ನೆನ್ನೆ ಉದ್ಘಾಟನಾ ಭಾಷಣದಿಂದ ಇಲ್ಲಿಯವರೆಗೂ ನಡೆದಿರುವ ಸಮಾಜವಾದಿ ತತ್ವದ ಸಾಹಿತ್ಯಕ ನಿರೂಪಣೆಯನ್ನು ಆಲಿಸಿದ್ದೇವೆ. ಸಿ.ಇ.ಎಂ. ಜೊಡ್ ಹೇಳುವ ಹಾಗೆ ಸಮಾಜವಾದ ಎನ್ನುವ ಟೊಪ್ಪಿಗೆಯನ್ನು ಯಾರು ಬೇಕಾದರೂ ಧರಿಸಬಹುದು ಎನ್ನುವಷ್ಟರ ಮಟ್ಟಿಗೆ ಸಮಾಜವಾದದ ಮೂಲ ತತ್ವಗಳು ತೆಳುವಾಗಿವೆ. ಇಷ್ಟಾದರು ಕೆಲವು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಿಂತು ಈ ತತ್ವ ತೆರೆದುಕೊಳ್ಳುವ ರೀತಿ ಮುಖ್ಯವಾದುವು. ಈ ಎಲ್ಲ ವೈರುಧ್ಯ ಹಾಗೂ ದ್ವಂದ್ವಗಳ ನಡುವೆಯೇ ಸಮಾಜವಾದ ನಿಂತಂತೆ ಅದನ್ನು ಮೈಗೂಡಿಸಿಕೊಂಡೇ ತನ್ನೆಲ್ಲ ಇತಿ-ಮಿತಿಗಳನ್ನು ಮೀರಿ ನಿಂತ, ಬೆಳೆದ ಸಾಹಿತ್ಯವೆಂದರೆ ದಲಿತ ಹಾಗು ಬಂಡಾಯ ಸಾಹಿತ್ಯ. ಇವೆರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಂಡಾಯ ವಿಶಾಲ ಅರ್ಥದಲ್ಲಿ ಪ್ರಚಲಿತವಾದರೆ ದಲಿತ ಒಂದು ಸೀಮಿತ ವರ್ಗದಲ್ಲಿ ಕ್ರಿಯೆಗೊಂಡು ತನ್ನ ಗಟ್ಟಿತನವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದೆ.

ಇಂದಿನ ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದಲಿತ, ದಲಿತ ಸಾಹಿತ್ಯ ಎನ್ನುವ ಪದಗಳು ಹೆಚ್ಚು ಚಲಾವಣೆಯಲ್ಲಿವೆ ಹಾಗೂ ಪ್ರಮುಖವಾಗಿವೆ. ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ದಶಕಗಳಲ್ಲಿ ಬದಲಾದ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಪ್ರಜಾಪ್ರಬುತ್ವಾತ್ಮಕ ದೃಷ್ಟಿ, ಧೋರಣೆಗಳನ್ನು ತನ್ನ ಗರ್ಭದಲ್ಲಿ ಧರಿಸಿ ರೂಪ ತಳೆದದ್ದು ಸಮಾಜವಾದ. ಈ ವದಗಳ ತ್ರಿಮೂರ್ತಿಗಳೆಂದು ಹೆಸರಾದ ಕ್ರಾಂತಿಕಾರಿ ಕಾರ್ಲ್‌ಮಾರ್ಕ್ಸನ ಸಮತಾವಾದದ ದೃಷ್ಟಿ, ಫ್ರೆಡರಿಕ್ ಏಜೆಂಲ್ಸ್ ನ ಇದೇ ಭಾವನೆಗಳು, ರಷ್ಯದ ನಾಯಕ ಲೆನಿನ್ ನ ಧೋರಣೆಗಳು ದಲಿತ ಸಾಹಿತ್ಯದಲ್ಲಿ ಮೊಳಕೆ ಒಡೆದು ಚಿಗುರಿದೆ. ಕಾರ್ಲ್‌‌ಮಾಕ್ಸ್ ನ ಕ್ರಾಂತಿ ಧೋರಣೆಯ ಜೊತೆಗೆ ನಮ್ಮ ದೇಶದ ಮುಂದಾಳುಗಳಾದ ಡಾ. ರಾಮಮನೋಹರ ಲೋಹಿಯಾ, ಡಾ. ಬಿ.ಆರ್. ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ಅವರ ಪ್ರಜಾಪ್ರಭುತ್ವಾತ್ಮಕ ಸಮಾಜವಾದೀ ತಾತ್ವಿಕ ನೆಲಗಟ್ಟು ನಮ್ಮ ಬಾರತೀಯ ದಲಿತ ಹೋರಾಟಕ್ಕೆ ಅಹಿಂಸಾತ್ಮಕ ಕವಚಕೊಡಿಸಲು ಪ್ರಯತ್ನಿಸಿವೆ.

