ಈ ಯುಗದ ಸಂತಶ್ರೇಷ್ಠರಾದ ಶ್ರೀ ರಾಮಕೃಷ್ಣ ಪರಮಹಂಸರು ಪ್ರಾಸಂಗಿಕವಾಗಿ ಹೇಳಿದ ದೃಷ್ಟಾಂತವೊಂದು ನನ್ನ ನೆನಪಿಗೆ ಬರುತ್ತಿದೆ: ಒಂದು ದಿನ ಸಕ್ಕರೆಯ ಪರ್ವತದ ಹತ್ತಿರಕ್ಕೆ ಒಂದು ಇರುವೆ ಬಂದಿತಂತೆ. ಒಂದು ಚೂರು ಸಕ್ಕರೆಯನ್ನು ಅದು ಬಾಯಲ್ಲಿ ಕಚ್ಚಿಕೊಂಡು ತನ್ನ ಗೂಡಿನ ಕಡೆ ಹೊರಟಿತು. ಹಾಗೆ ಹೋಗುವಾಗ  ಅದು ಯೋಚಿಸಿತಂತೆ, ಮತ್ತೆ ಒಂದು ಸಲ ಇಲ್ಲಿಗೆ ಬಂದಾಗ ನಾನು ಇಡೀ ಸಕ್ಕರೆಯ ಬೆಟ್ಟವನ್ನೇ ನನ್ನ ಗೂಡಿಗೆ ಸಾಗಿಸಿ ಬಿಡುತ್ತೇನೆ, ಎಂದು! ಬಹುಶಃ ನಮ್ಮಲ್ಲಿ ಅನೇಕರು ಬದುಕನ್ನು ಕುರಿತು ಎಷ್ಟೋ ವೇಳೆ ಹೀಗೆಯೆ ಯೋಚನೆ ಮಾಡುತ್ತೇವೆ ಎಂದು ತೋರುತ್ತದೆ. ಬದುಕನ್ನು ಎಲ್ಲೋ ಒಂದು ಚೂರು ಅರ್ಥ ಮಾಡಿಕೊಂಡು, ನಾವು ಇಡೀ ಬದುಕನ್ನೇ ಅರ್ಥಮಾಡಿಕೊಂಡಿದ್ದೇವೆ ಅಥವಾ ಅರ್ಥ ಮಾಡಿಕೊಳ್ಳುತ್ತೇವೆ ಎಂದು ಭ್ರಮಿಸುತ್ತೇವೆ. ಆದರೆ ನಮಗೆ ಗೊತ್ತಿಲ್ಲ, ಈ ಬದುಕು ಎಷ್ಟು ಅಗಾಧವಾದದ್ದು, ಅಗ್ರಾಹ್ಯವಾದದ್ದು-ಎಂಬ ಸಂಗತಿ.

ನಮ್ಮ ಹುಟ್ಟು ಕೇವಲ ಒಂದು ಆಕಸ್ಮಿಕ ಎಂದೇ ನನ್ನ ತಿಳುವಳಿಕೆ. ನಾನು ಹುಟ್ಟಿ ಬಂದ ಈ ಜಗತ್ತಿನಲ್ಲಿ ನಾನೊಬ್ಬನೇ ಇಲ್ಲ;  ನನ್ನಂತೆಯೇ ಸಹಜೀವಿಗಳಾದ ಮನುಷ್ಯರಿದ್ದಾರೆ. ನನಗೆ ಆಪ್ತರಾದ ತಂದೆ-ತಾಯಿ-ಹೆಂಡತಿ-ಮಕ್ಕಳು-ಬಂಧು ಬಳಗದವರಿದ್ದಾರೆ. ಇದರಾಚೆಯ ಸಮಾಜದಲ್ಲಿ ಹಾಗೂ ವಿವಿಧ ದೇಶಗಳಲ್ಲಿ, ವಿವಿಧ ವರ್ಣದ, ವಿವಿಧ ಭಾಷೆಯ, ವಿವಿಧ ನಡವಳಿಕೆಯ, ವಿವಿಧ ನಾಗರಿಕತೆಗಳ ವಿಸ್ತಾರವಾದ ಮನುಷ್ಯ ಸಮುದಾಯವಿದೆ. ಮರ, ಗಿಡ, ಗುಡ್ಡ, ಬೆಟ್ಟ, ಹೊಳೆ, ಕಡಲುಗಳಿವೆ. ಆಕಾಶ. ಸೂರ್ಯ, ಚಂದ್ರ, ಗ್ರಹ ತಾರೆಗಳಿವೆ; ಪಶುಪಕ್ಷಿ ಪ್ರಾಣಿಗಳಿವೆ. ಈ ಒಂದು ಲೋಕ ಸಂಸಾರದಲ್ಲಿ ನಾನೂ ಒಬ್ಬ. ಈ ಇಂಥ ಬದುಕಿನ ಮಧ್ಯೆ. ನಾನು ಹುಟ್ಟಿ ಏನಾಗಬೇಕು ಎನ್ನುವುದು ಮೊದಲೇ ಪೂರ್ವ ನಿಶ್ಚಿತವಾಗಿದೆಯೋ, ಹಾಗಿದ್ದರೆ ಅದನ್ನು ನಿರ್ಧರಿಸಿದವರು ಯಾರು? ಮತ್ತು ಈ ನಾನು ಏನಾಗಿದ್ದೇನೆಯೋ, ಮುಂದೆ ನಾನೇನಾಗಬೇಕೊ ಹಾಗಿದ್ದರೆ ಅದನ್ನು ನಿರ್ಧರಿಸಿದವರು ಯಾರು? ಮತ್ತು ಈ ನಾನು ಏನಾಗಿದ್ದೇನೆಯೋ, ಇದರಾಚೆಗಿನ ನಾಳೆಗಳಲ್ಲಿ ನಾನು ಏನಾಗುತ್ತೇನೆಯೋ, ಏನಾಗಬೇಕೋ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದರಲ್ಲಿ ನನಗೆ ಅಂತಹ ಆಸಕ್ತಿಯಿಲ್ಲ. ಅದರ ಬದಲು, ನಾನು ಕೇವಲ ಆಕಸ್ಮಿಕವೆಂಬಂತೆ ಯಾವ ಒಂದು ಬದುಕಿನ ನಡುವೆ ಹುಟ್ಟಿದ್ದೇನೆಯೋ ಅದರ ಜತೆ ಬೆರೆಯುವುದು, ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ತೀರಾ ಮುಖ್ಯವೆಂದು ನಾನು ತಿಳಿಯುತ್ತೇನೆ. ಈ ವೈವಿಧ್ಯಮಯವಾದ ಬದುಕಿನ ಒಂದು ಭಾಗವಾದ ನಾನು, ನನಗೆ ದಕ್ಕಿದ, ಅಥವಾ ಬದುಕು ನೀಡಿದ ಅನುಭವಗಳಿಂದ, ನಾನು ಪಡೆದದ್ದು, ಪಡೆಯಲಾಶಿಸಿದ್ದು, ಪಡೆಯದೆ ಹೋದದ್ದು ಈ ಎಲ್ಲವೂ ನನ್ನನ್ನು ರೂಪಿಸಿವೆ. ಬದುಕು ಎಂದರೆ ನಾನು ಕಂಡದ್ದಷ್ಟೆ ಅದರಾಚೆಗೆ ಬೇರೇನೂ ಇಲ್ಲ ಎಂದು ನಾನು ತಿಳಿದಿಲ್ಲ. ನಾನು ಕಾಣದ್ದು ಎಷ್ಟೋ ಇದೆ. ಆದರೆ ಅದು ನನಗೆ ತಿಳಿದಿಲ್ಲ. ಮನುಷ್ಯನ ಅನೇಕ ಶತಮಾನಗಳ ಅನ್ವೇಷಣೆ, ತಾನು ತಿಳಿದುಕೊಂಡಿದ್ದರಿಂದ, ತಾನು ತಿಳಿಯದಿದ್ದುದರ ಕಡೆ ನಡೆದ  ಪಯಣವಾಗಿದೆ.  ಆಧುನಿಕ ವಿಜ್ಞಾನ ಕೂಡ ತನ್ನ ಅಪೂರ್ವವಾದ ಸಾಹಸಾ- ನ್ವೇಷಣೆಯಲ್ಲಿ ಇನ್ನೂ ಮೊದಲ ಹೆಜ್ಜೆಗಳನ್ನಿಟ್ಟು ಈ ಮಹಾವಿಶ್ವರಹಸ್ಯದ ಹೊಸ್ತಿಲ ಹೊರಗೇ ಮೂಕ ವಿಸ್ಮಯದಲ್ಲಿ ನಿಂತುಕೊಂಡಿದೆ.

