‘ಬೊಂಬಾಳ’ ಮುವ್ವತ್ತೆರಡು ಪ್ರಬಂಧಗಳ ಸಂಕಲನ; ಸಂಶೋಧನೆ, ವಿಚಾರ, ವಿಮರ್ಶೆ, ಸಂಕೀರ್ಣ-ಎಂಬ ನಾಲ್ಕು ತೆನೆಗಳ ಗೊಂಚಲು, ೧೯೬೫ ರಿಂದ ೨೦೦೫ರವರೆಗಿನ ನಲವತ್ತು ವರುಷಗಳ ಕಾಲಾವಧಿಯ ವೈವಿಧ್ಯಮಯ ಗಂಭೀರ ಬರಹಗಳು ಇಲ್ಲಿ ಒಟ್ಟುಗೂಡಿವೆ. ಈ ಸುದೀರ್ಘ ಹರಹಿನ ಬರಹಗಳ ಪ್ರಸ್ತುತತೆಯನ್ನು ನಾನೇ ಪ್ರಶ್ನಿಸಿಕೊಂಡಿದ್ದೇನೆ. ಈ ಬರಹಗಳನ್ನು ಓದುತ್ತಾ ಹೋದ ಹಾಗೆ ಸಂಶೋಧನೆಯ ಹೊಳಹುಗಳು, ವೈಚಾರಿಕ ನಿಲುವುಗಳು, ವಿಮರ್ಶೆಯ ಮಾನದಂಡ, ಸಂಕೀರ್ಣತೆಯಲ್ಲಿನ ಆಪತ್ತೆ-ನವನವೀನವಾಗಿ ಕಂಡವು. ಇಲ್ಲಿನ ಚಿಂತನೆಗಳಿಗೆ, ಅಭಿವ್ಯಕ್ತಿಗೆ ಇಂದು ಹೆಚ್ಚಿನ ಮಹತ್ವವಿರುವುದು ಮನವರಿಕೆ ಆಯಿತು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಕಾಡುತ್ತಿರುವ ನಾಡು – ನುಡಿಯ ಸಮಸ್ಯೆಗಳು ಇನ್ನೂ ಉಲ್ಬಣಗೊಂಡಿವೆಯೇ ಹೊರತು ನಿವಾರಣೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿಯ ಬರಹಗಳು ಹೆಚ್ಚು ಪ್ರಸ್ತುತವಾಗಿವೆ. ಈ ಅಭಿಪ್ರಾಯದಿಂದಲೇ ‘ಬೊಂಬಾಳ’ – ಸಂಕಲನಗೊಂಡಿದೆ.

೧೯೭೦ರ ಅಧ್ಯಕ್ಷ ಭಾಷಣದಲ್ಲಿ ನಾನು ಕರೆಕೊಟ್ಟಿದ್ದ ನಾಡು-ನುಡಿ ಪರವಾದ ಅನೇಕ ಅಂಶಗಳಲ್ಲಿ ಕೆಲವು ಈಡೇರಿರುವುದು ನನಗೆ ಸಂತಸ ತಂದಿದೆ. ನನ್ನ ಆ ಭಾಷಣದ ವೇಳೆಗೆ, ಕರ್ನಾಟಕ ಏಕೀಕರಣವಾಗಿ ೧೪ ವರುಷಗಳಾಗಿದ್ದರೂ, ‘ಕರ್ನಾಟಕ’ ಎಂದು ನಾಮಕರಣ ಆಗಿರಲಿಲ್ಲ. ಅದು ಆಗಲೇಬೇಕೆಂದು ಹೋರಾಟ ಮಾಡಿದವರಲ್ಲಿ ನನ್ನ ಕೂಗೂ ಕೇಳಿಬರುತ್ತಿತ್ತು. ‘ಕರ್ನಾಟಕ’ – ಎಂಬ ಹೆಸರು ಅಧಿಕೃತವಾದದ್ದು ಒಂದು ಬಯಕೆ, ಪ್ರಯತ್ನ ಸಫಲವಾದಂತಾಯಿತು. ಆದರೆ ‘ಕನ್ನಡ’ಆಡಳಿತ ಭಾಷೆಯಾಗಬೇಕೆಂಬ ತೀವ್ರತರ ಹೋರಾಟ ಮತ್ತು ಬೇಡಿಕೆಯಲ್ಲಿ ನನ್ನ ದನಿಯೂ ಎತ್ತರದಲ್ಲಿ ಇದ್ದೇ ಇತ್ತು. ಈ ಒತ್ತಾಯಕ್ಕೂ ಜಯ ದೊರೆಯಿತು. ಆದರೆ ಇಂದಿಗೂ ಕನ್ನಡದ ಅನುಷ್ಠಾನ, ಆಡಳಿತಾಂಗದಲ್ಲಿ ಸಂಪೂರ್ಣವಾಗಿ ಈಡೇರಿಲ್ಲವೆಂಬುದು ವಿಪರ್ಯಾಸವೆನಿಸಿದೆ.

