ಸಮಕಾಲೀನ ಸಾಹಿತ್ಯವನ್ನು ಕೇಂದ್ರ ಪ್ರಜ್ಞೆಯಾಗಿರಿಸಿಕೊಂಡು ವಿವೇಚಿಸುವ ವಿಶಿಷ್ಟ ಸಂದರ್ಭವೊಂದರಲ್ಲಿ ನಾವಿಲ್ಲಿ ಸಮಾವೇಶಗೊಂಡಿದ್ದೇವೆ. ನಮ್ಮ ಸಮಕಾಲೀನ ಸಾಹಿತ್ಯದ ಸಂದರ್ಭದಲ್ಲಿ ಚಲನಗೊಂಡು ತುಂಬ ಕ್ರಿಯಾಶೀಲವಾಗಿರುವ ಸಾಹಿತ್ಯಿಕ ಪ್ರವೃತ್ತಿಗಳಾದ ದಲಿತ ಸಾಹಿತ್ಯ ಮತ್ತು ಬಂಡಾಯ ಸಾಹಿತ್ಯವನ್ನು ಕುರಿತು ನಾನು ಸಾಕಷ್ಟು ಬರೆದಿದ್ದೇನೆ. ಈಗಾಗಲೇ ಪ್ರಕಟವಾಗಿರುವ ಚಿಕ್ಕಮಗಳುರು ಮತ್ತು ಶಿರಸಿಯಲ್ಲಿ ನಡೆದ ಅಖಿಲ ಭಾರತ ೫೩ ಮತ್ತು ೫೫ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣದಲ್ಲೂ ಕನಕಪುರದಲ್ಲಿ ನಡೆದು ಸಾಹಿತ್ಯ ಗೋಷ್ಠಿಯಲ್ಲೂ ಮಾಡಿದ ಭಾಷಣಗಳಲ್ಲಿ ದಲಿತ ಮತ್ತು ಬಂಡಾಯ ಸಾಹಿತ್ಯ ಪ್ರಸ್ತಾಪ ಮಾಡಿ ವಿವೇಚಿಸಿದ್ದೇನೆ. ಈಗ ಅದಕ್ಕೆ ಪೂರಕವಾದ ಇತರ ಸಾಮಾಜಿಕ ವಿಶ್ಲೇಷಣೆಯನ್ನು ಇಂದಿನ ಉಪನ್ಯಾಸದಲ್ಲಿ ನಡೆಸಲು ಪ್ರಯತ್ನಿಸಿದ್ದೇನೆ.

ಸಾಮಾಜಿಕ – ಸಾಂಸ್ಕೃತಿಕ ಸಂದರ್ಭದಲ್ಲಿಯೇ ಸಾಹಿತ್ಯ ಪ್ರಸ್ತುತವಾಗುವುದು. ಸ್ವಾತಂತ್ರ್ಯ ಬಂದ ಮೇಲೆ ಭಾರತದಲ್ಲಿ ಅದ್ಭುತ ಪ್ರಗತಿಯಾಗಿದೆ. ಬೇಕಾದಷ್ಟು ಹೊಸ ಕೆಲಸಗಳಾಗಿವೆ. ಹಳ್ಳಿಹಳ್ಳಿಗೂ ರಸ್ತೆಗಳಾಗಿವೆ, ದೀಪ ಬಂದಿದೆ. ವಾಹನಗಳ ಸಂಚಾರ ಏರ್ಪಟ್ಟಿದೆ, ಸೇತುವೆಗಳಾಗಿವೆ, ಶಾಲೆ, ಕಾಲೇಜು, ಆಸ್ಪತ್ರೆ, ಅಂಚೆಮನೆ, ಪೊಲೀಸ್ ಠಾಣೆ ಏರ್ಪಾಟಾಗಿವೆ. ನೀರಿನ ಅನುಕೂಲ ಒದಗಿ ಬಂದಿದೆ. ಇಷ್ಟೆಲ್ಲಾ ಕೇವಲ ನಾಲ್ಕು ದಶಕಗಳಲ್ಲಿ ಆಗಿರುವ ಕೆಲಸ. ನಿಜ, ಇನ್ನೂ ಆಗಬೇಕಾದದ್ದು ನೂರಾರಿವೆ; ಈಗ ಆಗಿರುವ ಹಾಲಿ ಕೆಲಸ ಕೂಡ ಮತ್ತಷ್ಟು ಸಮರ್ಪಕವಾಗಿ ಸಾಧ್ಯವಾಗಬಹುದಿತ್ತು. ಅವೆಲ್ಲಾ ಕ್ರಮೇಣ ಆಗುತ್ತವೆ, ಸರಿಹೋಗುತ್ತವೆಂಬ ಭರವಸೆಯಿದೆ. ಆದರೆ ದಲಿತರ ದಬ್ಬಾಳಿಕೆ ಮಾತ್ರ ಘೋರತರವಾಗಿ ಮುಂದುವರೆದಿದೆ. ಶೂದ್ರ ದಲಿತರ ಶೋಷಣೆ ಕುರಿತು ಪ್ರಸ್ತಾಪಿಸುವ ಮೊದಲು, ನಮ್ಮ ಗಡಿ ಸಮಸ್ಯೆ ಬಗ್ಗೆ ಎರಡು ಮಾತು ಹೇಳಬಯಸುತ್ತೇನೆ.

ಸ್ವಾತಂತ್ರ್ಯವೆಂಬುದು ಒಂದು ನಿರಂತರವಾದ ಆಶಯ. ಆ ನಂದಾದೀವಿಗೆ ಉರಿಯುತ್ತಲೇ ಇರಬೇಕು. ಅದು ಎಲ್ಲ ಎಚ್ಚೆತ್ತ ಮನುಷ್ಯನ ಮೂಲಭೂತ ಆಕಾಂಕ್ಷೆ. ಸ್ವಾತಂತ್ರ್ಯದ ಪರಿಕಲ್ಪನೆಗಳು ಜಾಗೃತವಾಗಿದ್ದುದನ್ನು ಕನ್ನಡ ಸಾಹಿತ್ಯದ ಉದ್ದಕ್ಕೂ ಕಾಣಬಹುದು. ಪಂಪನಿಂದ ಕುವೆಂಪುವರೆಗೆ ಇದನ್ನು ಮನಗಾಣುವುದು ಸಾಧ್ಯವಿದೆ. ಸ್ವಾತಂತ್ರ್ಯವನ್ನು ಕೇವಲ ರಾಜಕೀಯವಾಗಿ ನೋಡದೆ, ಅದೊಂದು ಸಾಂಸ್ಕೃತಿಕ ಕಲ್ಪನೆಯೆಂದೂ ತಿಳಿಯಬೇಕು. ದಾಸ್ಯ ವಿಮೋಚನೆಯ ಅಭೀಪ್ಸೆ ಪ್ರಜ್ವಲಿತವಾಗಿಡುವಲ್ಲಿ ಲೇಖಕರ ಪ್ರಯತ್ನ ಗಣನೀಯವಾದುದು. ಸಾಹಿತಿಗಳು ಸ್ವಾತಂತ್ರ್ಯವೇ ಕೇಂದ್ರ ಪ್ರಜ್ಞೆಯಾಗಿ ಕೆಲಸಮಾಡಿರುವ ಅನೇಕ ಕೃತಿಗಳನ್ನು, ಕವಿತೆಗಳನ್ನು ರಚಿಸಿದ್ದಾರೆ. ಗುಲಾಮ ಗಿರಿಯನ್ನು ಖಂಡಿಸಿ, ಸ್ವಾತಂತ್ರ್ಯದಾಹ ಹೆಚ್ಚಿಸಿ, ದಾಸ್ಯ ವಿಮೋಚನೆಗೆ ಹುರಿದುಂಬಿಸಿ ಚೈತನ್ಯ ತುಂಬಿದ ಲೇಖಕರ ಹೊಣೆ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ ಸ್ವಲ್ಪ ಬದಲಾಗಿದೆ.

ಸಮಕಾಲೀನ ಸಮಾಜ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಜನಜಾಗೃತಿ ಉಂಟುಮಾಡುವಲ್ಲಿ ಸಾಹಿತಿಗಳು ಪ್ರಧಾನ ಪಾತ್ರ ವಹಿಸಬೇಕಾಗಿದೆ. ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿದ ದಿನಗಳು ಮುಗಿದವು. ಇಂಗ್ಲಿಷನ್ನು ನಿರಾಕರಿಸಿ, ಕನ್ನಡವನ್ನು ಬೆಂಬಲಿಸಿ ಕ್ರಾಂತಿಗೀತೆಗಳನ್ನು ಬರೆದು ಪಾಂಚಜನ್ಯ ಮೊಳಗಿಸಿದ್ದೂ ಆಯಿತು. ಇಂದು ಜನ ಬೌದ್ಧಿಕ ದಾಸ್ಯದಿಂದ ಬಿಡುಗಡೆ ಪಡೆದು ವಿಚಾರವಂತರಾಗಿ ಹೊಸಕಾಲದ ಪ್ರಸ್ತುತತೆಗೆ ಸ್ಪಂದಿಸುವಂತೆ ಸಾಹಿತಿಗಳು ಕರೆಕೊಡಬೇಕಾಗಿದೆ.

