ಮಾನವ ಪ್ರಕೃತಿಯ ಶಿಶುವಾಗಿ ಮೂಡಿದಂದಿನಿಂದಲೇ ಅವನ ಒಂದು ಅವಿಭಾಜ್ಯ ಅಂಗವಾಗಿ ಅವನಲ್ಲಿ ಭಯ ಮೂಡಿದ್ದರೆ ಆಶ್ಚರ್ಯವಿಲ್ಲ. ಮಗು ಹುಟ್ಟಿದಂದಿನಿಂದಲೇ ಕೆಲವು ನೈಸರ್ಗಿಕ ಕ್ರಿಯೆಗಳನ್ನು ಒಳಗೊಂಡು ಜನ್ಮ ತಳೆದಿರುತ್ತದೆ. ಉದಾಹರಣೆಗೆ ಉಸಿರಾಡುವುದು. ಮಲಮೂತ್ರ ವಿಸರ್ಜನೆ, ಹಸಿವು ಇತ್ಯಾದಿ. ಮಗು ಸ್ವಲ್ಪ ಬೆಳೆದು ದೊಡ್ಡದಾದಾಗ ಅದಕ್ಕೆ ತನ್ನ ದೇಹದ ರಕ್ಷಣೆಯ ಅಗತ್ಯ ತೀರ ಅನಿವಾರ್ಯವಾಗುತ್ತದೆ. ಪ್ರಾಣಿಗಳ ಮಧ್ಯದಲ್ಲಿ ಬೆಳೆಯುತ್ತಿದ್ದ ಮಾನವ ತನ್ನ ಪ್ರಾರಂಭದ ದಿನಗಳಲ್ಲಿ ಯಾವ ರೀತಿಯಿಂದಲೂ ಆ ಪ್ರಾಣಿಗಳಿಗಿಂತಾ ಅವನು ಬೇರೆಯಾಗಿರಲಿಲ್ಲ. ಅಂದು ಗುಡ್ಡಗಾಡುಗಳಲ್ಲಿ, ಗಡ್ಡಮೀಸೆಗಳನ್ನು ಬಿಟ್ಟುಕೊಂಡು, ಗೆಡ್ಡೆಗೆಣಸುಗಳನ್ನು ತಿಂದುಕೊಂಡು ಅಡ್ಡಾಡುತ್ತಿದ್ದ ಮಾನವ ಇಂದು ಚಂದ್ರಲೋಕದಲ್ಲಿ ಮನೆ ಮಾಡುವ ಹಂತಕ್ಕೆ ಬಂದು ನಿಂತಿರುವುದು ಒಂದು ಸಾಮಾನ್ಯ ಸಂಗತಿಯಲ್ಲ. ಪ್ರಾಣಿಯ ಹಂತದಿಂದ ಇಂದು ನವನಾಗರಿಕ ಮಾನವನ ಹಂತಕ್ಕೆ ಆತ ಏರಬೇಕಾದರೆ ಅದಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ. ಅದು ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶೈಕ್ಷಣಿಕ, ಬೌದ್ಧಿಕ ಹಾಗೂ ನೈತಿಕ ಮೊದಲಾದ ಇನ್ನೂ ಅನೇಕ ದೃಷ್ಟಿಗಳು ಮುಖ್ಯವಾಗುತ್ತವೆ. ಇವುಗಳ ಆಧಾರದಿಂದ ಮಾನವನ ಸರ್ವತೋಮುಖ ಬೆಳವಣಿಗೆಯನ್ನು ಗುರುತಿಸಬೇಕಾಗುತ್ತದೆ.

