. ವಿ. ಸೀತಾರಾಮಯ್ಯ ಅವರ ಪಂಪಾಯಾತ್ರೆ

‘ಪಂಪಾಯಾತ್ರೆ’ ಕನ್ನಡದ ಉತ್ತಮ ಗ್ರಂಥಗಳ ಪಂಕ್ತಿಗೆ ಸೇರಿದ್ದು, ‘ಪ್ರಬುದ್ಧ ಕರ್ನಾಟಕ’ ತ್ರೈಮಾಸಿಕ ಪತ್ರಿಕೆಯ ಸಂಚಿಕೆಗಳಲ್ಲಿ ಮೊದಲು ಬಿಡಿಯಾಗಿ ಪ್ರಕಟವಾಗಿ ಆಮೇಲೆ ಪುಸ್ತಕ ರೂಪದಲ್ಲಿ ಪ್ರಕಾಶಗೊಂಡಿತು. ಈ ಪುಸ್ತಕ ವಿ.ಸೀ. ಅವರ ಕೃತಿ ಶ್ರೇಣಿಯಲ್ಲಿ ಚೂಡಾಮಣಿ, ಅದರಲ್ಲಿ ಅವರು ತಮ್ಮನ್ನು ತಾವು ಕಂಡುಕೊಂಡಿದ್ದಾರೆ. ವಿಲೀನರಾಗಿದ್ದಾರೆ, ಒಂದರ್ಥದಲ್ಲಿ ಪಂಪಾಯಾತ್ರೆ ವಿ.ಸೀ. ಅವರ ಮನಸ್ಸು ಪ್ರತಿ ಫಲಿಸುವ ಕೃತಿಕನ್ನಡಿ. ಅವರ ಸ್ವಭಾವ ಅದರಲ್ಲಿ ಚೆನ್ನಾಗಿ ಪ್ರತಿಪಾದಿತವಾಗಿದೆ. ಅವರ ಬುದ್ಧಿಭಾವಗಳು ವಿಹರಿಸುವ ಧಾಟಿ, ವಿಲಾಸ, ಲಾಸ್ಯಗಳ ನಡಿಗೆಯನ್ನು ಈ ಪುಟ್ಟ ಪುಸ್ತಕದಲ್ಲಿ ಚೆನ್ನಾಗಿ ಕಾಣಬಹುದು. ಪಂಪಾಯಾತ್ರೆಯನ್ನು ಓದುವುದು ಎಂದರೆ ವಿ.ಸೀ. ಅವರನ್ನು ಓದಿದಂತೆ. ಒಬ್ಬ ಲೇಖಕನ ಮನೋಧರ್ಮದ ದರ್ಪಣವಾಗಿ ಇಂಥ ಕೃತಿಗಳು ಅಪರೂಪವಾಗಿ ಹೊರಬರುತ್ತಿವೆ.

‘ಪಂಪಾಯಾತ್ರೆ’ ತುಂಬ ಚಿಕ್ಕ ಪುಸ್ತಕ, ಕ್ರೌನ್ ಆಕಾರದಲ್ಲಿ ಸುಮಾರು ೮೦ ಪುಟ ಇದೆ. ೧೯೨೫ ರಲ್ಲಿ ಬೆಳಗಾವಿ ಸಾಹಿತ್ಯ ಸಮ್ಮೇಳನವನ್ನು ಮುಗಿಸಿಕೊಂಡು ಹಂಪೆಗೆ ಕೈಗೊಮಡ ಯಾತ್ರೆಯ ಪರಿಣಾಮ ಈ ಪುಸ್ತಕ. ಆಗಿನ್ನೂ ಲೇಖಕರು ೨೭ ರ ತರುಣ. ತಾರುಣ್ಯದ ಉತ್ಸಾಹ, ಕನಸು, ಭಾವುಕತೆ, ರಸಿಕತೆ – ಇವು ಒಂದಕ್ಕೊಂದು ಹೆಣೆದುಕೊಂಡು ಈ ಯಾತ್ರೆಯನ್ನು ರೋಚಕವಾಗುವಂತೆ ಮಾಡಿದೆ. ಓದುಗನ ಮೇಲೆ ಇಲ್ಲಿನ ಶೈಲಿ ಅದ್ಭುತ ಪರಿಣಾಮ ಬೀರುತ್ತದೆ. ಮೋಡಿ ಹಾಕಿ ಸೆರೆ ಹಿಡಿಯುತ್ತದೆ. ಪುಸ್ತಕವನ್ನು ಓದಿ ಮುಗಿಸಿದ ಮೇಲೂ ವಾರಗಟ್ಟಲೆ ಓದುಗ ಇದರ ಗುಂಗಿನಲ್ಲೆ ಇರುತ್ತಾನೆ. ಹೊಸಗನ್ನಡದ ಹೇಮಾಹೇಮಿಗಳಾದ ಡಿ.ವಿ.ಜಿ., ಬೆಳ್ಳಾವೆ ವೆಂಕಟನಾರಣಪ್ಪ, ಎಂ.ಆರ್.ಶ್ರೀ., ಟಿ.ಎಸ್.ವೆಂಕಣ್ಣಯ್ಯ ಇವರ ಸಂಗಡ ಹಾಳು ಹಂಪೆಗೆ, ಗತಿಸಿದ ವಿಜಯನಗರ ಸಾಮ್ರಾಜ್ಯದ ಮೌನಸಾಕ್ಷಿಯ ದರ್ಶನಕ್ಕೆ ಹೋಗಿಬಂದ ಪ್ರವಾಸ ಕಥನ ಒಂದು ಗದ್ಯಕಾವ್ಯವಾಗಿ ಇಲ್ಲಿ ಕೆನೆಗಟ್ಟಿದೆ. ಲೇಖಕರ ಶೈಲಿಯ ಬೆಡಗು, ಭಾವದ ಬೆಳಕು ಈ ಪುಟ್ಟ ಪುಸ್ತಕದಲ್ಲಿ ಹೆಪ್ಪುಗಟ್ಟಿದೆ.

ಸೂಕ್ಷ್ಮಗ್ರಾಹಿಯಾದ ಹಾಗೂ ಭಾವುಕತೆಗೆ ಸ್ಪಂದಿಸುವ ಕನಸುಣಿಯೊಬ್ಬರ ಸಂಚಾರ ಹಾಗೂ ಸುಂಸ್ಕೃತ ಹೃದಯದ ಬಡಿತ ಇಲ್ಲಿನ ವಾಕ್ಯಗಳಲ್ಲಿ ಕೇಳುತ್ತದೆ. ರಸಾರ್ದ್ರಚೇನತದ ಒಡನಾಟದ ಅನುಭವ ನಮಗಾಗುತ್ತದೆ. ಲೇಖಕರ ಪಾರದರ್ಶಕ ಪ್ರತಿಭೆಯ ಹಾಗೂ ಸ್ಫೂರ್ತಿಯ ರಸಾವೇಶದ ದರ್ಶನವಾಗುತ್ತದೆ. ವಿಷಯ ನಿರೂಪಣೆಯ ಗಾಂಭೀರ್ಯತೆಗೆ ವಿನೋದದ ಹೊರಲೇಪ ಬಹುಬೇಗ ಮನಸೆಳೆಯುತ್ತದೆ. ಚಪ್ಪಲಿಯ ಉಂಗುಷ್ಟ ನಷ್ಟದಿಂದ ಲೇಖಕರು ನೊಂದು ತೊಂದರೆ ತಾಳಲಾರದೆ ಅದನ್ನು ಗೆಳೆಯರ ಗಮನಕ್ಕೆ ಬಾರದ ಹಾಗೆ ಮೆಲ್ಲಗೆ ಬಂಡೆಯ ಹಿಂದೆ ಜಾರಿಸಿ ಬಿಡುವುದು, ಕಾಫಿಯನ್ನು ಬಯಸಿ ಬಯಸಿ ತಂಬಿಗೆಯಷ್ಟು ಕಾಫಿ ಕುಡಿಯುವುದು, ರೈಲ್ವೆ ಸ್ಟೇಷನ್ನಿನಲ್ಲಿ ಸದ್ದಿಲ್ಲದೆ ಹೋಗಿ ಟೀ ಕುಡಿಯುವಾಗ ಉಳಿದ ಮಿತ್ರರೂ ಒಬ್ಬೊಬ್ಬರಾಗಿ ಬಂದು ಸೇರಿಕೊಳ್ಳುವುದು; ಚನ್ನಯ್ಯನು ಸೇದುವ ಬೀಡಿಯ ಬೆಳಕು ದಾರಿ ತೋರಿಸುವುದು – ಇಲ್ಲೆಲ್ಲ ತಿಳಿ ಹಾಸ್ಯ, ಅದನ್ನು ತೆಳುಹಾಸ್ಯ ಎಂದರೂ ಸರಿಯೇ. ಉಕ್ಕುಕ್ಕಿ ಬರುವ ನಕ್ಕುನಗಿಸುವ ನಿಷ್ಕಲ್ಮಷ ಹಾಸ್ಯ ಭಾವ ಮನಸ್ಸನ್ನು ಅರಳಿಸುತ್ತದೆ. ಗಂಭೀರವಾದ ನೆಲೆಗೆ ನಮ್ಮನ್ನು ಕೊಂಡೊಯ್ಯುವ ರಸಪುಷ್ಟ ಸಂದರ್ಭಗಳಿಗೆ ಕೊರತೆಯಿಲ್ಲ. ಇರುಳು ನಿದ್ರೆ, ಬಾರದೆ ಕನಸುಗಳು ಸರಿದಿಯಂತೆ ಬಂದು ವಿಜಯನಗರ ಸಾಮ್ರಾಜ್ಯದ ಸ್ಥಿತ್ಯಂತರಗಳ ಏಳುಬೀಳುಗಳನ್ನು ಕಾಣುವ ಭಾಗವಂತೂ ಭಾವಗೀತೆಯೇ ಆಗಿದೆ.

ಕನ್ನಡದಲ್ಲಿ ಪ್ರವಾಸಕಥನ ಕಡಮೆ; ಉತ್ತಮ ಪ್ರವಾಸ ಕೃತಿಗಳು ಮತ್ತೂ ವಿರಳ. ಪಂಪಾಯಾತ್ರೆ ಆ ವಿರಳ ಗ್ರಂಥಗಳಲ್ಲೊಂದು ರತ್ನ. ಇದು ಕೇವಲ ಪ್ರವಾಸವಾಗಿ ಮುಗಿದಿಲ್ಲ, ಸಾಹಿತ್ಯ, ಕಲೆ, ಇತಿಹಾಸಗಳ ಮೆರಗು ಹೊತ್ತ ಒಂದು ರಸಯಾತ್ರೆಯಾಗಿದೆ. ‘ಪಂಪಾಯಾತ್ರೆ’ ಎಂಬ ಹೆಸರು ಅನ್ವರ್ಥಕವಾಗಿದೆ. ಈ ಯಾತ್ರೆ ಚೇಳು, ಮಂಡರಗಪ್ಪೆಗಳಿಂದ ಆರಂಭವಾಗಿ ಭವ್ಯ ಕನಸಿನಲ್ಲಿ ಮುಕ್ತಾಯವಾಗುತ್ತದೆ. ‘ಪಂಪಾಯಾತ್ರೆ’ ಕನ್ನಡಕ್ಕೆ ವಿ.ಸೀ. ಯವರ ಅಂತಿಮ ಕೊಡುಗೆ. ‘ಪಂಪಾಯಾತ್ರೆ’ಯನ್ನು ಬರೆದ ವಿ.ಸೀ. ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ೪-೯-೧೯೮೩ ರಂದು ಭಾನುವಾರ ಮಧ್ಯಾಹ್ನ ಮುಗಿಯಿತು ನಿಜ. ಆದರೆ ಅವರ ಕೃತಿಗಳಿಗೆ ಕಡೆಯ ಘಳಿಗೆ ಎಂಬುದು ಇಲ್ಲ, ಅಂಥ ಕೆಲವು ಚಿರಂಜೀವ ಕೃತಿಗಳಲ್ಲಿ ‘ಪಂಪಾಯಾತ್ರೆ’ಯೂ ಒಂದು.

“ಸೌಹಾರ್ದದಿಂದ ಇದನ್ನು ಓದುವ ಕನ್ನಡದ ಅಭಿಮಾನಿಗಳಿಗೆ ನನ್ನ ವಂದನೆಗಳು. ಮೊದಲಿನಿಂದ ಅನೇಕ ಮಂದಿ ಸ್ನೇಹಿತರನ್ನು ನನಗೆ ದೊರಕಿಸಿಕೊಟ್ಟ ಪುಸ್ತಕ ಇದು. ಆ ಸ್ನೇಹವನ್ನು ನೆನಸಿಕೊಂಡು ಅದಕ್ಕೆ ಧನ್ಯವಾದಗಳನ್ನರ್ಪಿಸುತ್ತೇನೆ” ಎಂದು ಲೇಖಕರು ಅರಿಕೆ ಮಾಡಿದ್ದಾರೆ. ಸೌಹಾರ್ದದಿಂದ ಇದನ್ನು ಓದುವ ಕನ್ನಡಿಗರು ಹಿಂದೆ ಇದ್ದಂತೆ ಈಗ ಇರುವಂತೆ ಇನ್ನು ಮುಂದೆಯೂ ಇರುತ್ತಾರೆ. ಅಭಿಮಾನಿಗಳ ಬಳಗ ಹೆಚ್ಚುತ್ತಲೇ ಇರುತ್ತದೆ. ಅವರಿಗೆ ಧನ್ಯವಾದ ಅರ್ಪಿಸಲು ವಿ.ಸೀ. ಯವರ ನೆನಪು ಇದ್ದೇ ಇರುತ್ತದೆ. ಕಾಲನೂ ಅದನ್ನು ಅಳಿಸಲಾರ. ಅಲ್ಲದೆ ಧನ್ಯವಾದ ಅರ್ಪಿಸಬೇಕಾದವರು ವಿ.ಸೀ. ಯವರಲ್ಲ, ನಾವು. ಇದೊ ಅವರಿಗೆ ಕೈ ಮುಗಿಯುತ್ತೇನೆ. ಅದು ಧನ್ಯವಾದ ಹೇಳುವ ನಮಸ್ಕಾರವೂ ಹೌದು.

.ಮರೆಯಾದ ಮಾರಮ್ಮ

‘ಮರೆಯಾದ ಮಾರಮ್ಮ’ ಗೊರೂರರ ಹದಿನೇಳು ಸಣ್ಣಕತೆಗಳ ಸಂಕಲನ. ಇಲ್ಲಿನ ಹದಿನೈದು ಕತೆಗಳೂ ಈಗಾಗಲೇ ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಎರಡು ಕತೆಗಳು ಮಾತ್ರ ಈ ಸಂಕಲನದಲ್ಲಿ ಮೊದಲು ಪ್ರಕಟಗೊಳ್ಳುತ್ತಿವೆ. ಮಾರಮ್ಮನನ್ನು ಹೊತ್ತ ಮುಖಪುಟದ ಚಿತ್ರ ಆಕರ್ಷಕವಗಿದೆ. ರಕ್ಷಾಕವಚ ಅಂದವಾಗಿದ್ದು, ಪುಸ್ತಕದ ಕಡೆಗೆ ಗಮನ ಸೆಳೆಯುವಂತಿದೆ.

ಶೀರ್ಷಿಕೆಯ ಹೆಸರನ್ನು ಹೊತ್ತ ಕತೆ ಅತ್ಯಂತ ವಿಸ್ತಾರವಾಗಿದ್ದು, ಸುಮಾರು ನಲವತ್ಮೂರು ಪುಟಗಳವರೆಗೂ ಹರಿದಿದೆ. ಹಂತ ಹಂತದಲ್ಲಿಯೂ ಕುತೂಹಲವಿರುವುದು ಎಲ್ಲ ಕಥೆಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಒಂದು ಒಳ್ಳೆಯ ಅಂಶ, ಮರೆಯಾದ ಮಾರಮ್ಮ ಕತೆಯಲ್ಲಿ ಅನೇಕ ಮೋಸಗಳನ್ನು ಮಾಡಿ, ಸೆರೆಮನೆಯಿಂದ ಬಿಡುಗಡೆಯಾದ ಕೇಡಿಯೊಬ್ಬನನ್ನು ಹಳ್ಳಿಯ ಮುಗ್ಧ ಜನ ಬೈರಾಗಿಯನ್ನಾಗಿ ಮಾಡುತ್ತಾರೆ. ಅನಂತರ ಆತನನ್ನು ಸ್ವಾಮಿಯನ್ನಾಗಿಸುತ್ತಾರೆ; ಸ್ವೀಕರಿಸುತ್ತಾರೆ. ಆ ವೇಷದಿಂದಲೇ ಹಳ್ಳಿಯ ಜನರನ್ನು ನಂಬಿಸಿ ಚೆನ್ನಾಗಿ ಶೋಷಣೆ ಮಡುವ ಸ್ವಾಮಿಯ ತಂತ್ರ ಸೊಗಸಾಗಿ ಈ ಕತೆಯಲ್ಲಿ ಮೂಡಿದೆ. ಸ್ವಾಮಿಗೆ ಸಂಬಂಧಿಸಿದ ಘಟನೆ ಅದು ತೀರ ಸಾಮಾನ್ಯವಾದುದಾದರೂ ಮುಗ್ಧ ಜನತೆ ಅದಕ್ಕೆ ಅಸಾಮಾನ್ಯ ಬೆಲೆ ಕಟ್ಟಿ, ಕೊಟ್ಟು ತಮ್ಮನ್ನು ತಾವೇ ಅರ್ಪಿಸಿಕೊಳ್ಳುವ ರೀತಿ ಸಹಜವಾಗಿ ಬರುತ್ತದೆ. ಒಬ್ಬ ಕಳ್ಳ ಸನ್ಯಾಸಿ ಏನೆಲ್ಲಾ ಸಾಧಿಸಬಹುದು, ಎಷ್ಟೆಲ್ಲಾ ರೀತಿಯಿಂದ ಹಳ್ಳಿಯ ಅಜ್ಞ ಜನತೆಯನ್ನು ಶೋಷಿಸಬಹುದು, ಎನ್ನುವುದಕ್ಕೆ ಈ ಕತೆ ಒಂದು ಒಳ್ಳೆಯ ನಿದರ್ಶನ, ಕಳೆದು ಹೋದ ಮಾರಮ್ಮನನ್ನು ತಂದು ಪುನಃ ಪ್ರತಿಷ್ಠಾಪಿಸುವುದರಿಂದ ಆ ಜನರ ಮೂಢನಂಬಿಕೆಗಳ ಬೇರನ್ನು ಅಲುಗಾಡಿಸುವುದು ಎಷ್ಟು ಕಷ್ಟ ಎನ್ನುವುದು ಈ ಕಥೆಯ ಜೀವನಾಡಿ, ಕತೆಗಾರರು ಹೇಳುವಂತೆ ‘ಜನ ಮರುಳೋ ಜಾತ್ರೆ ಮರುಳೋ’ ಎನ್ನುವ ಗಾದೆ ಈ ಕತೆಯಲ್ಲಿ ಧ್ವನಿತವಾಗುತ್ತದೆ.

‘ಅದಲುಬದಲಾದ ಪ್ರೇತಗಳು ಮನುಷ್ಯನ ಅಚಾತುರ್ಯದಿಂದ ಏನಾದರೂ ಆಗಬಹುದು. ಇಂಥ ಅಚಾತುರ್ಯದ ನೆಲೆಗಟ್ಟಿನಲ್ಲಿ ನಿಂತು ಆಚರಿಸುವ ಕರ್ಮಗಳಿಗೆ ಇರುವ ಅರ್ಥವನ್ನು ಪ್ರಶ್ನಿಸುವಂತಿದೆ ಈ ಕಥೆ, ಕಥೆ ಮುಂದುವರಿದಂತೆ ಈ ಭಾವನೆ ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಜೊತೆಗೆ ಈ ಆಚರಣೆಗಳ ಮೌಲ್ಯವನ್ನು ಕೆಣಕುತ್ತದೆ. ಗಂಭೀರ ಹಾಸ್ಯ ಈ ಕತೆಯಲ್ಲಿ ನೆಲೆಯೂರಿದೆ. ಪುತ್ರಕಾಮೇಷ್ಟಿಯಾಗ, ಡ್ರೈವರ್ ರಂಗನ ಅಗ್ನಿಪರೀಕ್ಷೆ, ದೆವರು ಎಚ್ಚರಿಸುತ್ತಾನೆ, ಇವು ತೀರ ಸಾಮಾನ್ಯ ಸ್ತರದಲ್ಲಿ ನಿಂತ ಕತೆಗಳು, ಇವು ಓದುಗರಲ್ಲಿ ಯಾವುದೇ ತೀವ್ರಭಾವನೆಯನ್ನು ಮೂಡಿಸುವುದರಲ್ಲಿ ವಿಫಲವಾಗುತ್ತವೆ. ವಸ್ತುವಿನ ದೃಷ್ಟಿಯಿಂದಲೂ ಕಲಾವಂತಿಕೆಯಲ್ಲೂ ಈ ಕಥೆಗಳು ಸೋಲುತ್ತವೆ.

‘ಸರ್ವಮೈತ್ರಿ’ ಒಂದು ಒಳ್ಳೆಯ ಕತೆ. ಸರ್ಪದೊಡನೆ ಸ್ನೇಹ ಹೊಂದಿದವನು ಎದುರಿಸಬೇಕಾಗಿ ಬಂದ ಒಂದು ಬಿಕ್ಕಟ್ಟಿನ ಘಟನೆ ತುಂಬ ಮಾರ್ಮಿಕವಾಗಿ ಬಂದಿದೆ. ಈ ಕತೆಯ ವ್ಯಕ್ತಿ ತನ್ನನ್ನೇ ಅರ್ಪಿಸಿಕೊಳ್ಳುವುದರ ಮೂಲಕ ಮಾನವ ಭಾವನೆಗಳು ಸೂಕ್ಷ್ಮಸ್ತರಗಳನ್ನು ಸ್ಪಂದಿಸುತ್ತಾನೆ. ಸಾಯುವ ತರುಣಿ ಒಬ್ಬಳನ್ನು ಉಳಿಸುವುದು ಆಕೆ ಬದುಕಿಯೂ ಸಾರ್ಥಕವಿಲ್ಲದೇ ಹೋಗಿ ಕಡೆಯಲ್ಲಿ ಆಕೆಯೂ ಸರ್ಪದ ಮೈತ್ರಿಯನ್ನು ಬೆಳಸಿಕೊಳ್ಳುತ್ತಾಳೆ. ಇದು ಒಟ್ಟು ಕತೆಯ ಹಂದರವಾದರೂ ಒಳ್ಳೆಯ ಶೈಲಿ ಹಾಗೂ ಸೊಗಸಾದ ನಿರೂಪಣೆಯಿಂದ ಈ ಕತೆಯನ್ನು ಒಂದು ಉತ್ತಮ ಕತೆಯನ್ನಾಗಿಸಿದ್ದಾರೆ ಕತೆಗಾರರು. ‘ನೆಲದ ಕರೆ’ ಓದಿ, ವಿದ್ಯಾವಂತರಾಗಿ, ಸ್ವಾರ್ಥಸಾಧಕರಾಗುವ ಇಂದಿನ ಹೆಚ್ಚು ಸಂಖ್ಯೆಯ ಜನರಿಗೆ ಒಂದು ಉತ್ತಮ ಮಾರ್ಗದರ್ಶನ ನೀಡುವ ಕತೆಯಾಗಿದೆ.

‘ಹೋಲಿ ಸಮ್ಮಲಗ’ ಹಾಗೂ ‘ಭಕ್ತಿ ಕಥೆ’ – ಎರಡೂ ಉಳಿದ ಹದಿನೈದು ಕತೆಗಳಿಂದ ಬೇರೆಯಾಗಿ ನಿಲ್ಲುತ್ತವೆ. ಮೇಲೆ ವಿಮರ್ಶಿಸಿದ ಕತೆಗಳು ಕತೆಗಾರರು ಸೃಜನಾತ್ಮಕತೆಗೆ ಹೆಚ್ಚು ಒತ್ತುಕೊಟ್ಟರೆ, ಈ ಕತೆಗಳಲ್ಲಿ ಕತೆಗಾರರ ಸಂಶೋಧಕ ಚುರುಕುತನವನ್ನು ಕಾಣಬಹುದಾಗಿದೆ. ನಮ್ಮ ರೈತರು ಕಣಗಳಲ್ಲಿ ಭತ್ತ, ರಾಗಿ ತೂರುವಾಗ, ರೇಜಿ ಮಾಡುವಾಗ, ಸರಿಯಾಗಿ ಗಾಳಿ ಹಾಯದಿದ್ದಲ್ಲಿ ‘ಹೋಲಿ ಸಮ್ಮಲಗ’ ಎಂದು ಗಟ್ಟಿಯಾಗಿ ಕೂಗುತ್ತಾರೆ. ಅದರ ಅರ್ಥ ವಿಶ್ಲೇಷಣೆಯನ್ನು ಒಳಗೊಂಡ ಕಿರುಕತೆ ಈ ‘ಹೋಲಿ ಸಮ್ಮಲಗ’, ಪದದ ಅರ್ಥವನ್ನು ತಿಳಿಯುವ ಕತೆಗಾರರ ಕುತೂಹಲ, ಓದುಗರ ಕುತೂಹಲ, ಆಸಕ್ತಿಯೂ ಆಗಿ ಪ್ರತಿಫಲ ಪಡೆದು ನೆಮ್ಮದಿ ತರುತ್ತದೆ.

