ಬೋಧಿಧರ್ಮ’ಝೆನ್’(ಅಥವಾ ಧ್ಯಾನ) ಸಂಪ್ರದಾಯವನ್ನು ಭಾರತದಿಂದ  ಚೀಣಕ್ಕೆ ಒಯ್ದ  ಬೌದ್ಧ ಸಂನ್ಯಾಸಿ. ಯಾರಿಗೂ ಹೆದರದೆ ಏನನ್ನೂ ಬಯಸದೆ ವಿಶಿಷ್ಟ ರೀತಿಯಲ್ಲಿ ಬದುಕಿದ ಈತ ಹಲವರಿಗೆ ಒಗಟಾದ, ಕೆಲವರಿಗೆ ಗುರುವಾದ. ಗುರುವಿನ ಅನುಭವ ಶಿಷ್ಯನ ಅನುಭವವಾಗಬೇಕೆಂದು ಒತ್ತಿ ಹೇಳಿದ. ತುಂಬಾ ಕುತೂಹಲಕರ ವ್ಯಕ್ತಿತ್ವ, ತೂಕವಾದ ಉಪದೇಶ ಇವನದು.


ಬೋಧಿಧರ್ಮ

ಈಗ್ಗೆ ಒಂದು ಸಾವಿರ ನಾಲ್ಕು ನೂರು ಐವತ್ತೆಂಟು ವರ್ಷಗಳ ಹಿಂದೆ. ಚೀಣೀ ಚಕ್ರವರ್ತಿಯ ಮುಂದೆ ಭಾರತೀಯ ಸಂನ್ಯಾಸಿ. ಆ ಕಾಲದ ಚೀಣೀ ಚಕ್ರವರ್ತಿ ಯೆಂದರೆ ಭೂಮಿಯ ಮೇಲಿನ ದೇವತೆಯೇ; ಜನರಿಗೆ ಅವನನ್ನು ಕಂಡರೆ ಅಷ್ಟು ಭಯ, ಅಷ್ಟು ಭಕ್ತಿ, ಮತ್ತು ಅಷ್ಟು ಬಲಶಾಲಿ ಅವನು, ಅಷ್ಟು ಶ್ರೀಮಂತ.

ಚಕ್ರವರ್ತಿ ತಬ್ಬಿಬ್ಬು

ಅಂಥವನು ಈ ದೇಶದ ಸಂನ್ಯಾಸಿಯನ್ನು ಕೇಳಿದ-‘ನಾನು ನೂರಾರು ಗುಡಿಗಳನ್ನೂ ಮಠಗಳನ್ನೂ ಕಟ್ಟಿಸಿದ್ದೇನೆ. ಬುದ್ಧನ ಶಾಸನವನ್ನು ಹರಡಿದ್ದೇನೆ. ಸಾವಿರಾರು ಭಿಕ್ಷುಗಳಿಗೂ ಭಿಕ್ಷುಣಿಯರಿಗೂ ಆಶ್ರಯವಾಗಿದ್ದೇನೆ. ಎಂದಮೇಲೆ, ನಾನು ಕೂಡಿಹಾಕಿರಬಹುದಾದ ಪುಣ್ಯ ಎಷ್ಟು?’

ಅದಕ್ಕೆ ಸಂನ್ಯಾಸಿ ನಸುನಗುತ್ತ, ‘ಚಕ್ರವರ್ತಿಯೇ, ಇದರಿಂದ ಪುಣ್ಯ ಒಂದಿಷ್ಟೂ ಇಲ್ಲ!’ ಎಂದುತ್ತರ ಕೊಟ್ಟ.

ಚಕ್ರವರ್ತಿಗೆ ಕಕ್ಕಬಿಕ್ಕಾಯಿತು, ಸ್ವಲ್ಪ ಸಿಟ್ಟೂ ಬಂದಿತು. ಮತ್ತೇ ಕೇಳಿದ ‘ಭೌದ್ಧ ಧರ್ಮದ ಮೊದಲ ತತ್ವವೇನು?’ ಸಂನ್ಯಾಸಿ ಹೇಳಿದ, ‘ಕೊನೆ ಮೊದಲಿಲ್ಲದ ಸೊನ್ನೆ!’

‘ಹಾಗಾದರೆ ನನ್ನೆದುರು ನಿಂತು ಮಾತ ನಾಡುತ್ತಿರುವವನು ಯಾರು?’

‘ನನಗಂತೂ ತಿಳಿಯದು!’

ಈ ಸಂವಾದಕ್ಕೆ ತೊಡಗಿದ ಚಕ್ರವರ್ತಿ ವು-ತಿ ಎಂಬುವನು(ಕ್ರಿ.ಶ. ೫೦೨-೫೪೯); ಲಿಯು ಸುಂಗ್ ರಾಜವಂಶಕ್ಕೆ ಸೇರಿದವನು. ಅವನೆದುರು ನಿಂತಿದ್ದ ಸಂನ್ಯಾಸಿ ಬೋಧಿಧರ್ಮ; ದಕ್ಷಿಣ ಭಾರತದವನು.

ಝೇನ್ ಪಂಥ

ಈ ಚೀಣೀ-ಭಾರತ ಸಂಪರ್ಕ ಇಂದು ವಿಶ್ವ ವಿಖ್ಯಾತವಾಗಿರುವ ‘ಝೆನ್’ ಎಂಬ ಧ್ಯಾನಪಂಥಕ್ಕೆ ನಾಂದಿಯಾಯಿತು. ಇಪ್ಪತ್ತನೆಯ ಶತಮಾನದಲ್ಲಿ ಈ ಪಂಥ ಪ್ರಪಂಚದಲ್ಲಿ ಎಲ್ಲೆಲ್ಲೂ ಪ್ರಚಲಿತವಾಗಿದೆ. ನವನಾಗರೀಕ ಜನರೆನಿಸಿ ಕೊಂಡವರು ಇದನ್ನು ತುಂಬ ವಿಶ್ವಾಸದಿಂದ ಕಾಣುತ್ತಿದ್ದಾರೆ. ‘ಝೆನ್’ ಎಂಬುದು ಜಪಾನೀ ಮಾತು; ಚೀಣದಿಂದ ಈ ಪಂಥ ಜಪಾನಿಗೆ ಹೋಗಿ ಅಲ್ಲಿ ಬೇಕಾದಂತೆ ಬೆಳೆಯಿತು, ಅಲ್ಲಿನ ಸಂಸ್ಕೃತಿಯನ್ನೇ ಮಾರ್ಪಡಿಸಿತು. ಚೀಣಿಭಾಷೆಯಲ್ಲಿ ಇದು ‘ಛನ್ನ’ ಅಥವಾ “ಛನ್’ ಎನಿಸಿ ಕೊಳ್ಳುತ್ತದೆ. ಈ ಮಾತು ಹೇಗೆ ಬಂತು, ಗೊತ್ತೇ, ಸಂಸ್ಕೃತದ ಧ್ಯಾನ ಎಂಬುದು ಪ್ರಾಕೃತದಲ್ಲಿ ಝೆನ್ ಆಯಿತು, ಈ ಝೆನ್‌ವೇ ‘ಛನ್ನ್’ ವಾಗಿ ‘ಝೆನ್’ ಆದುದು! ಎಂದರೆ, ಈ ಮಾತಿಗೂ, ಈ ಪಂಥಕ್ಕೂ ಭಾರತವೇ ಮೂಲ. ಈ ಧ್ಯಾನ ಸಂಪ್ರದಾಯವನ್ನು ಚೀಣಕ್ಕೆ ಒಯ್ದವನು ಬೋಧಿಧರ್ಮ.

ಇವನನ್ನು ಚೀಣಿಯರೂ ಜಪಾನೀಯರೂ ಇಂದಿಗೂ ತುಂಬ ಗೌರವದಿಂದ ಕಾಣುತ್ತಾರೆ. ಅವನ ವಿಚಾರವಾಗಿ ಈ ಎರಡು ದೇಶಗಳಲ್ಲಿಯೂ ಹಲವು ಕಥೆಗಳು ಬಳಕೆಯಲ್ಲಿವೆ; ಅವನ ಪರಂಪರೆಯಲ್ಲಿ ಬಂದವರು ಅಲ್ಲಿ ಇಂದಿಗೂ ಇದ್ದಾರೆ. ಬೌದ್ಧ ಧರ್ಮದ ಸಂಪ್ರದಾಯಕ್ಕೆ  ಈ ದೇಶಗಳಲ್ಲಿ ಇವನು ಆದ್ಯ ಪ್ರವರ್ತಕ ನೆಂದು ನಂಬಿಕೆ. ಚೀಣೀ ಜನ ಇವನನ್ನು ತಮ್ಮ ಭಾಷೆಯಲ್ಲಿ ‘ತ-ಮೊ’ ಎಂದೂ, ಜಪಾನೀಯರು ‘ದರುಮ’ ಎಂದೂ ಕರೆಯುತ್ತಾರೆ. ಜಪಾನೀ ಭಾಷೆಯ ‘ದರುಮ’ ನಮ ‘ಧರ್ಮ’ದ ಅಪಭ್ರಂಶ ಅಷ್ಟೇ, ಅವನ ಪುತ್ಥಳಿಗಳೂ, ಚಿತ್ರಗಳೂ ಈ ಎರಡೂ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತವೆ. ಆದರೆ ನಮ್ಮವರು ಮಾತ್ರ ಅವನನ್ನು ಮರೆತುಬಿಟ್ಟಿದ್ದಾರೆ!

ಚೀಣಾ ಪ್ರವಾಸ

ಬೋಧಿಧರ್ಮ ದಕ್ಷಿಣ ಭಾರತಕ್ಕೆ ಸೇರಿದವನು; ಅವನ ತೌರೂರು ಕಾಂಚೀಪುರ.  ಅವನ ತಂದೆ ಬ್ರಾಹ್ಮಣ; ತಾಯಿ ಪಲ್ಲವ ರಾಜವಂಶದ ಹೆಣ್ಣುಮಗಳು. ಚಿಕ್ಕಂದಿನಲ್ಲಿ ವೇದ-ಉಪನಿಷತ್ತುಗಳನ್ನು ಚೆನ್ನಾಗಿ ಓದಿ, ತಾರುಣ್ಯ ಮೂಡುವ ವೇಳೆಗೆ ಬೌದ್ಧಧರ್ಮಕ್ಕೆ ಒಲಿದು ಭಿಕ್ಷುವಾದ. ಬೋಧಿಧರ್ಮ ಎನ್ನುವುದು ಅವನು ಸಂನ್ಯಾಸಿಯಾದ ಮೇಲೆ ಪಡೆದುಕೊಂಡ ಹೆಸರು; ಅವನ ಮೊದಲಿನ ಹೆಸರೇನೋ ತಿಳಿಯದು. ಕೆಲವು ಬರಹಗಳಲ್ಲಿ ಅವನ ಹೆಸರನ್ನು ಧರ್ಮತ್ರಾತ, ಬೋಧಿತ್ರಾತ ಎಂದು ಕೊಳ್ಳುವುದು ಕಾಣಸಿಗುತ್ತದೆ.

ಅವನ ಗುರು ಪ್ರಜ್ಞಾತಾರ ಎಂಬುವನು ಪೂರ್ವ ಭಾರತದಲ್ಲಿ ಎಲ್ಲಿಯೋ ಇದ್ದವನು. ಇವನ ಬಳಿಯೇ ಬೋಧಿಧರ್ಮನು ಸಂನ್ಯಾಸದೀಕ್ಷೆಯನ್ನು ಪಡೆದು, ನಲವತ್ತು ವರ್ಷಗಳ ಕಾಲ ಅವನ ಜೊತೆಯೇ ಇದ್ದು ಬೌದ್ಧ ಧರ್ಮದ ಶಾಸ್ತ್ರಗ್ರಂಥಗಳನ್ನೂ ಧ್ಯಾನಪದ್ಧತಿಯನ್ನೂ ಚೆನ್ನಾಗಿ ಅಭ್ಯಾಸಮಾಡಿದ. ಗುರು ತೀರಿಕೊಂಡಮೇಲೆ, ಬೋಧಿಧರ್ಮನು ದೇಶದಲ್ಲಿ ಅಲೆದಾಡುತ್ತ, ಪಲ್ಲವ ರೇವಿನಿಂದ ಚೀಣದ ಕಡೆಗೆ ಹೊರಟ ಹಡಗೊಂದನ್ನೇರಿ ಚೀಣಾ ದೇಶವನ್ನು ಮುಟ್ಟಿದ. ಈ ಸಮುದ್ರ ಪ್ರಯಾಣ ಮೂರು ವರ್ಷಗಳಷ್ಟು ಕಾಲ ನಡೆಯಿತು. ಕಡೆಗೆ ಚೀಣದ ಪೂರ್ವ ತೀರದ ‘ಯುಎ’ ಎಂಬಲ್ಲಿ ಅವನು ಬಂದಿಳಿದ ವರ್ಷ ಕ್ರಿಸ್ತಶಕ ೪೭೦.

