ಅಂದು ಭಾನುವಾರ

ದಿನಾಂಕ ೧೨-೧೨-೭೧, ಏಳುಕಾಲು ಗಂಟೆಯ ಬಸ್ಸಿನಲ್ಲಿ ಬೆಳಗ್ಗೆ ಬೆಂಗಳೂರು ಮಹಾರಾಣಿ ಕಾಲೇಜಿನ ಎರಡನೆಯ ವರ್ಷದ ಕನ್ನಡ ಗೌರವಾನ್ವಿತ ಬಿ.ಎ. ಆನರ್ಸ್ ತರಗತಿಯ ವಿದ್ಯಾರ್ಥಿನಿಯರು ಐದು ಜನ ಅಧ್ಯಾಪಿಕೆಯರು ಸೇರಿ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದರು. ಅವರುಗಳ ಮುಖದಲ್ಲಿ ಯಾವುದೋ ಒಂದು ಆನಂದ! ಕಣ್ಣುಗಳಲ್ಲಿ ಏನೋ ಹೊಳಪು!! ಮುಂದೆ ಬರುವ ಶುಭಗಳಿಗೆಗಾಗಿ ಮನಸ್ಸುಗಳು ಹಾತೊರೆಯುತ್ತಿದ್ದವು. ಆ ಒಂದು ಸಂಭ್ರಮದ ಆತಂಕದಲ್ಲೇ ಪ್ರಯಾಣ ಸರಿದದ್ದು ಯಾರಿಗು ತಿಳಿಯಲಿಲ್ಲ. ಮೈಸೂರನ್ನು ತಲುಪಿ ಪಾಪಾರಾಮ ಚೌಕಕ್ಕೆ ಹೋಗುವ ಬಸ್ಸಿನಲ್ಲಿ ಎಲ್ಲರೂ ಕುಳಿತರು. ಕ್ಷಣ ಕ್ಷಣಕ್ಕೂ ಎಲ್ಲರ ಹೃದಯದ ಬಡಿತ ಹೆಚ್ಚಾಗುತ್ತಿತ್ತು. ಬಸ್ಸು ಇಳೀದು, ಪುಟ್ಟ ಮಲೆನಾಡಿನ ಮಧ್ಯೆಯಿರುವ ‘ಉದಯರವಿ’ಯ ಮನೆಯ ಮುಂದೆ ನಿಮತರು. ಅಲ್ಲಿಂದಲೇ ಅವರಿಗೆ ವರಕವಿ ಕುವೆಂಪು ಅವರ ದರ್ಶನವಾಯಿತು.

ಹಾಗೇ ದರ್ಶನಾಕಾಂಕ್ಷಿಗಳಾಗಿ ಹೋದ ಸಮೂಹದಲ್ಲಿ ನಾನೂ ಒಬ್ಬ ಅಧ್ಯಾಪಕಳು. ನಾನು ಹಿಂದೆ ಅವರನ್ನು ನೋಡಿದ್ದೆ. ಅವರೊಡನೆ ಮಾತನಾಡಿದ್ದೆ. ಆದರೆ ಒಂದೊಂದು ಸಲವೂ ಅವರ ದರ್ಶನ ನನ್ನ ಮನಸ್ಸಿಗೆ ಹೊಸಹೊಸ ಆನಂದದ ಅನುಭವವನ್ನು ನೀಡಿತ್ತು. ಪ್ರತಿಸಲವೂ ಆ ರಸ ಋಷಿಗಳನ್ನು ಮೊದಲಬಾರಿಗೆ ಕಂಡಷ್ಟೇ ಸಂತಸವನ್ನು ನನ್ನ ಹೃದಯ ಅನುಭವಿಸಿತ್ತು. ಅದೇ ಅನುಭವ ನನಗೆ ಈ ಭಾರಿಯೂ ಆಯಿತೆಂದರೆ ಆಶ್ಚರ್ಯವೇನಿಲ್ಲ!

ಮನೆಯ ಮುಂದಿನ ಅಂಗಳ, ಸಾಮಾನ್ಯವಾಗಿ ಅವರು ದಿನವೂ ವೃತ್ತಪತ್ರಿಕೆಗಳನ್ನು ಓದುವ ತಾಣ ಅದು. ಅಲ್ಲಿ ಅವರು ಎಂದಿನಂತೆ ಕುಳಿತು ಪತ್ರಿಕೆ ಓದುತ್ತಿದ್ದರು. ನಾವು ಒಳಹೊಕ್ಕೆವು. ನಮಿಸಿದೆವು. ನಮ್ಮನ್ನು ಕಂಡು ಅವರು ಎದ್ದು ನಿಂತರು. ಪ್ರತಿಯಾಗಿ ವಂದಿಸಿದರು. ಮುಖದಲ್ಲಿ ಗಂಭೀರ, ಮಂದಸ್ಮಿತ ಹೊರಹೊಮ್ಮಿತು. ಆ ವೇಳೆಗೆ ಸೌಭಾಗ್ಯವತಿ ಹೇಮಾವತಿ, ಮಗಳು ತಾರಿಣಿ, ಅಲ್ಲಿಗೆ ಬಂದು ನಮ್ಮೆಲ್ಲರನ್ನೂ ಮನೆಯ ಒಳಭಾಗದ ಅಂಗಳಕ್ಕೆ ಕರೆದೊಯ್ದರು.