‘ಭಕ್ತಿ ಕಥೆ’ ವಿಶಿಷ್ಟಾದ್ವೈತ ತತ್ತ್ವದ ಮೂಲಭೂತ ಸಿದ್ಧಾಂತಗಳ ತಿರುಳನ್ನು ರಾಮಾನುಜಾಚಾರ್ಯರಿಗಿಂತಲೂ ಮೊದಲು ಪ್ರಚಾರ ಮಾಡಿದ ಸಂತ ಶ್ರೀ ಯಮುನಾಚಾರ್ಯರನ್ನು ಕುರಿತದ್ದು, ಬಾಲಕನಾಗಿರುವಾಗಲೇ ತನ್ನ ವಿದ್ವತ್ ಪ್ರತಿಭೆಯಿಂದ ಆಸ್ಥಾನ ಪಂಡಿತರನ್ನು ಸೋಲಿಸಿದ ಘಟನೆ ಕತೆಯ ಒಂದು ಭಾಗವಾಗಿದೆ. ಲೌಕಿಕ ಹಿರಿಮೆಯಲ್ಲಿ ಮೈ ಮರೆತಿದ್ದ ಯಮುನಾಚಾರ್ಯರನ್ನು ರಾಮಮಿಶ್ರರು ಎಚ್ಚರಿಸಿ ಶ್ರೀ ರಂಗನಾಥನ ಸನ್ನಿಧಿಗೆ ಕರೆತಂದು ರಂಗನಾಥನನ್ನೇ ಅಮೂಲ್ಯ ನಿಧಿಯಾಗಿ ಅರ್ಪಿಸುವ ರೀತಿ ಇನ್ನೊಂದು ಘಟ್ಟ. ದೈವ ಭಕ್ತರ ಹಿರಿಮೆಗೆ, ವಿದ್ವಾಂಸರ ಪ್ರತಿಭೆಗೆ ಇದೊಂದು ನಿದರ್ಶನವಾಗಬಲ್ಲ ಒಂದು ಒಳ್ಳೆಯ ಕತೆ.

ಇನ್ನು ಉಳಿದ ಕತೆಗಳು ಸಾಮಾನ್ಯವಾಗಿ ಸಾಮಾನ್ಯ ಸ್ತರದಲ್ಲಿಯೇ ವಿರಮಿಸುವ ಕತೆಗಳು. ಇಲ್ಲಿನ ಎಲ್ಲ ಕತೆಗಳೂ ನೈಜ – ವಾಸ್ತವಿಕ ಸ್ಥಿತಿಯಿಂದ ದೂರ ನಿಲ್ಲದೆ ಓದುಗನನ್ನು ಹತ್ತಿರ ಸೆಳೆದುಕೊಳ್ಳುವಲ್ಲಿ ಸಫಲವಗಿವೆ, ಪ್ರತಿಯೊಂದು ಕತೆಯೂ ಸಮಾಜದಲ್ಲಿನ ನಮ್ಮ ಸುತ್ತಮುತ್ತಲಿನ ಕಡೆಗೆ ಕೆಲವೊಮ್ಮೆ, ಕೆಲವು ಕಡೆ ನಮ್ಮದೇ ಕತೆಯನ್ನು ಈ ಕತೆಗಳು ಅಲ್ಲಲ್ಲಿ ನಿರೂಪಿಸುತ್ತಿವೆಯೇನೋ ಎನ್ನುವ ಆತ್ಮೀಯತೆಯನ್ನು ತರುತ್ತವೆ. ಆದ್ದರಿಂದ ಕತೆಗಳು ಓದುಗನ ಹೃದಯವನ್ನು ನೇರವಾಗಿ ಸ್ಪಂದಿಸುತ್ತವೆ. ಸರಳ ನಿರೂಪಣೆ ಕತೆಯ ತಾತ್ವಿಕ ಮೌಲ್ಯವನ್ನು ಹೆಚ್ಚಿಸಿದೆ. ಸಹಜಶೈಲಿ, ಅಲ್ಲಲ್ಲಿ ಕಾಣುವ ತಿಳಿಹಾಸ್ಯ ಕತೆಯ ಓಟಕ್ಕೆ ಸಹಾಯಕವಾಗಿದೆ. ಹೆಚ್ಚಿನ ಕತೆಗಳು ‘ಸತ್ಯಮೇವ ಜಯತೆ’ ಎನ್ನುವ ತತ್ತ್ವವನ್ನು ಪ್ರತಿಪಾದಿಸಿದೆ, ಮೋಸಗಾರ ಕುಟಿಲತಂತ್ರಿ, ದರೋಡೆಕೋರ – ಇವರೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರಬೇಕು ಎನ್ನುವ ಕತೆಗಾರರ ಮನೋಭಾವವನ್ನು ಈ ಎಲ್ಲ ಕತೆಗಳಲ್ಲಿಯೂ ಗುರುತಿಸಬಹುದು. ಪಾತ್ರ, ವಸ್ತು, ನಿರೂಪಣೆ, ಶೈಲಿ, ತಂತ್ರ ಈ ಯಾವುದೇ ದೃಷ್ಟಿಯಿಂದ ಇಲ್ಲಿನ ಕತೆಗಳು ತಮ್ಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರಲ್ಲಿ ಸಫಲವಾಗಿವೆ.

. ಶ್ರೀಸಾಮಾನ್ಯರಿಗೊಂದು ಭಗವದ್ಗೀತೆ : ಸಿದ್ಧವನಹಳ್ಳಿ ಕೃಷ್ಣಶರ್ಮ

ಭಾರತೀಯ ದರ್ಶನಗಳ ಸಾರದಂತಿರುವ ಭಗವದ್ಗೀತೆಯನ್ನು ಕುರಿತು ಅನೇಕ ಆಚಾರ್ಯರು ವ್ಯಾಖ್ಯಾನ, ಟೀಕೆ ಟಿಪ್ಪಣಿ, ವಿವರಣೆ, ತಾತ್ಪರ್ಯ ಬರೆದಿದ್ದಾರೆ. ಆಚಾರ್ಯತ್ರಯರ ಕೃತಿಗಳ ಮಾತಂತಿರಲಿ, ಆಧುನಿಕ ಶ್ರೇಷ್ಠ ವಿದ್ವಾಂಸರು ಭಗವದ್ಗೀತೆಯನ್ನು ಕುರಿತು ಬರೆದ ಗ್ರಂಥಗಳ ಲೆಕ್ಕ ದೊಡ್ಡದು. ಮಹಾತ್ಮಾ ಗಾಂಧಿ, ಆಚಾರ್ಯ ವಿನೋಬಾ, ಆನಿಬೆಸೆಂಟ್ ಮೊದಲಾದವರು ಆದ್ಯರು. ಕನ್ನಡದಲ್ಲೂ ಹಿಂದಿನಿಂದ ಇಂಥ ಪ್ರಯತ್ನಗಳು ನಡೆದಿವೆ.

ಮೇಲೆ ಹೆಸರಿಸಿದ ಪ್ರಯತ್ನಗಳೆಲ್ಲ ಬಹುವಾಗಿ ಪಂಡಿತ ಮಂಡಲಿಗೆ ಮೀಸಲು, ಕಲಿತವರಿಗೆ ಮಾತ್ರ ಅವು ಕಲ್ಪತರುಗಳು. ಹೆಚ್ಚು ಕಲಿಯದ ಹಳ್ಳಿ ಮುಗ್ಧರಿಗೆ ಆ ವಿಭೂತಿಪುರುಷರ ಉದ್ಗ್ರಂಥಗಳು ಎಟುಕುವುದಿಲ್ಲ. ಹಾಗೆ ನೋಡುವುದಾದರೆ ಜನ ಸಾಮಾನ್ಯರಿಗೆ ಭಗವದ್ಗೀತೆಯ ತಿರುಳು ವಶವಾಗುವಂತೆ ಬರೆಯುವುದು ಪರಿಚಯಿಸುವುದು ಸುಲಭಸಾಧ್ಯವಲ್ಲ.

ಸಿದ್ಧವನಹಳ್ಳಿ ಕೃಷ್ಣಶರ್ಮಾಜಿಯವರು ಎಲ್ಲರಿಗೂ ಮನಮುಟ್ಟುವ ಸುಲಿದ ಬಾಳೆಯ ಹಣ್ಣಿನಂದದ ಕನ್ನಡ ಭಾಷೆಯಲ್ಲಿ ಭಗವದ್ಗೀತೆಯನ್ನು ಪರಿಚಯಿಸಿದ್ದಾರೆ. ನಮ್ಮ ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿಯ ವತಿಯಿಂದ ೧೯೪೯ ರಲ್ಲಿ ಪ್ರಕಟವದ ೫೩ ಪುಟಗಳ ಕಿರುಹೊತ್ತಗೆಯಲ್ಲಿ ೧೮ ಅಧ್ಯಾಯಗಳ ಭಗವದ್ಗೀತೆಯ ಸಾರ ಸೋರದಂತೆ, ಸ್ವಾರಸ್ಯ ಜಾರದಂತೆ ಕನ್ನಡಿಸಿದ್ದಾರೆ. ಅವರ ವಿಶಿಷ್ಟ ಕನ್ನಡ ಶೈಲಿಯ ಮೋಡಿ ಇಲ್ಲಿಯೂ ಕೂಡಿಕೊಂಡು ಮಾತು ಮೊನಚಾಗಿದೆ. ಭಗವದ್ಗೀತೆಯ ಬನಿಗೆ ಈ ಶೈಲಿ ಬೇಕು.

ಪ್ರಾರಂಭದಲ್ಲಿ ಕೌರವ ಪಾಂಡವರ ವಿಚಾರವಾಗಿ ಪ್ರಸ್ತಾಪಿಸುತ್ತಾರೆ. ಆ ಬಗೆಯ ಪೀಠಿಕೆ ಈ ಬಗೆಯ ಪುಸ್ತಕಕ್ಕೆ ತೀರ ಅಗ್ಯ (ಯಾರಿಗಾಗಿ ಬರೆಯುತ್ತಿದ್ದೇನೆಂಬುದನ್ನು ಲೇಖಕ ನೆನಪಿಡುವುದು ಇನ್ನೂ ಕೆಲವರಿಗೆ ಕಲಿಯಬೇಕಾದ ಪಾಠ). ಅಷ್ಟು ಭೂಮಿಕೆ ಸಿದ್ಧ ಪಡಿಸಿದವರೇ ಎರಡನೆಯ ಪುಟದ ಕಡೆಯ ವಾಕ್ಯಕ್ಕೆ ಸರಿಯಾಗಿ ಭಗವದ್ಗೀತೆಯ ವಾತಾವರಣ ನಿರ್ಮಿಸಿಬಿಡುತ್ತಾರೆ. ಅಲ್ಲಿಂದ ಮುಂದಕ್ಕೆ ಉದ್ದಕ್ಕೂ ಓದುಗ ಇಲ್ಲವೇ ಕೇಳುಗ ಒಂದು ಕಥೆ ಓದಿದ, ಕೇಳಿದ ಲವಲವಿಕೆ ಹೊಂದುತ್ತಾನೆ. ಬರೆಹದಲ್ಲಿ, ಇಷ್ಟು ತಾತ್ವಿಕ ಹಿನ್ನೆಲೆಯ ವಿಷಯ ಪ್ರತಿಪಾದನೆಯಿದ್ದರೂ ಆಸಕ್ತಿ ತಗ್ಗುವುದಿಲ್ಲ.

ಅರ್ಜುನನಿಗೆ ಕವಿದ ವ್ಯಾಮೋಹವನ್ನು ಕಳೆಯಲು ಕೃಷ್ಣ ಹೇಳುತ್ತಾನೆ: “ಅರ್ಜುನ, ಏಕೆ ತಳಮಳಿಸುತ್ತೀಯೇ? ಏನು ಕಾರಣವಿಲ್ಲದೆ ಸಂಕಟ ಪಡುತ್ತೀಯಲ್ಲ. ತಿಳಿದವರಂತೆ ದೊಡ್ಡ ದೊಡ್ಡ ಮಾತು ಆಡುತ್ತೀಯೆ. ತಿಳಿದವರು ಸತ್ತವರಿಗಾಗಿ ಆಗಲಿ, ಇದ್ದವರಿಗಾಗಿ ಆಗಲಿ ಅಳುವುದಲ್ಲ. ಸಾಯುವುದೇನು, ಇರುವುದೇನು? ಈ ಮೈಗೆ ಸಾವು; ಜೀವಕ್ಕೆ ಸಾವೇ? ಹುಡುಗತನ. ಹರೆಯ, ಮುಪ್ಪು ಹೇಗೋ ಈ ಮೈಗೆ, ಸಾವೂ ಹಾಗೇ ಒಂದು ತೊಡಿಗೆ, ವೇಷ, ಈ ಮೈ ಸತ್ತರು ಮಣ್ಣಾದರೂ ಜೀವಕ್ಕೆ ಆತ್ಮಕ್ಕೆ ಮಾತ್ರ ಸಾವಿಲ್ಲ. ಮೈಗೆ ಹುಟ್ಟುಂಟು, ಸಾವುಂಟು. ಆತ್ಮಕ್ಕೆ ಹುಟ್ಟೂ ಇಲ್ಲ, ಸಾವೂ ಇಲ್ಲ, ಆತ್ಮ ಹಿಂದೆಯೂ ಇತ್ತು, ಇವತ್ತೂ ಇದೆ, ಯಾವತ್ತು ಇರುತ್ತದೆ, ಅದಕ್ಕೆ ಮುಪ್ಪಿಲ್ಲ, ಅರಿವಿಲ್ಲ. ಇದನ್ನು ತಿಳಿದೂ ನೀನು ಅಳುತ್ತೀಯಲ್ಲ, ನಿನಗೆ ಭ್ರಾಂತಿಯಗಿದೆ. ಈಗ ಯುದ್ಧಕ್ಕೆ ಬಂದಿರುವವರು ನಿನ್ನವರೆಂಬ ಮೋಹ ಕವಿದಿದೆ ನಿನಗೆ.

