ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬ್ರಹ್ಮಗಿರಿ ಬೆಟ್ಟದ ಸಮೀಪದ ಒಂದು ಸಣ್ಣ ಹಳ್ಳಿ. ಈ ಗ್ರಾಮದ ಸಮೀಪ ಸಿದ್ದಾಪುರವಿದೆ.

೧೮೯೨ ಕರ್ನಾಟಕದ ಇತಿಹಾಸ ಸಂಶೋಧನೆಯಲ್ಲಿ ಒಂದು ಮಹತ್ವದ ವರ್ಷ. ಏಕೆಂದರೆ, ದಕ್ಷಿಣ ಕರ್ನಾಟಕದಲ್ಲಿಯ ಶಾಸನಗಳ ಶೋಧನೆಯನ್ನು ನಡೆಸುತ್ತಿದ್ದ ಮೈಸೂರು ಪುರಾತತ್ವ ಸರ್ವೇಕ್ಷಣೆ ಶಾಖೆಯ ನಿರ್ದೇಶಕ ಬಿ.ಎಲ್.ರೈಸ್ ಅವರು ಮಗಧ ಸಾಮ್ರಾಜ್ಯದ ಚಕ್ರವರ್ತಿ ಅಶೋಕಮೌರ್ಯ (ಸು.ಪ್ರ.ಶ.ಪೂ ೨೭೩-೩೪೩) ನ ಶಾಸನವು ಬ್ರಹ್ಮಗಿರಿ ಗುಡ್ಡದ ಒಂದು ದೊಡ್ಡ ಕಲ್ಲು ಬಂಡೆಯ ಮೇಲೆ ಕೊರೆದುದನ್ನು ನೋಡಿದರು. ಇದರ ಸಮೀಪದಲ್ಲಿ ಜಟಂಗಿ ರಾಮೇಶ್ವರ ಮತ್ತು ಸಿದ್ಧಾಪುರ ಗಳಲ್ಲಿ ಈ ಶಾಸನಕ ಒಂದೊಂದು ಪ್ರತಿಯನ್ನು ನೋಡಿದರು.

ಈ ಶಾಸನಗಳು ಬ್ರಹ್ಮಲಿಪಿಯಲ್ಲಿವೆ, ಭಾಷೆ ಪ್ರಾಕೃತ. ಈ ಬ್ರಾಹ್ಮಿ ಲಿಪಿಯಿಂದಲೇ ಮುಂದೆ ಸು.ಪ್ರ.ಶ ೬-೭ ನೇ ಶತಮಾನದಲ್ಲಿ ಕನ್ನಡ ಲಿಪಿಯು ವಿಕಸನ ಹೊಂದುತ್ತ ಕ್ರಮೇಣ ಈಗಿನ ಸವರೂಪವನ್ನು ಪಡೆಯಿತು. ಇದರಲ್ಲಿ ೧೩ ಸಾಲುಗಳಿವೆ. ಕೊನೆಯ ಸಾಲಿನಲ್ಲಿರುವ ‘ಲಿಪಿ ಕರೇಣ’ ಎಂಬ ಪದವು ಮಾತ್ರ ಖರೋಷ್ಠಿ ಲಿಪಿಯಲ್ಲಿದೆ. ಈ ಶಾಸನವನ್ನು ಬರೆದವನು ಚಪಡನೆಂಬುವನು ಮಗಧ ಸಾಮ್ರಾಜ್ಯದ ದಕ್ಷಿಣ ಭಾಗದಲ್ಲಿಯ ಸುವರ್ಣಗಿರಿ ಪ್ರಾಂತದ ಮಂತ್ರಿಗಳಾಗಿದ್ದ ಮಹಾಮಾತ್ರರ ಮೂಲಕ ಅಶೋಕ ಚಕ್ರವರ್ತಿಯು ಇಸಿಲ ನಗರದ ಮಹಾಮಾತ್ರರ ಕ್ಷೇಮವನ್ನು ಬಯಸಿ ಅವರಿಗೆ ಆಜ್ಞಾಪಿಸಿದ ವಿಷಯ ಇದರಲ್ಲಿದೆ. ಶಾಸನದ ಪಾಠ ಹೀಗಿದೆ:

೧. ಸುವಂಣಗಿರೀತೇ ಅಯಪುತಸ ಮಹಾಮಾತಾಣಂಚವಚನೇನ ಇಸಲಸಿ ಮಹಾಮಾತಾ ಆರೋಗಿಯಂ ವಶವಿಯಾಹೇಮಚವತವಿಯಾ ದೇವಾಣಂಪಿಯೆ ಆಣಪಯತಿ

೨. ಅಧಿಕಾನಿ ಆಢಾತಿಯಾನಿವಸಾನಿಯಹಕಂ…. ನೋತುಖೋಬಾಢಂ ಪಕಂತೇ ಹುಸಂಏಕಂಸವಛರಂಸಾತಿರೇಕೇತುಖೋಸಂವಛರೇಂ

೩. ಯಂ ಮಯಾ ಸಂಘೇ ಉಪಯೀತೇ ಬಾಢಂ ಚ ಮೇ ಪಕಂತೇ ಇಮಿನಾ ಚು ಕಾಲೇನ ಅಮಿಸಾ ಸಮಾನ ಮುನಿಸಾ ಜಂಬುದೀಪಸಿ

೪. ಮಿಸಾದೇವೇಹಿಪಕಮಸಹಿ ಇಯಂಫಲೇನೋಹೀಯಂಸಕ್ಯೇಮಹಾಪ್ತೆನೇವ ಪಾಪೋತವೇಕಾಮಂತುಖೊಖುದಕೇನಪಿ

೫. ಪಕಮಿಣೇಣವಿಪುಲೇಸ್ವಗಾಸಕ್ಯೇಆರಾಧೇತವೇಏತಾಯಠಾಇಯಂಸಾವಣೇ ಸವಾಪಿತೇ

೬. …..ಮಹಾಪ್ತಚಇಮಂಪಕಮೇಆಅಂತಾಚಮೇಜಾನೇಯು ಚಿರಠಿತೀಕೇಚಇಯಂ

೭. ಪಕ….ಇಯಂಚಅಠೇವಢಿಸಿತಿವಿಫುಲಂಪಿಚವಡಿಸಿತಿ ಅವರಧಿಯಾ ದಿವಾಢಿಯಂ

೮. ವಢಿಸಿತಿಇಯಂಚಸಾವಣೇಸಾವಪಿತೇವ್ಯೂಥೇನ ೨೫೬ ಸೇಹೇವಂ ದೇವಾಣಾಂಪಿಯೆ

೯. ಹಮಾತಾಪಿಸುಸುಸೂಸಿತವಿಯೆಹೇಮೇವಗರುತ್ವಂಪ್ರಾಣೇಸುವ್ರ‍್ರಹ್ಯಿತವ್ಯಂಸಚಂ

೧೦. ವತವಿಯಂಸೇಇಮೇಧಂಮಗುಣಾಪವತಿತವಿಯಾಹೇಮೇವಂತೇವಾಸಿನಾ

೧೧. ಆಚರಿಯೇಅಪಚಾಯಿತವಯೇಞೂತಿಕೇಸುಚಕ.ಯ.ರಹಂಪವತಿತವಿಯೇ

೧೨. ಏಸಾಪೋರಾಣಾಪಕತೀಧೀಘಾವುಸೇಚೇಏಸಹೇವಂಏಸಕಟವಿಯೇ

೧೩. ಚಪಡೇನಲಿಖಿತೇಲಿಪಿಕರೇಣ

ಇದರ ಸಾರಾಂಶ ಹೀಗಿದೆ. ದೇವಾನಾಂ ಪ್ರಿಯದರ್ಶಿಯು (ಅಶೋಕನು) (ಬೌದ್ಧ ಧರ್ಮದ) ಉಪಾಸಕನಾಗಿ ಎರಡೂವರೆ ವರ್ಷಗಳಿಗಿಂತ ಹೆಚ್ಚಾಯಿತು. ಸಂಘವನ್ನು ಸೇರಿ ಈಗ ಒಂದು ವರ್ಷದಿಂದ ವಿಶೇಷ ಆಸಕ್ತಿಯುಳ್ಳವನಾದನು. ಜಂಬೂದ್ವೀಪದಲ್ಲಿರುವ ಅವನ ಪ್ರಜೆಗಳು ಮೊದಲು ಅಂಧಃಶ್ರದ್ಧೆಯಿಂದ ಕೆಳಮಟ್ಟದಲ್ಲಿದ್ದರು. ಅವನ ಧರ್ಮ ಪ್ರಸಾರದ ಪ್ರಯತ್ನದ ಫಲದಿಂದ ಅವರು ಗುಣವಂತರಾಗಿ ಉತ್ತಮರಾಗಿದ್ದಾರೆ. ಈ ರೀತಿ ಪ್ರಯತ್ನ ಪಟ್ಟರೆ ಕೇವಲ ಶ್ರೀಮಂತ, ಬಲ್ಲಿದರು ಮಾತ್ರವಲ್ಲ, ತೀರಾ ಕೆಳಮಟ್ಟದ ಜನರೂ ಕೂಡ ಉತ್ತಮರಾಗಿ ಸ್ವರ್ಗಸುಖವನ್ನು ಪಡೆಯಬಹುದು. ಆದುದರಿಂದ ಬಡವರು ಮತ್ತು ಶ್ರೀಮಂತರು ಎಂಬ ಭೇದಭಾವವಿಲ್ಲದೆ ಎಲ್ಲರೂ ಪರಿಶ್ರಮದಿಂದ ಸುಖಿಗಳಾಗಬೇಕು. ಅವನ ಪ್ರಯತ್ನ ಬಹುಕಾಲ ನಡೆಯುವಂತಾಗಬೇಕೆಂಬ ಹಂಬಲದಿಂದ ಈ ಘೋಷಣೆಯನ್ನು ೨೫೬ ರಾತ್ರಿಗಳನ್ನು ಸಂಚಾರದಲ್ಲಿ ಕಳೆದಾಗ ಹೊರಡಿಸಲಾಗಿದೆ.

ತಾಯಿ, ತಂದೆ ಮತ್ತು ಹಿರಿಯರಿಗೆ ವಿಧೇಯರಾಗಿರಬೇಕು. ಪ್ರಾಣಿಗಳಲ್ಲಿ ದಯೆ ತೋರಿಸಬೇಕು. ಸತ್ಯವನ್ನು ಹೇಳಬೇಕು. ಶಿಷ್ಯರು ಗುರುಗಳಿಗೆ ಗೌರವ ತೋರಿಸಬೇಕು. ಬಂಧು ಬಳಗದವರೊಡನೆ ಸೌಜನ್ಯದಿಂದ ವರ್ತಿಸಬೇಕು ಹೀಗೆ ಪ್ರತಿಯೊಬ್ಬನು ನಡೆದುಕೊಳ್ಳಬೇಕೆಂದು ಹೇಳಿದ್ದಾನೆ.

ಶಾಸನದ ಮಹತ್ವ

ಕನ್ನಡ ನಾಡಿನ ಪ್ರಾಚೀನ ಇತಿಹಾಸದ ಕೆಲವು ಅಂಶಗಳನ್ನು ತಿಳಿಯಲು ಈ ಶಾಸನವು ಉಪಯುಕ್ತ. ಸಾಮಾನ್ಯವಾಗಿ, ಹಿಂದಿನ ಕಾಲದಲ್ಲಿ ರಾಜ ಶಾಸನಗಳು, ಆಯಾಯ ಆಳರಸರ ರಾಜ್ಯಗಳ ಎಲ್ಲೆಯೊಳಗೆ ಇರುತ್ತವೆ ಎಂಬುದು ಎಲ್ಲರೂ ಒಪ್ಪುವಂತಹ ಮಾತು. ಅಶೋಕ ಮೌರ್ಯನ ಶಾಸನವು ಬ್ರಹ್ಮಗಿರಿಯಲ್ಲಿ ಇರುವುದರಿಂದ ಈ ಭಾಗವು ಆ ಚಕ್ರವರ್ತಿಯ ಕಾಲದಲ್ಲಿ ಮಗಧ ಸಾಮ್ರಾಜ್ಯದಲ್ಲಿತ್ತೆಂದು ನಿಸ್ಸಂದೇಹವಾಗಿ ಹೇಳಬಹುದು. ಅಂದರೆ, ಮಗಧ ಸಾಮ್ರಾಜ್ಯದ ದಕ್ಷಿಣದಲ್ಲಿಯ ವಿಸ್ತಾರವನ್ನು ಗುರುತಿಸಲು ಸಾಧ್ಯವಾಗಿದೆ. ಮತ್ತು ಉತ್ತರ ಕರ್ನಾಟಕವು ಮಗಧ ಸಾಮ್ರಾಜ್ಯಕ್ಕೆ ಸೇರಿದುದರಿಂದ ಈ ಭಾಗದ ರಾಜಕೀಯ ಚರಿತ್ರೆ ಪ್ರ.ಶ.ಪೂ. ೩ನೇ ಶತಮಾನದ ತನಕ ಹಿಂದಕ್ಕೆ ಒಯ್ಯಬಹುದು.

