ಬಹು ಭಾಷಾ ವಿಶಾರದರೂ ಸಂಶೋಧನ ತಜ್ಞರೂ ಅಂತರರಾಷ್ಟ್ರೀಯ ಮನ್ನಣೆಯ ವಿದ್ವಾಂಸರೂ ಆದ ಪ್ರೊಫೆಸರ್ ಪದ್ಮನಾಭ್ ಎಸ್. ಜೈನಿಯವರು ಮೂಲತಃ ಕರ್ನಾಟಕದವರು. ಶ್ರವಣಬೆಳಗೊಳದ ‘ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆ – ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಾಕೃತ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ವರ್ಷದಿಂದ (೨೦೦೪) ಪ್ರಾಕೃತ ಜ್ಞಾನಭಾರತಿ’ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ. ಶ್ರುತಕೇವಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿಯವರು ಈ ಪ್ರಶಸ್ತಿಯ ಸಂಸ್ಥಾಪಕರು, ಅವರ ದಿವ್ಯ ಸಾನಿಧ್ಯದಲ್ಲಿ ರಾಜ್ಯದ ಮುಖ್ಯ ನ್ಯಾಯಾಧೀಶರಾದ ಎನ್.ಕೆ. ಜೈನ್ ಅವರಿಂದ ದಿನಾಂಕ ೨೦ ಅಕ್ಟೋಬರ್ ೨೦೦೪ ರಂದು ಡಾ. ಪದ್ಮನಾಭ್ ಎಸ್. ಜೈನಿ ಅವರು ಈ ಪ್ರಶಸ್ತಿಯ ಸನ್ಮಾನವನ್ನು ಪಡೆಯಲಿದ್ದಾರೆ.

ಪ್ರೊಫೆಸರ್ ಪದ್ಮನಾಭ್ ಎಸ್. ಜೈನಿಯವರ ಯಶೋಗಾಥೆ ವರ್ಣರಂಜಿಕವಾದದ್ದು. ದಾಂಗುಡಿಯಿಟ್ಟು ದಾಟಿಬಂದ ವೈವಿಧ್ಯಮಯ ವಿದ್ವತ್ ಪಥದ ವಿಹಂಗಮನೋಟ ಚೇತೋಹಾರಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಬಳಿಯಲ್ಲಿರುವ ಒಂದು ಸಣ್ಣಗ್ರಾಮ ನೆಲ್ಲಿಕಾರು. ಆ ಊರಿನ ಆದರ್ಶ ಗುರುಗಳು ಸಂಶೋಧಕರು ಆಧುನಿಕ ದೃಷ್ಟಿಕೋನ ಉಳ್ಳವರು ಆದ ಶ್ರೀವರ್ಮಜೈನಿಯವರು ಪದ್ಮನಾಭ್ ಅವರ ತಂದೆ. ನೆಲ್ಲಿಕಾರು ರಾಧಮ್ಮ ಎಂಬ ಹೆಸರಿನಿಂದ ಕಾವ್ಯಗಳನ್ನು, ಕವನಗಳನ್ನು ಬರೆದು ತೆಂಕನಾಡ ಕೋಗಿಲೆ ಎಂಬ ಕೀರ್ತಿಗಳಿಸಿದ್ದ ಕವಯತ್ರಿ ರಾಧಮ್ಮ ಇವರ ತಾಯಿ. ಪ್ರಾಥಮಿಕ ಶಿಕ್ಷಣವನ್ನು ಪದ್ಮನಾಭ್ ತನ್ನ ಊರಾದ ನೆಲ್ಲಿಕಾರಿನಲ್ಲಿ ಪೂರೈಸಿದರು. ಮುಂದಾಲೋಚನೆಯುಳ್ಳ ದಂಪತಿಗಳು ಮಗನ ಮುಂದಿನ ದಿವ್ಯಾಭ್ಯಾಸಕ್ಕಾಗಿ ಮಹಾರಾಷ್ಟ್ರದ ವಿದರ್ಭವ್ಯಾಪ್ತಿಗೆ ಒಳಪಡುವ ಬಹುದೂರದ ಕಾರಂಜದ ಗುರುಕುಲಕ್ಕೆ ಸೇರಿಸಿದರು.

