ಚಿತ್ರದುರ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ‘ಮೊಳಕಾಲ್ಮೂರು’ ನೆರೆಯ ಆಂಧ್ರದ ಗಡಿ ಭಾಗದವರೆಗೂ ಚಾಚಿಕೊಂಡಿದೆ. ಗಡಿಭಾಗದ ಅತಿ ಹಿಂದುಳಿದ ತಾಲೂಕಾದ ಮೊಳಕಾಲ್ಮೂರು ಭಾಷೆ, ಸಂಸ್ಕೃತಿ ಮತ್ತು ಆದ್ಯತೆಯಿಂದ ದಿವ್ಯನಿರ್ಲಕ್ಷೆಗೆ ಒಳಗಾಗಿದೆ.

ಮೊಳಕಾಲ್ಮೂರು ಒಂದು ಐತಿಹಾಸಿಕ ಪಟ್ಟಣ. ಬೆಟ್ಟದ ತಪ್ಪಲಿನ ಪ್ರಾಚೀನ ಗ್ರಾಮವಾಗಿದ್ದ ಮೊಳಕಾಲ್ಮೂರು ವಿವಿಧ ರಾಜವಂಶಗಳ ಕಾಲದಲ್ಲಿ ಬೆಳವಣಿಗೆ ಆಗಿದ್ದುದು ಗಮನಾರ್ಹ. ಇದು ವಿವಿಧ ಭಾಷೆ, ಸಂಸ್ಕೃತಿಗಳ ಸಂಗಮಕ್ಷೇತ್ರ. ಇಲ್ಲಿ ತೆಲುಗು, ಮರಾಠಿ, ಉರ್ದು, ತಮಿಳು, ಕನ್ನಡ, ಲಂಬಾಣಿ ಇತರ ಭಾಷೆಗಳನ್ನೂ ಗುರುತಿಸಬಹುದು.

‘ಮೊಳಕಾಲ್ಮೂರು’ ಎಂಬ ಹೆಸರು ಬರಲು ಕೆಲವು ಮೂಲ ಉದಾಹರಣೆಗಳನ್ನು ನೋಡಬಹುದು. ನಿಖರವಾಗಿ ಯಾವುದೇ ಆಧಾರ ಈ ಸ್ಥಳವನ್ನು (ನಾಮ ನಿಷ್ಪತ್ತಿ) ಉಲ್ಲೇಖಿಸುವುದಿಲ್ಲ. ಸ್ಥಳೀಯರ ಪ್ರಕಾರ ಹಿಂದೆ ಶತ್ರುಗಳು ಬೆಟ್ಟವನ್ನು ಹತ್ತದಂತೆ ಮೂರನೇ ಸಾಲಿನ ಕೋಟೆಯ ಕೆಳಗೆ ಬಂಡೆಗೆ ಎಣ್ಣೆ ಸುರಿದು ರಾಗಿ ಹಾಕುತ್ತಿದ್ದರಂತೆ. ಕೋಟೆ ಹತ್ತಲು ಬಂದ ಶತ್ರುಗಳು ಕಾಲುಜಾರಿ ಮೊಣಕಾಲು ಮುರಿಯುವಂತೆ ಬೀಳುತ್ತಿದ್ದರಿಂದ ‘ಮೊಳಕಾಲ್ಮೂರು’ ಎಂದಾಯಿತು.[1] ಮತ್ತೊಂದು ಹೇಳಿಕೆಯಂತೆ ರಾಜನೊಬ್ಬ ಪೂರ್ಣ ಗರ್ಭಿಣಿಯಾದ ತನ್ನ ರಾಣಿಯೊಂದಿಗೆ ವನವಿಹಾರಕ್ಕೆ ಹೋದಾಗ ಅಲ್ಲಿಯೇ ಆಕೆ ಮರದ ಕೆಳಗೆ ಗಂಡುಮಗುವಿಗೆ ಜನ್ಮವೀಯುತ್ತಾಳೆ.. ಆದರೆ ಹಣೆಯ ಮೇಲೊಂದು ಕಣ್ಣಿದ್ದುದರಿಂದ ಅವನ ಹಣೆಗೆ ಪಟ್ಟಿಕಟ್ಟಲಾಗದೆ ಬಾಸಿಂಗವನ್ನು ಮೊಣಕಾಲಿಗೆ ಕಟ್ಟಿದರಂತೆ. ಹೀಗೆ ಮೂರುಕಣ್ಣುಳ್ಳವನಿಗೆ ಪಟ್ಟ ಕಟ್ಟಿದ್ದರಿಂದ ಮೊಣಕಾಲ್ಮೂರು ಎಂದಾಯಿತಂತೆ. ಈ ಬಗ್ಗೆ ಕಾಲ, ವ್ಯಕ್ತಿ ಮತ್ತಿತರ ವಿವರಗಳ ಅಗತ್ಯವಿದೆ ಅನ್ನಿಸುತ್ತದೆ. ಇವುಗಳಲ್ಲದೆ ಒಂದು ಚಾರಿತ್ರಕವಾದ ವಿವರಣೆಯನ್ನು ಇಲ್ಲಿ ಕೊಡಬಹುದು. ಮೌರ್ಯವಂಶದ ಅಶೋಕನ ಮೊಮ್ಮಕ್ಕಳಾದ ಮುರ ಮತ್ತು ಕುಲ್ಹಾಣರಿಬ್ಬರಿಂದ ಈ ಗ್ರಾಮಕ್ಕೆ ಮುರುಕುಲ್ಹಾಣೂರು > ಮುರುಕುಲನೂರು > ಮುಲಕಾಲ್ಮೂರು > ಮೊಳಕಾಲ್ಮೂರು ಎಂದಾಗಿರಬೇಕು. ಹೀಗೆ ಸ್ಥಳ ನಾಮದ ಬಗೆಗೆ ಅನೇಕ ಉಲ್ಲೇಖಗಳಿವೆ. ಇಂದು ಸಣ್ಣ ಪಟ್ಟಣವಾಗಿರುವ ಮೊಳಕಾಲ್ಮೂರು ಜಲ, ಸಸ್ಯ, ಬೆಟ್ಟಗುಡ್ಡಗಳಿಂದ ಕೂಡಿದೆ.

ಆದಿ ಇತಿಹಾಸ

ಏಷ್ಯಾ ಖಂಡದಲ್ಲಿ ಚಿತ್ರದುರ್ಗ ಅತಿ ಪ್ರಾಚೀನ ಜನವಸತಿಯಾಗಿದ್ದ ಪ್ರದೇಶವೆಂದು ಪುರಾತತ್ವಜ್ಞರು ಅಭಿಪ್ರಾಯಿಸಿದ್ದಾರೆ. ಬೇಟೆ, ಪಶುಪಾಲನೆ ಮತ್ತು ಕೃಷಿಯ ವಿವಿಧ ಹಂತಗಳಲ್ಲಿ ಮಾನವ ಸಮುದಾಯ ನಾನಾ ಬಗೆಯಾಗಿ ಜೀವಿಸಿದ್ದುದು ಗಮನಾರ್ಹ.ಸಹಸ್ರಾರು ವರ್ಷಗಳಿಂದಲೂ ಮಾನವ ಇಲ್ಲೇ ನೆಲೆನಿಂತು ತನ್ನ ಕುರುಹುಗಳನ್ನು ಬಿಟ್ಟು ಹೋಗಿರುವನು.ನೂತನ ಶಿಲಾಯುಗ, ಶಿಲಾ-ತಾಮ್ರಯುಗ, ಬೃಹತ್ ಶಿಲಾಯುಗಗಳ ಅವಧಿಯಲ್ಲಿ ರಚಿಸಲಾದ ಗವಿವರ್ಣ ಚಿತ್ರ, ಮಡಿಕೆ, ಕುಡಿಕೆ ಚಿತ್ರಗಳನ್ನು ಇಲ್ಲಿ ನೋಡಬಹುದು.ಬ್ರಹ್ಮಗಿರಿಮ ಜಟಂಗಿರಾಮೇಶ್ವರ, ರೊಪ್ಪ, ಸಿದ್ದಾಪುರ ನೆಲೆಗಳು ಶಿಲಾಯುಗದ ಪ್ರಮುಖ ನಿವೇಶನಗಳಾಗಿವೆ.

