರ ಹೊರತು ಕೇವಲ ದಲಿತ ಎಂಬ ಕಾರಣಕ್ಕಾಗಿ ಅಲ್ಲ. ನವ್ಯ ಸಾಹಿತ್ಯ ಸಾಯಲು ಕಾರಣ ಅದು ಶ್ರೇಷ್ಠ ಕಾವ್ಯವಾಗಿರಲಿಲ್ಲ ಎಂದೇ ಹೊರತು ಕೇವಲ ನವ್ಯವಾಗಿತ್ತೆಂದಲ್ಲ. ನವ್ಯೋತ್ತರದ ದಲಿತ ಕವಿಗೂ ಬಂಡಾಯ ಕವಿಗಳೂ ಇದರಿಂದ ಪಾಠ ಕಲಿಯಬೇಕು.

ಎಡಸಾಹಿತ್ಯ ಮುಂತಾದ ಸಿದ್ಧಾಂತ ರಾದ್ಧಾಂತಗಳಿಗೆ ಮುಗಿಬಿದ್ದು ಬರೆದ ಪುಸ್ತಕಗಳು ಯಾವುವೂ ಮೌಲಿಕವೆನಿಸಲಿಲ್ಲ. ನಿರ್ದಿಷ್ಟ ಪಂಥದ ಪ್ರಚಾರಕ್ಕೆಂದೇ ಪ್ರತಿಪಾದನೆಗೆಂದೇ ಲೇಖಣಿ ಮಾರಿಕೊಂಡು ಬರೆದ ಕಾವ್ಯ ಎಷ್ಟರಮಟ್ಟಿಗೆ ಕಾವ್ಯವಾಗಿ ಯಶಸ್ವಿಯಾದೀತು. ಅಲ್ಲದೆ ಇಂದು ಸಾಹಿತ್ಯದ ಸ್ಥಾನವನ್ನು ರಾಜಕೀಯ ಆಕ್ರಮಿಸಿದೆ. ಸಾಹಿತ್ಯಕ್ಕಿಂತ ಪ್ರಿಯವಾದ ಕ್ಷೇತ್ರಗಳು ಹೊಸದಾಗಿ ಹುಟ್ಟಿಕೊಂಡಿವೆ. ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿರುವ ಪ್ರಮಾಣದಲ್ಲಿ ಗಂಭೀರ ಸಾಹಿತ್ಯ ಪ್ರೇಮಿಗಳು ಬೆಳೆದಿಲ್ಲ. ಸಾಹಿತಿಗಳಲ್ಲೇ ಅಪಾಯಕಾರಿ ಗುಂಪುಗಾರಿಕೆ ಇಂಥದೊಂದು ಉಪಯುಕ್ತ ಕಾರ್ಯಕ್ರಮ ಏರ್ಪಡಿಸಿರುವ ಸಾಹಿತ್ಯ ಅಕಾಡೆಮಿ ಹಾಗೂ ಸ್ಥಳೀಯ ವ್ಯವಸ್ಥಾಪಕರನ್ನು ಅಭಿನಂದಿಸುತ್ತೇನೆ.

ತೀರ ಈಚೆಗೆ ನಮ್ಮಲ್ಲಿ ಕೆಲವು ಕವಿಗಳು ನವ್ಯವನ್ನು ಬಿಡಲಾರದೆ ದಲಿತ ಬಂಡಾಯಕ್ಕೆ ಓಗೊಡಲಾರದೆ ತೊಳಲಾಡುವವರು ಇದ್ದರೆ. ಅವರಲ್ಲಿ ಕೆಲವರು ಪುನಃ ನವೋದಯ ಧೋರಣೆಗೆ ಮರಳುತ್ತಿದ್ದಾರೆ. ಮತ್ತೆ ಕೆಲವರು ಘಸಲ್ ಮೊದಲಾದ ಕಾವ್ಯ ಮಾರ್ಗವನ್ನು ಕಾಣಲು ಪ್ರಾರಂಭಿಸಿದ್ದಾರೆ. ನಾನು ದಲಿತ ಬಂಡಾಯ ಧೋರಣೆಗಳನ್ನು ಒಪ್ಪಿಕೊಂಡೇ ನನ್ನ ಕಾವ್ಯ ಮಾರ್ಗಕ್ಕೆ ವಚನಗಳ ಕವಚ ತೊಡಿಸಿದ್ದೇನೆ. ಅವುಗಳಲ್ಲಿ ಮೂರು ನಾಲ್ಕು ವಚನಗಳನ್ನು ತಮ್ಮ ಮುಂದೆ ಓದಿ ನನ್ನ ಈ ಪ್ರಬಂಧ ಮುಗಿಸುತ್ತೇನೆ.

