ಬಂಡೆಗಳ ನಡುವೆ ಬಂಡೆಯಾಗಿ ಬಿದ್ದಿತ್ತು
ಎಷ್ಟೋ ಶತಮಾನಗಳ ಕಾಲ ಈ ಶಾಸನ.
ಓದಬಲ್ಲಂಥವನು ಬಂದ ಮೇಲಿದರರ್ಥದ-
ಹಲ್ಯೋದ್ಧರಣವಾಗಿ,
ಘನಸರ್ಕಾರದವರಿಲ್ಲಿ ‘ಸಂರಕ್ಷಿತ ಶಾಸನ’ದ
ಲಕ್ಷ್ಮಣ ರೇಖೆ ಎಳೆದು
ಉಳಿಸದೇ ಹೋಗಿದ್ದರೆ-

ಈ ವೇಳೆಗೀ ಶಾಸನದ ಬಂಡೆ
ಚೂರು ಚೂರಾಗಿ,
ಯಾರ ಮನೆಗೆ ಗೋಡೆಯೋ, ನೆಲೆಗಟ್ಟೋ ಆಗಿ,
ಅಥವಾ ಬಂಡಾರ-ಬೇವಿನಸೊಪ್ಪು ಕುಣಿಯುವ
ಮಾರಿಗುಡಿಯಾಗಿ,
ನಾವೂ ಈ ಬಿರುಬಿಸಿಲಲ್ಲಿ, ಇದನ್ನು ಹುಡುಕುತ್ತ
ಬಾರದಂತಾಗಿ,
ಇದ್ದಲ್ಲೆ ಇರಬಹುದಿತ್ತು ಹಾಯಾಗಿ.