“ಬಲರಾಮಪುರದ ತೇರು ಮನೆಯ ರೈತ ಕೂಲಿಗಾರನ ಸಭೆ ಸೇರಿತು. ಹತ್ತಿರದ ರೈಲ್ವೆ ಲೈನಿನ ಕೆಲಸಗಾರರೂ ಭಾನುವಾರವಾದುದರಿಂದ ಸಭೆಗೆ ಬಂದು ಅದಕ್ಕೆ ಕಳೆ ಕಟ್ಟುವಂತೆ ಮಾಡಿದ್ದರು. ಅಂದಿನ ಸಭೆಯಲ್ಲಿ ಭಾಷಣ ಮಾಡಲು ಕಲ್ಕತ್ತೆಯಿಂದ ಕೆಲವು ಸುಪ್ರಸಿದ್ಧ ವ್ಯಕ್ತಿಗಳು ಬಂದಿದ್ದು ಈಗ ಕಾಣಬರುತ್ತಿರುವ ದ್ವೇಷ ಮತ್ತು ವೈಷಮ್ಯವನ್ನು ಖಂಡಿಸಿ ಉಲ್ಜಲವಾಗಿ ಮಾತನಾಡಿದರು. ಸಭೆಯಲ್ಲಿ ಲೆಕ್ಕವಿಲ್ಲದಷ್ಟು ಠರಾವುಗಳು ಸುತ್ತಿ ವಂದೇ ಮಾತರಂ ಎಂದು ನಿರಂತರವಾಗಿ ಘೋಷಿಸಿತು. ಸಭೆಯ ಅಂದಿನ ಕಾರ್ಯಕ್ರಮ ಅಲ್ಲಿಗೇ ಮುಕ್ತಾಯವಾಯಿತು.

ಬಲರಾಮಪುರ ಸಾಕಷ್ಟು ದೊಡ್ಡ ಗ್ರಾಮ. ಅಲ್ಲಲ್ಲಿ ಚಿಕ್ಕಪುಟ್ಟ ಜೋಡಿದಾರರು, ಧನಿಕರು, ಗ್ರಾಮದ ಒಂದು ಅಂಚಿನಲ್ಲಿ ಮುಸಲ್ಮಾನ ರೈತರು ವಾಸ ಮಾಡುತ್ತಿದ್ದಾರೆ. ಈ ಮುಸಲ್ಮಾನ ರೈತರ ಕೇರಿಗೆ ಹೊಂದಿದಂತೆ ‘ಬಾಗದೀ’ ಮತ್ತು ‘ದೊಲೆ’ ಜನಗಳ ಗುಡಿಸಲುಗಳಿವೆ. ಬಹಳ ಹಿಂದೆ ಗಂಗಾ ನದಿಯ ಒಂದು ಶಾಖೆ ಇಲ್ಲಿಯವರೆಗೂ ಹರಿದು ಬಂದಿದ್ದಿತು. ಈಗ ಅರ್ಧ ಚಂದ್ರಾಕಾರವಾಗಿ ಎರಡು ಮೂರು ಮೈಲಿಯಷ್ಟು ಜಾಗವನ್ನು ಅದು ಸುತ್ತಿರುವುದರಿಂದ ಅಲ್ಲಿ ಒಂದು ಕೆರೆಯಾಗಿದೆ. ರೈತರು ಮತ್ತು ಕೂಲಿಗಳ ಗುಡಿಡಲುಗಳಿರುವುದು ಈ ಕೆರೆಯ ದಂಡೆ ಮೇಲೆಯೇ.

ಗ್ರಾಮದ ಅತಿ ದೊಡ್ಡ ಸಾಹುಕಾರರೆಂದರೆ ಯಜ್ಞೇಶ್ವರ ಮುಖ್ಯೋಪಾಧ್ಯಾಯರು. ಅವರ ಜಮೀನು, ಮನೆ, ವ್ಯಾಪಾಋ ಮುಂತಾದುವನ್ನು ನೋಡಿದರೆ ಅವರ ಬೇಕಾದಷ್ಟು ಮಾತ್ರವಲ್ಲ, ಇನ್ನೂ ಹೆಚ್ಚಾಗಿಯೇ ಆಸ್ತಿ ಇದ್ದೀತೆಂದು ಹೇಳಿದರೆ ಅತಿಶಯೋಕ್ತಿಯಾಗದು. ಕೂಲಿಗಾರರು ಮೆರವಣಿಗೆಯವರು ಸಾಗುತ್ತಿದ್ದುದು ಮುಖ್ಯೋಪಾಧ್ಯಾಯರ ದೊಡ್ಡ ಮಹಡಿ ಮನೆಯ ಮುಂಭಾಗದ ರಸ್ತೆಯಲ್ಲಿ. ವಿವಿಧ ವಾಕ್ಯಗಳನ್ನು ಬರೆದು ಕೆಂಪು ಬಾವುಟಗಳನ್ನು ಹಿಡಿದು ಜನ ದೊಡ್ಡ ಧ್ವನಿಯಲ್ಲಿ ಜಯಕಾರವನ್ನು ಮಾಡುತ್ತಿದ್ದರು.

ಕೇವಲ ಒಬ್ಬ ಜಮೀನ್ದಾರರಿಗೆ ಇಷ್ಟು ಹೆದರುವುದೆ! ಇವರು ನಮ್ಮ ಶತ್ರುಗಳು. ಹಗಲಿರುಳೂ ನಮ್ಮ ರಕ್ತವನ್ನು ಹೀರುತ್ತಿರುವವರು ಇವರೇ. ವಾಸ್ತವವಾಗಿ ನಮ್ಮ ಹೋರಾಟವಿರುವುದು ಇವರೊಂದಿಗೇ.”

