ಉತ್ಖನನ

೧೯೪೨ ಮಾರ್ಚ-ಮೇ ತಿಂಗಳುಗಳಲ್ಲಿ ಈ ಎರಡು ನೆಲೆಗಳಲ್ಲಿ ಆಗಿನ ಮೈಸೂರು ರಾಜ್ಯದ ಪುರಾತತ್ವ ಸರ್ವೇಕ್ಷಣಾ ವಿಭಾಗವನ್ನು ಜೊತೆಗೂಡಿಸಿಕೊಂಡು ವ್ಹೀಲರವರು ಅತ್ಯಂತ ಶಿಸ್ತಿನಿಂದ ಮತ್ತು ಆಧುನಿಕ ವೈಜ್ಞಾನಿಕ ವಿಧಾನದಿಂದ ಉತ್ಖನನಗಳನ್ನು ನಡೆಸಿದರು. ಬ್ರಹ್ಮಗಿರಿಯಲ್ಲಿ ೭ ಗುಂಡಿಗಳನ್ನು ಮತ್ತು ೧೦ ಬೃಹತ್ ಶಿಲಾಯುಗದ ಗೋರಿಗಳನ್ನು, ಚಂದ್ರವಳ್ಳಿಯಲ್ಲಿ ೩ ಗುಂಡಿಗಳನ್ನು ಅಗೆಯಲಾಯಿತು. ಬಹು ಸೂಕ್ಷಮವಾಗಿ ಅಗೆತದಲ್ಲಿ ಮಣ್ಣನ್ನು ಮತ್ತು ಅವುಗಳಲ್ಲಿ ದೊರೆತ ವಸ್ತುಗಳನ್ನು ಪರೀಕ್ಷಿಸಲಾಯಿತು. ಇವುಗಳಲ್ಲಿ ಸ್ವಲ್ಪ ವ್ಯತಾಸ ಅಥವಾ ಅಸಂಬದ್ಧತೆ ತೋರಿದಲ್ಲೆಲ್ಲ ಅವುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಗಮನಿಸಿ ಪದರುಗಳನ್ನು ಮತ್ತು ತಿಪ್ಪೆ ಕೂಣಿಗಳನ್ನು ಗುರುತಿಸಲಾಯಿತು. ಪ್ರತಿಯೊಂದು ಪದರಿನಲ್ಲಿ ಮತ್ತು ಕುಣಿಗಳಲ್ಲಿ ದೊರೆತ ವಸ್ತುಗಳೆಲ್ಲವನ್ನೂ ವಿಫುಲವಾಗಿ ದೊರೆಯುವ ಮಣ್ಣಿನ ಪಾತ್ರೆಚೂರುಗಳನ್ನೂ ಲೆಕ್ಕವಿಡಲಾಯಿತು. ವಸ್ತುಗಳ ಲಕ್ಷಣ, ವೈವಿಧ್ಯ, ಪರಸ್ಪರ ಸಂಬಂಧ ಮತ್ತು ವ್ಯಾಪ್ತಿಗಳನ್ನು ಪರಿಶೀಲಿಸಲಾಯಿತು. ಕ್ರಮವಾಗಿ ಅವುಗಳ ಸ್ಥಾನ, ಸಂದರ್ಭಗಳನ್ನು ವಿಂಗಡಿಸಲಾಯಿತು. ಉತ್ಖನನದ ಮುಖ್ಯ ಹಂತಗಳ, ಶವಕುಣಿಗಳ, ಪ್ರತಿಯೊಂದು ವಿಧವಾದ ಚಸ್ತುಗಳ ರೇಖಾಚಿತ್ರ ಮತ್ತು ಛಾಯಾಚಿತ್ರಗಳನ್ನೊಳಗೊಂಡ ವಿವರಣೆ, ಉತ್ಖನನಗಳ ಮುಖ್ಯ ಉದ್ಧೇಶ ಮತ್ತು ಫಲಿತಾಂಶಗಳು ಇವುಗಳಿಂದ ಕೂಡಿದ ವರದಿಯನ್ನು ಪ್ರಕಟಿಸಲಾಯಿತು. ಆದುದರಿಂದ ಈ ಉತ್ಖನನಗಳಲ್ಲಿ ಅನುಸರಿಸಿದ ವಿಧಾನಗಳು ಮತ್ತು ಈ ಪ್ರಕಾರದಿಂದ ದೊರೆತ ವಸ್ತುಗಳು ದಕ್ಷಿಣ ಭಾರತದಲ್ಲಿಯ ಮುಂದಿನ ಪ್ರಾಕ್ಷನ ಶಾಸ್ತ್ರದ ಸಂಶೋಧನೆಗೆ ಬಹಳ ಅಮೂಲ್ಯವಾದ ಸಾಧನೆಗಳಾದವು.

೧೯೭೮ರಲ್ಲಿ ಈ ನೆಲೆಯ ನನ್ನ ಅನ್ವೇಷಣೆಯಲ್ಲಿ ಇಲ್ಲಿ ಸಂರಕ್ಷಿಸಿದ ವ್ಹೀಲರವರ ಒಂದು ಉತ್ಖನನ ಗುಂಡಿಯನ್ನು ಪರಿಶೀಲಿಸಿದೆ. ಇದು ಪ್ರಾಯಶಃ ಅವರ ಉತ್ಖನಿಸಿದ ೨೧ನೇ ಗುಂಡಿಯಾಗಿರಬಹುದೆಂದು ನನ್ನ ಊಹೆ. ಇದು ಮಾತ್ರ ಅವರೇ ತಮ್ಮ ವರದಿಯಲ್ಲಿ ಹೇಳಿದಂತೆ ಈ ನೆಲೆಯಲ್ಲಿಯ ಎಲ್ಲ ಸಂಸ್ಕೃತಿಗಳ ಪೂರ್ಣ ಅನುಕ್ರಮ ಮತ್ತು ಸ್ಪಷ್ಟ ಚಿತ್ರವನ್ನು ಕೊಟ್ಟಿದೆ. ಇದರಲ್ಲಿ ನನಗೆ ಎರಡು ಹೊಸ ವಿಷಯಗಳು ಕಂಡುಬಂದವು. ೧. ಈಗಿನ ನೆಲಮಟ್ಟದಿಂದ ಸುಮಾರು ೧,೯೦ಮೀ ಮತ್ತು ೧.೫೦ಮೀ ಕೆಳಗೆ ಗುಂಡಿಯ ನಾಲ್ಕು ಗೋಡೆಗಳಲ್ಲಿ ಕೇವಲ ಬೂದಿಕಿಟ್ಟದ ಪದರುಗಳಿವೆ. ಇವುಗಳ ಮೇಲೆ ಮತ್ತು ಕೆಳಗೆ ಜನ ವಾಸ್ತವ್ಯದ ಅವಶೇಷಗಳುಳ್ಲ ಹಾಳೂಮಣ್ಣಿನ ಪದರುಗಳಿವೆ. ನೆಲದ ಮೇಲೂ ಅಲ್ಲಲ್ಲಿ ಇಂಥ ಕಿಟ್ಟದ ತುಣುಕುಗಳಿದ್ದವು.

೨. ಮೇಲ್ಮಟ್ಟದ ಬೂದಿಕಿಟ್ಟ ಪದರಿನ ಮೇಲಿರುವ ಹಾಳುಮಣ್ಣಿನ ಪದರದಲ್ಲಿ ನೂತನ ಶಿಲಾಯುಗ ಮತ್ತು ಬೃಹತ್ ಶೀಲಾಯುಗ ಸಂಸ್ಕೃತಿಗಳ ಮಣ್ಣಿನ ಪಾತ್ರೆಗಳ ಅವಶೇಷಗಳೊಡನೆ ಕಪ್ಪು ನೀಲಿ(ನೇರಳೆ) ಬಣ್ಣದ ರೇಖಾಚಿತ್ರಗಳಿಂದ ಅಲಂಕರಿಸಲ್ಪಟ್ಟ ಕೆಂಪು ವರ್ಣದ ಮೃತ್ಪಾತ್ರೆ ಚೂರುಗಳು ಇದ್ದದು.

