ಶಿಲಾಯುಗದ ಜನರು ನಿಂತಲ್ಲೇ ನಿಲ್ಲದೆ ಅಲೆಮಾರಿಗಳಾಗಿ ತಿರುಗುತ್ತಿದ್ದು, ಕಾಲಕ್ರಮೇಣ ಗುಡ್ಡಗಳ ಆಸರೆಗಳಲ್ಲಿ, ಗವಿಗಳಲ್ಲಿ ಚಾಚು ಬಂಡೆಗಳ ಕೆಳಗೋ ವಾಸಿಸಲಾರಂಭಿಸಿದರು. ಜೀವನ ವಿಧಾನ ಸುಧಾರಿಸಿಕೊಂಡು ಕಲೆಯ ಕಡೆ ಗಮನ ಹರಿಸಿರಬಹುದು. ನಂತರ ಮಾನವನು ತನ್ನಲ್ಲಿ ಸೂಕ್ತವಾಗಿ ಅಡಗಿದ್ದ ಚಿತ್ರಕಲೆಯನ್ನು ಸ್ವಾಭಾವಿಕವಾಗಿ ಲಭ್ಯವಾಗುತ್ತಿದ್ದ ಗಿಡಮೂಲಿಕೆಗಳಿಂದ, ಇತರೆ ಮೂಲಗಳಿಂದ ಬಣ್ಣಗಳನ್ನು ತಯಾರಿಸಿಕೊಂಡು ತನ್ನ ವಾಸದ ನೆಲೆಯ ಸುತ್ತಮುತ್ತ ಚಿತ್ರಕಲೆ ಮೂಡಿಸಿರುವುದು ಕಂಡುಬರುತ್ತದೆ. ಇದಕ್ಕೆ ಸೂಕ್ತ ಉದಾ: ಬಿಂಬೆಟ್ಕಾದ ಗುಹೆಗಳು ನಂತರ ನವಶಿಲಾಯುಗ, ಬೃಹತ್ ಶಿಲಾಯುಗ ಸಂಸ್ಕೃತಿಗಳ ಕಾಲಗಳಲ್ಲೂ ಈ ಚಿತ್ರಕಲೆ ಮುಂದುವರಿದುಕೊಂಡು ಬಂದು ವಿವಿಧ ರೀತಿಯ ಸ್ವರೂಪದಲ್ಲಿ ಸಹಜ ಭಾವನಾತ್ಮಕ ಮತ್ತು ಭದ್ರಬುನಾದಿಯಾದವು.

ಪ್ರಾಗೈತಿಹಾಸಿಕ ಹಾಗೂ ಇತಿಹಾಸ ಕಾಲದಲ್ಲಿ ವಿಶಾಲವಾಗಿ ಹರಡಿದ ಬೆಟ್ಟಗಳ ನಾನಾ ಕಡೆಗಳಲ್ಲಿ ಈ ಚಿತ್ರಗಳು ಸಾಮಾನ್ಯವಾಗಿ ಗವಿಯೊಳಗಿನ ಬಂಡೆಗಳ ಮೇಲೆ, ಸಹಜವಾಗಿಯೇ ಬೆಳಕು ಕಡಿಮೆ. ಅಷ್ಟೇನೂ ಸುಲಭವಾಗಿ ಪ್ರವೇಶಿಸಲಾಗದಂತಹ ತೀರ ದುರ್ಗಮಯವಾದ ಪ್ರದೇಶದಲ್ಲಿ ಕುಟ್ಟು, ಗೀರು ರೇಖಾಚಿತ್ರ, ವರ್ಣಚಿತ್ರ, ಬಯಲು ಬಂಡೆ ರೇಖಾಚಿತ್ರಗಳು ಜೊತೆಗೆ ಮೃತ್ತಾತ್ರೆಗಳ ಮೇಲಿನ ವೈವಿಧ್ಯಮಯ ವರ್ಣಚಿತ್ರಗಳು ಗುಹೆ, ಕಲ್ಲಾಸರೆ, ಬಯಲು ಬಂಡೆಗಳ ಮೇಲೆ, ವಾಸಿಸುವ ಸ್ಥಳಗಳಲ್ಲಿ ಕಂಡುಬರುತ್ತಿವೆ. ಮನುಷ್ಯ, ಪ್ರಾಣಿ, ನೈಸರ್ಗಿಕ ವಿಚಿತ್ರವಾದ ರೇಖಾಚಿತ್ರಗಳು ಹಾಗೂ ಇನ್ನಿತರೆ ಚಿತ್ರಗಳು ಕಂಡು ಬರುತ್ತಿವೆ. ಕೆಲವು ಗುಹೆಗಳಲ್ಲಿ ಸಮೂಹ ನೃತ್ಯ, ಪ್ರಾಣಿಗಳ ಸಾಲು, ಮನುಷ್ಯರ ಜೋಡಿಗಳು, ಕಣ್ಣು, ಕಿವಿ, ಮೂಗು, ಬಾಯಿ, ಹಸ್ತ, ಪಾದ ಸೂಚಿಸಲಾಗಿರುತ್ತದೆ. ಚಿತ್ರಗಳನ್ನು ಅಪರೂಪವಾಗಿ ಕಾಡಿಗೆ, ಕಪ್ಪು, ಮಿಶ್ರಹಳದಿ ಮತ್ತು ಮುಸುಕು ಬಿಳಿ ದ್ವಿವರ್ಣಗಳಲ್ಲಿ ಒಂದೇ ಸಮನಾಗಿ ಬಿಳಿವರ್ಣದಲ್ಲಿ ಹಾಗೂ ನಿಸರ್ಗದಲ್ಲಿ ದೊರೆಯುವ ಕೆಮ್ಮಣ್ಣು ಗಟ್ಟಿಯನ್ನು ಬಣ್ಣ ತಯಾರಿಸಲು ಬಳಸಿರಬಹುದು. ರೇಖಾ ಚಿತ್ರಗಳನ್ನು ಕಲ್ಲಿನಲ್ಲಿ ಏಕ ಪ್ರಕಾರವಾಗಿ ಕುಟ್ಟಿ ಬಿಡಿಸಿರುವುದು ಇಲ್ಲವೆ ಉಳಿಯಂತಹ ಮೊನಚಾದ ಕಲ್ಲಿನಲ್ಲಿ ಏಕಪ್ರಕಾರವಾಗಿ ಕುಟ್ಟಿ ಬಿಡಿಸಿರುವುದು ಇಲ್ಲವೆ ಉಳಿಯಂತಹ ಮೊನಚಾದ ಉಪಕರಣಗಳಿಂದ ಗೆರೆಯನ್ನು ಮೂಡಿಸುವುದು. ಕೆಲವೊಂದು ನೆಲಗಳಲ್ಲಿ ಎರಡು ತರಹದವು ಕಂಡುಬಂದಿವೆ.

