“ಪತಿತ ನಾರಿಯರ ಬಗ್ಗೆ ನಿಮ್ಮ ಅಂತಃಕರಣದಲ್ಲಿ ತಿರಸ್ಕಾರವಿಲ್ಲ; ಸಮವೇದನೆ ಇದ್ದಿತು, ಅನುಕಂಪವಿದ್ದಿತು, ಏಕೆಂದರೆ ನೀವು ಪತಿತೆಯಲ್ಲಿಯೂ ದೈವೀ ಶಕ್ತಿಯ ಮಿಂಚನ್ನು ಕಂಡಿದ್ದೀರಿ.”

ಶರಶ್ಚಂದ್ರರ ನಿಧನದ ನಂತರ ಅವರನ್ನು ಕುರಿತು ಜನತೆ ಅಭಿವ್ಯಕ್ತಗೊಳಿಸಿದ ಅನೇಕ ವಿಷಯಗಳಲ್ಲಿ ನಾರಿಯರನ್ನು ಕುರಿತ, ಈ ಮೇಲೆ ಉಲ್ಲೇಖಿಸಿದ ಕೆಲವು ವಾಕ್ಯಗಳು ಗಮನಾರ್ಹವಾಗಿವೆ.

ಬೇರೆ ಬೇರೆ ಪ್ರವೃತ್ತಿಯ ಅನೇಕ ಸ್ತ್ರೀ ಪಾತ್ರಗಳನ್ನು ಶರತ್ ರು ಚಿತ್ರಿಸಿದ್ದಾರೆ. ಅವರ ಪ್ರಮುಖ ಕಾದಂಬರಿಗಳಿಂದ ಕೆಲವೇ ಪ್ರಧಾನ ಸ್ತ್ರೀ ಪಾತ್ರಗಳನ್ನು ಆಯ್ಕೆ ಮಾಡಿದರು ಅವುಗಳ ಸಂಖ್ಯೆ ಹತ್ತಿರಹತ್ತಿರ ಅರವತ್ತನ್ನು ಮುಟ್ಟುತ್ತದೆ. ಆದ್ದರಿಂದ ನಾನು ಪ್ರಸ್ತುತ ಪ್ರಬಂಧದಲ್ಲಿ ಕೇವಲ ಎಂಟು. ಹತ್ತು ಪ್ರಮುಖ ಕಾದಂಬರಿಗಳನ್ನು ಗಮನದಲ್ಲಿರಿಸಿಕೊಂಡು ಅವುಗಳಲ್ಲಿ ಕಂಡುಬರುವ ಪ್ರಧಾನ ಸ್ತ್ರೀ ಪಾತ್ರಗಳಲ್ಲಿ ಕೆಲವನ್ನು ಪ್ರಾತಿನಿಧಿಕವಾಗಿ ಪರಿಚಯಿಸಲು ಪ್ರಯತ್ನಿಸಿದ್ದೇನೆ ಮತ್ತು ಈ ಪ್ರಬಂಧವನ್ನು ಸಿದ್ಧಪಡಿಸುವಲ್ಲಿ ಭಾಷಾಂತರಗೊಂಡಿರುವ ಕನ್ನಡ ಕಾದಂಬರಿಗಳನ್ನೂ ಜೊತೆಗೆ ಸನ್ಮಾನ್ಯ ಶ್ರೀ ಗುರುನಾಥ ಜೋಶಿಯವರು “ಶರತ್ ಚಂದ್ರ ಚಟ್ಟೋಪಾಧ್ಯಾಯ” – ಗ್ರಂಥವನ್ನೂ ವಿಶೇಷವಾಗಿ ಉಪಯೋಗಿಸಿಕೊಂಡಿದ್ದೇನೆ.

ಶರತ್ ಚಂದ್ರರ ಸಾಹಿತ್ಯ ಸೃಷ್ಟಿಯ ಕಾಲದಲ್ಲಿ, ಅಂದಿನ ಬಂಗಾಲ ಸಮಾಜದಲ್ಲಿ ಏಕೆ, ಇಡೀ ಭಾರತೀಯ ಸಮಾಜದಲ್ಲಿಯೇ ಒಂದು ಬಗೆಯ ಕ್ರಾಂತಿಮಯ ವಾತಾವರಣ ಏರ್ಪಟ್ಟಿತ್ತು. ರಾಜರಾಜಮೋಹನ ರಾಯರ ‘ವಿಧವಾ ವಿವಾಹ ಪದ್ಧತಿ’ ಸಮಾಜದಲ್ಲಿ ಕಾಲಿರಿಸಿತ್ತು. ‘ಸತಿ’ದೂರ ಸರಿದಿತ್ತು. ಬ್ರಹ್ಮಸಮಾಜ ಹಾಗೂ ವೈಷ್ಣವ ಪಂಥದವರ ತಿಕ್ಕಾಟ ನಡೆದಿತ್ತು. ಭಾರತದ ಸ್ವಾತಂತ್ರ್ಯದ ಬಿರುಗಾಳಿ ಬೀಸುತ್ತಿತ್ತು. ಆಂಗ್ಲ ಶಿಕ್ಷಣ, ಸಂಸ್ಕೃತಿ ಜನತೆಯಲ್ಲಿ ಪ್ರಭಾವ ಬೀರಿ ತಲೆಹಾಕುತ್ತಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸ್ತ್ರೀ ಸಮೂಹ ಹೇಗೆ ತನ್ನ ಪ್ರತಿಕ್ರಿಯೆಯನ್ನು ತೋರಿಸಿತು? ಅದನ್ನು ಸಮಾಜ ಪುರಸ್ಕರಿಸಿತೇ? ತಿರಸ್ಕರಿಸಿತೇ?

ಪರಂಪರಾನುಗತವಾಗಿ ಬಂದ ರೂಢಮೂಲ ಪದ್ಧತಿಗಳನ್ನು ತಿರಸ್ಕರಿಸಲು ತಿದ್ದಲು, ವ್ಯತ್ಯಾಸಗೊಳಿಸಲು ಸಮಾಜ ಪ್ರಥಮದಲ್ಲಿ ಸಾಮಾನ್ಯವಾಗಿ ಒಪ್ಪುವುದಿಲ್ಲ. ಆದರೆ ಸುಧಾರಣೆಗಳು ಬಲವತ್ತರವಾದಾಗ ಘರ್ಷಣೆ. ಸಮಸ್ಯೆಗಳು ಪ್ರಾರಂಭವಾಗುತ್ತವೆ ಈ ಘರ್ಷಣೆಗೆ ಸಮಸ್ಯೆಗಳಿಗೆ ಸಿಲುಕಿದ ವ್ಯಕ್ತಿಗಳು ಅನೇಕ ಬಾರಿ ತತ್ತರಿಸಿ ಹೋಗುತ್ತಾರೆ. ಸನಾತನ ಸಂಪ್ರದಾಯವಾಗಲಿ ನೂತನ ಅಭಿಪ್ರಾಯವಾಗಲಿ ಇವೆರಡರಲ್ಲಿ ಯಾವುದರ ಬಗ್ಗೆಯಾದರೂ ವ್ಯಕ್ತಿ ಎಷ್ಟೇ ದೃಢ ಅಭಿಪ್ರಾಯವನ್ನು ಹೊಂದಿದ್ದರೂ ಆ ಅಭಿಪ್ರಾಯ ಸಾರ್ವಜನಿಕ ಅಭಿಪ್ರಾಯವಾಗುವವರೆಗೂ ಆ ವ್ಯಕ್ತಿ ತಲೆಬಾಗಬೇಕಾಗುತ್ತದೆ. ಹೋರಾಟ ಅವಿರತವಾಗಿ ನಡೆದರು ಸ್ವಲ್ಪ ಸೋಲನ್ನು ಎದರಿಸಲೇಬೇಕಾಗುತ್ತದೆ.

‘ಸ್ತ್ರೀ’ ಸಮಾಜದ ಬಹುಮುಖ್ಯ ಅಂಗ. ಅಂಥವಳು ಈ ಜಂಜಾಟದ ಕರಾಳ ಹಿಡಿತಕ್ಕೆ ಸಿಲುಕಿದಾಗ, ಅವಳ ಮಾನಸಿಕ ಹೊಯ್ದಾಟ, ಅವಳ ನೈತಿಕ ಮೌಲ್ಯಗಳ ವಿಪರ್ಯಾಯ – ಇವುಗಳನ್ನು ಚೆನ್ನಾಗಿ ಗುರುತಿಸಬಹುದಾಗಿದೆ. ಈ ದೃಷ್ಟಿಯಲ್ಲಿ ಸ್ತ್ರೀಯರು ಎಷ್ಟರಮಟ್ಟಿಗೆ ಕಾರಣೀಭೂತರಾಗಿದ್ದಾರೆ ಎನ್ನುವ ಪ್ರಶ್ನೆಗೆ ಬಹುಮಟ್ಟಿಗೆ ನಮಗೆ ಉತ್ತರ ದೊರೆಯುವುದು ಶರತ್ ಬಾಬುಗಳು ಚಿತ್ರಿಸಿರುವ ‘ಸ್ತ್ರೀ’ ಪಾತ್ರಗಳಿಂದ.

