ಚಾರಿತ್ರಿಕ ದೃಷ್ಟಿಯಿಂದ ಮೊಳಕಾಲ್ಮೂರು ತಾಲೂಕು ಕರ್ನಾಟಕದ ಪ್ರಮುಖ ತಾಣ. ಇಲ್ಲಿನ ಮೊಳಕಾಲ್ಮೂರು ಕೋಟೆ, ಭೈರವ ಕ್ಷೇತ್ರವಾದ ನುಂಕೆಮಲೆ, ಪ್ರಾಚೀನ ಇಸಿಲಾವೆಂದೇ ಖ್ಯಾತಿ ಹೊಂದಿದ ಬ್ರಹ್ಮಗಿರಿ, ರಾಮಾಯಣ ಕಾಲದ ಘಟನೆಗಳನ್ನು ಮೆಲುಕು ಹಾಕುವ ಜಟಂಗಿ ರಾಮೇಶ್ವರ ಬೆಟ್ಟಗಳು ಚಾರಿತ್ರಿಕ ಮತ್ತು ಪ್ರಾಕೃತಿಕವಾಗಿ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ.

ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೊಂದು. ಇದು ಚಿತ್ರದುರ್ಗದಿಂದ ಬಳ್ಳಾರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ೮೪ ಕಿ.ಮೀ. ದೂರದಲ್ಲಿದೆ. ಮೊಳಕಾಲ್ಮೂರು ಇತಿಹಾಸಪೂರ್ವ ಕಾಲದಿಂದಲೂ ಜನವಸತಿಯಿದ್ದ ಸ್ಥಳ. ಇಲ್ಲಿನ ಬೃಹತ್ ಶಿಲಾ ಸಮಾಧಿಗಳು ಪ್ರಾಚೀನ ಮಾನವನ ನೆಲೆಯಿದ್ದುದನ್ನು ದೃಢಪಡಿಸುತ್ತವೆ. ಈ ನಗರವನ್ನು ಪ್ರವೇಶಿಸುವ ಮುನ್ನ ಗೋಚರಿಸುವ ಕಣಶಿಲೆಯ ಸುಂದರ ಬೆಟ್ಟ ಶ್ರೇಣಿಗಳು ಪ್ರಾಚೀನ ಮಾನವನ ತಾಣಗಳೂ ಹೌದು. ಈ ಬೆಟ್ಟದ ಮೇಲೆ ಪ್ರಸಿದ್ಧವಾದ ಏಳುಸುತ್ತಿನ ಕೋಟೆಯಿದೆ. ಇದು ವಿಜಯನಗರ ಕಾಲದಲ್ಲಿ ನಿರ್ಮಾಣಗೊಂಡು, ಪಾಳೆಯಗಾರರ ಕಾಲದಲ್ಲಿ ಜೀರ್ಣೋದ್ಧಾರಗೊಂಡಿತು. ವಿಜಯನಗರವು ಕ್ರಿ.ಶ. ೧೫೬೫ ರಲ್ಲಿ ಪತನಗೊಂಡ ನಂತರ ನಾಯಕನಹಟ್ಟಿ ಪಾಳೆಯಗಾರ ಬೂದಿ ಮಲ್ಲಪ್ಪನಾಯಕನು ಮೊಳಕಾಲ್ಮೂರನ್ನು ೨೦೦ ಕೆಂಪು, ೧,೦೦೦ ಬಿಳಿ ಹಸುಗಳನ್ನು ಕೊಟ್ಟು ಪಡೆದುಕೊಂಡಿದ್ದನು. ಈ ಕೋಟೆಯಲ್ಲಿ ಬೂದಿ ಮಲ್ಲಪ್ಪನಾಯಕನು ಕೋಟೆಯ ಒಳಗೆ ತನ್ನ ತಾಯಿ ಲಕ್ಷಮ್ಮನ ಹೆಸರಿನಲ್ಲಿ ಕ್ರಿ.ಶ.ಸು.೧೬೨೦ ರಲ್ಲಿ ಕಟ್ಟಿಸಿದ ಕೆರೆಯಿದೆ. ಈ ಕೆರೆಯ ಮಧ್ಯದಲ್ಲಿ ಮಹಾಕವಿ ಕಾಳಿದಾಸನನ್ನು ಹೊಗಳುವ ಯಮಕ ಶ್ಲೋಕವುಳ್ಳ ಶಾಸನವಿದೆ. ಅಲ್ಲದೆ ಇಲ್ಲಿನ ಕೂಗು ಬಂಡೆಯು ಪ್ರಸಿದ್ಧವಾಗಿದೆ. ಈ ಮೇಲ್ಕಂಡ ಸ್ಥಳಗಳಲ್ಲದೆ ಮೊಳಕಾಲ್ಮೂರು ಬಟ್ಟೆ ನೇಯ್ಗೆಗೆ ಹೆಸರು ವಾಸಿಯಾಗಿದ್ದು, ರೇಷ್ಮೆ ಮೊದಲಾದ ಬಟ್ಟೆಗಳಿಗೆ ತುಂಬಾ ಬೇಡಿಕೆಯನ್ನು ಇಂದಿಗೂ ಹೊಂದಿರುವುದು ಗಮನಾರ್ಹ.

