ಭಾರತೀಯ ಸ್ವಾತಂತ್ರಯ ಚಳವಳಿ ಕ್ರಿ. ಶ. ೧೮೮೫ರಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸ್ಥಾಪನೆಯೊಂದಿಗೆ ಆರಂಭವಾಯಿತು. ಈ ಸ್ವಾತಂತ್ರ್ಯ ಚಳವಳಿಯ ಇತಿಹಾಸವನ್ನು ನಾವು ಮೂರು ಹಂತಗಳಲ್ಲಿ ಕಾಣಬಹುದು. ಮಂದಗಾಮಿಗಳ ಯುಗ, ತೀವ್ರಗಾಮಿಗಳ ಯುಗ ಮತ್ತು ಗಾಂಧಿಯುಗ. ಕ್ರಿ. ಶ. ೧೯೧೯ ರಿಂದ ೧೯೪೭ ರವರೆಗೆ ಸುಮಾರು ಮೂರು ದಶಕಗಳ ಕಾಲ ರಾಷ್ಟ್ರಪಿತ ಮಹಾತ್ಮ ಗಾಂಧಿ ಹೋರಾಟ ನಿಜಕ್ಕೂ ಅವಿಸ್ಮರಣಿಯ. ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ ಸಕ್ರೀಯ ಪಾತ್ರವಹಿಸಿ, ತಮ್ಮ ತತ್ವಗಳಾದ ಸತ್ಯ, ಶಾಂತಿ ಮತ್ತು ಅಹಿಂಸೆಯ ಬೀಜಗಳನ್ನು ಬಿತ್ತಿ, ದೇಶದಾದ್ಯಾಂತ ಪ್ರಮಾಣವನ್ನು ಮಾಡಿ ಇಡೀ ದೇಶದ ಜನತೆ ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರಣೆಗೊಳಿಸಿ ಚಳವಳಿಗೆ ಒಂದು ಹೊಸ ಆಯಾಮ ಮತ್ತು ಮಜಲನ್ನುಂಟು ಮಾಡಿದರು. ಹಾಗಾಗಿಯೇ ಈ ಕಾಲವನ್ನು ‘ಗಾಂಧಿಯುಗ’ವೆಂದು ಕರೆಯಲಾಯಿತು. ಈ ಮಧ್ಯೆ ಗಾಂಧಿಯ ಕರೆಯಂತೆ ದೇಶದ ಮೂಲೆಗಳಲ್ಲಿ ನಗರ, ಗ್ರಾಮಗಳಲ್ಲಿ ಜನತೆಯು ತೀವ್ರತರ ಚಳವಳಿಯನ್ನು ಆರಂಭಿಸಿದರು. ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಜನತೆಯು ಸ್ವಾತಂತ್ರ್ಯ ಹೋರಾಟಗಾರ ಅನ್ನದಾನಿ ಆರ್. ವೀರಭದ್ರಪ್ಪನವರು ಒಬ್ಬರು ಎಂದರೆ ತಪ್ಪಾಗಲಾರದು.

ಚಿತ್ರದುರ್ಗ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮೊಳಕಾಲ್ಮೂರು ಒಂದು. ಇದು ಜಿಲ್ಲೆಯ ಗಡಿ ಭಾಗದಲ್ಲಿದ್ದ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಭಾಗ. ಈ ತಾಲ್ಲೂಕು ಹಿಂದುಳಿದ ಮತ್ತು ಬರಡು ಪ್ರದೇಶ. ಮಳೆಯನ್ನೆ ನಂಬಿರುವ ರೈತ ಸಮುದಾಯ. ಇಲ್ಲಿನ ನೆಲ ಬರಡಾಗಿದ್ದರೂ, ಮಳೆ ಬರದಿದ್ದರೂ ಸಹ ಈ ನೆಲದ ಜನತೆಯ ಶ್ರೀಮಂತಿಕೆ ಮಾತ್ರ ಬರಡಾಗಿಲ್ಲ. ಇಲ್ಲಿನ ಜನತೆ ರಾಜಕೀಯ, ಸಮಾಜಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಂಬಲ್ಲಿ ಎರಡು ಮಾತಿಲ್ಲ ಅನಾದಿ ಕಾಲದಿಂದಲೂ ಮೊಳಕಾಲ್ಮೂರು ಇತಿಹಾಸಕ್ಕೆ ಪ್ರಸಿದ್ಧವಾದುದು. ಇಂತಹ ಅತ್ಯಂತ ಹಿಂದುಳಿದ ತಾಲೂಕು ಸ್ವಾತಂತ್ರ್ಯ ಚಳವಳಿಯಲ್ಲಿ ಅತ್ಯಮೂಲ್ಯವಾದ ಪಾತ್ರವನ್ನು ವಹಿಸಿದೆ. ಹಾಗಾಗಿ ಈ ತಾಲೂಕಿನಲ್ಲಿ ಸ್ವಾತಂತ್ರ್ಯಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡಿದ ಮಹಾಶಯರು ಹಲವರು. ಅವರಲ್ಲಿ ಅನ್ನದಾನಿ ಆರ್. ವೀರಭದ್ರಪ್ಪ, ಗುರ‍್ರಂ ನರಸಿಂಹಯ್ಯ, ಎನ್.ಸಿ.ಐಯ್ಯಣ್ಣ, ಕೆರೆಕೊಂಡಾಪುರದ ಎಸ್. ಎಚ್. ಬಸಣ್ಣ, ಡಾ. ಡಿ. ಎಸ್. ಚಂದ್ರಶೇಖರ್ ಮತ್ತು ಡಾ. ರಾಮಕೃಷ್ಣಯ್ಯ, ಜಿ. ಈಶ್ವರಪ್ಪ, ಕೆಂಚಲಿಂಗಪ್ಪ, ಶ್ರೀಮತಿ ಬೋರಮ್ಮ, ಹನುಮಕ್ಕ, ಹೆಚ್. ಟಿ. ಶರಣಪ್ಪ, ಕೆ. ಬಹದ್ದೂರಖಾನ್, ಪಾಲಮ್ಮ, ವೃಷಭೇಂದ್ರಮ್ಮ, ಹೆಚ್. ಗಂಗಣ್ಣ, ವೀರಭದ್ರಪ್ಪನವರು ಸ್ವಾತಂತ್ರ್ಯ ಹೋರಾಟ ಸ್ಮರಣೀಯ.