ಸುಧಾರಣೆ ಎಷ್ಟೇ ತೀವ್ರವಾಗಿ, ಕ್ರಾಂತಿಕಾರಿಯಾಗಿ ನಡೆದರು ಪ್ರಾರಂಭದ ದೆಸೆಯಲ್ಲಿ ಹೆಚ್ಚಿನ ಫಲಿತಾಂಶ ಸೋಲನ್ನೇ ಅವಲಂಬಿಸಿರುತ್ತದೆ ಎನ್ನುವ ಚಿತ್ರದ ಸಹಜ ನೋಟ ನಮಗೆ ಶರತರ ಸ್ತ್ರೀ ಪಾತ್ರಗಳಿಂದ ದೊರೆಯುತ್ತದೆ. ಶರತ್ ಚಂದ್ರರ ದೇಶ ಪರ್ಯಟನೆ, ವಿಭಿನ್ನ ಜನಾಂಗಗಳ ನಿಕಟಪರಿಚಯ, ಲಲಿತಕಲೆಗಳಲ್ಲಿ ಅವರಿಗಿದ್ದ ಅಭಿರುಚಿ, ಸಂಗೀತ – ಸಾಹಿತ್ಯದಲ್ಲಿನ ತೀವ್ರ ಹಂಬಲ – ಇವರ ಕಾದಂಬರಿಯ ಶಿಲ್ಪಕ್ಕೆ ಹೆಚ್ಚಿನ ಬಿಗಿಯನ್ನೂ ಬನಿಯನ್ನೂ ತಂದಿದೆ.

ಶರತ್ ಚಂದ್ರರು ಸ್ತ್ರೀ ಪಕ್ಷಪಾತಿಗಳು. ಇವರ ಸ್ತ್ರೀ ಪಾತ್ರಗಳು ಪುರುಷ ಪಾತ್ರಗಳಿಗಿಂತ ಹೆಚ್ಚು ಸಹೃದಯರ ಹೃದಯವನ್ನು ಸೂರೆಗೊಳ್ಳುತ್ತವೆ. ಅವರ ಕೃತಿಗಳಲ್ಲಿ ಬರುವ ಪುರುಷ ಪಾತ್ರಗಳು ಸ್ತ್ರೀ ಹೃದಯಕ್ಕೆ ಮಾರುಹೋದ ವ್ಯಕ್ತಿತ್ವವನ್ನೇ ಬಹುಮಟ್ಟಿಗೆ ಉಳ್ಳವಾಗಿರುತ್ತವೆ. ಶರತ್ ರ ಹೆಣ್ಣುಮಕ್ಕಳು ಅಳುತ್ತಾರೆ, ಓದುಗರನ್ನೂ  ಚೆನ್ನಾಗಿ ಅಳಿಸುತ್ತಾರೆ – ಇಂಥ ಕೆಲವು ಅಪವಾದಗಳನ್ನು ಶರತ್ ಚಂದ್ರರ ಸ್ತ್ರೀ ಪಾತ್ರಗಳು, ಕೆಲವು ವಿಮರ್ಶಕರಿಂದ ಪಡೆದಿರುವುದುಂಟು. ಆದರೆ ಈ ಅಪವಾದವನ್ನು ತಳ್ಳಿಹಾಕುವ ವಿಮರ್ಶಕರ ಮತ್ತೊಂದು ಗುಂಪು ಇಲ್ಲದಿಲ್ಲ.

ಪುರುಷ ನಿರ್ಮಾಣದಲ್ಲಿ ಸ್ತ್ರೀ ಸಹಜವಾಗಿ ಮಹತ್ತರ ಪಾತ್ರವನ್ನು ವಹಿಸುತ್ತಾಳೆ. ತಾಯಿಯಾಗಿ ಪತ್ನಿಯಾಗಿ ಪುರುಷ-ಬದುಕಿನಲ್ಲಿ ಆಕೆಯ ಪಾಲು ಹಿರಿದು. ಆತನ ಏಳು-ಬೀಳು ಎರಡರಲ್ಲಿಯೂ ಆಕೆ ಪ್ರತ್ಯಕ್ಷವಾಗಿಯೇ ಪರೋಕ್ಷವಾಗಿಯೋ ಸಮಾನ ಪಾತ್ರಳಾಗಿರುತ್ತಾಳೆ. ಆಕೆಯ ಹಿರಿಮೆಯನ್ನು ಪುರುಷನೊಡನೆ ಇರುವ ಸಂಬಂಧದಲ್ಲಿಯೇ ತೂಗಿ ನೋಡುವುದು ಹೆಚ್ಚು. ಶರತರ ದೃಷ್ಟಿಕೋನ ಈ ದಿಸೆಯಲ್ಲಿ ಹರಿದಿದೆ. ಆದ್ದರಿಂದ ಅವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು ಸಹಜವಾಗಿ ಅನಿರ್ಬಂಧಿತ ನೈಜ ಚಿತ್ರಣಗಳಾಗಿ ರೂಪಗೊಂಡಿವೆ – ಇದು ಕೆಲವು ವಿಮರ್ಶಕರ ಆಭಿಮತ.

ರಾಮಸ್ವರೂಪ ಚತುರ್ವೇದಿಯವರು ಶರತರ ಸ್ತ್ರೀ ಪಾತ್ರಗಳ ಬಗ್ಗೆ ಒಂದು ದೊಡ್ಡ ನಿಬಂಧವನ್ನೇ ಸಿದ್ಧಪಡಿಸಿ, ಅದರಲ್ಲಿ, ಸ್ನೇಹಪೂರಿತ ತಾಯಂದಿರು, ಕಠೋರಪ್ರಕೃತಿಯ ಬಿರುಸು ಮಾತಿನ ಗೃಹಿಣಿಯರು, ಸಭ್ಯ ಸರಳ ಪ್ರೇಮಿಕೆಯ (ವಿವಾಹಿತರು, ಅವಿವಾಹಿತರು, ವಿಧವೆಯರು), ಗಹಣ ರಮಣಿಯರು (ಏಕನಿಷ್ಠ ಪ್ರೇಮದ ವಿರೋಧಿಗಳು) ಕರ್ಕಶ ಮುದುಕಿಯರು – ಎಂಬುದಾಗಿ ವಿಭಜಿಸಿದ್ದಾರೆ. ಈ ವರ್ಗೀಕರಣ ಸ್ವಯಂ ಪೂರ್ಣವಲ್ಲದಿದ್ದರೂ ಅಭ್ಯಾಸ ದೃಷ್ಟಿಯಿಂದ ಹೆಚ್ಚು ಸಹಕಾರಿಯಾಗಿದೆ.

ಮೃದು ಮಧುರ ಮರ್ಮಸ್ಪರ್ಶಿಯಾದ ಶೈಲಿಯಿಂದ ಸ್ತ್ರೀ ಪಾತ್ರಗಳ ನೈಜ ಚಿತ್ರಣವನ್ನು ಕೊಡಲು ಶರತ್ ಚಂದ್ರರು ಸಮರ್ಥರಾಗಿದ್ದಾರೆ. ವಾತ್ಸಲ್ಯಮಯ, ಸ್ನೇಹಪೂರಿತ ತಾಯಂದಿರ ಚಿತ್ರಗಳು ಮಕ್ಕಳನ್ನು ರೂಪಿಸುವಲ್ಲಿ, ತಿದ್ದುವಲ್ಲಿ ಉತ್ತಮ ಶಿಲ್ಪಗಳಾಗಿ ನಿಂತಿವೆ. ‘ವಿಪ್ರದಾಸ’ ಕಾದಂಬರಿಯ ಆದರ್ಶವಾದಿ ವಿಪ್ರದಾಸನ ತಾಯಿ ದಯಾಮಯಿ. ತನ್ನ ಹೆಸರನ್ನು ಅನ್ವರ್ಥಗೊಳಿಸಿಕೊಂಡಿದ್ದಾಳೆ. ವಿಪ್ರದಾಸನು ಚಿಕ್ಕಂದಿನಿಂದಲೇ ತನ್ನ ತಾಯಿಯನ್ನು ಕಳೆದುಕೊಂಡ. ಅನಂತರ ಅವನ ತಂದೆ ಯಜ್ಞೇಶ್ವರರು ದಯಾಮಯಿಯೊಡನೆ ಮರುಮದುವೆಯಾದರು. ಬಲಮಗ ವಿಪ್ರದಾಸನನ್ನು ದಯಾಮಯಿ ದಯೆಗೂ ಮಿಗಿಲಾದ ಮಿಗಿಲಾದ ವಾತ್ಸಲ್ಯದಿಂದ ಕಾಪಾಡಿದರು, ಬೆಳೆಸಿದರು. ಮಲತಾಯಿಯ ಕರಾಳ ದೃಷ್ಟಿಯನ್ನು ಆಕೆ ವಿಪ್ರದಾಸನ ಮೇಲೆ ಬೀರಲಿಲ್ಲ. ಬದಲಾಗಿ ಸ್ವಂತ ತಾಯಿಯ ಮಮತೆಯ ಕಡಲಲ್ಲಿ ಬೆಳೆಸಿರು. ದಯಾಮಯಿ ತನ್ನ ಮಲತಾಯಿ ಎನ್ನುವ ತಿಳಿವಳಿಕೆ ಮೂಡಿದ್ದು ವಿಪ್ರದಾಸ ವಯಸ್ಸಿಗೆ ಬಂದನಂತರ.