ಮೊಳಕಾಲ್ಮೂರಿನಿಂದ ಬಳ್ಳಾರಿ ಮಾರ್ಗದಲ್ಲಿ ಹೊರಟರೆ ಬಲಕ್ಕೆ ನುಂಕೆಮಲೆ ಬೆಟ್ಟವಿದೆ. ಇದು ಮೊಳಕಾಲ್ಮೂರು ಕೋಟೆಯೊಳಗಿನ ಕೂಗುಬಂಡೆಯ ವಾಯುವ್ಯ ದಿಕ್ಕಿನಲ್ಲಿ ಸುಮಾರು ೫ ಕಿ.ಮೀ. ಅಂತರದಲ್ಲಿದೆ. ಇದೊಂದು ಪ್ರಸಿದ್ಧ ಭೈರವ ಕ್ಷೇತ್ರ. ಇಲ್ಲಿ ಭೈರವ, ಮಲ್ಲಿಕಾರ್ಜುನ, ತುಪ್ಪದಮ್ಮ ಮೊದಲಾದ ದೇವಾಲಯಗಳಿವೆ, ಈ ಕ್ಷೇತ್ರವನ್ನು ನುಂಕುಮಲೆ, ಲುಂಕುಮಲೆ, ದೇವರಗುಡ್ಡ, ನುಂಕೆ ಬೈರವನ ಬೆಟ್ಟ, ನುಂಕಪ್ಪನ ಗುಡ್ಡ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಬೈರವನನ್ನು ನುಂಕೇಶ್ವರನೆಂದು ಕರೆದಿದ್ದು, ಇದನ್ನು ಕದಂಬ ವಂಶೀಯನೊಬ್ಬನು ೧೦ನೆಯ ಶತಮಾನದಲ್ಲಿ ಪ್ರತಿಷ್ಠಾಪಿಸಿದನೆಂದು ಶಾಸನಗಳು ಹೇಳುತ್ತವೆ. ಈ ಅವಧಿಯಲ್ಲಿ ಇಲ್ಲಿ ಕೋಟೆಯನ್ನು ಕಟ್ಟಲಾಗಿದ್ದು, ಇದು ಕಾಲಾನಂತರ ಲುಂಕೆಕೋಟೆಯೆಂದೇ ಪ್ರಸಿದ್ಧಿಯಾಗಿದೆ. ನುಂಕೆಮಲೆಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯು ಇಂದಿಗೂ ಈ ಭಾಗದ ಅತ್ಯಂತ ಮಹತ್ವದ ಉತ್ಸವವಾಗಿದೆ. ನುಂಕೆಮಲೆಯು ಪ್ರಾಕೃತಿವಾಗಿಯೂ ಅತ್ಯಂತ ರಮ್ಯರಮಣೀಯ ಸ್ಥಳ.

