ಒಂದು ನಾಡಿನ ಚರಿತ್ರೆಯ ಅಧ್ಯಯನದ ಮೂಲ ಆಕರಗಳಲ್ಲಿ ಶಾಸನ, ಕಾವ್ಯ, ಪುರಾಣ, ಇತ್ಯಾದಿ ಆಕರಗಳಂತೆ, ಸ್ಥಳನಾಮಗಳೂ ವಿಶೇಷವಾಗಿ ಐತಿಹಾಸಿಕ ಆಕರಗಳಾಗುತ್ತವೆ. ಚರಿತ್ರೆಕಾರರು ಈವರೆಗೆ ಚರಿತ್ರೆಯನ್ನು ಬರೆಯುವಾಗ, ಆ ಮೂಲಕ ಸಂಸ್ಕೃತಿಯನ್ನು ನಿರ್ವಚಿಸುವಾಗ ಗ್ರಾಮನಾಮಗಳ ಮಹತ್ವವನ್ನು ಗಮನಿಸಿದಂತಿಲ್ಲ. ಒಂದು ಭೌಗೋಳಿಕ ಪರಿಸರದ ಐತಿಹಾಸಿಕ ಅಂಶಗಳನ್ನು ತಿಳಿಯುವಾಗ ಶಾಸನಗಳಂತೆ, ಸ್ಥಳನಾಮಗಳೂ ತನ್ನ ಮಟ್ಟಿನ ಆಧಾರಗಳನ್ನು ನೀಡುತ್ತವೆ. ಚರಿತ್ರೆಯು ಇತರೆ ಎಲ್ಲ ಸಂಗತಿಗಳಿಂದ ಸತ್ಯವನ್ನು ಹೇಳುವಲ್ಲಿ ನಿರುತ್ತರವಾದಾಗ ಗ್ರಾಮನಾಗಳು, ಸ್ಥಳನಾಮಗಳು ಮಾತನಾಡುತ್ತವೆ. ಚರಿತ್ರೆಯ ಚೌಕಟ್ಟಿನಲ್ಲಿ ಚರಿತ್ರೆಗಾರರ ಗಮನ ಸೆಳೆಯದ ಈ ನಾಮಗಳಿಂದ ಪ್ರಾದೇಶಿಕ ಇತಿಹಾಸದ ಅಧ್ಯಯನ ಹಾಗೂ ಸ್ಥಳ ಸಂಸ್ಕೃತಿಯ ತಿಳಿಯುವಿಕೆಗೆ ಮೂಲ ಆಧಾರವಾಗುತ್ತವೆಂಬುದನ್ನು ಗಮನಿಸಬೇಕು.ಈ ವರೆಗೆ ಅಲ್ಲಿಇಲ್ಲಿ ಎಂಬಂತೆ ಔಪಚಾರಿಕ ಪ್ರಸ್ತಾಪದಿಂದ ಮಾತ್ರ ಉಳಿದುಕೊಂಡ ನಾಮಗಳನ್ನು ಸಂಸ್ಕೃತಿಯನ್ನು ಅರಿಯುವ, ಚರಿತ್ರೆ, ಪುರಾತತ್ವ ಪರಿಸರವನ್ನು ಅರಿಯುವ ಪ್ರಯತ್ನ ಈ ಮುಂದೆ ಸಾಗಬೇಕಾಗಿದೆ.

ಸ್ಥಳನಾಮಗಳನ್ನು ಬಹು ಮುಖ್ಯವಾಗಿ ಭಾಷಾವೈಜ್ಞಾನಿಕ ನೆಲೆಯಲ್ಲಿ ನೋಡಿ, ಅದರ ನಿಷ್ಪತ್ತಿ, ವಾರ್ಗಿಕ, ನಿರ್ದಿಷ್ಟಗಳ ಮೂಲಕ ಸಾಂಸ್ಕೃತಿಕ ಚಹರೆಗಳನ್ನು ಅರ್ಥ್ಯೆಸುವುದು ಒಂದು ಕ್ರಮವಾದರೆ, ಅಷ್ಟೇ ಪ್ರಮುಖವಾಗಿ ವಿಶಿಷ್ಟ ಐತಿಹಾಸಿಕ ಆಕರಗಳಾಗಿ ಸ್ವೀಕರಿಸುವುದು ಒಂದು ಮಾದರಿಯಾಗಿದೆ. ಈ ಕಾರಣದಿಂದಲೇ ಪ್ರಕೃತ ಲೇಖನದಲ್ಲಿ ಭಾಷಾನೆಲೆ ಹಾಗೂ ಪುರಾತತ್ವ ನೆಲೆ ಎಂಬ ಎರಡು ಪರಿಸರದಲ್ಲಿ ಒಂದು ಸ್ಥಳನಾಮವನ್ನು ಬಿಂದುವಾಗಿಟ್ಟುಕೊಂಡು, ಆ ಮೂಲಕ ಅದು ಸಂಧಿಸುವ ಮಾರ್ಗದಲ್ಲಿ ಸೃಷ್ಟಿಸಬಹುದಾದ ಫಲಿತಾಂಶ. ಅದರೊಂದಿಗೆ ನಾಡಿನ ಸಾಂಸ್ಕೃತಿಕ ಸಂದರ್ಭದ ಅನಾವರಣವನ್ನು ಕಂಡುಕೊಳ್ಳಬಹುದು.