ತನ್ನ ಪ್ರಾರಂಭದ ಹಂತದಲ್ಲಿ ಮಾನವ ಪ್ರಕೃತಿಯ ಶಕ್ತಿಯೊಡನೆ ಹೋರಾಟ ನಡೆಸಬೇಕಾಯಿತು. ಇನ್ನೂ ಪ್ರಬಲ ಶಕ್ತಿಯೊಡನೆ ಹೋರಾಡಲು ಶಕ್ತಿ ಸಾಲದಿದ್ದಾಗ ಅವನಿಗೆ ಭಯ ಮೂಡಿತು. ಆಗ ಆ ಶಕ್ತಿಗಳನ್ನು ತನಗೆ ತೋಚಿದ ರೀತಿಯಲ್ಲಿ ಪ್ರಾರ್ಥಿಸಿ, ಬೇಡಿ, ಆ ಶಕ್ತಿಗಳೊಂದಿಗೆ ರಾಜಿ ಮಾಡಿಕೊಂಡು, ಹೊಂದಿಕೊಂಡು ಬಾಳಬೇಕಾದುದು ಅನಿವಾರ್ಯವಾಯಿತು. ನಿಗಿನಿಗಿ ಉರಿಯುವ ಸೂರ್ಯ ಅವರ ಊಹೆಗೆ ನಿಲುಕದಾದಾಗ ಅವನನ್ನು ಬೇಡಿ ಪ್ರಾರ್ಥಿಸಿದರು. ಅದೇ ರೀತಿ ಆಕಾಶದಲ್ಲಿ ಕವಿದ ಕಾರ್ಮೋಡ, ಗುಡುಗು, ಮಿಂಚು, ಸಿಡಿಲುಗಳು ಕಡೆಗೆ ಭೋರ್ಗರೆದು ಸುರಿವ ಮಳೆ, ಆ ನೀರನ್ನು ಹೊತ್ತು ಹಿರಯುವ ನದಿ, ಧಿಡೀರನೆ ಬೀಸುವ ಗಾಳಿ, ಹೆಡೆ ಎತ್ತಿ ಬುಸುಗುಟ್ಟುತ್ತಾ ನಿಂತ ಹಾವು, ದೊಡ್ಡ ದೇಹ ಮತ್ತು ಸೊಂಡಲೆತ್ತಿದ ಆನೆ – ಇವೆಲ್ಲವೂ ತಮ್ಮ ಅಪೂರ್ವ ಶಕ್ತಿಗಳಿಂದ ಮಾನವನ ಪ್ರಾರ್ಥನೆಗೆ ಪಾತ್ರವಾದವು. ಅಂದರೆ ಅಂದು ಮಾನವನ ಮನದಲ್ಲಿ ಮೂಡಿದ ಭಯವೇ ಅನಂತರದ ಶತಮಾನಗಳಲ್ಲಿ ಭಕ್ತಿಯ ರೂಪ ಪಡೆಯಿತು.

ಭಯದಿಂದ ಹೀಗೆ ಹುಟ್ಟಿದ ಭಕ್ತಿ ಅನಂತರ ಅದು ಮಾನವನ ಕೃತಜ್ಞತೆಯನ್ನು ಒಳಗೊಂಡಿತು ತಮಗೆ ನೆರಳು, ಹಣ್ಣುಹಂಪಲು, ತೊಗಟೆಯನ್ನು ಕೊಡುವ ಗಿಡಮರಗಳನ್ನು ಕುರಿತು ತಮ್ಮ ಕೃತಜ್ಞತೆಯನ್ನು ಭಕ್ತಿಯ ಮೂಲಕ ಪ್ರದರ್ಶಿಸಿದ್ರು. ಉರಿಯುವ ಬೆಂಕಿ, ಹರಿಯುವ ನೀರು ಇವೂ ಈ ಗುಂಪಿಗೆ ಸೇರಿದವು. ಪ್ರಾರಂಭದ ದಿನಗಳಲ್ಲಿ ಮಾನವ ಆಂಗಿಕ ಅಭಿನಯದ ಮೂಲಕ ಪ್ರಾಕೃತಿಕ ಶಕ್ತಿಗಳಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ. ಅಂದರೆ ತಮ್ಮ ಎರಡೂ ಕೈಗಳನ್ನು ಮೇಲೆ ಎತ್ತಿ ಅಥವಾ ಕಣ್ಣು ಮುಚ್ಚಿಕೊಂಡು ಪ್ರಾರ್ಥಿಸುವ ಅಭ್ಯಾಸ ಪ್ರಾರಂಭವಾಯಿತು. ಅದರ ಜೊತೆಯಲ್ಲಿ ಕೆಲವು ಉದ್ಗಾರಗಳೂ ಹೊರಹೊಮ್ಮುವುದು ಅನಂತರದ ಬೆಳವಣಿಗೆಯಾಯಿತು.