ಈ ಪ್ರದೇಶದಲ್ಲಿ ಆರಂಭದ ರಾಜಕೀಯ ಆಳ್ವಿಕೆಯನ್ಜು ಮೌರ್ಯರಿಂದಲೇ ಗುರತಿಸಬಹುದು. ಅಶೋಕನ ಕಾಲದಲ್ಲಿ ‘ಇಸಿಲ’ ಎಂಬ ಪಟ್ಟಣ ಈ ಪ್ರದೇಶದಲ್ಲಿತ್ತು. ದಕ್ಷಿಣ ಭಾರತದಲ್ಲಿ ಅತಿ ಮಹತ್ವ ಪಡೆದ ಸ್ಥಳಗಳೆಂದರೆ: ಬ್ರಹ್ಮಗಿರಿ, ಅಶೋಕ ಸಿದ್ಧಾಪುರ ಎನ್ನಲಾಗಿದೆ. ಅಶೋಕನ ಶಾಸನಗಳು ಈ ಪರಿಸರದಲ್ಲಿದ್ದು ಕ್ರಿ.ಪೂ. ೨೫೩ ರಲ್ಲಿ ಅಶೋಕ ಚಕ್ರವರ್ತಿ ಬೌದ್ಧಧರ್ಮಾವಲಂಬಿಯಾಗಿದ್ದು ಧರ್ಮ ಸಂದೇಶವನ್ನು ಇವುಗಳಲ್ಲಿ ತಿಳಿಸಿದ್ದಾನೆ. ದೇವಾನಾಂಪ್ರಿಯ, ಪ್ರಿಯದರ್ಶಿ ಆದ ಅಶೋಕ ತನ್ನ ಮಹಾಮಾತ್ರರಿಗೆ ನಾನಾ ಸಂಘವನ್ನು ಸೇರಿದ್ದು, ದೇವದೇವತೆಗಳು ಸುಳ್ಳೆಂದು ಅನ್ನಿಸಿ, ಚಿಕ್ಕ ದೊಡ್ಡ ಮನುಷ್ಯರು ಉತ್ತಮ ಗುರಿಯನ್ನಿಟ್ಟುಕೊಂಡು ದುಡಿಯಲು ಅನೇಕ ಸಂಗತಿಗಳನ್ನು ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಬರೆಸುತ್ತಾನೆ. ಅವನ ಆಶಯ ಅಪೂರ್ವವಾದುದು.ತಂದೆತಾಯಿಗಳಿಗೆ ವಿಧೇಯನಾಗಿರಬೇಕು, ಪ್ರಾಣಿಗಳಿಗೆ ದಯೆ ತೋರಬೇಕು, ನಿಜವನ್ನು ಹೇಳಬೇಕು, ಧರ್ಮಗುಣಗಳ ಅನುಸರಿಕೆ, ಶಿಷ್ಯ ಗುರುವನ್ನು ಗೌರವಿಸುವುದು, ಬಂಧುಗಳಿಗೆ ಆದರ, ಗೌರವ ಹೀಗೆ ಸನಾತನ ಪದ್ದತಿಯ ಬಗೆಗೆ ತನ್ನ ಪ್ರಜೆಗಳಿಗೆ ತಿಳಿಸುತ್ತಾನೆ. ಇದು ಹೆಮ್ಮೆಯ ಸಂಗತಿ.

ಇತಿಹಾಸ ಕಾಲ

ಮೌರ್ಯರ ಕಾಲದ ಸಂಸ್ಕೃತಿ ಈ ಪ್ರದೇಶದ ಮೇಲೆ ಬೀರಿದ ದಟ್ಟ ಪ್ರಭಾವವನ್ನು ಮರೆಯುವಂತಿಲ್ಲ. ಅಂದಿನ ಜನಸಾಮಾನ್ಯರ ರಾಜಪ್ರಭುತ್ವದವರ ಜೀವನಕ್ರಮ ಬೇರೆ ಬೇರೆಯಾಗಿದ್ದುದನ್ನು ಗುರುತಿಸಬಹುದಾಗಿದೆ. ಮೊರೇರ ಮನೆಗಳೆಂದು ಕರೆಯುವ ಚಿಕ್ಕ ಕಟ್ಟಡಗಳು ಈ ತಾಲೂಕಿನಲ್ಲಿವೆ. ನೀಲಗಿರಿಯ ಬಡಗರೂ, ಇಂತಹ ಹೆಸರಿನಿಂದ ಕರೆಯುವರು. ಮೌರ್ಯರ ದಿಣ್ಣೆಯೆಂದು ಹೆಸರಿರುವ ಕೆಲವು ಚಕ್ರಾಕಾರದ ಅಸ್ಥಿಭಾರಗಳಿವೆ. ಇವು ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಚಿತ್ರದುರ್ಗ ತಾಲೂಕುಗಳಲ್ಲಿ ಕಂಡುಬಂದಿವೆ. ಕೋನಸಾಗರ, ಭಟ್ರಹಳ್ಳಿ ಮೊದಲಾದ ಗ್ರಾಮಗಳಲ್ಲಿ ಮೌರ್ಯರ ಕಾಲದ ನಿವೇಶಗಳಿವೆ. ಇಲ್ಲಿ ಪೂರ್ವ ನಿವಾಸಿಗಳಾದ ಬೇಡರ ಗುಡಿಗಳಿದ್ದುವೆಂದು ಊಹಿಸಲಾಗಿದೆ. ಏಕೆಂದರೆ ಈ ಜನರು ಸಾಮಾನ್ಯವಾಗಿ ಗುಂಡಗಿರುವ ಅಸ್ಥಿಭಾರದ ಕಟ್ಟಡವನ್ನು ಕಟ್ಟಿ ಮಧ್ಯೆ ನೆಟ್ಟು ಆ ಕಂಬವನ್ನೇ ದೇವರೆಂದು ಪೂಜಿಸುವ ಪದ್ಧತಿಯುಳ್ಳವರು ಎಂದು ತಿಳಿಸಲಾಗಿದೆ.[2] ಈ ಪ್ರದೇಶದಲ್ಲಿ ಕಾರುಕಲ್ಲು, ಎಲೆಕಲ್ಲು, ಮಾಸ್ತಿಕಲ್ಲು ಮತ್ತು ವೀರಗಲ್ಲುಗಳಾಗಿರುತ್ತಿದ್ದವು ಇವು ಚಾರಿತ್ರಿಕ ಘಟನೆಗಳನ್ನು ಸಂಕೇತಿಸುತ್ತದ್ದವು

ಕಾರುಕಲ್ಲು : ಆಯಾ ಗ್ರಾಮವನ್ನು ಕಟ್ಟಿದಾಗ ನಿಲ್ಲಿಸಿದ ಸ್ಮಾರಕ ಚಿಹ್ನೆ

ಎಲೆಕಲ್ಲು : ಆಯಾ ಗ್ರಾಮದ ಸರಹದ್ದನ್ನು ತೋರಿಸುವ ಕಲ್ಲು. ವರ್ಷಕ್ಕೊಮ್ಮೆ ಆ ಊರಿನ ಪಟೇಲ, ಕುಳವಾಡಿಯಾಗಲಿ ಕಾರುಕಲ್ಲಿಗೆ ಪೂಜೆ ಮಾಡುವ ಪದ್ಧತಿಯಿತ್ತು.

ಮಾಸ್ತಿಕಲ್ಲು : ಸ್ತ್ರೀಯರು ಸಹಗಮನ ಮಾಡಿದ ಸ್ಮಾರಕ ಚಿಹ್ನೆಗಳು. ಸಹಗಮನ ಕೈಗೊಳ್ಳು ಚಿತ್ರದಲ್ಲಿ ಅವಳು ಕೈಯಲ್ಲಿ ನಿಂಬೆಯ ಹಣ್ಣನ್ನು ಹೆಬ್ಬರಳಿಗೆ ಮಧ್ಯೆ ಇರುವಂತೆ ಸಂಪ್ರದಾಯ ಕಾಣಬಹುದು. ಗಂಡ-ಹೆಂಡತಿಯ ಚಿತ್ರಣಗಳಿರುವುದು ಸಹಜ. ಈ ವಿಭಾಗದಲ್ಲಿ ಇವು ವ್ಯಾಪಕವಾಗಿ ಕಂಡುಬರುತ್ತವೆ.

ವೀರಗಲ್ಲು: ವೀರನು ಮರಣ ಹೊಂದಿರುವ ರೀತಿ, ಅದರ ಮೇಲೆ ಅಪ್ಸರೆಯರು ವೀರನನ್ನು ಸ್ವರ್ಗಕ್ಕೆ ಕೊಂಡೊಯ್ಯುವುದನ್ನು ಚಿತ್ರಿಸಲಾಗಿದೆ. ವೀರನ ಮರಣದ ಬಗೆ, ಉಡುಗೆ-ತೊಡುಗೆ, ಆದುಧ, ಯುದ್ಧದ ರೀತಿಗಳನ್ನು ಕಾಣಬಹುದು.