ಕರ್ನಾಟಕವು ಚರಿತ್ರೆಯ ದೃಷ್ಟಿಯಿಂದ ಬಹು ಪ್ರಾಚೀನತೆಯನ್ನು ಹೊಂದಿದೆ. ಮಾನವನು ತಾನು ಅನಾಗಿರಿಕ ಹಂತದಿಂದ ನಾಗರಿಕ ಹಂತವನ್ನು ತಲುಪಿ, ಅಲೆಮಾರಿ ಜೀವನದಿಂದ, ವಾಸಿಸುವ ಸಂದರ್ಭಕ್ಕೆ ಸಂಸ್ಕೃತಿಯಲ್ಲಿ ‘ನೆಲೆಸುವಿಕೆ’ ಆರಂಭವಾಯಿತು. ಈ ನೆಲೆಸುವಿಕೆಯು ಆರಂಭದಲ್ಲಿ ಒಂಟಿತನದಲ್ಲಿದ್ದು, ಕ್ರಮೇಣ ಗುಂಪುಗಾರಿಕೆಯನ್ನು ಸೃಷ್ಟಿಸಿಕೊಂಡು ಅಲ್ಲಲ್ಲಿ ಬೆಳೆಯತೊಡಗಿತು. ಈ ಸಂದರ್ಭದಲ್ಲಿ ಆಯಾ ಗುಂಪುಗಳ ನೆಲೆಸುವಿಕೆಯ ಸ್ಥಳಕ್ಕೆ ಹೆಸರಿಡುವ ರೂಢಿ ಆರಂಭವಾಗಿರಬೇಕು. ಇದೇ ಮುಂದೆ ವಿಕಾಸ ಹೊಂದುತ್ತಾ ಗ್ರಾಮಗಳಾಗಿ ಮಾರ್ಪಟ್ಟು ವೈವಿಧ್ಯಮಯ ಹೆಸರುಗಳಿಗೆ ಕಾರಣವಾಯಿತು. ಈ ಹೆಸರುಗಳು ಬೌಗೋಳಿಕ ಸಂದಂರ್ಭದ ನೆಲ-ಜಲ, ಬೆಟ್ಟ-ಗುಡ್ಡ-ದಿನ್ನೆ, ಕೆರೆ-ಕಾಲುವೆ, ಮರ-ಗಿಡ ಹೀಗೆ ಹಲವಾರು ಹೆಸರುಗಳನ್ನು ಒಳಗೊಂಡಿದ್ದರೆ ಅದರ ಕವಲಾಗಿಯೇ ಇತಿಹಾಸದ ಅನೇಕ ಸಂಗತಿಗಳು ಗ್ರಾಮನಾಮಗಳಿಗೆ ಕಾರಣವಾಗಿಯೇ ಉಳಿದಿವೆ. ಅಂತಹ ಒಂದು ಮಾದರಿಯೇ ‘ಬೂದಿ’ಯಿಂದ ಆರಂಭವಾದ ಸ್ಥಳನಾಮವೆಂದು ಭಾವಿಸುವ ಮೂಲಕ ಆ ಹೆಸರಿನ ಒಟ್ಟು ಚಹರೆಯನ್ನು ಕೆಳಗಿನಂತೆ ವಿಶ್ಲೇಷಿಸಿಕೊಳ್ಳಲಾಗಿದೆ.

‘ಬೂದಿ’ ಪದಾರಂಬದಿಂದ, ಕರ್ನಾಟಕದಲ್ಲಿ ಸು-೮೦ (ಎಂಭತ್ತು) ಸ್ಥಳನಾಮಗಳಿವೆ.[1] ಇವೆಲ್ಲವೂ ಇಂದು ಜನವಸತಿಯನ್ನು ಹೊಂದಿವೆ. ಅಲ್ಲದೆ ಬೂದಿಯಿಂದ ಆರಂಭವಾಗುವ ಅನೇಕ ನಿರ್ವಸತಿ ಸ್ಥಳನಾಮಗಳೂ ಇವೆ. ಈ ‘ಬೂದಿ’ಯು ಹೇಗೆ ಸ್ಥಳ ನಾಮಗಳ ಮೇಲೆ ಪ್ರಭಾವ ಬೀರಿತೆಂಬುದು ಜಿಜ್ಞಾಸೆಯ ಸಂಗತಿ. ಅದನ್ನು ಕೆಲವಂಶಗಳ ಮೂಲಕ ತೀಳಿಯಬಹುದು.