ಹಳ್ಳಿ ನಗರ ಪಟ್ಟಣಗಳಲ್ಲಿ ವಾಸಿಸುತ್ತಾ ಮಾನವ ಇಂದು ಸಮಾಜ ಜೀವಿಯಾಗಿದ್ದಾನೆ. ಅಂದು ಕಾಡು, ಗುಡ್ಡ, ಬೆಟ್ಟ ಗವಿಗಳಲ್ಲಿ ವಾಸಿಸುತ್ತಿದ್ದ ಮಾನವನೂ ಸಮೂಹ ಜೀವಿಯಾಗಿದ್ದ, ಸಂಘ ಜೀವಿಯಾಗಿದ್ದ. ಆದ್ದರಿಂದ ಆತ ಮಾಡುತ್ತಿದ್ದ ಯಾವುದೇ ಕೆಲಸವಾದರೂ ಸಾಮೂಹಿಕವಾಗಿಯೇ ನಡೆಯುತ್ತಿತ್ತು. ಅದೇ ರೀತಿ ಅಪೂರ್ವ ಶಕ್ತಿಗಳಿಗೂ ಪ್ರಾರ್ಥನೆ ಸಾಮೂಹಿಕವಾಗಿಯೇ ಸಲ್ಲುತ್ತಿತ್ತು. ಬೆಳಗಿನ ತಮ್ಮ ದೈನಂದಿನ ಕೆಲಸ ಪ್ರಾರಂಭಿಸುವ ಮುನ್ನ ಅವರ ಪ್ರಪ್ರಥಮ ಕರ್ತವ್ಯ ಈ ಪ್ರಾರ್ಥನೆಯೇ ಆಗಿರುತ್ತಿತ್ತು. ಈ ಕೆಲಸ ಬಹಳ ಶ್ರದ್ಧೆಯಿಂದ ನಡೆಯುತ್ತಿತ್ತು. ಅನಂತರ ಮಾನವನ ಬುದ್ಧಿಶಕ್ತಿ ಬೆಳೆದಂತೆ ಈ ಅಪೂರ್ವ ಶಕ್ತಿಗಳಿಗೆ ಇನ್ನೂ ಕೆಲವು ಶಕ್ತಿಗಳು ಸೇರಿ ದೇವ-ದೇವತೆಗಳ ನಿರ್ಮಾಣವಾಯಿತು. ಆ ದೇವ ದೇವತೆಗಳಿಗೆ ಆಕಾರ, ಬಣ್ಣ, ಗುಣ – ಎಲ್ಲಾ ಪ್ರಾಪ್ತವಾದವು. ಅನಂತರ ಹೆಸರುಗಳನ್ನು ಪಡೆದುಕೊಂಡವು. ಇದೆಲ್ಲಾ ಅಂದು ಮಾನವನ ಮಾನಸಿಕ ಶಾಂತಿಗೆ ತೀರ ಅಗತ್ಯವಾಗಿತ್ತು. ಆದ್ದರಿಂದಲೇ ದೇವರ ಕಲ್ಪನೆ ಪ್ರಾರ್ಥನೆ, ಭಕ್ತಿ ಇವೆಲ್ಲಾ ಮಾನವನ ಬದುಕಿನಲ್ಲಿ ಅವಿಭಾಜ್ಯ ಅಂಗಗಳಂತೆ ಬೆಳೆದು ಬಂದವು, ಬೆಸೆದು ನಿಂತವು.

ಅನೇಕ ಶತಮಾನಗಳ ಮಾನವನ ಬೆಳವಣಿಗೆಯ ನಂತರ ಭಾಷೆಯನ್ನು ಕಂಡುಕೊಳ್ಳಲಾಯಿತು. ತನ್ನ ಗುಂಪಿಗೆ ಅಳವಡಿಸಿಕೊಂಡ ಭಾಷೆಯಲ್ಲಿ ಮಾನವ ತನ್ನ ದೇವ-ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಲು ಪ್ರಾರಂಭಿಸಿದ. ಆ ಪ್ರಾರ್ಥನೆ ಹಗಲು ಇರುಳಿನಲ್ಲಿ ಯಾವ ಹೊತ್ತಿನಲ್ಲಾದರೂ ನಡೆಯಬಹುದಿತ್ತು. ಅನಂತರ ಒಂದೊಂದು ಸಮಯದಲ್ಲಿ ಮಾಡುವ ಪ್ರಾರ್ಥನೆಗೆ ಬೇರೆ ಬೇರೆ ಹೆಸರುಗಳು ನಾಮಕರಣವಾಯಿತು. ಕಾಲಕಳೆದಂತೆ ಭರತ ಖಂಡದಲ್ಲಿ ಆರ್ಯರ ಸಂಸ್ಕೃತೀಕರಣವಾದ ಮೇಲೆ ಬೆಳಗಿನ ಪ್ರಾರ್ಥನೆ ‘ಸುಪ್ರಭಾತ’ ಎನ್ನುವ ಬಹು ಜನಪ್ರಿಯ ಹೆಸರನ್ನು ಪಡೆಯಿತು.