ವ್ಹೀಲರವರ ವರದಿಯಲ್ಲಿ ಇವುಗಳ ಬಗ್ಗೆ ಎಲ್ಲಿಯೂ ಏನೂ ಹೇಳಿಲ್ಲ. ಮೇಲೆ ಹೇಳಿದ ಬೂದಿ ಕಿಟ್ಟವುಳ್ಳ ದೊಡ್ಡ ದೊಡ್ಡ ದಿಬ್ಬಗಳು ಕೃಷ್ಣಾ-ತುಂಗಭದ್ರ ಬಯಲಿನಲ್ಲಿ ಸುಮಾರು ೭೫ ನೂತನ-ಬೃಹತ್ ಶಿಲಾ-ಆದಿ ಇತಿಹಾಸ ಸಂಸ್ಕೃತಿಗಳ ಪ್ರಾಚೀನ ಜನ ವಾಸ್ತವ್ಯ ನೆಲೆಗಳ ಹತ್ತಿ ಇವೆ. ಇವು ಅತಿ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿದ ಸಗಣಿಯನ್ನು ಸುಮಾರು ೮೦೦-೧೦೦೦ ಸೆಂಟಿಗ್ರೇಡ್ ಶಾಖದಲ್ಲಿ ಸುಟ್ಟಾಗ ಆ ರೀತಿ ವಿಶ್ಲೇಷಣೆಗಳಿಂದ ಕಿಟ್ಟವಾಗುತ್ತದೆಂದು ವೈಜ್ಞಾನಿಕವಾಗಿ ಗೊತ್ತಾಗಿದೆ. ಇಂಥ ದಿಬ್ಬಗಳಿಗೆ ಕಾರಣರಾರು? ಯಾವ ಕಾಲದ್ದು? ಇಷ್ಟು ದೊಡ್ಡ ಪ್ರಮಾಣದಲ್ಲಿ ಸಗಣಿಯನ್ನು ಸಂಗ್ರಹಿಸಿ ಒಂದು ಹಂತದಲ್ಲಿ ಸುಡುವ ಹಿಂದೆ ಇದ್ದ ಉದ್ದೇಶವೇನು? ಹೀಗೆ ಇವುಗಳ ಬಗ್ಗೆ ಪ್ರಮುಖ ಪ್ರಶ್ನೆಗಳಿವೆ. ಈ ದಿಶೆಯಲ್ಲಿ ಹಲವಾರು ವೈಜ್ಞಾನಿಕ ಉತಖನನ (ಉತ್ನೂರು, ಮೆಹಬೂಬ್ ನಗರ ಜಿಲ್ಲೆ, ಆಂಧ್ರಪ್ರದೇಶ, ಕುಪ್ಪಗಲ್) ಮತ್ತು ವಿಶ್ಲೇಣೆ ತಜ್ಞರಿಂದ ಆಗಿದ್ದರೂ ಕೂಡ ಈ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಇನ್ನೂ ಸಿಕ್ಕಿಲ್ಲ. ಈ ವಿಷಯದಲ್ಲಿ ತಜ್ಞರ ಒಟ್ಟಾರೆ ಮೂರು ಪ್ರಮೇಯಗಳಿವೆ. ಮೊದಲನೆಯದು ಇವು ನೂತನ ಶಿಲಾಯುಗದ್ದು. ಪಶುಗಳ ಕೊಟ್ಟಿಗೆಯಲ್ಲಿ ಸಂಗ್ರಹವಾದ ಸಗಣಿಯನ್ನು ಅಲ್ಲಿಯೆ ತಮ್ಮ ಸಾಮಾನ್ಯ ಕಟ್ಟು ಕಟ್ಟಳೆಯಂತೆ ಒಂದು ಹಂತದಲ್ಲಿ ಸುಡುವುದು.ಈ ಆಚರಣೆ ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿ ಹೋಳಿ ದೀಪಾವಳಿ ಹಬ್ಬಗಳಲ್ಲಿ ಉಳಿದು ಬಂದಂತಿದೆ.. ಎರಡನೆಯದು ಈ ದಿಬ್ಬಗಳು ಬೃಹತ್ ಶಿಲಾ ಸಂಸ್ಕೃತಿಯದಾಗಿ ಕಬ್ಬಣದ ಅದಿರನ್ನು ಲೋಹವನ್ನಾಗಿ ಮಾಡುತ್ತಿದ್ದ ತಾಂತ್ರಿಕ ಕೈಗಾರಿಕೆ ಅವಶೇಷಗಳು. ಮೂರನೆಯದಾಗಿ ಒಂದು ನಿರ್ದಿಷ್ಟ ಜನಸಮುದಾಯ ಬಹುಶಃ ಕೃಷ್ಣಾ ಮೇಲ್ದಂಡೆ ಪ್ರದೇಶದ ಒಂದು ಶಿಲಾ ತಾಮ್ರಯುಗ ಸಂಸ್ಕೃತಿ(ಸಾವಳ್ದ)ಯ ಜನಸಮುದಾ ತಮ್ಮ ಸಮಾಜದ ಹೆಸರಾಂತ ನಾಯಕನ ನೆನಪಿನಲ್ಲಿ ಒಂದು ನಿರ್ದಿಷ್ಟ ಅವಧಿಯಲ್ಲಿ ದೊಡ್ಡ ಪ್ರಮಾಣದ ಆಚರಣೆಯಿಂದ ಉಂಟಾದ ದಿಬ್ಬಗಳು. ಆ ಕಾರಣದಿಂದಲೇ ಕೆಲವು ದಿಬ್ಬಗಳನ್ನು ಅಬಥ ವ್ಯಕ್ತಿಗಳ ಹೆಸರಿನಲ್ಲಿ ಕರೆಯುವ ವಾಡಿಕೆ ಉಳಿದು ಬಂದಿರಬಹುದು. ಉದಾಹರಣೆಗೆ ಹಂಪಿಯ ಹತ್ತಿರವಿರುವ ವಾಲಿದಿಬ್ಬ, ಕುಡುತಿನಿಯ ಹಿಡಂಬಾಸುರ ದಿಬ್ಬ ಇತ್ಯಾದಿ. ಮುಂದುವರೆದ ಅಧ್ಯಯನದಲ್ಲಿ (ಗುಲ್ಬರ್ಗಾ ಜಿಲ್ಲೆಯ ಬೂದಿಹಾಳ್ ಉತ್ಖನನ) ಮುಖ್ಯವಾಗಿ ಪಶುಸಂಗೋಪನೆ ಕಸುಬುಳ್ಳ ನೂತನಶಿಲಾಯುಗದ ಜನಸಮುದಾಯವು ರಾತ್ರಿ ಸಮಯದಲ್ಲಿ ಹುಲಿ ಮೊದಲಾದ ಕಾಡು ಪ್ರಾಣಿಗಳಿಂದ ತಮ್ಮ ಜಾನುವಾರುಗಳನ್ನು ರಕ್ಷಿಸಲು ಕೊಟ್ಟಿಗೆಯಲ್ಲಿ ಸಂಗ್ರವಾದ ಸಗಣಿಗೆ ನಿಧಾನವಾಗಿ ಉರಿಯುವ ಹಾಗೆ ಬೆಂಕಿ ಹಾಕಲಾಗುತ್ತಿತ್ತೆಂದು ಅಭಿಪ್ರಾಯಪಡಲಾಗಿದೆ. ಇತ್ತೀಚಿನ ಒಂದು ಉತ್ಖನನ (ಕುಡಜಿ, ಬೆಳಗಾವಿ ಜಿಲ್ಲೆ) ದಲ್ಲಿ ವಿಶೇಷವಾಗಿ ಸಾವಳ್ದ ಸಂಸ್ಕೃತಿ-ಬೃಹತ್ ಶಿಲಾಸಂಸ್ಕೃತಿ ಹಂತದಲ್ಲಿ ಬೂದಿಗುಡ್ಡೆ ಪರಂಪರೆ ಕೊನೆಗಂಡಂತೆ ಕಾಣುತ್ತದೆ. ಮತ್ತು ಇಲ್ಲಿಯ ಬೂದಿ ಇಟ್ಟದ ಹಲವಾರು ತುಂಡುಗಳಲ್ಲಿ ಸಣ್ಣ ಸಣ್ಣ ಗುಳಿಗಳಿವೆ. ಇವುಗಳಲ್ಲಿ ತಿಳಿ ಕಂದುಬಣ್ಣದ ಬಿರುಕು ಬಿಟ್ಟ ಲೇಪನವಿದೆ. ಸ್ಥಳೀಯ ಅಕ್ಕಸಾಲಿಗರೊಬ್ಬರು ಈ ಲೇಪನವನ್ನು ಸೂಕ್ತ ರಾಸಾಯನಿಕ ದ್ರವಗಳಿಂದ ವಿಶ್ಲೇಷಿಸಿ ಅದು ತಾಮ್ರದ ಹೆರೆಯೆಂದು ತಿಳಿಸಿದರು. ಹೀಗೆ ಸ್ವಾರಸ್ಯಕರ ಬೂದಿ ದಿಬ್ಬಗಳ ಅಧ್ಯಯನ ನಡೆದಿದೆ. ಈ ಹಿನ್ನಲೆಯಲ್ಲಿ ಬ್ರಹ್ಮಗಿರಿಯ ಬೂದಿ ಕಿಟ್ಟದ ಮಹತ್ವವನ್ನು ತಿಳಿಯಲು ಸಾಧ್ಯ. ಬ್ರಹ್ಮಗಿರಿಯಲ್ಲಿ ಜನವಸತಿಯ ನೆಲೆಯಲ್ಲಿಯೆ ಬೂದಿ ದಿಬ್ಬದ ಅವಶೇಷಗಳಿವೆ. ಇದು ಅಪರೂಪ. ಇದು ಹೀಗಿರಲು ಹೇಗೆ ಸಾಧ್ಯ? ಇದರಿಂದ ಇದರ ಕಾಲಮಾನವನ್ನು ಇನ್ನೂ ಹೆಚ್ಚು ನಿಖರವಾಗಿ ಹೇಳಲು ಸಾಧ್ಯ. ಮೇಲೆ ಹೇಳಿದಂತೆ ಮೇಲಿನ ಕಿಟ್ಟದ ಪದರು ನೂತನ-ಬೃಹತ್ ಶಿಲಾಯುಗ ಅವಶೇಷಗಳುಳ್ಳ ಪದರಿನ ಕೆಳಗೆ ಇರುವುದರಿಂದ ಕಿಟ್ಟದ ಪದರಿನ ಕಾಲಮಾನವನ್ನು ಸೂಮಾರು ಪ್ರ.ಶ.ಪೂ. ೯೦೦-೭೦೦ ಎಂದು ತರ್ಕಿಸಬಹುದು.

ವರ್ಣ ಚಿತ್ರಿತ ಮಡಕೆ ಚೂರುಗಳು ಅತ್ಯಂತ ಪ್ರಾಚೀನ ಹಂತದಲ್ಲಿ ದೊರೆತ ಇದೇ ತರಹದ ವರ್ಣ ಚಿತ್ರಿತ ಮೃತ್ಪಾತ್ರೆಗಳಿಗಿಂತ ನಿಸ್ಸಂದೇಹವಾಗಿ ಭಿನ್ನವಾದುದು. ಇವರು ಉತ್ಖನನ ಮಾಡಿದ ಬೃಹತ್ ಶೀಲಾಗೋರಿಗಳಲ್ಲಿ ಗಿಖೆನೆಯದರ ಪಕ್ಕದಲ್ಲಿ ಮೊದಲೆ ಇದ್ದ ಒಂದು ಗುಂಡಿಯಲ್ಲಿ ಈ ಸಂಸ್ಕೃತಿಯ ಮಣ್ಣಿನ ಬಟ್ಟಲುಗಳೊಡನೆ ಇದ್ದ ವರ್ಣಚಿತ್ರಿತ ಕೊಡ ಮಾತ್ರ ನಾನು ಕಂಡ ಮೃತ್ಪಾತ್ರೆ ವರ್ಗಕ್ಕೆ ಸೇರಿದುದು. ಇದನ್ನು ಬಿಟ್ಟರೆ ಈ ಪ್ರಕಾರದ ಮಣ್ಣಿನ ಪಾತ್ರಗಳ ಬಗ್ಗೆ ವರದಿಯಲ್ಲಿ ಎಲ್ಲಿಯೂ ಏನೂ ಹೇಳಿಲದಲ. ೧೯೫೧ರ ಗೋದಾವರಿ ಬಯಲಿನಲ್ಲಿಯ ಜೋವರ್ರ‍(ಮಹಾರಾಷ್ಟ್ರ)ಯ ಉತ್ಖನನದಲ್ಲಿ ಶಿಲಾ-ತಾಮ್ರಯುಗ ಸಂಸ್ಕೃತಿಯೊಂದು ಕಂಡು ಬಂದು ಅದರ ಮೃತ್ಪಾತ್ರೆ ಬ್ರಹ್ಮಗಿರಿಯಲ್ಲಿ ನಾನು ಕಂಡ ಮೃತ್ಪಾತ್ರೆಯಂತಿವೆ. ಉತ್ಖನನಕಾರರು ಇದನ್ನೇ ಜೋರ್ವೆ ಮೃತ್ಪಾತ್ರೆ ಎಂದು ಹೆಸರಿಸಿದ್ದಾರೆ. ಜೋರ್ವೆ ಶಿಲಾ-ತಾಮ್ರಯುಗ ಸಂಸ್ಕೃತಿ ಕ್ರಮೇಣ ಭೀಮಾ ನದಿ ಮಾರ್ಗವಾಗಿ ಬ್ರಹ್ಮಗಿರಿಯೂ ಸೇರಿದಂತೆ ಕೃಷ್ಣಾ ತುಂಗಭದ್ರ ಪ್ರದೇಶಕ್ಕೆ ಪ್ರಸರಿಸಿದ ವಿಷಯವನ್ನು ನಾನು ಬೇರೆಡೆಯಲ್ಲಿ ವಿವರಿಸಿದ್ದೇನೆ.

ಆದ್ದರಿಂದ ಇವೆರಡೂ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಬ್ರಹ್ಮಗಿರಿಯಲ್ಲಿ ಉತ್ಖನನವನ್ನು ಮುಂದುವರೆಸುವ ಅವಶ್ಯಕತೆಯಿದೆ.

ಸಂಸ್ಕೃತಿಗಳ ವಿಂಗಡಣೆ ಮತ್ತು ಅನುಕ್ರಮ

ಬ್ರಹ್ಮಗಿರಿಯಲ್ಲಿ ಒಟ್ಟು ಮೂರು ಮತ್ತು ಚಂದ್ರವಳ್ಳಿಯಲ್ಲಿ ಎರಡು ಭಿನ ಭಿನ್ನ ಸಂಸಕೃತಿಗಳನ್ನು ಗುರುತಿಸಲಾಯಿತು. ಬ್ರಹ್ಮಗಿರಿಯಲ್ಲಿ ಮೇಲಿನ ೧ ರಿಂದ ೬ ಪದರುಗಳಲ್ಲಿ ಇಟ್ಟಿಗೆ ಚೂರುಗಳು, ಗೋಡೆಗಳ ಅವಶೇಷಗಳು, ಕಬ್ಬಿಣದ ಇತರೆ ಲೋಹಗಳ ವಸ್ತುಗಳು, ಕಲ್ಲಿನ, ಸುಟ್ಟ ಮಣ್ಣಿನ, ದಂತದ ಲೋಹದ ಬಳೆಗಳು, ಮಣಿಗಳು ಹೇರಳವಾಗಿ ಮಣ್ಣಿನ ಪಾತ್ರಗಳು ಇದ್ದವು. ಮಣ್ಣಿನ ಪಾತ್ರಗಳಲ್ಲಿ ಕೆಂಪುವರ್ಣದ ಲೇಪನದಡಿಯಲ್ಲಿ ಬೀಳಿ ಬಣ್ಣದ ರೇಖಾಚಿತ್ರಗಳುಳ್ಳ ಕಪ್ಪು-ಕೆಂಪು, ಕೆಂಪುಬಣ್ಣದವು (Russet coated white painted pottery) ವಿಶೇಷವಾಗಿದ್ದವು.

ಈ ವಿಧವಾದ ಪಾತ್ರೆಗಳು ಸಾತವಾಹನ ಅರಸರು ಆಳುವ ಕಾಲದಲ್ಲಿ ಬಳಕೆಯಲ್ಲಿತ್ತು. ನಮ್ಮ ಪುರಾತನ ಗ್ರಂಥಗಳಲ್ಲಿ ಉಲ್ಲೇಖವಾದ ಅನೇಕ ಪ್ರಾಚೀನ ಜನವರ್ಗಗಳಲ್ಲಿ ಈಗಿನ ಆಂಧ್ರಪ್ರದೇಶದಲ್ಲಿದ್ದ ‘ಆಂಧ್ರ ಭೃತ್ಯ’ರೆಂಬುವರು ಒಬ್ಬರು. ಸಾತವಾಹನ ಅರಸರು ಈ ವರ್ಗಕ್ಕೆ ಸೇರಿದವರೆಂಬ ಊಹೆಯಿತ್ತು. ಇವರ ರಾಜಧನಿ ಮೊದಲು ಶ್ರೀಕಾಕುಲಂ ಎಂಬಲ್ಲಿ ಇತ್ತು ಎಂಬ ವಾದವೂ ಇದೆ. ಆಂಧ್ರಪದೇಶದಲ್ಲಿಯ ಕೊಂಡಾಪುರ ಮುಂತಾದೆಡೆಗಳಲ್ಲಿ ನಡೆದ ಹಿಂದಿನ ಉತ್ಖನನಗಳಲ್ಲಿ ಈ ವಿಧವಾದ ಮಣ್ಣಿನ ಪಾತ್ರೆಗಳು ದೊರೆತಿದ್ದವು. ಈ ಎಲ್ಲ ಕಾರಣಗಳಿಂದ ಈ ವಿಧವಾದ ಪಾತ್ರೆ ಆಂಧ್ರಭೃತ್ಯರ ಕಾಲದ ಮತ್ತು ಪ್ರದೇಶದ ವೈಶಿಷ್ಟ್ಯವಾಗಿ ತೋರಿತು. ಆದುದರಿಂದ ಬ್ರಹ್ಮಗಿರಿಯಲ್ಲಿ ಈ ವಿಧವಾದ ಪಾತ್ರಗಳುಳ್ಳ ಸಂಸ್ಕೃತಿಯನ್ನು ‘ಆಂಧ್ರ ಸಂಸ್ಕೃತಿಯೆಂದು ಕರೆಯಲಾಯಿತು. ಈ ಸಂಸ್ಕೃತಿಯನ್ನೇ ಕೃಷ್ಣರವರು “ಇಸಿಲ ಸಂಸ್ಕೃತಿ”ಯೆಂದರು.