ಅರ್ಜುನ, ಈ ಮೈಗಳು ಏನು ಮಾಡಿದರೆ ತಾನೆ ಉಳಿದಾವು? ಈ ಜೀವ ಯಾರೇನು ಮಾಡಿದರೆ ತಾನೆ ಅಳಿದಾವು? ಜೀವಕ್ಕೆ ಮೈ ಒಂದು ವಲ್ಲಿ. ಹಳೆಯ ವಲ್ಲಿಯನ್ನು ಬಿಡುಟು ಹೊಸ ವಲ್ಲಿಯನ್ನು ಹೊದೆಯುವುದಿಲ್ಲವೆ? ಹಾಗೆ ಜೀವ ಹೊಸ ಹೊಸ ಮೈ ತೊಡುತ್ತದೆ.

ಗ್ರಾಮ್ಯರಿಗೆ ಗ್ರಾಹ್ಯವಾಗಲು ಗದ್ಯ-ಭಾಷೆ ಹೇಗಿರಬೇಕೆಂದರೆ ಹೀಗಿರಬೇಕು ಎಂದು ಹೆಳಬಹುದು : ಇವರ ಪುಸ್ತಕ ತೋರಿಸಿ. ಜನರಿಗೆ ನಿಲುಕುವ ಉಪಮೆಗಳು ಬಂದು ವಿಷಯ ನಿರುಕಾಗುತ್ತದೆ. ಮೂಲದಲ್ಲಿ ಇಲ್ಲದ ಹೇಳಿಕೆ, ಹೋಲಿಕೆ ಇಲ್ಲಿವೆ. ಆದರೆ ಅವು ಅದೆಷ್ಟು ಸಮುಚಿತವಾಗಿ ನಿರೂಪಣೆಯಲ್ಲಿ ಕೋದಿವೆಯೆಂದರೆ ಅವನ್ನು ಪತ್ತೆ ಹಚ್ಚಿ ಪ್ರತ್ಯೇಕಿಸುವುದು ಕಷ್ಟವಾಗುತ್ತದೆ.

ಅರ್ಜುನನಿಗೆ ಸ್ಥಿರಬುದ್ಧಿ ತಂದುಕೊಡಲು ಕೃಷ್ಣ ತಿಳಿಸಿದ್ದು ಹೀಗೆ :

“ಯಾರು ಎಲ್ಲ ಆಸೆಯನ್ನೂ ತೊರೆದು ನನ್ನೊಳಗೇ ತಾನು ಸಂತೋಷವಾಗಿರುತ್ತಾರೋ ಅವರೇ ಸಮಬುದ್ಧಿಗಳು. ಅಂಥವರಿಗೆ ದುಃಖ ಬಂದರೆ ದುಃಖವಾಗುವುದಿಲ್ಲ; ಸುಖ ಬಂದರೆ ಮೈ ಮರೆಯುವುದಿಲ್ಲ. ಅವನಿಗೆ ಭಯವಿಲ್ಲ, ಸಿಟ್ಟಿಲ್ಲ; ಬಯಕೆ ಮೊದಲೇ ಇಲ್ಲ, ಸುಖ – ದುಃಖ ಈ ಮೈಗೆ ಹತ್ತಿದ್ದು, ಆಮೆ ತನ್ನ ಮೈಯನ್ನು ಚಿಪ್ಪಿನೊಳಗೆ ಎಳೆದುಕೊಳ್ಳುವುದಲ್ಲವೆ? ಹಾಗೆ ಈ ಸಮಬುದ್ಧಿ ತನ್ನ ಮೈಯನ್ನೇ ಬಿಗಿ ಹಿಡಿಯುತ್ತಾನೆ. ಅಂಥವನನ್ನು ಸ್ಥಿರಬುದ್ಧಿ ಎನ್ನುತ್ತಾರೆ. ಇದು ಒಡಲನ್ನು ದಂಡಿಸಿದಂತೆ. ಮನಸ್ಸು ಒಂದಿದೆಯಲ್ಲ. ಊಟ ಬಿಟ್ಟರೆ ರುಚಿ ಹೋಗುತ್ತದೆಯೆ? ಹುತ್ತ ಬಡಿದರೆ ಹಾವು ಸಾಯುತ್ತದೆಯೆ?”

ಕೃಷ್ಣ ತಿಳಿಸಿದ ಗೀತೆ ಅರ್ಜುನನಿಗೆ ತಿಳಿದಂತೆ ಉಳಿದವರಿಗೆ ಅಷ್ಟು ಬೇಗ ಸಮಗ್ರವಾಗಿ ತಿಳಿಯುವುದು ಕಷ್ಟವಾದೀತು. ಕೃಷ್ಣಶರ್ಮರು ಪರಿಚಯಿಸಿರುವ ಭಗವದ್ಗೀತೆ ಮಾತ್ರ ಎಲ್ಲರಿಗೂ ತಿಳಿಯುತ್ತದೆ. ಇವರ ಭಗವದ್ಗೀತೆ ಪರಿಚಯ ಕಲಿಯದವರಿಗೂ ಕಾಮಧೇನು.

. ಅಗ್ನಿವರ್ಣ : ರಂ. ಶ್ರೀ. ಮುಗಳಿ

ಅಗ್ನಿವರ್ಣ ಪ್ರೊಫೆಸರ್ ರಂ. ಶ್ರೀ. ಮುಗಳಿಯವರ ನಾಲ್ಕನೇ ಕಾದಂಬರಿ. ಕೇವಲ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಮುಗಳಿಯವರ ಮನೋಭೂಮಿಕೆಯಲ್ಲಿ ಒಂದು ಸಾಹಿತ್ಯ ಬಿಂದುವಾಗಿ ಹೊಕ್ಕ ಈ ಕಾದಂಬರಿಯ ವಸ್ತು, ಅವರು ಬೆಳೆದಂತೆ ಅದೂ ಅಂತರಂಗದಲ್ಲೇ ದೊಡ್ಡ ಕೃತಿಯಾಗಿ ಬೆಳೆಯಿತು. ವಾಲ್ಮೀಕಿ ರಾಮಾಯಣ, ಕಾಳಿದಾಸನ ರಘುವಂಶ, ರಾಮಾಯಣ ಕಾಲದ ಮತ್ತು ರಾಮಾಯಣೋತ್ತರ ಕಾಲದ ಜನಜೀವನಕ್ಕೆ ಸಂಬಂಧಿಸಿದ ಡಾ|| ಎಸ್. ಎನ್. ವ್ಯಾಸ ಅವರ ‘India in the Ramayana Age’ ಎಂಬ ಗ್ರಂಥಗಳ ಪ್ರಭಾವದಿಂದ ಈ ಗ್ರಂಥ ರಚನೆಯಾಗಿದೆ. ಈ ಕೃತಿಗಲು ಮುಗಳಿಯವರ ಮೇಲೆ ಪ್ರಭಾವ ಬೀರಿವೆ. ಕಾದಂಬರಿಯ ಚೌಕಟ್ಟಿಗೆ ಅಳವಡುವ ವಸ್ತು, ಸನ್ನಿವೇಶ, ಘಟನೆ, ನಿರೂಪಣೆ, ವರ್ಣನೆ ಔಚಿತ್ಯ – ಅನೌಚಿತ್ಯದ ವಿವೇಚನೆ, ಪಾತ್ರಗಳ ಹಿರಿಮೆ ಇವೆಲ್ಲದರಲ್ಲಿ ಕಾದಂಬರಿಕಾರರ ವಿವೇಚನಾಯುಕ್ತ ಸೋಪಜ್ಞತೆ ಅತ್ಯಂತ ಸೂಕ್ತವಾಗಿ ಕೆಲಸ ಮಾಡಿದೆ. ಕುಸುರಿ ಕೆಲಸದ ಕಲಾತ್ಮಕತೆ ಕಾದಂಬರಿಯ ಸತ್ವವನ್ನು ಹಿರಿದಾಗಿಸಿದೆ.

ಶತಮಾನಗಳ ಹಿಂದಿನ ತಲೆಮಾಡಿನ ರಾಜನೊಬ್ಬನ ಕಥಾವಸ್ತುವನ್ನುಳ್ಳ, ಈ ಕಾದಂಬರಿ ಇಂದಿನ ಸನ್ನಿವೇಶಕ್ಕೆ ಎಷ್ಟು ಪ್ರಸ್ತುತವಾಗಿದೆ ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ಈ ಕಾದಂಬರಿಯಲ್ಲಿ ದೊರೆಯುತ್ತದೆ. ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ ಗತಕಾಲ, ವರ್ತಮಾನಕಾಲ, ಭವಿಷ್ಯತ್ಕಾಲ, ಈ ಕಾಲತ್ರಯದ, ಅಂದರೆ ಸಾರ್ವಕಾಲಿಕ ಜೀವನಚಿತ್ರಣ ಮತ್ತು ದರ್ಶನ ಈ ಕಾದಂಬರಿಯಲ್ಲಿ ಕಲಾತ್ಮಕವಾಗಿ ಧ್ವನಿತವಾಗಿದೆ.

ಅಗ್ನಿವರ್ಣ ಈ ಕಾದಂಬರಿಯ ಕಥಾನಾಯಕ, ಕಾಳಿದಾಸನ ರಘುವಂಶ ಮಹಾ ಕಾವ್ಯದ ಹತ್ತೊಂಬತ್ತನೆಯ ಸರ್ಗದಲ್ಲಿನ ನಾಲ್ಕು ಪದ್ಯಗಳು ಕಾದಂಬರಿಕಾರರ ಒಳಗಣ್ಣಿನೆದುರು ಒಂದು ಚಿತ್ರಪ್ರಪಂಚವನ್ನೇ ಕಡೆದು ನಿಲ್ಲಿಸಿದುವು. ಈ ನಾಲ್ಕು ಪದ್ಯಗಳಲ್ಲಿ ವರ್ಣಿತವಾಗಿರುವ ಅಗ್ನಿವರ್ಣ ಮಹಾರಾಜ ಅತಿಕಾಮಿ, ಪಟ್ಟಾಭಿಷಿಕ್ತನಾದ ಕೆಲವು ವರುಷ ಸ್ವಂತವಾಗಿ ಕುಲೋಚಿತವಾದ ಕರ್ತವ್ಯಗಳನ್ನು ನೆರವೇರಿಸಿದನು, ತರುವಾಯ ಸಚಿವರಿಗೆ ಆಡಳಿತದ ಎಲ್ಲ ಹೊಣೆಯನ್ನು ವಹಿಸಿಕೊಟ್ಟು ತನ್ನ ಯೌವನವನ್ನು ಹೆಣ್ಣಿನ ಸಂಗಕ್ಕೆ ವಶಮಾಡಿದನು. ಅರಮನೆಯಲ್ಲಿ ಮೃದಂಗ, ವೀಣಾವಾದನಗಳು ತುಂಬಿರಲು ಕಾಮಿನಿಯರ ಸಹವಾಸದಲ್ಲಿ ಒಂದಕ್ಕಿಂತ ಹೆಚ್ಚು ಎನ್ನುವಂತೆ ಅವನು ಎಲ್ಲಾ ತರದ ಸುಖದಲ್ಲಿ ಮುಳುಗಿದನು. ಈ ಸುಖಭೋಗದಿಂದ ಒಂದು ಕ್ಷಣವೂ ಅಗಲಿ ಇರಲಾರದೆ ಅವನು ಹಗಲಿರುಳೂ ಅರಮನೆಯೊಳಗೆ ವಿಹರಿಸುತ್ತಾ ಕಾಣಬೇಕು ಎನ್ನುವ ಪ್ರಜೆಗಳನ್ನು ಕಾಣಬಯಸಲಿಲ್ಲ. ಯಾವಾಗಲಾದರೊಮ್ಮೆ ಮಂತ್ರಿಗಳ ಬಗೆಗಿರುವ ಗೌರವದಿಂದ ಅವರ ಬಿನ್ನಹವನ್ನು ಮನ್ನಿಸಿ ಗವಾಕ್ಷದಲ್ಲಿ ಕೇವಲ ತನ್ನ ಚರಣವನ್ನು ಚಾಚಿ ತನ್ನ ಪ್ರಜೆಗಳಿಗೆ ದರ್ಶನ ಕೊಡುತ್ತಿದ್ದನು.

