ಮೊಳಕಾಲ್ಮೂರು ತಾಲೂಕು ಪರಿಚಿತವಾಗಿರುವುದು ಇಲ್ಲಿನ ಸಿದ್ಧಾಪುರ, ಬ್ರಹ್ಮಗಿರಿ ಮತ್ತು ಜಟಂಗಿರಾಮೇಶ್ವರಗಳಲ್ಲಿ ಕಂಡುಬಂದ ಅಶೋಕನ ಬಂಡೆಗಲ್ಲು ಶಾಸನಗಳಿಂದ ಎಂಬುದು ಸರ್ವವಿದಿತ ಆದರೆ ಶಾಸನಗಳಷ್ಟೇ ಪ್ರಮುಖವಾಗಿ ಅನೇಕ ಪ್ರಾಚೀನ ಧಾರ್ಮಿಕ ನೆಲಗೆಗಳು, ದೇವಾಲಯಗಳು ಈ ತಾಲೂಕಿನಲ್ಲಿವೆ. ಮೂಲತಃ ಬೌದ್ಧ ಧರ್ಮದ ಕುರುಹುಗಳಾದ ಚೈತ್ಯಗಳು ಬ್ರಹ್ಮಗಿರಿ ಉತ್ಖನನದಲ್ಲಿ ಕಂಡುಬಂದಿರುವುದು ಗಮನಾರ್ಹ. ಹಾಗೆಯೇ ಇತಿಹಾಸ ಆರಂಭ ಕಾಲದ ಶಿಲ್ಪಗಳು. ಇಟ್ಟಿಗೆಯ ದೇವಾಲಯಗಳು ಹೆಚ್ಚಾಗಿ ಕಂಡುಬಂದಿವೆ.

ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಕಣಶಿಲೆಯ ಬೆಟ್ಟಸಾಲುಗಳನ್ನು ಒಳಗೊಂಡ ಪ್ರದೇಶ ಇಲ್ಲಿನ ಜಟಂಗಿ ರಾಮೇಶ್ವರ ಬೆಟ್ಟವು ಚಿತ್ರದುರ್ಗ ಜಿಲ್ಲೆಯಲ್ಲಿ ಎರಡನೇಯ ಅತಿ ಎತ್ತರದ ಬೆಟ್ಟ ಶ್ರೇಣಿಯಾಗಿದೆ. ಇದರ ಎತ್ತರ ಸಮುದ್ರ ಮಟ್ಟದಿಂದ ೩೪೬೯ ಅಡಿಗಳಷ್ಟಿದೆ. ಇದಲ್ಲದೆ ತಾಲೂಕಿನ ನುಂಕೆಮಲೆ ಬೆಟ್ಟ, ಜೋಗಪ್ಪನ ಗುಡ್ಡ, ಸಂತೆಗುಡ್ಡ, ಬ್ರಹ್ಮಗಿರಿ ಬೆಟ್ಟಗಳು ಚಾರಿತ್ರಿಕ ಹಾಗೂ ದೇವಾಲಯ ವಾಸ್ತುಶಿಲ್ಪ ದೃಷ್ಟಿಯಿಂದಲೂ ಪ್ರಮುಖ ಎಡೆಗಳಾಗಿವೆ.

ದೇಗುಲ ವಾಸ್ತುಶಿಲ್ಪ

ದೇವಾಲಯ ವಾಸ್ತುವಿನ ರಚನೆ ಮತ್ತು ಅದರ ಬೆಳವಣಿಗೆಯನ್ನು ಪ್ರಾಚೀನ ಕಾಲದಿಂದಲೂ ನೋಡಬಹುದು. ಆರಂಭದಲ್ಲಿ ಮರ, ಬೊಂಬು, ಮಣ್ಣು ಮುಂತಾದ ವಸ್ತುಗಳಿಂದ ನಿರ್ಮಾಣಗೊಂಡಿದ್ದವು. ಆದಕಾರಣ ಅವು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಆದರೆ ಮಾನವ ಬೇಟೆ ಸಂಸ್ಕೃತಿಯ ಹಂತದಲ್ಲಿದ್ದಾಗ ಬೇಟೆಗೆ ಹೊರಡುವ ಮೊದಲು ತಾನು ಬೇಟೆಯಾಡಬೇಕೆಂದಿರುವ ಪ್ರಾಣಿ ಸತ್ತಿರುವಂತೆ ಅದಕ್ಕೆ ತನ್ನ ಆಯುಧ ತಗುಲಿದಂತೆ ಬಂಡೆಗಲ್ಲುಗಳ ಮೇಲೆ ರೇಖೆ ಹಾಗೂ ವರ್ಣಗಳಲ್ಲಿ ಚಿತ್ರ ಮೂಡಿಸಿರುವುದನ್ನು ಕಾಣಬಹುದು. ಈ ಬಗೆಯ ಅನೇಕ ವರ್ಣಚಿತ್ರಗಳು ಮೊಳಕಾಲ್ಮೂರು ತಾಲೂಕಿನ ಬ್ರಹ್ಮಗಿರಿ. ಜಟಂಗಿರಾಮೇಶ್ವರ, ಸಂತೆಗುಡ್ಡ ಹಾಗೂ ನುಂಕೆಮಲೆಗಳಲ್ಲಿ ಕಾಣಬರುತ್ತವೆ. ನಂತರ ಈ ಬಗೆಯ ಚಿತ್ರಗಳಿಗೆ ಸುತ್ತಲೂ ಒಂದು ಮಂಡಲವನ್ನು ಎಳೆಯುವ ಮೂಲಕ ಪವಿತ್ರವೆಂದು ಭಾವಿಸಿ ಅಲ್ಲಿ ಓಡಾಡುವುದನ್ನು ನಿಷೇಧಿಸಿದ. ಮುಂದೆ ಇದಕ್ಕೆ ರಕ್ಷಣೆ ಒದಗಿಸಲು ಯತ್ನಿಸಿದುದೇ ದೇವಾಲಯ ರಚನೆಗೆ ಕಾರಣವಾಯಿತು.

ಬೃಹತ್ ಶಿಲಾ ಸಂಸ್ಕೃತಿಯ ಅನೇಕ ನೆಲೆಗಳು ಮೊಳಕಾಲ್ಮೂರು ತಾಲೂಕಿನಾದ್ಯಂತ ಗೋಚರಿಸುತ್ತವೆ. ಈ ಗೋರಿಗಳನ್ನು ಪರಿಶೀಲಿಸಿದರೆ ದೇವಾಲಯ ವಾಸ್ತುಶಿಲ್ಪ ಬೆಳೆದು ಬಂದ ಬಗೆ ಮತ್ತೊಂದು ರೀತಿಯದು. ಈ ಸಮಾಧಿಗಳನ್ನು ಸತ್ತವರ ನೆನಪಿಗಾಗಿಯೇ ನಿರ್ಮಿಸುತ್ತಿದ್ದುದನ್ನು ಕಾಣಬಹುದು. ಇವುಗಳನ್ನು ವಾಸದ ಮನೆಗಳಂತೆಯೇ ಕಟ್ಟಿರುವುದನ್ನು ನೋಡಿದರೆ ಅವರಿಗೆ ಕಟ್ಟಡ ರಚನೆಯ ಸ್ಪಷ್ಟ ಕಲ್ಪನೆ ಈ ಹೊತ್ತಿಗೆ ಮುಗಿದ್ದುದು ಬೃಹತ್‌ಶಿಲಾ ಸಮಾಧಿಗಳಿಂದ ಗೊತ್ತಾಗುತ್ತದೆ.

ವಾಸ್ತುಶಿಲ್ಪ

ಮಾನವ ತನ್ನ ರಕ್ಷಣೆಗಾಗಿ ಕಟ್ಟಿಕೊಂಡ ಕಟ್ಟಡವು ಗೃಹ ವಾಸ್ತುವಾದರೆ, ತನ್ನ ಹಿರಿಯರು, ದೇವರು ಹಾಗೂ ಇತರ ಶಕ್ತಿಗಳಿಗಾಗಿ ನಿರ್ಮಿಸಿದ ಕಟ್ಟಡವನ್ನು ದೇವಾಲಯ ಅಥವಾ ಧಾರ್ಮಿಕ ವಾಸ್ತು ಶಿಲ್ಪವೆಂದು ಕರೆಯಲಾಗುತ್ತದೆ. ದೇವಾಲಯವು ದೇವರ ಆಲಯವಾಗಿದ್ದರೂ ಇದು ಸಮಾಧಿ ಕಲ್ಪನೆಗೆ ಬಹಳ ಹತ್ತಿರವಾಗಿದ್ದುದನ್ನು ಗಮನಿಸಬೇಕು.