ಈ ವ್ಯಕ್ತಿಗತ ಹೋರಾಟಗಳ ಜೊತೆಯಲ್ಲಿಯೇ ನಡೆದಿರುವ ಇತರ ದೇಶಗಳ ಕ್ರಾಂತಿಗಳು ಚಳುವಳಿಗಳು ಈ ದಲಿತ ಸಾಹಿತ್ಯಕ್ಕೆ ಹೆಚ್ಚು ಕಸುವು ನೀಡಿವೆ. ಹದಿನೆಂಟನೆಯ ಶತಮಾನದ ಫ್ರಾನ್ಸ್ ದೇಶದ ಕ್ರಾಂತಿ. ಹತ್ತೊಂಬತ್ತನೆಯ ಶತಮಾನದ ಅಮೆರಿಕೆಯ ಬಿಳಿಯರ ವಿರುದ್ಧದ ನಿಗ್ರೋ ಜನಾಂಗದ ಬ್ಲಾಕ್ ಪ್ಯಾಂಥರ್ಸ್ ಚಳುವಳಿ, ಇಪ್ಪತ್ತನೆಯ ಶತಮಾನದ ಆದಿಯಲ್ಲಿನ ರಷ್ಯಾ ದೇಶದ ಸಮಾಜವಾದದ ಕ್ರಾಂತಿ, ದಕ್ಷಿಣ ಆಫ್ರಿಕಾದ ಬಿಳಿಯರ ವಿರುದ್ಧದ ನಿಗ್ರೋ ಜನಾಂಗದ ಹೋರಾಟ – ಇವೆಲ್ಲ ನಮ್ಮ ದೇಶದ ದಲಿತ ಸಾಹಿತ್ಯಕ್ಕೆ ಪ್ರಮುಖ ಪ್ರೇರಣೆಗಳಾಗಿವೆ. ಇವುಗಳ ಧೋರಣೆಗಳಿಂದ ಸ್ಫೂರ್ತಿಪಡೆದ ನಮ್ಮ ಭಾರತದ ಮಹಾರಾಷ್ಟ್ರದ ದಲಿತ ಪ್ಯಾಂಥರ್ಸ್ ಚಳುವಳಿ, ಆಂಧ್ರದ ದಿಗಂಬರ ಸಾಹಿತ್ಯದ ಹೋರಾಟ, ತಮಿಳುನಾಡಿನ ಪರೆಯಾರ‍್ರ ಕ್ರಾಂತಿಕಾರಿ ಪ್ರತಿಭಟನೆ, ಮಲೆಯಾಳ ಭಾಷೆಯ ಕುಮಾರ ಆಶಾನ್ ಸಾಹಿತ್ಯ – ಇವೆಲ್ಲ ಕನ್ನಡ ನಾಡಿನ ದಲಿತ ಸಾಹಿತ್ಯದ ಉಗಮಕ್ಕೆ ಪೂರಕ ಪ್ರೇರಣೆಯೊದಗಿಸಿದೆ.

ಈ ದಲಿತರೆಂದರೆ ಯಾರು? ಎನ್ನುವ ಪ್ರಶ್ನೆಗೆ ಅನೇಕರು ಅನೇಕ ರೀತಿಯ ವಿವರಣೆ ಕೊಟ್ಟಿದ್ದಾರೆ. ದಲಿತರನ್ನು ಎರಡು ರೀತಿಯಿಂದ ಗುರುತಿಸುವ ಪ್ರಯತ್ನ ನಡೆದಿದೆ. ಒಂದನೆಯದು ಜಾತಿಯಿಂದ ಕೀಳಾಗಿ ಕಂಡು, ಯಾರನ್ನು ಅಸ್ಪೃಶ್ಯರೆಂದು ಸವರ್ಣೀಯರು ದೂರವಿರಿಸಿದರೋ ಅವರೇ ದಲಿತರು ಎನ್ನುವುದು. ಎರಡನೆಯದು ಆರ್ಥಿಕವಾಗಿ ತುಳಿತಕ್ಕೊಳಗಾಗಿರುವ ಜಾತಿಗಳಲ್ಲಿರುವವರೆಲ್ಲಾ ದಲಿತರು ಎನ್ನುವುದು. ಆದರೆ ಎರಡನೆಯ ವಿವರಣೆಗೆ ‘ದಲಿತ’ ಪದದ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕಿಂತ ಇಗ ಅದು ಹುಟ್ಟಿ ಬೆಳೆದಿರುವ ಹಿನ್ನೆಲೆಯಲ್ಲಿ ಅದನ್ನು ಅಸ್ಪೃಶ್ಯ ಜನಾಂಗಕ್ಕೆ ಸೀಮಿತಗೊಳಿಸುವುದು ಚಾರಿತ್ರಿಕ ಅಧ್ಯಯನದ ದೃಷ್ಟಿಯಿಂದ ಸೂಕ್ತವೆನಿಸುತ್ತದೆ. ಹೀಗೆ ಮಾಡುವುದರಿಂದ ತಪ್ಪು ಗ್ರಹಿಕೆಗಳಿಂದ ಬಿಡಿಸಿಕೊಳ್ಳುವುದಲ್ಲದೆ, ಜಾತಿಯ ದೃಷ್ಟಿಯಿಂದಲೇ ಸಾಹಿತ್ಯವನ್ನು ಅಭ್ಯಾಸ ಮಾಡುವ ಸಾಂಪ್ರದಾಯಿಕ ನೋಟ ಒಂದಕ್ಕೆ ‘ದಲಿತ ಸಾಹಿತ್ಯ’ ಎನ್ನುವರು ಸಮರ್ಪಕವಾಗುತ್ತದೆ.

ಕನ್ನಡ ನಾಡಿನ ಇತಿಹಾಸದಲ್ಲಿ ಈ ದಲಿತರ ಹೋರಾಟ ಒಂದು ಹೊಸ ಅಲೆ. ಈ ಹೋರಾಟ ಇಂದು ನೆನ್ನೆಯದಲ್ಲ. ಶತಶತಮಾನಗಳಿಂದಲೂ ತನ್ನ ಸ್ವರೂಪದರ್ಶನ ಮಾಡಿಸಲು ಹೋಗಿ ಸೋತ ನಿದರ್ಶನಗಳೇ ಹೆಚ್ಚು. ಆದರೆ ಇಂದು ದಲಿತ ತನ್ನೆಲ್ಲ ಶಕ್ತಿಯನ್ನೂ ಮೈಗೂಡಿಸಿಕೊಂಡು ತ್ರಿವಿಕ್ರಮನಂತೆ ಅಚಲನಾಗಿ ನಿಂತಿದ್ದಾನೆ. ಆತನ ಇಂದಿನ ಶಕ್ತಿಗೆ ಡಾ. ಅಂಬೇಡ್ಕರ‍್ರೂ ಒಬ್ಬ ಪ್ರಮುಖ ಪ್ರೇರಕರು. ದಲಿತ ಸಮಸ್ಯೆಯನ್ನು ಜಾತಿಯ ಸಮಸ್ಯೆಯನ್ನಾಗಿ ಸಾಮಾಜಿಕ ಸಮಸ್ಯೆಗಳನ್ನಾಗಿ ಕೈಗೆ ಎತ್ತಿಕೊಂಡವರಲ್ಲಿ ಡಾ. ಅಂಬೇಡ್ಕರರು ಪ್ರಮುಖರು. ಜನ್ಮತಃ ದಲಿತರಾದ ಅವರು ದಲಿತರ ಪ್ರತ್ಯೇಕ ಸವಲತ್ತುಗಳಿಗಾಗಿ ಹೋರಾಟ ಮಾಡಿದರು.