ಎರಡನೆಯದಾಗಿ ಇದರಲ್ಲಿ ‘ಇಸಿಲ’ ಎಂಬ ಹೆಸರಿನ ಊರಿನ ಉಲ್ಲೇಖವಿದೆ. ಈ ಊರು ಒಂದು ನಗರವೇ ಆಗಿದ್ದಿರಬೇಕು. ಏಕೆಂದರೆ, ಇಲ್ಲಿ ಅಶೋಕನ ಮಂತ್ರಿಗಳಾದ ‘ಮಹಾಮಾತ್ರ’ ರ ಈ ಭಾಗದ ಆಡಳಿತದ ಕಾರ್ಯಕ್ಷೇತ್ರವಾಗಿತ್ತು.

ಉತ್ತರ ಭಾರತದಲ್ಲಿ ಪ್ರ.ಶ.ಪೂ. ೬ -೩ನೇ ಶತಮಾನಗಳ ಸಮಯದಲ್ಲಾಗಲೆ ದೊಡ್ಡ ದೊಡ್ಡ ಪಟ್ಟಣಗಳು, ರಾಜ್ಯಗಳು ಇದ್ದವು. ಬೌದ್ಧ, ಜೈನ ಗ್ರಂಥಗಳಲ್ಲಿ ೧೬ ಮಹಾಜನಪದಗಳ ವರ್ಣನೆಯಿದೆ. ಅಂಗ (ಪೂರ್ವ ಬಿಹಾರ್) ಮಗಧ, ಕಾಶಿ, ಕೌಶಾಂಬಿ, ಕೋಸಲ, ವಜ್ಜಿ, ಮಲ್ಲ, ಚೇತಿ, ವಂಶ, ಕುರು, ಪಾಂಚಾಲ, ಮತ್ಸ್ಯ, ಶೂರಸೇನ, ಅಸ್ಸರ, ಅವಂತಿ, ಗಾಂಧಾರ ಮತ್ತು ಕಾಂಭೋಜ- ಇವೇ ೧೬ ಮಹಾಜನಪದಗಳು. ಹಾಗೆಯೇ ದಕ್ಷಿಣ ಭಾರತದ ತಮಿಳುನಾಡು, ಕೇರಳ ಭಾಗಗಳಲ್ಲಿ ಸುಮಾರು ಪ್ರ.ಶ.ಪು ೩-೧ ನೇ ಶತಮಾನದ ಹೊತ್ತಿಗೆ ಕೆಲವು ಪಟ್ಟಣಗಳಿದ್ದುವೆಂದು ತಮಿಳು ಭಾಷೆಯ ಅತ್ಯಂತ ಪ್ರಾಚೀನ ಗ್ರಂಥವಾದ ‘ಸಂಗಮ್’ ಗ್ರಂಥದಲ್ಲಿದೆ. ಆದರೆ ಆ ಕಾಲದ ನಮ್ಮ ಕನ್ನಡ ನಾಡಿನ ಬಗ್ಗೆ ಏನೂ ಉಲ್ಲೇಖಗಳಿರಲಿಲ್ಲ. ಇದರ ಬಗ್ಗೆ ಬೇರಾವ ಐತಿಹಾಸಿಕ ಆಧಾರಗಳೂ ದೊರೆತಿರಲಿಲ್ಲ. ದಂತ ಕಥೆಗಳಷ್ಟೆ ಪ್ರಚಲಿತವಾಗಿದ್ದವು. ಹೀಗಾಗಿ ಕನ್ನಡ ನಾಡಿಗೆ ಉತ್ತರ ಭಾರತ ಅಥವ ತಮಿಳುನಾಡಿನಷ್ಟು ಪ್ರಾಚೀನ ಇತಿಹಾಸವೇ ಇಲ್ಲವೆನ್ನುವಂತಿತ್ತು. ಪ್ರ.ಶ. ೧ನೇ ಶತಮಾನದ ಅನಾಮಧೇಯನ ಪೆರಿಪ್ಲಸ್ ಆಫ್ ಎರಿಥ್ರಿಯನ್ ಸಿ ಮತ್ತು ಟಾಲೆಮಿಯ ೨ನೇ ಶತಮಾನದ ಗ್ರಂಥಗಳಲ್ಲಿ ಕನ್ನಡ ನಾಡಿನ ಅಂದಿನ ವ್ಯಾಪಾರ ಕೇಂದ್ರಗಳಾಗಿದ್ದ ಬಾದಾಮಿ (ಬಾಗಲ ಕೋಟೆ ಜಿಲ್ಲೆ), ಇಂಡಿ (ಬಿಜಾಪುರ ಜಿಲ್ಲೆ), ಕಾರವಾರ, ಹೊನ್ನಾವರ, ಉದ್ಯಾವರ, ಮುಂತಾದ ಅಲ್ಲೊಂದು, ಇಲ್ಲೊಂದು ಸ್ಥಳಗಳ ಉಲ್ಲೇಖವಿದೆ, ರಾಜಕೀಯ ಚರಿತ್ರೆಯಂತೂ ೪ನೇ ಶತಮಾನದ ಬನವಾಸಿ ಕದಂಬರಿಂದಲೇ ಪ್ರಾರಂಭ. ಇಂಥ ನಿರಾಶಾದಾಯಕವಾದ ಪರಿಸ್ಥಿತಿಯಲ್ಲಿ ಪ್ರ.ಶ.ಪೂ ೩ನೇ ಶತಮಾನದಲ್ಲಿ ಆಡಳಿತ ಕೇಂದ್ರವಾಗಿದ್ದ ಒಂದುನಗರ ಇದ್ದ ಬಗ್ಗೆ ಮತ್ತು ಅದು ಮಗಧ ಸಾಮ್ರಾಜ್ಯಕ್ಕೆ ಸೇರಿದ್ದರ ವಿಷಯ ಉಲ್ಲೇಖ ದೊರೆತಿದ್ದು ನಿಜವಾಗಿಯೂ ಒಂದು ಮಹತ್ವದ ಹಾಗೂ ಹೆಮ್ಮೆಪಡುವಂತಹ ವಿಷಯ. ಅಲ್ಲದೆ ಕನ್ನಡ ನಾಡಿನ ಪ್ರಾಚೀನ ರಾಜಕೀಯ ಚರಿತ್ರೆಯಲ್ಲಿ ಇದು ಒಂದು ನಿರ್ಣಾಯಕ ಘಟ್ಟವಾಯಿತು.

ಇಸಿಲ ನಗರ

ಅದು ಸರಿ, ೨೩೦೦ ವರ್ಷಗಳ ಹಿಂದೆ ಇದ್ದ ನಗರದ ಉಲ್ಲೇಖವೇನೊ ದೊರೆಯಿತು. ಅಷ್ಟಕ್ಕೆ ಆಗಿನ ಜನರ ನಗರ ಜೀವನ ತಿಳಿದಹಾಗಾಯಿತೆ? ಆ ನಗರ ಎಲ್ಲಿತ್ತು? ಹೇಗಿತ್ತು? ಆ ನಗರವು ನಮ್ಮ ನಾಡಿನ ನಾಗರೀಕತೆಯ ಬೆಳವಣಿಗೆಯ ಯಾವ ಹಂತದಲ್ಲಿತ್ತು? ಹೀಗೆ ವಿಚಾರ ಮಾಡುತ್ತ ಆ ನಗರದ ಕುರುಹುಗಳನ್ನು ಬ್ರಹ್ಮಗಿರಿಯ ಬಳಿಯಲ್ಲಿ ಸಿಗಬಹುದೇನೊ ಎಂಬ ಆಶಯದಿಂದ ಶೋಧಿಸಲು ಪ್ರಯತ್ನ ಮಾಡಿದವರು ಮೈಸೂರು ಪುರಾತತ್ವ ಸರ್ವೇಕ್ಷಣ ಶಾಖೆಯ ನಿರ್ದೇಶಕರು ಹಾಗೂ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ಎಂ.ಎಚ್. ಕೃಷ್ಣರವರು. ಬದಿಯಿಂದ ಸ್ವಲ್ಪ ಹೆಚ್ಚು ಕಡಿಮೆ ಅರ್ಧಚಂದ್ರಾಕಾರದ ಹಾಗೆ ವಿಸ್ತಾರವಾಗಿದ್ದ ಇಸಿಲ ಪಟ್ಟಣವಿದ್ದ ನೆಲೆ ಚಿನ್ನಹಗಿರಿ ನದಿಯ ದಂಡೆಯ ಮೇಲೆ ಇದ್ದುದನ್ನು ಗುರುತಿಸದರು. ಆ ನೆಲೆಯಲ್ಲಿ ತುಂಬಾ ಹಾಳು ಮಣ್ಣು ಇದ್ದು ಅದರಲ್ಲಿ ಸುಟ್ಟ ಇಟ್ಟಿಗೆ ಕಟ್ಟಡಗಳ ಅವಶೇಷಗಳು, ಮೃತ್ ಪಾತ್ರೆಗಳು, ಆಟಿಕೆಗಳು ಮತ್ತು ಅನೇಕ ಬೃಹತ್‌ಶಿಲಾ ಗೋರಿಗಳು ಇದ್ದುದು ಕಂಡು ಬಂತು. ಇವಲ್ಲದೆ ಅಶೋಕನ ಶಾಸನದ ಸಮೀಪದಲ್ಲಿ ಕೆಲವು ನೈಸರ್ಗಿಕ ಗುಹೆಗಳಿವೆ. ಈ ಗುಹೆಗಳ ಹಿಂಬದಿಯಿಂದ ಗುಡ್ಡದ ತುದಿಗೆ ಹೋಗುವ ದಾರಿಯ ಹತ್ತಿರವೆ ಹಾಳುಮಣ್ಣಿನಲ್ಲಿರುವ ಒಂದು ಹಾಳುಬಿದ್ದ ಇಟ್ಟಿಗಯ ಕಟ್ಟಡವೂ ಕಾಣಿಸಿತು. ಇಟ್ಟಿಗೆ ಕಟ್ಟಡದ ಹಿಂಬಾಗವು ಪುರಾತನ ಶೈವ, ವೈಷ್ಣವ ದೇವಾಲಯ, ಬೌದ್ಧ, ಜೈನರ ಚೈತ್ಯಾಲಯಗಳ ಹಾಗೆ, ಅರ್ಧ ವರ್ತುಳಾಕಾರ ವಿನ್ಯಾಸ (ಗಜಪೃಷ್ಠಾಕೃತಿ)ದಲ್ಲಿತ್ತು. ಚೌಕೋನವಾಗಿರಲಿಲ್ಲ. ಹಾಳುಮಣ್ಣಿನಲ್ಲಿ ಹೊಳಪಾದ ಕಪ್ಪು-ಕೆಂಪು, ಕೆಂಪು ಬಣ್ಣಗಳ ಮೃತ್‌ಪಾತ್ರೆಗಳ ಚೂರುಗಳು ಹೇರಳವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಶೋಕನ ಶಾಸನ, ಅದರ ಸಮೀಪದಲ್ಲಿ ಪ್ರಾಚೀನ ಪದ್ಧತಿಯಲ್ಲಿ ಕಟ್ಟಿದ ಇಟ್ಟಿಗೆ ಕಟ್ಟಿದ ಅವಶೇಷಗಳು ಮತ್ತು ಪ್ರಾಯಶಃ ಮೌರ್ಯರ ಕಾಲದ್ದೆನ್ನಬಹುದಾದ ಮಣ್ಣಿನ ಪಾತ್ರಗಳ ಚೂರುಗಳಿಂದ ಕೂಡಿದ ಹಾಳು ಮಣ್ಣಿನ ನೆಲೆ. ಇವುಗಳನ್ನೆಲ್ಲ ನೋಡಿ ಇವು ಬಹು ಮಟ್ಟಿಗೆ ಇಸಿಲ ಪಟ್ಟಣದ ಅವಶೇಷಗಳಿರಬೇಕೆಂದು ವಿಚಾರಪರತೆಯಿಂದ ಕೃಷ್ಣ ಅವರು ತರ್ಕಿಸಿದರು. ಮೂಮದೆ ಈ ಶಾಸನದ ನೈರುತ್ಯ ದಿಕ್ಕಿಗೆ ಎರಡು ಗುಂಡಿಗಳನ್ನು ಹೆಚ್ಚು ಎತ್ತರದ ಭಾಗದಲ್ಲಿ, ಮತ್ತೆರಡು ಗುಂಡಿಗಳನ್ನು ಅಲ್ಲದೆ ಅಲ್ಲಿ ಇಲ್ಲಿ ಒಟ್ಟು ೧೬ ಗುಂಡಿಗಳನ್ನು ಪುರಾತತ್ವಿಕ ವಿಧಾನದಿಂದ ತೋಡಿದರು. ಅವುಗಳನ್ನು ಎಲ್ಲಿಯ ತನಕ ಹಾಳುಮಣ್ಣು ಸಿಗುವುದೋ ಅಲ್ಲಿಯ ತನಕ ಅಗೆದರು. ಈ ಹಾಳುಮಣ್ಣಿನಲ್ಲಿ ಒಟ್ಟು ೫ ಪದರುಗಳನ್ನು ಗುರುತಿಸಿದರು. ಪ್ರತಿಯೊಂದು ಪದರದಲ್ಲಿನ ಅವಶೇಷಗಳ ಸಂಕಲನದಲ್ಲಿ ಎದ್ದು ಕಾಣುವಂತಹ ಕೆಲವೊಂದು ವಿಶೇಷ ವಸ್ತುಗಳಿದ್ದು ಅವು ಅಲ್ಲಿ ದೊರೆತ ಬೇರೆ ಯಾವುದೇ ಪದರಿನ ವಸ್ತುಗಳ ಲಕ್ಷಣಗಳಿಗಿಂತ ಬೇರೆಯಾಗಿದ್ದವು. ಆದುದರಿಂದ ಪ್ರತಿಯೊಂದು ಪದರಿನ ಅವಶೇಷಗಳು ಆ ನೆಲೆಯಲ್ಲಿಯ ಜನಜೀವನದ ಬೆಳವಣಿಗೆಯಲ್ಲಿ ಒಂದೊಂದು ಘಟ್ಟವನ್ನು ಸೂಚಿಸುವುದಾಗಿ ತಿಳಿಯಲಾಯಿತು. ಆಯಾಯ ವಿಶಿಷ್ಟ ಲಕ್ಷಣಗಳ ಮೇಲೆ, ಈ ಸಾಂಸ್ಕೃತಿಕ ಘಟ್ಟಗಳಿಗೆ ಹೆಸರುಗಳನ್ನು ಕೊಟ್ಟರು. ಮೇಲಿನ ಪದರಿನಿಂದ ಅವುಗಳ ಹೆಸರು ಮತ್ತು ಲಕ್ಷಣಗಳು ಹೀಗಿವೆ:

೧ನೇ ಪದರು: ಚಾಲುಕ್ಯ-ಹೊಯ್ಸಳ ಕಾಲದ ಸಂಸ್ಕೃತಿ

೨ನೇ ಪದರು: ಮೌರ್ಯರ ಕಾಲದ ನಗರ ಸಂಸ್ಕೃತಿ

೩ನೇ ಪದರು: ಕಬ್ಬಿಣಯುಗ ಆರಂಭ ಕಾಲದ ಸಂಸ್ಕೃತಿ

೪ನೇ ಪದರು: ನೂತನ ಶಿಲಾಯುಗದ ಸಂಸ್ಕೃತಿ

೫ನೇ ಪದರು: ಸೂಕ್ಷ್ಮ ಶಿಲಾಯುಗದ ಸಂಸ್ಕೃತಿ

ಈ ಸೂಕ್ಷ್ಮ ಶಿಲಾಯುಗ ಸಂಸ್ಕೃತಿಯ ಗುರುತುಗಳು ಬ್ರಹ್ಮಗಿರಿಯ ಸಮೀಪದ ರೊಪ್ಪ ಎಂಬ ಗ್ರಾಮದ ಹತ್ತಿರ ತೋಡಿದ ಗುಂಡಿಯಲ್ಲಿ ಸ್ಪಷ್ಟವಾಗಿ ಕಂಡು ಬಂದುದರಿಂದ ಈ ಸಂಸ್ಕೃತಿಗೆ ‘ರೊಪ್ಪ ಸಂಸ್ಕೃತಿ’ ಎಂದು ಹೆಸರಿಟ್ಟರು.

ಈ ಉತ್ಖನನದ ಜೊತೆಗೆ ಕೆಲವು ಬೃಹತ್ ಶಿಲಾಗೋರಿಗಳನ್ನು ಅಗೆದರು. ಪ್ರತಿಯೊಂದರಲ್ಲೂ ಮಾನವರ ಎಲುಬುಗಳು, ಕಪ್ಪು-ಕೆಂಪು, ಪೂರ್ಣ ಕಪ್ಪು, ಕೆಂಪು ಬಣ್ಣದ ಮಣ್ಣಿನ ಪಾತ್ರೆಗಳು, ಕಬ್ಬಿಣದ ಸಾಮಾನುಗಳು ದೊರೆತವು.

ಇಷ್ಟೆ ಅಲ್ಲ ಇನ್ನೆರಡು ಹೊಸ ಸಂಗತಿಗಳು ಬೆಳಕಿಗೆ ಬಂದವು. ೩ನೆ ಪದರಿನಲ್ಲಿ ದೊರೆತ ಕಬ್ಬಿಣಯುಗ ಸಂಸ್ಕೃತಿಯ ಮೃತ್ಪಾತ್ರೆ ಕಬ್ಬಿಣದ ಸಾಮಾನುಗಳ ತರಹದ್ದೆ ಬೃಹತ್‌ಶಿಲಾ ಗೋರಿಗಳಲ್ಲಿದ್ದವು. ಆದ್ದರಿಂದ ಈ ಗೋರಿಗಳು ಆದಿ ಕಬ್ಬಿಣಯುಗ ಸಂಸ್ಕೃತಿಯ ಜನ ಸಮುದಾಯದ್ದೆಂದು ದಕ್ಷಿಣ ಬಾರತದಲ್ಲೇ ಪ್ರಥಮ ಬಾರಿಗೆ ಸುಸ್ಪಷ್ಟವಾಯಿತು. ಬ್ರಹ್ಮಗಿರಿಯಲ್ಲಿದ್ದಂಥ ಬೃಹತ್‌ಶಿಲಾ ಗೋರಿಗಳ ನೆಲೆಗಳು ದಕ್ಷಿಣ ಭಾರತದ ಉದ್ದಗಲಕ್ಕೂ ನೂರಾರು ಎಡೆಗಳಲ್ಲಿ ಶೋಧವಾಗಿದ್ದವು. ಆದರೆ ಅವು ಯಾವ ಜನ ಸಮುದಾಯದ್ದು, ಯಾವ ಕಾಲದ್ದು ಎಂಬುದು ತಿಳಿದಿರಲಿಲ್ಲ.

ಎರಡನೆಯದಾಗಿ ೪ನೇ ಹಂತದ ನೂತನ ಶಿಲಾಯುಗ ಸಂಸ್ಕೃತಿಯ ಕುರುಹುಗಳು ೩ನೆ ಹಂತದ ಆದಿ ಕಬ್ಬಿಣ ಯುಗದ ಮತ್ತು ಹಾಗೆಯೆ ಎರಡನೆಯದರ ಅವಶೇಷಗಳು ೪ನೆ ಹಂತದ ಆದಿ ಇತಿಹಾಸ (ಮೌರ್ಯ-ಸಾತವಾಹನ) ದ ಆರಂಭದ ಘಟ್ಟಗಳಲ್ಲಿಯೂ ಇದ್ದವು. ಇದರಿಂದ ೩ನೆ ಮತ್ತು ೨ನೆ ಹಂತದ ಸಂಸ್ಕೃತಿಗಳು ಕಾಣಿಸಿಕೊಂಡು ಬೆಳೆಯುತ್ತಿದ್ದರೂ ಸ್ವಲ್ಪ ಕಾಲ ಇವುಗಳ ಜೊತೆಗೆ ಕ್ರಮವಾಗಿ ಹಿಂದಿನ ೪ ಮತ್ತು ೩ನೇ ಸಂಸ್ಕೃತಿಗಳು ಇನ್ನೂ ಸ್ವಲ್ಪ ಕಾಲ ಮುಂದುವರೆದಿದ್ದುವೆಂಬುದು ಸ್ಪಷ್ಟ. ಇದರಿಂದ ೨ನೆಯ ಮೌರ್ಯ-ಸಾತವಾಹನ ಹಂತದ ನಿಗದಿತ ಕಾಲಮಾನದಿಂದ ಇದರ ಹಿಂದಿನ ಎರಡು ಸಂಸ್ಕೃತಿಗಳ ಕಾಲಮಾನಗಳನ್ನು ಒಪ್ಪುವ ರೀತಿಯಲ್ಲಿ ಅಂದಾಜು ಮಾಡಲು ಸಾಧ್ಯ. ಆ ಈ ಶೋಧನಗಳನ್ನು ಅಧ್ಯಯನ ಮಾಡಿ ತಿಳಿಯುವ ಮೊದಲೇ ಕೃಷ್ಣ ಅವರು ೧೯೪೭ ರಲ್ಲೇ ದೈವಾಧಿನರಾದರು.

ಈ ಉತ್ಖನನಗಳಿಂದ ಬ್ರಹ್ಮಗಿರಿಯಲ್ಲಿ ಇಸಿಲಾ ನಗರವಿದ್ದ ಕುರುಹುಗಳು ಸಿಕ್ಕವಲ್ಲದೆ, ಇದಕ್ಕೂ ಹಿಂದಿನ ಕಬ್ಬಿಣದ ಉಪಯೋಗ ಶುರುಮಾಡಿದ ಕಾಲದ ಮತ್ತು ಅದಕ್ಕೂ ಹಿಂದಿನ ನೂತನ ಶಿಲಾಯುಗದ ಸಂಸ್ಕೃತಿಗಳ ಗುರುತುಗಳೂ ಕೂಡ ಶೋಧವಾದವಷ್ಟೆ. ಇದರಿಂದ ಕರ್ನಾಟಕದ ಮತ್ತು ಪ್ರಾಗಿತಿಹಾಸದಲ್ಲಿ ಹೊಸ ಪುಟಗಳನ್ನು ಬರೆಯುವ ಹಾಗಾಯಿತು. ಆದುದರಿಂದ ಬ್ರಹ್ಮಗಿರಿಯು, ಇತಿಹಾಸ ಸಂಶೋಧನೆಯಲ್ಲಿ ನಿಜವಾಗಿ ಒಂದು ಮಹತ್ವದ ನೆಲೆ ಮತ್ತು ಕರ್ನಾಟಕದಲ್ಲಿಯ ಪ್ರಾಗಿತಿಹಾಸ ಮತ್ತು ಇತಿಹಾಸ ಕಾಲದ ಸಂಸ್ಕೃತಿಯ ಮುಖ್ಯವಾದ ಲಕ್ಷಣಗಳು ಮತ್ತು ಅವುಗಳ ಅನುಕ್ರಮವು ಕ್ರಮವಾದ ಉತ್ಖನನದಿಂದ ಮೊದಲು ತಿಳಿದುದು ಇಲ್ಲಿಯೆ. ಅಷ್ಟೇ ಅಲ್ಲ ಈ ಉತ್ಖನನದಿಂದ ಕರ್ನಾಟಕದಲ್ಲಿ ಪ್ರಾಗೈತಿಹಾಸಿಕ ಕಾಲದಿಂದ ಇತಹಾಸ ಕಾಲದವರೆಗಿನ ಮಾನವ ಸಂಸ್ಕೃತಿಯ ನಿರಂತರವಾದ ಬೆಳವಣಿಗೆಯನ್ನು ತಿಳಿಯಲು ಸಾಧ್ಯವಾಯಿತು.

ಮೌರ್ಯರ ಕಾಲದ ನಂತರದ ಇತಿಹಾಸ ಬ್ರಹ್ಮಗಿರಿಯಲ್ಲಿ ಸ್ಪಷ್ಟವಾಗಿರಲಿಲ್ಲ. ಇಸಿಲಾ ನಗರ ಸಂಸ್ಕೃತಿಯು ಮೌರ್ಯರ ನಂತರ ಕ್ರಮೇಣ ಅವನತಿ ಹೊಂದಿತೆಂದು ತೋರುವುದು. ಇತರೆಡೆಯ ಶಾಸನಗಳು ಮತ್ತು ಇತರ ಇತಿಹಾಸ ಕಾಲದ ಕಟ್ಟಡಗಳ ಶಾಸನ ಮೊದಲಾದ ಶೋಧನೆಗಳಿಂದ ಸು. ೪-೬ನೇ ಶತಮಾನದ ಬನವಾಸಿ ಕದಂಬರ ಕಾಲದಿಂದ ಕರ್ನಾಟಕ ಇತಿಹಾಸವು ಹೆಚ್ಚು ಹೆಚ್ಚು ನಿಖರವಾಗಿ ತಿಳಿಯುತ್ತಾ ಹೋಗಿದೆ. ಆದರೆ ಮೌರ್ಯರ ನಂತರ ಕದಂಬರವರೆಗಿನ ಜನ ಜೀವನ, ಸಂಸ್ಕೃತಿಯನ್ನು ತಿಳಿಯುವುದು ಹೇಗೆ? ಈ ಕಾಲದಲ್ಲಿಯ ಅಲ್ಲೊಂದು ಇಲ್ಲೊಂದು ಸಣ್ಣ ಶಿಲಾಶಾಸನಗಳನ್ನು, ಗ್ರಂಥಗಳ ಉಲ್ಲೇಖಗಳನ್ನು ಬಿಟ್ಟರೆ ಮತ್ತೆ ಯಾವ ಅಧಿಕೃತ ಆಕರಗಳೂ ಇರಲಿಲ್ಲ. ಈ ಕೊರತೆಯನ್ನು ನೀಗಿ ಈ ಕಾಲದಲ್ಲಿಯ ಕರ್ನಾಟಕದ ಸಂಸ್ಕೃತಿಯ ಸ್ಥೂಲ ದರ್ಶನ ಮಾಡಿಸುವಂತಹ ಒಂದು ಮಹತ್ವದ ಐತಿಹಾಸಿಕ ನೆಲೆ ಸಿಕ್ಕಿದರೆ ಎಷ್ಟು ಚೆನ್ನಾಗಿತ್ತು ! ಅತಿ ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಸಂಪತ್ತಿನಿಂದ ತುಂಬಿ ತುಳುಕಾಡುತ್ತಿರುವ ಕರ್ನಾಟಕದಲ್ಲಿ ಇಂಥ ನೆಲೆಗಳು ಇಲ್ಲದಿರಬಹುದೆ? ಇಂಥ ಮಹತ್ವದ ನೆಲೆಯು ಬ್ರಹ್ಮಗಿರಿಯ ೭೫ ಕಿ.ಮೀ. ನೈರುತ್ಯಕ್ಕೆ ಶೋಧವಾಯಿತು. ಅದೇ ಚಂದ್ರವಳ್ಳಿ.

