Categories
ಅಂಕಣಗಳು ಶಿಕ್ಷಣ

ಬೌದ್ಧಿಕ ಆಸ್ತಿಯ ಹಕ್ಕು ಸ್ವಾಮ್ಯ ದಿನ – ಏಪ್ರಿಲ್ 26

‌ನಾನು ನನ್ನದಿದೆಂಬ ವ್ಯಾವೋಹ ಮನುಷ್ಯನಲ್ಲಿ ಯಾವಾಗ ಹುಟ್ಟುತ್ತೆ, ಏಕೆ ಹುಟ್ಟುತ್ತೆ ಅನ್ನುವುದಕ್ಕಿಂತ, ಹುಟ್ಟಿನಿಂದಲೇ ಈ ವ್ಯಾಮೋಹಗಳು ಅವನಿಗೆ ಅಂಟಿಕೊಂಡಿರುತ್ತವೆಂಬುದು ಹೆಚ್ಚು ಸಮಂಜಸ. ಎಲ್ಲ ಕಾಲಗಳಲ್ಲಿ, ನಾಗರೀಕತೆಗಳಲ್ಲಿ ಉಂಟಾಗಿರುವ ಹಿಂಸೆ, ಯುದ್ಧಗಳು ನಡೆದಿರುವುದರ ಹಿಂದಿನ ಪ್ರೇರಣೆಗಳೆಲ್ಲ ಭೂಮಿಯನ್ನು ಹರಡಿಕೊಳ್ಳುವುದರಲ್ಲಿ, ಅತಿಕ್ರಮಿಸುವುದರಲ್ಲಿ ಆಗಿರುವ ಅನಾಹುತಗಳೇ, ಪ್ರಕೃತಿಯನ್ನು, ಹೆಣ್ಣು, ಹೊನ್ನು ಸೇರಿದಂತೆ, ಪಡೆಯುವ, ಆಕ್ರಮಿಸುವ ಪ್ರವೃತ್ತಿಯಿಂದಲೇ ಆಸ್ತಿಯ ಪರಿಕಲ್ಪನೆ ಸೃಷ್ಟಿಯಾದದ್ದು.  ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಈ ವ್ಯಾಮೋಹಗಳನ್ನು ಹದ್ದುಬಸ್ತಿನಲ್ಲಿಡುವ ಪ್ರಕ್ರಿಯೆಯಲ್ಲಿಯೇ ಸಾವಿರಾರು ವರ್ಷಗಳಿಂದ ಆಸ್ತಿ ಹಕ್ಕುಗಳ ಕಟ್ಟಳೆ, ಕಾನೂನುಗಳು, ಧಾರ್ಮಿಕ ಮತ್ತು ನೈತಿಕ ನೆಲೆಗಳಲ್ಲಿ ರೂಪುಗೊಂಡಿದ್ದು, ನಿರ್ಧಿಷ್ಟ ಮೌಲ್ಯಮಾಪನಗಳ ವ್ಯವಸ್ಥೆಗಳು ಮಾರುಕಟ್ಟೆಯ ವೇದಿಕೆಗಳು ಹುಟ್ಟಿಕೊಂಡದ್ದು ಕೂಡ.

