“ನಮ್ಮ ಗುರು ಹಿರಿಯರನ್ನು ಗೌರವಿಸುವ ಬಗ್ಗೆ ನೀವು ಆಚರಿಸತಕ್ಕ ಯಾವೊಂದು ಕಾರ್ಯವಿದೆಯೋ ಅದು ಪುಣ್ಯ ಕಾರ್ಯ. ಅದೊಂದು ಆರಾಧನೆ ತಾನೆ? ಎಂದು ನಮ್ಮ ಸನಾತನ ಧರ್ಮ ಸಾರುತ್ತಲಿವೆ. ಆ ಬಗೆಗೆ ನಾವು ಕೈಗೊಳ್ಳಬೇಕಾದ ವಿಷಯಗಳು ಯಾವುದೇ ಇರಲಿ, ನಮ್ಮ ಉದ್ದೇಶವಾದರೆ ಒಂದೇ ಆಗಿರಬೇಕು. ಅದು ಸದುದ್ದೇಶ” ಇವು ದಿವಂಗತ ಪೈ ಅವರ ಮಾತುಗಳು.

ಹಿರಿಯ ವ್ಯಕ್ತಿ ಒಬ್ಬರಿಗೆ ಸ್ಮರಣಾರ್ಥ ಗ್ರಂಥ ಒಂದನ್ನು ಅರ್ಪಿಸುವ ಸಂದರ್ಭದಲ್ಲಿ ಈ ಮಾತುಗಳನ್ನು ಅವರು ಪತ್ರ ಮುಖೇನ ಬರೆದು ತಿಳಿಸಿದ್ದಾರೆ. ಇದೇ ಹೇಳಿಕೆಯನ್ನು ಗೋವಿಂದಪೈಅವರಿಗೆ ಅನ್ವಯಿಸಿ ಅವರ ಬಗೆಗೆ ತೋರುವ ಗೌರವದ ಈ ಒಂದು ಪುಣ್ಯ ಕಾರ್ಯವನ್ನು ಧರ್ಮಸ್ಥಳ ಪುಣ್ಯಕ್ಷೇತ್ರದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರು ಸರ್ವಧರ್ಮ ಸಾಹಿತ್ಯ ಸಮ್ಮೇಳನದ ‘ಬಂಗಾರದ ಹಬ್ಬ’ದಲ್ಲಿ ಹಮ್ಮಿಕೊಂಡು ನೆರವೇರಿಸುತ್ತಿರುವುದು ಕನ್ನಡ ನಾಡಿನ ಸಾಹಿತಿಗಳೆಲ್ಲರಿಗೂ ಆನಂದವನ್ನು ತಂದಿದೆ. ಅದಕ್ಕಾಗಿ ಅವರು ವಂದನೆಗೆ, ಅಭಿನಂದನೆಗೆ ಪಾತ್ರರಾಗಿದ್ದಾರೆ. ಯಾವ ಸಾಹಿತಿಗೇ ಆಗಲಿ ಆತನಿಗೆ ತೋರುವ ನಿಜವಾದ ಗೌರವವೆಂದರೆ, ಒಂದು ಆತನ ಸಾಹಿತ್ಯ ಕೃತಿಗಳನ್ನು ಓದುವುದು ಅವುಗಳನ್ನು ಕುರಿತು ಚಿಂತನ – ಮಂಥನ ನಡೆಸುವುದು; ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ವಿಮರ್ಶಿಸುವುದು. ಆತನ ಅಪ್ರಕಟಿತ ಕೃತಿಗಳಿದ್ದರೆ ಪ್ರಕಟಿಸುವುದು; ಎಲ್ಲ ಕೃತಿಗಳೂ ಮೊದಲೇ ಪ್ರಕಟವಾಗಿದ್ದರೆ ಅವುಗಳಲ್ಲಿ ಯಾವುದು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲವೋ ಅಂಥ ಒಂದು ಜನಪ್ರಿಯ ಕೃತಿಯನ್ನು ಹಾಗೂ ಅದರ ಅವಶ್ಯಕತೆ, ಪ್ರಯೋಜನವನ್ನು ಕುರಿತು ಆಲೋಚಿಸಿ ಸುಲಭ ಬೆಲೆಗೆ ಪ್ರಕಟಿಸುವುದು. ಇನ್ನು ಎರಡನೆಯದು ಆತನ ಹೆಸರಿನ್ಲಲಿ ಸ್ಮಾರಕ ಸಾಂಸ್ಕೃತಿಕ ಭವನಗಳನ್ನು ನಿರ್ಮಿಸುವುದು. ಅಥವಾ ಆತ ವಾಸವಾಗಿದ್ದ ಮನೆ ಒಂದಿದ್ದರೆ, ಅವರ ಪೀಳಿಗೆಯವರು ಒಪ್ಪಿದರೆ ಹಾಗೂ ಬಿಟ್ಟುಕೊಟ್ಟರೆ ಆತನ ವಸ್ತುಸಂಗ್ರಹಾಲಯ ಹಾಗೂ ಗ್ರಂಥ ಭಂಡಾರವನ್ನಾಗಿ ಮಾರ್ಪಡಿಸಿ ಒಂದು ಸ್ಮಾರಕ ಭವನದ ರೀತಿಯಲ್ಲಿ ಕಾಯ್ದುಕೊಳ್ಳುವುದು – ಮುಖ್ಯವಾದ ಕೆಲಸವಾಗುತ್ತದೆ. ಇದು ಆ ಸಾಹಿತಿಯ ಒಬ್ಬರು, ಇಬ್ಬರು ಗೆಳೆಯರಿಂದ, ಆತ್ಮೀಯರಿಂದ ಆಗುವ ಕೆಲಸವಲ್ಲ. ಹತ್ತಾರು ಜನ ಸೇರಿ ಎತ್ತುವ ಕೆಲಸ ಅದು. ಅಥವಾ ನೂರಾರು ಜನ ಸದಸ್ಯರಿರುವ ಯಾವುದಾದರೂ ಒಂದು ಸಂಘ ಸಂಸ್ಥೆ ಕೈಗೊಳ್ಳಬೇಕಾದ ಕಾರ್ಯ. ಈ ತೆರನ ಯಾವುದೇ ಕೆಲಸಕ್ಕೂ ಸರ್ಕಾರದ ಸಂಪೂರ್ಣ ಸಹಕಾರ ಅತ್ಯಗತ್ಯವಾಗುತ್ತದೆ.

ಅನೇಕ ಶತಕಗಳಿಂದ ಕನ್ನಡ ನಾಡಿನ ಜನತೆ ಒಂದಲ್ಲ ಒಂದು ಕಾರಣದಿಂದ ಈ ಧರ್ಮಸ್ಥಳದ ಒಂದು ಸಂಬಂಧವನ್ನು ಇಟ್ಟುಕೊಂಡೇ ಬದುಕುತ್ತಿದೆ. ಅದು ಶ್ರೀ ಹೆಗ್ಗಡೆಯವರ ಮನೆತನದ ಆತ್ಮೀಯತೆಯಾಗಬಹುದು, ಶ್ರೀ ಮಂಜುನಾಥನ ಮಹಿಮೆಯಾಗಬಹುದು. ಧರ್ಮದೇವತೆಗಳ ಅಭಯ ರಕ್ಷೆಯಾಗಬಹುದು, ಭಗವಾನ್ ಚಂದ್ರನಾಥನ ಅನುಗ್ರಹವಾಗಬಹುದು, ಅಣ್ಣಪ್ಪಸ್ವಾಮಿಯ ಭಯವಾಗಬಹುದು. ಇತ್ತೀಚಿನ ಬಾಹುಬಲಿಯ ದಿವ್ಯದರ್ಶನವಾಗಬಹುದು.