ಜಾತಿಯ ಸಮಸ್ಯೆಯನ್ನು ರಾಜಕಿಯದ ಸಮಸ್ಯೆಯನ್ನಾಗಿ ವಿವೇಚಿಸಿದವರಲ್ಲಿ ಡಾ. ರಾಮ ಮನೋಹರ ಲೋಹಿಯಾ ಅವರು ಮುಖ್ಯರಾಗುತ್ತಾರೆ. ಅವರು ಮೇಲು ಜಾತಿಯ ಸವಲತ್ತುಗಳನ್ನು ‘ಪ್ರೀಮಿಯಂ ಇಲ್ಲದ ಜೀವವಿಮೆ’ ಎಂದು ಕರೆದರು.

ಈ ಎಲ್ಲ ಪ್ರೇರಣೆಗಳಿಂದ ಹುಟ್ಟು ಪಡೆದ ದಲಿತ ಸಾಹಿತ್ಯ ಗರ್ಭೀಕರಿಸಿ ಕೊಂಡಿರುವುದು ಮುಖ್ಯವಾಗಿ ಸಮಾಜವಾದಿ ಒಲವುಗಳನ್ನು ಎಂದು ಪ್ರತ್ಯೇಕವಾಗಿ ಹೇಳಬೇಕಾದುದಿಲ್ಲ. ಹಿಂಸೆ, ಕ್ರೌರ್ಯದ ಧೋರಣೆಯ ಧ್ವನಿ ಕಾರ್ಲ್‌ಮಾರ್ಕ್ಸ್, ಫ್ರೆಡರಿಕ್ ಏಂಗಲ್ಸ್ ನ ಸಿದ್ಧಾಮತದಿಂದ ಹೊಳಹುಗೊಂಡರೆ ಜಯಪ್ರಕಾಶ್ ನಾರಾಯಣ್ ಹಾಗೂ ಮಹಾತ್ಮ ಗಾಂಧಿಯವರಿಂದ ಭಾರತದಲ್ಲಿ ಅದು ಅಹಿಮಸಾರೂಪ ತಳೆಯಿತು. ನಮ್ಮ ಇಂದಿನ ದಲಿತ ಸಾಹಿತ್ಯದಲ್ಲಿ ಈ ಎರಡೂ ಧೋರಣೆಗಳು ಏಕಕಾಲದಲ್ಲಿ ಪ್ರಕಟವಾಗಿರುವುದು ಮುಖ್ಯ ಅಂಶ. ಇಂಡಿಯಾದಂಥ ದೇಶದಲ್ಲಿ ಜನಪರ ಒಳಿತಿಗಾಗಿ ಕ್ರಾಂತಿ – ಕ್ರೌರ್ಯ ಮೂಡುವುದು, ಈ ಘಟನೆಗಳು ನಡೆಯುವುದು ಕಷ್ಟವೆನಿಸುತ್ತದೆ. ಹಾಗೆಂದು ಸುಮ್ಮನೆ ಕೂಡಲು ದಲಿತ ಸಾಹಿತಿಗಳು ಬಯಸುವುದಿಲ್ಲ. ಕಾವ್ಯ ಶಕ್ತಿಯಿಂದ ಅವರು ನಿರಂತರ ಹೋರಾಟದ ಕಣಕ್ಕೆ ಇಳಿದಿದ್ದಾರೆ. ಅವರ ರೊಚ್ಚುರೋಷ ಕಾವ್ಯವಾಗಿ ಹರಿಯುವುದನ್ನು ನಾಟಕವಾಗಿ ಹರಳುಗೊಳ್ಳುವುದನ್ನು, ಕತೆಗಳಾಗಿ ತೆರೆದುಕೊಳ್ಳುವುದನ್ನು ಕಾಣಬಹುದು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಇಂದಿನ ದಿನಗಳು ದಲಿತ ಹಾಗೂ ಬಂಡಾಯ ಸಾಹಿತ್ಯಗಳದ್ದಾಗಿದೆ. ದಲಿತ ಸಾಹಿತ್ಯ ಇಂದು ಹೆಚ್ಚಾಗಿ ತನ್ನ ಸ್ವರೂಪವನ್ನು ತೋರ್ಪಡಿಸಿ ಕೊಂಡಿರುವುದು ಕಾವ್ಯಕ್ಷೇತ್ರದ ಮೂಲಕ, ಸ್ವಲ್ಪ ಗದ್ಯಕೃತಿಗಳು, ನಾಟಕಗಳು ಬಿಡಿ ಬಿಡಿ ಪ್ರೌಢ ಪ್ರಬಂಧಗಳು ದಲಿತ ಸಾಹಿತ್ಯದ ಸಾರ್ಥಕ ಕೊಡುಗೆಗಳಾಗಿವೆ.

