ಈಗ ‘ಬೊಜ್ಜು’ಜಾಗತಿಕ ಆರೋಗ್ಯ ಸಮಸ್ಯೆಯಾಗುತ್ತಿದೆ. ಮಾನವನ ಆಯುಷ್ಯ ಮತ್ತು ಆರೋಗ್ಯವು ಬೊಜ್ಜನ್ನು ಅವಲಂಬಿಸಿಕೊಂಡಿರುವುದರಿಂದ ನಾವೀಗ ಬೊಜ್ಜಿನ ಬಗ್ಗೆ ಬಹಳ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ. ಇತ್ತೀಚೆಗೆ ಶಾಲಾಮಕ್ಕಳಲ್ಲೂ ಬೊಜ್ಜು ಎದ್ದುಕಾಣುವಂತೆ ಹೆಚ್ಚುತ್ತಿರುವುದು ಮತ್ತಷ್ಟು ಆತಂಕದ ಸಂಗತಿ.

ವೈಜ್ಞಾನಿಕ ಅಧ್ಯಯನಗಳಿಂದ ಇಡೀ ವಿಶ್ವದಲ್ಲಿ ಒಂದು ನೂರು-ಮಿಲಿಯಕ್ಕಿಂತ ಹೆಚ್ಚು ಜನರಿಗೆ ಬೊಜ್ಜು ಇದೆ ಎಂದು ತಿಳಿದುಬಂದಿದೆ. ಇದರಲ್ಲಿ 20ಮಿಲಿಯನ್ ಜನ ಮಕ್ಕಳೇ ಇದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಸಮೃದ್ದ ಜೀವನವಿರುವ ದೇಶಗಳಲ್ಲಿ ಸೇಕಡಾ 30ರಷ್ಟು ಮಕ್ಕಳಿಗೆ ಬೊಜ್ಜು ಇದೆ. ಅಭಿವೃದ್ದಿ ಶೀಲ ದೇಶಗಳಲ್ಲಿಯೂ ಸೇಕಡಾ 5ರಿಂದ 15ರಷ್ಟು ಮಕ್ಕಳಿಗೆ ಬೊಜ್ಜು ಇದೆ.

ಭಾರತದಲ್ಲಿ ಮಕ್ಕಳ ಬೊಜ್ಜಿನ ಬಗ್ಗೆ ಹೆಚ್ಚು ಅಧ್ಯಯನಗಳು ನಡೆದಿಲ್ಲ. ಕೆಲವು ಅಧ್ಯಯನಗಳು, ಭಾರತ ದಲ್ಲಿಯೂ ಸೇಕಡ 5ರಿಂದ 15ರಷ್ಟು ಮಕ್ಕಳಲ್ಲಿ ಕೊಬ್ಬಿನ ಸಂಖ್ಯೆ ಏರುಗತಿಯಲ್ಲಿಯೇ ಮುಂದುವರೆದಿದೆ ಎಂದು ತಿಳಿಸಿವೆ.

ಕರ್ನಾಟಕದ ಶಾಲಾ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣವೆಷ್ಟು? ಮತ್ತು ಮಕ್ಕಳ ಬೊಜ್ಜಿಗೆ ಕಾರಣವೇನೆಂದು ತಿಳಿಯಲು ಒಂದು ಅಧ್ಯಯನವನ್ನು ಮಾಡಲಾಗಿದೆ.

ಈ ಅಧ್ಯಯನಕ್ಕಾಗಿ ಕರ್ನಾಟಕದ ಮಧ್ಯಭಾಗದಲ್ಲಿ ಆರು ಲಕ್ಷ ಜನಸಂಖ್ಯೆ ಇರುವ ದಾವಣಗೆರೆ ತಾಲೂಕನ್ನು ಆಯ್ಕೆಮಾಡಿಕೊಂಡೆ. ಈ ತಾಲೂಕಿನಲ್ಲಿ 272ಮಿಡ್ಲ್‌ಸ್ಕೂಲ್‌ಗಳು ಇದ್ದು ಇದರಲ್ಲಿ 39ಸಾವಿರ ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದಾರೆ. ಸಂಖ್ಯಾಶಾಸ್ತ್ರದ ಅನ್ವಯ ಲೆಕ್ಕಾಚಾರಮಾಡಿ ಅಧ್ಯಯನಕ್ಕೆ ಬೇಕಾದಷ್ಟು ವಿದ್ಯಾರ್ಥಿಗಳನ್ನು (33ಮಿಡ್ಲ್‌ಸ್ಕೂಲ್‌ನ 6472ವಿದ್ಯಾರ್ಥಿಗಳು)ಆಯ್ಕೆ ಮಾಡಿಕೊಂಡೆ.

