ಭೌಗೋಳಿಕ ಪರಿಚಯ

ಚಿತ್ರದುರ್ಗದಿಂದ ೮೧ ಕಿ.ಮೀ. ದೂರದಲ್ಲಿರುವ ಮೊಳಕಾಲ್ಮೂರು ಬೆಂಗಳೂರಿನಿಂದ ೨೯೫ ಕಿ.ಮೀ. ಅಂತರದಲ್ಲಿದೆ. ಜಿಲ್ಲೆಯ ಈಶಾನ್ಯಕ್ಕಿರುವ ಈ ತಾಲ್ಲೂಕಿನ ದಕ್ಷಿಣಕ್ಕೆ ಚಳ್ಳಕೆರೆ, ಉತ್ತರ ಮತ್ತು ಪೂರ್ವಕ್ಕೆ ಆಂಧ್ರಪ್ರದೇಶದ ರಾಯದುರ್ಗ ತಾಲೂಕು, ವಾಯುವ್ಯ ಮತ್ತು ಪಶ್ಚಿಮಕ್ಕೆ ಬಳ್ಳಾರಿ ಜಿಲ್ಲೆ ಆವರಿಸಿದೆ. ಮೊಳಕಾಲ್ಮೂರು ತಾಲೂಕಿನಲ್ಲಿ ಎರಡು ಹೋಬಳಿಗಳು, ೯೧ ಗ್ರಾಮಗಳಿವೆ. ತಾಲೂಕಿನ ಭೂವಿಸ್ತೀರ್ಣ ೭೩೬೨ ಚ.ಕಿ.ಮೀ. ಇದೆ. ೧೯೫೧ರಲ್ಲಿ ಪುರಸಭೆಯಾಗಿದ್ದ ಇದು ೧೯೬೧ರಲ್ಲಿ ೪೮೫೩ ರಷ್ಟು ಜನಸಂಖ್ಯೆ ಹೊಂದಿದ ಪಟ್ಟಣ ಪಂಚಾಯತಿಯಾಗಿತ್ತು. ತಾಲೂಕಿನ ಜನಸಂಖ್ಯೆ ೨೦೦೧ ರ ಜನಗಣತಿ ಪ್ರಕಾರ ೧,೨೬,೭೪೨ ಆಗಿದೆ.

ತಾಲೂಕಿನ ಹೆಚ್ಚಿನ ಭೂಭಾಗವು ಕಣಶಿಲೆಯ ದುಂಡಾದ ಬಂಡೆಗಲ್ಲುಗಳ ಬೆಟ್ಟಗುಡ್ಡಗಳಿಂದ ಕೂಡಿದ್ದು, ಅಲ್ಲಲ್ಲಿ ಕಣಿವೆ ಪ್ರದೇಶಗಳಿವೆ. ಕಣಶಿಲೆಯಲ್ಲದೆ ಮರಳುಗಲ್ಲು ಮತ್ತು ಬೆಣಚುಕಲ್ಲುಗಳು ಹೆಚ್ಚಾಗಿ ಕಂಡುಬರುತ್ತವೆ. ಸಮುದ್ರ ಮಟ್ಟದಿಂದ ಸುಮಾರು ೨೦೯೮ ಅಡಿ ಎತ್ತರದಲ್ಲಿರುವ ಈ ತಾಲೂಕಿನ ಬ್ರಹ್ಮಗಿರಿ (೭೦೬ ಮೀ), ಜಟಂಗೀ ರಾಮೇಶ್ವರ (೧೦೫೭ ಮೀ), ನುಂಕಪ್ಪನ ಗುಡ್ಡ ೯೨೧ ಮೀ), ಶಾಂತಿ ಗುಡ್ಡ (೭೯೦ ಮೀ) ಎತ್ತರವಾಗಿವೆ. ಮೊಳಕಾಲ್ಮೂರು ಬಯಲು ಸೀಮೆಯ ಬಿಸಿಲು ನಾಡಿನ ತಾಣ. ಬಳ್ಳಾರಿಯ ತಾಪಮಾನವನ್ನೇ ಹೋಲುತ್ತದೆ.

ತಾಲೂಕಿನಲ್ಲಿ ಹರಿಯುವ ಪ್ರಮುಖ ನದಿ ಜನಿಗೆ ಹಳ್ಳ. ಇದನ್ನು ಚಿಕ್ಕಹಗರಿ, ಹನೆಯತೊರೆ, ಅಘಹರಿ, ಪಾಪನಾಶನಿ ಎಂಬ ಹೆಸರುಗಳಿಂದ ಕರೆಯಲಾಗಿದೆ. ಇದರ ಮೂಲ ಚಿತ್ರದುರ್ಗದ ಬೆಟ್ಟಗಳು (ಓಬಳದೇವರ ಗುಡ್ಡ), ಚಿತ್ರದುರ್ಗ, ಜಗಳೂರು ತಾಲೂಕಿನಲ್ಲಿ ಹರಿದು ಬಳ್ಳಾರಿ ಜಿಲ್ಲೆಯ ಗಡಿಯನ್ನು ಕಲ್ಲಹಳ್ಳಿ ಹತ್ತಿರ ಪ್ರವೇಶಿಸಿ ರಾಯದುರ್ಗ ತಾಲೂಕಿನಲ್ಲಿ ವೇದಾವತಿ ನದಿಯನ್ನು ಸೇರುತ್ತದೆ. ಈ ನದಿಗೆ ಹಾನಗಲ್ ಬಳಿ ರಂಗಯ್ಯನದುರ್ಗ ಜಲಾಶಯವನ್ನು ನಿರ್ಮಿಸಿ ನೀರಾವರಿಗೆ ಅನುಕೂಲ ಕಲ್ಪಿಸಲಾಗಿದೆ. ಇಲ್ಲಿನ ಇತರೆ ಹಳ್ಳಿಗಳೆಂದರೆ ಬೊಮ್ಮಕ್ಕನಹಳ್ಳ, ಯರ‍್ರೇನಹಳ್ಳಿ ಹಳ್ಳ, ಹಾನಗಲ್ಲು ಹಳ್ಳ, ಗುಂಡೇರಿ ಹಳ್ಳ, ಗಂಗಮ್ಮನ ಹಳ್ಳಗಳು.