ಶಾತವಾಹನರ ತರುವಾಯ ಇಲ್ಲಿನ ಚರಿತ್ರೆ ಬೆಳಕು ಕಾಣುವುದು ಕದಂಬರಿಂದ. ಕದಂಬರ ಅರಸ ಮಯೂರ ಶರ್ಮನು ವಿದ್ಯಾಭ್ಯಾಸಕ್ಕಾಗಿ ಕಂಚಿಗೆ ಹೋದಾಗ (ಘಟಿಕಾ ಸ್ಥಾನ) ಅಲ್ಲಿ ಪಲ್ಲವ ಅರಸರ ಯಜ್ಞ-ಯಾಗಾದಿಗಳಿಂದ ಅವಮಾನಕ್ಕೊಳಗಾಗಿ ಕ್ಷತ್ರಿಯ ಧರ್ಮ ಸ್ವೀಕರಿಸಿ ಮಯೂರ ವರ್ಮನಾಗುತ್ತಾನೆ. ಮೊಳಕಾಲ್ಮೂರು ಪಕ್ಕದ ಉಚ್ಛಂಗಿದುರ್ಗ (ಒರಾರ ಗುಡ್ಡ, ಪೆದಾರ ಗುಡ್ಡ, ಹಿರೇ ಆರ್ಯರ ಗುಡ್ಡ) ದಲ್ಲಿ ರಾಜ್ಯಸ್ಥಾಪನೆ ಮಾಡಿದ ನುಂಕೆದೇವರು ನೆಲಸಿದ್ದ ಗುಡ್ಡಕ್ಕೆ ನುಂಕೆಮಲೆ ಎಂದು ಕರೆದರು. ಮೊಳಕಾಲ್ಮೂರಿನ ಉತ್ತರದಲ್ಲಿರುವ ಪರ್ವತ ಶ್ರೇಣಿಗೆಕದಂಬಗುಡ್ಡ ಎನ್ನುವರು. ಇದಕ್ಕೆ ತ್ರಿಕೂಟಾದ್ರಿ ತ್ರಿಪರ್ವತ ಎನ್ನುವುದುಂಟು. ಈ ಬಗ್ಗೆ ಚರ್ಚೆಯಿದೆ. ಬುಕಾನನ್ ಎಂಬ ವಿದ್ವಾಂಸ ಕದಂಬರು ಬೇಡರು ಆಗಿದ್ದರೆಂದು ಹೇಳಿದ್ದಾನೆ. ಈ ಹಿನ್ನಲೆಯಲ್ಲಿ ಕ್ಷತ್ರಿಯ ಧರ್ಮ ಸ್ವೀಕರಿಸಿದ ಮಯೂರ ಬೇಡರ ಸಹಾಯದಿಂದ ರಾಜ್ಯಕಟ್ಟಿ ಆಳ್ವಕೆ ನಡೆಸಿದನೆಂದು ಹೇಳಬಹುದು. ಜೈನರ ರಾಜಧಾನಿಯಾಗಿದ್ದ ಮೊಳಕಾಲ್ಮೂರನ್ನು ವಿವಿಧ ಅರಸರು ಆಳ್ವಿಕೆ ನಡೆಸಿದ್ದಾರೆ. ಕದಂಬ ಮನೆತನಕ್ಕೆ ಸೇರಿದ ಅಜವರ್ಮನು ಚಾಳುಕ್ಯರ ಜಯಸಿಂಹನಿಗೆ ಅಧೀನನಾಗಿ ಆಳಿದನೆಂದು ತಿಳಿದು ಬರುತ್ತದೆ. ಅರ್ಜುನವರ್ಮ ಮತ್ತು ಬೆಂಚರಸರನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ನುಂಕಮಲೆಯ ಮಲ್ಲಿಕಾರ್ಜುನ ದೇವಾಲಯ ಹಿಂಭಾಗದ ಬಂಡೆಯ ಮೇಲಿರುವ ಶಾಸನವು ತಮ್ಮ ಗುರುಗಳಾದ ಗಜಿಯಕಪ್ಪಡೆ ಮತ್ತು ಸರ್ವೇಶ್ವರಿಗೆ ನುಂಕುಮಲೆ ಬೆಟ್ಟದಲ್ಲಿನ ಜಮೀನು ಮರಗಳನ್ನು ದತ್ತಿಯಾಗಿ ಕೊಟ್ಟು ಲಂಕೇಶ್ವರ ದೇವಸ್ಥಾನವನ್ನು ಧೂಪ ದೀಪಾರಾಧನೆಗಳಿಂದ ನೋಡಿಕೊಳ್ಳಬೇಕೆಂದು ತಿಳಿಸಲಾಗಿದೆ.[3]

ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಮತ್ತು ಕುಮ್ಮಟದ ಅರಸರ ಆಳ್ವಿಕೆಗೂ ಈ ಪ್ರದೇಶ ಒಳಪಟ್ಟಿತು. ಕುಮ್ಮಟದ ಅರಸರಾದ ಮುಮ್ಮಡಿ ಸಿಂಗೇಯನಾಯಕ, ಕಂಪಿಲರಾಯ ಮತ್ತು ಕುಮಾರ ರಾಮನ ಮೂಲ ನೆಲೆ ಮೊಳಕಾಲ್ಮೂರು ಪ್ರದೇಶವಾಗಿತ್ತು. ಇಲ್ಲಿನ ಜಟಂಗಿ ರಾಮೇಶ್ವರವು ಇವರ ಮನೆದೇವರು. ಕುಮಾರರಾಮನ ಕುದುರೆ ಹೆಜ್ಜೆಗಳು, ಕಂಪಿಲರಾಯನ ಹೊಂಡ, ಕುಮಾರರಾಮನ ಗರಡಿ ಮನೆ ಮೊದಲಾದವು ಇಲ್ಲಿವೆ. ಕುಮ್ಮಟದುರ್ಗದ ಮುಮ್ಮಡಿ ಸಿಂಗೇಯನಾಕನಿಗೆ ಕರ್ನೂಲು, ಕಡಪ, ನೆಲ್ಲೂರು ಪ್ರದೇಶಗಳು ಸೇರಿದಂತೆ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳೂ ಸೇರಿದ್ದವು. ಹರಿಹರ, ದಾವಣಗೆರೆ, ಜಗಳೂರು, ಮೊಳಕಾಲ್ಮೂರು, ರಾಯದುರ್ಗ, ಸಂಡೂರು ಇವರ ಕಾಲದ ಪ್ರಮುಖ ಪಟ್ಟಣಗಳಾಗಿದ್ದವು.

ವಿಜಯನಗರ ಕಾಲದಲ್ಲಿ ಅಧೀನಕ್ಕೊಳಪಟ್ಟು, ಸ್ಥಳೀಯ ಅರಸನಿಂದ ಪರಿಪಾಲನೆಗೊಳಗಾಗಿತ್ತು. ಪ್ರೌಢದೇವರಾಯ ಬೇಟಿಗೆಂದು ಇಲ್ಲಿಗೆ ಬಂದು ಮಾಚೇನಹಳ್ಳಿಯನ್ನು ದತ್ತು ಬಿಟ್ಟನೆಂಬುದು (ಗಜಬೇಟೆಗಾರ) ತಿಳಿದುಬರುತ್ತದೆ. ವೀರನರಸಿಂಹನಿಂದ ಕೃಷ್ಣದೇವರಾಯನ್ನು ಕೊಲ್ಲಲು ಆದೇಶಿತನಾಗಿದ್ದ ಮಂತ್ರಿ ತಿಮ್ಮರಸು ಕೃಷ್ಣನನ್ನು ತಂದು ನೆಲಮಾಳಿಗೆಯಲ್ಲಿಟ್ಟಿದ್ದು ಈ ಪ್ರದೇಶದಲ್ಲಿ. ಕೃಷ್ಣದೇವರಾಯನ ಪ್ರಸಿದ್ಧ ಮಂತ್ರಿ ತಿಮ್ಮರಸುವಿನ ಊರು ಈಗಿನ ರಾಯದುರ್ಗ ಇರಬೇಕು. ನಂತರ ಈ ಪ್ರದೇಶ ರಾಯದುರ್ಗ ಮತ್ತಿತರ ಸ್ಥಳೀಯ ಪಾಳೆಯಗಾರರ ಒಡೆತನಕ್ಕೆ ಹೋಗಿ ರಾಯದುರ್ಗದ ಕೃಷ್ಣಪ್ಪನಾಯಕ ಇದನ್ನು ಆಳುತ್ತಾನೆ. ಗಂಗ, ನೊಳಂಬರ ಕಾಲದಲ್ಲಿ ಸಾಂಸಕೃತಿಕವಾಗಿ ಈ ಪ್ರದೇಶ ಬೆಳಕಿಗೆ ಬಂದಿತ್ತು. ಕ್ರಿ.ಶ. ೧೧ನೇ ಶತಮಾನದ ಸುಮಾರಿಗೆ ಹೊಟ್ಟೆಪ್ಪನಾಯಕ ಇಲ್ಲಿ ಆಳ್ವಿಕೆ ಮಾಡುತ್ತಾನೆ. ಹೀಗಿರುವಾಗ ನಾಯಕನ ಹಳ್ಳಿಯ ಪಾಳೆಯಗಾರ ಬೂದಿ ಮಲ್ಲಪ್ಪನಾಯಕನ ಆಳ್ವಿಕೆ ಸಮೃದ್ದವಾಗಿತ್ತೆಂದು ಹೇಳಲಾಗುತ್ತದೆ. ಇವನಿಗೆ ರಾಯದುರ್ಗದ ಯರ‍್ರಿಬೊಮ್ಮಳನಾಯ್ಕನ ಮಗಳು ಬೊಮ್ಮವ್ದ ನಾಗತಿಯನ್ನು ಕೊಟ್ಟಿದ್ದು. ಈ ಸಂಬಂಧದ ಕುರುಹಾಗಿ ಯರ‍್ರಿಬೊಮ್ಮಳನಾಯಕ ಹಟ್ಟಿಯವರಿಂದ ೩೦೦ ಕುರಿ, ೭೦೦ ಆಕಳು ಪಡೆದು ಮೊಳಕಾಲ್ಮೂರು ಸೀಮೆಯನ್ನು ಬಿಟ್ಟುಕೊಡುತ್ತಾನೆ. ಇನ್ನೊಂದು ಮೂಲದ ಪ್ರಕಾರ ಮಲ್ಲನಾಯ್ಕನು ರಾಯದುರ್ಗದ ಬೊಮ್ಮನಾಯ್ಕನಿಗೆ ೨೦೦೦ ಕೆಂಪು ಹಸು, ೧೦೦೦ ಬಿಳಿಯ ಹಸುಗಳನ್ನು ಕೊಟ್ಟು, ಮೊಳಕಾಲ್ಮೂರು ಬೆಟ್ಟವನ್ನು ಪಡೆದನೆಂದು, ಈತನೇ ಬೆಟ್ಟದ ಮೇಲೆ ಕೋಟೆಯನ್ನು ಕಟ್ಟಸಿದ್ದನು. ನಂತರ ಬಿಜ್ಜುಗತ್ತಿ ಭರಮಣ್ಣನಾಯಕನು ಮೊಳಕಾಲ್ಮೂರನ್ನು ವಶಮಾಡಿಕೊಂಡು ನಾಯಕನಹಟ್ಟಿಯನ್ನು ಬಿಟ್ಟುಕೊಟ್ಟನಂತೆ.[4]