ಈ ಆಯ್ಕೆಯಲ್ಲಿ ಎಲ್ಲ ರೀತಿಯ ಶಾಲೆಗಳಿಗೆ (ಗ್ರಾಮೀಣ, ನಗರ, ಸರ್ಕಾರಿ, ಖಾಸಗಿ) ಮತ್ತು 5, 6 ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಂಜಸವಾದ ಪ್ರಾತಿನಿಧ್ಯ ದೊರಕುವಂತೆ ಯೋಜಿಸಲಾಗಿತ್ತು.

ಆಯ್ದುಕೊಂಡ ಶಾಲೆಗಳಿಗೆ ಭೇಟಿ ನೀಡಲಾಯಿತು. ಮಿಡ್ಲ್ ಸ್ಕೂಲ್ (5, 6, 7ನೇ ತರಗತಿ;ಇವರ ವಯಸ್ಸು ಅನುಕ್ರಮವಾಗಿ 10, 11, 12ವರ್ಷ ಇರುತ್ತದೆ).ಎಲ್ಲ ಮಕ್ಕಳ ಎತ್ತರ (ಮೀಟರ್ ನಲ್ಲಿ),ತೂಕ (ಕಿ.ಗ್ರಾಂ. ಗಳಲ್ಲಿ)ನಿಖರವಾಗಿ ಅಳೆದು ದಾಖಲಿಸಿಕೊಳ್ಳಲಾಯಿತು.  ಯುಕ್ತ ಸೂತ್ರ ಉಪಯೋಗಿಸಿ ಪ್ರತಿ ಮಗುವಿನ ಬಿ.ಎಂ.ಐ. ಕಂಡು ಹಿಡಿಯಲಾಯಿತು (ಬಿ.ಎಂ.ಐ. ಬಗ್ಗೆ ವಿವರಗಳನ್ನು ಹಿಂದಿನ ಸಂಚಿಕೆಯಲ್ಲಿ ಕೊಡಲಾಗಿದೆ). ಬಿ.ಎಂ.ಐ. ಆಧರಿಸಿ ಮಗುವಿಗೆ ಬೊಜ್ಜು ಇದೆಯೇ/ಇಲ್ಲವೇ ಎಂದು ನಿರ್ಧರಿಸಲು ಕೆಳಗಿನ ಪಟ್ಟಿಯಲ್ಲಿನ ಬಿ.ಎಂ.ಐ. ಗರಿಷ್ಠ ಸೂಚಿಯನ್ನು ಬಳಸಲಾಯಿತು. ಪಟ್ಟಿಯಲ್ಲಿರುವ ಬಿ.ಎಂ.ಐ. ಸಂಖ್ಯೆಗಿಂತ, ಹೆಚ್ಚು ಬಿ.ಎಂ.ಐ. ಇರುವವರಿಗೆ ಬೊಜ್ಜು ಇದೆ ಎಂದು ಗುರುತಿಸಲಾಯಿತು.