ಬೂದಿದಿನ್ನೆಗಳು ಸೃಷ್ಟಿಗೊಂಡ ಬಗ್ಗೆ

ಬೂದಿದಿನ್ನಗಳು ಇರುವೆಡೆಯಲ್ಲಿ ಸಂಶೋಧನೆಯನ್ನು ಮಾಡಿದ ಪುರಾತತ್ವಜ್ಞರು ಇವುಗಳ ಸೃಷ್ಟಿಯ ಬಗೆಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಈ ಬೂದಿದಿನ್ನೆಗಳು ಸುಣ್ಣದ ಕಲ್ಲಿನ ಗಟ್ಟಿಗಳೆಂಬ ಅಥವಾ ಅವು ಶಿಲಾರೂಪ ತಳೆದ ವಸ್ತುಗಳೆಂಬ, ಜ್ವಾಲಾಮುಖಯಿಂದ ನಿರ್ಮಿತವಾದುದೆಂಬ ಹೇಳಿಕೆಗಳೂ ಇವೆ. ಈ ದಿನ್ನೆಗಳು ಶವಸಂಸ್ಕಾರ ಮಾಡಿದ್ದರಿಂದ ಉಂಟಾಗಿವೆಯೆಂದು ನ್ಯೂಬೋಲ್ಡ್ ಅಭಿಪ್ರಾಯ ಪಡುತ್ತಾರೆ?[2] ಆದರೆ ನಾಡಿನಾದ್ಯಂತ ಬೃಹತ್ ದಿನ್ನೆಯ ರೂಪದಲ್ಲಿ ದೊರೆಯುವ ಈ ಬೂದಿಯು ಶವಗಳನ್ನು ಸುಡುವುದರಿಂದಾಗಲು ಸಾಧ್ಯವೆ? ಅಂದರೆ ಮನುಕುಲದ ನಾಶದ ಪರಿಕಲ್ಪನೆ ಇಲ್ಲಿ ರೂಪಿಸಿಕೊಳ್ಳಬೇಕೆ? ಹಾಗಾದರೆ ಸಂಸ್ಕೃತಿಯು ವಿಕಾಸನ ಹೊಂದಿದ್ದು ಹೇಗೆ? ಎಂಬೆಲ್ಲಾ ಅನುಮಾನಗಳು ಮೂಡುವುದರಿಂದ, ಶವಸಂಸ್ಕಾರದ ಒಂದು ವಿಧಾನವಾಗಿ ದಹನ ಕ್ರಿಯೆ ಇರಬಹುದು. ಅದರ ಬೂದಿ ಅಲ್ಪ ಪ್ರಮಾಣದಲ್ಲಿ ದೊರಯಬಹುದು. ಆದರೆ ಬೃಹತ್ ಪ್ರಮಾಣದಲ್ಲಿರಲಾರದು. ಮಾನವನು ನಾಗರಿಕ ಹಂತವನ್ನು ತಲುಪಿದಾಗ ಕೃಷಿಯನ್ನು ಆರಂಭಿಸಿದ. ಈ ಕೃಷಿಯ ಹಂತದಲ್ಲಿ ಪ್ರಾಣಿಗಳ ಸಗಣಿಯನ್ನು ಗುಡ್ಡೆಯಾಆಗಿ ಒಟ್ಟುತ್ತಿದ್ದು ಕಾಲಾಂತರದಲ್ಲಿ ಆ ಸಗಣಿ ಒಣಗಿ ಅದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲುತ್ತಿತ್ತು ಮತ್ತು ಮತ್ತೊಂದು ಸ್ಥಳಕ್ಕೆ ಹೋಗುವಾಗ ಆ ಜನರು ಬೇಂಕಿ ಹಚ್ಚುತ್ತಿದ್ದರು. ಅದು ಮೆಲ್ಲಗೆ ಉರಿಯುತ್ತಾ ಕಿಟ್ಟಿಗಟ್ಟಿ ಬೂದಿಯಾಗುತ್ತಿತ್ತು ಎಂಬ ಅಂಶಗಳನ್ನು ಬ್ರೂಸ್‌ಫುಟ್‌ಒಪ್ಪುತ್ತಾರೆ. ಬಂಗಾರ ಮತ್ತು ಕಬ್ಬಿಣದ ಅದುರುಗಳನ್ನು ಕರಗಿಸುವ ಕೈಗಾರಿಕೆಗಳಿಂದಲೂ ಈ ಬೂದಿದಿನ್ನೆಗಳು ಉಂಟಾಗಿರಬೇಕು. ಇಂತಹ ಕೈಗಾರಿಕೆಗಳಿಗೆ ಸಂಬಂಧಿಸಿ ಕಮ್ಮಾರಚೇಡು, ಇಂಗಳದಹಾಳು, ಹೊನ್ನೂರು ಎನ್ನುವಂತಹ ಕಬ್ಬಿಣ, ತಾಮ್ರ, ಚಿನ್ನ ಮುಂತಾದ ಲೋಹಗಳ ತಯಾರಿಕಾ ಕೇಂದ್ರಗಳಿರುವುದನ್ನು ಸೂಚಿಸುವ ಸ್ಥಳನಾಮಗಳು ಕರ್ನಾಟಕದಲ್ಲಿ ಕಂಡುಬರುತ್ತವೆ. ಇಂತಹ ಕೈಗಾರಿಕ ನೆಲೆಯಲ್ಲಿಯೂ ಬೂದಿಯ ಅವಶೇಷಗಳು ಇರುವುದು ತಿಳಿಯುತ್ತದೆ.