ಬೆಳವಣಿಗೆ

ಭಾರತದ ಪ್ರಾಚೀನ ನಾಗರಿಕತೆಯಾದ ಸಿಂಧೂ ಬಯಲಿನ ಸಂಸ್ಕೃತಿಯ ಜನರು ಪ್ರಕೃತಿ ಆರಾಧಕರಾಗಿದ್ದು ಪಶುಪತಿ, ಮಾತೃದೇವತೆ ಮೊದಲಾದ ವಿಗ್ರಹಗಳನ್ನು ಪೂಜಿಸುತ್ತಿದ್ದರು. ಅಲ್ಲದೆ ಅಂದು ಶೈವಧರ್ಮ ಅಸ್ತಿತ್ವದಲ್ಲಿದ್ದುದೂ ಇತ್ತೀಚೆಗೆ ಕೈಗೊಂಡ ಉತ್ಖನನ ಹಾಗೂ ಸಂಶೋಧನೆಗಳಿಂದ ದೃಢವಾಗಿದೆ. ಉತ್ಖನನದಲ್ಲಿ ಕಂಡು ಬಂದ ಲಿಂಗ, ಪಾನಪಟ್ಟ ಮೊದಲಾದವು ಸಿಂಧೂ ಸಂಸ್ಕೃತಿಯ ಧಾರ್ಮಿಕ ಚಟುವಟಿಕೆಗಳಿಗೆ ಮಹತ್ವದ ಆಕರಗಳಾಗಿವೆ. ವೇದ, ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿ ದೇವರು ಮತ್ತು ದೇವಾಲಯಗಳ ಉಲ್ಲೇಖಗಳು ಯಥೇಚ್ಛವಾಗಿ ಕಂಡು ಬರುತ್ತವೆ. ಆದರೆ ಈ ಕಾಲದ ದೇಗುಲ ವಾಸ್ತುವನ್ನು ಗುರುತಿಸಲಾಗಿಲ್ಲ. ಭಾರತೀಯ ಚರಿತ್ರೆಯ ಮಟ್ಟಿಗೆ ಹೇಳುವುದಾದರೆ ದೇವಾಲಯ ವಾಸ್ತು ರೂಪಗಳು ದೊರೆಯುವುದು ಬೌದ್ಧ ಮತ್ತು ಜೈನ ಧರ್ಮಗಳು ಅಸ್ತಿತ್ವಕ್ಕೆ ಬಂದ ಬಳಿಕವೇ. ಇದು ಮೊಳಕಾಲ್ಮೂರು ತಾಲೂಕಿಗೂ ಅನ್ವಯವಾಗುತ್ತದೆ. ಆ ಕಾಲದಲ್ಲಿ ಕಟ್ಟಿದ ಸ್ತೂಪ, ಚೈತ್ಯಗಳ ಅವಶೇಷಗಳು ಅಂದಿನ ಧಾರ್ಮಿಕ ವಾಸ್ತುವಿಗೆ ಸಾಕ್ಷ್ಯಗಳಾಗಿದ್ದು ಬ್ರಹ್ಮಗಿರಿ ಉತ್ಖನನದಲ್ಲಿ ಕುದುರೆ ಲಾಳಾಕಾರದ ಇಟ್ಟಿಗೆಯ ಚೈತ್ಯವು ಬೆಳಕಿಗೆ ಬಂದಿರುವುದು ಗಮನಾರ್ಹ. ಅದೇ ರೀತಿ ಸನ್ನತಿ, ಬನವಾಸಿಗಳಲ್ಲೂ ಈ ಬಗೆಯ ಸ್ತೂಪ, ಚೈತ್ಯದ ಅವಶೇಷಗಳು ಕಂಡುಬಂದಿವೆ.

ಅಂತೆಯೇ ಇದರ ನಂತರ ಕಾಲದವೆಂದರೆ ಜಟಂಗಿ ಬೆಟ್ಟದ ಮೇಲಿನ ಇಟ್ಟಿಗೆ ದೇವಾಲಯಗಳು. ಕ್ರಿ.ಪೂ. ೫, ೬ನೇ ಶತಮಾನಗಳ ಹೊತ್ತಿಗೆ ಈ ಪರಿಸರದಲ್ಲಿ ನಿರ್ಮಾಣವಾಗಿದ್ದುದು ಗೋಚರಿಸುತ್ತದೆ. ಇದಕ್ಕೆ ಜಟಂಗಿ ರಾಮೇಶ್ವರ ದೇವಾಲಯದ ಶಾಸನವು ಪ್ರಮುಖ ಸಾಕ್ಷ್ಯವಾಗಿದೆ. ಅದರಲ್ಲಿ ಹೇಳಿದಂತೆ ಈಗಿರುವ ದೇವಾಲಯ ಕ್ರಿ. ಶ. ೯೬೭ ರಲ್ಲಿ ನಿರ್ಮಾಣವಾದದ್ದು. ಆದರೆ ಈ ಹಿಂದೆ ಅದೇ ದೇಗುಲವು ಇಟ್ಟಿಗೆಯ ರಚನೆಯನ್ನು ಹೊಂದಿತ್ತು. ಅದು ಶಿಥಿಲವಾದ ಕಾರಣ ಇಟ್ಟಿಗೆಯ ರಚನೆಗಳನ್ನು ತೆಗೆದು ಹಾಕಿ ಅದೇ ಸ್ಥಳದಲ್ಲಿ ಕಲ್ಲಿನ ದೇಗುಲವನ್ನು ಕಟ್ಟಲಾಯಿತೆಂದು ಶಾಸನವು ಸ್ಪಷ್ಟಪಡಿಸುತ್ತದೆ. ಇದರಿಂದ ಮೊಳಕಾಲ್ಮೂರು ಪರಿಸರ ಕ್ರಿ. ಶ. ೫-೬ನೇ ಶತಮಾನದ ಹೊತ್ತಿಗೆ ದೇವಾಲಯಗಳ ಆಗರವಾಗಿದ್ದದು ಸಂಶೋಧನೆಗಳಿಂದ ಬೆಳಕಿಗೆ ಬಂದಿದೆ. ಮೊಳಕಾಲ್ಮೂರು ತಾಲೂಕಿನ ಇನ್ನೊಂದು ಪ್ರಸಿದ್ಧ ಪ್ರಾಚೀನ ಧಾರ್ಮಿಕ ಎಡೆಯೆಂದರೆ ಅದು ನುಂಕೆಮಲೆ. ಇದು ಅನೇಕ ದೇವಾಲಯಗಳನ್ನು ಒಳಗೊಂಡ ದುರ್ಗಮ ಕಣಿವೆ ಪ್ರದೇಶ. ಎರಡು ಬೆಟ್ಟಗಳ ನಡುವೆ ಇರುವ ಸುಂದರ ಹಾಗೂ ನಿರ್ಜನವಾದ ಕಣಿವೆ ಪರಿಸರವನ್ನು ಬಳಸಿಕೊಂಡ ಮಾನವನ ಚಾತುರ್ಯ ಮೆಚ್ಚುವಂಥದ್ದೇ. ಇದನ್ನು ಮಾಂಡಲಿಕ ಅರಸರಾದ ಕದಂಬರು ಆಳಿದುದು ಇಲ್ಲಿನ ಶಾಸನಗಳಿಂದ ದೃಢವಾಗುತ್ತದೆ.

ನುಂಕೆಮಲೆಯ ದೇವಾಲಯಗಳು

ನುಂಕೆಮಲೆಯಲ್ಲಿ ಸಿದ್ದೇಶ್ವರ, ಗೋರಕನಾಥ, ಮಲ್ಲಿಕಾರ್ಜುನ, ತುಪ್ಪದಮ್ಮ ಮೊದಲಾದ ದೇವಾಲಯಗಳಿವೆ.

. ಮಲ್ಲಿಕಾರ್ಜುನ ದೇವಾಲಯ

ಮಲ್ಲಿಕಾರ್ಜುನ ದೇವಾಲಯವು ದ್ವಿಕೂಟವಾಗಿದೆ. ಎರಡು ಗರ್ಭಗೃಹ, ಅಂತರಾಳ ಹಾಗೂ ನವರಂಗಗಳನ್ನು ಹೊಂದಿದೆ. ಪೂರ್ವಾಭಿಮುಖವಾಗಿರುವ ಮುಖ್ಯ ಗರ್ಭಗೃಹದಲ್ಲಿ ಶಿವಲಿಂಗವಿದೆ. ಗರ್ಭಗೃಹದ ಬಾಗಿಲವಾಡದಲ್ಲಿ ವಜ್ರಾಕೃತಿ, ಹೂಬಳ್ಳಿ ಮೊದಲಾದ ಶಾಖೆಗಳನ್ನು ಕಡೆದಿರುವರು. ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬುಶಿಲ್ಪವಿದೆ. ಅಂತರಾಳದ ಮುಂಬದಿಯ ಕಂಬಗಳಲ್ಲಿ ಸಿಂಹ ಮುಖವುಳ್ಳ ಪ್ರಭಾವಳಿಗಳಿವೆ. ಇನ್ನೊಂದು ಗರ್ಭಗೃಹದಲ್ಲಿ ಕೀರ್ತಿ ಮುಖವಿದೆ. ಅಂತರಾಳದಲ್ಲಿ ಸಪ್ತ ಮಾತೃಕೆಯರ ಶಿಲ್ಪಗಳಿವೆ. ಇದರ ಬಾಗಿಲವಾಡವು ಮುಖ್ಯ ಗರ್ಭಗೃಹದ ಲಕ್ಷಣಗಳನ್ನೆ ಹೊಂದಿದೆ. ಈ ಎರಡು ಗರ್ಭ ಗೃಹಗಳನ್ನು ಒಳಗೊಂಡತೆ ನವರಂಗವಿದೆ. ಇದರಲ್ಲಿ ನಾಲ್ಕು ಕಂಬಗಳಿದ್ದು ಚಚ್ಚೌಕ, ಅಷ್ಟಮುಖಗಳಲ್ಲಿ ಕಡೆಯಲಾಗಿದೆ. ನವರಂಗದಲ್ಲಿ ಮೂರು ಅಡಿ ಎತ್ತರ, ನಾಲ್ಕು ಅಡಿ ಉದ್ದದ ನಂದಿಯ ಶಿಲ್ಪವಿದೆ. ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರವನ್ನು ನಿರ್ಮಿಸಲಾಗಿದೆ.

