ಮೊಳಕಾಲ್ಮೂರು ತಾಲ್ಲೂಕಿನ ಪರಿಸರದಲ್ಲಿ ಜನಪದ ಕವಿ, ಕಾವ್ಯ, ಕಲೆ-ಕಲಾವಿದರಿಗೆ ಯಾವ ಬರವಿಲ್ಲ. ಹಲವು ಬಡತನಗಳ ದಾಳಿಗಳನ್ನು ಎದುರಿಸಿಯೂ ಇಲ್ಲಿನ ಕಲಾ ಸಂಪತ್ತು, ಸಾಹಿತ್ಯ ಸಂಪತ್ತು ಉಳಿದುಕೊಂಡು ಬಂದಿದೆ. ಹಿಂದಿನ ಕಸುಬನ್ನು ಉಳಿಸಿಕೊಂಡು ಬಂದ ಆಯಾ ಸಂದರ್ಭ, ಸಂಪ್ರದಾಯ, ಆಚರಣೆಗಳಿಗೆ ತಕ್ಕಂತೆ ಪ್ರದರ್ಶಿಸಲ್ಪಡುತ್ತವೆ. ಇಲ್ಲಿನ ಜಾನಪದದ ಶ್ರೇಷ್ಟತೆಯನ್ನು ಮೆರೆದ ಕವಿ ಕಲಾವಿದರು, ಕಥೆಗಾರರು, ಸಂಪ್ರದಾಯ ಹಾಡುಗಾರರು ಎಲೆಮರದ ಕಾಯಿಯಂತೆ ಅಡಗಿಕೊಂಡು ಇಂದು ಜನಪದ ಸಾಹಿತ್ಯವನ್ನು ಬೆಳೆಸುತ್ತಿದ್ದಾರೆ.

ಈ ಪ್ರದೇಶದ ನೆರೆಭಾಷೆಗಳ ಪ್ರಭಾವಕ್ಕೆ ಒಳಗಾಗಿ ಇಲ್ಲಿನ ಕಾವ್ಯ ಸೃಷ್ಟಿ ನಡೆದುಕೊಂಡು ಬಂದಿದೆ. ವಿಶಿಷ್ಟ ಸಾಹಿತ್ಯದ ರಚನೆಯ ಜೊತೆಗೆ ಜನಪದ ಸಾಹಿತ್ಯದ ಸೃಷ್ಟಿಯಲ್ಲೂ ಇದು ಮುಂದುವರೆದಿದೆ. ಜನಪದರು ತಮಗಾದ ಸುಖ-ದಃಖ, ನೋವು-ನಲಿವು, ಆಸೆ-ಆಕಾಂಕ್ಷೆ, ನಂಬಿಕೆ-ಸಂಪ್ರದಾಯ, ಆಟ-ಪಾಟ, ಮುಂತಾದವುಗಳನ್ನು ಜನಪದರು ತಮ್ಮ ಹಾಡುಗಳಲ್ಲಿ ಹೆಣೆದುಕೊಂಡು ಬಂದಿದ್ದಾರೆ.