ಕರ್ನಾಟಕದಲ್ಲಿ ಹೆಚ್ಚಾಗಿ ನದಿತೀರದಲ್ಲಿ ಈ ಬಗೆಯ ಬೂದಿದಿನ್ನೆಗಳು ಕಂಡುಬರುತ್ತವೆ. ಅದರಲ್ಲಿಯೂ ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿವೆ.‘ಬೂದಿ’ ಪದದಿಂದ ಆರಂಭವಾಗುವ ಗ್ರಾಮನಾಮಗಳು ಉತ್ತರ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಾಗಿವೆ. ಈ ಕಾರಣದಿಂದ ಈ ಭಾಗದ ಸಂಸ್ಕೃತಿಯು ಹೆಚ್ಚು ಪ್ರಾಚೀನತೆಯನ್ನು ಹೊಂದಿದೆ ಎನ್ನಬಹುದು. “ಇದುವರೆಗೆ ಕರ್ನಾಟಕದಲ್ಲಿ ೪೨ ಬೂದಿದಿನ್ನೆಗಳು ಕಂಡುಬಂದಿವೆ.”[3] ಇವೆಲ್ಲವೂ ನಿರ್ವಸತಿ ಪ್ರದೇಶಗಳು. ಆದರೆ ಗ್ರಾಮನಾಮಗಳ ಸಂಖ್ಯೆ ೮೦ ಇರುವುದನ್ನು ಕಾಣಬಹುದು. ಈ ಎಲ್ಲ ಗ್ರಾಮಗಳಲ್ಲಿ ಬೂದಿಕಿಟ್ಟಗಳಾಗಲಿ, ದಿನ್ನೆಗಳಾಗಿ ಇವೆಯಂದಲ್ಲ. ಕೆಲವು ಗ್ರಾಮಗಳಲ್ಲಿ ಮಾತ್ರ ಇವೆ. ಉಳಿದವು ಪಕ್ಕದ ದಿನ್ನೆಗಳ ಹೆಸರಿನಲ್ಲಿ ನಿರ್ದೇಶನಗೊಂಡಿವೆ. ಹಲವಾರು ಸ್ಥಳಗಳಲ್ಲಿ ಈ ಬೂದಿದಿಟ್ಟಗಳು ವಸತಿ ಸ್ಥಾನಗಳ ಅವಶೇಷಗಳ ಮೇಲೆಯೂ ಇವೆ. ಬೂದಿದಿನ್ನೆಗಳು ಸೃಷ್ಟಿಗೊಂಡ ಬಗ್ಗೆ ಅನೇಕ ಪುರಾಣಾತ್ಮಕ ಐತಿಹ್ಯಗಳು ಜಾನಪದರು ಹೇಳುತ್ತಾರೆ. ಚಿತೆಯ ಮೇಲಿಟ್ಟ ಮಹಾ ರಾಕ್ಷಸರನ್ನು ಸುಟ್ಟಿದ್ದರಿಂದಲೋ ಇಲ್ಲವೇ ರಾಮಾಯಣ, ಮಹಾಭಾರತ ಕಾವ್ಯಗಳಲ್ಲಿ ಬರುವ ಹಿಡಿಂಬಾಸುರ, ವಾಲಿ ಮುಂತಾದವರ ಶವಗಳನ್ನು ಸುಟ್ಟಿದ್ದರಿಂದಲೋ ರಚಿತವಾದವು ಎಂದು ಜನರು ದಂತಕಥೆಗಳನ್ನು ಹೇಳುತ್ತಾರೆ. ಈ ಬಗೆಯ ಐತಿಹ್ಯಗಳು ಸ್ಥಳನಾಮಗಳಿಗೂ ಆರೋಪಿಸುತ್ತಾರೆ.

‘ಬೂದಿ’ ಸಂಬಂಧಿತ ಎಡೆಗಳು ಸೃಷ್ಟಿಗೊಂಡ ಬಗೆ

‘ಬೂದಿ’ ಪದವಿರುವ ಎಷ್ಟೋ ಸ್ಥಳನಾಮಗಳು ಐತಿಹಾಸಿಕ ಹಾಗೂ ಪುರಾತತ್ತ ಶೋಧಕರಿಗೆ ಇತಿಹಾಸ ಪೂರ್ವ ಪ್ರಾಚೀನ ನಿವೇಷನಗಳನ್ನು ಪತ್ತೆಹಚ್ಚಲು ಸಹಾಯಕವಾಗಿವೆ.[4] ಇಂತಹ ನೆಲೆಗಳ ಪ್ರಾಗೈತಿಹಾಸಿಕತೆ ಗುರುತಿಸುವಾಗ ಇವು ಕೇವಲ ಪಶುಪಾಲನೆಯಿಂದ ಬಂದವು ಮಾತ್ರವಲ್ಲ. ವ್ಯವಸಾಯದ ಜೊತೆಗೆ ಪಶುಪಾಲನೆಯಿತ್ತೆಂದು ತಿಳಿದುಬರುತ್ತದೆ. ಅಲ್ಲಿ ಗುಡ್ಡೆ ಹಾಕಿದ ಬೂದಿಯನ್ನು ಪವಿತ್ರವೆಂದು ಕೆಲವು ಜನತೆಯು ಕಂಡಿದ್ದಿರಬೇಕು. ಈ ಕಾರಣದಿಂದ ಬೂದಿಯಿಂದ ಆರಂಭವಾಗುವ ಗ್ರಾಮನಾಮಗಳು ಉದಯವಾಗಿರಬೇಕು ಅಥವ ಬೂದಿಕಿಟ್ಟಗಳಿದ್ದುದರಿಂದ ಪ್ರಜ್ಞಾಪೂರ್ವಕವಾಗಿಯೂ ಯೋಗ್ಯವಾದ ಸ್ಥಳವನ್ನು ಆಯ್ದುಕೊಂಡು ಅವುಗಳಿಗೆ ಹೆಸರಿಟ್ಟಿರಬೇಕು. ಕೆಲವು ಕಡೆ ವಿಭೂತಿಯೆಂದೂ ಜನರು ಭಾವಿಸಿದ್ದಾರೆ. ಕಾರಣ ಬೂದಿ ಪದದಿಂದ ಆರಂಭವಾಗುವ ಸ್ಥಳನಾಮಗಳು ಬಹತೇಕ ಪುರಾತತ್ವ ಪರಿಸರವನ್ನೊಂದಿದ ಪ್ರಾಚೀನ ಮಾನವನ ನೆಲೆಗಳೆಂಬುದರಲ್ಲಿ ಅನುಮಾನವಿಲ್ಲ.[5] ಆದರೆ ಇತ್ತೀಚೆಗೆ ಕೆಲವು ಸಂಶೋಧಕರು ಬೂದಿಹಾಳು ಬೂದಿಪಡಗ ಎಂಬ ಸ್ಥಳನಾಮಗಳು ಬೌದ್ಧ ಧರ್ಮಕ್ಕೆ ಸಂಬಂದಿಸಿದಂತಹವು[6] ಎಂಬಂತಹ ತಪ್ಪು ಮಾಹಿತಿಯನ್ನು ನೀಡುವುದು ಕ್ಷೇತ್ರಕಾರ್ಯದ ಕೊರತೆಯನ್ನು ಹೇಳುತ್ತದೆ. ಕನ್ನಡ ನಾಡಿನಲ್ಲಿ ಬುದ್ಧ ಪಾದ, ಬುದ್ಧವಾಡಿಗೆ ಎಂಬಂತಹ ಬೌದ್ಧ ಸಂಬಂದಿ ಗ್ರಾನಾಮಗಳೂ ಇವೆ. ಅದೇನೇ ಇದ್ದರೂ ‘ಬೂ’ ದೀರ್ಘ ಅಕ್ಷರದಿಂದ ಆರಂಭವಾದ ಸ್ಥಳನಾಮ ಪುರಾತತ್ವಶೋಧದ ಮೂಲಕ ಒಂದು ಸಂಸ್ಕೃತಿಯ ಅಂತರ್ ಸಂಬಂಧ ಹೇಳುವ ಮೂಲಕ ಚರಿತ್ರೆಯ ನಿರ್ಮಾಣಕ್ಕೆ ಕಾರ್ಯಕಾರಣ ಬೆಸುಗೆಯನ್ನು ನೇಯುತ್ತದೆ.