ಮೊಳಕಾಲ್ಮೂರಿನ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ವ್ಯಕ್ತಿಯೇ ಅನ್ನದಾನಿ ಆರ್. ವೀರಭದ್ರಪ್ಪನವರು. ಅನ್ನದಾನಿ ಎನ್ನುವುದು ಅವರ ಮನೆತನದ ಹೆಸರು. ಅವರ ಪೂರ್ವಜರು ತಳುಕಿನಲ್ಲಿ ವಾಸ್ತವ್ಯ ಹೊಂದಿದ್ದರು. ಆ ಸಂದರ್ಭದಲ್ಲಿ ತಳುಕಿಗೆ ಬಂದು ಹೋಗುತ್ತಿರುವ ಸೈನಿಕರಿಗೆ ಉಚಿತವಾಗಿ ಅನ್ನದಾನ ಮಾಡುತ್ತಿದ್ದರಿಂದ ಅವರ ಮನೆತನಕ್ಕೆ ಅನ್ನದಾನಿ ಎಂಬ ಹೆಸರು ಬರಲು ಕಾರಣವಾಯಿತು. ಆರ್. ವೀರಭದ್ರಪ್ಪನವರು ಸರಳ, ಸಜ್ಜನಿಕೆ ಹೆಸರಾದವರು ತುಂಬ ಸರಳ ವ್ಯಕ್ತಿ, ಗಾಂಧಿವಾದಿ, ಹಲವು ಭಾಷೆಗಳಲ್ಲಿ ಪಾಂಡಿತ್ಯ. ಆರ್ಥಿಕತೆಯಲ್ಲಿ ಅಪಾರ ಜ್ಞಾನ, ಸಮುದ್ರದಷ್ಟು ಇತಿಹಾಸ ಪ್ರಜ್ಞೆ, ಅಜಾನುಬಾಹು, ಗಂಭಿರವಾದ ಮುಖ ಚರ್ಯೆ ಹಾಗೂ ಖಾದಿ ಜುಬ್ಬಾ, ಬಿಳಿ ಪಂಜೆ, ಹೆಗಲ ಮೇಲೆ ಉದ್ದನೆಯ ವಸ್ತು, ಕೈಯಲ್ಲಿ ಸದಾ ಒಂದು ಕೋಟೆಯನ್ನು ಹೊಂದಿದ ವ್ಯಕ್ತಿ. ವೀರಭದ್ರಪ್ಪನವರು ಇಂತಹ ವ್ಯಕ್ತಿತ್ವ ಹೊಂದಿರುವ ಸ್ವಾತಂತ್ರ್ಯ ಹೋರಾಟಗಾರ ಎಂಬುದು ಸ್ಪಷ್ಟ.