ಚಂದ್ರವಳ್ಳಿ

ಚಿತ್ರದುರ್ಗದ ನಗರದ ಪಶ್ಚಿಮ ಬದಿಯಲ್ಲಿ ವಿಸ್ತಾರವಾದ ಅಂಕುಡೊಂಕಾದ ಕಲ್ಲುಗುಡ್ಡಗಳ ಸಾಲು ಇದೆ. ಇದರಲ್ಲಿಯ ಒಂದು ವಿಶಾಲವಾದ ಕಣಿವೆಯಲ್ಲಿರುವುದೇ ಚಂದ್ರವಳ್ಳಿ. ಇಲ್ಲಿ ಹಿಂದೆ ದೊಡ್ಡ ಪಟ್ಟಣವಿದ್ದಿತೆಂದು ಈ ಭಾಗದ ಜನರು ಬಹಳ ಹಿಂದಿನಿಂದಲೂ ಆಡಿಕೊಳ್ಳುತ್ತಿದ್ದರು. ದ್ವಾಪರ ಯುಗದ ಮಹಾಭಾರತದಲ್ಲಿಯ ಹಿಡಿಂಬಾಸುರನ ಕಥೆ ಚಿರ ಪರಿಚಿತ. ಅವನು ಈ ಗುಡ್ಡದಲ್ಲಿಯೇ ವಾಸಿಸುತ್ತಿದ್ದನಂತೆ. ಪಂಚಪಾಂಡವರು ಇಲ್ಲಿಗೆ ಬಂದಾಗ ಭೀಮನು ಇವನನ್ನು ಇಲ್ಲಿ ಕೊಂದನಂತೆ. ಈ ಗುಡ್ಡದ ಮೇಲಿರುವ ಹಿಡಿಂಬಾಸುರನ ದೇವಸ್ಥಾನದಲ್ಲಿ ಅವನ ಎರಡು ಹಲ್ಲುಗಳು ಈಗಲೂ ಇವೆಯಂತೆ. ಇವುಗಳು ನೋಡುವುದಕ್ಕೆ ಆನೆಯ ಕೋರೆಹಲ್ಲುಗಳ ಹಾಗೆ ಇವೆ ಮತ್ತು ಇಲ್ಲಿ ಪಂಚಪಾಂಡವರು ತಮ್ಮ ತಮ್ಮ ಹೆಸರಿನಲ್ಲಿ ಐದು ಲಿಂಗಗಳನ್ನು ಸ್ಥಾಪಿಸಿದರಂತೆ. ಅನಂತರ ಕನ್ನಡ ಜನತೆಯ ಮನೆಮಾತಾಗಿರುವ ಚಂದ್ರಹಾಸನ ರಾಜ್ಯಕ್ಕೆ ಇದು ಸೇರಿತ್ತಂತೆ. ಪುರಾತನ ಕಾಲದಲ್ಲಿ ಇಲ್ಲಿದ್ದ ಪಟ್ಟಣವು ಒಂದು ಬ್ರಹ್ಮರಾಕ್ಷಸನಿಂದ ಹಾಳಾಯಿತಂತೆ. ಹೀಗೆ ಬಾಯಿಂದ ಬಾಯಿಗೆ ಬಂದ ಇದೊಂದು ಸ್ಥಳೀಯ ಕಥೆ. ಚಿತ್ರದುರ್ಗ ಪ್ರದೇಶ ಭಾರತದಲ್ಲಿ ಭೂಕಂಪನವಾಗುವ ಸ್ಥಳಗಳಲ್ಲಿ ಒಂದು. ಸುಮಾರು ೧೫೦ ವರ್ಷಗಳ ಹಿಂದೆ ಇಲ್ಲಿ ಭೂಕಂಪವಾದಾಗ ಗುಡ್ಡದ ಮೇಲಿದ್ದ ಬಂಡೆಗಳು ಕೆಳಗುರಳಿ ಬಿದ್ದುವಂತೆ. ಹೀಗೇನೋ ನೈಸರ್ಗಿಕ ಕೋಪದಿಂದ ಹಿಂದೆ ಇಲ್ಲಿದ್ದ ಪಟ್ಟಣ ಹಾಳಾಗಿದ್ದಿರಬಹುದೇನೊ.

ಸುಮಾರು ಮೂರು ತಲೆಮಾರಿನ ಹಿಂದೆ, ಈ ಕಣಿವೆಯಿಂದ ಹರಿಯುವ ಮಳೆಯ ನೀರನ್ನು ಅಲ್ಲಿಯ ಒಂದು ಕೆರೆಗೆ ಒಯ್ಯಲು ಒಂದು ಕಾಲುವೆಯನ್ನು ಅಗೆದಾಗ ಅಲ್ಲಿ ಅನೇಕ ಸೀಸದ ನಾಣ್ಯಗಳು ಕಂಡುಬಂದವು. ಯಾವ ಕಾಲದ ಮತ್ತು ಅರಸರ ನಾಣ್ಯಗಳೆಂಬುದನ್ನು ತಿಳಿಯಲು ಅವಗಳನ್ನು ಲಂಡನ್ನಿನಲ್ಲಿರುವ ಬ್ರಿಟಿಷ್ ವಸ್ತುಸಂಗ್ರಹಾಲಯಕ್ಕೂ ಮತ್ತು ಇತರ ಕಡೆಗಳಿಗೂ ಕಳುಹಿಸಲಾಯಿತು. ಆ ನಾಣ್ಯಗಳಲ್ಲಿ ಕೆಲವನ್ನು ಇ.ಜಿ.ರ‍್ಯಾಪ್ಸನ್‌ಎಂಬ ಪ್ರಾಚೀನ ನಾಣ್ಯ ಶಾಸ್ರಜ್ಞರು ಪರೀಕ್ಷಿಸಿ ಆ ನಾಣ್ಯಗಳಲ್ಲಿ ಕೆಲವು ಸುಮಾರು ೧೮೦೦ ವರ್ಷಗಳ ಹಿಂದೆ ಈ ಭಾಗವನ್ನು ಆಳುತ್ತಿದ್ದ ಶಾತವಾಹನ ಅರಸರ ಮಾಡಲೀಕರದ್ದು ಎಂದು ತಿಳಿಸಿದರು. ಅವುಗಳನ್ನು ಬ್ರಿಟಿಷ್ ಮ್ಯೂಸಿಯಂ ಕ್ಯಾಟಲಾಗ್ ಆಫ್ ದಿ ಕಾಯನ್ಸ್ ಆಫ್ ಆಂಧ್ರಾಸ್ ಎಂಬ ಗ್ರಂಥದಲ್ಲಿ ಪ್ರಕಟಿಸಿದರು. ಅನಂತರ ಸುಮಾರು ೧೯೦೧ ರಲ್ಲಿ ಒಬ್ಬ ಲೋಹತಜ್ಞ ಈ ಗುಡ್ಡಗಳಲ್ಲಿ ಲೋಹಗಳ ಶೋಧನೆಗೋಸ್ಕರ ಅಲೆದಾಡುತ್ತಿರುವಾಗ ಈ ಸ್ಥಳದಲ್ಲಿ ಅವರಿಗೂ ಮತ್ತೆ ಕೆಲವು ನಾಣ್ಯಗಳು ಸಿಕ್ಕವು. ಈ ವಿಷಯವನ್ನು ವೃತ್ತಪತ್ರಿಕೆಯಲ್ಲಿ ಪ್ರಕಟಿಸಿ ಆಗಿನ ಕೇಂದ್ರ ಪುರಾತತ್ವಸರ್ವೇಕ್ಷಣ ಶಾಖೆಯ ಮಹಾನಿರ್ದೇಶಕರಿಗೆ ಪತ್ರ ಬರೆದರು.ಆ ನಿರ್ದೇಶಕರು ಮೈಸೂರು ಸರ್ಕಾರದ ಪುರಾತತ್ವ ಸರ್ವೇಕ್ಷಣಾ ಶಾಖೆಯ ನಿರ್ದೇಶಕರಿಗೆ ಈ ನೆಲೆಯನ್ನು ಪರೀಕ್ಷಿಸಲು ತಿಳಿಸದರು. ಆಗಿನ ನಿರ್ದೇಶಕರಾಗಿದ್ದ ಆರ್. ನರಸಿಂಹಾಚಾರ್ಯರು ಆ ಸ್ಥಳವನ್ನು ಪರಿಶೀಲಿಸದರು. ಅಲ್ಲಿ ಎಂಟು ಗುಂಡಿಗಳನ್ನು ತೋಡಿ ಅವುಗಳಲ್ಲಿ ದೊರೆತ ಕೆಲವನ್ನು ತಮ್ಮ ಶಾಖೆಯ ೧೯೦೯ನೇ ವಾರ್ಷಿಕ ವರದಿಯಲ್ಲಿ ಪ್ರಕಟಿಸಿದರು. ಪ್ರಚಲಿತ ಸ್ಥಳೀಯ ಕಥೆಯಂತೆ ಅಲ್ಲಿ ಹಿಂದೆ ದೊಡ್ಡ ನಗರವಿದ್ದುದು ನಿಜವೆಂದು, ಅದು ತಮ್ಮ ಶೋಧನೆಯಿಂದ ತಿಳಿಯಿತೆಂದು ಅದರಲ್ಲಿ ಹೇಳಲಾಗಿದೆ. ಮತ್ತು ಉತ್ಖನನದಲ್ಲಿ ಪರಿಣತನಾದವನು ಆ ನೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಖನನ ಮಾಡುವುದು ಅವಶ್ಯವೆಂದು ತಿಳಿಸಲಾಗಿದೆ.

ಸುಮಾರು ೨೦ ವರ್ಷಗಳ ತರುವಾಯ ಈ ಮಹತ್ವದ ಐತಿಹಾಸಿಕ ನೆಲೆಯಲ್ಲಿ ಇಲಾಖೆಯ ನಿರ್ದೇಶಕರಾಗಿದ್ದ ಎಂ.ಎಚ್. ಕೃಷ್ಣರವರಿಂದ ಮತ್ತೆ ಹೆಚ್ಚಿನ ಪುರಾತತ್ವ ಅನ್ವೇಷಣೆಯಾಯಿತು. ಅವರು ಆ ನೆಲೆಯಲ್ಲಿ ಹಿಂದೆ ದೊರೆತಿದ್ದ ಶಾತವಾಹನ ಅರಸರ, ಮಾಂಡಲೀಕರ ನಾಣ್ಯಗಳನ್ನು ಅದರ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಿ.ಎಲ್. ರೈಸ್ ಅವರು ಶೋಧಿಸಿದ ಸು. ೧೧-೧೩ನೇ ಶತಮಾನದ ಶಿಲಾಶಾಸನಗಳನ್ನು ಮತ್ತು ನರಸಿಂಹಾಚಾರ್ಯರ ಅಗೆತದಲ್ಲಿ ಸಂಗ್ರಹಿಸಿದ ವಸ್ತುಗಳನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದರು. ಅಷ್ಟು ಹೊತ್ತಿಗಾಗಲೆ ಕೃಷ್ಣರವರು ಪುರಾತತ್ವ ಉತ್ಖನನದಲ್ಲಿ ವೈಜ್ಞಾನಿಕ ಸರಬೇತಿಯನ್ನು ಪಡೆದಿದ್ದರು. ೧೯೨೮ ರಲ್ಲಿ ಈ ನೆಲೆಯನ್ನು ವಿಸ್ತಾರವಾಗಿ ಉತ್ಖನನ ಮಾಡಿದರು. ಇವರ ಅನ್ವೇಷಣೆಯಲ್ಲಿ ನಾಲ್ಕು ಹೊಸ ಶಾಸನಗಳು ಸಿಕ್ಕವು. ಅವುಗಳಲ್ಲಿ ಒಂದು ಬಹಳ ಮಹತ್ವದ್ದು. ಅದು ಅಲ್ಲಿಯ ಹುಲಿಗೊಂದಿಯಲ್ಲಿರುವ ಭೈರವ ದೇವಸ್ಥಾನದ ಹತ್ತಿರದಲ್ಲಿದ್ದ ಒಂದು ಬಂಡೆಯ ಮೇಲಿದೆ. ಅದು ಕನ್ನಡ ನಾಡಿನ ಪ್ರಥಮ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದ ಮಯೂರವರ್ಮ (ಶರ್ಮ)ನದು.