ತಾಲೂಕಿನಲ್ಲಿ ೭೫,೦೦೦ ಹೆಕ್ಟೇರ್ ಭೂಮಿಯಿದ್ದು, ಮಳೆಯು ವಾರ್ಷಿಕವಾಗಿ ಸರಾಸರಿ ೫೨೬೩೯ ಮಿ.ಮೀ. ಬೀಳುತ್ತದೆ. ಮುಂಗಾರಿನಂತೆ ಹಿಂಗಾರು ಮಳೆಯು ಇಲ್ಲಿ ಹೆಚ್ಚು ಚುರುಕಾಗಿದೆ. ಕಪ್ಪು, ಕೆಂಪು ಹಾಗೂ ಗರಸು ಮಣ್ಣಿನಿಂದ ಕೂಡಿದ ತಾಲೂಕಿನ ಪ್ರಮುಖ ಬೆಳೆಗಳೆಂದರೆ ಜೋಳ, ಮೆಕ್ಕೆ ಜೋಳ, ರಾಗಿ, ಸಜ್ಜೆ, ನವಣೆ, ಭತ್ತ, ತ್ರೆಗರಿ, ಶೇಂಗಾ, ಈರುಳ್ಳಿ ಮುಖ್ಯವಾಗಿವೆ.

ಪ್ರಾಗಿತಿಹಾಸ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪರಿಚಿತವಾಗಿರುವುದು ಮೌರ್ಯಚಕ್ರವರ್ತಿ ಅಶೋಕನ ಬಂಡೆಗಲ್ಲು ಶಾಸನಗಳಿಂದ. ತಾಲೂಕಿನ ಮೊಳಕಾಲ್ಮೂರು, ಬ್ರಹ್ಮಗಿರಿ, ಜಟಂಗಿ ರಾಮೇಶ್ವರ, ಸಂತೆಗುಡ್ಡ ಮೊದಲಾದ ಸ್ಥಳಗಳು ಪ್ರಮುಖ ಪ್ರಾಚೀನ ನೆಲೆಗಳಾಗಿವೆ. ಬ್ರಹ್ಮಗಿರಿಯು ಕರ್ನಾಟಕದ ಪ್ರಾಗಿತಿಹಾಸ ಕಾಲದ ದೃಷ್ಟಿಯಿಂದ ಮಹತ್ವದ ನೆಲೆಯಾಗಿದೆ. ಇಲ್ಲಿ ೧೯೪೭ ರಲ್ಲಿ ಸರ್ ಮಾರ್ಟಿಮರ್ ವೀಲರ್‌ನಡೆಸಿದ ಉತ್ಖನನವು ವೈಜ್ಞಾನಿಕ ದೃಷ್ಟಿಕೋನವನ್ನು ಒಳಗೊಂಡಿದ್ದಾಗಿದೆ. ಇಲ್ಲಿನ ಉತ್ಖನನದಲ್ಲಿ ಗುರುತಿಸಿರುವಂತೆ ಸೂಕ್ಷ್ಮ ಶಿಲಾಯುಗ ಕಾಲದ ಅವಶೇಷಗಳು ಪತ್ತೆಯಾಗಿವೆ. ಹಳೆಯ ಶಿಲಾಯುಗದ ಆಕರಗಳು ಕಂಡುಬಂದಿರುವುದಿಲ್ಲ.

ಹಳೆಯ ಶಿಲಾಯುಗ

ಹಳೆಯ ಶಿಲಾಯುಗವು ಶಿಲಾಯುಗಗಳಲ್ಲಿ ಅತ್ಯಂತ ಪ್ರಾಚೀನವಾದುದು. ಇದನ್ನು ಅಧ್ಯಯನದ ಅನುಕೂಲಕ್ಕಾಗಿ ಮೂರು ಭಾಗಗಳಾಗಿ ವಿಭಾಗಿಸಿದ್ದಾರೆ. ಅವಗಳನ್ನು ಆದಿ, ಮಧ್ಯ ಮತ್ತು ಅಂತ್ಯ ಶಿಲಾಯುಗಗಳೆಂದು ಕರೆಯಲಾಗಿದೆ. ಭಾರತದ ಮಟ್ಟಿಗೆ ೧೮೬೩ ರಲ್ಲಿ ಈ ಸಂಸ್ಕೃತಿಯ ಶಿಲಾಯುಧಗಳು ಮೊಟ್ಟಮೊದಲಿಗೆ ಬೆಳಕಿಗೆ ಬಂದವು. ಅವಗಳನ್ನು ಕಂಡುಹಿಡಿದವರಲ್ಲಿ ಮೊದಲಿಗರಲ್ಲಿ ರಾಬರ್ಟ್ ಬ್ರೂಸ್ ಪೂಟ್ ಮುಖ್ಯರಾಗಿದ್ದಾರೆ. ಕರ್ನಾಟಕದ ಮಟ್ಟಿಗೂ ಇವರೇ ಪ್ರಾಗಿತಿಹಾಸ ಅಧ್ಯಯನದ ನೇತಾರರಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಬರ್ಟ್ ಬ್ರೂಸ್‌ಪೂಟ್ ಅವರನ್ನು ಭಾರತೀಯ ಪ್ರಾಗೈತಿಹಾಸಿಕ ಅಧ್ಯಯನದ ಪಿತಾಮಹನೆಂದು ಕರೆಯಲಾಗಿದೆ.