ಚಂದ್ರವಳ್ಳಿಯಲ್ಲಿ ಈ ಸಂಸ್ಕೃತಿ ಸ್ಪಷ್ಟವಾಗಿದೆ. ಇಲ್ಲಿ ಸಾತವಾಹನ ಅರಸರ ಕಾಲ್ಯದ ನಾಣ್ಯಗಳು, ರೋಂ ದೇಶದ ಚಕ್ರವರ್ತಿಗಳಾಗಿದ್ದ ಆಗಸ್ಟಸ್ ಮತ್ತು ಟೈಬೀರಿಯಸ್ ಪ್ರ.ಶ. ೧೪-೩೭ ನಾಣ್ಯಗಳು, ಒಂದು ಅಚ್ಚೊತ್ತಿದ ನಾಣ್ಯ ಮುದ್ರೆ ‘ರೌಲೆಟೆಡ್’ ಹಾಗೂ ಕೆಂಪು ಲೇಪನದಡಿಯ ಬಿಳಿ ಬಣ್ಣದ ಚಿತ್ರಗಳುಳ್ಳ ಮಣ್ಣಿನ ಪಾತ್ರೆಗಳು ಇಟ್ಟಿಗೆ ಗೋಡೆಯ ಅವಶೇಷಗಳು ದೊರೆತವು.

ಅನಂತರದ ಶೋಧನೆಗಳಲ್ಲಿ ರೇಖಾಚಿತ್ರಗಳುಳ್ಳ ವಿಶಿಷ್ಟ ಮಣ್ಣಿನ ಪಾತ್ರೆಗಳು ಆಂಧ್ರ ಭೃತ್ಯರ ಅಥವಾ ಸಾತವಾಹನರ ಅರಸರ ರಾಜ್ಯದ ಪ್ರದೇಶದಲ್ಲಿಯೆ ಅಲ್ಲದೆ ದಕ್ಷಿಣ ಭಾರತದ ಇನ್ನಿತರ ಕಡೆಗಳಲ್ಲಿಯೂ ಇದ್ದುದು ತೋರಿಬಂತು. ಇವು ಆ ಜನವರ್ಗದ ಜೀವನ ವಸ್ತುಗಳಲ್ಲಿಯ ವೈಶಿಷ್ಟ್ಯವೇನಲ್ಲ. ಆದುದರಿಂದ ಇವನ್ನೊಳಗೊಂಡ ಸಂಸ್ಕೃತಿಯನ್ನು ಆಂಧ್ರಸಂಸ್ಕೃತಿಯೆಂದು ಕರೆಯುವುದು ತಪ್ಪಾಗುವುದೆಂದು ತೋರಿತು. ಈ ಸಂಸ್ಕೃತಿಯು ಇತಿಹಾಸ ಆರಂಭ ಕಾಲದ್ದಾದ್ದರಿಂದ ಇದನ್ನು ಈಗ ‘ಇತಿಹಾಸ ಪ್ರಾರಂಭ ಕಾಲದ ಸಂಸ್ಕೃತಿ’ಯೆಂದಷ್ಡೆ ಹೇಳಲಾಗುತ್ತಿದೆ.

೭ ರಿಂದ ೮ ಪದರುಗಳವರೆಗೆ ಇಟ್ಟಿಗೆ ಕಟ್ಟಡಗಳ ಭಾಗಗಳಾಗಲಿ, ನಾಣ್ಯಗಳಾಗಲಿ, ಚಿತ್ರದ ಮಣ್ಣಿನ ಪಾತ್ರಗಳಾಲಿ ಸಿಗಲಿಲ್ಲ. ಇವುಗಳಿಗೆ ಬದಲು ತುಂಬ ಹೊಳಪುಳ್ಳ, ಕಪ್ಪು-ಕೆಂಪು ಮತ್ತು ಕೆಂಪು ಬಣ್ಣದ ವಿಧ ವಿಧವಾದ ಮಣ್ಣಿನ ಪಾತ್ರೆ, ಕಬ್ಬಿಣದ ವಸ್ತು ಮುಂತಾದವುಗಳು ದೊರೆತವು. ಇದೇ ವಿಧವಾದ ಮಣ್ಣಿನ ಪಾತ್ರೆಗಳು ಮಾತ್ರ ಮತ್ತು ಕಬ್ಬಿಣ ವಸ್ತು. ಮನುಷ್ಯನ ಎಲುಬಿನ ಚೂರು ಮೊದಲಾದವು ಬೃಹತ್ ಶಿಲಾಗೋರಿಗಳಲ್ಲಿದ್ದವು. ಆದುದರಿಂದ ಬೃಹತ್ ಶಿಲಾಗೋರಿಗಳು ಈ ಕಾಲದ್ದೆಂದು ಖಚಿತವಾಯಿತು. ಇವುಗಳು ಈ ಕಾಲದ ಹೆಗ್ಗುರತಾದ್ದರಿಂದ, ಕಾಲದ ಸಂಸ್ಕೃತಿಯನ್ನು ‘ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿ’ ಎಂದು ಕರೆಯಲಾಯಿತು. ಬೃಹತ್ ಶಿಲಾಗೋರಿಗಳು ವಸತಿ ಸ್ಥಳದಿಂದ ಹೊರಗೆ ಇದ್ದವು.

ಈ ಸಂಸ್ಕೃತಿಯ ಅಂತ್ಯಭಾಗದ ಕುರುಹುಗಳು ಚಂದ್ರವಳ್ಳಿಯಲ್ಲಿಯೂ ದೊರೆತವು. ಇಲ್ಲಿ ಪ್ರತ್ಯೇಕವಾಗಿ ಬೃಹತ್ ಶಿಲಾಗೋರಿಗಳನ್ನು ಅಗೆಯಲಿಲ್ಲ. ಕೃಷ್ಣರವರು ಇದನ್ನು ಕಬ್ಬಿಣಯುಗದ ಸಂಸ್ಕೃತಿಯೆಂದಿದ್ದರು.

ಪದರು ೯ ರಿಂದ ೧೮ರವೆರೆಗೆ ಮೇಲೆ ಹೇಳಿದ ಯಾವ ವಿಧವಾದ ಮಣ್ಣಿನ ಪಾತ್ರಗಳು ಕಬ್ಬಿಣದ ಸಾಮಾನುಗಳು ಇರಲಿಲ್ಲ. ಹೆಚ್ಚಾಗಿ ಕೈಯಿಂದ ಮಾಡಿದ ಬೂದು ಬಣ್ಣದ ಬೇರೆ ಬೇರೆ ಆಕಾರದ ಪಾತ್ರೆಗಳಿದ್ದವು. ಉಜ್ಜಿ ಉಜ್ಜಿ ನಯಮಾಡಿದ ಕಲ್ಲಿನ ಕೊಡಲಿಗಳು ನೀಲವಾದ ಕಲ್ಲಿನ ತೆಳು ಚಕ್ಕೆಗಳು, ಕ್ವಚಿತ್ತಾಗಿ ತಾಮ್ರದ, ಕಂಚಿನ ವಸ್ತುಗಳಿದ್ದವು. ಅಲ್ಲದೆ ವಸತಿ ಸ್ಥಳಗಳಲ್ಲಿ ಶವಕುಣಿಗಳು, ಅಸ್ತಿ ಮೃತ್ಪಾತ್ರೆಗಳಿದ್ದವು. ಅತ್ಯಂತ ಕೆಳಗಿನ ಪದರಿನಲ್ಲಿ ನೇರಳೆ ಬಣ್ಣದ ರೇಕಾ ಚಿತ್ರಗಳುಳ್ಳ ಮಡಿಕೆ ಚೂರುಗಳಿದ್ದವು. ಕೊಡಲಿಗಳು ಈ ಸಂಸ್ಕೃತಿಯ ವೈಶಿಷ್ಟ್ಯವಾಗಿತ್ತು. ಒಟ್ಟಿನಲ್ಲಿ ಈ ಸಂಸ್ಕೃತಿ ಇನ್ನೂ ಶಿಲಾಯುಗದ ಸ್ಥಿತಿಯಲ್ಲಿತ್ತೆಂಬುದು ಸ್ಪಷ್ಟವಾಗಿತ್ತು. ಆದುದರಿಂದ ಇದನ್ನು ‘ಉಜ್ಜಿದ ಕೊಡಲಿ ಸಂಸ್ಕೃತಿ’ ಎಂದು ಹೆಸರಿಸಲಾಯಿತು. ಇದನ್ನು ಸಾಮಾನ್ಯವಾಗಿ ರೂಢಿಯಲ್ಲಿ ‘ನೂತನ ಶಿಲಾ ಸಂಸ್ಕೃತಿ’ ಯೆಂದು ಕರೆಯಲಾಗುತ್ತದೆ. ಕೃಷ್ಣರವರು ಮೊದಲೇ ಈ ಸಾಂಸ್ಕೃತಿಕ ಹಂತವನ್ನು ಹಾಗೆ ಕರೆದಿದ್ದರು. ಈ ಸಂಸ್ಕೃತಿಯ ಕುರುಹುಗಳು ಚಂದ್ರವಳ್ಳಿಯ ಉತ್ಖನನದಲ್ಲಿ ತೋರಲಿಲ್ಲ. ಈ ರೀತಿಯಾಗಿ ಬ್ರಹ್ಮಗಿರಿ ನೆಲೆಯಲ್ಲಿ ಮೂರು ಸಂಸ್ಕೃತಿಗಳಿದ್ದು, ಅವುಗಳಲ್ಲಿ ನೂತನ ಶಿಲಾಯುಗ ಸಂಸ್ಕೃತಿ ಅತ್ಯಂತ ಪ್ರಾಚೀನ. ಎರಡನೆಯದು ಕಬ್ಬಿಣಯುಗದ ಬೃಹತ್ ಶಿಲಾಯುಗ ಸಂಸ್ಕೃತಿ ಮತ್ತು ಕೊನೆಯದು ಇತಿಹಾಸ ಆರಂಭಕಾಲದ ಸಂಸ್ಕೃತಿ.

ಸಂಸ್ಕೃತಿಗಳ ವ್ಯಾಪ್ತಿ ಮತ್ತು ಕಾಲಮಾನ

ಈ ಉತ್ಖನನಗಳಲ್ಲಿ ಇನ್ನೊಂದು ವಿಷಯ ನಿಸ್ಸಂದೇಹವಾಗಿ ಸ್ಪಷ್ಟವಾಯಿತು. ಅದೇನೆಂದರೆ ಈ ಸಂಸ್ಕೃತಿಗಳಲ್ಲಿ ಬ್ರಹ್ಮಗಿರಿಯಲ್ಲಿ ನೂತನ ಶಿಲಾಯುಗದ ಜನ ವರ್ಗದವರು ಇನ್ನೂ ವಾಸಮಾಡುತ್ತಿದ್ದಾಗಲೇ ಅನಿರ್ದಿಷ್ಟ ಕಾಲದ ನಂತರ ಅವರೊಡನೆ ಕಬ್ಬಿಣದ ಉಪಯೋಗವನ್ನು ಅರಿತಿದ್ದ ಬೃಹತ್ ಶಿಲಾಸಂಸ್ಕೃತಿಯ ಜನರು ಸೇರಿ ಬಾಳಿದರು. ಇದು ಉತ್ಖನನದಲ್ಲಿಯ ಈ ಹಂತದಲ್ಲಿ ಅಂದರೆ ೮, ೭ ಪದರುಗಳಲ್ಲಿ ಈ ಎರಡು ಸಂಸ್ಕೃತಿಗಳ ಅವಶೇಷಗಳು ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದುದರಿಂದ ತಿಳಿಯಿತು. ಇದರಂತೆಯೆ, ಬೃಹತ್ ಶಿಲಾ ಸಂಸ್ಕೃತಿಯ ಜನರು ಇಲ್ಲಿ ನೆಲೆಸಿದ್ದಾಗ ಸ್ವಲ್ಪ ಸಮಯದ ನಂತರ ವ್ಯವಹಾರದಲ್ಲಿ ನಾಣ್ಯಗಳನ್ನು ಬಳಸುತ್ತಿದ್ದರು. ಸುಟ್ಟ ಇಟ್ಟಿಗೆ ಕಟ್ಟಡಗಳನ್ನು ಕಟ್ಟುವ ಕುಶಲತೆಯುಳ್ಳ ಜನರು ಇವರೊಡನೆ ಸಹ ಬಾಳ್ವೆ ನಡೆಸಿದರು. ಇದು ಕೂಡ ಉತ್ಖನನದಲ್ಲಿ ಸ್ಪಷ್ಟವಾಯಿತು. ೬, ೫, ಮತ್ತು ೪ ಪದರುಗಳಲ್ಲಿ ಬೃಹತ್ ಶಿಲಾ ಸಂಸ್ಕೃತಿ ಮತ್ತು ಇತಿಹಾಸ ಪ್ರಾರಂಭ ಕಾಲದಲ್ಲಿಯ ಸಂಸ್ಕೃತಿಯ ಅವಶೇಷಗಳು ಸಾಕಷ್ಟು ಪ್ರಮಾಣದಲ್ಲಿದ್ದವು.