‘ಮಹಾವೀರ ಬ್ರಹ್ಮಚರ್ಯಾಶ್ರಮ ಗುರುಕುಲ’ದ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಧಾರ್ಮಿಕ ನಿಯಮನಿರ್ಬಂಧಗಳಿದ್ದುವು. ವಿದ್ಯಾಕಾಂಕ್ಷಿಯಾದ ಪದ್ಮನಾಭ್ ಸಹಜವಾಗಿ ಆ ವಾತಾವರಣಕ್ಕೆ ಹೊಂದಿಕೊಂಡರು. ಗುರುಕುಲವು, ಧಾರ್ಮಿಕ ಅಧ್ಯಯನದ ಜೊತೆಯಲ್ಲಿಯೆ ಆಧುನಿಕ ಜ್ಞಾನದ ಗಣಿತ, ವಿಜ್ಞಾನ, ಇಂಗ್ಲಿಷ್ ಇವುಗಳ ಓದಿಗೂ ಅವಕಾಶ ಮಾಡಿಕೊಟ್ಟಿತು. ಎಂಟು ವರುಷಗಳ ಗುರುಕುಲ ಅಧ್ಯಯನ, ಜೈನಿ ಅವರಿಗೆ ಒಂದು ಭದ್ರ ಬುನಾದಿಯನ್ನು ಹಾಕಿಕೊಟ್ಟಿತು. ಆ ಅವಧಿ ಅವಿಗೊಂದು ಸುವರ್ಣಕಾಲವಾಗಿ ಪರಿಣಮಿಸಿತು. ಘನ ವಿದ್ವಾಂಸರಾದ ದೇವಕಿನಂದನ ಶಾಸ್ತ್ರ, ಕೈಲಾಶಚಂದ್ರಶಾಸ್ತ್ರಿ, ಹೀರಾಲಾಲ್ ಜೈನ್, ನಾಥೂರಾಮ್ ಪ್ರೇಮಿ, ಆ.ನೇ. ಉಪಾಧ್ಯೆ ಮೊದಲಾದವರ ಸಂಪರ್ಕ, ಸಮಾಗಮ ಜೈನಿಯವರ ಮೇಲೆ ತುಂಬಾ ಪ್ರಭವ ಬೀರಿದುವು. ಈ ಅತಿರಥ, ಮಹಾರಥರ ವಿದ್ವತ್ ಪ್ರತಿಭೆ ಹದಿಹರೆಯದ ಹುಡುಗನ ಕನಸುಗಳಿಗೆ ರೆಕ್ಕೆ ಮೂಡಿಸಿದವು.

ಕಾರಂಜದ ಮಾಧ್ಯಮಿಕ, ಪ್ರೌಢಶಾಲೆಯ ವಿದ್ಯಾಭ್ಯಾಸದ ನಂತರ ಮುಂಬಯಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ನಾಸಿಕ್ ನಗರದ ಕಲಾ ಕಾಲೇಜಿಗೆ ಸೇರಿ ಸಂಸ್ಕೃತ – ಪ್ರಾಕೃತ ವಿಷಯಗಳಲ್ಲಿ ಬಿ.ಎ. ಆನರ್ಸ್ ಸ್ನಾತಕ, ಎಂ.ಎ. ಸ್ನಾತಕೋತ್ತರ ಪದವಿ ಗಳಿಕೆಯನ್ನು ಮಾಡಿ ತಮ್ಮ ವಿದ್ಯಾಭ್ಯಾಸದ ವೆಚ್ಚವನ್ನು ತಾವೇ ಭರಿಸಿಕೊಂಡರು. ಸ್ವಾರಸ್ಯವೆಂದರೆ ದಿಗಂಬರ ಜೈನಮನೆತನದ ಪದ್ಮನಾಭನು ಶ್ವೇತಾಂಬರ ವಿದ್ಯಾರ್ಥಿನಿಲಯದ ಮೇಲ್ವಿಚಾರಕನಾಗಿ ದುಡಿದದ್ದು. ಈ ಗಳಿಕೆ ವರ್ಧಿಷ್ಟು ಜಾಣ ಯುವಕನ ಭವಿಷ್ಯಕ್ಕೆ ಬುತ್ತಿಯಾಯಿತು. ಪದ್ಮನಾಭ್ ಎಸ್. ಜೈನಿ ಅವರು ಜೈನಧರ್ಮದ ದಿಗಂಬರ ಹಾಗೂ ಶ್ವೇತಾಂಬರ ಈ ಎರಡು ಶಾಖೆಗಳನ್ನು ಹತ್ತಿರದಿಂದಲೂ ಅಕ್ಕರೆಯಿಂದಲೂ ಅಧ್ಯಯನ ಮಾಡಿ ಸಮದಂಡಿ ವಿದ್ವತ್ತನ್ನು ಗಳಿಸಿದರು. ವಿದ್ವಾಂಸರಿಂದಲೂ ಸಮಾಜದ ಜನತೆಯಿಂದಲೂ ಮನ್ನಣೆಗೆ ಪಾತ್ರರಾದರು. ಅಲ್ಲಿಯವರೆಗೂ ಈ ಎರಡು ಶಾಖೆಗಳನ್ನು ಸಮಾನವಾಗಿ ಅಧ್ಯಯನ ಮಾಡಿಲ್ಲದ ವಿದ್ವಾಂಸರ ಕೊರತೆಯನ್ನೂ ಪದ್ಮನಾಭ್ ಎಸ್. ಜೈನಿ ಹೋಗಲಾಡಿಸಿದರು.

ಇಂಥ ಸಂದರ್ಭದಲ್ಲಿ ಪದ್ಮನಾಭ್ ಜೈನಿಯವರ ಜ್ಞಾನದಾಹವನ್ನು ಇಂಗಿಸುವ ಒಂದು ಪ್ರಸಂಗ ಒದಗಿ ಬಂದಿತು. ಮಹಾನ್ ಮೇಧಾವಿ ಪಂಡಿತ ಸುಖಲಾಲ ಸಂಘವಿ, ಪ್ರಾಕೃತ, ಸಂಸ್ಕೃತ, ಪಾಳಿ ಭಾಷೆಗಳ ಪ್ರಭುತ್ವವಿದ್ದ ಮಹಾನ್ ಮೇಧಾವಿಗಳು. ಅಂತಹ ವಿದ್ವಾಂಸರು ಪದ್ಮನಾಭ ಜೈನಿ ಅವರನ್ನು ತಮ್ಮೊಂದಿಗೆ ಸ್ವಾಧ್ಯಯವನ್ನು ಮುಂದುವರಿಸಲು ಕರೆಸಿಕೊಂಡರು. ಅವರ ಆಹ್ವಾನ ಜೈನಿ ಅವರಿಗೆ ವಿದ್ವತ್ ಲೋಕದ ಬಾಗಿಲು ತೆರೆದಂತಾಯಿತು.