ಗುಡ್ಡಗಾಡಿನ ಜನತೆಯಿಂದ ಪ್ರಾರಂಭವಾಗಿ ಅತ್ಯಂತ ಆಧುನಿಕ ಸ್ಥಿತಿಯನ್ನು ಮುಟ್ಟಿರುವ ದೇಶದ ಜನತೆಯವರೆಗೂ ವಿಶ್ವದ ಎಲ್ಲಾ ಭಾಷೆಗಳಲ್ಲಿಯೂ ಈ ‘ಸುಪ್ರಭತ’ ಕಂಡುಬರುತ್ತದೆ. ನಮ್ಮ ಕನ್ನಡ ನಾಡಿನ ಸಾಹಿತ್ಯದ ತಾಯಿ ಬೇರಾಗಿರುವ ಜನಪದ ಗೀತೆಗಳಲ್ಲಿ ಹಳ್ಳಿಯ ಜನ ಮುಂಜಾನೆ ನಸುಕಿನಲ್ಲಿ ಎದ್ದು ತಮ್ಮ ಕೆಲಸ ಕಾರ್ಯಗಳಿಗೆ ಕೈಹಚ್ಚುತ್ತರೆ. ಕಾಯದಲ್ಲಿಯೇ ಕೈಲಾಸ ಕಾಣುತ್ತಾರೆ. ಆ ಜನ. ಬೆಳ್ಳಿ ನಕ್ಷತ್ರ ಮೂಡುವಾಗ ಎದ್ದು, ಹಳ್ಳಿಯ ಹೆಣ್ಣುಮಗಳು ಮೊರದ ತುಂಬ ರಾಗಿಯನ್ನೋ ಜೋಳವನ್ನೋ ತುಂಬಿಕೊಂಡು ಬೀಸಲು ಬೀಸುಕಲ್ಲಿಗೆ ಕೈಹಚ್ಚುತ್ತಾಳೆ. ಬೀಸುವ ಯಂತ್ರಗಳು ಇನ್ನೂ ಹಳ್ಳಿಗಳನ್ನು ಪ್ರವೇಶಿಸದೆ ಇದ್ದ ಕಾಲದಲ್ಲಿ ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಹಳ್ಳಿಗಳಲ್ಲಿಯೂ ಈ ಗೀತೆಗಳು ಕೇಳಿ ಬರುತ್ತಿದ್ದವು. ಬೆಳಗಾಗ ಎದ್ದು ಆ ಹೆಣ್ಣು ಮಗಳು ಯಾರನ್ನು ನೆನೆಯುತ್ತಾಳೆ ಗೊತ್ತೇನು?

ಬೆಳಗಾಗ ನಾನೆದ್ದು ಯಾರ್ಯಾರ ನೆನಯಲಿ
ಎಳ್ಳು ಜೀರಿಗೆ ಬೆಳೆಯೋಳ | ಭೂಮಿತಾಯ
ಎದ್ದೊಂದು ಗಳಿಗೇ ನೆನದೇನಾ ||

ಯಾವ ಭೂಮಿತಾಯಿಯ ಅಸ್ತತ್ವದಿಂದ ಮಾನವನ ಇರುವಿಕೆಗೆ ಎಲ್ಲ ಅರ್ಥದಲ್ಲಿಯೂ ಬೆಲೆ ಬಂದಿದೆಯೋ ಆ ಭೂಮಿತಾಯಿಯನ್ನು ಆ ಹೆಣ್ಣುಮಗಳು ಎದ್ದು ಒಂದು ಘಳಿಗೆ ನೆನಯುತ್ತಿದ್ದಾಳೆ; ಯಾವ ಭೂಮಿಯಲ್ಲಿ ಹುಟ್ಟಿ ಬೆಳೆದು, ಬಾಳಿ, ಮರಣಿಸಿ ಅದೇ ಭೂಮಿಯಲ್ಲಿ ಐಕ್ಯವಾಗುತ್ತಾನೊ ಅದನ್ನು ಯಾವ ಮಾನವ ತಾನೆ ಮರೆಯಲು ಸಾಧ್ಯ? ಹಳ್ಳಿಯ ಜನರ ದೈನಂದಿನ ದಿನಚರಿಯೆಲ್ಲಾ ಈ ಮಣ್ಣಿನ ಜೊತೆಯಲ್ಲೇ, ಮಣ್ಣಿನ ಮಕ್ಕಳ ಬದುಕು ನಿಂತಿರುವುದು ಈ ಭೂಮಿತಾಯಿಯನ್ನು ಆಧರಿಸಿ, ಆ ತಾಯಿಗೆ ತನ್ನ ಕೃತಜ್ಞತೆಯ ಪ್ರಾರ್ಥನೆ ದೈನಂದಿನ ಕೆಲಸಕ್ಕೆ ಮಾನಸಿಕ ಹದವನ್ನು ತಂದುಕೊಡುತ್ತದೆ.