ಕರ್ನಾಟಕದಲ್ಲಿ ಹಳೆಯ ಶಿಲಾಯುಗಕ್ಕೆ ಸಂಬಂಧಿಸಿದ ಆಯುಧ ಪರಿಕರಗಳು ಅನೇಕ ನೆಲೆಗಳಲ್ಲಿ ಕಂಡುಬಂದಿವೆ. ಅಂತೆಯೇ ಚಿತ್ರದುರ್ಗ ಜಿಲ್ಲೆಯ ಜಾನಕಲ್ಲು, ತಾಳ್ಯಗಳಲ್ಲಿ ದೊರೆತಿವೆ. ಆದರೆ ಪ್ರಸ್ತುತ ಮೊಳಕಾಲ್ಮೂರು ತಾಲೂಕಿನಲ್ಲಿ ಇದುವರೆಗಿನ ಸಂಶೋಧನೆಯಲ್ಲಿ ಗೋಚರಿಸದಿರುವುದು ಆಶ್ಚರ್ಯಕರ ಸಂಗತಿ. ಈ ಬಗೆಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಸೂಕ್ಷ್ಮ ಶಿಲಾಯುಗ

ಇದುವರೆಗಿನ ಅಧ್ಯಯನಗಳ ಹಿನ್ನಲೆಯಲ್ಲಿ ಹೇಳುವುದಾದರೆ ಮೊಳಕಾಲ್ಮೂರು ತಾಲೂಕಿನ ಪ್ರಾಚೀನ ಇತಿಹಾಸ ಆರಂಭವಾಗುವುದು ಸೂಕ್ಷ ಶಿಲಾಯುಗದಿಂದ ಎನ್ನಬಹುದು. ಸೂಕ್ಷ್ಮ ಶಿಲಾಯುಗದ ಮಾನವ ತನ್ನ ಜೀವನನಿರ್ವಹಣೆಗೆ ಬಳಸಿದ ಆಯುಧಗಳೆಂದರೆ ಅತಿ ಸಣ್ಣ, ಸೂಕ್ಷ್ಮ ಹಾಗೂ ಹರಿತವಾದ ಆಯುಧಗಳು. ಅವಗಳನ್ನು ನೀಳಚಕ್ಕೆ, ಮೊನೆ, ಬ್ಲೇಡ್, ಬೈರಿಗೆ, ಕೋರ್‌ಗಳಂತಹ ಆಯುಧಗಳನ್ನು ಚರ್ಟ್, ಜಾಸ್ಟರ್ ಹಾಗೂ ಬೆಣಚು ಕಲ್ಲುಗಳಿಂದ ತಯಾರಿಸಲಾಗಿದೆ.

ಮೊಳಕಾಲ್ಮೂರು ತಾಲೂಕಿನಲ್ಲಿ ಸೂಕ್ಷ್ಮ ಶಿಲಾಯುಗಕ್ಕೆ ಸಂಬಂಧಿಸಿದ ಕುರುಹುಗಳು ಕಂಡುಬಂದದ್ದು ಬ್ರಹ್ಮಗಿರಿಯ ಉತ್ಖನನದಲ್ಲಿ. ೧೯೨೮-೨೯ ರಲ್ಲಿ ಉತ್ಖನನ ಮಾಡಿದ ಡಾ. ಎಂ.ಎಚ್. ಕೃಷ್ಣ ಅವರು ಮೊದಲಿಗೆ ಈ ಬಗೆಯ ಸೂಕ್ಷ್ಮ ಶಿಲಾಯುಧಗಳನ್ನು ಪತ್ತೆಹಚ್ಚಿ ಬೆಳಕಿಗೆ ತಂದರು. ಈ ಶಿಲಾಯುಧಗಳ ಸ್ವರೂಪ, ಹಿನ್ನಲೆ ಹಾಗೂ ಪರಿಸರವನ್ನು ಆಧರಿಸಿ ಅವರು ರೊಪ್ಪ ಸಂಸ್ಕೃತಿಯೆಂದೇ ಹೆಸರಿಸಿದರು. ಈ ಬಗೆಯ ಆಯುಧಗಳು ಕೃಷ್ಣ ಅವರಲ್ಲದೆ ೧೯೪೭-೪೮ ರಲ್ಲಿ ವೈಜ್ಷಾನಿಕ ಉತ್ಖನನ ಕೈಗೊಂಡ ಸರ್ ಮಾರ್ಟಿಮರ್‌ವ್ಹೀಲರ್ ಅವರ ಸಂಶೋಧನೆಯಿಂದಲೂ ಪರಿಚಿತವಾದವು.ಇದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಸೂಕ್ಷ್ಮಶಿಲಾಯುಗ ಸಂಸ್ಕೃತಿಯ ಇರವನ್ನು ದೃಢಪಟ್ಟಂತಾಯಿತು. ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಸಂಶೋಧನೆ ಮುಂದುವರೆದು ಇತ್ತೀಚೆಗೆ ಮೊಳಕಾಲ್ಮೂರು ತಾಲೂಕಿನ ಅನೇಕ ನೆಲೆಗಳಲ್ಲಿ ಗೋಚರವಾಗಿರವುದು ಸಂತೋಷಕರ ಸಂಗತಿ. ತಾಲೂಕಿನ ಬ್ರಹ್ಮಗಿರಿಯಲ್ಲದೆ ನುಂಕೆಮಲೆ, ಬೊಮ್ಮಕ್ಕನಹಳ್ಳಿ, ಪೂಜಾರಹಳ್ಳಿ, ಹಳೆಕರೆ, ಹಾನಕಲ್ಲುಗಳಲ್ಲಿ ಸೂಕ್ಷ್ಮ ಶಿಲಾಯುಧಗಳು ಪತ್ತೆಯಾಗಿವೆ. ಹಳೆಕರೆ ಬಳಿಯ ಹಳ್ಳದ ದಂಡೆಯಲ್ಲಿ ಈ ಕಾಲದ ಬ್ಲೇಡ್, ಬೈರಿಗೆ ಹಾಗೂ ಕೋರ್‌ಗಳು ದೊರೆತಿವೆ. ಇವು ಜಾಸ್ಟರ್ ಶಿಲೆಯಿಂದ ಮಾಡಿದ ಆಯುಧಗಳಾಗಿವೆ.