ಮಯೂರಶರ್ಮನ ಶಾಸನ

ಇದರಲ್ಲಿ ಕೇವಲ ಮೂರು ಸಾಲುಗಳಿವೆ. ಬ್ರಾಹ್ಮಿ ಅಕ್ಷರದಲ್ಲಿದೆ. ಭಾಷೆ ಪ್ರಾಕೃತ. ಕಾಲ ಸುಮಾರು ನಾಲ್ಕನೇ ಶತಮಾನದ ಆದಿ ಭಾಗ. ಈ ಶಾಸನದ ಕೃಷ್ಣರವರ ಪಾಠ ಹೀಗಿದೆ.

೧. ಕದಂಬಾಣಂ ಮಯೂರ ಶಮ್ಮಣಾ ವಿಣಿಮ್ಮಿಅಂ

೨. ತಟಾಕಂ ದೂಭ ತೋಕೂಟ ಅಭೀರ ಪಲ್ಲವ ಪಾರಿ

೩. ಯಾತ್ರಿಕ ಸಕಸ್ಥಾ[ಣ] ಸಯಿನ್ದಕ ಪುನಾಟ ಮೋಕರಿ[ಣಾ]

ಮಯೂರಶರ್ಮನು ಇಲ್ಲಿ ಒಂದು ಕೆರೆಯನ್ನು ನಿರ್ಮಿಸಿದ ವಿಷಯ ಇದರಲ್ಲಿ ಇದೆ. ಇದರಲ್ಲಿಯ ಮತ್ತೊಂದು ಮಹತ್ವದ ವಿಷಯವೆಂದರೆ, ಮಯೂರಶರ್ಮನು ತಾನು ರಾಜ್ಯವನ್ನು ಕಟ್ಟಿ ವಿಸ್ತರಿಸುವ ಕಾಲದಲ್ಲಿ ಎದುರಿಸಿದ ರಾಜ್ಯಗಳ ಹೆಸರುಗಳು ಇವೆ. ಅವುಗಳು ಅಭೀರ, ತ್ರೈತೋಟ, ಪಲ್ಲವ, ಪಾರಿಯಾತ್ರಿಕ, ಶಕಸ್ಥಾನ, ಸೇಂದ್ರಕ, ಪುನ್ನಾಟ ಮತ್ತು ಮೌಖರಿ. ಇದರಿಂದ ಆ ಕಾಲದಲ್ಲಿ ದಖನ್ ಪ್ರಸ್ತಭೂಮಿ ಮತ್ತು ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಯಾವ ಯಾವ ರಾಜ್ಯಗಳಿದ್ದವೆಂಬುದು ತಿಳಿಯಿತು. ಇವುಗಳಲ್ಲಿ ಪುನ್ನಾಟವು ಈಗಿನ ಕರ್ನಾಟಕದ ದಕ್ಷಿಣ ಭಾಗವಾಗಿತ್ತು. ಈಗಿನ ಗುಜರಾತ ಭಾಗಗಳೇ ತ್ರೈಕೂಟರ ರಾಜ್ಯವಾಗಿತ್ತು. ಸೇಂದ್ರಕರು ಶಿವಮೊಗ್ಗ ಜಿಲ್ಲೆಯ ಬಾಗವನ್ನು ಆಳುತ್ತಿದ್ದರು. ಉಳಿದ ಭಾಗಗಳು ಕರ್ನಾಟಕದ ಪೂರ್ವಕ್ಕಿದ್ದ ಪಲ್ಲವ ಮತ್ತು ಉತ್ತರದಲ್ಲಿದ್ದ ಸಾತವಾಹನ ಅರಸರಿಗೂ ಬಹುಶಃ ಅಧೀನವಾಗಿದ್ದವು. ಅಂದರೆ ೩ನೇ ಶತಮಾನದ ಹೊತ್ತಿಗೆ ಕರ್ನಾಟಕದ ಭಾಗಗಳು ಬೇರೆ ಬೇರೆ ರಾಜ್ಯಗಳಲ್ಲಿದ್ದವು ಎಂದಾಯಿತು. ಇವರೆಲ್ಲರನ್ನೂ ಎದುರಿಸಿದ ಮಯುರಶರ್ಮನಿಂದ ಪ್ರಥಮವಾಗಿ ಕರ್ನಾಟಕದ ಸ್ವತಂತ್ರ ರಾಜಕೀಯ ಚರಿತ್ರೆ ಆರಂಭವಾಯಿತೆಂದು ಇತ್ತೀಚನವರೆಗೂ ತಿಳಿಯಲಾಗಿತ್ತು.

ಚಿತ್ರದುರ್ಗದ ಸಂಶೋಧಕರಾದ ಬಿ.ರಾಜಶೇಖರಪ್ಪ ಅವರು ಈ ಶಾಸನವನ್ನು ಕೂಲಂಕಷವಾಗಿ ಮತ್ತೆ ಅಧ್ಯಯನ ನಡೆಸಿದರು. ಅವರ ಪ್ರಕಾರ ಇದರ ಭಾಷೆ ಪ್ರಾಕೃತ ಅಲ್ಲ, ಸಂಸ್ಕೃತ ಮತ್ತು ಇದರ ಪಾಠ ಹೀಗಿದೆ.

೧. ಕದಂಬಾಣಂ ಮಯೂರವರ್ಮ್ಮಣಾ

೨. ತಟಾಕಂ ದೃಢೀಕೃತಂ ಅಭಿರುಪಂ ರ[ಚ]ಯಿತ್ವಾ

೩. ವಾನ[ವಾ]ಸಕಂ ಸ್ಥಾಪಯಿತ್ವಾ ಕುಪಣಚ[ಮೋ]…

ಈ ಪಾಠದ ಪ್ರಕಾರ ಮಯೂರವರ್ಮನ ಯಾವುದೇ ದಂಡಯಾತ್ರೆ ವಿವರವಿರದೆ ಅಲ್ಲಿಯೆ ಇದ್ದ ಕೆರಯೊಂದನ್ನು ಬಲಪಡಿಸುದುದನ್ನು, ಸುಂದರ ರೂಪವನ್ನು ರಚಿಸಿ, ಕಾಡಿನವಾಸದ ನೆಲೆಯನ್ನು ಸ್ಥಾಪನೆ ಮಾಡಿದ ಮತ್ತು ಈ ಶಾಸನವನ್ನು ಬರೆದವನು ಕುಪಣ[ಕೊಪ್ಪಳ]ದ ಚಾಮನೆಂಬ ವಿಷಯವಿದೆ. ಆದರೆ ಏನನ್ನು ರಚಿಸಿದ ಎಂಬ ವಿವರವಿಲ್ಲ. (ದುರ್ಗ ಶೋಧನ, ೨೦೦೧, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು)

೧೯೭೮ರಲ್ಲಿ ಈ ನೆಲೆಯ ನನ್ನ ಅನ್ವೇಷಣೆಯಲ್ಲಿ ಈ ಶಾಸನದ ಗುಂಡುಕಲ್ಲಿನ ಪಕ್ಕದಲ್ಲಿ ಬೇರೆಲ್ಲಿಯೂ ಕಂಡುಬರದಂಥ ಒಂದು ಅಪರೂಪ ಮಾದರಿಯ ಶಿವಲಿಂಗವು ಇದ್ದದನ್ನು ನೋಡಿದೆ. ಅದು ಈಗ ರಾಜ್ಯ ಸರ್ಕಾರದ ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯಗಳ ಇಲಾಖೆಯ ಸ್ಥಳೀಯ ವಸ್ತುಸಂಗ್ರಹಾಲಯದಲ್ಲಿದೆ. ನಮ್ಮಲ್ಲಿ ಕೆರೆ, ಕೊಳದ ಸಮೀಪ ಒಂದು ಸಣ್ಣ ಗುಡಿಯನ್ನು ನಿರ್ಮಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಇದೆ. ಪ್ರಾಯಶಃ ಇಲ್ಲಿಯ ಕೆರೆಯನ್ನು ದುರಸ್ತಿ ಮಾಡುವ ಕಾಲದಲ್ಲಿ ಮೊದಲಿದ್ದ ಪ್ರತಿಮೆ (ಶಿವಲಿಂಗ?) ಯಂತೆ (ಅಭಿರೂಪ) ಒಂದು ಸುಂದರ ರೂಪ(ಅಭಿರೂಪ)ವನ್ನು ಮಾಡಿಸಿ ಸ್ಥಾಪಿಸಿರಬಹುದು. ಶಾಸನದ ಬಳಿ ಇದ್ದ ಶಿವಲಿಂಗ ಅದೇ ಆಗಿರಬಹುದು ಎಂಬುದು ನನ್ನ ಅಭಿಪ್ರಾಯ. ಅಂಕಲಿ ಮಠದ ಗವಿಯೊಳಗಿರುವ ಪಂಚ ಪಾಂಡವರ ಹೆಸರಿನ ಶಿವಲಿಂಗಗಳ ಜೊತೆಗೆ ವೃತ್ತ ಪೀಠದಲ್ಲಿಯೂ ಇದೇ ತರಹದ ಶಿವಲಿಂಗವಿದೆ. ಮೊದಲಿನದಕ್ಕೆ ಅನುರೂಪವಾದ ಎನ್ನುವ ಅರ್ಥದಲ್ಲಿ ‘ಅಭಿರೂಪ’ ಪದವು ಶತಪಥ ಬ್ರಾಹ್ಮಣ ಮತ್ತು ಅಥರ್ವವೇದ ಹಾಗೂ ಅನಂತರ ಕಾಲದ ಸಾಹಿತ್ಯದಲ್ಲಿದೆ. ತಾಳಗುಂದದ ಶಾಸನದಲ್ಲಿ ಹೇಳಿರುವಂತೆ ಮಯೂರಶರ್ಮ (ನಂತರ ಕಾಲದಲ್ಲಿ ವರ್ಮ)ನು ಒಬ್ಬ ವೇದ ಪಾರಂಗತನಾದ ನಿಷ್ಠಾವಂತ ಶ್ರೋತ್ರೀಯ ಬ್ರಾಹ್ಮಣ. ಆದ್ದರಿಂದಲೇ ಚಿರಪರಿಚಿತವಾದ ‘ಅಭಿರೂಪ’ ಎಂಬ ಸೂಕ್ತ ಪದವನ್ನು ಶಾಸನದಲ್ಲಿ ಬಳಸಲಾಗಿದೆ. ಮತ್ತು ಮೊದಲಿನಂತಿರುವ ಆ ಪ್ರತಿಮೆ ಅಲ್ಲಿಯೇ ಇರುವುದರಿಂದ ಅದು ಯಾವುದೆಂದು ಹೇಳುವ ಅವಶ್ಯ ಸ್ಥಾಪನೆಗೆ ಕಾರಣನಾದವನಿಗೆ ಮತ್ತು ಜನ ಸಮುದಾಯಕ್ಕೆ ಕಂಡುಬರಲಿಲ್ಲವೆಂದು ನನಗನಿಸುತ್ತದೆ.

ಸನ್ನಿವೇಶ

ಚಿತ್ರದುರ್ಗದ ಗುಡ್ಡ ಕಿರುಬನಕಲ್ಲುಗುಡ್ಡ ಮತ್ತು ಚೋಳಗುಡ್ಡಗಳ ಸಾಲುಗಳಿಂದ ಸುತ್ತುವರೆಯಲ್ಪಟ್ಟಿದೆ. ಆದುದರಿಂದ ಇದು ನೈಸರ್ಗಿಕವಾಗಿ ಸುರಕ್ಷಿತವಾಗಿದೆ. ಇಲ್ಲಿಯೇ ಯಾವಾಗಲೂ ನೀರು ಇರುವಂಥಹ ಒಂದು ಹಳ್ಳವು ಹರಿಯುತ್ತದೆ. ಇಲ್ಲಿಗೆ ಬರಲು ಈ ಗುಡ್ಡಗಳಲ್ಲಿಯ ಮುಖ್ಯವಾದ ಮೂರು ಕಣಿವೆಗಳ ಮೂಲಕ ಸಾಧ್ಯ. ಇಷ್ಟು ನಿಸರ್ಗದ ರಕ್ಷಣೆ, ಅನುಕೂಲತೆ ಇದ್ದುದರಿಂದ ಪ್ರಾಗೈತಿಹಾಸ ಕಾಲದಿಂದಲೂ ಜನರು ಇಲ್ಲಿ ನೆಲೆಸಲು ಆಕರ್ಷಿತರಾದರು.