ಉತ್ತರ ಚೀಣಕ್ಕೆ

ಭಾರತ ದೇಶದಿಂದ ಬೌದ್ಧಧರ್ಮದ ಭಿಕ್ಷುವೊಬ್ಬ ಬಂದಿದ್ದಾನೆ ಎಂಬುದನ್ನು ಕೇಳಿ ಚೀನಾದೇಶದ ಚಕ್ರವರ್ತಿ ವು-ತಿ ಅವನನ್ನು ಆದರದಿಂದ ಬರಮಾಡಿಕೊಂಡ. ಈ ಚಕ್ರವರ್ತಿಗೆ ಬೌದ್ಧಧರ್ಮದ ಮೇಲೆ ತುಂಬ ಒಲುಮೆ. ಆ ಧರ್ಮ ಜನರಲ್ಲಿ ಹರಡಬೇಕೆಂದು ತುಂಬ ಶ್ರಮಿಸುತ್ತಿದ್ದ. ಅವನಿಗೂ ಬೋಧಿಧರ್ಮನಿಗೂ ನಡೆದ ಸಂಭಾಷಣೆಯನ್ನು ಮೊದಲಲ್ಲೇ ಕೊಟ್ಟ್ಟಿದೆಯಷ್ಟೆ. ಬೋಧಿಧರ್ಮನು ಉತ್ತರಕೊಟ್ಟ ರೀತಿ ಚಕ್ರವರ್ತಿಗೆ ಹಿಡಿಸಲಿಲ್ಲ. ಬೋಧಿಧರ್ಮನೂ  ಅಲ್ಲಿರಲು ಆಸಕ್ತಿ ತೋರಿಸದೆ ಉತ್ತರ ಚೀಣದ ಕಡೆ ಹೊರಟ. ಅಲ್ಲಿ ವೈ ರಾಜವಂಶ ಆಳುತ್ತಿದ್ದಿತು. ಈ ರಾಜ್ಯದ ರಾಜಧಾನಿಗೆ ಅವನು ಬಂದದ್ದು ಕ್ರಿಸ್ತ ಶಕ ೪೭೫ ರಲ್ಲಿ.

ಕುಮಾರ ಜೀವ

ಚೀಣಾದೇಶಕ್ಕೆ ಬೌದ್ಧಧರ್ಮದ ಪರಿಚಯ ಮೊದಲ ಶತಮಾನದಿಂದಲೂ ಇದ್ದಿತು. ಮಧ್ಯ ಏಶಿಯಾದಿಂದ ಕ್ರಿಸ್ತ ಶಕ ೬೭ ರಷ್ಟು ಹಿಂದೆಯೇ ಕೆಲವು ಬೌದ್ಧಭಿಕ್ಷುಗಳು ಇಲ್ಲಿಗೆ ಬಂದಿದ್ದು, ಕ್ರಿಸ್ತಶಕ ೨೨೦ ರಲ್ಲಿ ಹಾನ್ ರಾಜವಂಶದ ಪತನವಾದನಂತರ ಬೌದ್ಧಧರ್ಮ ತುಂಬ ಜನಪ್ರಿಯವಾಯಿತು. ನಾಲ್ಕೈದನೆಯ ಶತಮಾನ ದಲ್ಲಂತೂ ಜನಪ್ರೀತಿ ವಿಶೇಷವಾಗಿದ್ದಿತು. ಇದಕ್ಕೆ ಕಾರಣ ಬುದ್ಧಭದ್ರನೆಂಬ ಭಾರತೀಯ ಸಂತ ಮತ್ತು ಇನ್ನೊಬ್ಬ ಭಾರತೀಯ ಸಂತ ಕುಮಾರಜೀವ ಎಂಬುವನು. ಇವರಲ್ಲಿ ಕುಮಾರಜೀವನ ಪ್ರಭಾವ ಹೆಚ್ಚಿದ್ದಿತು. ಆಗ ಭಾರತಕ್ಕೇ ಸೇರಿದ್ದ, ಆದರೆ ಈಗ ಭಾರತದ  ಹೊರಗಿರುವ ಮಧ್ಯ ಚೀಣೀತುರ್ಕಿಸ್ಥಾನದ ‘ಕುಚ’ ಎಂಬ ಊರಿನವರು ಇವನು. ಅವನ ತಂದೆ ಮಧ್ಯಭಾರತದ ಬ್ರಾಹ್ಮಣ, ತಾಯಿ ಕುಚ ರಾಜವಂಶಕ್ಕೆ ಸೇರಿದ್ದವಳು. ಕುಮಾರಜೀವ ಹುಟ್ಟಿದ ವರ್ಷ ೩೪೩. ಎಳೆತನದಲ್ಲೇ ಇವನು ಸಂನ್ಯಾಸಿಯಾಗಿ ಹರಯದಲ್ಲಿ ದೊಡ್ಡ ವಿದ್ವಾಂಸನೆಂದು ಹೆಸರು ಪಡೆದ. ಅವನ ಪ್ರಖ್ಯಾತಿ ಎಷ್ಟಿದ್ದಿತೆಂದರೆ, ಕುಚ ಪ್ರದೇಶಕ್ಕೆ ದಾಳಿಮಾಡಿ ಅದನ್ನು ಗೆದ್ದುಕೊಂಡ. ನೆರೆನಾಡಾದ ಚೀಣದ ಲಿಯಾಂಗ್ ದೊರೆ ಕುಮಾರಜೀವನನ್ನು ಕೈಸೆರೆ ಹಿಡಿದು ತನ್ನೊಂದಿಗೆ ಕೊಂಡೊಯ್ದ! ಅಲ್ಲಿಂದ ಛಿನ್ ದೊರೆ ಅವನನ್ನು ತನ್ನ ರಾಜಧಾನಿಯಾದ ಛಾಂಗ್ ಅನ್ ಎಂಬಲ್ಲಿಗೆ ಕೊಂಡೊಯ್ದ. ಇದು ನಡೆದಿದ್ದು ೪೦೭ ರ ಸುಮಾರಿನಲ್ಲಿ, ಕುಮಾರಜೀವನು ಈ ವರ್ಷದಿಂದ ತಾನು ಸಾಯುವವರೆಗೂ, ಎಂದರೆ ೪೦೩ ರವರೆಗೂ ಅಲ್ಲಿಯೇ ಇದ್ದ.

ಕುಮಾರಜೀವನ ಶಿಷ್ಯ ಪರಂಪರೆ

ಈ ಅವಧಿಯಲ್ಲಿ ಅವನು ಆ ಪ್ರದೇಶದ ವಿದ್ಯಾಧಿಕಾರಿಯಾಗಿ, ಧರ್ಮಾಧ್ಯಕ್ಷನಾಗಿ ರಾಜನಿಂದ ನಿಯಮಿತನಾಗಿದ್ದ. ಸಂಸ್ಕೃತಪಂಡಿತನಾಗಿದ್ದ ಅವನು ಚೀಣೀಭಾಷೆಯನ್ನೂ ಚೆನ್ನಾಗಿ ಕಲಿತು, ಬೌದ್ಧಧರ್ಮಕ್ಕೆ ಸಂಬಂಧಿಸಿದಂತೆ ನೂರಕ್ಕೂ ಮೀರಿ ಸಂಸ್ಕೃತ ಗ್ರಂಥಗಳನ್ನು ಚೀಣೀಭಾಷೆಗೆ ಅನುವಾದ ಮಾಡಿದ. ಹೀಗೆ ಅವನು ಅನುವಾದ ಮಾಡಿದ ಎಷ್ಟೋ ಸಂಸ್ಕೃತ ಗ್ರಂಥಗಳು ಮುಂದೆ ನಮ್ಮ ದೇಶದಲ್ಲಿ ನಷ್ಟವಾದುವು; ಆದರೆ ಚೀಣೀ ಅನುವಾದಗಳಲ್ಲಿ ಅನೇಕ ಗ್ರಂಥಗಳು ಉಳಿದಿವೆ. ಕುಮಾರಜೀವನು ಮೊದಲಿಗೆ ಸರ್ವಾಸ್ತಿವಾದವೆಂಬ ಪಂಥಕ್ಕೆ ಸೇರಿದವನಾಗಿದ್ದು ಅನಂತರ ನಾಗಾರ್ಜುನನ ನಿಲುವಿಗೆ ಒಲಿದನೆಂದು ಗೊತ್ತಾಗುತ್ತದೆ.

ಅಂತೂ ಭಾರತದ ಹಿರಿಮೆ ಚೀಣದಲ್ಲಿ ಹರಡಿದುದಕ್ಕೆ ನಾವು ಕುಮಾರಜೀವನನ್ನು ನೆನೆಸಿ ಕೊಳ್ಳಬೇಕು. ಚೀಣದಲ್ಲಿ ಇವನಿಗೆ ಮೂರುಸಾವಿರ ಮಂದಿ ಶಿಷ್ಯರಿದ್ದರೆಂದು ಉಲ್ಲೇಖವಿದೆ. ಇವರಲ್ಲಿ ಸೆಂಗ್ ಛವೋ (೩೮೪-೪೧೪) ಎಂಬುವನು ಮುಂದೆ ಪ್ರಖ್ಯಾತ ದಾರ್ಶನಿಕನಾದ. ಇನ್ನೊಬ್ಬ ತವೋ ಶೆಂಗ್ (೩೬೦-೪೩೪) ಭಾರತೀಯ ಬೌದ್ಧಧರ್ಮದಲ್ಲಿದ್ದ ಸದ್ಯೋಮುಕ್ತಿಯೆನ್ನುವ ವಾದವನ್ನು ಎತ್ತಿ ಹಿಡಿದ. ಇವನ ಶಿಷ್ಯ ಹುಯಿ-ಯುವನ್(೫೨೩-೫೯೨) ಚೀಣದಲ್ಲಿ ಈ ವಾದ ಹರಡಲು ಕಾರಣನಾದ. ಎಂದರೆ ಬೋಧಿಧರ್ಮ ಸಾಧನೆಯ ಪರಿಚಯ ಚೆನ್ನಾಗಿಯೇ ಇದ್ದಿತು. ಹಾಗೆಂದೇ ಅಲ್ಲಿನ ದೊರೆ ಬೋಧಿಧರ್ಮನನ್ನು ಆದರದಿಂದ ಬರಮಾಡಿ ಕೊಂಡನು.

ಪರಮಾರ್ಥ

ಬೋಧಿಧರ್ಮನನ್ನು ಬರಮಾಡಿಕೊಂಡು ಅವನೊಂದಿಗೆ ಮೇಲೆ ಕಾಣಿಸಿದ ಸಂಭಾಷಣೆಯಲ್ಲಿ ತೊಡಗಿದ ಲಿಯಾಂಗಿನ ವು-ತಿ ಚಕ್ರವರ್ತಿಯ ಆಸ್ಥಾನದಲ್ಲಿ ಪರಮಾರ್ಥನೆಂಬ ಇನ್ನೊಬ್ಬ ಬೌದ್ಧ ವಿದ್ವಾಂಸ ಇದ್ದನು. ಇವನೂ ಭಾರತದೇಶದವನೇ. ಸಂಸ್ಕೃತ ಗ್ರಂಥಗಳನ್ನು ಚೀಣೀ ಭಾಷೆಗೆ ಅನುವಾದ ಮಾಡಿದವರಲ್ಲಿ ತುಂಬ ಹೆಸರಾದವನು. ಇವನು ಪ್ರಸಿದ್ಧ ಸಂತನಾದ ವಸುಬಂಧುವಿನ ಬದುಕನ್ನು ಕುರಿತು ಬರೆದ ಪುಸ್ತಕ ಚೀಣೀ ಸಾಹಿತ್ಯದಲ್ಲಿ ಇಂದಿಗೂ ಸನ್ಮಾನ್ಯವಾಗಿದೆ. ಇವನು ೪೯೯ ರಲ್ಲಿ ಹುಟ್ಟಿ ೫೬೯ ರಲ್ಲಿ ಚೀಣಾದೇಶದಲ್ಲೇ ತೀರಿಕೊಂಡನು. ಬೋಧಿಧರ್ಮ ಚೀಣಾದೇಶಕ್ಕೆ ಬಂದಾಗ ಪರಮಾರ್ಥ ಆಗಲೇ ಪ್ರಸಿದ್ಧನಾಗಿದ್ದ.