೧೯೦೦ ರಿಂದ ೧೯೫೦ ರ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ತಮ್ಮವಿದ್ವತ್ತು. ಪ್ರೌಢಿಮೆಗಳಿಂದ ಜನಮನ್ನಣೆ ಗಳಿಸಿದ್ದ ದಿಗಂಬರ ಪಂಥದ ಘನ ವಿದ್ವಾಂಸರಾದ ಶಾಸ್ತ್ರಿಗಳ ಪರಂಪರೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದನ್ನು ಗಮನಿಸಿದ ಶ್ವೇತಾಂಬರ ಜೈನ ಸಮಾಜ ಪ್ರಾಜ್ಞರಾದ ಯುವಕರಿಗೆ ಧಾರ್ಮಿಕ ಜ್ಞಾನದ ಪ್ರಭಾವನೆ ಹಾಗೂ ಪ್ರಸಾರಕ್ಕೆ ಸಿದ್ಧಗೊಳಿಸಲು ಅಣಿಯಾಯಿತು. ವಿದ್ಯಾರ್ಥಿವೇತನ ಕೊಡಲು ಮುಂದಾದರು. ಅಂಥ ಮುನ್ನೋಟದ ಮುಖಂಡರಿಗೆ ಪಂಡಿತ ಸುಖಲಾಲ್ ಸಂಘವಿಯವರು ಮೇಧಾವಿ ನಾಯಕರಾಗಿದ್ದರು. ತರ್ಕಶಾಸ್ತ್ರ ಪ್ರವೀಣರೂ ಬನಾರಸ್ ಹಿಂದು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರು ಆಗಿದ್ದ ಸಂಘವಿಯವರ ಆಹ್ವಾನ ದೊರೆತ್ದು ಜೈನಿ ಅವರಿಗೆ ವಿದ್ವತ್ತಿನ ದೇಗುಲವನ್ನ ಹೊಕ್ಕಂತಾಯಿತು. ಅಮೃತಫಲ ದೊರೆತಂತಾಯಿತು. ಅಂಥ ಘನ ವಿದ್ವಾಂಸರ ಮಾರ್ಗದರ್ಶನದಲ್ಲಿ ನ್ಯಾಯಶಾಸ್ತ್ರ, ಕಲಿಕಾಲ ಸರ್ವಜ್ಞ ಹೇಮಚಂದ್ರಾಚಾರ್ಯರ ಪ್ರಮಾಣಮೀಮಾಂಸ ವ್ಯಾಖ್ಯಾನ ಮೊದಲಾದ ಗ್ರಂಥಗಳ ತಲಸ್ಪರ್ಶಿ ಅಧ್ಯಯನ ನಡೆಯಿತು.

ಶ್ವೇತಾಂಬರ ಹಾಗೂ ದಿಗಂಬರ ಈ ಎರಡೂ ಶಾಖೆಗಳ ತೌಲನಿಕ ಅಧ್ಯಯನದ ಲಾಭ ಪಡೆದ ಜೈನಿಯವರನ್ನು ಸಂಘವಿಯವರು ಮತ್ತೊಂದು ಕೆಲಸಕ್ಕೆ ಅಣಿಗೊಳ್ಳಲು ಪ್ರೇರೇಪಿಸಿದರು.

ಆ ಕಾಲದ ಘನತೆವೆತ್ತ ರಾಷ್ಟ್ರೀಯ ವಿದ್ವಾಂಸ ಧರ್ಮಾನಂದ ಕೋಸಂಬಿಯವರ ಥೇರಾವಾದ ಬೌದ್ಧಧರ್ಮ ಗ್ರಂಥಸಂಗ್ರಹ, ಗುಜರಾತಿನ ವಿದ್ಯಾಪೀಠದಲ್ಲಿತ್ತು. ಅದರ ಪ್ರಯೋಜನದಿಂದ ಪುಷ್ಪರಾಗುವುದಲ್ಲದೆ, ಪಾಳಿ ಭಾಷೆಯಲ್ಲಿ ಜೈನಿಯವರು ಶಿಕ್ಷಣವನ್ನು ಮುಂದುವರಿಸಬೇಕೆಂಬ ಇಚ್ಛೆ ಸುಖಲಾಲ್ ಸಂಘವಿಯವರದಾಗಿತ್ತು. ಬೌದ್ಧ ಆಗಮಗಳ ಚಿಂತನ, ಮಂಥನ, ಮನನಕ್ಕೆ ಪಾಳಿ ಸಾಹಿತ್ಯದ ಉಪಕಾರ ದೊಡ್ಡದೆಂಬ ಅರಿವನ್ನು ಸಂಘವಿ, ಜೈನಿ ಅವರಲ್ಲಿ ಮೂಡಿಸಿದರು.