ವಿಶಾಲವಾಗಿ ಹಾಸಿದ್ದ ಜಮಖಾನದ ಮೇಲೆ ನಾವೆಲ್ಲ ಕುಳಿತೆವು. ಪರಸ್ಪರ ಕುಶಲ ಸಂಭಾಷಣೆ ನಡೆಯಿತು. ಹೊರಗೆ ಉಳಿದಿದ್ದ ಮಹಾಕವಿಗಳನ್ನು ನಮ್ಮ ಗುಂಪಿಗೆ ಬರಮಾಡಿಕೊಂಡೆವು. ಅವರನ್ನು ನಮ್ಮ ವಿದ್ಯಾರ್ಥಿನಿಯವರು ಭಕ್ತಿಗೌರವಗಳಿಂದ ಕಣ್ತುಂಬಿಕೊಂಡರೆನ್ನುವುದನ್ನು ಅವರ ತದೇಕ ದೃಷ್ಟಿ ಪುಷ್ಟೀಕರಿಸಿತು. ಕವಿಶ್ರೇಷ್ಠ ಕುವೆಂಪು ಅವರ ಗಂಭೀರ ನಿನಾದ ಹೊರಹೊಮ್ಮಿತು. ‘ನೀವೆಲ್ಲಾ ಯಾವ ತರಗತಿಯವರು’? ವಿದ್ಯಾರ್ಥಿನಿಯರನ್ನು ಪ್ರಶ್ನಿಸಿದರು. ಪಠ್ಯಕ್ರಮವೇನು? ಒಟ್ಟು ಎಷ್ಟು ಪತ್ರಿಕೆಗಳು? ಯಾವ ಯಾವ ವರ್ಷಕ್ಕೆ ಎಷ್ಟೆಷ್ಟು ಪತ್ರಿಕೆಗಳಿಗೆ ಉತ್ತರಿಸಬೇಕು? ಈ ಪ್ರಶ್ನೆಗಳಿಗೆಲ್ಲಾ ವಿದ್ಯಾರ್ಥಿನಿಯರು ಹಾಗೂ ನಾವು ಉತ್ತರಿಸಿದೆವು.

ನಮ್ಮ ವಿದ್ಯಾರ್ಥಿನಿಯರು ಕವಿಗಳ ಕಂಠಶ್ರೀಯಿಂದ ಕನ್ನಡದ ಕಾವ್ಯದ ಸೊಗಸನ್ನು ಕೇಳಲು ಬಯಸಿದರು. ಅದಕ್ಕೆ ಅವರು, ‘ನೀವೇ ಯಾರಾದರು ಓದಬಹುದು, ಅಥವಾ ಹಾಡಬಹುದಲ್ಲಾ’ ಎಂದು, ಮಗಳು ತಾರಿಣಿಯನ್ನು ಕರೆದು ‘ಟೇಪ್ ರೆಕಾರ್ಡ್’ ತಂದು ಹಾಕಮ್ಮಾ ಎಂದರು.

ಸಾಗರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಒಬ್ಬರು ‘ರಾಮಾಯಣ ದರ್ಶನಂ’ ಕಾವ್ಯದ ಕೆಲವು ಭಾಗಗಳನ್ನು ಹಾಡಿದ್ದಾರೆ. ಚೆನ್ನಾಗಿ ಬಂದಿದೆ. ನೀವು ಅದನ್ನು ಕೇಳಬಹುದು ಎಂದು ಹೇಳಿ ಟೇಪ್ ರೆಕಾರ್ಡ್ ಹಾಕಿಸಿದರು. ಸುಮಾರು ಅರ್ಧ ಗಂಟೆವರೆಗು ನಾವು ಅದನ್ನು ಕೇಳುತ್ತಾ ಮೈಮರೆತೆವು.

ಅದು ಮುಗಿದ ಮೇಲೆ ಕುವೆಂಪುರವರು ಸ್ವತಃ ಅವರೇ ಎದ್ದು ಹೋಗಿ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ತೆಗೆದುಕೊಂಡು ಬಂದು ‘ಇದರಲ್ಲಿ ಯಾವ ಭಾಗ ಓದಲಿ’ ಎಂದು ವಿದ್ಯಾರ್ಥಿಗಳನ್ನು ಕೇಳಿದರು.