ಮಲ್ಲನಾಯಕನು ಚಿತ್ರಸುರ್ಗ ಪಾಳೆಯಗಾರರ ಕಡೆಯವಳಾದ ಲಕ್ಷ್ಮವ್ವನಾಗತಿಯ ಮಗ, ಇವನು ದುರ್ಗದವರಂತೆ ‘ಕಸ್ತೂರಿ’ ಎಂಬ ಅಭಿದಾನವನ್ನು ಇಟ್ಟುಕೊಂಡಿದ್ದನು. ಇವನು ತನ್ನ ತಾಯಿ ಹೆಸರಲ್ಲಿ ಕೆರೆ ಕಟ್ಟಿಸಿ, ಮೊಳಕಾಲ್ಮೂರು ಬೆಟ್ಟದ ಬಸವನ ಬಾಗಿಲ ಬಳಿ ಯಾರಾದರೂ ಅಕೃತ್ಯದಲ್ಲಿ ತೊಡಗಿದರೆ ಶಿಕ್ಷೆ ವಿಧಿಸುವುದಾಗಿ ಶಾಸನ ಕೆತ್ತಿಸಿದ. ಇವನು ಇಲ್ಲಿಯ ಕೋಟೆಯನ್ನು ಕಟ್ಟಿಸಿದನಂತೆ.

ಕ್ರಿ.ಶ.೧೬೨೯ ರಲ್ಲಿ ಚಿತ್ರದುರ್ಗದ ನಾಯಕ ಅರಸನಾದ ಭರಮಣ್ಣ ನಾಯಕನು ರಾಯದುರ್ಗದ ವೆಂಕಟಪತಿನಾಯಕನ ಹುಟ್ಟಡಗಿಸುವ ನೆಪಮಾಡಿಕೊಂಡು ಬೆಟ್ಟಸೀಮೆಯ ಮೊಳಕಾಲ್ಮೂರು ಗಡಿ ಸೀಮೆಯವರೆಗೂ ತಮ್ಮದೇ ಆಧಿಪತ್ಯ ಸ್ಥಾಪಿಸುವ ಉದ್ದೇಶದಿಂದ ಹಟ್ಟಿ ಪಾಳೆಯಗಾರರಿಗೆ ಸೇರಿದ ಈ ಪ್ರದೇಶವನ್ನು ಆಕ್ರಮಿಸುತ್ತಾನೆ. ನಾಯಕನಹಟ್ಟಿ ತಿಪ್ಪೇಸ್ವಾಮಿ ನಾಯಕನಹಟ್ಟಿಗೆ ಬರುವ ಪೂರ್ವದಲ್ಲಿ ರಾಯದುರ್ಗ, ಮೊಳಕಾಲ್ಮೂರು ಮತ್ತು ಕೋನಸಾಗರದ ಭಾಗದಲ್ಲಿದ್ದರು. ಮೊಳಕಾಲ್ಮೂರು ತಾಲೂಕಿನ ಕೋನಸಾಗರದ ಬಳಿ ತಂಗಿದ್ದರಿಂದ ಆ ಸ್ಥಳ ‘ಬಿಳಿನೀರು ಚಿಲುಮೆ’ ಪುಣ್ಯಕ್ಷೇತ್ರವಾಗಿ ಬೆಳೆದುಬಂದಿದೆ. ಅವದೂತನಾದ ತಿಪ್ಪಯ್ಯನು ಮ್ಯಾಸ ಬೇಡರಿಗೆ ಸೇರಿದವನೆಂಬ ಅಭಿಪ್ರಾಯವೂ ಇದೆ.

ಮೊಳಕಾಲ್ಮೂರು ಪ್ರದೇಶ ವಿವಿಧ ಕಾಲಘಟ್ಟಗಳಲ್ಲಿ ತನ್ನ ಕ್ಷಿತಿಜವನ್ನು ವಿಸ್ತರಿಸಿ ಕೊಂಡಿತು. ಚಿತ್ರದುರ್ಗದ ಕೊನೆಯ ಅರಸ ರಾಜಾವೀರ ಮದಕರಿನಾಯಕನವರೆಗೂ ಈ ಪ್ರದೇಶ ಒಳಪಟ್ಟಿದ್ದಿತು. ಚಿತ್ರದುರ್ಗದ ಪತನಾನಂತರ ಹೈದರಾಲಿ ಕೈಸೇರಿತು. ಟಿಪ್ಪುವು ಆಂಗ್ಲರಿಂದ ಸೋತಾಗ ಆಂಗ್ಲರು ಮತ್ತು ಮೈಸೂರು ಒಡೆಯರ ವಶವಾಯಿತು. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಚಿಸಿದ ಫೌಜುದಾರಿಯಲ್ಲಿ ಮೊಳಕಾಲ್ಮೂರು ಒಂದಾಗಿದ್ದು ೧೮೮೬ ರಲ್ಲಿ ಇದು ಚಿತ್ರದುರ್ಗ ಜಿಲ್ಲೆಯಲ್ಲಿ ವಿಲೀನಗೊಂಡಿತು.

ಮೊಳಕಾಲ್ಮೂರಿನಲ್ಲಿ ಬೇಡರ ವಂಶಕ್ಕೆ ಸೇರಿದ ಪಾಳೆಯಗಾರರು ಆಳ್ವಿಕೆ ನಡೆಸಿದ ಬಗ್ಗೆ ಬ್ರಿಟಿಷ್ ವರದಿಗಳು ಸಾಕ್ಷಿಯಾಗಿವೆ. ೧೮೭೬ ರಲ್ಲಿ ಇಂಥ ಪಾಳೆಯಗಾರರ ಮನೆತನಗಳ ಬಗ್ಗೆ ಮೈಸೂರು ಸಂಸ್ಥಾನದಲ್ಲಿ ವರದಿಯನ್ನು ಸಿದ್ಧಪಡಿಸಲಾಗಿತ್ತು. ಅದರಲ್ಲಿ ಮೊಳಕಾಲ್ಮೂರು ಒಂದಾಗಿದೆ. ಈ ಮನೆತನಕ್ಕೆ ಸೇರಿದ ವಾರಸುದಾರರು ಮೊಳಕಾಲ್ಮೂರು, ಬೊಮ್ಮಲಿಂಗನಹಳ್ಳಿ, ಯರ್ಚೇನಹಳ್ಳಿ ಮೊದಲಾದ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಕಾಟಪ್ಪನಾಯಕ ಮತ್ತು ಭರಮಪ್ಪನಾಯಕ ಮೊಳಕಾಲ್ಮೂರು ರಾಜಮನೆತನದ ಇಬ್ಬರಿಗೆ ಇವರ ಮಲತಾಯಿ ರಂಗಮ್ಮ ನಾಗತಿಯ ಮರಣದ ನಂತರ ಸರ್ಕಾರ ಪಿಂಚಣಿಯನ್ನು ಕೊಡುತ್ತದೆ.[5] ಕ್ರಿ.ಶ. ೧೯೧೦ರಲ್ಲಿ ವಿಭಾಗೀಯ ಪಿಂಚಣಿಗಳನ್ನು ರೂ. ೮೪.೬೦ಗಳನ್ನು ಮೊಳಕಾಲ್ಮೂರು ಪಾಳೆಯಗಾರರ ಕುಟುಂಬದ ಕೇಶವನಾಯಕ ಮತ್ತು ಭರಮಪ್ಪನಾಯಕರಿಗೆ ಕೊಡುತ್ತಾರೆ.[6] ಮೊಳಕಾಲ್ಮೂರು ಪಾಳೆಯಗಾರ ಮನೆತನಕ್ಕೆ ಹತ್ತಿರದವರಾದ ರಾಯದುರ್ಗದವರಿಗೂ ೧೯೧೫-೧೬ ರಲ್ಲಿ ಪಿಂಚಣಿ (ಮಾಶಾಸನ) ಯನ್ನು ಕೊಟ್ಟಿದ್ದರು. ೧೯೨೦ ರಲ್ಲಿ ರಾಯದುರ್ಗದ ಪಾಳೆಯಗಾರರ ಶ್ರೀಮತಿ ವೆಂಕಟಕೃಷ್ಣಮ್ಮನವರು ತೀರಿಕೊಂಡಾಗ ಇವರ ಹತ್ತಿರದ ಸಂಬಂಧಿ ಪಿ.ಎನ್. ದಿವಾಕರನಾಯಕರಿಗೆ ರೂ. ೧೯-೧೫.೯ ರಂತೆ ಮಾಶಾಸನ ಕೊಡಲು ೧೯೨೦ರಲ್ಲಿ ಆದೇಶಿಸಿದರು. ಇಷ್ಟಲ್ಲದೆ ಮೊಳಕಾಲ್ಮೂರು ಪಾಳೆಯಗಾರ ಕುಟುಂಬದ ಧರ್ಮಪ್ಪನಾಯಕರು ತೀರಿಕೊಂಡಾಗ ಅವನ ಶವಸಂಸ್ಕಾರಕ್ಕಾಗಿ ೧೯೩೦ರಲ್ಲಿ ರೂ. ೩೪೪ಗಳನ್ನು ಕೊಡುತ್ತಾರೆ. ಹೀಗೆ ರಾಯದುರ್ಗ ನಂಜಪ್ಪ ನಾಯಕನಿಗೂ ಲಭಿಸಿತು. ಇಂದಿಗೂ ಮೊಳಕಾಲ್ಮೂರು ತಾಲೂಕಿನ ಬೊಮ್ಮಲಿಂಗನಹಳ್ಳಿ, ಯರ್ಚೇನಹಳ್ಳಿಗಳಲ್ಲಿ ಪಾಳೆಯಗಾರರ ವಂಶಸ್ಥರು ನೆಲೆಸಿದ್ದಾರೆ. ಇವರ ಬಳಿ ಸಣ್ಣ ಪುಟ್ಟ ಕಾಗದ ಪತ್ರಗಳಿವೆ.

