ಕಾಲುದಾರಿ ಮೇಲೆ ನಿಂತು ಬಿ.ಟಿ.ಎಸ್. ಬಸ್ಸಿಗಾಗಿ ಕಾಯುತ್ತಿದ್ದ ನನ್ನ ಮುಂದೆ ಒಂದು ಸಣ್ಣ ಹಳ್ಳವಿದ್ದು, ಅದರಲ್ಲಿ ಕೊಳಚೆ ನೀರು ತುಂಬಿ ನಿಂತಿತ್ತು. ನನ್ನ ಹಿಂದೆಯಿದ್ದ ಹೋಟೆಲಿನ ಗೋಡೆಯ ಬದಿಗೆ ಬಹುಶಃ ಒಂದು ವರ್ಷದ ಮಗು ಇರಬಹುದು, ಅದು ಅಲ್ಲಿ ಕುಳಿತು ಹೇಸಿಗೆ ಮಾಡುತ್ತಿತ್ತು. ಕೈಯಲ್ಲಿ ಹಿಡಿದು ಗಲೀಜು ಮಾಡಿಕೊಳ್ಳುತ್ತಿತ್ತು.

ಸ್ವಲ್ಪ ಹೊತ್ತಿನಲ್ಲಿ ಸುಮಾರು ೬ ವರ್ಷದ ಒಂದು ಹುಡುಗಿ ಬಂದು ಗಲೀಜು ಮಾಡಿಕೊಂಡಿದ್ದ ಮಗುವನ್ನು ನನ್ನ ಮುಂದೆ ನಿಂತಿದ್ದ ಸಣ್ಣ ಹಳ್ಳದ ಕೊಳಚೆ ನೀರಿನಲ್ಲಿ ಶುಚಿ ಮಾಡಿತು. ಶುಚಿ ಏನು ಬಂತು? ಮೊದಲಿನ ಹೊಲಸಿನ ಜೊತೆಗೆ ಮತ್ತಷ್ಟು ಅಂಟಿಕೊಂಡಿತು ಅಷ್ಟೇ. ಅನಂತರ ಆ ಹುಡುಗಿ ಆ ಮಗುವನ್ನು ಎತ್ತಿಕೊಂಡು ಅಲ್ಲಿ ನಿಂತಿದ್ದವರ ಮುಂದೆ ಕೈಯೊಡ್ಡಿ ಬೇಡಲು ತೊಡಗಿತು. ನನ್ನ ಮುಂದೆಯೂ ಬಂದು ನಿಂತಿತು. ನನಗಾದರೋ ಆ ಮಕ್ಕಳ ಬಗ್ಗೆ ಒಂದು ರೀತಿಯ ಕನಿಕರವಾದರೂ ಅವುಗಳ ಕೊಳಕುತನಕ್ಕೆ ಅಸಹ್ಯವಾಯಿತು. ಆ ಹುಡುಗಿ ಬೇಡುವುದನ್ನು ಗಮನಿಸದೆ ನಾನು ಅವಳಿಗೆ ದೂರದಲ್ಲಿ ಕಾಣಿಸುತ್ತಿದ್ದ ನೀರು ಬರುತ್ತಿದ್ದ ನಲ್ಲಿಯನ್ನು ತೋರಿಸಿ ಹೇಳಿದೆ, ಮೊದಲು ಅಲ್ಲಿ ಹೋಗಿ ನೀರಿನಿಂದ ಮಗುವನ್ನು ಚೆನ್ನಾಗಿ ತೊಳೆದು ನೀನೂ ಕೈಯನ್ನು ಚೆನ್ನಾಗಿ ತೊಳೆದುಕೊಂಡು ಬಾ ಎಂದು! ಆದರೆ ಅವಳಿಗೆ ನನ್ನ ಮಾತುಗಳ ಕಡೆ ಗಮನವಿರಲಿಲ್ಲ. ಬೇಡುತ್ತಲೇ ನಿಂತಿದ್ದಳು. ನನ್ನ ಮಾತು ಕೇಳದ ಅವಳ ಬಗ್ಗೆ ನನಗೂ ತಾತ್ಸಾರ ಮೂಡಿತು. ನಾನು ಮುಖವನ್ನು ಬೇರೆ ಕಡೆ ತಿರುಗಿಸಿ ನಿಂತೆ. ಆದರೂ ಮನಸ್ಸು ಮಾತ್ರ ಆ ಮಕ್ಕಳನ್ನೇ ಧ್ಯಾನಿಸುತ್ತಿತ್ತು. ಸಂಕಟವಾಗುತ್ತಿತ್ತು. ಈ ಅನಾಥ ದಲಿತ ಮಕ್ಕಳ ಅಜ್ಞಾನ, ಬಡತನಕ್ಕೆ ಪರಿಹಾರವೇ ದೊರಕದೆ ಹೃದಯ ಭಾರವಾಗಿತ್ತು. ನಮ್ಮ ಮಕ್ಕಳನ್ನು ಬೆಳೆಸಲು ನಾವು ತೆಗೆದುಕೊಳ್ಳುವ ಎಚ್ಚರಿಕೆಯ ಜೊತೆಯಲ್ಲಿ ಈ ಮಕ್ಕಳ ಬೆಳವಣಿಗೆಯನ್ನು ಕುರಿತು ಮನಸ್ಸು ತಾಳೆ ಹಾಕುತ್ತಿತ್ತು.