ಕಾಸರಗೋಡು ಮತ್ತು ಬೆಳಗಾವಿ – ಕಾರವಾರ ಸಮಸ್ಯೆ ಕನ್ನಡ ಭಾಷೆ ಸಾಹಿತ್ಯಕ್ಕೂ ದೊಡ್ಡ ಅಪಾಯದ ಕರೆಗಂಟೆಯನ್ನು ಬಾರಿಸುತ್ತಿದೆ. ಅಲ್ಲಿ ಅಶಾಂತಿ ನಿರ್ಮಾಣಗೊಂಡ ಸಂದರ್ಭದಲ್ಲಿ ಆಸ್ತಿಪಾಸ್ತಿ ನಿರ್ನಾಮವಾಗುತ್ತಿರುತ್ತದೆ. ದ್ವಿಭಾಷಾ ಪ್ರದೇಶಗಳಲ್ಲಿ ಗಡಿ ರೇಖೆ ಎಳೆಯುವುದು ಕಡುಕಷ್ಟ. ಭಾಷಾವಾರು ಪ್ರಾಂತ್ಯ ರಚನೆಯಾದ ಮೇಲೂ ‘ಮಹಾಜನ ಆಯೋಗ’ವನ್ನು ನೇಮಿಸಲಾಯಿತು. ಅದು ಕರ್ನಾಟಕದ ಒಪ್ಪಿಗೆ ಇಲ್ಲವೇ ಬೇಡಿಕೆಯಿಂದ ನೇಮಕವಾದ ಆಯೋಗವಲ್ಲ. ಮಹಾರಾಷ್ಟ್ರದ ಒತ್ತಾಯಕ್ಕೆ ಮಣಿದು ಅಸ್ತಿತ್ವಕ್ಕೆ ಬಂದ ಸಮಿತಿ, ಆ ಆಯೋಗ ಕೊಟ್ಟ ತೀರ್ಪಿಗೆ ಕರ್ನಾಟಕ ವಿಧಾನಸಭೆ ಅಸ್ತು ಎಂದಿದೆ, ಲೋಕಸಭೆಯ ಮೇಜಿನ ಮೇಲೆ ೧೫ ವರ್ಷಗಳ ಹಿಂದೆಯೇ ಈ ವರದಿಯನ್ನು ಮಂಡಿಸಲಾಯಿತು ; ‘ಇದನ್ನು ಈ ಸಭೆಯೂ ಒಪ್ಪಿದೆ’ ಎಂದು ಒಂದು ಸಾಲನ್ನು ಅಂದು ಸೇರಿಸಿದ್ದರೆ ಸಾಕಿತ್ತು, ಎಂದೋ ಈ ಸಮಸ್ಯೆಗೆ ತೆರೆ ಬೀಳುತ್ತಿತ್ತು.

ಈ ಸಮಸ್ಯೆಗೆ ಭಾಷಾ ಮುಖವೊಂದೇ ಅಲ್ಲದೆ ಆರ್ಥಿಕ ಸಾಮಾಜಿಕ ಔದ್ಯೋಗಿಕ ಪ್ರತಿಷ್ಠೆಯ ಮುಖಗಳೂ ಇವೆ. ಅದರಿಂದ ಗಡಿಯಲ್ಲಿ ಸಾಂಸ್ಕೃತಿಕ ಚಟುವಟಿಕೆ ಜೀವಂತವಾಗಿರಬೇಕು. ಇದುವರೆಗೆ ಆದ ಆಯೋಗ ಮತ್ತು ವರದಿಗಳು ಎಷ್ಟೊಂದು! ದೂರಾಲೋಚನೆಯ ದೊಡ್ಡ ನಾಯಕರೆಲ್ಲ ಬೆಳಗಾವಿ – ಕಾಸರಗೋಡು ಕರ್ನಾಟಕದ್ದೆಂದು ಸಾರಿದ್ದಾರೆ. ಗಾಂಧಿ, ನೆಹರು, ರಾಜೇಂದ್ರ ಪ್ರಸಾದ್, ಮೊರಾರ್ಜಿ, ಲೋಕಮಾನ್ಯ ತಿಲಕರೇ ಆದಿಯಾಗಿ ಹಲವರು ಇದನ್ನು ಸ್ಪಷ್ಟಪಡಿಸಿದ್ದಾರೆ, ದುರಾಲೋಚನೆಯ ದಡ್ಡ ನಾಯಕರು ಮಾತ್ರ ಪದೇ ಪದೇ ಇದನ್ನು ಕೆದಕಿ ಕೆದಕಿ ಕಾಲು ಕೆರೆದು ಮೇಲೆ ಬೀಳುತ್ತಿದ್ದಾರೆ. ಕರ್ನಾಟಕ ಮೊದಲಿನಿಂದಲೂ ಔದಾರ್ಯದ ಉರುಳಲ್ಲಿ ನರಳುತ್ತಾ ಬಂದಿದೆ. ನಾವು ನಮ್ಮ ಹಕ್ಕು ಸ್ಥಾಪಿಸಿಕೊಂಡು ಹೊರಗಿನ ಜನರನ್ನು ಹತ್ತಿಕ್ಕಬೇಕು. ಸರಕಾರಿ ಅಧಿಕಾರಿಗಳನ್ನು ಕಳಿಸುವುದರಿಂದ, ಆಯೋಗ ರಚಿಸುವುದರಿಂದ, ಶಾಸಕರ ನಿಯೋಗಗಳು ಹೋಗಿ ಬರುವುದರಿಂದ ಯವ ಪ್ರಯೋಜನವೂ ಸಿಗದು. ಕನ್ನಡ ಜನತೆ ಮತ್ತು ಸರಕಾರ ಬಿಗಿ ನಿಲುವು ತಳೆಯಬೇಕು. ಇದನ್ನು ಮತ್ತೆ ಚರ್ಚೆಗೆ ತೆರೆಯಕೂಡದೆಂದು ಕೇಂದ್ರದ ಮೇಲೆ ಒತ್ತಡ ತರಬೇಕು. ಬೆಳಗಾವಿ ಕನ್ನಡಿಗರ, ಕನ್ನಡ ಶಾಲೆ – ಆಸ್ತಿಗಳ ಮೇಲೆ ನಡೆಯುವ ದಾಳಿಗಳನ್ನು ನಾವು ಉಗ್ರವಾಗಿ ಸಂಘಟಿತರಾಗಿ ಎದುರಿಸಿ ಖಂಡಿಸಬೇಕು. ಸಮಕಾಲೀನವಾದ ಈ ಸಮಸ್ಯೆ ಸಾಹಿತ್ಯಕ್ಕೂ ಸೇರಿದ್ದೆಂಬ ಎಚ್ಚರ ಇರಬೇಕು.

ದಲಿತ ಸಾಹಿತ್ಯದ ಧ್ವನಿ ತರಂಗಗಳು ಇಂದು ಪೃಥ್ವಿಯನ್ನು ಸುತ್ತಿಕೊಂಡಿವೆ. ಭೂಗೋಳದಲ್ಲಿ ಎಲ್ಲೆಲ್ಲಿ ದಲಿತರನ್ನು ದಮನಿಸಲು ದಬ್ಬಾಳಿಕೆಯಾಗುತ್ತಿದೆಯೊ ಅಲ್ಲೆಲ್ಲಾ ಪ್ರತಿಭಟನೆಯ ಕೂಗು ಕೇಳಿಬರುತ್ತದೆ. ದಕ್ಷಿಣ ಆಫ್ರಿಕಾದಿಂದ ಹಿಡಿದು ದಕ್ಷಿಣ ಭಾರತದವರೆಗೆ ದಲಿತರ ಮೇಲೆ ದಾಳಿ ನಿಂತಿಲ್ಲ. ಶತಮಾನಗಳಿಂದ ನಿರಂತರವಾಗಿ ಶೂದ್ರ ದಲಿತರ ಮೇಲೆ ನಡೆಯುತ್ತಿರುವ ಶೋಷಣೆಗೆ ಪೂರ್ಣವಿರಾಮ ಹೇಳಲೇಬೇಕಾದ ಅಗತ್ಯವನ್ನು ಸಮಕಾಲೀನ ಸಾಹಿತ್ಯ ಮನಗಾಣಿಸಬೇಕಾಗಿದೆ.