ಚಿತ್ರಕಲೆಯು ಇತಿಹಾಸ ಆರಂಭಕಾಲಕ್ಕೆ ಈಜಿಪ್ಟ್‌ ಮತ್ತು ಮೆಸೊಪೊಟೋಮಿಯಾದ ಸಂಸ್ಕೃತಿಗಳಲ್ಲಿಯೇ ಕಲೆಯು ಪ್ರಾರಂಭವಾಗಿರಬೇಕೆಂಬ ನಂಬಿಕೆ ೧೯ ನೇ ಶತಮಾನದ ಕೊನೆಯವರೆಗೂ ಪ್ರಚಲಿತವಿತ್ತ. ಈ ಶತಮಾನದ ದ್ವಿತೀಯಾರ್ಧದಲ್ಲಿ ಫ್ರಾನ್ಸ್‌, ಸ್ಪೈನ್‌ ದೇಶದ ಸುಣ್ಣಕಲ್ಲು ಗುಹೆಗಳಲ್ಲಿ ಬೆಳಕಿಗೆ ಬಂದ ಹಲವು ಭಿತ್ತಿಚಿತ್ರಗಳು ವಸ್ತು ಮತ್ತು ರೀತಿ ವೈವಿಧ್ಯತೆಯಲ್ಲಿ ವಿಶಿಷ್ಟತೆ ಹೊಂದಿದ್ದು, ಅವು ಇತಿಹಾಸಕಾಲದ ಕಲೆಗೂ ಹಳೆಯದಿರಬೇಕೆಂದು ಸಂಶಯಿಸಿದ್ದಾರೆ. ಪುರಾತತ್ವ ಶಾಸ್ತ್ರಜ್ಞರು ನಡೆಸಿದ ಸಂಶೋಧನೆಗಳಿಂದ ಹಳೇ ಶಿಲಾಯುಗದ ಕೊನೆಯ ಕಾಲದಲ್ಲಿದ್ದ ಜನಗಳೇ ಫ್ರಾನ್ಸ್‌, ಸ್ಪೈನ್‌ ಭಿತ್ತಿಚಿತ್ರಗಳ ಕರ್ತೃಗಳಾಗಿರಬೇಕೆಂದು, ಇತಿಹಾಸ ಕಾಲಕ್ಕಿಂತಲೂ ಸುಮಾರು ೩೦-೪೦ ಸಾವಿರ ವರ್ಷಗಳ ಪೂರ್ವದಲ್ಲೇ ಉದಯವಾಗಿರಬೇಕೆಂದು ಗುರುತಿಸಲಾಯಿತು. ನಂತರ ಆಫ್ರಿಕಾ, ಏಷ್ಯಾ, ಯುರೋಪ್, ಆಸ್ಟ್ರೇಲಿಯ ಖಂಡಗಳ ನೂರಾರು ಪ್ರದೇಶಗಳ ಅನ್ವೇಷಣೆ, ಭೂಸಂಶೋಧನೆಗಳಿಂದ ಕಲಾಕೃತಿಗಳಿರುವ ನೆಲೆಗಳು ತಿಳಿದು ಬಂದವು. ಭಾರತದಲ್ಲಿ ಗವಿವರ್ಣ ಮತ್ತು ಬಂಡೆ ಚಿತ್ರಗಳ ಶೋಧನೆ ಅಲ್ಲಲ್ಲಿ ಆಕಸ್ಮಿಕವಾಗಿ ಕ್ರಿ. ಶ. ೧೮೮೦ರಲ್ಲಿ ಪ್ರಾರಂಭವಾಯಿತೆನ್ನಬಹುದು. ಹ್ಯೊಬರ್ಟ್‌‌ನಾಕ್ಸ್‌ ಅವರು ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಮೀಪದಲ್ಲಿರುವ ಕಪ್ಪುಗಲ್ಲು ಗುಡ್ಡಗಳಲ್ಲಿ ದೊಡ್ಡ ದೊಡ್ಡ ಗುಂಡುಕಲ್ಲುಗಳ ಮೇಲೆ ಕುಟ್ಟಿ-ಗೀರಿ ಬಿಡಿಸಿದ ಚಿತ್ರಗಳನ್ನು ಪತ್ತೆಹಚ್ಚಿದರು. ಇವರು ತೆಗೆದ ಛಾಯಾಚಿತ್ರಗಳನ್ನು ರಾಬರ್ಟ್‌‌ಬ್ರೂಸ್‌ಪೂಟ್‌೧೯೧೬ರಲ್ಲಿ “ದಿ ಪೂಟ್‌ ಕಲೆಕ್ಷನ್‌ ಆಫ್‌ ಇಂಡಿಯನ್ ಪ್ರಿ ಹಿಸ್ಟಾರಿಕ್ ಅಂಡ್ ಪ್ರೋಟೋ ಹಿಸ್ಟಾರಿಕ್ ಆಂಟಿಕ್ವಿಟೀಸ್‌” ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.