ವಿಚಿತ್ರ  ವ್ಯಕ್ತಿ

ಬೋಧಿಧರ್ಮ ಮತ್ತು ವು-ತಿ ಚಕ್ರವರ್ತಿ ಇವರ ನಡುವೆ ನಡೆದ ಮಾತುಕತೆಯಿಂದ ಇಬ್ಬರಿಗೂ ಸಮಾಧಾನವಾಗಲಿಲ್ಲ. ಚಕ್ರವರ್ತಿಗೆ ‘ಈ ಸಂನ್ಯಾಸಿ ಒಗಟಿನಲ್ಲಿ ಮಾತನಾಡುತ್ತಿದ್ದಾನೆ, ನೋಡಿದರೆ ಹುಚ್ಚನಂತೆ ಕಾಣಿಸುತ್ತಾನೆ’ ಎನಿಸಿತು. ಬೋಧಿಧರ್ಮನ ಹೊರ ಆಕಾರ ಹಾಗೆಯೇ ಇದ್ದಿತಂತೆ. ಅಷ್ಟೇನು ಎತ್ತರವಲ್ಲದ, ಆದರೆ ಬೊಜ್ಜು ಬೆಳೆದ ಮೈ, ತಲೆಯ ಮೇಲೆ ಹೊದ್ದು ಮೈಯೆಲ್ಲ ಮುಚ್ಚಿರುವ ಕಾವಿಬಣ್ಣದ ಶಾಲು; ಕುರುಚಲು ಗಡ್ಡ; ಬಿರುಗಣ್ಣು; ನಡಿಗೆಯಲ್ಲಾಗಲೀ ಮಾತಿನಲ್ಲಾಗಲೀ ನಯವಿಲ್ಲ, ನಾಜೂಕಿಲ್ಲ. ಮಾತು ಕಡಿಮೆಯೇ. ನಿಂತರೆ ನಿಂತೇ ಬಿಡುವ, ಅಲ್ಲಾಡದೆ ಕಟ್ಟಿಗೆಯ ಬೊಂಬೆಯಂತೆ, ಕುಳಿತರೆ ಗಂಟೆಗಟ್ಟಳೆ, ದಿನಗಟ್ಟಳೆ ಏಳುವುದೇ ಇಲ್ಲ. ಇವನಿಗೆ ಚಕ್ರವರ್ತಿಯನ್ನು ಕಂಡರೂ ಆದರವೇನೂ ಬರಲಿಲ್ಲ. ‘ಗುಡಿಗೋಪುರಗಳನ್ನು ಕಟ್ಟಿಸಿ ಧರ್ಮವನ್ನು ಉಳಿಸಲು ಯತ್ನಿಸುತ್ತಿರುವ ಬೆಪ್ಪ ಇವನು’ ಎನಿಸಿತು; ‘ಪುಣ್ಯಕ್ಕೆ ಬದಲು ಈ ದೊರೆ ಅಹಂಕಾರ ವನ್ನು ಗಳಿಸಿಕೊಂಡಿದ್ದಾನೆ’ ಎಂದು ಅಂದುಕೊಂಡ.

ಪವಾಡಕ್ಕೆ ಮಾರುಹೋದರು

ಮೇಲಿನ ಮಾತುಕತೆ ಮುಗಿದೊಡನೆ, ಮರುಮಾತಾಡದೆ ಬೋಧಿಧರ್ಮ ಊರ ಹೊರಗಿನ ಯಾಂಗ್ ತ್ಸೆ ನದಿಯ ಬಳಿ ಬಂದು, ಅಲ್ಲಿದ್ದ ಜೊಂಡು ಹುಲ್ಲಿನ ಕಡ್ಡಿಯೊಂದನ್ನು ಕಿತ್ತು, ಅದನ್ನು ನೀರಿನ ಮೇಲಿರಿಸಿ, ತಾನು ಅದರ ಮೇಲೇರಿ ನಿಂತು, ನದಿಯನ್ನು ದಾಟಿ ಆಚೆ ದಡವನ್ನು ಸೇರಿದ. ಹುಲ್ಲಿನಕಡ್ಡಿಯನ್ನು ದೋಣಿಯಂತೆ ನಡೆಸಿದ ಪವಾಡ ಅಲ್ಲಿನ ಜನರಿಗೆಲ್ಲ ಅಚ್ಚರಿಯೆನಿಸಿ, ಇದ್ದಕ್ಕಿದ್ದಂತೆ ಬೋಧಿಧರ್ಮನ ಪ್ರಖ್ಯಾತಿ ದೇಶದಲ್ಲೆಲ್ಲ ಹರಡಿತು. ಅವನ ಸುತ್ತ ಜನ ನೆರೆಯಲಾರಂಭಿಸಿದರು. ಧರ್ಮವನ್ನು ಬಯಸಿ ಬಂದವರು ಕಡಿಮೆಯೇ; ಪವಾಡಕ್ಕೆ ಮಾರುಹೋಗಿ ನೆರೆದವರೇ ಹೆಚ್ಚು ಮಂದಿ!

ಒಂಭತ್ತು ವರ್ಷಗಳ ಧ್ಯಾನ

ಬೋಧಿಧರ್ಮನಿಗೆ ಬೇಸರವಾಗಿ ಅಲ್ಲಿಂದ ಮುಂದೆ ಸಾಗಿ ಹೊನಾನ್ ಪ್ರದೇಶದಲ್ಲಿ ಸುಂಗ್-ಶೆನ್ ಎಂಬ ಬೆಟ್ಟದ ಮೇಲೆ ಶವೋ-ಲಿನ್-ಸ್ಸೂ ಎಂಬ ಹೆಸರಿನ ಗುಡಿಯೊಳಗೆ ನೆಲೆಸಿದ. ಅಲ್ಲಿದ್ದ ದೇವತಾ ಮೂರ್ತಿಗಳನ್ನು ಪೂಜೆ ಮಾಡಲಿಲ್ಲ, ಅಲ್ಲಿಗೂ ಬಂದ ಜನರಿಗೆ ಧರ್ಮಬೋಧೆಯನ್ನೂ ಮಾಡಲಿಲ್ಲ. ಮಾತುಕತೆಯಿಲ್ಲದೆ ನೇರವಾಗಿ ಪಡಸಾಲೆಗೆ ನಡೆದು ಅಲ್ಲಿ ಗೋಡೆಗೆ ಮುಖಮಾಡಿ ಪದ್ಮಾಸನದಲ್ಲಿ ಕುಳಿತ. ಗೋಡೆಯನ್ನೇ ಎವೆಯಿಕ್ಕದೆ ನೋಡುತ್ತ ಧ್ಯಾನಮಗ್ನನಾದ. ಧ್ಯಾನಮುಗಿಸಿ ಎದ್ದಮೇಲೆ ಮಾತನಾಡಿಯಾನು ಎಂದು ಬಗೆದು ಜನ ಕಾದರು. ಗಂಟೆಗಳು ಕಳೆದರೂ ಅವನು ಏಳುವ ಸೂಚನೆಯೇನು ಕಾಣಲಿಲ್ಲ. ಹೀಗೆಯೇ ದಿನಗಳು ಕಳೆದವು. ತಿಂಗಳುಗಳೂ ಸಾಗಿದುವು! ಗೋಡೆಗೆ ಮುಖಮಾಡಿ ಕೂತವನು ಏಳಲೇ ಇಲ್ಲ. ಅವನು ಕುಳಿತ ಭಂಗಿ ಒಂದಿಷ್ಟೂ ಬದಲಾಗಲಿಲ್ಲ.

ಜನರಿಗೆ ಇದು ಬಿಡಿಸಲಾಗದ ಒಗಟಾಯಿತು. ಊಟ ತಿಂಡಿ ಇಲ್ಲದೆ, ನಿದ್ರೆ, ವಿರಾಮವಿಲ್ಲದೆ, ಕಣ್ಣು ಮುಚ್ಚದೆ, ರೆಪ್ಪೆ ಆಡಿಸದೆ, ಕೈಕಾಲು ಅಲುಗಾಡಿಸದೆ, ಕುಳಿತುಬಿಟ್ಟಿದ್ದಾನೆ! ಒಂದು ವರ್ಷವಾಯಿತು; ಎರಡಾದುವು, ಮೂರಾದವು! ಜನರಿಗೆ ಅಚ್ಚರಿಯಾಯಿತು; ದಿಗಿಲಾಯಿತು, ಇವನೇನು ಮನುಷ್ಯನೋ, ದೇವತೆಯೋ, ದೆವ್ವವೋ ಎಂದು ಸಂದೇಹಪಡುವಂತಾಯಿತು. ಹೀಗೆ ಒಂಭತ್ತು ವರ್ಷಗಳು ಕಳೆದುವು!

ಗೋಡೆಯನ್ನೇ ದಿಟ್ಟಿಸಿ ವರ್ಷಗಳು ಕುಳಿತಿದ್ದ ಇವನು ಕಣ್ಣುಗುಡ್ಡೆಯನ್ನು ಅಲುಗಾಡಿಸಿದ. ಇಷ್ಟುಕಾಲ ಸೆಟೆದುಕೊಂಡು ನಿಂತಿದ್ದ ಕಣ್ಣುರೆಪ್ಪೆಗಳು ಈಗ ಕಳಚಿ ಬಿದ್ದುಬಿಟ್ಟುವು. ಇನ್ನು ಅವನು ಕಣ್ಣು ಮುಚ್ಚುವಂತೆಯೇ ಇಲ್ಲ! ಕುಳಿತು ಕೈಕಾಲುಗಳು ಮರಗಟ್ಟಿ ಬಿಟ್ಟಿದ್ದವು.

ಪಟ್ಟಶಿಷ್ಯ ಪಟ್ಟ ಬವಣೆ

ಚೀಣಿ ಜನರು ಈ ಯೋಗಿಯನ್ನು ‘ಗೋಡೆಯನ್ನು ದಿಟ್ಟಿಸುವ ಬ್ರಾಹ್ಮಣ’ ಎಂದು ಕರೆಯತೊಡಗಿದರು. ಹಲವರು ಇವನ ಹಿರಿಮೆಯನ್ನು ಅರಿತುಕೊಂಡು ಶಿಷ್ಯರಾಗ ಬಯಸಿದರು. ಆದರೆ ಇವನು ಯಾರನ್ನೂ ಕತ್ತೆತ್ತಿಯೂ ನೋಡಲಿಲ್ಲ; ಏನೊಂದು ಮಾತನ್ನೂ ಆಡಲಿಲ್ಲ. ಒಂಭತ್ತು ವರ್ಷಗಳ ಅಖಂಡಧ್ಯಾನದಿಂದ ಎದ್ದರೂ ಅಡ್ಡಾಡು ವಾಗಲೂ ಧ್ಯಾನ ಮುದ್ರೆಯೇ; ಮತ್ತೆ ಮತ್ತೆ ಗೋಡೆಗೆ ಮುಖ ಮಾಡಿ ಕೂಡುವನು ನಿದ್ರೆಮಾಡಲೆಂದು ಮಲಗಿದುದೇ ಇಲ್ಲ!

ಅವನ ಶಿಷ್ಯರಾಗಬಯಸಿದವರಲ್ಲಿ ಒಬ್ಬ ಹುಯ್-ಖೆ ಎಂಬುವನು ಬೋಧಿಧರ್ಮ ತಪಸ್ಸು ಮಾಡಿದ ಒಂಭತ್ತು ವರ್ಷಗಳೂ ಗುಡಿಯ ಹೊರಗಡೆ ಛಳಿಯಲ್ಲಿ, ಮಂಜಿನಲ್ಲಿ, ಹಗಲು ರಾತ್ರಿಯೆನ್ನದೆ, ತವಕದಿಂದ ಕಾದಿದ್ದ, ತಪಸ್ಸಿನಿಂದ ಅವನು ಎದ್ದಮೇಲೆ ಅವನೊಂದಿಗೆ ಮಾತನಾಡಲು,  ಅವನಲ್ಲಿ ಶಿಷ್ಯನಾಗಿ ನಿಲ್ಲಲು  ಯತ್ನಿಸಿದ. ಆದರೆ ಬೋಧಿಧರ್ಮ ಅವನನ್ನು ಹತ್ತಿರವೇ ಬರ ಗೊಡಲಿಲ್ಲ.

ಅರಿವು ಮೂಡಿತು

ಕಡೆಗೆ ತುಂಬ ಬೇಸರದಿಂದ ಹುಯ್-ಖೆ ತನ್ನ ಎಡಗೈಯನ್ನೇ ಕತ್ತರಿಸಿ  ಬೋಧಿಧರ್ಮನ ಮುಂದಿರಿಸಿ, ‘ಇದು ನನ್ನ ಶ್ರದ್ಧೆಯ ಕುರುಹು!’ ಎಂದಾಗ ಬೋಧಿಧರ್ಮ ಅವನತ್ತ ನೋಡಿ ಕೇಳಿದ-

‘ನಿನಗೇನು ಬೇಕು?’

‘ನನಗೆ ಮನಸ್ಸಿನ ನೆಮ್ಮದಿಯಿಲ್ಲ. ದಯಮಾಡಿ ನನ್ನ ಮನಸ್ಸನ್ನು ಶಮನಗೊಳಿಸಿರಿ!’‘

ಸರಿ, ನಿನ್ನ ಮನಸ್ಸನ್ನು ಇಲ್ಲಿಗೆ ತೆಗೆದುಕೊಂಡು ಬಾ, ನನ್ನ ಮುಂದಿರಿಸು ಶಮನಗೊಳಿಸುತ್ತೇನೆ.’