ಮೊಳಕಾಲ್ಮೂರು ತಾಲ್ಲೂಕಿನ ಗ್ರಾಮೀಣಗಳಲ್ಲಿ ಜನಪದ ಸಾಹಿತ್ಯವನ್ನು ಗದ್ಯ-ಪದ್ಯ ಮಿಶ್ರ ಸಾಹಿತ್ಯವೆಂದು ಮೂರು ಪ್ರಕಾರಗಳಲ್ಲಿ ಗುರುತಿಸಬಹುದು. ಗದ್ಯಸಾಹಿತ್ಯದ ಮೂಲಕ ಪ್ರಾಚೀನ ಜನಪದ ಸಮಾಜದ ಸ್ಪಷ್ಟ ಚಿತ್ರಣನ್ನು ಪಡೆದುಕೊಂಡಿದೆ. ಪ್ರಾಗಿತಿಹಾಸ ಕಾಲದ ಮಾನವನ ಅನೇಕ ಕುರುಹುಗಳು ಇಲ್ಲಿ ಕಂಡು ಬರುತ್ತವೆ. ಜನಪದದ ಸಾಂಸ್ಕೃತಿಕ ವಿಕಾಸದ ಬೆಳವಣಿಗೆಯ ಹಂತವನ್ನು ಕಾಣುತ್ತೇವೆ. ಈ ಪ್ರದೇಶದ ‘ಪಡೆನುಡಿಗಳು’ ಇಲ್ಲಿ ಭಾಷಾಭಿವೃದ್ಧಿಗೆ ವ್ಯತ್ಯಾಸವೆನಿಸುತ್ತವೆ. ಈ ತಾಲ್ಲೂಕಿನ ಗ್ರಾಮಗಳಲ್ಲಿ ಉರ್ಥಾಳ, ಕೋನಾಪುರ, ನಾಗಸಮುದ್ರ, ಹೊಸಕೋಟೆ, ಗೌರಸಮುದ್ರ, ಮಾಚನಹಳ್ಳಿ, ಬುಡ್ಡೇನಹಳ್ಳಿ ಮತ್ತು ಮೊಳಕಾಲ್ಮೂರು ಪ್ರದೇಶಗಳಲ್ಲಿ ಒಂದು ರೀತಿಯ ಕನ್ನಡ ಮತ್ತು ತೆಲುಗು ಇವೆರಡರ ಮಿಶ್ರರೂಪದ ಭಾಷೆ ಬಳಕೆಯಲ್ಲಿದೆ. ಇಲ್ಲಿನ ಜನಪದದ ಭಾಷೆಯ ಮೇಲೆ ತೆಲುಗಿನ ಪ್ರಭಾವವನ್ನು ಸ್ಪಷ್ಟವಾಗಿ ಕಾಣುತ್ತೇವೆ.

ಪದ್ಯ ಸಾಹಿತ್ಯ ಪ್ರಕಾರವಾದ ಕೋಲಾಟ ಮತ್ತು ಭಜನೆಯ ಸಂಪ್ರದಾಯ ಹಾಡುಗಳಿಗೆ ಪ್ರತ್ಯೇಕವಾದ ಸ್ಥಾನವಿದೆ. ನೂರಾರು ಕವಿಗಳು ಈ ಸಾಹಿತ್ಯ ಸೃಷ್ಟಿ ಮಾಡಿದ್ದಾರೆ. ಜನಪದ ಕಲಾಕಾರರು ಇವುಗಳನ್ನು ತಮ್ಮ ಕಂಠದಿಂದ ಸೆರೆ ಹಿಡಿದಿದ್ದಾರೆ. ಅಂತವರಲ್ಲಿ ಜಮ್ಮಲಿ ಮಲಿಕೆ ಗಂಗಪ್ಪ, ರಂಗಪ್ಪ, ಮಡ್ಡರಹಳ್ಳಿ ರಾಜಣ್ಣ, ದುರುಗಪ್ಪ, ಗಂಗಪ್ಪ, ಮರಿಸ್ವಾಮಿ, ಭಟ್ರಹಳ್ಳಿ ದೊಡ್ಡರಂಗಪ್ಪ, ಸಂಗಪ್ಪ, ಅಪ್ಪಣ್ಣ, ಶಿರೇಕೊಳ ರಾಜಣ್ಣ, ತಿಪ್ಪೇಸ್ವಾಮಿ, ಸಂಗಪ್ಪ ಮುಂತಾದವರು ಕೋಲಾಟ-ಭಜನೆ ಕ್ಷೇತ್ರದಲ್ಲಿ ಕೃಷಿಯಾಡಿನ ಪ್ರಮುಖ ಕವಿಗಳು, ಇವರು ಕಟ್ಟಿದ ಹಾಡುಗಳು ಜನತೆಯ ತುದಿ ನಾಲಿಗೆಯ ಮೇಲಿವೆ. ಇವುಗಳನ್ನು ಜನಪ್ರಿಯ ಗೊಳಿಸಿದ ಕಲಾ ಮೇಳಗಳಾದ ವೆಂಕಟಾಪುರ, ಬುಡ್ಡೆನಹಳ್ಳಿ, ಕೆರೆಕೊಂಡಾಪುರ, ಬಸಾಪುರ, ದಡಗೂರು, ಉರ್ಥಾಳ, ಚಿಕ್ಕೆರಹಳ್ಳಿ, ಭಟ್ರಬೀಜಿಕೆರೆ, ರಾಂಪುರ, ಅಮಕುಂದಿ ಮುಂತಾದ ಗ್ರಾಮಗಳಲ್ಲಿ ಜೀವಂತವಾಗಿವೆ. ಈ ಕೋಲಾಟ ಮತ್ತು ಭಜನೆ ಮೇಳಗಳು ಈ ಪ್ರದೇಶಕ್ಕೆ ಕೀರ್ತಿಯನ್ನು ತಂದಿವೆ. ಇಲ್ಲಿ ರಚನೆಯಾದ ಹಾಡುಗಳು ಚಿತ್ರದುರ್ಗ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಹರಡಿಕೊಂಡಿವೆ. ಉದಾಹರಣೆಗೆ,