ಅಭಿಷೇಕ ಭಾಗವನ್ನು ಓದಬೇಕೆಂದು ಅದನ್ನು ಸ್ವಲ್ಪ ವಿವರಿಸಬೇಕೆಂದು ವಿದ್ಯಾರ್ಥಿನಿಯರು ಕೇಳಿದರು.

‘ಹೌದು, ಆ ಭಾಗ, ಓದುವ ವ್ಯಕ್ತಿಯ ಸಂಸ್ಕಾರಕ್ಕನುಗುಣವಾಗಿ ಅರ್ಥವಾಗುತ್ತದೆ. ಅದನ್ನು ಚಿಂತಿಸುವಷ್ಟು ಅದಕ್ಕೆ ಅರ್ಥ ಹಿಂಜುತ್ತಾ ಹೋಗುತ್ತದೆ. ಅದು ಓದುವ ಸಹೃದಯನ ಆಳವಾದ ಅಭ್ಯಾಸ, ಸಂಸ್ಕಾರಗಳನ್ನು ಅವಲಂಬಿಸಿ ನಿಲ್ಲುತ್ತದೆ’ ಎಂದು ಹೇಳಿ ಆ ಭಾಗವನ್ನು ಓದಿ ಸ್ವಲ್ಪ ವಿವರಿಸಿದರು.

ಎಲ್ಲರೂ ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದರು. ಆ ಧ್ವನಿಯನ್ನು ಕೇಳಿದ ಕಿವಿಗಳು ಧನ್ಯತೆಯನ್ನು ಪಡೆದಂತೆ ಭಾಸವಾಗುತ್ತಿತ್ತು. ಅನಂತರ ರಾಮ ಸಮುದ್ರವನ್ನು ಹಿಮ್ಮೆಟ್ಟಿಸಲು ನಡೆಸಿದ ಸಂದರ್ಭವನ್ನು ಓದಿದರು. ಮಧ್ಯೆ ಮಧ್ಯೆ ವಿವರಿಸುತ್ತಿದ್ದರು. ಆಗ ನಾನು ಅವರ ಶಿಷ್ಯಳಾಗಬೇಕೆಂದು ಬಯಸಿ, ಮೈಸೂರಿನ ಮಹಾರಾಜ ಕಾಲೇಜು ಸೇರಿದ ನನಗೆ ನನ್ನ ಹಿಂದಿನ ನೆನಪುಗಳ ಸುರುಳಿ ಬಿಚ್ಚತೊಡಗಿತು.

೧೯೫೩-೫೫ ರಲ್ಲಿ ನಾನು ತುಮಕೂರಿನಲ್ಲಿ ಇಂಟರ‍್ಮೀಡಿಯೇಟ್ ಓದುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಕನ್ನಡದ ಬಗ್ಗೆ ಅಭಿಮಾನವನ್ನು ಮೂಡಿಸಿದ, ಕನ್ನಡವನ್ನು ಕಲಿಯಬೇಕು ಎಂಬ ಆಶೆಯನ್ನು ಅಂಕುರಿಸಿದ ವ್ಯಕ್ತಿಗಳಲ್ಲಿ ಕುವೆಂಪುರವರು ಬಹಳ ಮುಖ್ಯರು. ಆಗ ಅವರು ಮೈಸೂರಿನ ಮಹರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರೂ, ಪ್ರಾಧ್ಯಾಪಕರೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಇಂಟರ್ ತೇರ್ಗಡೆ ಆದ ಒಡನೆಯೇ ನಾನು ನಿರ್ಧರಿಸಿದ್ದು, ಕುವೆಂಪು ಅವರ ಶಿಷ್ಯೆ ಆಗಬೇಕು. ಅದಕ್ಕಾಗಿ ಕನ್ನಡ ಆನರ್ಸ್ ಓದಬೇಕು. ಮೈಸೂರು ಮಹಾರಾಜ ಕಾಲೇಜಿಗೆ ಸೇರಬೇಕು ಎಂದು. ಅದಕ್ಕಾಗಿ ಮೈಸೂರಿಗೆ ಪ್ರಯಾಣ, ಅಲ್ಲಿ ಕನ್ನಡದ ಕವಿಕೋಗಿಲೆ ಕುವೆಂಪು ಅವರ ದರ್ಶನ. ಅವರನ್ನು ಕಂಡು ನನಗೆ ಅಂದು ನನ್ನ ಮನದೇವರ ದರ್ಶನವಾದಂತೆ ಆಯಿತು. ಆದರೆ ಮೊದಲ ವರ್ಷ ಅವರು ನಮ್ಮ ತರಗತಿಯನ್ನು ತೆಗೆದುಕೊಳ್ಳಲಿಲ್ಲ. ಮುಂದಿನ ವರ್ಷ ಅವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ನೇಮಕಗೊಂಡು, ಮಹಾರಾಜ ಕಾಲೇಜನ್ನು ಬಿಟ್ಟು, ಕ್ರಾಪರ್ಡ್ ಹಾಲಿಗೆ ನಡೆದರು. ಅವರ ಶಿಷ್ಯಳಾಗಬೇಕೆಂಬ ಹೆಬ್ಬಯಕೆಯಿಂದ ಮಹಾರಾಜ ಕಾಲೇಜು ಸೇರಿದ ನನಗೆ ಆ ಅದೃಷ್ಟ ದೊರೆಯಲಿಲ್ಲ. ಆದರೆ ಇಂದು ನನಗೆ ಆ ಭಾಗ್ಯ ಒಂದೆರಡು ಗಂಟೆಗಳವರೆಗಾದರೂ ದೊರೆಯಿತು.