ತನ್ನ ಸ್ವಂತ ಮಗ ದ್ವಿಜದಾಸನಿಗಿಂತಲೂ ವಿಪ್ರದಾಸನ ಬಗ್ಗೆ ದಯಾಮಯಿಗೆ ಅತೀವ ಮಮತೆ. ಅಷ್ಟೇ ಅಚ್ಚುಮೆಚ್ಚು ಸೊಸೆ, ಸತಿ. ಪ್ರಾಚೀನ ಹಾಗೂ ಆಧುನಿಕತೆಗಳ ಕತ್ತರಿಯಲ್ಲಿ ಸಿಲುಕಿ ತೊಳಲಾಡುವ ವಂದನಾಳ ಗೌರವಕ್ಕೂ ದಯಾಮಯಿ ಪ್ರತ್ಯಕ್ಷಳಾಗುತ್ತಾಳೆ. ವಂದನಾ ಕೋಪಗೊಂಡು ದಯಾಮಯಿಯನ್ನು ಪ್ರಾಚೀನ ಹಿಂದೂ ಸಂಪ್ರದಾಯದ ಗೊಡ್ಡು ಎಂದು ಭಾವಿಸಿ ವಿಪ್ರದಾಸನ ಮನೆಯಿಂದ ಹೊರಟು ಕಲಕತ್ತೆಗೆ ಹೋದಾಗ, ಅಲ್ಲಿಗೇ ದಯಾಮಯಿ ಬರುವಳು. ವಂದನಾ ಆಕೆಯ ಆಕಸ್ಮಿಕ ಆಗಮನದಿಂದ ಚಕಿತಳಾಗುತ್ತಾಳೆ. “ಇದ್ದಕ್ಕಿದ್ದಂತೆ ಹೀಗೆ ಬರಲು ಹೇಗಾಯಿತು” ಎಂದು ವಂದನಾ ಕೇಳಿದಾಗ ದಯಾಮಯಿ “ಬರದೆ ಏನು ಮಾಡಲಮ್ಮ, ನನ್ನ ಒಬ್ಬ ಹುಚ್ಚು ಹುಡುಗಿ ಮುನಿಸಿಕೊಂಡು ಊಟ ಮಾಡದೆ ಬಂದಿರುವಾಗ ಅವಳನ್ನು ಮನೆಗೆ ಕರೆದುಕೊಂಡು ಹೋಗದೆ ನನಗೆ ಶಾಂತಿ ಎಲ್ಲಿ ಸಿಗುತ್ತದೆ?” ಎನ್ನುತ್ತಾಳೆ.

ವಾತ್ಸಲ್ಯಜನ್ಯ ಸ್ವಭಾವದಿಂದ ವಿಪ್ರದಾಸನ ಹಾಗೂ ಸತಿಯ ಮನಸ್ಸನ್ನು ಸುರೆಗೊಳ್ಳುವ ದಯಾಮಯಿ, ಮೇಲಿನ ತಿಳಿಹಾಸ್ಯದ ಮಾತುಗಳಿಂದ ವಂದನಾಳ ಮನಸ್ಸನ್ನು ಸೆರೆ ಹಿಡಿಯುತ್ತಾಳೆ. ದಯಾಮಯಿ ಸಂಸ್ಕೃತಿಯ ಅಪ್ಪಟ ನಾರಿಯಾಗಿದ್ದಾಳೆ. ಆಕೆಯ ಹೃದಯ ವೈಶಾಲ್ಯ, ಮಾತೃಪ್ರೇಮದ ದ್ಯೋತಕವಾಗಿದೆ. ವಿಧವಾ ಮಾತೆ ದಯಾಮಯಿಯೇ ಮನೆಯ ಯಜಮಾನಿ, ಕಾದಂಬರಿಯ ಸ್ನೇಹಪೂರಿತ ತಾಯಿ.

ಬಂಗಾಲದ ನಾರೀ ಸಮಾಜದಲ್ಲಿ ಇಂಗ್ಲಿಷ್ ಶಿಕ್ಷಣದ ಪರಿಣಾಮವಾಗಿ ಸೇರಿದ ಕೆಟ್ಟ ರೀತಿಯ ದುಷ್ಪರಿಣಾಮವನ್ನು ಶರತ್ ಚಂದ್ರರು ಚೆನ್ನಾಗಿ ತಿಳಿದಿದ್ದರು. ವಿದೇಶಿ ಸಂಸ್ಕೃತಿಯಿಂದ ಪ್ರೇರಣೆಗೊಂಡ ಕ್ಷತ್ರಿಯ ಆಚಾರ ವ್ಯವಹಾರಗಳಿಂದ ನಾರಿಯ ಸಹಜ ರೂಪವು ಎಷ್ಟು ವಿಕೃತ ಹಗೂ ಜೊಳ್ಳುಪೊಳ್ಳು, ಆಗಬಹುದೆಂಬುದನ್ನು ಈ ಕಾದಂಬರಿಯಲ್ಲಿ ಬರುವ ಕೆಲವು ಸ್ತ್ರೀ ಪಾತ್ರಗಳಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಭಾರತೀಯ ಹಾಗೂ ಪಾಶ್ಚಾತ್ಯ ಪರಂಪರೆಯ ತಿಕ್ಕಾಟವು ಈ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ. ಬಂಗಾಲದಲ್ಲಿ ಮ್ಯಾಡಮ್ ಗಳ ವರ್ಗವೆಂದರೆ ವಂದನಾಳ ಚಿಕ್ಕಮ್ಮನದು. ಮ್ಯಾಡಮ್ ಗಳಾಗುವ ಪ್ರಯತ್ನದಲ್ಲಿರುವ ವರ್ಗವೆಂದರೆ ಹೇಮ, ನಳಿನಿಯದು. ಮೂರನೆಯ ವಗ್ ವಂದನಾಳದು. ಈ ಮೂರು ವರ್ಗಗಳ ಬಂಗಾಲಿ ನಾರಿಯರ ಹೃದಯಸ್ಪರ್ಶಿ ಆಖ್ಯಾನವೇ ‘ವಿಪ್ರದಾಸ’ ಕಾದಂಬರಿಯ ವಸ್ತು, ಇದರಲ್ಲಿ ದ್ವಿಜದಾಸನೊಡನೆ ವಂದನಾಳ ವಿವಾಹ ಮಾಡಿಸಿ ಪಾಶ್ಚಾತ್ಯ ಹಾಗೂ ಭಾರತೀಯ ಸಂಸ್ಕೃತಿಗಳ ಉತ್ಕೃಷ್ಟ ಅಂಶಗಳ ಸಂಗಮದ ಮಹತ್ವವನ್ನು ಶರತ್ ಬಾಬುಗಳು ಪ್ರತಿಪಾದಿಸಿದ್ದಾರೆ.

ಈ ಕಾದಂಬರಿಯ ಸ್ತ್ರೀ ಪಾತ್ರಗಳೆಲ್ಲಾ ಕಥಾನಾಯಕ ವಿಪ್ರದಾಸನ ಪ್ರಭಾವಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಮಣಿಯುತ್ತಿವೆ ಎನ್ನುವುದನ್ನು ನೆನಪಿಸುವುದರ ಮೂಲಕ ‘ಸ್ತ್ರೀ ಪಾತ್ರಕ್ಕೆ ಶರತ್ ರು ಹೆಚ್ಚು ಮಹತ್ವ ಕೊಡುತ್ತಾರೆ’ ಎನ್ನುವ ಅಪವಾದದಿಂದ ದೂರ ಸರಿದಿದ್ದಾರೆ. ದಯಾಮಯಿಯನ್ನು ಹೋಲುವ ಪಾತ್ರಗಳಲ್ಲಿ ಸ್ನೇಹ ಹಾಗೂ ಮಮತೆಯ ಅಧಿಕ್ಯವನ್ನು ಕಾಣುತ್ತೇವೆ. ಹೃದಯವೈಶಾಲ್ಯ ಮತ್ತು ಪರೋಪಕಾರ ಗುಣ ವಿಶೇಷವಾಗಿ ಕಂಡುಬರುತ್ತದೆ.

ಮೇಜದೀದಿಯ ‘ಕಾದಂಬಿನಿ’ ಕಠೋರ ಪ್ರವೃತ್ತಿಯ ಕಠಿಣ ಹೃದಯದ ಕರ್ಕಶ ಮತುಗಾರ್ತಿಯಾಗಿ ಕಂಡುಬರುತ್ತಾಳೆ. ಇಂಥ ಪಾತ್ರಗಳಲ್ಲಿ ರಾಗಾತ್ಮಕ ಭಾವನೆಗಳು ಕಡಿಮೆ ಇದ್ದು ಸ್ವಾರ್ಥ ತಾಂಡವವಾಡುತ್ತಿರುತ್ತದೆ. ಲೋಭ ಕ್ರೋಧಗಳ ಕಠಿಣತನ ಇವುಗಳಲ್ಲಿ ಹೆಚ್ಚು ತೀಕ್ಷ್ಣವಾಗಿ ಕಂಡುಬರುತ್ತದೆ.