ದಿವಂಗತ ಗೋವಿಂದ ಪೈ ಅವರ ಹಾಗು ಶ್ರೀ ಹೆಗ್ಗಡೆ ಮನೆತನದವರ ಸಂಬಂಧ ಅತ್ಯಂತ ಆತ್ಮೀಯವಾದುದು. ಈ ಗೋಷ್ಠಿಯನ್ನು ಉದ್ಘಾಟಿಸಿದ ಶ್ರೀ ಹಂಪನಾ ಅವರು. ಈ ಗೋಷ್ಠಿಯ ಸಂದರ್ಭದಲ್ಲಿ ಈವರೆಗೂ ಮಾತನಾಡಿದ ನನ್ನ ಸಾಹಿತ್ಯ ಮಿತ್ರರು ಗೋವಿಂದ ಪೈ ಅವರ ಬರಹದ ಮೌಲ್ಯೀಕರಣದ ಜೊತೆಗೆ ಅವರ ಕೆಲವು ಚಿಗುಟು ಸ್ವಭವವನ್ನು ಆಗಲೇ ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಒಂದು ಬಹಳ ಮುಖ್ಯವಾದ ಸಂಗತಿಯೆಂದರೆ ಪೈ ಅವರು, ಅವರ ಬಗೆಗೆ ಏರ್ಪಡಿಸುವ ಸಮಾರಂಭಗಳಿಗೆ ತೀವ್ರ ವಿರೋದಿಯಾಗಿದ್ದುದು. ಯಾವುದೇ ಕಾರಣಕ್ಕೂ ಆತ್ಮೀಯರು ಎಂಥವರೇ ಆದರೂ ಅವರ ಆಹ್ವಾನವನ್ನು ವಿನಯದಿಂದೊಡಗೂಡಿದ ಹಠದಿಂದ ತಿರಸ್ಕರಿಸುತ್ತಿದ್ದರು. ಆದರೆ ಪೈಗಳು ಈ ತಮ್ಮ ಬಿಗಿಯನ್ನು ಸಡಲಿಸಿದ್ದು, ವಿನಯದ ಹಠವನ್ನು ಬದಿಗೊತ್ತಿದ್ದು ಎರಡು ಬಾರಿ ಮಾತ್ರ. ಒಂದು ಬೆಂಗಳೂರಿನಲ್ಲಿ ನಡೆದ ಕವಿ ಸಮ್ಮೇಳನದ ಸನ್ಮಾನ ಸಮಾರಂಭ, ಎರಡನೆಯದು ಮೂಡಬಿದರೆಯಲ್ಲಿ ತಮ್ಮ ಸನ್ಮಾನಾರ್ಥ ನಡೆದ ಸಮಾರಂಭ. ಅದಕ್ಕೆ ಕಾರಣ ತಮ್ಮ ಆತ್ಮೀಯರೂ ಗೌರವ ಪಾತ್ರರೂ ಅಗಿದ್ದ ಧರ್ಮಸ್ಥಳದ ದಿವಂಗತ ಮಂಜಯ್ಯ, ಹೆಗಡೆಯವರೇ ಏರ್ಪಡಿಸಿದ್ದ ಕಾರ್ಯಕ್ರಮ ಅದು ಆಗಿದ್ದುದು.

ಪೂಜ್ಯ ಮಂಜಯ್ಯ ಹೆಗ್ಗಡೆಯವರು ಇಹಲೋಕ ವ್ಯಾಪಾರ ತ್ಯಜಿಸಿದ ಸಂದರ್ಭದಲ್ಲಿ ಗೋವಿಂದ ಪೈ ಅವರು ಡಿ. ಪುಟ್ಟಸ್ವಾಮಿ ಅವರಿಗೆ ಬರೆದ ಸಂತಾಪ ಪತ್ರವು ಶ್ರೀ ಹೆಗ್ಗಡೆಗಲ ಮನೆತನದ ಬಗ್ಗೆ ಅವರ ಲೋಕಕಲ್ಯಾಣ ಕಾರ್ಯಗಳ ಬಗೆಗೆ ಪೈ ಅವರಿಗೆ ಇದ್ದ ಗೌರವವನ್ನು ನಿಚ್ಚಳವಾಗಿ ತೋರಿಸುತ್ತದೆ. ಅವರ ಪತ್ರ ಹೀಗೆ ಹೇಳುತ್ತದೆ : “ತಮ್ಮ ಅಕ್ಕರೆಯ ಬಂಧುವರ್ಯರೂ ನನ್ನ ಮಾನ್ಯ ಮಿತ್ರವರ್ಯರೂ ಆದ ಶ್ರೀ ಶ್ರೀ ಮಂಜಯ್ಯ ಹೆಗ್ಗಡೆಯವರು ಮೊನ್ನೆ ಮೂವತ್ತೊಂದನೇ ತಾರೀಖಿನಂದು ಬುಧವಾರ ರಾತ್ರಿ ಪರಂಧಾಮಮಯ್ದಿದರೆಂದು ತಿಳಿದು ವಿಷಣ್ಣನಾದೆ. ನನಗೆ ಅವರಲ್ಲಿ, ಅವರ ಸೌಜನ್ಯದಲ್ಲಿ, ಅವರ ಔದಾರ್ಯದಲ್ಲಿ, ಅಷ್ಟು ಗೌರವಾದರಗಳಿದ್ದವು….. ಓಂ ಶಾಂತಿಃ ಶಾಂತಿಃ ಶಾಂತಿಃ ಕೆನರಾ ಹೈಸ್ಕೂಲನ್ನು ಅಸ್ತಿತ್ವಕ್ಕೆ ತಂದ ಆದರ್ಶಪುರುಷರಾದ ಶ್ರೀ ಶ್ರೀ ಅಮ್ಮೆಂಬಳ ಸುಬ್ರಾಯ ಪೈ ಅವರು ೧೯೦೯ ರಲ್ಲಿ ವೈಕುಂಠವಾಸಿಯರಾದ ಬಳಿಕ ತಮ್ಮ ಅಣ್ಣ ಶ್ರೀ ಮಂಜಯ್ಯ ಹೆಗ್ಗಡೆಯವರನ್ನು ಬಿಟ್ಟು ನಮ್ಮ ನಾಡಿನಲ್ಲಿ ಬೇರೊಬ್ಬ ಆದರ್ಶ ಪುರುಷರನ್ನು ನಾನು ಕಂಡಿಲ್ಲ. ಅವರ ಸೌಶೀಲ್ಯವನ್ನು ಹೊಗಳಲಿಕ್ಕೆ ಒಂದು ಬಾಯಿ ಸಾಲದು. ಅವರ ಸತ್ಕಾರ್ಯಗಳನ್ನು ಎಣಿಸಲಿಕ್ಕೆ ಎರಡು ಕೈ ಸಾಲದು. ಅವರನ್ನು ಕೊಂಡಾಡಿದಷ್ಟು ಮಾತುಗಳೇ ಸೋಲುತ್ತವಲ್ಲದೆ ಅವರ ಸದ್ಗುಣಗಳು ಬಡವಾಗುವಂತಿಲ್ಲ. ಅವರು ಅಲ್ಲಿಂದ ಇಲ್ಲಿಯವರೆಗೂ ಏಕಾಗ್ರ ಚಿತ್ತದಿಂದ ಆರಾಧಿಸಿದ ಆ ಜನನಾಥನೂ ಆ ಮಂಜುನಾಥನೂ ಅವರು ಇಬ್ಬರಲ್ಲ; ನಿಜವಾಗಿಯೂ ಅನನ್ಯರಾಗಿಯೂ ಲೋಕವಾಡಿಕೆಯಲ್ಲಿ ಹೇಗೂ ಅನ್ಯಾನ್ಯರೆಂದು ಭಾವಿಸಲ್ಪಡುತ್ತಾರಷ್ಟೆ? ಶ್ರೀ ಮಂಜಯ್ಯ ಹೆಗ್ಗಡೆಯವರ ಆತ್ಮಕ್ಕೆ ಉತ್ತರೋತ್ತರ ಸದ್ಗತಿಯನ್ನಿತ್ತು ಕೈವಲ್ಯವನ್ನು ಕೈಗೊಳಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತೇನೆ.” ಇದು ಪೈ ಅವರ ತೂಕತಪ್ಪದ ಸಂತಾಪದ ಮತುಗಲು. ಪೈ ಅವರ ಅಭಿಮಾನಕ್ಕೆ ಕುರುಹಾಗಿ ಇನ್ನೂ ಅನೇಕ ಸಂಗತಿಗಳಿರಬಹುದು. ಈ ಮೇಲಿನ ಎರಡೇ ನಿದರ್ಶನಗಳು ಪೈ ಅವರ ಈ ಕ್ಷೇತ್ರದ ಅನ್ಯೋನ್ಯತೆಗೆ ಸಾಕ್ಷಿಯಾಗಿವೆ. ಇಂಥ ಒಬ್ಬ ಹಿರಿಯ ಸಾಹಿತಿಗೆ ಶತಮಾನೋತ್ಸವದ ಪ್ರ-ಪ್ರಾರಂಭದ ಸಂದರ್ಭದಲ್ಲಿ ಬೃಹತ್ ಗೋಷ್ಠಿಯೊಂದನ್ನು ಏರ್ಪಡಿಸಿ ನಾಡಿನ ಪ್ರಬುದ್ಧ ವಿದ್ವಾಂಸರನ್ನು ಬರಮಾಡಿಕೊಂಡು ಕವಿಗೆ ಕಾವ್ಯನಮನ ಸಲ್ಲಿಸುವಲ್ಲಿ ನನಗೆ ಅವಕಾಶವನ್ನು ಮಾಡಿಕೊಟ್ಟ ಶ್ರೀ ವೀರೇಂದ್ರ ಹೆಗ್ಗಡೆಯವರಿಗೂ ಅವರ ಕುಟುಂಬದ ಸದಸ್ಯರಿಗೂ ಪ್ರಾಂಶುಪಾಲ ಎಸ್. ಪ್ರಭಾಕರರಿಗೂ ನ್ನನ ಹೃತ್ಪೂರ್ವಕ ಧನ್ಯವಾದಗಳು.