ಮಕ್ಕಳಲ್ಲಿ ಗರಿಷ್ಠ ಬಿ.ಎಂ.ಐ. ಸೂಚಿಸುವ ಪಟ್ಟಿ

ವಯಸ್ಸು (ವರ್ಷಗಳಲ್ಲಿ)                ಗರಿಷ್ಠ ಬಿ.ಎಂ.ಐ.
ಗಂಡು     ಹೆಣ್ಣು

10                   22       23

11                    23       24

12                    24       25

ಈ ಅಧ್ಯಯನದಲ್ಲಿ ನಾವು ಪರೀಕ್ಷಿಸಿದ 6472ಮಿಡ್ಲ್ ಸ್ಕೂಲ್ ವಿದ್ಯಾರ್ಥಿಗಳಲ್ಲಿ 421ವಿದ್ಯಾರ್ಥಿಗಳಿಗೆ ಬೊಜ್ಜು ಇರುವುದು ಖಚಿತವಾಯಿತು. ಇದರಿಂದ ಮಿಡ್ಲ್‌ಸ್ಕೂಲ್ ಮಕ್ಕಳಲ್ಲಿ ಸೇಕಡಾ 6.5 (421×100 / 6472 = 6.5)ಮಕ್ಕಳಿಗೆ ಬೊಜ್ಜು ಇದೆ ಎಂಬುದು ಸ್ಪಷ್ಟವಾಗುತ್ತದೆ. ವಿವಿಧ ಭಿನ್ನತೆಯ ಅಂಶಗಳ ಆಧಾರದ ಹಿನ್ನೆಲೆಯಲ್ಲಿಯೂ ಮಿಡ್ಲ್‌ಸ್ಕೂಲ್ ಮಕ್ಕಳ ಬೊಜ್ಜಿನ ಪ್ರಮಾಣವನ್ನು ವಿಶ್ಲೇಷಿಸಲಾಗಿದೆ.

ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ

ಬೊಜ್ಜಿನ ಪ್ರಮಾಣ (ಸೇಕಡಾವಾರು)

ವಯಸ್ಸು       ಗಂಡು           ಹೆಣ್ಣು         ಒಟ್ಟು

10          3.7              5.6                 4.5

11          5.5              6.9                 6.1

12          5.8            12.5               8.8

5.5              8.5                 6.5

ಪ್ರದೇಶ

ಗ್ರಾಮೀಣ        1.7     9.3    3.2

ನಗರ            6.5     8.4    7.4

ಶಾಲೆ

ಸರ್ಕಾರಿ         2.6     5.1    3.8

ಖಾಸಗಿ          4.5     7.9    6.7

ಮೇಲಿನ ವಿಶ್ಲೇಷಣೆಯಲ್ಲಿ ವಯಸ್ಸು ಹೆಚ್ಚಿದಂತೆ ಬೊಜ್ಜಿನ ಪ್ರಮಾಣವು ಏರುತ್ತಿರುವುದು ತಿಳಿಯುತ್ತದೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿದ್ದು, ಗ್ರಾಮೀಣ ಹೆಣ್ಣು ಹುಡುಗಿಯರಲ್ಲಿ ಬೊಜ್ಜಿನ ಪ್ರಮಾಣ (9.3%)ಅಚ್ಚರಿ ಮೂಡಿಸುವಷ್ಟು ಹೆಚ್ಚಾಗಿರುವುದು ಗಮನಾರ್ಹ ಸಂಗತಿ. ಗ್ರಾಮೀಣ ಗಂಡು ಮಕ್ಕಳಿಗಿಂತ ನಗರದ ಗಂಡು ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಆರುಪಟ್ಟು ಹೆಚ್ಚಾಗಿ ಇರುವುದು ಕಳವಳಕಾರಿಯಾದ ಸಂಗತಿ.  ಸರಕಾರಿ ಶಾಲೆಯ ಮಕ್ಕಳಿಗಿಂತ, ಖಾಸಗಿ ಶಾಲೆಯ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ದುಪ್ಪಟ್ಟು ಇರುವುದು ಇಲ್ಲಿ ಸ್ಪಷ್ಟವಾಗಿದೆ.