ಯ್ಯಾಂಗ ಬಳಕೆಯ ಮಾಡಬೇಕಣ್ಣ
ಇಂಗಾದ ಮೇಲೆ ಯ್ಯಾಂಗ ಬಳಕೆಯ ಮಾಡಬೇಕಣ್ಣ
ಯ್ಯಾಂಗ ಬಳಕೆಯ ಮಾಡಬೇಕು ಆಂಗ ಹರಿದ ನಿಂತಮೇಲೆ
ಬಗ್ಗಿ ತಂಬಾಕು ಸೇದುವಂತ ಮಳ್ಳಿಯ್ಯಾಂಗ ಹೇರಿಯರಿಗೆ || ಯ್ಯಾಂಗ ||
ಕೋಲಾಟ ಗೀತಿಗಳಲ್ಲಿ ಕಾಣುವುದಾದರೆ.
ಬಣ್ಣದಗಳಾರತಿ ನೀರು ತುಂಬಗರತಿ
ತಗಿ-ತಂಗಿ ನಿನ್ನಕೊಡ
ಸರ್ತಿಕೊಡಗಳೊಂದು ಒರತಿಗೆ ಬಂದರೆ
ಒಪ್ಪುತಾರೆ ಕೈಡಗ

ಎನ್ನುವಂಥ ಪದ್ಯಗಳು ಕೇಳುವವರಿಗೆ ಚಿರಪರಿಚಿತವಾಗಿವೆ. ಇವುಗಳಲ್ಲಿನ ತತ್ವ, ಧಾಟಿಗಳಿಗೆ ತಲೆದೂಗದವರೇ ಇಲ್ಲ ಇಂತಹ ಪದ್ಯ ಸಾಹಿತ್ಯಕ್ಕೆ ಮೊಳಕಾಲ್ಮೂರು ತಾಲೂಕು ಜನಪದ ಸಾಹಿತ್ಯ ವಿಶಿಷ್ಟ ಕೊಡುಗೆಯಾಗಿದೆ.

ಜನಪದದ ಬದುಕಿಗೆ ಹಲವು ಹಂತಗಳನ್ನು ತಿಳಿಸುವ ಜನಪದ ಸಾಹಿತ್ಯದ ಪ್ರಕಾರವಾದ ‘ಹಂತಿ ಹಾಡುಗಳು’ ಶಿವಶರಣರ ಮೇಲೆ ರಚನೆಯಾದ ಹಾಡುಗಳಾಗಿವೆ. ಇಲ್ಲಿ ಹಂತಿ ಮೇಳಗಳು ಸುಪ್ರಸಿದ್ಧವೆನಿಸಿವೆ. ಈ ಜಿಲ್ಲೆಯ ಡೊಳ್ಳು ಪ್ರದರ್ಶನ ಮತ್ತು ತೋಗಲು ಗೊಂಬೆಯಾಟ ಗಂಗೊತ್ತಿನ ಪ್ರದರ್ಶನ ಇಂದು ಜನರ ಮೆಚ್ಚಿಗೆಯನ್ನು ಪಡೆದುಕೊಂಡಿವೆ.