ಈ ಕವಿಗೋಷ್ಠಿಯ ಅಧ್ಯಕ್ಷರಾದ ಮಾನ್ಯ ಡಾ. ಕು.ಶಿ. ಹರಿದಾಸ ಭಟ್ಟರೇ, ಮಾನ್ಯ ಉದ್ಘಾಟಕರಾದ ಶ್ರೀ ಹಂಪನಾ ಅವರೇ, ವೇದಿಕೆಯ ಮೇಲೆ ಉಪಸ್ಥಿತರಿರುವ ಹಿರಿಯ ಸಾಹಿತಿಗಳೇ, ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರೇ ಹಾಗೂ ಸಹೃದಯ ಸಾಹಿತ್ಯ ಬಂಧುಗಳೇ.

ಈ ಗೋಷ್ಠಿಯಲ್ಲಿ ನನ್ನ ವಿಚಾರ ಮಂಡನ ಪೈ ಅವರ ವಿಮರ್ಶಾ ಗ್ರಂಥಗಳನ್ನು ಕುರಿತದ್ದು. ರಾಷ್ಟ್ರಕವಿ ಪೈ ಅವರು ಪ್ರಮುಖತಃ ಸಂಶೋಧಕರು ಅನುಷಂಗಿಕವಾಗಿ ಕವಿಗಳು ನಾಟಕಗಳಲ್ಲಿಯೂ ಅವರ ಲೇಖನಿ ಸಮರ್ಥವಾಗಿ ಹರಿದಿದೆ.

ಪೈ ಅವರ ವಿಮರ್ಶಾ ಪ್ರಬಂಧಗಳ ಒಂದು ಪ್ರತ್ಯೇಕ ಸಂಕಲನ ಈವರೆಗೆ ನನಗೆ ತಿಳಿದಂತೆ ಪ್ರಕಟವಾಗಿಲ್ಲ. ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ ಬಿಡಿ ಬಿಡಿ ಲೇಖನಗಳು ಪ್ರಕಟಗೊಂಡಿವೆ. ಇನ್ನೂ ಪ್ರಕಟಗೊಳ್ಳುತ್ತಿವೆ.

ಪೈ ಅವರ ಪ್ರಕಟಿತ ಕೃತಿಗಳ ಪಟ್ಟಿಯಲ್ಲಿ ‘ಕನ್ನಡ ಮೊರೆ’ ಎನ್ನುವ ವಿಮರ್ಶಾ ಗ್ರಂಥವೊಂದು ಪ್ರಕಟವಾದದ್ದನ್ನು ಗಮನಿಸಿದೆ. ಈ ಹಿಂದೆ ೧೯೭೫ ರಲ್ಲಿ ಆ ಗ್ರಂಥವನ್ನು ನಾನು ಓದಿದ್ದರೂ ಈಗ ಈ ಪ್ರಬಂಧವನ್ನು ಸಿದ್ಧಪಡಿಸುವ ಕಾಳಜಿಯಿಂದ ‘ಕನ್ನಡದ ಮೊರೆ’ ಕೃತಿಯನ್ನು ಅಮೂಲಾಗ್ರವಾಗಿ ಮತ್ತೊಮ್ಮೆ ಓದಿದೆ. ಸ್ವಾರಸ್ಯವೆಂದರೆ ಅದರಲ್ಲಿ ಆರು ವ್ಯಕ್ತಿ ಚಿತ್ರಗಳು, ಎರಡು ಆತ್ಮಕಥನ ಪ್ರಬಂಧಗಳು. ‘ಸ್ವತಂತ್ರ’ ಎನ್ನುವ ಒಂದು ಕವಿತೆ. ೩೪ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಒಂದು, ಹೀಗೆ ಹತ್ತು ಪ್ರಬಂಧಗಳು : ವಿಮರ್ಶಾ ಪ್ರಬಂಧದಿಂದ ಬೆರೆಯೇ ಉಳಿಯತಕ್ಕವು. ಇನ್ನು ಉಳಿದ ನಾಲ್ಕು ಪ್ರಬಂಧಗಳು : ಅಣಕವಾಡು. ಪ್ರಾಕ್ತನ ವಿಮರ್ಶನದ ಮುಂದಣ ಹೆಜ್ಜೆ, ಸಣ್ಣಕತೆ – ಕಾದಂಬರಿಗಳು ಹಾಗೂ ಕನ್ನಡದಲ್ಲಿ ಪ್ರಬಂಧ ಅವತಾರ ಈ ನಾಲ್ಕು ಪ್ರಬಂಧಗಳು, ; ಅಣಕವಾಡು. ಪ್ರಾಕ್ತನ ವಿಮರ್ಶನದ ಮುಂದಣ ಹೆಜ್ಜೆ, ಸಣ್ಣ ಕಥೆ – ಕಾದಂಬರಿಗಳು ಹಾಗೂ ಕನ್ನಡದಲ್ಲಿ ಪ್ರಬಂಧಗಳಿಗಿಂತಲೂ ವೈಚಾರಿಕ ಪ್ರಬಂಧಗಳಿಗೆ ಹತ್ತಿರವಾಗಿವೆ. ಆದರೂ ಈ ನಾಲ್ಕು ಪ್ರಬಂಧಗಳನ್ನು ನನ್ನ ಈ ಪ್ರಬಂಧ ಸಿದ್ಧಪಡಿಸುವಲ್ಲಿ ಗಮನದಲ್ಲಿರಿಸಿಕೊಂಡಿದ್ದೇನೆ. ಜೊತೆಗೆ ಬೇರೆ ಬೇರೆ ಸಂಚಿಕೆಗಳಲ್ಲಿ ಪ್ರಕಟಗೊಂಡಿರುವ ಆರು ಬಿಡಿ ಬಿಡಿ ವಿಮರ್ಶಾ ಪ್ರಬಂಧಗಳನ್ನು ನನ್ನ ಈ ಪ್ರಬಂದ ಸಿದ್ಧಪಡಿಸುವಲ್ಲಿ ಗಮನಿಸಿದ್ದೇನೆ. ಜೊತೆಗೆ ಬೇರೆ ಬೇರೆ ಸಂಚಿಕೆಗಳಲ್ಲಿ ಪ್ರಕಟಗೊಂಡಿರುವ ಆರು ಬಿಡಿ ಬಿಡಿ ವಿಮರ್ಶಾ ಪ್ರಬಂಧಗಳಲ್ಲಿ ನನಗೆ ದೊರೆತಿರುವ ನಾಲ್ಕು ಪ್ರಬಂಧಗಳ ಅಧ್ಯಯನದ ಆಧಾರದಿಂದ ನನ್ನ ಈ ಪ್ರಬಂಧವನ್ನು ವಿವೇಚಿಸಿದ್ದೇನೆ. ಇನ್ನು ಎರಡು ಪ್ರಬಂಧಗಳು ಒಂದು ‘ಹೂಗೊಂಚಲು’ – (ಉದಯಭಾರತ – ೨, ೧೯೨೭) ಎರಡು ‘ಭಾರತೀಯ ಇತಿಹಾಸ ಪ್ರವೇಶಿಕೆ’ – (ರಾಷ್ಟ್ರಬಂಧು ೨೯-೪-೧೯೩೪) ಈ ಎರಡು ಪ್ರಬಂಧಗಳು ನನಗೆ ದೊರೆಯದೆ ಈ ಪ್ರಬಂಧ ಸಿದ್ಧಪಡಿಸುವಲ್ಲಿ ತಮಗಿಂತಾ ನನಗೇ ಹೆಚ್ಚಿನ ಅತೃಪ್ತಿ ಇದೆ. ಆದರು ದೊರೆತಿರುವ ಇಲ್ಲ ಪ್ರಬಂಧಗಲ ಅಧ್ಯಯನದ ವಿವೇಚನೆ ಈ ನನ್ನ ಪ್ರಬಂಧದ ಪ್ರಾಮಾಣಿಕ ಪ್ರಯತ್ನದ ಹಿಂದೆ ಅಡಗಿದೆ ಎನ್ನುವ ತೃಪ್ತಿಯೂ ನನಗೆ ಇದೆ.

