ಇತರ ಸಂಸ್ಕೃತಿಗಳೊಡನೆ ಇದ್ದ ಸಂಪರ್ಕ

ಇಲ್ಲಿಯ ಮತ್ತು ಉತ್ತರ ಭಾರತದಲ್ಲಿಯ ಚುಕ್ಕೆ ಕಲ್ಲಿನ ಆಯುಧಗಳಲ್ಲಿ ಮತ್ತು ಪಾತ್ರೆಗಳ ಮೇಲಿನ ವರ್ಣಚಿತ್ರಗಳಲ್ಲಿ ಹೋಲಿಕೆಯಿರುವುದರಿಂದ ಈ ಎರಡು ಪ್ರದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧವಿತ್ತೆಂದು ಹೇಳಬಹುದು. ಈ ಸಂಸ್ಕೃತಿಯ ಕೊನೆಯ ಹಂತದಲ್ಲಿ ಗೋದಾವರಿ ನದಿ ಬಯಲಿನಲ್ಲಿ ಶಿಲಾ-ತಾಮ್ರಯುಗದ ವಿಶಿಷ್ಟವಾದ ವರ್ಣಚಿತ್ರವುಳ್ಳ ಮಣ್ಣಿನ ಪಾತ್ರೆಗಳು ಕಂಡುಬರುತ್ತವೆ. ಈ ಹಂತದಲ್ಲಿ ಈ ಎರಡು ಪ್ರದೇಶಗಳ ನಡುವೆ ಹೆಚ್ಚು ನಿಕಟ ಸಂಬಂಧವಿತ್ತೆಂದು ಕಾಣುವುದು.

ಪಿಕ್ಲಿಹಾಳ, ಟಿ.ನರಸೀಪುರ, ಸಂಗನಕಲ್ಲು, ಹಳ್ಳೂರು, ತೇರದಾಳ ಮುಂತಾದ ಕಡೆಗಳಲ್ಲಿಯ ಆನಂತರ ನಡೆಸಿದ ಸಣ್ಣ ಪ್ರಮಾಣದ ಉತ್ಖನನಗಳಿಂದ ಇವರ ಜೀವನ ಕ್ರಮದ ಕೆಲವೊಂದು ಹೆಚ್ಚಿನ ವಿಷಯಗಳು ತಿಳಿದಿವೆ. ಹೆಚ್ಚಾಗಿ ದುಂಡಾದ ಗುಡಿಸಲುಗಳನ್ನು ಕಟ್ಟುತ್ತಿದ್ದರು. ನೆಲಕ್ಕೆ ಕಲ್ಲಿನ ಚುಕ್ಕೆಗಳನ್ನು ಮಣ್ಣನ್ನು ಹಾಕಿ ಗಟ್ಟಿ ಮಾಡುತ್ತಿದ್ದರು. ಹುರುಳಿ, ರಾಗಿಯನ್ನು ಆಹಾರದಲ್ಲಿ ಉಪಯೋಗಿಸುತ್ತಿದ್ದರು. ಮೀನು ಹಿಡಿಯುತ್ತಿದ್ದರು. ಕುರಿ, ಎಮ್ಮೆಗಳನ್ನು ಸಾಕುತ್ತಿದ್ದರು. ಚಿನ್ನದ ಆಭರಣಗಳನ್ನು ಉಪಯೋಗಿಸುತ್ತಿದ್ದರು. ಚಾಪೆ ಹೆಣೆಯುವುದು, ತಕ್ಕಲಿಯಿಂದ ದಾರ ತೆಗೆಯುವುದು, ಮುಂತಾದ ಕೈ ಕೆಲಸಗಳನ್ನು ಮಾಡುತ್ತಿದ್ದರು. ಮನರಂಜನೆಗೂ, ಕಟ್ಟಳೆಗೋಸ್ಕರವೋ, ದನ, ಎತ್ತು, ಪಕ್ಷಿ, ಮುನುಷ್ಯರ, ಸುಟ್ಟ ಮಣ್ಣಿನ ಗೊಂಬೆಗಳನ್ನು ಮಾಡುತ್ತಿದ್ದರು. ಶವ ಸಂಸ್ಕಾರದಲ್ಲಿ ಒಂದೆರಡು ಭಿನ್ನ ಪದ್ಧತಿಗಳಿದ್ದವು. ಈ ವಿಷಯದಲ್ಲಿ ತೇರದಾಳ್‌ದಲ್ಲಿ ಶಿಲಾ-ತಾಮ್ರಯುಗದ ಒಂದು ಶವ-ಕುಣಿ ವಿಶಿಷ್ಟವಾಗಿದೆ. ಅದು ಶವ-ಕುಣಿಯ ಮೇಲೆ ದುಂಡಾಗಿ ಕಲ್ಲು ರಾಶಿಯನ್ನು ಏರಿಸುವ ಪದ್ದತಿ ಈ ಜನರಲ್ಲಿ ಅಸ್ಟ್ರಾಲಾಯಿಡ್ ಜನಾಂಗದವರಲ್ಲದೆ ಮತ್ತೊಂದು ಬುಡಕಟ್ಟಿನ ಜನರು ಇದ್ದರೆಂದು ಕಂಡುಬಂದಿದೆ. ಇವರು ‘ಡ್ರವಿಡಾಯಿಡ್’ ಎಂದು ತಜ್ಞರು ಕರೆಯುವುದುಂಟು. ಈ ಜನಾಂಗದವರು ಈಗಲೂ ಹೆಚ್ಚಾಗಿ ದಕ್ಷಿಣ ಭಾರತದಲ್ಲಿದ್ದಾರೆ. ತೆಕ್ಕಲಕೋಟೆಯಲ್ಲಿ ದೊರೆತ ಅಸ್ಥಿಪಂಜರ ಅವಶೇಷಗಳಲ್ಲಿ ಈ ಜನಾಂಗದವರದ್ದೆ ಹೆಚ್ಚಾಗಿವೆ. ಟಿ. ನರಸೀಪುರದಲ್ಲಿ ದೊರೆತ ಒಂದೇ ಒಂದು ಅಸ್ಥಿಪಂಜರ ಈ ಬುಡಕಟ್ಟಿಗೆ ಸೇರಿದ್ದು ಇದರಲ್ಲಿ ವರ್ಣಸಂಕರದ ಪರಿಣಾಮಗಳು ಅಷ್ಟಾಗಿ ಇಲ್ಲ. ಪ್ರಾಯಶಃ ಕಾಲಾನುಕ್ರಮದಲ್ಲಿ ಇತರ ಜನವರ್ಗದವರೊಡನೆ ಬೆರೆಯುವ ಮುಂಚೆ ಈ ಭಾಗದಲ್ಲಿದ್ದ ಜನವರ್ಗದವನಾಗಿದ್ದಿರಬೇಕು.

ಕಬ್ಬಿಣಯುಗದ ಬೃಹತ್ ಶಿಲಾಸಂಸ್ಕೃತಿ

ಬ್ರಹ್ಮಗಿರಿಯಲ್ಲಿ ನೂತನ ಶಿಲಾಯುಗದ ಜನರಿರುವಾಗಲೇ, ಭಿನ್ನವಾದ ಜೀವನ ಪದ್ಧತಿಯುಳ್ಳ ಬೇರೆ ಜನವರ್ಗದವರು ಅವರೊಡನೆ ಸೇರಿಕೊಂಡು ವಾಸಿಸಲು ಪ್ರಾರಂಭಿಸಿದರೆಂದು ಕಾಣುವುದು. ಏಕೆಂದರೆ, ಈ ಹಂತದಲ್ಲಿ ನೂತನ ಶಿಲಾಯುಗದ ಜೀವನ ಕ್ರಮದಿಂದ ಭಿನ್ನವಾದ ಕೆಲವೊಂದು ಸ್ಪಷ್ಟವಾದ ಹೊಸ ಪದ್ಧತಿಗಳು ತೋರುತ್ತವೆ. ಕಬ್ಬಿಣ ಮತ್ತು ಹೊಳಪಾದ ಕಪ್ಪು-ಕೆಂಪು ದ್ವಿವರ್ಣದ ಮಣ್ಣಿನ ಪಾತ್ರೆಗಳ ಉಪಯೋಗ; ವಾಸ ಮಾಡುತ್ತಿದ್ದ ನೆಲೆಯನ್ನು ಬಿಟ್ಟು ಪ್ರತ್ಯೇಕ ಸ್ಥಳದಲ್ಲಿ ಶವಸಂಸ್ಕಾರ ಮಾಡುವುದು ಮತ್ತು ಶವಸಂಸ್ಕಾರಕ್ಕೋಸ್ಕರ, ಉಳಿಯಿಂದಾಗಲಿ, ಕೊರಡನಿಂದಾಗಲಿ, ಕೆತ್ತಿ ಸರಿಮಾಡದ ಒರಟಾದ ದೊಡ್ಡ ಕಲ್ಲು ಹಲಗೆಗಳಿಂದ, ಗುಂಡು ಕಲ್ಲುಗಳಿಂದ ಕೋಣೆಗಳನ್ನು, ದುಂಡುಕಟ್ಟೆಗಳನ್ನು ನಿರ್ಮಿಸುವುದು ಇವೇ ಆ ಹೊಸ ಪದ್ಧತಿಗಳು.

ಇವುಗಳಲ್ಲಿ ಕಬ್ಬಿಣದ ಉಪಯೋಗ ಮತ್ತು ಶವ ಸಂಸ್ಕಾರಕೋಸ್ಕರ ಕಲ್ಲು ಮನೆಗಳನ್ನು ನಿರ್ಮಿಸುವ ಪದ್ಧತಿ ಈ ಹಂತದಲ್ಲಿಯ ಜನರ ಆರ್ಥಿಕ ಮತ್ತು ಸಮಾಜದ ವೈಶಿಷ್ಯ ಕಬ್ಬಿಣದ ಉಪಯೋಗದಿಂದ, ನಿತ್ಯಜೀವನದ ಕೆಲಸಗಳಿಗೆ ಬೇಕಾದ ಸಲಕರಣೆಗಳನ್ನು ಮಾಡಿಕೊಳ್ಳಲು ಕಲ್ಲು ಬೇಡವಾಯಿತು. ಆದುದರಿಂದ ಕಲ್ಲಿನ ಆಯುಧಗಳ ಉಪಯೋಗ ಬಹು ಬೇಗ ಮರೆಯಾಗುತ್ತ ಬಂತು. ಮತ್ತು ಪರಿಣಾಮಕಾರಿ ಕಬ್ಬಿಣದ ವಸ್ತುಗಳನ್ನು ಸಿದ್ಧ ಮಾಡುವುದು ಒಂದು ದೊಡ್ಡ ಉದ್ಯಮವಾಯಿತು. ಕಬ್ಬಿಣದ ಅದುರಿನ ನಿಕ್ಷೇಪ ಗುರುತಿಸುವುದು, ಅದಿರುನ್ನು ಲೋಹವನ್ನಾಗಿ ಪರಿವರ್ತಿಸುವುದು ಕೆಲವರಿಗೆ ದಿನವಿಡಿಯ ಉದ್ಯೋಗವಾಯಿತು. ಅವರಿಗೆ ಬೇಕಾದ ಆಹಾರವನ್ನು ಬೇಸಾಯಗಾರನು ಒದಗಿಸಬೇಕಾಯಿತು ಅಂದರೆ ಅವನು ತನಗಷ್ಟೆ ಅಲ್ಲದೆ ತನ್ನ ಉಪಯೋಗಕ್ಕೆ ಬರುವ ಇತರ ಉದ್ಯೋಗಸ್ಥರಿಗೂ ಆಹಾರ ಬೆಳೆಯಬೇಕಾಯಿತು. ಈ ರೀತಿಯಲ್ಲಿ ಆಗಿನ ಸಮಾಜದ ಜೀವನೋಪಾಯದಲ್ಲಿ ಕೆಲವೊಂದು ಅತ್ಯಂತ ಪರಿಣಾಮಕಾರಿಯಾದ ಸುಧಾರಣೆ ಉಂಟಾಯಿತು. ಕಲ್ಲಿನ ಉಪಯೋಗವು ನಿಂತು ಗಟ್ಟಿಮುಟ್ಟಾದ ದೊಡ್ಡ ಪ್ರಮಾಣದಲ್ಲಿ ಕಬ್ಬಿಣದ ಉಪಯೋಗ ಬಂದದ್ದರಿಂದ ಈ ಹಂತವನ್ನು ’ಕಬ್ಬಿಣಯುಗ’ವೆಂದು ಪ್ರಾಕ್ತನಶಾಸ್ತ್ರಜ್ಞರು ಕರೆಯುತ್ತಾರೆ.

ಇಷ್ಟೆ ಅಲ್ಲ, ಮೇಲೆ ಹೇಳಿದ ಹಾಗೆ ಈ ಹಂತದ ಮತ್ತೊಂದು ವೈಶಿಷ್ಟ್ಯವೆಂದರೆ ಶವಸಂಸ್ಕಾರಕ್ಕೋಸ್ಕರ ಒರಟಾದ ದೊಡ್ಡ ಕಲ್ಲುಗಳ ಕೋಣೆಗಳನ್ನು, ಕಟ್ಟೆಗಳನ್ನು ನಿರ್ಮಿಸುವುದು. ಸಂಸ್ಕೃತದಲ್ಲಿ ದೊಡ್ಡ ದೊಡ್ಡ ಕಲ್ಲುಗಳಿಗೆ ಬೃಹತ್‌ಶಿಲಾ ಎನ್ನಲಾಗಿದೆ. ಆದುದರಿಂದ ಈ ವೈಶಿಷ್ಟ್ಯವನ್ನು ಸೂಚಿಸುವುದಕ್ಕೋಸ್ಕರ ಈ ಹಂತದ ಸಂಸ್ಕೃತಿಯನ್ನು ‘ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿ’ ಎಂದು ಹೆಸರಿಸಲಾಗಿದೆ.

ಮನೆಗಳು

ಈ ಹಂತದಲ್ಲಿಯ ಜನರು ಹೆಚ್ಚು ಸುಧಾರಣೆ ಹೊಂದಿದ್ದರೂ ಹಿಂದಿನ ಹಂತದಲ್ಲಿಯ ಜನರ ಹಾಗೆ ವಾಸಕ್ಕೆ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತಿದ್ದರೆಂದು ಕಾಣುತ್ತದೆ. ಇವರು ಕಟ್ಟಿದ ಕಲ್ಗೋರಿಗಳನ್ನು ನೋಡಿದರೆ, ಇವರಿಗೆ ತಮ್ಮ ಮನೆಗಳನ್ನು ಬೇಕಾದ ರೀತಿಯಲ್ಲಿ ಕಟ್ಟುವ ಶಕ್ತಿ ಇದ್ದಿತು. ಆದರೂ ಮನೆಗಳನ್ನು ದೃಢವಾಗಿ ಕಟ್ಟುವ ಗೋಜಿಗೆ ಹೋಗಲಿಲ್ಲ. ತಮ್ಮ ಉದ್ಯೋಗಕ್ಕೋಸ್ಕರ ದಿನವಿಡೀ ಹೊರಗೆ ದುಡಿಯಬೇಕಾದುದರಿಂದ ವ್ಯವಸ್ಥಿತವಾದ ದೊಡ್ಡ ಮನೆಗಳ ಅವಶ್ಯಕತೆ ಈ ಜನರಿಗೆ ಕಾಣಲಿಲ್ಲವೆಂದು ಕಾಣುತ್ತದೆ.