ದೇವನೂರು ಮಹಾದೇವರ ‘ಒಡಲಾಳ’ ಶೋಷಿತರ ನಿರ್ಗತಿಕ ಬದುಕಿನ ದಾರುಣ ಚಿತ್ರಕ್ಕೆ ಒಂದು ಉತ್ತಮ ಉದಾಹರಣೆ. ಕದ್ದ ಕಡಲೇಕಾಯಿಯ ಸಿಪ್ಪೆಯನ್ನೂ ಬಿಡದಂತೆ ತಿಂದು ಮುಗಿಸಿರುವ ದಲಿತರ ಬಡತನ ಇಲ್ಲಿ ಪರಾಕಾಷ್ಠೆ ಮುಟ್ಟಿದೆ. ಅಂಥ ನಿರ್ಗತಿಕರ ಕೋಳಿಹುಂಜವೊಂದನ್ನು ಕದ್ದು ತಿನ್ನುವ ಅಧಿಕಾರಿ, ಪುಢಾರಿ ವರ್ಗ ಶೋಷಿತರನ್ನೇ ಮತ್ತೂ ಶೋಷಿಸುವ ಜೀವಂತ ಕತೆಯಾಗಿದೆ. ಇಂಥ ಕತೆಗಳಿಗೆ ಇಂಡಿಯಾದಂತಹ ದೇಶದಲ್ಲಿ ಕೊನೆಯೇ ಇಲ್ಲವೇನೋ ಎನ್ನಿಸುತ್ತದೆ.

ದಲಿತ ಕವಿ ಸಿದ್ಧಲಿಂಗ್ಯ ನವರ ‘ಹೊಲಮಾದಿಗರ ಹಾಡು’, ‘ಸಾವಿರಾರು ನದಿಗಳು’ – ಕವನ ಸಂಕಲನಗಳು ಸಾಹಿತ್ಯದಲ್ಲಿ ಒಂದು ಬಗೆಯ ಕ್ರಾಂತಿಯನ್ನು ಉಂಟುಮಾಡುವುದರ ಜೊತೆಯಲ್ಲಿಯೇ ಸವರ್ಣೀಯ ಸಾಹಿತಿಗಳ ವರ್ಗದಲ್ಲಿ ಒಂದು ರೀತಿಯ ಕುತೂಹಲವನ್ನು ಉಂಟುಮಾಡಿದ ಕೃತಿಗಲು. ಮ. ನ ಜವರಯ್ಯನವರ ‘ಕೇಳು ಜನ ಮಾದಿಗ ಹೊಲೆಯ’, ಸುಕನ್ಯಾ ಮಾರುತಿಯವರ ‘ಪಂಚಾಗ್ನಿಗಳ ನಡುವೆ’, ‘ನಾನು – ನಮ್ಮವರು’ ಕವನ ಸಂಕಲನಗಳು, ಗೀತಾನಾಗಭೂಷಣ ಅವರ ‘ಹಸಿಮಾಂಸ – ಹದ್ದುಗಳು’, ಚೆನ್ನಣ್ಣ ವಾಲೀಕಾರರ ‘ಟೋಂಕದ ಕೆಳಗಿನ ಜನ’ – ಎನ್ನುವ ನಾಟಕ, ಕಮಲಾ ಹಂಪನಾ, ಶ್ರೀ ಕೃಷ್ಣಪ್ಪ ಅವರ ಉದ್ಭೋದಕ ಪ್ರಬಂಧಗಳು ಬಿ.ಟಿ. ಲಲಿತಾ ನಾಯಕರ ಕೆಲವು ಪದ್ಯಗಳು ಹಾಗೂ ಕಿರು ಲೇಖನಗಳು ಸಾರಾ ಅಬೂಬಕ್ಕರ‍್ರ ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ಈ ಮೊದಲಾದ ಬರಹಗಳು ದಲಿತ ಸಾಹಿತ್ಯದಲ್ಲಿ ಹೆಸರಿಸಲೇಬೇಕಾದ ಮಹತ್ವದ ಸಾಧನೆಗಳು ; ಈ ದೆಸೆಯಲ್ಲಿ, ಬರಹದಲ್ಲಿ ತೊಡಗಿರುವವರ ಸಂಖ್ಯೆ ಸಾಕಷ್ಟು ಇದ್ದರು ಕೆಲವರ ಹೆಸರನ್ನು ಮಾತ್ರ ಇಲ್ಲಿ ಪ್ರಾತಿನಿಧಿಕವಾಗಿ ಉಲ್ಲೇಖಿಸಲಾಗಿದೆ. ಈ ದಲಿತ ಸಾಹಿತಿಗಳಲ್ಲಿ ಕೆಲವರು ಬಂಡಾಯ ಸಾಹಿತ್ಯ ನಿರ್ಮಿತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ಕಾಣಬಹುದು. ಈ ಸಾಹಿತ್ಯದ ಮೂಲ ಪ್ರೇರಣೆ ಹಾಗೂ ಧೋರಣೆಗಳು ಕಮ್ಯುನಿಸ್ಟ್ ಎಡಪಂಥೀಯ, ಸಮಾಜವಾದದ ಸಿದ್ಧಾಮತದ ನೆಲೆಗಟ್ಟಿನ ಮೇಲೆ ನಿಂತಿರುವುದರಿಂದ ಈ ಸಾಹಿತ್ಯಕ್ಕೆ ಹೆಚ್ಚಿನ ವಿವರಣೆ ಬೇಕಾಗುವುದಿಲ್ಲ. ವರ್ಗಕಲಹ, ವರ್ಣಕಲಹ, ಜಾತಿಸಂಘರ್ಷ, ಸಾಮಾಜಿಕ ಅಸಮಾನತೆ, ದೈವ ಧರ್ಮದ ಮೂಲದಿಂದ ನಡೆಯುವ ಶೋಷಣೆ ಇವುಗಳನ್ನು ಪ್ರತಿಭಟಿಸುವುದೇ ಈ ಸಾಹಿತ್ಯದ ಮೂಲ ಉದ್ದೇಶ. ತಮಗೆ ಆಗಿರುವ, ಆಗುತ್ತಿರುವ ಅನ್ಯಾಯವನ್ನು ತಮ್ಮ ದಾರುಣ ದುರಂತ ಶೋಷಿತ ಸ್ಥಿತಿಯನ್ನು ಉಗ್ರವಾಗಿ ಪ್ರತಿಭಟಿಸಲಾಗಿದೆ. ದಬ್ಬಾಳಿಕೆ ಕ್ರೌರ್ಯ ಅತಿಯಾಗಿ ನಡೆದಿದ್ದರಿಂದ ಎಚ್ಚೆತ್ತ ದಲಿತ ಜನಾಂಗದ ಕೆಲವರು ಸಾಹಿತ್ಯದ ಮೂಲಕ ತಮ್ಮ ನೋವನ್ನು ತೋಡಿಕೊಂಡರು. ಯಾರಿಂದ ಅವರಿಗೆ ವಂಚನೆಯಾಗಿದೆಯೋ ಯಾವ ವ್ಯವಸ್ಥೆ ಅವರನ್ನು ಮೃಗ, ಪಕ್ಷಿಗಳಿಗಿಂತಾ ಕಡೆಯಾಗಿ ಕಾಣುವಂತೆ ಮಾಡಿತೋ ಅವುಗಳ ವಿರುದ್ಧದ ಕೂಗು ಈ ಸಾಹಿತ್ಯದಲ್ಲಿ ಮೊಳಗಿದೆ. ಇಲ್ಲಿ ದೋಷವಿದೆ. ದ್ವೇಷವಿದೆ, ಪ್ರತಿಭಟನೆ ಇದೆ, ನೋವಿದೆ, ಸಂಕಟವಿದೆ.