. ಸಿದ್ದೇಶ್ವರ ದೇವಾಲಯ

ನುಂಕೆಮಲೆಯ ಇನ್ನೊಂದು ಪ್ರಮುಖ ದೇಗುಲವೆಂದರೆ ಸಿದ್ಧೇಶ್ವರ ಅಥವಾ ಕಾಲ ಬೈರವೇಶ್ವರ ದೇವಾಲಯ. ಇದು ಗರ್ಭಗೃಹ, ಅಂತರಾಳ ಮತ್ತು ನವರಂಗ, ಪ್ರಕಾರ ಗೋಡೆ ಮತ್ತು ದ್ವಾರ ಗೋಪುರಗಳನ್ನು ಒಳಗೊಂಡಿದೆ. ಗರ್ಭ ಗೃಹದಲ್ಲಿ ಅರ್ಧ ಅಡಿ ಎತ್ತರದ ಪೀಠದ ಮೇಲೆ ನಾಲ್ಕು ಅಡಿಗಳೆತ್ತರದ ಕಾಲಬೈರವ ಶಿಲ್ಪವನ್ನು ಪ್ರತಿಷ್ಠಾಪಿಸಿರುವರು. ಗರ್ಭಗೃಹದ ಮೇಲೆ ದ್ರಾವಿಡ ಮಾದರಿಯ ದ್ವಿತಲ ಶಿಖರವಿದ್ದು, ಮೇಲ್ಭಾಗದಲ್ಲಿ ಲೋಹದ ಕಳಸವನ್ನು ಪ್ರತಿಷ್ಠಾಪಿಸಿರುವರು. ಪ್ರಾಚೀನ ಕಾಲದ ಪ್ರಸಿದ್ದ ಶೈವ ಕ್ಷೇತ್ರಗಳಲ್ಲಿ ಇದು ಒಂದೆಂಬುದು ಇಲ್ಲಿನ ಶಿಲ್ಪ, ದೇಗುಲ, ಶಾಸನಗಳಿಂದ ಸ್ಪಷ್ಟವಾಗುತ್ತದೆ. ಈ ದೇಗುಲದ ಕಂಬಗಳಲ್ಲಿ ನಂದಿ, ಆಂಜನೇಯ, ಸ್ತ್ರೀಪುರುಷ, ಮೊದಲಾದ ಉಬ್ಬುಶಿಲ್ಪಗಳಿವೆ. ಈ ದೇವಾಲಯಕ್ಕೆ ಕ್ರಿ. ಶ. ೧೦-೧೧ನೇ ಶತಮಾನದಲ್ಲಿ ಆಳಿದ ಕದಂಬ ಮನೆತನದ ಅಜವರ್ಮನು ಕಟ್ಟಿಸಿ ದಾನದತ್ತಿಗಳನ್ನು ನೀಡಿದ್ದುದು ಶಾಸನಗಳಿಂದ ಗೊತ್ತಾಗುತ್ತದೆ. ವೈಶಾಖ ಶುದ್ಧ ಏಕಾದಶಿಯಂದು ಇಲ್ಲಿ ವಿಶೇಷವಾಗಿ ರಥೋತ್ಸವವು ನಡೆಯುತ್ತದೆ. ದ್ವಾದಶಿಯಂದು ಸಿಡಿ ಉತ್ಸವ, ಚತುರ್ದಶಿಯಂದು ಸಿದ್ಧಭುಕ್ತಿ ನಡೆಯುವುದು. ಇವುಗಳಲ್ಲದೆ ಅಶ್ವೋತ್ಸವ, ಪಲ್ಲಕ್ಕಿ ಉತ್ಸವಗಳು ನಡೆಯುವವು.

. ಗೋರಖನಾಥ ಮಠ

ಸಿದ್ಧೇಶ್ವರ ದೇವಾಲಯದ ಎಡಬಾಗದಲ್ಲಿರುವ ಮಠವಿದು. ವಿಶಾಲ ಮಂಟಪದಂತಿರುವ ಈ ದೇಗುಲದಲ್ಲಿ ಗೋರಖನಾಥರ ಗದ್ದುಗೆಯಲ್ಲಿ ಗೋರಖನಾಥ, ತ್ರಿಶೂಲ, ಬೈರವ, ಹಾವು ಮೊದಲಾದ ಉಬ್ಬುಗೆತ್ತನೆಗಳಿವೆ. ಗದ್ದುಗೆಯ ಮೇಲ್ಭಾಗದಲ್ಲಿ ಗೋರಖನಾಥರ ಪಾದಗಳಿವೆ. ಗದ್ದುಗೆಯ ಹಿಂಭಾಗದಲ್ಲಿ ಖಡ್ಗ, ಬಂದೂಕು, ಮೊದಲಾದ ಆಯುಧಗಳನ್ನಿಟ್ಟು ಪೂಜಿಸಲಾಗುತ್ತದೆ. ಇದನ್ನು ಉರಿಗದ್ದುಗೆ ಎಂದು ಕರೆಯುವರು. ಮಹಾನವಮಿಯಲ್ಲಿ ಒಂಭತ್ತು ದಿನಗಳ ಕಾಲ ಇಲ್ಲಿನ ಯತಿಗಳು ಉಪವಾಸ ನಿರತರಾಗಿ ಧ್ಯಾನಕ್ಕೆ ಕುಳಿತುಕೊಳ್ಳುವುದು ರೂಢಿಯಲ್ಲಿದೆ. ಸಿದ್ಧಭಕ್ತಿ ಎಂಬ ಉತ್ಸವವು ಇಲ್ಲಿನ ವಿಶೇಷ ಉತ್ಸವವಾಗಿದೆ. ನುಖೆಮಲೆಯಲ್ಲಿ ತುಪ್ಪದಮ್ಮ, ಯಲ್ಲಮ್ಮ, ತಗ್ಗಿನ ಹನುಮಪ್ಪ ಮತ್ತು ಅರಳಯ್ಯ ದೇವಾಲಯಗಳಿವೆ.

ಜಟಂಗಿ ಬೆಟ್ಟದ ದೇವಾಲಯಗಳು

. ಜಟಂಗಿ ರಾಮೇಶ್ವರ ದೇವಾಲಯ

ಜಟಂಗಿ ಬೆಟ್ಟದ ಮೇಲಿರುವ ಅತಿ ಮುಖ್ಯ ಸ್ಮಾರಕವೆಂದರೆ ರಾಮೇಶ್ವರ ದೇವಾಲಯ. ಇದನ್ನು ಜಟಂಗಿ ರಾಮೇಶ್ವರ ಎಂದೇ ಕರೆಯಲಾಗುತ್ತದೆ. ಈ ಜಟಂಗಿ ಬೆಟ್ಟದಲ್ಲಿರುವ ರಾಮೇಶ್ವರನನ್ನು ಶಾಸನಗಳು ಬಲ್ಗೋಡಿತೀರ್ಥದ ಶ್ರೀರಾಮೇಶ್ವರ, ಬಲ್ಗೋಡಿ ತೀರ್ಥಸ್ಥಾನದ ರಾಮೇಶ್ವರ, ಜಟಾಂಗಿ ರಾಮಯದೇವ, ಜಟಂಗೆ ರಾಮಯದೇವ, ಜೆಟೋಗಿ ರಾಮಯದೇವ ಎಂದು ಮುಂತಾಗಿ ಕರೆದಿವೆ. ಜಟಂಗಿ ಬೆಟ್ಟಕ್ಕೆ ಇರುವ ಪೌರಾಣಿಕತೆಯನ್ನು ರಾಮೇಶ್ವರ ದೇವಾಲಯಕ್ಕೂ ಅನ್ವಯಿಸಬಹುದು.

ಈ ದೇಗುಲವನ್ನು ರಾಮಾಯಣದವರೆಗೂ ಕೊಂಡೊಯ್ಯುವ ಜನ, ಸೀತಾಪಹರಣ ಪ್ರಸಂಗದ ಘಟನೆಯನ್ನು ಈ ಬೆಟ್ಟದ ಸ್ಥಳಗಳಿಗೂ ಅನ್ವಯಿಸಿ ದೃಷ್ಟಾಂತ ಸಹಿತ ವಿವರಿಸುತ್ತಾರೆ. ರಾಮೇಶ್ವರ ದೇವಾಲಯದ ಹಿಂಬದಿಯ ನಾಗರ ಪಡೆ ಗುಂಡಿನ ಮೇಲಿರುವ ಕ್ರಿ. ಶ. ೯೬೨ರ ಶಾಸನವು, “ಸೀತೆಯಂ ರಾವಣನುಯೆ ಜಟಾಯು ಕಾದಿ ಸತ್ತಲ್ಲಿ ರಾಮ ಪ್ರತಿಷ್ಟೆಗೆಯ್ದಲ್ಲಿ ಉಣಂದೇಗುಲಮಂ ಮಾಡಿದಂದೆಯಿಟ್ಟಗೆಯ ದೇಗುಲಮ ಕಳೆದು ಕಳಶ ನಿರ್ಮಾಣಂ ಲಿಂಗಸಿವಜೀಯರ್ಬ್ಭಿಕ್ಷಾವೃತ್ತಿಯಿನ್ದಂ ಕಲ್ಲದೇಗುಲವುಂ ದೇಗುಲಂಗಳುಮಂ ಸಮಯಿಸಿ ಕೊಣ್ಡಗಳುಮಂ ಕಟ್ಟಸಿದರ್” (ಎಕ. ೧೧, ಮೊಕಾ. ೨೭) ಎಂದು ಹೇಳುತ್ತದೆ. ಕ್ರಿ. ಶ. ೯೬೨ ಕ್ಕೂ ಮುಂಚೆಯೇ ಇಟ್ಟಿಗೆಯ ರಾಮೇಶ್ವರ ದೇವಾಲಯ ಇಲ್ಲಿದ್ದು, ಅದು ಈ ಹೊತ್ತಿಗೆ ಶಿಥಿಲಗೊಂಡ ಕಾರಣ ಅದನ್ನು ಕೆಡವಿ ಕಲ್ಲ ದೇಗುಲವಾಗಿ ನಿರ್ಮಿಸಲಾಯಿತೆಂಬುದು ಶಾಸನದಿಂದ ದೃಢ ಪಡುವ ಸಂಗತಿ. ರಾಮೇಶ್ವರ ದೇವಾಲಯದ ಜೊತೆಗೆ ಇತರ ದೇಗುಲಗಳು ನಿರ್ಮಾಣಗೊಂಡವೆಂಬುದು ಇದೇ ಶಾಸನದಿಂದ ತಿಳಿದುಬರುತ್ತದೆ. ಈ ಎಲ್ಲ ದೇವಾಲಯಗಳನ್ನು ಕಟ್ಟಿಸಿದ ವ್ಯಕ್ತಿ ಲಿಂಗಸಿವಜೀಯ ಎಂಬ ಭಿಕ್ಷಾವೃತ್ತಿಯತಿಯೆಂಬುದು ಗಮನಾರ್ಹ.

ರಾಮೇಶ್ವರ ದೇವಾಲಯದ ಗರ್ಭಗೃಹ, ಅಂತರಾಳ, ನವರಂಗಗಳಿಂದ ಕೂಡಿದೆ ಹಾಗೂ ದೇಗುಲದ ಆವರಣದಲ್ಲಿ ವಿವಿಧ ಉಪದೇಗುಲಗಳು, ದೀಪಸ್ತಂಭ, ಮತ್ತು ಮಹಾದ್ವಾರಗಳನ್ನು ಒಳಗೊಂಡ ವಿಸ್ತಾರ ದೇಗುಲವಾಗಿದೆ. ಚಚ್ಚೌಕ ತಳವಿನ್ಯಾಸದ ಮೇಲೆ ಕಟ್ಟಿದ ಗರ್ಭಗೃಹದಲ್ಲಿ ಒಂದು ಅಡಿ ಎತ್ತರದ ಪಾನವಟ್ಟದ ಮೇಲೆ ಅರ್ಧ ಅಡಿ ಎತ್ತರದ ಶಿವಲಿಂಗವಿದೆ. ಗರ್ಭಗೃಹದ ಮೇಲ್ಛಾವಣಿಯಲ್ಲಿ ಪದ್ಮದ ಅಲಂಕರಣೆಯನ್ನು ಕಡೆದಿರುವರು. ಗರ್ಭಗೃಹದ ಬಾಗಿಲುವಾಡವು ಸರಳವಾಗಿದ್ದು, ದ್ವಾರಬಂಧದಲ್ಲಿ ಗಜಲಕ್ಷ್ಮಿಯ ಉಬ್ಬುಗೆತ್ತನೆಯನ್ನು ಕಾಣಬಹುದು. ಅಂತರಾಳದಲ್ಲಿ ಸುಕನಾಸಿಯ ಭಾರವನ್ನು ತಡೆಯಲೆಂದು ಎರಡು ಚಚ್ಚೌಕ ಕಂಬಗಳನ್ನು ನಿಲ್ಲಿಸಲಾಗಿದೆ.