ಈ ಪ್ರದೇಶಕ್ಕೆ ಹೊಂದಿಕೊಂಡ ಮೂರು ಕಣಿವೆಗಳಲ್ಲಿ ‘ಹುಲೆಗೊಂದಿ’ಯೆಂಬುದು ಒಂದು. ಇದರ ಮೂಲಕವೇ ಹಳ್ಳವು ಬಯಲಿಗೆ ಹರಿದು ಬರುತ್ತಿತ್ತು. ಈ ಕಣಿವೆಗೆ ಅಡ್ಡಲಾಗಿ ಒಡ್ಡನ್ನು ಹಾಕಿದರೆ ಆ ಪ್ರದೇಶದ ವ್ಯವಸಾಯಕ್ಕೆ ಸಾಕಷ್ಟು ನೀರು ಒದಗಿಸುವ ಸಂಭವವಿತ್ತು. ಇದು ಮೊದಲಿನ ಜನರಿಗೂ ತಿಳಿದಿರುತ್ತದೆ. ಆದುದರಿಂದ ಈ ಹಳ್ಳಕ್ಕೆ ಬೇರೆ ಬೇರೆ ಕಾಲದಲ್ಲಿ ಕಟ್ಟಿಸಿದ್ದ, ಈಗ ಹಾಳುಸ್ಥಿತಿಯಲ್ಲಿರುವ ಮೂರು ಅಥವ ನಾಲ್ಕು ಅಡ್ಡಕಟ್ಟುಗಳು ಇವೆ. ಇವುಗಳಲ್ಲಿ ಒಂದು ಪ್ರಾಯಶಃ ಇದರ ಹತ್ತಿರದಲ್ಲೇ ಇರುವ ಮಯೂರಶರ್ಮನು ಶಸನದಲ್ಲಿ ಉಲ್ಲೇಖಿಸಿದ ಕೆರೆಯೇ ಆಗಿರಬಹುದು. ಏಕೆಂದರೆ ಇಲ್ಲಿ ಬಹಶಃ ಆ ಕಾಲದ್ದೆನ್ನಬಹುದಾದ ಒಡೆದುಹೋದ ಇಟ್ಟಿಗೆಯ ಕಟ್ಟಡದ ಅವಶೇಷಗಳಿವೆ.

ಈ ಗುಡ್ಡಗಳಲ್ಲಿ ಅನೇಕ ಗವಿಗಳಿವೆ. ಬರಲಗೊಂದಿ ಕಣಿವೆ ಬಳಿ ಇರುವ ಗವಿಗಳಲ್ಲಿ ಇಟ್ಟಿಗೆ, ಮಣ್ಣಿನ ಪಾತ್ರೆಗಳ ಚೂರುಗಳು, ಬೂದಿ, ಲೋಹದ ಕೆಲಸಗಾರರು ಉಪಯೋಗಿಸಿದ ಮೂಸೆಗಳು, ಕುಲುಮೆ ಅವಶೇಷಗಳೂ, ಕಬ್ಬಿಣದ ಅದಿರು, ಕಿಟ್ಟ, ನೂತನ ಶಿಲಾಯುಗ ಸಂಸ್ಕೃತಿಯ ತಿಕ್ಕಿ ನಯ ಮಾಡಿದ ಮೈಯುಳ್ಳ ಕಲ್ಲಿನ ಕೊಡಲಿಗಳು, ಶೋಧನೆಯಲ್ಲಿ ದೊರೆತವು. ಇವೆಲ್ಲವೂ ಬಹಳ ಹಿಂದೆ ಇಲ್ಲಿ ವಾಸಿಸುತ್ತಿದ್ದ ಜನರ ನಿತ್ಯಜೀವನಕ್ಕೆ ಸಂಬಂಧಿಸಿದ ವಸ್ತುಗಳ ಅವಶೇಷಗಳಾಗಿದ್ದವು. ಈ ಗವಿಗಳಿಂದ ಸ್ವಲ್ಪ ಮೇಲಕ್ಕೆ ವಿಶಾಲವಾದ ಬಯಲಿನಲ್ಲಿ ಕೆಲವು ಇಟ್ಟಿಗಗಳ ತಳಪಾಯಗಳಿದ್ದವು. ಈ ಸ್ಥಳಕ್ಕೆ ಹೋಗುವ ದಾರಿಯ ಬದಿಯಲ್ಲಿ ಅಲ್ಲಲ್ಲಿ ಕಾಳುಕಡ್ಡಿಗಳನ್ನು ಅರೆಯುವ ಕಲ್ಲುಗಳು ಮತ್ತು ಕಲ್ಲಿನ ಆಯುಧಗಳನ್ನು ನುಣುಪು ಮಾಡಲು ಬಂಡೆಯಲ್ಲಿ ತಿಕ್ಕಿ ತಿಕ್ಕಿ ಉದ್ದನೆಯ ತಗ್ಗುಗಳು ಇದ್ದವು. ಚಂದ್ರವಳ್ಳಿಯ ಬಯಲಿನ ಮಧ್ಯದಲ್ಲಿ, ಹರಿಯುವ ಹಳ್ಳದ ಎಡಬದಿಯಲ್ಲಿ ಒಂದು ಕಲ್ಲುಗುಡ್ಡವಿದೆ. ಈ ಗುಡ್ಡದ ಬದಿಯಲ್ಲಿ ಅಲ್ಲಲ್ಲಿ ಸುಮಾರು ಆರು ಬೃಹತ್ ಶಿಲಾಗೋರಿಗಳ ಕುರುಹುಗಳಿದ್ದವು.

ಕೃಷ್ಣರವರ ಶೋಧನೆಯಲ್ಲಿ ಹಿಂದೆ ಲೋಕೋಪಯೋಗಿ ಶಾಖೆಯವರು ಅಗೆದ ಕಾಲುವೆ ಈಗ ಹಳ್ಳವಾಗಿ ಮೊದಲಿನ ಹಳ್ಳ ಮುಚ್ಚಿಹೋಗಿದ್ದುದು ಕಂಡುಬಂತು. ಈಗಿನ ಕಾಲುವೆಯ ಹತ್ತಿರ ಉದ್ದಕ್ಕೂ ದೊಡ್ಡ ಇಟ್ಟಿಗೆಗಳು. ಸತುವಿನ ಹಾಗೂ ಬೆಳ್ಳಿಯ ನಾಣ್ಯಗಳು, ಚಿನ್ನ, ತಾಮ್ರದ ಆಭರಣಗಳು, ನಾನಾ ವಿಧದ ಮಣ್ಣಿನ ಪಾತ್ರೆಗಳು, ನೂತನ ಶಿಲಾಯುಗದ ಕಲ್ಲಿನ ಆಯುಧ ಮುಂತಾದವು ಹೇರಳವಾಗಿ ದೊರೆತವು. ಅಲ್ಲದೆ, ಕಾಲುವೆಯ ಎರಡು ಬದಿಯ ಗೋಡೆಗಳಲ್ಲಿಯ ಹಾಳುಮಣ್ಣಿನಲ್ಲಿ ಕೂಡ ಈ ವಸ್ತುಗಳು, ಮನೆಯ ಗೋಡೆ, ತಳಪಾಯಗಳು ಕಾಣಿಸುತ್ತಿದ್ದವು. ಈ ಹಾಳುಮಣ್ಣಿನ ಕೆಳಗಡೆ ಸ್ವಚ್ಛವಾದ ಕೆಂಪುಮಣ್ಣು ಇತ್ತು. ನಾಣ್ಯಗಳು ಮುಖ್ಯವಾಗಿ ಸಾತವಾಹನ ವಂಶದ ಅರಸರುಗಳದ್ದು ಮತ್ತು ಯೂರೋಪ್ ಖಂಡದ ರೋಂ ದೇಶವನ್ನು ಪ್ರ.ಶ.ಪೂ.೧-ಪ್ರ.ಶ.೧ನೇ ಶತಮಾನದ ಅವಧಿಯ ಸುಮಾರಿನಲ್ಲಿ ಆಳುತ್ತಿದ್ದ ಚಕ್ರವರ್ತಿಗಳ ಕಾಲದ್ದು. ಮತ್ತು ವಿಜಯನಗರ ರಾಜ್ಯದ ಪ್ರಸಿದ್ಧ ಅರಸು ಕೃಷ್ಣದೇವರಾಯನ ಮತ್ತು ಮೈಸೂರು ದೇಶದ ಅರಸರ ಮುಮ್ಮಡಿ ಕೃಷ್ಣರಾಜ ಒಡೆಯರ ನಾಣ್ಯಗಳೂ ದೊರೆತಿದ್ದವು.

ಈ ಶೋಧನೆಗಳಿಂದ ಮುಖ್ಯವಾಗಿ ಚಂದ್ರವಳ್ಳಿ ಪ್ರದೇಶದಲ್ಲಿಯೂ ನೂತನ ಶಿಲಾಯುಗದಿಂದ ಹಿಡಿದು ಕಬ್ಬಿಣಯುಗ ಪ್ರಾರಂಭ ಕಾಲದ ಸಾತಮಾಹನ ಅರಸರ ಕದಂಬ, ಹೊಯ್ಸಳ, ವಿಜಯನಗರದ ಅರಸರ ಕಾಲಗಳಲ್ಲಿ ಮತ್ತು ಇತ್ತೀಚಿನವರೆಗೂ ನಿರಂತರವಾಗಿ ಬೆಳೆದು ಬಂದ ಮಾನವ ಸಮಾಜದ ಸಂಸ್ಕೃತಿಯ ಸ್ಪಷ್ಟ ಗುರುತುಗಳಿದ್ದುದು ತಿಳಿಯಿತು. ಅದರಲ್ಲೂ ಪ್ರಾಗಿತಿಹಾಸ ಕಾಲದ ಕಬ್ಬಿಣಯುಗದಿಂದ ಹಿಡಿದು ಕದಂಬ ಮಯೂರ ಶ(ವ)ರ್ಮನ ಕಾಲ (ಅಂದರೆ ಸು.ಪ್ರ.ಶ. ಪೂ.೩ನೇ ಶತಮಾನ ಪ್ರ.ಶ. ೩ನೇ ಶತಮಾನ))ದ ವರೆಗೆ ಇಲ್ಲಿ ನಗರ ಸಂಸ್ಕೃತಿ ಅಭಿವೃದ್ಧಿ ಹೊಂದಿದ್ದು ವಿಶೇಷವಾಗಿ ಎದ್ದು ಕಾಣುತ್ತಿತ್ತು. ಮೊದಲೇ ಹೇಳಿದ ಹಾಗೆ ಕರ್ನಾಟಕದ ಕದಂಬ ಪೂರ್ವದ ಇತಿಹಾಸ ಕೇವಲ ಅಲ್ಲೊಂದು ಇಲ್ಲೊಂದು ದಂತಕಥೆಗಳ, ಗ್ರಂಥಗಳಲ್ಲಿಯ ಅಪರೂಪ ಉಲ್ಲೇಖಗಳ ಅಸಂಬದ್ಧಂಬವಾದ ಸಂಕಲನವಾಗಿತ್ತು. ಆದರೆ ಈ ಕೊರತೆಯನ್ನು ನೀಗಿ, ಕದಂಬಪೂರ್ವದ ಇತಿಹಾಸವನ್ನು ಪ್ರತ್ಯಕ್ಷ ಪ್ರಮಾಣಗಳಿಂದ ಸಾಕಷ್ಟು ಚೆನ್ನಾಗಿ ತಿಳಿಯುವ ಸಾಧ್ಯತೆ ಇಲ್ಲಿ ಪ್ರಥಮ ಬಾರಿಗೆ ಅರಿವಾಯಿತು. ಇಂಥ ಎಷ್ಟೋ ಪ್ರಾಚೀನ ನಗರಗಳ ನೆಲೆಗಳು ನಾಡಿನ ಬೇರೆ ಬೇರೆ ಭಾಗಗಳಲ್ಲಿಯೂ ಇದ್ದುದು ನಂತರದ ಶೋಧನೆಗಳಿಂದ ತಿಳಿಯಿತು.