ರಘುವಂಶದ ಕೊನೆಯ ರಾಜನಾದ ಅಗ್ನಿವರ್ಣನ ವರ್ಣಮಯ ಪಾತ್ರ, ರಘುವಂಶದ ಕಡೆಯ ಸರ್ಗದಲ್ಲಿ ಸಾಕಷ್ಟು ವಿವರವಾಗಿ ವರ್ಣಿತವಾಗಿದೆ. ವೈವಸ್ವತ ಮನುವಿನಿಂದ ಪ್ರಾರಂಭವಾದ ರಘುವಂಶದಲ್ಲಿ ದಿಲೀಪ, ರಗು, ಅಜ, ದಶರಥ, ರಾಮ, ಕುಶ – ಮೊದಲಾದವರು ತಮ್ಮೆಲ್ಲ ಉದಾತ್ತಗುಣಗಳಿಂದ ಆದರ್ಶ ರಾಜರಾಗಿ ಬಾಳಿದವರು. ಬದುಕಿಗೆ ಒಂದು ಸಂಪೂರ್ಣ ಅರ್ಥ ಕೊಟ್ಟವರು. ಆದರೆ ಈ ವಂಶದ ಕಡೆಯ ರಾಜನಾದ ಅಗ್ನಿವರ್ಣ ಕಾಮಾತಿರೇಕದಿಂದ ಕ್ಷಯರೋಗಕ್ಕೆ ಬಲಿಯಾಗಿ ತೀರಿ ಹೋಗುತ್ತಾನೆ. ಅತನ ಗರ್ಭಿಣಿ ಪತ್ನಿ ಪ್ರಜೆಗಳ ಸಮ್ಮತಿಯಿಂದ ಸಿಂಹಾಸನಾರೂಢಳಾಗಿ ರಾಜ್ಯವಾಳುತ್ತಾಳೆ.

ಅಗ್ನಿವರ್ಣತನ್ನ ಹಿಂದಿನ ಎಲ್ಲ ರಾಜರಿಗಿಂತ ಬೇರೆಯಾಗಿದ್ದನು ಮಾತ್ರವಲ್ಲ, ಅವರು ಇರಿಸಿಕೊಂಡಿದ್ದ ಆದರ್ಶಗಳು ಮತ್ತು ಅವನ್ನು ಆಚರಣೆಗೆ ತಂದ ಜೀವನ ರೀತಿ ಬೇರೆಯಾಗಿದ್ದವು.

ಅಗ್ನಿವರ್ಣನ ವಿವರವಾದ ಚಿತ್ರಣ ಕೆಲವರಿಗೆ ಅಶ್ಲೀಲ, ಅಸಭ್ಯವೆಂದು ತೋರಿದರೂ ರಾಜವಂಶಗಳು, ರಾಜ್ಯಗಳು, ರಾಷ್ಟ್ರಗಳು – ಇವುಗಳ ಏರಿಳಿತಕ್ಕೆ ಇರುವ ಕಾರಣಗಳನ್ನು ಈ ಮೂಲಕ ಗುರುತಿಸಬಹುದು. ಸುದರ್ಶನನ ಮಗ ಅಗ್ನಿವರ್ಣ ಅಥವಾ ದಿಲೀಪನ ವಂಶದ ಕಡೆಯವನಾದ ಅಗ್ನಿವರ್ಣ ಇವುಗಳ ವಿಸದೃಶ ವ್ಯಕ್ತಿಚಿತ್ರಗಳಿಂದ ತಿಳಿಯುವ ಮೂಲಭೂತ, ಸಾರ್ವಕಾಲಿಕ ಸತ್ಯಸಂಗತಿ ಎಂದರೆ ಒಂದು ಪ್ರಖ್ಯಾತವಾದ ರಾಜವಂಶದಲ್ಲಿ ಉನ್ನತಿ ಮತ್ತು ಅವನತಿಗಳು ಹೇಗೆ ಸಂಭವಿಸುತ್ತವೆ ಎನ್ನುವುದು. ಈ ಕಾದಂಬರಿಯಲ್ಲಿ ಅವನತಿಯ ದುರಂತ ಚಿತ್ರ ಸಾಹಿತ್ಯಿಕ ಸೌಂದರ್ಯದಿಂದ ಚಿತ್ರಿತವಾಗಿದೆ. ಡಾ|| ಮುಗಳಿಯವರ ಅಗ್ನಿವರ್ಣ ಒಬ್ಬ ಅಪ್ರತಿಮ ಪ್ರತಿಭಾವಂತ, ರಸಿಕ, ಸಂಗೀತಪ್ರೇಮಿ, ಸ್ತ್ರೀಲೋಲ, ಸರ್ವಸುಖಶೋಧಕ, ಅತಿರೇಕಗಳಿಂದ ಅಳಿವು ಹೊಂದಿದರೂ ತನ್ನ ಅತಿಶಯವನ್ನು ಮೆರೆದ ಉನ್ನತ ಚೇತನದ ವ್ಯಕ್ತಿ. ಕೇವಲ ಕಾಮುಕ, ಕರ್ತವ್ಯಭ್ರಷ್ಟನಾದ ಅರಸನಲ್ಲ. ದಿಲೀಪನಿಂದ ಮೊದಲಾಗಿ ತನ್ನ ತಂದೆ ಸಂದರ್ಶನನವರೆಗೆ ಬೆಳೆದುಬಂದ ಉದಾತ್ತ ಪರಂಪರೆಯನ್ನು ತಿಳಿಸಿಕೊಟ್ಟರೂ ಡೋಲಾಯಮಾನನಾಗಿ ಅದರಿಂದ ಎಹಚ್ಚು ಪ್ರಭಾವಿತನಾಗದೆ ಕಾಮವಶನಾಗಿ ಕರ್ತವ್ಯ ಚ್ಯುತನಾಗುತ್ತಾನೆ. ತನ್ನ ವಿನಾಶದ ದಾರಿಯನ್ನು ತಾನೇ ಸಿದ್ಧಪಡಿಸಿಕೊಳ್ಳುತ್ತಾನೆ. ಕಡೆಯಲ್ಲಿ ಸರಿಯಾದ ತಿಳುವಳಿಕೆ ಹೊಂದಿ ಅನುಪಾತದಿಂದ ದುರಂತಮುಟ್ಟುವ ಒಂದು ಉತ್ತಮ ಪಾತ್ರವಾಗಿ ಮೆರೆದಿದ್ದಾನೆ. ಓದುಗರ ಸಹಾನುಭೂತಿಯನ್ನು ಅಪೇಕ್ಷಿಸುತ್ತ ಉದಾತ್ರ ಗುಣಗಳನ್ನು ಮೆರೆಸುವ ಅವನ ಕೆಲವು ಚಟಗಳು ಒಬ್ಬ ಒಳ್ಳೆಯ ವ್ಯಕ್ತಿಯನ್ನು ಹೇಗೆ ದುರ್ಬಲಗೊಳಿಸಬಲ್ಲವು ಎಂಬುದಕ್ಕೆ ಒಂದು ನಿದರ್ಶನ.

ಕಾದಂಬರಿಯ ಉದ್ದಕ್ಕೂ ಅಗ್ನಿವರ್ಣನ ಮೇಲೆ ಆಯಾ ಮಟ್ಟಿನ ಪ್ರಭಾವ ಬೀರಿದ ಆತನ ತಾಯಿ ನಂದಿನಿ, ಪತ್ನಿಯರಾದ ಧಾರಿಣಿ – ಕಾಮಿನಿಯರು, ಮಹಾಮಂತ್ರಿ ಚತುರಾನನ, ರಾಜಗುರು ಹಾಗೂ ಮಿತ್ರನಾದ ಕುಶಾಗ್ರ – ಇವರುಗಳು ಸಹ ಮಹತ್ವದ ಪಾತ್ರ ವಹಿಸಿದ್ದಾರೆ. ರಾಜನೊಬ್ಬ ಕರ್ತವ್ಯಚ್ಯುತನಾದರೆ, ಕಾಮುಕತೆಯಿಂದ ಚಾರಿತ್ರ್ಯಹೀನನಾದರೆ, ಅರಮನೆಯ ಪರಿಸರದ ತೀರ ಸಾಮಾನ್ಯ ಮಟ್ಟದವರೆಗೂ ಎಂಥ ದುಷ್ಪರಿಣಾಮ ಉಂಟಾಗುತ್ತದೆ ಮತ್ತು ಇಡೀ ಸಮಾಜ ಜೀವನದಲ್ಲಿ ಅವನತಿ ಎಷ್ಟು ಸಾರ್ವತ್ರಿಕವಾಗುತ್ತದೆ ಎಂಬುದಕ್ಕೆ ನಿದರ್ಶನವಾಗಿ ಭರಮ, ಮಹೇಂದ್ರಧವಳ ಪಾತ್ರಗಳು ಸೃಷ್ಟಿಯಾಗಿವೆ. ನಿರ್ಮಲಾ, ವಾಮ, ಗಹನಾನಂದ, ಆಸಕ್ತಿಯನ್ನು ಕೆರಳಿಸುವ ಪಾತ್ರಗಳಾಗಿ ಮೂಡಿವೆ. ವೇದಮೂರ್ತಿಯಂಥವರು ಅಂಧಸಂಪ್ರದಾಯದ, ಡಂಭಾಚಾರದ ಪ್ರತಿಮೂರ್ತಿಯಾಗಿದ್ದಾರೆ.

ಯಾವುದೇ ಮನೆತನ ಆಗಬಹುದು, ಯಾವುದೇ ಸಾಮ್ರಾಜ್ಯ ಆಗಬಹುದು, ಯಜಮನನ ಅನಾಯಕತ್ವ ಎಂತ ಒಂದು ದುರಂತಕ್ಕೆ ಈಡುಮಾಡಬಹುದು ಎನ್ನುವ ಸಾರ್ವಕಾಲಿಕ, ಸಾರ್ವದೇಶಿಕ ಸತ್ಯವನ್ನು ಪ್ರತಿಪಾದಿಸುವಲ್ಲಿ ಅಗ್ನಿವರ್ಣ ಕಾದಂಬರಿ ಮುಖ್ಯವಾಗುತ್ತದೆ. ಒಂದು ಚಾರಿತ್ರಿಕ ವಸ್ತುವೇ ಆಗಬಹುದು ಅಥವಾ ಒಂದು ಪೌರಾಣಿಕವೇ ಆಗಬಹುದು. ಅಂಥ ಒಂದು ವಸ್ತುವನ್ನು ಈ ಕಾದಂಬರಿ ಒಳಗೊಂಡು ಉದ್ದಕ್ಕೂ ತನ್ನೆಲ್ಲ ಸಾರ್ಥಕತೆಯಿಂದ ಗಮನಾರ್ಹವಾದ ಕೃತಿಯಾಗಿದೆ. ಅನೇಕ ವಿಭಿನ್ನ ಸ್ವಭಾವಗಳ ಪಾತ್ರಗಳ, ಪಾತ್ರಗಳ ಭಾವೋದ್ವೇಗಕ್ಕೆ ತಕ್ಕ ರಸನಿರೂಪಣೆ, ಸೂಕ್ಷ್ಮ ಸಂಕೀರ್ಣ ಭಾವನೆಗಳ ತೊಳಲಾಟ, ಕುತೂಹಲಕಾರಿ ಘಟನೆಗಳು, ಆಸಕ್ತಿಯನ್ನು ಹೆಚ್ಚಿಸುವ ಸಂಭಾಷಣೆ, ತೀಕ್ಷ್ಣಶೈಲಿ ಇವೆಲ್ಲ ಕಾದಂಬರಿಯ ಸಮಷ್ಟಿಸೌಷ್ಠವಕ್ಕೆ ಹೆಚ್ಚಿನ ಮಹತ್ವ ಉಂಟುಮಾಡಿವೆ. ಅಗ್ನಿವರ್ಣನ ಜೀವದಕಥೆಯನ್ನು ನೇಯುವುದರಲ್ಲಿ ಕಾದಂಬರಿಕಾರರು ಇಡೀ ಒಂದು ಯುಗದ ಬದುಕನ್ನು ತನ್ನ ಕುಸುರಿಕೆಲಸದ ಕಲಾಪೂರ್ಣ ನೈಪುಣ್ಯತೆಯಿಂದ ವರ್ಣಮಯವಾಗಿ ಚಿತ್ರಿಸಿದ್ದಾರೆ, ನೃತ್ಯ,ಸಂಗೀತ, ಸೌಂದರ್ಯ, ಭೊಗ, ಶೃಂಗಾರ – ಈ ಮೃದುಮಧುರ ಮನೋಹರ ಚಿತ್ರಗಳ ಹಿಂದೆ ಕುತಂತ್ರದ, ಕುತ್ಸಿತ ಬುದ್ಧಿಯ ಸ್ರೋತ ನಿದನವಾಗಿ ಹರಿದು ಕಡೆಗೆ ಎಲ್ಲವನ್ನೂ ವಿನಾಸದಲ್ಲಿ ಮುಳುಗಿಸುವ ತಂತ್ರ ಮಾರ್ಮಿಕವಾಗಿ ಕಾದಂಬರಿಯ ಉದ್ದಕ್ಕೂ ಒಡಮೂಡಿದೆ.

ಒಳ್ಳೆಯ ವಿಮರ್ಶಕನಿಗೆ, ಸದಭಿರುಚಿಯ ಸಾಹಿತಿಗೆ ಒಂದು ಶ್ರೇಷ್ಠ ಕೃತಿಯನ್ನು ಓದಿದ ಸಂತೃಪ್ತಿ ತಂದುಕೊಡುವುದರಲ್ಲಿ ‘ಅಗ್ನಿವರ್ಣ’ ಕಾದಂಬರಿ ಅತ್ಯಂತ ಯಶಸ್ವಿಯಗಿದೆ. ಇಂದಿನ ಪರಿಸರದಲ್ಲಿ ಇಂಥ ಒಂದು ವೈಚಾರಿಕ ಕೃತಿಯನ್ನು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಪ್ರೊ || ರಂ. ಶ್ರೀ. ಮುಗಳಿಯವರು ಅಭಿನಂದನೆಗೆ ಪಾತ್ರರಾಗಿದ್ದಾರೆ.