ಸಭ್ಯ ಸರಳ ಪ್ರೇಮಿಕೆಯರ ಪಾತ್ರಕ್ಕೆ ಶರತ್ ರ ಕಾದಂಬರಿಗಳಲ್ಲಿ ಅಗ್ರಸ್ಥಾನ. ಈ ಪ್ರೇಮಿಕೆಯರು ಆದರ್ಶಗುಣಗಳಿಂದ ಕೂಡಿ ಮೃದು-ಮಧುರ ನಡೆನುಡಿಗಳಿಂದ ಎಲ್ಲರನ್ನು ಆಕರ್ಷಿಸುತ್ತಾರೆ. ಇವರಲ್ಲಿ ವಿವಾಹಿತರಾದವರು ಪತಿಭಕ್ತೆಯರಾಗಿ ಸ್ನೇಹ-ಶೀಲದ ಮೂರ್ತಿಗಳಾಗಿ ರಾರಾಜಿಸುತ್ತಾರೆ. ಈ ವರ್ಗದಲ್ಲಿ ‘ಬಡೇದೀದಿ’ ಅಕ್ಕಾಬೆ, ನಾನು ಮಾಧವಿಯ ಮಾಧವಿಯನ್ನು ನೆನೆಯಬಹುದು. ಇದೇ ವರ್ಗದಲ್ಲಿ ಅವಿವಾಹಿತೆಯರು, ವಿವಾಹಿತೆಯರು, ಬಾಲವಿಧವೆಯರು, ವಿಧವೆಯರು ಕಂಡು ಬರುತ್ತಾರೆ. ‘ಬಡೇದೀದಿ’ ಕಾದಂಬರಿಯಲ್ಲಿ ಪ್ರಾಚೀನ ಸಾಮಾಜಿಕ ಪರಂಪರೆಯನ್ನು ತೊರೆಸಿ, ಒಬ್ಬ ವಿಧವಾ ನಾರಿಯಲ್ಲಿ ರಾಗಭಾವನೆಗಳು ಹುಟ್ಟಿದುದನ್ನು ತೋರಿಸಿದ್ದಾರೆ. ಮೇಲುನೋಟಕ್ಕೆ ಮಡಿವಂತರಂತೆ ಕಂಡು ವಿಧವೆಯರ ಗುಪ್ತ ಸಂಪರ್ಕದಿಂದಲೇ ತಮ್ಮ ದೇಹದ ತೀಟೆಯನ್ನು ತೀರಿಸಿಕೊಳ್ಳುತ್ತಿದ್ದವರನ್ನು ಬಯಲಿಗೆಳೆದಿದ್ದಾರೆ. ಅನಿವಾರ್ಯವಾಗಿ ಅನಾಥೆಯರಾಗಿ ಪುರುಷರ ಆಶ್ರಯದಲ್ಲೇ ನಿಲ್ಲಬೇಕಾಗಿಬರುತ್ತಿದ್ದ ಬಾಲವಿಧವೆಯರ, ವಿಧವೆಯರ ಮಾನಸಿಕ ಭಾವನೆಗಳನ್ನು ಪ್ರತಿಬಿಂಬಿಸಿದ್ದಾರೆ, ವಿಧವೆಯರ ಅನಿಸಿಕೆಗಳ ಅಭಿವ್ಯಕ್ತಿಗೆ ಯಾವ ಅವಕಾಶವೂ ಇಲ್ಲದಮತೆ ಮಾಡಿ, ಬಿಳಿ ಸೀರೆ ಉಡಿಸಿ, ಜೀವಚ್ಛವದಂತೆ ನಡೆಸಿಕೊಳ್ಳುತ್ತಿದ್ದ ಸಮಾಜಕ್ಕೆ ಶರತ್ ಚಂದ್ರರ ಈ ಕಾದಂಬರಿ ಒಂದು ಸಲುವಾಗಿ ನಿಂತಿತು. ವಿಧವೆಯರ ಸ್ಥಾನದಲ್ಲಿ ನಿಂತು ಸಮಾಜ ಅವರನ್ನು ಗುರುತಿಸಲಿಲ್ಲ. ಆ ಕೆಲಸವನ್ನು ಶರತ್ ಬಾಬುಗಳು ತಮ್ಮ ಕರ್ತವ್ಯವೆಂದು ಭಾವಿಸಿ ಈ ಕಾದಂಬರಿಯಲ್ಲಿ ಮಾಡಿದರು. ವಿಧವೆಯರ ಮನಸ್ಸಿನಲ್ಲಿ ಶೃಂಗಾರ ಭಾವನೆಗಳು ಮೂಡಬಹುದೇ ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಯಿತು. ವಿಧವೆಯ ಪಟ್ಟ ಕಟ್ಟಿಕೊಂಡಾಕ್ಷಣ ಈ ಭಾವನೆಗಳಿಗೆ ಬೆಲೆಯೇ ಇಲ್ಲವೆಂಬ ನಿಷ್ಕರುಣಿ ಸಮಾಜದ ಕರಾಳ ಹಸ್ತದಿಂದ ಹೆಣ್ಣನ್ನು ಬಿಡುಗಡೆ ಮಾಡುವ ಪ್ರಯತ್ನ ಪದರಪದರವಾಗಿ ಈ ಕಾದಂಬರಿಯಲ್ಲಿ ಮಾಧವಿಯ ಪಾತ್ರದ ಮೂಲಕ ಪ್ರಕಟಗೊಂಡಿದೆ.

ಪತಿಯ ಮರಣದ ನಂತರ ರೂಪವತಿಯೂ ಸ್ನೇಹಪರಳೂ ಆದ ಮಾಧವಿಯು ಮುಗ್ಧಮನದ ಸುರೇಂದ್ರನನ್ನು ಶಿಶುವಿನಂತೆ ನೋಡಿಕೊಳ್ಳುವಳು. ಇದರ ಜೊತೆಯಲ್ಲೇ ಕ್ರಮೇಣ ಅವನತ್ತ ಆಕರ್ಷಿಸಲ್ಪಟ್ಟು, ದಾಸಿಯರು ಈ ವಿಷಯವನ್ನು ಚರ್ಚಿಸುವಷ್ಟರ ಮಟ್ಟಿಗೆ ಪ್ರಕರಣ ಬೆಳೆಯುತ್ತದೆ. ಆದರೆ ಸಮಾಜದ ಬೆದರಿಕೆಯಿಂದಾಗಿ, ತನ್ನೆಲ್ಲಾ ಬಯಕೆಯನ್ನು ಹತ್ತಿಕ್ಕಿ ಸುರೇಂದ್ರನನ್ನು ಮರೆಯಲೆಂದೇ ತೀರ್ಥಯಾತ್ರೆಗೆ ಹೋಗುತ್ತಾಳೆ. ದೈಹಿಕವಾಗಿ ಮಾಧವಿ ಪರಿಶುದ್ಧೆಯಾಗಿದ್ದರೂ ಮಾನಸಿಕವಾಗಿ ಪ್ರಣಯಿನಿಯಾದ ಆಕೆ ರೂಢಮೂಲವಾದ ಸಂಪ್ರದಾಯದಂತೆ ವ್ಯಭಿಚಾರಿಯೇ ಆಗುತ್ತಾಳೆ. ಐದು ವರುಷಗಳ ನಂತರ ನಡೆದ ಒಂದು ದುರ್ಘಟನೆಯಿಂದ ಮಾಧವಿ ಅತ್ಯಾಚಾರಕ್ಕೆ ಗುರಿಯಾಗಿ ಊರನ್ನು ಬಿಟ್ಟು ಹೊರಟು ಹೋದಾಗ, ಈ ವಿಷಯ ಸುರೇಂದ್ರನಿಗೆ ತಿಳಿದು, ಆಕೆಯನ್ನು ಸಂಧಿಸಿ, ಕಡೆಗೆ ಆಕೆಯ ತೊಡೆಯ ಮೇಲೆ ಪ್ರಾಣ ಬಿಡುತ್ತಾನೆ. ಪ್ರೇಮದ ಅಸಫಲತೆಯನ್ನು ಇಲ್ಲಿ ಕಾಣುತ್ತೇವೆ.

ಶರತ್ ಚಂದ್ರರು ‘ದೇವದಾಸ’ ಕಾದಂಬರಿಯಲ್ಲೂ ಇದೇ ರೀತಿಯ ಮುಕ್ತಾಯವನ್ನು ತರುತ್ತಾರೆ. ಅಲ್ಲಿ ಬರುವ ಪಾರ್ವತಿ ವಿಧವೆ ಅಲ್ಲದಿದ್ದರೂ ಮದುವೆಗೆ ಮೊದಲೇ ಪ್ರೀತಿಸಿದ್ದ ದೇವದಾಸನ ಪ್ರೀತಿಯಿಂದ ವಂಚಿತಳಾಗಬೇಕಾದ ಸಂದರ್ಭ ಒದಗಿಬರುತ್ತದೆ. ಅವಳು ಪ್ರೀತಿಸಿದ ಆದರೆ ಸಮಾಜ ವಿರೋಧವಲ್ಲದ ಶ್ರೀಮಂತ ವಿದುರ ವರನೊಡನೆ ಪಾರ್ವತಿಯ ಲಗ್ನ ಆಗುತ್ತದೆ. ಪಾರ್ವತಿ ದೇವದಾಸ ಪರಸ್ಪರ ಆಗಲಿದರೂ ಮನಸ್ಸಿನ್ಲಲಿ ಒಬ್ಬರನ್ನೊಬ್ಬರು ಅಳಿಸಲು ಅಸಮರ್ಥರಾಗುತ್ತಾರೆ. ಸಮಾಜದ ಕಟ್ಟುಬಂಧನಗಳಿಂದ ಅವರಿಗೆ ಮುಕ್ತಿ ಇಲ್ಲ. ಅವರ ಪವಿತ್ರ ಪ್ರೇಮಕ್ಕೆ ಬೆಲೆ ಇಲ್ಲದಂತೆ ಆಗುತ್ತದೆ. ಪಾರ್ವತಿಯ ಪ್ರಣಯ ಚಿಂತೆಯಲ್ಲಿಯೇ ತನ್ನ ಬದುಕನ್ನು ದುರಂತವನ್ನಾಗಿಸಿಕೊಂಡು ದೇವದಾಸ ಸಾವನ್ನು ಅಪ್ಪುತ್ತಾನೆ.

