ಸುಕ್ಷೇತ್ರ ಕಾಗಿನೆಲೆ

ಜಿಲ್ಲಾ ಕೇಂದ್ರದಿಂದ ದೂರ : ೧೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦೬ ಕಿ.ಮೀ.

ಕಾಗಿನೆಲೆಯ ನರಸಿಂಹ ದೇವಸ್ಥಾನ

ಕಾಗಿನೆಲೆಯೆನ್ನುತ್ತಲೇ ನೆನಪಾಗುವುದು ಸಂತ ಕನಕದಾಸರ ಹೆಸರು. ಇವರು ತನ್ನ ಇಷ್ಟದೇವರಾದ ಆದಿಕೇಶವನ ಸನ್ನಿದಿಯಲ್ಲಿ ತಮ್ಮ ಕೊನೆಯ ದಿನಗಳಲ್ಲಿ ಕೀರ್ತನೆಗಳನ್ನು ರಚಿಸಿದರು. ಕಾಗಿನೆಲೆಯಲ್ಲಿ ಕನಕದಾಸರ ಸಮಾಧಿ ಇದೆ. ಹಾಡು ಮಂಡಿಗೆಗಳಿಂದ ಪ್ರಸಿದ್ಧವಾಗಿದ್ದು, ಅವರ ನೆನಪಿಗಾಗಿ ಸಮಾಧಿಗೆ ಸುಂದರವಾದ ದೇವಸ್ಥಾನವನ್ನು ನಿರ್ಮಿಸುವ ಜವಾಬ್ದಾರಿಯು ಸರಕಾರದ ಪ್ರಾಧಿಕಾರದಲ್ಲಿ ನಡೆಯುತ್ತಿದೆ. ಕನಕದಾಸರ ಕೀರ್ತನೆಗಳ ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವು ಇಲ್ಲಿದೆ. ಕನಕದಾಸರ ಗದ್ದುಗೆಯ ಮೇಲೆ ೨೬ ಕಂಬಗಳ ದೇವಸ್ಥಾನವಿದೆ.

ಕನಕ ಗುರುಪೀಠದಲ್ಲಿ ೧೨ ನೇ ಶತಮಾನದ ಕಾಳಹಸ್ತೇಶ್ವರ ದೇವಸ್ಥಾನ, ವೀರಭದ್ರ ದೇವಸ್ಥಾನ, ನರಸಿಂಹದೇವರ ದೇವಸ್ಥಾನ ಮತ್ತು ಆದಿಕೇಶವ ದೇವಸ್ಥಾನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪದ ಬಾಡ ಗ್ರಾಮದಲ್ಲಿ ಕನಕದಾಸರ ಮನೆಯ ಅವಶೇಷಗಳು ಸಿಕ್ಕಿದ್ದು, ಇದೊಂದು ಪ್ರೇಕ್ಷಣೀಯ ಸ್ಥಳವಾಗಿದೆ.

 

ಮೆಣಸಿನಕಾಯಿ ಮಾರುಕಟ್ಟೆ, ಬ್ಯಾಡಗಿ

ಜಿಲ್ಲಾ ಕೇಂದ್ರದಿಂದ ದೂರ : ೧೮ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೦ ಕಿ.ಮೀ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯು ದೇಶದಲ್ಲಿ ಶ್ರೇಷ್ಠವಾದ ಮಾರುಕಟ್ಟೆ ಎನಿಸಿದೆ. ಈ ಮಾರುಕಟ್ಟೆಯು ದಿನಾಂಕ ೧೫-೦೨-೧೯೪೮ರಲ್ಲಿ ಆರಂಭವಾಯಿತು. ಈಗ ಸುಮಾರು ೬೮ ಎಕರೆ ವಿಸ್ತಾರದಲ್ಲಿ ಬೆಳೆದು ನಿಂತಿದೆ.