ಇದೇ ರೀತಿ ನಮ್ಮ ದೇಶದ ಎಲ್ಲ ಜನಾಂಗದ, ಎಲ್ಲ ಧರ್ಮದ, ಎಲ್ಲ ಬುಡಕಟ್ಟಿನ, ಎಲ್ಲ ಭಾಷೆಯ ಜನರಲ್ಲೂ ಈ ರೀತಿಯ ಪ್ರಾತಃಕಾಲದ ಪ್ರಾರ್ಥನೆ ಇದೆ. ರಾತ್ರಿ ಮಲಗಿದ್ದು ಬೆಳಗ್ಗೆ ಎದ್ದಾಗ ತನ್ನ ಇಷ್ಟದೈವವನ್ನು ತನಗೆ ತೋರಿದ ರೀತಿಯಲ್ಲಿ ಮಾನವ ಪ್ರಾರ್ಥಿಸುತ್ತಾನೆ. ಎದ್ದ ಒಡನೆಯೇ ದೇವರ ಭಾವ ಚಿತ್ರವನ್ನೋ ವಿಗ್ರಹವನ್ನೋ ನೋಡುತ್ತಾನೆ ಅಥವಾ ಫಲಭರಿತ ವೃಕ್ಷವನ್ನು ವಿಶೇಷವಾಗಿ ತೆಂಗಿನಮರವನ್ನು ನೋಡುತ್ತಾನೆ ತನ್ನ ಮನೆಯ ಹಟ್ಟಿಯಲ್ಲಿ ಕಟ್ಟಿರುವ ದನಕರುಗಳ ಮೊಗವನ್ನು ನೋಡುತ್ತಾನೆ. ಯಾವುದೊ ಇಲ್ಲದಿದ್ದಾಗ, ಇದ್ದೂ ಒಡನೆಯೇ ಕಣ್ಣಿಗೆ ಬೀಳದಿದ್ದಾಗ, ತನ್ನ ಅಂಗೈಗಳನ್ನೇ ನೋಡಿಕೊಂಡು ಪಂಚಕನ್ಯೆಯರನ್ನು ಸ್ಮರಿಸುವುದು ನಮ್ಮ ಭಾರತೀಯರ ಅಭ್ಯಾಸ ಕ್ರಮವಾಗಿದೆ.

ಬೆಳಗಿನ ದೈನಂದಿನ ಕಾರ್ಯ ಸುಪ್ರಭಾತದಿಂದ ಪ್ರಾರಂಭವಾದಂತೆ ಅನಂತರ ಎಲ್ಲ ಕೆಲಸವನ್ನೂ ದೇವತಾಸ್ತುತಿಯಿಂದ ಪ್ರಾರಂಭಿಸುವ ಸಂಪ್ರದಾಯ ಬೆಳೆಯಿತು. ಅದರಲ್ಲಿಯೂ ಕಾವ್ಯರಚನೆಗೆ ತೊಡಗುವ ಕವಿಗಳಿಗಂತೂ ಇದು ಅತ್ಯಂತ ಸಂತೋಷದ ವಿಷಯವಾಯಿತು ಮೊದಲೇ ಭಾಷಾ ಪ್ರಭುತ್ವ ಹೊಂದಿರುವ ಈ ಕವಿಗಳು ತಮ್ಮ ವಾಕ್ ಚಾತುರ್ಯದಿಂದ ತಮ್ಮ ಇಷ್ಟದೈವವನ್ನು ಎಷ್ಟು ಬಗೆಯಿಂದ ಕೊಂಡಾಡಿದರೂ ಅವರಿಗೆ ತೃಪ್ತಿಯಿಲ್ಲ. ಅಂಥ ಒಂದೆರಡು ಸಂಸ್ಕೃತ ಹಾಗೂ ಕನ್ನಡ ಪದ್ಯಗಳನ್ನು ಇಲ್ಲಿ ಉದಾಹರಣೆಗೆ ಕೊಡುತ್ತಿದ್ದೇನೆ. ಅಪ್ಪಯ್ಯ ದೀಕ್ಷಿತರ ಕುವಲಯಾನಂದದ ಮಂಗಳ ಶ್ಲೋಕ ಹೀಗಿದೆ :