ಹೀಗೆ ಈ ಸಂಸ್ಕೃತಿಗಳ ನಡುವೆ ವ್ಯಾಪಕತ್ವ ಇದ್ದುದು ಚೆನ್ನಾಗಿ ತಿಳಿಯಿತು. ಕೃಷ್ಣರವರು ಈ ವ್ಯಾಪಕತ್ವವನ್ನು ಸರಿಯಾಗಿ ಗುರುತಿಸಿದ್ದರು. ಆದರೆ ಈ ಸಂಸ್ಕೃತಿಗಳ ಕಾಲಮಾನಗಳನ್ನು ನಿರ್ಧರಿಸುವುದಕ್ಕೆ ಈ ವ್ಯಾಪಕತ್ವದ ಉಪಯೋಗ ತಿಳಿಯುವ ಮುಂಚೆ ಕೃಷ್ಣರವರು ನಿಧನರಾಗಿದ್ದರು. ವ್ಹೀಲರವರು ಇಲ್ಲಿಯ ಸಂಸ್ಕೃತಿಗಳ ಕಾಲಮಾನಗಳನ್ನು ನಿರ್ಧರಿಸಲು ಇದು ಮುಖ್ಯ ಆಧಾರವೆಂಬುದನ್ನು ಮನಗಂಡರು.

ಸಾತವಾಹನ ಅರಸರ ಕಾಲದ ನಾಣ್ಯಗಳು ಮತ್ತು ರೋಂ ದೇಶದ ಚಕ್ರವರ್ತಿಗಳು ಆಗಸ್ಟಸ್ ಮತ್ತು ಟೈಬೀರಿಯಸ್ ಇವೆರ ನಾಣ್ಯಗಳು ಹಾಗೂ ಪ್ರ.ಶ. ೧ನೇ ಶತಮಾನದಿಂದ ಬಳಕೆಗೆ ಬಂದ ರೌಲೆಟೆಡ್ ಮಣ್ಣಿನ ಪಾತ್ರೆಗಳ ಆಧಾರದ ಮೇಲೆ ಇತಿಹಾಸ ಆರಂಭ ಕಾಲದಲ್ಲಿಯ ಈ ಸಂಸ್ಕೃತಿಯ, ಬಹಶಃಶಃ ಪ್ರ.ಶ. ೧ನೇ ಶತಮಾನದ ಮಧ್ಯಭಾಗದಿಂದ ಆರಂಭವಾಗಿರಬೇಕೆಂದು ತರ್ಕಿಸಲಾಯಿತು. ಇದರ ಹಿಂದಿನ ಬೃಹತ್ ಶಿಲಾ ಸಂಸ್ಕೃತಿಯು ಪ್ರ.ಶ. ೧ನೇ ಶತಮಾನದ ಮಧ್ಯಭಾಗದವರೆಗೂ ಇತ್ತೆಂದು ಹೇಳಿದ ಹಾಗಾಯಿತು. ಹಾಗಾದರೆ ಇದು ಯಾವಾಗಿನಿಂದ ಆರಂಭವಾಯಿತು. ಈ ಸಂಸ್ಕೃತಿಯ ಅವಶೇಷಗಳು ಸುಮಾರು ಒಂದು, ಒಂದೂ ಕಾಲು ಮೀ. ಆಳದವರೆಗಿನ ಮಣ್ಣಿನಲ್ಲಿದ್ದವು. ಬೃಹತ್ ಶಿಲಾ ಸಂಸ್ಕೃತಿಯ ಅಷ್ಟು ಹಾಳು ಮಣ್ಣು ಸಂಗ್ರಹವಾಗಲು ಸುಮಾರು ೨೦೦ ವರ್ಷಗಳಾದರೂ ಆಗಿದ್ದಿರಬಹುದೆಂದು ತರ್ಕಿಸಿದರು. ಈ ಸಂಸ್ಕೃತಿ ಜನರ ಅಲ್ಲಿದ್ದ ಬೃಹತ್ ಶಿಲಾಗೋರಿಗಳ ಸಂಖ್ಯೆಯನ್ನು ಮತ್ತು ಅವುಗಳ ನಿರ್ಮಾಣ ಮತ್ತು ಉಪಯೋಗದ ಕಾಲವನ್ನು ವಿಮರ್ಶಿಸಿದಾಗ ಈ ತರ್ಕಬದ್ಧವಾದ ಕಾಲಮಾನ ಸರಿ ಎಂದೆನಿಸಿತು. ಅಂದರೆ ಬೃಹತ್ ಶಿಲಾ ಸಂಸ್ಕೃತಿ ಪ್ರ.ಶ. ೧ನೇ ಶತಮಾನದ ಮಧ್ಯದಲ್ಲಿ ಕೊನೆಗೊಡಿದ್ದರೆ, ಪ್ರ.ಶ. ೨ನೇ ಶತಮಾನದ ಮಧ್ಯದಲ್ಲಿ ಆರಂಭವಾಗಿರಬೇಕು ಎಂದು ಕಂಡು ಕೊಳ್ಳಲಾಯಿತು. ಅಲ್ಲದೆ ಹೆಚ್ಚು ಸುಧಾರಿಸಿದ ಈ ಜನರು ಮೊದಲು ಹೆಚ್ಚಾಗಿ ದಕ್ಷಿಣದಲ್ಲಿಯೇ ಇದ್ದಿರಬೇಕು. ಆದುದರಿಂದ ಇಂಥ ಬೃಹತ್ ಶಿಲಾಗೋರಿಗಳ ನೆಲೆಗಳು ಅಲ್ಲಿ ಹೆಚ್ಚಿವೆ. ಕ್ರಮೇಣ ಇವರು, ನೂತನ ಶಿಲಾಯುಗದ ಜನರು ನೆಲೆಸಿದ್ದ ದಖನ್ ಪ್ರಸ್ತಭೂಮಿಯ ಕಡೆಗೆ ದೊಡ್ಡ ಪ್ರಮಾಣದಲ್ಲಿ ಹೋಗಿರಬೇಕು. ಆದರೆ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದ ದಖ್ಖನ್ ಪ್ರಸ್ಥಭೂಮಿಗೆ ಪ್ರಬಲನಾದ ಅಶೋಕ ಚಕ್ರವರ್ತಿಯ ಕಾಲದಲ್ಲಿ ಈ ಜನರು ಬರಲು ಸಾಧ್ಯವಿರಲಿಲ್ಲ. ಇವರ ಆಗಮನ ಅಶೋಕನ ನಂತರವೇ ಸಾಧ್ಯ. ಆದುದರಿಂದ ಪ್ರ.ಶ.ಪೂ. ೨ನೇ ಶತಮಾನದಲ್ಲಿ ಈ ಜನರ ಬರುವಿಕೆ ಐತಿಹಾಸಿಕವಾಗಿಯೂ ಸಮಂಜಸವೆಂದು ವಾದಿಸಲಾಯಿತು.

ಈ ಬೃಹತ್‌ಶಿಲಾ ಸಂಸ್ಕೃತಿ ನೂತನ ಶಿಲಾಯುಗದ ಕೊನೆಯ ಭಾಗದಲ್ಲಿ ಕಾಣಿಸಿಕೊಂಡಿತು ಎಂದು ಮೇಲೆ ಹೇಳಿದೆಯಷ್ಟೆ. ಅಂದರೆ ನೂತನ ಶಿಲಾಯುಗ ಸಂಸ್ಕೃತಿ ಪ್ರ.ಶ.ಪೂ. ೨ನೇ ಶತಮಾನದವರೆಗೂ ಇತ್ತೆಂದು ಹೇಳಿದ ಹಾಗಾಯಿತು. ಮತ್ತೆ ಇದರ ಆರಂಭ ಎಂದಿನಿಂದ? ಇದರ ಹಾಳು ಮಣ್ಣು ಸುಮಾರು ೨ ಮೀ. ಆಳದಷ್ಟಿದೆ. ಈ ಸಂಸ್ಕೃತಿಯ ಲಕ್ಷಣ ಮುಂತಾದವುಗಳನ್ನು ಪರಿಶೀಲಿಸಿ, ಇಷ್ಟು ಹಾಳುಮಣ್ಣು ಸೇರಲು ಸುಮಾರು ೫೦೦ ಅಥವಾ ೭೦೦ ವರ್ಷಗಳು ಆಗಿದ್ದಿರಬಹುದು. ಅಂದರೆ ಸು.ಪ್ರ.ಶ.ಪೂ ೧೦-೮ನೇ ಶತಮಾನಗಳ ಅಂತರದಲ್ಲಿ ಈ ಸಂಸ್ಕೃತಿಯ ಜನರು ಇಲ್ಲಿ ನೆಲೆಸಲು ಆರಂಭಿಸಿರಬೇಕು ಎಂದು ಅಭಿಪ್ರಾಯ ಪಡುವಂತಾಯಿತು.

ಈ ರೀತಿ ವ್ಹೀಲರವರು ಬಹಳ ವಿಚಾರಪರರಾಗಿ ಎಲ್ಲ ಆಧಾರಗಳನ್ನು ಪರಿಶೀಲಿಸಿ, ಈ ಸಂಸ್ಕೃತಿಗಳ ಅನುಕ್ರಮದ ವ್ಯಾಪ್ತಿಗಳ ಆಧಾರದ ಮೇಲೆ ಇವುಗಳ ಕಾಲಮಾನಗಳನ್ನು ನಿರ್ಧರಿಸಿದರು. ಇವರ ಉತ್ಖನನಗಳ ಮೂರು ಮುಖ್ಯ ಪ್ರಯೋಜನ ಕಾರಿಯಾದ ಅಂಶಗಳೆಂದರೆ

೧. ಕ್ರಮವರಿತ, ವೈಜ್ಞಾನಿಕ ರೀತಿಯ, ಚಿತ್ರಸಹಿತವಾದ ಉತ್ಖನನದ ವರಿದಿ. ದಕ್ಷಿಣ ಭಾರತದ ಪುರಾತತ್ವ ಸಂಶೋಧನೆಯ ಇತಿಹಾಸದಲ್ಲಿಯ ಇಂಥ ವೈಜ್ಞಾನಿಕ ವರದಿಗಳಲ್ಲಿ ಬ್ರಹ್ಮಗಿರಿ, ಚಂದ್ರವಳ್ಳಿ ಮತ್ತು ಅರಕಮೆಡುವಿನ ಉತ್ಖನನಗಳ ವರದಿಗಳೇ ಪ್ರಪ್ರಥಮ. ಅವು ಈಗಲೂ ಸಂಶೋಧಕರಿಗೆ ಮಾದರಿಯಾಗಿವೆ.

೨. ನೂತನ ಶಿಲಾಯುಗದ ಸಂಸ್ಕೃತಿಯೊಡನೆ ಸೇರಿ ನೆಲೆಸಿದ ಕಬ್ಬಿಣದ ಉಪಯೋಗವನ್ನು ಅರಿತಿದ್ದ ಜನರೇ ಅಲ್ಲಿಯ ಸಾವಿರಾರು ಬೃಹತ್ ಶೀಲಾಗೋರಿಗಳ ನಿರ್ಮಾಪಕರೆಂದು ಸಿದ್ಧಪಡಿಸಿದ್ದು, ಅದುವರೆಗೂ ನೂರಾರು ಬೃಹತ್ ಶಿಲಾಗೋರಿಗಳುಳ್ಳ ಅನೇಕ ನೆಲೆಗಳ ಶೋಧನೆ ಆಗಿದ್ದು, ಅವುಗಳ ಸ್ವರೂಪ, ಲಕ್ಷಣಗಳನ್ನು ತಕ್ಕಮಟ್ಟಿಗೆ ಗೊತ್ತುಪಡಿಸಿದ್ದರೂ ಅವುಗಳ ನಿರ್ಮಾಪಕರ ವಸತಿ, ನೆಲಗಳನ್ನು ಗೊತ್ತುಮಾಡಿ, ಅವರ ಸಂಸ್ಕೃತಿಯ ಸ್ಥೂಲ ಸ್ವರೂಪವನ್ನು ತಿಳಿಯುವ ಪ್ರಯತ್ನ ಆಗಿರಲಿಲ್ಲ. ಈ ದಿಶೆಯಲ್ಲಿ ವ್ಹೀಲರವರ ಪ್ರಯತ್ನವೇ ಮೊದಲು, ನಿಜವಾಗಿಯೂ ಬ್ರಹ್ಮಗಿರಿಯಲ್ಲಿಯ ಉತ್ಖನನದ ಮುಖ್ಯ ಉದ್ದೇಶವೇ ಇದಾಗಿತ್ತು.