. ಸಿಂಗಾರೆವ್ವ ಮತ್ತು ಅರಮನೆ : ಚಂದ್ರಶೇಖರ ಕಂಬಾರ

ಇತ್ತೀಚಿನ ವರ್ಷಗಳಲ್ಲಿ ನಾನು ತುಂಬ ಮೆಚ್ಚಿಕೊಂಡ ಕಾದಂಬರಿ ‘ಸಿಂಗಾರೆವ್ವ ಮತ್ತು ಅರಮನೆ.’ ಈ ಅರಮನೆ ಶಿವಪುರದಲ್ಲಿದ್ದರೂ ಆ ಊರಿನ ಚರಿತ್ರೆಯೇನೂ ಇದರಲ್ಲಿ ಬರುವುದಿಲ್ಲ. ಅರಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಊರಿನ ಪ್ರತಿಕ್ರಿಯೆಗಳು ಮಾತ್ರ ಬರುತ್ತವೆ. ಹೀಗಾಗಿ ಅರಮನೆ ಮತ್ತು ಆ ಅರಮನೆಗೆ ಬಂದ ಕೊನೆಯ ಸೊಸೆ ಸಿಂಗಾರೆವ್ವ ಇವರಿಬ್ಬರ ಕಥೆಯೇ ಇಲ್ಲಿ ಪ್ರಧಾನವಾಗಿದೆ. ಇಡೀ ಕಥೆ ಇಬ್ಬರಿಂದ ನಿರೂಪಿತವಾಗಿದೆ. ಶೀನಿಂಗವ್ವ ಮುಖ್ಯ ನಿರೂಪಕಿಯಾಗಿರುವಂತೆ ಸಿಂಗಾರೆವ್ವನ ಆಪ್ತ ಸೇವಕಿಯಾಗಿ, ಸಖಿಯಾಗಿ ಮುಖ್ಯ ಪಾತ್ರವೂ ಆಗಿದ್ದಾಳೆ. ಆತ್ಮೀಯವಾಗಿ ಕಂಡ ಮತ್ತು ಭಾಗವಹಿಸಿದ ಸಿಂಗಾರೆವ್ವನ ಜೀವನದ ಘಟನೆಗಳನ್ನು ಹೇಳಿದರೆ, ಆ ಘಟನೆಗಳಿಗೆ ಊರವರ ಸಾಮೂಹಿಕ ಪ್ರತಿಕ್ರಿಯೆಗಳು ಹೇಗಿದ್ದವೆನ್ನುವುದನ್ನು ಲೇಖಕರು ಹೇಳುತ್ತಾರೆ. ಈ ಪ್ರತಿಕ್ರಿಯೆಗಳು ಲೇಖಕರು ಬಾಲಕರಾಗಿದ್ದಾಗ ಕಂಡವುಗಳೆಂಬುದನ್ನು ಮರೆಯಬಾರದು. ಆಗಾಗ ಬಂದು ಮರೆಯಾಗುವ ಹಿರಿಯ ದೊರೆಸಾನಿ, ಹುಚ್ಚಯ್ಯ, ಶೆಟ್ಟಿ, ಮುಂತಾದ ಸಣ್ಣ ಪಾತ್ರಗಳನ್ನು ಬಿಟ್ಟರೆ ಸಿಂಗಾರೆವ್ವ, ಶೀನಿಂಗವ್ವ, ಮರ್ಯಾ, ಗೌಡ ಮತ್ತು ಸರಗಂ ದೇಸಾಯಿ ಇಲ್ಲಿಯ ಮುಖ್ಯ ಪಾತ್ರಗಳು, ಉಳಿದವು ಇವರ ಜೀವನದಲ್ಲಿ ಹಾಸುಹೊಕ್ಕಾಗಿ ಬಂದು ಇಬ್ಬರ ಬದುಕಿನಲ್ಲೂ ಪರಿಣಾಮವುಳಿಸಿ ಅವು ಬದಲಾಗುವಂತೆ ಅಥವಾ ಪಾತ್ರಗಳಾಗಿ ಬೆಳೆಯುವಂತೆ ಮಾಡುತ್ತವೆ.

ಸಿಂಗಾರೆವ್ವನ ತಂದೆ ಗೌಡ ‘ಮಹಾ ಕೊಳಕ’ ಸ್ವಾರ್ಥಕ್ಕಾಗಿ ಒಬ್ಬಳೇ ಮಗಳನ್ನು ಹೆಣಕ್ಕೆ ಮದುವೆ ಮಾಡಿಕೊಡುವುದಕ್ಕೂ ಹೇಸಲಾರದವನು. ಎರಡನೆಯ ಮದುವೆ ಮಾಡಿಕೊಟ್ಟಾಗಲೂ ಮೊದಲೇ ರೋಗಿಯಾದ, ಬಹುಬೇಗನೆ ಸಾಯಬಹುದೆಂದು ನಂಬಲಾದ ಸರಗಂ ದೇಸಾಯಿಗೇ ಕೊಡುತ್ತಾನೆ. ಆತ ಬೇಗ ಸತ್ತರೆ ಆ ಮೂಲಕ ಆ ಅರಮನೆ ಮತ್ತು ಅವರ ಆಸ್ತಿ ತನಗೇ ಆಗುವುದೆಂಬ ದುರಾಲೋಚನೆ ಆತನದು. ಆತ ಕೊಳಕ ಮತ್ತು ಚಿಕ್ಕವಯಸ್ಸಿನವನೆಂದು ಶೀನಿಂಗವ್ವ ಮೊದಲಿನಿಂದಲೂ ಹೇಳುತ್ತ ಬರುತ್ತಾಳೆ. ದೇಸಾಯಿ ನಿರೀಕ್ಷಿಸಿದ್ದಂತೆ ಸಾಯಲಿಲ್ಲವಾದ್ದರಿಂದ ಆತನಿಗೆ ನಿರಾಸೆಯೇ ಆಯ್ತು. ಹಾಗೆ ಆದದ್ದೇ ಆದರೆ ಮಗಳು ವಿಧವೆಯಾಗುತ್ತಾಳೆಂಬ ಕಾಳಜಿ ಅವನಲ್ಲಿ ಇಲ್ಲವೇ ಇಲ್ಲ. ಸಾಯಲಿಲ್ಲವಾದರೆ ಮಕ್ಕಳಾಗಿಲ್ಲ ಅಥವಾ ಆಗುವುದು ಸಾಧ್ಯವಿಲ್ಲವಲ್ಲ – ಅದಕ್ಕೆ ತನಗೆ ಹೊಸದಾಗಿ ಹುಟ್ಟಿದ ಮಗನಿಗೇ ಈ ಆಸ್ತಿಯನ್ನು ಮಾಡಲಿ ಎಂಬುದು ಅವನಾಸೆ. ಈ ಹಂತದಲ್ಲಿಯೇ ಸಿಂಗಾರೆವ್ವ ಪ್ರತಿಭಟಿಸುತ್ತಾಳೆ ಮತ್ತು ಹೇಗಾದರು ಮಾಡಿ ಮಕ್ಕಳನ್ನು ಪಡೆದುಗೌಡನಿಗೆ ನಿರಾಸೆ ಮಾಡಬೇಕೆಂದು ಹಟ ತೊಡುತ್ತಾಳೆ. ಆಗಾಗ ಕರೆಯದೆ ಅರಮನೆಗೆ ಬಂದು ತನ್ನ ಮಗಳ ಈ ಹಟ ಇನ್ನೂ ದೃಢವಾಗುವ ಹಾಗೆ ಮಾಡುತ್ತಾನೆ. ಅವನಲ್ಲಿ ಮಾನವೀಯತೆಯ ಅಲ್ಪಾಂಶವಾದರೂ ಇದ್ದಿದ್ದರೆ, ಮಗಳ ಬಗೆಗೆ ಕಿಂಚಿತ್ತಾದರೂ ಅಂತಃಕರಣ ಇದ್ದಿದ್ದರೆ ಬಹುಶಃ ಸಿಂಗಾರೆವ್ವನ ಜೀವನ ದುರಂತವಾಗುತ್ತಿರಲಿಲ್ಲವೇನೋ, ಮರೆಪ್ಪನ ಹೊಲದೋಚಿ, ಅವನ ತಾಯಿಯನ್ನು ಅಕ್ರಮವಾಗಿ ಇಟ್ಟುಕೊಂಡು, ಮುಂದೆ ಅವನೊಂದಿಗೇ ವೈರ ಸಾಧಿಸಹೋಗಿ ಮರೆಪ್ಪನ ಕೈಯಲ್ಲೇ ಕೊಲೆಯಾಗುತ್ತಾನೆ. ಅವನ ವ್ಯಕ್ತಿತ್ವವನ್ನು ಶೀನಿಮಗವ್ವ ಪ್ರಾರಂಭದಲ್ಲಿ ಹೀಗೆ ಹೇಳುತ್ತಾಳೆ: “ಅವನ ಚಿಕ್ಕ ಚಂಚಲ ಕಣ್ಣು ಬಹಳ ಹೊತ್ತು ಒಂದು ವಸ್ತುವಿನ ಮೇಲೆ ಕೂರುತ್ತಲೇ ಇರಲಿಲ್ಲ. ಅವನು ಯಾವಾಗಲೂ ವಿಚಾರ ಮಾಡುತ್ತಿದ್ದುದು ಒಂದೇ. ಯಾರ ಬಳಿ ತುಪ್ಪ ಇದೆ? ಮತ್ತು ಆ ತುಪ್ಪದಲ್ಲಿ ತನ್ನ ರೊಟ್ಟಿ ಹ್ಯಾಗೆ ಜಾರಿ ಬೀಳಬೇಕು? ಹಾಗೆ ಜಾರಿ ಬೀಳದಿದ್ದರೆ ಆ ತುಪ್ಪವನ್ನು ಹ್ಯಾಗೆ ಅಪಹರಿಸಬೇಕು? ಅದೊಮ್ಮೆ ಗೊತ್ತಾದರಾಯ್ತು. ಕಾರ್ಯೋನ್ಮುಖನಾಗುತ್ತಿದ್ದ. ಅವನೊಮ್ಮೆ ಕಾರ್ಯೋನ್ಮುಖನಾದರಾಯ್ತು, ಖಂಡಿತ ಅದರಲ್ಲಿ ಯಶಸ್ಸು ಗಳಿಸುತ್ತಿದ್ದ. ಅದಕ್ಕೇ ಅವನು ತನ್ನ ಅದೃಷ್ಟದಲ್ಲಿ ಭಾರೀ ನಂಬಿಕೆಯಿಟ್ಟಿದ್ದ…. ಇಷ್ಟು ತಿಳಿಯಪ್ಪ ; ನರಮನುಷ್ಯನಿಗೆ ಹಣ ಬೇಕು ಆಸ್ತಿ ಬೇಕು ಮತ್ತು ಅದಕ್ಕಾಗಿ ಎಂಥ ಹೀನ ಕೆಲಸ ಮಾಡಿದರೂ ಕೊಂದರೂ ತಪ್ಪಿಲ್ಲ ಎನ್ನುವುದು ಆತ ಒಳಗೊಳಗೇ ನಂಬಿದ ಸಿದ್ಧಾಂತವಾಗಿತ್ತು.” ಶೀನಿಂಗವ್ವನ ಈ ಮಾತು ಆತನ ಇಡೀ ವ್ಯಕ್ತಿತ್ವಕ್ಕೆ ಸರಿಯಾಗಿ ಹೊಂದುತ್ತದೆ. ಮುಂದೆ ಇದೇ ಕಥೆಯಲ್ಲಿಯ ಅವನ ನಡವಳಿಕೆ, ಮೇಲಿನ ಮಾತುಗಳನ್ನೇ ಸಮರ್ಥಿಸುತ್ತದೆ.