ಇದು ಶರಶ್ಚಂದ್ರ ಚಟ್ಟೋಪಾಧ್ಯಾಯರ ‘ವಿಪ್ರದಾಸ’ ಕಾದಂಬರಿಯ ಆರಂಭದ ಭಾಗ. ಇದನ್ನು ಇಲ್ಲಿ ಒಂದು ಪುಟದಷ್ಟು ಪೂರ್ಣವಾಗಿ ಉದಾಹರಿಸಿದ್ದಕ್ಕೆ ಉದ್ದೇಶವಿದೆ. ಕಥಾತಂತ್ರ, ಕಲೆಗಾರಿಕೆ ಮೊದಲಾದುವನ್ನು ವಿಶದಪಡಿಸುವುದು ನನ್ನ ಉದ್ದೇಶವಲ್ಲ. ಸಮಕಾಲೀನ ಭಾರತೀಯ ಸಾಹಿತ್ಯದಲ್ಲಿ ಅಥವಾ ವಿಶಿಷ್ಟವಾಗಿ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಈ ಬಗೆಯ ಧೋರಣೆಯಿಂದ ಬರೆಯಹೊರಟ ಲೇಖಕರು ಒಂದು ಕೈಯ ಬೆರಳೆಣಿಕೆಗೂ ಸಿಗುತ್ತಿರಲಿಲ್ಲ. ಶರಚ್ಚಂದ್ರರು ಬಹುಶಃ ಈ ಮಾನದಂಡದಿಂದ ಅಸದೃಶರಾಗಿ ನಿಲ್ಲುತ್ತಾರೆ. ಅದು ಭಾರತದ ಬಿಡುಗಡೆಗಾಗಿ ಸ್ವಾತಂತ್ರ್ಯ ಚಳವಳಿ ನಡೆಯುತ್ತಿದ್ದ ಕಾಲ. ಇವರು ಅದಕ್ಕೆ ವಿರೋಧಿಯಲ್ಲ. ಪರವಾದಿಗಳು. ಆದರೆ ಅವರ ಸ್ವಾತಂತ್ರ್ಯ ಕಲ್ಪನೆ ಆಯಾಮ ವ್ಯಾಪಕವಾದುದು. ಕೇವಲ ರಾಜಕೀಯ ಬಿಡುಗಡೆಗೆ ಇವರ ಸ್ವಾತಂತ್ರ್ಯ ಕಲ್ಪನೆ ಸೀಮಿತವಾಗಿರಲಿಲ್ಲ. ಅದು ರಾಜಕೀಯದ ದಾಸ್ಯದ ಆಚೆಗೂ ಚಾಚಿಕೊಂಡು ಜೀವನದ ಅಂಗೋಪಾಂಗಗಳಿಗೂ ಅಂಚು ಹೆಣೆದುಕೊಂಡಿತು ; ಬದುಕಿನ ಎಲ್ಲ ಸ್ತರಗಳಿಗೂ ಪಸರಿಸಿಕೊಂಡಿತು. ಅನಾದರಗಳನ್ನು ಅಳಿಸಿಹಾಕಲು ಲೇಖನಿ ಹಿಡಿದಿತ್ತು. ಕಣ್ಣೀರು ನಿಲ್ಲಿಸಲು ಅಣಿಯಾಗಿತ್ತು. ಮನೆಯ ನಾಲ್ಕು ಗೋಡೆಗೆ ಕಟ್ಟುಬಿದ್ದ ಹೆಣ್ಣಿನ ಅಂತರಂಗದ ಅಭಿಮತ ಆಕಾಂಕ್ಷೆಗಳಿಗೆ ಮುಕ್ತ ವಾತಾವರಣಕ್ಕೆ ಹಾರಲು ರೆಕ್ಕೆಗಳನ್ನು ಕೊಡಲು ಹವಣಿಸುತ್ತಿತ್ತು. ಪ್ರೇಮಿಗಳ ಮೊರೆ ಆಲಿಸುತ್ತಿತ್ತು. ವಿಧವೆಯ ಹೃದಯಸ್ಪಂದನವನ್ನು ಕೇಳುತ್ತಿತ್ತು. ಒಂದು ಮಾತಿನಲ್ಲಿ ಈ ಆಶಯಗಳನ್ನು ಕೂಡಿಸಿ ಹೇಳುವುದಾದರೆ ಜೀವನದ ಬೇರುಗಳನ್ನು ಗುರುತಿಸುತ್ತಿತ್ತು. ಅವರು ಸಾಕಿದ ಅಷ್ಟೇನೂ ಮುದ್ದಾಗಿರದ ನಾಯಿ ಭೇಲೂವನ್ನೂ ಕಾಯಿಲೆಯಿಂದ ಉಳಿಸಲು ಇರುವ ಹಣ ಸುರಿದದ್ದು, ಅದು ಸತ್ತಾಗ ಮರುಳಾಗಿ ಅತ್ತದ್ದು. ಅವರಲ್ಲಿ ಆಳವಾಗಿ ಬೇರೂರಿದ್ದ ಅಕುಟಿಲ ಅವ್ಯಾಜ ಅಂತಃಕರಣಕ್ಕೆ ಸಾಕ್ಷಿ.