೩. ಕಾಲಮಾನವನ್ನು ನಿಗದಿಮಾಡಬಹುದಾದ ಸಂಸ್ಕೃತಿಯ ಸಹಾಯದಿಂದ ಮತ್ತು ಅದರೊಡನೆ ಇತರ ಸಂಸ್ಕೃತಗಳ ಅನುಕ್ರವಾಗಿ ವ್ಯಾಪ್ತಿಗಳನ್ನು ಗುರುತಿಸಿ ಅವುಗಳ ಆಧಾರದ ಮೇಲೆ ಪ್ರಥಮಬಾರಿಗೆ ಆ ಸಂಸ್ಕೃತಿಗಳ ಕಾಲಮಾನಗಳನ್ನು ಗೊತ್ತುಪಡಿಸಿದ್ದು.

ಇತ್ತೀಚಿನ ಶೋಧನೆ ಮತ್ತು ಕಾಲಮಾನಗಳ ಪುನರ್ವಿಮರ್ಶೆ

ಆದುದರಿಂದ ಈ ನೆಲೆಗಳಲ್ಲಿಯ ಉತ್ಖನನಗಳಲ್ಲಿಯ ಕ್ರಮ, ವಿಧಾನ ಮತ್ತು ಫಲಿತಾಂಶಗಳು ಮುಂದಿನ ಸಂಶೊಧಕರಿಗೆ ಮಾರ್ಗದರ್ಶಿಯಾಗಿದ್ದು ಇಂದಿಗೂ ಉಪಯೋಗವಾಗಿವೆ. ಇದರ ನಂತರ ಕರ್ನಾಟಕದಲ್ಲಿ ಇದುವರೆಗೂ ಸುಮಾರು ೧೫ಕ್ಕೂ ಹೆಚ್ಚು ನೆಲೆಗಳಲ್ಲಿ ಉತ್ಖನನಗಳಾಗಿ ಈ ಮೂರು ಸಂಸ್ಕೃತಿಗಳ ಬಗ್ಗೆ ಅನೇಕ ಹೊಸ ವಿಷಯಗಳು ತಿಳಿದಿವೆ.

ಉತ್ಖನನಗಳ ಮೂಲಕ ಕಂಡುಬಂದ ಪ್ರಾಗೈತಿಹಾಸಿಕ ಸಂಸ್ಕೃತಿಗಳ ಕಾಲಮಾನಗಳನ್ನು ಮೇಲೆ ವಿವರಿಸಿದ ವಿಧಾನದಿಂದ ತಿಳಿಯಲು ಪ್ರಯತ್ನಿಸಲಾಗಿದೆ. ಜೊತೆಗೆ ಇಂಗಾಲ-೧೪, ಎಂಬ ಹೊಸ ಬಗೆಯ ವೈಜ್ಞಾನಿಕ ತಂತ್ರವನ್ನು ಬಳಸಲಾಗುತ್ತಿದೆ. ತತ್ಪರಿಣಾಮವಾಗಿ ಬ್ರಹ್ಮಗಿರಿಯಲ್ಲಿಯ ಸಂಸ್ಕೃತಿಗಳ ಕಾಲಮಾನಗಳನ್ನು ಪುನರ್ವಿಮರ್ಶಿಸಬೇಕಾಗಿದೆ. ಇಲ್ಲಿಯ ಇತಿಹಾಸ ಕಾಲದಲ್ಲಿಯ ಸಂಸ್ಕೃತಿಯ ಸುಮಾರು ಪ್ರ.ಶ. ೧ನೇ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭವಾಯಿತೆಂದು ಅವರಿಗೆ ದೊರೆತ ಆಧಾರಗಳ ಮೇಲೆ ವ್ಹೀಲರವರು ತರ್ಕಿಸಿದರೆಂದು ಮೇಲೆ ಹೇಳಿದೆಯಷ್ಟೆ. ಆದರೆ ಇದು ಈ ಕಾಲಕ್ಕಿಂತಲೂ ಇನ್ನೂ ೨೫೦-೩೦೦ ವರ್ಷಗಳ ಹಿಂದೆಯೇ. ಅಂದರೆ ಪ್ರ.ಶ.ಪೂ ೩ನೇ ಶತಮಾನದಲ್ಲಿ ಆರಂಭವಾಗಿ ಪ್ರ.ಶ. ೩ನೇ ಶತಮಾನದವರೆಗೂ ಅಸ್ತಿತ್ವದಲ್ಲಿತ್ತೆಂದು ಇತ್ತೀಚಿನ ಶೋಧನೆಗಳ ಪ್ರಕಾರ ಹೇಳಲು ಅಡ್ಡಿಯಿಲ್ಲ. ಅಂದರೆ ಮೌರ್ಯ ಚಕ್ರವರ್ತಿ ಅಶೋಕನ ಕಾಲದಿಂದ ಇದು ಅಭಿವೃದ್ದಿ ಹೊದುತ್ತಾ ಬಂದಿರಬೇಕು. ಇದರ ಈ ಪುನರ್ವಿಮರ್ಶಿತ ಕಾಲಮಾನ ಸಂಬಂಧದಿಂದ ಮತ್ತು ಇತರ ಕಡೆಗಳಲ್ಲಿಯ ಶೋಧನೆಗಳ ಫಲಿತಾಂಶಗಳಿಂದ ಇಲ್ಲಿಯ ಬೃಹತ್‌ಶಿಲಾ ಸಂಸ್ಕೃತಿಯ ಕಾಲಮಾನ ಸುಮಾರು ಪ್ರ.ಶ.ಪೂ ೮೦೦ ಅಥವಾ ೭೦೦ ರಿಂದ ಪ್ರ.ಶ.ಪೂ. ೨೦೦ ಅಥವ ೧೦೦ರ ವರೆಗೆಂದು ಮತ್ತು ನೂತನ ಶಿಲಾಯುಗ ಸಂಸ್ಕೃತಿಯು ಪ್ರ.ಶ.ಪೂ. ೧೬೦೦ ಅಥವಾ ೧೫೦೦ ರಿಂದ ಪ್ರ.ಶ.ಪೂ ೮೦೦ರ ವರೆಗೆ ಇತ್ತೆಂದು ತಿಳಿದುಬಂದಿದೆ.

ಬ್ರಹ್ಮಗಿರಿ, ಚಂದ್ರವಳ್ಳಿ ಮಹತ್ವ

ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯಲ್ಲಿಯ ಪ್ರಶಂಸನೀಯ ಶೋಧನೆಗಳು ಮುಂದಿನ ಪುರಾತತ್ವ ಸಂಶೋಧಕರಿಗೆ ಮಾದರಿಗಳಾಗಿ, ಕರ್ನಾಟಕದಲ್ಲಿ ಯಾವ ಯಾವ ಕಾಲದ ಪ್ರಾಗಿತಿಹಾಸ ಸಂಸ್ಕೃತಿಗಳ ಬೆಳವಣಿಗೆ ಮತ್ತು ನಾಗರೀಕತೆಯ ಆರಂಭ ಹೇಗಾಯಿತೆಂಬುದರ ಒಂದು ಸರಿಯಾದ ಸ್ಥೂಲ ಚಿತ್ರವನ್ನು ಪ್ರಥಮ ಸಲಕ್ಕೆ ಒದಗಿಸಿದವು.

ಈ ಉತ್ಖನನಗಳಿಂದ ಈ ಸಂಸ್ಕೃತಿಗಳ ಎಲ್ಲ ವಿಷಯಗಳು ನಮಗೆ ತಿಳಿದಿಲ್ಲ. ತಿಳಿದಿರುವುದರಲ್ಲಿ ಕೆಲವು ಅರ್ಥಪೂರ್ಣವಾಗಿಲ್ಲ. ಉದಾಹರಣೆಗೆ ಬ್ರಹ್ಮಗಿರಿಯ ನೂತನ ಶಿಲಾಯುಗ ಜನರ ಮನೆಯ ಅವಶೇಷಗಳು ಅಗೆದ ಭಾಗಗಳಲ್ಲಿ ದೊರೆತಿಲ್ಲ. ಹಾಗಾದರೆ ಈ ಜನರು ವಾಸಕ್ಕೆ ಮನೆಗಳನ್ನು ಕಟ್ಟಿಕೊಂಡಿರಲಿಲ್ಲವೆಂದು ಅರ್ಥವಲ್ಲ. ಅಗೆದ ಭಾಗದಲ್ಲಿ ಮನೆಗಳು ಕಂಡುಬರುವುದಿಲ್ಲ. ವಿಶಾಲ ಪ್ರಮಾಣದಲ್ಲಿ ಅಗೆದಲ್ಲಿ ಮನೆಗಳಿದ್ದ ಭಾಗಗಳು ಸಿಗುವುದರಲ್ಲಿ ಸಂಶಯವಿಲ್ಲ. ಆದುದರಿಂದ ಈಗ ತಿಳಿದಷ್ಟು ವಿಷಯಗಳನ್ನು ಮಾತ್ರ ಇಲ್ಲಿ ನಿರೂಪಿಸಲಾಗಿದೆ.

ನೂತನ ಶಿಲಾಯುಗ ಸಂಸ್ಕೃತಿ

ಈ ನೆಲೆಗಳಲ್ಲಿ ಕಂಡುಬಂದ ಸಂಸ್ಕೃತಿಗಳಲ್ಲಿ ಅತ್ಯಂತ ಪ್ರಾಚೀನವಾದುದು ಕೃಷ್ಣರವರ ರೊಪ್ಪ ಸಂಸ್ಕೃತಿ. ಇದು ಸೂಕ್ಷ್ಮ ಶಿಲಾಯುಗ ಸಂಸ್ಕೃತಿ. ಇದರ ಅತಿ ಸಣ್ಣ ಸಣ್ಣ ತೆಳು ಚೆಕ್ಕೆಕಲ್ಲಿನ ಶಿಲಾಯುಧಗಳನ್ನು ಬಿಟ್ಟರೆ ಮತ್ತೇನೂ ಈ ನೆಲೆಯಿಂದ ತಿಳಿದುಬಂದಿಲ್ಲ. ವ್ಹೀಲರವರ ಉತ್ಖನನದಲ್ಲಿ ಈ ಸಾಂಸ್ಕೃತಿಕ ಹಂತ ಕಂಡು ಬರಲಿಲ್ಲ. ನೂತನ ಶಿಲಾಯುಗ ಸಂಸ್ಕೃತಿ ಬ್ರಹ್ಮಗಿರಿಯಲ್ಲಿ ಮಾತ್ರ ಸ್ಪಷ್ಟವಾಗಿದೆ. ಚಂದ್ರವಳ್ಳಿಯಲ್ಲಿ ಕೃಷ್ಣರವರ ಶೋಧನೆಯಲ್ಲಿ ದೊರೆತ ಕೆಲವು ಕಲ್ಲಿನ ಆಯುಧಗಳನ್ನು ಬಿಟ್ಟರೆ, ಈ ಸಂಸ್ಕೃತಿಯ ಇತರ ಅವಶೇಷಗಳು ಮತ್ತೆಲ್ಲೂ ದೊರೆತಿಲ್ಲ. ವ್ಹೀಲರವರ ಉತ್ಖನನದಲ್ಲಿ ಈ ಸಂಸ್ಕೃತಿಯ ಹಂತವಾಗಲಿ ಅಲ್ಪ ಸ್ವಲ್ಪ ಅವಶೇಷಗಳಾಗಲಿ ದೊರೆಯಲಿಲ್ಲ.

ಮನೆಗಳು

ಈ ಜನರು ಮಣ್ಣು ಮೆತ್ತಿದ್ದ ತಡಿಕೆ ಗೋಡೆ ಮತ್ತು ಹುಲ್ಲಿನ ಅಥವಾ ಸೊಪ್ಪಿನ ಮಾಡು ಇದ್ದ ಗುಡಿಸಲಿನಂಥ ದುಂಡಾದ ಅಥವಾ ಚೌಕೋನದ ಮನೆಗಳಲ್ಲಿ ವಾಸಮಾಡುತ್ತಿದ್ದರೆಂದು ಊಹಿಸಬಹುದು. ಇವೆಲ್ಲವೂ ಬಹಳ ಬೇಗ ನಾಶವಾಗಿ ಮಣ್ಣಿಗೆ ಕೂಡಿದ್ದರಿಂದ ಮನೆಗಳ ಅವಶೇಷಗಳು ಸಿಗುವುದು ಕಷ್ಟ. ಒಂದೆರಡು ಕಡೆಗಳಲ್ಲಿ ಪ್ರಾಯಶಃ ಗೋಡೆಗಳಲ್ಲಿ ಅಲ್ಲಲ್ಲಿದ್ದ ಮರದ ಗೂಟಗಳನ್ನು ಹುಗಿದ ಕುಣಿಗಳು ಮಾತ್ರ ಗುರುತಿಸಲಾಯಿತು.