ಅಂತರಾಳದ ಮುಂಭಾಗದಲ್ಲಿ ನಾಲ್ಕು ಕಂಬಗಳು ಮತ್ತು ಒಂಬತ್ತು ಅಂಕಣಗಳನ್ನು ಹೊಂದಿದ ನವರಂಗವಿದೆ. ಇದರಲ್ಲಿ ರಾಮೇಶ್ವರಲಿಂಗಕ್ಕೆ ಎದುರಾಗಿ ನಂದಿಯನ್ನು ಪ್ರತಿಷ್ಟಾಪಿಸಲಾಗಿದೆ. ನವರಂಗವು ನಂತರದ ಕಾಲದಲ್ಲಿ ಜಿರ್ಣೋದ್ಧಾರ ಗೊಂಡಿದೆ. ಇದಕ್ಕೆ ವಿಭಿನ್ನ ಶೈಲಿ ಮತ್ತು ಕಾಲದ ಕಂಬಗಳು ಬಳಕೆಗೊಂಡಿರುವುದು ಕಾರಣವಾಗಿದೆ. ಈ ಕಂಬಗಳಲ್ಲಿ ಕಲ್ಯಾಣ ಚಾಲುಕ್ಯ ಕಾಲದ ನಕ್ಷತ್ರಾಕಾರದ ಕಂಬಗಳೂ ಸೇರಿವೆ.

ಗರ್ಭಗೃಹದ ಮೇಲೆ ದ್ರಾವಿಡ ಮಾದರಿಯ ದ್ವಿತಲ ಶಿಖರವಿದೆ. ಶಿಖರವಿದ ಮುಂಭಾಗದಲ್ಲಿ ಮುಂಚಾಚಿರುವ ಸುಕನಾಸಿಯಿದೆ. ಗರ್ಭಗೃಹದ ಹೊರಭಿತ್ತಿಯಲ್ಲಿ ಅರೆಗಂಬ, ಕೂಡೂಗಳಿದ್ದು, ಕಪೋತದ ಕೆಳಗೆ ಗಿಳಿಗಳ ಸಾಲನ್ನು ಸುತ್ತಲೂ ಕಾಣಬಹುದು. ಪ್ರಾಕೃತಿಕವಾಗಿ. ಮಳೆಯಿಂದ ದೇಗುಲದ ಗೋಡೆಯನ್ನು ರಕ್ಷಿಲು ಮುಂಚಾಚಿದ ಕಪೋತವನ್ನು ರಚಿಸಲಾಗಿದೆ. ಕಪೋತದ ಮೇಲೆ ಶಾಲ-ಕೂಟ-ಪಂಜರಗಳುಳ್ಳ ಹಾರವಿದ್ದು. ದ್ವಿತಲ ಮತ್ತು ತ್ರಿತಲಗಳನ್ನು ಅರೆಗಂಬ, ಕೂಡುಗಳಿಂದ ಅಲಂಕರಿಸಿರುವವರು. ಮೇಲ್ಭಾಗದಲ್ಲಿ ಮುಚ್ಚಿದ ಬೋಗುಣಿಯಾಕಾರದ ಶಿಖರವಿದ್ದು ಅದರ ಮೇಲೆ ಕಳಸವಿದೆ.

ಜಟಂಗಿ ರಾಮೇಶ್ವರ ದೇವಾಲಯವು ಪ್ರಾಚೀನ ಕಾಲದಿಂದಲೂ ಈ ಪರಿಸರದ ಆರಾಧ್ಯ ದೈವ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಅನೇಕ ಶಾಸನ-ತಾಮ್ರಪಟಗಳಿವೆ. ಅವುಗಳಲ್ಲಿ ವಿವಿಧ ಅರಸ-ಸಾಮಂತರು ದಾನದತ್ತಿ ನೀಡಿದ ಹಾಗೂ ಜೀರ್ಣೋದ್ಧಾರಗೊಳಿಸಿದ ವಿವರಗಳಿವೆ. ಕ್ರಿ. ಶ. ೯೬೨ರ ಶಾಸನದಲ್ಲಿ ಇಟ್ಟಿಗೆಗಳಿಂದ ನಿರ್ಮಾಣವಾಗಿದ್ದ ರಾಮೇಶ್ವರ ದೇವಾಲಯವನ್ನು ತೆಗೆಸಿ ಕಲ್ಲದೇಗುಲವನ್ನು ಕಟ್ಟಿಸಿ ದೇವಾಲಯದ ಪೂಜೆ-ಪುರಸ್ಕಾರಗಳಿಗೆಂದು ಭೂದಾನ (ಎಕ. ೧೧, ಮೊಕಾ. ೨೭) ಬಿಟ್ಟ ವಿವರವಿದೆ. ಕ್ರಿ.ಶ. ೧೦೪೧ರಲ್ಲಿ ಮಲ್ಲರಸನೆಂಬುವವನು ಈ ದೇವಾಲಯಕ್ಕೆ ದತ್ತಿಬಿಟ್ಟ (ಎಕ. ೧೧, ಮೊಕಾ. ೩೩) ಶಾಸನವಿದೆ. ಕ್ರಿ. ಶ. ೧೦೬೪ರಲ್ಲಿ ಕಲ್ಯಾಣ ಚಾಲುಕ್ಯ ಅರಸ ವಿಜಯಾದಿತ್ಯನು ಬಲ್ಗೊಡಿತೀರ್ಥದ ಶ್ರೀರಾಮೇಶ್ವರ ದೇವರ ನೈವೇದ್ಯ, ಕಂಟಸ್ಪಟಿಕ ಕಂಪೆರಕ, ರಂಗಬೋಗದ ಸೂಳೆಯರಿಗೆ, ತಪೋಧನರಿಗೆ ವಿದ್ಯಾದಾನಕ್ಕೆಂದು ದೇವೇಂದ್ರ ಪಂಡಿತರಿಗೆ ಧಾರಾಪೂರ್ವಕವಾಗಿ ಕಣಿಯಕಲ್ಲು-೩೦೦ರ ದಂಡಾಕಿವಡುವಳಿಕೆ-೨೦ರ ಕಿರಿಯ ಡಾಕಿ ಎಂಬಲ್ಲಿ ಮೂವತ್ತು ಮತ್ತರು ಭೂಮಿಯನ್ನು (ಎಕ. ೧೧, ಮೊಕಾ. ೨೯) ದಾನ ನೀಡಿದ್ದನು. ಶಾಸನದಲ್ಲಿನ ಈ ವಿವರದಿಂದ ರಾಮೇಶ್ವರ ದೇವಾಲಯದಲ್ಲಿ ೧೦-೧೧ನೇಯ ಶತಮಾನಗಳಲ್ಲಿ ಆಚರಣೆಯಲ್ಲಿದ್ದ ಪೂಜೆ-ಉತ್ಸವಗಳು, ಅಂದು ಅಸ್ತಿದ್ವಲ್ಲಿದ್ದ ರಂಗಭೋಗ ಮತ್ತು ಅದಕ್ಕೆಂದೇ ಸೂಳೆ (ದೇವದಾಸಿ)ಯರಿದ್ದುದನ್ನು ಅರಿಯಬಹುದು. ಅಲ್ಲದೆ ಜಟಂಗಿ ರಾಮೇಶ್ವರ ದೇವಾಲಯವು ಕೇವಲ. ಧಾರ್ಮಿಕ ಎಡೆಯಾಗಿರದೆ ಪ್ರಾಚೀನ ವಿದ್ಯಾಕೇಂದ್ರವಾಗಿತ್ತೆಂಬುದು ಶಾಸನಸ್ಥ ಸಂಗತಿ. ಇದರಿಂದ ಜಟಂಗಿ ರಾಮೇಶ್ವರ ದೇವಾಲಯವು ೧೦-೧೧ನೇಯ ಶತಮಾನದಲ್ಲಿ ಈ ಪರಿಸರದ ಪ್ರಸಿದ್ಧ ಜ್ಞಾನ ದೇಗುಲವೂ ಆಗಿದ್ದುದು ಗಮನಾರ್ಹ. ಇದೇ ರೀತಿ ಕ್ರಿ. ಶ. ೧೦೭೧ರಲ್ಲಿ ನೊಳಂಬ ಪಲ್ಲವ ಪೆರ್ಮಾಡಿ ಜಯಸಿಂಗದೇವನು ಬಲ್ಗೋಡಿ ತೀರ್ಥಸ್ಥಾನದ ರಾಮೇಶ್ವರ ದೇವರಿಗೆ ಕಣಿಯಕಲ್ಲು-೩೦೦ರ ಬಳಿಯಿದ್ದ ಬಾಡಬಣ್ಣಿಕಲ್ಲನ್ನು (ಎಕ. ೧೧, ಮೊಕಾ. ೨೮) ದೇವಾಲಯದ ಅಮೃತರಾಸಿ ಜೀಯರಿಗೆ ಧಾರೆಯೆರೆದು ಬಿಟ್ಟುಕೊಟ್ಟಿದ್ದನು.