ಒಂದು ದಿನ ಅವರು ಹಿಂತಿರುಗುವಾಗ ಒಳಗಿನಿಂದ ಬಾಗಿಲು ಹಾಕಿತ್ತು. ಅವರು ಇದ್ದುದೇ ಒಬ್ಬರು. ಹೀಗಿರುವಾಗ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದುದಕ್ಕೆ ಅಚ್ಚರಿಗೊಂಡು ಬಾಗಿಲು ತಟ್ಟಿದರೆ ಬಾಗಿಲು ತೆರೆದವಳು ಯುವತಿ! ಅವಳು ಶರಶ್ಚಂದ್ರರ ಕಾಲು ಹಿಡಿದುಕೊಂಡು ಅಳುತ್ತಾ ತನ್ನ ವ್ಯಥೆಯ ಕಥೆಯನ್ನು ನಿರೂಪಿಸಿದಳು. ಅವಳು ಅವರಿದ್ದ ಮಹಡಿಯ ಕೆಳಗಿನ ಮನೆಯವಳು. ಅವಳ ತಂದೆ ಕುಡುಕ. ಆತ ಕುಡುಕತನದ ಮತ್ತೊಬ್ಬ ಮುದುಕನಿಗೆ ಅವಳನ್ನು ಮದುವೆ ಮಾಡುವುದಕ್ಕೆ ಸಿದ್ಧನಾಗಿದ್ದ. ಅವಳು ಆಶ್ರಯಿಸಿದ್ದು ಶರತ್ ಬಾಬುವನ್ನು; ಸರಿ ಅವರು ಆ ದಿನ ರಾತ್ರಿ ಅವಳಿಗೆ ತಮ್ಮ ಕೊಠಡಿಯನ್ನು ಬಿಟ್ಟುಕೊಟ್ಟು ಹೋದರು. ಮರುದಿನ ಅವಳ ತಂದೆಯ ಹಾಗೂ ಶರತ್ ರ ವಾದ ವ್ಯರ್ಥವಾಯಿತು. ಕಡೆಗೆ ಅವಳನ್ನು ತಾವೇ ಮದುವೆಯಾದರು. ಕೆಲವು ಕಾಲದ ಮೇಲೆ ಈ ಹೆಂಡತಿ ಮತ್ತು ಮಗ ಪ್ಲೇಗಿಗೆ ತುತ್ತಾದರು. ಇದರ ಉಲ್ಲೇಖ ಲೇಖಕರ ಸ್ವಭಾವವನ್ನು ಪರಿಚಯಿಸಲು ಪ್ರಸ್ತಾಪಿಸಿದ್ದು. ಸಾಮಾಜಿಕ ಅನ್ಯಾಯಗಳನ್ನು ಪರಿಹರಿಸಲು ತ್ರಿಕರಣಪೂರ್ವಕವಾಗಿ ಅವರು ಬದ್ಧರಾಗಿದ್ದರು. ಅಂತರ್ವೇದನೆಯ ಇಂತಹ ಸಾಚಾ ಅನುಭವ ಶರಶ್ಚಂದ್ರರಂತೆ ಯಾವುದೇ ಸಾಹಿತಿಗೆ ಗಟ್ಟಿತನ ತಂದುಕೊಡುತ್ತದೆ. ಮನುಷ್ಯ ಜೀವನದ ಎಲ್ಲ ಸಿದ್ಧಿ ಸಾಧನೆಗಳ ವಲಯಗಳಲ್ಲೂ ಬಹುವಾಗಿ ವಂಗವಾಡಿನ ಬುದ್ಧಿಜೀವಿಗಳು ಅಗ್ರೇಸರರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಸಾಕಷ್ಟು ಮುಂದಾಳುಗಳಾಗಿದ್ದಾರೆ. ಇವರಲ್ಲಿ ಬಂಕಿಮ ಚಂದ್ರ, ರವೀಂದ್ರನಾಥ ಮತ್ತು ಶರತ್ ಚಂದ್ರರು ರತ್ನತ್ರಯರು. ಆದರೆ ಶರತ್ ಚಂದ್ರರು ತಳೆದ ಧೋರಣೆಯಿಂದಾಗಿ ಇನ್ನಿಬ್ಬರಿಗಿಂತ ಭಿನ್ನರಾಗಿ ನಿಲ್ಲುತ್ತಾರೆ. ಶರತ್ ಚಂದ್ರರಲ್ಲಿ ಸಮಾಜದ ಸೂಕ್ಷ್ಮಗಳ ಅವಲೋಕನವಿದೆ. ಶ್ರೇಣಿಕೃತ ವ್ಯವಸ್ಥೆಯ ಭಾರತೀಯ ಸಮಾಜದಲ್ಲಿ ಜನಸಮುದಾಯದ ಸಂಕೀರ್ಣ ವರ್ತನೆಯನ್ನು ಚೆನ್ನಾಗಿ ನೋಡಿದ್ದಾರೆ. ಇವರು ಮುಖ್ಯವಾಗಿ ಸಾಮ್ಯವಾದದ ಉಜ್ವಲ ಹರಿಕಾರರು. ಇದು ಠಾಕೂರರ, ಬಂಕಿಮಚಂದ್ರರ ಕೃತಿಗಳಲ್ಲಿ ಇಲ್ಲ. ಶರತ್ ಚಂದ್ರರ ಸಾಮ್ಯವಾದ ಪ್ರತಿಪಾದನೆ ವಿಶಿಷ್ಟವಾದುದು. ಇವರ ಸಾಮ್ಯವಾದ ವರ್ಗಭೇದವನ್ನು ಒಪ್ಪಿಕೊಂಡಿಲ್ಲ. ಮನುಷ್ಯ ಮನುಷ್ಯನನ್ನು ಪೀಡಿಸುವುದನ್ನು ತುಳಿಯುವುದನ್ನು ದೌರ್ಜನ್ಯ, ದಬ್ಬಾಳಿಕೆ ಮತ್ತು ದಲಿತರ ರಕ್ತಶೋಷಣೆಯನ್ನು ಇವರು ಸಕರಣವಾಗಿ ಎದುರಿಸಿದವರು. ಮಾನವ ಮಾನವನ ನಡುವೆ ವೈಷಮ್ಯವನ್ನು ನಿರಾಕರಿಸಿದರು. ಮಾನವೀಯತೆಯ ಮೂಲನ್ನು ಬೆನ್ನುಹತ್ತಿದವರು. ಅದರಿಂದ ಧನಿಕ – ನಿರ್ಗತಿಕ, ಮೇಲು – ಕೀಳು, ಪ್ರತಿಷ್ಠಿತ – ಪತಿತ, ಉತ್ತಮ ಸ್ತ್ರೀ ಪುರುಷ – ಭ್ರಷ್ಟ ಸ್ತ್ರೀ ಪುರುಷ ಎಂಬಂಥ ವರ್ಗೀಕರಣವನ್ನು ಅವರು ಮಾನ್ಯಮಾಡುವುದಿಲ್ಲ. ಅವರ ಬರವಣಿಗೆಯಲ್ಲಿ ಅನುಸೂಚಿತವಾಗಿ ಒಂದು ಸಮದೃಷ್ಟಿ ಹಾಯುತ್ತದೆ. ಅದರ ಅಡಿಯಲ್ಲಿ ಎಲ್ಲರೂ ಒಂದೇ. ಹೀಗಾಗಿ, ಜೀವನದ ವಿಶೇಷ ಅಭಿಜ್ಞತೆಯನ್ನು ಪಡೆದಿದ್ದ ಶರತ್ ಚಂದ್ರರ ಕಣ್ಣಿಗೆ, ಹೃದಯಕ್ಕೆ ಹೆಣ್ಣು ದುರ್ಬಲಳೆನಿಸಲಿಲ್ಲ. ಚಂಚಲಚಿತ್ತಳೆನಿಸಲಿಲ್ಲ. ಆಕೆ ಸಂಯಮಿಯಾಗಿ ತೇಜಸ್ವಿಯಾಗಿ ತೋರಿದಳು. ಇದೇ ರೀತಿ ದಲಿತರ ಬಗೆಗೂ ಅವರ ಅಸೀಮ ಸಾಚಾ ಪ್ರೇಮ ವ್ಯಕ್ತವಾಗಿದೆ. ಸಾಮಾನ್ಯರ ಕೂಲಿಗಾರರ ಹಳ್ಳಿಗರ ಕಷ್ಟಸುಖಗಳಿಗೆ ಅವರು ಸಮರ್ಥ ಕೊರಳಾದರು.