ಹಿಡಿಯಷ್ಟು ಇರುವ ಬಿಳಿಯ ಜನ ದಕ್ಷಿಣ ಆಫ್ರಿಕದಲ್ಲಿ ನಿರ್ದಯಿಗಳಾಗಿ ಪಾಲಿಸುತ್ತಿರುವ, ಶ್ವೇತವರ್ಣಿಯರ ಪರವಾದ, ಜನ ವಿರೋಧಿ ಆಡಳಿತವನ್ನು ಜನಪರವಾದ ಚಿಂತನೆಗಳನ್ನು ಮಾಡುವ ಸಾಹಿತಿಗಳು ಕಟುತರವಾಗಿ ಅಲ್ಲಗಳೆಯಬೇಕು. ಅಲ್ಲಿನ ಬಹುಸಂಖ್ಯಾತ ಮಣ್ಣಿನ ಮಕ್ಕಳ ಕಣ್ಣಿಗೆ ಆಸಿಡ್ ಹಾಕುವ ಕ್ರೂರತಮ ವರ್ಣಭೇದ ನೀತಿಯನ್ನು ತಕ್ಷಣವೇ ನಿಲ್ಲಿಸಲು ಪ್ರಯತ್ನಶೀಲರಾದ ನಾಯಕರನ್ನು ಬೇಷರತ್ ಬೆಂಬಲಿಸಬೇಕು. ಕಳೆದ ಎರಡು ತಿಂಗಳಲ್ಲಿ ಏಳುನೂರು ಕಪ್ಪುಜನರ ಕೆಂಪು ನೆತ್ತರು ಬೀದಿಗಳಲ್ಲಿ ಹರಿದಿದೆ. ಕಳೆದ ವಾರವಷ್ಟೆ ಅಲ್ಲಿನ ತರುಣ ಕಪ್ಪು ಕವಿ ರಾಷ್ಟ್ರೀಯವಾದಿ ಬೆಂಜಮಿನ್ ಮೊಲೋಯಿಸನನ್ನು ಗಲ್ಲಿಗೇರಿಸಿ ತಮ್ಮ ನೀಚ ಬರ್ಬರ ಒಣಗಿದೆದೆಗಳನ್ನು ಲೋಕಕ್ಕೆ ತೋರಿಸಿದ್ದಾರೆ. ನೇಣುಗಂಬವೇರುವ ಮಗನನ್ನು ಕಡೆಯ ಬಾರಿಗೊಮ್ಮೆ ಕಾಣಲು ಹಡೆದ ತಾಯಿಯನ್ನೂ ಬಿಡಲಿಲ್ಲ. ಕೊನೆಗೆ ಮಗನ ಕಳೇಬರವನ್ನೂ ತೋರಲಿಲ್ಲ. ಹೀಗಿದೆ ಪಾಶವೀ ಕೃತ್ಯ. ಇಂಥ ತಾಯಂದಿರ ನೋವಿನ ಕೊರಳಾಗಬೇಕು ಸಮಕಾಲೀನ ಸಾಹಿತ್ಯ.

ದಕ್ಷಿಣ ಆಫ್ರಿಕಾದಿಂದ ನಮ್ಮ ನಾಡಿಗೆ ಮರಳಿದರೆ ಇಲ್ಲಿರು ಸ್ಥಿತಿಗತಿಗಳು ಇನ್ನೂ ದುರ್ಬರವಾಗಿವೆ. ರಾಜಧಾನಿ ಬೆಂಗಳೂರಿನ ಸಮೀಪದಲ್ಲೇ ಅಸಹನೀಯ ಘಟನೆಗಳು ನಡೆಯುತ್ತಿವೆ. ದೀಪದ ಕೆಳಗೇ ಕತ್ತಲೆ. ನೆಲಮಂಗಲದ ಹತ್ತಿರವಿರುವ ದಾಸನಪುರದಲ್ಲಿ ಹೋದವಾರ ನಡೆದ ದೈತ್ಯ ಕಾರ್ಯವನ್ನು ಯಾವ ಆಧುನಿಕ ಶಾಸನವೂ ತಡೆಯಲಿಲ್ಲ. ಹರಿಜನ ಶಿಲ್ಪಿ ಮರಿಸ್ವಾಮಿ ಗಣಪತಿ ವಿಗ್ರಹವನ್ನು ತಯಾರಿಸಿದ್ದೇ ಘೋರ ಅಪರಾಧ. ಇನ್ನು ಮೇಲಾದರು ಹರಿಜನರು, ದೇವರನ್ನು ನಂಬಬೇಡಿ, ಪೂಜೆ ಮಾಡಬೇಡಿ ಎಂಬ ಸಂದೇಶ ಸಾರಲು ಈ ಘಟನೆ ನಡೆಯಿತೆ!

ದೇವರನ್ನೂ ಗುತ್ತಿಗೆಗೆ ತೆಗೆದುಕೊಂಡು ರಾಷ್ಟ್ರೀಕರಣ ಮಾಡಿಕೊಂಡಿರುವ ಮೇಲುವರ್ಗದವರು ಮರಿಸ್ವಾಮಿಯವರ ಕಲಾತ್ಮಕತೆಯನ್ನು ಮೆಚ್ಚಿ ಬೆನ್ನು ತಟ್ಟಲಿಲ್ಲ. ಅದರ ಬದಲು ಪರಂಪರಾಗತ ಘೋರ ದಬ್ಬಾಳಿಕೆ, ಅಮಾನುಷ ಹಲ್ಲೆ ನಡೆಸಿದ್ದಾರೆ. ದೇವತಾಮೂರ್ತಿ ಮಾಡಿದ್ದಕ್ಕೆ ದೊರೆತ ಪ್ರತಿಫಲ ಆತ ಹುಟ್ಟಿ ಬೆಳೆದ ಹಳ್ಳಿ ಬಿಟ್ಟು ಅನಾಥನಾಗಿ ಅಲೆಯಬೇಕು. ಇಲ್ಲವಾದರೆ ಮರಿಸ್ವಾಮಿ ಮೇಲೆ ದಾಳಿ ಮಾತ್ರವಲ್ಲದೆ ಆತನ ಹದಿಹರೆಯದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರದ ಬೆದರಿಕೆ, ಎಲ್ಲಿದೆ ಸ್ವಾಮಿ ಪ್ರಜಾಪ್ರಭುತ್ವ, ಕಾನೂನು, ನ್ಯಾಯ? ವಿಧಾನಸೌಧ ಏನು ಮಾಡುತ್ತಿದೆ? ಗೃಹ ಸಚಿವರು ಏನು ಮಾಡುತ್ತಿದ್ದಾರೆ? ದಲಿತ ಕ್ರಿಯಾ ಸಮಿತಿಗಳವರು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ಬಂಡಾಯವೆಸಗದೆ ಇನ್ನೇನು ಮಾಡುತ್ತಾರೆ? ರಕ್ತ ಕುದಿಯದೆ ಇರುತ್ತದೆಯೆ? ಹೀಗೆ ಹರಿಜನ ಕಲಾವಿದನಿಗೆ ನಿಷ್ಕಾರಣವಾಗಿ ಕೊಲೆಯ ಬೆದರಿಕೆಯನ್ನು ಹಾಕಿದರೆ ಸಮಕಾಲೀನ ಸಾಹಿತಿಗಳು ಹೇಗೆ ಸಹಿಸುವುದು? ಇಂತಹ ನಿರಾಶಾಜನಕ ಚಿಂತಾಜನಕ ಪರಿಸ್ಥಿತಿಯ ಕೊಚ್ಚೆ ರಾಡಿಗಳಲ್ಲಿ ತೊಳಲಾಡುವ ಅಸಹಾಯಕರಿಗೆ ವಿಚಾರ ಶಕ್ತಿಯನ್ನು ಬೆಳೆಸಿಕೊಳ್ಳಲು ಬೇಕಾದ ತ್ರಾಣವನ್ನು ನಮ್ಮ ಸಮಕಾಲೀನ ಸಾಹಿತ್ಯ ತಂದುಕೊಡಬೇಕಾಗುತ್ತದೆ.