ಉತ್ಖನನ

ಕೃಷ್ಣರವರು ಇಲ್ಲಿಯ ಸಂಸ್ಕೃತಿಯ ಬೆಳವಣಿಗೆ ಹಾಗೂ ಮಹತ್ವವನ್ನು ತಿಳಿಯಲು ೧೯೨೮ ಮೇ-ಜೂನ್ ಸಮಯದಲ್ಲಿ ಈ ನೆಲೆಯಲ್ಲಿ ಸುಮಾರು ೩೬ ಗುಂಡಿಗಳನ್ನು ಕ್ರಮವಾಗಿ ತೋಡಿದರು. ಉತ್ಖನನದಲ್ಲಿ ಇಟ್ಟಿಗೆ ಚೂರುಗಳು ಕಲ್ಲುಚೂರುಗಳನ್ನು ಅಥವ ಕೆಂಪು ಮರಳನ್ನು ಹಾಕಿ ಬಡಿದು ಗಟ್ಟಿ ಮಾಡಿದ ನೆಲಗಟ್ಟು. ಇಟ್ಟಿಗೆ ಕಟ್ಟಡ ಅವಶೇಷಗಳು ಸಾತವಾಹನ ಅರಸರ, ಸಾಮಂತರ ಮತ್ತು ಅದೇ ಕಾಲದ ರೋಂ ದೇಶದ ಆಗಸ್ಟಸ್ ಚ್ರಕ್ರವರ್ತಿಯ ನಾಣ್ಯಗಳು ನಾನಾ ವಿಧದ ಸರಗಳ ಮಣಿಗಳು ಮತ್ತು ಇತರ ಆಭರಣಗಳು ಬಿಳಿ ಬಣ್ಣದ ರೇಖಾಚಿತ್ರಗಳಿಂದ ಅಲಂಕೃತವಾದ ಮತ್ತು ವಿಧವಿಧವಾದ ಮಣ್ಣಿನ ಪಾತ್ರೆಗಳು ಹೇರಳವಾಗಿ ದೊರೆತವು. ೧೫ನೇ ಗುಂಡಿಯು ಸುಮಾರು ೩.೯೦ ಮೀ ಆಳವಾಗಿತ್ತು. ಇದರಲ್ಲಿಯ ಹಾಳು ಮಣ್ಣಿನಲ್ಲಿ ಮೇಲಿನಿಂದ ಕೆಳಗಿನ ತನಕ ಏಳು ಪದರುಗಳನ್ನು ಗುರುತಿಸಿ ಪ್ರತಿಯೊಂದು ಪದರಿನಲ್ಲಿ ದೊರೆತ ಅವಶೇಷಗಳನ್ನು ಇಡಲಾಯಿತು. ಇದರಲ್ಲಿ ಗಮನಾರ್ಹವಾದ ಅಂಶವೆಂದರೆ ಸುಮಾರು ೧.೫೦ಮೀ ಆಳದಲ್ಲಿ ಒಂದು ಮನೆಯ ನೆಗಟ್ಟಿನ ಮೇಲೆ ಬಹಶಃ ಸಾತವಾಹನ ಅರಸರಲ್ಲಿ ಒಬ್ಬನಾದ ಯಜ್ಞಶ್ರೀ ಸಾತಕರ್ಣಿ(ಪ್ರ.ಶ. ೧೭೪-೨೦೩) ಹೆಸರುಳ್ಳ ನಾಣ್ಯ.ಸಿಕ್ಕಿತು. ನೆಲಗಟ್ಟಿನ ಕೆಳಗೆ ಈ ಅರಸನಿಗಿಂತಲೂ ಹಿಂದಿನ ‘ಮುದನಂದ’ ಎಂಬುವನ ನಾಣ್ಯವು ಇತ್ತು. ಈ ಹಂತದಿಂದ ೧,೧೩ಮೀ ಆಳದ ತನಕ ಅಲ್ಲಲ್ಲಿ ಕ್ರಮವಾಗಿ ಗೌತಮಿಪುತ್ರ ವಿಳವಾಯಕುರ, ಮಹಾರಥಿ ಸದಕಣ ಕಳಲಾಯ ಇವರ ಮತ್ತು ರೋಂ ದೇಶದ ಚಕ್ರವರ್ತಿ ಆಗಸ್ಟಸ್ (ಪ್ರ.ಶ.ಪೂ. ೨೭ ಪ್ರ.ಶ.೧೪)ನ ನಾಣ್ಯಗಳು ದೊರೆತವು. ಅಂದರೆ ದೊರೆತ ನಾಣ್ಯಗಳಲ್ಲಿ ತುಂಬ ಹಳೆಯ ಕಾಲದ್ದು ಕೆಳಗಿದ್ದವು. ಇವುಗಳ ಮೇಲಿನ ಹಾಳುಮಣ್ಣಿನಲ್ಲಿ ಅಲ್ಲಲ್ಲಿ ನಂತರದ ಕಾಲದ ನಾಣ್ಯಗಳು ಅನುಕ್ರಮವಾಗಿ ಇದ್ದವು. ಜನ ವಸತಿಯಿಂದ ಕಾಲಾನುಕ್ರಮದಲ್ಲಿ ಸಂಗ್ರವಾದ ಅವಶೇಷಗಳುಳ್ಳ ಹಾಳು ಮಣ್ಣನ್ನು ಕ್ರಮಬದ್ಧವಾಗಿ ಅಗೆದು, ಅದರಲ್ಲಿ ಕಾಲಾನುಕ್ರಮವಾಗಿ ಪದರುಗಳನ್ನು ಗುರುತಿಸಿ ಅವುಗಳಲ್ಲಿಯ ಅವಶೇಷಗಳ ಕಾಲಮಾನ ಮತ್ತು ಸಂಸ್ಕೃತಿಯ ಬೆಳವಣಿಗೆಯ ಹಂತಗಳನ್ನು ಕಂಡು ಹಿಡಿಯುವ ಪ್ರಯತ್ನ ಮಾಡಿದವರಲ್ಲಿ ಕೃಷ್ಣರವರು ಮೊದಲಿಗರು, ಅವರ ಈ ಶೋಧನೆ ಅಪೂರ್ವ ಹಾಗೂ ಪ್ರಶಂಸನೀಯ.

ಇವರ ಶೋಧನೆಯಲ್ಲಿ ಮತ್ತೆ ಗಮನಾರ್ಹವಾದ ಕೆಲವು ಸಂಗತಿಗಳಿವೆ. ಆಂಜನೇಯನ ಗುಡಿಯ ಹತ್ತಿರ ಅಗೆದ ೭ ಗುಂಡಿಗಳಲ್ಲಿಯೂ, ಇದರ ನೈರುತ್ಯಕ್ಕೆ ಇರುವ ಸಣ್ಣ ಗುಡ್ಡದ ಪಕ್ಕದಲ್ಲಿರುವ ೧೬ನೇಯ ಗುಂಡಿಯಲ್ಲಿಯೂ ಕಾಣಿಸಿದ ಪೆಟ್ಟಿಗೆಯಂತಹ ಸಣ್ಣ ಸಣ್ಣ ಕಲ್ಲಿನ ಕೋಣೆ ಗೋರಿಗಳು ಹುಲೆಗೊಂಡಿ ಕೊಳ್ಳದಲ್ಲಿ ಮಯೂರ ಶರ್ಮನ ಶಾಸನದ ಹತ್ತಿರ ಸುಮಾರು ೧.೮೦ ಮೀ ಅಗಲದ ೧೨ ಮೀ ಉದ್ದದ ಇಟ್ಟಿಗೆಯ ಕೆರೆಯ ಒಡ್ಡು ಮತ್ತು ಬರಲಗೊಂದಿಯ ಹತ್ತಿರ ಇರುವ ಒಂದು ಗವಿಯಲ್ಲಿ ಕಬ್ಬಿಣದ ಕಿಟ್ಟ. ಈ ಬರಲಗೊಂದಿ ಭಾಗದ ಗುಂಡಿಗಳಲ್ಲಿ ನೂತನ ಶಿಲಾಯುಗದ ಕಲ್ಲಿನ ಕೊಡಲಿಗಳು, ಅರೆಯುವ ಕಲ್ಲು ಮತ್ತು ಈ ಸ್ಥಳದಲ್ಲಿ ಕಲ್ಲಿನ ಆಯುಧಗಳನ್ನು ನಯಮಾಡುವುದಕ್ಕೊಸ್ಕರ ಅಲ್ಲಿನ ಬಂಡೆಗಲ್ಲಿನ ಮೇಲೆ ಉಜ್ಜಿದ್ದರಿಂದ ಉಂಟಾದ ಉದ್ದನೆಯ ಗುಂಡಿಗಳು ತೋರಿದವು. ಒಟ್ಟಿನಲ್ಲಿ ಈ ಸಂಶೋಧನೆಯಿಂದ ಚಂದ್ರವಳ್ಳಿಯಲ್ಲಿಯೂ ನೂತನಶಿಲಾಯುಗದಿಂದ ಹಿಡಿದು ಕದಂಬ ಸಾಮ್ರಾಜ್ಯ ಸ್ಥಾಪಕನಾದ ಮಯುರವ(ಶ)ರ್ಮ ಅರೆಸನ ಅಂದರೆ ೪ನೇ ಶತಮಾನದ ಆದಿ ಭಾಗದವರೆಗೆ ಇಲ್ಲಿಯ ಮಾನವನ ಜೀವನ ಮತ್ತು ಸಂಸ್ಕೃತಿ ಹೇಗೆ ಪ್ರಗತಿ ಹೊಂದುತ್ತಾ ಬಂತೆಂದು ಸ್ಥಳವಾಗಿ ತಿಳಿಯಲು ಸಾಧ್ಯವಾಯಿತು. ಅದರಲ್ಲೂ ವಿಶೇಷವಾಗಿ ಸಾತವಾಹನ ಅರಸರ ಕಾಲದಲ್ಲಿಯ ಇಲ್ಲಿಯ ನಗರ ಸಂಸ್ಕೃತಿ ವಿಷಯವಾಗಿ ಅಂದರೆ ಇಟ್ಟಿಗೆ ಕಟ್ಟಡಗಳ ಮಾದರಿ, ವ್ಯಾಪಾರ-ವ್ಯವಹಾರಗಳಲ್ಲಿ ನಾಣ್ಯ ಚಲಾವಣೆ ಮುಂತಾದವುಗಳು ಪ್ರಥಮಬಾರಿಗೆ ತಿಳಿಯಲು ಸಾಧ್ಯವಾಯಿತು.ಬ್ರಹ್ಮಗಿರಿಯಲ್ಲಿ ಹೆಚ್ಚಾಗಿ ನೂತನ ಶಿಲಾಯುಗದ ಮತ್ತು ಕಬ್ಬಿಣಯುಗದ ಸಂಸ್ಕೃತಿಗಳ ಕೆಲವೊಂದು ಮಹತ್ವದ ವಿಷಯಗಳು ತಿಳಿದರೆ, ಚಂದ್ರವಳ್ಳಿಯಲ್ಲಿ ಇತಿಹಾಸ ಆರಂಭ ಕಾಲದ ಕೆಲವು ಮಹತ್ವ ಸಂಗತಿಗಳು ಗೊತ್ತಾಯಿತು. ಆದುದರಿಂದ ಈ ಎರಡು ಸ್ಥಳಗಳಲ್ಲಿಯ ಉತ್ಖನನಗಳು ಕರ್ನಾಟಕದಲ್ಲಿ ಕದಂಬ ಸಾಮ್ರಾಜ್ಯ ನಿರ್ಮಾಣದ ಪೂರ್ವದಲ್ಲಿಯ ಐತಿಹಾಸಿಕ ಕಾಲದ ಜನರ ಸಂಸ್ಕೃತಿ ಮತ್ತು ಜೀವನದ ಕೆಲವು ಮುಖ್ಯ ವಿಷಯಗಳು ತಿಲಿದುದಲ್ಲದೆ, ಈ ಇತಿಹಾಸ ಕಾಲದ ಹಿಂದಿನ ಪ್ರಾಗಿತಿಹಾಸ ಕಾಲದ ಜನಜೀವನದ ಎರಡು ಮುಖ್ಯ ಹಂತಗಳು ಮತ್ತು ಅವುಗಳ ಸ್ಥೂಲ ಸ್ವರೂಪಗಳು ಮೊಟ್ಟ ಮೊದಲನೇ ಸಲಕ್ಕೆ ಪ್ರಕಾಶವಾದವು. ಆದುದರಿಂದ ಕರ್ನಾಟಕದ ಪುರಾತತ್ವ ಶೋಧನೆಯಲ್ಲಿ ಈ ಎರಡು ಸ್ಥಳಗಳು ಅತ್ಯಂತ ಮಹತ್ವದವು.

ಶೋಧನೆಯ ನ್ಯೂನ್ಯತೆಗಳು

ಕೃಷ್ಣರವರ ಶೋಧನೆಗಳು ಆಗಿ ಕೆಲವು ವರ್ಷಗಳ ನಂತರ ಆ ಶೋಧನೆಗಳಲ್ಲಿ ದೊರೆತ ವಸ್ತುಗಳ ಯಥಾಸ್ಥಿಯ ಮಹತ್ವವನ್ನು ಗೊತ್ತುಮಾಡಲು ಕೆಲವೊಂದು ತೊಂದರೆಗಳು ತೋರಿದವು. ಒಂದನೆಯದಾಗಿ ಈ ಸ್ಥಳಗಳಲ್ಲಿಯ ಪ್ರಾಗೈತಿಹಾಸಿಕ ಸಂಸ್ಕೃತಿಗಳನ್ನು ಯೂರೋಪಿನಲ್ಲಿಯ ಸ್ವಲ್ಪ ಹೆಚ್ಚು ಕಡಿಮೆ ಕಾಲಮಾನಗಳು ಸರಿಯಾಗಿ ನಿರ್ಧರಿಸಲ್ಪಟ್ಟ ಅದೇ ತರಹದ ಸಂಸ್ಕೃತಿಗಳಿಗೆ ಹೋಲಿಸಿ, ಇವುಗಳ ಕಾಲಮಾನಗಳನ್ನು ಸ್ಥೂಲವಾಗಿ ಸೂಚಿಸಿದ್ದರು. ಆದರೆ, ಕ್ರಮೇಣ ಇವರು ಈ ವಿಷಯದಲ್ಲಿ ಅನುಸರಿಸಿದ ತುಲನಾತ್ಮಕ ಕ್ರಮ ಸರಿ ತೋರಲಿಲ್ಲ.