ಅಧ್ಯಯನದ ಎರಡನೇ ಹಂತದಲ್ಲಿ ಪ್ರತಿಯೊಂದು ಬೊಜ್ಜು ಇರುವ ಮಗುವಿಗೆ ಬೊಜ್ಜಿಲ್ಲದ ಎರಡು ಮಕ್ಕಳನ್ನು (ಹಾಜರಿ ರಿಜಿಸ್ಟರ್‌ನಲ್ಲಿ ಬೊಜ್ಜಿನ ಮಗುವಿನ ಹಿಂದಿನ 1, ಮುಂದಿನ 1ಬೊಜ್ಜು ಇಲ್ಲದ ಮಗುವನ್ನು)ಆಯ್ದುಕೊಳ್ಳಲಾಯಿತು. ಹೀಗೆ 1:2 ಪ್ರಮಾಣದಲ್ಲಿ ಬೊಜ್ಜು ಇರುವ ಹಾಗೂ ಬೊಜ್ಜು ಇರದ ಮಕ್ಕಳನ್ನು ಆಯ್ದುಕೊಂಡ ಅನಂತರ ಆಯ್ದ ಮಕ್ಕಳ ಮನೆಗೆ ಭೇಟಿ ನೀಡಿ ಕುಟುಂಬದ ಆರ್ಥಿಕ ಸಂಗತಿ, ತಂದೆ ತಾಯಿಯರ ವಿದ್ಯಾಭ್ಯಾಸ, ಮಕ್ಕಳ ಆಹಾರ ಅಭ್ಯಾಸ, ಚಟುವಟಿಕೆ, ತಂದೆ ತಾಯಿಯರ ದೇಹ ಸ್ಥೂಲತೆ, ಹಾಗೂ ಕುಟುಂಬದಲ್ಲಿ ದೇಹ ಸ್ಥೂಲತೆಯ ಆನುವಂಶಿಕ ಹಿನ್ನೆಲೆ ಇವನ್ನೆಲ್ಲಾ ಕೂಲಂಕಷವಾಗಿ ಅಧ್ಯಯನ ಮಾಡಿದಾಗ ಮಕ್ಕಳ ಬೊಜ್ಜಿಗೆ ಅನ್ವಯವಾಗುವ ಕೆಲವು ಕುತೂಹಲಕಾರಿ ವಿಷಯಗಳು ತಿಳಿದು ಬಂದವು.  ಇವುಗಳಲ್ಲಿ ಮುಖ್ಯ ಅಂಶಗಳೆಂದರೆ:

  • ಆರ್ಥಿಕ ಸ್ಥಿತಿ ಮತ್ತು ವಿದ್ಯಾಭ್ಯಾಸ ಉತ್ತಮವಾಗಿರುವ ಕುಟುಂಬದ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಕಡಿಮೆಯಾಗಿತ್ತು. ಇಂತಹ ಕುಟುಂಬದಲ್ಲಿ ಆರೋಗ್ಯ ಮತ್ತು ಆಹಾರದ ಬಗ್ಗೆ ಪ್ರಜ್ಞೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಬಹುದು. ಬಡತನದ ಕುಟುಂಬದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿರುವುದಕ್ಕೆ ಅವರು ಸೇವಿಸುತ್ತಿದ್ದ ತಪ್ಪು (ಹೆಚ್ಚು ಕೊಬ್ಬಿನ ಆಹಾರ)ಆಹಾರ ಕಾರಣ ವಾಗಿರುತ್ತದೆ.
  • ಚಾಕೊಲೇಟ್, ಬಿಸ್ಕತ್ತು, ಸಿಹಿ, ಬೇಕರಿ ಪದಾರ್ಥ, ತಂಪುಪಾನೀಯ, ಐಸ್ ಕ್ರೀಂ, ಹೋಟೆಲ್ ಆಹಾರ ಇವನ್ನು ಹೆಚ್ಚಾಗಿ ಸವಿಯುತ್ತಿರುವ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿತ್ತು.
  • ಟಿ.ವಿ. ಹಾಗೂ ಕಂಪ್ಯೂಟರ್, ವಿಡಿಯೋ ಗೇಮ್ ಮುಂದೆ ನಿತ್ಯ ಎರಡು ಗಂಟೆಗೂ ಹೆಚ್ಚುಕಾಲ ಕೂರುತ್ತಿರುವ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚಾಗಿತ್ತು. ಈ ಮಕ್ಕಳು ಚಟುವಟಿಕೆ ರಹಿತವಾಗಿ, ಟಿ.ವಿ. ಮುಂದೆ ಕೂತಿರುವಾಗ ಕುರುಕಲು ತಿಂಡಿಯನ್ನು ಮೆಲುಕು ಹಾಕುತ್ತಿದ್ದುದು ತಿಳಿದುಬಂದಿತು.
  • ಪ್ರತಿ ದಿನ ಎರಡು ಗಂಟೆಗೂ ಹೆಚ್ಚು ಸಮಯ ಬಯಲಿನಲ್ಲಿ ಆಟ, ಓಟ, ಮುಂತಾದ ಚಟುವಟಿಕೆಗಳಲ್ಲಿ ನಿರತರಾಗಿದ್ದ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಬಹಳಷ್ಟು ಕಡಿಮೆ ಇದ್ದಿತು.
  • ಮನೆಯ ಸಾಮಾಜಿಕ ಆರ್ಥಿಕ ಸಮಸ್ಯೆ, ಶಾಲೆಯಲ್ಲಿ ಕಲಿಯುವ ಹಾಗೂ ಹೋಮ್‌ವರ್ಕ್‌ನ ಒತ್ತಡಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿರುವ ಮಕ್ಕಳಲ್ಲೂ ಬೊಜ್ಜಿನ ಪ್ರಮಾಣ ಹೆಚ್ಚಾಗಿತ್ತು. ಮಾನಸಿಕ ಒತ್ತಡಕ್ಕೆ ಒಳಗಾದ ಮಕ್ಕಳು ತಮ್ಮ ಒತ್ತಡವನ್ನು ಶಮನಗೊಳಿಸಿಕೊಳ್ಳಲು ಪದೇ ಪದೇ ಹೆಚ್ಚು ತಿನ್ನುತ್ತಿದ್ದುದೇ ಬೊಜ್ಜಿಗೆ ಕಾರಣವೆನ್ನಬಹುದು.
  • ಬೊಜ್ಜಿನ ಆನುವಂಶಿಕ ಹಿನ್ನೆಲೆಯೂ ಮಕ್ಕಳ ಬೊಜ್ಜಿಗೆ ಒಂದು ಕಾರಣವೆನ್ನಬಹುದು.  ತಾಯಿಯ ಬೊಜ್ಜು ಮಗನ ಬೊಜ್ಜಿಗೆ ತಂದೆಯ ಬೊಜ್ಜು ಮಗಳ ಬೊಜ್ಜಿಗೆ ಮಹತ್ವದ ಕಾರಣವಾಗಿದ್ದುದು ಗಮನಾರ್ಹ ಸಂಗತಿ. ತಂದೆ-ತಾಯಿಯಿಂದ ಬೊಜ್ಜು ಬಂದಿದೆ ಎಂದು ನೆಪಹಾಕಿ ಕೈಚಾಚಿ ಕುಳಿತುಕೊಳ್ಳುವುದು ಸರಿಯಲ್ಲ. ಚಟುವಟಿಕೆ ಮತ್ತು ಆಹಾರ ಪಥ್ಯೆ ಯಿಂದ ಆನುವಂಶಿಕವಾಗಿ ಬರುವ ಬೊಜ್ಜಿಗೂ ಕಡಿವಾಣ ಹಾಕಬಹುದು.

ಈ ಅಧ್ಯಯನದಿಂದ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿದೆ ಎಂಬ ಅಂಶ ಸುಸ್ಪಷ್ಟವಾಗುತ್ತದೆ (ಇಂತಹ ಅಧ್ಯಯನವನ್ನು ಗುರುಗಳ ಮಾರ್ಗದರ್ಶನದಲ್ಲಿ ಶಾಲಾ ಮಕ್ಕಳು ಕೈಗೊಂಡು ವೈಜ್ಞಾನಿಕ ಸತ್ಯವನ್ನು ಅರಿಯುವ ಯೋಜನೆ ಮಾಡಬಹುದು.)ಹೀಗಾಗಿ ಸಮಸ್ಯೆಯನ್ನು ಪ್ರತಿಬಂಧಿಸಲು ಮಕ್ಕಳು ಮತ್ತು ಪೋಷಕರು ಬೊಜ್ಜಿನ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಳ್ಳುವ ಅಗತ್ಯ ಈಗ ಅತಿ ಮುಖ್ಯವಾಗಿದೆ. ಮತ್ತು ಬೊಜ್ಜು ಉಂಟಾಗುವುದರ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುವುದೂ ಮುಖ್ಯವಾಗಿದೆ.