ನವ ಶಿಲಾಯುಗ

ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಬಳಿಕ ಕಂಡುಬರುವ ಕಾಲವೆಂದರೆ ಮಾನವ ತನ್ನನ್ನು ಸುಧಾರಿಸಿಕೊಂಡ ನವ ಅಥವ ನೂತನ ಶಿಲಾಯುಗ. ಈ ಕಾಲಕ್ಕೆ ಸಂಬಂಧಿಸಿದಂತೆ ಮೊಳಕಾಲ್ಮೂರು ತಾಲೂಕು ಅನೇಕ ನೆಲೆಗಳನ್ನು ಒಳಗೊಂಡು ಶ್ರೀಮಂತವಾಗಿದೆ. ಇದುವರೆಗಿನ ಸಂಶೋಧನೆಯನ್ವಯ ಸುಮಾರು ೧೫ ನವಶಿಲಾಯುಗದ ನೆಲೆಗಳು ಕಂಡುಬಂದಿವೆ. ಅವುಗಳೆಂದರೆ ಕೆಳಗಿನಹಳ್ಳಿ, ಕೋನಸಾಗರ, ಜಟಂಗಿರಾಮೇಶ್ವರ, ನುಂಕೆಮಲೆ, ಬಸಾಪುರ, ಬ್ರಹ್ಮಗಿರಿ, ಬಾಂಡ್ರಾವಿ, ಬೊಮ್ಮಕ್ಕನಹಳ್ಳಿ, ವಡೇರಹಳ್ಳೀ, ವೆಂಕಟಾಪುರ, ಸಂತೇಗುಡ್ಡ, ಹನುಮನಕೆರೆ, ಹಳೆಕರೆ, ಹಾನಗಲ್ಲು, ಹಿರೆಕೆರೆಹಳ್ಳಿ ಮೊದಲಾದವು ಮುಖ್ಯವಾಗಿವೆ. ಈ ಕಾಲದ ಮಾನವನ ಚಟುವಟಿಕೆಗಳಲ್ಲಿ ಮುಖ್ಯವೆಂದರೆ, ಅಗಾಧವಾಗಿ ರೂಢಿಸಿಕೊಂಡ ಪಶುಪಾಲನೆ, ಕೃಷಿ ಆರಂಭಿಸಿ ಧಾನ್ಯ ಬೆಳೆಯುವುದು, ನೀರು ಮತ್ತು ಆಹಾರ ಧಾನ್ಯಗಳನ್ನು ಬಹುಕಾಲ ಇಡಲು ಅನುಕೂಲವಾಗುವ ಮಡಕೆಗಳ ತಯಾರಿ ಇನ್ನೂ ಮುಂತಾದ ಉದ್ಯೋಗಗಳನ್ನು ರೂಢಿಸಿಕೊಂಡನು.

ಈ ಕಾಲದ ಆರಂಭವನ್ನು ಸೂಚಿಸುವ ಬೂದಿದಿಬ್ಬಗಳು ಪಶುಪಾಲನೆಯ ಸಂಕೇತಗಳಾದರೆ, ಕಲ್ಲನಿಂದ ಮಾಡಿ ನಯಗೊಳಿಸಿದ ಕೊಡಲಿಯು ಕಾಡನ್ನು ಕಡಿದು ಕೃಷಿ ಆರಂಭಿಸಿದುದನ್ನು ಸಾರುತ್ತದೆ. ಹಾಗೆಯೇ ಮಣ್ಣಿನಿಂದ ಮಾಡಿದ ಮಡಕೆಕುಡಿಕೆಗಳು ಸಂಗ್ರಹಣಾ ಪರಿಕರಗಳಾದರೆ, ಕೃಷಿಯ ಆರಂಭವು ಮಾನವನು ಒಂದೆಡೆ ನೆಲೆನಿಂತು ಗ್ರಾಮಸಂಸ್ಕೃತಿಯ ನಿರ್ಮಾಣಕ್ಕೆ ನಾಂದಿಯಾಯಿತು. ಈ ಮೇಲಿನ ಬೂದಿದಿಬ್ಬ, ಕಲ್ಲಿನ ಕೊಡಲಿ, ಮಣ್ಣಿನ ಮಡಕೆ, ಕೆಂಪು ಬಿಳಿ ಬಣ್ಣದ ರೇಖಾಚಿತ್ರ ಮೊದಲಾದವು ಈ ತಾಲೂಕಿನ ಅನೇಕ ನೆಲೆಗಳಲ್ಲಿ ಗೋಚರಿಸಿ ಪ್ರಾಚೀನ ನವಶಿಲಾಯುಗ ಸಂಸ್ಕೃತಿಯನ್ನು ದೃಢೀಕರಿಸಿವೆ.