ಸಣ್ಣಗೆ ಮಳೆ ಹನಿಯುತ್ತಿತ್ತು. ಚಿಂದಿ ಬಟ್ಟೆಯಲ್ಲಿ ಮೈಯೆಲ್ಲಾ ಪ್ರದರ್ಶನಗೊಳ್ಳುತ್ತಿದ್ದ ಆ ಎರಡು ಮಕ್ಕಳ ಜೊತೆಗೆ ಅದೇ ವಯಸ್ಸಿನ ಒಂದು ಹುಡುಗಿ, ಮತ್ತೊಂದು ಎಳೇ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಬಂದು ಮೊದಲಿದ್ದ ಹುಡುಗಿಯ ಜೊತೆ ಸೇರಿದಳು; ಅವು ಒಟ್ಟಿಗೇ ಸೇರಿದ ಮೇಲೆ ಅವುಗಳಿಗೆ ಧೈರ್ಯ ಹೆಚ್ಚಾದಂತೆ ತೋರಿತು, ಅವೇ ೬ ವರ್ಷದ ಎಳೇ ಕಂದಮ್ಮಗಳು! ಅವುಗಳ ಕಂಕುಳಲ್ಲಿ ಒಂದೊಂದು ಪಿಳ್ಳೆಗಳು!

ಗಂಟಲ ಧ್ವನಿ ಏರಿಸಿ ಕೇಳಲು ತೊಡಗಿದವು, ಆಗಲೂ ನಾನು ಸುಮ್ಮನೆ ಇದ್ದೆ. ಒಬ್ಬಳು ನನ್ನ ಕೈಹಿಡಿದು ಎಳೆದು ಬೇಡಿದಳು. ಮತ್ತೊಬ್ಬಳು ನಾನು ಕೈಯಲ್ಲಿ ಹಿಡಿದಿದ್ದ ನಾಲ್ಕು ಬಾಳೆ ಹಣ್ಣುಗಳನ್ನು ಮುಟ್ಟಿ ‘ಕೊಡೀ ತಾಯಿ’ ಎಂದು ಕೇಳಿದಳು. ಆ ನಾಲ್ಕೂ ಬಾಳೇ ಹಣ್ಣುಗಳು ಮಕ್ಕಳ ಪಾಲಾದುವು. ನನ್ನ ದಾನದ ಔದಾರ್ಯ ಗುಣದಿಂದ ಅಲ್ಲ. ಕೊಳಕು ಕೈಯಲ್ಲಿ ಅವು ಮುಟ್ಟಿದ್ದರಿಂದ! ಆ ಮಕ್ಕಳ ದಾಷ್ಟಿಕ ಕ್ರಿಯೆಗೆ ಒಂದು ಕಡೆ ಕೋಪ ಬಂದರೆ, ಆ ಮಕ್ಕಳನ್ನು ಅನಾಥರಂತೆ ಬೀದಿಪಾಲು ಮಾಡಿರುವ ಅವರ ತಂದೆತಾಯಂದಿರ ಬಗೆಗೆ ಸಿಡಿಮಿಡಿಗೊಳ್ಳುವಂತಾಯಿತು.