ಇವೆಲ್ಲ ಮನುಷ್ಯನ ಭೌತಿಕ ಜಗತ್ತಿನ ಬಹಿರಂಗದ ಆಸ್ತಿಗಳ ವ್ಯಾಪಾರ ವ್ಯವಹಾರವಾದರೆ, ಅವನ ಅಂತರಂಗದ ಆಸ್ತಿಯ ಕಲ್ಪನೆ ಪ್ರಣೀತವಾದದ್ದು. ಯಾವಾಗ, ಹೇಗೆ ಅನ್ನುವುದು ಕುತೂಹಲಕಾರಿಯಾದ ಸಂಗತಿ. ಮೂಲಭೂತವಾಗಿ, ಅಂತರಂಗದ ಆಸ್ತಿಯಾದರೆ ಬುದ್ಧಿಗೆ ಸಂಬಂಧಿಸಿದ್ದು. ಪ್ರತಿಯೊಬ್ಬ ಮನುಷ್ಯನಿಗೂ ವಿಶಿಷ್ಟವಾದ ಬುದ್ಧಿಗೆ ನಿಲುಕುವ ಎಲ್ಲ ಜ್ಞಾನ ಶಾಖೆಗಳಿಗೂ ಅನ್ವಯವಾಗುವಂತಹದ್ದು.  ಅದನ್ನು ಗುರುತಿಸುವ ಕ್ರಮ ವ್ಯಕ್ತಿಯ ಸೃಜನಶೀಲತೆಯಲ್ಲಿ, ಕೌಶಲ್ಯದಲ್ಲಿ ಮತ್ತು ಅವು ವ್ಯಕ್ತವಾಗುವ ಅಭಿವ್ಯಕ್ತಿ ಮಾಧ್ಯಮಗಳ ಮೂಲಕ, ಹೊಸದಾಗಿ ಸೃಷ್ಟಿಸುವ ವಸ್ತು ವಿನ್ಯಾಸಗಳ ಮೂಲಕ. ಆದರೆ ಕಣ್ಣಿಗೆ ಕಾಣುವ, ಕೈಗೆ ನಿಲುಕುವ ನಿಸರ್ಗ ಮತ್ತು ಪ್ರಾಕೃತಿಕ ವಸ್ತುಗಳ ಸ್ವಾಮ್ಯತೆಯ ಬಗ್ಗೆ ಮನುಷ್ಯ ತಳೆದ ಧೋರಣೆ ತೀರ ಹಳೆಯದಾದರೆ, ಕಣ್ಣಿಗೆ ಕಾಣದ, ತರ್ಕಕ್ಕೆ ಸುಲಭವಾಗಿ ಸಿಕ್ಕದ ಸೃಜನಶೀಲತೆಯ ಸ್ವಾಮ್ಯವನ್ನು ಗುರುತಿಸಿಕೊಂಡದ್ದು ತೀರ ಇತ್ತೀಚಿನ ವರುಷಗಳಲ್ಲಿ. ಅದಕ್ಕೆ ಮುಖ್ಯ ಕಾರಣ ಸೃಜನಶೀಲತೆಯನ್ನು ದೈವಿಕ ಶಕ್ತಿಯನ್ನು ಗ್ರಹಿಸಿದ್ದೇ ಇರಬಹುದು, ಆದ್ದರಿಂದಲೇ ಎಲ್ಲ ಸೃಜನಶೀಲ ಸಾಂಸ್ಕೃತಿಕ ಚಟುವಟಿಕೆಗಳನ್ನು ದೇವರಿಗೆ ಸೇರಿದ್ದು ಸಲ್ಲುವಂತಹದ್ದು ಎಂಬ ಜಿಜ್ಞಾಸೆಯನ್ನು ಭಾರತದಂತಹ ಎಲ್ಲ ಪುರಾತನ ನಾಗರೀಕತೆಗಳು ಕೂಡಿಸಿಕೊಂಡಿದ್ದವು. ವಾಸ್ತುಶಿಲ್ಪ, ಶಿಲ್ಪಕಲೆ, ಸಂಗೀತ, ನೃತ್ಯ, ಸಾಹಿತ್ಯ ಎಲ್ಲವೂ ದೇವಾಲಯಗಳಿಗೆ ಪೂರಕವಾಗಿ ಸೃಷ್ಟಿಯಾಗುತ್ತಿದ್ದದ್ದೇ ಇದಕ್ಕೆ ಪುರಾವೆ. ಅದು ತನ್ನದಲ್ಲದ, ಬೆಲೆ ಕಟ್ಟಲಾಗದ, ಸಮಾಜಕ್ಕೆ ಸೇರಿದ ದೈವಿಕ ಆಸ್ತಿ ಎಂದು ಪರಿಗಣಿಸಲಾಗಿತ್ತು.  ಅದಕ್ಕೆ ಮೌಲ್ಯ ಕಟ್ಟುವ ಪ್ರಕ್ರಿಯೆ ಪ್ರಾರಂಭವಾದದ್ದು ಆಧುನಿಕ ವಿಜ್ಞಾನ ಹೆಚ್ಚು ವಿಸ್ತಾರಗೊಳ್ಳಲು ಪ್ರಾರಂಭವಾದ ಕಳೆದ ನಾಲ್ಕು ಶತಮಾನಗಳಲ್ಲಿ.  