ಗುರು ಸಂಘವಿಯವರಿಂದ ಪಾಳಿಭಾಷೆಯ ಕಂಕಣ ದೀಕ್ಷೆ ಪಡೆದ ಜೈನಿಯವರು ಪಾಳಿ ಸಾಹಿತ್ಯ ಕಲಿಕೆಗಾಗಿ ಶ್ರೀಲಂಕೆಗೆ ಹೊರಟುನಿಂತರು. ಆಗ ತಾನೆ ಪ್ರಾರಂಭವಾಗಿದ್ದ ‘ಧರ್ಮಾನಂದ ಕೋಸಂಬಿ ಸ್ಮಾರಕ’ ವಿದ್ಯಾರ್ಥಿವೇತನವನ್ನು ಜೈನಿ ಅವರಿಗೆ ದೊರಕಿಸಿ ಕೊಟ್ಟವರು, ಭಾರತೀಯ ವಿದ್ಯಾಭವನದ ಮುಂಬಯಿ ಶಾಖೆಯ ನಿರ್ದೇಶಕರಾದ ಮುನಿಜಿನವಿಜಯರು. ಕೊಲಂಬೊದಲ್ಲಿ ‘ವಿದ್ಯೋದಯ ಪರಿದೇವ’ ಎಂಬ ಧರ್ಮಗುರುಗಳ ತರಬೇಕು ಕೇಂದ್ರದ ಶಿಷ್ಯರಾಗಿ ಜೈನಿಯವರು ಸೇರ್ಪಡೆಯಾದವರು, ಕೋಸಂಬಿಯವರ ಪ್ರಿಯ ಶಿಷ್ಯರಾಗಿದ್ದ ಪೂಜ್ಯ ಬುದ್ದೇಗಮ ಪಿಯರತನ ಮಹಥೆರೋ ಆ ಕೇಂದ್ರದ ಆಚಾರ್ಯರಾಗಿದ್ದರು.

ಶ್ರೀಲಂಕಾದಲ್ಲಿ ಕಳೆದ ಎರಡು ವರುಷಗಳು ಜೈನಿಯವರ ಜ್ಞಾನಕೋಶಕ್ಕೆ, ಮುಂದಿನ ಜೀವನ ಪಥಕ್ಕೆ ದಾರಿ ದೀಪಗಳಾದುವು. ಆ ಅವಧಿಯಲ್ಲಿ ಜೈನಿಯವರು ಪೂಜ್ಯ ಬದ್ಧೆಗಮ ಮಹಥೇರೊ ಜೊತೆಯಲ್ಲಿ ಸಿಂಹಳ ದ್ವೀಪದ ಉದ್ದಗಲಕ್ಕೂ ಸಂಚರಿಸಿದರು. ಬೌದ್ಧಧರ್ಮದ ಅಧ್ಯಯನ ಮಾತ್ರವಲ್ಲದೆ ಅದರ ಧಾರ್ಮಿಕ, ವಿಧಿ ವಿಧಾನಗಳ, ಸಾಂಸ್ಕೃತಿಕ ನೆಲೆಗಟ್ಟುಗಳ ಆಳ ಹರಹನ್ನು ಅರ್ಥಮಾಡಿಕೊಂಡರು. ಅದೇ ಸಂದರ್ಭದಲ್ಲಿ ಬೌದ್ಧಧರ್ಮಕ್ಕೆ ಲಕ್ಷಾಂತರ ಅನುಯಾಯಿಗಳೊಡನೆ ಮತಾಂತರಗೊಳ್ಳಲು ಅಣಿಯಾಗುತ್ತಿದ್ದ ಡಾ. ಬಿ.ಆರ್. ಅಂಬೇಡ್ಕರರು ಆ ಸಂಬಂಧವಾಗಿ ಭಾರತದಿಂದ ಸಿಂಹಳಕ್ಕೆ ಪ್ರಯಾಣ ಬೆಳೆಸಿದ್ದರು. ಅವರೊಂದಿಗೆ ಪರಸ್ಪರ ಸಂಪರ್ಕ ಏರ್ಪಟ್ಟಿತು. ಸಿಂಹಳದ ತಮ್ಮ ಎರಡು ವರುಷಗಳ ವೈವಿಧ್ಯಮಯ, ಸಾರ್ಥಕ ಅನುಭವಗಳನ್ನು ಜೈನಿಯವರು ಗುಜರಾತಿ ಭಾಷೆಯಲ್ಲಿ ರಚಿಸಿದ “ಸಿಲೋನ್ಮಾಮ್ ಬೇ ವರ್ಷ” (ಸಿಲೋನಿನಲ್ಲಿ ಎರಡು ವರುಷ) ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ.