ಈ ಎರಡು ಕಾದಂಬರಿಗಳಲ್ಲೂ ಮಾನವ ಸಹಜ ಪ್ರಣಯ ಭಾವನೆಗಳು ಮೂಡಿದ್ದರು ಅದಕ್ಕೆ ಸಮಾಜದ ಮನ್ನಣೆ ಇಲ್ಲ ಎನ್ನುವ ಒಂದೇ ಕಾರಣದಿಂದ ಅದು ಹೇಗೆ ವಿಫಲವಾಗುತ್ತದೆ ಎನ್ನುವ ನೈಜಚಿತ್ರಣ ಹೃದಯಂಗಮವಾಗಿ ಮೂಡಿದೆ. ಸಮಾಜ ಸುಧಾರಣೆಯ ಕಾಲದಲ್ಲಿ ಈ ಸಮಸ್ಯೆಗಳಿಗೆ ಶರತ್ ಚಂದ್ರರು ಒಂದು ನಿವಾರಣೆಯ ಮಾರ್ಗವನ್ನು ತೋರಿಸಬಹುದಿತ್ತಲ್ಲಾ ಎಂದು ಕೇಳುವ ವಿಮರ್ಶಕರು ಇದ್ದಾರೆ. ಆದರೆ ಸುಧಾರಣೆಯ ಕಾಲದಲ್ಲೇ ಅದರ ಸೋಲನ್ನು ನಾವು ಚೆನ್ನಾಗಿ ಗುರುತಿಸಲಾಗುವುದು. ಕಾರಣ ಸುಧಾರಣೆ ಆಗದೆ ಇದ್ದಾಗ, ಇದ್ದುದನ್ನು ಹಾಗೇ ಒಪ್ಪಿಕೊಂಡಾಗ ಅತಿಶಯ ಏನೂ ಇಲ್ಲ. ಸುಧಾರಣೆಯ ಜೊತೆಯಲ್ಲೇ ಈ ಸಮಸ್ಯೆಗಳು, ತಿಕ್ಕಾಟಗಳು ಪ್ರಾರಂಭವಾಗುತ್ತವೆ. ಎಲ್ಲವೂ ಫಲಪ್ರದವಾಗುವುದಿಲ್ಲ. ನವಮನ್ವಂತರ ಕಾಲದಲ್ಲಿ ಈ ಸೋಲು ಗೆಲುವಿನಷ್ಟೇ ಸಹಜ ಎನ್ನುವುದನ್ನು ಇಲ್ಲಿ ಶರತ್ ಬಾಬುಗಳು ತೋರಿಸಲು ಪ್ರಯತ್ನಿಸಿದ್ದಾರೆ. ಅಂದರೆ ಇಲ್ಲಿಯ ಪಾರ್ವತಿಯಾಗಲೀ ದೇವದಾಸನಾಗಲೀ ಮಾದವಿ ಸುರೇಂದ್ರರಾಗಲೀ ತಮ್ಮ ಪ್ರಣಯ ಸಫಲತೆಗೆ ಯಾವ ನಿರ್ದಿಷ್ಟ ಪ್ರಯತ್ನವನ್ನೂ ಕೈಗೊಳ್ಳುವುದಿಲ್ಲ. ಸಮಾಜದ ಕರಾಳ ಶಕ್ತಿಯ ಮುಂದೆ ನಿಸ್ಸಹಾಯಕರಾಗಿ, ಭಗ್ನ ಪ್ರಣಯಿಗಳಾಗಿ ನಿಲ್ಲುತ್ತಾರೆ.

ಪಾರ್ವತಿ ವಿವಾಹವಾಗಿಯೂ ಪತಿಗೆ ಸಂಪೂರ್ಣ ಪ್ರೇಮವನ್ನು ಧಾರೆಯೆರೆಯಲು ಅಸಮರ್ಥಳಾಗಿ, ಮನಸ್ಸಿನಲ್ಲಿ ದೇವದಾಸನನ್ನು ಚಿಂತಿಸುತ್ತಾ ಮಾನಸಿಕ ವ್ಯಭಿಚಾರಿಣಿಯೇ ಆಗುತ್ತಾಳೆ. ದೇವದಾಸನ ಪ್ರೇಮದಿಂದ ವೇಶ್ಯಾವೃತ್ತಿಯನ್ನೇ ತ್ಯಜಿಸಿ ಕುಲೀನ ಸ್ತ್ರೀಯಾಗಿ ಚಂದ್ರಮುಖಿ ಪರಿವರ್ತಿತಳಾಗುತ್ತಾಳೆ; ತಪಸ್ವಿನಿಯೇ ಆಗುತ್ತಾಳೆ. ಇಲ್ಲಿ ಪಾರ್ವತಿ ಹಾಗೂ ಚಂದ್ರಮುಖಿಯರ ವಿಪರ್ಯಾಸವನ್ನು ಗುರುತಿಸಬಹುದು.

ಪ್ರೇಮ ಹಾಗೂ ಪರಂಪರಾನುಗತವಾಗಿ ಬಂದ ಸತೀತ್ವದ ನಡುವೆ ಇರುವ ಚಿರ ವೈರತ್ವವನ್ನು ತೋರಿಸಿ ಪ್ರೇಮದ ಬಗ್ಗೆ ಶರತ್ ಚಂದ್ರರು ಓದುಗರಲ್ಲಿ ಸಹಾನುಭೂತಿಯನ್ನು ಹುಟ್ಟಿಸಿ ವಿವಾಹ ಪದ್ಧತಿಯ ಪೊಳ್ಳುತನವನ್ನು ಸೂಚಿಸಲು ಪಾರ್ವತಿ ದೇವದಾಸರ ಮೂಲಕ ಪ್ರಯತ್ನಿಸಿದ್ದಾರೆ.

ಚಂದ್ರಮುಖಿಯ ಸಮೀಪವರ್ತಿಯಾಗಿ ನಿಲ್ಲುವ ಮತ್ತೊಂದು ಪ್ರಧಾನಪಾತ್ರ ‘ಶ್ರೀಕಾಂತ’ ಕಾದಂಬರಿಯ ರಾಜಲಕ್ಷ್ಮಿ, ಆಕೆ ವೃತ್ತಿಯಿಂದ ವೇಶ್ಯೆ ಅಲ್ಲದಿದ್ದರೂ ಒಮ್ಮೆ ಕಾಲುಜಾರಿ ಎಚ್ಚೆತ್ತುಕೊಂಡು ಸಂಗೀತವನ್ನೇ ತನ್ನ ಜೀವನ ಸಾಧನವನ್ನಾಗಿ ಮಾಡಿಕೊಂಡು ಜೀವಿಸುತ್ತಿರುತ್ತಾಳೆ. ಇದೇ ಅಂತಸ್ತಿನಲ್ಲಿ ನಿಲ್ಲುವ ಮತ್ತೊಂದು ಪಾತ್ರ ‘ಚರಿತ್ರಹೀನ’ ಕಾದಂಬರಿಯ ಸಾವಿತ್ರಿ.

ದಲಿತ, ಅವಮಾನಿತ ಭಾರತೀಯ ನಾರಿಯನ್ನು ಶರತರು ಅತ್ಯಂತ ಮಾನವೀಯ ದೃಷ್ಟಿಯಿಂದ ಕಂಡು ಸಹಾನುಭೂತಿ ತೋರಿದ್ದಾರೆ. “ಧರ್ಮ, ಪರಂಪರೆ, ಧನ, ಕುಲದ ಅಭಿಮಾನ, ಸಮಾಜದ ಗೌರವದಿಂದ ಧಿಕ್ಕರಿಸಲ್ಪಟ್ಟಿದ್ದ ಭಾರತೀಯ ನಾರಿಯರು ಇವರ ಕೃತಿಗಳಲ್ಲಿ ಸ್ವಾತಂತ್ರ್ಯ ಪಡೆದಿದ್ದಾರೆ. ಅವರ ಕಾಲಿಗೆ ಬಿದ್ದ ಬೇಡಿಗಳು ಕಳಚಿವೆ. ಕೈಗಳ ಸಂಕೋಲೆ ಮುರಿದಿವೆ. ಜೀವನದ ಸುಖದಲ್ಲಿ ಅವರಿಗೂ ಒಂದು ಪಾಲಿದೆ”. ಇದು ಶರತರ ದೃಷ್ಟಿ. ಇವರ ಕಾದಂಬರಿಗಳಲ್ಲಿ ವಾರಾಂಗನೆಯರಲ್ಲಿಯೂ ಹೃದಯ ಸಂವೇದನೆ ಇದೆ. ಸ್ವಲ್ಪ ಒಳ್ಳೆಯ ಅವಕಾಶ ದೊರೆತರೆ ತಮ್ಮ ಉತ್ತಮ ನಡತೆಯಿಂದ ಬದುಕನ್ನು ಮಾರ್ಪಡಿಸಿಕೊಂಡು ಉನ್ನತ ಸಂಸ್ಕಾರ ಹೊಂದುವ ಅಭಿಲಾಷೆ ಇದೆ. ಪ್ರೇಮದ ತೀವ್ರ ಹರಿತವಾದ ಅಲಗಿಗೆ ಸಿಲುಕಿದ ಕುಲವಧುಗಳ ಮಾನಸಿಕ ವ್ಯಭಿಚಾರಕ್ಕೆ ತುತ್ತಾದ ಗುಂಪು ಒಂದಾದರೆ, ಕೇವಲ ಒಬ್ಬ ವ್ಯಕ್ತಿಯ ಸಾಮಿಪ್ಯ ಸಹವಾಸದಿಂದ ವೇಶ್ಯಾನಾರಿಯರು, ಕುಲವಧುವಿನ ಸ್ಥಾನವನ್ನು ಪಡೆಯಬಲ್ಲ ಗುಂಪು ಮತ್ತೊಂದು.