ಭೌತಿಕ ಜಗತ್ತನ್ನು ವಿವರಿಸುತ್ತಾ ಹೊರಟ ವಿಜ್ಞಾನ ಅಂತರಂಗ ಮತ್ತು ಬಹಿರಂಗದ ಸಮೀಕರಣವನ್ನು ಪ್ರಾರಂಭಿಸಿತು. ಸೃಜನಶೀಲತೆ ಮತ್ತು ಕೌಶಲ್ಯವನ್ನು ಅದು ಎರಡು ವಿಭಾಗಗಳಲ್ಲಿ ಗುರುತಿಸಿತು. ಬುದ್ಧಿಯ ಬಳಕೆಯಿಂದ ವೈಜ್ಞಾನಿಕ ತರ್ಕದ ಮೂಲದಿಂದ ಉಂಟಾದ ಆವಿಷ್ಕಾರಗಳು ಒಂದು ಕಡೆಯಾದರೆ, ಸಾಹಿತ್ಯಕ ಮತ್ತು ಇತರ ಕಲಾ ಮಾಧ್ಯಮಗಳ ಮೂಲಕ ಸೃಷ್ಠಿಯಾಗುವ ಕೃತಿಗಳು, ಪ್ರತೀಕಗಳು ಮತ್ತೊಂದೆಡೆ, ಮೊದಲನೆಯದಕ್ಕೆ ಪೂರಕವಾಗಿ ತಂತ್ರಜ್ಞಾನವೂ ವಿಸ್ತಾರವಾದಂತೆಲ್ಲ ಮನುಷ್ಯನ ದೈಹಿಕ ಶ್ರಮವನ್ನು ಕಡಿಮೆಮಾಡಬಲ್ಲ ವಸ್ತುಗಳು, ಯಂತ್ರಗಳು ಉತ್ಪಾದನೆಗೊಳ್ಳುತ್ತಾ ಹೋದವು. ಉತ್ಪಾದನೆಯ ಆರ್ಥಿಕ ಆಯಾಮದ ಜತೆಗೆ ಗ್ರಾಹಕ ಸಮೂಹವೂ ನಿರ್ಮಾಣವಾಗುತ್ತಾ ಹೋಗಿ, ಗ್ರಾಹಕನಿಗೂ ಒಂದು ಆರ್ಥಿಕ ಆಯಾಮ ಅಗತ್ಯವಾಗುತ್ತಲೇ ಮಾರುಕಟ್ಟೆಗಳೂ ವಿಸ್ತೃತವಾಗಿ ಬೆಳೆಯುತ್ತಾ ಹೋದವು.  ಎಲ್ಲ ಚಟುವಟಿಕೆಗಳಿಗೂ ವಸ್ತುಗಳಿಗೂ ಬೆಲೆ ನಿರ್ಧಾರವಾಗುತ್ತಾ ಹೋದಂತೆ ಅದರಿಂದ ಉತ್ಪತ್ತಿಯಾಗುವ ಮೌಲ್ಯ ಹಂಚಿಕೆಯ ಬಗ್ಗೆಯೂ ವಿಚಾರಗಳು ಹೆಚ್ಚುತ್ತಾ ಹೋದವು. ಆಸ್ತಿಯ ಸ್ವರೂಪವನ್ನು ಪಡೆದವು. ಇನ್ನೊಂದೆಡೆ, ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಧಾರ್ಮಿಕ ಕೇಂದ್ರಗಳಿಂದ ಬಿಡುಗಡೆಯಾಗಿ ಸಾಮಾಜಿಕ ಬಯಲಿಗೆ ಹಬ್ಬತೊಡಗಿದಾಗ, ಅದನ್ನು ಹೊಸ ತಾಂತ್ರಿಕ ಆವಿಷ್ಕಾರಗಳ ಮೂಲಕ ನಕಲು ಮಾಡುವ, ಹಂಚುವ ಪ್ರಕ್ರಿಯೆ ಪ್ರಾರಂಭವಾದಂತೆಯೇ, ಅದಕ್ಕೂ ಬೆಲೆ ನಿಗದಿಯಾಗಲು ಆಂಶಿಕ ಲಕ್ಷಣಗಳು ಗುರುತಿಸಲಾದವು. ಮುದ್ರಣ ತಂತ್ರಜ್ಞಾನ, ಸಂಗೀತವನ್ನು ಅಡಕಗೊಳಿಸುವ ಮುದ್ರಿಕೆಗಳು, ಹೊಸ ದೃಶ್ಯ ಮಾಧ್ಯಮಗಳ ಮೂಲಕ ಮಿಕ್ಕೆಲ್ಲ ಅಭಿವ್ಯಕ್ತ ಮಾಧ್ಯಮಗಳನ್ನು ದಾಖಲುಮಾಡುವ ಪ್ರಕ್ರಿಯೆ ಪ್ರಾರಂಭವಾದಂತೆಲ್ಲ, ಮೂಲ ಸೃಜನಶೀಲ ವ್ಯಕ್ತಿಗೆ ಸಲ್ಲಬೇಕಾದ ಆರ್ಥಿಕ ಪಾಲುದಾರಿಕೆಯ ಬೌದ್ಧಿಕ ಆಸ್ತಿಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಿತು.