ಈ ಅವಧಿಯಲ್ಲಿಯೇ ತಮ್ಮ ಅಧ್ಯಯನದ ಶಿಸ್ತನ್ನು ರೂಪಿಸಿಕೊಂಡರು. ಅದೆಂದರೆ ಥೇರಾವಾದ ಬೌದ್ಧಧರ್ಮ ಅವರ ಆಯ್ಕೆಯ ಕ್ಷೇತ್ರವಾಯಿತು. ಅದರತ್ತ ಆಕರ್ಷಿತರಾಗಲು ಕಾರಣ ಅವರು ವಿಶೇಷ ವ್ಯಾಸಂಗ ಮಾಢಿದ “ಅಭಿ ಧರ್ಮಪಿಟಕ” ಗ್ರಂಥ. ಇದರ ಜೊತೆಯಲ್ಲಿಯೇ ಸೂತ್ರಪಿಟಕ ಮತ್ತು ವಿನಯ ಪಿಟಕಗಳನ್ನು ಅವುಗಳ ವ್ಯಾಖ್ಯಾನಗಳನ್ನು ಮೂಲ ಪಾಳಿ ಭಾಷೆಯಲ್ಲಿಯೇ ಓದಿ ಅಧ್ಯಯನ ಮಾಡಿದ್ರು. ಜ್ಞಾನ ದಾಹಿಯಾಗಿ ಸಿಂಹಳದಲ್ಲೆಲ್ಲಾ ಸುತ್ತಾಡಿ ಕ್ಷೇತ್ರಕಾರ್ಯ ಕೈಗೊಂಡು ಅವರು ಮಾಡಿದ ವಿದ್ವತ್ ಸಾಧನೆಗೆ ತಕ್ಕ ಪುರಸ್ಕಾರ ಅವರಿಗೆ ಸಿಂಹಳದಲ್ಲೇ ದೊರೆಯಿತು. ಬೌದ್ಧಧರ್ಮದ ಪಾಂಡಿತ್ಯದಲ್ಲಿ ಶಿಖರಾರೋಹಣ ಮಾಡಿದ ವಿದ್ವದ್ವರೇಣ್ಯರಿಗೆಂದೇ ಮೀಸಲಾದ ಅಪರೂಪದ ಪದವಿ ‘ತ್ರಿಪಿಟಿಕಾಚಾರ್ಯ’. ಅದು ಜೈನಿಯವರಿಗೆ ಸಂದಿತು. ಸಿಂಹಳದ ಅಂದಿನ (೧೯೫೧) ಪ್ರಧಾನಮಂತ್ರಿ ಸೇನಾನಾಯಿಕೆಯವರ ನಿವಾಸದಲ್ಲಿ ಪ್ರತ್ಯೇಕ ಸಮಾರಂಭವನ್ನು ಏರ್ಪಡಿಸಿ ಜೈನಿಯವರಿಗೆ ಈ ಪ್ರಶಸ್ತಿಯನ್ನು ನೀಡಲಾಯಿತು. ಜೈನಿಯವರ ವಿದ್ವತ್ತಿನ ಮಹತ್ವ, ಮೌಲಿಕತೆಗಳನ್ನು ಇದರಿಂದ ಅರಿಯಬಹುದಾಗಿದೆ.

ಇವರ ಸಾಧನೆಗೆ ಗರಿ ಮೂಡಿದಂತೆ, ಬನಾರಸ್ ಹಿಂದೂ ವಿಶ್ವವಿದ್ಯನಿಲಯದಲ್ಲಿ ಅಗತಾನೆ ಹೊಸದಾಗಿ ಸೃಷ್ಟಿಯಾಗಿದ್ದು ಪಾಳಿ ಭಾಷಾ ಪ್ರಥಮ ಉಪನ್ಯಾಸಕ ಹುದ್ದೆಗೆ ಆಹ್ವಾನ ಬಂದು ಅಲ್ಲಿ ಅಧ್ಯಾಪಕರಾದರು. ಬೌದ್ಧ, ಹಿಂದೂ, ಜೈನ ಸಿದ್ಧಾಂತಾಚಾರ್ಯರು ಕಾಶಿಯ ಜ್ಞಾನಕೇಂದ್ರದಲ್ಲಿ ಸಂಗಮಿಸಿದ್ದರು. ಅವರ ಜಿಜ್ಞಾಸೆ, ಕೃತಿ ಸಂಪಾದನೆ ಕಾರ್ಯಗಳಲ್ಲಿ ಭಾಗವಹಿಸಿ ಜೈನಿ ನಿಶಿತಮತಿಯರಾದರು. ಇವರ ಧಾರಣಶಕ್ತಿಗೆ ಸಾಣೆ ಹಿಡಿದಂತಾಯಿತು.