ಈ ಬಗೆಯ ಪ್ರಗತಿಶೀಲ ವಿಚಾರಧೋರಣೆ ಇಂದಿಗೂ ತನಿಯಾಗಿದೆ. ಅವರ ಕೃತಿಗಳು ನಿಜವಾದ ಪ್ರಜಾಪ್ರಭುತ್ವ ಏರ್ಪಡುವಂತೆ ಕರೆ ಕೊಡುತ್ತವೆ.

ಶರತ್ ಚಂದ್ರರು ಬಾಯಲ್ಲಿ ಬೆಳ್ಳಿ ಚಮಚ ಹಿಡಿದು ಬಂದವರಲ್ಲ. ಅವರ ಬಾಳು ಹೂಗಳ ಹಾದಿಯ ನಡೆಯಲ್ಲ. ಕಷ್ಟಕಾರ್ಪಣ್ಯಗಳ ಒಡನಾಟದಲ್ಲಿ ಬೆಳೆದರು ಬಾಳಿದರು. “ನನ್ನಬಾಲ್ಯವು ಯೌವನದ ಆರಂಭಕಾಲದಲ್ಲಿ ಕೆಟ್ಟ ದಾರಿದ್ಯ್ರವನ್ನು ಕಳೆದಿದೆ. ದುಡ್ಡಿನ ದುಃಸ್ಥಿತಿಯ ಕಾರಣದಿಂದಾಗಿ ನನಗೆ ವಿದ್ಯಾಭ್ಯಾಸ ಸಿಗಲಿಲ್ಲ. ಅಪ್ಪ ಕೊಟ್ಟ ಆಸ್ತಿಯೆಂದರೆ ಹಣವಲ್ಲ. ಸಾಹಿತ್ಯದ ಬಗ್ಗೆ ಆಸಕ್ತಿ, ನಮ್ಮ ತಂದೆ ಮತೀಲಾಲ ಚಟ್ಟೋಪಾಧ್ಯ ಅವರು ತುಂಬಾ ತಿಳಿದವರಾಗಿದ್ದರು. ಕಥೆ, ಕಾದಂಬರಿ, ಕವಿತೆ ನಾಟಕಗಳನ್ನು ಎಷ್ಟೋ ಬರೆದಿದ್ದರು. ಅವುಗಳನ್ನು ಎಷ್ಟೋ ಸಾರಿ ನಿದ್ರೆಗೆಟ್ಟು ಓದಿದ್ದೇನೆ. ಅವುಗಳು ತುಂಬಾ ಚೆನ್ನಾಗಿದ್ದವು. ಆದರೆ ಯಾವ ಒಂದನ್ನೂ ಅವರು ಪರಿಪೂರ್ಣಗೊಳಿಸಲಿಲ್ಲ” ಇವು ಶರತ್ ರ ಮಾತುಗಳು. ಆದರೆ ಶರತ್ ಚಂದ್ರರು ಈ ಪಿತ್ರಾರ್ಜಿತ ಆಸ್ತಿಯನ್ನು ಸಾರ್ಥಕವಾಗಿ ಸಮೃದ್ಧವಾಗಿ ಊರ್ಜಿತಗೊಳಿಸಿದರು. ಅವರ ಆರಂಭದ ಜೀವನ ಕಡುಬಡತನದ ಬೀಡಾದರೂ ಅಲೆಮಾರಿತನ ಅವರ ಸ್ವಭಾವವಾಗಿತ್ತು. “ನನ್ನ ಜೀವನ ಅಲೆತದಲ್ಲಿ ಕಳೆದಿದೆ” – ಎಂದು “ಶ್ರೀಕಾಂತ” ಕಾದಂಬರಿ ಆರಂಭವಾಗುತ್ತದೆ. ಹೊಟ್ಟೆ ಪಾಡಿಗಾಗಿ ಊರೂರು ಅಲೆದಾಟ. ಕಡೆಗೆ ನೆರೆನಾಡಾದ ರಂಗೂನಿಗೆ ಹೋದರೂ ಇದೇ ಪರದಾಟ. ರಂಗೂನಿನಿಂದ ಹಿಂತಿರುಗಿ ಬಂದರಿನಲ್ಲಿಳಿದಾಗ ಜೇಬಿನಲ್ಲಿ ಎರಡು ರೂಪಾಯಿ. ಸನ್ಯಾಸಿಯ ವೇಷ ತೊಟ್ಟು ದೇಶ ಸುತ್ತಿದರೂ ಕೋಶ ತಿರುವಿದರೂ ಸಂಚರಿಸಿದರೂ ಹಣ ಗಳಿಸಲಿಲ್ಲ. ಅನುಭವಕೋಶ ತುಂಬಿಕೊಂಡರು. ಪ್ರವಾಸ ಹೆಚ್ಚಿದಷ್ಟೂ ಅನುಭವದ ವರ್ತುಲ ಹಿಗ್ಗಿತು. ಆಟದಲ್ಲಿ ಗಟ್ಟಿಗರಾದರು. ಬಂದೂಕ ಹಿಡಿದು ಬೇಟೆಗೆ ಹೋಗುತ್ತಿದ್ದರು. ಹಾಡುಗಾರಿಕೆ ಬರುತ್ತಿತ್ತು. ಕೊಳಲು ನುಡಿಸುತ್ತಿದ್ದರು. ಚಿತ್ರ ಬರೆಯುತ್ತಿದ್ದರು. ಮೃದಂಗ ವಾದನದ ಪರಿಶ್ರಮವಿತ್ತು. ಹೋಮಿಯೋಪತಿ ಕಲಿತು ವೈದ್ಯರಾದರು. ಅಭಿನಯ ಪಟುವೂ ಆಗಿದ್ದರು. ಈ ಎಲ್ಲ ಪ್ರತಿಭೆ. ಜೀವನಾನುಭವ ಹುರಿಗೊಂಡು ಪಾಕಗೊಂಡು ಸಾಹಿತ್ಯಕ್ಕೆ ಬಂಡವಾಳವಾದವು.