ಕಾವ್ಯವಿಹಾರ, ದ್ರೌಪದಿಯ ಶ್ರೀಮುಡಿ, ಸರೋವರದ ಸಿರಿಗನ್ನಡಿಯಲ್ಲಿ, ತಪೋನಂದನ, ರಸೋವೈಸಾ; ಈ ನನ್ನ ಐದು ವಿಮರ್ಶಾ ಗ್ರಂಥಗಳನ್ನು ನೀವು ಓದಿಕೊಂಡರೆ ನನ್ನ ಕಾವ್ಯದ ಅರ್ಥ, ಭಾವ, ನಿಮಗೆ ಸ್ವಲ್ಪ ಅರ್ಥವಾಗಬಹುದು ಎಂದು ವಿದ್ಯಾರ್ಥಿನಿಯರಿಗೆ ಸಲಹೆ ಕೊಟ್ಟರು. ಅವರು ಕಾವ್ಯವನ್ನು ಓದುತ್ತಾ ಗಮಕ ಕಲೆಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು.

ಗಮಕ ಕಲೆಯಿಂದ ನಮ್ಮ ಅನೇಕ ಕವಿಗಳು ವಿಶೇಷವಾಗಿ ನಾರಣಪ್ಪ, ಲಕ್ಷ್ಮೀಶ, ಮೊದಲಾದವರು ಜನಪ್ರಿಯರಾಗಲು ಅವಕಾಶವಾಗಿದೆ. ಆ ಕಲೆಯ ಕಡೆ ನಮ್ಮ ಗಮನ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಆ ಕಡೆ ಗಮನ ಹರಿಯಬೇಕು. ಜೊತೆಗೆ ಇಲ್ಲಿಯವರೆಗೂ ಯಾವ ಒಂದು ಅರ್ಥದಲ್ಲಿ ಅದನ್ನು ಬಳಸುತ್ತಿದ್ದೇವೆಯೋ ಅದನ್ನು ಸ್ವಲ್ಪ ಬದಲಾಯಿಸಿಕೊಳ್ಳಬೇಕು. ಕೇವಲ ರಾಗಬದ್ಧವಾಗಿ, ತಾಳಬದ್ಧವಾಗಿ ಹಾಡುವುದಷ್ಟೇ ಗಮಕವಲ್ಲ. ಭಾವಕ್ಕೆ ತಕ್ಕಹಾಗೆ ಧ್ವನಿಗಳ ಏರಿಳಿತದಿಂದ ಸ್ಫುಟವಾಗಿ ಓದುವುದು ಗಮಕ ಎನಿಸಿಕೊಳ್ಳಬೇಕು. ಸ್ಫುಟವಾಗಿ ಓದುವುದೂ ಸಹ ಗಮಕ ಆಗಬಹುದು.