ಮೂರನೆಯದಾಗಿ ಮಂತ್ರಿ ಮಹೋದಯ ರಾಜಕಾರಣಿಗಳಿಗೆ ಅಂದಿನ ದಿನಗಳಲ್ಲಿ ಇಂಗ್ಲೀಷಿನಲ್ಲಿ ಮಾತನಾಡುವ ಕೆಟ್ಟ ಚಟ ಇತ್ತು. ಅದನ್ನು ನಿಲ್ಲಿಸುವ ಹೋರಾಟವೊಂದು ಮುಂದುವರಿಯಿತು. ಅನಗತ್ಯ ಇಂಗ್ಲೀಷ್ ಬಳಕೆಯ ವಿರುದ್ಧದ ನಮ್ಮ ಕೂಗಿಗೆ ಬಹುಮಟ್ಟಿಗೆ ಮನ್ನಣೆ ಈಗ ಸಿಕ್ಕಿದೆ.

ಈ ಮೂರು ವಿಷಯಗಳಲ್ಲಿ ಸುಧಾರಣೆ ಆಗಿದ್ದರೂ ಉಳಿದ ಅನೇಕ ಸಂಗತಿಗಳು ಪರಿಹಾರ ಕಂಡಿಲ್ಲ. ಜೊತೆಗೆ ಹೊಸ ಸಮಸ್ಯೆಗಳು ಸೇರಿವೆ, ಹಿಂದಿನವು ಉಲ್ಬಣಿಸಿವೆ. ಕನ್ನಡ ನಾಡಿನ ಸಂಕಟಗಳ ಜೊತೆಗೆ ದೇಶದ ಆತಂಕಗಳೂ ಕೈ ಜೋಡಿಸುತ್ತ ಕನ್ನಡಿಗರ ಸತ್ವ ಪರೀಕ್ಷೆಗೆ ತೊಡಗಿವೆ. ನೀರಿನ ಸಮಸ್ಯೆ, ಗಡಿಯ ಪ್ರಶ್ನೆ, ಉದ್ಯೋಗ ಸಮಸ್ಯೆ, ಭಾಷಾ ಸಮಸ್ಯೆ – ಹೀಗೆ ಸಮಸ್ಯೆಗಳ ಸರಮಾಲೆ. ಒಂದು ತೊಂದರೆ ನಿವಾರಣೆಗೊಳ್ಳುತ್ತಿರುವಾಗ ಬೇರೆ ಮೂರು ಆತಂಕಗಳು ಧುತ್ತೆಂದು ಮುಂದೆ ನಿಲ್ಲುತ್ತವೆ. ಹೀಗಾಗಿ ಕನ್ನಡಿಗರ ಹೋರಾಟಕ್ಕೆ ನಿಲುಗಡೆ ಇಲ್ಲ, ಅದು ನಿರಂತರ.