೧೮೮೦-೮೩ ರಲ್ಲಿ ಮಧ್ಯಪ್ರದೇಶದ ಮಿರ್ಜಾಪುರದ ಬಳಿಯ ವಿಂಧ್ಯಾ ಪ್ರದೇಶದ ಕೈಮೂರ ಬೆಟ್ಟಗಳ ಕಲ್ಲಾಸರೆಗಳಲ್ಲಿ ಆರ‍್ಜಿಬಾಲ್ಡ್‌ ಕಾರ‍್ಲೈಲ್ ಮತ್ತು ಜಾನ್‌ಕಾಕ್‌ಬರ್ನ ಅವರು ವರ್ಣಚಿತ್ರಗಳನ್ನು ಪತ್ತೆಹಚ್ಚಿದರು. ನಂತರ ಅತಿಮುಖ್ಯವಾದ ಬಿಂಬೆಟ್ಕದ ಗುಹೆಗಳಲ್ಲಿ ಪತ್ತೆ ಆಗಿರುವ ವರ್ಣಚಿತ್ರಗಳು ಸೂಕ್ಷ್ಮಶಿಲಾಯುಗ, ನವಶಿಲಾಯುಗದ ಕಾಲವೆಂದು ತರ್ಕಿಸಲಾಗಿದೆ.

ಕರ್ನಾಟಕದಲ್ಲಿ ಲಿಯೋನಾರ್ಡ್‌‌ಮನ್ ಅವರು ಹಿರೆಬೆಣಕಲ್ಲು (ಗಂಗಾವತಿ ತಾ.) ಗುಡ್ಡಗಳಲ್ಲಿ ಸ್ವಾರಸ್ಯಕರವಾದ ಮೂರು ಗವಿವರ್ಣ ಚಿತ್ರಗಳನ್ನು ೧೯೩೫ರಲ್ಲಿ ಕಂಡು ಹಿಡಿದರು. ನಂತರ ಹಲವು ವಿದ್ವಾಂಸರು ಮಸ್ಕಿ, ಕೊಲ್ಲೂರು, ಬಿಳೆಬಾವಿ, ಮಲ್ಲಾಪುರ, ಆತನೂರು, ಕುಳ್ಳುಳ್ಳಿ, ರಾಮದುರ್ಗ, ಬಾದಾಮಿ, ಹಂಪಿ, ಪಿಕ್ಲಿಹಾಳ, ತೆಕ್ಕಲಕೋಟೆ, ಸಂಗನಕಲ್ಲು, ಐಹೊಳೆ, ಮಹಾಕೂಟ, ಕೊಪ್ಪಳ, ಬೆಳಗಲ್ಲು, ಕುರುಗೋಡು, ಅಪ್ಪಯ್ಯನಹಳ್ಳಿ, ಸಂತೇಗುಡ್ಡ ಇನ್ನಿತರ ಸ್ಥಳಗಳಲ್ಲಿ ಸಂಶೋಧಿಸಿದ್ದಾರೆ. ಈ ನಿಟ್ಟಿನಲ್ಲಿ ಅ. ಸುಂದರ, ಎಂ. ಎಸ್. ನಾಗರಾಜರಾವ್, ಎಸ್. ವಿ. ಪಾಡಿಗಾರರ, ರು. ಮ. ಷಡಕ್ಷರಯ್ಯ, ಶ್ರೀಶೈಲ ಆರಾಧ್ಯ, ಲಕ್ಷ್ಮಣ ತೆಲಗಾವಿ, ಎಸ್‌. ವೈ. ಸೋಮಶೇಖರ್, ಎಸ್. ತಿಪ್ಪೆಸ್ವಾಮಿ ಹಾಗೂ ಲೇಖಕರು, ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳು ಈ ಕಾರ್ಯಗಳಲ್ಲಿ ಮಗ್ನವಾಗಿವೆ. ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಚಂದ್ರವಳ್ಳಿ ಬ್ರಹ್ಮಗಿರಿ ಇನ್ನಿತರ ಸ್ಥಳಗಳಲ್ಲಿ ಎಂ. ಎಚ್. ಕೃಷ್ಣ (೧೯೨೯) ಸುಂದರ. ಅ (೧೯೭೮) ಶ್ರೀಶೈಲ ಆರಾಧ್ಯ (೧೯೮೩) ಇತರರು ಶಿಲಾಯುಗದ ಇತಿಹಾಸ ಆರಂಭಕಾಲದ ಕುಟ್ಟು, ಗೀರು ಚಿತ್ರಗಳನ್ನು ಪತ್ತೆಹಚ್ಚಿ ಪ್ರಕಟಿಸಿದ್ದಾರೆ.