ಜನಪದ ಗರತಿಯ ಸಂಸ್ಕೃತಿಯನ್ನು ಬಿಂಬಿಸುವ ಹೆಣ್ಣುಮಕ್ಕಳ ಹಾಡುಗಳು ಮೊಳಕಾಲ್ಮೂರು ತಾಲೂಕಿನ ಪ್ರದೇಶದಲ್ಲಿ ವ್ಯಾಪಕವಾಗಿ ರಚನೆಯಾಗಿವೆ. ಬೀಸುವ, ಕುಟ್ಟುವ, ಸೋಬಾನ, ಜೋಗುಳ ಹಾಡುಗಳೆಂದು ಇವು ವಿವಿಧ ಪ್ರಕಾರಗಳಲ್ಲಿ ದೊರೆಯುತ್ತವೆ. ಅದರಲ್ಲೂ ಮದುವೆಯ ವಿವಿಧ ಛಾಜದ ಹಾಡುಗಳಂತೂ ಕೇಳುಗರ ಮನ ಸೊರೆಗೊಳ್ಳುತ್ತಿವೆ. ಕುಂಕುಮ, ಹಚ್ಚುವುದು, ಒಳಕಲ್ಲು ಪೂಜೆ, ಬೀಗರು ಎದುರುಗೊಳ್ಳವುದು, ಐರಾಣಿ ತರುವುದು, ಎಣ್ಣೆ ಹಚ್ಚುವುದು, ಸುರಿಗೆ ಸುತ್ತುವುದು, ಹಾಲುಗಂಬ ತರುವುದು, ಭೂಮಿ ಒಪ್ಪಿಸುವುದು, ಕೂಸೊಪ್ಪಿಸುವುದು ಹೀಗೆ ಆಯಾ ಹಾಡುಗಳು ಛಾಪಿಕ್ಕೆ ತಕ್ಕಂತೆ ಹೊರ ಹೊಮ್ಮುತ್ತವೆ. ಒಂದರ ಧಾಟಿ ಇನ್ನೊಂದಕ್ಕಿಲ್ಲ, ಎಲ್ಲವೂ ಹೊಸತೆಂದು ಗುರುತಿಸಬಹುದು.

ಮೊಳಕಾಲ್ಮೂರು ತಾಲೂಕಿನಲ್ಲಿ ಒಗಟುಗಳನ್ನು ವ್ಯಕ್ತಿ ಪರವಸ್ತು ಪರ, ಪ್ರಾಣಿ ಪರವೆಂದೂ, ಸರಳ ಮತ್ತು ಸಂಕೀರ್ಣ ಒಗಟುಗಳೆಂದೂ ಚಾತುರ್ಯ ಪ್ರಧಾನ ಮತ್ತು ಸೌಂಧರ್ಯ ಪ್ರಧಾನ ಒಗಟುಗಳೆಂದೂ ಹಲವು ವಿಧವಾಗಿ ವಿಂಗಡಿಸಬಹುದು. ನಮ್ಮ ತಾಲೂಕಿನಲ್ಲಿ ಜನಪದರು ಇಂದು ಪ್ರತಿ ಒಂದು ಗ್ರಾಮಗಳಲ್ಲಿ ಒಗಟುಗಳು ನೋಡಬಹುದು. ಅದರಲ್ಲಿ ಪ್ರಶ್ನೋತ್ತರ ರೂಪದ ಒಗಟುಗಳು ಇವುಗಳಲ್ಲಿ ಒಂದು ಬಗೆ ಅಪಾರ್ಥ ತುಂಬಿ ಆನರ್ಥ ಬರುವ ರೀತಿಯಲ್ಲಿ ಕಟ್ಟಿರುವ ನಂಬಿಕೆಗಳು ಕಾಣುತ್ತೇವೆ. ಹಾಗೆಯೇ ಕೆಲವು ಹಾಸ್ಯವನ್ನೆ ಗುರಿಯಾಗಿಟ್ಟುಕೊಂಡರೂ, ತಾನು ಬಳಸುವ ವಸ್ತುಗಳ ಗುಣ ಸ್ವಭಾವ ಧರ್ಮಗಳು ಎದ್ದು ಕಾಣುವಂತೆ ಅಭಿವ್ಯಕ್ತಿಸುವ ಶಕ್ತಿ ಒಗಟುಗಳು ಇಂದು ಮೊಳಕಾಲ್ಮೂರು ಸುತ್ತಮುತ್ತ ಗ್ರಾಮಗಳಲ್ಲಿ ಕಾಣುತ್ತೇವೆ.