ಚರಾಚರ ಆಸ್ತಿಗಳ ಹಕ್ಕುಗಳು ರಾಷ್ಟ್ರೀಯ ಗಡಿಗಳನ್ನು, ಕಾನೂನುಗಳನ್ನು ಆಧರಿಸಿದರೆ, ಬೌದ್ಧಿಕ ಆಸ್ತಿಯ ಹಕ್ಕುಗಳ ಸ್ವಾಮ್ಯದ ಹರಹು ಜಾಗತಿಕವಾದುದು.  ಆದ್ದರಿಂದಲೇ ಅದಕ್ಕೆ ಬೇಕಾದ ಕಟ್ಟಳೆ, ಕಾನೂನುಗಳು ಜಾಗತಿಕ ನೆಲೆಯಲ್ಲಿಯೇ ಮಂಡಿತವಾಗಬೇಕಾಯಿತು ಮತ್ತು ಅನುಷ್ಠಾನಕ್ಕೆ ಅಗತ್ಯವಾದಂತಹ ಬಹು ರಾಷ್ಟ್ರೀಯ ನೆಲೆಯ ಸಂಸ್ಥೆಗಳು ಹುಟ್ಟಿಕೊಂಡವು.

ಬೌದ್ಧಿಕ ಆಸ್ತಿಯ ಪ್ರಾಮುಖ್ಯತೆಯನ್ನು ಮತ್ತು ಅಗತ್ಯವಾದ ಕಾನೂನುಗಳನ್ನು ಮೊದಲ ಬಾರಿಗೆ ಗುರುತಿಸಿದ್ದು 1883ರಲ್ಲಿ ಪ್ಯಾರಿಸ್‌ ನಗರದಲ್ಲಿ ನಡೆದ ಸಮಾವೇಶವೊಂದರಲ್ಲಿ.  ಅದರಲ್ಲಿ ಔದ್ಯಮಿಕ ಬೌದ್ಧಿಕ ಆಸ್ತಿಗಳ ಬಗ್ಗೆ ವಿಚಾರ ಮಾಡಲಾಯಿತು. ಹೊಸ ಹೊಸ ವಸ್ತುಗಳ, ಯಂತ್ರಗಳ, ತಂತ್ರಗಳ, ಪ್ರಕ್ರಿಯೆಗಳ ಆವಿಷ್ಕರಣಕ್ಕೆ ಸಂಬಂಧಿಸಿದಂತೆ ಉತ್ಪತ್ತಿಯಾಗುವ ಆಸ್ತಿ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿಯನ್ನು ಅಂತಾರಾಷ್ಟ್ರೀಯ ಬಹುರಾಷ್ಟ್ರೀಯ ಒಪ್ಪಂದಗಳ ಮೂಲಕ ನಿಭಾಯಿಸುವ ಆಶಯದೊಂದಿಗೆ ಯೋಜಿಸಲಾಗಿದ್ದ ಆ ಸಮಾವೇಶ ಈ ಹೊತ್ತಿಗೂ ಪ್ರಮುಖವಾದ ಘಟನೆ.  ಅದೇ ರೀತಿ, ಸೃಜನಶೀಲ ಚಟುವಟಿಕೆಗಳ, ಅಂದರೆ ಸಾಹಿತ್ಯ ಮತ್ತು ಇತರ ಕಲೆಗಳ, ಸಾಂಸ್ಕೃತಿಕ ಪರಿಕರಗಳಿಗೆ ಸಂಬಂಧಿಸಿದ ಬೌದ್ಧಿಕ ಆಸ್ತಿಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದು, ಅದರ ಬಗ್ಗೆ ಸಾಂಸ್ಥಿಕ ನಿಲುವನ್ನು ತೆಗೆದುಕೊಳ್ಳಲು ಸಹಕಾರಿಯಾದ ಮೊದಲ ಅಂತಾರಾಷ್ಟ್ರೀಯ ಸಮಾವೇಶ ನಡೆದದ್ದು 1886ರಲ್ಲಿ, ಸ್ವಿಟ್ಜರ್‌ಲೆಂಡ್‌ ದೇಶದ ಬರ್ನ್ ನಗರದಲ್ಲಿ.  ಎರಡನೇ ಮಹಾಯುದ್ದದ ನಂತರದಲ್ಲಿ ಅಸ್ತಿತ್ವಕ್ಕೆ ಬಂದ ಸಂಯುಕ್ತ ರಾಷ್ಟ್ರ ಸಂಸ್ಥೆಯ 1948ರ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯಲ್ಲಿ ಕಲಂ 27ರಲ್ಲಿ ಬೌದ್ಧಿಕ ಆಸ್ತಿಯ ಹಕ್ಕುಗಳ ವಿಸ್ತೃತವಾದ ರೂಪುರೇಶೆಗಳನ್ನು ಪಟ್ಟಿಮಾಡಲಾಗಿದೆ.  