ಕಲ್ಲಿನ ಆಯುಧಗಳು

ತಮ್ಮ ಜೀವನೋಪಾಯದ ನಿತ್ಯ ಕೆಲಸಗಳಿಗೆ, ಅಂದರೆ ಮರ ಕಡಿಯುವುದಕ್ಕೆ ಕೃಷಿಮಾಡಲು ಬೇಕಾದ ಮರದ ಸಾಮಾನುಗಳನ್ನು ತಯಾರಿಸುವುದಕ್ಕೆ ಕಲ್ಲಿನಲ್ಲಿ ರೂಪಿಸಿದ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಮುಖ್ಯವಾಗಿ ಎರಡು ವಿಧವಾದ ಆಯುಧಗಳು, ಉತ್ತಮ ಜಾತಿಯ ಗಟ್ಟಿಕಲ್ಲಿನ ಸಣ್ಣ ಸಣ್ಣ ಚಕ್ಕೆ ಆಯುಧಗಳು ಮತ್ತು ಗಟ್ಟಿಯಾದ ಕರಿಕಲ್ಲಿನ ಕೊಡಲಿ, ಬಾಚಿ, ಉಳಿ ಮುಂತಾದವು.

ಚಕ್ಕೆ ಆಯುಧಗಳ ಕಲ್ಲು ಬಹಳ ಗಟ್ಟಿಯಾಗಿಯೂ ನುಣುಪಾಗಿಯೂ ಸ್ವಲ್ಪ ಹೊಳಪಾಗಿಯೂ ಇದೆ. ಈ ಕಲ್ಲಿನಿಂದ ಮತ್ತೊಂದು ಕಲ್ಲಿಗೆ ಹೊಡೆದಾಗ ಬೆಂಕಿಯ ಕಿಡಿಗಳು ಏಳುತ್ತವೆ. ಆದುದರಿಂದ ಹಳ್ಳಿಯ ಜನರು ಈ ಕಲ್ಲಿಗೆ ಚಕಮಕಿ ಕಲ್ಲು ಎಂದು ಹೇಳುತ್ತಾರೆ. ಈ ಕಲ್ಲಿನಲ್ಲಿ ಕೆಲವು ಬಗೆಗಳಿವೆ. ಇದರಿಂದ ಒಂದು ವಿಶಿಷ್ಟ ತಂತ್ರದಿಂದ ತೆಳ್ಳನೆಯ ನೀಳವಾದ ಚಕ್ಕೆಗಳನ್ನು ಎಬ್ಬಿಸಬಹುದು. ಚಕ್ಕೆಗಳ ಬದಿ ಬಹಳ ಹರಿತವಾಗಿರುತ್ತದೆ. ಒಳ್ಳೆಯ ಸ್ಟೀಲ್ ಬ್ಲೇಡ್ ಇದ್ದಹಾಗೆ. ಭೂವಿಜ್ಞಾನಿಗಳು ಈ ಕಲ್ಲುಗಳನ್ನು ಜಾಸ್ಟೆರ್, ಚರ‍್ಟ, ಕ್ಯಾಲ್ಸಿಡೋಣಿ, ಅಗೇಟ್, ಕಾರ‍್ನಿಲಿಯನ್ ಮುಂತಾದ ಹೆಸರುಗಳಿಂದ ವಿಂಗಡಿಸುತ್ತಾರೆ. ಬ್ರಹ್ಮಗಿರಿಯಲ್ಲಿ ಈ ಕಲ್ಲುಗಳ ಜೊತೆಗೆ ಓಪಲ್ ರಾಕ್ ಕ್ರಿಸ್ಟಲ್ ಎಂಬ ಕಲ್ಲುಗಳಲ್ಲಿಯೂ ಮಾಡಿದ ಸುಮಾರು ೧೦೨ ಚಕ್ಕೆ ಆಯುಧಗಳು ದೊರೆತವು. ಜೊತೆಗೆ ೨೩ ಪುಡಿಚಕ್ಕೆಗಳು ಸಿಕ್ಕವು. ಬಹಶಃ ಇಂಥ ಉಪಕರಣಗಳನ್ನು ಸ್ಥಳದಲ್ಲಿಯೆ ಸಿದ್ಧ ಮಾಡಲಾಗುತ್ತಿತ್ತೆಂದು ಹೇಳಬಹುದು. ಈ ನೀಳ ಚಕ್ಕೆ ಆಯುಧಗಳು ಸುಮಾರು ಉದ್ದ ೧ ಸೆಂ.ಮೀ. ನಿಂದ ನಾಲ್ಕೂವರೆ ಸೆಂ.ಮೀ. ವರೆಗೆ, ಅಗಲ ಅರ್ಧ ಸೆಂ.ಮೀ. ನಿಂದ ೧ ಸೆಂ.ಮೀ. ವರೆಗೆ, ದಪ್ಪ ೧ರಿಂದ ೨ ಮಿ.ಮೀ. ವರೆಗೆ ಇರುತ್ತವೆ. ಒಂದು ಬದಿಯಲ್ಲಿ ತಗ್ಗು ಪಟ್ಟೆ ಪಟ್ಟೆಗಳಿರುತ್ತವೆ.

ಕೆಲವು ಚಕ್ಕೆಗಳಲ್ಲಿ ಎರಡು ಬದಿಗಳು ಹರಿತವಾಗಿರುತ್ತವೆ. ಮತ್ತೆ ಕೆಲವು ಚಕ್ಕೆಗಳಲ್ಲಿ ಒಂದು ಬದಿಯನ್ನು ಉದ್ದಕ್ಕೂ ಹದವರಿತು ಸಣ್ಣಗೆ ಮುರಿದು ಮೊಂಡು ಮಾಡಲಾಗಿರುತ್ತೆ. ಮೊಂಡು ಮಾಡಿದ ಬದಿ ನೋಡುವುದಕ್ಕೆ ಇಲಿಗಳು ಮರವನ್ನೋ ಕಾಯಿ ಬಟ್ಟಲನ್ನು ತರಿದ ಹಾಗೆ ಕಾಣುವುದು. ಒಂದು ಉದ್ದನೆ ಕೋಲಿನಲ್ಲಿ ಅದರ ಅರ್ಧದ ಉದ್ದಕ್ಕೂ ಒಂದು ಗೆರೆಯ ಹಾಗೆ ಕೊರಿದು, ಅದರಲ್ಲಿ ಮೊಂಡು ಬದಿಯು ಬರುವ ಹಾಗೆ ೨, ೩ ಚಕ್ಕೆಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದು ಸಿಕ್ಕಿಸಿ, ಗಿಡ-ಮರಗಳ ಅಂಟಿನಿಂದ ಗಟ್ಟಿಮಾಡಿದರೆ ಹಿಡಿಕೆಯುಳ್ಳ ಚಾಕು ಆಗುವುದು. ಹೀಗೆಯೇ, ಕೆಲವು ಸಣ್ಣಚಕ್ಕೆಗಳ ಒಂದು ಬದಿಯನ್ನು ಅರ್ಧ ಚಂದ್ರಾಕೃತಿಯ ಹಾಗೆ ಮೊಟಕುಮಾಡಿ, ಜಿಂಕೆ ಕೊಂಬಿನಲ್ಲಿ ಗೆರೆ ಕೊರೆದು ಅವುಗಳನ್ನು ಅದರಲ್ಲಿ ಜೋಡಿಸಿ ಬಲಮಾಡಿದಲ್ಲಿ ಕುಡುಗೋಲಿನ ಹಾಗೆ ಆಗುವುದು. ಚಕ್ಕೆಗಳ ಒಂದು ಅಥವಾ ಎರಡು ಬದಿಗಳನ್ನು ಅವುಗಳ ಒಂದು ತುದಿ ಮೊನೆಯಾಗುವ ಹಾಗೆ ಮೊಂಡು ಮಾಡಿ, ದುಂಡನೆಯ ಕೋಲಿನ ಒಂದು ತುದಿಗೆ ಸಿಕ್ಕಿಸಿದರೆ, ತೂತು ಮಾಡುವ ಒಳ್ಳೆ ಸಾಧನವಾಗುತ್ತದೆ. ಅಥವಾ ಒಂದು ಚಕ್ಕೆಯನ್ನು ಓರೆಯಾಗಿ ಅಡ್ಡ ಮುರಿದು ಅದನ್ನು ದುಂಡು ಕೋಲಿನ ತಿದಿಗೆ ಸಿಕ್ಕಿಸಿದರೆ ಕೊರೆಯುವ ಉಳಿಯಾಗುತ್ತದೆ. ಈ ರೀತಿಯಾಗಿ ಈ ಚಕ್ಕೆಗಳನ್ನು ಚಾಕು, ಕೊರೆಯುಳಿ, ಮೊನೆ, ಕುಡಗೋಲು ಮುಂತಾದ ನಾನಾ ವಿಧವಾದ ಆಯುಧಗಳನ್ನಾಗಿ ಮಾಡಿಕೊಳ್ಳಲು ಉಪಯೋಗಿಸಲಾಗುತ್ತದೆ. ಈ ರೀತಿಯ ಉಪಕರಣಗಳನ್ನು ಮಾಡುತ್ತಿದ್ದುದುಕ್ಕೆ ಪಶ್ಚಿಮ ಏಷ್ಯದಲ್ಲಿಯ ಕೆಲವು ಪ್ರಾಚೀನ ನೆಲೆಗಳ ಉತ್ಖನನಗಳಲ್ಲಿ ಮರದ, ಎಲುಬಿನ ಹಿಡಿಕೆಯುಳ್ಳ ಇಂಥ ಚಕ್ಕೆಕಲ್ಲುಗಳ ಸಾಧನಗಳು ದೊರೆತಿವೆ. ಬ್ರಹ್ಮಗಿರಿ ಮತ್ತು ಬೇರೆಡೆಗಳಲ್ಲಿ ಸಾಮಾನ್ಯವಾಗಿ ಈ ಸಾಧನೆಗಳ ಹಿಡಿಕೆಗಳು ಮಣ್ಣಿಗೆ ಕೂಡಿ ಹೋಗಿದ್ದು ಅವುಗಳಿಂದ ಬೇರ್ಪಟ್ಟ ಚಕ್ಕೆಗಳು ಮಾತ್ರ ದೊರೆತಿವೆ.

ಇವುಗಳಲ್ಲಿ ಕೆಲವೇ ವಿಧಗಳಿವೆ. ಕೊಡಲಿ, ಉಜ್ಜುಕೊರಡಿನ ಬಾಜಿ ತರಹದ್ದು. ಉತ್ಖನನದಲ್ಲಿ ಒಟ್ಟು ೪೪ ಉಪಕರಣಗಳು ದೊರೆತವು.ಇವುಗಳಲ್ಲಿ ಕೊಡಲಿಯೆ ಹೆಚ್ಚಾಗಿವೆ.

ಕೊಡಲಿಯು ಸಾಮಾನ್ಯವಾಗಿ ತ್ರಿಕೋನಾಕಾರವಾಗಿರುತ್ತದೆ. ಇದರ ತುದಿಯು ದುಂಡಗಿದ್ದು ಸಣ್ಣದಾಗುತ್ತ ಸ್ವಲ್ಪ ಮೊಂಡಾಗಿರುತ್ತದೆ. ಅಂಚುಗಳು ದುಂಡಾಗಿರಬಹುದು ಅಥವಾ ಸ್ವಲ್ಪ ಮೊನಚಾಗಿರಬಹುದು. ಬಾಯಿ ನೇರವಾಗಿದ್ದು ಅಥವಾ ಅರ್ಧ ಚಂದ್ರಾಕಾರವಾಗಿದ್ದು ಚೂಪಾಗಿದ್ದು ನಯವಾಗಿರುತ್ತದೆ. ಮೈಯೆಲ್ಲಾ ಉಜ್ಜಲಾಗಿದೆ. ಎರಡು ಮೈ ಭಾಗವು ಸಾಮಾನ್ಯವಾಗಿ ಸ್ವಲ್ಪ ಉಬ್ಬಿರುತ್ತವೆ. ಈ ಸಂಸ್ಖೃತಿಯ ಪೂರ್ವಭಾಗದಲ್ಲಿ ಹಚ್ಚಾಗಿ ಮೈ ಚಪ್ಪಟ್ಟೆಯಾಗಿರುವ ಕೊಡಲಿಗಳು ಬಳಕೆಯಲ್ಲಿದವು. ಬಾಚಿಯ ಒಂದು ಮೈ ಅಡ್ಡವಾಗಿ ಸ್ವಲ್ಪ ಮೊನಚಾಗಿ ಉಬ್ಬಿರುತ್ತದೆ. ಮತ್ತೆಂದು ಮೈ ಸಮತಲವಾಗಿರುತ್ತದೆ. ಈ ನೆಲೆಯಲ್ಲಿ ಉತ್ಖನನದ ನಂತರ ಒಂದು ಉಳಿ ಸಿಕ್ಕಿದ್ದಿತು. ಉಳಿಯು ಸ್ವಲ್ಪ ದುಂಡಾಗಿದ್ದು, ಉದ್ದವಾಗಿದ್ದು ಒಂದು ತುದಿ ಸಮತಲವಾಗಿದ್ದು ಮತ್ತೊಂದು ತುದಿಯು ಹರಿತವಾದ ಬಾಯಿ ಉಳ್ಳದ್ದಾಗಿದೆ.