ಇವರು ಶೋಧಿಸಿ ವಿಂಗಡಿಸಿದ ಸಂಸ್ಕೃತಿಗಳ ಒಂದೊಂದರ ವಿವರಗಳನ್ನು ಸ್ಪಷ್ಟವಾಗಿ ಗೊತ್ತು ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಉತ್ಖನನಗಳಲ್ಲಿ ದೊರೆತ ವಸ್ತುಗಳ ಪರಸ್ಪರ ಸಂಬಂಧ, ಸಂದರ್ಭ ಮುಂತಾದವುಗಳನ್ನು ತಿಳಿಸುವ ಅವಶ್ಯವಾದ ಟಿಪ್ಪಣಿ, ರೇಖಾಚಿತ್ರ ಮತ್ತು ಛಾಯಾಚಿತ್ರಗಳೊಡನೆ ಉತ್ಖನನಗಳ ವರದಿಯು ಪ್ರಕಟವಾಗಲಿಲ್ಲ.

ಆದುದರಿಂದ ಈ ನ್ಯೂನ್ಯತೆಗಳನ್ನು ಹೋಗಲಾಡಿಸಿ ಇಲ್ಲಿಯ ಜನಜೀವನ ನತ್ತು ಸಂಸ್ಕೃತಿಗಳ ಬೆಳವಣಿಗೆಗಳನ್ನು ತಿಳಿಯಲು ಮತ್ತೆ ಕ್ರಮಬದ್ಧವಾದ ಉತ್ಖನನ ಮಾಡುವ ಅವಶ್ಯವಿತ್ತು. ಮುಖ್ಯವಾಗಿ ದಕ್ಷಿಣ ಭಾರತದ ಪ್ರಮುಖ ಆದಿ ಕಬ್ಬಿಣಯುಗದ ಬೃಹತ್ ಶಿಲಾಸಂಸ್ಕೃತಿಯ ವಿಶಿಷ್ಟ ಲಕ್ಷಣಗಳನ್ನು ಮತ್ತು ಕಾಲಮಾನವನ್ನು ನಿಗದಿಪಡಿಸಬೇಕಾಗಿತ್ತು. ಈ ದಿಶೆಯಲ್ಲಿ ಕೃಷ್ಣರವರ ಉತ್ಖನನಗಳಿಂದ ಕಂಡುಬಂದ ಸೂಚನೆಗಳು ಆಶಾದಾಯಕವಾಗಿದ್ದವು. ಈ ಎಲ್ಲ ಅವಶ್ಯಕತೆಗಳನ್ನು ಸರಿಯಾಗಿ ಗ್ರಹಿಸಿ ಅಂದಿನ ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಮಾರ‍್ಟಿಮರ್ ವ್ಹೀಲರ್ ೧೯೪೭ ರಲ್ಲಿ ಈ ಎರಡು ನೆಲೆಗಳಲ್ಲಿ ಮತ್ತೆ ಉತ್ಖನನಗಳನ್ನು ನಡೆಸಿದರು.

ವ್ಹೀಲರವರ ಯೋಜನೆ

೧೯೪೪-೪೭ರ ಸಮಯದಲ್ಲಿ ಭಾರತದಲ್ಲಿಯ ಆಗಿನ ಕೇಂದ್ರ ಸರ್ಕಾರದ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ಇವರು ಮಹಾ ನಿರ್ದೇಶಕರಾಗಿದ್ದರು. ಭಾರತಕ್ಕೆ ಬರುವ ಮುಂಚೆ, ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗಳ ಕೆಲವು ನೆಲೆಗಳನ್ನು ಆಧುನಿಕ ವೈಜ್ಞಾನಿಕ ವಿಧಾನಗಳಿಂದ ಉತ್ಖನನಗಳನ್ನು ಮಾಡಿ ತುಂಬಾ ಅನುಭವ ಪಡೆದವರಾಗಿದ್ದರು. ಇವರು ಇಡೀ ಭಾರತಕ್ಕೆ ಅನ್ವಯಿಸುವ ಹಾಗೆ ಒಂದು ಸಮಗ್ರವಾದ ಪುರಾತತ್ವ ಶೋಧನೆಯ ಯೋಜನೆಯನ್ನು ರೂಪಿಸಿದರು.

ಈ ಬೃಹತ್ ಯೋಜನೆಯ ಮೊದಲ ಹಂತದ ಅಂಗವಾಗಿ, ವ್ಹೀಲರವರು ದಕ್ಷಿಣ ಭಾರತದಲ್ಲಿ ಅದುವರೆಗೂ ಪ್ರಕಾಶವಾದ ಪ್ರಾಚೀನ ನೆಲೆಗಳ ಮಹತ್ವವನ್ನು ಮತ್ತು ಉತ್ಖನನದ ದೃಷ್ಟಿಯಿಂದ ಎಷ್ಟರ ಮಟ್ಟಿಗೆ ಫಲದಾಯಕ ಆಗಬುದೆಂಬುದನ್ನು ಪರಿಶೀಲಿಸಿದರು. ಮೊದಲು ಪಾಂಡಿಚೇರಿ ಬಳಿಯಿರುವ ಅರಿಕಮೆಡು ಎಂಬಲ್ಲಿ ಉತ್ಖನನ ಮಾಡಿದರು. ಇದರ ಫಲಿತಾಂಶವಾಗಿ, ಈ ನೆಲೆಯು ಪ್ರ.ಶ. ೧-೨ನೇ ಶತಮಾನಗಳಲ್ಲಿ. ರೋಂ ದೇಶದ ವರ್ತಕರ ಒಂದು ವ್ಯಾಪಾರ ಕೋಠಿಯೇ ಆಗಿತ್ತೆಂದು ತಿಳಿಯಿತು. ಆ ದೇಶದಿಂದ ವಿಶಿಷ್ಟವಾದ ‘ಅರೆಟೈನ್’ ಮಣ್ಣಿನ ಪಾತ್ರೆಗಳು ಇಲ್ಲಿ ಉಪಯೋಗದಲ್ಲಿದ್ದುದನ್ನು ಗುರುತಿಸಲಾಯಿತು. ಮತ್ತು ಆ ದೇಶದ ಒಂದು ವಿಧವಾದ ಮಣ್ಣಿನ ಪಾತ್ರೆಯ ಮೇಲೆ ‘ರೌಲೆಟ್’ ತಂತ್ರದಿಂದ ಚಿತ್ರ ತೆಗೆಯುವ ವಿಧಾನ ದಕ್ಷಿಣ ಭಾರತದಲ್ಲಿಯ ಅದೇ ಆಕಾರದ ಮಣ್ಣಿನ ಪಾತ್ರೆಗಳಲ್ಲಿ ಉಪಯೋಗಿಸಿದ್ದುದು ಕಂಡುಬಂತು.

ಈ ವರ್ತಕರು ರೋಂ ದೇಶದಿಂದ ವಿಶಿಷ್ಟವಾದ ಮಣ್ಣಿನ ಪಾತ್ರಗಳೂ ಇಲ್ಲಿ ದೊರೆತ ಮಣ್ಣಿನ ಪಾತ್ರಗಳ ಜೊತೆಗೆ ಇದ್ದವು. ಈ ಪಾತ್ರಗಳನ್ನು ಈಗ ಇಟಲಿ ದೇಶದಲ್ಲಿರುವ ಟಸ್ಕನಿ ಪ್ರಾಂತದಲ್ಲಿಯ ‘ಅರತಿ’ ಎಂಬ ಊರಿನಲ್ಲಿ ಪ್ರ.ಶ.ಪೂ. ೧ನೇ ಶತಮಾನದಿಂದ ಪ್ರ.ಶ. ೧ನೇ ಶತಮಾನ ಈ ಸಮಯದಲ್ಲಿ ಮಾಡಲಾಗಿದ್ದವು. ಇವು ರೋಂ ನಗರದ ಸಂತೆಗಳಲ್ಲಿ ಮಾರಾಟವಾಗುತ್ತಿದ್ದವು. ಇವು ದ್ರಾಕ್ಷಾರಸವನ್ನು ತುಂಬಲು ಮಾಡಿದ ಉದ್ದನೆಯ ಕೊಳವೆಯಾಕಾರದ ಬಾಯಿ ಉಳ್ಳ ಉಬ್ಬು ಚಿತ್ರಗಳುಳ್ಳ ಲೋಹದ ಪಾತ್ರಗಳನ್ನು ಅನಕರಿಸಿ ಮಾಡಿದಂಥವು. ಅತ್ಯುತ್ತಮ ಜೇಡಿಮಣ್ಣಿನಿಂದ ಭಟ್ಟಿಯಲ್ಲಿ ಸರಿಯಾಗಿ ಸುಟ್ಟು ಮಾಡಿದ ಸುಂದರ ಪಾತ್ರಗಳು. ಇವುಗಳಿಗೆ ‘ಅರೆತೈನ್’ ಪಾತ್ರಗಳೆಂದು ಪ್ರಾಕ್ಷನ ಶಾಸ್ತ್ರಜ್ಞರು ಕರೆಯುತ್ತಾರೆ.

ವ್ಹೀಲರವರಗೆ ಪ್ರಾಚೀನ ಗ್ರೀಕ್ ಮತ್ತು ರೋಂ ಸಂಸ್ಕೃತಿಗಳ ನೆಲೆಗಳನ್ನು ಉತ್ಖನನ ಮಾಡಿ ಅವುಗಳಲ್ಲಿ ದೊರೆತ ವಸ್ತುಗಳ ಅಭ್ಯಾಸ ಆಗಲೇ ಚೆನ್ನಾಗಿ ಇದ್ದುದರಿಂದ, ಅರಿಕಮೆಡು ಉತ್ಖನನದಲ್ಲಿಯ ಕೆಲವು ಪಾತ್ರಗಳಲ್ಲಿ ಕಂಡುಬಂದ ಆ ದೇಶದ ಪ್ರಭಾವವನ್ನು ಗುರುತಿಸಲು ಸಾಧ್ಯವಾಯಿತು. ಅಷ್ಟೇ ಅಲ್ಲ, ಈ ನಿರ್ದಿಷ್ಟ ಕಾಲದ ಇಂಥ ಮಣ್ಣಿನ ಪಾತ್ರಗಳು ಆ ನೆಲೆಯಲ್ಲಿಯ ಕಾಲಮಾನ ತಿಳಿಯದಿದ್ದ ಪ್ರಾಚೀನ ಜನವಸತಿಯ ಅವಶೇಷಗಳೊಡನೆ ಸುಸಂಬದ್ಧವಾಗಿ ದೊರೆತಿದ್ದರಿಂದ ಆ ಪ್ರಾಚೀನ ಸಂಸ್ಕೃತಿಯ ಕಾಲಮಾನವನ್ನು ಆದಷ್ಟು ಸರಿಯಾಗಿ ನಿರ್ಣಯಿಸಲು ಸಾಧ್ಯವಾಯಿತು.

ವ್ಹೀಲರವರು ತಮ್ಮ ಯೋಜನೆಗೆ ಅನುಗುಣವಾಗಿ ದಕ್ಷಿಣ ಭಾರತದಲ್ಲಿಯ ನೆಲೆಗಳನ್ನು ವಿಮರ್ಶಿಸುವಾಗ, ಬ್ರಹ್ಮಗಿರಿ ಮತ್ತು ಚಂದ್ರವಳ್ಳಿ ನೆಲೆಗಳ ಮಹತ್ವ ಸರಿಯಾಗಿ ಅರಿತುಕೊಂಡರು.

ಕೃಷ್ಣರವರ ಉತ್ಖನನಗಳಲ್ಲಿ ದೊರೆತಿರುವುದರಲ್ಲಿ ಆರಿಸಿದ ಅವಶೇಷಗಳು ಮೈಸೂರಿನಲ್ಲಿರುವ ಪುರಾತತ್ವ ಸರ್ವೇಕ್ಷಣಾ ಶಾಖೆಯ ಕಛೇರಿಯಲ್ಲಿದ್ದವು. ವ್ಹೀಲರವರು ಅವುಗಳನ್ನು ಪರೀಕ್ಷಿಸಿದರು. ಚಂದ್ರವಳ್ಳಿಯ ನೆಲೆಯ ಅವಶೇಷಗಳಲ್ಲಿ ರೌಲೆಟ್ ವಿಧಾನದಿಂದ ತೆಗೆದ ಚಿತ್ರಗಳುಳ್ಳ ಮಣ್ಣಿನ ತಟ್ಟೆಗಳಿದ್ದುದು ಗುರುತಿಸಿದರು. ಇದರಿಂದ ಚಂದ್ರವಳ್ಳಿ ನಾಗರೀಕತೆಯ ಕಾಲಮಾನವನ್ನು ನಾಣ್ಯಗಳ ಸಹಾಯದ ಜೊತೆಗೆ ನಿರ್ದಿಷ್ಟಕಾಲದ ಈ ಮಣ್ಣಿನ ಪಾತ್ರಗಳಿಂದಲೂ ಪುಷ್ಟೀಕರಿಸುವ ಸಾಧ್ಯತೆ ತೋರಿತು. ಕೃಷ್ಣ ಅವರ ಜೊತೆಗೆ ಬ್ರಹ್ಮಗಿರಿಯ ನೆಲೆಯನ್ನು ಪರಿಶೀಲಿಸಿದರು. ಆದುದರಿಂದ ಈ ಎರಡು ನೆಲೆಗಳಲ್ಲಿ ಮತ್ತೆ ಉತ್ಖನನ ಮಾಡಲು ವ್ಹೀಲರವರು ನಿಶ್ಚಯಿಸಿದರು.