ಬೂದಿಹಾಳು ಎಂಬಂತಹ ಸ್ಥಳನಾಮಗಳ ಸೃಷ್ಟಿಗೆ ಪ್ರಾದೇಶಿಕವಾಗಿ ನಾನಾ ರೀತಿಯಲ್ಲಿ ಸ್ಥಳಪುರಾಣಗಳು ಹುಟ್ಟಿಕೊಂಡಿವೆ. ಇವು ನೇರವಾಗಿ ಪುರಾತತ್ವಕ್ಕೆ ಆಧಾರವಾಗಲಾರವು. ಆದರೂ ಪುರಾತತ್ವ ಮತ್ತು ಸ್ಥಳಪುರಾಣ ಹತ್ತಿರದ ನಂಟುಹೊಂದಿ,, ಕೆಲವು ಎಳೆಗಳನ್ನು ನೀಡುವಲ್ಲಿ ಸಹಾಯಕವಾಗುತ್ತವೆ. ಐತಹ್ಯಗಳು ಪುರಾತತ್ವ ಶೋಧಕ್ಕೊಳಪಟ್ಟು ಸ್ಥಳನಾಮಗಳ ವೈಜ್ಞಾನಿಕ ಸತ್ಯವನ್ನು ಹೊರಗೆಡಹಬೇಕು. ಇಲ್ಲವಾದರೆ ಅವು ಮೌಖಿಕಪರಂಪರೆಯಲ್ಲಿ ವಿದ್ಯೆಯಾಗಿಯೇ ಉಳಿಯುತ್ತದೆ.

ಬೂದಿಕಣಮ: ಎಂಬ ಗ್ರಾಮ ನಾಮದ ಬಗ್ಗೆ ಒಂದು ಐತಿಹ್ಯ ಹೀಗಿದೆ. ಮಹಾಭಾರತದ ಐವರು ಪಾಂಡವರಲ್ಲಿ ಒಬ್ಬನಾದ ಮಹಾ ಪರಾಕ್ರಮಿ ಭೀಮಸೇನನು ಹಿಡಿಂಬಾಸುರ ಎಂಬ ದೈತ್ಯನನ್ನು ಸುಟ್ಟಿದ್ದರಿಂದ ಬೂದಿಕಣಮ ಎಂಬ ಊರು ಉದಯವಾಯಿತು.[7]

ಪತ್ರಬೂದಿಹಾಳು: ಪ್ರಾಚೀನಕಾಲದಲ್ಲಿ ಶಿವಪಾರ‍್ವತಿಯರು ಈ ಸ್ಥಳದಲ್ಲಿ ವಿಹರಿಸುತ್ತಿರಲು ಅಲ್ಲಿನ ವಾತಾವರಣ ಮನಕ್ಕೆ ನೆಮ್ಮದಿ ತಂದಿತು. ಶಿವನು ಧ್ಯಾನಕ್ಕೆ ಕುಳಿತನು. ಮನ್ಮಥನು ಶಿವನ ಚಿತ್ತವನ್ನು ಕದಡಿಸಲು ತನ್ನ ಹೂ ಬಾಣವನ್ನು ಪರಶಿವನ ಮೇಲೆ ಪ್ರಯೋಗಿಸಿದನು. ಇದರಿಂದಾಗಿ ಕೋಪಗೊಂಡು ತನ್ನ ಮೂರನೆಯ ಕಣ್ಣಿನಿಂದ ಕಾಮನನ್ನು ದಹಿಸಿದನು. ಅಂದಿನಿಂದ ಇಲ್ಲಿ ಬೂದಿಯ ರಾಶಿಯು ಏರ್ಪಟ್ಟು ಈ ಊರಿಗೆ ಬೂದಿಹಾಳೆಂದು ಹೆಸರಾಯಿತು.[8]