ಕಾಲೇಜಿನಿಂದ ಮನೆಗೆ ರಿಕ್ಷಾದಲ್ಲಿ ಹಿಂದಿರುಗುವಾಗ ಸಾಮಾನ್ಯವಾಗಿ ಆನಂದರಾವ್ ವೃತ್ತದ ಬಳಿ ಕೆಂಪು ದೀಪದ ಕಾರಣ ವಾಹನ ನಿಲ್ಲುತ್ತದೆ. ಹಿಂದೆ ಪ್ರಸ್ತಾಪ ಮಾಡಿದ ವಯಸ್ಸಿನ ಅಥವಾ ಅವರಿಗಿಂತಲೂ ಕಿರಿಯ ವಯಸ್ಸಿನ ಮೈತುಂಬಾ ಗಾಯಗಳಿಂದ ಕೂಡಿದ, ಸಿಂಬಳ ಸುರಿಸುತ್ತಾ ಬೇಡುವ ಮಕ್ಕಳ ಒಂದು ತಂಡವೇ ಇಲ್ಲಿ ಇದೆ. ಬೆಂಗಳೂರಿನ ಕೊಳಕನ್ನೆಲ್ಲಾ ಸೇರಿಸಿ ಈ ಮಕ್ಕಳನ್ನು ಯಾರಾದರೂ ತಯಾರಿಸಿರಬೇಕು ಎನ್ನಿಸಿದರೆ ಆಶ್ಚರ್ಯವಿಲ್ಲ. ಇಲ್ಲಿಯ ಮಕ್ಕಳಿಗೆ ಇನ್ನೂ ಧೈರ್ಯ ಜಾಸ್ತಿ. ಅವುಗಳು ನಿಂತಿರುವ ವಾಹನಗಳ ಮಧ್ಯೆ ನಿರ್ಭಯವಾಗಿ ಓಡಾಡುತ್ತಾ ಭಿಕ್ಷೆ ಬೇಡುತ್ತಿರುತ್ತವೆ. ನಮ್ಮ ಕೈಯಲ್ಲಿರುವ ಪರ್ಸನ್ನೇ ಹಿಡಿದು ಎಳೆಯುತ್ತವೆ. ಕಾರಿನಲ್ಲಿ ಕುಳಿತಿದ್ದರೆ ಕಿಟಕಿಯ ಹತ್ತಿರ ಬಂದು ಭುಜತಟ್ಟಿ ಬೇಡುತ್ತವೆ. ಹಸಿರು ದೀಪ ಬಂದಾಗ ವಾಹನಗಳಿಗೆ ಸಿಕ್ಕಿ ಇವು ಎಲ್ಲಿ ಸಾಯುತ್ತವೆಯೋ ಎನ್ನುವ ಭೀತಿ ನಮಗೆ ಮೂಡಬೇಕಷ್ಟೇ? ಆದರೆ ಅವುಗಳಾದರೋ ಮೃತ್ಯುಂಜಯ ಸ್ವರೂಪಿಗಳಂತೆ ಓಡಾಡುತ್ತಿರುತ್ತವೆ! ನಿರ್ಭಯ ಸ್ವಚ್ಛಂದ ಜೀವಿಗಳು ಅವು!