ಶರತ್‌ರು ತಮ್ಮ ಅನುಭವವನ್ನು ಹಸಿಹಸಿಯಾಗಿ ಬರವಣಿಗೆಯಲ್ಲಿ ಸುರಿಯಲಿಲ್ಲ. ಜೀವನದ ಪ್ರತ್ಯಕ್ಷ ಘಟನಾವಳಿಗಳನ್ನು ಹಾಗೆಯೇ ಸಾಹಿತ್ಯದಲ್ಲಿ ತುಂಬಿಸಿಡುವುದು ಸರಿಯಲ್ಲ. ಆದರೆ ನಿಜವಾದ ಸಾಹಿತ್ಯದ ನಿರ್ಮಾಣಕ್ಕೆ ಅವು ಅಡಿಗಲ್ಲುಗಳಾಗಿ ಪರಿಣಮಿಸುತ್ತವೆ ಅಷ್ಟೇ” – ಎಂದು ಅವರೇ ಹೇಳಿದ್ದಾರೆ. ಹೀಗೆ ದಕ್ಕಿದ ಅನುಭವ ಕಲಾಕೃತಿಗಳಾಗಿ ಅವರ ಕೈಯಲ್ಲಿ ರೂಪಿತವಾಗಿದೆ.

ಶರತ್ ಚಂದ್ರರು ಬರವಣಿಗೆಗೆ ಇಳಿದಿದ್ದು ಹದಿನೇಳನೆಯ ವಯಸ್ಸಿನಲ್ಲಿ, ಸಾಹಿತ್ಯಕ್ಕೆ ಅವರು ಪದಾರ್ಪಣ ಮಾಡಿದ ಹಿನ್ನೆಲೆ ಅರ್ಥಪೂರ್ಣವಾದುದು. ರಂಗೂನಿಗೆ ಉದಾರಭರಣಕ್ಕಾಗಿ ಹೊರಡುವ ಮೊದಲು ‘ಅಕ್ಕಾಜಿ’‘ಬಡೋ ದೀದಿ’ ಎಂಬ ನೀಳ್ಗತೆಯನ್ನು ಬರೆದು ಗೆಳೆಯನಿಗೆ ಕೊಟ್ಟಿದ್ದರು. ಅತ (ಭಾರತಿ) ಪತ್ರಿಕೆಯಲ್ಲಿ ಅನಾಮಧೇಯಯಾಗಿ ಕತೆ ಶರತ್ ಚಂದ್ರರಿಗೆ ತಿಳಿಸದೆಯೇ ಪ್ರಕಟಿಸಿದ. ಆ ಕತೆ ಪ್ರಕಟವಾದ ಹೊಸತರಲ್ಲಿ ಅದು ಬಂಗಾಳದಲ್ಲಿ ಅಲ್ಲೋಲಕಲ್ಲೋಲ ಮಾಡಿತು. ಕೀರ್ತಿಯ ಶಿಖರದಲ್ಲಿದ್ದ ರವೀಂದ್ರರೇ ಇದನ್ನು ಬರೆದವರೆಂದು ಅನೇಕರು ಭಾವಿಸಿದರು; ಕಡೆಗೆ ಆ ಕತೆಯನ್ನು ಮೆಚ್ಚಿ, ಇದನ್ನು ಬರೆದವನು ನಾನಲ್ಲ ಎಂದು ಅವರು ಹೇಳಿಕೆ ಕೊಡಬೇಕಾಗಯಿತು. ಇಷ್ಟಾದರು ಅದರ ಲೇಖಕರೆಂದು ಶರತ್ ಚಂದ್ರರು ಬೆಳಕಿಗೆ ಬಂದದ್ದು ಅದಾದ ಆರು ವರ್ಷಗಳ ನಂತರವೇ, ೧೯೧೩ ರಲ್ಲಿ ಕಲ್ಕತ್ತೆಗೆ ಅವರು ಬಂದಾಗ ಅಚ್ಚಾದ ಕತೆಯನ್ನು ಗೆಳೆಯ ಓದಿ ಹೇಳಿದ. ವಾಚನಕ್ಕೆ ಆದ ಪ್ರತಿಕ್ರಿಯೆ ಏನು? ಈ ಕತೆಯನ್ನು ನಾನು ಬರೆದನೆ? ಇನ್ನು ಮೇಲೆ ಹೀಗೆಯೇ ಬರೆಯುತ್ತೇನೆ. ಬರವಣಿಗೆಯನ್ನು ಬಿಟ್ಟಿದ್ದು ಸರಿಯಲ್ಲ ಎಂದು ಲೇಖನ ಪ್ರತಿಜ್ಞೆ, ಅಂದಿನಿಂದ ಮರಣದ ತನಕ ಬರವಣಿಗೆ ನಿರಂತರವಗಿ ನಡೆಯಿತು. ಹೆಸರು, ಹಣ ಬಂದವು, ಹೋದುವು. ಲೇಖನಿಯ ಮಸಿ ಆರಲಿಲ್ಲ. “ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬೇಕಾದ ಪ್ರಸಂಗ ಬಾರದ ಭಾಗ್ಯವಂತ ಬಂಗಾಲೀ ಲೇಖಕನು ನಾನೊಬ್ಬನೇ ಎನ್ನಬಹುದು” ಎಂದು ಅವರು “ಶ್ರೀಕಾಂತ” ಕಾದಂಬರಿಯ ಭೂಮಿಕೆಯಲ್ಲಿ ನಿವೇದಿಸಿ ಕೊಂಡಿದ್ದಾರೆ. ಇಂಥ ಭಾಗ್ಯವಂತ ಸಾಹಿತಿ ಬಂಗಾಳದಲ್ಲೇ ಏಕೆ ಭಾರತದಲ್ಲೇ ಅಪರೂಪ.