ಸರಗಂ ದೇಸಾಯಿ ಸಿಂಗಾರೆವ್ವನ ಎರಡನೇ ಗಂಡ. ಅರಮನೆಯ ಕೊನೆಯ ದೇಸಾಯಿ, ಖರ್ಚಿಗೆ ಆಗೀಗ ಅಷ್ಟಿಷ್ಟು ಆಸ್ತಿ ಮಾರುತ್ತ ಬದುಕಿದವನು. ಕಲಾವಿದನೆಂಬ ಹೆಮ್ಮೆ ಬೇರೆ ಇತ್ತು ಇವನಿಗೆ, ಬಯಲಾಟದ ಖಯಾಲಿಯವನು. ಹೆಣ್ಣು ಪಾರ್ಟು ಮಾಡುವುದಕ್ಕೆ ಲಾಯಖ್ಕಾದರೂ ದೇಸಗತಿಯ ಅಹಂಕಾರವನ್ನು ತೃಪ್ತಿಪಡಿಸುವುದಕ್ಕೆ ಸದಾ ರಾಜನ ಪಾರ್ಟನ್ನೇ ಮಡುತ್ತಿದ್ದವನು. “ತಾನು ದೇಸಾಯಿಯೆಂಬ, ಈ ಅರಮನೆಯ ಯಜಮಾನನೆಂಬ, ಒಂದು ಕಾಲದ ವೈಭವಕ್ಕೆ ಮಾಲೀಕನೆಂಬ ಹೆಮ್ಮೆ ಇವನ ಒಳಗೊಳಗೇ ಇತ್ತು. ಸಾಧ್ಯವಿದ್ದಿದ್ದರೆ ಅದನ್ನು ಚಲಾಯಿಸಲು ಈಗಲೂ ಸಿದ್ಧನೇ. ಆದರೆ ಅದರ ಪ್ರಭಾವದಿಂದ ಏನನ್ನೂ ಸಾಧಿಸಲಿಕ್ಕೆ ಆಗುವುದಿಲ್ಲ ಎಂಬ ಕೊರಗು ಮಾತ್ರ ಆತನ ಮುಖದಲ್ಲಿ ಕಾಣುತ್ತಿತ್ತು. ಹೀಗಾಗಿ ಚಲಾವಣೆ ಇಲ್ಲದ ನಾಣ್ಯಗಳ ದೊಡ್ಡ ನಿಧಿಯ ಯಜಮಾನನಂತಿದ್ದ” ಎಂದು ಶೀನಿಂಗವ್ವ ಹೇಳುತ್ತಾಳೆ. ತನ್ನ ವಂಶದ ಹಿಂದಿನವರ ಗುಣಗಳನ್ನಲ್ಲದಿದ್ದರೂ ಅವರ ರೋಗವನ್ನು ತನ್ನ ಜೊತೆಗೆ ತಂದವನು – ಎಂದೂ ಲೇಖಕರು ಹೇಳುತ್ತಾರೆ.

ಈ ರೋಗವೇ ಕಾರಣವಾಗಿ ಸಿಂಗಾರೆವ್ವನ ಬಗೆಗಿನ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಹೆಚ್ಚೇನು, ಒಬ್ಬ ಗಂಡ ಹೆಂಡತಿಯ ಬಗೆಗೆ ತೋರುವ ಕಾಳಜಿಯನ್ನೂ ತೋರಿಸಲಿಲ್ಲ. ಈ ರೋಗದಿಂದಾಗಿಯೇ ಅವನು ಶೆಟ್ಟಿಯ ಆಮಿಷಕ್ಕೆ ಒಳಗಾಗುತ್ತಾನೆ. ಅರಮನೆಯ ಹರಾಜಿಗೆ ಸಿದ್ಧನಾಗುತ್ತಾನೆ. ಕೊನೆಗೆ ಮರೆಪ್ಪನ ಆಮಿಷಕ್ಕೂ ಒಳಗಾಗುತ್ತಾನೆ. ಅರಮನೆಯಮತೆ ಸಿಂಗಾರೆವ್ವ ಕೂಡ ಅವನಿಗೆ ಅನುಮನದ ವಸ್ತು. ಪೋಜದಾರ ದೊರೆಸಾನಿಯನ್ನು ಕರೆಸಬೇಕೆಂದಾಗ ಪ್ರತಿಭಟಿಸುತ್ತಾನೆ ದೊರೆಸಾನಿ ತನಗಲ್ಲದೆ ಬೇರೆಯವರಿಗೆ ಬಸಿರಾದುದನ್ನು ಕಂಡು ಕೊರಗುತ್ತಾನೆ. ಕೊನೆಗೆ ದೊರೆಸಾನಿಯೇ ತನಗೆ ತನ್ನ ಬತ್ತಲೆ ದೇಹ ತೋರಿಸಿದವಳು ಎಂದು ಗೊತ್ತಾದಾಗ ಒಂದು ಸುಂದರ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.

ಮರೆಪ್ಪ ಸಿಂಗಾರೆವ್ವನಿಗೆ ಪೂರಕವಾಗಿ ಬರುವ ಇನ್ನೊಂದು ಪಾತ್ರ. ಎಳೆಯ ವಯಸ್ಸಿನಲ್ಲೇ ಗೌಡನ ವೈರ ಕಟ್ಟಿಕೊಂಡವನು ಮತ್ತು ಅದನ್ನು ನಿಭಾಯಿಸಿದವನು. ಗೌಡ ತನ್ನ ತಂದೆಯ ಹೊಲವನ್ನು ಅನ್ಯಾಯವಾಗಿ ಕಬಳಿಸಿ ತನ್ನ ತಾಯಿಯ ಹಾಸಿಗೆಗೂ ಕಾಲು ಚಾಚಿದವನೆಂಬ ಸಿಟ್ಟು ಅವನಲ್ಲಿ ಸಹಜವಾಗಿಯೇ ಇತ್ತು. ವಯಸ್ಸು ಚಿಕ್ಕದಾದರೂ ವೈರ ಸಾಧಿಸುತ್ತಾ ಹೊರಟವನು. ಹೊರ ನೋಟಕ್ಕೆ ಸಿಂಗಾರೆವ್ವ ಮರ್ಯಾ – ಇವರಲ್ಲಿ ದ್ವೇಷವಿದ್ದಿತೆಂದು ಕಂಡರೂ ಮರೆಪ್ಪ ಒಳಗೊಳಗೇ ಅವಳನ್ನು ಪ್ರೀತಿಸುತ್ತಿದ್ದನೆಂಬಂತೆ ಕಥೆಯಿದೆಯೆಂದು ನನ್ನ ಭಾವನೆ. ಆದರೆ ತನ್ನ ಪ್ರೀತಿಯನ್ನು ಒರಟಾಗಿ ಪ್ರಕಟಿಸಿದ್ದರಿಂದ ಸಿಂಗಾರೆವ್ವ ಅವನ ಸಮೀಪ ಹೋಗಲಿಲ್ಲ. ಜೊತೆಗೆ ಅವನ ಒರಟುತನದ ಬಗ್ಗೆ ಹೆದರಲೂ ಆರಂಭಿಸಿದಳು. ಮುಂದೆ ಮರೆಪ್ಪ ತನ್ನ ತಾಯಿಯನ್ನು ಕೊಂದು ಗೌಡನನ್ನು ಕೊಲ್ಲಲಾರದೆ ಪರಾರಿಯಾದ ಮೇಲೆ ಅವನ ಕಥೆ ಅನೇಕ ಆಶ್ವಾಸಗಳಾಗುವತನಕ ಬರುವುದಿಲ್ಲ. ಆದರೆ ಮರೆಪ್ಪನಲ್ಲಿ ಮಾತ್ರ ಗೌಡನ ಸೇಡು ಹಸಿರಾಗಿ ಹಾಗೆಯೇ ಉಳಿದಿದೆ. ಮೇಲೆ ಗೌಡನ ಸೇಡು ತೀರಿಸಿಕೊಳ್ಳುವುದು ಹಾಗೂ ಸಿಂಗಾರೆವ್ವನಿಗೆ ಹಿಂಸೆ ಕೊಡುವುದು ಎರಡೂ ಬೇರೆ ಅಲ್ಲವೆಂಬಂತೆ ವರ್ತಿಸುತ್ತಾನೆ. ಗೌಡ ಮರೆಪ್ಪನಿಗೆ ಹೇಗೋ ಹಾಗೆಯೇ ಸಿಂಗಾರೆವ್ವನ ಬಗ್ಗೆಯೂ ಕ್ರೂರವಾಗಿರುವುದನ್ನು ಆತ ಗಮನಿಸದೇ ಹೋಗುತ್ತಾನೆ, ಇಕ್ಕಟ್ಟಿನ ಸಂದರ್ಭದಲ್ಲಿ ಸಿಂಗಾರೆವ್ವನನ್ನು ಕೂಡುವುದು, ಸೇಡು ಮತ್ತು ಪ್ರೀತಿ ಎರಡೂ ಕ್ರಿಯೆಗಳು ಒಂದೆಂಬಂತೆ ನಡೆದುಕೊಳ್ಳುತ್ತಾನೆ, ಒಮ್ಮೆ ಗೌಡನನ್ನು ತೀರಿಸಿದ ಮೇಲೆ ಅವನಲ್ಲಿದ್ದ ಸೇಡು ಮರೆಯಾಗಿ ಪ್ರೀತಿ ಮಾತ್ರ ಉಳಿಯುತ್ತದೆ. ಮುಂದೆ ಸಿಂಗಾರೆವ್ವನಿಗೆ ಬಹಳ ಅನುಕೂಲವಾಗಿ ನಡೆದುಕೊಳ್ಳುತ್ತಾನೆ. ಹೊಳೆಯಲ್ಲಿಯ ಕಲ್ಲು ಸವೆದು ಸವೆದು ಲಿಂಗವಾಗುವ ಹಾಗೆ ಇವನೂ ಲಿಂಗವಾದ ಆತ್ಮವಾದ. ಮುಂದೆ ಸಿಂಗಾರೆವ್ವನಿಗೆ ಅನ್ಯಾಯ ಮಾಡಿ ದೇಸಾಯಿ ಅರಮನೆ ಮಾರುತ್ತಿರುವ ವಿಚರ ತಿಳಿದು ಅವಳಿಗೆ ಸಹಾಯ ಮಾಡುವುದಕ್ಕಾಗಿ ಉಪಾಯ ಹೂಡುತ್ತಾನೆ. ಶೆಟ್ಟಿಯ ಉಪಾಯದಿಂದಲೇ ದೇಸಾಯಿಯ ದೌರ್ಬಲ್ಯ ಬಳಸಿಕೊಂಡು ಅರಮನೆ ಉಳಿಸುತ್ತಾನೆ. ಮುಂದೆ ಸಿಂಗಾರೆವ್ವನನ್ನು ಉಳಿಸಲಾಗದೆ ಅವಳು ಸೆರೆಮನೆಯಲ್ಲೇ ಅಸುನೀಗಿದಾಗ ಇವನೂ ಪ್ರಾಣ ಬಿಡುತ್ತಾನೆ.

ಸಿಂಗಾರೆವ್ವ ಇಲ್ಲಿಯ ಪ್ರಮುಖ ಪಾತ್ರ ಮತ್ತು ಇದು ಮುಖ್ಯವಾಗಿ ಅವಳ ಕಥೆ. ಅವಳೇ ಈ ವಿಚಿತ್ರ ಕಾದಂಬರಿಯ ದುರಂತ ನಾಯಕಿ. ಯಾವ ದೃಷ್ಟಿಕೋನದಿಂದ ನೋಡಿದರೂ ಅವಳೊಬ್ಬ ದುರಂತ ನಾಯಕಿಯಾಗಿ ನಮ್ಮ ಮನಸ್ಸನ್ನು ಸೆಳೆಯುತ್ತಾಳೆ. ಅವಳ ಪಾತ್ರವನ್ನು ನಾವು ಯಾವುದೇ ಶ್ರೇಷ್ಠ ಕೃತಿಯ ದುರಂತ ಪಾತ್ರದೊಂದಿಗೆ ಹೋಲಿಸಬಹುದು. ಅವಳು ತುಂಬ ಮೃದು ಸ್ವಭಾವದವಳು, ಹೂವಿನಂಥ ಮನಸ್ಸಿನವಳು. ಯಾರಿಗೂ ನೋವುಂಟು ಮಾಡುವವಳಲ್ಲ. ತನ್ನ ಸುತ್ತಲಿನ ಯಾರು ತುಸುವೇ ವ್ಯಥೆಗೊಂಡರೂ ಇವಳೂ ದುಃಖಿಸುವಂಥವಳು ಮರೆಪ್ಪನ ಬಗ್ಗೆ ಆಕೆ ಕರುಣೆಗೊಳ್ಳುವುದು ಈ ಕಾರಣಕ್ಕೆ, ಅವಳದು ಕವಿ ಹೃದಯ, ಪ್ರತಿ ವರ್ಷ ಕೋಗಿಲೆಯ ಸ್ವರವನ್ನು ಮೊದಲು ಅವಳೇ ಕೇಳಬೇಕು, ಕಿಟಕಿಯಿಂದ ಹುಣಸೇ ಮೆಳೆಯನ್ನು ನೋಡುವಾಗಲೂ ಉಲ್ಲಸಿತಳಾಗುತ್ತಾಳೆ. ಮುಂದೆ ತೋಟಕ್ಕೆ ಹೋದಾಗ ಅವಳು ನಿಸರ್ಗದ ಹಸಿರಿನಲ್ಲಿ ಆನಂದ ಪಡುತ್ತಾಳೆ.

