ಎರಡು ಸಾವಿರದ ಮುನ್ನೂರು ವರ್ಷದ ಹಿಂದೆ
ಅಶೋಕ ಹುಟ್ಟಿದ ತಪ್ಪಿಗೆ,
ಎಂದೋ ಒಮ್ಮೆ ಆ ಅವನು ಯುದ್ಧದಲ್ಲಿ ಗೆದ್ದೂ
ಸತ್ತವರಿಗಾಗಿ ಅತ್ತು ನಿಟ್ಟುಸಿರುಬಿಟ್ಟ ತಪ್ಪಿಗೆ,
ಆ ಅದಕ್ಕೂ ಮೊದಲು, ಸಿದ್ಧಾರ್ಥನೆಂಬಾತ
ಬುದ್ಧನಾಗಿ ಧರ್ಮ ಪ್ರಚಾರ ಮಾಡಿದ ತಪ್ಪಿಗೆ –

ಈ ಇಗೊ, ಈಗ, ಎರಡು ಸಾವಿರದ ಮುನ್ನೂರು
ವರ್ಷಗಳೀಚೆ, ಬಿರುಬಿಸಿಲಲ್ಲಿ
ಬತ್ತಿ ಕಂಗಾಲಾದ ಹಳ್ಳಗಳನ್ನು ದಾಟುತ್ತ
ಹಳ್ಳಿ ಹಳ್ಳಿಗಳಲ್ಲಿ ತಣ್ಣೀರ ಕುಡಿಯುತ್ತ
ಸಿದ್ದಾಪುರವನ್ನು ದಾಟಿ ಬ್ರಹ್ಮಗಿರಿಯತ್ತ
ತೋರಿಸುವ ಕೈಮರವನ್ನು ನಂಬಿ,
ಕೊಯ್ಲಾದ ಹೊಲದ ಹಳೆ ಕೂಳೆಗಳ ತುಳಿಯುತ್ತ
ಆ, ಅಶೋಕನ ಶಾಸನವನ್ನು ಹುಡುಕುತ್ತ
ಅಲೆಯುತ್ತಿದ್ದೇವೆ.