‘ಶೇಷಪ್ರಶ್ನೆ’ಯಂಥ ಸಮಸ್ಯಾಪ್ರಧಾನ, ‘ಚರಿತ್ರಹೀನ’ದಂಥ ಮನೋವಿಶ್ಲೇಷಣಾತ್ಮಕ, ‘ವಿಪ್ರದಾಸ’ದಂಥ ವಿಚಾರ ಪ್ರಚೋದಕ ಕಾದಂಬರಿಗಳು ಪೂರ್ಣಕೃತಿಗಳು, ಒಮ್ಮೊಮ್ಮೆ ಬುದ್ಧಿಯ ವಿಲಾಸದಿಂದ ಸಾಗುವ ದೊಡ್ಡ ದೊಡ್ಡ ಸಂಭಾಷಣೆಗಳಿಂದ ಇಂಥ ಕೃತಿಗಳು ಅಲ್ಲಲ್ಲಿ ನೀರಸವಾಗುವುದುಂಟು. ಆದರೆ ವಿಚಾರಗಲನ್ನು ಉದ್ದೀಪಿಸುತ್ತಾ ಹೃದಯವನ್ನು ಕಲಕಿಸುತ್ತಾ ಶರತ್ ಚಂದ್ರರ ಕಾದಂಬರಿಗಳು ಓದುಗರ ಮೈಮನಗಳ ಸುಳಿಯಲ್ಲಿ ಬಹುಕಾಲ ಸುಳಿದಾಡುತ್ತವೆ. ಈ ಬಗೆಯ ಸ್ವಾತಂತ್ರ್ಯ ನಿರ್ಭೀತ ವಿಚಾರಗಳಿಂದ ಹುರಿಗೊಂಡು ಅದ್ಭುತ ಪರಿಣಾಮ ಬೀರುವುದೇ ಅವರ ಯಶಸ್ಸಿನ ಗುಟ್ಟು.

ಅವರ ಬೃಹತ್ ಕಾದಂಬರಿಗಳಲ್ಲಿ ಒಂದಾದ “ಶ್ರೀಕಾಂತ” ಅವರ ಆತ್ಮಚರಿತ್ರೆಗೆ ಹತ್ತಿರವಾಗಿದೆ. “ಚರಿತ್ರಹೀನ” ಕಾದಂಬರಿಯ ಸತೀಶ ಶರತ್ ಚಂದ್ರರ ನೆರಳು. ‘ದೇವದಾಸ’ ಕಾದಂಬರಿಯ ದೇವದಾಸನೂ ಇವರ ಬಾಳಿನ ಇನ್ನೊಂದು ಮುಖ.

ಪ್ರೇಮವೆಂಬುದು ಚಿರ ತ್ರಿಕೋನಗತಿಯಲ್ಲಿ ಜೀವಂತವಾಗಿರುವುದನ್ನು ಅವರ ಕೆಲವು ಕಥೆ ಕಾದಂಬರಿಗಳು ಯಶಸ್ವಿಯಾಗಿ ಚಿತ್ರಿಸಿವೆ. ಉದಾಹರಣೆಗೆ ‘ಮನೆ ಸುಟ್ಟಿತು ಕಾದಂಬರಿಯಲ್ಲಿ ಮಹಿಮ್, ಸುರೇಶ್, ಅಚಲ – ಇವರು ಮೂವರು ಬಿಂದುಗಳಾಗಿ ನಿಲ್ಲುತ್ತಾರೆ. ಕಾದಂಬರಿಯ ಕ್ರಿಯೆ ಇವರ ಸುತ್ತ ಚಲಿಸುತ್ತದೆ.

ಆದರೆ ಇದು ಅನಿವಾರ್ಯ, ಬದುಕು ಇರುವುದೇ ಹೀಗೆ. ಶರತ್ ಚಂದ್ರರು ಬದುಕನ್ನು ಅದು ಇರುವಂತೆಯೇ ಕಂಡರಿಸಿದವರೆಂಬುದನ್ನು ಮರೆಯಬಾರದು. ಅವರು ರವೀಂದ್ರನಾಥ ಠಾಕೂರರ ಸಮಕಾಲೀನರು. ಹೀಗಿದ್ದೂ ಠಾಕೂರರ ಪ್ರಭಾವದಿಂದ ಬಿಡಿಸಿಕೊಂಡು ತಮ್ಮ ಸ್ವತಂತ್ರ ಧ್ವನಿಯನ್ನು ತೋರಿಸಿದ್ದು ದೊಡ್ಡ ಸಾಧನೆ. ಶರತ್ ಚಂದ್ರ ಎಂಬ ಹೆಸರಿನ ಶಬ್ದರೂಪಕ್ಕಿರುವ ಅರ್ಥ ಶರತ್ ಕಾಲದ ಚಂದ್ರನೆಂದಾದರೂ ಅವರ ಅನೇಕ ಕೃತಿಗಳು ಪರಿಣಾಮದಲ್ಲಿ ಬೇಸಿಗೆ ಸೂರ್ಯನ ಶಾಖವನ್ನುಂಟು ಮಾಡುತ್ತವೆ. ಆ ಕಾಲದ ಶ್ರೀಮಂತ ವರ್ಗದವರಿಗೂ ಪಟ್ಟಭದ್ರ ಹಿತಾಸಕ್ತರಿಗೂ ಸಂಪ್ರದಾಯವಾದಿಗಳಿಗೂ ಇವರ ಕೃತಿಗಳು ವಿದ್ಯುತ್ ಆಘಾತವನ್ನುಂಟು ಮಾಡಿವೆ. ಈ ಹಿನ್ನೆಲೆಯಲ್ಲಿ ಶರತ್ ಚಂದ್ರರು ಪೌರಾಣಿಕ ಇಲ್ಲವೇ ಚಾರಿತ್ರಿಕ ಕೃತಿ ರಚನೆಗೆ ತೊಡಗದಿದ್ದುದು ಏಕೆಂದು ಸ್ಪಷ್ಟವಗುತ್ತದೆ. ಸದ್ದಿಲ್ಲದೆ, ಅಬ್ಬರ ಆಂದೋಲನವಿಲ್ಲದೆ ಸಾಮಾಜಿಕರನ್ನು ಕ್ರಾಂತಿ ಪಥದಲ್ಲಿ ಕೊಂಡೊಯ್ಯುತ್ತಾರೆ. ದಾರಿದ್ಯ್ರ ತುಂಬಿದ ನಮ್ಮ ನಾಡಿನ ಹಾಹಾಕಾರ, ದೈನ್ಯತೆ ಅವರ ‘ಅರಕ್ಷಿತಾ’ ಕೃತಿಯಲ್ಲಿದೆ.