ಪಾತ್ರೆ-ಪಗಡಿಗಳು

ಕಬ್ಬಿಣದ ಉಪಯೋಗ ದೊಡ್ಡ ಪ್ರಮಾಣದಲ್ಲಿದ್ದರೂ ದಿನ ನಿತ್ಯದ ಪಾತ್ರೆ-ಪಗಡಿಗಳು ಮಣ್ಣಿನವೆ. ಕೊಡ, ಚೊಂಬು, ಗಂಟೆಯಾಕಾರದ ಬಟ್ಟಲು, ಅರ್ಧಗೋಲಾಕೃತಿಯ ವಿವಿಧ ಬಟ್ಟಲು, ನಾನಾ ಆಕಾರದ ಮುಚ್ಚಳ, ದ್ರಾಕ್ಷಾರಸ ಸೇವಿಸುವ ಮಾದರಿಯ ಲೋಡ, ದುಂಡಾದ ಬುಡದ ಪಾತ್ರೆಗಳನ್ನಿಡುವಂಥ ಸಿಂಬೆಯಾಕಾರದ ಬುಡ ಆಸರೆ ಮೊದಲಾದವು ಬಳಕೆಯಲ್ಲಿದ್ದವು. ಈ ಪಾತ್ರೆಗಳ ಬಣ್ಣಗಳು ಮುಖ್ಯವಾಗಿ ಮೂರು ವಿಧವಾಗಿವೆ. ಸಮಾನ್ಯವಾಗಿ ಬಟ್ಟಲು, ತಟ್ಟೆ ಮುಚ್ಚಳಗಳು ಪೂರ್ತಿಯಾಗಿ ಕಪ್ಪು ಬಣ್ಣದ್ದಾಗಿಯೂ ಅಥವಾ ಕಪ್ಪು-ಕೆಂಪು ಬಣ್ಣದಾಗಿಯೂ ಅಥವಾ ಕೆಂಪು ಬಣ್ಣದ್ದಾಗಿಯೂ ಇರುತ್ತವೆ. ಇವುಗಳ ಮೇಲಿನ ಬಣ್ಣದ ಲೇಪನವನ್ನು ಚೆನ್ನಾಗಿ ಉಜ್ಜಿರುವುದರಿಂದ ಅದು ತುಂಬ ಹೊಳಪುಳ್ಳದ್ದಾಗಿದೆ.

ದೊಡ್ಡ ಪಾತ್ರೆಗಳು ಕೆಂಪು ಅಥವಾ ಮಸುಕು ಕಂದು ಬಣ್ಣದವು. ಪಾತ್ರೆಗಳ ಮೈ ಮೇಲಿನ ಬಣ್ಣ ತೆಳ್ಳಗೆ ಒರಸಿದ ಹಾಗೆ ಹೊಳಪು ಇಲ್ಲ. ಕೆಲವು ವಿಧವಾದ ಪಾತ್ರೆಗಳನ್ನು ತಿಗರಿಯ ಮೇಲೆ ಮಾಡಲಾಗಿದೆ. ಪಾತ್ರೆಗಳ ಮೇಲೆ ಯಾವ ವಿಧವಾದ ಬಣ್ಣದ ಅಥವಾ ಗೆರೆಯ ಚಿತ್ರಗಳಾಗಲಿ ಇಲ್ಲ. ಆದರೆ ಕೆಲವು ಪಾತ್ರೆಗಳ ಹೊರಬದಿಯಲ್ಲಾಗಲಿ ಒಳಬದಿಯಲ್ಲಾಗಲಿ ಒಂದು ಮೊನಚಾದ ವಸ್ತುವಿನಿಂದ ಒಂದೆರಡು ಗಿಚಿದ ಗೆರೆಗಳ ಸಂಕೇತವಿರುತ್ತದೆ. ಬ್ರಹ್ಮಗಿರಿಯಲ್ಲಿ ಇಂತಹ ಒಟ್ಟು ೨೪ ಗೀಚುಗಳು ಸಿಕ್ಕಿವೆ. ಈ ಗೀಚುಗಳ ಹೆಚ್ಚಾಗಿ ಕಲ್ಗೋರಿಗಳಲ್ಲಿದ್ದ ಪಾತ್ರೆಗಲ್ಲಿವೆ. ಒಂದೇ ತರಹದ ಗುರುತು ಕೆಲವು ಪಾತ್ರೆಗಳಲ್ಲಿವೆ. ಆದುದರಿಂದ ಈ ಗೀಚುಗಳನ್ನು ವರ್ಗೀಕರಿಸಬಹುದು. ಈ ಸಂಕೇತಗಳ ಅಥðವೇನೆಂಬುದು ತಿಳಿದಿಲ್ಲ. ಕೆಲವು ತಜ್ಞರು ನಮ್ಮ ಅಕ್ಷರಗಳ ಮೂಲವಾದ ಬ್ರಾಹ್ಮಿಲಿಪಿಯ ಮೊದಲಿನ ಸ್ವರೂಪವೆಂದು ತಿಳಿಯುತ್ತಾರೆ. ಏಕೆಂದರೆ ಕೆಲವು ಗೀಚುಗಳು ಬ್ರಾಹ್ಮಿಲಿಪಿಯ ಅ, ಉ, ಕ, ಗ, ಧ, ಮ, ರ, ಶ ಅಕ್ಷರಗಳ ಹಾಗೆ ಇವೆ. ಕೆಲವರು ಅವು ಏತಕ್ಕೊ ಮಾಡಿಕೊಂಡ ಕುಂಬಾರನ ಗುರುತಗಳೆಂದು ಅಥವಾ ಬೇರೆ ಬೇರೆ ಜನವರ್ಗಗಳ ಗುರುತಗಳೆಂದು ಹೇಳಿದರೆ ಮತ್ತೆ ಕೆಲವರು ಅವುಗಳಿಗೇನೂ ನಿರ್ಧಿಷ್ಟ ಅರ್ಥವಿಲ್ಲವೆಂದೂ ಹೇಳುವರು. ಇವು ವಸ್ತು ಮತ್ತು ಪ್ರಾಣಿ ಅಥವಾ ಭಾವನೆಯ ಸಂಕೇತಗಳೆಂದು ಅಂದರೆ ಸೂರ್ಯ, ಏಣಿ, ಹಾವು ಮುಂತಾದವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಈ ರೀತಿ ಪಾತ್ರೆಗಳ ಮೇಲೆ ಗೀಚಿದ ಗೆರೆಗಳು, ಉತ್ತರ ಭಾರತದಲ್ಲಿ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಪ್ರದೇಶಗಳಲ್ಲಿಯ ಶಿಲಾ-ತಾಮ್ರಯುಗದ ಹೆಚ್ಚಾಗಿ ಕಪ್ಪು-ಕೆಂಪು ವರ್ಣದ ಪಾತ್ರೆಗಳಲ್ಲಿವೆ. ಕೆಲವು ಗೀಚುಗಳಲ್ಲಿ ಪರಸ್ಪರ ಹೋಲಿಕೆಯಿವೆ. ಅಷ್ಟೇ ಅಲ್ಲ ಸಿಂಧೂ-ಸರಸ್ವತಿಯ ಸಂಸ್ಕೃತಿಯ ಅಕ್ಷರಗಳ್ಲಿ ಕೆಲವು ಈ ಗೀಚುಗಳಲ್ಲಿಯ ಕೆಲವಕ್ಕೆ ಹೋಲುತ್ತದೆ. ಒಟ್ಟಿನಲ್ಲಿ ಈ ಪದ್ಧತಿ ಶಿಲಾ – ತಾಮ್ರ ಸಂಸ್ಕೃತಿಯಿಂದ ಉಳಿದು ಬಂತೆಂದು ತೋರುತ್ತದೆ. ಮತ್ತು ತಮಿಳುನಾಡಿನಲ್ಲಿ ಬೃಹತ್ ಶಿಲಾ ಸಂಸ್ಕೃತಿಯ ಪಾತ್ರೆಗಲ್ಲಿ ಈ ಗೀಚುಗಳು ಹೇರಳವಾಗಿವೆ.

ಕಬ್ಬಿಣದ ಸಾಮಾನುಗಳು

ಹಲವು ವಿಧದ ಕಬ್ಬಿಣದ ಸಲಕರಣೆಗಳು ಉಪಯೋಗದಲ್ಲಿದ್ದವು. ಹಿಡಿಕೆಯುಳ್ಳ ಬಾಣದ ಮೊನೆ, ಹಲ್ಲುಗಳುಳ್ಳ ಬಾಣದ ಮೊನೆ, ಚೂರಿ, ಚಾಕು, ಸುಮಾರು ಒಂದೂವರೆ ಮೀ. ಉದ್ದ ಈಟಿ, ಉಳಿ, ಕುಡಗೋಲು, ಉದ್ದನೆಯ ಕತ್ತಿ ಚಪ್ಪಟೆ ಕೊಡಲಿ, ಮೊಳೆ, ಮೊಳೆಗಳುಳ್ಳ ಬಳೆಯಾಕಾರದ ವಸ್ತು, ನೇಗಿಲಿನ ಕುಳ, ಉಂಗುರದ ಹಿಡಿಕೆಯುಳ್ಳ ತಟ್ಟೆ ಇವೇ ಮೊದಲಾದವು ಬಹಳ ಸಂಖ್ಯೆಯಲ್ಲಿ ದೊರೆತದ್ದು ಕೋಣೆಗೋರಿಗಳು ಮತ್ತು ಶವಕುಣಿಗಳಿಂದ.

ಆಭರಣಗಳು

ಈ ಜನರ ಅಲಂಕಾರಪ್ರಿಯತೆ ಸರಳವಾಗಿತ್ತು. ತಾಮ್ರದ ಚಿಪ್ಪಿನ ಸಾದಾ ಬಳೆಗಳು, ಮ್ಯಾಗ್ನೆಸೈಟ್‌, ಸರ‍್ಪೆನ್‌ಟೈನ್, ಜಾಸ್ಟರ್‌ ಮುಂತಾದ ಕಲ್ಲು, ಚಿನ್ನದ ಮತ್ತು ಸುಟ್ಟ ಮಣ್ಣಿನ ವಿವಿಧಾಕಾರದ ಮಣಿಗಳು ಇವೇ ಮೊದಲಾದವನ್ನು ಆಭರಣಗಳನ್ನಾಗಿ ಉಪಯೋಗ ಮಾಡುತ್ತಿದ್ದರು ಮ್ಯಾಗ್ನಸೈಟ್ ಮಣಿ ಚಪ್ಪಟ್ಟೆಯಾಗಿ ದುಂಡಾಗಿ ಬಹಳ ಸಣ್ಣದಾಗಿ ಇವೆ. ಸಾಮಾನ್ಯವಾಗಿ ಈ ಮಣಿಯ ವ್ಯಾಸ ಸುಮಾರು ೨,೩, ಮಿ.ಮೀ, ಮತ್ತು ದಪ್ಪ ೧ ಮಿ.ಮೀ. ಅದಕ್ಕಿಂತಲೂ ಕಡಿಮೆ. ಗಮನಾರ್ಹವೆಂದರೆ ಒಟ್ಟು ೩೩ ಚಿನ್ನದ ಮಣಿಗಳು ಒಂದೇ ಒಂದು ಶವಕುಣಿಯಲ್ಲಿದ್ದುದು. ಇವೆಲ್ಲವೂ ಸಣ್ಣ ಸಣ್ಣ ಸಾದಾ ಕೊಳವೆಗಳು. ಬಹುಶಃ ಇವು ಒಂದು ಚಿನ್ನದ ಸರದ್ದಾಗಿರಬೇಕು.

ಶವಸಂಸ್ಕಾರ ಪದ್ಧತಿ

ಈ ಜನರ ಶವಸಂಸ್ಕಾರ ಪದ್ಧತಿಯು ಹೆಚ್ಚು ವೈಶಿಷ್ಟ್ಯವಾಗಿದೆ. ಮೊದಲು ಶವವನ್ನು ವಸತಿ ನೆಲೆಯಿಂದ ಹೊರಗಡೆ ಸುರಕ್ಷಿತವಾಗಿಯೇ ಇಡುವುದು. ನಂತರ ದುಂಡುಕಟ್ಟೆಯ ಶವಕುಣಿಯನ್ನೋ, ಕಲ್ಗೋರಿಯನ್ನೋ ಕಟ್ಟುವುದು. ಈ ಮಧ್ಯೆ ಶವದ ಮಾಂಸವೆಲ್ಲ ಕರಗಿಹೋದ ಮೇಲೆ ಶರೀರದ ಮುಖ್ಯಭಾಗಗಳ ಎಲುಬುಗಳನ್ನು ಸಂಗ್ರಹಿಸುವುದು. ಅವನ್ನು ಶ್ರದ್ಧೆಭಕ್ತಿಯಿಂದ ಕಲ್ಗೋರಿ ಇಲ್ಲವೆ ದುಂಡು ಕಟ್ಟೆಯ ಶವಕುಣಿಯಲ್ಲಿ ಮಣ್ಣಿನ ಪಾತ್ರೆ, ಆಭರಣ, ಕಬ್ಬಿಣದ ಉಪಕರಣಗಳೊಡನೆ ಇಡುವುದು. ಆ ಮೇಲೆ ಅದನ್ನು ಮುಚ್ಚುವುದು. ಕೆಲವೊಂದು ಕಲ್ಗೋರಿ, ಶವಕುಣಿಗಳನ್ನು ಒಂದಕ್ಕಿಂತ ಹೆಚ್ಚು ಸಲ ಉಪಯೋಗಿಸಿದ್ದುದು ಕಂಡು ಬಂದಿದೆ. ಕೆಲವು ಶವಕುಣಿಗಳಲ್ಲಿ ಒಂದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಅಸ್ಥಿ ಅವಶೇಷಗಳಿವೆ. ಅಂದರೆ ಒಂದೊಂದನ್ನು ಒಂದೊಂದು ಕುಟುಂಬದವರು ಉಪಯೋಗಿಸಿದ್ದಿರಬೇಕು.

ಗೋರಿಗಳ ನಿರ್ಮಾಣದಲ್ಲಿ ಎರಡು ವಿಧದ ಪದ್ಧತಿಗಳಿದ್ದವು. ಕಲ್ಗೋರಿಗಳು ಮತ್ತು ದುಂಡು ಕಟ್ಟೆಯ ಶವಕುಣಿಗಳು. ಬ್ರಹ್ಮಗಿರಿಯಲ್ಲಿ ಇವು ಸುಮಾರು ಸಾವಿರದ ತನಕ ಇದ್ದುವು. ಸಂಖ್ಯೆಯಲ್ಲಿ ಕಲ್ಗೋರಿಗಳೇ ಹೆಚ್ಚು. ಚಂದ್ರವಳ್ಳಿಯ ಉತ್ಖನನದಲ್ಲಿ ಸುಮಾರು ೬ ಕಲ್ಗೋರಿಗಳು ಸಿಕ್ಕಿವೆ. ಆದರೆ ಇವು ಬ್ರಹ್ನಗಿರಿಗಿಂತ ಬೇರೆಯಾಗಿದ್ದು, ಆಯತಾಕಾರದ ಪೆಟ್ಟಿಗೆಗಳಂತಿವೆ.