ಅತ್ತ ಕುದುರೆಮೋತಿಯಲ್ಲಿ ಅಮಾಯಕ ಸೋದರಿಯರಿಗೆ ಬೆತ್ತಲೆ ಸೇವೆ ಅಪಮಾನ. ಇಂಥ ಕರಾಳ ಹೇಯ ಅಸುರೀಕೃತ್ಯಕ್ಕೆ ಕಾರಣರಾದ ಮಠದ ಸ್ವಾಮಿಗೂ ಬೆಂಬಲ; ಇತ್ತ ಕಲಾವಿದ ಮರಿಸ್ವಾಮಿಯ ಮೈಮನಗಳನ್ನು ಸುಲಿಯುವ ಊರಿನ ಪುಂಡರಿಗೂ ರಕ್ಷೆ. ಇನ್ನು ದಲಿತರು ಶೂದ್ರರು ಎತ್ತ ಹೋಗಿ ಮರ್ಯಾದೆಯಿಂದ ಬಾಳಬೆಕು. ನೆಲ ಇಲ್ಲ ನೆರಳೂ ಇಲ್ಲ. ಅವರ ಲೇಖಣಿಗಳು ಖಡ್ಗವಾಗದೆ, ಮಸಿ ಸಿಡಿಮದ್ದಾಗದೆ ಇನ್ನೇನು ಮಾಡೀತು. ಹಳೆಯದನ್ನೆಲ್ಲ ಗುಡಿಸಿ ಸಾರಿಸಿ ತೊಳೆದು ಹೊಸ ಇತಿಹಾಸ ಬರೆಯಬೇಕೆಂದು ಉತ್ಸಾಹದಿಂದ ಹೊರಟ ಯುವ ಶಕ್ತಿಯ ಮೇಲೆ ಸಮಕಾಲೀನ ಸಮಾಜ ಹೀಗೆ ಬರೆ ಎಳೆಯುತ್ತದೆ, ತಣ್ಣೀರು ಎರಚುತ್ತಿದೆ, ಪ್ರಾಮಾಣಿಕ ಸಂವೇದನೆಗಳನ್ನು ಸುಡುತ್ತಿದೆ. ಇನ್ನಾದರೂ ಶೂದ್ರರನ್ನು, ದಲಿತರನ್ನು ಮರ್ಯಾದೆಯಿಂದ ಮಾನವರಾಗಿ ಬಾಳಲೂ ಬೆಳಕಿನತ್ತ ಹೋಗಲೂ ಬಿಡಿ. ಇಲ್ಲವಾದರೆ ಪೆಟ್ರೋಲು ಬಂದೂಕು ಬೆಂಕಿ ಮಾತಾಡೀತು.

ತಿನ್ನಲು ಅನ್ನ, ಹೊದೆಯಲು ಬಟ್ಟೆ, ನಿಲ್ಲಲು ನೆಲ. ಆಸರಕ್ಕೆ ಮನೆ – ಇಂಥ ಮೂಲಭೂತ ಅವಶ್ಯಕತೆಗಳೊಂದು ಇಲ್ಲದೆ ಕ್ರಿಮಿಕೀಟಗಳಿಗಿಂತ ಕೀಳಾಗಿ ಬಾಳಿ ಹೇಳ ಹೆಸರಿಲ್ಲದಂತೆ, ಹೇಳಲೂ ಉಸಿರಿಲ್ಲದಂತೆ ನಿತ್ಯ ಸಾವಿನೆಡೆಗೆ ಧಾವಿಸುತ್ತಿರುವ ದೌರ್ಭಾಗ್ಯ ಕೋಟಿಯತ್ತ ನನ್ನೆಲ್ಲ ಬುದ್ಧಿ ಭಾವ ಕೇಂದ್ರೀಕೃತಗೊಳ್ಳುತ್ತಿರುತ್ತದೆ. ಅಧಿಕಾರದಂಡ ಪ್ರಯೋಗಿಸಿ ಪೊಲೀಸು ಲಾಠಿ ಕೋವಿ ಉಪಯೋಗಿಸಿ ನಗರಸಭೆ ಸಿಬ್ಬಂದಿಗಳವರು ರಾತ್ರೋರಾತ್ರಿ ದಾಳಿ ನಡೆಸಿ ಬಡವರ ಗುಡಿಸಲುಗಳನ್ನು ನೆಲಸಮ ಮಾಡಿ ಕೊಳೆಗೇರಿಗಳನ್ನು ನಾಶಪಡಿಸುವುದು ಅಮಾನವೀಯ ದುಷ್ಕೃತ್ಯ. ಅವರಿಗೆ ನಿಲ್ಲಲು ಪರ್ಯಾಯ ನೆಲೆ ಕೊಡದೆ ಹೀಗೆ ನಿಂತ ನೆಲವನ್ನು ರಣ ಹದ್ದುಗಳಂತೆ ಮೇಲೆರಗಿ ಕಿತ್ತುಕೊಳ್ಳುವ ಕಾನೂನು ಕ್ರಮಗಳನ್ನು ಸಮಕಾಲೀನ ಸಾಹಿತಿಯಾಗಿ ನಾನು ಅತ್ಯಂತ ಉಗ್ರವಾಗಿ ಖಂಡಿಸುತ್ತೇನೆ.

ಆ ದೀನ ದಲಿತ ಅವಕಾಶ ವಿಹೀನರ ಆರ್ತರೋದನಕ್ಕೆ ನನ್ನೆದೆ ಉದಿರು ಬರಿದಾಗುತ್ತಿದೆ. ಅವರನ್ನು ಹೀಗೆ ಕಡೆಗಣಿಸುತ್ತಾ ಹೊರಟರೆ ಕಡೆಗೆ, ನೆನಪಿರಲಿ, ಈ ಲೋಕ ಮೃತ್ಯುದೇವತೆಯ ನರಕ ಮಂದಿರವಾಗುವುದರಲ್ಲಿ ಸಂಶಯವಿಲ್ಲ. ವಿಜ್ಞಾನ ಮಾನವನಿಗೆ ದಯಪಾಲಿಸಿದ ಎಲ್ಲ ಏಷರಾಮಗಳನ್ನು ನಿರ್ಗತಿಕ ಬಹು ಸಮಾಜಕ್ಕು ಹಂಚದಿದ್ದರೆ, ಕಡೆಯ ಮನುಷ್ಯನಿತೂ ವಿಸ್ತರಿಸದಿದ್ದರೆ ಪಾತಾಳ ಬಿಲಗಳತ್ತ ಧಾವಿಸಬೇಕಾದೀತೆಂಬ ಎಚ್ಚರ ಮತ್ತು ವಿವೇಕ ಆಗಬೆಕು. ಸಮಕಾಲೀನ ಸಾಹಿತ್ಯ ಪರಿವರ್ತನೆಯ ಪ್ರವರ್ತಕವೂ ಆಗಬೇಕು, ಪ್ರವಾದಿಯೂ ಆಗಬೇಕು. ಜನತೆಯ ಸಾಮೂಹಿಕ ವಿಕಾಸ ಕಾರ್ಯಕ್ರಮಗಳು ಹೇಗೆ ದುರ್ಬಲಗೊಂಡು ಪೊಳ್ಳಾಗಿ ಅರ್ಥಹೀನವಾಗುತ್ತಿವೆ ಎಂಬುದನ್ನು ಬಯಲಿಗೆಳೆಯಬಲ್ಲ ನೈತಿಕ ಧೈರ್ಯವನ್ನು ನಾವು ಹೆಚ್ಚಿಸಿಕೊಳ್ಳಬೇಕು.

ಮದ್ಯ ಮಾಂಸ ವಿನಿಯೋಗಗಳಿಂದ ಪ್ರಚಾರ ಪ್ರಶಂಸೆಗಳನ್ನು ಗಿಟ್ಟಿಸಿ ಕೊಳ್ಳುತ್ತಾ ಮಠ ಸ್ಥಾಪಿಸಿಕೊಂಡು ನಮ್ಮ ಬಾಲಬಡುಕರಿಂದ ಬಹುಪರಾಕು ಹೇಳಿಕೊಳ್ಳುತ್ತಾ ಮೆರವಣಿಗೆ ಹೊರಡಿರುವ ಜನ ಇನ್ನೂ ಅದೇ ನಾಟಕಾಭಿನಯಗಳಿಂದ ಇಂದಿನ ಎಚ್ಚೆತ್ತ ಹಿಂದುಳಿದ ವರ್ಗಗಳ ಪ್ರತಿಭಾವಂತ ಲೇಖಕರನ್ನು ಮೋಸಗೊಳಿಸುವುದು ಸಾಧ್ಯವಾಗದು. ಸ್ವಮತದ ಸಾಹಿತಿಗಳನ್ನು ಸಂಸ್ಥಾಪಿಸಿ ಉಳಿದವರೆಲ್ಲ ಆ ಮೂರ್ತಿಗಳನ್ನು ಪೂಜಿಸಿ ಪ್ರಸಾದ ಪಡೆದು ಪುನೀತರಾಗಬೇಕೆಂದು ಪುಸಲಾಯಿಸುವುದು, ಅದೇ ಕಾಲಕ್ಕೆ ಪರೋಕ್ಷವಾಗಿ ಶೂದ್ರ ದಲಿತರ ಸಾಹಿತ್ಯವನ್ನು ಇತಿಶ್ರೀ ಮಾಡಿ ಮುಗಿಸುವುದು – ಇದು ಇನ್ನು ಮುಂದೆ ಆಗದ ಕೆಲಸ. ದಲಿತರ ಮೌಢ್ಯ ನಿವಾರಣೆಯಾಗಿ ಇತರರ ಪಲ್ಲಕ್ಕಿ ಹೊರುವುದು ನಿಲ್ಲಬೇಕಾಗಿದೆ.