ಬೌದ್ಧ ಧರ್ಮದಲ್ಲಿನ ಇವರ ಸಂಶೋಧನೆ ಮುಂದುವರೆದಿತ್ತು. ಪಾಟ್ನಾದಲ್ಲಿ ಕೆ.ಪಿ. ಜಯಸ್ವಾಲ್ ಸಂಸ್ಥೆಯಲ್ಲಿ ಮೌಲಿಕ ಗ್ರಂಥಾಲಯವಿತ್ತು. ಸಂಸ್ಥೆಯ ನಿರ್ದೇಶಕರಾದ ಎ.ಎಸ್. ಅಲ್ತೇಕರರು ಈ ಸಂಗ್ರಹದಲ್ಲಿದ್ದ ಅಪೂರ್ವ ಹಾಗೂ ಅಜ್ಞಾತ ಏಕೈಕ ಹಸ್ತ ಪ್ರತಿಯಾದ ‘ಅಭಿಧರ್ಮದೀಪ’ ಮತ್ತು ಅದರ ವ್ಯಾಖ್ಯಾನವಾದ ‘ವಿಭಾಷಾಪ್ರಭಾವೃತ್ತಿ’ಯನ್ನೂ ಪತ್ತೆ ಮಾಡಿದರು. ಆ ಮೌಲಿಕ ಸಂಸ್ಕೃತ ಗ್ರಂಥವನ್ನು ಸರಿಯಾಗಿ ಸಂಶೋಧಿಸಿ ಸಂಪಾದಿಸುವ ವಿದ್ವತ್ ಕಾರ್ಯವನ್ನು ಪದ್ಮನಾಭ್ ಎಸ್. ಜೈನಿಯವರಿಗೆ ವಹಿಸಲಾಯಿತು. ಅದುವರೆವಿಗೂ ಕೇಳರಿಯದ ಮಹತ್ವದ ಬೌದ್ಧಾಗ್ರಾಮ ಗ್ರಂಥವನ್ನು ಸಂಪಾದಿಸುವ ಹೊಣೆಗಾರಿಕೆಯಲ್ಲಿದ್ದಾಗಲೇ (೧೯೫೬) ಲಂಡನ್ನಿನ “ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್” (SOAS) ಕೇಂದ್ರದ ಸಂಸ್ಕೃತ ಪ್ರಾಧ್ಯಾಪಕರಾದ ಜಾನ್ ಬ್ರೊಗ್ ರ ಪರಿಚಯವಾಯಿತು. ಪದ್ಮನಾಭರ ಸಂಸ್ಕೃತ, ಪಾಳಿ, ಇಂಗ್ಲಿಷ್ ಭಾಷಾ ಪ್ರೌಢಿಮೆಯನ್ನು ಮೆಚ್ಚಿ ಲಂಡನ್ನಿಗೆ ಆಹ್ವಾನಿಸಿದರು. ‘ಸ್ಕೂಲ್ ಆಫ್ ಓರಿಯಂಟಲ್ ಮತ್ತು ಪಾಳಿ ಅಧ್ಯಯನದ ಅಧ್ಯಾಪಕರಾಗಿ ನೇಮಕಗೊಂಡು, ಹನ್ನೊಂದು ವರುಷಗಳ ಕಾಲ (೧೯೫೬ ರಿಂದ ೧೯೬೭) ಲಂಡನ್ನಿನಲ್ಲಿ ಕಾರ್ಯನಿರ್ವಹಿಸಿದರು.

ಅಲ್ಲಿದ್ದ ಅವಧಿಯಲ್ಲಿಯೆ ‘ಅಭಿಧರ್ಮದೀಪ ಮತ್ತು ವೃತ್ತಿ ಶೋಧನ ಕಾರ್ಯವನ್ನು ಮುಂದುವರೆಸಿದರು. ಪ್ರೊ. ಜಾನ್ ಬ್ರೊಗರರ ಮಾರ್ಗದರ್ಶನವೂ ದೊರೆಯಿತು. ಲಂಡನ್ ವಿಶ್ವವಿದ್ಯಾನಿಲಯ ಇವರ ಸಂಶೋಧನೆಯನ್ನು ಅಂಗೀಕರಿಸಿ ಪಿಎಚ್.ಡಿ. ಪದವಿಯನ್ನು ನೀಡಿತು.

ಥೇರವಾದ ಬೌದ್ಧ ಸಿದ್ಧಾಂತದ ಅತಿ ಸೂಕ್ಷ್ಮ ವ್ಯತ್ಯಾಸಗಳನ್ನೂ ಪ್ರಾದೇಶಿಕ ಸ್ವರೂಪದ ವೈಲಕ್ಷಣ್ಯವನ್ನೂ ಗ್ರಹಿಸುವ ಸಲುವಾಗಿ ಡಾ. ಪದ್ಮನಾಭ ಎಸ್. ಜೈನಿಯವರು ಥೈಲಾಂಡ್, ಬರ್ಮಾ, ಕಾಂಬೋಡಿಯ ಮತ್ತು ಇಂಡೋನೇಷಿಯಾ ದೇಶಗಳಲ್ಲಿ ಬೌದ್ಧ ವಿಹಾರಗಳನ್ನು ಸಂದರ್ಶಿಸಿದರು. ಈ ಪ್ರವಾಸದಲ್ಲಿ ಬೌದ್ಧ ಜಾತಕ ಕಥೆಗಳ ಹಲವಾರು ಹಸ್ತ ಪ್ರತಿಗಳನ್ನು ಕಲೆ ಹಾಕಿದರು. ಸಂಶೋಧನೆ, ಸಂಪಾದನೆ, ವಿವಿಧ ದೇಶಗಳಲ್ಲಿ ವಿದ್ವತ್ ಪೂರ್ಣ ಉಪನ್ಯಾಸಗಳಿಂದ ವಿದ್ವತ್ ಲೋಕದ ಮನ್ನಣೆ ಗಳಿಸಿದರು. ಅನೇಕ ಜನ ವಿದ್ಯಾರ್ಥಿಗಳ ಮಾರ್ಗದರ್ಶಕರಾದರು.