ಒಮ್ಮೊಮ್ಮೆ ನವರಂಗ ಟಾಕೀಸಿನ ಬಳಿಗೆ ಹೋಗುವ ಬಸ್ಸಿನಲ್ಲಿ ನಾನು ಪ್ರಯಾಣ ಮಾಡುವಾಗ ಎಂದಿನಂತೆ ಸಣ್ಣ ಹುಡುಗರ ಒಂದು ದೊಡ್ಡ ಗುಂಪೇ ಬಸ್ಸು ಹತ್ತುವುದನ್ನು ಕಾಣುತ್ತೇನೆ. ಆ ಗುಂಪಿಗೆ ಕುಂಟ ಹುಡುಗನೊಬ್ಬ ಯಜಮಾನನಂತೆ ಕಾಣಿಸುತ್ತಾನೆ. ಈ ಮಕ್ಕಳು ಇಬ್ಬರು ಅಥವಾ ಮೂವರಂತೆ ಗುಂಪುಗೂಡಿ, ಬೆಳಗಿನ ಹೊತ್ತು ವಿಧಾನಸೌಧ, ಎಜೀಸ್ ಆಫೀಸಿಗೆ ಹೋಗಲು ಬಸ್ಸಿಗಾಗಿ ಕ್ಯೂ ನಿಂತ ಪ್ರಯಾಣಿಕರಿಂದ ಹಣವನ್ನು ಬೇಡಿ ಸಂಗ್ರಹಿಸುತ್ತಾರೆ. ಹಾಗೇ ಸಂಗ್ರಹಿಸಿದ ಹಣದಲ್ಲಿ ಮಧ್ಯಾಹ್ನ ಚಿತ್ರ ನೋಡುವುದು, ಇವರ ದಿನನಿತ್ಯದ ಕಸುಬು! ಅವರ ಲೆಕ್ಕದ ವಹಿವಾಟನ್ನು ಗಮನಿಸಿರುವ ನನಗೆ ಪ್ರತಿಯೊಬ್ಬನ ಜೇಬಿನಲ್ಲೂ ಚಿಲ್ಲರೆ ಹಣ ಕನಿಷ್ಠ ೪, ೫ ರೂ.ಗಳಾದರೂ ಇರಬೇಕು ಎನ್ನಿಸುತ್ತದೆ. ನಗರದ ಎಲ್ಲಾ ಚಿತ್ರಮಂದಿರಗಳೂ ಇವರಿಗೆ ಚಿರಪರಿಚಿತ. ಅವರ ಸಂಭಾಷಣೆಯಿಂದ ಅವರಲ್ಲಿರುವ ಸಿನಿಮಾ ಹುಚ್ಚು ಎಂತವರಿಗೂ ಗೊತ್ತಾಗಿಬಿಡುತ್ತದೆ.

ಒಂದೊಂದು ಗುಂಪು ಒಂದೊಂದು ದಿವಸ, ಸಮೀಪವೇ ಇರುವ ಒಂದೊಂದು ಬಸ್ ನಿಲ್ದಾಣದಲ್ಲಿ ಸರತಿಯಂತೆ ಬೇಡುವುದು, ಅದೇ ಹರಕು, ಚಿಂದಿ, ಕೊಳಕು ಮುದ್ದೆ, ರೋಗದ ಮುಖಗಳು, ಅಸ್ತಿ ಪಂಜರಗಳು.

ಇಂಥ ನಿದರ್ಶನಗಳು ಎಷ್ಟೋ. ಒಂದೆರಡನ್ನು ಇಲ್ಲಿ ಉದಾಹರಣೆಗೆ ಕೊಟ್ಟಿದ್ದೇನೆ ಅಷ್ಟೇ! ಅಂತರರಾಷ್ಟ್ರೀಯ ಮಕ್ಕಳ ವರ್ಷ ಮುಗಿಯುತ್ತಾ ಬಂತು! ಘೋಷಣೆಗಳೇನು? ವಿಚಾರ ಸಂಕೀರ್ಣಗಳೇನು? ದೊಡ್ಡ ದೊಡ್ಡ ವೇದಿಕೆಗಳಿಂದ ಬಂದ ಆಶ್ವಾಸನೆಗಳು ಎಷ್ಟೆಷ್ಟು? ರಸ್ತೆಯಲ್ಲಿ ತಿರುಗುವ ನೂರಾರು ಜನರಿಗೆ ನಿರಂತರ ಕಣ್ಣಿಗೆ ಬೀಳುವ ಈ ಮಕ್ಕಳು ದಲಿತೋದ್ಧಾರಕ್ಕೆ ಮೀಸಲಾದ ಸಂಘ ಸಂಸ್ಥೆಗಳ ಕಣ್ಣಿಗೆ ಬೀಳುವುದಿಲ್ಲವೆ? ಈ ಮಕ್ಕಳಿಗೆ ತಿಳುವಳಿಕೆಯನ್ನು ಯಾರು ಕೊಡಬೇಕು? ಸರ್ಕಾರವೇ? ಸಮಾಜವೇ? ತಂದೆತಾಯಿಗಳೇ? ಸಂಘ ಸಂಸ್ಥೆಗಳೇ?