ಮನುಷ್ಯ ವಿರೋಧಿ ಧೋರಣೆಯ ಬರವಣಿಗೆ ಬರೆದವರು ಕೂಡ ವಿಚಾರವಂತರಲ್ಲದ ಮುಗ್ಧರಿಂದ ಆರಾಧಿಸಿಕೊಳ್ಳುತ್ತಿರುವುದನ್ನು ಧಿಕ್ಕರಿಸಬೇಕು. ನಮ್ಮ ಅಪಾರ ಸಹಿಷ್ಣುತೆಯೇ ನಮಗೇ ಶಾಪ. ಅವರಿಗೆ ವರ. ತಮ್ಮ ಸ್ವಾರ್ಥಕ್ಕಾಗಿ ಜನ ವಿರೋಧಿ ತಂತ್ರಗಳನ್ನು ಪಾಲಿಸುತ್ತಾ ದಲಿತರ ಪ್ರತಿಭೆಗಳನ್ನು ಬೆಳೆಯಗೊಡದೆ ಒಳಗೊಳಗೇ ತಿನ್ನುತ್ತಾ ಬಂದಿರುವ ಕುಟ್ಟೆ ಹುಳುಗಳನ್ನು ವೈಚಾರಿಕತೆಯಿಂದ ಉಚ್ಚಾಟಿಸಬೇಕು. ಜಡ್ಡುಗಟ್ಟಿದ, ಅರ್ಥ ಕಳೆದುಕೊಂಡ ಹಳೆಯ ಹಳಸಲು ವಿಚಾರಗಳನ್ನು ಕೊಡವಿಬಿಡೋಣ. ಅರ್ಥವತ್ತಾಗಿವೆಯೆನಿಸಿದ ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳೋಣ.

ಸಮಕಾಲೀನ ಸಾಹಿತಿ ಕಣ್ಣು ಬಿಟ್ಟ ಕಡೆ ಕಾಣುವುದು ಸಮಾಜದ ಎಲ್ಲ ಸ್ತರಗಳ ಶೋಷಣೆ. ಹಳ್ಳಿಗಳಿಂದ ದಿಲ್ಲಿಯವರೆಗೆ ಕೆಳವರ್ಗದವರನ್ನು ಕುರಿತು ಕ್ವಿಂಟಾಲ್ ಗಟ್ಟಲೆ ಉದ್ಧಾರದ ಮಾತುಗಳು ಧಾರಾಳವಾಗಿ ಕೇಳಿಬರುತ್ತಿವೆ. ಅವೆಲ್ಲ ತುದಿ ನಾಲಗೆಯಿಂದೀಚೆಗೆ ಉದುರುವ ಕಪಟ ನಾಟಕದ ಸಂಭಾಷಣೆ, ಗ್ರಾಮೀಣ ಕಲೆಗಳ ವ್ಯವಸ್ಥಿತ ವಿನಾಶ ನಡೆದೇ ಇದೆ. ಬುಟ್ಟಿ ಹೆಣಿಗೆ, ಚಾಪೆ ಹಾಕುವುದು, ಬೊಂಬೆ ಮಾಡುವುದು ಮೊದಲಾದ ಕೈಕಸಬುಗಳನ್ನು ಕೊಂದಿದ್ದಾರೆ. ಕಹಳೆ, ಕೊಂಬು, ತಮಟೆ, ನಾಗಸ್ವರ ಮೊದಲಾದ ಹಳ್ಳಿಯ ವಾದ್ಯಗಳೂ ಕಣ್ಮರೆಯಾಗುತ್ತಿವೆ. ವೀಣೆ, ಪಿಟೀಲು, ಮೃದಂಗಗಳ ತಜ್ಞರಿಗೆ ರಾಷ್ಟ್ರ ಪ್ರಶಸ್ತಿ ಕೊಡುತ್ತಾರೆ, ಸಂತೋಷ. ಅದೇ ಗುಣಮಟ್ಟದ ಕಹಳೆ, ಹರೆ, ತಮಟೆ, ನಾಗಸ್ವರಗಳ ನಿಪುಣರಿಗೇಕೆ ಪದ್ಮಶ್ರೀ ಕೊಡುವುದಿಲ್ಲ? ಅಲ್ಲಿದೆ ಸ್ವಾಮಿ ರಹಸ್ಯ; ಈ ವಾದ್ಯಗಳನ್ನು ನುಡಿಸುವವರು ಹರಿಜನರು, ಗಿರಿಜನರು.

ಹರಿಜನರು ಗಿರಿಜನರು ಹಲ್ಲು ಕಿರಿಯಬೇಕೆ ಹೊರತು ಸಂಗೀತ ಕಚೇರಿಗಳನ್ನು ನಡೆಸಬಾರದು. ಇಂದಿಗೂ ಇವರಿಗೆ ಮೇಲುವರ್ಗದವರ ಮನೆಯೊಳಗೆ ಪ್ರವೇಶವಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಅಧ್ಯಯನಕ್ಕೆ ಸವಲತ್ತುಗಳಿವೆ. ಹರಿಜನ ಗಿರಿಜನ ಕಲೆ, ವಾದ್ಯ, ಸಂಗೀತ, ಕಥೆ, ಹಾಡು ಕುರಿತು ದೊಡ್ಡ ಥೀಸಿಸ್ ಬರೆದು ಪಿಎಚ್.ಡಿ ಪಡೆಯುತ್ತಾರೆ. ಆದರೆ ಕಲಾವಿದರಿಗೆ ಪಂಗನಾಮ. ಇವರಿಗೆ ಸಂಭಾವನೆಯೂ ಇಲ್ಲ.

ಬಡಗಿ, ಚಮ್ಮಾರ, ಕಮ್ಮಾರ, ನಾಯಿಂದ, ತೋಟಿ, ತಳವಾರ, ಅಗಸ, ಕುಂಬಾರ – ಹೀಗೆ ಇವರಿಗೆ ಮಾಸಾಶನವೂ ಇಲ್ಲ. ಪುರೋಹಿತರಿಗೆ, ಶ್ಯಾಮ ಭೋಗರಿಗೆ, ಪಟೇಲರಿಗೆ, ಸಾಹಿತಿಗಳಿಗೆ, ಸಂಗೀತ ನಿಪುಣರಿಗೆ ಎಲ್ಲರಿಗೂ ಮಾಸಾಶನವಿದೆ. ಹಳ್ಳಿಯ ಬದುಕನ್ನು ತಮ್ಮ ಬಾಳಿನುದ್ದಕ್ಕೂ ಬೆಳಗುವ, ಸಾಂಸ್ಕೃತಿಕ ಪರಂಪರೆಗೆ ತಮ್ಮ ಜೀವಧಾರೆ ಎರೆದು ಕಾಪಾಡುತ್ತಿರುವ ನಮ್ಮ ಸಂಸ್ಕೃತಿಯ ನಿಜ ವಾರಸುದಾರರಿಗೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ. ಸಮಕಾಲೀನ ಸಾಹಿತ್ಯ ರೂಪುಗೊಳ್ಳಬೇಕಾದದ್ದು, ಸೃಜನಶೀಲ ಪ್ರೇರಣೆ ಪಡೆಯಬೇಕಾದದ್ದು ಈ ಶೋಷಣೆ ಕುರಿತು. ಅಂಥ ಸಾಹಿತ್ಯ ಹೆಚ್ಚು ತೇಜಸ್ಸು ಮೈಗೂಡಿಸಿಕೊಳ್ಳಬಲ್ಲುದು.