ಜೈನಿಯವರ ಕೀರ್ತಿ ಅಮೇರಿಕವನ್ನು ವ್ಯಾಪಿಸಿತು, ಶೈಕ್ಷಣಿಕ ಜೀವನ ಶ್ರೇಣಿಯಲ್ಲಿ ಇನ್ನೊಂದು ಮಜಲು ಮುಟ್ಟಿದರು. ಜೈನಿಯವರು ಅಮೆರಿಕದ ಆನ್ ಆರ್ಬೊರ್ ನ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಭಾಷಾ – ಸಾಹಿತ್ಯದ ಪ್ರಾಧ್ಯಾಪಕರಾದರು. ಪುನಃ ಅಲ್ಲಿಂದ ಕ್ಯಾಲಿಪೋರ್ನಿಯ ವಿಶ್ವವಿದ್ಯಾಲಯ ಬರ್ಕಿಯಲ್ಲಿ ದಕ್ಷಿಣ – ಪೂರ್ವ ಏಷಿಯಾ ಅಧ್ಯಯನ ಶಾಖೆಯಲ್ಲಿ ಬೌದ್ಧ ಅಧ್ಯಯನದ ಪ್ರಾಧ್ಯಾಪಕರಾದರು. ಇದು ಬೋಧನಾಂಗದಲ್ಲಿ ಅವರು ತಲುಪಿದ ಉತ್ತುಂಗ ಶಿಖರ. ೧೯೭೨ ರಿಂದ ೧೯೯೪ ರ ವರೆಗೆ ೨೨ ವರ್ಷ ಪ್ರಾಧ್ಯಾಪಕರಾಗಿ ದುಡಿದರು, ವಿಶ್ರಾಂತರಾದ ಮೇಲೂ ವಿಶ್ವವಿದ್ಯಾನಿಲಯ ಅವರ ವಿದ್ವತ್ ಸೇವೆಯನ್ನು ಪ್ರೊಫೆಸರ್ ಎಮಿರಟಿಸ್ ಆಗಿ ಬಳಸಿಕೊಳ್ಳುತ್ತಿದೆ.

ಪ್ರೊಫೆಸರ್ ಪದ್ಮನಾಭ್ ಎಸ್. ಜೈನಿಯವರ ವಿಶೇಷ ಕೊಡುಗೆ ಹಾಗೂ ವಿಶಿಷ್ಟ ವಿದ್ವತ್ತು ಅಂತಾರಾಷ್ಟ್ರೀಯ ವ್ಯಾಪ್ತಿಯದು. ಐದು ದಶಕಗಳಿಗೂ ಮೀರಿದ ಅವರ ನಿರಂತರ ಕೃಷಿ, ತೌಲನಿಕ ಸ್ವರೂಪದ್ದು, ಹಿಂದೂ, ಬೌದ್ಧ, ಜೈನ ದರ್ಶನಗಳ ಸಾದೃಶ್ಯ ವೈದೃಶ್ಯಗಳನ್ನು ವಸ್ತು ನಿಷ್ಠವಾಗಿ ಪರಾಮರ್ಶಿಸಿದ್ದಾರೆ. ವ್ಯುತ್ಪನ್ನ ಪ್ರತ್ಯುತ್ಪನ್ನ ವಿಶಾರದರೆನಿಸಿ ಶ್ರಮಣ ಸಂಸ್ಕೃತಿಯ ಸೋಪಜ್ಞತೆಯನ್ನು ಗುರುತಿಸಿದ್ದಾರೆ. ಜೈನ ಹಾಗೂ ಬೌದ್ಧ ಧರ್ಮ, ಸಂಸ್ಕೃತಿ ಸಾಹಿತ್ಯವನ್ನು ಇತರ ಧರ್ಮಗಳ ಜೊತೆ ತೂಗಿ ನೋಡಿ ಪಾರದರ್ಶಕ ವಿಮರ್ಶೆ ನೀಡಿದ್ದಾರೆ. ಅವರ ವಿಚಾರಧಾರೆಯಲ್ಲಿ ವಸ್ತು ವೈಭವಕ್ಕಿಂತ ವಸ್ತುನಿಷ್ಠ ನಿರ್ಣಯಗಳು ಮುಖ್ಯ ಪಾತ್ರವಹಿಸುತ್ತವೆ.

ಅರ್ಧಪಾಲಕ ಸಂಪ್ರದಾಯ ಮಥುರಾವಲಯದಲ್ಲಿ ಅಂಕುರಿಸಿ ಅದು ಮುಂದೆ ಯಾಪನೀಯ ಪಂಥಕ್ಕೆ ಎಡೆಮಾಡಿಕೊಟ್ಟಿದ್ದನ್ನು ಪಾಳಿ ಭಾಷೆಯ ಸಾಮಗ್ರಿಯನ್ನು ಅವಲಂಬಿಸಿ ಆಸ್ಖಲಿತವಾಗಿ ಸ್ಥಾಪಿಸಿದ್ದಾರೆ. ಆಕರಗಳ ಅನ್ವೇಷಣೆಯಲ್ಲಿ ಜೈನಿಯವರು ಆನುಷಂಗಿಕ ಆಧಾರಗಳನ್ನು ಹಿಡಿಯದೆ ನೇರವಾಗಿ ಮೂಲ ಕೃತಿಗಳನ್ನು ಆಧರಿಸಿರುವುದು ಹಲವು ವಿದ್ವಾಂಸರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇಂಥ ವಿದ್ವಾಂಸರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಇಂಥ ಅನ್ವೇಷಣೆಯ ಪರಿಣಾಮವಾಗಿ ಜೈನಿಯವರು ಹೊರತಂದ ಬೌದ್ಧ ಜಾತಕ ಕಥೆಗಳ ಎರಡು ಸಂಪುಟಗಳಿಗೆ ಅಧಿಕೃತತೆಯ ಛಾಪು ಇದೆ.