ಈ ವಿಮರ್ಶಾ ಪ್ರಬಂಧಗಳನ್ನು ಕುರಿತು ವಿವೇಚಿಸುವ ಸಂದರ್ಭದಲ್ಲಿ ದಿವಂಗತ ಗೋವಿಂದ ಪಯ ಅವರ ವಿಮರ್ಶಾ ದೃಷ್ಟಿ ಎಂಥದು ಎನ್ನುವುದನ್ನು ಅವರ ಬರಹದಿಂದಲೇ ಮೊದಲು ನೋಡುವ. ಅವರು ಕವಿ ಮತ್ತು ವಿಮರ್ಶಕನನ್ನು ಕುರಿತ ಹೀಗೆ ಹೇಳುತ್ತಾರೆ : “ಆವಿನಂತೆ ಕವಿ ಹಿಂಡುವುದು ಹಾಲನ್ನು, ಅದರಿಂದ ಬೆಣ್ಣೆ ಕಡೆವುದೊ, ತುಪ್ಪ ಕಾಸುವುದೋ ವಿಮರ್ಶೆಯ ಕೆಲಸ. ನನ್ನ ಅನುಭವದ ಮಟ್ಟಿಗೆ ಕವಿ ಮನವೊಲಿದಂತೆ ಬೇರೆ ಯಾವ ಗುರಿಯನ್ನೂ ಅರಿಯ. ಆತನ ಕೃತಿಗಳಲ್ಲಿ ಅವಗಾಹಿಸಿ ಅವಲ್ಲಿ ಆತನು ಅರಿಯನಾದರೂ ಇಟ್ಟಿರುವ ಗುರಿಯನ್ನು ಕಂಡುಕೊಳ್ಳುವುದಾದರೂ ವಿಮರ್ಶಕನ ಧರ್ಮ” (ಕನ್ನಡ ಮೊರೆ, ಆತ್ಮಕಥನ. ಪು. ೨೩).

ಇದೇ ರೀತಿ ಮುನ್ನುಡಿಗಾರನ ಹಾಗೂ ವಿಮರ್ಶಕನ ವೈದೃಶ್ಯಗಳನ್ನು ಅವರು ಸ್ಪಷ್ಟಪಡಿಸಲೆತ್ನಿಸಿದ್ದಾರೆ. “ತಾನು ಮುನ್ನುಡಿ ಬರೆವ ಗ್ರಂಥದಲ್ಲಿ ಉಳ್ಳ ಕೊರತೆಗಳನ್ನು ಪಟ್ಟಿ ಮಾಡಿ ತೋರಿಸುವುದು ಮುನ್ನುಡಿಗಾರನ ಕೆಲಸವಲ್ಲ. ಸರ್ವಥಾ ಅಲ್ಲ. ಅದಕ್ಕೆ ಸಹಸ್ರಾಕ್ಷನಾದ ವಿಮರ್ಶಕನಿದ್ದಾನೆ. ಭಾಪು ಭಾಪು ಎಂದು ತನ್ನ ಲೇಖಕ ಬೆನ್ನು ಚಪ್ಪರಿಸುವುದೂ ಜಾಗು ಎಂದು ಆತನನ್ನು ಹುರಿದುಂಬಿಸುವುದೂ ಇದಿಷ್ಟೆ ಮುನ್ನಿಡಿಗಾರ ಕೆಲಸ.. ಮುನ್ನುಡಿಗಾರನು ಪುರೋಹಿತನಂತೆ ತನ್ನ ಬಳಿಗೆ ಬಂದಾತನ ಪೌರೋಹಿತ್ಯವನ್ನು ನಡಿಸಿ ಆತನಿಗೆ ಶ್ರೇಯಸ್ಸನ್ನು ಕೋರಿ ಆಶೀರ್ವದಿಸಬೇಕು. ಆತನ ಊಣೆಯಗಳ ಕಡೆಗೆ ನೋಡಬಾರದು. ವಿಮರ್ಶಕನಾದರೂ ವೈದ್ಯನಂತೆ ತನ್ನ ಬಂದಾತನಿಗೆ ಚಿಕಿತ್ಸೆಯನ್ನು ನಡೆಸಿ ನಿರೋಗಿಯಾದವನ ಆರೋಗ್ಯವನ್ನು ಕೊಂಡಾಡಬೇಕು. ಸಿಗುಳಬೇಕಾದಲ್ಲಿ ಸಿಗುಳಲೂ ಬೇಕು, ಆತನನ್ನು ನೋಯಿಸುವಷ್ಟು ನಿರ್ದಯೆಯಿಂದಲ್ಲ. ಆತನು ಮುಂದೆ ಆರೋಗ್ಯಶಾಲಿಯಾಗಬೇಕೆಂಬ ಮಮತೆಯಿಂದ, ಹೀಗೆ ಮುನ್ನುಡಿಗಾರನ ಹಾಗೂ ವಿಮರ್ಶಕನ ಕೆಲಸಗಳಲ್ಲಿ ಇರುವ ಧೃವಗಳಷ್ಟರ ವ್ಯತ್ಯಾಸವನ್ನು ನಮ್ಮಲ್ಲಿ ಹಲವರು ಇನ್ನೂ ಅರಿತಿಲ್ಲ. ಆ ಕಾರಣವೇ ಈ ಸಂದರ್ಭದ ನೆರವಾಂತ ಅದನ್ನೊಮ್ಮೆ ಸೃಷ್ಟೀಕರಿಸಿಬಿಡೋಣ. ಇಂದು ಇದೊಂದು ಮಾತನ್ನು ಇಲ್ಲಿ ಪ್ರಾಸಂಗಿಕವಾಗಿ ಹೇಳಿರುತ್ತೇನೆ” – ಗೋವಿಂದ ಪೈ ಅವರ ವಿಮರ್ಶನ ಪ್ರಜ್ಞೆಯ ಸ್ಪಷ್ಟ ರೂಪವನ್ನು ಅವರ ಮಾತುಗಳಲ್ಲಿಯೇ ನಾವು ಅರ್ಥಮಾಡಿಕೊಂಡಂತಾಯಿತು. ವಿಮರ್ಶೆ ಎಂದರೆ ಹೇಗಿರಬೇಕು? ಅದು ಮಾಡಬೇಕಾದ ಕೆಲಸವೇನು? ಎನ್ನುವುದನ್ನು ಪೈ ಅವರು ಇಷ್ಟು ನಿಚ್ಚಳವಾಗಿ ತಿಳಿಸಿದ್ದರಿಂದಲೇ ಅವರ ವಿಮರ್ಶಾ ಪ್ರಬಂಧಗಳೂ ಕೂಲಂಕಷವಾದ ಚರ್ಚೆಗೆ ಒಳಗಾಗಿ ವಿಷಯಗಳ ಸ್ಪಷ್ಟೀಕರಣದಲ್ಲಿ ಎದ್ದು ನಿಲ್ಲುತ್ತದೆ. ಅವರ ವಿಮರ್ಶೆಯ ಮಾತಿನಲ್ಲಿ ಸತ್ಯದ ಸ್ಪಷ್ಟ ಚಿತ್ರವಿದೆ. ಜೊತೆಗೆ ಮೃದುತ್ವದಿದೆ. ‘ಸತ್ಯಂ ಪ್ರಿಯಂ ಭ್ರೂಯತ್’. ಇದು ಪೈಗಳ ವಿಮರ್ಶೆಯ ಧಾಟಿ, ದಿವಂಗತ ಜಿ.ಪಿ. ರಾಜರತ್ನಂ ಅವರ ಮಹಾಕವಿ ಪುರುಷ ಸರಸ್ವತಿ’ ಕೃತಿಯನ್ನು ಪೈ ಅವರು ವಿಮರ್ಶಿಸುತ್ತಾ “ಮನುಷ್ಯನು ಒಬ್ಬನಿದ್ದಲ್ಲಿ ಇಬ್ಬರಾದಂದಿನಿಂದ ಅಣಕಕ್ಕೆ ಕಣ್ಣು ಕಂಡಿತು. ಆತನು ಮಾತು ಬಲ್ಲಂದಿನಿಂದ ಮೂದಲೆಗೆ ಬಾಯಿ ಬಂತು. ಆ ಮುಂದೆ ಇತರರು ಆಡಿದುದೂ ಮಾಡಿದುದೂ ತನಗೆ ಹಿಡಿಯದಾದರೆ ಆತನ ಕಿಟಕಿ ಅವರನ್ನು ಚುಚ್ಚದಿರದು. ಈ ಸೃಷ್ಟಿಯಲ್ಲಿ ಮನುಷ್ಯನು ಎಷ್ಟು ಹಳಬನೋ ಅಣಕವೋ ಅಷ್ಟೇ ಹಳತು. ಅವನ ಸ್ವಭಾವ ಸಿದ್ಧ ಗುನಗಳಲ್ಲಿ ಅಣಕವು ಒಂದು” ಎಂದು ಹೇಳಿ “ರಾಜರತ್ನ ಅವರಿಗೆ ತಾನು ಮುಟ್ಟಿದುದನ್ನು ನವಾಯಿಸುವ ಕೈಗುಣವಿದೆ. ಅವರ ಬರಹದಲ್ಲಿ ಅಲ್ಲಲ್ಲಾದರೂ ಜಗಳಕ್ಕೆ ಇಂಬಾಗುವ ಅದೊಂದು (ಅವರ) ಗುಣವು ಇದೆ. ಈ ಲಕ್ಷಣಗಳು ಇದ್ದಿಲ್ಲವಾದಲ್ಲಿ ಕನ್ನಡದಲ್ಲಿ ಇಂದು ಯಂಡ್ಕುಡ್ಕ ರತ್ನ ಇರುತ್ತಿದ್ದಿಲ್ಲ, ಪುರುಷ ಸರಸ್ವತಿ ಬರುತ್ತಿದ್ದಿಲ್ಲ. ಈ ಪುರುಷ ಸರಸ್ವತಿ ಕೃತಿಯ ಕವಿತಾಪಾಕ ಯಾವುದು ಎನ್ನುವ ಪ್ರಶ್ನೆಗೆ ಪೈ ಅವರು. “ಇದನ್ನು ಹಾಗಲಕಾಯಿಯ ಪಾಕ ಎನ್ನಬೇಕು. ಕಹಿ ಎಂದೇ ರುಚಿ, ಕಹಿಯೆಂದೇ ಪತ್ಯವೆನಿಸುವ ಹಾಗಲಕಾಯಿ” ಎನ್ನುವರು. ಪುರುಷ ಸರಸ್ವತಿಯ ವ್ಯಂಗ್ಯ ಕಟುವಾದರೂ ಆರೋಗ್ಯಕರವಾದುದು ಎನ್ನುವುದನ್ನು ಪೈಯವರು ನಿರೂಪಿಸಿದ್ದಾರೆ.