            ಪರಸ್ಪರ ತಪಸ್ಸಂಪತ್ ಫಲಾಯಿತ ಪರಸ್ಪರೌ |
            ಪ್ರಪಂಚ ಮಾತಾಪಿತರ್ರ ಪ್ರಾಂಚೌ ಜಾಯಾಪತೀ ಸ್ತುಮಃ ||

ಈ ಪದ್ಯವನ್ನು ಕನ್ನಡಾನುವಾದನವನು ತೀ.ನಂ.ಶ್ರೀ ಅವರು ಹೀಗೆ ಮಾಡಿದ್ದಾರೆ :

            ಒಬ್ಬರೊಬ್ಬರ ತಪದ ಸಂಪದಕೆ ಫಲವಾಗಿ
            ಒಬ್ಬರಿನ್ನೊಬ್ಬರನು ಪಡೆದವರನು
            ಮೊದಲ ದಂಪತಿಗಳನು ನುಡಿಸುವೆನುಹಬ್ಬಿದೀ
            ಜಗದ ತಾಯ್ತಂದೆಗಳನು |

ಸುಭಾಷಿತರತ್ನ ಭಾಂಡಾಗಾರದಲ್ಲಿ ಅನೇಕ ಸ್ವಾರಸ್ಯಕರವಾದ ಪದ್ಯಗಳಲ್ಲಿ ಒಂದು ಸ್ತುತಿ ಪದ್ಯ ಹೀಗೆ ಬರುತ್ತದೆ :

            ಯುಗಪತ್ ಸ್ವಂಗಡ ಚುಂಬನಲೋಲೌ ಪಿತರ್ರ ನಿರೀಕ್ಷ್ಯ ಹೇರಂಬ ||
            ತನ್ಮುಖಮೇಲನ ಕುತುಕೀ ಸ್ವಾನನ ಮಪನೀಯ ಪರಿಹಸನ್ ಪಾಯಾತ್ ||
            ತೀ ನಂ.ಶ್ರೀ ಯವರ ಕನ್ನಡದ ಅನುವಾದ ಹೀಗಿದೆ :
            ಒಂದೆ ಸಲಕೆ ತನ್ನ ಕೆನ್ನೆಗಳಿಗೆ ಮುತ್ತನೊತ್ತಲೆಂದು
            ತಂದೆತಯಿ ಹವಣಿಸುತಿರೆ ಕಂಡು ಬೆನಕನು
            ಒಂದುಗೊಳಿಸಲವರ ಮೋರೆಗಳನೆ ಹೊಂಚಿ ತನ್ನ ಮೊಗವ
            ಹಿಂದೆ ಸರಿಸಿ ಹರಿಸಿದ ನಗೆ ಪೊರೆಗೆ ನಿಮ್ಮನು ||

ದೇವನೊಬ್ಬ ನಾಮ ಹಲವು ಎನ್ನುವಂತೆ, ಮಾರ್ಗಗಳು ಬೇರೆಯಾದರೂ ಗುರಿ ಒಂದೇ. ಒಂದೊಂದು ಧರ್ಮದವರೂ ಒಂದೊಂದು ರೀತಿಯಲ್ಲಿ ತಮ್ಮ ತಮ್ಮ ಇಷ್ಟದೈವಗಳನ್ನು ಸ್ತುತಿಸುತ್ತಾರೆ. ಬೇಲೂರಿನ ಶಾಸನ ಒಂದರಲ್ಲಿ ಸರ್ವಧರ್ಮ ಸಮನ್ವಯದ ಪ್ರತಿರೂಪವಾಗಿ ಈ ಕೆಳಗಿನ ಶ್ಲೋಕ ಕಂಡು ಬರುತ್ತದೆ :