ಹೊಯ್ಸಳ ಅಧಿಕಾರಿ ಹುಲಿವಾನದ ಸಾವಂತ ಸಿವೋದಯನಾಯಕನ ತಾಯಿಯಾದ ಹೊನ್ನವ್ವೆ ನಾಯಕಿತಿಯ ಆರಾಧ್ಯ ದೈವವಾಗಿದ್ದಿತು. ಈಕೆ ಜಟಂಗಿ ಬೆಟ್ಟವನ್ನೇರಿ ಸೀತಾದೊಣೆಯಲ್ಲಿ ಪುಣ್ಯಸ್ನಾನ ಮಾಡಿ ರಾಮೇಶ್ವರನ್ನು ಪೂಜಿಸಿ ದಾನ-ಧರ್ಮಗಳನ್ನು ಮಾಡಿ ಶಿವ ಐಕ್ಯಳಾದಳೆಂದೂ ಹೇಳಲಾಗುತ್ತದೆ. ಈ ರಾಮೇಶ್ವರ ದೈವವು ಕುಮ್ಮಟದುರ್ಗದ ನಾಯಕ ಕಂಪಿಲರಾಯನ ಮನೆ ದೇವರಾಗಿದ್ದು, ಕುಮಾರ ರಾಮನನ್ನು ಕೆಲಕಾಲ ಇಲ್ಲಿನ ನೆಲಮಾಳಿಗೆಯಲ್ಲಿ ಇಟ್ಟಿದ್ದ ವಿಷಯ ಕೈಫಿಯತ್ತುಗಳಿಂದ ತಿಳಿದುಬರುತ್ತದೆ. ಅವುಗಳಲ್ಲಿ ಕುಮಾರ ರಾಮನು ಜಟಂಗಿ ರಾಮೇಶ್ವರನ ವರಪ್ರಸಾದದಿಂದ ಹುಟ್ಟಿದವನೆಂದೂ, ಈ ಕಾರಣದಿಂದ ಅವನಿಗೆ ಕುಮಾರರಾಮನೆಂಬ ಹೆಸರಿನಿಂದ ಕರೆಯಲಾಯಿತೆಂದೂ ಹೇಳಿವೆ. ಸ್ವತಃ ಕುಮಾರ ರಾಮನು ನಾನು ಜಟಂಗಿ ರಮೇಶ್ವರನ ವರಪ್ರಸಾದದಿಂದ ಹುಟ್ಟಿದವನೆಂದು (ಕ.ಕೈ., ಪು. ೪೪೮) ಹೇಳಿಕೊಂಡಿದ್ದಾನೆ. ಅಲ್ಲದೆ ಕುಮಾರರಾಮನು ಮುಸ್ಲಿಮರ ಸೈನ್ಯದ ವಿರುದ್ಧ ಹೋರಾಡಿ ಮಡಿದಾಗ, “ಜಟಂಗಿ ರಾಮೇಶ್ವರ ದೇವರು ಪ್ರಸನ್ನರಾಗಿ, ದಿವ್ಯವಿಮಾನವನ್ನು ತಂದು, ಕುಮಾರರಾಮನು ವೈಕುಂಟಕ್ಕೇರಿದನು” (ಕ, ಕ., ಪ. ೪೪೮) ಎಂದು ವರ್ಣಿಸಲಾಗಿದೆ.

ಕ್ರಿ. ಶ. ೧೪೩೦ರಲ್ಲಿ ಎರಡನೇಯ ದೇವರಾಯ (ಪ್ರೌಢದೇವರಾಯನು) ಇಲ್ಲಿಯ ಮಾಚನಹಳ್ಳಿ ಸೀಮೆಗೆ ಬೇಟೆಗೆಂದು ಬಂದಾಗ ರಾಮದೇವರ ದರ್ಶನ ಪಡೆದು ಆ ದೇವರಿಗೆ ರಾಯದುರ್ಗ ಚಾವಡಿಯಿಂದ ಸಲುವ ಅಮೃತಪಡಿಯ ಕಟ್ಟಲೆಯಾದ ೨೦ ವರಾಹ ಹುಟ್ಟುವಳಿಯ ಒಂದು ಗ್ರಾಮ ಮತ್ತು ಆನೆಯ ನಾಡಿನ ಸಂಗೇಬೋವನ ಕಾಲುವೆಯ ಕೋರು ಸುವರ್ಣಾದಾಯ, ಆ ಕಾಲುವೆಯ ಚತು ಸೀಮೆಗೆ ಸಲುವ ನಿಧೀ ನಿಕ್ಷೇಪ ಮೊದಲಾದ ಸರ್ವೋತ್ಪತ್ತಿಗಳನ್ನು ಬಿಡಲು ತನ್ನ ಅಧಿಕಾರಿಗಳಿಗೆ ತಿಳಿಸಿದ್ದನು. ಹೀಗೆ ಪ್ರಾಚೀನ ಕಾಲದಿಂದಲೂ ಪ್ರಸಿದ್ಧವಾದ ಶೈವಕ್ಷೇತ್ರವಾಗಿ ಮುಂದುವರಿದು ಬಂದಿದೆ. ಜಟಂಗಿ ಬೆಟ್ಟದ ಮೇಲೆ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ವೀರಭದ್ರ, ಗಣೇಶ, ಮಹಿಷಮರ್ಧಿನಿ, ಪರಶುರಾಮ ಮೊದಲಾದ ಪ್ರಾಚೀನ ದೇವಾಲಯಗಳಿವೆ.

೨. ಗಣೇಶ ದೇವಾಲಯ

ರಾಮಸಾಗರ (ಜೀಯರಹಳ್ಳಿ)ದಿಂದ ಜಟಂಗಿ ರಾಮೇಶ್ವರ ಬೆಟ್ಟವೇರುವ ಸೋಪಾನಗಳಿಗೂ ಮುನ್ನ ಭಗ್ನಗೊಂಡ ಒಂದು ಪ್ರಾಚೀನ ಇಟ್ಟಿಗೆಯ ದೇವಾಲಯವಿದೆ. ಅದೇ ಗಣೇಶ ದೇವಾಲಯ. ಪೂರ್ವಾಭಿಮುಖವಾಗಿ ಕಟ್ಟಲಾದ ಈ ದೇವಾಲಯವು ಗರ್ಭಗೃಹ ಮತ್ತು ಸಭಾಮಂಟಪಗಳಿಂದ ಕೂಡಿದ್ದ ಗರ್ಭಗೃಹವು ಇಂದು ಶಿಥಿಲಾವಸ್ಥೆಯಲ್ಲಿದೆ. ಇದು ೧೨x೮x೨.೭೫ ಅಂಗುಲ ಅಳತೆಯ ಸುಟ್ಟ ಇಟ್ಟಿಗೆಗಳನ್ನು ಬಳಸಿ ಕಟ್ಟಿದ ದೇವಾಲಯವಿದೆ. ಇದಕ್ಕೆ ಕಲ್ಲಿನ ಕಂಬ ಮತ್ತು ಚಪ್ಪಡಿಗಳನ್ನು ಬಳಸಿರುವರು. ಈ ದೇಗುಲದಂತೆ ಇಟ್ಟಿಗೆಯಲ್ಲಿ ಕಟ್ಟಿದ ಚಿಕ್ಕಪುಟ್ಟ ಗುಡಿಗಳು ಜಟಂಗಿ ರಾಮೇಶ್ವರ ಬೆಟ್ಟದ ಮೇಲಿವೆ. ಮೂಲತಃ ಜಟಂಗಿ ರಾಮೇಶ್ವರ ದೇವಾಲಯವು. ಕ್ರಿ. ಶ. ೯೬೨ರ ಪೂರ್ವದಲ್ಲಿ ಇಟ್ಟಿಗೆ ದೇಗುಲವೆಂಬುದು ಶಾಸನೋಕ್ತ ವಿಷಯ. ಈ ಹಿನ್ನೆಲೆಯಲ್ಲಿ ಈ ದೇಗುಲವು ಇದೇ ಅವಧಿಯಲ್ಲಿ ನಿರ್ಮಾಣವಾಗಿರುವ ಸಾಧ್ಯತೆಯಿದೆ.

ಗರ್ಭಗೃಹವು ಚಚ್ಚೌಕವಾಗಿದ್ದು ಸರಳ ಶೈಲಿಯ ನಾಲ್ಕು ಕಂಬಗಳಿಂದ ಮುಚ್ಚಿ ಇಟ್ಟಿಗೆಯಲ್ಲಿ ಶಿಖರವನ್ನು ನಿರ್ಮಿಸಿ ಮೇಲ್ಭಾಗದಲ್ಲಿ ಚಪ್ಪಡಿಗಳನ್ನು ಮುಚ್ಚಲಾಗಿದೆ. ಶಿಖರದ ಅಲಂಕರಣೆ ಸಂಪೂರ್ಣ ನಶಿಸಿದ್ದು ಪಿರಮಿಡ್ಡಿನಾಕಾರದಲ್ಲಿ ಜೋಡಿಸಿದ ಇಟ್ಟಿಗೆಗಳು ಮಾತ್ರ ಉಳಿದಿವೆ. ಗರ್ಭಗೃಹದ ನೆಲಹಾಸನ್ನು ಇಟ್ಟಿಗೆಗಳಿಂದ ದಮ್ಮಸ್ಸು ಮಾಡಿರುವರು. ಇತ್ತೀಚೆಗೆ ಈ ದೇಗುಲಕ್ಕೆ ರಕ್ಷಣೆಯಿಲ್ಲದೆ ಭಗ್ನಗೊಂಡು ಗರ್ಭಗೃಹವು ಹುತ್ತದಿಂದ ಆವರಿಸಿದೆ.

ಗರ್ಭಗೃಹದಲ್ಲಿ ಮೂರು ಅಡಿ ಎತ್ತರದ ಹಸಿರುಮಿಶ್ರಿತ ಕಪ್ಪುಶಿಲೆಯ ಗಣೇಶ ಶಿಲ್ಪವಿದೆ. ಈ ಶಿಲ್ಪದ ವೈಶಿಷ್ಟ್ಯವೆಂದರೆ ಎರಡು ಕೈಗಳನ್ನು ಮಾತ್ರ ಹೊಂದಿರುವುದು ದಕ್ಷಿಣ ಭಾರತದಲ್ಲಿ ದೊರೆತ ಪ್ರಾಚೀನ ಗಣೇಶ ಶಿಲ್ಪಗಳೆಲ್ಲವೂ ಸಾಮಾನ್ಯವಾಗಿ ನಾಲ್ಕು ಕೈಗಳನ್ನು ಹೊಂದಿವೆ. ಆದರೆ ಇಲ್ಲಿನ ಗಣೇಶ ಎರಡು ಕೈಗಳನ್ನು ಹೊಂದಿದ್ದಾನೆ. ಇದೇ ರೀತಿ ಎರಡು ಕೈಗಳನ್ನು ಹೊಂದಿರುವ ಗಣೇಶ ಶಿಲ್ಪಗಳು ಬಾದಾಮಿಯ ಒಂದನೆಯ ಗುಹೆ, ಚೆನ್ನೈ ಎಗ್ಮೋರ್ ವಸ್ತುಸಂಗ್ರಹಾಲಯ ಮತ್ತು ಕನ್ನಡ ವಿಶ್ವವಿದ್ಯಾಲಯದ ವಸ್ತುಸಂಗ್ರಹಾಲಯಗಳಲ್ಲಿವೆ. ಈ ಬಗೆಯ ಎರಡು ಕೈಗಳುಳ್ಳ ಗಣೇಶ ಶಿಲ್ಪಗಳಿದ್ದರೂ ತುಂಬಾ ಅಪರೂಪವೇ ಸರಿ.