‘ಆದರೆ ಮನಸ್ಸನ್ನು ಅರಸಿ ಹೊರಟರೆ, ಅದು ನನ್ನ ಕೈಗೆ ಸಿಗದಲ್ಲ? ಮನಸ್ಸು ಎಲ್ಲಿದೆಯೆಂಬುದೇ ತಿಳಿಯದು’.

‘ಆ ನೋಡಿದೆಯಾ? ನಿನ್ನ ಮನಸ್ಸನ್ನು ಆಗಲೇ ಶಮನಮಾಡಿದ್ದೇನೆ!’

ಹುಯ್ -ಖೆ ಯ ಸಾರ್ಥಕ ಸಾಧನೆ

ಈ ಮಾತುಕತೆ ಮುಗಿದೊಡನೆ ಹುಯ್- ಖೆಗೆ ಜ್ಞಾನೋದಯವಾಯಿತು: ಅರಿವು ಮೂಡಿತು; ಮನಸ್ಸು ನೆಮ್ಮದಿಯಾಯಿತು. ಬೇರೆ ಸಾಧನೆಯೇ ಬೇಕಾಗಿಲಿಲ್ಲ. ಮುಂದೆ ಬೋಧಿಧರ್ಮ ಇವನಿಗೆ ತನ್ನ ಪರಂಪರೆಯ ದೀಕ್ಷೆಯನ್ನು ಕೊಟ್ಟ; ತನ್ನ ನಂತರ  ಇವನೇ ಗುರುವೆಂದು ಸೂಚಿಸಿದ. ಹುಯ್-ಖೆ ಮೊದಲು ಕುಂಗ್-ಫು-ತ್ಸೇ (ಕನ್‌ಫ್ಯೂಶಿಯಸ್) ಎಂಬ ಜಗದ್ವಿಖ್ಯಾತ ಸಂತನ ಧರ್ಮಕ್ಕೆ ಒಲಿದಿದ್ದ. ಆದರೆ ಬೌದ್ಧಧರ್ಮದ ವಿಚಾರವಾಗಿ ಬಹಳ ಓದಿದ್ದ. ಅವನು ಬೋಧಿಧರ್ಮನ ಬಳಿ ಬಂದಾಗ ನಲವತ್ತೊಂದು ವರ್ಷ ವಯಸ್ಸಿನವನು.

ಆ ಭೋಧಿಧರ್ಮ ಅವನನ್ನು ಶಿಷ್ಯನನ್ನಾಗಿ ಪರಿಗ್ರಹಿಸಿದ ಮೇಲೆ ನಾಲ್ಕೈದು ವರ್ಷಗಳು ಅವನ ಬಳಿಯೇ ಇದ್ದು ಹುಯ್ ಖೆ ಸಾಧನೆಯನ್ನು ನಡೆಸಿದ. ಗುರುವಿನ ಆಶೀರ್ವಾದದಿಂದ, ತನ್ನ ಸಾಧನೆಯ ಬಲದಿಂದ, ಇವನು ಸಂಬೋಧಿಯನ್ನು ಪಡೆದ. ಅನಂತರ ಗುರುವಿನ ಬಳಿಯಿಂದ ಹೊರಟು ಐದು ವರ್ಷಗಳ ಕಾಲ ಜನರಿಗೆ ಉಪದೇಶ ಮಾಡುತ್ತಾ, ತನ್ನ ಸಾಧನೆಯನ್ನು ನಡೆಸುತ್ತ ಕಳೆದ.

ಕಡೆಗಾಲದ ಸೋಜಿಗ

ಬೋಧಿಧರ್ಮನು ಅಲ್ಲಿಂದ ಹೊರಟು ಲೊ-ಯುಂಗ್ ಎಂಬ ಪ್ರದೇಶಕ್ಕೆ ಬಂದ. ಇಲ್ಲಿ ಒಂದು ಅದ್ಭುತವಾದ ವಿಹಾರವಿದ್ದಿತು. ಯುಂಗ್ ಸ್ನಿಂಗ್ಸ್ಸೂ ಎಂದು ಅದರ ಹೆಸರು. ಅದನ್ನು ಕಟ್ಟಿದ ವರ್ಷ ಕ್ರಿಸ್ತಶಕ ೫೧೬. ಅದರ ವೈಭವ ಚೀಣದೇಶದಲ್ಲೆಲ್ಲ ಮನೆಮಾತಾಗಿದ್ದಿತು. ಬೋಧಿಧರ್ಮ ತನ್ನ ಕಡೆಗಾಲದ ಒಂಭತ್ತು ವರ್ಷಗಳನ್ನು ಇಲ್ಲಿ ಕಳೆದ. ಈಗ ಬಂದ ಜನರಿಗೆ ಧರ್ಮಬೋಧೆಯನ್ನು ಮಾಡಲು ಸಿದ್ಧನಾದ. ಅವನ ಉಪದೇಶಕ್ಕೆ ಹಾತೊರೆದು ಜನ ಬರುತ್ತಿದ್ದರು. ಅಲ್ಲಿ ಧ್ಯಾನವನ್ನು ಅಭ್ಯಾಸಮಾಡುತ್ತಾ, ತೀವ್ರ ತಪಸ್ಸನ್ನೂ ಕೈಗೊಂಡನು.

ಜಗತ್ತನ್ನು ಬಿಟ್ಟ

ಅವನಿಗೆ ಸುಮಾರು ೧೫೦ ವರ್ಷ ವಯಸ್ಸಾಗಿ ದ್ದಾಗ ವಿಹಾರದಿಂದ ಹೊರಹೊರಟು ಲೋ ನದಿಯ ದಂಡೆಯ ಮೇಲೆ ಏಕಾಂಗಿಯಾಗಿ ನಡೆದಾಡತೊಡಗಿದ. ಅಲ್ಲಿಂದ ಎಲ್ಲಿಯೋ ಹೊರಟುಹೋದನೆಂದೂ, ಅವನು ಎಲ್ಲಿಗೆ ಹೋದನೆಂಬುದು ಯಾರಿಗೂ ತಿಳಿಯದೆಂದೂ ಹೇಳುತ್ತಾರೆ. ಇನ್ನೊಂದು ಪ್ರತೀತಿ ಅವನು ಲೋ-ಯುಂಗ್ ನ ಹೊರಗಿದ್ದ ಹ್ಸೀಯುಂಗ್ ‘ಛು-ಆನ್- ಶನ್’ ಎಂಬ ಬೆಟ್ಟದ ಮೇಲೆ ತೀರಿಕೊಂಡನೆಂದು. ಅವನ ಕಳೇಬರವನ್ನು ಅಲ್ಲಿಯೇ ಸಮಾಧಿ ಮಾಡಿದರೆಂದೂ ಹೇಳುತ್ತಾರೆ. ಅವನು ತೀರಿಕೊಂಡ ವರ್ಷ ಕ್ರಿಸ್ತಶಕ, ೫೩೪  ಎಂದು ಸಾಮಾನ್ಯವಾಗಿ ಒಪ್ಪಿರುವ ವಿಚಾರ. ಅವನ ನಿರ್ಯಾಣ ತಿಥಿ ಅಕ್ಟೋಬರ್ ಐದನೆಯ ದಿನ ಎಂದು ಜಪಾನಿನಲ್ಲಿ ಆಚರಿಸುವರು.

ಇನ್ನೊಂದು ಕಥೆ

ಈ ವಿಚಾರವಾಗಿ ಒಂದು ಕಥೆಯೂ ಬಳಕೆಯಲ್ಲಿದೆ. ಸುಂಗ್-ಯುನ್ ಎಂಬ ಭಿಕ್ಷು ಧರ್ಮಗ್ರಂಥಗಳನ್ನು ಸಂಗ್ರಹಿಸಲೆಂದು ಮಧ್ಯ ಏಷ್ಯ ಪ್ರದೇಶಕ್ಕೆ ಹೋಗಿದ್ದ. ತನ್ನ ಕೆಲಸವನ್ನು ತೀರಿಸಿಕೊಂಡು ಚೀಣಕ್ಕೆ ಹಿಂದಿರುಗುವಾಗ ಪಾಮಿರ್ ನಾಡಿನಲ್ಲಿದ್ದ,  ವೈ ಎಂಬಲ್ಲಿ ಬೋಧಿ ಧರ್ಮನನ್ನು ಭೇಟಿಮಾಡಿದ. ಬೋದಿ ಧರ್ಮನು ಸಂನ್ಯಾಸಿಗಳು ಹಿಡಿದುಕೊಳ್ಳುವ ದಂಡವನ್ನು ಹೆಗಲ ಮೇಲೆ ಹೊತ್ತಿದ್ದ; ಅದರ ತುದಿಯಿಂದ ಅವನ ಒಂದು ಜೋಡು ನೇತಾಡುತ್ತಿತ್ತು. ಇದು ಈ ಭಿಕ್ಷುವಿಗೆ ಸೋಜಿಗವೆನಿಸಿತು. ಮತ್ತೊಂದು ಜೋಡು ಎಲ್ಲಿ? ಚೀಣಕ್ಕೆ ಹಿಂದಿರುಗಿದ ಮೇಲೆ ಅವನಿಗೆ ತಿಳಿಯಿತು ಬೋಧಿಧರ್ಮ ತೀರಿಕೊಂಡು ಆಗಲೇ ಮೂರು ವರ್ಷಗಳು ಕಳೆದಿದ್ದು ವೆಂದು! ಮತ್ತೆ, ತಾನು ಕಂಡವನು ಬೋಧಿಧರ್ಮನೋ ಅಲ್ಲವೋ ಎಂಬ ಚಿಂತೆ ಅವನನ್ನು ಕಾಡತೊಡಗಿತು. ತಾನು ಕಂಡುದನ್ನು ಅಲ್ಲಿನ ಜನರಿಗೆ ತಿಳಿಸಲು, ಶಿಷ್ಯರು ಹ್ಸಿಯುಂಗ್ ಛು-ಆನ್-ಶನ್ ಬೆಟ್ಟದ ಮೇಲೆ ಬೋಧಿಧರ್ಮನ ಕಳೇಬರವನ್ನು ಹುಗಿದಿದ್ದ ಸಮಾಧಿ ಮಂದಿರವನ್ನು ತೆರೆದು ನೋಡಿದರು. ಅಲ್ಲಿ ಬೋಧಿಧರ್ಮನ ಶರೀರವಿದ್ದೆಡೆ ಅವನ ಒಂದೇ ಒಂದು ಜೋಡು ಇದ್ದಿತು! ಶರೀರವೂ ಇರಲಿಲ್ಲ, ಮತ್ತೊಂದು ಜೋಡೂ ಇರಲಿಲ್ಲ!

ಸ್ಮಾರಕ

ಬೋಧಿಧರ್ಮನು ಚೀಣಾದೇಶದಲ್ಲಿದ್ದ ಸಮಯ ಒಟ್ಟು ಅರವತ್ತಮೂರು ವರ್ಷಗಳೆಂದು ಹೇಳುತ್ತಾರೆ. ಅವನು ತೀರಿಕೊಂಡ ಮೇಲೆ ಚೀಣಾದೇಶದ ಚಕ್ರವರ್ತಿಯು ಅವನಿಗೆ ‘ಪರಮಸಂಬೋಧಿಯು ದ್ಯಾನಾಚಾರ್ಯ’ (ಯುಅನ್-ಚುಚ್ ಛನ್-ಶಿಃ) ಎಂಬ ಪ್ರಶಸ್ತಿಯನ್ನು ಕೊಟ್ಟು ಅವನ ನೆನಪನ್ನು ಸನ್ಮಾನಿಸಿದ ಅವನಿಗಾಗಿ ‘ಖುಂಗ್ ಕುಅನ್’ ಎಂಬ ಹೆಸರಿನ ಸ್ಮಾರಕ ಭವನವೊಂದನ್ನು ಹ್ಸಿಯುಂಗ್ ಬೆಟ್ಟದ ತಪ್ಪಲಿನಲ್ಲಿ ಕಟ್ಟಿಸಿದ. ಕ್ರಿಸ್ತಶಕ ೮೪೧-೮೪೭ ರಲ್ಲಿ ಬೌದ್ಧಧರ್ಮದ ವಿರುದ್ಧ ಅಲ್ಲಿ ನಡೆದ ಆಂದೋಲನದಲ್ಲಿ ಈ ಸ್ಮಾರಕ ಭವನವನ್ನು ನೆಲಸಮ ಮಾಡಿದರು. ಆದರೆ ೮೫೦ ರಲ್ಲಿ ಚಕ್ರವರ್ತಿಯ ಆದೇಶದ ಮೇಲೆ ಅದನ್ನು ಮತ್ತೇ ಕಟ್ಟಲಾಯಿತು.