ಮಕ್ಕಳ ಅಪೇಕ್ಷೆ ಅವಳ ಒಳಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತೆಂದು ತೋರುತ್ತದೆ. ಶೀನಿಂಗವ್ವನ ಜೊತೆ ಅವಳು ಆಟ ಆಡುವುದು ಗಂಡ ಹೆಂಡತಿಯಾಗಿ, ಮಕ್ಕಳ ತಾಯಾಗಿ, ಕಪಿಲೆ ಕರು ಹಾಕಿದರೆ ಹಿಗ್ಗುತ್ತಾಲೆ, ತನ್ನ ಎಳೆಯ ಮನಸ್ಸಿನಲ್ಲಿ ಆಗಲೇ ಮನೆ ತುಂಬ ಮಕ್ಕಳಿರುವ ತಾಯಾಗಿ ಕನಸು ಹೆಣೆಯುತ್ತಾಳೆ, ಆದರೆ ತಂದೆಯ ಕ್ರೂರ ನಂಜಿಗೆ ಬಲಿಯಾಗಿ ಹೆಣದ ಜೊತೆ, ನಂತರ ಸರಗು ದೇಸಾಯಿಯ ಜೊತೆಗೆ ಮದುವೆಯಾಗುವ ಪ್ರಸಂಗ ಬರುತ್ತದೆ. ಇಷ್ಟಾದರು ಒಳ್ಳೆಯ ಮಗಳಾಗಿ ವರ್ತಿಸುತ್ತಾಳೆ. ಹೆಣದ ಜೊತೆ ಮತ್ತು ಸರಗಂ ದೇಸಾಯಿಯ ಜೊತೆ ಮದುವೆಯಾಗಬೇಕಾಗಿ ಬಂದಾಗ ಯಾವ ಪ್ರತಿಭಟನೆಯಿಲ್ಲದೆ ಒಪ್ಪಿಕೊಳ್ಳುತ್ತಾಳೆ, ಅದರೆ ಯಾವಾಗ ಗೌಡ ಬಂದು ಇವಳ ಸಂತಾನ ಶಕ್ತಿಯ ಬಗ್ಗೆ ಅವಮಾನ ವ್ಯಕ್ತ ಪಡಿಸುವನೋ ಇವಳ ಎಳೆತನದ ಕನಸುಗಳಿಗೆ ಬೆಂಕಿ ಇಡುವನೋ ಆಗ ಮಾತ್ರ ಕೆಣಕಿದ ಸರ್ಪವಾಗುತ್ತಾಳೆ. ಮಕ್ಕಳನ್ನು ಪಡೆದೇ ಪಡೆಯುವೆನೆಂಬ ಛಲ ತೊಡುತ್ತಾಳೆ. ಮುಂದಿನ ಕಥೆಯೆಲ್ಲ ಅವಳ ಈ ಛಲದ ಪರಿಣಾಮವಾಗಿ ನಡೆಯುವಮಥದು.

ದೇಸಾಯಿಯ ಅರಮನೆ ಶಾಪಗ್ರಸ್ಥವಾಗಿ ಅಲ್ಲಿ ಮಕ್ಕಳಾಗುವಂತಿಲ್ಲ. ದೇಸಾಯಿ ರೋಗದವನು. ತಂದೆ ಇಂಥ ಕ್ರೂರಿ. ಅಂದರೆ ಇಡೀ ವ್ಯಕ್ತಿತ್ವಗಳು ಮತ್ತು ಅರಮನೆ ಅವಳ ಕನಸಿಗೆ ಪ್ರತಿಕೂಲವಾಗಿವೆ. ಇದನ್ನೆಲ್ಲ ಗೆದ್ದು ಮಕ್ಕಳನ್ನು ಪಡೆಯುವ ತವಕ ಆಕೆಯದು. ಆದ್ದರಿಂದ ವಂಶಕ್ಕಿದ್ದ ಶಾಪವನ್ನು ಮೀರಿ ಹುಚ್ಚಯ್ಯನ ಆಮಿಷಕ್ಕೆ ಒಳಗಾಗುತ್ತಾಳೆ. ಒಂದು ದುರ್ದೈವ ಕಳೆಯಿತಂದರೆ ಅದು ಇನ್ನೊಂದು ದುರ್ದೈವಕ್ಕೆ ಅವಳನ್ನು ಹಸ್ತಾಂತರಿಸಿ ಹಿಂದೆ ಸರಿಯುತ್ತದೆ. ಈಗ ಬಂದವನು ಮರೆಪ್ಪ. ಅವನೋ ಗೌಡನ ಸೇಡಿನಿಂದ ಕುದಿಯುವಂಥವನು, ಸೇಡಿನ ಉರಿಯಲ್ಲಿ ವಿವೇಕ ಕಳೆದುಕೊಂಡವನು. ಸೇಡು ತೀರಿಸಿಕೊಳ್ಳಲು ಗೌಡ ಸಿಕ್ಕದಿದ್ದರೆ ಬೇಡ, ಗೌಡನ ಮಗಳಾದರೂ ಸರಿ – ಎಂಬ ತೀರ್ಮಾನಕ್ಕೆ ಬಂದವನು. ಸಾರಾಸಾರ ಯೋಚನೆ ಮಾಡದೆ ಸಿಂಗಾರೆವ್ವನನ್ನೇ ಹಿಂಸಿಸತೊಡಗುತ್ತಾನೆ. ಅಕಸ್ಮಾತ್ತಾಗಿ ಆದರೂ ಮಕ್ಕಳಾಗಲೆಂದರೆ ಆ ಗರ್ಭವೂ ಇಳಿಯುತ್ತದೆ.

ದೇಸಾಯಿಯ ರೋಗ ವಾಸಿ ಮಾಡಿ ಅವನನ್ನು ದಾರಿಗೆ ತರೋನವೆಂದರೆ ಅವನು ರೋಗದ ಕೈಗೊಂಬೆಯಾದವನು. ಈ ಮಧ್ಯೆ ನಿಸರ್ಗ ತನ್ನ ಮುಂದುವರಿಕೆಯ ಹಂಬಲವನ್ನು ತೀರಾ ಅವ್ಯಕ್ತವಾಗಿ ಅವಳಲ್ಲಿ ಪ್ರಚೋದಿಸುತ್ತಲೇ ಇದೆ. ಹುಣಸೇ ಮೆಳೆಯಿಂದ ಅವಳು ಪ್ರಭಾವಿತವಾದಾಗೆಲ್ಲ ಅವಳಲ್ಲಿ ಮಕ್ಕಳಾಸೆ ಹೆಚ್ಚಾಗುವುದನ್ನು ಗಮನಿಸಬೇಕು. ಹುಣಸೇ ಮೆಳೆ ಕಿಟಕಿಯ ಫ್ರೇಮಿನಿಂದ ಅರಮನೆಯ ಒಳಕ್ಕಿಳಿದು ಅವಳ ಹೃದಯದಲ್ಲಿ ಸ್ಥಾನ ಪಡೆಯುತ್ತದೆ. ಮುಂದೆ ಮರೆಪ್ಪನೊಂದಿಗೆ ಕೂಡಿದಾಗ ಪಾಪಪ್ರಜ್ಞೆ ಕಾಡತೊಡಗುತ್ತದೆ. ದೇಸಾಯಿಯ ಮಾತು ಅವಳನ್ನು ಅಲಗನಿಂದೆಂಬಂತೆ ಚುಚ್ಚುತ್ತದೆ. ಈ ಒಳಹಿಂಸೆಯಿಂದ ಪಾರಾಗಲಿಕ್ಕಾಗಿ ಕುಡಿತದ ಚಟಕ್ಕೂ ಬಲಿಯಾಗುತ್ತಾಳೆ. ಕೊನೆಗೂ ಅವಳು ಹುಟ್ಟಿನಿಂದ ಬಯಸುತ್ತಾ ಬಂದ ಬಸಿರು ಸಿಕ್ಕಿತೆಂದಾಗ ಸಂತೋಷಪಡಿಸಲಿಕ್ಕೂ ಅವಕಾಶವಾಗುವುದಿಲ್ಲ. ಅವಳು ಅರಮನೆಗೆ ಬಂದಾಗ ಅಷ್ಟೊಂದು ಕಂಬಗಳಿರುವುದನ್ನು ನೋಡಿ ಕೊನೇ ಪಕ್ಷ ಕಂಬಕ್ಕೊಂದರಂತೆ ಮಕ್ಕಳನ್ನು ಹಡೆಯಬೇಕೆಂದು ಕನಸು ಕಂಡಳಂತೆ. ಆದರೆ ಬೇರೆ ಸೀಮೆಯಿಂದ ಬರುವ ಅತಿತಿ ತನ್ನ ಗರ್ಭದಲ್ಲಿದ್ದಾಗ ಅದನ್ನು ಸ್ವೀಕರಿಸಲು ದೇಸಾಯಿ ಸಿದ್ಧನಿಲ್ಲ, ಅದಕ್ಕೆ ಅವಳಿಗೆ ಅನ್ನಿಸುತ್ತದೆ : “ಈ ಅರಮನ್ಯಾಗ ಇನ್ನೊಂದು ಹುಟ್ಟೋದೂ ಇಲ್ಲ.”

ಮನಸ್ಸಿಗಂಟಿದ ಪಾಪದಿಂದ ಮಕ್ಕಳಾಗಲು ಬೇಕಾದಷ್ಟು ಪ್ರಯತ್ನಿಸುತ್ತಾಳೆ. ಸಾಧ್ಯವಾಗುವುದಿಲ್ಲ. ಕೊನೆಗೆ ಒಂದು ದಿನ ಅದೇ ಅರಮನೆಯಲ್ಲಿ ಕಂಬಗಳಲ್ಲಿ ಕಂದೀಲು ಹಿಡಿದಡ್ಡಾಡುತ್ತ ಹೇಳುತ್ತಾಳೆ : “ಈ ಅರಮನಿ ಹಿರೇರಿಗೆಲ್ಲ ನಾ ಹಾದರಗಿತ್ತಿ ಅಲ್ಲ ಅಂತ ತಿಳಿದಿರಲಿ. ನಿಮ್ಮ ವಂಶದ ಕುಡಿ, ಆಹಾ ಮಹಾರಾಜ, ಅವನ ಷಂಡತನದಿಂದ ಹಿಂಗೆಲ್ಲ ನಡೀತು ಅಂತ ತಿಳಿದಿರಲಿ. ಈ ಅರಮನ್ಯಾಗ ಯಾರಾದರೂ ದೇವರಿದ್ರ, ಹಿರೇರ ಆತ್ಮ ಇದ್ದರ ಅವರಿಗ ನಾ ಯಾರಂತ ಗೊತ್ತೈತಿ. ನಾ ಹಾದರ ಮಾಡಿದ್ದರ ಈ ಅರಮನಿ ಕಂಬದಾಗ ಮಕ್ಕಳ ಅರಳಿಸಲಿಕ್ಕೆ ಅಂತ ತಿಳಿದಿರಲಿ.” ಇವೇ ಅವಳ ಕೊನೆಯ ಮಾತುಗಳಾದವು.

ಇಲ್ಲಿಯ ಅರಮನೆಯ ಪಾತ್ರ ತುಂಬ ವಿಚಿತ್ರವಾದದ್ದು, ಪ್ರಾರಂಭದಲ್ಲಿ ಜಂಗಮರ ಶಾಪಕ್ಕೆ ಈಡಾಗಿ, ದೇಸಾಯರ ಆಳ್ವಿಕೆಯ ಸ್ಥಳವಾಗಿ, ಸಂತಾನಹೀನವಾಗಿ ಚಲಾವಣೆಯಿಲ್ಲದ ನಾಣ್ಯವಾಗಿ, ತನ್ನಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಕೇಂದ್ರವಾಗಿ ಸಾಕ್ಷಿಯಾಗಿ ಕೊನೆಗೆ ಹೈಸ್ಕೂಲಾಗಿ ಪರಿವರ್ತನೆ ಹೊಂದುವತನಕ ಬೆಳೆಯುತ್ತದೆ. ಇಷ್ಟೆಲ್ಲ ಬರೆದ ಮೇಲೂ ಈ ಕಾದಂಬರಿಯ ಬಗ್ಗೆ ನನಗೆ ಅನಿಸಿದ್ದನ್ನೆಲ್ಲ ಬರೆದಿದ್ದೇನೆ ಎಂಬ ತೃಪ್ತಿ ನನ್ನಲ್ಲಿ ಮೂಡಿಲ್ಲ. ಇನ್ನೂ ಈ ಕೃತಿಯ ಬಗ್ಗೆ ನಾನು ಹೇಳಬೇಕಾದ, ಆದರೆ ನನಗಿನ್ನೂ ಸ್ಪಷ್ಟವಾಗದಿರುವ ಎಷ್ಟೋ ಅಂಶಗಳಿವೆ ಎನ್ನಿಸುತ್ತದೆ. ಇನ್ನೂ ಓದಬೇಕೆನ್ನಿಸುತ್ತದೆ, ಈ ಕಾದಂಬರಿಯಲ್ಲಿ ಬರುವ ಕಾವ್ಯ, ಪಾತ್ರಗಳು – ಇವೆಲ್ಲದರಿಂದ ನಾನಂತೂ ತುಂಬ ಪ್ರಭಾವಿತಳಾಗಿದ್ದೇನೆ. ಇದು ಕನ್ನಡದ ಅತ್ಯುತ್ತಮ ಕೃತಿಗಳಲ್ಲಿ ಒಂದೆಂಬ ಬಗ್ಗೆ ನನಗೆ ಸಂತಸವಿದೆ. ಇದೊಂದು ಕನ್ನಡದ ಸಾಧನೆಯೆಂದೇ ನನ್ನ ಭಾವನೆ.