ಅಂತರಂಗವೇ ಶರತ್ ಚಂದ್ರರ ಕಾದಂಬರಿಗಳ ಕೇಂದ್ರ. ಅಂತರಂಗದ ಪದರಗಳನ್ನು ಬಿಡಿಸುವುದರಲ್ಲಿ ಅವರು ನಿಸ್ಸೀಮರು. ಮಾನವೀಯತೆಯನ್ನು ಅವರ ಎಲ್ಲ ಕೃತಿಗಳಲ್ಲಿ ಒಂದಿಲ್ಲೊಂದು ರೂಪದಲ್ಲಿ ಹಿಡಿದುಕೊಳ್ಳುತ್ತವೆ. ಅವರು ಮಾನವನಿಗಾಗಿ ಹೋರಾಡಿದವರು ; ಸಾಹಿತ್ಯ ಬರೆದವರು, ಕಲೆಗಾಗಿ ಕಲೆ ಎಂದು ನಂಬಿದವರಲ್ಲ. ಇಂಥ ಒಂದು ತೀವ್ರ ಪ್ರಾಮಾಣಿಕತೆ ಅವರಲ್ಲಿದ್ದುದರಿಂದ ಅವರು ಬಂಗಾಳದ ಗಡಿಗಳನ್ನು ದಾಟಿ ಭಾರತದ ನಾಡಿ ಮಿಡಿತವನ್ನು ಹಿಡಿದು ನೋಡಲು ಸಾಧ್ಯವಾಯಿತು.

ಅವರು ಲೇಖನಿ ಹಿಡಿದ ಕಾಲದಲ್ಲಿ ಭಾರತ ಬ್ರಿಟಿಷರ ಲಾಭಕೊರ ಉಕ್ಕಿನ ಹಿಡಿತದಿಂದ ಬಿಡಿಸಿಕೊಳ್ಳಲು ಹವಣಿಸುತ್ತಿತ್ತು. ಇಂಗ್ಲಿಷಿನವರ ವಿಚಾರಧಾರೆ ಇಲ್ಲಿನವರಲ್ಲಿ ಅರಿವಿಲ್ಲದ ಹಾಗೆ ಆವರಿಸಿಕೊಳ್ಳುತ್ತಿತ್ತು. ಕೆಲವರು ಬ್ರಿಟಿಷರ ಬಾಯಿಗಳಾಗಿದ್ದರೆ ಅನೇಕರು ‘ಕ್ವಿಟ್ ಇಂಡಿಯಾ’ ಚಳವಳಿಯ ಕೂಗಿಗೆ ಓಗೊಡುತ್ತಿದ್ದರು. ಶರತ್ ಚಂದ್ರರೂ ಕಾಂಗ್ರೆಸ್ಸಿನ ಸಕ್ರಿಯ ಸದಸ್ಯರಾದರು. ಆದರೆ ಅವರ ಬರವಣಿಗೆಯಲ್ಲಿ ಚೀನಾ, ರಷ್ಯಾಗಳ ಆದರ್ಶಗಳೂ ಆಶಯಗಳೂ ಹೊಳಲುಗೊಂಡವು. ಮಾಕ್ಸ್, ಲೆನಿನ್, ಚಿಯಾಂಗ್ ಕೈಷೇಕ್ ಮೊದಲಾದವರ ಸಮತಾವಾದವು ಸಮಾಜವಾದದ ಪ್ರತಿಧ್ವನಿಗಳೂ ಅನುಕರಣವಾಗುತ್ತವೆ, ಸಾಮ್ರಾಜ್ಯಶಾಹಿಯನ್ನು ಬುಡಮಟ್ಟ ಕಿತ್ತು ಹಾಕಿ ಜನಪದ ಸಾಮ್ರಾಜ್ಯ ಸ್ಥಾಪನೆಗೆ ಪ್ರಯತ್ನಿಸಿದಂತೆ ಸಾಮಾಜಿಕ ಪಿಡುಗಾದ ವರ್ಗವೈಷಮ್ಯ ಹಾಗು ವ್ಯವಸ್ಥೆಯ ವಿಷಮತೆಯನ್ನು ತೊಡೆದು ಹಾಕಲು ಶರತ್ ಚಂದ್ರರು ತಮ್ಮ ಲೇಖನಿಯನ್ನು ಮೀಸಲಿಟ್ಟರು. ಮಿತಸಂಖ್ಯೆಯ ಬಂಡವಾಳಗಾರರನ್ನು ಬಿಟ್ಟು ಅನಂತಸಂಖ್ಯೆಯ ಶ್ರಮಜೀವಿಗಳ ಸಾಮಾಜಿಕ ಸಮಸ್ಯೆಗಳ ವಿಶ್ಲೇಷಣೆಗೆ ತೊಡಗಿದರು. ಒಟ್ಟಾರೆ ಅವರು ಜನಪದದ ಉತ್ಕರ್ಷಕ್ಕೆ ತಕ್ಕ ಮನೋಧರ್ಮವನ್ನು ತಿದ್ದಿ ರೂಪಿಸಲು ಸಾಹಿತ್ಯವನ್ನು ಸಬಲವಾಗಿ ಅಳವಡಿಸಿಕೊಂಡರು.