ಈ ಸಂಕಲನದ ಪ್ರಬಂಧಗಳನ್ನು ಬರೆದ ಕಾಲ, ಸಂದರ್ಭವನ್ನು ಅನುಬಂಧದಲ್ಲಿ ತಿಳಿಸಿದೆ.

ಶರತ್ ಚಂದ್ರರ ಸಾಹಿತ್ಯ ಕುರಿತ ಎರಡು ಲೇಖನಗಳು ಆ ಮಹಾನ್ ಸಾಹಿತಿಯ ಜನ್ಮ ಶತಮಾನೋತ್ಸವ ಸಂದರ್ಭಕ್ಕೆ (೧೯೭೭) ರಚಿತವಾದವು.

ದಲಿತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಆರು ಲೇಖನಗಳಿವೆ. ಅವೆಲ್ಲವರೂ ಬೇರೆ ಬೇರೆ ಸಾಹಿತ್ಯ ಸಮ್ಮೇಳನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಪ್ರತ್ಯೇಕ ವೇದಿಕೆಗಳಲ್ಲಿ ಮಂಡಿಸಿದ ಪ್ರಬಂಧಗಳು. ಅವುಗಳ ಆಶಯ, ಆಯಾಮ ವಿಭಿನ್ನವಾಗಿವೆ.

‘ಕವಿ-ಕೃತಿ-ವೈಶಿಷ್ಟ್ಯ’ ಪ್ರಬಂಧ ಗುಲ್ಬಾರ್ಗದಲ್ಲಿ ೧೯೮೭ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಗೋಷ್ಠಿಯ ಅಧ್ಯಕ್ಷ ಭಾಷಣ, ‘ವಿದ್ವತ್ ಪ್ರಭೆಯ ಪ್ರೊ.ಎಸ್. ಪದ್ಮನಾಭ್ ಜೈನಿ’ ಪ್ರಜಾವಾಣಿ ಪತ್ರಿಕೆಗೆ ಬರೆದ ಲೇಖನ.

‘ಬೊಂಬಾಳ’ದಲ್ಲಿ ಸಂಕಲನಗೊಂಡಿರುವ ಎಲ್ಲ ಲೇಖನ ಹಾಗೂ ಪ್ರಬಂಧಗಳು, ಸಾಹಿತ್ಯ ಸಮ್ಮೇಳನಗಳಲ್ಲಿ ಅಥವಾ ವಿಚಾರ ಸಂಕಿರಣಗಳಲ್ಲಿ ಅಥವಾ ವಿಶೇಷ ಉಪನ್ಯಾಸವಾಗಿ ಮಂಡಿತವಾದವು. ‘ನೆನಪಿನಲ್ಲಿ ನಿಂತ ಕೃತಿಗಳು’ ವಿಭಾಗದ ಲೇಖನಗಳಲ್ಲಿ ಡಾ. ಕಂಬಾರರ ಕೃತಿಯನ್ನು ಹೊರತು ಪಡಿಸಿದರೆ ಉಳಿದ ಕೃತಿಗಳ ಪರಿಚಯ ನೂರರ ಸಂಭ್ರಮ ದಾಟಿದ ಸಾಹಿತಿಗಳದು. ವೀ. ಸಿ. ಗೊರೂರು, ಸಿದ್ಧವನಳ್ಳಿ ಕೃಷ್ಣಶರ್ಮ, ರಂ.ಶ್ರೀ. ಮುಗಳಿ ಅವರಿಗೆ ಗೌರವದ ನೂರರ ನಮನಕ್ಕಾಗಿ ಇಲ್ಲಿ ಸೇರಿಸಲಾಗಿದೆ. ಇವು ಸಹ ಬಹಳ ವರುಷಗಳ ಹಿಂದಿನ ಬರಹಗಳು.