ಪೈಯವರು ಅನೇಕ ಭಾಷೆಗಳ ಮೇಲೆ ಪ್ರಭುತ್ವ ಪಡೆದವರೆಂದು ನಮಗೆಲ್ಲಾ ತಿಳಿದಿದೆ. ಅವರು ಯಾವ ಭಾಷೆಯನ್ನೂ ದ್ವೇಷಿಸಿದವರಲ್ಲ. ಅವರ ತಾಯಿ ಭಾಷೆ ಕೊಂಕಣಿಯಾದರೂ ಅದಕ್ಕು ಮಿಗಿಲಾಗಿ ಮೈಗೂಡಿಸಿಕೊಂಡು ಬೆಳೆದುಬಂದ ಅವರ ಬದುಕಿನ ಸರ್ವಸ್ವವಾದ ಭಾಷೆ ಕನ್ನಡ. ಕನ್ನಡಕ್ಕೆ ಅಗ್ರಸ್ಥಾನ. ಅನಂತರ ಇತರ ಭಾಷೆಗಳ ಸರದಿ ಎಂದೇ ಪುರುಷ ಸರಸ್ವತಿಯಲ್ಲಿ ಕಾಣುವ ಇಂಗ್ಲಿಷ್ ಪದಗಳ ವಿಶೇಷ ಬಳಕೆಗೆ ಪೈಯವರು ಪ್ರತಿಕ್ರಿಯಿಸಿದ್ದಾರೆ. “ಆದರೆ ಇವರೇಕೋ ಅಂದರೆ ರಾಜರತ್ನಂ ಮಣಿಪ್ರವಾಳಕ್ಕೆ ಮನಸೋತ ಈ ಕೃತಿಯಲ್ಲಿ ಸೇರಿರುವ ಇಂಗ್ಲಿಷ್ ಮಾತುಗಳಾದರೂ ಇದನ್ನು ರುಚಿಗೆಡಿಸವೆಂದು ಮಾತ್ರ ನಂಬಲಾರೆ” ಎಂದಿದ್ದಾರೆ.