ಮಾತಿಲ್ಲದ ಉಪದೇಶ

ಬೋಧಿಧರ್ಮನು ಗೌತಮಬುದ್ಧನಿಂದ ನೇರ ವಾದ ಪರಂಪರೆಯಲ್ಲಿ ಇಪ್ಪತ್ತೆಂಟನೆಯ ಗುರುವಾಗಿ ಮೈದಳೆದವನೆಂದು ನಂಬಿಕೆಯಿದೆ. ಇದು ಧ್ಯಾನಪಂಥದ ಪರಂಪರೆ. ಸ್ಪಷ್ಟವಾದ ಉಪದೇಶಕ್ಕಿಂತ ಇಂಗಿತದಿಂದ ಸಂಬೋಧಿಯನ್ನು ಸೂಚಿಸುವುದು ಇದರ ವೈಶಿಷ್ಟ್ಯ. ಬುದ್ಧನು ಒಮ್ಮೆ ಹೂವೊಂದನ್ನು ಕೈಯಲ್ಲೆತ್ತಿಕೊಂಡು ತನ್ನ ಶಿಷ್ಯರೆದುರು ತೋರಿಸಿದನಂತೆ. ಅದನ್ನು ನೋಡಿ ಮಹಾಕಾಶ್ಯಪನೆಂಬ ಶಿಷ್ಯ ತಲೆಯಾಡಿಸಿ ನಸುನಕ್ಕನಂತೆ. ಇತರ ಶಿಷ್ಯರಿಗೆ ಬುದ್ಧನ ಇಂಗಿತವೇನೆಂಬುದು ಅರ್ಥವೇ ಆಗಲಿಲ್ಲ. ಇದು ಮಾತಿಲ್ಲದ ಉಪದೇಶ; ಬಳಕೆಯ ವಿವರಣೆಗಳನ್ನು ಬದಿಗೊತ್ತಿ ನೇರವಾಗಿ ಕಾಣಿಸಿಕೊಟ್ಟ ತತ್ವ, ಈ ಸಂಬೋಧಿಯ ಮರ್ಮವನ್ನು ಬುದ್ಧ ಗುಟ್ಟಾಗಿರಿಸಿ ದ್ದನಂತೆ; ಆದರೆ ಮಹಾಕಾಶ್ಯಪನಿಗೆ ಈ ಗುಟ್ಟನ್ನು ಕಾಪಾಡಿಕೊಳ್ಳುವುದಾಗಲಿಲ್ಲ. ಅವನು ಇದನ್ನು ಒಂದು ಪರಂಪರೆಯಲ್ಲಿ ಮೂಡಿಸಿದ.

ಪಂಥದ ಪರಂಪರೆ

ಹೀಗೆ ಬುದ್ಧನೇ ಹೊತ್ತಿಸಿದ ಧರ್ಮದ ದೀಪವನ್ನು ಮಹಾಕಾಶ್ಯಪನು ಗುರುಶಿಷ್ಯ ಪರಂಪರೆಯಲ್ಲಿ ಉಳಿಸಿದನು. ಮಹಾಕಾಶ್ಯಪನಾದ ಮೇಲೆ ಈ ದೀಪವನ್ನು ಪಡೆದುಕೊಂಡವನು ಆನಂದ, ಅವನ ನಂತರ ಅವನ ಶಿಷ್ಯ ಶಾಣಕವಾಸ. ಮುಂದೆ ಈ ‘ಧರ್ಮದೀಪ ಪ್ರೇಷಣ’ ಪರಂಪರೆ ಸಾಗಿದ್ದುದು ಉಪಭುಕ್ತ, ಧೃತಕ, ಮಿಚ್ಛಕ, ವಸುಮಿತ್ರ, ಬುಧ್ಧನಂದಿ, ಬುಧ್ಧ ಮಿತ್ರ, ಪಾರ್ಶ್ವ, ಪುಣ್ಯ ಯಶ, ಅಶ್ವಘೋಶ, ಕಪಿಮಲ, ನಾಗಾರ್ಜುನ, ಕಾಣದೇವ, ರಾಹುಲಕ, ಸಂಘನಂದಿ, ಗಯ, ಕುಮಾರಕ ಜಯಟ, ವಸುಗಂಧು, ಮನೋರಥ, ಹಕ್ಲೇನ,  ಆರ್ಯಸಿಂಹ, ಬಸಿಯಸಿತ, ಪುಣ್ಯಮಿತ್ರ ಇವರ ಸಾಲಿನಲ್ಲಿ. (ಇವರಲ್ಲಿ ಹಕ್ಲೇನ, ಬಸಿಯಸಿತ, ಇವರ ವಿಷಯ ಖಚಿತವಿಲ್ಲ) ಪುಣ್ಯ ಮಿತ್ರನ ಶಿಷ್ಯ ಪ್ರಜ್ಞಾತಾರಾ, ಭಾರತ ದೇಶದ ಪೂರ್ವಭಾಗದಲ್ಲಿದ್ದ ಸಂತ ಇವನು. ಇವನು ತನ್ನ ಗುರುವಿನಿಂದ ಪಡೆದುಕೊಂಡ ದೀಪವನ್ನು ತನ್ನ ಶಿಷ್ಯ ಬೋಧಿಧರ್ಮನಿಗೆ ಕೊಟ್ಟ. ಈ ಭಾರತೀಯ ಪರಂಪರೆಯಲ್ಲಿ ಬೋಧಿಧರ್ಮನು ಇಪ್ಪತ್ತಂಟೆನೆ ಯವನು.

ಚೀಣಾದಲ್ಲಿ ಪರಂಪರೆ  

ಇವನು ಚೀಣಾ ದೇಶಕ್ಕೆ ಹೋಗಿ ಬಿಟ್ಟನಾದ್ದರಿಂದ ಈ ‘ದೀಪಪ್ರೇಷಣ’ ಪರಂಪರೆ ಭಾರತದೇಶದಲ್ಲಿ ನಿಂತು ಹೋಯಿತು; ಚೀಣಾದಲ್ಲಿ ಮೊದಲಾಯಿತು. ಅಲ್ಲಿನ ಪರಂಪರೆಗೆ ಮೊದಲ ಗುರು ಬೋಧಿಧರ್ಮನೇ. ಅವನಿಂದ ’ಧರ್ಮದೀಪ’ ವನ್ನು ಪಡೆದುಕೊಂಡವನು ಅವನ ಪಟ್ಟಶಿಷ್ಯ ಹುಯ್-ಖೆ, ಅವನ ನಂತರ ಸಂಗ್-ತ್ಸನ್  ಮೂರನೆಯವನು. ನಾಲ್ಕನೆಯವನು ಹುಂಗ್-ಜೆನ್, ಐದನೆಯವನು ಹುಯ್-ನೆಂಗ್ ಆರನೆಯವನು. ಇವನ ಕಾಲ ಕ್ರಿ.ಶ. ೬೩೮ ರಿಂದ ೭೧೩ ರವರೆಗೆ ಅವನೇ ಕಡೆಯ ಗುರು; ಅಲ್ಲಿಂದ ಮುಂದೆ ಧ್ಯಾನ ಪಂಥದಲ್ಲಿ ಕವಲುಗಳೊಡೆದು ನೇರವಾದ ಪರಂಪರೆ ಅಲ್ಲಿಯೂ ನಿಂತು ಹೋಯಿತು.

ಮಹಾಕಾಶ್ಯಪನಿಂದ ಬೋಧಿಧರ್ಮವರೆಗೆ ಇಪ್ಪತ್ತೆಂಟು ಮಂದಿ ಭಾರತೀಯ ಗುರುಗಳನ್ನು, ಬೋಧಿಧರ್ಮನಿಂದ ಹುಯ್-ನೆಂಗ್ ವರೆಗೆ ಚೀನೀ ಗುರುಗಳನ್ನು ‘ಧರ್ಮನಾಯಕ’ರೆಂದು ಕರೆಯುತ್ತಾರೆ. ಒಬ್ಬ ಗುರುವು ತನ್ನ ಗುರುವಿನಿಂದ ತನಗೆ ಕೊಡಲ್ಪಟ್ಟಿದ್ದ ಭಿಕ್ಷಾಪಾತ್ರೆಯನ್ನು ಕಾವಿಶಾಟೆಯನ್ನು (ಸಂನ್ಯಾಸಿಗಳು ಹೊದ್ದುಕೊಳ್ಳುವ ಬಟ್ಟೆ) ತಾನು ತೀರಿಕೊಳ್ಳುವ ಮೊದಲು ತನ್ನ ಶಿಷ್ಯರಲ್ಲಿ ಉತ್ತಮನಾದವನಿಗೆ ಕೊಡುವ ವಿಧಿಯೇ ‘ಧರ್ಮ ದೀಪ ಪ್ರೇಷಣ’ ಎನಿಸಿಕೊಳ್ಳುತ್ತದೆ. ಇದು ಹೊರ ವಿವರ; ಧ್ಯಾನದ ಹಿರಿಮೆಯನ್ನು ಅರಿತುಕೊಂಡು ಸಂಭೋಧಿಯನ್ನು ಪಡೆಯುವಂತೆ ಮಾಡುವುದು ಈ ಪದ್ಧತಿಯ ಮುಖ್ಯ ವಿವರ.

ಗಾಹೆ

ಬೋಧಿಧರ್ಮನಿಂದ ದೀಪವನ್ನು ಹುಯ್-ಖೆ ಪಡೆದುಕೊಂಡವನೇ ಅವನ ಬಾಯಿಂದ ಈ ಗಾಹೆ ತಾನೇ ತಾನಾಗಿ ಹೊರಹೊಮ್ಮಿತು.

“ಬೀಜಗಳನ್ನು ನೆಟ್ಟ ಪಾತಿಯೊಡಲಿಂದ

ಮೇಲೆದ್ದು ಹೂಗಳು ತೋರಿಕೊಳ್ಳುತ್ತವೆ

ಆದರೇನು ಬೀಜವೂ ಇರದು

ಹೂಗಳಂತೂ ಮೊದಲೇ ಇಲ್ಲ!’

ಈ ಗಾಹೆ ಒಗಟಿನಂತೆ ಕಾಣುತ್ತದೆಯಲ್ಲವೇ? ಆದರೆ ತಿಳಿದವರಿಗೆ ಅರ್ಥ ತಿಳಿಯಾಗಿದೆ. ಬೀಜಗಳ ಪಾತಿಯೆಂದರೆ ಮನುಷ್ಯನ ಮನಸ್ಸು(ಅಥವಾ ಹೃದಯ) ಅದರಲ್ಲಿನ ಬೀಜ ಪ್ರತಿಯೊಬ್ಬನಲ್ಲಿಯೂ ಅಡಗಿರುವ ಬುದ್ಧ ಸ್ವಭಾವ. ಪಾತಿಯಲ್ಲಿ ಕಾಣಿಸಿಕೊಳ್ಳುವ ಹೂಗಳು ಜ್ಞಾನದ ಹೂಗಳು, ಸಂಬೋಧಿ (ಎಂದರೆ ಸಾಕ್ಷಾತ್ಕಾರ) ಇದು ವ್ಯವಹಾರದ ನೆಲೆಯಲ್ಲಿ. ಪಾರಮಾರ್ಥಿಕವಾಗಿ ನೋಡಿದರೆ ಬೀಜವೂ ಇಲ್ಲ, ಪಾತಿಯೂ ಇಲ್ಲ, ಹೂವು ಇಲ್ಲ, ಎಂದರೆ ತತ್ವ ಬರಿಯ ಬಯಲು.  ವು-ತಿ ಚಕ್ರವರ್ತಿ ಕೇಳಿದ ಪ್ರಶ್ನೆ ‘ಬೌದ್ಧಧರ್ಮದ ಮೊದಲ ತತ್ವವೇನು?’ ಅದಕ್ಕೆ ಬೋಧಿಧರ್ಮನು ಕೊಟ್ಟ ಉತ್ತರ ‘ಕೊನೆ ಮೊದಲಿಲ್ಲದ ಸೊನ್ನೆ!’ ಇದೇ ಹುಯ್-ಖೆ ಯ ಗಾಹೆ ಹೇಳುವುದು.

ಬೋಧಿಧರ್ಮನ ಪ್ರಭಾವ

ಬೋಧಿಧರ್ಮ ಮೊದಲು ಮಾಡಿದ ಈ ಧ್ಯಾನಪಂಥ ಚೀಣದಲ್ಲಿ ಒಂದು ಸಾವಿರ ವರ್ಷಗಳಿಗೂ ಮೀರಿ ಮುಖ್ಯವಾದ ಪಂಥವೆನಿಸಿತ್ತು. ಅವನ ಬೋಧೆಯೆನ್ನೆಲ್ಲಾ ವಿವರಿಸಿ, ದೊಡ್ಡದೊಂದು ಸಾಹಿತ್ಯವೇ ಸಿದ್ಧವಾಯಿತು. ‘ಧರ್ಮದೀಪ ಪ್ರೇಷಣ’ದ ಪರಂಪರೆಯನ್ನು ಕುರಿತು ಹಲವು ಐತಿಹಾಸಿಕ ಗ್ರಂಥಗಳು ಬರೆಯಲ್ಪಟ್ಟವು. ಆರು ಮಂದಿ ‘ಧರ್ಮನಾಯಕರ’ ಪ್ರವಚನಗಳು ಚೀನದಲ್ಲಿ ತುಂಬ ಬಳಕೆಗೆ ಬಂದವು. ಅದರಲ್ಲಿಯೂ ಕಡೆಯ ಧರ್ಮನಾಯಕನೆನಿಸಿದ ಹುಯ್ ನೆಂಗ್ ಚೀಣ ದೇಶದ ಧಾರ್ಮಿಕ ಇತಿಹಾಸದಲ್ಲೇ ಪ್ರಮುಖ ವ್ಯಕ್ತಿ, ತಂಗ್ ರಾಜವಂಶವು ಚೀನಾದೇಶವನ್ನು ಆಳುತ್ತಿದ್ದಾಗ (ಎಂದರೆ ಕ್ರಿ.ಶ. ೭೦೦ರಿಂದ ೯೦೬ರ ವರೆಗೆ) ಧ್ಯಾನಪಂಥ ವಿಶೇಷವಾಗಿ ಹರಡಲು ಇವನೇ ಕಾರಣನಾದನು.