ಮೊಳಕಾಲ್ಮೂರು ತಾಲೂಕಿನ ಮುಖ್ಯ ಪ್ರವಾಸಿ ತಾಣಗಳಲ್ಲಿ ಬ್ರಹ್ಮಗಿರಿಯೂ ಒಂದು. ಇದು ಬಳ್ಳಾರಿ ಮಾರ್ಗದಲ್ಲಿ ಮೊಳಕಲ್ಮೂರಿನಿಂದ ಸುಮಾರು ೨೦ ಕಿ.ಮೀ. ದೂರದಲ್ಲಿದೆ. ಭಾರತದ ಪ್ರಸಿದ್ಧ ಶಾಂತಿಪ್ರಿಯ ಅರಸ ಅಶೋಕನ ಕಾಲದಲ್ಲಿ ಇಸಿಲಾವೆಂದೇ ಖ್ಯಾತಿಹೊಂದಿದ್ದ ಬ್ರಹ್ಮಗಿರಿ ಬೆಟ್ಟ ಪ್ರದೇಶದಲ್ಲಿ ಅವನು ಹಾಕಿಸಿದ ಎರಡು ಶಿಲಾಶಾಸನಗಳು ದೊರೆತಿರುವುದು ಗಮನಾರ್ಹ. ಇವು ಅಶೋಕನ ಶಾಂತಿಪ್ರಿಯತೆ, ಸತ್ಯ, ಅಹಿಂಸೆ ಹಾಗೂ ಸನ್ಮಾರ್ಗದ ಗುಣಗಳನ್ನು ಸಾರುವ, ಜನರನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯುವ ಮಹತ್ವದ ಪ್ರಾಚೀನ ದಾಖಲೆಗಳೂ ಆಗಿವೆ. ಈ ಪರಿಸರದಲ್ಲಿ ಇಂದಿಗೂ ಪ್ರಾಚೀನ ಸ್ಮಾರಕಗಳಾದ ದೇವಾಲಯ, ಶಿಲ್ಪ, ವೀರಗಲ್ಲು, ಕೋಟೆಕೊತ್ತಲುಗಳು, ಹಾಗೂ ಶಿಲಾಯುಗ ಕಾಲದ ಶಿಲಾಯುಧ, ಮಡಕೆಕುಡಕೆ, ಬೃಹತ್ ಶಿಲಾಗೋರಿಗಳು ಕಂಡುಬರುತ್ತವೆ. ಅವುಗಳಲ್ಲಿ ಅಕ್ಕತಂಗಿಯರ ಗುಡಿ, ಪಗಡೆಸಾಲುಗುಡಿ, ಜಿನಾಲಯ, ಭಾಗ್ಯಲಕ್ಷ್ಮಿ ಮತ್ತು ತ್ರಿಶಂಕೇಶ್ವರ ದೇವಾಲಯಗಳು ಹಾಗೂ ಬೆಟ್ಟದ ಮೇಲ್ಬಾಗದಲ್ಲಿರುವ ಮಹಲ್‌ಗಳು ಮುಖ್ಯವಾಗಿವೆ.

ಅಶೋಕನ ಕಾಲದಲ್ಲಿ ಇಸಿಲಾ ಪಟ್ಟಣವಾಗಿದ್ದ ಈ ಸ್ಥಳವು ಮುಂದೆ ಹಾನೆಯ ನಾಡು, ಹಾನೆಯಪಟ್ಟಣವಾಗಿ ಪರಿವರ್ತಿತವಾಗಿ ಹೊಯ್ಸಳ ಬಲ್ಲಾಳನ ಅವಧಿಯಲ್ಲಿ ವಿಜಯಗಿರಿಯಾಗಿ ಪ್ರಸಿದ್ಧಿ ಹೊಂದಿದ್ದಿತು. ಈ ಸ್ಥಳಕ್ಕೆ ಐತಿಹಾಸಿಕ ಮಹತ್ವ ಬಂದದ್ದು ಬಿ.ಎಸ್.