ಭರತಖಂಡ ಆಂಗ್ಲರ ಆಡಳಿತೆಗೆ ಒಳಗಾಗಿ ‘ಭಾರತದ ಇತಿಹಾಸ’ ಆಂಗ್ಲ ವಿದ್ವಾಂಸರಿಂದಲೇ ರಚಿತವಾದಾಗ ಭಾರತಕ್ಕೆ ಆಗಿರುವ ಅನ್ಯಾಯವನ್ನು ಪೈ ಅವರು ನಿಷ್ಠೂರವಗಿ ಖಂಡಿಸಿದ್ದಾರೆ ; ‘ಪ್ರಾಕ್ತನ ವಿಮರ್ಶಕ – ಮುಂದಣ ಹೆಜ್ಜೆ’ ಪ್ರಬಂಧದಲ್ಲಿ ಅವರ ವಿಮರ್ಶೆ ಹೀಗಿದೆ. “ಯಾವೊಂದು ಜನಾಂಗವಾದರೂ ಇತರ ಜನಾಂಗಗಳ ಸ್ವಾತಂತ್ರ್ಯವನ್ನು ಅಪಹಿರಿಸಿ ಅವನ್ನು ಆಳುತ್ತಿರುವಷ್ಟಕ್ಕೆ ಆ ಜನಾಂಗದ ಪಿತ್ತ ಸಹಜವಾಗಿ ಕೆದರುತ್ತದೆ. ಆ ಕಾರಣ ಅದಕ್ಕೆ ಒಂದು ಬಗೆಯ ಮಾನಸಿಕ ಕಾಮಾಲೆ ಹಿಡಿದು ಅದರ ಕಣ್ಣಿಗೆ ಜಗತ್ತೆಲ್ಲವೂ ಹಳದಿಸುತ್ತದೆ. ಆ ಕಾಮಾಲೆಯಿಂದ ಯರಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಆಂಗ್ಲರು ನಮ್ಮಲ್ಲಿ ನಡೆಸಿದ  ವಿಧಾನದಿಂದಲೇ ಪರತಂತ್ರವಾದ ದೇಶದ ಇತಿಹಾಸದಲ್ಲಿ ಹುಡುಕಾಡವಂದೂ ಅದನ್ನು ಬರೆದಿಡುವಂದೂ ಅದೇ ಹಳದಿ ಕಣ್ಣಿನಿಂದ ಕಂಡರು. ತಮ್ಮಂದಿನ ಇಲ್ಲಿ ಇತಿಹಾಸವನ್ನು ಹೇಗೂ ತುಂಬ ಆ ಹೊಂಬಣ್ಣದ ಮಸಿಯಿಂದಲೇ ಬರೆದಿಟ್ಟರು. ಅವರು ನಮ್ಮ ಇತಿಹಾಸದಲ್ಲಿ ಬರೆದಿದ್ದೆಲ್ಲಾ ಸುಳ್ಲು, ಎಂದು ಗುಡುಗಿರುವ ಪೈ ಅವರು ಆಂಗ್ಲನನ್ನು ‘ಬೆಳ್ಳ’ನೆಂದು ಕರೆದಿದ್ದಾರೆ. ಅವರ ಸುಳ್ಳು ಹೇಳಿಕೆಗಳನ್ನು ಹೀಗೆ ಹೀಯಾಳಿಸಿದ್ದಾರೆ: “ಭಲಾ ಸುಳ್ಳು ಅವರು (ಆಂಗ್ಲರು) ಕೊಟ್ಟರೆ ಜಗತ್ತಿಗೆ ಉಂಟು, ಮತ್ತೂ ನವು ಸುಳ್ಳರಂತೆ, ಇದನ್ನೆಲ್ಲ ಈ ತನ್ಕ ಮೂಗು ಹಿಡಿದು ಕುಡಿಸುವಂದು ನಾವು ನುಂಗಬೇಕಾದರೆ ಇನ್ನೂ ಈ ಭಟ್ಟರಿಂದ ಸೇದಬೇಕೆ? ಆ ಕಂತೆಯನ್ನು ಕಟ್ಟಿಕೊಂಡಿರಬೇಕೆ?’ ಆ ‘ಬೆಳ್ಳ’ನು ಬರೆದ ಭಾರತದ ಇತಿಹಾಸ ಪೂರ್ತಿ ವ್ಯತ್ಯಾಸಗೊಳ್ಳಬೇಕು” ಎಂದು ಗುಡುಗಿ, ಭಾರತದ ಇತಿಹಾಸಜ್ಞರು ಹೇಗೆ ಭಾರತದ ನೈಜ ಇತಿಹಾಸ ರೂಪಿಸಬೇಕೆಂದು ತಿಳಿಸಿದ್ದಾರೆ.

‘ಕರ್ನಾಟಕ ಕವಿಚರಿತೆ’ ತೃತೀಯ ಸಂಪುಟವನ್ನು ಕುರಿತು ವಿವೇಚಿಸುತ್ತ ಆರ್. ನರಸಿಂಹಾಚಾರ್ಯರ ಶ್ರಮವನ್ನು ಮೆಚ್ಚಿಕೊಳ್ಳುತ್ತಾರೆ. “ಅಮೇರಿಕಾ ಖಂಡ’ವನ್ನು ನಿರ್ಮಿಸಿದಾತನೇನೂ ಕೊಲಂಬಸ್ ಅಲ್ಲ. ಆತನಿಂದ ಎಷ್ಟೋ ಸಹಸ್ರ ಕಾಲಕ್ಕೆ ಹಿಂದಣಕಿದೇನೋ ಆಗಿದ್ದಿತು ಎಂಬುದೆಷ್ಟು ಯತಾರ್ಥವೋ ಅದನ್ನು ಕಂಡು ಹಿಡಿದು ಪಡುವಣಿಗರ ನಾಗರೀಕತೆಗೆ ಅದನ್ನು ಸವಡಿಸಿದವನು ಆತನೆಂಬುದು ಅಷ್ಟೇ ಯತಾರ್ಥ. ಹಾಗೇ ನರಸಿಂಹಾಚಾರ್ಯರ ಶ್ರಮ” ಎಂದು ಹೇಳಿ ತೂಕಿ, ಗುಡಿ, ಬರ್ದು ಮೊದಲಾದ ಪದಗಳ ಮರುವಿವೇಚನೆ ಮಾಡಿದ್ದಾರೆ. ಜೊತೆಗೆ ಆರ್. ನರಸಿಂಹಾಚಾರ್ಯರು ಒಂದು ಮತ್ತು ಎರಡನೆಯ ಸಂಪುಟಗಳಿಗೆ ಎತ್ತಿರುವ ವಿದ್ವಾಂಸರ ಆಕ್ಷೇಪೆಗಳಿಗೆ ಒಂದೊಂದಾಗಿ ಉತ್ತರ ಕೊಟ್ಟಿದ್ದಾರೆ; ಆಕ್ಷೇಪ – ಉತ್ತರ ಹೇಗಿರಬೇಕೆಂಬುದನ್ನು ಪೈ ಅವರು ಹೀಗೆ ನಿರೂಪಿಸಿದ್ದಾರೆ :

“ಸಾಹಿತ್ಯ – ಇತಿಹಾಸಗಳಲ್ಲಿ ಯಾರಿಗಾದರು ಹೆರವರ ಅಭಿಪ್ರಾಯವು ಸರಿಯಲ್ಲವೆನಿಸಿದರೆ, ಹಾಗೇಕೆಂದು ಸಾಧಾರಣವಾಗಿ ವ್ಯಕ್ತಗೊಳಿಸಬೇಕಾದುದು ತಂತಮ್ಮ ಆಕ್ಷೇಪವನ್ನಲ್ಲದೆ ವ್ಯಕ್ತಿ ವಿಷಯಕವಾದ ಅಧಿಕ್ಷೇಪವನ್ನಲ್ಲ. ಅಂಥ ಆಕ್ಷೇಪವನ್ನು ಬರೆದ ಮಸಿ ಕಪ್ಪು ತಾನೆ. ಬರಹವಾದರು ಕಪ್ಪೆ : ಆದರೆ ಆ ನುಡಿಗಳಲ್ಲಿ ಮಾತ್ರ ರವಷ್ಟಾದರೂ ಕಪ್ಪಿರಬಾರತು – ಅವು ಕಪ್ಪು ಹಸುವಿನ ಬಿಳಿಯ ಹಾಲಿನಂತಿರಬೇಕು”. ಪೈ ಅವರು “ವಿಮರ್ಶೆ ಕೃತಿಯನ್ನು ಕುರಿತಿರಬೇಕೇ ಹೊರತು ವ್ಯಕ್ತಿಯನ್ನು ನಿಂದಿಸಬಾರದು. ಅದು ಎಂದೆಂದೂ ದೂಷಿತ. ಅದು ಸಾಹಿತ್ಯ ರಂಗದಲ್ಲಂತೂ ಹೇಗೂ ಪ್ರವೇಶಿಸಬಾರದು” ಎಂದು ವಿಮರ್ಶೆಯ ಮೂಲತತ್ವವನ್ನು ಪ್ರತಿಪಾದಿಸಿದ್ದಾರೆ. ಅವರ ಮಾತು ಅಂದಿನ ವಿಮರ್ಶಕರಿಗಿಂತಲೂ ಇಂದಿನ ವಿಮರ್ಶಕರಿಗೆ ಒಂದು ಎಚ್ಚರಿಕೆ ಮಾತಾಗಿದೆ ಎಂದರೆ ತಪ್ಪಾಗಲಾರದು. ಕವಿಚರಿತೆಯ ಮೂರನೇ ಸಂಪುಟದ ಮುದ್ರಣ ಮಾತಾಗಿದೆ ಎಂದರೆ ತಪ್ಪಾಗಲಾರದು. ಕವಿಚರಿತೆಯ ಮೂರನೇ ಸಂಪುಟದ ಮುದ್ರಣ ದೋಷವನ್ನು ಗಮನಿಸಿ ನಿಷ್ಠುರವಾಗಿ ‘ಇಂಥ ಗ್ರಂಥಕ್ಕೆ ಈ ಮುದ್ರಣ ಎಂದಿಗೂ ಸರಿಯಲ್ಲ’ ಎಂದಿದ್ದಾರೆ.