ಉದ್ದನೆಯ ಮರದ ಕಾವಿನ ಒಂದು ತುದಿಯ ಕಡೆ ತೂತನ್ನು ಕೊರೆದು ಅದರಲ್ಲಿ ಕೊಡಲಿಯನ್ನು ತೂರಿಸಿ, ಭದ್ರವಾಗಿ ನಾರಿನಿಂದ ಕಟ್ಟಿದಾಗ ಕಾವುಳ್ಳ ಕೊಡಲಿಯಾಗಿ ಗಿಡ ಮರಗಳನ್ನು ಕಡಿಯಲು ಉಪಯೋಗವಾಗುವುದು. ಕೋನಾಕಾರದಲ್ಲಿ ಬಾಗಿದ ಮರದ ಕಾವಿನ ಒಂದು ತುದಿಗೆ ಬಾಚಿಯನ್ನು ಗಟ್ಟಿಯಾಗಿ ಕಟ್ಟಲ್ಪಟ್ಟಿರುತ್ತದೆ. ಇನ್ನು ಈ ಕಲ್ಲಿನ ಉಪಕರಣಗಳನ್ನು ಆಕಾರಗೊಳಿಸುವ ಕ್ರಮವನ್ನು ತಿಳಿಯೋಣ.

ಮೊದಲು ಉದ್ದನೆ ಅಥವಾ ಸ್ವಲ್ಪ ಹೆಚ್ಚು ಕಡಿಮೆ ತ್ರಿಕೋಣಾಕಾರದ ಕಲ್ಲನ್ನು ಆರಿಸಿಕೊಂಡು, ಅದರ ಮೈಯಿಂದ ಚುಕ್ಕೆಗಳನ್ನು ಎಬ್ಬಿಸಬೇಕಾದ ಆಕಾರಕ್ಕೆ ತುರುವುದು. ಚುಕ್ಕೆಗಳನ್ನು ಎಬ್ಬಿಸಿದ ಮೇಲೆ ಅದರ ಮೇಲೆ ಅದರ ಮೈಯಲ್ಲೆಲ್ಲ ಅಂಕು ಡೊಂಕಾದ ಉಬ್ಬು ತಗ್ಗುಗಳಿರುತ್ತವೆ. ಈ ಅಂಕುಡೊಂಕುಗಳನ್ನು ಹೋಗಲಾಡಿಸಲು ಇನ್ನೊಂದು ಕಲ್ಲಿನ ಕೊರಡಿನಿಂದ ಅವುಗಳನ್ನು ಹೊಡೆದು ತೆಗೆಯಲಾಗುವುದು. ಆ ಮೇಲೆ ಅದರ ಮೈಯನ್ನು ಚೆನ್ನಾಗಿ ಉಜ್ಜುವುದು. ಕೊನೆಯಲ್ಲಿ ಅದರ ಬಾಯಿಯನ್ನು ತಿಕ್ಕಿ ತಿಕ್ಕಿ ನಯಮಾಡುವುದು. ಈ ರೀತಿಯಾಗಿ ನಾಲ್ಕು ಹಂತಗಳಲ್ಲಿ ಈ ಉಪಕರಣಗಳು ಸಿದ್ಧಮಾಡಲಾಗಿತ್ತೆಂದು ತಜ್ಞರ ಪರಿಶೀಲನೆಯಿಂದ ತಿಳಿದು ಬಂದಿದೆ.

ಈ ಉಪಕರಣಗಳ ಬಾಯಿಯ ಭಾಗವನ್ನು ನಯಮಾಡಬೇಕಾಗುವುದು. ಏಕೆಂದರೆ ಕೊಡಲಿಯಿಂದ ಮರ-ಗಿಡಗಳಿಗೆ ಹೊಡೆದಾಗ ಹಿಂದಕ್ಕೆ ಎಳೆಯಲು ಸುಲಭವಾಗುವುದು. ಕೊಡಲಿಯ ಬಾಯಿಭಾಗ ಒರಟಾಗಿದ್ದರೆ ಅದು ಅಲ್ಲಿಯೆ ಗಟ್ಟಿಯಾಗಿ ಸಿಕ್ಕಿಕೊಳ್ಳುತ್ತದೆ. ಹಿಂದಕ್ಕೆ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ.

ತಾಮ್ರ ಕಂಚಿನ ವಸ್ತುಗಳು

ಈ ರೀತಿ ನಯವಾದ ಬಾಯಿಯುಳ್ಳ ಉಜ್ಜಿದ ಕಲ್ಲಿನ ಕೊಡಲಿಯು ಈ ಸಂಸ್ಕೃತಿಯ ಒಂದು ವೈಶಿಷ್ಟ್ಯ. ಈ ಸಂಸ್ಕೃತಿಯ ಜನರು ತಮ್ಮ ನಿತ್ಯ ಜೀವನದ ಕೆಲಸಗಳಿಗೆಲ್ಲ ಹೆಚ್ಚಾಗಿ ಕಲ್ಲಿನ ಉಪಕರಣಗಳನ್ನೆ ಉಪಯೋಗಿಸುತ್ತಿದ್ದರೂ ಇವರಿಗೆ ಒಂದು ಲೋಹದ ಪರಿಚಯವಿತ್ತು. ಅದು ತಾಮ್ರ ಮತ್ತು ಸತು, ತಾಮ್ರ ಮಿಶ್ರಣದ ಕಂಚು. ಬ್ರಹ್ಮಗಿರಿಯಲ್ಲಿ ಒಂದು ತಾಮ್ರದ ಕೊಡಲಿ ಮತ್ತು ಒಂದು ಕಂಚಿನ ಸಳಿ ದೊರೆತಿವೆ. ಕೃಷ್ಣರವರ ಉತ್ಖನನದಲ್ಲಿ ಮೀನು ಹಿಡಿಯುವ ಒಂದು ತಾಮ್ರದ ಗಾಳವೂ ಸಿಕ್ಕಿತು. ಈ ಕಾಲದ್ದೆನ್ನಬಹುದಾದ ಮತ್ತೆರಡು ತಾಮ್ರದ ವಸ್ತುಗಳು ಈ ಲೇಖಕನಿಗೆ ಇಲ್ಲಿ ಸಿಕ್ಕಿದವು. ಒಂದು, ಇರಿಕೆ ಹಾಕಿದಂತೆ ತಂತಿಯ ಸುತ್ತು ಇದ್ದು ಅದರ ಎರಡು ತುದಿಗಳು ದಪ್ಪವಾಗಿದ್ದು ನೆಟ್ಟಗೆ ಇವೆ. ಪ್ರಾಯಶಃ ಇದು ಪದಕವೋ ಅಥವಾ ಕವಿಯ ಆಭರಣವೊ ತಿಳಿಯದು. ಸುಮಾರು ೧೦ ಗ್ರಾಂ ತೂಕವುಳ್ಳದ್ದು. ಮತ್ತೊಂದು ಸಮದ್ವಿಬಾಹು ತ್ರಿಭುಜಾಕೃತಿಯ ತೆಳುವಾದ ತಗಡಿನ ವಸ್ತು ಡಮರುವಿನ ಹಾಗೆ ಎರಡು ಸಮ ದ್ವಿಬಾಹು ತ್ರಿಭುಜಾಕೃತಿಯದಾಗಿದ್ದು ಒಂದು ಭಾಗ ಮುರಿದು ಹೋಗಿದೆಯೆಂದು ಕಾಣುತ್ತದೆ. ಉಳಿದ ಭಾಗದ ತೂಕ ಸುಮಾರು ೧ ಗ್ರಾಂ. ಒಂದು ಕೈ ಕೆಲಸದ ಸಣ್ಣ ಉಪಕರಣವಾಗಿರಬೇಕು. ಈ ಲೋಹದ ವಸ್ತುಗಳು ಸ್ವಲ್ಪವಾದರೂ ದೊರೆತಿಲ್ಲ ಇವರಿಗೆ ಕಬ್ಬಿಣ ಗೊತ್ತಿರಲಿಲ್ಲವಂಬುದು ಸ್ಪಷ್ಟ.

ಮಣ್ಣಿನ ಪಾತ್ರೆಗಳು

ಮನೆಗಳಲ್ಲಿ ಕಾಳುಕಡ್ಡಿಗಳನ್ನು ಸಂಗ್ರಹಿಸಿಡಲು, ಅಹಾರ ಪಾನೀಯಗಳನ್ನು ತೆಗೆದುಕೊಳ್ಳಲು ಸುಟ್ಟ ಮಣ್ಣಿನ ಪಾತ್ರೆಗಳನ್ನು ಉಪಯೋಗಿಸುತ್ತಿದ್ದರು. ದವಸಧಾನ್ಯಗಳನ್ನು ತುಂಬಿಡುವಂಥಹ ದೊಡ್ಡ ದೊಡ್ಡ ಗುಡಾಣಗಳು ಕೊಡಗಳು, ಸ್ವಲ್ಪ ಉಬ್ಬಿದ ಹೊಟ್ಟೆಯ, ಅಗಲ ಬಾಯಿಯ ಪಾತ್ರೆಗಳು ಬೇರೆ ಬೇರೆ ಅಳತೆಯ ಅರ್ಧಗೋಲಾಕೃತಿಯ, ಅಗಲ ಬಾಯಿಯ ಬಟ್ಟಲುಗಳು, ತಟ್ಟೆಗಳು, ವಿವಿಧವಾದ ಮುಚ್ಚಳಗಳು, ಕಾಫಿಕೆಟ್ಟ್ ತರಹದ ನಳಿಗೆಯುಳ್ಳ ಪಾತ್ರೆಗಳು, ಅರ್ಧ ಗೋಲಾಕೃತಿಯ ಬಟ್ಟಲುಗಳಲ್ಲಿ ಕೆಲವಕ್ಕೆ ಹಿಡಿಕೆಗಳಿವೆ. ಪಾತ್ರೆಗಳೆಲ್ಲವೂ ಸರಳವಾಗಿದ್ದು, ಕೇವಲ ನಿತ್ಯಜೀವನದ ಉಪಯೋಗಕ್ಕಾಗಿ ಮಾಡಿದ್ದಾಗಿವೆ. ಮನರಂಜನೆಯ, ಐಷಾರಾಮದ ಸಲುವಾಗಿ ಕಲಾಕೃತಿಯಿಂದ ಕೂಡಿದ, ಅಥವಾ ವಿಶಿಷ್ಟ ಆಕಾರವುಳ್ಳ ಪಾತ್ರೆಗಳು ಕಾಣಬರುವುದಿಲ್ಲ. ಒಟ್ಟಿನಲ್ಲಿ ತಾರತಮ್ಯವಿಲ್ಲದ ಸಾದಾ ಜೀವನವನ್ನು ಈ ಜನರು ನಡೆಸುತ್ತಿದ್ದರೆಂದು ಹೇಳಬಹುದು.

ಗುಡಾಣ, ತಟ್ಟೆ ಮುಚ್ಚಳಗಳನ್ನು ಹೆಚ್ಚಾಗಿ ಕೈಯಿಂದ ಮಾಡಲಾಗಿದೆ. ಹೀಗೆ ವಿಧವಾದ ಪಾತ್ರೆಗಳು ಮೊದಲು ಕೈಯಿಂದ ಮಾಡಿ, ನಂತರ ನಿಧಾನವಾಗಿ ಸುತ್ತಬಹುದಾದ ಮಣೆಯ ಮೇಲಿಟ್ಟು ಅವುಗಳ ಆಕಾರಗಳನ್ನು ತಿದ್ದಿ ಸರಿಮಾಡಿದ ಹಾಗೆ ಕಾಣುವುದು ಈಗಿನ ಕುಂಬಾರನು ಉಪಯೋಗಿಸುವಂಥಹ ವೇಗವಾಗಿ ಚಲಿಸುವ ತಿಗರಿಯ ಮೇಲೆ ಈ ಗಡಿಗೆಗಳನ್ನು ಮಾಡಿದ ಲಕ್ಷಣಗಳು ಇವುಗಳಲ್ಲಿಲ್ಲ. ಪಾತ್ರೆಗಳನ್ನು ಮಾಡಿದ ಮಣ್ಣಿನಲ್ಲಿ ಅಭ್ರಕದ ಅಂಶವಿದ್ದು ಸ್ವಲ್ಪಮಟ್ಟಿಗೆ ಸಣ್ಣ ಮರಳಿನಿಂದ ಕೂಡಿರುತ್ತದೆ. ಅಂದರೆ ಚೆನ್ನಾಗಿ ಹಸನುಮಾಡಿದ ನಯವಾದ ಜಿಗುಟು ಮಣ್ಣನ್ನು ಉಪಯೋಗಿಸಿಲ್ಲ. ಮೊದಲು ಹಸಿ ಮಣ್ಣಿನ ಪಾತ್ರೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ, ಆ ಮೇಲೆ ಸುಡಲಾಗಿದೆ. ಆದರೆ ಎಲ್ಲವನ್ನು ಜಡವಾಗಿ ಸುಟ್ಟಿಲ್ಲ.