ಬೊಂಬಾಳ, ಬಂಬಾಳ, ಬೊಂಬಾಳ ದೀವಿಗೆ ಇವು ಕಾವ್ಯಗಳ ಪ್ರಯೋಗಗಳಲ್ಲಿ ನನ್ನ ಗಮನ ಸೆಳೆದ ಪದಗಳು. ‘ಬೊಂಬಾಳ ದೀವಿಗೆ’ ಚಾಚಿದ ಬೊಗಸೆಯನ್ನುಳ್ಳ ಬೊಂಬೆಗಳನ್ನು ಅಳವಡಿಸಿರುವ ದೀಪದ ಕಂಬ ಎನ್ನುವ ಅರ್ಥ ವಿವರಣೆ ಇದೆ. ಕಾವ್ಯ ಪ್ರಯೋಗಗಳಲ್ಲಿ ಕೆಲವನ್ನು ಇಲ್ಲಿ ನೋಡಬಹುದು.

೧. ಕುಮಾರ ವ್ಯಾಸ; (ದ್ರೋಣಪರ್ವ) ಬೆಳಗಿದವು ಬೊಂಬಾಳ ದೀವಿಗೆ.
೨. ನಂಜುಂಡಕವಿ : ಕುಮಾರರಾಮ ಸಾಂಗ್ಯ : ಬಂಬಾಳ ದೀವಿಗೆ ಬೆಳಗಿತು ಬಾಲಾರ್ಕ ಬಿಂಬಗಳೆನೆ….
೩. ಲಕ್ಷ್ಮೀಶ : ಜೈಮಿನಿ ಭಾರತ : ಚಂದನದ ತೈಲದಿಂದುರಿವ… ಬೊಂಬಾಳಂಗಳಿಂದೆ ಇರುಳ್ ಕಂಗೊಳಿಸುತಿರೆ.

ಈ ಪ್ರಯೋಗಗಳು ಹಾಗೂ ಅರ್ಥವಿವರಣೆ ಈ ಸಂಕಲನಕ್ಕೆ ‘ಬೊಂಬಾಳ’ – ಹೆಸರಿಡಲು ಪ್ರೇರೇಪಿಸಿತು.

ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಅದರ ಪ್ರಾರಂಭದ ದಿನದಿಂದಲೂ ಇಲ್ಲಿಯವರೆಗೆ ನನ್ನ ಬಗೆಗೆ ಪ್ರೀತಿ, ವಿಶ್ವಾಸ, ಗೌರವವನ್ನು ತೋರುತ್ತಾ ಬಂದಿದೆ. ಈಗ ಸುವರ್ಣ ಕರ್ನಾಟಕದ ಸಂಭ್ರಮದ ಸಂದರ್ಭಕ್ಕೆ ನೆನಪಿನಲ್ಲಿ ಉಳಿಯುವ ಕೃತಿಗಳನ್ನು ಪ್ರಕಟಿಸುವ ಸುವರ್ಣ ಯೋಜನೆಯಲ್ಲಿ ನನ್ನದೊಂದು ಕೃತಿಯನ್ನು ಆತ್ಮೀಯತೆಯಿಂದ ಆಹ್ವಾನಿಸಿ ಪ್ರಕಟಿಸುತ್ತಿದೆ. ವಿಶ್ವವಿದ್ಯಾಲಯದ ಕುಲಪತಿಗಳೂ ಜಾನಪದ ತಜ್ಞರೂ, ವಿದ್ವಾಂಸರೂ ಆದ ಡಾ. ವಿವೇಕ ರೈ ಅವರಿಗೂ, ಪ್ರಸಾರಾಂಗದ ನಿರ್ದೇಶಕರಾದ ವಿದ್ವತ್ತು ಹಾಗೂ ಸೌಜನ್ಯಕ್ಕೆ ಹೆಸರಾದ ಪ್ರೊ. ಮಲ್ಲೇಪುರಂ ವೆಂಕಟೇಶ್ ಅವರಿಗೂ, ಕುಲಸಚಿವರಿಗೂ ಕೃತಜ್ಞತಾ ಪೂರ್ವಕ ವಂದನೆಗಳು.

೨೯.೦೯.೨೦೦೬
ಕಮಲಾಹಂಪನಾ