ಈ ಘೋಷಣೆಯಲ್ಲಿ ವೈಜ್ಞಾನಿಕ, ಸಾಹಿತ್ಯಕ ಮತ್ತು ಎಲ್ಲ ಸೃಜನಶೀಲ ನಿರ್ಮಾಣಗಳಿಗೆ ಸಲ್ಲಬೇಕಾದ ಹಕ್ಕಿನ ಬಗ್ಗೆ ಮತ್ತು ಆ ಹಕ್ಕುಗಳನ್ನು ರಾಷ್ಟ್ರಗಳು ಕಾಪಾಡಬೇಕಾದ ನೈತಿಕ ಜವಾಬ್ದಾರಿಯ ಬಗ್ಗೆ ಉಲ್ಲೇಖಿಸಲಾಗಿದೆ.

WIPO (World Intellectual Property Organization)

ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಒಂದು ಮುಖ್ಯವಾದ ಅಂಗ ಸಂಸ್ಥೆ.  ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ 1967ರಲ್ಲಿ ತಾತ್ವಿಕವಾಗಿ ರೂಪುಗೊಂಡು ಸ್ಥಾಪಿತವಾದ ಈ ಸಂಸ್ಥೆ ಏಪ್ರಿಲ್‌ 26, 1970ರಲ್ಲಿ ಸಮಾವೇ‍‍ಶ ಸ್ವರೂಪದಲ್ಲಿ ಸ್ಥಾಪಿತವಾದ ಈ ಸಂಸ್ಥೆ ಸ್ವಿಟ್ವರ್‌ಲ್ಯಾಂಡ್‌ ದೇಶದ ಜಿನಿವಾ ನಗರದಿಂದ ಕಾರ್ಯ ನಿರ್ವಹಿಸುತ್ತಿದೆ.  ಸುಮಾರು 180ಕ್ಕೂ ಹೆಚ್ಚು ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯರಾಗಿದ್ದಾರೆ. ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಒಪ್ಪಂದಗಳನ್ನು ನಿರ್ವಹಿಸುತ್ತಿರುವ ಈ ಸಂಸ್ಥೆ ಸುಮಾರು 25ಕ್ಕೂ ಹೆಚ್ಚು ಸಮಾವೇಶಗಳ ನಿರ್ಧಾರಗಳನ್ನು ಕಾರ್ಯರೂಪಕ್ಕೆ ಇಳಿಸಲು ಸನ್ನದ್ಧವಾಗಿದೆ. 1883ರ ಪ್ಯಾರಿಸ್‌ ಔದ್ಯೊಗಿಕ ಹಕ್ಕುಗಳ ಸಮಾವೇಶ ಮತ್ತು 1886 ಬರ್ನ್ ಸೃಜನಶೀಲ ಕಲೆಗಳ ಹಕ್ಕುಗಳ ಸಮಾವೇಶಗಳ ನಿರ್ಣಯಗಳನ್ನು ಈ ಸಂಸ್ಥೆ ತನ್ನ ಕಾರ್ಯಸೂಚಿಯಲ್ಲಿ ಅಳವಡಿಸಿಕೊಂಡಿದೆ. ಇದು ಒಂದು ಸ್ವಾಯತ್ತ ಆಡಳಿತಾತ್ಮಕ ಸಂಸ್ಥೆಯೂ ಆಗಿರುವುದರಿಂದ ಅಂದರೆ ಬೌದ್ಧಿಕ ಆಸ್ತಿ ಹಕ್ಕುಗಳ ನೊಂದಣಿ ಕಾರ್ಯವನ್ನು ನಿರ್ವಹಿಸುವುದರಿಂದ ಸದಸ್ಯ ರಾಷ್ಟ್ರಗಳ ವಂತಿಕೆಯ ಹೊರತಾಗಿಯೂ ತನ್ನದೇ ಆದ ಆರ್ಥಿಕ ಬಲವೂ ಈ ಸಂಸ್ಥೆಗಿದೆ.