ಈ ಸಂಸ್ಕೃತಿಯ ಜನರು ವೃತ್ತಾಕಾರದ ಮನೆಗಳನ್ನು ಮರಗಿಡ ಬಳ್ಳಿಗಳನ್ನು ಬಳಸಿ ನಿರ್ಮಿಸಿಕೊಳ್ಳುತ್ತಿದ್ದರು. ಕೃಷಿಯನ್ನು ಆರಂಭಿಸಿದ ಇವರು ಸಾಮಾನ್ಯವಾಗಿ ರಾಗಿ, ಭತ್ತ, ಗೋದಿ, ಹುರುಳಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಿದ್ದರು. ಹಾಗೆಯೇ ಪ್ರಾಣಿಗಳನ್ನು ಬೇಟೆಯಾಡಿ ಆಹಾರವನ್ನು ಸಂಗ್ರಹಿಸುವ ಕಲೆಯು ಜೊತೆಜೊತೆಯಲ್ಲಿಯೇ ನಡೆದಿತ್ತು. ಪಶುಪಾಲನೆಯ ಮೂಲಕ ದನ, ಕುರಿ, ಮೇಕೆಗಳನ್ನು ಸಾಕುವುದು ರೂಢಿಯಾಗಿತ್ತು. ಇದರಿಂದ ಬಂದ ಹೈನನ್ನು ಆಹಾರವಾಗಿ ಬಳಸಿಕೊಳ್ಳುತ್ತಿದ್ದರು. ಇದಕ್ಕೆ ಸಂಬಂಧಿಸಿ ಕುರುಹುಗಳನ್ನು ರೇಖಾಚಿತ್ರ ಮತ್ತು ವರ್ಣಚಿತ್ರಗಳಲ್ಲಿ ಕಾಣಬಹುದು.

ವರ್ಣಚಿತ್ರಗಳಲ್ಲಿ ಕೆಂಪು ಬಣ್ಣದವೇ ಹೆಚ್ಚು ಕಂಡುಬಂದಿವೆ. ಇವುಗಳನ್ನು ಬ್ರಹ್ಮಗಿರಿ, ಜಟಂಗಿರಾಮೇಶ್ವರ, ಸಂತೆಗುಡ್ಡ, ನುಂಕೆಮಲೆ ಮೊದಲಾದೆಡೆಗಳಲ್ಲಿ ಕಾಣಬಹುದು. ಈ ವರ್ಣಚಿತ್ರಗಳಲ್ಲಿ ಜಿಂಕೆ, ಹಂದಿಬೇಟೆ, ಮೀನುಹಿಡಿಯುವುದು ಇವೇ ಮೊದಲಾದವು ಮುಖ್ಯವಾಗಿವೆ. ಅಂತೆಯೇ ಸತ್ತ ಹಿರಿಯರಿಗೆ ಶವಸಂಸ್ಕಾರ ಮಾಡುವ ಪದ್ಧತಿಯೂ ಈ ಕಾಲದಲ್ಲಿ ಪ್ರಾರಂಭವಾಗಿದೆ. ಇದಕ್ಕೆ ಮಣ್ಣಿನ ಮೃತ್ಪಾತ್ರೆಗಳನ್ನು ಬಳಸಲಾಗಿದೆ. ಇದು ಮುಂದೆ ಬೃಹತ್ ಶಿಲಾಯುಗ ಸಂಸ್ಕೃತಿಯಲ್ಲಿ ಪ್ರಮುಖ ಆಚರಣೆಯಾಗಿ ರೂಢಿಯಾದುದನ್ನು ಕಾಣಬಹುದು. ಇದು ಬ್ರಹ್ಮಗಿರಿ ಉತ್ಖನನದಲ್ಲಿ ದೃಢವಾಗಿದೆ.