ಬೌದ್ಧಧರ್ಮ ಅಧ್ಯಯನ, ಅಧ್ಯಾಪನ ಮತ್ತು ಗ್ರಂಥ ಪ್ರಕಟಣೆಯಲ್ಲಿ ನಿರತರಾದ ಜೈನಿಯವರು, ಜೈನಧರ್ಮ ಸಂಬಂಧ ಅಧ್ಯಯನದಲ್ಲಿಯೂ ಸಮದಂಡಿಯಾದ ವಿದ್ವತ್ತನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಮಂಡಿಸಿದ ಪ್ರಬಂಧಗಳು ಅದೇ ಮಟ್ಟದ ವಿದ್ವತ್ ಪತ್ರಿಕೆಗಳಿಗೆ ನೀಡಿದ ಸಂಶೋಧನ ಪ್ರಬಂಧಗಳು ಜೈನಿಯವರನ್ನು ಜೈನಧರ್ಮ ವಿದ್ವಾಂಸರೆಂದೂ ಪರಿಗಣಿಸಿವೆ. ಆಚಾರ್ಯ ಅಮೃತ ಚಂದ್ರಸೂರಿ ವಿರಚಿತ ‘ಲಘು ತತ್ವ ಸ್ಪೋಟ’ ಎಂಬ ಸಂಸ್ಕೃತ ಪುಸ್ತಕ ಮೂಲ ಹಾಗೂ ಇಂಗ್ಲೀಷ್ ಅನುವಾದ ಸಹಿತ ಸಿದ್ಧಪಡಿಸಿಕೊಟ್ಟಿದ್ದಾರೆ. ‘ದಿ ಜೈನ್ ಪಾಥ್ ಆಫ್ ಪ್ಯೂರಿಪಿಕೇಷನ್’ ಎಂಬ ಶ್ರೇಷ್ಠ ಅದ್ವಿತೀಯ ಗ್ರಂಥ, ಜೈನಿಯವರ ಕಿರೀಟಪ್ರಾಯಕೃತಿ, ಅಮೇರಿಕೆಯ ಕ್ಯಾಲಿಪೋರ್ನಿಯ ವಿಶ್ವವಿದ್ಯಾನಿಲಯ ಇದನ್ನು ಪ್ರಕಟಪಡಿಸಿದೆ (೧೯೨೯). ಈ ಮೌಲಿಕ ಕೃತಿ ಈಗಾಗಲೇ ಎರಡು ಮುದ್ರಣ ಕಂಡಿರುವುದಲ್ಲದೆ, ಇದರ ಭಾರತೀಯ ಆವೃತ್ತಿಯೂ ಹೊರಬಂದಿದೆ. ಜೈನಧರ್ಮದ ಅರಿವಿಗೆ ಹಾಗೂ ಪ್ರವೇಶಕ್ಕೆ ಇದು ಅತ್ಯುತ್ತಮ ಗ್ರಂಥವೆಂದು ಪಶ್ಚಿಮದ ಘನತೆವೆತ್ತ ವಿದ್ವಾಂಸರು ಗುರುತಿಸಿ ಗೌರವಿಸಿದ್ದಾರೆ. ಸ್ತ್ರೀ – ಪುರುಷ ಲಿಂಗಭೇದದ ಹಿನ್ನೆಲೆಯಲ್ಲಿ ಜೈನಧರ್ಮದ ತಾತ್ವಿಕ ಚರ್ಚೆಯನ್ನು ವಿಸ್ತಾರವಾಗಿ ವಿವೇಚಿಸಿ ಪದ್ಮನಾಭರು ಮೌಲಿಕ ಗ್ರಂಥ ರಚಿಸಿದ್ದಾರೆ.

‘ದಿ ಕಲೆಕ್ಟೆಡ್ ಪೇಪರ್ಸ್ ಆನ್ ಬುದ್ಧಿಸ್ಟಿಕ್ ಸ್ಟಡೀಸ್’ ಜೈನಿಯವರ ಮಹತ್ವದ ಕೃತಿಗಳಲ್ಲಿ ಒಂದು. ಹೀಗೆ ೮೦ ರ ಇಳಿವಯಸ್ಸಿನಲ್ಲಿರುವ ಡಾ. ಪದ್ಮನಾಭ್ ಜೈನಿಯವರು ಸತ್ವಶಾಲಿಯಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅರ್ಧಶತಮಾನದ ಅವರ ಸಾಧನೆಗೆ ಹಲವಾರ ಪ್ರತಿಷ್ಠಿತ ಪುರಸ್ಕಾರ, ಪ್ರಶಸ್ತಿಗಳು ಸಂದಿವೆ. ಕೆಲವೇ ಮನೆಗಳ ಪುಟ್ಟ ಊರಾದ ನೆಲ್ಲಿಕಾರು ಗ್ರಾಮದಲ್ಲಿ ಹುಟ್ಟಿ ವಿದ್ವತ್ ಪ್ರಪಂಚದಲ್ಲಿ ಮೇರುಶಿಖರವೇರಿ ಪ್ರತಿಷ್ಠಿತರಾದ ಪದ್ಮನಾಭ ಜೈನಿಯವರಿಗೆ ಈಗ ಪ್ರಾಕೃತ ಜ್ಞಾನ ಭಾರತಿ ಪ್ರಶಸ್ತಿಯ ಪ್ರಭಾವಳಿ ಮೂಡಿದೆ. ಈ ಜ್ಞಾನ ಪ್ರತಿಭೆ ಕರ್ನಾಟಕದ್ದು ಎನ್ನುವ ಹಿರಿಮೆ ಕನ್ನಡಿಗರದಾಗಿದೆ.