ಪ್ರಸ್ತುತ ಮೊಳಕಾಲ್ಮೂರು ತಾಲೂಕಿನಲ್ಲಿ ಎಂ. ಹೆಚ್. ಕೃಷ್ಣ ಮಾರ್ಟಿಮರ್ ವೀಲರ್ ಅವರು ಭೂ ಅನ್ವೇಷಣೆ, ಭೂ ಸಮಶೋಧನೆ ಮಾಡಿ ಚಿತ್ರಕಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಪತ್ತೆಹಚ್ಚಿ ಪ್ರಕಟಿಸಿದ್ದಾರೆ. ಇವು ನವ-ಶಿಲಾ ತಾಮ್ರಗಯುಗದ ಮಾನವನು ಮಡಿಕೆಗಳ ಮೇಲೆ ವಿವಿಧ ರೀತಿಯ ಚಿತ್ರಗಳನ್ನು ಗಿರಿ/ಕೊರೆದು ಅಲಂಕರಿಸಿದವುಗಳಾಗಿವೆ. ಬ್ರಹ್ಮಗಿರಿ ಉತ್ಖನನದಲ್ಲಿ ಎಂ. ಹೆಚ್. ಕೃಷ್ಣ ಮಾರ್ಟಿಮರ್ ಮಿಲ್ಲರ್‌ಅವರು ಪತ್ತೆಹಚ್ಚಿದ್ದಾರೆ. ಅವುಗಳೆಂದರೆ ಹಾವಿನಕಾರ, ಅರ್ಧ ಎಲೆ, ರೆಂಬೆಯಾಕಾರ, ಚುಕ್ಕೆ, ಶಂಖು, ಇತರೆ ಚಿತ್ರಕಲೆಯ ಆಸ್ತಿಯನ್ನು ವ್ಯಕ್ತಪಡಿಸುತ್ತವೆ. ಬೂದು ಮಿಶ್ರಿತ ಕಪ್ಪು ಮಡಿಕೆಗಳ ಮೇಲೆ ಕೆಂಪು ಬಣ್ಣ ಲೇಪನ ಮಾಡಿರುವುದು ವಿಶೇಷವಾಗಿ ಕಂಡುಬರುತ್ತದೆ.

ಹಾಗೆಯೇ ಬೃಹತ್ ಶಿಲಾಯುಗ ಸಂಸ್ಕೃತಿಯ ಮಾನವನು ತಯಾರಿಸಿಕೊಂಡ, ಕೆಂಪು, ಕಪ್ಪು ಮತ್ತು ಕಪ್ಪು ಬಣ್ಣದ ನಯಗೊಳಿಸಿದ ವಿವಿಧ ನಮೂನೆ ಮಡಿಕೆಗಳ ಮೇಲೆ ವಿವಿಧ ಅಲಂಕಾರದ ಚಿತ್ರಕಲೆ ಚಿತ್ರಿಸಿರುವುದು. ವಿಶೇಷವಾಗಿ ಈ ಹಂತದ ಕೊನೆಯ ಹಂತದಲ್ಲಿ ಕೆಂಪು ಮತ್ತು ಕಪ್ಪು ಬಣ್ಣದ ಮಡಿಕೆಗಳ ಮೇಲೆ ಬಿಳಿ ಹಳದಿ ಬಣ್ಣಗಳಿಂದ ವಿವಿಧ ಆಕಾರದ ಗೆರೆಗಳನ್ನು ಎಳೆದು ಮಡಿಕೆಗಳನ್ನು ಅಲಂಕರಿಸಿರುವುದು ವಿಶೇಷವಾಗಿ ಕಂಡುಬರುತ್ತದೆ. ಈ ಅಂಶಗಳನ್ನು ಗಮನಿಸಿದಾಗ ಕಾಲಕಳೆದಂತೆ ಮಾನವನ ಬುದ್ಧಿಮಟ್ಟ ಬೆಳೆದಂತೆ ಚಿತ್ರಕಲೆಯಲ್ಲೂ ಹೊಸ ಅವಿಷ್ಕಾರ ಕಂಡು ಕೊಂಡಿರುವುದು ಕಂಡು ಬರುತ್ತದೆ. ಸುಟ್ಟ ಮಣ್ಣಿನ ಮಣಿಗಳನ್ನು ಅಲಂಕಾರಕ್ಕಾಗಿ ತಯಾರಿಸಿಕೊಂಡಿದ್ದು ಮಧ್ಯದಲ್ಲಿ ರಂಧ್ರ, ಹೊರಭಾಗದ ಮಧ್ಯದಲ್ಲಿ ೨-೩ ಗೆರೆಗಳನ್ನು ಕೊರೆದು ಅಲಂಕರಿಸಿಕೊಂಡಿರುವುದು ಚಿತ್ರಕಲೆಯ ಮೇಲೆ ಬೆಳಕು ಚೆಲ್ಲಿದೆ. ಕೆಂಪು ಮತ್ತು ಕಪ್ಪು ಬಣ್ಣದ ನಯಗೊಳಿಸಿದ, ಗಾಜಿನಂತೆ ಹೊಳೆಯುವ ಮಡಿಕೆಗಳ ಮೇಲೆ ಗೆರೆಗಳನ್ನು ಕೊರೆದು ವಿವಿಧ ರೀತಿ (ಗ್ರಾಫಿಟಿ) ಅಲಂಕರಿಸುವುದು, ಈ ಗೆರೆಗಳು ಚಿತ್ರಲಿಪಿಯೋ, ಚಿತ್ರಕಲಯೋ ಎಂಬುದು ಸಂಶೋಧನೆಗಳಿಂದ ದೃಢಪಡಬೇಕಾಗಿದೆ. ಹೀಗೆ ಹಲವು ಸಂಗತಿಗಳು ಚಿತ್ರಕಲೆಯ ಮೇಲೆ ಬೇಳಕು ಚೆಲ್ಲಿವೆ.