ಗಣೇಶನು ಸುಖಾಸೀನನಾಗಿ ಕುಳಿತಿದ್ದು ಕರಂಡ ಮುಕುಟಧಾರಿಯಾಗಿದ್ದಾನೆ. ಎಡಗೈಯಲ್ಲಿ ಮೋದಕ, ಬಲಗೈಯಲ್ಲಿ ಲೇಖನಿಗಳನ್ನು ಹಿಡಿದಿದ್ದು ಸರ್ಪವು ಹೊಟ್ಟೆಯನ್ನು ಸುತ್ತುವರಿದಿದೆ. ಸೊಂಡಿಲು ಮೋದಕವನ್ನು ಮೂಸುತ್ತಿದೆ. ವಿವಿಧ ಆಭರಣಗಳಿಂದ ಅಲಂಕೃತನಾದ ಗಣೇಶ ಕೈಬಳೆ, ಕಾಲ್ಕಡಗಳನ್ನು ಕೊರಳಲ್ಲಿ ಕಂಠಹಾರಗಳನ್ನು ಧರಿಸಿರುವನು. ಈ ಶಿಲ್ಪಗಳು ಲಕ್ಷಣಗಳನ್ನಾಧರಿಸಿ ವಿದ್ವಾಂಸರು ಕ್ರಿ. ಶ. ೧೦-೧೧ನೇಯ ಶತಮಾನದಲ್ಲಿ (MAR., 1930, P. 27) ನೊಳಂಬರ ಕಾಲದಲ್ಲಿ ಪ್ರತಿಷ್ಟಾಪಿಸಲಾದ ಶಿಲ್ಪವಿರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಗಣೇಶ ಶಿಲ್ಪದ ಎಡಬದಿಯಲ್ಲಿ ಭೈರವನ ಚಿಕ್ಕ ಶಿಲ್ಪವೊಂದಿದೆ. ಭೈರವ ತನ್ನ ನಾಲ್ಕು ಕೈಗಳಲ್ಲಿ ತ್ರಿಶೂಲ, ಡಮರು, ಖಡ್ಗ ಮತ್ತು ಅಕ್ಷಯ ಪಾತ್ರೆಗಳನ್ನು ಹಿಡಿದಿದ್ದಾನೆ. ಗರ್ಭಗೃಹದ ಮುಂಭಾಗದಲ್ಲಿ ಸಭಾಮಂಟಪದ ಅವಶೇಷಗಳಿವೆ. ಇಂದು ಇದು ಸಂಪೂರ್ಣವಾಗಿ ಬಿದ್ದುಹೋಗಿದ್ದು, ಇದನ್ನು ನೆಲಹಾಸಿನಿಂದ ಮಾತ್ರ ಗುರುತಿಸಬಹುದಾಗಿದೆ.

ಜಟಂಗಿ ರಾಮೇಶ್ವರ ಬೆಟ್ಟದ ಮೇಲೆ ಅನೇಕ ಸಣ್ಣಪುಟ್ಟ ದೇವಾಲಯಗಳಿವೆ. ಅವುಗಳಲ್ಲಿ ಕೇದಾರೇಶ್ವರ, ಸೋಮೇಶ್ವರ, ಗಣೇಶ, ಮಹಿಷಮರ್ಧಿನಿ, ಸೂರ್ಯ, ವೀರಭದ್ರ, ಜನಾರ್ಧನ, ಚಾಮುಂಡೇಶ್ವರಿ (ಮಹಿಷಮರ್ಧಿನಿ), ಮಹಾಬಲೇಶ್ವರ, ಚಂದ್ರಮೌಳೀಶ್ವರ, ಅರ್ಕೇಶ್ವರ, ಚಂಡಿಕೇಶ್ವರ, ಜುಂಬುಕೇಶ್ವರ, ವಿರೂಪಾಕ್ಷೇಶ್ವರ, ಕಾಲಭೈರವ, ಕಾಶೀಪುರಾಧೀಶ್ವರ ಮೊದಲಾದ ದೇವಾಲಯಗಳನ್ನು ಹಾಗೂ ಶಿಲ್ಪಾಶೇಷಗಳನ್ನು ಜಟಂಗಿ ಬೆಟ್ಟದ ಮೇಲೆ ಕಾಣಬಹುದಾಗಿದೆ. ಇದರಿಂದ ಜಟಂಗಿ ಬೆಟ್ಟ ಪರಿಸರದಲ್ಲಿ ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಪರಂಪರೆಯ ಔನ್ನತ್ಯವನ್ನು ಗುರುತಿಸಬಹುದಾಗಿದೆ.

ದೇವಸಮುದ್ರದ ದೇವಾಲಯಗಳು

ದೇವಸಮುದ್ರದಲ್ಲಿ ಪ್ರಾಚೀನ ಕಾಲದ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಪಂಪಾಪತಿ, ಭೋಗೇಶ್ವರ, ಗಣೇಶ, ಚೆನ್ನಕೇಶವ, ವೀರಭದ್ರ ಮೊದಲಾದ ಪ್ರಾಚೀನ ಹಾಗೂ ನೀಲಕಂಠೇಶ್ವರ, ಈಶ್ವರ, ಆಂಜನೇಯ, ಯಲ್ಲಮ್ಮ ದೇವಾಲಯಗಳಿವೆ.

೧. ಭೊಗೇಶ್ವರ ದೇವಾಲಯ

ಗ್ರಾಮದ ಪೂರ್ವಕ್ಕೆ ಜಮೀನೊಂದರಲ್ಲಿರುವ ದೇವಾಲಯವಿದ್ದು. ಪೂರ್ವಾಭಿಮುಖವಾಗಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳನ್ನು ಒಳಗೊಂಡಿದೆ. ಕಣಶಿಲೆಯನ್ನು ಬಳಸಿ ಕಟ್ಟಲಾದ ಈ ದೇಗುಲವನ್ನು ಸ್ಥಳೀಯರು ಬೋಗಪ್ಪನ ಗುಡಿಯೆಂದೇ ಕರೆಯುತ್ತಾರೆ.

ಗರ್ಭಗೃದಲ್ಲಿ ಯಾವುದೇ ಶಿಲ್ಪವಿರುವುದಿಲ್ಲ, ಪೀಠ ಮಾತ್ರ ಉಳಿದಿದೆ. ಇದರ ಬಾಗಿಲು ವಾಡದ ಎರಡೂ ಕಡೆ ಫಲಭರಿತ ಕುಂಭಗಳ ಉಬ್ಬುಗೆತ್ತನೆಗಳನ್ನು ಕಡೆಯಲಾಗಿದೆ. ಅಂತರಾಳದ ಬಾಗಿಲುವಾಡವು ಸರಳವಾಗಿದ್ದು, ಯಾವುದೇ ಬಗೆಯ ಆಲಂಕರಣೆಯಿರುವುದಿಲ್ಲ. ಅಂತರಾಳದ ಮುಂಭಾಗದಲ್ಲಿ ತೆರೆದ ಸಭಾಮಂಟಪವಿದ್ದು ಅದಕ್ಕೆ ಉತ್ತರ ದಿಕ್ಕಿನಲ್ಲಿ ಪ್ರವೇಶವನ್ನು ಕಲ್ಪಿಸಲಾಗಿದೆ. ಸಭಾಮಂಟಪದಲ್ಲಿ ಒಟ್ಟು ಹದಿನಾಲ್ಕು ಕಂಬಗಳಿವೆ. ವಿಜಯನಗರ ಶೈಲಿಯ ಈ ಕಂಬಗಳು ಚಚ್ಚೌಕ ಹಾಗೂ ಅಷ್ಟಮುಖಗಳಲ್ಲಿವೆ. ಕಂಬದ ಮೇಲೆ ಯಾವುದೇ ಉಬ್ಬುಶಿಲ್ಪಗಳು ಇರುವುದಿಲ್ಲ ಸಭಾಮಂಟಪ ಮೇಲ್ಛಾವಣಿಯಲ್ಲಿ ಅಷ್ಟಕೋನಾಕಾರದಲ್ಲಿ ಕೂಡಿಸಿದ ಹಾಗೂ ಪದ್ಮದ ರಚನೆಯಿರುವ ಭುವನೇಶ್ವರಿಯಿದೆ. ಗರ್ಭಗೃಹದ ಮೇಲೆ ಯಾವುದೇ ಬಗೆಯ ಶಿಖರವಿಲ್ಲ ಮೂಲತಃ ಇದೊಂದು ಈಶ್ವರ ದೇವಾಲಯವಿರಬಹುದು.