ರೈಸ್‌ರವರಿಂದ. ಇವರು ೧೮೯೨ರಲ್ಲಿ ಬೆಟ್ಟದ ಉತ್ತರಕ್ಕಿರುವ ಅಕ್ಷರಗುಂಡಿನ ಮೇಲಿದ್ದ ಅಶೋಕನ ಶಾಸನವನ್ನು ಪತ್ತೆಹಚ್ಚುವ ಮೂಲಕ ಚಿತ್ರದುರ್ಗ ಜಿಲ್ಲೆಯವರೆಗೆ ಮೌರ್ಯ ಸಾಮ್ರಾಜ್ಯ ವಿಸ್ತಾರವಾಗಿದ್ದುದನ್ನು ದೃಢಪಡಿಸಿದರು. ಇಸಿಲಾ ಪಟ್ಟಣವು ಅಶೋಕನ ಕಾಲದಲ್ಲಿ ದಕ್ಷಿಣ ರಾಜಧಾನಿಯಾಗಿತ್ತಲ್ಲದೆ ಪ್ರಮುಖ ಆಡಳಿತ ಕೇಂದ್ರವಾಗಿದ್ದಿತು. ಇಲ್ಲಿ ಎಂ.ಎಚ್.ಕೃಷ್ಣರವರು ಕ್ರಿ.ಶ. ೧೯೨೮ ಮತ್ತು ೧೯೪೦ ರಲ್ಲಿ. ಸರ್‌ಮಾರ್ಟಿಮರ್ ವೀಲ್ಹರ್‌ರವರು ೧೯೪೭ರಲ್ಲಿ ಕೈಗೊಂಡ ಕ್ರಮಬದ್ಧ ಉತ್ಖನನದ ಮೂಲಕ ಬ್ರಹ್ಮಗಿರಿಯ ಪರಿಸಿರದ ಪ್ರಾಚೀನತೆಯನ್ನು ಜಗತ್ತಿಗೆ ಸಾರಿದರು. ಇಲ್ಲಿ ನಡೆದ ಉತ್ಖನನವು ಕರ್ನಾಟಕದ ಪ್ರಾಚೀನತೆಯನ್ನು ಪ್ರಪ್ರಥಮವಾಗಿ ವೈಜ್ಞಾನಿಕ ದೃಷ್ಟಿಕೋನದಿಂದ ರಚಿಸಲು ಅನೇಕ ಸಾಧ್ಯತೆಗಳನ್ನು ಸೃಷ್ಟಿಸಿತೆಂದೇ ಹೇಳಬಹುದು. ಇಂತಹ ಪ್ರಸಿದ್ಧ ಪ್ರಾಚೀನ ನೆಲೆಗಳಾದ ಮೊಳಕಾಲ್ಮೂರು, ಬ್ರಹ್ಮಗಿರಿ, ಜಟಂಗಿ ರಾಮೇಶ್ವರ, ನುಂಕೆಮಲೆಗಳು ಮೂಲಭೂತ ಸೌಕರ್ಯಗಳಿಲ್ಲದ ನಿರ್ಜನ ಪ್ರದೇಶಗಳಾಗಿವೆ.

ಪ್ರವಾಸೋದ್ಯಮದ ಹಿನ್ನಲೆಯಲ್ಲಿ ಹೇಳುವುದಾದರೆ ಇವು ಮೂಲಸೌಲಭ್ಯಗಳ ಕೊರತೆಯಿಂದ ಪ್ರವಾಸಿಗರು, ಅಧ್ಯಯನಾರ್ಥಿಗಳು ಹಾಗೂ ಸಂಶೋಧಕರನ್ನು ಆಕರ್ಷಿಸುವಲ್ಲಿ ಈ ಸ್ಥಳವು ವಿಫಲವಾಗಿವೆ. ಸರ್ಕಾರ ಮತ್ತು ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳು ಇತ್ತ ಗಮನಹರಿಸಿ ಕನಿಷ್ಠ ಸೌಲಭ್ಯಗಳಾದ ರಸ್ತೆಸಾರಿಗೆ, ನೀರು, ಆಸ್ಪತ್ರೆ ಮೊದಲಾದುವನ್ನು ಒದಗಿಸುವ ಮೂಲಕ ಪ್ರವಾಸಿಗರು, ಜನಸಾಮಾನ್ಯರನ್ನು ಆಕರ್ಷಿಸಬಹುದಾಗಿದೆ.