‘ಶ್ರೀಕಾಂತ’ ಕಾದಂಬರಿಯ ರಾಜಲಕ್ಷ್ಮಿ ತನ್ನ ಉನ್ನತ ನಡತೆಯಿಂದ ಕುಲವಧುವಿನ ಸ್ಥಾನಕ್ಕಿಂತ ಯಾವ ರೀತಿಯಿಂದಲೂ ಕಡಿಮೆ ಇಲ್ಲದಂತೆ ಭಾಸವಾಗುತ್ತಾಳೆ. ಆದರೆ ಅದಕ್ಕೆ ಸಮಾಜದ ಮನ್ನಣೆ ಎಲ್ಲಿ? ರಾಜಲಕ್ಷ್ಮಿಯ ಚರಿತ್ರೆ ಉಜ್ವಲವಾಗಿರವಷ್ಟೇ ಸುಂದರವು ಅಗಿದೆ. ಅವಳು ಸ್ನೇಹಕ್ಕೆ ಪಾತ್ರಳು.

ಶ್ರೀಕಾಂತ-ರಾಜಲಕ್ಷ್ಮಿ ನಾಲ್ಕು ಬಾರಿ ಭೇಟಿಯಾಗುತ್ತಾರೆ. ಪರಸ್ಪರ ಪ್ರಬಲ ಆಕರ್ಷಣೆಯಿಂದ ಹತ್ತಿರ ಹತ್ತಿರ ತೀರ ಸನಿಹಕ್ಕೆ ಬರುತ್ತಾರೆ. ಆದರೆ ಸಮಾಜದ ಕಟ್ಟಳೆ ಅಡ್ಡಗೋಡೆಯಾಗಿ ನಿಂತು ಪುನಃ ದೂರ ಸರಿಯುತ್ತಾರೆ, ಇಲ್ಲಿ  ಪವಿತ್ರಪ್ರೇಮ ಭೋಗಕ್ಕಿಂತ ತ್ಯಾಗದಲ್ಲಿ ದೊಡ್ಡದಾಗುತ್ತದೆ. ಮಿಲನಕ್ಕಿಂತ ಅಗಲುವಿಕೆಯಲ್ಲಿ ಅದರ ಹಿರಿಮೆ ಎದ್ದು ಕಾಣುತ್ತದೆ. ರಾಜಲಕ್ಷ್ಮಿಯ ಪ್ರೇಮ ಎಷ್ಟೇ ತೀವ್ರವಾಗಿದ್ದರೂ ಪವಿತ್ರವಾಗಿದ್ದರೂ ವಿಧವೆಯಾದ್ದರಿಂದ ಆಕೆಗೆ ಸಮಾಜದ ದೃಷ್ಟಿಯಲ್ಲಿ ಶ್ರೀಕಾಂತನನ್ನು ಪ್ರೇಮಿಸುವ ಅವಕಾಶವಾಗಲೀ ಅಧಿಕಾರವಾಗಲೀ ದೊರೆಯುವುದಿಲ್ಲ. ಅವರು ಪ್ರೇಮದ ಬಂಧನಕ್ಕೆ ಸಿಲುಕೆ ಎಷ್ಟೆಷ್ಟು ಹತ್ತಿರ ಬರುತ್ತಾರೊ ಸಮಾಜದ ಕಟ್ಟಳೆಗೆ ಹೆದರಿ ಅಷ್ಟಷ್ಟೇ ದೂರ ಸರಿಯುತ್ತಾರೆ.

ಈ ಕಥೆಗಳಲ್ಲೆಲ್ಲಾ ಪ್ರೇಮದ ಸೋಲನ್ನೇ ಕಾಣುತ್ತೇವೆ. ಅದರ ತಿರುಗಣಿಗೆ ಸಿಲುಕಿದ ವ್ಯಕ್ತಿಗಳ ಬಗ್ಗೆ ನಮಗೆ ವಿಶೇಷ ಅನುಕಂಪ, ಸಹಾನುಭೂತಿ ಮೂಡುವುದಿರಲಿ, ಇಷ್ಟು ಕೆಟ್ಟದಾಗಿ ಅವರನ್ನು ನಡೆಸಿಕೊಳ್ಳುತ್ತಿರುವ ಸಮಾಜದ ಬಗ್ಗೆ ಅಷ್ಟೇ ದ್ವೇಷ ಉಂಟಾಗುತ್ತದೆ.

ಶರತ್ ಚಂದ್ರರ ಕಾದಂಬರಿಗಳಲ್ಲಿನ ಮತ್ತೊಂದು ವರ್ಗದ ರಮಣಿಯರೆಂದರೆ ಸಮಸ್ಯಾಪ್ರಧಾನರಾದ ನಾರಿಯರು. ಇವರೂ ಪ್ರೇಮದ ಸುಳಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಿಲುಕಿದರೆ, ಆದರೂ ಇವರ ಪ್ರಕೃತಿ ಸರಳವಾಗಿರದೆ ಜಟಿಲವಾಗಿರುವುದನ್ನು ಗುರುತಿಸಬಹುದು. ಹಳೆಯ ನಂಬಿಕೆ, ಶ್ರದ್ಧೆಗಳ ವಿರುದ್ಧ ಹೋರಾಡುವುದೇ ಇವರ ಸ್ವಭಾವ. ಇವರ ವ್ಯಕ್ತಿತ್ವದಲ್ಲಿ ದೃಢತೆ ಕಂಡರೂ ಅಸ್ಥಿರ, ಒಮ್ಮೊಮ್ಮೆ ಅಸ್ಥಿರದಂತೆ ಕಂಡರೂ ದೃಢ. ಇವರ ನೈತಿಕ ವಿಚಾರ ಪರಂಪರೆಗೆ ವಿರುದ್ಧ. ಈ ವರ್ಗದಲ್ಲಿ ‘ಶೇಷಪ್ರಶ್ನೆ’ಯ ಕಮಲ. ‘ಗೃಹದಾಹ’ದ ಅಚಲ. ‘ಚರಿತ್ರಹೀನರ’ ಕಿರಣ್ಮಯಿ ಪ್ರಧಾನವಾಗಿ ಬರುತ್ತಾರೆ.

‘ಚರಿತ್ರಹೀನ’ ಕಾದಂಬರಿಯಲ್ಲಿ ನಾರೀ ಚರಿತ್ರದ ವಿಶಿಷ್ಟ ದರ್ಶನವಿದೆ. ಸ್ತ್ರೀ ಚರಿತ್ರದ ತಥ್ಯ ನಿರೂಪಣೆ ಈ ಕಾದಂಬರಿಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಇದರಲ್ಲಿ ಪ್ರೇಮದ ಇಬ್ಬಗೆಯ ಹೋರಾಟವಿದೆ. ಉಪೇಂದ್ರ – ಸತೀಶ ಇಬ್ಬರು ನಾಯಕರಾದರೆ, ಇವರಲ್ಲಿ ಕ್ರಮವಾಗಿ ಸಫಲ ನಾಯಿಕೆಯರಾಗಿ ಸುರಬಾಲ – ಸರೋಜಿನಿಯರಾದರೆ, ಅಸಫಲ ನಾಯಿಕೆಯರಾಗಿ ಕಿರಣ್ಮಯಿ – ಸಾವಿತ್ರಿಯರು ಕಂಡು ಬರುತ್ತಾರೆ, ಇಡೀ ಕಾದಂಬರಿಯಲ್ಲೆ ಪ್ರೇಮದ ತೊಡಕಿನ ಚಿತ್ರಣವಿದೆ. ಗಂಡು ಹೆಣ್ಣಿಗೆ ಸಂಬಂಧಿಸಿದ ಸಾಮಾಜಿಕ ವಿಧಿ ನಿಷೇಧಗಳ ಕಥಾವಸ್ತು ಹೆಣೆದುಕೊಂಡಿದೆ.

ಶರತ್ ಚಂದ್ರರು ಪತಿತ ನಾರಿಯರಿಗೆ ಉತ್ತಮ ಸ್ಥಾನ ಕೊಟ್ಟಿದ್ದರೂ ಕಿರಣ್ಮಯಿಯ ಅನೈತಿಕ ಕಾರ್ಯಗಳೇನನ್ನೂ ಹೇಳಿಲ್ಲ, ಅವಳ ವ್ಯಭಿಚಾರ ಬುದ್ಧಿಯ ಹಿನ್ನೆಲೆಯಲ್ಲಿ ಒಂದು ನಿಶ್ಚಿತ ಸಾಮಾಜಿಕ ಕಾರಣವಿದೆ. ಆ ಪಾತ್ರ ಪೂರ್ಣ ಮನೋವೈಜ್ಞಾನಿಕವಾಗಿದೆ. “ಪ್ರವಾಹದ ಸಳೆತರದಲ್ಲಿ ಯಾರು ಯಾವಾಗ ಹತ್ತಿರ ಬರುತ್ತಾರೆ, ಯಾರು ಯಾವಾಗ ದೂರ ಹೋಗುತ್ತಾರೆ ಎಂಬುದು ಯಾರಿಗೂ ತಿಳಿಯದು” ಎಂದು ಆಶು ಬಾಬು ಈ ಕಾದಂಬರಿಯ ಪಾತ್ರಗಳನ್ನು ಕುರಿತು ಹೇಳುತ್ತಾರೆ. ಇದು ಇಲ್ಲಿ ಪ್ರೇಮ ಪ್ರವಾಹಕ್ಕೆ ಅನ್ವಯಿಸುವ ಮಾತೆಂದು ಮತ್ತೊಮ್ಮೆ ಹೇಳಬೇಕಾದುದಲ್ಲ. ಪ್ರೇಮದ ಪವಿತ್ರತೆಯನ್ನು ತೋರಿಸುವುದಕ್ಕಾಗಿಯೇ ಕಿರಣ್ಮಯಿಗಿಂತ ಸುರಬಾಲೆ ಹಾಗೂ ಸಾವಿತ್ರಿಯ ಪಾತ್ರವನ್ನು ಶರತರು ಉಜ್ವಲವಾಗಿ ಚಿತ್ರಿಸಿದ್ದಾರೆ. ಕಿರಣ್ಮಯಿ ತನ್ನ ಪತಿತ ಸ್ಥಿತಿಯಿಂದ ಓದುಗರ ಸಹಾನುಭೂತಿಯನ್ನು ಪಡೆದರೆ, ಸಾವಿತ್ರಿ ಶ್ರದ್ಧೆಗೆ, ಸುರಬಾಲೆ ದೃಢವಿಶ್ವಾಸಕ್ಕೆ ಪಾತ್ರರಾಗುತ್ತಾರೆ.