ನಾನೂ ನನ್ನ ಬಾಲ್ಯದ ಬದುಕಿನ ಹೊಸ್ತಿಲಿನಲ್ಲಿ ನಿಂತು ಈ ಜಗತ್ತನ್ನು ಗ್ರಹಿಸತೊಡಗಿದ್ದು ವಿಸ್ಮಯದ ಮೂಲಕವೇ. ಈ ವಿಸ್ಮಯ ಹುಟ್ಟಿನೊಡನೆಯೇ ಬಂದು ತೆರೆದ ಕಣ್ಣು: ಹಳ್ಳಿ ಮನೆಯ ನಾಡಹೆಂಚಿನ ಸಂದುಗಳಿಂದ ತೂರಿ ಬಂದು ಮನೆಯೊಳಗಣ ಮಬ್ಬುಗತ್ತಲನ್ನು ಕಳೆದ ಬಿಸಿಲಕೋಲುಗಳು; ಆ ಬಿಸಿಲಕೋಲಿನ ತುಂಬ ತೇಲುವ ಅಸಂಖ್ಯ ಧೂಳಿನ ಕಣಗಳು; ಮನೆಯ ಎದುರಿಗೇ ಥಳಥಳಿಸಿ ಹೊಳೆಯುವ ಕೆರೆ; ಆಗಲೋ ಈಗಲೋ ಹಾರಿ ಹೋಗಲೆಂದೇ ಗರಿ ಬಿಚ್ಚಿಕೊಂಡಿರುವ ತೆಂಗಿನ ಮರಗಳು; ಗದ್ದೆಯೊಳಗೆ ಮಡುಗಟ್ಟಿ ನಿಂತ ಹಸಿರು; ತಂಗಾಳಿಗೆ ತಲೆದೂಗುವ ತೆನೆ ತುಂಬಿದ ವಿಸ್ತಾರವಾದ ಹೊಲದ ಪೈರು; ಹಚ್ಚ ಹಸುರಿನ ಗಿಡದಲ್ಲಿ ಥಟ್ಟನೆ ದಳ ತೆರೆದ ಬೆಳ್ಳನೆಯ ಹೂವು; ಹೆಸರರಿಯದ ಬಹುವರ್ಣದ ಹಕ್ಕಿಗಳ ಹಿಂಡು; ಅವು ಮೇಲೇರಿದಂತೆ, ಅನಂತವಾದ ನೀಲಿಯ ಗಗನ; ಹಿಂಡುಹಿಂಡಾಗಿ ಬಗೆ ಬಗೆ ರೂಪ ತಾಳುತ್ತ ಹರಹಿಕೊಂಡ ಮೋಡಗಳು;  ಗುಡುಗು-ಮಿಂಚಿನ ಅಬ್ಬರಗಳಲ್ಲಿ ಆಕಾಶದಿಂದ ಸುರಿಯುವ ಮಳೆ; ಕ್ಷೀರಧಾರೆಯ ಕರೆಯುವ ಸಾಂದ್ರ ಚಂದ್ರಿಕೆಯ ವಾತ್ಸಲ್ಯದ ತಂಪು-ಇತ್ಯಾದಿಗಳು ವಿಸ್ಮಯದ ಮೂಲಕ ನನ್ನ ನೆನಪಿನ ಉಗ್ರಾಣದ ತುಂಬ ತುಂಬಿಕೊಂಡ ಅನುಭವಗಳಾಗಿವೆ. ಎಳೆಯಂದಿನ ವಿಸ್ಮಯದ ಲೋಕದಲ್ಲಿ ನನ್ನನ್ನು ಬಹುವಾಗಿ ಆಕರ್ಷಿಸಿದ ಎರಡು ವಸ್ತುಗಳೆಂದರೆ, ಕುಂಬಾರನ ಚಕ್ರ, ಮತ್ತು ನೇಕಾರರ ಮನೆಯ ಮಗ್ಗ. ನಮ್ಮ ಮನೆಯ ಬದಿಗೆ ಕುಂಬಾರ ಕೇರಿಯಿತ್ತು. ಕುಂಬಾರನ ಚಕ್ರ ಗರಗರನೆ ತಿರುಗುವಾಗ, ಅದರ ಮಧ್ಯದೊಳಗಿನ ಮಣ್ಣು ಕುಂಬಾರನ ಕೈಚಳಕದಿಂದ ಬೇರೆ ಬೇರೆ ಆಕಾರದ ಮಡಕೆ ಕುಡಿಕೆಗಳಾಗಿ ಮೂರ್ತಗೊಳ್ಳುವ ರೀತಿ ನನ್ನನ್ನು ಗಂಟೆಗಟ್ಟಲೆ ಹಿಡಿದು ನಿಲ್ಲಿಸುವ ಸೋಜಿಗವಾಗಿತ್ತು. ಹಾಗೆಯೇ ನೇಕಾರರ ಮನೆಯ ಮಗ್ಗದಲ್ಲಿ ಉದ್ದಕ್ಕೆ ಹಾಸಿಕೊಂಡ ನೂಲು, ಒಂದು ಛಂದೋಬದ್ಧತೆಯಲ್ಲಿ ಲಾಳಿಯಾಡಿದಂತೆ, ಸೊಗಸಾದ ಬಣ್ಣದ ಸೀರೆಯಾಗಿ ಪರಿವರ್ತನೆಗೊಳ್ಳುವ ಘಟನೆಯೂ ನನಗೊಂದು ಪವಾಡದಂತೆಯೇ ತೋರುತ್ತಿತ್ತು. ಈ ಎರಡೂ ಘಟನೆಗಳೂ ಕವಿತೆ ಹುಟ್ಟುವ ರಹಸ್ಯವನ್ನು ನನಗೆ ತಿಳಿಸಿಕೊಟ್ಟಿವೆ. ಈ ಎಳೆಯಂದಿನಲ್ಲಿ ಅದು ಹೇಗೋ ತೆರೆದುಕೊಂಡ ನನ್ನ ವಿಸ್ಮಯ ಇಂದಿಗೂ ನನ್ನ ನಿರಂತರ ಸಂಗಾತಿಯಾಗಿ, ಈ ಬದುಕಿನೊಂದಿಗೆ ನಾನು ಸಂವಾದವನ್ನು ಮುಂದುವರಿಸಿಕೊಂಡು ಬರಲು ನೆರವಾಗಿದೆ. ಬದುಕಿನಲ್ಲಿ ವಿಸ್ಮಯವನ್ನು ಉದ್ದಕ್ಕೂ ಉಳಿಸಿಕೊಳ್ಳುವುದಿದೆಯಲ್ಲ ಅದು ಬಹಳ ಮುಖ್ಯವಾದದ್ದು ಎಂದು ನನ್ನ ತಿಳಿವಳಿಕೆ.

ಬದುಕು ಎಂದರೆ ಕೇವಲ ನಮ್ಮ ಸಹಜೀವಿಗಳಾದ ಮನುಷ್ಯರ ಜತೆಯ ಸಂಬಂಧವಷ್ಟೆ ಎಂದು ನಾನು ತಿಳಿದಿಲ್ಲ. ನಮ್ಮ ಬದುಕಿನ ಬೇರೊಂದು ಅಭಿವ್ಯಕ್ತಿಯಂತಿರುವ ನಿಸರ್ಗವನ್ನು ಕುರಿತ ಪ್ರೀತಿಯೂ ಇದರಲ್ಲಿ ಸೇರುತ್ತದೆ. ಒಂದು ಗಿಡವನ್ನು, ಮರವನ್ನು, ಹೂವನ್ನು, ಹಕ್ಕಿಯನ್ನು, ಬೆಟ್ಟವನ್ನು, ಹೊಳೆಯನ್ನು, ಮಳೆಯನ್ನು, ಬೆಳೆಯನ್ನು ಪ್ರೀತಿಸಲಾರದವನು ಮನುಷ್ಯರನ್ನು ಪ್ರೀತಿಸಲಾರ. ನಿಸರ್ಗ ಪ್ರೀತಿ ವಾಸ್ತವವಾಗಿ ಜೀವನಪ್ರೀತಿಯ ಒಂದು ವಿಸ್ತರಣೆಯೇ. ನಿಸರ್ಗದ ಭವ್ಯಾದ್ಭುತ ಅಭಿವ್ಯಕ್ತಿಗಳ ಎದುರು ನಾವೆಷ್ಟು ಸಣ್ಣವರು ಎಂಬ ಅರಿವೂ ಈ ಮನುಷ್ಯನ ಅಹಂಕಾರ ಭಂಗಕ್ಕೆ ಅಗತ್ಯವಾದುದು. ನಮ್ಮ ಮನೆಯ ಪ್ರಾಕಾರದಲ್ಲಿ ಒಂದೆರಡು ತೆಂಗಿನ ಮರಗಳಿವೆ. ಎಲ್ಲ ಮರಗಳಿಗಿಂತಲೂ, ತನ್ನದೇ ಬೇರೆ ಎಂಬ ಒಂಟಿತನವನ್ನು ಕಾಯ್ದುಕೊಂಡು, ಎತ್ತರದಲ್ಲಿ ಗರಿಗಳನ್ನು ಥಟ್ಟನೆ ಹರಹಿಕೊಂಡು, ಕಾಯಿಗಳನ್ನು ತುಂಬಿಕೊಂಡು, ಇತರ ಮರಗಳಂತೆ ಋತು ಋತುವಿಗೂ ಬದಲಾಗುವ ಹಂಗಿನಿಂದಾಚೆಗೇ ಇದ್ದುಕೊಂಡು, ಇದ್ದಕ್ಕಿದ್ದಂತೆ, ಧಡಾರನೆ ತನ್ನ ಗರಿಗಳನ್ನು ಕಳಚಿ ಎಸೆದು ನಿರ್ಲಿಪ್ತರಂತೆ ನಿಲ್ಲುವ ಇದರ ಭಂಗಿ ನನಗೆ ಕ್ರಿಸ್ತ ಬುದ್ಧರ ನೆನಪು ತರುತ್ತದೆ.