ದುಂಡು ಕಟ್ಟೆ ಶವಕುಣಿಗಳು

ಈ ವಿಧವು ಸಾಮಾನ್ಯವಾಗಿ ನೆಲದ ಮೇಲೆ ಕಾಣುವ ೬ ರಿಂದ ೯.೫೦ ಮಿ. ವರೆಗಿನ ವ್ಯಾಸದ ಒಂದು ದುಂಡು ಕಟ್ಟೆ, ಈ ಕಟ್ಟೆ ಒಂದು ಅಥವಾ ಎರಡು ಸುತ್ತುಳ್ಳದ್ದಾಗಿರಬಹುದು. ದೊಡ್ಡ ದೊಡ್ಡ ಗುಂಡು ಕಲ್ಲುಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದನ್ನಿಟ್ಟು ದುಂಡು ಕಟ್ಟೆಯನ್ನು ಮಾಡಲಾಗಿದೆ. ಈ ಕಟ್ಟೆಯ ಮಧ್ಯದಲ್ಲಿ ೨.೫೦ ರಿಂದ ೩.೫೦ ಮಿ. ವ್ಯಾಸದ ದುಂಡಾದ ಅಥವಾ ಮೊಟ್ಟೆಯಾಕಾರದ ಕುಣಿಯಿರುತ್ತದೆ. ಈ ಕುಣಿಯು ಸಮಾನ್ಯವಾಗಿ ೨.೫೦ ಮಿ ಆಳವಿರುತ್ತದೆ. ಶವ ಸಂಸ್ಕಾರವಾದ ಮೇಲೆ, ಕುಣಿಯನ್ನು ಮಣ್ಣಿನಿಂದ ಮುಚ್ಚಿರುತ್ತದೆ.

ಕಲ್ಗೋರಿಗಳು

ನೆಲದಲ್ಲಿ ಬೇಕಾದ ಅಳತೆಗೆ ಸ್ವಲ್ಪ ಆಳದ ಚೌಕೋನ ಗುಂಡಿಯನ್ನು ಅಗೆದು, ಅದರ ನಾಲ್ಕು ಬದಿಗಳಲ್ಲಿ ಕಲ್ಲು ಹಲಗೆಗಳನ್ನು ನಿಲ್ಲಿಸಿ ಒಂದು ಕೋಣೆಯಾಗುವ ಹಾಗೆ ಮಾಡಿರುತ್ತೆ. ಒಂದು ಕಡೆಯಿಂದ ಹಲಗೆಯ ಒಂದು ಬದಿಯು ಪಕ್ಕದಲ್ಲಿನ ಮತ್ತೊಂದಕ್ಕೆ ಆತುಕೊಂಡಿದ್ದು ಸ್ವಲ್ಪ ಹೊರಗೆ ಚಾಚಿರುತ್ತದೆ. ಈ ರೀತಿ ನಿಲ್ಲಿಸಿರುವುದರಿಂದ ಹಲಗೆಗಳು ಒಳಮುಖವಾಗಿ ಅಡ್ಡ ಬೀಳಲು ಸಾಧ್ಯವಿಲ್ಲ. ಹಲಗೆಗಳನ್ನು ನಿಲ್ಲಿಸಿದ ರೀತಿ ಸ್ವಲ್ಪ ಮಟ್ಟಿಗೆ ಸ್ವಸ್ತಿಕದ ಹಾಗೆ ಕಾಣುತ್ತದೆ. ಕೋಣೆಯ ಹೊರಬದಿಯಲ್ಲಿ ಸುತ್ತಲೂ ತುಂಡು ಕಲ್ಲುಗಳ ವರ್ತುಳಾಕಾರದ ಗೊಡೆಯನ್ನು ಸ್ವಲ್ಪ ಒಳಮುಖ ಬಾಗುವ ಹಾಗೆ ಕೋಣೆಯ ಮೇಲಿನ ತುದಿಯವರೆಗೆ ಏರಿಸಲಾಗಿರುತ್ತದೆ. ಪೂರ್ವದ ಬದಿಯ ಹಲಗೆಯ ಮಧ್ಯದಲ್ಲಿ ಒಂದು ದುಂಡಾದ ಕಂಡಿ ಮಾಡಿರುತ್ತದೆ. ಹೊರಬದಿಯಲ್ಲಿ ಗೋಡೆಯ ಮೂಲಕ ಈ ಕಂಡಿಯ ಕಡೆಗೆ ಒಂದು ಸಣ್ಣ ಹಾದಿಯಿರುತ್ತದೆ. ಈ ಹಾದಿಯ ಎರಡು ಬದಿಗಳಲ್ಲಿ ಕಂಡಿಯ ತನಕ ಚಿಕ್ಕ ಹಲಗೆಯಿರುವುದು. ಕಂಡಿಯ ಹೊರಬದಿಯನ್ನು ಒಂದು ಹಲಗೆಗಳಿಂದ ಮುಚ್ಚಿದ್ದು, ಕೋಣೆಯ ಮೇಲ್ಭಾಗವನ್ನು ಅಡ್ಡವಾಗಿ ಬದಿಯ ಹಲಗೆಗಳಿಗಿಂತ ದೊಡ್ಡದಾದ, ದಪ್ಪನಾದ, ಕಲ್ಲು ಹಲಗೆಯಿಂದ ಮುಚ್ಚಿರುವುದು. ಕೋಣೆಯ ಹೊರಗಿನ ಗೋಡೆಯ ಸುತ್ತಲೂ ಗುಂಡುಕಲ್ಲುಗಳ ಅಥವಾ ಹಲಗೆಗಳ ದುಂಡು ಕಟ್ಟೆಯಿರುತ್ತೆ ಈ ವಿಧವಾದ ಗೋರಿಯನ್ನು ‘ಕಂಡಿಕೋಣೆ ಗೋರಿ’ಯೆಂದು ಕರೆಯಬಹುದು ಇದು ನೆಲದಲ್ಲಿ ಸ್ವಲ್ಪ ಹುದಗಿದಂತಿರುತ್ತದೆ.

ಕೆಲವು ಕಂಡಿಕೋಣೆ ಗೋರಿಯ ಬದಿಯಲ್ಲಿ ಸಣ್ಣ ಪೆಟ್ಟಿಗೆಯಂಥಹ ಒಂದೆರಡು ಸಣ್ಣ ಸಣ್ಣ ಕೋಣೆ ಗೋರಿಗಳು ಇರಬಹುದು. ಇವು ಪ್ರಾಯಶಃ ಒಂದು ಕುಟುಂಬದಲ್ಲಿಯ ದೂರದ ಸಂಬಂಧಿಕರಿಗೊ, ಸೇವಕರಿಗೊ ಇರಬಹುದು.

ಸಾಮಾನ್ಯವಾಗಿ ಕೋಣೆಗೋರಿಯು ಒಳಬದಿಯಲ್ಲಿ ೧೧/೨ ಮಿ. ಉದ್ದ, ೯೦ ಮಿ. ಅಗಲವಿದ್ದು ೧.೮೦ ಮೀ ಎತ್ತರವಿರುತ್ತದೆ. ಕಂಡಿಯ ವ್ಯಾಸ ೫೦-೯೦ ಮಿ. ಉದ್ದಗಲವಿರುತ್ತದೆ. ದುಂಡು ಕಟ್ಟೆಯ ವ್ಯಾಸ ೪.೮೦ ರಿಂದ ೬.೩೦ ಮಿ.ರವರೆಗೆ ಇರುತ್ತದೆ. ಪ್ರಾಯಶಃ ಕಾಲಕಾಲಕ್ಕೆ ಕಲ್ಗೋರಿಯಲ್ಲಿ ಸಂಸ್ಕಾರ ಮಾಡಿದ ವ್ಯಕ್ತಿಗೆ, ಆಹಾರ, ಪಾನೀಯ, ಧೂಪ ಹಾಕಲು ಕಂಡಿಯಿರಬಹುದು ಅಥವಾ ಆ ವ್ಯಕ್ತಿಯ ಆತ್ಮಕ್ಕೆ ಹೋಗಿ ಬರುವ ಬಾಗಿಲಿರಬಹುದು ಎಂದು ತಜ್ಞರ ಅಭಿಪ್ರಾಯ.

ದುಂಡುಕಟ್ಟೆ ಶವಕುಣಿಗಳು ಬಹುಶಃ ಮೊದಲು ಶವಗಳನ್ನು ಅವುಗಳ ಮಾಂಸವು ಮಣ್ಣಾಗಲು, ಇಡಲು ಇರಬಹುದು ಅಥವಾ ಇವು ಆ ಜನರಲ್ಲಿ ಒಂದು ಪಂಗಡದವರದ್ದಾಗಿರಬೇಕು ಎಂದು ತಜ್ಞರು ಊಹಿಸುತ್ತಾರೆ. ಪ್ರಾಯಶಃ ಎರಡನೇ ಊಹೆ ಸೂಕ್ತವೆಂದು ತೋರುತ್ತದೆ. ಇವು ಬಹುಶಃ ಒಂದು ಕಾಲದಲ್ಲಿ ನೂತನ ಶಿಲಾಯುಗದ ಹಂತದಲ್ಲಿದ್ದ ಜನರಿದ್ದಿರಬೇಕು. ಅವರು ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕೃತಿಯ ಜನರ ಸಂಪರ್ಕದಿಂದ ತಮ್ಮ ಶವಸಂಸ್ಕಾರ ಪದ್ಧತಿಗಯನ್ನು ಈ ರೀತಿ ಬದಲಾಯಿಸಿಕೊಂಡು ತೋರುತ್ತದೆ.

ಉತ್ಖನನ ಮಾಡಿದ ಕಲ್ಗೋರಿಗಳಲ್ಲಿಗಿಂತ ದುಂಡುಕಟ್ಟೆ ಶವಕುಣಿಗಳಲ್ಲಿ ಹೆಚ್ಚು ಕಬ್ಬಿಣದ ವಸ್ತುಗಳು ಕಡಿಮೆ ಮಣ್ಣಿನ ಪಾತ್ರೆಗಳು ಇದ್ದವು ಒಂದರಲ್ಲಿ ಯಾವುದೇ ಕಬ್ಬಿಣದ ವಸ್ತುಗಳು ಇರಲಿಲ್ಲ.

ಚಂದ್ರವಳ್ಳಿಯ ಕಲ್ಗೋರಿಗಳು ಬ್ರಹ್ಮಗಿರಿಗಿಂತ ಭಿನ್ನವಾಗಿವೆಯೆಂದು ಹೇಳಿದೆಯಷ್ಟೆ ಯಾವ ಹಲಗೆಯಲ್ಲೂ ಕಂಡಿಯಿಲ್ಲ. ಸುತ್ತಲೂ ಗೋಡೆಯಾಗಲಿ ಇಲ್ಲ. ಈ ಜನರು ಬೇರೆ ಬೇರೆ ರೀತಿಯಲ್ಲಿಯೂ ಕೋಣೆಗೋರಿಗಳನ್ನು ಕಟ್ಟುತ್ತಿದ್ದರು.

ಕರ್ನಾಟಕದ ಬೇರೆ ಕಡೆಗಳಲ್ಲಿ ಉತ್ಖನನಗಳಿಂದ ಈ ಬೃಹತ್ ಶಿಲಾ ಸಂಸ್ಕೃತಿಯ ಜನರು ಕುರಿ, ಎಮ್ಮೆ, ದನಗಳ ಜೊತೆಗೆ ಕುದುರೆಯನ್ನು ಸಾಕುತ್ತಿದ್ದರು. ರಾಗಿ, ಭತ್ತವನ್ನು ಬೆಳೆಯುತ್ತಿದ್ದು ಆಹಾರದಲ್ಲಿ ಉಪಯೋಗ ಮಾಡುತ್ತಿದ್ದರು ಬೃಹತ್ ಶಿಲಾ ಕೋಣೆಗೋರಿಗಳ ನಿರ್ಮಾಣದ ಪ್ರಯತ್ನ ಮತ್ತು ಅವುಗಳ ವಿಪುಲತೆಯನ್ನು ನೋಡಿದರೆ, ಅವರ ಸಂಘಟನಾ ಶಕ್ತಿ, ಸತ್ತುಹೋದ ಮನುಷ್ಯನ ಬಗ್ಗೆ ಇದ್ದ ಭಾವನೆಗಳು, ಶವಸಂಸ್ಕಾರದ ವಿಶಿಷ್ಟ ಶ್ರದ್ಧೆ ಮತ್ತು ಕಟ್ಟಡ ನಿರ್ಮಾಣದ ಕುಶಲತೆಯ ನಿಜವಾಗಿಯೂ ಮೆಚ್ಚುವಂಥದ್ದು.