ದಲಿತ ಕವಿ ಸಿದ್ಧಲಿಂಗಯ್ಯ ನವರ ‘ನನ್ನ ಜನಗಳು’ ಕವನದಲ್ಲಿ ಶತಶತಮಾನಗಳಿಂದಲೂ ದುಡಿದೂ ದುಡಿದೂ ಸತ್ತ ತನ್ನ ಜನರ ದಾರುಣ ಸ್ಥಿತಿಯ ನೋವಿದೆ. ಸಾವಿರಾರು ಜನರ ದುಡಿಮೆ, ಒಬ್ಬರಿಬ್ಬರ ಸುಖಕ್ಕೆ ದಾರಿಮಾಡಿಕೊಡುವ ಹೀನಾಯ ಸ್ಥಿತಿ, ಬಡವ ಮತ್ತೂ ಬಡವನಾಗುವ, ಸಿರಿವಂತ ಇನ್ನಷ್ಟು ಸಿರಿವಂತನಾಗುವ ಸ್ಥಿತಿ ತಪ್ಪಬೇಕು. ದುಡಿದವನಿಗೆ ತಕ್ಕಷ್ಟು ದೊರೆಯಬೇಕು. ಬಡವ ಬಲ್ಲಿದರ ಅಂತರ ತಗ್ಗಬೇಕು ಎನ್ನುವ ಸಮಾಜವಾದಿ ನಿಲುವನ್ನು ಪ್ರತಿನಿಧಿಸುವ ಕವನ ಇದು.

ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದಸಿಕೊಂಡು ವರಗಿದೋರು ನನ್ನ ಜನಗಳು
ಕಾಲುಕೈಯ್ಯ ಹಿಡಿದೋರು ಕೈಮಡಗಿಸಿಕೊಳ್ಳೋರು
ಭಕ್ತರಪ್ಪ ಭಕ್ತರು ಜನ್ನ ಜನಗಳು
ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು
ಬಿಸಲಿನಲ್ಲಿ ಬೇಯೋರು ನನ್ನ ಜನಗಳು
ಬರಿಗೈಲೇ ಬಂದರೋ ಉಸ್ಸೆಂದು ಕೂತೋರು
ಹೊಟ್ಟೆ ಬಟ್ಟೆ ಕಟ್ಟಿದೋರು ನನ್ನ ಜನಗಳು
ಮಾಳಿಗೆಗಳ ಎತ್ತಿದೋರು ನನ್ನ ಜನಗಳು
ಬೀದಿಯಲ್ಲಿ ಬಿದ್ದೋರು ಸದ್ದಿಲ್ಲದೆ ಇದ್ದೋರು
ಒಳಗೊಳಗೇ ಅತ್ತೋರು ನನ್ನ ಜನಗಳು

ನಿರಂತರ ದುಡಿಯುವ ಈ ದಲಿತ ಜನಾಂಗಕ್ಕೆ ದೊರೆಯುವ ಪ್ರತಿ ಫಲವೆಲ್ಲ?

ದಲಿತರು ಎಷ್ಟು ಶತಮಾನಗಳು ತಮ್ಮ ನೋವನ್ನು ಒಡಲಿನ ಉರಿಯಾಗಿ ಹೊಟ್ಟೆಯಲ್ಲಿಯೇ ಇಟ್ಟುಕೊಂಡಾರು, ಒಮ್ಮೆ ಅದು ಸ್ಫೋಟಗೊಳ್ಳಲೇಬೇಕು. ‘ಸಾವಿರಾರು ನದಿಗಳಾಗಿ’ ಬುರವ ಆ ಜನ ಎಲ್ಲ ಕಡೆ ಹರಡಿ ನಿಲ್ಲುವುದು ತಡವಿಲ್ಲವೆಂದು ತಮ್ಮ ಧ್ವನಿಯನ್ನು ಎತ್ತರಿಸಿದ್ದಾರೆ ; ಸಿದ್ಧಲಿಂಗಯ್ಯ :