ಬಂಕಿಮಚಂದ್ರರ ಶ್ರೀಕೃಷ್ಣ ಚರಿತ್ರೆಯನ್ನು ಆರ್. ವ್ಯಾಸರಾಯರು ಅನುವಾದಿಸಿದ್ದಾರೆ. ಆ ಅನುವಾದಿತ ಕೃತಿಯನ್ನು ವಿಮರ್ಶಿಸುತ್ತಾ ಪೈ ಅವರು ವ್ಯಾಸರಾಯರ ಅನುವದನ ಕಲೆಯನ್ನು ಮೆಚ್ಚಿದ್ದಾರೆ. ಜೊತೆಯಲ್ಲೇ “ಈ ಗ್ರಂಥದಲ್ಲಿ ಅಲ್ಲಲ್ಲಿ ಹಲವು ತಪ್ಪುಗಳಿವೆ. ಅಂಥವು ಯಾವ ಗ್ರಂಥದಲ್ಲಿಯೂ ಇರಬಾರದು. ಇಂಥ ಉದ್ ಗ್ರಂಥದಲ್ಲಿ ಸುತರಾಂ ಇರಬಾರದು” ಎಂದು ಹೇಳಿ ನಾಲ್ಕು ಪುಟಗಳಲ್ಲಿ ಆ ತಪ್ಪುಗಳನ್ನು ಎತ್ತಿತೋರಿದ್ದಾರೆ. ಬಂಗಾಳಿ ಭಾಷೆ ಬಲ್ಲ ಪೈಯವರು ಮೂಲ ಗ್ರಂಥದೊಡನೆ ತುಲನೆ ಮಾಡಿ ಹೇಳುತ್ತಾರೆ : ಕೃಷ್ಣಸೇ ಖಾನೇಗಿಯಾ ನಂದಕೇ ಲಿಯಾ ಆಸೇನ – ‘ಕೃಷ್ಣನು ಅಲ್ಲಿ ಹೋಗಿ ನಂದನನ್ನು ಕೊಂದು ಬಂದನು’. ಈ ವಾಕ್ಯವೇ ಭಾಷಾಂತರದಲ್ಲಿ ಬಿಟ್ಟುಹೋಗಿದೆ ಎಂದು ಪೂತನಿ ಮೊದಲಾದ ಅರಿಷ್ಟಗಳು, ಎನ್ನುವ ಭಾಷಾಂತರ ಸರಿಯಲ್ಲ. ‘ಪೂತನಿ ಹ ಇತೇ ಅರಿಷ್ಟ ಪರ್ಯಂತ ಕಂಸಾನುಚರ’ ಎಂದು ಮೂಲಪಾಠವನ್ನು ಕೊಟ್ಟು ಕನ್ನಡ ಅನುವಾದವನ್ನು ಹೀಗೆ ತಿಳಿಸುತ್ತಾರೆ : ‘ಪೂತನಿ ಮೊದಲ್ಗೊಂಡು ಅರಿಷ್ಟವರೆಗೂ ಕಂಸನ ಅನುಚರರು’ – ಇನ್ನೂ ಅನೇಕ ಪದಗಳ ಬಗೆಗೆ ಭಾಷಾಂತರ ಇನ್ನೂ ಉತ್ತಮಪಡಿಸಬಹುದಾಗಿತ್ತು ಎಂದು ಅನೇಕ ನಿದರ್ಶನಗಳ ಮೂಲಕ ವಿಮರ್ಶಿಸಿದ್ದಾರೆ. ಯಾವುದೇ ಗ್ರಂಥದ ವಿಮರ್ಶೆಯಾದರೂ ಆಳಕ್ಕೆ ಇಳಿಯುವ ಸಂಪೂರ್ಣ ಯತ್ನ ಪೈಯವರ ವಿದ್ವತ್ತಿಗೆ ಸಾಕ್ಷಿಯಾಗಿದೆ.

ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಇಂಗ್ಲಿಷ್ ಗೆ ಭಾಷಾಂತರಗೊಂಡು ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಿತವಾಗಿದೆ. ಪೈಯವರು ಬಂಗಾಳಿ ಹಾಗೂ ಇಂಗ್ಲಿಷ್ ಭಾಷಾಂತರ ಕೃತಿ ಎರಡನ್ನೂ ನೋಡಿ ಕೆಲವು ಪುಟಗಳನ್ನು ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ಶ್ರೀ ವಿ.ಎ. ಶೆಣೈ ಅವರು ಇಂಗ್ಲಿಷ್ ಕೃತಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ‘ಗೀತಾಂಜಲಿ’ ಕೃತಿಯನ್ನು ಪೈ ಅವರು ವಿಮರ್ಶಿಸುತ್ತಾ ಮೂಲ ಬಂಗಾಳಿ ಕೃತಿಗಿಂತಲೂ ಇಂಗ್ಲಿಷ್ ಭಾಷಾಂತರ ಕೃತಿಯೇ ಎಷ್ಟೋ ಲೇಸಾಗಿದೆ ಎಂದು ತಿಳಿಸಿದ್ದಾರೆ. ಶೆಣೈ ಅವರ ಭಾಷಾಂತರ ಕುರಿತು ಹೀಗೆ ಹೇಳುತ್ತಾರೆ : “ತಮ್ಮ ಭಾಷಾಂತರದ ಕೆಲಕೆಲ ಗೀತಗಳಲ್ಲಿ ನನ್ನ ಪ್ರಥಮ ದೃಷ್ಟಿಗೆ ತೋರಿದುದೆಂದರೆ ಅದರಲ್ಲಿ ತಾವು ಉಪಯೋಗಿಸಿದ ವಿಶಿಷ್ಟ ಮಾದರಿಯ ಕನ್ನಡ ಭಷೆ ಹಗೂ ಶೈಲಿ. ಉದಾ : ಅತ್ಯಂತ ಸಂತೋಷದಿಂದ ಎಂಬಿತ್ಯಾದಿಯಾದ ಪ್ರಥಮ ಪದ್ಯವನ್ನುನಾನಾದರೆ ಹೀಗೆ ಬರೆಯುತ್ತಿದ್ದೆ – ‘ನಿನ್ನ ಅತ್ಯಂತ ಸಂತೋಷದಿಂದ ನೀನು ನನ್ನನ್ನು ಅಂತ್ಯರಹಿತನಾಗಿಸಿರು ಈ ಒಡಕ ಪಾತ್ರವನ್ನು ನೀನು ಆಗಾಗ ಬರಿದಾಗಿಸುತ್ತಿರುವಿ. ನಿರಂತರವೂ ನೀ ಇದರಲ್ಲೆ ನವಜೀವನವನ್ನು ತುಂಬುತ್ತಿರುವಿ’ – ತವು ಉಪಯೋಗಿಸಿದ ಬಗೆಯ ತಿರುವು ಮರುವಿನ ಭಾಷೆಯನ್ನು ಗದ್ಯದಲ್ಲಿ ನಾನೊಪ್ಪುವುದಿಲ್ಲ. ನಾನು ಒಪ್ಪುವ ಗದ್ಯಶೈಲಿ ಎಂದರೆ ಬಾಣದ ಗತಿಯಂತೆ ತೀರಾ ನೆಟ್ಟಗಾಗಿರಬೇಕು. ಇದೇ ನನ್ನ ಗದ್ಯ ಶೈಲಿಯ ಮೂಲ ಸೂತ್ರ. ನಾನೂ ಹೀಗೆ ಎನ್ನುವೆನೆಂದು ತಾವು ಹಾಗೆ ಎನ್ನಬೇಕೆಂದಿಲ್ಲ ಅಥವಾ ನನ್ನ ಈ ಮಾತನ್ನು ಒಂದು ಸೂಚನೆ ಎಂದು ತಿಳಿಯಬೇಕೇ ವಿನಃ ಆದೇಶ ಎಂದು ಸರ್ವಥಾ ಬಗೆಯಬಾರದು” ಎಂದು ವಿನಯದಿಂದ ಹೇಳಿದ್ದಾರೆ. ಗೋವಿಂದ ಪೈ ಅವರ ಇಂದಿನ ವಿಮರ್ಶಾರೀತಿ ಅಷ್ಟು ಸರಿಯಾಗಿ ಕಾಣಲಾರದು. ಪೈಯವರ ಶೈಲಿ ಭಾಷಾ ಪ್ರಯೋಗ ಶೆಣೈ ಅವರಿಗೆ ಹೇಗೆ ಸಾಧ್ಯವಾದೀತು? ಹಾಗಾದರೆ ಎಲ್ಲರೂ ಪೈ ಅವರೇ ಆಗಬೇಕಾದೀತು. ವ್ಯಕ್ತಿಯಿಂದ ವ್ಯಕ್ತಿಗೆ ಭಾಷೆ ಶೈಲಿಯ ಅಂತರವಿರುವುದರಿಂದಲೇ ಅವರವರು ಅವರವರೇ ಆಗಿರಲು ಸಾಧ್ಯ. ಸಾಮಾನ್ಯವಾದ ಶೈಲಿಯನ್ನು ಉತ್ತಮಪಡಿಸಿಕೊಳ್ಳುವಲ್ಲಿ ಭಾಷೆಯನ್ನು ಸಮರ್ಥ ರೀತಿಯಲ್ಲಿ ದುಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬ ಲೇಖಕನೂ ಪ್ರಯತ್ನಿಸಬೇಕು. ಬಹುಶಃ ಆ ಉದ್ದೇಶವೇ ಪೈ ಅವರ ಮಾತುಗಳಲ್ಲಿ ಇರಬಹುದು.