ಇಂಥ ಹಗಲು ದರೋಡೆ ಎಲ್ಲೆಲ್ಲೂ ರಾಜಾರೋಷವಾಗಿ ನಡೆಯುತ್ತಿದೆ. ಹರಿಜನ ಗಿರಿಜನ ಶೂದ್ರರಿಗೆ ಮೀಸಲಾತಿ ನೀಡಿ ಜಾರಿಯಲ್ಲಿರುವುದಾಗಿ ಸರಕಾರ ತಿಳಿಸುತ್ತಿದೆ. ಉದ್ಯೋಗ ನೇಮಕಾತಿಗಳಲ್ಲಿ ಸರಕಾರ ಇವರಿಗಾಗಿ ಶೇಕಡಾ. ೨೦ ರಿಂದ ೨೫ ರವರೆಗೆ ಸ್ಥಾನಗಳನ್ನು ಕಾದಿರಿಸಿದೆಯಂತೆ. ಈ ಅಂತೆಕಂತೆಗಳನ್ನು ಕೇಳಿ ಕಿವಿ ಕಿವುಡಾಗುತ್ತಿದೆಯೇ ಹೊರತು ಕಣ್ಣಾರೆ ನೋಡುವ ಸೌಭಾಗ್ಯ ಇನ್ನೂ ಬರಲಿಲ್ಲ.

ಒಂದೆರಡು ಉದಾಹರಣೆಗಳಿಂದ ಇದರಲ್ಲಿ ಅಡಗಿರುವ ಮೋಸವನ್ನು ಬಯಲುಗೊಳಿಸುತ್ತೇನೆ. ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ದಲಿತರಿಗೆ, ಅಲ್ಪ ಸಂಖ್ಯಾತರಿಗೆ ಯವ ವಿಶೇಷ ಸವಲತ್ತುಗಳೂ ಸಿಗುತ್ತಿಲ್ಲ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಬರಗೂರು ರಾಮಚಂದ್ರಪ್ಪ, ಸಿದ್ಧಲಿಂಗಯ್ಯ ಶಿಕ್ಷಕರಾಗಿ ಅನೇಕ ವರ್ಷಗಳ ಅನುಭವವಿದ್ದರೂ ಇಂದಿಗೂ ಒಂದು ಬಡ್ತಿಯೂ ದೊರೆತಿಲ್ಲ. ಕುಲಾದಿಪತಿಗಳಿಗೆ ಅರಿಕೆ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.

ಇಂಥ ನೂರಾರು ಸಾವಿರಾರು ಸಾಕ್ಷ್ಯಾಧಾರಗಳು ಕರ್ನಾಟಕ ಉದ್ದಗಲಕ್ಕೂ ಅನೇಕ ವೃತ್ತಿಗಳಲ್ಲಿ ಸಿಗುತ್ತವೆ. ವಸ್ತುಸ್ಥಿತಿ ಹೀಗಿದ್ದರೂ ಸುಮ್ಮನೆ ಸರಕಾರ ಕಾಗದದ ಮೇಲೆ ಮೀಸಲಾತಿ ಜಾರಿಯಲ್ಲಿದೆ ಎಂದು ತೋರಿಸುವ ನಾಟಕ ನಡೆಸಿದೆ. ಎಂದೋ ಮೀಸಲಾತಿ ಸತ್ತಿದೆ, ಅದರ ಹೆಣ ತೋರಿಸುತ್ತಿದ್ದಾರೆ ಅಷ್ಟೆ. ನೊಂದ ಜನ ಬಂಡೇಳದೆ ಇನ್ನೇನು ಮಾಡುತ್ತಾರೆ. ಹರಿಜನ – ಗಿರಿಜನ ವರ್ಗಕ್ಕೆ ಸೇರಿದ ಮೂವರನ್ನು ಮಂತ್ರಿಗಳನ್ನಾಗಿ ಮಾಡಿದಾಕ್ಷಣ ಇಡೀ ವರ್ಗ ಚೇತರಿಸಿಕೊಳ್ಳುವುದಿಲ್ಲ. ಈ ದೃಷ್ಟಿ ಪ್ರತಿಮೆಗಳನ್ನು ಮುಂದೆ ನಿಲ್ಲಿಸಿ, ಬೆದರುಬೊಂಬೆ ತೋರಿಸುವಂತೆ ಪ್ರದರ್ಶನ ಪ್ರಚಾರ ಮಾಡುವುದರಲ್ಲಿ ಅರ್ಥವಿಲ್ಲ. ಈ ಇಡೀ ಸಮುದಾಯವನ್ನು ಮೇಲಕ್ಕೆತ್ತಬೇಕು. ಸಮಕಾಲೀನ ಸಾಹಿತ್ಯ, ಇಂಥ ವಾತಾವರಣ ನಿರ್ಮಾಣವಾಗಲು ಇಂಬುಗೊಡಬೇಕು.

ದುರ್ಬಲ ಹಾಗೂ ಹೆಚ್ಚು ಹಿಂದುಳಿದ ವರ್ಗಗಳಿಗೆ ವಿದ್ಯೆ ಉದ್ಯೋಗಗಳಲ್ಲಿ ವಿಶೇಷ ಸವಲತ್ತುಗಳನ್ನು ಇನ್ನೂ ಕೆಲವು ದಶಕಗಳವರೆಗೆ ಕೊಡಲೇಬೇಕೆಂಬುದು ನಾನು ಆಗ್ರಹಪಡಿಸುತ್ತೇನೆ. ಇಂಥ ಅನುಕೂಲಗಳನ್ನು ಈ ಜನಾಂಗಕ್ಕೆ ಕೊಡುವುದು ಅನಿವಾರ್ಯವೆಂಬ ತಿಳಿವಳಿಕೆಯನ್ನೂ ತಾಳ್ಮೆಯನ್ನೂ ಔದಾರ್ಯವನ್ನೂ ಮುಂದುವರೆದ ಶಕ್ತವರ್ಗಗಳವರು ತೋರಬೇಕು. ಅತ್ಯಂತ ಕೆಳಸ್ತರದಿಂದ ಬಂದ ಲೇಖಕರು ಇದುವರೆಗೆ ಹೆಪ್ಪುಗಟ್ಟಿದ್ದ ಸಾಹಿತ್ಯಕ್ಕೆ ಇಂದು ಬಿಸಿಕೊಡುತ್ತಿದ್ದಾರೆ. ಕೆಳವರ್ಗದ ಜನಶಕ್ತಿಯ ಸ್ಫೋಟದಿಂದ ಪ್ರತಿಷ್ಠಿತ ಪಟ್ಟಭದ್ರರು ಆಸನ ಕಂಪನಕ್ಕೊಳಗಾಗಿ ಕಂಗಾಲಾಗಿದ್ದಾರೆ.ಬೇರೆ ಯಾರೂ ಬಲಿಪಶುಗಳು ಸಿಗದಿದ್ದರೆ ತಮ್ಮನ್ನೇ ಪರಚಿಕೊಂಡು ಅರಚಿಕೊಳ್ಳುತ್ತಿದ್ದಾರೆ. ಅವಾಸ್ತವಿಕಗಳನ್ನು ಪ್ರತಿಬಿಂಬಿಸುತ್ತಾ ಶೂದ್ರ – ದಲಿತರ ಹೆಗಲು ತಲೆಗಳ ಮೇಲೆ ಸವಾರಿ ಮಾಡುತ್ತಿದ್ದ ಕ್ರೌರ್ಯವ್ಯವಸ್ಥೆಯನ್ನು ಛಿದ್ರಗೊಳಿಸಲು ಇದೀಗ ಈಗೀಗ ಸಾಧ್ಯವಾಗುತ್ತಿದೆ ಎಂಬುದಕ್ಕೆ ಇವೆಲ್ಲ ಉದಾಹರಣೆಗಳಾಗುತ್ತಿವೆ. ಹೊಸ ಚಿಂತನೆಗಳನ್ನು, ಸುಪ್ತ ಆಕಾಂಕ್ಷೆಗಳನ್ನು ಇಷ್ಟು ನಿರ್ಭಿಡೆಯಿಂದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹಿಂದೆಂದೂ ನಮ್ಮ ಲೇಖಕರು ಬರೆಯಲು ಸಾಧ್ಯವಾಗಲಿಲ್ಲ. ಸಾಹಿತ್ಯದ ಮೂಲಕ ಬಾಳಿನ ನೆಲೆಗಳನ್ನು ಹುಡುಕುತ್ತ ಹೊರಟ ಹೊಸ ಧ್ವನಿಗಳು ಗಟ್ಟಿಯಾಗಿ ಸ್ಪಷ್ಟವಾಗಿ ಕೇಳಿ ಬರುತ್ತಲಿವೆ.