ಸ್ವಾತಂತ್ರ್ಯ ಲಭಿಸಿದ ಬಳಿಕ ಮೊಳಕಾಲ್ಮೂರು ಪ್ರದೇಶದಲ್ಲಿ ಚುನಾವಣೆಗಳು ನಡೆಯುತ್ತವೆ. ಎ. ಭೀಮಪ್ಪನಾಯಕ, ಹೊ.ಚಿ. ಬೋರಯ್ಯ, ಎಸ್. ನಿಜಲಿಂಗಪ್ಪ, ಪಟೀಲ್ ಪಾಪನಾಯಕ, ಪೂರ್ಣಮುತ್ತಪ್ಪ, ಎನ್.ವೈ. ಗೋಪಾಲಕೃಷ್ಣ ಮೊದಲಾದ ಶಾಸಕರು ಜನ ಸೇವೆ ಮಾಡಿರುವದು ಸ್ಮರಣೀಯ. ಇಂದಿಗೂ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯ್ತಿಗಳ ಸದಸ್ಯರು ತಮ್ಮ ಅನುಪಮ ಸೇವೆಯನ್ನು ಈ ಭಾಗಕ್ಕೆ ಸಮರ್ಪಿಸಿಕೊಂಡಿದ್ದಾರೆ. ಆಧುನಿಕತೆ ಧಾಳಿ ಮಾಡಿದ ಸಂದರ್ಭದಲ್ಲಿ ಕೈಗಾರಿಕೆ, ವ್ಯಾಪಾರ ಮತ್ತು ಶೈಕ್ಷಣಿಕ ಪರಿಸ್ಥಿತಿಗಳಿಂದ ಈ ಭಾಗ ಪ್ರಗತಿಯ ಹಾದಿಗೆ ಮುಂದಾಯಿತು. ಈ ಎಲ್ಲಾ ಅಂಶಗಳಿಂದ ಇಲ್ಲಿನ ಮಹತ್ವವನ್ನು ದಾಖಲಿಸಲು ಸಂತೋಷವೆನಿಸುತ್ತದೆ.

ಹೀಗೆ ಮೊಳಕಾಲ್ಮೂರು ತಾಲೂಕು ಸದಾ ಬರಗಾಲದಿಂದ ತತ್ತರಿಸಿದರೂ ಇಲ್ಲಿನ ಜನಜೀವನ ಸುಧಾರಣೆಯತ್ತ ಬರುತ್ತಿರುವುದು ಗಮನಾರ್ಹ. ರಂಗಯ್ಯನ ಗುಡ್ಡ ಜಲಾಶಯವು ಈ ಭಾಗದ ಜನಸಮುದಾಯಗಳಿಗೆ ಮರುಜೀವ ತಂದಿದೆ. ದೈನಂದಿನ ಬದುಕಿನೊಡನೆ ತಮ್ಮ ಪ್ರಾಚೀನ ಕುರುಹುಗಳನ್ನು ಹುಡುಕಿಕೊಳ್ಳುವ ಮನೋಬಾವ ಈ ಭಾಗದಲ್ಲಿ ಮೇಳೈಸಿರುವುದು ವಿರಳ. ಇಲ್ಲಿನ ಭವ್ಯ ಚರಿತ್ರೆ ಮುಂದೆ ತಲೆಮಾರಿಗೆ ಸ್ಫೂರ್ತಿ ಎಂಬುದಕ್ಕೆ ಬ್ರಹ್ಮಗಿರಿ, ರೊಪ್ಪ, ಜಟಂಗಿರಾಮೇಶ್ವರ, ಸಿದ್ಧಾಪುರ, ಇಸಿಲ, ನುಂಕಮಲೆ ಮೊದಲಾದವುಗಳನ್ನು ಹೆಸರಿಸಬಹುದು. ಆಧುನಿಕತೆಯ ಪ್ರಭಾವದೊಡನೆ ತಮ್ಮ ಚಾರಿತ್ರಿಕ ಆಸಕ್ತಿಯನ್ನು ಕಳೆದುಕೊಂಡಿಲ್ಲ.

ಚಾರಿತ್ರಿಕ ನೆಲೆಗಳು

ಮೊಳಕಾಲ್ಮೂರು

ಕಲ್ಲು ಬಂಡೆಗಳ ಮೇಲೆ ಈ ಊರು ನಿರ್ಮಾಣವಾಗಿದೆ. ಸುತ್ತಲೂ ರಕ್ಷಣಾ ಗೋಡೆ-ಕೋಟೆ ಪ್ರದೇಶವು ಆವರಿಸಿದೆ. ಸಣ್ಣ-ಪುಟ್ಟ ಬೆಟ್ಟಗುಡ್ಡಗಳಿಂದ ದೇವಾಲಯ, ಗುಡಿ-ಗೋಪುರಗಳಿಂದ, ಕಲ್ಲಿನ ಕಂಬ, ದ್ವಾರಗಳಿಂದ ಕಾಣುತ್ತದೆ. ಇಲ್ಲಿನ ನುಂಕೆಭೈರವನ ಬೆಟ್ಟ ಸುಮಾರು ೨೩೬೩ ಅಡಿ ಎತ್ತರದಲ್ಲಿದೆ. ಉತ್ತರ ಭಾರತದಿಂದ (ಗೋರಖನಾಥ) ಬಂದ ಗೋಸಾಯಿಗಳು ಇಲ್ಲಿ ನೆಲೆಸರುವರು. ಕ್ರಿ.ಶ. ೧೦ನೇ ಶತಮಾನದಲ್ಲಿ ಈ ದೇವಾಲಯ ಕದಂಬರ ರಾಜಧಾನಿಯಾಗಿತ್ತು. ಆ ಕುರುಹುಗಳು ಇಲ್ಲಿವೆ. ನೇಯ್ಗೆಗೆ ಹೆಸರಾದ ಮೊಳಕಾಲ್ಮೂರು ರೇಷ್ಮೆ ಉದ್ದಿಮೆಯಲ್ಲಿ ಉನ್ನತ ಸ್ಥಾನ ಪಡೆದಿದೆ. ನುಂಕೆಮಲೆ ಬೆಟ್ಟದಲ್ಲಿ ಕಾಪಾಲಿಕ ಪರಂಪರೆಯ ಬೈರಾಗಿಗಳ ಮಠವಿದೆ. ಸಿದ್ಧೇಶ್ವರಸ್ವಾಮಿಯ ಶಿಲ್ಪ ನಿಂತ ಭಂಗಿಯಲ್ಲಿದ್ದು, ವೀರಶೈವರು ಇದರ ಪೂಜೆ ಮಾಡುವರು. ಈ ಬೆಟ್ಟದಲ್ಲಿ ಕೋಟೆಯಿದ್ದು, ಪಶ್ಚಿಮ ದಿಕ್ಕಿಗೆ ಮಲ್ಲಿಕಾರ್ಜುನ ದೇವಾಲಯವಿದೆ. ಇದರ ಪೂರ್ವಕ್ಕೆ ತುಪ್ಪದಮ್ಮನ ದೇವಾಲಯವಿದೆ. ಶ್ರೀ ಹರಳಯ್ಯನ ಮಂಟಪವೂ ಇದ್ದು ಪ್ರಥಮ ಪೂಜೆ ಈತನಿಗೆ ಸಲ್ಲುವುದು. ಈ ಪಟ್ಟಣದಲ್ಲಿ ಹಳೆಯ ಕೋಟೆ, ಬುರುಜುಗಳಿವೆ. ಬೆಟ್ಟದಮೇಲೆ ಕೋಟೆ, ಅರಮನೆ, ನಿವೇಶನ, ಕೋಟೆ ಮಾರಮ್ಮ ಇತರ ಸ್ಮಾರಕಗಳನ್ನು ನೋಡಬಹುದು. ಇಲ್ಲಿರುವ ಕೆರೆಯಲ್ಲಿ ಶಾಸನವಿದ್ದು ಅದರಲ್ಲಿ ಕಾಳಿದಾಸ ಒಂದು ವರ್ಷ ಬೆಟ್ಟದ ಮೇಲಿದ್ದು, ‘ಮೇಘಧೂತ’ ಕಾವ್ಯ ರಚಿಸಿ ಅದರಲ್ಲಿ ‘ಜನಕತನಯಾ ಸ್ನಾತಪುಣ್ಯೋದಕೇಷು’, ‘ಸ್ನಿಗ್ಧಚ್ಛಾಯಾತರುಷ’, ‘ರಾಮಗಿರ‍್ಯಾಶ್ರಮೇಷು’ ಎಂದೆಲ್ಲಾ ವರ್ಣಿಸಲಾಗಿದೆ. ಈ ಬೆಟ್ಟದಲ್ಲಿ ಕೂಗುವ ಬಂಡೆ, ಕಾಳಿದಾಸ ಹೊಗಳುವ ಯಮಕ ಶಾಸನ, ಇತರ ಅಪೂರ್ವ ಸ್ಮಾರಕಗಳಿವೆ. ಚಾಲುಕ್ಯ, ಹೊಯ್ಸಳ, ವಿಜಯನಗರದವರು ಆಳಿದ ಕುರುಹುಗಳಿವೆ. ರಾಮದುರ್ಗ, ಹಟ್ಟಿ ಪಾಳೆಯಗಾರರಿಗೂ ಈ ಪ್ರದೇಶ ಸೇರಿತ್ತು. ಈ ಪಟ್ಟಣ ಮತ್ತು ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ.