ಈ ಮಕ್ಕಳ ಮೂಲ ಯಾವುದು? ಇವರ ತಂದೆ ತಾಯಿ ಯಾರು? ಇವರನ್ನು ಸರಿಯಾದ ರೀತಿಯಲ್ಲಿ ಸಾಕಬೇಕಾದವರು ಯಾರು? ನಿಜವಾದ ದಲಿತ ಮಕ್ಕಳ ಉದ್ಧಾರ ಯಾವ ಅರ್ಥದಲ್ಲಿ ನಡೆಯುತ್ತದೆ. ನಾನು ಸುಮಾರು ೩ ವರುಷಗಳಿಂದ ಇಂಥ ಮಕ್ಕಳನ್ನು ಗಮನಿಸುತ್ತಾ ಬಂದಿದ್ದೇನೆ. ಇವರನ್ನು ಕಂಡು ಹೃದಯ ಹಿಂಡುತ್ತದೆ. ನೂರಾರು ಪ್ರಶ್ನೆಗಳು ತಲೆತಿನ್ನುತ್ತವೆ. ಹಿಂಡು ಹಿಂಡಗಿ ಸಮಸ್ಯೆಗಳು ನುಗ್ಗುತ್ತವೆ. ಹೀಗೆ ವರುಷಗಳು ಉರುಳಿವೆ, ಆದರೂ ೧೯೭೯ ನೆಯ ಇಸವಿಯನ್ನು ಅಂತರರಾಷ್ಟ್ರೀಯ ಮಕ್ಕಳ ವರ್ಷವೆಂದು ಘೋಷಿಸಲಾಯಿತು.

ಈ ಅಂತರರಾಷ್ಟ್ರೀಯ ಮಕ್ಕಳ ವರ್ಷದಲ್ಲಿ ದಲಿತ ಮಕ್ಕಳನ್ನೂ ಸೇರಿದಿ ಏನೋ ಒಂದು ಭವ್ಯವಾದ ಕನಸನ್ನು ಕಂಡಿದ್ದೆ. ಇನ್ನು ಮುಂದೆ ಈ ಬೇಡುವ ದಲಿತ ಮಕ್ಕಳ ಪಟಾಲಂನಿಂದ ನಮಗೆ ಮಾತ್ರ ರಕ್ಷಣೆ ಅಲ್ಲ, ಅವುಗಳಿಗೂ ಉತ್ತಮ ಭವಿಷ್ಯದ ಆಶ್ರಯ ದೊರೆಯುತ್ತದೆಂದೇ ನನ್ನ ನಂಬಿಕೆಯಾಗಿತ್ತು. ಆದರೆ ಈಗೀಗ ಆ ನಂಬಿಕೆ ಹುಸಿಯೆಂದೇ ತೋರಿಬರುತ್ತಿದೆ. ಈ ದಲಿತ ಮಕ್ಕಳ ಗುಂಪು ಕರಗುವುದೇ ಇಲ್ಲವೇನೋ. ಇವರು ಬೀದಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಇಂದಿನಂತೆಯೇ ಎಂದೆಂದಿಗೂ ಜೀವಹೊತ್ತ ಅಸ್ತಿಪಂಜರಗಳಾಗಿ ಸಂಚರಿಸುತ್ತಲೇ ಇರುತ್ತಾರೇನೋ ಬೇಡುತ್ತಲೇ ಬದುಕುತ್ತಿರುತ್ತಾರೇನೋ ಎನ್ನಿಸುತ್ತದೆ ಸದಾ.