            ಯಂ ಶೈವಾ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾನ್ತಿನಃ
            ಬೌದ್ಧಾಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃ
            ಅರ್ಹನ್ನಿತ್ಯಥ ಜೈನಶಾಸನರತಾಃ ಕರ್ಮೇತಿ ಮೀಮಾಂಸಕಾಃ
            ಸೋಯಂ ವೊವಿದಧಾತು ವಾಂಧಿತಫಲಂ ತ್ರೈಲೋಕ್ಯನಾಥೋ ಹರಿಃ ||

ಶೈವರು ಶಿವನೆಂದೂ ವೇದಾಂತಿಗಳು ಬ್ರಹ್ಮನೆಂದೂ ಬೌದ್ಧರು ಬುದ್ಧನೆಂದೂ ವಿಚಾರಪಟುಗಳಾದ ನೈಯಾಯಿಕರು ಕರ್ತನೆಂದೂ ಜೈನ ಶಾಸನವನ್ನು ಅನುಸರಿಸುವವರು ಅರ್ಹತ್ ಎಂದೂ ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸಿಸುವರೋ ಅಂತಹ ತ್ರೈಲೋಕನಾಥನಾದ ಹರಿಯು ನಮ್ಮ ಇಷ್ಟಫಲಗಳನ್ನು ಕೊಡಲಿ – ಇಂಥ ಪ್ರಾರ್ಥನಾ ಪದ್ಯಗಳು ನೂರಾರು ಸಂಖ್ಯೆಯಲ್ಲಿ ನಮಗೆ ದೊರೆಯುತ್ತವೆ. ಇದೇ ರೀತಿ ಕನ್ನಡ ಕಾವ್ಯಗಳಲ್ಲಿಯೂ ಹೇರಳವಾಗಿ ಕಂಡುಬರುತ್ತವೆ. ಒಂದೆರಡು ಪದ್ಯಗಳನ್ನು ಇಲ್ಲಿ ಉದಾಹರಣೆಗಾಗಿ ನೋಡಬಹುದು.

ಆದಿಕವಿ ಪಂಪನ ಆದಿಪುರಾಣದಲ್ಲಿ ಸರಸ್ವತಿಯನ್ನು ವರ್ಣಿಸುವ, ಪ್ರಾರ್ಥಿಸುವ ಪದ್ಯ ಹೀಗಿದೆ. ಪಂಪನ ಪ್ರಕಾರ ಸರಸ್ವತಿ ಯಾರು ಎಂದರೆ ಉತ್ತರ ಹೀಗಿದೆ :

            ಪರಮ ಜಿನೇಂದ್ರವಾಣಿಯೇ ಸರಸ್ವತಿ ಬೇರದು ಪೆಣ್ಣರೂಪಮಂ
            ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ
            ಧರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದ
            ರ್ಕೆರೆದಪೆನಾ ಸರಸ್ವತಿಯೆ ಮಾಲ್ಕೆಮಗಿಲ್ಲಿಯೆ ವಾಗ್ವಿಳಾಸಮಂ ||

ಪರಮ ಜಿನೇಂದ್ರನ ವಚನವೇ ಸರಸ್ವತಿ. ಸರಸ್ವತಿ ಎನ್ನುವವಳು ಹೆಣ್ಣಿನ ಬೇರೊಂದು ರೂಪ ಧರಿಸಿ ನಿಂತವಳಲ್ಲ. ಅದನ್ನು ತಿಳಿದು ಓದುವ, ಕೇಳುವ, ಪೂಜಿಸುವ, ಆಧರಿಸುವ ಭವ್ಯಜನಕ್ಕೆ ಸತತವಾಗಿ ಸೌಖ್ಯವನ್ನು ಕೊಡುತ್ತಾಳೆ. ನಾನು ಅದಕ್ಕೆ ನಮಿಸುವೆನು. ಆ ಸರಸ್ವತಿಯೇ ನಮಗೆ ವಾಕ್ಸಂಪತ್ತನ್ನು ಕರುಣಿಸಲಿ.

ರಾಘವಾಂಕನ ಹರಿಶ್ಚಂದ್ರ ಕಾವ್ಯದಿಂದ ಒಂದು ಪದ್ಯವನ್ನು ನೋಡಬಹುದು.