ಬ್ರಹ್ಮಗಿರಿ

ಚಿನ್ನಹಗರಿ ನದಿಯ ಬಲದಂಡೆಯ ಮೇಲೆ ಬ್ರಹ್ಮಗಿರಿ ಬೆಟ್ಟವಿದೆ. ಇದರ ಪರಿಸರದಲ್ಲಿ ಮಾನವನ ಪ್ರಾಚೀನ ಸಂಸ್ಕೃತಿ ನೆಲೆಗಳ ಆವಾಸ ಸ್ಥಾನಗಳಿವೆ. ರಾಮಾಯಣದ ಜಟಾಯು ರಾವಣನೊಡನೆ ಹೋರಾಡಿ ಮಡಿದಾಗ ರಾಮ ಸಂಸ್ಕಾರ ಮಾಡಿದ ಬಗ್ಗೆ ಐತಿಹ್ಯಗಳಿವೆ. ಅಶೋಕನ ಸಾಮ್ರಾಜ್ಯಕ್ಕೆ ಈ ಭಾಗ ಸೇರಿದ್ದತು. ಈ ಪ್ರದೇಶದಲ್ಲಿ ‘ಇಸಿಲ’ ಎಂಬ ನಗರವಿತ್ತು. ಇದು ಮೌರ್ಯರ ಉಪರಾಜಧಾನಿ (ದಕ್ಷಿಣ) ಹಾಗೂ ಬೌದ್ಧಮತದ ಕೇಂದ್ರ ಸ್ಥಳವಾಗಿತ್ತೆಂದು ಊಹಿಸಲಾಗಿದೆ. ಬ್ರಹ್ಮಗಿರಿ ಬೆಟ್ಟದ ಆವರಣದಲ್ಲಿ ಅರಮನೆಯಿದೆ.. ಇದಕ್ಕೆ ಮಠ ಎನ್ನುತ್ತಾರೆ. ಇಲ್ಲಿ ತ್ರಿಶಂಕೇಶ್ವರ ದೇವಾಲಯವು ಇದೆ. ಶಾಸನವು ಇಲ್ಲಿದ್ದು, ಬೆಟ್ಟದ ಮೇಲಿಂದ ನೋಡಿದಾಗ ಚಿನ್ನಹಗಿರಿ, ವೇದಾವತಿಗಳ ಸಂಗಮ ಕಾಣುತ್ತವೆ. ಎಂ.ಎಚ್. ಕೃಷ್ಣ, ಮಾರ್ಟಿಮರ್‌ವ್ಹೀಲರ್, ಮಜುಂದಾರ್ ಇಲ್ಲಿ ಉತ್ಖನನ ನಡೆಸಿ ಆಂಧ್ರನಾಗರೀಕತೆಯ ಉಗಮ ಕೇಂದ್ರವೆಂದು ಹೇಳಿದ್ದಾರೆ. ಕುಮಾರರಾಮನ ಐತಿಹಾಸಿಕ ರೊಪ್ಪದ ಕೋಟೆಯಿದ್ದು, ಅವನ ಗರಡಿ ಮನೆಯ ಇದೆ. ಬ್ರಹ್ಮಗಿರಿಯ ಕೆಳಗೆ ಜೈನ, ಬೌದ್ಧ, ಬಸದಿ, ದೇವಾಲಯಗಳಿದ್ದು ಪುರಾತನ ಶಿಲ್ಪಕಲೆ ಇಲ್ಲಿದೆ. ಮೌರ್ಯರ ಗೋರಿಗಳು, ಶಿಲಾಗೋರಿಗಳು, ಮನುಷ್ಯ, ಪ್ರಾಣಿ, ಪ್ರಾಚೀನ ಕಟ್ಟಡಗಳ ಅವಶೇಷಗಳು, ತಣ್ಣೀರು ದೋಣಿ, ಮಹಲ್, ಎರಡಂತಸ್ತಿನ ಗೃಹ, ಶಾಸನ ಇತರ ಸ್ಮಾರಕಗಳಿವೆ.

ಜಟಂಗಿ ರಾಮೇಶ್ವರ

ಬ್ರಹ್ಮಗಿರಿಯಿಂದ ವಾಯುವ್ಯಕ್ಕೆ ೨ ಕಿ.ಮೀ. ದೂರದಲ್ಲಿರುವ ಬೆಟ್ಟವೇ ಜಟಂಗಿ ರಾಮೇಶ್ವರ. ತ್ರೇತಾಯುಗದಲ್ಲಿ ಜಟಾಯು ಪಕ್ಷಿಯು ವಾಸವಾಗಿದ್ದು ಪಂಚವಟಿಯಿಂದ ಸೀತೆಯನ್ನು ಕರೆದೊಯ್ಯುತ್ತಿದ್ದ ರಾವಣನನ್ನು ಎದುರಿಸಿ ಪ್ರಾನ ತೆತ್ತಿದುರಿಂದ ಶ್ರೀರಾಮನು ಶ್ರೀರಾಮೇಶ್ವರ ಲಿಂಗವನ್ನು ಅದರ ಸ್ಮರಣಾರ್ಥ ನಿರ್ಮಿಸಿದನು. ಭೋಗೇಶ್ವರ, ಸೂರ್ಯ, ಜಟಾಯು, ವೀರಭದ್ರೇಶ್ವರ, ಭಗ್ನ ದ್ವಿಭಾಹು ಗಣಪತಿ, ಆಂಜನೇಯ, ಕುಮಾರರಾಮನ ಗರಡಿ, ನೀರಿನ ದೊಣೆ ಇತ್ಯಾದಿ ಕಂಡುಬರುತ್ತವೆ. ಜಟಾಯುಗೆ ಅಗ್ನಿಸಂಸ್ಕಾರ ಮಾಡಿದ ಈ ಸ್ಥಳವೇ ಕ್ಷೇತ್ರವಾಗಿ ವೀರಕಂಪಿಲರಾಐ, ಕುಮಾರ ರಾಮ ಈ ದೇವತೆಯ ಭಕ್ತರಾದರು.

ರೊಪ

ಬ್ರಹ್ಮಗಿರಿಯ ತಡಿಯಲ್ಲಿದೆ. ಭೂಶೋಧನೆ, ಉತ್ಖನನ ನಡೆದು ಪ್ರಾಚೀನ ಸಂಸ್ಕೃತಿಯನ್ನು ಪತ್ತೆ ಹಚ್ಚಲಾಗಿದೆ. ಅಕ್ಷರ ಗುಂಡು ಮತ್ತು ಎಮ್ಮೆತಮ್ಮನ ಗುಂಡುಗಳು, ೧೧೨೯ರ ಶಾಸನ ಮೊದಲಾದವು ಇಲ್ಲಿ ಕಂಡುಬರುತ್ತವೆ.

ಇಸಿಲ

ಪ್ರಾಚೀನ ಜನವಸತಿಯಿದ್ದ ತಾಣ ಬ್ರಹ್ಮಗಿರಿಯ ತಡಿಯಲ್ಲಿದೆ. ಎಂ.ಎಚ್.ಕೃಷ್ಣ ಮತ್ತು ಶೇಷಾದ್ರಿ ಅಶೋಕನ ಶಾಸನಗಳಲ್ಲಿ ಉಕ್ತವಾದ ಇಸಿಲ ಪಟ್ಟಣವು ಅಶೋಕನ ಕಾಲಕ್ಕೆ ದಕ್ಷೀಣದ ಪ್ರಮುಖ ಪಟ್ಟಣವಾಗಿತ್ತೆಂದು ಹೇಳಬಹುದು. ಚೌಡೇಶ್ವರಿ ಕೆರೆ ಮತ್ತು ರೊಪ್ಪದ ಗುಡ್ಡಗಳಿವೆ.

ಅಶೋಕ ಸಿದ್ಧಾಪುರ

ಮೊಳಕಾಲ್ಮೂರು ತಾಲೂಕಿನ ಚಾರಿತ್ರಿಕ ಮಹತ್ವ ಪಡೆದ ಗ್ರಾಮವಿದು. ಇಲ್ಲಿ ಅಶೋಕನ ಶಾಸನ, ಕೂಗುಬಂಡೆ, ಕೋಟೆ ಆಂಜನೇಯ, ಬಂಡೆ ಈಶ್ವರ, ಕಂಪಳ ದೇವರಗುಡಿ, ನವಿಲು, ಜಿಂಕೆ ಇತರ ಪ್ರಾಚೀನ ಕಾಲದ ಚಿತ್ರಕಲೆ, ಸಂಕೇತಗಳು, ಹೊನ್ನಿಯ ಸಿಡಿತಲೆಕಲ್ಲು (ವೀರಗಲ್ಲು?) ಕೊತ್ತಲ ತಿಮ್ಮಪ್ಪ, ಕೇಶವ, ನರಸಿಂಹ, ಸತ್ಯನಾರಾಯಣ, ದೇವಮ್ಮ, ಮೌರ್ಯರ ಮನೆಗಳು, ಶಿಲಾಸಮಾಧಿಗಳು ಇತರ ಅನೇಕ ಅವಶೇಷಗಳು ಇ ಗ್ರಾಮದಲ್ಲಿ ಕಂಡುಬರುತ್ತವೆ.