ನೆನ್ನೆ ದಿನ
ನನ್ನ ಜನ
ಬೆಟ್ಟದಂತೆ ಬಂದರು
ಕಪ್ಪು ಮುಖ ಬೆಳ್ಳಿಗಡ್ಡ ಉರಿಯುತಿರುವ ಕಣ್ಣುಗಳು
ಹಗಲು ರಾತ್ರಿಗಳು ಸೀಳಿ ನಿದ್ದೆಯನ್ನು ಒದ್ದರು.
…………………………………………………..
ಲಕ್ಷಾಂತರ
ನಾಗರಗಳು ಹುತ್ತ ಬಿಟ್ಟು ಬಂದಂತೆ
ಊರತುಂಬ ಹರಿದರು
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
………………………………………………….
ಪೊಲೀಸರ
ದೊಣ್ಣೆಗಳು ಏಜೆಂಟರ ಕತ್ತಿಗಳು
ವೇದಶಾಸ್ತ್ರ ಪುರಾಣ ಬಂದೂಕದ ಗುಡಾಣ
ತರಗಲೆ ಕಸಕಡ್ಡಿಯಾಗಿ
ತೇಲಿ ತೇಲಿ ಹರಿದವು
ಹೋರಾಟದ ಸಾಗರಕ್ಕೆ
ಸಾವಿರಾರು ನದಿಗಳು

ದಲಿತ ಜನಾಂಗ ಒಂದಾಗಿ ಹೋರಾಟ ನಡೆಸದ ಹೊರತು ತಮಗೆ ಆಗುತ್ತಿರುವ ಅನ್ಯಾಯವನ್ನು ಗೆಲ್ಲಲು ಸಾಧ್ಯವಾಗುವುದುಹೇಗೆ? ದಲಿತ ಸಿದ್ಧಲಿಂಗಯ್ಯ, ತಮ್ಮ ಕವನಗಳು ನಿರಕ್ಷರಕುಕ್ಷಿಗಳಾದ ತನ್ನ ಜನಾಂಗಕ್ಕೆ ಮುಟ್ಟುವ ಬಗೆ ಹೇಗೆ? ಎಂದು ಯೋಚಿಸಿಯೇ ಅವರು ಹೇಳುತ್ತಾರೆ, “ಇವು ಹಾಡುಗಳು ಎಂದು ಮತ್ತೊಮ್ಮೆ ಹೇಳುತ್ತೇನೆ. ಗಟ್ಟಿಯಾಗಿ, ಒಯಬದ್ಧವಾಗಿ ಹಾಡಿದಾಗ, ಓದಿಕೊಂಡಾಗ ಮಾತ್ರ ನನ್ನ ರಚನೆಯ ಉದ್ದೇಶ ಸ್ಪಷ್ಟವಾಗುತ್ತದೆ” ಅಂದರೆ ಇದರ ಸಮೂಹ ಮಾಧ್ಯಮ, ಸಾಮೂಹಿಕವಾಗಿ ಹಾಡುವುದು. ಹಾಡಿನ ಮೂಲಕ ಓದು-ಬರಹ ಬಾರದ ತನ್ನ ಜನತೆಗೆ ಮುಟ್ಟಿಸುವ ವಿಧಾನ ಮೆಚ್ಚಬಹುದಾಗಿದೆ.

ವಿಡಂಬನಾತ್ಮಕವಾಗಿ ಬರೆದ ಸುಕನ್ಯಾ ಮಾರುತಿಯವರ ‘ಬಡವರಯ್ಯ’ ಕವನ ಶೋಷಿತ ಜನಾಂಗದ ಒಂದು ದುರಂತ ಚಿತ್ರವಾಗಿದೆ.

ಉಳ್ಳವರು ಶಿವಾಲಯವ ಮಾಡುವರಯ್ಯ
ನಾವೇನು ಮಾಡೋಣ ಬಡವರಯ್ಯ
ಮಿತಿಮೀರಿ ಬೆಳೆದ ಬೊಜ್ಜಿನ
ನೆರಳನ್ನಾದರು ನೀನಾಶ್ರಯಿಸಿದರೆ
ಸೊಗಸಾದ ದೇವಾಲಯಗಳಾದಾವು
ನಮ್ಮ ಖಾಲಿ ಒಡಲುಗಳನ್ನೆಂತು
ದೇಗುಲವಾಗಿಸೋಣ?
ಕೊಬ್ಬಿನಿಂದ ಉಬ್ಬಿಕೊಂಡ ಕಾಲ್ಗಳಾದರೆ
ಸುಭದ್ರ ಕಂಭವಾದಾವು
ಕಳ್ಳಿಕಟ್ಟಿಗೆ ಕಾಲ್ಗಳನೆಂತು
ಕಂಬಗಳಾಗಿ ನಿಲ್ಲಿಸೋಣ
…………………………………….
ಕಾಂತಿಹೀನ ಕಣ್ಗಳ
ಪ್ಯೋತಿಯನ್ನೆಂತು ಬೆಳಗೋಣ?
ಬೇಕಾದರೆ ನಮ್ಮ ಕಾಯವ ದಂಡಿಗೆಯ ಮಾಡಿಕೋ,
ಒಣಗಿ ಸಪೂರವಾಗಿದೆ,
ಪೊಳ್ಳು ಶಿರವನ್ನು ಸೋರೆಯ ಮಾಡಿಕೊ,
ನಾದ ಬತ್ತಿ ನರಗಳು ಸೊಗಸಾದ ತಂತಿಯೇ ಆಗಿವೆ.
ಬೆರಳ ಎಲುವಿನ ಕಡ್ಡಿಯಿಂದ
ಒಂದು ಬಾರಿ ಮೀಟಿ ನೋಡು
ತಂತಿ ಘಟ್ಟೆಂದು ಹರಿಯುತ್ತೆ
ಇಲ್ಲಾ
ಭಕ್ತಿರಸದ ಬದಲು
ದುಃಕದ ಹೊನಲೇ ಹೊಮ್ಮುತ್ತೆ.