ಸ್ಥಗಿತಗೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಈ ಬದಲಾವಣೆ ಬಂದಿರುವುದನ್ನು ಸ್ವಾಗತಿಸಬೇಕು. ಸೌಮ್ಯರೂಪದಲ್ಲಿ ಅಂಕುರಿಸಿರುವ ಈ ಎಚ್ಚರ ನಾಳೆ ದೊಡ್ಡ ಕ್ರಾಂತಿಗೆ ನಾಂದಿ ಹಾಡಿದೆ. ಅನ್ಯಾಯಗಳನ್ನು ಪ್ರಶ್ನಿಸುವ ಎದೆಗಾರಿಕೆ ಸಮಕಾಲೀನ ಸಾಹಿತ್ಯಕ್ಕೆ ಇಂದು ಬಂದಿದೆ. ಅನ್ಯಾಯವನ್ನು ಪ್ರತಿಭಟಿಸಲು ಲೇಖಣಿ ಬಳಸುವ ಆತ್ಮ ವಿಶ್ವಾಸದ ಲೇಖಕರು ಹುಟ್ಟಿದ್ದಾರೆ. ಈ ಬಂಡಾಯ ಮನೋಧರ್ಮಕ್ಕೆ ಸೋಲಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಇದನ್ನು ಪ್ರೀತಿಸುವವರೆಲ್ಲರಿಗೆ ಸೇರಿದ್ದು.

ಏಕೆಂದರೆ ಇಷ್ಟು ಕಾಲ ಶೂದ್ರ ದಲಿತರ ಕಂಠಗಳನ್ನು ಕಿತ್ತುಕೊಂಡಿದ್ದ ಮೇಲು ವರ್ಗದ ಬುದ್ಧಿವಂತ ಗುತ್ತಿಗೆದಾರರು ಈಗ ನಮ್ಮ ಬಾಯಿಗಳನ್ನು ಮುಚ್ಚಲು ಸಾಧವ್ಯವಾಗದುದರಿಂದ, ನಮಗಿರುವ ವೇದಿಕೆಗಳನ್ನು ಬಳಸಿಕೊಂಡು, ನಮ್ಮನ್ನು ಪುಸಲಾಯಿಸಿ ಪರೋಕ್ಷವಾಗಿ ವಂಚಿಸುತ್ತಿದ್ದಾರೆ. ನಮಗಿಂತ ಮುಂದಾಗಿ ಜೋರಾಗಿ ನಮ್ಮ ಬಂಡಾಯ ಸಂಘಟನೆ ಕುರಿತ ಮಾತನಾಡುವ ಈ ಜನರ ಮೇಲೆ ಭಾರಿ ಗುಮಾನಿಯಿಟ್ಟಿರಿ. ನಮ್ಮ ಅವಕಾಶಗಳನ್ನು ಉಪಯೋಗಿಸಿಕೊಂಡು ಇಲ್ಲಿಯೂ ಮಾಮೂಲೀ ಗೋಸುಂಬೆಗಳೇ ವಿಜೃಂಭಿಸಲು ಬಿಡಬೇಡಿ. ಕೆಲವು ಶೂದ್ರ – ದಲಿತರ ವೇದಿಕೆಗಳನ್ನು, ಮೇಲು ವರ್ಗದ, ಮಾರುವೇಷದ ಖೋಟಾನಾಣ್ಯಗಳಿಗೆ ಮಾರುತ್ತಿರುವ ಮುಂದಾಳುಗಳಿಗೆ ಛೀಮಾರಿ ಮಾಡಲು ಹಿಂಜರಿಯಬೇಡಿ.

ಸಮಕಾಲೀನ ಸಾಹಿತ್ಯದಲ್ಲಿ ಸೃಜನಶೀಲ ಪ್ರತಿಭೆ ತೀವ್ರತರವಾಗಿ ಕ್ರಿಯಾಶೀಲವಾಗಿರುವ ದಲಿತ ಸಾಹಿತ್ಯಕ್ಕೆ ಕನ್ನಡದ ಇದುವರೆಗೆ ಸಾಹಿತ್ಯ ಪರಂಪರೆ ಪ್ರೇರಣಾಮೂಲವಾಗಿಲ್ಲ. ಈ ಹೊಸ ಲೇಖಕರು ಒಂದು ಸ್ವತಂತ್ರ ವಿನೂತನ ಮಾರ್ಗ ಹಿಡಿದು ಸ್ವಂತಿಕೆಯನ್ನು ಸ್ಥಾಪಿಸಿದ್ದಾರೆ. ಪ್ರತಿಭಟನೆಯೇ ಪ್ರೇರಣೆಯೂ ಮುಖ್ಯ ಧೋರಣೆಯೂ ಆದ ದಲಿತ – ಬಂಡಾಯ ಸಾಹಿತ್ಯ ಸ್ವತಂತ್ರ ನಿಲುವಿನಲ್ಲಿ ವ್ಯವಹೃತವಾಗುರತ್ತಿರುವ ಬರವಣಿಗೆ. ೧೨ನೆಯ ಶತಮಾನವನ್ನು ಬಿಟ್ಟರೆ ಮತ್ತೆ ೨೦ನೆಯ ಶತಮಾನದ ಉತ್ತರಾರ್ಧದಲ್ಲಿ ನಾವು ವಿಭಿನ್ನ ಸಾಮಾಜಿಕ ವರ್ಗದ ಧ್ವನಿಗಳನ್ನು ಸ್ಪಷ್ಟವಾಗಿ ಕೇಳುತ್ತಿದ್ದೇವೆ. ಹೊಸ ಸೊಗಡು, ಸೊಗಸು, ಆಯಾಮ ಈಗ ಸಮಕಾಲೀನ ಕನ್ನಡ ಸಾಹಿತ್ಯ ಪಡೆದುಕೊಳ್ಳುತ್ತಿದೆ. ಇಪ್ಪತ್ತನೆಯ ಶತಮಾನದಲ್ಲಿ ಹುಟ್ಟಿದ ಹೊಸ ಪ್ರವೃತ್ತಿಯನ್ನು ಅರಳಲು, ಮಾಗಲು, ಹಬ್ಬಲು, ಸ್ಥಿರವಾಗಲು, ಸಮುದಾಯದ ಅಭಿವ್ಯಕ್ತಿಯಾಗಲು ಅಂದಿನ ಮತ್ತು ಅನಂತರ ಬುದ್ಧಿವಂತ ವರ್ಗ ಈಗ ಮತ್ತೆ ಕಾರ್ಯಪ್ರವೃತ್ತವಾಗಿದೆ. ಎಲ್ಲಿ ಈ ದಲಿತರ ಶೂದ್ರರ ಕೃತಿಗಳು ಪಠ್ಯಗಳಾಗಿ ಹೊಸ ವಿಚಾರ ಪ್ರಚಾರ ಪಡೆದುಕೊಳ್ಳುವುದೊ ಎಂಬ ಭಯ ಒಂದು ಕಡೆ, ತಮ್ಮ ಪುಸ್ತಕಗಳು ಪಠ್ಯವಾಗುವುದು ತಪ್ಪಿ ಅನಾಯಾಸವಾಗಿ ಬರುತ್ತಿದ್ದ ಆದಾಯಕ್ಕೆ ಕೊಡಲಿ ಪೆಟ್ಟು ಬೀಳುತ್ತದೆಂಬ ಭೀತಿ ಇನ್ನೊಂದು ಕಡೆ.