ಹನೆಯ

ಇದು ಒಂದು ಚಿಕ್ಕಹಳ್ಳಿ. ಅಷ್ಟೇ ಪ್ರಾಚೀನ ಮಹತ್ವ ಪಡೆದಿದೆ. ಕ್ರಿ.ಶ. ೧೧೯೦ರ ಸುಮಾರಿನ ಶಾಸನದಲ್ಲಿ ವೀರಬಲ್ಲಾಳನೆಂಬುವನು (ಹೊಯ್ಸಳ ಅರಸ?) ಇಲ್ಲಿದ್ದು ಹನೆಯವನ್ನು ಗೆದ್ದು ಅದಕ್ಕೆ ವಿಜಯನಗರಿ ಎಂದು ಹೆಸರಿಟ್ಟಿದ್ದು ಶಾಸನದಿಂದ ತಿಳಿದುಬರುತ್ತದೆ. ಅಕ್ಕತಂಗಿಯರ ಗುಡಿ, ಜೈನ ಮಂದಿರ, ಕೋಟೆ ಅವಶೇಷಗಳು, ತ್ರಿಶಂಕೇಶ್ವರ ದೇವಾಲಯ, ಹುಲಿಕುಂಟೆ ಕೆರೆಯ ಆಸುಪಾಸಿನ ಅವಶೇಷಗಳು ಗಮನಾರ್ಹವಾಗಿವೆ.

ನುಂಕಮಲೆ ಪರ್ವತ ಪ್ರದೇಶ

ಮೊಳಕಾಲ್ಮೂರು ಕಣಶಿಲೆಯ ಬೆಟ್ಟದ ತಡಿಯಲ್ಲಿನೊಂಉದ ವಸತಿ ನೆಲೆ. ಆಳಿದ ಮನೆತನಗಳಿಂದ ಐತಿಹಾಸಿಕವಾಗಿಯೂ ಖ್ಯಾತಿಗೊಂಡಿದೆ. ಕ್ರಿ.ಶ. ೧೦ನೇ ಶತಮಾನಕ್ಕೆ ನೊಳಂಬವಾಡಿ ೩೨,೦೦೦ ಸೀಮೆಯ ಭಾಗವಾಗಿತ್ತು. ಚಾಲುಕ್ಯ, ಹೊಯ್ಸಳ, ವಿಜಯನಗರದವರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು. ರಾಯದುರ್ಗ, ನಾಯಕನಹಟ್ಟಿ ಪಾಳೆಯಗಾರರು ಆಳ್ವಿಕೆ ನಡೆಸಿದ್ದು ಇಲ್ಲಿ ಕಂಡುಬರುತ್ತದೆ. ಹಟ್ಟಿ ಮಲ್ಲಪ್ಪನಾಯಕನು ರಾಯದುರ್ಗದ ಬೊಮ್ಮನಾಯಕನಿಗೆ ೨೦೦೦ ಕಂದು ಹಸುಗಳನ್ನು, ೧೦೦೦ ಬಿಳಿ ಹಸುಗಳನ್ನು ಕೊಟ್ಟು ಪಡೆದುಕೊಂಡು ಇಲ್ಲಿನ ಬೆಟ್ಟದ ಮೇಲಿನ ಕೋಟೆ ಹಾಗೂ ಕೆರೆ ಸರೋವರಗಳನ್ನು ನಿರ್ಮಿಸಿದನಂತೆ. ಬಿಜ್ಜುಗತ್ತಿ ಭರಮಣ್ಣನಾಯಕನ ಕಾಲದಲ್ಲಿ (೧೬೮೯-೧೭೨೧) ಚಿತ್ರದುರ್ಗ ಅರಸೊತ್ತಿಗೆ ಸೇರಿತು. ನಂತರ ಹೈದರಾಲಿ, ಟಿಪ್ಪುಸುಲ್ತಾನ್, ಇಂಗ್ಲಿಷರು, ಮೈಸೂರು ಒಡಯರ ಆಳ್ವಿಕೆಗೊಳಗಾಗಿತ್ತು. ಈ ಪರೆಸರದಲ್ಲಿ ನೀಲಿಯ ಮರಾಲೆ, ಗೊರವಿ ಹಾಗೂ ಸೀತಾಫಲದ ಮರಗಿಡಗಳು ಸಾಕಷ್ಟಿವೆ. ಮೊಳಕಾಲ್ಮೂರು ಪಟ್ಟಣದಲ್ಲಿ ನುಂಕಪ್ಪನ ಕಟ್ಟೆ, ಮಾರ್ಕಂಡೇಯ, ದುರ್ಗಾದೇವಿ, ಈಶ್ವರ, ಆಂಜನೇಯ, ವೆಂಕಟರಮಣ ಗುಡಿಗಳು, ಸಿದ್ಧಾರೂಡ ಮಠ, ಥಿಯೋಸಾಫಿಕಲ್ ಮಂದಿರ, ಮಸೀದಿ ಇಲ್ಲಿನ ಚಾರತ್ರಿಕ ಮಹತ್ವಕ್ಕೆ ಸಾಕ್ಷಿ. ಇಲ್ಲಿರುವ ನುಂಕೆಮಲೆ ಪ್ರದೇಶ ಸಮುದ್ರಮಟ್ಟದಿಂದ ೩೦೨೨ ಅಡಿ ಎತ್ತರದಲ್ಲಿದೆ. ಕ್ರಿ.ಶ. ೧೦-೧೧ನೇ ಶತಮಾನದಲ್ಲಿ ಕದಂಬವಂಶದ ಬೆಂಚರಸನು ಇಲ್ಲಿ ನುಂಕೆಕೋಟೆಯನ್ನು ಕಟ್ಟಿಸಿದನೆಂದು ಶಾಸನ ತಿಳಿಸುತ್ತದೆ. ಇಲ್ಲಿರುವ ಕಾಲಭೈರವ ದೇವರಿಗೆ ಹಾವು ಚೇಳುಗಳ ಗದ್ದುಗೆ ಏರಿದ, ಬಣ್ಣದ ಕುದುರೆ ಏರಿದ, ಖಡ್ಗ, ಡಮರುಗ, ತ್ರಿಶೂಲ ಪ್ರಾಣಿಯಾದ, ಹೊಟ್ಟೆಯಲ್ಲಿ ನಾಗಬಂಧ ದರಿಸಿದ, ಎಲ್ಲರಿಗೂ ಆಶ್ರಯದಾತನಾದ ದೇವರು ಎಂದು ಕೊಂಡಾಡಲಾಗಿದೆ. ಉತ್ತರ ಭಾರತದಿಂದ ಬಂದ ಗೋಸಾಯಿಗಳು, ಕದ್ರಿಯ ಶಾಕ್ತ ಪಂಥದವರು ಕಾಲಭೈರವನಿಗೆ ನಡೆದುಕೊಳ್ಳುವರು. ಪ್ರತಿ ವರ್ಷ ವೈಶಾಖ ಮಾಸದಲ್ಲಿ ಜರುಗುವ ಜಾತ್ರೆಗೆ (ತೇರು ಸಿಡಿ) ಸಹಸ್ರಾರು ಜನ ಸೇರುತ್ತಾರೆ. ಇಲ್ಲಿರುವ ತುಪ್ಪದಮ್ಮನ ಗುಡಿ, ದೊಡ್ಡಗವಿ, ಸಿಡಿಕಂಬ, ಮೇಗಳ ಈರ್ಲು, ಎಲ್ಲಮ್ಮದೇವಿ, ತೆಗ್ಗಿನ ಹನುಮ, ಮೂಗುಬಸಪ್ಪ, ಕೂಗುಬಂಡೆ, ಪಡ್ಡೆಹನುಮ, ನಡುಗಡ್ಡೆ, ಮಲ್ಲಿಕಾರ್ಜುನ, ಸನತ್ಕುಮಾರಸ್ವಾಮಿ ದೇವಾಲಯ ಶಿಲ್ಪಗಳ ಬಗ್ಗೆ ಐತಿಹ್ಯ,ದಂತಕಥೆ, ಪುರಾಣ ಪ್ರತೀತಿಗಳಿವೆ. ಮೊಳಕಾಲ್ಮೂರು ಪೂರ್ವದ ಕೆರೆಯ ಹಿಂದೆ ಬೇಡ-ಬೇಡತಿಯರ ವೀರಗಲ್ಲಿದ್ದು ಇದು ನುಂಕಪ್ಪನ ಗುಡ್ಡಕ್ಕೆ ದಾರಿ ತೋರಿಸುವ ಕಲ್ಲೆಂದು ಜನರು ಕರೆಯುತ್ತಾರೆ.