ನಮ್ಮಲ್ಲಿ ಇತ್ತೀಚೆಗೆ ಯಾವ ಕವಿತೆಗೂ ರಾಗಹಾಕಿ ಹಾಡುವುದು ಕೇಳಿಬರುತ್ತಿದೆ. ಕೆಲವು ಆ ರಾಗಕ್ಕೆ ಹೊಂದಿಕೊಳ್ಳಬಹುದು. ಆದರೆ ಕೆಲವು ಆ ರಾಗಕ್ಕೆ ಹೊಂದಿಕೊಳ್ಳುವುದೇ ಇಲ್ಲ. ಇನ್ನೂ ಕೆಲವು ಕವಿತೆಗಳಂತೂ ಅರ್ಥಗರ್ಭಿತವಾಗಿ, ಭಾವಪ್ರಧಾನವಾಗಿ ಓದಬಹುದೇ ಹೊರತು ಹಾಡುವುದಕ್ಕೆ ಯೋಗ್ಯವೇ ಇಲ್ಲ. ಉದಾ : ಕಲೆ ಸಾಕು ಈ ಬಲಾತ್ಕಾರ, ಗೂಬೆ ಇಂತಹ ಪದ್ಯಗಳು ಓದಿದಾಗ ಯಾವ ಅರ್ಥವನ್ನು ಕೊಡಬಲ್ಲವೋ ಹಾಡಿದಾಗ ಅರ್ಥವನ್ನು ನೀಡಲು ಅಸಮರ್ಥವಾಗುತ್ತವೆ. ರಾಗದಲ್ಲಿ ಅರ್ಥ ಲಯವಾಗಿ ಹೋಗುತ್ತದೆ. ಆ ಬಿಗಿ ಸಡಿಲವಾಗಿ ಮಾಧುರ್ಯ ತಲೆದೋರುತ್ತದೆ. ಇದು ಸರಿಯಲ್ಲ. ಸಂಗೀತದಲ್ಲಿ ಕುದುರೆ ಸಾಹಿತ್ಯವಾದರೆ ಸವಾರ ಸಂಗೀತವಾಗಬೇಕು. ಗಮಕದಲ್ಲಿ ಕುದುರೆ ಸಂಗೀತವಾದರೆ, ಸವಾರ ಸಾಹಿತ್ಯ ಆಗಬೇಕು. ಕೆಲವಂತೂ ಹಾಡಲು ಯೋಗ್ಯವಾದುದೇ ಅಲ್ಲ. ಉದಾ : ಗೂಬೆ ಕವನ. ಅದನ್ನು ಆಕಾಶವಾಣಿಯಲ್ಲಿ ರಾಗಹಾಕಿ ಹಾಡುವುದನ್ನು ಕೇಳಿದ್ದೇನೆ. ಇದಕ್ಕಿಂತ ಹಾಸ್ಯಾಸ್ಪದವಾದ ಸಂಗತಿ ಬೇರೊಂದಿರಲಾರದು.

ಹಿಂದೆ ಸ್ವಾತಂತ್ರ್ಯದ ಚಳುವಳಿಯ ಸಮಯದಲ್ಲಿ ಕನ್ನಡ ನಾಡಿನ ಹಿರಿಯ ಕವಿಗಳೆಲ್ಲಾ ಮಡಕೇರಿಯ ಒಂದು ಸಮಾರಂಭದಲ್ಲಿ ಭಾಗವಹಿಸಿದ್ದೆವು. ಆಗ ಎಲ್ಲರೂ ತಮ್ಮ ತಮ್ಮ ಕವಿತೆಗಳನ್ನು ಓದಿದರು. ನನ್ನ ಸರದಿ ಬಂದಿತು. ನಾನು ‘ಭಾರತ ಮಾತೆಗೆ’ ಕವನವನ್ನು ಓದಿದೆ. ತಕ್ಷಣವೇ ಗುಂಪಿನಲ್ಲಿದ್ದ ಕೆಲವರು ‘ಭೋಲೋ ಭಾರತ್ ಮಾತಾ ಕೀ’ ಎಂದು ಕೂಗಿದರು, ಗಲಾಟೆಯಾಯಿತು. ಪೊಲೀಸಿನವರು ಆ ಮೂರು ನಾಲ್ಕು ಜನರನ್ನು ಕರೆದುಕೊಂಡು ಹೋದರು. ವೇದಿಕೆ ಮೇಲೆ ನನ್ನ ಸಮೀಪದಲ್ಲಿಯೇ ಕುಳಿತಿದ್ದ ಒಬ್ಬ ವ್ಯಕ್ತಿ ‘ಇಂತಹ ಕವನಗಳನ್ನು ದಯಮಾಡಿ ಓದಬೇಡಿ, ಇಲ್ಲಿಯ ಜನ ಬೇಗನೆ ಆವೇಶಕ್ಕೆ ಒಳಗಾಗುತ್ತಾರೆ, ಅದೂ ಈ ವಾತಾವರಣದಲ್ಲಿ’ ಎಂದು ನನಗೆ ಸೂಚನೆ ನೀಡಿದರು. ಆದರೆ ನಾನು ಹಳಿದೆ ‘ನನ್ನ ಕವಿತೆಯ ಉದ್ದೇಶವೇ ಆ ಪ್ರತಿಕ್ರಿಯೆಯನ್ನು ಉಂಟು ಮಾಡುವುದು’. ಎಂದೆ. ಅನಂತರ ನನಗೆ ತಿಳಿಯಿತು. ಆ ವ್ಯಕ್ತಿ ಪೊಲೀಸ್ ಸಿ.ಐ.ಡಿ. ಎಂದು. ಆ ದೃಷ್ಟಿಯಿಂದ ನೋಡಿದಾಗ ಪದ್ಯವನ್ನು ಸರಿಯಾದ ರೀತಿಯಲ್ಲಿ ಓದಿದರೆ ಅದರ ಪ್ರಯೋಜನ ಬಹುಮಟ್ಟಿಗೆ ಆಗುತ್ತದೆ. ಈ ದಿಸೆಯಲ್ಲಿ ಗಮಕದ ಅರ್ಥ ವಿಸ್ತಾರವಾಗಬೇಕು ಎಂದು ಸುದೀರ್ಘ ವಿವರಣೆ ಕೊಟ್ಟರು.