ಆರ್‌. ವೀರಭದ್ರಪ್ಪನವರು ೧೯೨೬ ಸೆಪ್ಟೆಂಬರ್ ೯ ರಂದು ಶ್ರೀರಾಚೋಟಪ್ಪ ಮತ್ತು ಶ್ರೀಮತಿ ಶಾಂತಮ್ಮ ದಂಪತಿಗಳ ಏಕಮಾತ್ರ ಪುತ್ರನಾಗಿ ಮೊಳಕಾಲ್ಮೂರಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮೊಳಕಾಲ್ಮೂರಿನಲ್ಲಿ ಪಡೆದು, ಪ್ರೌಢಶಾಲಾ ಶಿಕ್ಷಣಕ್ಕಾಗಿ ಚಿತ್ರದುರ್ಗಕ್ಕೆ ಹೋದರು. ಏಕೆಂದರೆ ಪ್ರೌಢಶಾಲೆಗಳು ಆ ಕಾಲದಲ್ಲಿ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಮಾತ್ರ ಅದಕ್ಕಾಗಿ ಆರ್. ವೀರಭದ್ರಪ್ಪ ೧೯೪೧-೪೨ರಲ್ಲಿ ಪ್ರೌಢ ಶಿಕ್ಷಣವನ್ನು ಪಡೆಯಲು ಚಿತ್ರದುರ್ಗಕ್ಕೆ ಹೋದರು. ವೀರಭದ್ರಪ್ಪನವರು ವಿದ್ಯಾರ್ಥಿ ದಿಸೆಯಲ್ಲಿ ಸರಳತೆಗೆ, ಉತ್ತಮ ನಡತೆಗೆ ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ಮಧ್ಯೆ ಬ್ರಿಟಿಷರು ಭಾರತಕ್ಕೆ ಆಗಮಿಸಿ ಭಾರತೀಯರ ಸ್ವಾತಂತ್ರ್ಯವನ್ನು ಅಪಹರಿಸಿ, ಆರ್ಥಿಕ ಶೋಷಣೆಯನ್ನು ಮಾಡುತ್ತ, ದಬ್ಬಾಳಿಕೆಯನ್ನು ನಡೆಸುತ್ತಿದ್ದರು. ಇದು ವಿದ್ಯಾರ್ಥಿಯಾದ ವೀರಭದ್ರಪ್ಪನವರ ಮೇಲೆ ಗಾಢವಾದ ಪರಿಣಾಮ ಬೀರಿತು. ಜೊತೆಗೆ ಗಾಂಧೀಜಿ, ನೆಹರು, ಪಟೇಲ್‌ರ ಚಿಂತನೆಗಳು, ಅವರ ರಾಷ್ಟ್ರೀಯ ಹೋರಾಟ, ವಿಶೇಷವಾಗಿ ಗಾಂಧಿಯ ಸತ್ಯ, ಶಾಂತಿ, ಅಹಿಂಸೆಯ ತತ್ವಗಳ ವೀರಭದ್ರಪ್ಪನವರಿಗೆ, ಪ್ರೇರಣೆ ನೀಡಿದವು. ಸ್ವಾತಂತ್ರ್ಯ, ರಾಷ್ಟ್ರೀಯತೆ, ದೇಶ ಪ್ರೇಮ ಮತ್ತು ಬ್ರಿಟಿಷರಿಂದ ಭಾರತ ಸ್ವಾತಂತ್ರ್ಯ ಮುಂತಾದ ಅಂಶಗಳನ್ನು ಮೈಗೂಡಿಸಿಕೊಂಡ ವಿದ್ಯಾರ್ಥಿ ವೀರಭದ್ರಪ್ಪ ತನ್ನ ಹೆಸರನ್ನು ಸಾರ್ಥಕ ಮಾಡಿಕೊಳ್ಳಬೇಕೆಂಬ ಉತ್ಕಟ ಆಶಯವಾಯಿತು. ಹೀಗಿರುವಾಗ ಮಹಾತ್ಮಗಾಂಧೀಜಿ ೧೯೪೨ರಲ್ಲಿ ಬಾಂಬೆಯಲ್ಲಿ ನಡೆದ ಅಖಿಲ ಭಾರತೀಯ ಕಾಂಗ್ರೆಸ್‌ನ ಮಹಾ ಅಧೀವೇಶನದಲ್ಲಿ “ಬ್ರಿಟಿಷರೇ ಭಾರತ ಬಿಟ್ಟು ತೊಲಗಿ” (Quit India Movement)ಎಂಬ ಘೋಷಣೆಯನ್ನು ಮಾಡಿ, ದೇಶದಾದ್ಯಂತ ತೀವ್ರವಾದ ಚಳವಳಿಗೆ ಕರೆಯನ್ನು ನೀಡಿದರು. ಗಾಂಧೀಜಿಯ ಘೋಷಣೆಯಿಂದ ಪ್ರೇರಿತನಾದ ವಿದ್ಯಾರ್ಥಿ ವೀರಭದ್ರಪ್ಪ ಸ್ವಾತಂತ್ರ್ಯ ಚಳವಳಿಗೆ ಪಾದಾರ್ಪಣೆ ಮಾಡಿದರು. ೧೯೪೨ರಲ್ಲಿ ಗಾಂಧೀಯ ಕರೆಯಂತೆ ಚಿತ್ರದುರ್ಗದಲ್ಲಿ ಹೋರಾಟ ನಡೆಯುತ್ತಿರುವಾಗ ವೀರಭದ್ರಪ್ಪ ಸಕ್ರೀಯ ಪಾತ್ರವಹಿಸಿದರು. ೧೯೪೨ ಆಗಸ್ಟ್‌ ೨೬ರಂದು ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿವುದರ ಜೊತೆಗೆ ದುರ್ಗದ ಜನತೆಯನ್ನು ಉದ್ದೇಶಿಸಿ ಉದ್ದೀಪನ ಭಾಷಣವನ್ನು ಮಾಡುತ್ತಾ ಭಾರತೀಯರೇ ಬ್ರಿಟಿಷರೇ “ಭಾರತವನ್ನು ಬಿಟ್ಟು ತೊಲಗಿ” ಎಂದು ಘೋಷಿಸಿದರು. ಭಾರತದ ಧ್ವಜವನ್ನು ಹಾರಿಸಲು ಭಾರತಿಯರಿಗೆ ಅವಕಾಶ ಮಾಡಿಕೊಡಬೇಕೆಂದು ಕ್ರಾಂತಿಕಾರಿ ಭಾಷಣ ಮಾಡಿದರು. ಅಂದು ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಂಡ ಮುಖ್ಯವಾಹಿನಿಯಾಗಿ ಹಾಗೂ ಪ್ರಮುಖ ಪಾತ್ರಧಾರಿಯಾಗಿ ಅಮೂಲ್ಯ ಪಾತ್ರವಹಿಸಿದರು. ಈತನ ಭಾಷಣದಿಂದ ದುರ್ಗದ ಜನತೆ ಪ್ರೇರಿತರಾಗಿ, ಆತನ ವಾಕ್ ಚಾತುರ್ಯವನ್ನು ಕಂಡು ಮೂಕ ವಿಸ್ಮಿತರಾದರು. ದುರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ತೀವ್ರತರವಾಗಿ ಆರಂಭವಾಯಿತು.