೨. ವಿಠಲರಾಯ (ಚೆನ್ನಕೇಶವ) ದೇವಾಲಯ

ದೇವಸಮುದ್ರದ ಗ್ರಾಮದಲ್ಲಿ ಪಶ್ಚಿಮಕ್ಕಿರುವ ಈ ದೇವಾಲಯವು ಸಂಪೂರ್ಣ ಭಗ್ನಗೊಂಡಿದ್ದು, ಅಡಿಪಾಯದಿಂದ ಮಾತ್ರ ಇದನ್ನು ಗುರುತಿಸಬಹುದಾಗಿದೆ. ಅಡಿಪಾಯದಲ್ಲಿ ಕಾಣಬರುವಂತೆ ಇದು ಗರ್ಭಗೃಹ, ಅಂತರಾಳ ಮತ್ತು ಸಭಾ ಮಂಟಪಗಳನ್ನು ಒಳಗೊಂಡ ವಿಸ್ತಾರವಾದ ದೇವಾಲಯವಾಗಿದ್ದಿತು. ಈ ದೇಗುಲಕ್ಕೆ ಸಂಬಂಧಿಸಿದ ವಿಷ್ಣುವಿನ ಶಿಲ್ಪವು ಮುಂಭಾಗದಲ್ಲಿದೆ. ಅಲ್ಲದೆ ಈ ದೇವಾಲಯದ ಮುಂಭಾಗದಲ್ಲಿ ಕಣಶಿಲೆಯಲ್ಲಿ ಕಡೆದ ಸುಮಾರು ಇಪ್ಪತ್ತು ಅಡಿಗಳೆತ್ತರದ ದೀಪ ಸ್ತಂಭವಿದೆ. ಇಲ್ಲಿ ಕಾಣಬರುವ ದೇಗುಲದ ಅಡಿಪಾಯ, ವಿಷ್ಣುಶಿಲ್ಪ ಮತ್ತು ದೀಪಸ್ತಂಭಗಳಿಂದ ವಿಜಯನಗರ ಕಾಲದ ದೇವಾಲಯವೊಂದು ಇಲ್ಲಿದ್ದುದು ದೃಢವಾಗುತ್ತದೆ.

ಇಲ್ಲಿರುವ ವಿಷ್ಣುಶಿಲ್ಪವನ್ನು ಚೆನ್ನಕೇಶವ, ಚೆನ್ನಿಗರಾಯ, ಚೆನ್ನವೀರಯ್ಯಸ್ವಾಮಿ ಎಂದೆಲ್ಲಾ ಸ್ಥಳೀಯರು ಕರೆಯುತ್ತಾರೆ. ಕ್ಪು ಶಿಲೆಯಲ್ಲಿ ಕಡೆದ ಈ ಶಿಲ್ಪವು ಎರಡೂವರೆ ಅಡಿಗಳಷ್ಟು ಎತ್ತರವಾಗಿದೆ. ಸಮಭಂಗಿಯಲ್ಲಿರುವ ವಿಷ್ಣುವು ತನ್ನ ನಾಲ್ಕು ಕೈಗಳಲ್ಲಿ ಮೇಲಿನವು ಚಕ್ರ, ಶಂಖಗಳನ್ನು ಹಿಡಿದಿದ್ದು, ಕೇಳಗಿನವು ಭಗ್ನಗೊಂಡಿವೆ. ಎಡಗೈಯಲ್ಲಿ ಗದೆ ಮಾತ್ರ ಕಂಡುಬರುತ್ತದೆ. ಕೆಳಭಾಗದಲ್ಲಿ ಶ್ರೀದೇವಿ ಮತ್ತು ಭೂದೇವಿಯರನ್ನು ಕಡೆದಿರುವರು. ಇವರು ತಮ್ಮ ಒಂದೊಂದು ಕೈಗಳಲ್ಲಿ ಪದ್ಮವನ್ನು ಹಿಡಿದಿರುವರು. ಕಿರೀಟ ಮುಕುಟಧಾರಿಯಾದ ವಿಷ್ಣುವು ವಿವಿಧ ಆಭರಣಗಳಿಂದ ಅಲಂಕೃತನಾಗಿರುವನು. ಆಭರಣಗಳಲ್ಲಿ ಕರ್ಣಕುಂಡಲ, ಕಂಠಹಾರ, ಹಾರ, ಚೆನ್ನವೀರ, ತೋಳ್ಬಂದಿ, ಕೈಡಗ, ಕಾಲ್ಕಡಗ ಹಾಗೂ ಸೊಂಟದಲ್ಲಿ ದೋತ್ರವನ್ನು ಧರಿಸಿರುವನು.

ಈ ಗ್ರಾಮದಲ್ಲಿ ವಿಜಯನಗರದ ಎರಡು ಶಾಸನಗಳಿದ್ದು, ಅವು ಸದಾಶಿವರಾಯನ ಕಾಲದಲ್ಲಿ ವಿಠಲದೇವರಿಗೆ ಬಿಟ್ಟ ದಾನದತ್ತಿಯ ವಿವರವನ್ನು ಒಳಗೊಂಡಿವೆ. ಶಾಸನದಲ್ಲಿ ದೊರೆಯುವ ವಿವರದನ್ವಯ ಈ ದೇವಾಲಯ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣವಾಗಿರುವ ದಾನದತ್ತಿಗಳನ್ನು ನೀಡಿ ಪ್ರೋತ್ಸಾಹಿಸಿರುವುದನ್ನು ಕಾಣಬಹುದು.

ಶಾಸನಗಳು ಪ್ರಸ್ತಾಪಿಸುವ ವಿಠಲ ದೇಗುಲವು ಈಗ ಕಾಣಬರುವುದಿಲ್ಲ. ಆದರೆ ಶಾಸನಗಳು ಹೇಳುವ ಮಾಹಿತಿಯನ್ವಯ ಈ ಗ್ರಾಮದಲ್ಲಿ ಕಂಡುಬರುವ ವಿಷ್ಣುಶಿಲ್ಪ, ದೀಪಸ್ತಂಭ ಹಾಗೂ ಅಡಿಪಾಯ ಮತ್ತಿತರ ಅವಶೇಷಗಳಿಂದ ವಿಠಲ ದೇವಾಲಯವನ್ನು ಗುರುತಿಸಲು ಸಾಧ್ಯವಾಗುತ್ತದೆ. ಮೇಲ್ಕಂಡ ಎಲ್ಲ ವಿವರಗಳನ್ವಯ ಹೇಳುವುದಾದರೆ ಇದೇ ವಿಠಲ ದೇವಾಲಯವಾಗಿತ್ತೆಂದು ಸ್ಪಷ್ಟಪಡಿಸಬಹುದು.

೩. ಪಂಪಾಪತಿ ದೇವಾಲಯ

ಗರ್ಭಗೃಹವಿರುವ ಈ ದೇವಾಲಯದಲ್ಲಿ ಶಿವಲಿಂಗ ಮತ್ತು ನಂದಿಯ ಚಿಕ್ಕ ಶಿಲ್ಪಗಳಿವೆ ದೇವಾಲಯವು ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ. ಇದರ ಮೇಲೆ ಯಾವುದೆ ಬಗೆಯ ಶಿಖರವಿರುವುದಿಲ್ಲ.

ಈ ದೇವಾಲಯದ ಮುಂಭಾಗದಲ್ಲಿ ವಿಜಯನಗರ ಕಾಲದ ವೀರಗಲ್ಲೊಂದನ್ನು ನಿಲ್ಲಿಸಲಾಗಿದೆ. ಈ ವೀರಗಲ್ಲಿನ ವಿಶೇಷತೆಯೆಂದರೆ ವೀರ ಮತ್ತು ಅವನ ಪತ್ನಿಯ ಶಿಲ್ಪವಿರುವುದು. ಸಾಮಾನ್ಯವಾಗಿ ವೀರರು ಮತ್ತು ಸತ್ತುಹೋದವರಿಗೆ ಪ್ರತ್ಯೇಕವಾಗಿ ಸ್ಮಾರಕಶಿಲೆಗಳನ್ನು ಹಾಕಿಸುವುದು ರೂಢಿ. ಆದರೆ ಇದರಲ್ಲಿ ವೀರ ಮತ್ತು ಸತಿಯರಿಬ್ಬರೂ ಒಂದೇ ಶಿಲೆಯಲ್ಲಿರುವರು. ಆದ್ದರಿಂದ ಇದನ್ನು ವೀರಮಾಸ್ತಿಗಳೆಂದು ಕರೆಯಬಹುದು. ಇದರಲ್ಲಿ ವೀರನು ತನ್ನ ಎಡಗೈಯಲ್ಲಿ ಬಂದೂಕು ಹಾಗೂ ಬಲಗೈಯಲ್ಲಿ ಕೊಡಲಿಯನ್ನು ಹಿಡಿದು ನಿಂತಿರುವನು. ವೀರನ ಪತ್ನಿಯು ಎಡಗೈಯಲ್ಲಿ ಕನ್ನಡಿ ಹಾಗೂ ಬಲಗೈಯಲ್ಲಿ ನಿಂಬೆ ಹಣ್ಣುಗಳನ್ನು ಹಿಡಿದಿರುವಳು. ಇವರಿಬ್ಬರ ಮೇಲ್ಬಾಗದಲ್ಲಿ ಸೂರ್ಯ, ಚಂದ್ರ ಮತ್ತು ಕೀರ್ತಿಮುಖದ ಅಲಂಕರಣೆಗಳಿವೆ.

ಈ ಸ್ಮಾರಕಶಿಲೆಯಲ್ಲಿ ವೀರನು ಹಿಡಿದಿರುವ ಬಂದೂಕು ಮಧ್ಯಯುಗದಲ್ಲಿ ಆವಿಷ್ಕಾರಗೊಂಡ ಸಿಡಿಮದ್ದಿನ ಸಂಕೇತವಾಗಿದೆ. ಸಿಡಿಮದ್ದು ಕರ್ನಾಟಕದಲ್ಲಿ ಬಳಕೆಗೊಂಡದ್ದು ವಿಜಯನಗರ ಮತ್ತು ಬಹುಮನಿ ಮನೆತನಗಳ ಆಳ್ವಿಕೆಯ ಕಾಲದಲ್ಲಿ. ಇಂಥಹ ಸ್ಮಾರಶಿಲೆಗಳು ರಾಯಚೂರು, ಕೊಪ್ಪಳ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಬರುತ್ತವೆ. ಈ ಗ್ರಾಮದ ವೀರನೊಬ್ಬನು ವಿಜಯನಗರ ಅಥವಾ ಅದರ ಮಾಂಡಲೀಕರ ಸೇವೆಯಲ್ಲಿದ್ದು ಯುದ್ಧವೊಂದರಲ್ಲಿ ಹೋರಾಡಿ ಮಡಿದ ಹಿನ್ನೆಲೆಯಲ್ಲಿ ಇದನ್ನು ಹಾಕಿಸಿರುವುದು ವೇದ್ಯವಾಗುತ್ತದೆ.