ಹೀಗೆ ಅನೇಕ ಪ್ರಾದೇಶಿಕ ಐತಿಹ್ಯ-ಪುರಾಣಗಳು ಸತ್ಯದಿಂದ ದೂರ ಉಳಿಯುತ್ತವೆ. ಪತ್ರಬೂದಿಹಾಳೆಂಬುದು ಪಾತ್ರೆಬೂದಿಹಾಳು. ಇಲ್ಲಿ ಪಾತ್ರೆಯಂತಹ ಮಡಿಕೆಯ ವಸ್ತುಗಳು, ಬೂದಿ ದೊರೆತಿವೆ ಎಂಬುದು ಸತ್ಯ. ಹೀಗೆ ‘ಬೂದಿ’ ಗ್ರಾಮನಾಮಗಳು ಸೃಷ್ಟಿಗೊಂಡವೆನ್ನಬಹುದು.

ಕರ್ನಾಟಕದಲ್ಲಿ ಕಂಡುಬರುವ ೮೦ ಸ್ಥಳನಾಮಗಳಲ್ಲಿ ಉತ್ತರ ಪದವಾಗಿ ಬಂದಂತಹ ವಾರ್ಗಿಕಗಳು ಹೀಗಿವೆ:

ಬೂದಿ + ಹಾಳು
ಬೂದಿ + ಊರು
ಬೂದಿ + ದಿನ್ನೆ
ಬೂದಿ + ಕೊಪ್ಪ
ಬೂದಿ + ಕೋಟೆ
ಬೂದಿ + ಹಳ್ಳಿ
ಬೂದಿ + ಪುರ
ಬೂದಿ + ಕೆರೆ
ಬೂದಿ + ತಿಟ್ಟು
ಬೂದಿ + ಹಟ್ಟಿ
ಬೂದಿ + ಗಾಂವ
ಬೂದಿ + ಗುಂಪ/ಗುಪ್ಪ/ಕುಪ್ಪ

ಹಾಳು ದಿನ್ನೆ: ತಿಟ್ಟು ಎಂಬಂತಹ ವಾರ್ಗಿಕವಿರುವ ಸ್ಥಳನಾಮಗಳು ಬಹುತೇಕ ಪ್ರಾಚೀನ ನೆಲೆಗಳೆಂದೂ, ಕೋಟೆ-ಕೊಪ್ಪಲು, ಕೆರೆ-ಗಾಂವ-ಊರು ಎಂಬ ವಾರ್ಗಿಕವಿರುವ ಸ್ಥಳಗಳು ಅರ್ವಾಚೀನವೆಂದು ಗುರುತಿಸಬಹುದು. ಹೆಚ್ಚಾಗಿ ಇವೆಲ್ಲವೂ ಭೌಗೋಳಿಕ ಅಂಶಗಳಿಂದ ಕೂಡಿರುವುದರಿಂದ ಪ್ರಾಚೀನ ನೆಲೆಗಳೆಂದು ಗುರುತಿಸಬಹುದು. ಎಲ್ಲಿ ವಾರ್ಗಿಕಗಳಲ್ಲಿ ಹಾಳು>ಪಾಳು ಎಂಬುದು ಅತ್ಯಂತ ಪ್ರಾಚೀನ ನೆಲೆಯನ್ನು ಸೂಚಿಸುತ್ತದೆ. ಹಟ್ಟಿಯು ನಂತರದ ಸ್ಥಾನ ಪಡೆಯುತ್ತದೆ. ಹೀಗೆ ವಾರ್ಗಿಕಗಳ ಮೂಲಕ ಆಯಾಯ ಸ್ಥಳನಾಮಗಳ ಪ್ರಾಚೀನತೆಯನ್ನು ತಿಳಿಯಬಹುದು.

ಹೀಗೆ ಈ ಬೂದಿಗುಡ್ಡೆ ಅಥವ ಸ್ಥಳನಾಮಗಳು ನವಶಿಲಾಯುಗದ, ಶಿಲಾಯುಗದ, ಶಿಲಾತಾಮ್ರ ಯುಗದ ಮಾನವ ವಸತಿಯ ಹಾಗೂ ಆ ಸಂಸ್ಕೃತಿಯ ಪ್ರತೀಕವಾಗಿ ನಿಲ್ಲುತ್ತವೆ. ಇದರಿಂದ ಸ್ಥಳನಾಮಗಳ ಪುರಾತಾತ್ವಿಕ ಅಧ್ಯಯನ ಅತ್ಯಂತ ಅಗತ್ಯಗಳಲ್ಲೊಂದು ಎಂಬುದನ್ನು ಗಮನಿಸಬೇಕಾಗುತ್ತವೆ.