ಕಿರಣ್ಮಯಿ ಉಪೇಂದ್ರನ ಬಳಿ ತನ್ನ ಪ್ರಣಯಕತೆಯನ್ನು ನಿರೂಪಿಸುತ್ತಾಳೆ. ‘ನಾನು ಎಂದೂ ನನ್ನ ಪತಿಯನ್ನು ಪ್ರೀತಿಸಲಿಲ್ಲ. ಅವರು ಖಾಯಿಲೆ ಬಿದ್ದಾಗ, ಅವರಿಗೆ ಚಿಕಿತ್ಸೆ ನೀಡಲು ಬಂದ ಡಾಕ್ಟರರನ್ನು ಕಂಡ ಮನಸ್ಸು, ಹೃದಯ ಪ್ರೇಮಕ್ಕೆ ಹಾತೊರೆಯಿತು. ಡಾಕ್ಟರು ನನಗೆ ಏನೇನೋ ಕೊಟ್ಟರು. ಆದರೆ ಅದರಲ್ಲಿ ಪ್ರೇಮವಿರಲಿಲ್ಲ. ಹಾಲಾಹಲವಿತ್ತು. ಈಗ ಅದು ತಪ್ಪಿ, ನನಗೆ ಅಮೃತದ ಪರಿಚಯವಾಯಿತು. ಆ ಅಮೃತ ನೀನೆ” ಎಂದು ಉಪೇಂದ್ರನಿಗೆ ಹೇಳುತ್ತಾಳೆ. ಆದರೆ ಉಪೇಂದರನ ಪ್ರೀತಿ ದೊರೆಯದೆ ಕಡೆಗೆ ಓದುಗರ ಅನುಕಂಪೆಗೆ ಪಾತ್ರಳಾಗುತ್ತಾಳೆ. ಕಿರಣ್ಮಯಿಯನ್ನು ಯಾರೂ ಪ್ರೀತಿಸಲಾರರು. ಆದರೂ ಸಹೃದಯರ ಹೃದಯದಲ್ಲಿ ಸ್ಥಾಯಿಯಾಗಿ ನಿಲ್ಲುವ ಪಾತ್ರವಾಗಿದ್ದಾಳೆ.

‘ಗೃಹದಾಹ’ದ ಅಚಲಾ ಒಂದು ವಿಲಕ್ಷಣ ಪಾತ್ರ. ಅವಳ ಸಮಸ್ಯೆ ಗುರುತರವಾದುದು. ಅವಳು ಧರ್ಮದ ವಿರುದ್ಧ ಏನನ್ನು ಹೇಳಬಯಸುವುದಿಲ್ಲ. ಆದರೆ ಭಾರತೀಯ ಸಂಸ್ಕೃತಿಯ ಬಗ್ಗೆ ಅವಳಿಗೆ ಅಸಮಾಧಾನ. ಬರ್ನಾಡ ಷಾನ ಒಂದು ನಾಟಕದಲ್ಲಿ ಓರ್ವ ಹೆಣ್ಣು ಪ್ರಶ್ನಿಸುವ ಪ್ರಶ್ನೆಯೇ ಇಲ್ಲಿಯ ಅಚಲೆಯ ಪ್ರಶ್ನೆಯೂ ಆಗಿದೆ. ಅವಳು ಹೀಗೆ ಕೇಳುತ್ತಾಳೆ : “ಈ ಕಾನೂನು ಎಷ್ಟು ಹಾಸ್ಯಾಸ್ಪದ! ನಾನು ಏಕೆ ಅವರಿಬ್ಬರನ್ನೂ ಮದುವೆಯಾಗಬಾರದು ! ಒಳ್ಳೆಯದು, ನಾನು ಅವರಿಬ್ಬರನ್ನೂ ಪ್ರೀತಿಸುತ್ತೇನೆ” ಹೀಗೆ ಹೇಳುವ ಅಚಲಾ ಪ್ರವಾಹದ ಎರಡು ಸೆಳತಕ್ಕೆ ಏಕಕಾಲದಲ್ಲಿ ಸಿಲುಕಿದ ಒಂದು ದುರಂತ ಪಾತ್ರ, ಸುರೇಶ ಮತ್ತು ಮಹಿಮಾ ಈ ಇಬ್ಬರ, ಪ್ರೇಮಿಗಳ ನಡುವೆ ಸಿಲುಕಿ ತೊಳಲಾಡುವ ಹೆಣ್ಣು ಈಕೆ. ಒಮ್ಮೆ ಒಬ್ಬನತ್ತ ಇನ್ನೊಮ್ಮೆ ಇನ್ನೊಬ್ಬನತ್ತ ಒಲಿಯುವ ನಾರಿ. ಮಾನಸಿಕ ಅಸಂಯಮ, ವ್ಯಾವಹಾರಿಕ ಸಂಯಮ ಇವೆರಡೂ ಒಟ್ಟಿಗೇ ಅವಳ ಸ್ವಭಾವದಲ್ಲಿ ಬೆರೆತಿದ್ದವು. ಪತಿಯ ಬಗ್ಗೆ ಆದರ, ಪತಿಯ ಮಿತ್ರನಲ್ಲಿ ಪ್ರೇಮ. ಇವೆರಡರ ಮಧ್ಯೆ ಅವಳ ಮನಸ್ಸು ಹೊಯ್ದಾಡುತ್ತಿತ್ತು. ಈಕೆಯ ಮಾನಸಿಕ ಹೋರಾಟವೇ ಈ ಕಾದಂಬರಿಯ ಮುಖ್ಯ ಬಿಂದುವಾಗಿದೆ. ಇಲ್ಲಿ ‘ಅಚಲಾ’ ಹೆಸರಿನ ಔಚಿತ್ಯ ಹಾಗೂ ವಿಪರ್ಯಾಸವನ್ನು ಗುರುತಿಸಬಹುದು.

ಶರತ್ ಬಾಬುಗಳ ಕಾದಂಬರಿಗಳಲ್ಲಿ ಸಮಸ್ಯಾಪ್ರಧಾನ ಕಾದಂಬರಿಯೆಂದು ಪ್ರಸಿದ್ಧಿ ಹೊಂದಿರುವ ‘ಶ್ರೇಷ್ಠ ಪ್ರಶ್ನೆ’ಯ ಜೀವಾಳ ಕಮಲೆ, ವೈಚಾರಿಕ ಅಂಶಗಳಿಂದ ವಿಚಾರಶೀಲರಾದ ಓದುಗರಿಗೆ ಹಬ್ಬದೂಟ ಮಾಡಿಸುವ ಈ ಕೃತಿ ಹೊಸ – ಹಳೆಯದರ, ವಿಚಾರ – ವಿಶ್ವಾಸಗಳ ತಾಕಲಾಟವನ್ನು ಚೆನ್ನಾಗಿ ಚಿತ್ರಿಸಿದೆ. ಇಂದು ಹಳೆಯದನ್ನು ಮೆಟ್ಟಿನಿಂತು ಹೊಸ ವಿಚಾರ, ನಾಳೆ ಹಳೆಯದಾಗುತ್ತದೆ. ಯಾವುದು ಸರಿ? ಯಾವುದು ತಪ್ಪು? ಈ ಪ್ರಶ್ನೆಗೆ ಉತ್ತರವೆಲ್ಲಿ? ಈ ಕಾದಂಬರಿಯಲ್ಲಿ ಬರುವ ಒಂದೊಂದು ಪಾತ್ರವೂ ತನು ನಂಬಿದ ಒಂದೊಂದು ಮೌಲ್ಯವನ್ನು ಹಿಡಿದು ಶಾಂತವಾತಾವರಣದಲ್ಲಿ ಜೀವನವನ್ನು ನಡೆಸುತ್ತಿರುವಾಗ ಅವರ ಮಧ್ಯೆ ಬಿರುಗಾಳಿಯಂತೆ ನುಗ್ಗಿ ಬರುತ್ತಾಳೆ ಕಮಲೆ.

ಕಮಲೆ ಈ ವ್ಯಕ್ತಿಗಳ ಮೌಲ್ಯವನ್ನು ಮೀರಿನಿಂತು ಅವುಗಳ ದೋಷಗಳನ್ನು ಹೊರಗೆಡಹುತ್ತಾಳೆ. ಪ್ರತಿವ್ಯಕ್ತಿಯಲ್ಲೂ ವಿಚಾರ ಕ್ರಾಂತಿಯನ್ನು ಉಂಟು ಮಾಡುತ್ತಾಳೆ. ಅವಳು ಮಾತ್ರ ಸಂಪ್ರದಾಯದ ಯಾವ ಎಲ್ಲೆ ಕಟ್ಟಿಗೂ ಸಿಗುವುದಿಲ್ಲ. ಸಮಾಜದಿಂದ ಬಾಹಿರಳಾದ ಅವಳು ಎಲ್ಲರ ಅಂತರಂಗವನ್ನೂ ಕದಡಿ ಅವರವರ ಆದರ್ಶದ ಅಸ್ತಿತ್ವಕ್ಕೆ ಪೆಟ್ಟುಕೊಡುವಂತಹ ಕ್ರಾಂತಿಕಾರಿಯಾಗುತ್ತಾಳೆ.