ಬೃಹತ್ ಶಿಲಾಯುಗ ಸಂಸ್ಕೃತಿ

ಮೊಳಕಾಲ್ಮೂರು ತಾಲೂಕು ಬೃಹತ್ ಶಿಲಾಯುಗ ಸಂಸ್ಕೃತಿ ಮಾನವನ ಅಚ್ಚುಮೆಚ್ಚಿನ ತಾಣವೆಂದೇ ಹೇಳಬೇಕು. ಇದಕ್ಕೆ ಮುಖ್ಯ ಕಾರಣ ಅವರಿಗೆ ಅತ್ಯವಶ್ಯವಾಗಿ ಬೇಕಾದ ಶಿಲಾಸ್ತೋಮಗಳು ಹಾಗೂ ಜೀವನಾವಶ್ಯಕವಾದ ಆಹಾರ, ನೀರು, ವಸತಿ ಇಲ್ಲಿ ಇದ್ದದು. ಇದುವರೆಗಿನ ಸಂಶೋಧನೆಯನ್ವಯ ಮೂವತ್ತಕ್ಕೂ ಹೆಚ್ಚು ನೆಲೆಗಳು ಇಲ್ಲಿ ಕಂಡು ಬಂದಿರುವುದು ಗಮನಾರ್ಹ. ಬೃಹತ್ ಶಿಲಾಯುಗದ ವೈಶಿಷ್ಟ್ಯವೆಂದರೆ ಸಮಾಧಿ ನಿರ್ಮಾಣ ಹಾಗೂ ಈ ಸಮಾಧಿಗಳಿಗೆ ಬೃಹದಾಕಾರದ ಬಂಡೆಗಳನ್ನು ಸೀಳಿ ಬಳಸಿರುವುದು. ಬಂಡೆಗಲ್ಲುಗಳನ್ನು ಸೀಳು ಕಲೆ ಹಾಗೂ ಕಬ್ಬಿಣದ ಉಪಯೋಗ ಹಾಗೂ ಮೊಟ್ಟ ಮೊದಲ ಬಾರಿಗೆ ಮಾನವ ಜನಾಂಗಕ್ಕೆ ಪರಿಚಿತವಾದುದು ಇದೇ ಕಾಲದಲ್ಲಿ. ಆದಕಾರಣ ಈ ಕಾಲವನ್ನು ಕಬ್ಬಿಣ ಯುಗವೆಂದೂ ಕರೆಯಲಾಗುತ್ತದೆ. ಹಳೆಯ ಶಿಲಾಯುಗದಿಂದ ನೂತನ ಶಿಲಾಯುಗದವರೆಗೆ ರೂಢಿಯಲ್ಲಿದ್ದ ಕಲ್ಲನ್ನು ಬಳಸಿ ಶಿಲಾಯುಧ ತಯಾರಿಸುತ್ತಿದ್ದ ಪದ್ಧತಿಯನ್ನು ಬಿಟ್ಟು ಕೊಡಲಿ, ಕತ್ತಿ ಮೊದಲಾದ ಆಯುಧಗಳನ್ನು ತಯಾರಿಸಲು ಮತ್ತು ಬಂಡೆಗಲ್ಲುಗಳನ್ನು ಸೀಳಲು ಕಬ್ಬಿಣವನ್ನು ಬಳಸಿರುವುದು ಈ ಕಾಲದ ಪ್ರಮುಖ ಅಂಶ. ಬೃಹತ್ ಶೀಲಾಯುಗ ಸಂಸ್ಕೃತಿಯ ಸಮಾಧಿ ಕಲ್ಪನೆ ಅತ್ಯಂತ ವಿಶಿಷ್ಟವಾದುದು. ಅಂದಿನ ಜನರಲ್ಲಿ ಇದ್ದ ಆಚರಣೆ, ನಂಬಿಕೆಗಳನ್ನು ಈ ಕಾಲದ ಶಿಲಾ ಸಮಾಧಿಗಳಲ್ಲಿ ಕಾಣಬಹುದು. ಇವರ ಕಾಲದ ಸಂಸ್ಕೃತಿಯ ಪ್ರಮುಖ ಸಂಕೇತಗಳೆಂದರೆ ಶಿಲಾ ಸಮಾಧಿಗಳೇ ಆಗಿವೆ. ಇವುಗಳನ್ನು ಭಾರತದ ಪ್ರಾಚೀನ ಪಿರಮಿಡ್‌ಗಳೆಂತಲೂ ಕರೆಯಬಹುದು. ಸತ್ತವರು ಅಥವ ಹಿರಿಯರ ಬಗ್ಗೆ ಇದ್ದ ಗೌರವ, ನಂಬಿಕೆಗಳು ಹಾಗೂ ಸತ್ತ ವ್ಯಕ್ತಿ ಮರಳಿ ಭೂಮಿಗೆ ಬರುವನೆಂಬ ಆಶಯಗಳನ್ನು ಇವು ವ್ಯಕ್ತಪಡಿಸುತ್ತವೆ. ಇದಕ್ಕೆ ಸತ್ತ ವ್ಯಕ್ತಿ ಬಳಸಿದ ಹಾಗೂ ಬಳಸಲು ಬೇಕಾದ ಎಲ್ಲ ಬಗೆಯ ಜೀವನಾವಶ್ಯಕ ವಸ್ತು ವಿಶೇಷಗಳನ್ನು ಸಮಾಧಿಗಳಲ್ಲಿ ಇಟ್ಟಿರುವುದನ್ನು ಕಾಣಬಹುದು. ಈ ಸಮಾಧಿಗಳಲ್ಲಿ ಒಂದು ಕುಟುಂಬ ಜೀವನ ನಿರ್ವಹಣೆ ಮಾಡಬಹುದಾದ ಎಲ್ಲ ಬಗೆಯ ಸಾಮಗ್ರಿಗಳನ್ನು ಕಾಣಬಹುದಾಗಿದೆ. ಇಲ್ಲಿ ಇಡಲಾದ ನೀರು, ಆಹಾರ, ಆಯುಧೋಪಕರಣಗಳು ಅಂದಿನ ಜನರಲ್ಲಿದ್ದ ಪುನರ್ಜನ್ಮ ಕಲ್ಪನೆಯನ್ನು ವ್ಯಕ್ತಪಡಿಸುತ್ತದೆ. ಸತ್ತ ವ್ಯಕ್ತಿ ಮರಳಿ ಭೂಮಿಗೆ ಬರುವನೆಂಬ ಆಶಯದಿಂದಲೇ ಇಷ್ಟೆಲ್ಲ ಶ್ರಮಪೂರ್ವಕ ಕಾರ್ಯವನ್ನು ಕೈಗೊಂಡಿದ್ದುದು. ಅಂತೆಯೇ ಅಂದಿನ ಜನರು ಇಟ್ಟುಕೊಂಡಿದ್ದ ಮನುಷ್ಯರೊಂದಿಗಿನ ಸಂಬಂಧಗಳು ಹಾಗೂ ಅವರ ಮನೋಭಾವನೆಗಳನ್ನು ಶಿಲಾಸಮಾಧಿಗಳ ಅಧ್ಯಯನದಿಂದ ಕಂಡುಕೊಳ್ಳಬಹುದು.

ಮೊಳಕಾಲ್ಮೂರು ತಾಲೂಕಿನಲ್ಲಿ ಬೃಹತ್ ಶಿಲಾಸಂಸ್ಕೃತಿಯ ಅನೇಕ ನೆಲೆಗಳು ಬೆಳಕಿಗೆ ಬಂದಿವೆ. ಈ ಹಿಂದೆ ಬ್ರಹ್ಮಗಿರಿ ಸೇರಿದಂತೆ ಆರು ನೆಲೆಗಳು ಪತ್ತೆಯಾಗಿದ್ದವು. ಆದರೆ ಇತ್ತೀಚೆಗೆ ಇವುಗಳ ಜೊತೆಗೆ ೨೪ ಹೊಸ ಬೃಹತ್ ಶಿಲಾ ಸಂಸ್ಕೃತಿಯ ನೆಲೆಗಳನ್ನು ಪತ್ತೆ ಹಚ್ಚಲಾಗಿದೆ. ಬ್ರಹ್ಮಗಿರಿಯು ಜಿಲ್ಲೆಯ ಪ್ರಮುಖ ಬೃಹತ್ ಶಿಲಾ ಸಂಸ್ಕೃತಿಯ ನೆಲೆ. ಇದು ಅಧ್ಯಯನದ ದೃಷ್ಟಿಯಿಂದಲೂ ಮಹತ್ವದ್ದು. ಕಾರಣವೆಂದರೆ ಇಲ್ಲಿ ಎಂ.ಎಚ್. ಕೃಷ್ಣ, ಸರ್ ಮಾರ್ಟಿಮರ್ ವ್ಹೀಲರ್ ಕೈಗೊಂಡ ಉತ್ಖನನದಲ್ಲಿ ಶಿಲಾಸಮಾಧಿಗಳೂ ಸೇರಿರುವುದು. ಇಲ್ಲಿ ಹೆಚ್ಚು ಶಿಲಾಸಮಾಧಿಗಳು ಕಂಡುಬಂದಿರುವುದು ಗಮನಾರ್ಹ.ಶಿಲಾಸಮಾಧಿಗಳ ಸಂಖ್ಯಾ ದೃಷ್ಟಿಯಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಕೂನಬೇವು, ನೆರೇನಹಾಳು ನೆಲೆಗಳಲ್ಲೂ ಹೆಚ್ಚಾಗಿ ಬೃಹತ್ ಶಿಲಾಗೋರಿಗಳು ಕಂಡುಬಂದಿವೆ. ಚಿತ್ರದುರ್ಗ ತಾಲೂಕಿನಲ್ಲಿ ಎಸ್. ತಿಪ್ಪೇಸ್ವಾಮಿ ಅವರೊಂದಿಗೆ ಕೈಗೊಂಡ ನನ್ನ ಕ್ಷೇತ್ರಕಾರ್ಯದಲ್ಲಿ ನೆರೇನಹಾಳು, ಕೂನಬೇವು ಮತ್ತು ಬೆಳಗಟ್ಟ ನೆಲೆಗಳು ಬಹುಮುಖ್ಯವಾಗಿವೆ.