2000ನೇ ಇಸವಿಯಲ್ಲಿ, ಸದಸ್ಯ ರಾಷ್ಟ್ರಗಳು ಸಂಸ್ಥೆಯ ಹುಟ್ಟುಹಬ್ಬದ ನೆನಪಲ್ಲಿ ಏಪ್ರಿಲ್‌ 26ನೇ ತಾರೀಖನ್ನು ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ಸ್ವಾಮ್ಯ ದಿನವೆಂದು ಘೋಷಿಸಿದವು. ಅದರ ಉದ್ದೇಶ, ಬೌದ್ಧಿಕ ಆಸ್ತಿ ಹಕ್ಕಿನ ಬಗ್ಗೆ ಜಾಗತಿಕ ನೆಲೆಯಲ್ಲಿ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಕಾರ್ಯಕ್ರಮವಾಗಿ, ಪ್ರತಿವರ್ಷವೂ ಸೃಜನಶೀಲತೆಯ ಬೇರೆ ಬೇರೆ ಆಯಾಮಗಳನ್ನು ವಿಶೇಷವಾಗಿ ಗುರುತಿಸಲಾಗುತ್ತದೆ. 2016ರ ಏಪ್ರಿಲ್‌ 26ಕ್ಕೆ ಜರುಗುವ ಜಾಗತಿಕ ಬೌದ್ಧಿಕ ಆಸ್ತಿ ಹಕ್ಕು ದಿನಕ್ಕೆ ಆಯ್ಕೆ ಮಾಡಿಕೊಂಡಿರುವ ಆಯಾಮವೆಂದರೆ ಮುಂದಿನ ದಿನಗಳಲ್ಲಿನ ಸಾಂಸ್ಕೃತಿಕ ಸೃಜನಶೀಲತೆಗೆ ಸಲ್ಲಬೇಕಾದ ಗಮನ ಮತ್ತು ಆರ್ಥಿಕ ಪಾಲುದಾರಿಕೆ.  ಸಾಂಸ್ಕೃತಿಕ ಮರು ಹುಟ್ಟು ಅಥವ ಕಲ್ಪನೆ (Re-imagining Culture) ಅದರ ಧ್ಯೇಯ ವಾಕ್ಯ. ಡಿಜಿಟಲ್‌ ಯುಗದಲ್ಲಿ ಸೃಜನಶೀಲ ಕೃತಿಗಳನ್ನು ಹೆಚ್ಚು ಹೆಚ್ಚು ವಿಸ್ತೃತವಾಗಿ ಹಂಚಲಾಗುತ್ತಿರುವ ಸಾಂಸ್ಕೃತಿಕ ಸಂದರ್ಭದಲ್ಲಿ ಸೃಜನಶೀಲ ವ್ಯಕ್ತಿಗಳಿಗೆ ಸಲ್ಲಬೇಕಾದದ್ದರ ಬಗ್ಗೆ ರೂಢಿಸಬೇಕಾದ ಕಾನೂನು ಮತ್ತು ಅನುಷ್ಠಾನ ವ್ಯವಸ್ಥೆಗಳ ಬಗ್ಗೆ ಈ ವರ್ಷದ ಬೌದ್ಧಿಕ ಆಸ್ತಿ ಹಕ್ಕು ದಿನದ ಕಾರ್ಯಸೂಚಿಯನ್ನು ಉಪಯೋಗಿಸಿಕೊಳ್ಳಲಾಗುವುದು.