ಪ್ರಾಣಿಗಳ ಚರ್ಯೆಯನ್ನು ಗಮನಿಸಿದಾಗ ಸಾಮಾನ್ಯ ಪ್ರಪಂಚದ ಅಧಿಕಾರಿಗಳ ಪದನಾಮಗಳನ್ನು ಜೋಡಿಸಿಕೊಂಡು ಒಗಟಿನ ರೀತಿಯಲ್ಲಿ ದಡಗೂರು ತಿಪ್ಪಮ್ಮ ಈ ರೀತಿ ಉದಾಹರಣೆ ಕೊಡುತ್ತಾರೆ.

ಓಣಾಗಿರೋ ವಜೀರ
ಮಾಳಿಗೆ ಮೇಲಿರೋ ಮಾಮಲೇದಾರ

ಕ್ವಾಣಾಗಿರೋ ಕೊತವಾರ ಎಂಬ ಒಗಟಿನ ರೀತಿಯಲ್ಲಿ ಕಾಣುವುದಾರೆ ಓಣ್ಯಾಗಿರೋ ವಜೀರ ಅಂದರೆ ನಾಯಿ, ಮಾಳಿಗೆ ಮೇಲಿರೋ ಮಾಮಲೇದಾರ ಅಂದರೆ ಕೋತಿ, ಕ್ವಾಣಾಗಿರೋ ಕೊತವಾರ ಅಂದರೆ ಬೆಕ್ಕು ಎಂಬ ಉತ್ತರ ಕೊಡುತ್ತಾಳೆ. ಹೀಗೆ ಮೊಳಕಾಲ್ಮೂರು ತಾಲೂಕಿನ ಪರಿಸರದ ಒಗಟುಗಳು ಸುತ್ತಮುತ್ತ ಬಹು ವಿಶಾಲವಾಗಿ ಇಂದು ದೊರೆಯುತ್ತವೆ.

ಚಿತ್ರದುರ್ಗ ಜಿಲ್ಲೆ ಪ್ರೇಮಗೀತೆಗಳಿಗೆ ಪ್ರಸಿದ್ಧವಾಗಿದೆ. ಈ ಜಿಲ್ಲೆಯಲ್ಲಿ ದೊರೆಯುವಷ್ಟು ಪ್ರೇಮಗೀತೆಗಳು ಯಾವ ಜಿಲ್ಲೆಯಲ್ಲೂ ಕಂಡುಬರುವುದಿಲ್ಲ ಎಂಬುದು ವಿದ್ವಾಂಸರ ಅಭಿಪ್ರಾಯ. ಉತ್ತರ ಕರ್ನಾಟಕ ಧಾರವಾಡ, ಬಿಜಾಪುರ, ಬೆಳಗಾವಿ, ಜಿಲ್ಲೆಗಳಲ್ಲಿ ಲಾವಣಿಗಳಲ್ಲಿ ಶೃಂಗಾರ ಪ್ರಧಾನವಾಗಿದ್ದರೂ ಅವು ಚಿತ್ರದುರ್ಗ ಜಿಲ್ಲೆಯ ಪ್ರೇಮಗೀತೆಗಳಂತೆ ಭಾವಗೀತೆಗಳಲ್ಲಿ ಉಪದೇಶದ ಗೇರಾಜು ಸ್ವಲ್ಪವೂ ಇಲ್ಲ. ಸಭ್ಯತೆಯ ಸೋಗೂ ಇಲ್ಲ ಪ್ರೇಮವೂ ಕಾಮವೋ ಇಲ್ಲಿ ಎಲ್ಲ ಹಸಿ ಕಾಣುತ್ತೇವೆ.