ಮೊಳಕಾಲ್ಮೂರು ತಾಲೂಕಿನಲ್ಲಿ ಕಂಡುಬಂದ ಬೃಹತ್ ಶಿಲಾಸಮಾಧಿಯ ಮಾದರಿಗಳೆಂದರೆ, Pit Circles, Cist Circles (ದುಂಡುಕಟ್ಟೆ ಶವಕುಣಿ), ಹಾದಿಕೋಣೆ, ಕಂಡಿಕೋಣೆ, ನಿಲಸುಗಲ್ಲು ಮಾದರಿಗಳಾಗಿವೆ.ಒಟ್ಟಿನಲ್ಲಿ ಈ ಸಮಾಧಿಗಳಿಂದ ಅಂದಿನ ಜನರ ಸಂಘಟನಾ ಶಕ್ತಿ, ಕಟ್ಟಡ ನಿರ್ಮಾಣ ಕೌಶಲ, ಶವ ಸಂಸ್ಕಾರದಲ್ಲಿ ಅವರು ಇಟ್ಟಕೊಂಡಿದ್ದ ನಂಬುಗೆ, ಆಚರಣೆಗಳು ಅಭಿವ್ಯಕ್ತಿಗೊಳ್ಳುತ್ತವೆ. ಈ ಕಾಲದ ರೇಖಾಚಿತ್ರ ಮತ್ತು ಗೀರುಚಿತ್ರಗಳು ಕೂಡ ಈ ಕಾಲದ ಅಧ್ಯಯನ ಕೈಗೊಳ್ಳಲು ಬಹು ಮುಖ್ಯ ಆಕರಗಳಾಗಿವೆ.

ಮೊಳಕಾಲ್ಮೂರು ತಾಲೂಕಿನಲ್ಲಿ ಪ್ರಾಗೈತಿಹಾಸಿಕ ನೆಲೆಗಳಲ್ಲದೆ ಆದಿ ಇತಿಹಾಸ ಕಾಲದ ಅನೇಕ ನೆಲೆಗಳು ಕಂಡುಬಂದಿವೆ. ಅವುಗಳಲ್ಲಿ ಬ್ರಹ್ಮಗಿರಿಗಳು ಮುಖ್ಯವಾಗಿವೆ. ಇಲ್ಲಿನ ಉತ್ಖನನದಲ್ಲಿ ಮೌರ್ಯ, ಶಾತಮಾಹನ ಯುಗದ ಕಟ್ಟಡ, ನಾಣ್ಯ ಮತ್ತಿತರ ಅವಶೇಷಗಳು ದೊರೆತಿವೆ.

ಒಟ್ಟಿನಲ್ಲಿ ಮೊಳಕಾಲ್ಮೂರು ತಾಲೂಕು ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾಗಿತಿಹಾಸ ಕಾಲದ ಮಾನವನ ಪ್ರಸಿದ್ದ ವಸತಿ ತಾಣವಾಗಿದ್ದುದರಲ್ಲಿ ಸಂಶಯವಿಲ್ಲ. ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ದೃಷ್ಟಿಯಿಂದ ಕರ್ನಾಟಕದ ಮಟ್ಟಿಗೆ ಬ್ರಹ್ಮಗಿರಿಯು ಉತ್ಖನನದ ಹಿನ್ನಲೆಯಲ್ಲಿ ಅತ್ಯಂತ ಮುಖ್ಯವಾದ ನೆಲೆಯಾಗಿದೆ. ಇಲ್ಲಿನ ಉತ್ಖನನದ ಮೂಲಕ ಕರ್ನಾಟಕದ ಪ್ರಾಗಿತಿಹಾಸಕ್ಕೆ ಒಂದು ಹೊಸ ದೃಷ್ಟಿಕೋನ ತಂದುಕೊಟ್ಟಿತೆಂದೇ ಹೇಳಬೇಕು. ಈ ಹಿನ್ನಲೆಯಲ್ಲಿ ಮೊಳಕಾಲ್ಮೂರು ತಾಲೂಕು ಕರ್ನಾಟಕವಷ್ಟೇ ಅಲ್ಲ, ಭಾರತ ಹಾಗೂ ಜಗತ್ತಿನ ಇತಿಹಾಸಕ್ಕೆ ಹೊಸ ಮುನ್ನುಡಿಯನ್ನೇ ಬರೆಯಿತೆಂದು ಹೇಳಬಹುದು.