ಈ ನಿಟ್ಟಿನಿಂದ ನೋಡಿದಾಗ ಶರತ್ ಚಂದ್ರರು ತಮ್ಮ ಸಮಕಾಲೀನರಿಗಿಂತ ಅರ್ಧಶತಮಾನ ಮುಂದಿದ್ದರು. ಆದ್ದರಿಂದಲೇ ಏನೋ ಅವರ ಸಾಹಿತ್ಯ ಅಂದಿಗಿಂತ ಇಂದು ಹೆಚ್ಚು ಔಚಿತ್ಯಪೂರ್ಣವಾಗಿದೆ. ಇಂದು ಭಾರತ ಸರ್ಕಾರ ಸಾಧಿಸಬೇಕೆಂದು ಹಾಕಿಕೊಂಡಿರುವ ೨೦ ಅಂಶಗಳ ಕಾರ್ಯಕ್ರಮ ಪಟ್ಟಿಯನ್ನು ೫೦ ವರ್ಷಗಳ ಹಿಂದೆಯೇ ಈ ಮಹಾನ್ ಲೇಖಕರ ಸಾಹಿತ್ಯ ಅಳವಡಿಸಿಕೊಂಡಿದೆ.

‘ವಿಪ್ರದಾಸ’ ಕಾದಂಬರಿಯಿಂದ ನಾನು ಉದ್ಧರಿಸಿದ ಸಾಲುಗಳ ಹಿಂದೆ ಮಿಡಿಯುವ ಮನೋಧರ್ಮದ ಪರಿಚಯಕ್ಕೆ ಬೇರೆ ಕನ್ನಡಿ ಬೇಕಿಲ್ಲ. ಶರತ್ ಚಂದ್ರರೇ ವಂಗಯುವಕ ಪರಿಷತ್ತಿನ ಅಧ್ಯಕ್ಷ ಭಾಷಣದಲ್ಲಿ (೧೯೨೦) ನುಡಿದ ಮಾತುಗಳು ಹೀಗಿವೆ : “ಪರಕೀಯರ ಆಳ್ವಿಕೆ ನಮ್ಮನ್ನು ದುರ್ಬಲರನ್ನಾಗಿ ಶಸ್ತ್ರಹೀನರನ್ನಾಗಿ ಮಾಡುವುದು ಸರಿಯೇ. ಆದರೆ ನಮ್ಮನಮ್ಮೊಳಗಿನ ವೈಮನಸ್ಯಗಳು ಬೇರೆ. ಭೇದಭಾವಗಳು ನಮ್ಮನ್ನು ಮತ್ತಷ್ಟು ನಿರ್ವೀರ್ಯರನ್ನಾಗಿಸಿವೆ; ನಮ್ಮ ಮುನ್ನಡೆಗೆ ಮುಳ್ಳಾಗಿವೆ. ಈ ಸಮಾಜ ಹೃದಯಹೀನವಾಗಿವೆ. ಪ್ರೇಮವಿಲ್ಲದೆ ಧರ್ಮ ಎಲ್ಲಿದೆ! ಜಾತಿಮತಗಳ ದ್ವೇಷ ತುಂಬಿಕೊಂಡಿದೆ. ಇಲ್ಲಿ ಆರ್ಥಿಕ ಅಸಮಾನತೆ ತಾಂಡವವಾಡುತ್ತಿದೆ. ಈ ಸಮಾಜ ಸ್ತ್ರೀಯರನ್ನು ತುಂಬಾ ನಿರ್ಲಕ್ಷಸುತ್ತಿದೆ. ಇವು ನಮ್ಮ ಇಂದಿನ ದುಃಸ್ಥಿತಿಗೆ ಕಾರಣಗಳು.” ಶರತ್ ರ ಈ ಧೋರಣೆಯ ಮಾತುಗಳು ಅಂದು ಮುಖ್ಯವಾದವು. ಇಂದು ಅರ್ಥಪೂರ್ಣವಾಗಿವೆ.

ಶ್ರೇಷ್ಠ ಸಾಹಿತಿಗೆ ನಾಡು – ನುಡಿ ಎಂಬ ಗಡಿಗಳೆಲ್ಲಿ? ತಮ್ಮ ಪ್ರಾಂತ್ಯದ ಆಚೆಗೂ ಪ್ರಿಯಲೇಖಕರಾಗಿರುವ ಶರತ್ ಚಂದ್ರರು ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಸೇರಿದವರು. ಭಾರತೀಯ ಕಾದಂಬರಿಕಾರರಲ್ಲಿ ಅಗ್ರಗಣ್ಯರು. ವಂಗನಾಡಿನ ಕವಿಗೆ ಕನ್ನಡ ನಾಡಿನ ಲೇಖಕಸಮುದಾಯದ ಗೌರವಸೂಚನೆ, ಔಪಚಾರಿಕ ಪ್ರದರ್ಶನವಲ್ಲ. ಬೇರೊಂದು ಪ್ರದೇಶದ, ಬೇರೊಂದು ಭಾಷೆಯ ಸಾಹಿತಿಯ ಬಗ್ಗೆ ತೋರುತ್ತಿರುವ ಅದರ ಅಮೂಲ್ಯವಾದದ್ದು, ಅರ್ಥವತ್ತಾದದ್ದು. ವಸ್ತುಸ್ಥಿತಿ ಬಲ್ಲ ನಮಗೆಲ್ಲ ತಿಳಿದಿದೆ. ಕನ್ನಡದ ಕೆಲವು ಲೇಖಕರ ಮೇಲೆ ಶರತ್ ಚಂದ್ರರು ಪ್ರಭಾವ ಬೀರಿದ್ದಾರೆಂಬುದು, ಅಲ್ಲದೆ ಅನೇಕ ಅನುವಾದಿತ ಶರತ್ ಕಾದಂಬರಿಗಳು ಕಳೆದ ಅರ್ಧಶತಮಾನದಿಂದ ಸಾವಿರಾರು ಜನ ಕನ್ನಡ ಲೇಖಕ, ಓದುಗರನ್ನು ಪಡೆದಿವೆ.