ಜಪಾನಿನಲ್ಲಿ  

ಅವನ ಶಿಷ್ಯನಾದ ಹುಯ್ ಜಂಗ್(ಮರಣ ಕ್ರಿ.ಶ. ೭೭೫) ಎಂಬುವವನ ಕಾಲದಲ್ಲಿ ಧ್ಯಾನಪಂಥವು ‘ರಿನ್ ಜಯಿ’ ಮತ್ತು ‘ಸೊತೋ’ ಎಂಬ ಮುಖ್ಯ ವಿಭಾಗಗಳಲ್ಲಿ ಒಡೆಯಿತು. ಇವುಗಳಲ್ಲಿ ಮೊದಲ ವಿಭಾಗವು ಕ್ರಿ ಶ. ೧೧೯೧ರ ಸುಮಾರಿಗೆ ಜಪಾನ್ ದೇಶವನ್ನು ಮುಟ್ಟಿತು. ಅಲ್ಲಿನ ಏಸೈ ಎಂಬ ಸಂನ್ಯಾಸಿ (೧೧೪೧ರಿಂದ೧೨೧೫) ಚೀನಾ ದೇಶಕ್ಕೆ ಬಂದು ಈ ಪಂಥವನ್ನು ಅರಿತುಕೊಂಡು ಅದನ್ನು ಜಪಾನಿಗೆ ಕೊಂಡೊಯ್ದ. ಇನ್ನೊಂದು ವಿಭಾಗವೂ ಜಪಾನನ್ನು ೧೨೨೭ ರಲ್ಲಿ ಮುಟ್ಟಿತು.ಇದನ್ನು ಚೀನಾ ದೇಶದಿಂದ ಪಡೆದುಕೊಂಡು ಹೋದವನು ದೋಗೆನ್ ಎಂಬ ಸುಪ್ರಸಿದ್ಧ ಜಪಾನೀ ಸಂತ (೧೨೦೦-೧೨೫೩)

ಈ ಎರಡೂ ವಿಭಾಗಗಳು ಜಪಾನಿನಲ್ಲಿ ಬಲವಾಗಿ ಬೇರೂರಿ ಬೆಳೆದವು. ಅವುಗಳ ಪ್ರಭಾವ ಇಂದಿಗೂ ಉಳಿದಿದೆ. ಆ ಜನರಿಗೆ ಬೋಧಿಧರ್ಮ ಎಂದರೆ ತುಂಬಾ ಗೌರವ; ಅಲ್ಲಿ ಅವನನ್ನು ‘ದರುಮ’ ಎಂದು ಕರೆಯುತ್ತಾರೆ. ಅವನ ಚಿತ್ರಗಳು ಸಾಮಾನ್ಯವಾಗಿ ಪ್ರತಿಯೊಂದು ಜಪಾನಿ ಮನೆಯಲ್ಲಿಯೂ ಇರುತ್ತವೆ. ಮಕ್ಕಳಿಗೆ ಆಟಿಗೆಯಾಗಿ ಡೊಳ್ಳು ಹೊಟ್ಟೆಯ, ಕುಳ್ಳು ಮೈಯ, ನಗುಮುಖದ ‘ದರುಮ’ ಬೊಂಬೆಯನ್ನು ಮಾಡುತ್ತಾರೆ. ಈ ಬೊಂಬೆಯನ್ನು ಲೋಹದಲ್ಲಿ ಮಾಡಿಟ್ಟು ಅದನ್ನು ಹೇಗೆ ಇರಿಸಿದರೂ ನೆಟ್ಟಗೆ ಕುಳಿತ ಭಂಗಿಗೆ ಮರಳುವಂತೆ ಮಾಡಿರುತ್ತಾರೆ.

ಚಾದೊಡನೆ ನಂಟು

ಚೀಣಾ, ಜಪಾನ್ ದೇಶಗಳಲ್ಲಿ ಟೀ(ಚಾ) ಕುಡಿಯುವ ಪದ್ಧತಿ ಹೆಚ್ಚು. ಜಪಾನಿನಲ್ಲಿ  ಟೀ ಕುಡಿಯುವುದನ್ನೇ ಒಂದು ವಿಸ್ತೃತವಾದ ಧಾರ್ಮಿಕ ವಿಧಿಯನ್ನಾಗಿ ಬೆಳೆಸಿದ್ದಾರೆ. ಧ್ಯಾನ ಪಂಥದವರಲ್ಲಿ ಈ ವಿಧಿ ಸ್ವಾರಸ್ಯವಾಗಿರುತ್ತದೆ. ಟೀ ಪಾನೀಯಕ್ಕೆ ಅಲ್ಲಿ ದೊರೆತಿರುವ ಜನಪ್ರೀತಿಗೆ ಕಾರಣ ಅದು ಬೋಧಿಧರ್ಮನಿಗೆ ಸಂಬಧಿಸಿದೆಂದು. ಭಾರತ ದೇಶದಿಂದ ಟೀ ಎಲೆಗಳನ್ನು, ಟೀ ಪಾನೀಯವನ್ನು ಸಿದ್ಧಪಡಿಸುವ ಬಗೆಯನ್ನು ಬೋಧಿ ಧರ್ಮನೇ ಚೀಣಾ ದೇಶಕ್ಕೆ ಕೊಂಡೊಯ್ದನೆಂದು ತಿಳಿದು ಬರುತ್ತದೆ. ಈ ವಿಚಾರವಾಗಿ ಕಥೆಯೊಂದನ್ನು ಹೇಳುತ್ತಾರೆ. ಬೋಧಿಧರ್ಮನು ಒಂಭತ್ತು ವರ್ಷಗಳ ವರೆಗೆ ಗೋಡೆಗೆ ಮುಖಮಾಡಿ ಕುಳಿತ ವಿಚಾರ ಆಗಲೇ ಬಂದಿದೆಯಷ್ಟೆ. ಹೀಗೆ ಧ್ಯಾನವನ್ನು ಮಾಡುವಾಗ ಗೋಡೆಯನ್ನೇ ಬಿರುಗಣ್ಣಿನಿಂದ ದಿಟ್ಟಿಸುತ್ತಿದ್ದನಷ್ಟೆ? ಧ್ಯಾನ ಮುಗಿಸಿದ ಮೇಲೆ ಅವನು ಕಣ್ಣುಜ್ಜಿಕೊಳ್ಳಲು ಅಷ್ಟು ಕಾಲ ಮುದಿಡಿಕೊಂಡಿದ್ದ ಕಣ್ಣು ರೆಪ್ಪೆಗಳು ಕಳಚಿ ಕೈಗೆ ಬಂದವಂತೆ. ಅವನ್ನು ಅವನು ಭೂಮಿಯ ಮೇಲೆ ಎಸೆಯಲು ಅದರಿಂದ ಟೀ ಗಿಡ ಹುಟ್ಟಿಕೊಂಡಿತಂತೆ.

ಪಂಥದ ವಿವರಗಳು

ಬೋಧಿಧರ್ಮದ ಉಪದೇಶ ಸಾಮಾನ್ಯವಾಗಿ ಸಾಂಪ್ರದಾಯಿಕವಾದ ಬೌದ್ಧಪ್ರವಚನಗಳ ಹೊರಗಿರುವುದು. ಇತರರಿಗೆ ಬುದ್ಧನು ಹೇಳಿದ್ದೆನ್ನುವ ಸೂತ್ರಗಳೇ ಪರಮ ಪ್ರಮಾಣ. ಆದರೆ ಬೋಧಿಧರ್ಮನು ಈ ಸೂತ್ರಗಳಿಗಾಗಲಿ, ಅವುಗಳ ವಿಂಗಡಣೆಗಾಗಲಿ, ವಿವರಣೆಗಾಗಲೀ ಅಷ್ಟಾಗಿ ಬೆಲೆಯನ್ನು ಕೊಡಲಿಲ್ಲ. ಗುರುವು ಶಿಷ್ಯನಿಗೆ ಯಾವಮಾತಿನ ನೆರವೂ ಇಲ್ಲದೆ, ನೇರವಾಗಿ ಮನಸ್ಸಿನಿಂದ ಮನಸ್ಸಿಗೆ ಸಲ್ಲಿಸುವ ಉಪದೇಶವೇ ದಿಟವಾದ ಉಪದೇಶವೆಂದು ಅವನ ಎಣಿಕೆ. ಹೃದಯದ ಕಡೆಗೆ ಬೆರಳಿಟ್ಟು ತೋರಿಸುವುದನ್ನು ಇವನು ಉಪದೇಶದ ಸಂಕೇತವನ್ನಾಗಿ ಬಳಸಿದನು. ಎಂದರೆ ಗುರುವಿನ ಅನುಭವವು ಶಿಷ್ಯನ ಅನುಭವವಾಗಿದೆ. ಮಾರ್ಪಡುವುದೇ ಇಲ್ಲಿ ಮುಖ್ಯವಾದ ಪ್ರಸಂಗ.

ಧರ್ಮಗ್ರಂಥಗಳೇಕೆ ?

ಮತ್ತೆ ಧರ್ಮಗ್ರಂಥಗಳ ಉಪಯೋಗವೇನು? ಬೋಧಿಧರ್ಮ ಕೊಡುವ ಉತ್ತರ ಹೀಗೆ. ‘ಮಗು ಚಂದ್ರನನ್ನು ನೋಡ ಬಯಸುತ್ತದೆಯೆನ್ನಿ.’ ‘ಚಂದ್ರ ಎಲ್ಲಿ?’ ಎಂದು ಕೇಳುತ್ತದೆ. ನೀವು ‘ಅಗೋ ಅಲಿ’ ಎಂದು ಆಕಾಶದಲ್ಲಿ ಚಂದ್ರನ ಕಡೆಗೆ ಬೆರಳುಮಡಿ ತೋರಿಸುತ್ತೀರಿ. ಮಗು ಏನು ಮಾಡುತ್ತದೆ? ಮೊದಲು ನಿಮ್ಮ ಬೆರಳನ್ನು ನೋಡಿ ಅದನ್ನೇ ಅನುಸರಿಸಿ ಅದರಾಚೆ ತನ್ನ ನೋಟವನ್ನು ಹರಿಸಿ ಚಂದ್ರನನ್ನು ಕಾಣುತ್ತದೆ. ಬೆರಳು ಮಾಡಿ ತೋರಿಸುವುದೇ ಶಾಸ್ತ್ರ, ಧರ್ಮಗ್ರಂಥಗಳು. ಆದರೆ ಬೆರಳೇ ಚಂದ್ರನಲ್ಲವಷ್ಟೆ? ಮತ್ತು ಚಂದ್ರನನ್ನು ಕಂಡಮೇಲೆ ಬೆರಳಿನ ಉಪಯೋಗವಿಲ್ಲ. ಸೂತ್ರಗಳು, ಪ್ರವಚನಗಳು, ಶಾಸ್ತ್ರವೂ ಮಾಡುವುದು ಇಷ್ಟೇ. ಅವುಗಳಲ್ಲೇ ನಮ್ಮ ಉತ್ಸಾಹವನ್ನೆಲ್ಲ ಮುಗಿಸಿ ಬಿಡುವುದು ತಪ್ಪು.