ವಿದ್ಯಾರ್ಥಿ ವೀರಭದ್ರಪ್ಪನ ಕ್ರಾಂತಿಕಾರಕ ಭಾಷಣದಿಂದ ಚಿತ್ರದುರ್ಗದ ಪೋಲಿಸರು ವಿಚಲಿತರಾದರು. ಪೋಲಿಸನವರು ವಾರೆಂಟ್‌ನೊಂದಿಗೆ ಆತನನ್ನು ಹುಡುಕಲು ಪ್ರಾರಂಭಿಸಿದರು. ಈ ವಿಷಯ ತಿಳಿದ ವಿದ್ಯಾರ್ಥಿ ವೀರಭದ್ರಪ್ಪ ಬಂಧಿತನಾಗಿ ಜೈಲಿನಲ್ಲಿ ಇರುವುದಕ್ಕಿಂತ ಹೊರಗಡೆ ಇದ್ದು ಹೋರಾಡುವುದೇ ಲೇಸೆಂದು ತಿಳಿದು, ಒಂದು ಉಪಾಯವನ್ನು ಕಂಡುಕೊಂಡರು. ರಾತ್ರಿಯಾದ ಮೇಲೆ ಯಾರನ್ನೇ ಆಗಲಿ ಬಂಧಿಸುವ ಹಕ್ಕು ಪೋಲಿಸರಿಗೆ ಇರಲಿಲ್ಲ ಎಂಬುದನ್ನು ತಿಳಿದುಕೊಂಡ ಆತನ ಸೂರ್ಯ ಉದಯಿಸುವ ಮುನ್ನ ಎದ್ದು ದುರ್ಗದ ಕೋಟೆಗೆ ಹೋಗುವುದು, ಬೆಟ್ಟದಲ್ಲಿರುವ ಹಿಡಿಂಭೇಶ್ವರ ದೇವಾಲಯದಲ್ಲಿ ಕತ್ತಲಾಗುವವರೆಗೆ ಕುಳಿತು ಓದುವುದು, ದೇಶದ ಸ್ವಾತಂತ್ರ್ಯವನ್ನು ಪಡೆಯುವ ಬಗ್ಗೆ ಚಿಂತಿಸುವುದು, ಸೂರ್ಯ ಮುಳಗಿದ ನಂತರ ಮತ್ತೇ ತಾನಿರುವ ಆನಂತ ಶೆಟ್ಟಿ ಹಾಸ್ಟೆಲ್‌ಗೆ ವಾಪಸ್ಸು ಬರುವುದು ಹೀಗೆ ನಿರಂತರವಾಗಿ ಹದಿನೈದು ದಿನಗಳವರೆಗೆ ನಡೆಸಿದರು. ಈತನು ಪೋಲಿಸರಿಗೆ ಸಿಗದೇ ಸಿಂಹ ಸ್ವಪ್ನವಾಗಿ ಉಳಿದಕೊಂಡರು. ಇವರು ಶಾಲೆಯಿಂದಲೂ ಹಲವು ವಿಷಯಗಳಲ್ಲಿ ಶಿಕ್ಷಕರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಅವರ ಅವಕೃಪೆಗೆ ಒಳಗಾಗಿದ್ದರು. ಆದರೆ ಶಾಲೆಯ ಮೊಖ್ಯೋಪಾಧ್ಯಾಯರಾದ ಮಹಮದ್ ಮಹೆಬೂಬ್‌ರವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಾಗಾಗಿ ಮುಖ್ಯೋಪಾಧ್ಯಾಯರ ಅನುಮತಿ ಅವಶ್ಯಕವಾಗಿತ್ತು. ವೀರಭದ್ರಪ್ಪನ ಹೋರಾಟದ ಪ್ರವೃತ್ತಿ ಮತ್ತು ದೇಶಾಭಿಮಾನವನ್ನು ಕಂಡ ಮಹಮದ್ ಮೆಹಬೂಬ್ ಮುಕ್ತಕಂಠದಿಂದ ಪ್ರಶಂಸೆ ಮಾಡಿದರು. ವಿದ್ಯಾರ್ಥಿ ವೀರಭದ್ರಪ್ಪ ಕಾನೂನಿಗೆ ವಿರುದ್ಧ ಬಹಿರಂಗ ಸಭೆಯಲ್ಲಿ ಜನತೆಯನ್ನು ಪ್ರೇರಣೆಗೊಳಿಸುವ ಭಾಷಣ ಮಾಡಿದ್ದರೆಂಬ ವಿವರಣೆಯನ್ನು ಲಿಖಿತ ಪತ್ರದಲ್ಲಿ ಬರೆದುಕೊಡಬೇಕೆಂದು ಪೋಲಿಸರು ಆದೇಶಿಸಿದರು. ಇಲ್ಲವಾದರೆ ಆತನನ್ನು ಶಾಲೆಯಿಂದ ಹೊರಗೆ ಹಾಕಬೇಕೆಂದು ತಿಳಿಸಿದರು. “ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ” ಎನ್ನುವಂತೆ ವೀರಭದ್ರಪ್ಪನಿಗೆ ಇದೊಂದು ಸುವರ್ಣ ಅವಕಾಶವಾಯಿತು. ಈತನಿಗೆ ಶಾಲಾ ಜೀವನಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡುವುದೇ ಲೇಸು ಮತ್ತು ತನ್ನ ಆದ್ಯ ಕರ್ತವ್ಯ ಎಂಬುದನ್ನು ಮನಗಂಡರು. ಜೊತೆಗೆ ಈತನು ಮುಖ್ಯೋಪಾಧ್ಯಾಯರ ಬಗ್ಗೆ ಹೊಂದಿರುವ ಪ್ರೀತಿ, ವಿಶ್ವಾಸ ಮತ್ತು ನಂಬಿಕೆಗೆ ಮನ್ನಣೆ ನೀಡಿ ಲಿಖಿತ ವಿವರಣೆಯನ್ನು ಬರೆದುಕೊಟ್ಟರು. ಈ ಎಲ್ಲಾ ಘಟನೆಯ ವಿವರ ತಾಯಿ ಶಾಂತಮ್ಮನವರಿಗೆ ತಿಳಿದ ಮೇಲೆ, ಆಕೆಯು ಸಹ ನೀನು ಓದುವುದು ಸಾಕು, ಮನೆಗೆ ವಾಪಸ್ಸು ಬಂದುಬೀಡು ಎಂಬುದಾಗಿ ಪತ್ರ ಬರೆದರು. ವಿದ್ಯಾರ್ಥಿ ವೀರಭದ್ರಪ್ಪ ಹೈಸ್ಕೂಲ್ ಶಿಕ್ಷಣಕ್ಕೆ ವಿದಾಯ ಹೇಳಿ ಮೊಳಕಾಲ್ಮೂರಿಗೆ ಹಿಂತಿರುಗಿದರು.

ಶಿಕ್ಷಣಕ್ಕೆ ವಿದಾಯ ಹೇಳಿದ ಆರ್. ವೀರಭದ್ರಪ್ಪ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಬ್ರಿಟಿಷರ ಸ್ವಾತಂತ್ರ್ಯ ಅಪಹರಣ ವಿರುದ್ಧ, ಅವರ ರಾಜ ಪ್ರಭುತ್ವದ ವಿರುದ್ಧ ಮತ್ತು ದಬ್ಬಾಳಿಕೆ, ಶೋಷಣೆಯ ವಿರುದ್ಧ ಹೋರಾಡುವ ದೃಢಸಂಕಲ್ಪದ ಪ್ರತಿಜ್ಞೆಯನ್ನು ಕೈಗೊಂಡರು, ಮೊಳಕಾಲ್ಮೂರಿಗೆ ಹಿಂತಿರುಗಿದ ತಕ್ಷಣ ಊರಿನಲ್ಲಿರುವ ಸಮಾನ ವಯಸ್ಕರೊಂದಿಗೆ ಬ್ರಿಟಿಷ್ ವಿರೋಧಿ ಚಳವಳಿಯನ್ನು ಆರಂಭಿಸಿದರು. ಬ್ರಿಟಿಷರನ್ನು ಸಂಘಟಿತರಾಗಿ ವಿರೋಧಿಸಲು ಚಳವಳಿಯ ಶಿಬಿರಗಳನ್ನು ನಿರ್ಮಿಸಿದರು. ಒಂದು ಭಾರಿ ಶಿಬೀರದಲ್ಲಿ ಕೆರೆಕೊಂಡಪುರದ ಎಸ್. ಎಚ್. ಬಸಣ್ಣ ಭಾಷಣ ಮಾಡುತ್ತಾ ತಮ್ಮ ಶಿಬಿರಾರ್ಥಿಗಳಿಗೆ ಸಿಕ್ಕ ಸಿಕ್ಕ ಪೋಲಿಸರನ್ನು ಹೊಡೆಯಿರಿ, ಬ್ರಿಟಿಷರನ್ನು ಕೊಂದುಹಾಕಿರಿ ಎಂಬ ಕರೆಯನ್ನು ನೀಡಿದರು. ಆಗ ವೀರಭದ್ರಪ್ಪನವರು ಶಿಬಿರದಲ್ಲಿ ಬಸಣ್ಣನ ಭಾಷಣವನ್ನು