ಶಾತವಾಹನರ ಕಾಲದಲ್ಲಿ ವಿವಿಧ ಬಣ್ಣಗಳ ಮಡಿಕೆಗಳ ಮೇಲೆ ಕೇವಲಿನ್ ಪೇಂಟೆಂಡ್ ರಸೆಟ್ ಕೋಟೆಡ್ ಮಾಡಿರುವುದು ವಿಶೇಷವಾಗಿ ಚಿತ್ರಕಲೆಯನ್ನು ಸಾಮಾನ್ಯವಾಗಿ ಹಸಿಯಿರುವಾಗಲೇ ಸುಡುವುದಕ್ಕೆ ಮೊದಲು ಕೊರೆದು, ಒತ್ತಿ ಅಥವಾ ಚುಚ್ಚಿ ಮಾಡಿರುವುದಾಗಿದೆ. ಎಲೆ, ರೆಂಬೆ, ನಾಣ್ಯ, ಹಾವು, ಚಾಪೆ, ದೊಡ್ಡ ದೊಡ್ಡ ಚುಕ್ಕೆಗಳು, ಪೂರ್ಣಚಂದ್ರ, ಅರ್ಧಚಂದ್ರ, ಸೂರ್ಯ, ನಕ್ಷತ್ರಗಳಂತೆ ಕಾಣುವ ಹಾಗೂ ಇತರೆ ಅಲಂಕಾರಗಳಾದ ಆಯತ, ತ್ರಿಭುಜ, ವಜ್ರ, ಚತುರ್ಭುಜ ಇತರೆ ಆಕಾರಗಳನ್ನೊಳಗೊಂಡ ಚಿತ್ರಕಲೆಗಳನ್ನು ಬಿಳಿಯ ಬಣ್ಣದಿಂದ ಅಲಂಕರಿಸಿ ಕೆಂಪು ಬಣ್ಣದಿಂದ ಲೇಪನಮಾಡಿರುವ ಮಡಿಕೆಗಳ ಭಾಗಗಳ ಚಿತ್ರಕಲೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲಿವೆ. ಈ ಬಗೆಯ ಮಡಿಕೆಗಳ ಮೇಲಿನ ಚಿತ್ರಕಲೆಯ ಅಂಶಗಳು ಬಿಳಿ, ಕೆಂಪು, ಹಳದಿ ಸಿಲ್ವರ್ ಇತರೆ ಬಣ್ಣಗಳಿಂದ ಲೇಪಿತವಾಗಿವೆ. ಹಾಗೆಯೆ ಈ ಕಾಲದ ಮಣಿಗಳು ಬಿಳಿ, ಕೆಂಪು, ನೀಲಿ, ಸಿಲ್ವರ್, ಹಸಿರು ಇತರೆ ಬಣ್ಣಗಳಿಂದ ಲೇಪಿತವಾದ ಮಣಿಗಳು ಬ್ರಹ್ಮಗಿರಿ ನೆಲೆಯಲ್ಲಿ ಹೇರಳವಾಗಿ ದೊರಕಿದ್ದು ಚಿತ್ರಕಲೆಯ ಮೇಲೆ ಬೆಳಕು ಚೆಲ್ಲಿವೆ.