ಇದೇ ಮಹಿಳಾ ಕವಿಯ ಮತ್ತೊಂದು ಕವನ, ಹೆಣ್ಣನ್ನು ದೇವರು ಧರ್ಮದ ಹೆಸರಿನಲ್ಲಿ ದೇವದಾಸಿಯರನ್ನಾಗಿ ಮಾಡಿ ಅನುಭವಿಸಿದ ಸವರ್ಣೀಯ ಪುರುಷರಿಗೆ ಕೊಟ್ಟ ಮಾರ್ಮಿಕ ಎಚ್ಚರಿಕೆ ಇಲ್ಲಿ ಗುಡುಗುಡಿಸಿದೆ, ‘ಬೇಡತಿಯರು’ ಕವನ ಹೀಗೆ ನುಡಿಯುತ್ತದೆ.

ನಾವು ಬೇಡತಿಯರು ಸ್ವಾಮಿ
ಬೇಡತಿಯರು
ಗುಡ್ಡಗಾಡಿನಿಂದ ಹರಿದ ಬಂದ ನೀರೆಯರು
ದಾರಿಬಿಡಿ
ತೀರ ಸೇರುತ್ತೇವೆ.
ನಿಮ್ಮ ಹರಿಗೋಲಿಗೆ
ಹುಟ್ಟು ಹಾಕಿ ದಣಿದಿದ್ದೇವೆ
ಇನ್ನು ಮಟ್ಟಾ ಹಾಕುವುದೊಂದು
ಬಾಕಿ ಇದೆ
ನಾವು ವೇಶ್ಯೆಯರು
ನಿಮ್ಮ ದಾಸಿಯರು
ಆಗಿದ್ದ ಕಾಲ
ಈಗಿಲ್ಲ ಎನ್ನುವಂತಿಲ್ಲ
ಆದರೂ ಅಲ್ಲಲ್ಲಿ
ಕಾಯಿಸುತ್ತಿದ್ದೇವೆ
ನಿಮ್ಮ ಬುರುಡೆಗೆ
ಬಿಸಿನೀರು
ಗಿರಿಬಾಲೆಯರು ನಾವು
ಕಪ್ಪಿದ್ದರು ಕಸ್ತೂರಿ
ಶಾಪಗ್ರಸ್ತ ಲಕ್ಷ್ಮಿಯರು
ಕಣ್ಣು ಕಮಲ
ಕನಸು ಅಮಲ
ಅದಕ್ಕೇ ತನಕ ಯಾರೋ ಆಗಿದ್ದವರು
ಈಗ ನಾವು ವಿದಗ್ದೆಯರು
ಬಿಲ್ಲು ಹಿಡಿಯಬಲ್ಲವರು
ಬೇಟೆ ಆಡಬಲ್ಲವರು
ನಿಮಗಿಂತ ಗೇಣೆತ್ತರ ಬೆಳೆಯಬಲ್ಲವರು
ಇಂದಲ್ಲ ನಾಳೆ, ಆಗಬಲ್ಲೆವು ನಿಮ್ಮ
ಒಡತಿಯರು
ನೆನಪಿರಲಿ, ನಾವು ಬೇಡತಿಯರು

ವಿಶಿಷ್ಟ ರೀತಿಯಲ್ಲಿ ಹೋರಾಟಕ್ಕೆ ಕರೆಕೊಟ್ಟ ಈ ಕವನ ದಲಿತ ಹೆಣ್ಣೊಬ್ಬಳ ದಿಟ್ಟತನಕ್ಕೆ ಸಾಕ್ಷಿಯಾಗಿದೆ. ಈ ಸಾಹಿತಿಗಳು ಕಾಣುವ ಕನಸುಗಳು ನೂರಾರು ‘ಮನುಜ’ ಅವರ ‘ಕೇಳುಜಗಮಾದಿಗ ಹೊಲೆಯ’ದಲ್ಲಿನ ಕೆಲವು ಕವನಗಳು ಇದಕ್ಕೆ ಪುಷ್ಟಿ ನೀಡಿವೆ.

ಕಮಲಾ ಹಂಪನಾ ಅವರ ಕೆಲವು ವಚನಗಳು ಈ ಹೋರಾಟದ ನೆಲೆಗೆ ಧ್ವನಿಗೂಡಿಸಿವೆ. ಬಹುಸಂಖ್ಯಾತರ, ಸವರ್ಣೀಯರ ಮಧ್ಯೆ ಬದುಕಬೇಕಾದ ಅನಿವಾರ್ಯತೆಯಲ್ಲಿ ದಲಿತರ ಸ್ಥಿತಿ ದುರಂತಮಯವಾಗಿದೆ ಎನ್ನುವ ಕೂಗು ಈ ವಚನದಲ್ಲಿದೆ.

ಎನ್ನ ರುಂಡವನೊಯ್ದಿತ್ತು
ಜನಿವಾರ ಒಂದು ಬಂದು
ಎನ್ನ ಮುಂಡನೊಯ್ದಿತ್ತು
ಶಿವದಾರ ಒಂದು ಬಂದು
ಎನ್ನ ಕೈಕಾಲ ಕೊಂಡೊಯ್ದಿತ್ತು
ನೇಗಿಲಲೊಂದು ಬಂದು
ಎನ್ನ ತನು ಮೂರಾಬಟ್ಟೆಯಾಯಿತು ನೋಡಾ
ಎನ್ನಲೇನುಂಟು ದೇವ ನಿನಗೀಯೆ
ಎನ್ನ ಮನವೊಂದುಂಟು, ಅದಕೊಂಡು
ಸಲಹೋ ಕಮಲಪ್ರಿಯಾ!