ಖಂಡಿಸಿದರು. ನಾವು ಗಾಂಧಿಯ ತತ್ವಗಳಲ್ಲಿ ನಂಬಿಕೆ ಹೊಂದಿರುವರು, ಅಹಿಂಸೆ ನಮ್ಮ ಶಿಬಿರದ ಮೂಲ ಮಂತ್ರ, ನಾವು ಹಿಂಸೆಯಿಂದ ಸ್ವಾತಂತ್ರ್ಯ ಪಡೆಯಲು ಪ್ರಯತ್ನಸಿವುದು ನಮ್ಮ ಮೂರ್ಖತನ. ಹಾಗಾಗಿ ಶಿಬಿರದ ಪ್ರತಿಯೊಬ್ಬರು ಗಾಂಧಿಯ ಅಹಿಂಸೆಯ ತತ್ವದಲ್ಲಿ ಅಚಲ ನಂಬಿಕೆಯನ್ನಿಟ್ಟು ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆಯಬೇಕೆಂಬ ಬುದ್ದಿಮಾತು ಹೇಳಿದರು.

೧೯೪೬ರಲ್ಲಿ ಮೊಳಕಾಲ್ಮೂರಿನಲ್ಲಿ ಸ್ವಾತಂತ್ರ್ಯ ಚಳವಳಿ ಆರ. ವೀರಭದ್ರಪ್ಪನವರ ನೇತೃತ್ವದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ನಾವು ಯಾವುದೇ ರೀತಿಯ ಹಿಂಸೆಯನ್ನು ಮಾಡದೆ ಗಾಂಧಿಯ ಆದರ್ಶ ಮತ್ತು ಆಶಯದಂತೆ ಹಾಗೂ ಅಹಿಂಸೆಯ ತಳಹದಿಯಲ್ಲಿ ಶಾಂತ ರೀತಿಯಿಂದ ಬ್ರಿಟಿಷರ ವಿರುದ್ಧ ಚಳವಳಿ ನಡೆಸುತ್ತೇವೆಂದು ತಹಶೀಲ್ದಾರ್‌ರಲ್ಲಿ ಮನವಿ ಮಾಡಿಕೊಂಡರು. ವೀರಭದ್ರಪ್ಪನವರು ಸಮಾನ ಮನಸ್ಕರೊಂದಿಗೆ ಚಳವಳಿಯನ್ನು ನಾನಾ ಮುಖವಾಗಿ ನಡೆಸಿದರು. ಪ್ರತಿನಿತ್ಯ ಸಭೆ ಸಮಾರಂಭಗಳನ್ನು ನಡೆಸಿ ಚಳವಳಿಗೆ ಸ್ಪೂರ್ತಿಯನ್ನು ತುಂಬುವುದು, ಆಹಾರ ಚಳವಳಿ, ಅರಣ್ಯ ಸತ್ಯಾಗ್ರಹ, ಪಾನ ನಿಷೇಧ ಮೂಲಕ ಶಾಂತಿಯುತವಾಗಿ ಹೋರಾಟ ನಡೆಸಿದರು. ೧೯೪೬ ರಲ್ಲಿ ತಾಲ್ಲೂಕು ಪುರಸಭೆಯ ಸದಸ್ಯರಾಗಿ ಆರ್. ವೀರಭದ್ರಪ್ಪ ಆಯ್ಕೆಯಾದರು. ಈ ಮಧ್ಯೆ ದೇಶಾದ್ಯಂತ ಬ್ರಿಟಿಷರ ವಿರುದ್ಧ ನಡೆದ ನಾನಾ ಮುಖಗಳ ಚಳವಳಿ, ಹೋರಾಟ, ಹಳ್ಳಿಯಿಂದ ನಗರದವರೆಗೆ ಜನಸಾಮಾನ್ಯರು ಮಹಿಳೆಯರು ಮತ್ತು ಪುರುಷರಾದಿಯಾಗಿ ನಡೆಸಿದ ತೀವ್ರತರವಾದ ಹೋರಾಟದ ಫಲಶೃತಿಯಾಗಿ ೧೯೪೭ ಆಗಷ್ಟ್‌ ೧೫ ರಂದು ಬ್ರಿಟಿಷರು ಭಾರತೀಯರಿಗೆ ಸ್ವಾತಂತ್ರ್ಯ ನೀಡಿದರು. ಭಾರತ ಬ್ರಿಟಿಷರಿಂದ ವಿಮೋಚನಗೊಂಡ ಸ್ವಾತಂತ್ರವಾಯಿತು. ಇದರಿಂದ ಅನ್ನದಾನಿ ಆರ್. ವೀರಭದ್ರಪ್ಪನವರಿಗೆ ವರ್ಣಿಸಲು ಸಾಧ್ಯವಿಲ್ಲದಷ್ಟು ಸಂತೋಷವಾಯಿತು.

ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡರು ಮೈಸೂರಿನಲ್ಲಿ ಮಾತ್ರ ಜವಾಬ್ದಾರಿ ಸರಕಾರ ರಚನೆಯಾಗಲಿಲ್ಲ. ಅದಕ್ಕಾಗಿ ಪುರಸಭೆಯ ಸದಸ್ಯರೆಲ್ಲ ಸಭೆ ಸೇರಿ, ವೀರಭದ್ರಪ್ಪನವರ ನಾಯಕತ್ವದಲ್ಲಿ ಮೈಸೂರಿನ ಮಹಾರಾಜ ಜಯಚಾಮರಾಜ ಒಡೆಯರಿಗೆ ಒಂದು ಠರಾವು ಪಾಸು ಮಾಡಿ ಕಳಹಿಸಿಕೊಟ್ಟರು. ಠರಾವಿನಲ್ಲಿ ಜವಾಬ್ದಾರಿ ಸರಕಾರವನ್ನು ಜನರಿಗೆ ಘೋಷಿಸಬೇಕು, ಜೈಲಿನಲ್ಲಿರುವ ಎಲ್ಲ ಖೈದಿಗಳನ್ನು ಕೂಡಲೆ ಬಿಡುಗಡೆ ಮಾಡಬೇಕೆಂದು ಕೇಳಿಕೊಂಡರು. ಅದರಂತೆ ಮಹಾರಾಜರು ಮೈಸೂರಿನಲ್ಲಿ ಜವಾಬ್ದಾರಿ ಸರಕಾರದ ಸ್ಥಾಪನೆಗೆ ಅನುಮತಿಯನ್ನು ನೀಡಿ, ಕೈದಿಗಳ ಬಿಡುಗಡೆಯನ್ನು ಮಾಡಿದರು. ಹಾಗಾಗಿ ೧೯೪೭ ಸೆಪ್ಟೆಂಬರ್‌ನಲ್ಲಿ ಕೆ. ಸಿ. ರೆಡ್ಡಿ ನೇತೃತ್ವದಲ್ಲಿ ಜವಾಬ್ದಾರಿ ಸರಕಾರ ಸ್ಥಾಪನೆಯಾಯಿತು.

ಅನ್ನದಾನಿ ಆರ್‌. ವೀರಭದ್ರಪ್ಪ ಸ್ವಾತಂತ್ರ್ಯ ಚಳವಳಿಯ ಹೋರಾಟದ ಒಂದು ಮುಖವಾದರೆ, ಸ್ವಾತಂತ್ರ‍್ಯಾ ನಂತರ ಪರಿಶುದ್ಧ ಮತ್ತು ಕ್ರಿಯಾಶೀಲ ರಾಜಕಾರಣಿಯಾಗಿ ಮೊಳಕಾಲ್ಮೂರಿನಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದರು. ಇವರು ಪುರಸಭೆಗೆ ನಾಲ್ಕು ಭಾರಿ ಆಯ್ಕೆಯಾದರು. ಅನಂತರ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ೧೯೫೬ ರಿಂದ ೧೯೫೮ ರವರೆಗೆ ಪುರಸಭೆಯ ಅಧ್ಯಕ್ಷರಾಗಿ ಮೊಳಕಾಲ್ಮೂರಿನಲ್ಲಿ ಹಲವು ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದರು.