ಮೊಳಕಾಲ್ಮೂರು ತಾಲೂಕಿನ ಹಲವು ಕಡೆ ಅ. ಸುಂದರ, ಶ್ರೀಶೈಲ ಆರಾಧ್ಯ ಲಕ್ಷ್ಮಣ ತೆಲಗಾವಿ, ಎಸ್. ವೈ. ಸೋಮಶೇಖರ್, ಎಸ್. ತಿಪ್ಪೇಸ್ವಾಮಿ, ಇತರರು ತಮ್ಮ ಕ್ಷೇತ್ರಕಾರ್ಯದಲ್ಲಿ ವರ್ಣಚಿತ್ರ, ಗೀರು ಚಿತ್ರಗಳನ್ನು ಪತ್ತೆಹಚ್ಚಿದ್ದಾರೆ. ಶ್ರೀಶೈಲ ಆರಾಧ್ಯ ಅವರು ಬ್ರಹ್ಮಗಿರಿ ನೆಲೆಯಲ್ಲಿ ವರ್ಣಚಿತ್ರ, ಬಯಲು ಬಂಡೆ ಚಿತ್ರಗಳನ್ನು ತಮ್ಮ ಸಂಶೋಧನಾ ಹಾದಿಯಲ್ಲಿ ಪ್ರಕಟಿಸಿದ್ದಾರೆ. ನಂತರ ಅ. ಸುಂದರ ಅವರು ಜಟಂಗಿ ರಾಮೇಶ್ವರದಲ್ಲಿ ನೂತನ-ಶಿಲಾ ತಾಮ್ರಯುಗದ, ಬೃಹತ್ ಶಿಲಾಯುಗದ, ಇತಿಹಾಸ ಆರಂಭಕಾಲದ ಬಗ್ಗೆ ಕುಟ್ಟು, ಗೀರು ಚಿತ್ರಗಳನ್ನು ಗವಿ, ಕಲ್ಲಾಸರೆಗಳಲ್ಲಿ ಸಂಶೋಧಿಸಿದ್ದಾರೆ.

ಅ. ಸುಂದರ ಅವರು ಬ್ರಹ್ಮಗಿರಿ ಮತ್ತು ಹೊಳೂರಿನ ಆನೆಗಳಲ್ಲಿನ ಮಾದರಿ ಶೈಲಿಯಲ್ಲಿ ಸ್ವಲ್ಪ ಹೆಚ್ಚ ಕಡಿಮೆ ಸಾಮ್ಯವಿದೆಯೆಂದು, ಈ ಮಾದರಿಯು ಮುಖ್ಯವಾಗಿ ಬೆನ್ನಿನ ಬಾಗು ಮತ್ತು ಹರಪ್ಪಾ ನಾಗರೀಕತೆಯ ವೆಬ್ರೊರಿ ಮುದ್ರಿಕೆಗಳಲ್ಲಿಯ ಹಾಗೂ ದೈಮಬಾದಿನ ಶಿಲಾ ತಾಮ್ರಯುಗದ ತಾಮ್ರದ ಗಟ್ಟಿ ಆನೆಗೆ ಹೋಲುತ್ತವೆ. ಚಿತ್ರಕಾರನು ಚಿತ್ರವನ್ನು ಬಿಡಿಸುವುದಕ್ಕೋಸ್ಕರ ಬಯಲಿನಲ್ಲಿ ಪ್ರತ್ಯೇಕ ಒಂದು ದೊಡ್ಡ ಬಂಡೆಯನ್ನು ಆರಿಸಿರುವುದು ಅವನ ಚಿತ್ರಕಲೆ ನಿರೂಪಣೆಯಲ್ಲಿರುವ ಸೌಂದರ್ಯಪ್ರಜ್ಞೆ ವ್ಯಕ್ತಪಡಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜಟಂಗಿ ರಾಮೇಶ್ವರದ ಬಯಲು ಬಂಡೆಯಲ್ಲಿ ಮೂಡಿಸಿದ ಮನುಷ್ಯರ ರೇಖಾಚಿತ್ರದ ಮೊದಲನೇಯ ರೀತಿಯಲ್ಲಿ ದುಂಡಾದ ತಲೆ, ನೀಳವಾದ ಮುಂಡಾ, ಮುಖ ಲಕ್ಷಣಗಳು ಇದು ಸಹಜವಾದುದು, ಎರಡನೆಯದರಲ್ಲಿ ಅಡ್ಡರೇಖೆಯ ಅಥವಾ ಸ್ವಲ್ಪ ವೃತ್ತಾಕಾರದ ತಲೆ, ತ್ರೀಕೋನಾಕೃತಿಯ ಮುಂಡಾ ಮತ್ತು ಅಗಲಿಸಿದ ತೊಡೆಗಳು ಇವೆ. ಇದು ದ್ವಿತ್ರಿಕೋನಾಕೃತಿಯ ಶೈಲಿಯೆಂದು, ಮೊದಲನೆಯದು ಸ್ಥೂಲ, ಎರಡನೆಯದು ಸೂಕ್ಷ್ಮ ಎಂದು ಅ. ಸುಂದರ ಅವರು ಅಭಿಪ್ರಾಯಪಟ್ಟಿದ್ದಾರೆ.