೩. ಮೊಳಕಾಲ್ಮೂರು ತಾಲೂಕಿನ ನೆಲೆಗಳ ವಿವರ.

 

ಕ್ರ ಸಂ ಗ್ರಾಮ ಹೆಸರು

 

ಹಳೆಯ ಶಿಲಾಯುಗ ಸೂಕ್ಷ್ಮ ಶಿಲಾಯುಗ ನವ / ತಾಮ್ರ ಶಿಲಾಯುಗ ಬೃಹತ್ ಶಿಲಾಯುಗ ಆದಿ ಇತಿಹಾಸ ಕಾಲ
ಜಟಂಗಿ ರಾಮೇಶ್ವರ  —  —
ಬ್ರಹ್ಮಗಿರಿ  —
ನುಂಕುಮಲೆ  —  —
ಮೊಳಕಾಲ್ಮೂರು  —  —  —  —
ಹಳೆಕೆರೆ  —  —
ಹಾನಗಲ್ಲು  —  —
ಅಕ್ಕಮ್ಮನಗುಡ್ಡ  —  —  —  —
ಕೈಗುಡ್ಡ  —  —  —  —
ಮೋರ‍್ಲುಬಂಡೆಗುಡ್ಡ  —  —  —  —
ಪೂಜಾರಹಟ್ಟಿ  —  —  —
ಬೊಮ್ಮಕ್ಕನ ಹಳ್ಳಿ  —  —  —
ಕೋನಸಾಗರ  —  —  —  —
ಕೆಳಗಿನಹಟ್ಟಿ  —  —  —  —
ಬಸಾಪುರ  —  —  —  —
ವಡೇರಹಳ್ಳಿ  —  —  —
ಹಿರೆಕರೆಹಳ್ಳಿ  —  —  —
ವೆಂಕಟಾಪುರ  —  —  —  —
ಸಂತೆಗುಡ್ಡ  —  —
ಬಾಂಡ್ರಾವಿ  —  —  —
ಹನುಮನಗುಡ್ಡ  —  —  —  —
ದಡಗೂರು  —  —  —  —
ನಾಗಸಮುದ್ರ  —  —  —  —
ತಳವಾರಹಳ್ಳಿ  —  —  —  —
ಭಟ್ಟರಹಳ್ಳಿ  —  —  —  —
ಬೈರಾಪುರ  —  —  —  —
ಮೇಗಳಹಳ್ಳಿ  —  —  —  —
ಮೆಚ್ಚ್ರಿ  —  —  —  —
ಯರ‍್ರನಹಳ್ಳಿ  —  —  —  —
ರಾಮಸಾಗರ  —  —  —  —
ಕೆ. ರಾಯಪುರ  —  —  —  —

 

ಆಕರ ಗ್ರಂಥಗಳು

ಇತಿಹಾಸ ದರ್ಶನ ಸಂಪುಟಗಳು, ಕರ್ನಾಟಕ ಇತಿಹಾಸ ಅಕಾಡಮಿ, ಬೆಂಗಳೂರು

ಜಯಣ್ಣ ಯು, ೨೦೦೨, ಮೊಳಕಾಲ್ಮೂರು ತಾಲೂಕಿನ ಪುರಾತತ್ವೀಯ ಪರಿಸರ, ಅಪ್ರಕಟಿತ ಪಿಎಚ್‌.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ತಿಪ್ಪೇಸ್ವಾಮಿ, ಎಸ್. ೨೦೦೪, ರಕ್ಷಣಾ ವಾಸ್ತು ಶಿಲ್ಪ ಚಿತ್ರದುರ್ಗ ಜಿಲ್ಲೆ, ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಶಿವತಾರಕ್, ಕೆ.ಬಿ. ೨೦೦೧, ಕರ್ನಾಟಕದ ಪುರಾತತ್ವ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಸೋಮಶೇಖರ್, ಎಸ.ವೈ., ೨೦೦೪, ಜಟಂಗಿ ರಾಮೇಶ್ವರ ಸಾಂಸ್ಕೃತಿಕ ದರ್ಶನ, ಸುಮೇಧ ಪ್ರಕಾಶನ, ದೇವಸಮುದ್ರ, ಮೊಳಕಾಲ್ಮೂರು

ಸುಂದರ, ಅ. ೧೯೯೭, ಕರ್ನಾಟಕ ಚರಿತ್ರೆ, ಸಂ.೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಸುಂದರ, ಅ. ೧೯೯೪, ಕರ್ನಾಟಕ ಪ್ರಾಗಿತಿಹಾಸ, ಬೆಂಗಳೂರು

ಸುಂದರ, ಅ. ೧೯೭೩, ಬ್ರಹ್ಮಗಿರಿ ಮತ್ತು ಚಂದ್ರವಳ್ಳಿ, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

Krishna M. H., 1929, Excavations at Chandravalli suppliment to Annual report, Mysore Archaeology

Wheeler, R.E.M., Brahmagiri and Chandravalli,1947, Ancient INdia, 1984 (BUlletin of the A.S.I), No.4, 1947-48

Foote, R.B., 1916, Indian Pre historic and Proto historic antiquties, Madras

Seshadri, M., 1956, Stone using cultures of Pre and Proto historic Mysore, , London

Indian Antiquary, 1959-60

ಪತ್ರಿಕಾ ವರದಿ

ಸೋಮಶೇಖರ್, ಎಸ್.ವೈ, ತಿಪ್ಪೇಸ್ವಾಮಿ, ಎಸ್, ಮೊಳಕಾಲ್ಮೂರು ತಾಲೂಕಿನ ಸಂತೇಗುಡ್ಡದಲ್ಲಿ ಪ್ರಾಚೀನ ಗವಿವರ್ಣಚಿತ್ರಗಳ ಶೋಧ, ವಿಜಯಕರ್ನಾಟಕ, ಆಗಸ್ಟ್ ೦೩, ೨೦೦೩