ಇಂಥ ಕಲ್ಗೋರಿಗಳನ್ನು ಕಟ್ಟುತ್ತಿದ್ದ ಜನರು ಯಾರು? ಈ ಹಂತದಲ್ಲಿಯ ಜನವರ್ಗಗಳ ಕೆಲವು ಲಕ್ಷಣಗಳು ಬ್ರಹ್ಮಗಿರಿಯಲ್ಲಿಯ ಕಲ್ಗೋರಿಗಳಲ್ಲಿ ದೊರೆತ ಮಾನವನ ಅಸ್ಥಿ ಅವಶೇಷಗಳ ಪರೀಕ್ಷೆಯಿಂದ ತಿಳಿದಿವೆ. ಈ ಸಂಶೋಧನೆಯ ಪ್ರಕಾರ ಈ ಹಂತದಲ್ಲಿ ನೂತನ ಶಿಲಾಯುಗದ ‘ಅಸ್ಟ್ರಾಲಾಯಿಡ್’ ಬುಡಕಟ್ಟಿನ ಜನರು ಇದ್ದರಲ್ಲದೆ ಮೊದಲನೇ ಸಲಕ್ಕೆ ಬೇರೆ ಬುಡಕಟ್ಟಿನ ಜನರು ಇದ್ದುದು ತಿಳಿಯಿತು. ಈ ಜನರು ಹೆಚ್ಚು ಎತ್ತರವೂ ಅಥವಾ ಕುಳ್ಳರಾಗಿರದೆ ಸ್ವಲ್ಪ ದುಂಡು ತಲೆ, ಸ್ವಲ್ಪ ಚಪ್ಪಟೆ ಮೂಗು, ಬಲವಾದ ದವಡೆ ಮತ್ತು ದೃಢಕಾಯವುಳ್ಳವರಾಗಿದ್ದರು. ನೋಡುವುದಕ್ಕೆ ಸಿಥಿಯ-ಇರಾಣದ ಬುಡಕಟ್ಟಿನ ಜನವರ್ಗದಂತಿದ್ದರು ಎಂಬುದು ತಜ್ಞರ ಅಭಿಪ್ರಾಯ. ಈ ಬುಡಕಟ್ಟಿನ ಜನರು ಈ ಪ್ರದೇಶದಲ್ಲಿ, ಏಕೆ ಬಹುಮಟ್ಟಿಗೆ ದಖನ್ ಪ್ರಸ್ಥಭೂಮಿಯಲ್ಲಿಯ ನೂತನ ಶಿಲಾಯುಗದ ಹಂತದಲ್ಲಿ ಇದ್ದಿರಬಹುದೆಂಬುದಕ್ಕೆ ಇವರ ಅಸ್ಥಿ ದೊರೆತುದನ್ನು ಮೇಲೆ ಹೇಳಿದೆ. ಮತ್ತು ನೂತನ ಶಿಲಾಯುಗದ ಜನರಲ್ಲಿ ಕಲ್ಗೋರಿಗಳನ್ನು ಕಟ್ಟುವ ಸಂಪ್ರದಾಯವಾಗಲಿ ಕಬ್ಬಿಣದ ಜ್ಞಾನ ಮತ್ತು ಉಪಯೋಗವಾಗಲಿ ಇರಲಿಲ್ಲ. ಆದುದರಿಂದ ಕಬ್ಬಿಣಯುಗದ ಬೃಹತ್‌ಶಿಲಾ ಸಂಸ್ಕೃತಿಯ ಹಂತದಲ್ಲಿ ಹೊಸದಾಗಿ ಕಂಡುಬಂದ ಬಹುಶಃ ಸಿಥಿಯ-ಇರಾನ್ ಬುಡಕಟ್ಟಿನ ತರಹದ ಜನರಲ್ಲಿಯೇ ಕಲ್ಗೋರಿಗಳನ್ನು ಕಟ್ಟುವ ಸಂಪ್ರದಾಯವಿದ್ದು ಕಬ್ಬಿಣದ ತಂತ್ರಜ್ಞಾನವಿತ್ತೆಂದು ಕಾಣುತ್ತದೆ. ಈ ಜನರೇ ಹೆಚ್ಚಾಗಿ ಅಲ್ಲಲ್ಲಿ ನೂರಾರು ಬೃಹತ್ ಶಿಲಾಗೋರಿಗಳ ನಿರ್ಮಾಣಕ್ಕೆ ಕಾರಣರಾದರೆಂದು ಹೇಳಬಹುದು. ಇವರು ಹೊರದೇಶದವರೇ ಅಥವಾ ನಮ್ಮ ದೇಶದವರೇ, ಯಾವ ಕಾಲದಲ್ಲಿ ಮತ್ತು ಯಾವ ಮಾರ್ಗವಾಗಿ ಈ ಪ್ರದೇಶಕ್ಕೆ ಬಂದರು ಅಥವಾ ಯಾವ ಪ್ರದೇಶದಿಂದ ಹೋದರೆಂಬುದನ್ನು ಇನ್ನೂ ಹೆಚ್ಚಿನ ಸಂಶೋಧನೆಯಿಂದ ತಿಳಿಯಬೇಕಾಗಿದೆ. ಇವರೆ ಈ ಪ್ರದೇಶದಲ್ಲಿ ಕಬ್ಬಿಣದ ಉಪಯೋಗಕ್ಕೂ ಮತ್ತು ಪ್ರಸಾರಕ್ಕೂ ಕಾರಣರೆಂಬುದು ವಿವಾದಾಸ್ಪದ. ಒಟ್ಟಿನಲ್ಲಿ ಬೃಹತ್ ಶಿಲಾ ಗೋರಿಗಳ ಸಂಖ್ಯೆ ಮತ್ತು ಅವುಗಳಲ್ಲಿ ಒಬ್ಬರಿಗಿಂತ ಹೆಚ್ಚಿನ ವ್ಯಕ್ತಿಗಳ ಅಸ್ಥಿ ಅವಶೇಷಗಳಿರುವುದನ್ನು ಗಮನಿಸಿದಾಗ ಈ ಹಂತದಲ್ಲಿ ಗಣನೀಯವಾಗಿ ಜನಸಂಖ್ಯೆ ಹೆಚ್ಚಾಯಿತು. ದೊಡ್ಡ ಪ್ರಮಾಣದಲ್ಲಿ ಕಬ್ಬಿಣ ತಂತ್ರಗಾರಿಕೆ ಬಳಕೆಯಿಂದ ಕಬ್ಬಿಣದ ಉತ್ಪತ್ತಿ ಹೆಚ್ಚಾಗಿ ನಾನಾ ಪ್ರಕಾರದ ಉಪಕರಣಗಳ ತಯಾರಿಕೆ ವೃದ್ಧಿಯಾಗಿ ಆರ್ಥಿಕ ಸ್ಥಿತಿಗತಿ ತುಂಬ ಸುಧಾರಿಸಿದಂತೆ ಕಾಣುತ್ತದೆ ಇದು ಮುಂದಿನ ಹಂತದಲ್ಲಿ ಸ್ಪಷ್ಟವಾಗಿ ತೋರುತ್ತದೆ.

ಇತಿಹಾಸ ಪ್ರಾರಂಭಕಾಲದ ನಾಗರಿಕತೆ

ಹಿಂದಿನ ಹಂತಗಳಲ್ಲಿದ್ದ ಜನರ ವಸತಿಗಳಿಗಿಂತ ಈ ಹಂತದ ಜನವಸತಿಯು ಹೆಚ್ಚು ವಿಸ್ತಾರವಾಗಿರುತ್ತಿತ್ತು. ಚಂದ್ರವಳ್ಳಿಯಲ್ಲಿ ಈ ಹಂತದ ಜನಜೀವನ ಬಹುಮುಖವಾಗಿ ಅಭಿವೃದ್ಧಿಯಾಗಿತ್ತೆಂಬುದು ಹೆಚ್ಚು ಸ್ಪಷ್ಟವಾಗಿದೆ. ಮೊದಲು ಮಣ್ಣು ಮೆತ್ತಿದ ದಬ್ಬೆ, ಸೊಪ್ಪಿನಗೋಡೆ ಮತ್ತು ಹುಲ್ಲಿನ ಮಾಡುಳ್ಳ ಮನೆಗಳನ್ನು ಕಟ್ಟುತ್ತಿದ್ದರು. ಕ್ರಮೇಣ ಸುಟ್ಟ ಇಟ್ಟಿಗೆಗಳ ಕಟ್ಟಡಗಳನ್ನು ನಿರ್ಮಿಸಲು ಪ್ರಾರಂಭಿಸಿದರು.

ಇಟ್ಟಿಗೆ ಕಟ್ಟಡಗಳು

ಕೃಷ್ಣರವರ ಚಂದ್ರವಳ್ಳಿ ಉತ್ಖನನಗಳಲ್ಲಿ ಇಟ್ಟಿಗೆ ಗೋಡೆಗಳ ಭಾಗಗಳು, ಇಟ್ಟಿಗೆ ತುಂಡುಗಳನ್ನು ಹಾಕಿ ಬಡಿದು ಗಟ್ಟಿ ಮಾಡಿದ ನೆಲಗಳು ಅಲ್ಲಲ್ಲಿ ಸುಮಾರು ಹತ್ತು ಕಡೆಗಳಲ್ಲಿ ದೊರೆತಿವೆ.

೨೮ನೇ ಗುಂಡಿಯಲ್ಲಿ ಒಂದು ಕೊಠಡಿ ಭಾಗವು ಕಾಣಿಸಿತ್ತು. ಅಳಿದುಳಿದ ಗೋಡೆಗಳ ಎತ್ತರ ಸುಮಾರು ೯೦ ಸೇ. ಮೀ. ಇದರಲ್ಲಿ ಇಟ್ಟಿಗೆಗಳ ಆರು ಸಾಲುಗಳಿದ್ದವು. ಗೋಡೆಯ ಅಗಲ ಸುಮಾರು ೪೮ ಸೆ. ಮೀ. ಮೊದಲು ಬಿರುಸಾದ ದೊಡ್ಡ ಮತ್ತು ಸಣ್ಣ ಮರಳನ್ನು ಕೆಂಪು ಮಣ್ಣನ್ನು ಹಾಕಿ ಗಟ್ಟಿಮಾಡಿ ಅದರ ಮೇಲೆ ಇಟ್ಟಿಗೆ ಗೋಡೆಯನ್ನು ಏರಿಸಲಾಗಿತ್ತು. ಕೊಠಡಿಯ ಒಳಭಾಗದಲ್ಲಿ ಹವಳ, ಸ್ಪಟಿಕದ ಮಣಿಗಳು ದೊರೆತವು.

ಬಾರಲಗೊಂದಿಯ ೩೧ನೇ ಗುಂಡಿಯಲ್ಲಿ ಸುಮಾರು ೩೦ ಮೀ. ಚದರದ ಇಳಿಜಾರಾದ ಒಂದು ಕಟ್ಟೆಯಿತ್ತು. ಬಿದ್ದು ಹೋಗಿದ್ದ ಇಲ್ಲಿಯ ಇಟ್ಟಿಗೆ ಕಟ್ಟಡದ ನೆಲಕ್ಕೆ ದೊಡ್ಡ ದೊಡ್ಡ ಇಟ್ಟಿಗೆ ಚೂರುಗಳನ್ನು ಹಾಕಲಾಗಿತ್ತು.

ಹಾಗೆಯೇ ಮತ್ತೊಂದೆಡೆಯಲ್ಲಿ ಒಂದು ಇಟ್ಟಿಗೆ ಕೊಠಡಿಯ ಎರಡು ಗೋಡೆಗಳ ಅವಶೇಷಗಳು ಇದ್ದವು. ಇದರ ಒಂದು ಮೂಲೆಯ ಹತ್ತಿರ ಗೋಡೆಯಲ್ಲಿ ಒಂದು ಚೌಕದ ಕಂಡಿಯಿತ್ತು. ಮನೆಯೊಳಗೆ ಹೋಗಿ ಬರುವುದಕ್ಕೆ ಬಾಗಿಲಿನ ಕುರುಹು, ಒಳಗಡೆ ಒಲೆಯಿದ್ದವು. ಇಲ್ಲಿ ಮಣಿಗಳು ಸುಟ್ಟ (ಪ್ರಾಯಶಃ ಪ್ರಾಣಿಗಳ), ಎಲುಬುಗಳು ಸಿಕ್ಕಿವೆ. ಇದರ ಹತ್ತಿರದ ಮತ್ತೊಂದು ಕೊಠಡಿಯ ಬಳಿ ಹೊರಬದಿಯಲ್ಲಿ ಒಂದು ದೊಡ್ಡ ಮಣ್ಣಿನ ಹರಿವಿ ಇತ್ತು.

ಇವೆಲ್ಲಕ್ಕಿಂತಲೂ ಹೆಚ್ಚು ಸ್ಪಷ್ಟವಾಗಿ ಇದ್ದ ಇಟ್ಟಿಗೆ ಕಟ್ಟಡವೆಂದರೆ ೩೬ನೇ ಗುಂಡಿಯಲ್ಲಿ ಸಿಕ್ಕಿದ್ದು ಇದು ವಿಸ್ತಾರವಾಗಿದ್ದು ನಾಲ್ಕಕ್ಕಿಂತಲೂ ಹೆಚ್ಚು ಕೊಠಡಿಗಳಿಂದ ಕೂಡಿತ್ತು. ಒಂದು ಸುಮಾರು ೩ ಮೀ. ಉದ್ದX೨.೪೦ ಮೀ ಅಗಲವಾಗಿತ್ತು.

ಮನೆಗಳ ನೆಲಕ್ಕೆ ಕೆಂಪು ಗರಸು ಮಣ್ಣನ್ನಾಗಲೀ ಅಥವಾ ಇಟ್ಟಿಗೆ ತುಂಡುಗಳನ್ನಾಗಲಿ ಹಾಕಿ ಬಡಿದು ಗಟ್ಟಿ ಮಾಡಲಾಗಿತ್ತು. ಇಟ್ಟಿಗೆಗಳ ಸಾಲುಗಳಲ್ಲಿ ಅಡ್ಡಲಾಗಿ ಇಟ್ಟು ಕಲಿಸಿದ ಒಳ್ಳೆ ಮಣ್ಣಿನಿಂದ ಇಟ್ಟಿಗೆಗಳನ್ನು ಜೋಡಿಸಲಾಗಿತ್ತು. ಈ ರೀತಿ ಇಟ್ಟಿಗೆಗಳನ್ನು ಜೋಡಿಸಿ ಗೋಡೆಗಳನ್ನು ಕಟ್ಟುವ ಪದ್ಧತಿಗೆ ಈಗ ’ಈಗ್ಲೀಷ್ ಬಾಂಡ್’ ಎಂದು ಕರೆಯಲಾಗಿದೆ. ಈ ಪದ್ಧತಿ ಭಾರತದಲ್ಲಿ ಸಿಂಧೂ ಬಯಲಿನ ನಾಗರಿಕತೆಯ ಕಾಲದಿಂದಲೂ ಇದ್ದಿತು. ಇಟ್ಟಿಗೆಗಳು ಸಾಮಾನ್ಯವಾಗಿ ೪೦ ರಿಂದ ೪೫ ಸೆ. ಮೀ ಉದ್ದ ೧೯ ರಿಂದ ೨೪ ಸೆ. ಮೀ. ಅಗಲ ಮತ್ತು ೮, ೯ ಸೆ. ಮೀ ದಪ್ಪವಾಗಿರುತ್ತದ್ದವು.

ಬ್ರಹ್ಮಗಿರಿಯಲ್ಲಿ ಅಶೋಕನ ಕಲ್ಲುಬಂಡೆ ಶಾಸನದ ಸ್ಥಳದಿಂದ ಸುಮಾರು ೨೦೦ ಮೀ. ಆಗ್ನೇಯ ದಿಕ್ಕಿಗೆ ಇದ್ದ ಇಟ್ಟಿಗೆ ಕಟ್ಟಡವು ಸುಮಾರು ೭ ಮೀX೪.೧೫ ಮೀ. ಕ್ಷೇತ್ರಫಲ ಉಳ್ಳದ್ದಾಗಿದೆ. ಇದು ಪೂರ್ವ ದಿಕ್ಕಿಗೆ ಎದುರಾಗಿತ್ತು. ಇದು ಇದು ೨ ೫.೨೫ ಮೀX೨.೭೫ ಮೀ ನಷ್ಟು ವಿಸ್ತಾರವಾದ ಒಂದು ಪಡಸಾಲೆ ಇದರ ಹಿಂಭಾಗ ಪ್ರ.ಶ.ಪೂ ೨-೧ನೇ ಶತಮಾನದ ಬೌದ್ಧ ಚೈತ್ಯಾಲಯದಂತೆ ಅರ್ಧವೃತ್ತಾಕಾರದಲ್ಲಿತ್ತು. ಇದಕ್ಕೆ ಇಟ್ಟಿಗೆಗಳನ್ನು ಉಪಯೋಗಿಸಲಾಗಿದೆ. ಇದನ್ನು ಬಹುಶಃ ಚಂದ್ರವಳ್ಳಿಯ ಕಟ್ಟಡಗಳಲ್ಲಿ ತೋರಿದ ಪದ್ಧತಿಯಂತೆ ಕಟ್ಟಿರಬೇಕು. ಈ ಕಟ್ಟಡದ ವಿನ್ಯಾಸ ಆ ಕಾಲದ ಬಂಡೆಗಲ್ಲುಗಳಲ್ಲಿ ಕೊರೆದು ಮಾಡಿದ ದೇವಾಲಯ ದೇವಾಲಯ/ಚೈತ್ಯಾಲಯಗಳಿಗೆ ಹೋಲುವುದರಿಂದಲೂ ಮತ್ತು ಜನವಸತಿಯ ಸ್ಥಳದಿಂದ ಸ್ವಲ್ಪ ದೂರದಲ್ಲಿ ಗುಡ್ಡದ ಇಳಿಜಾರಿನಲ್ಲಿದ್ದುದರಿಂದಲೂ ಇದು ಬಹುಶಃ ಒಂದು ದೇವಾಲಯ/ಚೈತ್ಯಾಲಯವೇ ಆಗಿದ್ದಿರಬೇಕು. ಆದರೆ ಇದರ ಬಳಿ ಯಾವುದೇ ಧಾರ್ಮಿಕ ಸಂಬಂಧವಾದ ವಸ್ತು ಅವಶೇಷಗಳು ದೊರೆತಿಲ್ಲ.