ಬರಹದಲ್ಲಿ ಮೂಡಿಬಂದ ಶಾಸ್ತ್ರಗ್ರಂಥಗಳ ಪ್ರಯೋಜನ ಹೀಗೆ ಕಡಿಮೆಯಾದರೂ, ಬೋಧಿಧರ್ಮನು ತನ್ನ ಉಪದೇಶಕ್ಕೆ ಬಹಳ ಮಟ್ಟಿಗೆ ಬಳಸಿಕೊಂಡ ಗ್ರಂಥವೆಂದರೆ ‘ಲಂಕಾವತಾರ ಸೂತ್ರ’ ಅವನ ಪಂಥದ ಹಿರಿಯರು ಇದರೊಂದಿಗೆ ‘ವಜ್ರಚ್ಛೇದಿಕಾ-ಪ್ರಜ್ಞಾಪಾರ ಮಿತಾ-ಸೂತ್ರ’, ‘ಶೂರಂಗಮ ಸೂತ್ರ’, ‘ವಿಮಲಕೀರ್ತಿ ನಿರ್ದೇಶಸೂತ್ರ’ ಇವುಗಳನ್ನು ಬಳಸುತ್ತಾ ಬಂದರು. ಜಪಾನಿನಲ್ಲಿ ‘ಪ್ರಜ್ಞಾಪಾರಮಿತ-ಹೃದಯಸೂತ್ರ’ ವನ್ನು ತುಂಬಾ ಗೌರವದಿಂದ ಕಾಣುತ್ತಾರೆ.

ಮೂರು ವಿಚಾರಗಳು

ಬೋಧಿಧರ್ಮನು ಸಾಧಕರಿಗೆ ಮೂರು ವಿಚಾರಗಳನ್ನು ಮತ್ತೇ ಮತ್ತೇ ಹೇಳುತ್ತಿದ್ದನು.

‘ಸರಿಯಾದ ಗುರುವಿನಿಂದ ಉಪದೇಶವನ್ನು ಪಡೆಯಿರಿ;

ಪ್ರತಿಯೊಂದು ಪ್ರಾಣಿಯಲ್ಲಿಯೂ ಬುದ್ಧ ಸ್ವಭಾವವಿದೆಯೆಂದು ನಂಬಿ;’

ಈ ತತ್ತ್ವವನ್ನು ಈಗಲೇ ನಿಮ್ಮ ಅನುಭವದಲ್ಲಿ ತಂದುಕೊಳ್ಳಿ.

ಹೀಗೆ ಅನುಭವವೇ ಮುಖ್ಯ, ನೇರವಾದ ಉಪದೇಶವೇ ದಾರಿ ಎಂದು ಅವನು ಬಗೆದಿದ್ದನಾದ್ದರಿಂದ ಯಾವ ಗ್ರಂಥಗಳನ್ನೂ ಅವನು ಬರೆಯಲಿಲ್ಲ. ಆದರೆ ಅವನದೆಂದು ಹೇಳುವ ಏಳು ಗ್ರಂಥಗಳನ್ನು ಈಚೆಗೆ ಹೊರತೆಗೆದಿದ್ದಾರೆಂದು ಕೆಲವರು ಹೇಳುತ್ತಾರೆ. ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಚೀಣದ  ತುನ್ ಹು ಅಂಗ್ ಎಂಬ ಬೆಟ್ಟದ ಗುಹೆಗಳನ್ನು ಶೋಧಿಸಿ, ಅಲ್ಲಿ ತುಂಬ ಹಿಂದಿನ ಕಲಾಕೃತಿಗಳು, ಗ್ರಂಥಗಳು, ಧಾರ್ಮಿಕ ಸಾಮಾಗ್ರಿಗಳು ಇದ್ದುದನ್ನು ಕಂಡು ಹಿಡಿದರು. ಇಲ್ಲಿ ದೊರೆತ ಗ್ರಂಥಗಳಲ್ಲಿ ‘ಅಮನಸ್ಕಸ್ಥಿತಿ’ ‘ಮನಸ್ಸಿನ ರೂಪಕಲ್ಪನೆ’ ದೃಷ್ಟಿಧ್ಯಾನದ ಬಗೆ’ ಮತ್ತು ‘ನಾಲ್ಕು ಸಾಧನೆಗಳು’ ಎಂಬ ಪುಸ್ತಕಗಳು ಸೇರಿವೆ. ಇವು ನಾಲ್ಕೂ ಬೋಧಿಧರ್ಮನ ಬರಹವೆಂದು ಕೆಲವು ಪಂಡಿತರು ಸೂಚಿಸಿದ್ದಾರೆ. ಇವೆಲ್ಲ ಚೀಣೀ ಭಾಷೆಯಲ್ಲೇ ಇವೆ. ಇವಲ್ಲದೆ ಪ್ರವಚನಗಳಿಂದ ಮಾಡಿಕೊಂಡ ಕೆಲವು ಟಿಪ್ಪಣಿಗಳೂ ಈ ಸಂಗ್ರಹದಲ್ಲಿ ಸೇರಿವೆ. ಬೋಧಿಧರ್ಮನ ಪ್ರವಚನಗಳಿಂದಲೇ ಮಾಡಿಕೊಂಡ ಟಿಪ್ಪಣಿಗಳು ಇವು ಎಂದು ಊಹೆ.

ಬೋಧಿಧರ್ಮನ ಬೋಧೆ

ಮೇಲೆ ಹೇಳಿದ ಪುಸ್ತಕಗಳು ಬೋಧಿಧರ್ಮನೇ ಬರೆದುವೋ ಅಲ್ಲವೊ ಎಂಬುದು ಖಚಿತವಾಗಿ ತಿಳಿಯದು. ಅವನು ಏನನ್ನೂ ಬರೆಯಲಿಲ್ಲವೆಂದೇ ಹಲವು ಪಂಡಿತರ ಎಣಿಕೆ. ಆದರೆ ಬೋಧಿಧರ್ಮನ ಉಪದೇಶಗಳನ್ನು ಅವನ ಪಟ್ಟಶಿಷ್ಯ ಹುಯ್ -ಖೆ ಬರಹದಲ್ಲಿ ಮೂಡಿಸಿದ್ದಾನೆ. ಇವನ ಪ್ರಕಾರ ಬೋಧಿಧರ್ಮನ ಬೋಧೆಯಲ್ಲಿ ಎರಡು ವಿಭಾಗಗಳಿವೆ  ಮೂಲತತ್ವ ಮತ್ತು ಅಭ್ಯಾಸ.

ಮೂಲತತ್ವವೆಂದರೆ, ಬದುಕಿರುವ ಎಲ್ಲ ಪ್ರಾಣಿಗಳಲ್ಲಿಯೂ ಒಂದೇ ಒಂದು ಸ್ವಭಾವವಿದೆಯೆಂಬ ನಂಬಿಕೆ. ಈ ಸ್ವಭಾವವೇ ಬುದ್ಧಸ್ವಭಾವ. ಇರುವೆ, ಆನೆ, ನಾಯಿ, ನರಿ, ಹುಲಿ, ಸಿಂಹ, ಗಿಡ, ಮರ, ಮನುಷ್ಯ ಎಲ್ಲರಲ್ಲಿಯೂ ಇರುವುದು ಇದೇ ತತ್ತ್ವ. ಆದರೆ ಬಹುಮಟ್ಟಿಗೆ ಈ ಸ್ವಭಾವವನ್ನು ದಡ್ಡತನದ ಧೂಳು ಮುಸುಕಿ ಮರೆ ಮಾಡಿರುತ್ತದೆ. ಮನುಷ್ಯರಾದವರು ಈ ಸ್ವಭಾವವನ್ನು ಮತ್ತೆ ಅರಿತುಕೊಳ್ಳಬಲ್ಲರು. ಅದು ಇದು, ತಾನು ಇತರರು, ಅವನು ಇವನು, ಕೆಟ್ಟದು ಒಳ್ಳೆಯದು, ಹಿತ, ಹಗೆ ಮೊದಲಾದ ಭೇದಗಳನ್ನೆಣಿಸದೆ ಗೋಡೆಯ ಮುಂದೆ ಮುಖಮಾಡಿ ಕುಳಿತು ತನ್ನ ಸ್ವಭಾವವನ್ನೇ ಅರಿತು ಕೊಳ್ಳಬೇಕು. ಹವ್ಯಾಸಗಳನ್ನೆಲ್ಲ ದೂರವಿರಿಸಿ ನೆಮ್ಮದಿಯಾಗಿ ಕುಳಿತು ಮನಸ್ಸನ್ನು ನಿಲ್ಲಿಸಿದರೆ ಆಗ ಸ್ವಭಾವದ  ಅರಿವು ಮೂಡುವುದು.

ನಾಲ್ಕು ಬಗೆಯ ಅಭ್ಯಾಸಗಳು

ಅಭ್ಯಾಸದಲ್ಲಿ ನಾಲ್ಕು ಬಗೆಗಳು. ಮೊದಲನೆಯದು ತೃಪ್ತಿ.  ಬದುಕಿನಲ್ಲಿ ತನಗೆ ತಾನಾಗಿ ಏನು ಒದಗುವುದೋ ಅಷ್ಟರಿಂದಲೇ ನೆಮ್ಮದಿಯನ್ನು ಪಡೆದುಕೊಳ್ಳುವುದು. ಸುಖ ಬರಲಿ ತೀರ ಹಿಗ್ಗದೇ ದುಃಖಬರಲಿ ತೀರ ಕುಗ್ಗದೆ ‘ಬಂದುದೆಲ್ಲ ಬರಲಿ ನನ್ನ ದಾರಿ ಮಟ್ಟಿಗೆ ನೆಟ್ಟಗಿರಲಿ’ ಎಂಬ ಗಟ್ಟಿನಮನಸ್ಸಿನಿಂದ ಬಾಳುವುದು.

ಎರಡನೆಯದು ಕರ್ಮವನ್ನು ಕುರಿತದ್ದು. ಬರುವುದೆಲ್ಲ ತಾನು ಹಿಂದೆ ಮಾಡಿದ ಕರ್ಮದ ದಾರಿಯನ್ನು ಹಿಡಿದೇ ಬರುವುದು ಎಂಬ ನಂಬಿಕೆ ಈ ನೆಮ್ಮದಿಯ ಹಿನ್ನಲೆಯಲ್ಲಿರಬೇಕು. ತನಗೆ ಈಗ ಕಷ್ಟ ಬಂದಿರುವುದು ಈ ಕರ್ಮದ ಫಲವೇ; ಕಷ್ಟವನ್ನು ನಗುಮುಖದಿಂದ ಅನುಭವಿಸಿದರೆ ಆ ಕರ್ಮ ಬೇಗನೇ ಮುಗಿದು ಹೋಗುತ್ತದೆ. ಕರ್ಮದ ಫಲವನ್ನು ಹೇಗೂ ಅನುಭವಿಸದೇ ತೀರದು. ನಮಗೆ ಕಷ್ಟವೆಂದು ಬೇರೆಯವರನ್ನು ದೂರಿದರೆ, ಬೇರೆಯವರು ಸುಖವಾಗಿದ್ದಾರೆಂದು ನಮ್ಮ ಮನಸ್ಸನ್ನು ಕಿರಿಕಿರಿ ಮಾಡಿಕೊಂಡರೆ ಕರ್ಮ ಹೆಚ್ಚುತ್ತದೆ.

ಮೂರನೆಯದು ಯಾವುದನ್ನೂ ಅರಸ ದಿರುವುದು, ‘ಅದು ಬೇಕು’ ‘ಇದು ಬೇಕು’ ಎಂಬ ಹಂಬಲವಿಲ್ಲದೆ, ‘ಇದು ನನ್ನಿಂದ ಹೋಯಿತು’, ‘ಅದು ಬರಲಿಲ್ಲ’ ಎಂಬ ದುಗುಡವಿಲ್ಲದೆ ನೆಮ್ಮದಿಯಿಂದ ಇರುವುದು ‘ವಜ್ರಸಮಾದಿ’ ಎನಿಸಿಕೊಳ್ಳುತ್ತದೆ.

ನಾಲ್ಕನೆಯದ ‘ಅಹಂ’ (ನಾನು) ಎನ್ನುವ ಭಾವನೆಯನ್ನು ಬಿಟ್ಟು, ತನ್ನ ಸ್ವಂತ ಉಪಯೋಗಕ್ಕೆ ಅಥವಾ ಲಾಭಕ್ಕೆ ಏನನ್ನೂ ಮಾಡದೆ, ಬೇರೆಯವರ ಹಿತಕ್ಕಾಗಿಯೇ ದುಡಿಯುವುದು. ಈ ನಾಲ್ಕೂ ಉಪದೇಶಗಳು ‘ವಜ್ರಸಮಾಧಿ ಸೂತ್ರ’ ವೆಂಬ ಹಳೆಯ ಸಂಸ್ಕೃತ ಗ್ರಂಥದಿಂದ ತೆಗೆದು ಕೊಂಡವು ಎಂದು ಹೇಳುತ್ತಾರೆ. ಅಂತೂ, ಈ ಉಪದೇಶ ಗಳೇ ಚೀಣದಲ್ಲೂ ಜಪಾನಿನಲ್ಲೂ ಹರಡಿದ ಧ್ಯಾನಪಂಥಕ್ಕೆ ಕಾರಣವಾದುವು.

ನಾಲ್ಕು ವಿವರಗಳು

ಬೋಧಿಧರ್ಮನ ಉಪದೇಶಗಳೆನ್ನೆಲ್ಲ ನಾಲ್ಕು ಮಾತಿನಲ್ಲಿ ಸಂಗ್ರಹಿಸುವುದು ವಾಡಿಕೆಯಾಗಿದೆ. ಇದನ್ನೇ ಅವನ ನಂತರ ಬಂದ ಉಪದೇಶಕರು ಪ್ರಚಾರಮಾಡಿದರು.