ಸಾಂಬಾರು ಪದಾರ್ಥಗಳನ್ನು ತಯಾರಿಸುವ ಖ್ಯಾತ ಕಂಪನಿಗಳಾದ ಎಂ.ಡಿ.ಹೆಚ್, ಎಂ.ಟಿ.ಆರ್, ಆಕಾಯ್, ಕಂಪನಿಗಳು ಬ್ಯಾಡಗಿ ಮಾರುಕಟ್ಟೆಯಿಂದ ಶ್ರೇಷ್ಠ ದರ್ಜೆಯ ಮೆಣಸಿನಕಾಯಿಗಳನ್ನು ಪಡೆಯುತ್ತವೆ. ಆಡಳಿತ ಕಛೇರಿ, ರಸ್ತೆಗಳು, ಚರಂಡಿಗಳು, ಗೋದಾಮುಗಳು, ಚಿಕ್ಕಮಳಿಗೆಗಳು, ಅತಿಥಿಗೃಹ, ಸಿಬ್ಬಂದಿ ವಸತಿಗೃಹಗಳು, ನೀರಿನ ವ್ಯವಸ್ಥೆ, ಜನರೇಟರ್ ಮೂಲಕ ಬೆಳಕಿನ ವ್ಯವಸ್ಥೆ, ಮಾರಾಟ ಭವನ, ಧ್ವನಿವರ್ಧಕಗಳ ಮೂಲಕ ಟೆಂಡರ್ ಪ್ರಕಟಿಸುವ ವ್ಯವಸ್ಥೆ ಹೀಗೆ ಇನ್ನೂ ಹಲವು ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ತಾಲೂಕಿನ ಬಹುಪಾಲು ಹಳ್ಳಿಗಳಿಗೆ ರೂ. ೧.೨೬ ಕೋಟಿ ವೆಚ್ಚದಲ್ಲಿ ರಸ್ತೆಗಳನ್ನು ನಿರ್ಮಿಸಲಾಗಿದೆ. ಹಳ್ಳಿಗಳಲ್ಲಿ ಗೋಧಾಮುಗಳನ್ನು ನಿರ್ಮಿಸಿ ರೈತರ ಹಿತರಕ್ಷಣೆಯನ್ನು ಮಾಡಲಾಗುತ್ತಿದೆ.

 

ಸಾವಯವ ಕೃಷಿ ಪದ್ದತಿ, ಚಿನ್ನಿಕಟ್ಟಿ ಗ್ರಾಮ

ಜಿಲ್ಲಾ ಕೇಂದ್ರದಿಂದ ದೂರ : ೨೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೦ ಕಿ.ಮೀ

ಇಂದಿನ ದಿನಗಳಲ್ಲಿ ರಾಸಾಯನಿಕ ಮತ್ತು ಔಷಧಿಗಳನ್ನು ಹೆಚ್ಚಾಗಿ ಉಪಯೋಗಿಸುವ ರೈತರಿಗೆ ಪ್ರತಿಸ್ಪರ್ಧಿಯಾಗಿ ಅತೀ ಕಡಿಮೆ ವೆಚ್ಚದ ಮತ್ತು ಪೌಷ್ಠಿಕಾಂಶವುಳ್ಳ ಬೆಳೆಯನ್ನು ಬೆಳೆಯುವ ರೈತರಲ್ಲಿ ಇಲ್ಲಿಯ ಶ್ರೇಣಿಕ ರಾಜ ‘ಎಳವತ್ತಿರುವರ’ ಇವರ ಸಹಕಾರದಿಂದ ಈ ಗ್ರಾಮದಲ್ಲಿ ರೈತರು ಬೀಜ ಬ್ಯಾಂಕಿನಲ್ಲಿ ಸಂಗ್ರಹಿಸಿದ ಬೀಜಗಳಿಗೆ ರಾಜ್ಯದ ಮಂಡ್ಯ, ಮೈಸೂರು, ಕೋಲಾರ, ತುಮಕೂರ ಮುಂತಾದ ಭಾಗಗಳಿಂದ ಹೆಚ್ಚು ಬೇಡಿಕೆ ಕಂಡುಬರುತ್ತದೆ. ಇಲ್ಲಿ ಸಣ್ಣ ಭತ್ತ, ದೊಡ್ಡ ಭತ್ತ, ಸೇಲಂ, ಪೈನಾ, ಗಂಧಸಾಲಿ, ರಾಗಿ, ದೊಡ್ಡಜೋಳ, ಸಣ್ಣ ಜೋಳ, ನವಣೆ, ಗೋವಿನಜೋಳ, ಕರಿಗೋವಿನಜೋಳ, ತೊಗರಿ, ಹೆಸರು, ಅಲಸಂದಿ, ಅವರೆ, ಉದ್ದು ಅಲ್ಲದೇ ಇನ್ನಿತರ ತರಕಾರಿ ಬೀಜಗಳನ್ನು ಸಾವಯವ ವ್ಯವಸಾಯದಿಂದ ಬೆಳೆಯಲಾಗುತ್ತದೆ. ಈ ಕೃಷಿ ಪದ್ದತಿಯನ್ನು ಅಮೇರಿಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳ ಕೃಷಿ ತಜ್ಞರು ಭೇಟಿ ನೀಡಿ ವೀಕ್ಷಿಸಿದ್ದಾರೆ.

ಅಲ್ಲದೇ ಅನೇಕ ರಾಜ್ಯಗಳ ರೈತರು ಆಗಮಿಸಿ ಪರಿಶೀಲಿಸಿ ಈ ಪದ್ದತಿಯನ್ನು ಅಳವಡಿಸಿಕೊಂಡಿದ್ದಾರೆ.