ಇತಿಹಾಸ ಪ್ರಾರಂಭಕಾಲದ ಸಂಸ್ಕೃತಿಯ ಸುಮಾರು ೪-೩ನೇ ಶತಮಾನದಿಂದ ಶುರುವಾಗಿದ್ದರೂ, ಇಟ್ಟಿಗೆಗಳಿಂದ ದೇವಾಲಯವನ್ನು ಮತ್ತು ಮನೆಗಳನ್ನು ಕಟ್ಟುವುದು ಸು.ಪ್ರ.ಶ.ಪೂ. ೨ನೇ ಶತಮಾನದಿಂದ ಆರಂಭವಾಗಿ ಪ್ರ.ಶ.೧-೨ನೇ ಶತಮಾನದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿರಬೇಕೆಂದು ತೋರುತ್ತದೆ.

ಮೃತ್ ಪಾತ್ರೆಗಳ

ಈ ಸಂಸ್ಕೃತಿಯ ಜನರ ಮತ್ತೊಂದು ವೈಶಿಷ್ಟ್ಯವೆಂದರೆ ಹೆಚ್ಚಾಗಿ ಕಪ್ಪು-ಕೆಂಪು ದ್ವಿವರ್ಣದ ಮತ್ತು ಕೆಂಪು ಬಣ್ಣದ ಅರ್ಧಗೋಲಾಕೃತಿಯ ಪಾತ್ರೆ, ಚೊಂಬು, ಸಣ್ಣ ಕೊಡಗಳ ಹೊರಮೈಯನ್ನು ಬಿಳಿಯ ಬಣ್ಣದ ರೇಖಾಚಿತ್ರಗಳಿಂದ ಅಲಂಕರಿಸಿ, ಈ ಚಿತ್ರಗಳ ಮೇಲೆ ಬಹಳ ತೆಳುವಾದ ಕೆಮ್ಮಣ್ಣಿನ ಲೇಪನ ಮಾಡುವುದು. ಪಾತ್ರೆಗಳ ಆಕಾರಗಳಲ್ಲಿ ಹಿಂದಿನ ಬೃಹತ್‌ಶಿಲಾ ಸಂಸ್ಕೃತಿಯ ಕಾಲದವುಗಳಿಗಿಂತ, ಅಂತಹ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ. ಒರಟು ಮೈಯ ದೊಡ್ಡ ಸಣ್ಣ ಅತಿ ಕಿರಿದಾದ ಬುಡ ಅಗಲ ಬಾಯುಳ್ಳ ಲೋಟಗಳು ದೊಡ್ಡ ಪ್ರಮಾಣದಲ್ಲಿ ಬಳಕೆಯಲ್ಲಿರುವುದು ಗಮನಾರ್ಹ. ಕೆಲವೊಂದು ವಿಶಿಷ್ಟವಾಗಿವೆ. ದುಂಡಾದ ತಟ್ಟೆಗಳು ಹೆಚ್ಚಾಗಿ ಸಿಗುತ್ತವೆ. ಕೆಲವಂತೂ ಅತ್ಯಂತ ಚೆನ್ನಾಗಿ ಗಾಳಿಸಿದ ಒಳ್ಳೆಯ ಜೇಡಿಮಣ್ಣಿನಲ್ಲಿ ಮಾಡಿದ್ದಾಗಿವೆ. ಇವುಗಳ ಮಧ್ಯದ ಒಳಮೈಯಲ್ಲಿ ಮೂಡಿಸಿದ ಓರೆ ಗೆರೆಗಳ ಅಥವ ಬಿಂದುಗಳ ವೃತ್ತಗಳಿರುತ್ತವೆ. ಈಗಾಗಲೆ ವಿವರಿಸಿದ ಹಾಗೆ ’ರೌಲೆಟ್’ ತಂತ್ರದಿಂದ ಈ ರೀತಿ ಚಿತ್ರಗಳನ್ನು ತೆಗೆಯಲಾಗಿದೆ. ಮತ್ತೊಂದು ವಿಧವಾದ ವಿಶಿಷ್ಟವಾದ ಮಣ್ಣಿನ ವಿಶಿಷ್ಟವಾದ ಮಣ್ಣಿನ ಪಾತ್ರೆಗಳೆಂದರೆ, ತುಂಬ ಹೊಳಪಾದ ಚೆಲುವಾದ ಕೆಂಪು ಮೈಯುಳ್ಳ ಉದ್ದನೆ ಕೊಳೆಯಾಕಾರದ ಬಾಯಿಯುಳ್ಳ ಮತ್ತು ಹಿಡಿಕೆಯುಳ್ಳ ಪಾನೀಯ ಹೂಜಿಗಳು, ಇವು ಅತ್ಯುತ್ತಮವಾಗಿ ಗಾಳಿಸಿದ ಜೇಡಿ ಮಣ್ಣಿನಿಂದ ಮಾಡಿದ ಒಂದೇ ಸಮನಾಗಿ ಚೆನ್ನಾಗಿ ಸುಟ್ಟು ಮಾಡಿದ ಪಾತ್ರೆಗಳು. ಇವೆರಡು ತರಹದ ವಿಶಿಷ್ಟ ಪಾತ್ರೆಗಳಲ್ಲಿ ರೋಂ ದೇಶದ ಮಣ್ಣಿನ ಪಾತ್ರೆ ತಯಾರಿಕೆಯ ತಂತ್ರಗಳ ಪ್ರಭಾವವಿದೆಯೆಂಬುದು ತಜ್ಞರ ಅಭಿಮತ.

ಆಭರಣಗಳು

ಉತ್ತಮ ಜಾತಿಯ ಜಾಸ್ಟರ್, ಕಾರ‍್ನಿಲಿಯನ್‌, ಅಗೇಟ್ ಮುಂತಾದ ಕಲ್ಲುಗಳ, ದಂತ, ಶಂಖ, ಸುಣ್ಣಮಣ್ಣಿನ, ಗಾಜಿನ ಆಭರಣದ ಮಣಿ ಮತ್ತು ಬಳೆಗಳು ನಾನಾ ವಿಧವಾಗಿದ್ದವು. ಈ ಕಾಲದ ಕಾರ್ನೀಲಿಯನ್ ಮಣಿಗಳಲ್ಲಿ ಒಂದು ಗಮನಾರ್ಹ ಸಂಗತಿಯಿದೆ. ಮಣಿಗಳ ಆಕಾರಕ್ಕೆ ತಕ್ಕಂತೆ, ಅವುಗಳ ಬದಿಯಲ್ಲಾಗಲಿ, ಮಧ್ಯದಲ್ಲಾಗಲಿ ರೇಖಾ ಚಿತ್ರಗಳನ್ನು ಕೊರೆದು ಅವುಗಳಲ್ಲಿ ಬಿಳಿ ಬಣ್ಣವನ್ನು ತುಂಬುವುದು. ಹೀಗೆ ಮಾಡುವುದರಿಂದ ಕಂದು-ಕೆಂಪು ಬಣ್ಣದ ಈ ಕಲ್ಲಿನ ಮಣಿಗಳ ಮೇಲೆ ಬಿಳಿ ಬಣ್ಣದ ಗೆರೆಚಿತ್ರಗಳು ಮೂಡುವವು. ಈ ಸ್ಥಳದಲ್ಲಿಯ ೧೯೪೭ರ ಉತ್ಖನನಗಳಲ್ಲಿ ಈ ವಿಧವಾದ ಮಣಿಗಳ ದೊರೆಯದಿದ್ದರೂ. ಇವುಗಳ ಉಪಯೋಗ ಈ ಕಾಲದ ಸಂಸ್ಕೃತಿಯ ಒಂದು ವಿಶಿಷ್ಟ ಪದ್ಧತಿಯಾಗಿತ್ತೆಂದು, ಮಸ್ಕಿ ಮುಂತಾದ ನೆಲೆಗಳಲ್ಲಿಯ ಉತ್ಖನನಗಳಿಂದ ತಿಳಿದಿದೆ.

ನಾಣ್ಯಗಳ ಬಳಕೆ

ಈ ನಾಗರಿಕತೆಯ ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ, ವ್ಯಾಪಾರ ವ್ಯವಹಾರಗಳಲ್ಲಿ ನಾಣ್ಯಗಳ ವಿನಿಮಯದಿಂದ ವಸ್ತುಗಳನ್ನು ಕೊಳ್ಳವುದು ಮಾರುವುದು. ಹಿಂದೆ ನಮ್ಮಲ್ಲಿ ಹೆಚ್ಚಾಗಿದ್ದ ವಸ್ತುವನ್ನು ಕೊಟ್ಟು ನಮಗೆ ಬೇಕಾದ ವಸ್ತುವನ್ನು ಪಡೆಯುವ ವ್ಯಾಪಾರ ಪದ್ಧತಿ ಇತ್ತು. ಕ್ರಮೇಣ ನಾಣ್ಯಗಳನ್ನು ವ್ಯಾಪಾರದಲ್ಲಿ ಬಳಸುವ ಪದ್ಧತಿ ಬಂತು. ೧೯೪೭ರ ಚಂದ್ರವಳ್ಳಿಯ ಉತ್ಖನನಗಳಲ್ಲಿ ಸುಮಾರು ಹತ್ತು ಗುಂಡಿಗಳಲ್ಲಿ ೩೦ ಕ್ಕೂ ಹೆಚ್ಚು ನಾಣ್ಯಗಳು ದೊರೆತಿವೆ. ಬ್ರಹ್ಮಗಿರಿಯಲ್ಲಿ ಕೃಷ್ಣರವರ ಉತ್ಖನನಗಳಲ್ಲಿ ಮಾತ್ರ ಅಸ್ಪಷ್ಟವಾದ ಒಂದೇ ಒಂದು ನಾಣ್ಯ ಸಿಕ್ಕಿದೆ.

೧೯೪೭ರ ಉತ್ಖನನಗಳಲ್ಲಿಯ ನಾಣ್ಯಗಳಲ್ಲಿ ಎರಡು ಬೆಳ್ಳಿಯವು. ಉಳಿದವು ಸೀಸದ್ದು ಮತ್ತು ತಾಮ್ರ, ಸತು, ಸೀಸ ಮತ್ತು ತವರ ಲೋಹ ಮಿಶ್ರಣದ್ದು. ಬೆಳ್ಳಿಯ ನಾಣ್ಯಗಳಲ್ಲಿ ಒಂದು ಮುದ್ರಾಂಕಿತ ನಾಣ್ಯ. ಇದು ಸುಮಾರು ೧.೩ ಸೆ.ಮೀ. ೧ ಸೆ.ಮೀ.ನ ಚೌಕೋನದ ತಗಡು ತೂಕ ೨.೬ ಗ್ರಾಂ. ಒಂದು ಮುಖವು ಬರಿದಾಗಿದೆ. ಮತ್ತೊಂದು ಮುಖದಲ್ಲಿ ಮುದ್ರಿಸಿದ ಐದು ಚಿತ್ರಗಳಿವೆ. ಅವುಗಳಲ್ಲಿ ಸೂರ್ಯ, ಕಮಲ, ಬಾಣದ ಗುರುತುಗಳಿವೆ. ಆದರೆ ಅಕ್ಷರಗಳು ಇರುವುದಿಲ್ಲ. ಈ ವಿಧದ ನಾಣ್ಯಗಳೇ ಹೀಗೆ. ಇವು ಯಾವ ಯಾವ ಬೆಲೆ ಮೌಲ್ಯಯುಳ್ಳದ್ದಾಗಿದ್ದವು ಎಂಬುದು ಗೊತ್ತಾಗಿಲ್ಲ. ಇವುಗಳ ಮೇಲೆ ಸಾಮಾನ್ಯವಾಗಿ ಐದು ಚಿಹ್ನೆಗಳು ಇರುತ್ತವೆ. ಆದರೆ ಬೇರೆ ಬೇರೆಯದಾಗಿರುತ್ತವೆ. ಕೆಲವು ಸಲ ಪಂಚ ಕೋನಾಕೃತಿಯಾಗಿರುತ್ತವೆ. ಪ್ರಯಾಶಃ ಆಕಾರ ಮತ್ತು ಆಯಾಯ ಚಿಹ್ನೆಗಳ ಆಧಾರಗಳ ಮೇಲೆ ಅವುಗಳ ಬೆಲೆಯನ್ನು ಗೊತ್ತು ಮಾಡುತ್ತಿದ್ದರೇನೊ? ಉತ್ತರ ಭಾರತದಲ್ಲಿ ಸುಮಾರು ಪ್ರ.ಶ.ಪೂ ೪ನೇ ಶತಮಾನದಿಂದ ಇವು ಬಳಕೆಯಲ್ಲಿದ್ದವು. ದಕ್ಷಿಣ ಭಾರತದಲ್ಲಿ ಪ್ರ.ಶ.ಪೂ ೪ನೇ ಶತಮಾನದಿಂದ ಪ್ರ.ಶ.೨ನೇ ಶತಮಾನದವರೆಗೆ ಚಲಾವಣೆಯಲ್ಲಿತ್ತು. ಈಗ ತಿಳಿದಮಟ್ಟಿಗೆ ಭಾರತದಲ್ಲಿ ಚಲಾವಣೆಯಲ್ಲಿದ್ದ ಅತ್ಯಂತ ಪ್ರಾಚೀನ ನಾಣ್ಯವೆಂದರೆ ಇದೇ. ಇದಕ್ಕೂ ಪೂರ್ವದಲ್ಲಿ ನಿಷ್ಕ, ಕಾರ್ಷಾಪಣ ಎಂಬ ಮುಂತಾದ ನಾಣ್ಯಗಳ ವಿನಿಮಯ ವ್ಯವಹಾರದಲ್ಲಿತ್ತೆಂದು ಗ್ರಂಥಗಳ ಉಲ್ಲೇಖಗಳಿಂದ ತಿಳಿಯುತ್ತದೆ. ಆದರೆ ಹೀಗೆಂದು ಕರೆಯಲ್ಪಟ್ಟ ಆ ಕಾಲದ ನಾಣ್ಯಗಳೇನೂ ದೊರೆತಿಲ್ಲ. ಆದುದರಿಂದ ಅವುಗಳ ವಸ್ತು ಆಕಾರ, ತೂಕ, ವೈವಿಧ್ಯತೆ, ಬೆಲೆ ಏನೂ ತಿಳಿದಿಲ್ಲ. ಕರ್ನಾಟಕದಲ್ಲಿ ಗುಲಬರ್ಗಾ ಜಿಲ್ಲೆಯ ಹೆಬ್ಬಾಳ ಎಂಬಲ್ಲಿ ಮತ್ತು ಕೊಪ್ಪಳ ಜಿಲ್ಲೆಯ ಸಿಂದೋಗಿಯಲ್ಲಿ (ಇಲ್ಲಿ ಚಂತನೆಂಬುವನ ಒಂದು ತಾಮ್ರದ ಬಿಂದಿಗೆಯಲ್ಲಿ ೫೦೦೦ ಕ್ಕೂ ಹೆಚ್ಚು ಮುದ್ರಾಂಕಿತ ನಾಣ್ಯಗಳಿದ್ದುವು) ಮತ್ತು ಹಿಂದಿನ ಹೈದರಾಬಾದ್ ಸರ್ಕಾರದ ಪುರಾತತ್ವ ಶಾಖೆಯ ಮಸ್ಕಿ ಉತ್ಖನನದಲ್ಲಿ ಮುದ್ರಾಂಕಿತ ನಾಣ್ಯಗಳು ಸಿಕ್ಕಿವೆ. ಆದರೆ ಇವು ಯಾವ ನಿರ್ಧಿಷ್ಟ ಕಾಲದಲ್ಲಿ ಈ ಭಾಗದಲ್ಲಿ ಬಳಕೆಯಲ್ಲಿತ್ತೆಂಬುದು ತಿಳಿದಿರಲಿಲ್ಲ. ಇಂಥ ನಾಣ್ಯ ವೈಜ್ಞಾನಿಕ ಉತ್ಖನನದಲ್ಲಿ ಪ್ರಥಮ ಬಾರಿಗೆ ಸಿಕ್ಕಿದ್ದು ಚಂದ್ರವಳ್ಳಿಯಲ್ಲಿಯೇ ಇದು ಇದ್ದ ಮಣ್ಣಿನ ಪದರಿನಲ್ಲಿಯ ಇತರ ಅವಶೇಷಗಳು ಸುಮಾರು ಪ್ರ.ಶ.ಪೂ ೫೦ ರಿಂದ ಪ್ರ.ಶ. ೫೦ರ ವರೆಗಿನ ಕಾಲದ್ದೆಂದು ತೋರುವುದರಿಂದ ಈ ನಾಣ್ಯದ ಚಲಾವಣೆಯ ಕಾಲವನ್ನು ನಿರ್ಧರಿಸಲು ತಕ್ಕಮಟ್ಟಿಗೆ ಸಾಧ್ಯವಾಗಿದೆ. ಉಳಿದ ನಾಣ್ಯಗಳು ಎರಡು ವಿಧವಾಗಿವೆ. ರೋಂ ದೇಶದ ಚಕ್ರವರ್ತಿಗಳ ಬೆಳ್ಳಿ ನಾಣ್ಯಗಳು. ಇವುಗಳಿಗೆ ’ದೀನರ’ವೆಂದು ಹೆಸರಿದೆ. ಎರಡನೇಯದು ಶಾತವಾಹನ ಅರಸರುಗಳದ್ದು ಮತ್ತು ಅವರ ಮಾಂಡಲೀಕರದ್ದು ಇವು ಹೆಚ್ಚಾಗಿ ಮಿಶ್ರಲೋಹದ್ದು.