ಶ್ರೀರಾಮಯಣ ದರ್ಶನಂ ಕಾವ್ಯದ ಬಗ್ಗೆ ವಿಮರ್ಶೆ ಬಂದಿದೆ. ವಿಶೇಷವಾಗಿ ಪಾತ್ರ, ಕಥೆ, ವರ್ಣನೆ- ಇವುಗಳನ್ನು ಕುರಿತೆ ವಿಮರ್ಶೆ ನಡೆದಿದೆ. ಆದರೆ ಛಂದಸ್ಸಿನ ಬಗ್ಗೆ ಯಾರೂ ಗಮನ ಹರಿಸಿಲ್ಲ. ಮಹಾ ಛಂದಸ್ಸನ್ನು ಮಹಾಕಾವ್ಯದ ಉದ್ದಕ್ಕೂ ಕಾಪಾಡಿಕೊಂಡು ಬರುವುದು ಸ್ವಲ್ಪ ಕಷ್ಟದ ಕೆಲಸವೇ ಆಗುತ್ತದೆ. ಸ್ವಲ್ಪ ತಪ್ಪಿದರೂ ಸುಲಭದಲ್ಲಿ ಅದು ರಗಳೆಯಾಗಿಬಿಡುತ್ತದೆ. ಹಾಗಾಗದೆ ಭಾವಕ್ಕೆ ತಕ್ಕಂತೆ ಈ ಮಹಾಛಂದಸ್ಸಿನ ಪ್ರಯೋಗವು ರಾಮಾಯಣ ದರ್ಶನಂ ನಲ್ಲಿ ಆಗಿರುವುದು ಗಮನಾರ್ಹ ಎಂದು ಹೇಳಿ ಕಾವ್ಯದ ಕೆಲವು ಸಾಲುಗಳನ್ನು ಉದಾಹರಣೆಗೆ ಓದಿ ತೋರಿಸಿದರು.

‘ಕೋಗಿಲೆ ಮತ್ತು ಸೋವಿಯತ್ ರಷ್ಯಾ’ದ ಕೆಲವು ಕವಿಗಳ ಪ್ರಸ್ತಾಪ ಬಂದಿತು. ಆಗ ಅವರು ‘ಆ ಕವಿತೆಗಳನ್ನು ಬರೆದು ಬಹಳ ವರುಷಗಳಾಗಿದ್ದರೂ ಅವುಗಳ ಮೌಲ್ಯ ಯಾವ ರೀತಿಯಿಂದಲೂ ಕಡಿಮೆಯಾಗಿಲ್ಲ. ಉದಾ : ಸಮಾಜವಾದವನ್ನು ಕುರಿತು ಕವಿತೆಗಳು, ಶ್ರೀಮಂತ-ಬಡವ ಈ ತಾರತಮ್ಯವನ್ನು ಕುರಿತಾದ ಕವನಗಳು ಈ ಸಮಸ್ಯೆಗಳು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ಆ ಕವಿತೆಗಳು ಜೀವಂತವಾಗಿತುತವೆ’ ಎಂದರು. ಮತ್ತೆ ಮುಂದುವರೆಸಿ ಕೆಲವರು ನನ್ನ ಶೈಲಿಯ ಬಗ್ಗೆ ಹೇಳುತ್ತಾ ಸಂಸ್ಕೃತ ಭೂಯಿಷ್ಟವಾದದು ಎನ್ನುತ್ತಾರೆ. ಆದರೆ ಈ ಭಾವನೆಗಳ ಸಂಪೂರ್ಣ ಅಭಿವ್ಯಕ್ತಿ ಆಗುವುದು. ಆ ಪದಗಳನ್ನು ಬಳಸಿದಾಗಲೇ ಅವುಗಳನ್ನು ಮತ್ತಿನ್ಯಾವ ಪದಗಳು ಪ್ರತಿನಿಧಿಸಲಾರವು. ಅಂತ ಸಂದರ್ಭಗಳಲ್ಲಿ ಆ ಪದಗಳ ಬಳಕೆ ಅನಿವಾರ್ಯವಾಗುತ್ತದೆ’ ಎಂದರು.