 

ಕೋಟೇಶ್ವರ ದೇವಸ್ಥಾನ, ಹಿರೇಹಳಿ

ಜಿಲ್ಲಾ ಕೇಂದ್ರದಿಂದ ದೂರ : ೨೫ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೧೫ ಕಿ.ಮೀ.

ಶ್ರೀ ಕೋಟೇಶ್ವರ ದೇವಸ್ಥಾನ

ಅದ್ಭುತ ಶಿಲ್ಪಕಲಾ ವೈಭವದಿಂದ ನಾಡಿನ ಚರಿತ್ರೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಸಾರುವ ಪ್ರಾಚೀನ ದೇವಸ್ಥಾನವು ಇದಾಗಿದೆ. ಇದನ್ನು ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಿಸಲಾಗಿದೆ. ಕಲ್ಯಾಣದ ಚಾಲುಕ್ಯರ ನಾಲ್ಮಡಿ ವಿಕ್ರಮಾದಿತ್ಯನು ೧೨ನೇ ಶತಮಾನದಲ್ಲಿ ಇದನ್ನು ನಿರ್ಮಿಸಿದನು.

ಈ ದೇವಸ್ಥಾನವು ಗ್ರಾಮದ ಹೊರವಲಯದಲ್ಲಿದೆ. ಗರ್ಭಗೃಹ, ಅಂತರಾಳ, ವಿಶಾಲವಾದ ಕಕ್ಷಾಸನವನ್ನು ಹೊಂದಿದೆ. ಈ ದೇವಾಲಯದ ನವರಂಗಗಳು ಚಾಲುಕ್ಯ ಶೈಲಿಯಲ್ಲಿದ್ದು, ಉತ್ಕೃಷ್ಟವಾಗಿವೆ. ಕಿರುಶಿಖರವು ಅಲಂಕಾರ ಸ್ಥಂಭಗಳಿಂದ ಶೃಂಗರಿಸಲ್ಪಟ್ಟಿದೆ. ಹಲವಾರು ಶಿಲಾಶಾಸನಗಳನ್ನು ಈ ದೇವಸ್ಥಾನದಲ್ಲಿ ಕಾಣಬಹುದಾಗಿದೆ.

 

ಕಾಂತೇಶ ದೇವಸ್ಥಾನ ಕದರಮಂಡಲಗಿ

ಜಿಲ್ಲಾ ಕೇಂದ್ರದಿಂದ ದೂರ : ೨೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ ದೂರ: ೬ ಕಿ.ಮೀ.

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ

ಕರ್ನಾಟಕದ ತಿರುಪತಿ ಕ್ಷೇತ್ರವೆಂದೇ ಪ್ರಸಿದ್ಧವಾದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದರಮಂಡಲಗಿಯು ಶಿಲಾಯುಗ ಪೂರ್ವದ ಇತಿಹಾಸ ಹೊಂದಿದ್ದು, ಇಂದಿನ ಕಾಂತೇಶ ದೇವಸ್ಥಾನವು ಸುಪ್ರಸಿದ್ಧವಾಗಿದೆ. ಈ ದೇವರು ಪಾಂಡವರ ವಂಶಜರಾದ ಜಯಮೇಜಯರಾಜನ ಪ್ರಾಣದೇವರಾಗಿತ್ತು. ಸಂತ ಕನಕದಾಸರು ಕಾಂತೇಶನ ದರ್ಶನ ಪಡೆದರೆಂದು ಪ್ರತೀತಿ ಇದೆ. ಇಲ್ಲಿ ಪಂಚಲಿಂಗೇಶ್ವರ ದೇವಸ್ಥಾನಗಳಾದ ಶ್ರೀ ಮುಕ್ಕಣ್ಣೇಶ್ವರ, ಕಲ್ಲೇಶ್ವರ, ಶ್ರೀ ರಾಮಲಿಂಗೇಶ್ವರ, ಶ್ರೀ ನೀಲಕಂಠೇಶ್ವರ, ಶ್ರೀ ಗವಿಸಿದ್ದೇಶ್ವರ ದೇವಸ್ಥಾನಗಳು ಹೊಯ್ಸಳರ ಶೈಲಿಯಲ್ಲಿ ಇರುತ್ತವೆ. ಅಷ್ಟಲ್ಲದೇ ಹನುಮ ಜಯಂತಿಯ ದಿನ ತೆಪ್ಪೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಒಂದು ದೊಡ್ಡ ಹೊಂಡವೇ ಇದೆ. ಇತ್ತೀಚಿಗೆ ಈ ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡು ಬೃಹತ್ ಗೋಪುರ ನಿರ್ಮಿಸಲಾಗಿದ್ದು, ಅಂದಾಜು ೧೦೧ ಅಡಿ ಎತ್ತರವಿರುವ ಈ ಗೋಪುರವು ಭಕ್ತರನ್ನು ಕೈಬೀಸಿ ಕರೆಯುತ್ತದೆ.