ಆರ್‌. ಎಂ. ಷಡಕ್ಷರಯ್ಯ ಅವರು ಬ್ರಹ್ಮಗಿರಿಯ ಪಶ್ಚಿಮಕ್ಕೆ ಅಪ್ಪಯ್ಯನಹಳ್ಳಿಯಲ್ಲಿ ಪ್ರಾಗಿತಿಹಾಸ-ಇತಿಹಾಸ ಕಾಲದ ಗವಿವರ್ಣ ಮತ್ತು ಬಯಲು ಬಂಡೆ ರೇಖಾ ಚಿತ್ರಗಳನ್ನು ಸಂಶೋಧಿಸಿದ್ದಾರೆ ಹಾಗೂ ಯ. ಜಯಣ್ಣ ಅವರು ತಳವಾರ ಹಳ್ಳಿಯಲ್ಲಿ ಎಮ್ಮೆಯ ಗೀರು ಚಿತ್ರಗವನ್ನು ಸಂಶೋಧಿಸಿದ್ದಾರೆ. ಎಸ್. ವೈ. ಸೋಮಶೇಖರ್ ಮತ್ತು ಎಸ್. ತಿಪ್ಪೇಸ್ವಾಮಿ ಅವರು ಸಂತೆಗುಡ್ಡದ ಪರಿಸರದಲ್ಲಿ ನೂರಾರು ಗುಹಾವರ್ಣಚಿತ್ರಗಳನ್ನು ಪತ್ತೆಹಚ್ಚಿದ್ದು, ಆನೆ, ಕುದುರೆ, ಒಂಟೆ ಸವಾರರು, ಬಿಲ್ಲು, ಬಾಣ, ಖಡ್ಗ, ಈಟಿ ಹಿಡಿದಿರುವ ವೀರರು, ಆನೆ, ಕುದುರೆಯ ಮೇಲೆ ಹೋರಾಡುವ ದೃಶ್ಯಗಳು ವಿಶೇಷವಾಗಿವೆ. ಪಕ್ಕದ ನೆಲೆಗಳಾದ ಮಸ್ಕಿ, ಪಿಕ್ಲಿಹಾಳ್‌, ಸಂಗನಕಲ್ಲಿನ ಪ್ರಾಚೀನ ನಿವೇಶನಗಳಲ್ಲಿ ನಡೆಸಿದ ಉತ್ಖನನಗಳಿಂದ ಬೃಹತ್ ಶಿಲಾಯುಗದ ಎರಡನೇ ಹಂತದಲ್ಲಿ ಜನರು ಹೆಚ್ಚು ಕುದುರೆ ಸವಾರರಾಗಿದ್ದಾರೆಂದು ತಿಳಿದು ಬಂದಿದೆ. ಈ ವರ್ಣಚಿತ್ರಗಳಿರುವ ಪರಿಸರವು ಬೃಹತ್ ಶಿಲಾಯುಗ ಕಾಲದ ಮಾನವನ ನೆಲೆವೀಡಾಗಿತ್ತೆಂದು ಸಿಕ್ಕಿರುವ ಅವಶೇಷಗಳು, ಹಾಗೂ ಇಂದಿಗೂ ಭೂಮಿಯ ಮೇಲ್ಭಾಗದಲ್ಲಿರುವ ಸಮಾಧಿಗಳು ಸಾಕ್ಷಿಯಾಗಿದ್ದು ಸಂಗನಕಲ್ಲು, ಬ್ರಹ್ಮಗಿರಿ, ಸಂತೋಷಗುಡ್ಡ ನೆಲೆಗಳು ವೇದಾವತಿ (ಹಗರಿ) ನದಿಯ ಪರಿಸರದಲ್ಲಿದ್ದು ಈ ಗುಹಾವರ್ಣಚಿತ್ರಗಳು ಬೃಹತ್ ಶಿಲಾಯುಗದ ಕಾಲಕ್ಕೆ ಮತ್ತು ವಡಗಾಂವ್ ಮಾಧವಪುರ, ಬನವಾಸಿ ಉತ್ಖನನದ ಮಡಿಕೆಗಳ ಮೇಲೆ ಆನೆಯ ಸಾಲುಗಳು ಹಿಂದೆಯ ಮನುಷ್ಯನ ಚಿತ್ರವಿದ್ದು ಈ ತರಹದವೇ ಈ ಗುಹೆಯಲ್ಲಿ ಕಂಡುಬಂದಿರುವುದರಿಂದ ಇತಿಹಾಸ ಆರಂಭಕಾಲಕ್ಕೆ ಸೇರಸಬಹುದಾಗಿದೆ.