ಹಾಗೆ ನೋಡಿದರೆ, ಕಾಣದ ದೇವರಿಗಿಂತ, ಒಂದು ಕಾಲಕ್ಕೆ ನಮ್ಮ ನಿಮ್ಮಂತೆಯೆ ಬದುಕಿ ಎತ್ತರಕ್ಕೆ ಏರಿದ ಕ್ರಿಸ್ತ, ಬುದ್ಧ, ಬಸವ, ರಾಮಕೃಷ್ಣ- ವಿವೇಕಾನಂದ, ಗಾಂಧಿ ಇಂಥ ಮನುಷ್ಯರೇ ನನಗೆ ಹೆಚ್ಚು ಗೌರವಾರ್ಹರೆಂದು ತೋರುತ್ತಾರೆ. ಅವರು ಈ ಬದುಕಿನ ಬಗ್ಗೆ ತೋರಿದ ಕಾಳಜಿಗಳು, ಮನುಷ್ಯರ ನೋವು-ಸಂಕಟಗಳನ್ನು ಪರಿಹಾರ ಮಾಡುವುದರಲ್ಲಿ ಅವರಿಗಿದ್ದ ಆಸಕ್ತಿ, ಅವರು ಎತ್ತಿ ಹಿಡಿದ ಮೌಲ್ಯಗಳು-ಈ ಕಾರಣದಿಂದ ಇವರೆಲ್ಲರೂ ಪೂಜ್ಯರು. ಇದರಿಂದಾಗಿ ದೇವಸ್ಥಾನಗಳು ಹಾಗೂ ತತ್ಸಂಬಂಧವಾದ ದೇವರ ಕಲ್ಪನೆಗಳು ನನ್ನನ್ನು ಆಕರ್ಷಿಸಿಲ್ಲ. ಹಾಗೆಯೇ ದೇವರ ಹಾಗೂ ಧರ್ಮದ ಹೆಸರಿನಲ್ಲಿ, ಜನಸಾಮಾನ್ಯರ ಮೌಢ್ಯವನ್ನು ಬಂಡವಾಳವನ್ನಾಗಿ ಮಾಡಿಕೊಂಡು ಬದುಕುವ ಜನವರ್ಗವನ್ನು ಕಂಡರೆ ನನಗೆ ಆಗುವುದಿಲ್ಲ.  ಹಾಗೆಯೆ ಬದುಕಿಗೆ ಇಳಿಸಲಾಗದ ದೊಡ್ಡ ದೊಡ್ಡ ಆದರ್ಶಗಳ ಬಗ್ಗೆ ಮಾತನಾಡುತ್ತಾ ದಿನದಿನದ ಸರಳ ಸಾಧಾರಣದ ಬದುಕನ್ನು ಕೆಳಗಣ್ಣಿನಿಂದ ನೋಡುವ ಮಾತನಾಡುತ್ತಾ ನಿಜವಾದ ಆರೋಗ್ಯದ ಲಕ್ಷಣ ಎಂದು ನಾನೆಂದೂ ತಿಳಿದಿಲ್ಲ. ಅದರ ಬದಲು ‘ಪ್ರೀತಿ-ಸ್ನೇಹ, ಕರುಣೆ-ಮರುಕ, ಇವೇ ನಮ್ಮ ದೇವರು.’ ಕಣ್ಣಿಗೆ ಕಾಣುವ ನಮ್ಮ ಸಹಜೀವಿಗಳ ಜತೆಗೆ ನಮಗಿರಬೇಕಾದ ಮಾನವೀಯ ಸಂಬಂಧಗಳೇ ನಮ್ಮ ಮೊದಲ ನೆಲೆ ಹಾಗೂ ಮೊದಲು ಆದರ್ಶ. ಮನುಷ್ಯನಿಗಾಗಿಯೇ, ದೇವರು-ಧರ್ಮ-ದೇವಸ್ಥಾನ ಎಲ್ಲವೂ. ಮನುಷ್ಯನನ್ನು ಮರೆತ ಅಥವಾ ಮನುಷ್ಯರ ಬದುಕನ್ನು ಬಂಡವಾಳವನ್ನಾಗಿ ಮಾಡಿಕೊಳ್ಳುವ ದೇವರು-ಧರ್ಮ-ದೇವಸ್ಥಾನಗಳು ಕೇವಲ ಅಮಾನವೀಯತೆಯ ಸಂಕೇತಗಳು.