ಇಂತಹ ಪ್ರಾಚೀನ ನೆಲೆಗಳ ಮಹತ್ವವನ್ನು ಸ್ಥಳೀಯರಿಗೆ ತಿಳಿಸುವ ಹಾಗೂ ಅವರಿಂದ ಹೆಚ್ಚಿನ ಮಾಹಿತಿ ಪಡೆದು ದಾಖಲಿಸುವ ಸಲುವಾಗಿ ಪ್ರಾಚೀನ ಇತೆಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ರಾಂಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವಮಾಲೆ – ಬ್ರಹ್ಮಗಿರಿ ಎಂಬ ವಿಚಾರ ಸಂಕಿರಣವನ್ನು ೨೦೦೭ ಏಪ್ರಿಲ್ ೮ ರಂದು ರಾಂಪುರದಲ್ಲಿ ಹಮ್ಮಿಕೊಂಡಿತ್ತು. ಈ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಕಲನವೇ ಪ್ರಸ್ತುತ ಬ್ರಹ್ಮಗಿರಿ ಕೃತಿ. ಈ ಕೃತಿಗೆ ಬ್ರಹ್ಮಗಿರಿ ಎಂದು ಕರೆಯಲು ಕಾರಣ ಕರ್ನಾಟಕದ ಚಾರಿತ್ರಿಕ ಮಹತ್ವವನ್ನು ಅಶೋಕನ ಶಾಸನಗಳ ಮೂಲಕ ಜಗತ್ತಿಗೆ ಸಾರಿದ ಹಾಗೂ ಕರ್ನಾಟಕದ ಪ್ರಾಗಿತಿಹಾಸವನ್ನು ಉತ್ಖನನದ ಮೂಲಕ ಅಧಿಕೃತವಾಗಿ ದಾಖಲಿಸಿದ ಸ್ಥಳ ಬ್ರಹ್ಮಗಿರಿಯಾಗಿದೆ. ಈ ಹಿನ್ನಲೆಯಲ್ಲಿ ಬ್ರಹ್ಮಗಿರಿ ಹೆಸರು ಸೂಕ್ತವಾಗಿದೆ. ಈ ಕೃತಿಯಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಜೊತೆಗೆ ನಾಡಿನ ಹಿರಿಯ ವಿದ್ವಾಂಸರಾದ ಡಾ. ಅ. ಸುಂದರ ಅವರ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯನ್ನು ಇಲ್ಲಿ ಪ್ರಕಟಿಸಲಾಗಿದೆ. ಡಾ. ಅ. ಸುಂದರ ಅವರು ಬ್ರಹ್ಮಗಿರಿ ಮತ್ತು ಚಂದ್ರವಳ್ಳಿ ಎಂಬ ಕಿರು ಹೊತ್ತಿಗೆಯನ್ನು ಹಿಂದೆ ರಚಿಸಿದ್ದರು. ಅದು ಇಂದು ಲಭ್ಯವಿಲ್ಲ. ಆದುದರಿಂದ ಈ ಕೃತಿಯು ಉಪಯುಕ್ತವಾದುದರಿಂದ ಮರುಪ್ರಕಟಿಸಲು ವಿನಂತಿಸಿಕೊಂಡೆನು.ಅವರು ಪುನ: ಸಂಪೂರ್ಣವಾಗಿ ಪರಿಶೀಲಿಸಿ, ವಿಮರ್ಶಿಸಿ ಇತ್ತೀಚಿನವರೆಗೆ ನಡೆದ ಅಧ್ಯಯನಗಳನ್ನು ಗಮನಿಸಿ ಮರುರಚಿಸಿಕೊಟ್ಟಿದ್ದಾರೆ. ಇದು ಈ ಕೃತಿಗೆ ಮತ್ತಷ್ಟು ಮೆರುಗನ್ನು ತಂದುಕೊಟ್ಟಿದೆಯೆಂದೇ ನಾನು ಭಾವಿಸಿದ್ದೇನೆ. ಅವರಿಗೆ ಅನಂತ ಕೃತಜ್ಞತೆಗಳು. ಈ ಕೃತಿಯಲ್ಲಿ ಬೌಗೋಳಿಕ, ಪರಿಸರ, ಪ್ರಾಗಿತಿಹಾಸ, ಚರಿತ್ರೆ, ದೇವಲಾಯ, ಸ್ಮಾರಕ ಶಿಲ್ಪ, ಚಿತ್ರಕಲೆ, ರಕ್ಷಣಾ ವಾಸ್ತುಶಿಲ್ಪ, ಜನಪದ ಸಾಹಿತ್ಯ, ಬೂದಿ ಸಂಬಂದಿತ ಎಡೆಗಳು ಮೊದಲಾದ ಲೇಖನಗಳಿವೆ. ಇವು ಮೊಳಕಾಲ್ಮೂರು ತಾಲೂಕಿನ ಸಮಗ್ರ ವಿವರವನ್ನು ಕುರಿತು ಸಂಶೋಧನ ಪ್ರಬಂಧಗಳಾಗಿವೆ. ಇವುಗಳನ್ನು ಸಂಶೋಧಕ ವಿದ್ವಾಂಸರು ಶ್ರಮವಹಿಸಿ ರಚಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಹಾಗೆಯೇ ವಿಚಾರ ಸಂಕಿರಣದ ಗೋಷ್ಟಿಗಳ ಅಧ್ಯಕ್ಷತೆಯನ್ನು ವಹಿಸಿ ಸಹಕರಿಸಿದ ಡಾ. ದೇವರ ಕೊಂಡಾರೆಡ್ಡಿ, ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಗೂ ಧನ್ಯವಾದಗಳನ್ನು ಹೇಳಲಿಚ್ಚಿಸುತ್ತೇನೆ.

