(ಕ್ರಿ. ಶ. ೧೭೯೨-೧೮೭೧) (ಕಂಪ್ಯೂಟರಿನ ಮೂಲ ನಮೂನೆ)

ಇಪ್ಪತ್ತೊಂದನೆಯ ಶತಮಾನದಲ್ಲಿ ಜಗತ್ತಿನಲ್ಲಿಯ ಎಲ್ಲ ವ್ಯವಹಾರಗಳೂ ಕಂಪ್ಯೂಟರೀಕೃತ ಆಗುವವೆಂದು ಹೇಳಲಾಗುತ್ತದೆ. ಉದಾಹರಣೆಗೆ, ತರಕಾರಿ ಮಾರುವ ಹೆಂಗಸು ಕೂಡ ತನ್ನ ಬಳಿ ಕಂಪ್ಯೂಟರ್ ಇಟ್ಟುಕೊಂಡೇ ತರಕಾರಿ ವ್ಯವಹಾರ ನಿರ್ವಹಿಸುವಳೆಂಬ ವಿಶ್ವಾಸ ಈಗ ಮೂಡಿದೆ. ಈಗ ಗಣಕ ಯಂತ್ರಗಳು (ಕ್ಯಾಲ್ಕುಲೇಟರುಗಳು ಮತ್ತು ಕಂಪ್ಯೂಟರುಗಳು) ಎಷ್ಟು ತ್ವರಿತವಾಗಿ ಬೇರೆ ಬೇರೆ ಕಾರ್ಯಾಲಯಗಳನ್ನು ಅಲಂಕರಿಸುತ್ತಿವೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಬಗೆಯ ಕಂಪ್ಯೂಟರ್ ಯುಗ ಆರಂಭವಾಗುವುದಕ್ಕೆ ಮೂಲ ತಳಪಾಯ ಹಾಕಿದ ವ್ಯಕ್ತಿ, ಚಾರ್ಲಸ್ ಬ್ಯಾಬೇಜ್.

ಆಂಗ್ಲ ಪ್ರಜೆ ಚಾರ್ಲಸ್ ಬ್ಯಾಬೇಜ್ ೧೭೯೨ರಲ್ಲಿ ಜನಿಸಿದರು. ಗಣಿತ ಶಾಸ್ತ್ರವನ್ನು ವಿಶೇಷ ಆಸಕ್ತಿಯಿಂದ ಓದಿ ಮಥನ ಮಾಡಿಕೊಂಡ ಈತ ಪದವಿ ಪಡೆದ ನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ಮಾಡತೊಡಗಿದರು. ಲೆಕ್ಕಗಳನ್ನು ಬೇಗ ಮತ್ತು ಸುಲಭವಾಗಿ ಮಾಡುವ ವಿಧಾನ ಕಂಡು ಹಿಡಿಯಲು ಸಂಶೋಧನೆ ಮಾಡತೊಡಗಿದರು. “ಆಯನಲಟಿಕಲ್ ಎಂಜಿನ್” (ವಿಶ್ಲೇಷಕ ಯಂತ್ರ) ಒಂದನ್ನು ತಯಾರು ಮಾಡಿ ವ್ಯಾಪಕವಾಗಿ ಬಳಕೆಗೆ ತರುವ ಕನಸು ಕಂಡರು. ಅದು ಸನ್ ೧೮೩೫ರ ವರ್ಷ. ಆಗ ಇನ್ನೂ ಜಗತ್ತು ಅವರ ಪರಿಕಲ್ಪನೆಯ ಮಹತ್ವವನ್ನು ಅರಿಯುವಷ್ಟು ಮುಂದುವರಿದಿರಲಿಲ್ಲ. ಜಗತ್ತಿನ ಮೊಟ್ಟ ಮೊದಲನೆಯ “ಡಿಜಿಟಲ್ ಕಂಪ್ಯೂಟರ್” ಎಂದು ಕರೆಯಬಹುದಾದ ಆ ಯಂತ್ರ ಬಹುಕಾಲ ಗಮನಕ್ಕೆ ಬಾರದೇ ಹೋಯಿತು. ಅಂಕಗಣಿತದ ಲೆಕ್ಕಾಚಾರಗಳನ್ನು ಬೇಗ ಮತ್ತು ಸುಲಭವಾಗಿ ಮಾಡುವ ನಿಟ್ಟಿನ ಮೊದಲ ಯಂತ್ರವಾಗಿತ್ತು ಅದು. ಪಂಚ್ ಮಾಡಲ್ಪಟ್ಟ ಕಾರ್ಡುಗಳ ಮೂಲಕ ಅದಕ್ಕೆ ಅಂಕಿ-ಅಂಶಗಳನ್ನು ಸೇರಿಸಲಾಗುತ್ತಿತ್ತು. ಲವ್ ಲೇಸ್ ಎಂಬುವರು ಆ ಯಂತ್ರಕ್ಕೆ ಮೊತ್ತಮೊದಲನೆಯ “ಪ್ರೋಗ್ರಾಂ”ಗಳನ್ನು ಬರೆದಿದ್ದರು.

ಬ್ಯಾಬೇಜ್ ರ ಮರಣಾಂತರ ಅಮೆರಿಕನ್ ಅಂಕಿಸಂಖ್ಯಾ ಶಾಸ್ತ್ರಜ್ಞ ಹೆರ್ಮನ್ ಹಾಲೆರಿತ್, ತರುವಾಯ ಹಾರ್ವರ್ಡ್ ವಿಶ್ವವಿದ್ಯಾಲಯದ ಹೋವರ್ಡ್‌ಐಕೆನ್ ಮೊದಲಾದ ವಿಜ್ಞಾನಿಗಳು ಬ್ಯಾಬೇಜ್ ಕಂಡು ಹಿಡದಿದ್ದ “ಅನಾಲಟಿಕಲ್ ಎಂಜಿನ್”ದ ಆಧಾರದ ಮೇಲೆ ಬೇರೆ ಬೇರೆ ಸುಧಾರಿತ ಗಣಕ ಯಂತ್ರಗಳನ್ನು ತಯಾರಿಸಿದರು. ಆಗ ಎಲ್ಲರ ಗಮನ ಈ ಹೊಸ ಯಂತ್ರಗಳ ಕಡೆಗೆ ಹರಿಯಿತು. ಈಗ ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ನಮೂನೆಯ ಸುಧಾರಿತ ಕಂಪ್ಯೂಟರುಗಳು ಬಳಕೆಗೆ ಬರುತ್ತಿವೆ.

ಚಾರ್ಲಸ್ ಬ್ಯಾಬೇಜ್ ೧೮೭೧ರಲ್ಲಿ ನಿಧನ ಹೊಂದಿದರು.