ಆಶುಬಾಬುಗಳು ತೀರಿಹೋದ ತಮ್ಮ ಪತ್ನಿಯನ್ನು ನೆನೆದು ಸುಖದ ಅವಕಾಶವನ್ನು ಕಳೆದುಕೊಳ್ಳುವುದು ಆದರ್ಶ ಪ್ರೇಮವಲ್ಲ. ಅದು ಮಾನಸಿಕ ಮುಪ್ಪೆಂದು ವಾದಿಸುತ್ತಾಳೆ. ನೀಲಿಮೆಯ ತ್ಯಾಗವಾದರೆ ಆನಂದವೆಂದು ಕರೆಯುವ ಹುಚ್ಚು ಭ್ರಮೆಯೆಂದು ಟೀಕಿಸುತ್ತಾಳೆ. ಹರೇಂದ್ರನ ಬ್ರಹ್ಮಚರ್ಯಾಶ್ರಮದ ಆದರ್ಶ ಕಲ್ಯಾಣ ಸುಖವನ್ನು ಬಲಿಗೊಟ್ಟು ದುಃಖವನ್ನು ಗಳಿಸುವ ಅಭಾಸವೆನ್ನುತ್ತಾಳೆ. ಹೀಗೆ ಎಲ್ಲರ ಅಂಧಾನುಕರಣೆಗೂ ಅವಳದು ಒಂದೊಂದು ಪ್ರಶ್ನೆ ಇದ್ದೇ ಇದೆ. ಕಾಲಚಕ್ರ ಉರುಳಿದಂತೆಲ್ಲಾ ಕಾಲಧರ್ಮವೂ ಹೊಸ ರೂಪವನ್ನು ತಳೆಯುತ್ತದೆಂದು ಅವಳ ಅಭಿಪ್ರಾಯ. ಇದು ಪರಂಪರೆಯ ಜಾಡಿನಲ್ಲಿರುವವರಿಗೆ ಕಮಲೆಯ ಪ್ರಶ್ನೆಯಾದರೆ ಬೇಲಳ ನುತನ ರೀತಿಗೂ ಕಮಲೆಯ ತಿರಸ್ಕಾರವಿದ್ದೇ ಇದೆ. ಬೇಲಳು ನೂತನ ಸಂಸ್ಕೃತಿಗೆ ಪೂರ್ಣ ಶರಣು ಹೋದವಳು. ಆದರೆ ರೀತಿನೀತಿಗಳನ್ನು ವಿವೇಚಿಸದೆ ಪತಂಗದಂತೆ ಅದರ ಲೋಪದೋಷಗಳ ಬಲೆಗೆ ಬೀಳುತ್ತಾಳೆ. ವಿವಾಹವಿಚ್ಛೇದನ ಸ್ತ್ರೀ ಸಮಾನ ಬಾಧ್ಯತೆಯ ಹೆಗ್ಗುರುತು. ಇದನ್ನು ಹೇಗಾದರು ಸಾಧಿಸುವುದೇ ಆದರ್ಶವನ್ನು ಮುಟ್ಟಿದಂತೆ ಎಂದು ಅವಳು ಸಣ್ಣ ಕಾರಣಕ್ಕಾಗಿ ವಿಚ್ಛೇದನ ಪಡೆಯುತ್ತಾಳೆ. ಇದಕ್ಕೂ ಕಮಲೆಯ ಪ್ರಶ್ನೆ ಇದ್ದೇ ಇದೆ. ವಿವಾಹ ವಿಚ್ಛೇದನ ಪಡೆದು ಗಂಡನಿಂದ ಪಡೆದ ಜೀವನಾಂಶದಿಂದ ಜೀವನ ಸಾಗಿಸುವ ಬೇಲಾಳು, ಹೊಲಿಗೆ ಯಂತ್ರದಿಂದ ಹಣ ಸಂಪಾದಿಸಿ ಜೀವನ ಸಾಗಿಸುವ ಕಮಲೆಗಿಂತ ತುಂಬಾ ಕೀಳಾಗಿ ಕಾಣುತ್ತಾಳೆ. ಕಮಲೆ ಹಳೆಯದನ್ನು ವಿವೇಚಿಸುವುದರಲ್ಲಿ ಎಷ್ಟು ವಿಚಾರಶೀಲಳೋ ಹೊಸತನ್ನು ಟೀಕಿಸುವುದರಲ್ಲೂ ಅಷ್ಟೇ ನಿಸ್ಪಕ್ಷಪಾತಿ.

ಶಿವನಾಥ – ಕಮಲೆಯರ ಪ್ರೇಮ ಹತ್ತಿಸಿಟ್ಟ ಮೇಣದ ಬತ್ತಿಯಂತೆ. ಬೇಗನೆ ಆರಿಹೋದರೂ ಅದಕ್ಕೆ ಶಿವನಾಥನೇ ಕಾರಣನಾಗಿದ್ದರು ಕಮಲೆ ಅವನನ್ನು ದೂರುವುದಿಲ್ಲ. ಬದಲಾಗಿ ಹತ್ತಿ ಉರಿದಿದ್ದ ಮೇಣದ ಬತ್ತಿ ಪ್ರಕಾಶವನ್ನು ಸ್ವಲ್ಪ ಹೊತ್ತಾದರೂ ಕೊಟ್ಟಿತ್ತಾದ ಕಾರಣ. “ಅದು ಆರಿದ್ದರಿಂದ ಅದು ಪ್ರಕಾಶವನ್ನು ಕೊಟ್ಟಿದ್ದೇ ಸುಳ್ಳು” ಎಂದು ಅವಳು ಅನ್ನುವುದಿಲ್ಲ. ಸುಖ ದುಃಖಗಳೆರಡೂ ಆಯಾ ಗಳಿಗೆಯನ್ನವಲಂಬಿಸಿದ್ದು. ಹಿಂದಿನ ಸ್ಮರಣೆಯಲ್ಲಿ ಜೀವನ ಕಳೆಯುವುದಕ್ಕಿಂತ ಭವಿಷ್ಯದ ಸುಖದ ಆಸೆಯೇ ಬಾಳಿನ ಆಸರೆಯಿಂದ ಅವಳ ವಿಶ್ವಾಸ, ಬಡತನದ ಬೇಗೆಯಿಂದ ಬೇಯುತ್ತಿದ್ದರು ಕಮಲೆ ಸದಾ ಹರ್ಷ ಚಿತ್ತಳಾಗಿದ್ದು ಇತರರಿಗೆ ಸತ್ಕಾರವನ್ನು ಮಾಡುತ್ತಾ ತನ್ನ ಸರಳತೆ, ಸ್ನೇಹಶಿಲತೆಯಿಂದ ಓದುಗರ ಅಚ್ಚುಮೆಚ್ಚಿನ ಪಾತ್ರವಾಗುತ್ತಾಳೆ. ಜೀವನದ ಸಮಸ್ಯೆಗಳಿಗೆ ಉತ್ತರ ಸುಲಭವಲ್ಲ. ನಿವಾರಣೆಯೂ ಸುಗಮವಲ್ಲ. ಪ್ರಶ್ನೆಯಷ್ಟೆ ಸುಲಭವಲ್ಲ, ಉತ್ತರ ದೊರಕುವುದು. ಹೀಗಾಗಿ ಈ ಕಾದಂಬರಿಯಲ್ಲಿ ಅನೇಕ ಸಮಸ್ಯೆಗಳಿಗೆ ಉದ್ಭವಿಸಿದ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅದೇ ‘ಶೇಷಪ್ರಶ್ನೆ’ಯ ಕಮಲೆಯ ಪಾತ್ರ.

ಶರತ್ ಬಾಬುಗಳ ಸ್ತ್ರೀ ಪಾತ್ರಗಳ ನಾಮಕರಣ ಔಚಿತ್ಯಪ್ರಜ್ಞೆಯ ಕುರುಹಾಗಿವೆ; ಹೃದಯಂಗಮವಾಗಿ ನವೀನವಾಗಿದೆ. ಮಾಧವಿ, ಸರಯೂ, ಬಿಂದುವಾಸನಿ, ವಿರಾಜ, ಸುರಬಾಲಾ, ಕಿರಣ್ಮಯಿ, ಕುಸುಮ, ಹೇಮಾಂಗಿನಿ, ಜ್ಞಾನದಾ, ಅಭಯಾ, ಮೃಗಾಲ, ರಾಸಮಣಿ, ಆಲೇಖ್ಯ, ಸೌದಾಮಿನಿ, ಜಗದ್ಧಾತ್ರಿ, ಪ್ರತುಲ ಇತ್ಯಾದಿ.

ಭಾರತದ ನಾರೀ ಸಮುದಾಯವನ್ನು ಒಂದು ಹೊಸ ದೃಷ್ಟಿಕೋನದಿಂದ ನೋಡಿ, ಹೆಣ್ಣಿನ ಬಗ್ಗೆ ಸಮಾಜದ ಕಣ್ಣು ತೆರೆಸಿದ ಶರತರು ಭಾರತೀಯ ಸ್ತ್ರೀ ಪರಂಪರೆಯಿಂದ ವಿಶೇಷ ರೀತಿಯ ಕೃತಜ್ಞತೆಗೆ ಪಾತ್ರರಾಗಿದ್ದಾರೆಂದರೆ ಅತಿಶಯೋಕ್ತಿಯಲ್ಲ.