            ಶ್ರೀಪತಿಗೆ ಸೊಬಗನುಡುಪತಿಗೆ ಶಾಂತಿಯನು ವಾ
            ಣೀಪತಿಗೆ ಚಾತುರ್ಯಮಂ ದಿವಸ್ಪತಿಗೆ ಪ್ರ
            ತಾಪಮಂ ಸುರಪತಿಗೆ ಭೋಗಮಂ ರತಿಪತಿಗೆ ಮೂಲೋಕವಾವರಿಸುವ
            ರೂಪಂ ಸರಸ್ವತಿಗೆ ಗಂಭೀರತೆಯನು ಸ್ವಾ
            ಹಾಪತಿಗೆ ತೇಜಮಂ ಕೊಟ್ಟ ಗುರುಮೂರ್ತಿ ಪಂ
            ಪಾಪತಿ ವಿರೂಪಾಕ್ಷನೆಮಗಿಷ್ಟ ಸಿದ್ಧಿಯಂ ಮಾಳ್ಕೆ ಸಂತೋಷದಿಂದಂ ||

ಈ ಪದ್ಯಗಳು ಸುಪ್ರಭಾತಕ್ಕೆ ನೇರವಾಗಿ ಸಂಬಂಧಿಸಿದ ಪದ್ಯಗಳು ಅಲ್ಲ. ಆದರೆ ಇಂಥ ಪದ್ಯಗಳನ್ನು ಸುಪ್ರಭಾತಕ್ಕಾಗಿ ಹಾಡುವುದು ಸಾಮಾನ್ಯವಾಗಿದೆ. ನಮ್ಮ ಅಭಿರುಚಿ, ಮನಶ್ಯಾಂತಿ ಹಾಗೂ ಸಮಾಧಾನಕ್ಕಾಗಿ ಹೀಗೆ ಸ್ತುತಿಸುವುದು, ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. ಮಾನವ ತನ್ನ ಸಂತಸದ ದಿನಗಳಲ್ಲಿ ದೇವನನ್ನು ಆನಂದದಿಂದ ಸ್ತುತಿಸುವಂತೆ, ಅಸಹಾಯಕ ಸ್ಥಿತಿಯಲ್ಲೂ ತನ್ನ ಮನಃಸ್ತಿಮಿತಕ್ಕೆ, ನೆಮ್ಮದಿಗೆ ಭಗವಂತನನ್ನು ಬೇಡುವುದು. ಭಜಿಸುವುದು ಅನಿವಾರ್ಯವಾಗುತ್ತದೆ.

ಇಂದು ತಮ್ಮ ತಮ್ಮ ಇಷ್ಟದೈವಗಳನ್ನು ಕುರಿತಾದ ಸುಪ್ರಭಾತಗಳು ಎಲ್ಲ ಕಡೆಯಲ್ಲಿಯೂ ಕೇಳಿಬರುವುದು ಸಂತಸದ ಸಂಗತಿ. ಸರ್ವಧರ್ಮ ಸಮನ್ವಯದ ದೇಶವಾದ ನಮ್ಮ ಭರತ ಖಂಡದಲ್ಲಿ ಈ ರೀತಿಯ ‘ಸುಪ್ರಭಾತ’ಗಳಿಗೆ ಹೆಚ್ಚಿನ ಮಹತ್ವವಿದೆ. ‘ಏಳಯ್ಯ ಏಳು, ಬೆಳಗಾಯಿತು’ ಎಂದು ಉದಯ ರಾಗವನ್ನು ಹಾಡುತ್ತಾ ದೇವರನ್ನು ಎಬ್ಬಿಸುವ ವ್ಯಾಜದಲ್ಲಿ ನಮ್ಮಲ್ಲಿ ಇರುವ ದೈವೀಶಕ್ತಿಯನ್ನು ಎಚ್ಚರಗೊಳಿಸಿಕೊಳ್ಳುತ್ತೇವೆ. ಬದುಕಿಗೆ ಹೊಸ ಚೈತನ್ಯವನ್ನು ತುಂಬಿ ಕೊಳ್ಳುತ್ತೇವೆ. ಹೊಸ ಹುರುಪಿನಿಂದ ಕೆಲಸ ಮಾಡಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳುತ್ತೇವೆ. ಇಂಥ ಸುಪ್ರಭಾತಗಳು ಕೇಳುವವರ ಕಿವಿಗೆ ಇಂಪನ್ನೂ ಹೃದಯಕ್ಕೆ ತಂಪನ್ನೂ ನೀಡಿ ಬಾಳನ್ನು ಹಸನುಗೊಳಿಸುತ್ತವೆ.