೧೯೦೯ ರಿಂದ ೧೯೪೭ರವರೆಗೆ ಒಟ್ಟು ಆರು ದೀನಾರಳು ದೊರೆತಿವೆ. ಇದರಲ್ಲಿ ಒಂದು ೧೯೪೭ರ ಉತ್ಖನನದಲ್ಲಿಯ ೪೩ನೇ ಗುಂಡಿಯ ೫ನೇ ಪದರಿನಲ್ಲಿ ದೊರೆತ್ತದ್ದು. ಇದು ಟೈಬೀರಿಯಸ್ ಚಕ್ರವರ್ತಿಯ ಕಾಲದ್ದು. ಸುಮಾರು ಪ್ರ.ಶ. ೨೬-೩೭ರ ಸಮಯದಲ್ಲಿ ಅಚ್ಚು ಹಾಕಿಸದ ಈ ನಾಣ್ಯ ದುಂಡಾಗಿದ್ದು, ಸುಮಾರು ೨.೬ ಗ್ರಾಂ. ತೂಕವಿದೆ. ಇದರ ವ್ಯಾಸ ೧.೮ ಸೆ.ಮೀ. ಒಂದು ಮುಖದಲ್ಲಿ ಒಬ್ಬ ರೋಮನ್ ದೇವತೆ ಆಸೀನಳಾಗಿದ್ದಾಳೆ. ಕಾಲುಗಳನ್ನು ಕಾಲುಮಣೆಯ ಮೇಲೆ ಇರಿಸಲಾಗಿದೆ. ಎಡಗೈಯಲ್ಲಿ ಗಿಡದ ಟೊಂಗೆಯನ್ನು ಬಲಗೈಯಲ್ಲಿ ದಂಡವನ್ನು ಹಿಡಿದಿದ್ದಾಳೆ. ತೊಟ್ಟಿರುವ ವಸ್ತ್ರವು ನೆರಿಗೆ, ನೆರಿಗೆಯಾಗಿದೆ. ಅಂಚಿನಲ್ಲಿ ’ಪಾಂಟಿಫ್ ಮ್ಯಾಗ್ಸಿಮ್’ ಎಂದು ರೋಮನ್ ಅಕ್ಷರದಲ್ಲಿದೆ. ಮತ್ತೊಂದು ಮುಖದಲ್ಲಿ ಟೈಬೀರಿಯಸ್‌ನ ತಲೆಯ ಮತ್ತು ಬಲಭಾಗದಲ್ಲಿ ಕುಡಿ ಎಲೆಗಳ ಸರದ ಚಿತ್ರಗಳಿವೆ. ಬದಿಯಲ್ಲಿ ರೋಮನ್ ಅಕ್ಷರದಲ್ಲಿ ರಾಜನ ಹೆಸರಿದೆ.

ಕೃಷ್ಣರವರ ಉತ್ಖನನಗಳಲ್ಲಿ ಎರಡು ಆಗಸ್ಟ್‌ಸ್‌ ಟೈಬೀರಿಯಸ್‌ನ ಎರಡೆರಡು ನಾಣ್ಯಗಳು ಮತ್ತು ಈ ನಾಣ್ಯಗಳೊಂದರಲ್ಲಿ ಸುಟ್ಟಮಣ್ಣಿನ ಅಚ್ಚು ದೊರೆತ್ತಿದ್ದವು. ಇದುವರೆಗೂ ಇಂಥ ರೋಮನ್ ನಾಣ್ಯಗಳಿದ್ದ ಸುಮಾರು ೭೧ ಹುಂಡಿಗಳು ದಕ್ಷಿಣ ಭಾರತ ಮತ್ತು ದಖನ್ ಪ್ರಸ್ಥಭೂಮಿಯಲ್ಲಿ ಸಿಕ್ಕಿವೆ. ಕರ್ನಾಟಕದ ಯಶವಂತಪುರ ಮತ್ತು ಬೆಂಗಳೂರಿನಲ್ಲಿ ದೊರೆತ ಹುಂಡಿಗಳಲ್ಲಿ ಕ್ರಮವಾಗಿ ೧೬೩ ಮತ್ತು ೨೫೬ ರೋಮನ್ ಬೆಳ್ಳಿ ದೀನಾರಗಳಿದ್ದವು. ಇತ್ತೀಚೆಗೆ ತರೀಕೆರೆ ಹತ್ತಿರ ೨೬ ಇತರ ರೋಮನ್ ಚಕ್ರವರ್ತಿಗಳ ಚಿನ್ನದ ನಾಣ್ಯಗಳು ಸಿಕ್ಕಿವೆ. ಹೀಗೆ ಅಪರೂಪವಾಗಿ ಅಲ್ಲಲ್ಲಿ ಇವು ಸಿಗುತ್ತಲೇ ಇವೆ.

ದಕ್ಕಿಣ ಭಾರತದಲ್ಲಿ ಅಲ್ಲಲ್ಲಿ ವ್ಯಾಪಾರದ ಕೋಠಿಗಳನ್ನು ಕಟ್ಟಿಕೊಂಡು ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದ ರೋಂ ದೇಶದ ವರ್ತಕರು ಈ ನಾಣ್ಯಗಳ ಪ್ರಸರಣಕ್ಕೆ ಕಾರಣರಾದರು. ಅಂದರೆ ನಮ್ಮ ದೇಶದಲ್ಲಿ ಇವು ವ್ಯವಹಾರದಲ್ಲಿ ನಿರ್ಧೀಷ್ಟವಾದ ನಾಣ್ಯಗಳಾಗಿ ಚಲವಾಣೆಯಲ್ಲಿತ್ತೆಂದು ಅಭಿಪ್ರಾಯವಲ್ಲ. ಇವುಗಳ ಚಿನ್ನ ಹಾಗೂ ಬೆಳ್ಳಿಯ ಲೋಹಗಳಲ್ಲಿ ಮಾಡಿರುವುದರಿಂದ ಇವುಗಳಲ್ಲಿನ ಲೋಹಗಳ ಅಂಶಕ್ಕನುಗುಣವಾಗಿ ಬೆಲೆಯನ್ನು ಪಡೆದಿದ್ದವು. ಉಳಿದ ನಾಣ್ಯಗಳು ಶಾತವಾನ ಅರಸರ ಮತ್ತು ಅವರ ಮಾಂಡಲೀಕರ ಹೆಚ್ಚ ಸಿಕ್ಕವು. ೧೮ ನಾಣ್ಯಗಳ ಮೇಲೆ ಚಿಹ್ನೆಗಳ ಜೊತೆಗೆ ರಾಜರ, ಮಾಂಡಲೀಕರ ಹೆಸರುಗಳು ಬ್ರಾಹ್ಮಿಲಿಪಿಯಲ್ಲಿವೆ. ಉಳಿದವುಗಳಲ್ಲಿ ಕೇವಲ ಚಿಹ್ನೆಗಳಿವೆ.

ಸುಮಾರು ಪ್ರ.ಶ.ಪೂ. ೧ ನೇ ಶತಮಾನದ ಮಧ್ಯಭಾಗದಿಂದ ಪ್ರ. ಶ. ೨ನೇ ಶತಮಾನದವರೆಗೆ ಕರ್ನಾಟಕದ ಉತ್ತರ ಭಾಗವು ಸಾತವಾಹನ ಅರಸ ಸಾಮ್ರಾಜ್ಯಕ್ಕೆ ಸೇರಿತ್ತು. ಅವರ ರಾಜಧಾನಿ ಪ್ರತಿಷ್ಟಾನಪುರ, ಇದೇ ಈಗಿನ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಪೈಠಣ.

ಸಾತವಾಹನ ಅರಸುಗಳಲ್ಲಿ ಪ್ರಬಲರಾದ ಹಾಗೂ ಪ್ರಸಿದ್ಧರಾದ ಗೌತಮೀಪುತ್ರ ಶಾತಕರ್ಣಿ, ಇವನ ಮಗ ವಾಸಿಷ್ಠೀಪುತ್ರ ಪುಳಮಾವಿ (ಸು. ಪ್ರ. ಶ. ೧೩೦ – ೧೫೯) ಮತ್ತು ಇವನ ನಂತರ ಕೆಲವು ಕಾಲದ ಮೇಲೆ ಪಟ್ಟಕ್ಕೆ ಬಂದ ಯಜ್ಞಶ್ರೀ ಸಾತಕರ್ಣಿ (ಸು. ೧೭೪ -೨೦೩) ಇವರ ನಾಣ್ಯಗಳು ಹಾಗೂ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದಲ್ಲಿ ಸಾತವಾಹನ ಅರಸರ ಮಾಂಡಲೀಕರಾಗಿದ್ದ ಸದಕಣ ಚಟಕಣ್ಹ ಮಹಾರಠಿ, ಇವನ ಮಗ ಸದಕಣ ಕಣಸ ಮಹಾರಠಿ, ಸದಕಣ ಚಟಕಣ್ಹ ಮಹಾರಠಿ ಇವರ ನಾಣ್ಯಗಳು ಚಂದ್ರವಳ್ಳಿಯಲ್ಲಿ ದೊರೆತ ನಾಣ್ಯಗಳಲ್ಲಿ ಇವೆ. ಈ ಮಾಂಡಲೀಕರು ಯಾವ ಅರಸರಿಗೆ ಮಾಂಡಲೀಕರಾಗಿದ್ದರೆಂಬುದು ತಿಳಿದಿಲ್ಲ.

ಉತ್ಖನನಗಳಲ್ಲಿ ಮೇಲೆ ಹೇಳಿದ ಸಾತವಾಹನ ಅರಸರುಗಳ ನಾಣ್ಯಗಳು ೪೩ನೇ ಗುಂಡಿಯ ಮೇಲ್ಭಾಗದ ೫, ೭ನೇ ಪದರುಗಳಲ್ಲಿ ದೊರೆತವು. ಇವರ ಮಾಂಡಲೀಕರ ನಾಣ್ಯಗಳು ಈ ಪದರುಗಳ ಕೆಳಭಾಗದಲ್ಲಿ ೭, ೮, ೯ ಮತ್ತು ೧೦ನೇ ಪದರುಗಳಲ್ಲಿ ದೊರೆತವು. ಇದರಿಂದ ಮಾಂಡಲೀಕರು ಯಜ್ಞಶ್ರೀ ಸಾತಕರ್ಣಿ ಮತ್ತು ವಾಸಿಷ್ಠಿಪುತ್ರ ಪುಳುಮಾವಿಗಿಂತ ಹಿಂದಿನವರೆಂದು ತೋರುವುದು. ಈ ನಾಣ್ಯಗಳಲ್ಲಿಯ ಅಕ್ಷರಗಳನ್ನು ಪರೀಕ್ಷಿಸಿದಾಗ ಮಾಂಡಲೀಕರ ನಾಣ್ಯಗಳಲ್ಲಿರುವ ಅಕ್ಷರಗಳು ಹೆಚ್ಚು ಹಳೆಯದಾಗಿ ಕಾಣುತ್ತವೆ. ಈ ರೀತಿ ಪ್ರಥಮ ಬಾರಿಗೆ ಕೆಲವು ಶಾತವಾಹನ ಮುಖ್ಯ ಅರಸರ ಮತ್ತು ಮಾಂಡಲೀಕರ ಕಾಲಾನುಕ್ರಮವು ಉತ್ಖನನಗಳಿಂದ ತಿಳಿಯಿತು. ಮತ್ತು ಸದಕಣ ಚಣಕಣ್ಹ ಮಹಾರಠಿ ಮತ್ತು ಸದಕಣ ಕಣಸ ಮಹಾರಠಿ ಪುತಸ ಎಂಬ ಮಾಂಡಲೀಕರ ಹೆಸರುಗಳು ಪ್ರಥಮ ಬಾರಿಗೆ ಇಲ್ಲಿ ಬೆಳಕಿಗೆ ಬಂತು.