ಗೆಣತಿ ಗೆಣೆಯ ಇಬ್ಬರು ಕೂಡಿ
ನಡಿಸ್ಯಾರು ಪ್ರೀತಿ
-ಬಾಳ
ಮಸಲತ್ತು ಮಾಡಿ
ನಲ್ಲಾ ನಾನೇಳಿರತೀನಿ
ಎಲ್ಲಾರ ಹೋದೀ-ಸಂಜೆಲ್
ಹುಡುಕ್ಹಂಗೆ ಮಾಡೀ
ಕೌದಿಮ್ಯಾಲೆ ಗಾದೀನ್ಹಾಕಿ
ಮಲಗ್ಯಾರು ಜೋಡೀ
ಅವರಿಬ್ರಾಳು ಕೂಡಿ
ಬೆಳ್ಳಿ ಮೂಡಿ ಬೆಳ್ಳಗಾಯ್ತು
ಉಟುಕೊಳ್ಳೆ ರವಿಕೀ
ಮೂಡಿದ್ರ ಮೂಡ್ಲಿ ಬಿಡುನನ್ ಗೆಣಿಯ
ಅದ್ಕೇನ್ ಧಾಡೀ

ಗಲ್ಲ ಮೆಲ್ಲಕ್ ಕಡಿ. ಹೀಗೆ ಚಿತ್ರದುರ್ಗದ ಪಾಳೆಗಾರರನ್ನು ಕುರಿತು ಹಲವು ಜನಪದ ಗೀತೆಗಳು ಇಂದಿಗೂ ಈ ಜಿಲ್ಲೆಯಲ್ಲಿ ಪ್ರಚಾರದಲ್ಲಿದೆ. ಪಾಳೆಗಾರರು ನಡೆಸಿದ ಯುದ್ಧಗಳು ಗೆದ್ದ ರಾಜ್ಯಗಳು, ಸೋಲುಗೆಲುವಿನ ಸಾವು-ನೋವುಗಳು ಸಂಗತಿ, ಹೀಗೆ ಹಲವು ಚಾರಿತ್ರಿಕ ಅಂಶಗಳಿಂದ ಈ ಗೀತೆಗಳು ಚಿತ್ರದುರ್ಗದ ಇತಿಹಾಸದ ಮೇಲೆ ಹೆಚ್ಚಿನ ಬೆಳಕು ಬೀರುತ್ತವೆ. ವ್ಯಾಪಕವಾಗಿ ಈ ಸಾಹಿತ್ಯದ ಸಂಗ್ರಹ ಕಾರ್ಯ ನಡೆದರೆ ಆ ಪ್ರದೇಶದ ನೈಜ ಇತಿಹಾಸನ್ನು ಪುನರ‍್ರಚಿಸುವಷ್ಟು ಪುರಾವೆಗಳು ದೊರೆಯುತ್ತವೆ.

ಮೊಳಕಾಲ್ಮೂರು ತಾಲೂಕಿನ ಕಥನ ಗೀತೆಗಳಿಗೆ ಒಂದು ಇಶಿಷ್ಟ ಸ್ಥಾನವಿದೆ. ಈ ತಾಲೂಕು ಮತ್ತು ಈ ಜಿಲ್ಲೆಯನ್ನು ರಾಜಮನೆತನದ ಆಳ್ವಿಕೆಯನ್ನು ಅನುಸರಿಸಿದ್ದರಿಂದ ಇಲ್ಲಿ ಹೆಚ್ಚು ಕಥನ ಗೀತೆಗಳು ಪ್ರಚಲಿತದಲ್ಲಿವೆ. ಮಳೆರಾಯನ ಕಥನಗೀತೆ, ಕಾಳಿಂಗರಾಯ ಗುಣಸಾಗರಮ್ಮನ ಕಥೆ, ಹೊನ್ನಮ್ಮ, ಓಕಳಿ ಸಂದು ಹೀಗೆ ಕಥನ ಗೀತೆಗಳು ನಮ್ಮ ತಾಲೂಕಿನಲ್ಲಿ ದೊರೆಯುತ್ತವೆ. ಇದು ಇಂದು ಸಂಶೋಧನೆಗೆ ದಾರಿ ಮಾಡಿಕೊಟ್ಟಿವೆ.