ಅನಂತರ ತಮ್ಮ ಶ್ರೀಮತಿಯವರಿಗೆ ಹೇಳಿ ತಮ್ಮ ಹಳ್ಳಿಯ ಮನೆ, ಕವಿಶೈಲ, ಕುಂದಾದ್ರಿ ಇವುಗಳನ್ನು ಚಿತ್ರಿಸಿರುವ ಪಿ.ಆರ್. ತಿಪ್ಪೇಸ್ವಾಮಿಯವರ ಚಿತ್ರಪಟಗಳನ್ನು ಪರಿಚಯ ಮಾಡಿಕೊಟ್ಟರು. ಹಾಗೆಯೇ ಜ್ಞಾನಪೀಠದವರು ಸನ್ಮಾನಿಸಿಕೊಟ್ಟಿರುವ ಸರಸ್ವತಿ ವಿಗ್ರಹವನ್ನು ತೋರಿಸಿ ‘ಜೈನ ಸಂಪ್ರದಾಯದ ಸರಸ್ವತಿ ಈ ವಿಗ್ರಹ ಅದರ ಕೈಯಲ್ಲಿ ಕಮಂಡಲವಿದ್ದು ಸ್ವಲ್ಪಮಟ್ಟಿಗೆ ವಿರಕ್ತಿಯ ಧಾವವನ್ನು ಅದು ಪ್ರದರ್ಶಿಸುತ್ತದೆ, ಇದರ ಒಂದು ಮಾದರಿ ಇಂಗ್ಲೆಂಡ್ ಮ್ಯೂಸಿಯಂನಲ್ಲಿ ಇದೆಯಂತೆ, ಅದರ ಆಧಾರದ ಮೇಲೆ ಇದನ್ನು ಮಾಡುತ್ತಿದ್ದಾರೆ’ ಎಂದು ತೋರಿಸಿದರು. ಆ ನಂತರ ನಾಗಮಂಡಲದ ಸಮಾರಂಭದಲ್ಲಿ ಕೊಟ್ಟ ನಾಟ್ಯ ಸರಸ್ವತಿಯ ವಿಗ್ರಹವನ್ನು ತೋರಿಸಿ, ಇದನ್ನು ನೋಡಿ ಸ್ಫೂರ್ತಿಗೊಂಡೆ ನಾನು ‘ನಾಟ್ಯ ಸರಸ್ವತಿ’ ಎನ್ನುವ ಕವಿತೆಯನ್ನು ಬರೆದಿದ್ದು ಎಂದು ಹೇಳಿ ಮಹಾರಾಜ ಕಾಲೇಜಿನ ಕನ್ನಡ ಸಂಘದಲ್ಲಿ ಹಾಗೂ ಸಾಗರದ ಸಮಾರಂಭದಲ್ಲಿ ಅರ್ಪಿಸಿದ ವಿಗ್ರಹಗಳನ್ನು ತೋರಿಸಿದರು. ಜೊತೆಗೆ ಯಾರೋ ಒಬ್ಬರು ಒಂದು ಉಪಜೀವಿ ಎಲೆಯ ಮೇಲೆ ಬಣ್ಣದಿಂದ ಕವಿ ಕುವೆಂಪು ಅವರ ಚಿತ್ರವನ್ನು ಬರೆದು ಬಿಡಿಸಿರುವುದನ್ನು ತೋರಿಸಿದರು.