ನನ್ನೊಳಗೆ ಬಂದು ಸೇರಿಕೊಂಡ ಬದುಕಿನ ಒಂದಷ್ಟು ಭಾಗ, ನಾನು ಪಡೆದ ಶಿಕ್ಷಣದ ಹಾಗೂ ಸಾಹಿತ್ಯ ಕೊಡುಗೆ. ಯಾಕೆಂದರೆ ಬದುಕನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ  ಸಂವೇದನೆಯ ಪರಿಣಾಮವೇ ಸಾಹಿತ್ಯ. ಓದಿನ ಮೂಲಕ ಪರಿಚಿತವಾದ ಅನ್ಯದೇಶಿಯ ಸಾಹಿತ್ಯ, ನನ್ನ ಸಮಕಾಲೀನ ಸಾಹಿತಿಗಳು ತಮಗೆ ದಕ್ಕಿದ ಬದುಕನ್ನು ಹಿಡಿದು ಶೋಧಿಸಿದ ಪರಿಣಾಮವಾದ ಸಾಹಿತ್ಯ-ಈ ಎಲ್ಲವೂ, ಬದುಕನ್ನು ಕುರಿತ ಬೇರೆ ಬೇರೆಯ ಅರಿವುಗಳನ್ನು ನನಗೆ ಪರಿಚಯ ಮಾಡಿಕೊಟ್ಟಿವೆ. ಈ ಸಾಹಿತ್ಯ ಧಾರ್ಮಿಕ ಮನುಷ್ಯನ ಕಲ್ಪನೆಯನ್ನು ಕೊಟ್ಟಿದೆ; ನೈತಿಕ ಮನುಷ್ಯನ ಕಲ್ಪನೆಯನ್ನು ಕೊಟ್ಟಿದೆ; ದೇವಮಾನವನ  ಕಲ್ಪನೆಯನ್ನು ಕಟ್ಟಿಕೊಟ್ಟಿದೆ; ಸಾಮಾಜಿಕ ಮನುಷ್ಯನ ಕಲ್ಪನೆಯನ್ನು ಕಟ್ಟಿಕೊಟ್ಟಿದೆ. ಬದುಕಿನ ವಿವಿಧ ಸಂದರ್ಭಗಳಲ್ಲಿ ಈ ಮನುಷ್ಯ ಪಟ್ಟ ಪಾಡುಗಳನ್ನು, ಏರಿದ ಎತ್ತರಗಳನ್ನು, ಬಿದ್ದ ಆಳಗಳನ್ನು, ಅವನೊಳಗಿನ ಸಂಕೀರ್ಣತೆಗಳನ್ನು, ಸಂಘರ್ಷಗಳನ್ನು, ಅಂದಂದು ಅವನು ಬದುಕನ್ನು ಗ್ರಹಿಸಿದ ಹಾಗೂ ಎದುರಿಸಿದ ಸನ್ನಿವೇಶಗಳನ್ನು ಪರಿಚಯ ಮಾಡಿಕೊಡುತ್ತ, ನನ್ನ ವರ್ತಮಾನದ ಬದುಕನ್ನು ನಾನು ಅರ್ಥ ಮಾಡಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಅಗತ್ಯವಾದ ಧೈರ್ಯವನ್ನೂ, ಶ್ರದ್ಧೆಯನ್ನೂ ನನಗೆ ತಂದುಕೊಟ್ಟಿದೆ. ಹಾಗೆಯೆ ಒಬ್ಬ ಕವಿಯಾಗಿ ನಾನು ಅರ್ಥ ಮಾಡಿಕೊಂಡ ಬದುಕು, ಕವಿತೆಯ ಮೂಲಕ ಗ್ರಹಿಸಲು ಹಾಗೂ ಅಭಿವ್ಯಕ್ತಿಸಲು ಸಾಧ್ಯವಾದ ಬದುಕು, ನನ್ನ ಜೀವನ ದೃಷ್ಟಿಯನ್ನು ತಕ್ಕಮಟ್ಟಿಗೆ ಪರಿಚಯಮಾಡಿಕೊಡುತ್ತದೆ ಎಂದು ನಾನು ಭಾವಿಸಿದ್ದೇನೆ.