ಮೊಳಕಾಲ್ಮೂರು ತಾಲೂಕಿನಲ್ಲಿ ಮೂಢನಂಬಿಕೆ, ಧಾರ್ಮಿಕ ಆಚರಣೆ, ಸಂಪ್ರದಾಯಗಳನ್ನು ಜನಪದರು ಅನುಸರಿಸುತ್ತಾ ಬಂದಿದ್ದಾರೆ. ಅವುಗಳಲ್ಲಿ ಸಿಡಿಬಂಡಿ ಹಾಡುವುದು, ಊರಿನ ಮಾರಮ್ಮನಿಗೆ ಕುರಿ, ಕೋಳಿ, ಕೋಣಬಲಿ ಕೊಡುವುದು, ಹುಲಿಯಮ್ಮನ ಜಾತ್ರೆಯಲ್ಲಿ ಕಳಸ ಹಿಡಿಯುವುದು ಮತ್ತು ಮಳೆ ಬರದಿದಾಗ ಜೋಡು ಕತ್ತೆ ಪೂಜೆ ಮಾಡಿ ಊರಿಗೆ ಎಲ್ಲಾ ಓಣಿಗಳಲ್ಲಿ ಮೆರವಣಿಗೆ ಮಾಡುವುದು ಇತ್ಯಾದಿಗಳಲ್ಲಿ ಮೂಢನಂಬಿಕೆಗಳು ಇಂದು ನಮ್ಮ ಗ್ರಾಮಗಳಲ್ಲಿ ಕಂಡು ಬರುತ್ತವೆ.

ಮಿಶ್ರ ಸಾಹಿತ್ಯಕ್ಕೆ ಹೆಸರಾದ ಬಯಲಾಟಗಳು ನಮ್ಮ ತಾಲೂಕಿನಲ್ಲಿ ಸಣ್ಣಾಟ ಮತ್ತು ದೊಡ್ಡಾಟ ಎಂಬ ಕಲಾ ಪ್ರಕಾರಗಳು ಈ ತಾಲೂಕಿನಲ್ಲಿ ಪ್ರದರ್ಶನಗೋಂಡಿವೆ. ಪ್ರತಿಯೊಂದು ಹಳ್ಳಿಗಳಲ್ಲಿ ಕನಿಷ್ಟ ಒಬ್ಬರಾದರೂ ಬಯಲಾಟಗಳನ್ನು ಹವ್ಯಾಸಿಯಾಗಿ ಪ್ರತಿಬಿಂಬಿಸುವುದು ಕಾಣುತ್ತೇವೆ. ಹವ್ಯಾಸಿ ಲಿಪಿಕಾರರಿಗೆ ಕಲೆ, ಸಹಿತ್ಯದ ಒಲವು ಮುಖ್ಯ ಪ್ರೇರಣೆಯಾಗಿರುತ್ತದೆ. ಶಿಕ್ಷಣದಲ್ಲಿ ಹಿಂದುಳಿದರೂ ಇವರು ಜನರ ಮಧ್ಯದದಲ್ಲಿನ ಸಾಹಿತ್ಯವನ್ನು ಜನಸಮ್ಮುಖವಾಗಿ ಸಲ್ಲುವಂತೆ ಬರದು ಉಳಿಸಲು ಕಾರಣರಾಗಿದ್ದಾರೆ. ಅಂತಹ ಬಯಲಾಟದ ಪ್ರಮುಖ ಕವಿಗಳೆಂದರೆ ಕೊಂಡಾಪುರ ಮಲ್ಲಣ್ಣ, ಚನ್ನಬಸಪ್ಪ, ದೇವಸಮುದ್ರ ಬರ‍್ಮಣ್ನ, ತಮ್ಮಪ್ಪ, ಬಸಾಪುರದ ದುರುಗಪ್ಪ, ದಡಗೂರು ರಂಗಸ್ವಾಮಿ ಮುಂತಾದ ಕವಿಗಳನ್ನು ಗುರುತಿಸಬಹುದು. ಇಲ್ಲಿನ ಬಯಲಾಟ ಕಥೆಗಳಾದ ದುಶ್ಯಾಸನ ಕಥೆ, ರತಿಕಲ್ಯಾಣ, ಸಂಪೂರ್ಣ ರಾಮಾಯಣ, ಪಾರ್ಥವಿಜಯ, ಕುರುಕ್ಷೇತ್ರ, ಹರಳಯ್ಯ, ನಾಯಕನಹಟ್ಟಿ ತಿಪ್ಪೇರುದ್ರ, ಸುಂದೋಪಸುಂದರ ಮುಂತಾದ ಬಯಲಾಟಗಳನ್ನು ಗುರುತಿಸಬಹುದು. ಇವು ಇಂದು ಬಾಂಡ್ರಾವಿ, ರಾಂಪುರ ಕೋನಾಪುರ, ಬಸಾಪುರ ಇತ್ಯಾದಿ ಬಯಲಾಟ ಪ್ರದರ್ಶನ ಇಂದಿಗೂ ಕಾಣುತ್ತೇವೆ.