ಈ ವಿಚಾರ ಸಂಕಿರಣ ನಡೆಯಲು ಕಾರಣಕರ್ತರಾದ ಅಂದಿನ ಕುಲಪತಿಗಳಾದ ಡಾ. ಬಿ.ಎ.ವಿವೇಕ ರೈ ಅವರಿಗೆ, ಕೃತಿ ರೂಪದಲ್ಲಿ ಹೊರಬರಲು ನೆರವಾದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಮಾನ್ಯ ಕುಲಸಚಿವರಾದ ಢಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಪ್ರಕಟಣೆ ಜವಾಬ್ದಾರಿ ಹೊತ್ತ ಪ್ರಸಾರಾಂಗದ ನಿರ್ದೇಶಕರಾದ ಡಾ. ಮೋಹನ ಕುಂಟಾರ್ ಅವರಿಗೂ ಕೃತಜ್ಞತೆಗಳು ಸಲ್ಲುತ್ತವೆ.

ವಿಚಾರ ಸಂಕಿರಣ ಹಾಗೂ ಕೃತಿ ಹೊರಬರುವುದರಲ್ಲಿ ಸಹಕರಿಸಿದ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿ.ಮಹದೇವ, ಡಾ. ಸಿ.ಎಸ್. ವಾಸುದೇವನ್, ಡಾ. ವಾಸುದೇವ ಬಡಿಗೇರ ಹಾಗೂ ಶ್ರೀ ರಮೇಶ ನಾಯಕ ಅವರಿಗೆ, ಪುಸ್ತಕಕ್ಕೆ ಕೆಲವು ಛಾಯಾಚಿತ್ರಗಳನ್ನು ನೀಡಿದ ಬಿ.ಟಿ. ಚಾರುಲತಾ ಅವರಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ.

ವಿಚಾರ ಸಂಕಿರಣದ ಜವಾಬ್ದಾರಿ ಹೊತ್ತು ನಮ್ಮೊಂದಿಗೆ ಕೈಜೋಡಿಸಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್.ವೈಪಿ.ಸ್ವಾಮಿ ಅವರಿಗೆ, ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ನ್ಯಾಮೂರ್ತಿಗಳೂ, ಸಂಸದರೂ ಆಗಿದ್ದ ಶ್ರೀ ಎನ್.ವೈ. ಹನುಮಂತಪ್ಪ ಅವರಿಗೂ, ಶಾಸಕರಾದ ಎನ್.ವೈ. ಗೋಪಾಲಕೃಷ್ಣ ಅವರಿಗೂ ಅನಂತ ಕೃತಜ್ಞತೆಗಳು. ಕಾರ್ಯಕ್ರಮದ ಉಸ್ತುವಾರಿ ಹೊತ್ತು ಯಶಸ್ವಿಗೊಳಿಸಿದ ಶ್ರೀ ಪಿ.ಕೆ.ಕುಮಾರಸ್ವಾಮಿ, ಶ್ರೀ ಪಿ.ಕೆ. ರವಿಶಂಕರ್, ಶ್ರೀ ವಿ. ಲೋಕೇಶ್ ಅವರಿಗೆ ಅನಂತ ಧನ್ಯವಾದಗಳು. ರಾಂಪುರದ ಸಮಸ್ತ ನಾಗರಿಕರಿಗೆ, ಈ ಪುಸ್ತಕ ಹೊರಬರಲು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಸಮಸ್ತರನ್ನು ಹೃತ್ಪೂರ್ವಕವಾಗಿ ನೆನಯುತ್ತೇನೆ. ಡಿಟಿಪಿಯಲ್ಲಿ ನೆರವಾದ ಶರಣಪ್ಪ, ವಿಭಾಗದ ಶ್ರೀಮತಿ ದಿಲ್‌ಶಾದಬಾನು ಬೇಗಂ ಹಾಗೂ ಶ್ರೀ ರಮೇಶ ಅವರಿಗೆ ಧನ್ಯವಾದಗಳು ಸಲ್ಲುತ್ತವೆ.

ಡಾ. ಎಸ್.ವೈ. ಸೋಮಶೇಖರ್