ಈ ಬದುಕಿನಲ್ಲಿ ನನಗೆ ಮುಖ್ಯವಾದದ್ದು ನಾನು ನಿಂತ ನೆಲ. ಈ ನೆಲದ ಪರಂಪರೆಗೆ, ಚರಿತ್ರೆಗೆ, ವರ್ತಮಾನಕ್ಕೆ ಹಾಗೂ ನಾಳಿನ ಕನಸುಗಳಿಗೆ ನಾನು ಹಕ್ಕುದಾರನೆಂಬ ಹೆಮ್ಮೆ ನನ್ನದು. ಆದ ಕಾರಣ ಈ ಬದುಕಿನ ನೋವಿಗೆ ನಲವಿಗೆ, ಒಳಿತಿಗೆ ಕೆಡುಕಿಗೆ ನಾನು ಒಡ್ಡಿಕೊಂಡು, ಈ ಬದುಕಿನಲ್ಲಿ ತನ್ಮಯತೆಯಿಂದ ತೊಡಗಿಕೊಂಡಿದ್ದೇನೆ. ಅನೇಕ ವಿಚ್ಛಿದ್ರಕಾರಕ ಶಕ್ತಿಗಳ ನಡುವೆಯೂ, ವಿಚಲಿತವಾದ ಒಂದು ನಿಲುವಿನಲ್ಲಿ ನಿಂತು, ಬದುಕಿನಲ್ಲಿ ತೊಡಗಿಸಿಕೊಳ್ಳುವುದರಿಂದ ಮಾತ್ರ ನಾವು ಬದುಕನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬುದು ನನ್ನ ತಿಳುವಳಿಕೆಯಾಗಿದೆ. ಬೇರೊಂದು ಮಾತಿನಲ್ಲಿ ಹೇಳುವುದಾದರೆ, ನಾವು ಸೃಜನಾತ್ಮಕವಾಗಿ ಬದುಕುವುದು ಮುಖ್ಯವಾದ ಸಂಗತಿಯಾಗಿದೆ. ಸೃಜನಾತ್ಮಕವಾಗಿ ಬದುಕುವುದು ಎಂದರೆ, ನಿರಂತರವಾದ ಎಚ್ಚರದಲ್ಲಿ ಹಾಗೂ ಸ್ಪಂದಮಾನಮಾನ ಸ್ಥಿತಿಯಲ್ಲಿ ನಮ್ಮ ಮನಸ್ಸನ್ನು ನಿಲ್ಲಿಸಿಕೊಳ್ಳುವ ಒಂದು ಕೌಶಲ. ಇದು ಸಾಧ್ಯವಾಗುವುದು ಅದಮ್ಯವಾದ ಜೀವನ ಪ್ರೀತಿಯಿಂದ. ಮಹಾ ಲೇಖಕನಾದ ಟಾಲ್‌ಸ್ಟಾಯ್ ಹೇಳಿದ,  ‘To, love life is to live life’ ಎಂದು, ಈ ಮಾತು ನಿಜವಾಗುವುದು- ಈ ಒಂದು ಮನಃಸ್ಥಿತಿಯಲ್ಲಿ.

ಚದುರಿದ ಚಿಂತನೆಗಳು : ೨೦೦೦