ಇತ್ತೀಚಿನ ದಿನಗಳಲ್ಲಿ ಅಧಿಕಾರಕ್ಕಾಗಿ ಏನಲ್ಲಾ ಲಾಬಿಗಳನ್ನು ಮಾಡುತ್ತಿರುವ ಇಂದಿನ ಜನಾಂಗಕ್ಕೆ ಅನ್ನದಾನಿ ಆರ್‌. ವೀರಭದ್ರಪ್ಪ ಒಬ್ಬ ಆದರ್ಶ ವ್ಯಕ್ತಿಯಾಗಿ ನಿಲ್ಲಬಲ್ಲರು. ಅವರು ಎಂದೂ ಅಧಿಕಾರಿವನ್ನು ಹುಡುಕಿಕೊಂಡು ಹೋದವರಲ್ಲ, ಅಧಿಕಾರವೇ ಅವರನ್ನು ಹುಡುಕಿಕೊಂಡು ಬಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ೧೯೫೬-೧೯೫೮ರವರೆಗೆ ಪುರಸಭೆಯ ಅಧ್ಯಕ್ಷರಾಗಿ, ೧೯೬೦ರವರೆಗೆ ತಾಲೂಕು ಬೋರ್ಡ್‌ ಅಧ್ಯಕ್ಷರಾಗಿ ೧೯೫೧ ರಿಂದ ತಾಲೂಕಿನ ಕಾಂಗ್ರೆಸ್‌ನ ಪಕ್ಷದ ಕಾರ್ಯದರ್ಶಿಯಾಗಿ, ಕಾಂಗ್ರೆಸ್‌ ಪಕ್ಷವಿಭಜನೆಯಾದಾಗ ’ಓ’ ಕಾಂಗ್ರೆಸ್‌ನ ಸ್ಥಾಪಕ ಅಧ್ಯಕ್ಷರಾಗಿ, ಆ ನಂತರ ತಾಲೂಕಿನ ಜನತಾ ಪಕ್ಷದ ಅಧ್ಯಕ್ಷರಾಗಿ, ತಾಲೂಕು ಜನತಾ ದಳದ ಅಧ್ಯಕ್ಷರಾಗಿ ಭೂ ಅಭಿವೃದ್ಧಿನ ಬ್ಯಾಂಕಿನ ಪ್ರಥಮ ಅಧ್ಯಕ್ಷರಾಗಿ, ೧೨ ವರ್ಷಗಳ ಕಾಲ ತಾಲುಕು ಖಾದಿ ಸಹಕಾರ ಸಂಘದ ಅಧ್ಯಕ್ಷರಾಗಿ, ಹೌಸಿಂಗ್ ಸೊಸೈಟಿಯ ಸ್ಥಾಪಕ ಅಧ್ಯಕ್ಷರಾಗಿ, ರಾಜ್ಯ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ ಹೀಗೆ ಹತ್ತಾರು ಕ್ಷೇತ್ರದಲ್ಲಿ ನಿಸ್ವಾರ್ಥ, ಪ್ರಾಮಾಣಿಕ ಹಾಗೂ ಅತ್ಯಂತ ಶ್ರದ್ಧೆ, ಶಿಸ್ತಿನಿಂದ ಹಲವಾರು ಜನಪರ ಕಾರ್ಯಗಳನ್ನು ಮಾಡಿ ಮೊಳಕಾಲ್ಮೂರಿನ ಜನತೆಯ ಮನಸ್ಸಿನಲ್ಲಿ ಹಸಿರಾಗಿ ಉಳಿದಿದ್ದಾರೆ. ಸಮಾಜ ಸೇವೆಯಲ್ಲಿ ತುಂಬು ಜೀವನವನ್ನು ಸಾಗಿಸಿದ ವೀರಭದ್ರಪ್ಪನವರು ತಮ್ಮ ೭೯ನೇ ವಯಸ್ಸಿನಲ್ಲಿ ಅಂದರೆ ೧೯ ಸೆಪ್ಟೆಂಬರ್ ೨೦೦೫ ರಂದು ವಿಧಿವಶವಾದರು.

ಅನ್ನದಾನಿ ವೀರಭದ್ರಪ್ಪನವರ ಬಗ್ಗೆ ಎಷ್ಟು ಬರೆದರೂ ಸಾಲದು, ಅವರದು ವೈಶಿಷ್ಟ್ಯಪೂರ್ಣ ವ್ಯಕ್ತಿತ್ವದ ಶಿಸ್ತು, ಸರಳತೆ, ವಿದ್ವತ್ತು, ಪ್ರಾಮಾಣಿಕತನ, ಕಾಯಕ, ನಿಸ್ವಾರ್ಥ ಸೇವೆ ಮುಂತಾದ ಅಂಶಗಳನ್ನು ಇಂದಿನ ಜನಾಂಗಕ್ಕೆ ಮಾದರಿ ಮತ್ತು ಸ್ಫೂರ್ತಿ ಎಂಬಲ್ಲಿ ಎರಡು ಮಾತಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ, ದೇಶ ಸೇವೆಗಾಗಿ ತಮ್ಮ ವಿದ್ಯಾರ್ಥಿ ಜೀವನವನ್ನೇ ಧಾರೆಯೆರೆದು, ಸಮಾಜದ ಏಳಿಗೆಗೆ ಅಂದಿನಿಂದ ಇಂದಿನವರೆಗೂ ಎಲೆಮರೆಯ ಕಾಯಿಯಂತೆ ಸಕ್ರಿಯ ಬದುಕಿನಲ್ಲಿ ತೊಡಗಿದ್ದ ಅನ್ನದಾನಿ ಆರ್‌. ವೀರಭದ್ರಪ್ಪನವರು ಇಂದು ಇಲ್ಲ, ಆದರೂ ಅವರ ಆದರ್ಶಗಳ ಮಾತ್ರ ಜೀವಂತ ಹಾಗೂ ಸಮಾಜದಲ್ಲಿ ಮಾದರಿಯಾಗಿವೆ ಎಂಬುದಂತೂ ನೂರಕ್ಕೆ ನೂರರಷ್ಟು ಸತ್ಯ.