ಕಪ್ಪಡ ಬಂಡೆಹಟ್ಟಿ

ಕೋನಸಾಗರದ ಮತ್ತು ನೇರ‍್ಲಳ್ಳಿ ಮಧ್ಯದಲ್ಲಿ ಬರುವ ಕಪ್ಪಡ ಬಂಡಿಹಟ್ಟಿಯಲ್ಲಿ ಯರಮಂಚಯ್ಯನ ಮಗ ಪೆದ್ದಯ್ಯನು ಚಿರತೆಯೊಂದಿಗೆ ಹೋರಾಡಿ ಮಡಿದ ನೆಲೆ, ಕರಿನಾರು, ಬೆಡಗಿನವರು (ನಾಯಕ) ತಮ್ಮ ಹಿರಿಯನ ಸ್ಮರಣಾರ್ಥ ವೀರಗಲ್ಲು ನೆಟ್ಟು ವರ್ಷಕ್ಕೊಮ್ಮೆ ಪೂಜಿಸಿ ಹಬ್ಬ ಮಾಡುತ್ತಾರೆ.

ಶಿರೇಕೊಳ

ಪವಿತ್ರ ಸ್ಥಳವು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ತಂಗಿದ್ದರಿಂದ ಪುಣ್ಯ ಸ್ಥಳವಾಗಿದೆ. ಈ ಸ್ವಾಮಿಗಳ ಬೃಂದಾವನವಿದ್ದು, ಗವಿಸಿದ್ಧೇಶ್ವರ ಸ್ವಾಮಿ ಮಠ, ಜೈನ ಬಸದಿ ಹಾಗೂ ವೀರಗಲ್ಲುಗಳಿವೆ.

ಹಾನಗಲ್ಲು

ರಾಬರ್ಟ್ ಬ್ರೂಸ್‌ಫೂಟ್ ಇಲ್ಲಿನ ಬೆಟ್ಟ ಸಾಲನ್ನು ಹೊಗಳಿದ್ದಾನೆ. ಇಲ್ಲಿ ನಿವೇಶನಗಳಿದ್ದು ಆದಿ ಚರಿತ್ರೆಯನ್ನು ಹೊಂದಿವೆ. ಇಲ್ಲಿಗೆ ಸಮೀಪದಲ್ಲಿ ರಂಗಯ್ಯನದುರ್ಗ ಜಲಾಶಯವನ್ನು ನಿರ್ಮಿಸಲಾಗಿದೆ. ಬಳ್ಳಾರಿ-ಬೆಂಗಳೂರು ರಸ್ತೆಯಲ್ಲಿ ಬರುವ ಹಾನಗಲ್ ವಿವಿಧ ಕ್ಷೇತ್ರಗಳಲ್ಲಿ ಬೆಳೆಯುವ ತಾಣವಾಗಿದೆ.

ಮೊಳಕಾಲ್ಮೂರು ತಾಲೂಕಿನ ಚರಿತ್ರೆ ಮತ್ತು ಸಂಸ್ಕೃತಿ ಸಮೃದ್ಧವಾಗಿದೆ. ಬ್ರಹ್ಮಗಿರಿ, ಜಟ್ಟಂಗಿರಾಮೇಶ್ವರ, ಅಶೋಕ ಸಿದ್ಧಾಪುರ, ಇಸಿಲ, ರೊಪ್ಪ, ದೇವಸಮುದ್ರ, ಬಂಡ್ರಾವಿ, ಸಂತೆಗುಡ್ಡ, ಬೊಮ್ಮಲಿಂಗನಹಳ್ಳಿ, ಕಂಪಳ ದೇವರಹಟ್ಟಿ, ಮುತ್ತಿಗಾರಹಳ್ಳಿ, ರಾಯಪುರ, ಮುತ್ತಿಗಾರಹಳ್ಳಿ, ಕೋನಸಾಗರ, ಗೌರಸಮುದ್ರ, ಬೊಮ್ಮಗೊಂಡನಕೆರೆ, ನಾಗಸಮುದ್ರ, ನುಂಕೆಮಲೆ ಪರ್ವತ ಮೊದಲಾದ ಸ್ಥಳಗಳು ಇಂದು ಸ್ಥಳೀಯ ಇತಿಹಾಸದ ದೃಷ್ಟಿಯಿಂದ ಅತೀ ಮಹತ್ವ ಪಡೆದಿವೆ. ಮಹಾ ಸಾಮ್ರಾಜ್ಯಗಳಿಂದ ಹಿಡಿದು ಸ್ಥಳೀಯ ಸಣ್ಣ-ಪುಟ್ಟ ಸಂಸ್ಥಾನಗಳ ಆಳ್ವಿಕೆಯವರೆಗೂ ಇಲ್ಲಿನ ಚರಿತ್ರೆ ಅನಾವರಣಗೊಳ್ಳುತ್ತಿದೆ.

ಚನ್ನಹಗರಿ ನದಿಯು ಈ ತಾಲೂಕಿನಲ್ಲಿ ಹರಿಯುತ್ತಿದ್ದು ಇದರ ಇಕ್ಕೆಲಗಳಲ್ಲಿ ಶೈವ, ವೈಷ್ಣವ ಮತ್ತು ಶಾಕ್ತೇಯ ಧಾರ್ಮಿಕ ಕೇಂದ್ರಗಳು ಬೆಳೆದು ಬಂದಿವೆ. ಬೌದ್ಧ, ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಪ್ರಭಾವವನ್ನು ಇಲ್ಲಿ ಕಾಣಬಹುದು. ಹಾಗಯೇ ವಿವಿಧ ಜನಸಮುದಾಯಗಳ ಸಾಮರಸ್ಯ ಚಿತ್ರಣವನ್ನು ವಿವಿಧ ಕಾಲಘಟ್ಟಗಳಿಂದ ಗುರುತಿಸಬಹುದಾಗಿದೆ. ಇಲ್ಲಿರುವ ದೇವಾಲಯ, ಮಠ, ಮಂದಿರ, ಚರ್ಚ್, ಮಸೀದಿಗಳು ಗತಕಾಲದ ಧಾರ್ಮಿಕಸ್ಥಿತಿ-ಗತಿ ಅವಲೋಕನೆಗೆ ದಾರಿ ದೀಪವಾಗಿವೆ.

ಒಟ್ಟಾರೆ ಹೇಳುವುದಾದರೆ ಮೊಳಕಾಲ್ಮೂರು ತಾಲೂಕಿನ ಚರಿತ್ರೆ ಮಸುಕು ಮಸುಕಾಗಿದೆ. ಪಕ್ಕದ ಆಂಧ್ರಪ್ರದೇಶದಲ್ಲಿಯೂ ಇಲ್ಲಿನ ಚಾರಿತ್ರಿಕ ಕೊಂಡಿಗಳು ಕಳಚಿಹೋಗಿವೆ. ಗಡಿನಾಡಿನ ಸಂದರ್ಭದಲ್ಲಿ ಭಾಷೆ, ಸಂಸ್ಕೃತಿಯನ್ನು ಏಕ ಪ್ರಕಾರವಾಗಿ ಪರಿಗಣಿಸುವಂತಿಲ್ಲ. ಭಿನ್ನ-ಭಿನ್ನ ಲಕ್ಷಣಗಳು, ಜನಾಂಗಿಕ ಸಾಮರಸ್ಯ ಇತ್ಯಾದಿ ಸಂಗತಿಗಳನ್ನು ಅವಲೋಕಿಡಬೇಕಾಗಿದೆ. ಮೌರ್ಯರಿಂದ ಬ್ರಿಟಿಷರವರೆಗೆ ಆಳ್ವಿಕೆ ನಡೆಸಿದ ವಿವಿಧ ಅರಸರ ಕಾಲದಲ್ಲಿ ನಿರ್ಮಿಸಿದ ದೇವಾಲಯ, ಶಾಸನ, ಶಿಲ್ಪ, ಕೆರೆಕಟ್ಟೆ ಮೊದಲಾದ ಸ್ಮಾರಕಗಳು ಈ ತಲೆಮಾರಿಗೆ ಇತಿಹಾಸವನ್ನು ಸಾರುವ ಮೂಕಸಾಕ್ಷಿಗಳಾಗಿ ನಿಂತಿವೆ. ಅಶೋಕನ ಅಹಿಂಸಾ ನೀತಿಯ ಪ್ರಭಾವವನ್ನು ಇಂದಿಗೆ ತುಲನೆಮಾಡಿ ನೋಡಿದಾಗ ಅದರ ಪ್ರಭಾವ ಬೇರೆ ಬಗೆಯಲ್ಲಿದೆ. ಒಂದು ತಾಲೂಕಿನ ಇತಿಹಾಸಕ್ಕಿಂತ ಹೆಚ್ಚಿನ ವ್ಯಾಪ್ತಿಯನ್ನು ಮೊಳಕಾಲ್ಮೂರು ಪ್ರದೇಶ ಹೊಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ.

 

[1] ಗಿರಿಜಾ. ಟಿ., ೧೯೯೧, ಚಿತ್ರದುರ್ಗ ಜಿಲ್ಲಾ ದರ್ಶಿನಿ, ರೇಖಾ ಪ್ರಕಾಶನ, ದಾವಣಗೆರೆ, ಪು. ೨೬೬

[2] ಮೈಸೂರು ಕೈಪಿಡಿ, ಬೆಂಗಳೂರು, ೧೯೩೭, ಪು. ೫೮

[3] ಮೊಳಗುವ ಕಲ್ಲು, ಪು. ೧೧೫

[4] ಚಿತ್ರದುರ್ಗ ಜಿಲ್ಲಾ ದರ್ಶಿನಿ, ಪು. ೨೪೭

[5] ಎಸ್. ಅಂಡ್. ಎ. ೧೯೦೮-೦೯, ೩೦೧, ಆಫ್ ೧-೨

[6] ಕ್ಷೇತ್ರಕಾರ್ಯದಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