ಕರ್ನಾಟಕದ ಬೂದಿ ಪದಾರಂಭದ ಸ್ಥಳನಾಮಗಳ ಪಟ್ಟಿ

ಗುಲ್ಬರ್ಗ
ಬೂದೂರು – ಯಾದಗಿರಿ ತಾಲೂಕು
ಬೂದನೂರು – ಶಹಾಪುರ ತಾಲೂಕು
ಬೂದಿಹಾಳು – ಶಹಾಪುರ ತಾಲೂಕು
ಬೂದಿಹಾಳು – ಸುರಪುರ ತಾಲೂಕು

ಕೋಲಾರ
ಬೂದಿಕೋಟೆ – ಬಂಗಾರಪೇಟೆ ತಾಲೂಕು
ಬೂದಿಹಳ್ಳಿ – ಮಾಲೂರು ತಾಲೂಕು
ಬೂದಾಳು – ಶಿಡ್ಲಘಟ್ಟ ತಾಲೂಕು

ಚಿತ್ರದುರ್ಗ
ಬೂದನಿಕೆ – ಹರಿಹರ ತಾಲೂಕು
ಬೂದಿಪುರ – ಹೊಳಲ್ಕೆರೆ ತಾಲೂಕು
ಬೂದಿಹಾಳು – ಹೊಸದುರ್ಗ ತಾಲೂಕು
ಬೂದಿನ ಹೊಲ, ಚಿಪ್ಪಿನ ಕೆರೆ – ಚಿತ್ರದುರ್ಗ ತಾಲೂಕು

ಚಿಕ್ಕಮಗಳೂರು
ಬೂದನಿಕೆ – ಚಿಕ್ಕಮಗಳೂರು ತಾಲೂಕು

ತುಮಕೂರು
ಬೂದನಹಳ್ಳಿ – ಕುಣಿಗಲ್ ತಾಲೂಕು
ಬೂದಮರನ ಹಳ್ಳಿ – ಕೊರಟಗೆರೆ ತಾಲೂಕು
ಬೂದಗಾಂವ – ಕೊರಟಗೆರೆ ತಾಲೂಕು
ಬೂದಿ ಬೆಟ್ಟ – ಪಾವಗಡ ತಾಲೂಕು
ಬೂದಿ ಗುಡ್ಡದ ಕಾವಲು – ಸಿರಾ ತಾಲೂಕು

ಧಾರವಾಡ
ಬೂದಿಹಾಳು – ನರಗುಂದ ತಾಲೂಕು
ಬೂದಿಹಾಳು – ಮಂಡರಗಿ ತಾಲೂಕು
ಬೂದಿಹಾಳು – ರೋಣ ತಾಲೂಕು
ಬೂದಿಹಾಳು – ಶಿರಹಟ್ಟಿ ತಾಲೂಕು
ಬೂದಿಗಟ್ಟಿ – ಹಾವೇರಿ ತಾಲೂಕು

ಬಳ್ಳಾರಿ
ಪತ್ರಬೂದಿಹಾಳು – ಬಳ್ಳಾರಿ ತಾಲೂಕು
ತಗ್ಗಿನ ಬೂದಿಹಾಳು – ಬಳ್ಳಾರಿ ತಾಲೂಕು
ಬೂದಿಗುಪ್ಪ – ಸಿರಗುಪ್ಪ ತಾಲೂಕು
ಬೂದನೂರು – ಹಡಗಲಿ ತಾಲೂಕು
ಬೂದಿಹಾಳು – ಹರಪನಹಳ್ಳಿ ತಾಲೂಕು

ಬೆಳಗಾವಿ
ಬೂದಿಹಾಳು – ಗೋಕಾಕ ತಾಲೂಕು
ಬೂದಿಹಾಳು – ಚಿಕ್ಕೋಡಿ ತಾಲೂಕು
ಬೂದಿಹಾಳು – ಬೈಲಹೊಂಗಲ ತಾಲೂಕು
ಬೂದನೂರು – ರಾಮದುರ್ಗ ತಾಲೂಕು
ಬೂದಿಹಾಳು – ರಾಯಭಾಗ ತಾಲೂಕು
ಬೂದಿಕೊಪ್ಪ – ಸವದತ್ತಿ ತಾಲೂಕು

ಬೆಂಗಳೂರು
ಬೂದಿಗೆರೆ – ದೇವನಹಳ್ಳಿ ತಾಲೂಕು
ಬೂದಿಗೆರೆ ಅಮಾನಿ ಕೆರೆ – ದೇವನಹಳ್ಳಿ ತಾಲೂಕು
ಬೂದಿಹಾಳ – ನೆಲಮಂಗಲ ತಾಲೂಕು

ಮಂಡ್ಯ
ಬೂದಗುಪ್ಪ – ಮದ್ದೂರು ತಾಲೂಕು
ಬೂದನೂರು – ಮಂಡ್ಯ ತಾಲೂಕು

ಮೈಸೂರು
ಬೂದಂಬಳ್ಳಿ-೧ – ಚಾಮರಾಜನಗರ ತಾಲೂಕು
ಬೂದಂಬಳ್ಳಿ-೨ – ಚಾಮರಾಜನಗರ ತಾಲೂಕು
ಬೂದಿತಿಟ್ಟು – ಚಾಮರಾಜನಗರ ತಾಲೂಕು
ಬೂದಹಳ್ಳಿ – ಟಿ. ನರಸೀಪುರ ತಾಲೂಕು
ಬೂದನಪುರ – ಹೆಗ್ಗಡದೇವನ ಕೋಟೆ ತಾಲೂಕು