ಬಯಲಾಟ ಹಸ್ತಪ್ರತಿಗಳನ್ನು ಅವಲೋಕಿಸಿದಾಗ ಮೊದಲಿಗೆ ವಿಘ್ನೇಶ ಸ್ತುತಿಯನ್ನೇ ಪ್ರಧಾನವಾಗಿ ಹಾಡುತ್ತಾರೆ. ವಿಘ್ನೇಶನನ್ನು ಕುರಿತು ಹಲವಾರು ಸ್ತುತಿಪದಗಳು ಈ ಜಿಲ್ಲೆಯಲ್ಲಿ ತಾಲೂಕಿನಲ್ಲಿ ರಚನೆಗೊಂಡಿವೆ. ಈ ಜಿಲ್ಲೆಯ ಬಯಲಾಟ ಹಸ್ತಪ್ರತಿಗಳಲ್ಲಿ ಕಂಡು ಬರುವ ಗಣಸ್ತುತಿ ಈ ರೀತಿಯಾಗಿದೆ.

ಶ್ರೀ ವಿಘ್ನರಾಜಾಷಾಹಿಮಾಂ ಗಿರಿಜಾತೆ ನಂದನಾ
ಮಾಡುವೆನು ನಂದನಾ

ಹೀಗೆ ಮೇಲಿನ ಶ್ಲೋಕ ಸ್ತುತಿ ಪದ್ಯಗಳು ಬಯಲಾಟ ಹಸ್ತಪ್ರತಿಗಳು ಪ್ರಸಾರಣಿಯ ಮೇಲೆ ಬೆಳಕು ಚೆಲ್ಲುತ್ತವೆ. ಈ ಪ್ರದೇಶದ ಸ್ತುರಿ ಪದಗಳು ಭಿನ್ನ ಭಿನ್ನ ಕಥೆಗಳು ಮತ್ತು ಸಂಪ್ರದಾಯಗಳನ್ನು ಗುರುತಿಸಲು ಸಾಧ್ಯವಿದೆ.

ಹೀಗೆ ಮೊಳಕಾಲ್ಮೂರು ತಾಲೂಕಿನ ಜನಪದ ಸಾಹಿತ್ಯ ವೈಶಿಷ್ಟ್ಯದ ಹಿನ್ನೆಲೆಯಲ್ಲಿ ಪ್ರತಿನಿಧಿಸುತ್ತದೆ. ಈ ಪ್ರದೇಶದ ಬಡತನ ರೇಖೇಯಲ್ಲಿದ್ದರೂ ಜನಪದ ಸಾಹಿತ್ಯದಲ್ಲಿ ಗದ್ಯ, ಪದ್ಯ ಮತ್ತು ಮಿಶ್ರಿತ ಸಂಪತ್ತಿನಲ್ಲಿ ಸಂಪೂರ್ಣವಾಗಿ ಗುರುತಿಸಲಾಗುತ್ತದೆ. ಜನರ ಬದುಕಿನ ದಿನನಿತ್ಯ ಕಷ್ಟಸುಖಗಳ ನಡುವೆ ಯಾವ ರೀತಿಯಲ್ಲಿ ಕಾಣುತ್ತೇವೆ ಎಂಬುದು ಜನಪದ ಹಾಡುಗಳಲ್ಲಿ ಇಂದು ಗುರುತಿಸಬಹುದು.