ಸಾಮಾನ್ಯವಾಗಿ ಮೂರು ವಿಧದ ಬಣ್ಣದ ಪಾತ್ರೆಗಳಿವೆ. ಮುಖ್ಯವಾಗಿ ಬೂದುಬಣ್ಣದ್ದು, ಎಳೆಕಂದು, ಕೆಂಪು ಬಣ್ಣದ್ದು ಮತ್ತು ಕೆಂಪು ಬಣ್ಣದ್ದು. ಬೂದು ಬಣ್ಣದ್ದೆ ಹೆಚ್ಚು. ಈ ಬಣ್ಣಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಿರುತ್ತದೆ. ಆದ್ದರಿಂದ ಬಿಳೇ ಬೂದು ಬಣ್ಣದ್ದು, ಕಪ್ಪು ಬೂದು, ತಿಳಿ ಹಸಿರು ಬೂದು, ಚಾಕಲೇಟ್‌ ಬಣ್ಣ ಮುಂತಾಗಿ ಬೇರೆ ಬೇರೆ ಬಣ್ಣದ ಪಾತ್ರೆಗಳಿವೆ. ಈ ಬಣ್ಣವು ಮಣ್ಣಿನ ಪಾತ್ರೆಗಳನ್ನು ಮಾಡಿದ ಮಣ್ಣಿನದೇ ನಯವಾದ ಲೇಪನ. ಇದನ್ನು ಪಾತ್ರೆಗಳ ಹೊರಬದಿಯಲ್ಲಿ ಮತ್ತು ಕಂಠದ ಒಳಬದಿಯಲ್ಲಿ ಸವರಿ ಉಜ್ಜಲಾಗಿದೆ. ಕೆಲವು ವೇಳೆ ಈ ಮಣ್ಣಿನ ನೀರಿನಲ್ಲಿ ಪಾತ್ರೆಗಳನ್ನು ಅದ್ದಿ ಹೊರತೆಗೆಯಲಾಗಿದೆ. ಅಂಥ ಪಾತ್ರೆಗಳ ಮೇಲೆ ಲೇಪನವಿರುವುದಿಲ್ಲ.

ಅರ್ಧ ಗೋಲಾಕೃತಿಯ ಬಟ್ಟಲು ಮುಂತಾದ ಕೆಲವು ವಿಧವಾದ ಪಾತ್ರೆಗಳ ಹೊರ ಮೈಮೇಲೆ ಅಪರೂಪವಾಗಿ ನೇರಳೆ ಬಣ್ಣದ ರೇಖಾ ಚಿತ್ರಗಳಿಂದಾಗಲಿ, ಕೊರೆದ ಗೆರೆಗಳ ಚಿತ್ರಗಳಿಂದಾಗಲಿ ಅಲಂಕರಿಸಲಾಗಿದೆ. ಬಣ್ಣದ ರೇಖಾಚಿತ್ರಗಳಿಂದಾಗಲಿ, ಕೊರೆದ ಗೆರೆಗಳ ಚಿತ್ರಗಳಿಂದಾಗಲಿ ಅಲಂಕರಿಸಲಾಗಿದೆ. ಬಣ್ಣದ ರೇಖಾಚಿತ್ರಗಳು ಸಾಮಾನ್ಯವಾಗಿ ಅಡ್ಡ, ಉದ್ದ, ಓರೆಯಾಗಿ, ಒಂದಕ್ಕೊಂದು ಛೇದಿಸುವ ಸಮಾನಾಂತರ ಗೆರೆಗಳ ಸಮೂಹ ಅಥವಾ ಡೊಂಕು ಡೊಂಕಾದ ಗೆರೆಗಳು. ಪಾತ್ರೆಗಳನ್ನು ಭಟ್ಟಿಯಲ್ಲಿ ಸುಡುವ ಮೊದಲೇ ಇಂಥ ರೇಖಾ ಚಿತ್ರಗಳಿಂದ ಅಲಂಕರಿಸಲಾಗಿದೆ. ಗೆರೆಗಳನ್ನು ಒಂದು ಚೂಪಾದ ಕಡ್ಡಿಯಿಂದ ಪಾತ್ರೆಗಳು ಇನ್ನೂ ಹಸಿ ಇರುವಾಗಲೇ ಅವುಗಳ ಮೇಲೆ ಮೂಡಿಸಲಾಗಿದೆ. ಭಟ್ಟಿಯಲ್ಲಿ ಸುಟ್ಟನಂತರ ಕೆಲವು ಪಾತ್ರೆಗಳ ಬಾಯಿಯ ಅಂಚನ್ನು ಕಂಠವನ್ನು ಕೆಮ್ಮಣ್ಣಿನ ಬಣ್ಣದಲ್ಲಿ ಅಲಂಕರಿಸಲಾಗಿದೆ. ಇಂಥ ಅಲಂಕೃತ ಪಾತ್ರೆಗಳು ಈ ಸಂಸ್ಕೃತಿಯ ಆದಿಭಾಗದಲ್ಲಿಯ ಹಂತದಲ್ಲಿ ಮಾತ್ರ ಸಿಕ್ಕಿವೆ. ಕ್ರಮೇಣ ಪಾತ್ರೆಗಳನ್ನು ಈ ರೀತಿ ಅಲಂಕರಿಸುವ ಪದ್ಧತಿ ಕ್ರಮೇಣ ಬಿಟ್ಟು ಹೋಯಿತೆಂದು ತೋರುವುದು.

ಜನರು ದೇಹ ಸೌಂದರ್ಯದ ವರ್ಧನೆಗೆ ಮಣಿಗಳ ಸರಗಳನ್ನು ಉಂಗುರಗಳನ್ನು ತೊಡುತ್ತಿದ್ದರು. ಬ್ರಹ್ಮಗಿರಿಯಲ್ಲಿ ದೊರೆತ ಮಣಿಗಳು ಚಿಪ್ಪು ಮತ್ತು ಮ್ಯಾಗ್ನೆಸೈಟ್ ವಸ್ತುಗಳಿಂದ ಮಾಡಲಾಗಿವೆ. ಇವುಗಳು ಅನೇಕ ವಿಧವಾಗಿವೆ. ಮ್ಯಾಗ್ನಸೈಟ್‌ ಮಣಿಗಳಲ್ಲಿ ಕೆಲವು ದುಂಡಾಗಿ, ಚಪ್ಪಟೆಯಾಗಿ, ಕೆಲವು ಎರಡು ಕಡೆ ಕೋನಾಕೃತಿಯಲ್ಲಿವೆ. ಚಿಪ್ಪಿನ ಮಣಿಗಳಲ್ಲಿ ಕೆಲವು ಗೋಲಾಕೃತಿಯಾಗಿವೆ. ಇವುಗಳ ಮಧ್ಯದಲ್ಲಿ ದಾರದಲ್ಲಿ ಪೋಣಿಸಲು ರಂಧ್ರವಿದೆ. ಕೈ ಬೆರಳಿಗೆ ತೊಡುವಂಥ ತಾಮ್ರದ ಸುತ್ತು ದೊರೆತಿದೆ.

ಶವಸಂಸ್ಕಾರ ಪದ್ಧತಿ

ಈ ಜನರು ಶವ ಸಂಸ್ಕಾರವನ್ನು ತಾವು ವಾಸಿಸುವ ಸ್ಥಳದಲ್ಲಿಯೆ ಮಾಡುತ್ತಿದ್ದರು. ಪದ್ಧತಿಯಲ್ಲಿ ಎರಡು ವಿಧ. ಸಣ್ಣ ಮಕ್ಕಳ ಶವಗಳನ್ನು ಗುಡಾಣದಂತಹ ಪಾತ್ರೆಗಳಲ್ಲಿಟ್ಟು ಅವನ್ನು ಅಗೆದ ಗುಂಡಿಯಲ್ಲಿಟ್ಟು ಗುಡಾಣದ ಬಾಯಿಯನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ ಗುಂಡಿಯನ್ನು ಮಣ್ಣಿನಿಂದ ತುಂಬುವುದು. ದೊಡ್ಡವರ ಶವವನ್ನು ಉದ್ದನೆಯ ಗುಂಡಿಯಲ್ಲಿ ಕ್ರಮವಾಗಿ ತಲೆಯು ಒಂದು ಗೊತ್ತಾದ ದಿಕ್ಕಿಗೆ ಬರುವ ಹಾಗೆ ಮಾಡಿ ಮಲಗಿಸುವುದು.

ಸಂಸ್ಕಾರದ ಸಮಯದಲ್ಲಿ ಶವದೊಡನೆ ಆಹಾರ ಪಾನೀಯಗಳನ್ನಿಡಲು ೨, ೩ ಪಾತ್ರೆಗಳನ್ನು ಇಡುವ ಪದ್ಧತಿ ಇತ್ತು. ಒಟ್ಟು ೧೭ ಆಸ್ಥಿಪಾತ್ರೆಗಳು ಮತ್ತು ಉದ್ದವಾಗಿ ಮಲಗಿಸಿದ ಒಬ್ಬ ಹುಡುಗನ ಶವಕುಣಿಯಲ್ಲಿ, ತಲೆಯ ಹತ್ತಿರ ನಳಿಗೆಯುಳ್ಳ ನೀರಿನ ಪಾತ್ರೆಯನ್ನು, ಕೈಗಳಿಗೆ ಸಿಗುವ ಹಾಗೆ ನಡುವಿನ ಹತ್ತಿರ ಊಟ ಮಾಡಲು ಉಪಯೋಗಿಸುವ ಎರಡು ಅರ್ಧ ಗೋಲಾಕೃತಿಯ ಪಾತ್ರೆಗಳನ್ನು ಇಡಲಾಗಿತ್ತು. ತಲೆಯ ಬಳಿ ನಳಿಗೆಯ ನೀರಿನ ಪಾತ್ರೆಯನ್ನು ಕೈ ಬಳಿ ಆಹಾರದ ಪಾತ್ರೆಗಳನ್ನಿಟ್ಟಿರುವುದು ಎಷ್ಟು ಕ್ರಮಬದ್ಧವಾಗಿದೆ? ಅಂದರೆ ಸತ್ತ ವ್ಯಕ್ತಿಗೂ ಹಸಿವೂ ಬಾಯಾರಿಕೆಗಳಾಗಬಹುದೆಂಬ ಆ ಜನರ ನಂಬಿಕೆಯನ್ನೂ ಮತ್ತು ಅವನಲ್ಲಿದ್ದ ಅವರ ಪ್ರೀತಿ ಅನುಕಂಪವನ್ನೂ ಸೂಚಿಸುತ್ತವೆ.

ಜನರು

ಈ ಜನರು ಯಾರು? ಇವರು ನಮ್ಮ ದೇಶದ ಮೂಲ ನಿವಾಸಿಗಳೇ? ಮತ್ತು ಯಾವ ಪಂಗಡಕ್ಕೆ ಸೇರಿದವರು? ಅಸ್ಥಿ ಪಾತ್ರೆಗಳಲ್ಲಿಯ ಮತ್ತು ಶವಕುಣಿಯ ಅಸ್ಥಿಗಳನ್ನು ಮಾನವ ಶಾಸ್ತ್ರಜ್ಞರು ಪರೀಕ್ಷಿಸಿದ್ದಾರೆ. ಈ ಅಸ್ಥಿಗಳು ‘ಅಸ್ಟ್ರಲಾಯಿಡ್’ ಎಂಬ ಜನಾಂಗದ ಹೆಚ್ಚು ಲಕ್ಷಣಗಳನ್ನು ಹೊಂದಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕೇವಲ ಸ್ವಲ್ಪ ಅಸ್ಥಿ ಅವಶೇಷಗಳ ಪರೀಕ್ಷೆಯಿಂದ ಗೊತ್ತಾದ ಈ ವಿಷಯದ ಆಧಾರದ ಮೇಲೆ ಬ್ರಹ್ಮಗಿರಿಯಲ್ಲಿಯ ನೂತನ ಶಿಲಾಯುಗದ ಜನರೆಲ್ಲರೂ ಈ ಜನಾಂಗದವರೆಂದು ಅಭಿಪ್ರಾಯವಲ್ಲ. ಈ ಜನರಲ್ಲಿ ಅಸ್ಟ್ರಲಾಯಿಡ್ ಜನಾಂಗದವರೆಂದು ಹೇಳಬಹುದು ಅಷ್ಟೆ. ಇವರೆಲ್ಲರೂ ಇದೇ ಜನಾಂಗದವರಾಗಿದ್ದಾರೆ? ಇವರಲ್ಲಿ ಈ ಜನಾಂಗದವರು ಹೆಚ್ಚಿದ್ದರೆ? ಉಳಿದ ಜನರು ಯಾವ ಯಾವ ಬುಡಕಟ್ಟಿಗೆ ಸೇರಿದವರು? ಇವೆಲ್ಲವೂ ಇನ್ನೂ ಬಹಳ ಸಂಶೋಧನೆಯಿಂದ ತಿಳಿಯಬೇಕಾಗಿದೆ. ಪಕ್ಲಿಹಾಳ, ತೆಕ್ಕಲಕೋಟೆ ಮತ್ತು ಟಿ. ನರಸೀಪುರ ಸ್ಥಳಗಳಲ್ಲಿ ಇತ್ತೀಚಿನ ಶೋಧನೆಗಳಿಂದ ಈ ಸಂಸ್ಕೃತಿಯ ಜನರಲ್ಲಿ ಹೆಚ್ಚಾಗಿ ಈ ಬುಡಕಟ್ಟಿನವರೆ ಇದ್ದರೆಂದು ತಿಳಿದಿದೆ.