ಇಂದಿಗೂ ಈ ಹೋರಾಟ ಪ್ರಬಲ ಧ್ವನಿಯಾಗಿ ಸಾಹಿತ್ಯವಲಯದಲ್ಲಿ ಇನ್ನೂ ಗಟ್ಟಿ ಸ್ಥಾನ ಪಡೆಯ ಬೇಕಾಗಿದೆ. ದಿನನಿತ್ಯ ಪತ್ರಿಕೆಗಳಲ್ಲಿ ಹರಿಜನ – ಗಿರಿಜನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಾಣುತ್ತಲೇ ಇರುತ್ತೇವೆ. ಕುದುರೆಮೊತಿ ಪ್ರಕರಣ, ಕಲಾವಿದ ಮರಿಸ್ವಾಮಿಗೆ ಬಿದ್ದ ಏಟುಗಳನ್ನು, ಆಫ್ರಿಕಾದ ಕರಿಕವಿ ಯುವನಾಯಕ ಬೆಂಜಮಿನ್ನನ ಮರಣದಂಡನೆ ಇಂಥ ಹಲವು ಹತ್ತು ಕ್ರೌರ್ಯ, ಹಿಂಸಾತ್ಮಕ ಕೃತ್ಯಗಳು ದಲಿತರ ಮೇಲೆ ಪ್ರತಿದಿನ ನಡೆಯುತ್ತಲೇ ಇವೆ. ಇಂಥ ದೌರ್ಜನ್ಯಗಳನ್ನು ತಿಳಿಸುವಲ್ಲಿ ದಲಿತರ ಲೇಖನಿ ಖಡ್ಗವಾಗದೆ, ಮಸಿ ಸಿಡಿಮದ್ದಾಗದೆ ಇನ್ನೇನು ಮಾಡೀತು?

ದಲಿತ ಸಾಹಿತ್ಯದ ಭಾಷೆಯ ಬಗ್ಗೆ ಕೆಲವರ ತಕರಾರಿದೆ. ಕವನದ ಸತ್ವ ಎಂಥದೊ ಭಾಷೆಯೂ ಅಂಥದೇ ಆಗಿರುತ್ತದೆ. ಪ್ರತಿಭಟನೆಯನ್ನೇ ತನ್ನ ಹೊಟ್ಟೆಯಲ್ಲಿ ಇಟ್ಟುಕೊಂಡು ಹುಟ್ಟಿದ ದಲಿತ ಸಾಹಿತ್ಯದಲ್ಲಿ ಸುಕುಮಾರ ಕೋಮುಲ ಭಾವನೆಗಳಿಗಾಗಲೀ ನಯವಾದ ಶೈಲಿಗಾಗಲೀ ಅವಕಾಶವೆಲ್ಲಿ? ಆದರೂ ಭಾಷೆಯನ್ನು ತಮ್ಮ ವಿರೋಧಕ್ಕೆ ಬಳಸಿಕೊಂಡರು ಇನ್ನೂ ಸಮರ್ಥ ರೀತಿಯಿಂದ ದುಡಿಸಿಕೊಳ್ಳುವತ್ತ ದಲಿತ ಸಾಹಿತಿಗಳು ಮನಸ್ಸು ಮಾಡಬೇಕಾಗಿದೆ. ವಸ್ತುವು ಬರೀ ಅನ್ಯಾಯ, ದಾರುಣತೆಯನ್ನೂ ಚಿತ್ರಿಸುತ್ತದೆ ಎನ್ನುವ ಟೀಕೆಯೂ ಇದೆ. ದಲಿತ ಸಾಹಿತ್ಯ ವಸ್ತುವೇ ಅದಾಗಿರುವುದರಿಂದ ಈ ಟೀಕೆಗೆ ಅರ್ಥವಿಲ್ಲ. ಇಷ್ಟೆಲ್ಲ ಹೇಳಿದರು ದಲಿತ ಸಾಹಿತ್ಯ, ಸಾಹಿತ್ಯ ಮಾಧ್ಯಮವಾಗಿ ವಸ್ತು, ಶೈಲಿ, ನಿರೂಪಣೆ ಮತ್ತು ಕಲಾತ್ಮಕತೆ ದೃಷ್ಟಿಯಿಂದ ಇನ್ನೂ ತನ್ನ ಗಟ್ಟಿತನವನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ತಿಳಿಸಿದರೆ ನನ್ನಂತೆ ನನ್ನ ದಲಿತ ಸಾಹಿತಿಗಳೂ ಒಪ್ಪಿಯಾರೆಂದು ಭಾವಿಸುವೆ.

ಸ್ಥಗಿತಗೊಂಡಿದ್ದ ಕನ್ನಡ ಸಾಹಿತ್ಯದಲ್ಲಿ ಇಂದು ಈ ಬದಲಾವಣೆ ಬಂದಿರುವುದನ್ನು ಸ್ವಾಗತಿಸಬೇಕು. ಸೌಮ್ಯರೂಪದಲ್ಲಿ ಅಂಕುರಿಸಿದ ಈ ಎಚ್ಚರ ನಾಳೆ ದೊಡ್ಡಕ್ರಾಂತಿಗೆ ನಾಂದಿ ಹಾಡಿದೆ. ಅನ್ಯಾಯಗಳನ್ನು ಪ್ರಶ್ನಿಸುವ ಎದೆಗಾರಿಕೆ ಸಮಕಾಲೀನ ಸಾಹಿತ್ಯಕ್ಕೆ ಇಂದು ಬಂದಿದೆ. ಅನ್ಯಾಯವನ್ನು ಪ್ರತಿಭಟಿಸಲು ಲೇಖನಿ ಬಳಸುವ ಆತ್ಮವಿಶ್ವಾಸದ ದಲಿತ ಲೇಖಕರು ಹುಟ್ಟಿದ್ದಾರೆ. ಈ ದಲಿತ ಮನೋಧರ್ಮಕ್ಕೆ ಸೋಲಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಇದನ್ನು ಪ್ರೀತಿಸುವವರೆಲ್ಲರಿಗೆ ಸೇರಿದ್ದು. ಸಮಾಜವಾದೀ ಒಲವುಗಳಿಗೆ ಈ ಸಾಹಿತ್ಯ ಸೂಕ್ತ ಮಾಧ್ಯಮವಾಗಿದೆ.