ವಿದ್ಯಾರ್ಥಿನಿಯರು ಅವರು, ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯವನ್ನು ಬರೆದ ಸ್ಥಳವನ್ನು ನೋಡಲು ಬಯಸಿದರು. ಅದಕ್ಕೆ ಕುವೆಂಪು ನಗುತ್ತಾ ಬೆಂಗಳೂರು ಮಲ್ಲೇಶ್ವರದಲ್ಲಿ ಸ್ವಲ್ಪ, ಅನಂತರ ಶಂಕರಪುರದ ಒಂದು ಮನೆಯಲ್ಲಿ ನಾನು ಅದನ್ನು ಬರೆದು ಮುಗಿಸಿದ್ದು; ಆಗ ೨ನೆಯ ಮಹಾಯುದ್ಧದ ಸಮಯ. ಎಲ್ಲೆಲ್ಲಿಯೂ ಅಶಾಂತಿ, ಕ್ಷಾಮ, ಪ್ರಕ್ಷುಬ್ಧ ವಾತಾವರಣವೇ ತಾಂಡವವಾಡುತ್ತಿತ್ತು. ಅಂಥ ಭಾವನೆಗಳು ಕೆಲವು ನನ್ನ ಕಾವ್ಯದಲ್ಲಿಯೂ ಅಲ್ಲಲ್ಲಿ ಮೂಡಿವೆ. ಜೊತೆಗೆ ಯುದ್ಧ ಮುಗಿದು ಶಾಂತಿ ಮೂಡುವ ಸಮಯವು ಹತ್ತಿರವಾಗುತ್ತಿದೆ ಎನ್ನುವ ಸೂಚನೆಯೂ ನನ್ನ ಕಾವ್ಯದಲ್ಲಿ ಬಂದಿದೆ. ಮುಂದೆ ಆಗುವುದನ್ನು ‘ಕವಿ ಹೃದಯ ಅಲ್ಲಿ ಕಂಡಿದೆ’ ಎಂದು ಹೇಳಿದರು. ಅಲ್ಲಿಂದ ಮನೆಗೆ ಹೊರಗಡೆ ಸುತ್ತಾಡಿದಾಗ ಜೊಂಪಜೊಂಪೆತೂಗುವ ಸಪೋಟ, ಗೊಂಚಲುಗಳಿಂದ ಭಾಗಿದ ಹೂ ಗಿಡಗಳು, ಹರಡಿನಿಂತ ದ್ರಾಕ್ಷಿಯ ಚಪ್ಪರ, ಹಸಿರನ್ನೇ ಧರಿಸಿನಿಂತ ಮರಗಳು, ಮಲೆನಾಡನ್ನು ನೆನಪಿಗೆ ತಂದವು. ಮನೆಯಲ್ಲೆಲ್ಲಾ ಸುತ್ತಾಡಿ ಬಂದೆವು. ಹೀಗೆ ಬಂದು ಅವರ ವ್ಯಾಸಂಗದ ಕೊಠಡಿಯನ್ನು ಕಂಡು ಸಂತಸಗೊಂಡೆವು. ಆ ವೇಳೆಗೆ ಮಧ್ಯಾಹ್ನ ಎರಡೂವರೆ ಸಮಯವಾಗಿತ್ತು. ನಾವೆಲ್ಲರೂ ಕೈಕಾಲುಮುಖ ತೊಳೆದೆವು. ಶ್ರೀಮತಿ ಹೇಮಾವತಿ, ಕುಮಾರಿ ತಾರಿಣಿಯವರು ಆ ಸಮಯಕ್ಕೆ ತಟ್ಟೆಯಲ್ಲಿ ಬಿಸಿಬಿಸಿಯಾದ ಬಟಾಣೆ ಉಪ್ಪಿಟ್ಟು, ಬಾದಾಮಿ ಹಾಲನ್ನು ತಂದು ಮುಂದಿಟ್ಟರು. ನಂಜನಗೂಡಿನ ರಸಬಾಳೆ ಮೇಲೆ ಆಯಿತು. ಹಣೆಗೆ ಕುಂಕುಮ ಇಟ್ಟಾಯಿತು. ಮುಡಿಗೆ ಸಂಪಿಗೆ ಏರಿತು. ಮನೆಯಿಂದ ಹೊರಟೆವು. ಹೊರಡುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ. ಮನದ ಮೂಲೆಯೊಂದರಲ್ಲಿ ರಸ ಋಷಿಗಳ ಹೆಚ್ಚಿನ ಅಮೂಲ್ಯ ಸಮಯವನ್ನು ಹಾಳುಮಾಡಿದೆವೇನೋ ಎನ್ನುವ ವ್ಯಥೆ ತಲೆದೋರಿತು. ಆದರೂ ಅವರ ಜೊತೆಯಲ್ಲಿ ಸುಮಾರು ನಾಲ್ಕು ಗಂಟೆಗಳ ಸಮಯ ಕಳೆದ ಆನಂದ ಎಲ್ಲರ ಮುಖದಲ್ಲೂ ತಾಂಡವವಾಡುತ್ತಿತ್ತು. ಅಂತೂ ಅವರಿಂದ ಬೀಳ್ಕೊಡಿಗೆ ತೆಗೆದುಕೊಂಡು ಹೊರಟೆವು. ತೌರುಮನೆಯನ್ನು ಅಗಲುವ ಹೆಣ್ಣುಮಕ್ಕಳಂತೆ, ತೆಲಬಾಗಿಲುವರೆಗೂ ನಮ್ಮನ್ನು ಬೀಳ್ಕೊಡಲು ಬಂದ ಕವಿಗಳ ಕಂಠಶ್ರೀಯಿಂದ ಹೊರಟ ಧ್ವನಿ ಹೀಗಿತ್ತು. “ಕನ್ನಡಕ್ಕೆ ಆಧ್ಯತೆ ಕೊಡಬೇಕು, ಎಲ್ಲ ಹಂತಗಳಲ್ಲಿಯೂ ಶಿಕ್ಷಣ ಮಾಧ್ಯಮ ಕನ್ನಡ ಆಗಬೇಕು, ರಾಜ್ಯದ ಹೆಸರು ಕರ್ನಾಟಕ ಆಗಬೇಕು, ನೀವೆಲ್ಲಾ ಕನ್ನಡಕ್ಕಾಗಿ ಕೆಲಸ ಮಾಡಬೇಕು”. ಈ ಹರಕೆಯನ್ನು ಹೊತ್ತು ಎಲ್ಲರೂ ಹೊರಟು ಬಂದೆವು. ಮನ ಉದಯರವಿಯಲ್ಲೇ ಸುತ್ತಾಡುತ್ತಿತ್ತು.