ರಾಯಚೂರು
ಬೂದಗುಂಪ – ಕೊಪ್ಪಳ ತಾಲೂಕು
ಬೂದಿಹಾಳು – ಕೊಪ್ಪಳ ತಾಲೂಕು
ಬೂದಿಗುಂಪ – ಗಂಗಾವತಿ ತಾಲೂಕು
ಬೂದನಹಾಳು – ದೇವದುರ್ಗ ತಾಲೂಕು
ಬೂದ್ದಿನ್ನೆ – ಮಾನ್ವಿ ತಾಲೂಕು
ಬೂದ್ದಿನ್ನೆ – ಮಾನ್ವಿ ತಾಲೂಕು
ಬೂದೂರು – ಯಲಬುರ್ಗ ತಾಲೂಕು
ಬೂಡಿದಿದಿನ್ನೆ – ರಾಯಚೂರು ತಾಲೂಕು
ಬೂಡಿದಿಪಾಡು – ರಾಯಚೂರು ತಾಲೂಕು
ಬೂದ್ದಿನ್ನಿ-೧- ಲಿಂಗಸೂರು ತಾಲೂಕು
ಬೂದ್ದಿನ್ನಿ-೨- ಲಿಂಗಸೂರು ತಾಲೂಕು
ಬೂದ್ದಿನ್ನಿ – ಸಿಂಧನೂರು ತಾಲೂಕು
ಬೂದ್ನಿಹಾಳು – ಸಿಂಧನೂರು ತಾಲೂಕು

ಬಿಜಾಪುರ
ಬೂದಿಹಾಳು – ಇಂಡಿ ತಾಲೂಕು
ಬೂದನಗಡ – ಬಾದಾಮಿ ತಾಲೂಕು
ಬೂದಿಹಾಳು – ಬಾದಾಮಿ ತಾಲೂಕು
ಬೂದಿಹಾಳು- ಬಸವನ ಬಾಗೇವಾಡಿ ತಾಲೂಕು
ಎಸ್.ಬೂದಿಹಾಳು – ಬೀಳಗಿ ತಾಲೂಕು
ಎಸ್.ಎಚ್.ಬೂದಿಹಾಳು- ಬೀಳಗಿ ತಾಲೂಕು
ಬೂದಿಹಾಳು-೧- ಮುದ್ದೇಬಿಹಾಳ್ ತಾಲೂಕು
ಬೂದಿಹಾಳ್-೨- ಮುದ್ದೇಬಿಹಾಳ್ ತಾಲೂಕು
ಬೂದ್ನಿ P.D- ಮುಧೋಳ ತಾಲೂಕು
ಬೂದ್ನಿ P.M -ಮುಧೋಳ ತಾಲೂಕು
ಬೂದ್ನಿ P.K -ಮುಧೋಳ ತಾಲೂಕು
ಬೂದ್ನಿ (ಖುರ್ದು) – ಮುಧೋಳ ತಾಲೂಕು
ಬೂದಿಹಾಳು P.T- ಸಿಂದಗಿ ತಾಲೂಕು
ಬೂದಿಹಾಳು P.H – ಸಿಂದಗಿ ತಾಲೂಕು
ಬೂದಿಹಾಳ ಡೋಣ – ಸಿಂದಗಿ ತಾಲೂಕು
ಬೂದಿಹಾಳ (ಇನಾಂ) – ಹುನಗುಂದ ಯಾಲೂಕು
ಬೂದಿಹಾಳ S.K.- ಹುನಗುಂದ ತಾಲೂಕು

ಶಿವಮೊಗ್ಗ
ಬೂದಿಗೆರೆ – ಶಿವಮೊಗ್ಗ ತಾಲೂಕು
ಬೂದಿಃಹಾಳು – ಹೊನ್ನಾಳಿ ತಾಲೂಕು

ಹಾಸನ
ಬೂದನೂರು (ಕ.ಹೋ) – ಅರಕಲಗೂಡು ತಾಲೂಕು
ಬೂದನೂರು (ಹಾರೋ) – ಅರಕಲಗೂಡು ತಾಲೂಕು
ಬೂದನಹಳ್ಳಿ – ಆಲೂರು ತಾಲೂಕು

 

[1] ಕರ್ನಾಟಕ ಗ್ರಾಮ ಸೂಚಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ೧೯೮೫

[2] ಸುಂದರ. ಅ., ಕರ್ನಾಟಕ ಚರಿತ್ರೆ , ಸಂ-೧, ಕನಸನಡ ವಿಶ್ವವಿದ್ಯಾಲಯ, ಹಂಪಿ, ಪುಟ ೧೮೪

[3] ಅದೇ. ಪು-೧೮೭

[4] ಚಿದಾನಂದಮೂರ್ತಿ, ಎಂ., ವಾಗರ್ಥ, ಬಾಪ್ಕೋ ಪ್ರಕಾಶನ, ಬೆಂಗಳೂರು, ೧೯೮೧, ಪು-೩೩

[5] ನಾಗರಾಜು, ಎಸ್. ಪುರಾತತ್ವ ಮತ್ತು ದೇಶೀಸಂಸ್ಕೃತಿ ವಿಚಾರ ಸಂಕಿರಣ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೧.೦೨.೨೦೦೨

[6] ವಿಶ್ವನಾಥ, ಸಕಲೇಶಪುರ ಪರಿಸರದ ಸ್ಥಳನಾಮಗಳು, ದೇವಿ ಪ್ರಕಾಶನ, ಮೈಸೂರು, ೧೯೯೬, ಪು-೫೩

[7] ಚೆನ್ನಬಸಪ್ಪ-ಬಳ್ಳಾರಿ ವಯಸ್ಸಯ-೪೯

[8] ಕಟ್ಟಿಬಸಪ್ಪ-ಪತ್ರಬೂದಿಹಾಳು ವಯಸ್ಸು-೬೬