ವಚನಗಳು

೧)      ಎಲೆ ಕಂದಾ, ಬದುಕಬೇಕು ನೀನು
            ಪರರ ಪ್ರಯೋಜನಕಾಗಿ
            ಎಲೆ ಕಂದಾ ಕೊರಗಬೇಡ ನೀನು
            ನಿನ್ನ ಪ್ರಚಾರಕಾಗಿ
            ಪತ್ರಿಕೆಗಳುಂಟು ಎನಿತೆನಿತೊ
            ಆಕಾಶವಾಣಿಯೂ ಇಲ್ಲಿಹವು ತಕ್ಕನಿತು
            ಟಿವಿಯೂ ಉಂಟಲ್ಲ ಇನಿತಿನಿತು
            ಇವೆ ಎಲ್ಲ ಪ್ರಚಾರ ಮಾಧ್ಯಮಗಳು
            ಸಾಕನಿತು, ಅವು ನಿನಗಲ್ಲ ಮಗು
            ನೀನು ಸುತ್ತಿಕೊಳಲಿಲ್ಲ
            ಪವಿತ್ರ ಜನಿವಾರವರ
            ಕಟ್ಟಿಕೊಳಲಿಲ್ಲ ನೀನು
            ಶ್ರೇಷ್ಠ ಶಿವದಾರವ
            ಕೊರತೆ ಏನಿಲ್ಲ ಬಿಡು
            ‘ಕರ್ಮಣ್ಯೇವಾದಿಕಾರಸ್ತೆಇಂಥ
            ನುಡಿಮುತ್ತುಗಳು ನಿನಗಾಗಿಯೆ ನೆಯ್ದಿವೆ
            ನಿನಗೂ ಹಕ್ಕುಂಟು ಕೆಲವನಿತು
            ದುಡಿಯಲು ಇಲ್ಲವೆ ಮಡಿಯಲು ಕಮಲಾಪ್ರಿಯ

೨)      ನನ್ನನೇಕೆ ಬಂಧಿಸುವೆಯಯ್ಯಾ
            ಕತ್ತಲೆಯ ಗರ್ಭಗುಡಿಯಲ್ಲಿ
            ನನ್ನನೇಕೆ ಪೂಜಿಸುವೆಯಯ್ಯ
            ದೇವತೆಯ ಮಾಡಿ ಸ್ತುತಿಯಲಿ
            ಬಿಡು ನನ್ನ ಹೊರಗೆ
            ಮೆರವಣಿಗೆಯ ದೇವತೆಯಾಗಿ
            ಬೀದಿ ಬೀದಿಯಲ್ಲಿ ಚರಿಸಿ ಬರುವೆ
            ನಲಿದಾಡಿ ಬರುವೆ, ಮೆರೆದಾಡಿ ಬರುವೆ
            ಬಸವಿಯಾಗಲ್ಲ, ಜಂಗಮ ದೇವತೆಯಾಗಿ
            ಬಿಡು ನನ್ನ ಹೊರಗೆ, ತುಡಿದು ಬರುವೆ
            ಮಾನವಳಾಗಿ ಮಿಡಿದು ಬರುವೆ ಕಮಲಾಪ್ರಿಯ!

೩)      ಅಕ್ಷತೆ ಸುರಿದ ಕೈಯಲೇ
            ಸೀಮೆ ಎಣ್ಣೆ ಸುರಿವರಯ್ಯಾ
            ಅರಿಸಿನ ಹಚ್ಚಿದ ಕೈಯಲೇ
            ಬೆಂಕಿಹಚ್ಚಿ ಸುಡುವರಯ್ಯಾ
            ವಧುಮಾಡಿ ಮನೆ ತುಂಬಿಸಿಕೊಂಡವರೇ
            ಹೆಣಮಾಡಿ ಆಚೆ ಸಾಗಿಸುವರಯ್ಯಾ
            ಕಮಲಾಪ್ರಿಯ !