ಅದರಿಂದ ಪಟ್ಟಭದ್ರರು ದಲಿತ ಶೂದ್ರರಲ್ಲಿ ಒಡಕು ಮೂಡಿಸುತ್ತಿದ್ದಾರೆ. ಅಪಸ್ವರ ಆಗಲೇ ಕೇಳಿಬರುತ್ತಿದೆ. ‘ಶೂದ್ರ – ದಲಿತ ಎಂಬ ಠಸ್ಸೆ ಹಾಕಿಕೊಂಡು ಬರೆಯುವುದು ಅಪಾಯಕಾರಿ. ಸಾಹಿತ್ಯದ ದೃಷ್ಟಿಯಿಂದ ಇದೆಲ್ಲಾ ಜೊಳ್ಳು, ಅಪಕ್ವ, ಗೌಣ’ – ಎಂದೆಲ್ಲಾ ಹೇಳುತ್ತಾ ಸಾರಾಸಗಟು ಬಂಡಾಯ ಮೂಲದಿಂದ ಬಂದ ಸಾಹಿತ್ಯವನ್ನು ಗುಡಿಸಿಹಾಕುವ ಜಾಡಮಾಲಿಗಳಂತೆ ಬರುತ್ತಿದ್ದಾರೆ. ಅವರಿಗೆ ಸೊಪ್ಪು ಹಾಕಬಾರದು. ವೃತ್ತಿವಿಶಿಷ್ಟವಾದ, ಜಾತಿ ವಿಶಿಷ್ಟವಾದ, ಒಮ್ಮೊಮ್ಮೆ ವ್ಯಕ್ತಿ ವಿಶಿಷ್ಟವಾದ ಅನುಭವಗಳನ್ನು ತಮಗೆ ಸಹಜವಾದ ಭಾಷೆಯಲ್ಲಿ ಬರವಣಿಗೆ ಇಳಿಸಲು ನಾಚಬೇಕಾಗಿಲ್ಲ, ಸಂಕೋಚಪಡಬೇಕಾಗಿಲ್ಲ. ಏನೆಂದರೆ ನಮ್ಮ ಸಂಕೀರ್ಣ ಅನುಭವಗಳನ್ನು ಅವಿಷ್ಕಾರಗೊಳಿಸುವಾಗ, ಅದು ಹಸಿಯಾಗಿ ಕಾರಿದ ಆಕ್ರೋಶದ ಅಭಿವ್ಯಕ್ತಿಯಷ್ಟೇ ಆಗದೆ ಹೆಚ್ಚು ಕಲಾತ್ಮಕವೂ ಕಾವ್ಯಾತ್ಮಕವೂ ಆಗಿರಬೇಕೆಂಬ ಎಚ್ಚರವನ್ನು ಲೇಖಕರು ಕಳೆದುಕೊಳ್ಳಬಾರದು. ಸತ್ವಶಾಲಿ ಬರವಣಿಗೆಗೆ ಸಾವಿಲ್ಲ. ಗಟ್ಟಿ ಲೇಖಕ ಹೇಗೋ ಉಳಿದುಕೊಳ್ಳುತ್ತಾನೆ.

ನಮ್ಮ ಸಮಕಾಲೀನ ಸಾಹಿತ್ಯವಾದ ಶೂದ್ರ-ದಲಿತ ಸಾಹಿತ್ಯ ವಿವೇಚನೆಗೆ ನಾಗರಿಕ ಲೇಖಕರು ಕಲ್ಪಿಸಿದ ಮಾನದಂಡಗಳು ಬೇಡ. ಸೋಗಲಾಡಿ ನಯವಂಚಕ ಪಟ್ಟಭದ್ರರನ್ನು ಯಾವ ಲೆಕ್ಕಕ್ಕೂ ಜಮಾ ಖರ್ಚಿಗೂ ಇಡಬೇಡಿ. ಅವರೊಡನೆ ಸೇರಿದರೆ ನೀವೂ ಕರಗಿಹೋಗುತ್ತೀರಿ, ಜೋಕೆ, ನಿಮ್ಮ ವೈಯಕ್ತಿಕತೆಯನ್ನು ಅಳಿಸಿ ಒರೆಸಿಹಾಕುವುದೇ ಅವರ ಹುಟ್ಟುಗುಣ. ಈ ಪಟ್ಟಭದ್ರರು ತಮ್ಮ ಪ್ರಶಸ್ತಿ ಪತ್ರಗಳನ್ನು ಅವರ ಹಣೆಗೆ ಅಂಟಿಸಿಕೊಳ್ಳಲಿ, ನಮಗೆ ಬೇಡ. ಸ್ವಾಭಿಮಾನಶೂನ್ಯರಾಗಿ ಬಾಳಲು ಇವರು ನಮಗೆ ದುರ್ಬೋಧನೆಮಾಡಿ ಚಪ್ಪಡಿ ಎಳೆಯಲು ಹಿತಶತ್ರುಗಳಾಗಿ ಹತ್ತಿರ ಬಂದರೂ ಸೇರಿಸಬಾರದು. ತೀರ್ಥಪ್ರಸಾದವೆಂದು, ಅವರ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗಾಗಿ ಬಾಗಿಲು ಕಾಯುವುದನ್ನು ನಿಲ್ಲಿಸಿ, ದಲಿತರ ಇಂಥ ಸಾಂಸ್ಕೃತಿಕ ಚಳುವಳಿಗಳನ್ನು ದುರ್ಬಲಗೊಳಿಸುವ ಪುರೋಹಿತಶಾಹಿ ಜನ ಸಹಾನುಭೂತಿಯ ಸೋಗಿನಲ್ಲಿ ಹೇಗೋ ಬಂದು ಸೇರಿಬಿಡುತ್ತಾರೆ. ಇದೊಂದು ಕೊಳಕು ರಾಜಕೀಯ, ನಾವು ಸಮಕಾಲೀನ ಸಾಹಿತ್ಯದ ನಿಜ ವಾರಸುದಾರರು. ಈ ಪ್ರಗತಿ ಅವರಿಗೆ ಅಸಹನೀಯವೆನಿಸಿದೆ.

ಅವರ ಉಪದೇಶಗಳನ್ನು ಇಷ್ಟು ಸಾವಿರ ವರ್ಷ ಕೇಳಿದ್ದಾಗಿದೆ. ಇನ್ನು ಕೆಲವು ಸಾವಿರ ವರ್ಷಗಳವರೆಗೆ ಅವರು ಬಾಯಿ ಮುಚ್ಚಿ ಕಿವಿ ತೆರೆಯಲಿ. ನಾವು ಬಾಯಿ ಬಿಡೋಣ. ನಮ್ಮ ಸಾಚಾ ಸಂವೇದನೆಗಳನ್ನು ಸಾರೋಣ. ಇದರಿಂದಾದರೂ ಸಮಕಾಲೀನ ಸಾಹಿತ್ಯ ಸಂಪನ್ನವಾಗಲಿ, ಸತ್ವಶಾಲಿಯಾಗಲಿ. ನಾವು ಹೋದರೂ ನಮ್ಮ ಈ ಆರೋಗ್ಯಕರ ವಿಚಾರಗಳು ಯುವಜನಾಂಗದಲ್ಲಿ ಪ್ರಚಾರವಾಗಲಿ. ಪ್ರಾಮಾಣಿಕವಾದ ಸೃಜನಶೀಲ ಪ್ರಜ್ಞೆಯನ್ನು ಸಾಹಿತ್ಯ ಪ್ರಯೋಗಕ್ಕೆ ಗುರಿಪಡಿಸೋಣ. ದಿನನಿತ್ಯ ನೋಡುವ ವ್ಯಕ್ತಿ ಪ್ರಸಂಗಗಳನ್ನು, ಅದರ ಸಂಬಂಧದಲ್ಲೇ ತೋರುವ ಸಂಘರ್ಷಗಳನ್ನು ದ್ವಂದ್ವಗಳನ್ನು ಬಯಲಿಗೆಳೆಯೋಣ.

‘ಸಮಕಾಲೀನ ಸಾಹಿತ್ಯ’ವನ್ನು ಆಧರಿಸಿ ಒಂದು ದಿನದ ಸಾಹಿತ್ಯ ಸಮ್ಮೇಳನವನ್ನು ಯುವ ಲೇಖಕರು ಏರ್ಪಡಿಸಿರುವುದು ತುಂಬ ಪ್ರಸ್ತುತವಾಗಿದೆ. ಇಡೀ ದಿನ ನಡೆಯುವ ಗೋಷ್ಠಿಗಳಲ್ಲೂ ಕವಿಗೋಷ್ಠಿಯಲ್ಲು ಅನೇಕ ಜನ ಹೊಸ ಲೇಖಕರು ಭಾಗವಹಿಸುತ್ತಿದ್ದಾರೆ. ಸಮಾನವಾದ ಸಾಹಿತ್ಯಾದರ್ಶದಿಂದ ಪ್ರೇರಿತರಾದ ಜನ ಒಂದೆಡೆ ಸೇರಿರುವುದು ಅರ್ಥಪೂರ್ಣ ಚರ್ಚೆಗೆ ಅವಕಾಶ ಮಾಡಿಕೊಡಲಿ. ಇಂಥದೊಂದು ಮಹತ್ವದ ಹಾಗು ಮುಂದೊಮ್ಮೆ ಒಂದು ಐತಿಹಾಸಿಕ ಸಮಾವೇಶವೆಂದು ದಾಖಲಾಗಬಹುದಾದ ಈ ಸಮ್ಮೇಳನಕ್ಕೆ ಅಧ್ಯಕ್ಷಳನ್ನಾಗಿ ಆರಿಸಿ ನೀವು ತೋರಿಸುವ ಗೌರವಕ್ಕೆ ಉಪಕೃತಳಾಗಿದ್ದೇನೆ.