ವರ್ಣಚಿತ್ರ ಗವಿಗಳಲ್ಲಿ ಮತ್ತು ಬಯಲು ಬಂಡೆಯ ಚಿತ್ರಗಳ ಜೊತೆಗೆ ಕೆಲವೆಡೆಗಳಲ್ಲಿ ಇತಿಹಾಸ ಮತ್ತು ಆಧುನಿಕ ಕಾಲದ ಚಿತ್ರಗಳಿವೆ. ಪ್ರಾಚೀನ ಕಾಲದ ಚಿತ್ರಗಳು ಕಣ್ಣಿಗೆ ಬಿದ್ದರೆ ಪಕ್ಕದಲ್ಲಿ ದನ ಕಾಯುವರು ಹನುಮ, ರೈಲು, ಹುಲಿ, ಗುಡಿ, ಇತರೆ ಚಿತ್ರಗಳನ್ನು ಬಿಡಿಸುವುದು ಕಷ್ಟ, ಕುಟ್ಟಿ ಬಿಡಿಸುವುದು ಸುಲಭ, ಪ್ರಾಚೀನ ಚಿತ್ರಗಳೊಡನೆ ಆಧುನಿಕ ಕಾಲದ ಚಿತ್ರಗಳಿರುವುದು ಅಪರೂಪ. ಒಟ್ಟಿನಲ್ಲಿ ಕಾಲಮಾನ ನಿರ್ಧರಿಸುವುದು ಕಷ್ಟಸಾಧ್ಯವೇ ಸರಿ. ಈ ನಿಟ್ಟಿನಲ್ಲಿ ಪ್ರಾಗಿತಿಹಾಸಕಾಲದ ಕುತೂಹಲಕಾರಿ ರೇಖಾಚಿತ್ರಗಳಿಂದ ಹಿಡಿದು ಇತಿಹಾಸ ಕಾಲದವರೆಗೂ ಗೀರಿದ ರೇಖಾಚಿತ್ರಗಳು, ಅಸ್ಪಷವಿ ಅರ್ಥಗರ್ಭಿತ ಗವಿವರ್ಣ ಚಿತ್ರಗಳು, ಬಯಲು ಬಂಡೆ ಗೀರು ರೇಖಾಚಿತ್ರಗಳು, ಮೃತಪಾತ್ರೆಗಳ ಮೇಲಿನ ವೈವಿಧ್ಯಮಯ ವರ್ಣಚಿತ್ರಗಳು ಈ ಪ್ರಧೇಶದಲ್ಲಿಯ ಕಲೆಯ ಪ್ರಾಚೀನತೆ ವಿವಿಧ ಪರಿಕಲ್ಪನೆಗಳು, ಶೈಲಿಯ ಪ್ರಕಾರ ಧಾರ್ಮಿಕ ಹಾಗೂ ಸಾಮಾಜಿಕ ವಿಷಯಗಳು ಮೊದಲಾದವುಗಳನ್ನು ತಿಳಿಯಲು ಸಹಕಾರಿಯಾಗಿದೆ.

ಆಕರ ಗ್ರಂಥಗಳು

೧. ಡಿ.ವಿ. ದೇವರಾಜ್, ಬಿ.ಆರ್. ಗೋಪಾಲ್, ಶೇಷಚಂದ್ರಿಕೆ

೨. ಸುಂದರ, ಅ., ೧೯೯೭, ಕರ್ನಾಟಕ ಚರಿತ್ರೆ, ಸಂ.೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೩. ರಾಬರ್ಟ್‌ ಬ್ರೂಸ್‌ಪೂಟ್‌, ದಿ ಪೂಟ್‌ಕಲೆಕ್ಷನ್ ಆಫ್ ಇಂಡಿಯನ್ ಪ್ರಿ ಹಿಸ್ಟಾರಿಕ್ ಆಂಡ್ ಪ್ರೋಟೋ ಹಿಸ್ಟಾರಿಕ್ ಆಂಟಿಕ್ವಿಟೀಸ್, ಮದ್ರಾಸ್

೪. ಹಾ. ಮಾ. ನಾಯಕ, ೧೯೭೯, ಕರ್ನಾಟಕ ಕನ್ನಡ ವಿಷಯ ಕೋಶ, ಮೈಸೂರ ವಿಶ್ವವಿದ್ಯಾಲಯ, ಮೈಸೂರು

೫. ಸುಂದರ, ಅ., ಕರ್ನಾಟಕದ ಪ್ರಾಗಿತಿಹಾಸ ಕಾಲದ ಕಲೆ, ಕರ್ನಾಟಕ ಚಿತ್ರಕಲಾ ಅಕಾಡೆಮಿ, ಬೆಂಗಳೂರು

೬. ಶಿವತಾರಕ್, ಕೆ. ಬಿ., ಕರ್ನಾಟಕದ ಪುರಾತತ್ವ ನೆಲೆಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೭. ಸೂರ್ಯನಾಥ, ಕರ್ನಾಟಕ ರಾಜ್ಯ ಗ್ಯಾಜೆಟಿಯರ್, ಬೆಂಗಳೂರು

೮. ಲಕ್ಷ್ಮಣ ತೆಲಗಾವಿ, ೨೦೦೪, ಮೌರ್ಯ ಮತ್ತು ಶಾತವಾಹನ ಯುಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

೯. ಆರ್. ಗೋಪಾಲ್ (ಸಂ) ಚಿತ್ರದುರ್ಗ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು

೧೦. ಸೋಮಶೇಖರ್. ಎಸ್. ವೈ., ತಿಪ್ಪೇಸ್ವಾಮಿ, ಎಸ್. ಸಂತೆಗುಡ್ಡದಲ್ಲಿ ಪ್ರಾಚೀನ ಗವಿವರ್ಣ ಚಿತ್ರಗಳ ಶೋಧ, ವಿಜಯ ಕರ್ನಾಟಕ, ೩ ಅಗಸ್ಟ್‌೨೦೦೩

೧೧. ಮಾರ್ಟಿಮರ್ ವೀಲರ್, ಬ್ರಹ್ಮಗಿರಿ ಮತ್ತು ಚಂದ್ರವಳ್ಳಿ, ಏನ್ಸಿಯಂಟ್ ಇಂಡಿಯಾ ಸಂ. ೪-೧೯೯೪೭-೪೮