೪೫ನೇ ಗುಂಡಿಯಲ್ಲಿ ದೊರೆತ ವಾಸಿಷ್ಠೀಪುತ್ರ ಶ್ರೀಪುಳುಮಾವಿ ನಾಣ್ಯವು ದುಂಡಾಗಿ ೧.೫ ಸೆ. ಮೀ. ವ್ಯಾಸವುಳ್ಳದ್ದಾಗಿದೆ. ತೂಕ ೧.೬ ಗ್ರಾ. ಒಂದು ಮುಖದಲ್ಲಿ ಆನೆಯ ಚಿತ್ರ ಮತ್ತು ಅರಸನ ಹೆಸರು ಮತ್ತೊಂದು ಮುಖದಲ್ಲಿ ’ಉಜ್ಜಿಯಿನಿ’ ಚಿಹ್ನೆ ಇವೆ.

ಯಜ್ಞಶ್ರೀ ಶಾತಕರ್ಣಿಯ ಎರಡು ನಾಣ್ಯಗಳು ೪೩ನೇ ಗುಂಡಿಯ ೫, ೬ನೇ ಪದರುಗಳಲ್ಲಿ ದೊರೆತವು. ಇವುಗಳ ವ್ಯಾಸ ೧.೮ ಸೆ. ಮೀ. ಒಂದರ ತೂಕ ೩ ಗ್ರಾಂ. ಮತ್ತೊಂದರದ್ದು ೨.೫ ಗ್ರಾಂ. ಪುಳಮಾವಿಯ ನಾಣ್ಯದಲ್ಲಿರುವ ಚಿಹ್ನೆಗಳೇ ಇವುಗಳಲ್ಲಿವೆ. ಜೊತೆಗೆ ಯಜ್ಞಶ್ರೀ ಶಾತಕರ್ಣಿಯ ಹೆಸರಿದೆ.

ಸದಕಣ ಕಳಲಾಯ ಮಹಾರಠೀಯ ೧೦ ದುಂಡು ನಾಣ್ಯಗಳು ೪೩ನೇ ಗುಂಡಿಯ ೭-೧೦ ಪದರುಗಳಲ್ಲಿ ಕಂಡು ಬಂತು. ಇವು ಎರಡು ವಿಧವಾಗಿವೆ. ಮೊದಲನೇಯದು ಸುಮಾರು ೨.೫ ಅಥವಾ ೨.೬ ವ್ಯಾಸವಿರುತ್ತದೆ. ತೂಕ ಹೆಚ್ಚು ಕಡಿಮೆಯಿದ್ದು ೪.೯ ಗ್ರಾಮ್‌ನಿಂದ ಹಿಡಿದು ೧೨.೯ ಗ್ರಾಮ್ಸ್‌ತನಕವಿರುತ್ತದೆ. ಒಂದು ಮುಖದಲ್ಲಿ ಬೇಲಿಯಿಂದ ಸುತ್ತುವರೆಯಲ್ಪಟ್ಟ ಮರದ, ಗುಡ್ಡದ ಮತ್ತು ಅದರ ಮೇಲೆ ಬಿದಿಗೆ ಚಂದ್ರನಾಕೃತಿಯು, ನದಿಯನ್ನು ಸಂಕೇತವಾಗಿ ತೋರಿಸುವ ಗೆರೆಯ ಚಿಹ್ನೆಗಳಿರುತ್ತವೆ. ಇನ್ನೊಂದು ಮುಖದಲ್ಲಿ ಇಣಿಯುಳ್ಳು ನಂದಿಯ ಉಬ್ಬು ಚಿತ್ರವಿದ್ದು ಅದರ ಸುತ್ತಲೂ ಬ್ರಾಹ್ಮಿ ಲಿಪಿಯಲ್ಲಿ ’ಸದಕಣ ಕಳಲಾಯ ಮಹಾರಠಿಸ’ ಎಂದು ಮೂಡಿಸಿದೆ.

ಮತ್ತೊಂದು ವಿಧದ ನಾಣ್ಯದ ವ್ಯಾಸ ೨.೬ ಸೆ. ಮೀ. ೧೬.೩೫ ಗ್ರಾಮ್ಸ್‌ ತೂಕವಿದೆ. ಒಂದು ಮುಖದಲ್ಲಿ ಬಿದಿಗೆ ಚಂದ್ರ ಮತ್ತು ಗುಡ್ಡ ಇದರ ಕೆಳಗೆ ನದಿಯನ್ನು ತೋರಿಸುವ ಅಂಕುಡೊಂಕಿನ ಗೆರೆ, ಎಡಬದಿಯಲ್ಲಿ ತ್ರಿಕೋನಾಕೃತಿ, ಜೋಡಿ ಮೀನು, ಬಲಬದಿಯಲ್ಲಿ ನಂದಿಪಾದ, ಹಾಗೂ ಚಿಹ್ನೆಗಳು, ಬುಡದಲ್ಲಿ ಶ್ರೀವತ್ಸ ಮತ್ತು ಸ್ವಸ್ತಿಕ ಚಿಹ್ನೆಗಳಿವೆ. ಇನ್ನೊಂದು ಮುಖ ಮೊದಲನೆ ವಿಧದ ನಾಣ್ಯದ ಹಾಗೆ ಈ ವಿಧವಾದ ನಾಣ್ಯ ಮೊದಲನೇಯ ಸಲಕ್ಕೆ ಈ ಉತ್ಖನನದಿಂದಲೆ ತಿಳಿದದ್ದು.

೬, ೭ನೇ ಪದರುಗಳಲ್ಲಿ ದೊರೆತ ’ಸದಕಣ ಚುಟುಕಣ್ಹ ಮಹಾರಠಿ’ಯ, ’ಸದಕಣ ಕಣಸ ಮಹಾರಠಿ ಪುತ’ ನ ಮತ್ತು ’ಚುಟು ಕಳಾನಂದ’ ನ ನಾಣ್ಯಗಳು ಸ್ವಲ್ಪ ಹೆಚ್ಚು ಕಡಿಮೆ ಹೀಗೆ ಇವೆ.

ರಾಜರ ಅಥವಾ ಮಾಂಡಲೀಕರ ಹೆಸರಿಲ್ಲದ ಕೇವಲ ಚಿಹ್ನೆಗಳುಳ್ಳ ನಾಣ್ಯಗಳನ್ನು ಏಳು ವರ್ಗಗಳನ್ನಾಗಿ ವಿಂಗಡಿಸಬಹುದು. ಇವು ಸಾಮಾನ್ಯವಾಗಿ ಆಕಾರದಲ್ಲಿ ಚಿಕ್ಕದಾಗಿರುತ್ತದೆ. ೧.೨ ಸೆ. ಮೀ. ತನಕ ವ್ಯಾಸವುಳ್ಳದ್ದಾಗಿ ೦.೯ ಗ್ರಾಂ. ನಿಂದ ಹಿಡಿದು ೫.೩ ಗ್ರಾಂ. ತನಕ ತೂಕವಿರುತ್ತದೆ. ಒಂದು ಮುಖದಲ್ಲಿ ನಂದಿಪಾದ ಮತ್ತೊಂದು ಮುಖದಲ್ಲಿ ಶ್ರೀವತ್ಸ ಅಥವಾ ನಂದಿಪಾದ, ಗುಡ್ಡದ ಜೊತೆಗೆ ನದಿಯನ್ನು ಸೂಚಿಸುವ ಗೆರೆ ಅಥವಾ ಗುಡ್ಡ, ಶ್ರೀವತ್ಸ ಅಥವಾ ಇಣಿಯುಳ್ಳ ನಂದಿ, ಗುಡ್ಡ ಜೊತೆಗೆ ಬಿದಿಗೆ ಚಂದ್ರ, ಸ್ವಸ್ತಿಕ, ತ್ರೀಕೋನ ಅಥವಾ ಬೇಲಿಯೊಳಗಿನ ವೃಕ್ಷ ಮುಂತಾದ ಚಿಹ್ನೆಗಳಿರುತ್ತವೆ. ಹೀಗೆ ಈ ಕಾಲದ ಜನರು ನಾಣ್ಯಗಳು ವೈವಿಧ್ಯಮಯವಾಗಿದ್ದವು.

ವಾಣಿಜ್ಯ ವ್ಯವಹಾರ

ಈ ಜನರು ಪರದೇಶಗಳೊಡನೆ ಭರದಿಂದ ವ್ಯಾಪಾರ ನಡೆಸುವ ವ್ಯವಹಾರ ಕುಶಲರಾಗಿದ್ದರು. ಪರದೇಶಿಯವರ ವಸ್ತುಗಳ ವೈಶಿಷ್ಟ್ಯವನ್ನು ತಮ್ಮ ವಸ್ತುಗಳ ನಿರ್ಮಾಣದಲ್ಲಿ ಅಳವಡಿಸಿಕೊಳ್ಳುವಂಥಹ ಚತುರರಾಗಿದ್ದರು, ಇದನ್ನು ನಾವು ರೋಮ್ ದೇಶದ ರೌಲಟ್‌ ವಿಧಾನದಿಂದ ಇವರು ತಮ್ಮ ಮಣ್ಣಿನ ಪಾತ್ರೆಗಳ ಮೇಲೆ ಹೇಗೆ ಚಿತ್ರವನ್ನು ತೆಗೆಯುತ್ತಿದ್ದರೆಂಬುದನ್ನು ಮತ್ತು ಈ ದೇಶದ ’ಆಂಪೋರಾ’ ತರಹದ ಉತ್ತಮ ತರಗತಿಯ ಮೃತ ಪಾತ್ರೆಗಳನ್ನು ಮಾಡಿದ್ದನ್ನು ಆಗಲೇ ಗಮನಿಸಲಾಗಿದೆ. ವ್ಯಾಪಾರದಲ್ಲಿ ಪರದೇಶಿಯವರಿಂದ ಚಿನ್ನ ಬೆಳ್ಳಿಯ ನಾಣ್ಯಗಳನ್ನು ಪಡೆದು ತಮ್ಮ ಸಂಪತ್ತನ್ನು ವೃದ್ಧಿಪಡಿಸುವ ಚಾಣಾಕ್ಷರಾಗಿದ್ದರು.

ಲಿಪಿ ಮತ್ತು ಭಾಷೆ

ಈ ಕಾಲದ ಮತ್ತೊಂದು ಮುಖ್ಯವಾದ ವೈಶಿಷ್ಟ್ಯವೆಂದರೆ ಲಿಪಿಯ ಬಳಕೆ. ಬ್ರಹ್ಮಗಿರಿ, ಸಿದ್ದಾಪುರ, ಜಟಂಗಿ ರಾಮೇಶ್ವರಗಳಲ್ಲಿರುವ ಅಶೋಕನ ಕಿರುಬಂಡೆ ಶಾಸನ, ಚಂದ್ರವಳ್ಳಿ ಶಾಸನ ಮತ್ತು ಸಾತವಾಹನ ಅರಸರ ಕಾಲದ ನಾಣ್ಯಗಳಿಂದ ತಿಳಿಯುತ್ತದೆ. ಇವುಗಳಲ್ಲಿರುವ ಅಕ್ಷರಗಳು ಬ್ರಾಹ್ಮಿ ಲಿಪಿಯಲ್ಲಿದೆ. ಭಾಷೆ ಪ್ರಾಕೃತ. ಪ್ರ.ಶ. ೨ನೇ ಶತಮಾನದ ನಾಣ್ಯಗಳಲ್ಲಿ ಪ್ರ.ಶ.ಪೂ ೩ನೇ ಶತಮಾನದಿಂದ ಕ್ರಮೇಣ ಆಗಿರುವ ಅಕ್ಷರಗಳ ವಿಕಸನವನ್ನೂ ಗುರುತಿಸಬಹುದು. ಕಾಲಾಂತರದಲ್ಲಿ ಲಿಪಿಯ ಬಳಕೆ ನಿರಂತರವಾಗಿ ಇದ್ದುದರಿಂದ ಹೀಗೆ ವಿಕಾಸ ಹೊಂದಲು ಸಾಧ್ಯವಾಯಿತು. ಆಗ ಈ ಭಾಗದಲ್ಲಿ ಆಡಳಿತ ಅಧಿಕೃತ ಭಾಷೆ ಪ್ರಾಕೃತವಾಗಿತ್ತು. ಮೇಲೆ ಹೇಳಿದ ಶಾಸನ, ನಾಣ್ಯಗಳ ಮೇಲಿದ್ದ ರಾಜರ ಮಾಂಡಲೀಕರ ಹೆಸರುಗಳ ವಿಭಕ್ತಿ ಪ್ರತ್ಯಯಗಳು ಪ್ರಾಕೃತದಲ್ಲಿವೆ. ಪ್ರಾಕೃತ ಜನಸಾಮಾನ್ಯರು ಆಡುತ್ತಿದ್ದ ಭಾಷೆಯಾಗಿಯೂ ಆಗಿದ್ದಿತ್ತೆಂದು ಕಾಣುತ್ತದೆ. ಬ್ರಹ್ಮಗಿರಿಯ ಶಾಸನದಲ್ಲಿ ಉಲ್ಲೇಖವಾದ ’ಇಸಿಲ’ ಎಂಬ ನಾಮಪದವು ಸಂಸ್ಕೃತ ಅಥವಾ ಪ್ರಾಕೃತ ಪ್ರಾಯಶಃ ಇದು ದ್ರಾವಿಡ ಭಾಷೆಯದಿರಬಹುದು ಮತ್ತು ಪ್ರಾಯಶಃ ಕನ್ನಡ ಪದವಾಗಿರಬಹುದು ಎಂದು ಪಂಡಿತರು ಶಂಕಿಸುತ್ತಾರೆ, ಆದರೆ ಒಂದು ಸಂದರ್ಭದಲ್ಲಿ ಸಂಸ್ಕೃತ ಪದ ಈಶ್ವರ ಇಸಿಲ ಆಗಿರಬಹುದೆಂಬ ನನ್ನ ಅನುಮಾನವನ್ನು ಒಂದು ಲೇಖನದಲ್ಲಿ ಚರ್ಚಿಸಿದ್ದೇನೆ. ಈ ದಿಶೆಯಲ್ಲಿ ಹೆಚ್ಚಿನ ಆಧಾರಗಳು ದೊರೆತು ಸಂಶೋಧನೆಯಾಗಬೇಕಾಗಿದೆ. ಸುಮಾರು ೩ನೇ ಶತಮಾನದಿಂದ ಪ್ರಾಕೃತ ಭಾಷೆ ಹಿಂದೆ ಸರಿದಂತೆ ಕಾಣುತ್ತದೆ ಬದಲಾಗಿ ಸಂಸ್ಕೃತ ಮತ್ತೆ ಹೆಚ್ಚು ಬಳಕೆಯಲ್ಲಿ ಬಂದಂತೆ ಕಾಣುತ್ತದೆ. ಚಂದ್ರವಳ್ಳಿಯ ಮಯೂರವರ್ಮನ ಸಂಸ್ಕೃತ ಶಾಸನ ಇದನ್ನು ಸೂಚಿಸುವಂತೆ ಕಾಣುತ್ತದೆ.