  • ಶ್ರುತಿಯ ಹೊರಗೆ; ಸಂಪ್ರದಾಯದಿಂದ ದೂರ.
  • ಮಾತಿನ ಮೇಲೆ, ಅಕ್ಷರದ ಮೇಲೆ ನಿಂತಿಲ್ಲ.
  • ಮನುಷ್ಯನ ಹೃದಯವನ್ನೇ ನೇರವಾಗಿ ತೋರಿಸುವುದು.
  • ತನ್ನ ಸ್ವಭಾವವನ್ನೇ ನೋಡಿಕೊಳ್ಳುವುದು; ಬುದ್ಧ ನಾಗುವುದು.

ಈ ನಾಲ್ಕು ವಿವರಗಳ ವಿಸ್ತಾರವೇ ‘ಝೆನ್‌ಪಂಥ’ ವೆಂದು ಹೇಳುತ್ತಾರೆ. ಬುದ್ಧನ ಉಪದೇಶದಲ್ಲಿ ಸಾಂಪ್ರದಾಯಿಕವಾದ ಒಂದು ಪರಂಪರೆಯಷ್ಟೇ; ಬುದ್ಧನ ಮಾತುಗಳೆನ್ನುವ ತ್ರಿಪಿಟಕಗಳನ್ನೇ ಇದು ಅವಲಂಬಿಸಿದೆ. ಆದರೆ ಬೋಧಿಧರ್ಮ ಇದನ್ನು ಅಲ್ಲಗಳೆದು ಬರಿಯ ಶ್ರುತಿ ಯಿಂದ ಬೋಧಿ ಬರುವುದಿಲ್ಲವೆಂದ. ಶಾಸ್ತ್ರಕ್ಕೆ ಅಂಟಿಕೊಂಡಿದ್ದರೆ ಮನಸ್ಸು ನಿರಾಳವಾಗುವುದಿಲ್ಲ; ಅದಕ್ಕೆ ಬಿಡುವು ಬಾರದೆ ಬೋಧಿಯೂ ಬರುವುದಿಲ್ಲ.

ಶಾಸ್ತ್ರವೆಂದರೇನು? ಬರಿಯ ಮಾತಿನ ಮಾಲೆ. ಅಕ್ಷರಗಳ ಅರಮನೆ. ಅದು ಜಡ. ಅದರಲ್ಲಿ ಚೈತನ್ಯವೆಲ್ಲಿದೆ? ಶಾಸ್ತ್ರ ಇರುವುದು ಅನುಷ್ಠಾನಕ್ಕೆ ಪ್ರೇರಕವಾಗಲೆಂದು ಅನುಷ್ಠಾನ ಮಾಡದೆ ಬರಿಯ ಶಾಸ್ತ್ರ ವನ್ನು ಗೌರವಿಸಿಬಿಟ್ಟರೆ ಏನು ಪುರುಷಾರ್ಥವಾದ ಹಾಗಾಯಿತು? ಧ್ಯಾನಪಂಥದ ಉಪದೇಶ ಶಾಸ್ತ್ರವನ್ನು ಅವಲಂಬಿಸಿಲ್ಲ; ಸಂಪ್ರದಾಯದ ಆಸರೆಯಲ್ಲಿ ನಿಂತಿಲ್ಲ.

ಧ್ಯಾನ ಬುದ್ಧಿಗೆ ಮಾತ್ರ ಸಂಸ್ಕಾರ ಮಾಡುವುದಲ್ಲ, ಇಡೀ ಬಾಳನ್ನೇ ಮಾರ್ಪಡಿಸಬೇಕು. ಮನುಷ್ಯನ ಎಲ್ಲ ಕೆಲಸಗಳಿಗೂ ಯೋಚನೆಗಳಿಗೂ ಮೂಲಭೂತವಾದುದು ಅವನ ಹೃದಯ. ಅವನ ಹೃದಯಲ್ಲಿಯೇ ಬುದ್ಧತ್ವ ಇರುವುದು; ಬೋಧಿ ಬರುವುದು ಅಲ್ಲಿಂದಲೇ, ಆದರೆ ಅದರಲ್ಲಿ ಬಯಕೆಗಳಿಂದ, ಬಿಗುಮಾನಗಳಿಂದ ಬಲೆ ಯೊಂದು ಸಿದ್ಧವಾಗಿ ಬೋಧಿಯ ಬೆಳಕು ಕಾಣದಾಗಿದೆ, ಅದರ ಮುಂದೆ ತೆರೆಯೊಂದು ಎದ್ದಿದೆ. ತೆರೆ ತೆಗೆದರೆ ಸಾಕು, ಬೋಧಿಯ ಬೆಳಕು ಹೊರಬರುತ್ತದೆ. ಬೋಧಿಧರ್ಮನ ಉಪದೇಶಗಳಲ್ಲಿ ಮುಖ್ಯವಾದುದು, ನೇರವಾಗಿ ಹೃದಯವನ್ನೇ ತೋರಿಸಬೇಕೆಂಬ ಹಟ. ಅವನ ಉಪದೇಶ ಬುದ್ಧಿಗಲ್ಲ, ಹೃದಯಕ್ಕೆ, ತಿಳುವಳಿಕೆ ಬಂದರೆ ಇಡೀ ಬಾಳೇ ಬದಲಾಗುತ್ತದೆ.

ದೇಹವೇ ಬೋಧಿವೃಕ್ಷ: ಮನಸ್ಸೇ ರನ್ನಗನ್ನಡಿ

ಬುದ್ಧನಾಗಬೇಕೆಂಬ ಹಂಬಲ ಇರಬೇಕು. ಆದರೆ ಬುದ್ಧತ್ವ ಎಲ್ಲಿಂದಲೋ ನಮಗೆ ಬರುವ, ಒದಗುವ ವಸ್ತುವಲ್ಲ, ಯಾವುದೋ ಕಾಲಕ್ಕೆ ಹೇಗೋ ಬಂದೊದಗುವ ಸಿದ್ಧಿಯಲ್ಲ. ಬುದ್ಧತ್ವ ನಮ್ಮಲ್ಲಿ ಒಬ್ಬೊಬ್ಬರ ಸ್ವಭಾವದಲ್ಲಿಯೂ ಇದೆ. ಅದಿಲ್ಲದೆ ಬುದುಕೇ ಇಲ್ಲ. ಅದು ಮೂಲದಲ್ಲಿ ಇರದಿದ್ದರೆ ಬುದ್ಧನಾಗುವ ಬಯಕೆಯೂ ಇರುವುದಿಲ್ಲ. ಆದುದರಿಂದ ಬುದ್ಧತ್ವವನ್ನು ಪಡೆಯಲು ನಾವು ಅಲ್ಲಿ, ಇಲ್ಲಿ ಅರಸಬೇಕಾಗಿಲ್ಲ. ನಮ್ಮೊಡಲಲ್ಲೇ ದಿಟ್ಟಿಸಿ ನಮ್ಮನ್ನೇ ನಾವು ನೋಡಿಕೊಳ್ಳಬೇಕು.

ಗೌತಮನು ಗಯೆಯ ಬಳಿ ಬೋಧಿವೃಕ್ಷ ದಡಿಯಲ್ಲಿ ಕುಳಿತು ಧ್ಯಾನಮಾಡಿ ತಾನೆ ಬೋಧಿಯನ್ನು ಪಡೆದುಕೊಂಡನೆಂದು ಕಥೆ ಹೇಳುವುದು? ದಿಟವಾಗಿ ನೋಡಿದರೆ, ನಮ್ಮ ದೇಹವೇ ಬೋಧಿವೃಕ್ಷ, ನಮ್ಮ ಮನಸ್ಸೇ ರನ್ನಗನ್ನಡಿ. ಅದನ್ನುಜ್ಜಿ, ತಿಕ್ಕಿ, ಚೊಕ್ಕಮಾಡಿಕೊಂಡರೆ ಅದರಲ್ಲಿ ನಮ್ಮನ್ನೇ ನಾವು ಕಂಡುಕೊಳ್ಳುತ್ತೇವೆ. ಇದೇ ಬೋಧಿ. ಹೃದಯದಲ್ಲಿ ಕೊಳೆ ಸೇರಿದರೆ ಸ್ವಭಾವದ ಶುದ್ಧಿ ಮಾಸುತ್ತದೆ, ಬದುಕಿನಲ್ಲಿ ಕಷ್ಟ ಕಾಣುತ್ತದೆ. ಧರ್ಮವೆಂದರೆ ಈ ಕೊಳೆಯನ್ನು ಕಳೆದುಕೊಳ್ಳುವುದಷ್ಟೇ. ಅದಕ್ಕೆ ಧ್ಯಾನವೊಂದೇ ದಾರಿ.

ಧ್ಯಾನವೆಂದರೆ ಪಟ್ಟು ಹಿಡಿದು ಪದ್ಮಾಸನದಲ್ಲಿ ಕೂಡುವುದಷ್ಟೇ ಎಂದು ಕೊಳ್ಳಬಾರದು. ಬೋಧಿಧರ್ಮನ ಪರಂಪರೆಯಲ್ಲಿ ಬಂದ ಸಂತನೊಬ್ಬನ ಸಂವಾದ ಸ್ವಾರಸ್ಯವಾಗಿದೆ. ಮ-ತ್ಸು(ಕ್ರಿ.ಶ.೭೮೮ ರ ಸುಮಾರು) ಎಂಬಾತ ಛ ಉಅನ್-ಫ ಎಂಬಲ್ಲಿ ಆಶ್ರಮವನ್ನು ಕಟ್ಟಿ ಕೊಂಡು ಎಡೆಬಿಡದೆ ಆಸನವನ್ನು ಅಭ್ಯಾಸಮಾಡುತ್ತಿದ್ದ. ಒಂದು ದಿನ ಹುಯ್ ಜಂಗ್ ಎಂಬ ಝೆನ್ ಯೋಗಿ ಇದನ್ನು ಕಂಡು ಅವನ ಬಳಿ ಬಂದು, ‘ಸೋದರ ಏನು ಮಾಡುತ್ತಿದ್ದೀ?’ ಎಂದು ಕೇಳಿದ. ಅದಕ್ಕೆ ಮ-ತ್ಸು ‘ಸಾಧನೆ’ ಎಂದುತ್ತರಕೊಟ್ಟ. ‘ಏತಕ್ಕೆ?’ ಎಂದು ಯೋಗಿ ಕೇಳಲು ಇವನು ‘ಬುದ್ಧನಾಗುವುದಕ್ಕೆ’  ಎಂದು ಹೇಳಿದ.

ಒಡನೆಯೇ ಯೋಗಿ ನೆಲದ ಮೇಲೆ ಬಿದ್ದಿದ್ದ ಕಲ್ಲು ಚೂರೊಂದನ್ನು ಎತ್ತಿಕೊಂಡು ಅಲ್ಲಿಯೇ ಕುಳಿತು ಅದನ್ನು ನೆಲದ ಮೇಲೆ ಚೆನ್ನಾಗಿ ತಿಕ್ಕತೊಡಗಿದ. ಮ-ತ್ಸು ಇದನ್ನು  ಕಂಡು ‘ಏನು ಮಾಡುತ್ತಿರುವೆ? ಎಂದು ಕುತೂಹಲದಿಂದ ಕೇಳಿದ. ಯೋಗಿ  ‘ಇದನ್ನು ಕನ್ನಡಿಯಾಗಿಸುತ್ತಿದ್ದೇನೆ’ ಎಂದ. ಮ-ತ್ಸು ನಗುತ್ತ ‘ನೀನು ಬೆಪ್ಪ, ಕಲ್ಲನ್ನು ಉಜ್ಜಿದರೆ ಎಲ್ಲಿಯಾದರೂ ಕನ್ನಡಿಯಾದೀತೆ?’ ಎಂದು ಕೇಳಿದ. ಅದಕ್ಕೆ ಯೋಗಿ, ‘ಏಕಾಗಬಾರದು? ನೀನು ಆಸನವನ್ನು ಅಭ್ಯಾಸಮಾಡಿ ಬುದ್ಧನಾಗುವುದಾದರೆ, ಈ ಕಲ್ಲುಮಸೆದು ಮಸೆದೂ ಕನ್ನಡಿಯಾದೀತು’ ಎಂದು ಸಮಾಧಾನ ಹೇಳಿದ. ಆಗ ಮ-ತ್ಸುವಿಗೆ ಜ್ಞಾನೋದಯವಾಯಿತು. ಧ್ಯಾನವೆಂದರೆ ಹೃದಯವನ್ನು ಸುಧಾರಿಸಿಕೊಳ್ಳುವುದು, ದೇಹವನ್ನು ದಂಡಿಸುವುದಲ್ಲ ಎಂದು. ಇದೇ ಬೋಧಿಧರ್ಮನ ನಿಲುವು.