ಮೈಸೂರು ಶಾಸನ ಇಲಾಖೆಯ ವರದಿ (೧೯೨೯) ಮತ್ತು ಚಂದ್ರವಳ್ಳಿಯಲ್ಲಿ ನಡೆಸಿದ ಭೂ ಸಂಶೋಧನೆಯ ವೃತ್ತಾಂತ – ಅದರ ಪ್ರಧಾನರಾದ ಡಾ. ಕೃಷ್ಣರವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಾ ಅನೇಕ ಐತಿಹಾಸಿಕ ಸಂಗತಿಗಳಿಗೆ ಮತ್ತೊಂದು ಮುಖದ ಪರಿಚಯವನ್ನು ಕೊಟ್ಟು ಅವುಗಳಿಗೆ ಸೂಕ್ತ ವಿವರಣೆ ಬೇಕೆಂದು ಕೇಳಿದ್ದಾರೆ. ಒಂದು ಸಂಸ್ಥೆ ಮಾಡುವ ಕೆಲಸವನ್ನು ಏಕಾಂಗಿಯಾಗಿ ಒಬ್ಬ ವ್ಯಕ್ತಿ ಪಯ ಮಾಡಿದ್ದಾರೆ. ತುಂಬು ವಿದ್ವತ್ತಿನ ಜೊತೆಗೆ ತುಂಬು ವಿನಯ ಅವರ ವ್ಯಕ್ತಿತ್ವವನ್ನು ಹಿರಿದಾಗಿಸಿದೆ. ಆ ವರದಿಯ ಬಗ್ಗೆ ಪೈ ಹೇಳುತ್ತಾರೆ : “ಇನ್ನು ಈ ವರದಿಯ ಐದನೆಯ ಭಾಗದಲ್ಲಿ ೧೧೮ ಶಾಸನಗಳ ವಿಚಾರವಿದೆ. ಅವೆಲ್ಲವನ್ನೂ ತುಂಬ ಪರಿಶ್ರಮದಿಂದ ತುಂಬ ತಾಳ್ಮೆಯಿಂದ ವಿಚಾರಿಸಿದೆ. ಆದಕಾರಣ ಈ ಕೆಳಗೆ ನಮೂದಿಸಿರುವ ಕೆಲವನ್ನು ಕುರಿತು ನನಗೆ ಭಿನ್ನಾಭಿಪ್ರಾಯ ಉಂಟಾಗಿ ನಾನದನ್ನು ಇಲ್ಲಿ ಸೂಚಿಸುವೆನಾದರೆ, ಅವರು ತಪ್ಪಿರುತ್ತಾರೆಂದು ಬೆರಳೂರಿ ತೋರಿಸಲಿಕ್ಕಲ್ಲ. ತನ್ನ ತರ್ಕಕ್ಕೆ ತನ್ನ ವಿಚಾರಕ್ಕೆ ಹೀಗೆ ತೋರುತ್ತದೆಂಬುದನ್ನು ತೋರಿಸಲಿಕ್ಕಲ್ಲ. ಬಲ್ಲವರ ಮುಂಡಿಟ್ಟು ತಪ್ಪಿರುವಲ್ಲಿ ತಿದ್ದುವುದು ತಿದ್ದಿಸುವುದು ಹಾಗು ತಿದ್ದಿಕೊಳ್ಳುವುದು ವಿಮರ್ಶಕನ ಕರ್ತವ್ಯವೆಂಬುದರಿಂದ ತಾನೆ ಆ ಜಿಜ್ಞಾಸನದ ನಿರ್ದೋಷ ದೃಷ್ಟಿಯಿಂದ ಅಂಥವರನ್ನು ನಾನಿಲ್ಲಿ ತರ್ಕಿಸಿರುತ್ತೇನೆ”. ಇದು ಉತ್ತಮ ವಿಮರ್ಶಕನಿಗೆ ಇರಬೇಕಾದ ಮುಖ್ಯ ಗುಣ. ಪೈಯವರಲ್ಲಿ ಅಂಥ ವಿಮರ್ಶಕನ ಪ್ರಜ್ಞೆ ಇತ್ತು.

ಇವರ ವಿಮರ್ಶಕನ ಪ್ರಬಂಧಗಳು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸತ್ವದಿಂದ ಕನ್ನಡ ವಿಮರ್ಶನ ರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ವಿಮರ್ಶೆಯ ಒರೆಗಲ್ಲಿನಿಂದ ಗೆದ್ದುನಿಂತ ಪೈ ಅವರ ಯಾವುದೇ ಕೃತಿ ಕನ್ನಡ ಸಾಹಿತ್ಯದ ಗಟ್ಟಿ ಕೊಡುಗೆಯಾಗಿರುವುದರಲ್ಲಿ ಸಂದೇಹವಿಲ್ಲ. ಸ್ವಕೃತಿ ವಿಮರ್ಶೆ – ಪರಕೃತಿ ವಿಮರ್ಶೆಯಲ್ಲಿ ಒಂದೇ ರೀತಿಯ ಭಾವವುಳ್ಳ ಕವಿ, ಗೋವಿಂದ ಪಯ ಎಂದರೆ ಅತಿಶಯದ ಮಾತಾಗಲಾರದು. ಅವರ ಒಂದೊಂದು ವಿಮರ್ಶನ ಪ್ರಬಂಧವೂ ಅವರ ಆಳವಾದ ಹರಹಿನಿಂದ ಕೂಡಿದ ವಿದ್ವತ್ ಪ್ರತಿಭೆಗೆ ಸಾಕ್ಷಿಯಾಗಿದೆ. ಇಷ್ಟಾದರೂ ಗೋವಿಂದ ಪೈಯವರ ಬರಹಕ್ಕಿಂತ ಬದುಕು ದೊಡ್ಡದು. ಅವರದು ಮಹಾಕಾವ್ಯದ ಬದುಕು.

ಆಧಾರ ಗ್ರಂಥಗಳು ಮತ್ತು ಲೇಖನಗಳು

೧. ಕನ್ನಡ ಮೊರೆ

೨. ಗೋವಿಂದ ಪಯ ಬದುಕು ಬರಹ : ಹಂಪನಾ : ಕಾವ್ಯಜೀವಿ

೩. ಪ್ರಬುದ್ಧ ಕರ್ನಾಟಕ – ಸಂಪುಟ : ೧೧, ೧೩

೪. ಗೋವಿಂದ ಪೈ ವಾಙ್ಮಯ ದರ್ಶನ

೫. ದೀವಿಗೆ

೬. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಸಂಪುಟ : ೨೭