ಈ ಬ್ರಾಹ್ಮೀ ಲಿಪಿಯಲ್ಲದೆ ಖರೋಷ್ಠಿ ಎಂಬ ಮತ್ತೊಂದು ಲಿಪಿಯೂ ಸ್ವಲ್ಪ ನಟ್ಟಿಗೆ ಈ ಭಾಗದ ಕೆಲವರಿಗೆ ತಿಳಿದಿರಬೇಕು. ಏಕೆಂದರೆ ಬ್ರಹ್ಮಗಿರಿಯ ಶಾಸನದಲ್ಲಿಯ ’ಲಿಪಿಕರೇಣ’ ಎಂಬ ಕೊನೆಯ ಪದವು ಈ ಲಿಪಿಯಲ್ಲಿದೆ. ಬ್ರಹ್ಮಗಿರಿಯ ಶಾಸನವನ್ನು ಬರೆದವನ ಹೆಸರು ’ಚಪಡ’ ಅವನು ತನ್ನನ್ನು ಲಿಪಿಕಾರನೆಂದು ಶಾಸನದಲ್ಲಿ ಹೇಳಿಕೊಂಡಿದ್ದಾನೆ. ಇದರಂತೆಯೆ ಚಂದ್ರವಳ್ಳಿಯ ಶಾಸನವನ್ನು ಬರೆದವನು ಚಾಮ. ಇವೆರಡೂ ಹೆಸರುಗಳು ಅಪರೂಪದ್ದೆ ಸರಿ. ಸಂಸ್ಕೃತದಲ್ಲಿ ಚಪಟ ಎಂಬ ಪದವೇನೋ ಇದೆ. ಇದರ ಅರ್ಥ ವ್ಯಾಖ್ಯಾನಕಾರ ಎಂದು. ಪ್ರಾಕೃತ ಭಾಷೆಯಲ್ಲಿ ಚಪಡ ಆಗಬಹುದು. ಆದರೆ ಚಾಮ ಸಂಸ್ಕೃತ ಪದವಾಗಿ ಕಾಣುವುದಿಲ್ಲ. ಮೊದಲು ಇವೆರಡು ಹೆಸರುಗಳು ಯಾವ ಭಾಷೆಯವು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಇವೆಲ್ಲ ಹೇಗೆ ಇರಲಿ ಲಿಪಿಕಾರನೆಂಬ ಪ್ರತ್ಯೇಕ ವೃತ್ತಿಯವರು ಇರುತ್ತಿದ್ದರೆಂಬುದು ಸ್ಪಷ್ಟ.

ಕಲೆ ಮತ್ತು ಧರ್ಮ

ಉತ್ಖನನದಲ್ಲಿ ಈ ಕಾಲದ ನಗರ ಸಂಸ್ಕೃತಿಯ ಜನರ ಕಲಾ ದೃಷ್ಟಿ ಮತ್ತು ಕುಶಲತೆಯನ್ನು ಬಿಂಬಿಸುವ ಆಕರಗಳು ಪ್ರಮಾಣದಲ್ಲೂ ದೊರೆತಿಲ್ಲ. ಆದರೂ ರೇಖಾಚಿತ್ರ, ಬ್ರಹ್ಮಗಿರಿ, ಜಟಂಗಿ ರಾಮೇಶ್ವರ, ಚಂದ್ರವಳ್ಳಿ ಮತ್ತು ಚಿತ್ರದುರ್ಗದಲ್ಲಿ ಕ್ರಮವಾಗಿ ಕಗ್ಗಲ್ಲುಗಳ ಮೇಲೆ ಅಲ್ಲಲ್ಲಿ ಬುಹುರ್ಶ ಸೂಕ್ಷ್ಮ ಶಿಲಾಯುವಗ ಇಲ್ಲವೆ ನೂತನ ಶಿಲಾಯುಗ ಸಂಸ್ಕೃತಿಯ ಆನೆ, ಜಿಂಕೆ, ಹುಲಿ ಮತ್ತು ಕಾಡುಕೋಣ ಹಾಗೂ ಜಿಂಕೆಯ ಗೀರು ರೇಖಾಚಿತ್ರಗಳು; ಉತ್ಖನನದಲ್ಲಿ ದೊರೆತ ಸುಡಾವೆ ಮಣ್ಣಿನ ಪ್ರಾಯಶಃ ಭಿತ್ತಿ ಫಲಕದ ಮೇಲಿನ ಆನೆಗಳ ಸಾಲಿನ ಚಿತ್ರ, ಹಾಗೂ ನಾಣ್ಯಗಳ ಮೇಲಿನ ಆನೆ, ಗೂಳಿ ಫಲಕದ ಮೇಲಿನ ಆನೆಗಳ ಸಾಲಿನ ಚಿತ್ರ, ಹಾಗೂ ನಾಣ್ಯಗಳ ಮೇಲಿನ ಆನೆ, ಗೂಳಿ, ಬೇಲಿಯೊಳಗಿನ ವೃಕ್ಷ, ಗುಡ್ಡ, ನದಿ ಮುಂತಾದ ಚಿತ್ರಗಳಲ್ಲಿ ಸರಳತೆ, ನೈಜತೆ ನಿಸರ್ಗ ಸೌಂದರ್ಯದ ಸೂಕ್ಷ್ಮ ಗ್ರಹಿಕೆ, ಪರಿಣಾಮಕಾರಿಯಾದ ಸಹಜ ಶೈಲಿ ಹಾಗೂ ಧಾರ್ಮಿಕ ಸಂಕೇತ ಮೆಚ್ಚುವಂಥ ಮುಖ್ಯ ಲಕ್ಷಣಗಳಾಗಿವೆ. ಹಿನ್ನೆಲೆಯಾಗಿ ಒಂದು ಕಲಾ ಪರಂಪರೆಯಿತ್ತೆಂದು ತೋರುವುದು. ಬ್ರಹ್ಮಗಿರಿಯಲ್ಲಿಯ ಗಜಪೃಷ್ಟಾಕೃತಿಯ ಇಟ್ಟಿಗೆ ಕಟ್ಟಡ ವಿಶಿಷ್ಟವಾದುದು.

ಈ ಕಾಲದ ಧಾರ್ಮಿಕ ಪಂಥಗಳಿಗೆ ಸಂಬಂಧಿಸಿದ ವಸ್ತು ಅವಶೇಷಗಳು ಉತ್ಖನನದಲ್ಲಿ ದೊರೆತಿಲ್ಲ. ಆದರೂ ಬೌದ್ಧ, ಜೈನ ಹಾಗೂ ವೈಧಿಕ ಧರ್ಮಗಳಿಗೆ ಹೆಚ್ಚು ಪ್ರಾಶಸ್ತ್ಯವಿತ್ತೆಂದು ಬೇರೆ ಬೇರೆ ಆಕರಗಳಿಂದ ಹೇಳಬಹುದು. ಬ್ರಹ್ಮಗಿರಿಯ ಶಾಸನದಲ್ಲಿ ಹೇಳಿದ ಹಾಗೆ ಮೌರ್ಯ ಚಕ್ರವರ್ತಿ ಅಶೋಕನ ಪ್ರಯತ್ನ ಫಲದಿಂದ ಈ ಭಾಗದಲ್ಲೂ ಬೌದ್ಧ ಧರ್ಮ ಆಚರಣೆಯ ಇಲ್ಲಿದ್ದರಬೇಕು. ನಾಣ್ಯಗಳಲ್ಲಿ ತೋರಿಸಿದ ಬೇಲಿಯೊಳಗಿನ ವೃಕ್ಷ ಉತ್ತರ ಭಾರತ ಬೌದ್ಧ ಧರ್ಮದ ನಿರ್ಮಿತಿಗಳ ಶಿಲ್ಪಕಲೆಯಲ್ಲಿ ವಿಶೇಷವಾಗಿದೆ. ಜೋಡಿ ಮೀನು, ಶ್ರೀವತ್ಸ ಚಿಹ್ನೆಗಳು ಜೈನಧರ್ಮದ ಅಷ್ಟಮಂಗಳ ಚಿಹ್ನೆಗಳಲ್ಲಿವೆ. ಇವು ಹಾಗೂ ಸ್ವಸ್ತಿಕ ಮುಂತಾದವುಗಳು ವೈದಿಕ ಧರ್ಮದ ಶುಭಸಂಕೇತಗಳೂ ಹೌದು. ಗೌತಮಿಪುತ್ರ ಸಾತಕರ್ಣಿ ಮುಂತಾದ ಅರಸರ ಬೇರೆ ಕಡೆಯ ಶಾಸನಗಳಿಂದ ಇವರು ವೈದಿಕಧರ್ಮ ಮತಾವಲಂಬಿಯಾಗಿದ್ದರೆಂದು ತಿಳಿಯಬಹುದು. ಬ್ರಹ್ಮಗಿರಿಯ ಗಜಪೃಷ್ಠಾಕಾರದ ಕಟ್ಟಡ ಮತ್ತು ಸನ್ನಿವೇಶವನ್ನು ನೋಡಿದರೆ ಅದು ಒಂದು ಧಾರ್ಮಿಕ ಕಟ್ಟಡವೇ ಆಗಿರಬೇಕು.

ಕರ್ನಾಟಕ ಸಂಸ್ಕೃತಿಯ ಬೆಳವಣಿಗೆ

ಲಿಪಿಯ ಬಳಕೆಯಿಂದ ಜ್ಞಾನಪ್ರಸಾರವು, ಕಬ್ಬಿಣದ ಉಪಯೋಗದಿಂದ ಬೇಸಾಯ ಕ್ರಮದಲ್ಲಿ ಹೆಚ್ಚು ಹೆಚ್ಚು ಸುಧಾರಣೆಯೂ ಮತ್ತು ಸಮೃದ್ಧ ಬೆಳೆ, ವ್ಯಾಪಾರದಿಂದ ಹೆಚ್ಚು ಸಂಪತ್ತು ಉಂಟಾಗಿ ಸಮಾಜವು ವಿಶೇಷ ಪ್ರಗತಿಯನ್ನು ಸಾಧಿಸಿತು.

ಮೌರ್ಯ ಸಾಮ್ರಾಜ್ಯದಲ್ಲಿ ಈ ಪ್ರದೇಶವು ಸೇರಿದ್ದರಿಂದ ಇಲ್ಲಿಯ ಜನರು ರಾಜಕೀಯ ವ್ಯವಸ್ಥೆಯಲ್ಲಿಯೂ. ಜ್ಞಾನವನ್ನು ಕುಶಲತೆಯನ್ನು ಪಡೆದರು. ಸುಮಾರು ಪ್ರ.ಶ.ಪೂ. ೩ನೇ ಶತಮಾನ ಪ್ರ.ಶ. ೩ನೇ ಶತಮಾನದ ಅಂತರದಲ್ಲಿ ತಮ್ಮದೇ ಆದ ಒಂದು ಸಾಂಸ್ಕೃತಿಕ ವ್ಯಕ್ತಿತ್ವದ ಬೆಳವಣಿಗೆಗೆ ಮತ್ತು ಪೋಷಣೆಗೆ ಬೇಕಾದ ಮುಖ್ಯ ಘಟಕಗಳಾದ ಲಿಪಿ ಬಳಕೆಯಿಂದ ಕೃಷಿ ಅಭಿವೃದ್ಧಿ, ವಾಸ್ತುಶಿಲ್ಪ ನಿರ್ಮಾಣ ಕುಶಲತೆಯನ್ನು ಕ್ರಮೇಣವಾಗಿ ಸಂಪಾದಿಸಿದ್ದರು. ಇನ್ನು ಒಂದು ಅತಿ ಮುಖ್ಯವಾದ ಘಟಕದ ಅವಶ್ಯಕತೆಯಿತ್ತು. ಒಂದು ಪ್ರದೇಶದ ಏಳಿಗೆಗೆ ಇವೆಲ್ಲವೂ ಒಂದಕ್ಕೊಂದು ಪೂರಕವಾಗಿ ಬೆಳೆಯಲು ಬೇಕಾದ ರಾಜಕೀಯ ಭದ್ರತೆ, ನಾಯಕತ್ವ ಮತ್ತು ಆಶ್ರಯ ಕರ್ನಾಟಕಕ್ಕೆ ಇದನ್ನು ಪ್ರಪ್ರಥಮವಾಗಿ ಸಾಧಿಸಿಕೊಟ್ಟ ಕೀರ್ತಿ ಕದಂಬ-ಗಂಗ ಸಾಮ್ರಾಜ್ಯ ಸ್ಥಾಪಕರಾದ ಮಯೂರವರ್ಮ (ಶರ್ಮ) ಮತ್ತು ಕೊಂಗುಣಿವರ್ಮ ಹಾಗೂ ದಡಿಗ-ಮಾಧವ ಇವರಿಗೆ ಸಲ್ಲುತ್ತದೆ. ಕರ್ನಾಟಕದಲ್ಲಿ ನೂತನ ಶಿಲಾಯುಗದಿಂದ ಮಾನವನು ಕ್ರಮೇಣ ಸತತವಾಗಿ ಪ್ರಯತ್ನಪಟ್ಟು ನಾಗರೀಕತೆಯ ಹಂತವನ್ನು ತಲುಪಿ, ಇತಿಹಾಸಕಾಲದ ಮಹಾಸಾಮ್ರಾಜ್ಯಗಳ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದ ನೈಜಕಥೆ ಪ್ರಪ್ರಥಮವಾಗಿ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿಯ ಪುರಾತತ್ವ ಶೋಧನೆಗಳಿಂದ ತಿಳಿಯಲು ಸಾಧ್ಯವಾಗಿದೆ. ಆದುದರಿಂದ ಈ ಐತಿಹಾಸಿಕ ಸ್ಥಳಗಳಿಗೆ ಕರ್ನಾಟಕದಲ್ಲಿಯ ಪುರಾತತ್ವ ಶೋಧನೆಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವಿದೆ.

ಸಂಕ್ಷೇಪ

ಸು.ಪ್ರ.ಶ.ಪೂ : ಸುಮಾರು ಪ್ರಸಕ್ತ ಶತಮಾನ ಪೂರ್ವ

ಸು.ಪ್ರ.ಶ.  : ಸುಮಾರು ಪ್ರಸಕ್ತ ಶತಮಾನ

ಸು.ಪ್ರ.ಪೂ  : ಸುಮಾರು ಪ್ರಸಕ್ತ ಪೂರ್ವ

ಪ್ರ.ಶ. : ಪ್ರಸಕ್ತ ಶತಮಾನ