೪. ಗಣೇಶ ದೇವಾಲಯ

ಗ್ರಾಮದ ಮಧ್ಯಭಾಗದಲ್ಲಿರುವ ದೇವಾಲಯವಿದು. ಗರ್ಭಗೃಹವಿರುವ ಈ ದೇಗುಲದಲ್ಲಿ ಎರಡೂವರೆ ಅಡಿಗಳೆತ್ತರ ಗಣಪತಿಯ ಶಿಲ್ಪವಿದೆ. ನಾಲ್ಕು ಕೈಗಳನ್ನು ಹೊಂದಿರುವ ಗಣೇಶನು ಮೇಲಿನ ಕೈಗಳಲ್ಲಿ ಅಂಕುಶ ಮತ್ತು ಪಾಶಗಳನ್ನು ಕೆಳಗಿನ ಕೈಗಳಲ್ಲಿ ಮೋದಕ ಮತ್ತು ಲೇಖನಿಗಳನ್ನೂ ಹಿಡಿದಿರುವನು. ದೇವಾಲಯವು ಜೀರ್ಣೋದ್ಧಾರಗೊಂಡಿದ್ದು ಶಿಲ್ಪವು ವಿಜಯನಗರ ಕಾಲದ್ದಾಗಿದೆ. ದೇವಸಮುದ್ರ ಗ್ರಾಮವು ವಿಜಯನಗರ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದ್ದುದು ಇಲ್ಲಿನ ಶಾಸನ ಮತ್ತು ದೇಗುಲಗಳಿಂದ ಸ್ಪಷ್ಟವಾಗುತ್ತದೆ.

೫. ಪರಮೇಶ್ವರಸ್ವಾಮಿ ಮಠ

ದೇವಸಮುದ್ರ ಗ್ರಾಮದ ಪಶ್ಚಿಮಕ್ಕೆ ರಾಮಪುರ ರಸ್ತೆಯಲ್ಲಿರುವ ಪ್ರಸಿದ್ಧ ಮಠವಿದು. ಪರಮೇಶ್ವರಸ್ವಾಮಿಗಳ ಗದ್ದುಗೆಯಿರುವ ಈ ಮಠವು ಗರ್ಭಗೃಹ ಹಾಗೂ ತೆರೆದ ಸಭಾಮಂಟಪಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಸ್ವಾಮಿಗಳ ಗದ್ದುಗೆಯಿದೆ. ಸಭಾಮಂಟಪದಲ್ಲಿ ಹದಿನೆಂಟು ಕಂಬಗಳಿವೆ. ಇವುಗಳನ್ನು ಚಚ್ಚೌಕವಾಗಿ ಕಡೆದಿರುವರು. ಗರ್ಭಗೃಹದ ಮೇಲ್ಭಾಗದಲ್ಲಿ ದ್ರಾವಿಡ ಮಾದರಿಯ ದ್ವಿತಲವುಳ್ಳ ಶಿಖರವಿದೆ. ಶಿಖರವನ್ನು ಗಾರೆಗಚ್ಚುಗಳನ್ನು ಬಳಸಿ ನಿರ್ಮಿಸಿದ್ದು, ಮೇಲೆ ಲೋಹದ ಕಳಸನ್ನು ಇಡಲಾಗಿದೆ. ಶಿಖರದಲ್ಲಿ ಗಾರೆಗಚ್ಚಿನ ವಿವಿಧ ಮೂರ್ತಿಶಿಲ್ಪಗಳಿವೆ. ಸಭಾಮಂಟಪದ ಮೇಲೂ ನಂದಿಯ ಶಿಲ್ಪಗಳನ್ನು ಸ್ಥಾಪಿಸಲಾಗಿದೆ. ಈ ಮಠವು ವಿವಾಹ ಮೊದಲಾದ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚು ಪ್ರಸಿದ್ಧಿ ಹೊಂದುತ್ತಿದೆ. ಶುಭ ಕಾರ್ಯಕ್ರಮಗಳಿಗೆಂದೇ ಇತ್ತೀಚೆಗೆ ಕಲ್ಯಾಣ ಮಂಟಪವನ್ನು ಕಟ್ಟಿಸಲಾಗಿದೆ. ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ರಥೋತ್ಸವಿದ್ದು, ರಥದಲ್ಲಿ ಪರಮೇಶ್ವರ ತಾತನ ಪ್ರತಿಮೆ ಹಾಗೂ ಜಂಗಮರೊಬ್ಬರನ್ನು ಕೂಡಿಸಿ ಎಳೆಯುತ್ತಾರೆ. ರಥವನ್ನು ಪಾದಗಟ್ಟೆಯವರೆಗೂ ಎಳೆದುಕೊಂಡು ಹೋಗುವುದು ರೂಢಿ. ಮಠದ ಪೂಜಾ ಕಾರ್ಯಕ್ರಮಗಳನ್ನು ಜಂಗಮರು ನಡೆಸಿಕೊಂಡು ಹೋಗುತ್ತಿರುವರು.

ಬ್ರಹ್ಮಗಿರಿ ದೇವಾಲಯಗಳು

೧. ತ್ರಿಶಂಕೇಶ್ವರ ದೇವಾಲಯ

ಬ್ರಹ್ಮಗಿರಿ ಬೆಟ್ಟದ ಮೇಲಿರುವ ಪ್ರಾಚೀನ ದೇವಾಲಯವಿದು. ಬೆಟ್ಟದ ಮೇಲೆ ದೊರೆಯುವ ಕಣಶಿಲೆಯನ್ನು ಬಳಸಿ ದೇವಾಲಯವನ್ನು ಕಟ್ಟಲಾಗಿದೆ. ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿಂದ ಕೂಡಿರುವ ದೇವಾಲಯದ ಗರ್ಭಗೃಹದಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಲಾಗಿದೆ. ನವರಂಗದಲ್ಲಿ ಗಣೇಶ ಮತ್ತು ವಿಷ್ಣುವಿನ ಸುಂದರವಾದ ಶಿಲ್ಪಗಳು ಹಾಗೂ ಶಿಲಾ ಶಾಸನವಿದೆ. ದೇವಾಲಯದ ಗರ್ಭಗೃಹದ ಮೇಲೆ ಕದಂಬನಾಗರ ಶೈಲಿಯ ಶಿಖರವನ್ನು ನಿರ್ಮಿಸಿರುವರು. ಕ್ರಿ. ಶ. ೧೩-೧೪ನೇ ಶತಮಾನದ ದೇವಾಲಯವಾಗಿದೆ.

೨. ಅಕ್ಕನ ದೇವಾಲಯ

ಬೆಟ್ಟದ ಪಶ್ಚಿಮದ ಬುಡದಲ್ಲಿರುವ ಈ ದೇವಾಲಯವು ಗರ್ಭಗೃಹ, ಅಂತರಾಳ ಮತ್ತು ಸಭಾಮಂಟಪಗಳಿಂದ ಕೂಡಿದೆ. ಈ ದೇಗುಲದ ಗರ್ಭಗೃಹದಲ್ಲಿ ಯಾವುದೇ ಶಿಲ್ಪಗಳಿರುವುದಿಲ್ಲ. ಗರ್ಭಗೃಹದ ಮೇಲೆ ಕದಂಬನಾಗರ ಶೈಲಿಯ ಶಿಖರವಿದೆ. ೧೩-೧೪ನೆಯ ಶತಮಾನದಲ್ಲಿ ಕಟ್ಟಲಾದ ದೇವಾಲಯವಿದು. ನವರಂಗದ ಕಂಬಗಳು ಚಚ್ಚೌಕ ಪೀಠದ ಮೇಲೆ ದಂಡ, ಕುಂಭ, ಕಂಠಫಲಕ ಮತ್ತು ಬೋದಿಗೆಗಳಿಂದ ಕೂಡಿವೆ. ಈ ದೇವಾಲಯದ ಬಳಿಯ ಬೃಹತ್ತಾದ ಬಂಡೆಗಲ್ಲಿನ ಮೇಲೆ ದೊಡ್ಡದಾದ ಆನೆಯ ರೇಖಾಚಿತ್ರವನ್ನು ಕಡೆಯಲಾಗಿದೆ. ಬೆಟ್ಟದ ಮೇಲೆ ಇರುವ ದೇವಾಲಯಗಳಲ್ಲಿ ಭಾಗ್ಯಲಕ್ಷ್ಮಿ ದೇವಾಲಯವೂ ಒಂದಾಗಿದೆ. ಇದು ಭಗ್ನಾವಸ್ಥೆಯಲ್ಲಿದೆ.

೩. ಜೈನ ಬಸದಿ

ಅಕ್ಕನ ಗುಡಿಗೆ ಸಮೀಪದಲ್ಲಿರುವ ಜೀನಾಲಯವಿದು. ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿದ ಕದಂಬನಾಗರ ಶೈಲಿಯ ಶಿಖರವಿರುವ ಆಲಯವಾಗಿದೆ. ಗರ್ಭಗೃಹದಲ್ಲಿ ರುಂಡವಿಲ್ಲದ ಜಿನಶಿಲ್ಪವನ್ನು ಕಾಣಬಹುದು. ಬ್ರಹ್ಮಗಿರಿಯ ಈ ದೇವಾಲಯಗಳು ೧೩-೧೪ನೇಯ ಶತಮಾನದ ನಿರ್ಮಿತಿಗಳಾಗಿವೆ.

ಮೊಳಕಾಲ್ಮೂರು ಪಟ್ಟಣದಲ್ಲಿ ನುಂಕಪ್ಪನ ಕಟ್ಟೆ, ಮಾರ್ಕಾಂಡೇಯ, ದುರ್ಗಮ್ಮ, ಈಶ್ವರ, ಆಂಜನೇಯ, ವೆಂಕಟರಮಣ ದೇವಾಲಯಗಳಿವೆ. ಇವು ಇಲ್ಲಿನ ಚಾರಿತ್ರಿಕ ಮಹತ್ವಕ್ಕೆ ಸಾಕ್ಷಿ. ನುಂಕಪ್ಪನ ಕಟ್ಟೆಯ ಮೇಲೆ ನುಂಕೆಮಲೆ ಸಿದ್ಧೇಶ್ವರನ ಉತ್ಸ ಮೂರ್ತಿಯನ್ನು ಜಾತ್ರೆಯ ಸಂದರ್ಭದಲ್ಲಿ ಕರೆತಂದು ಉತ್ಸವ ಮಾಡಲಾಗುತ್ತದೆ.

ಇವುಗಳಲ್ಲದೆ ಮೊಳಕಾಲ್ಮೂರು ತಾಲೂಕಿನಲ್ಲಿರುವ ಇತರೆ ದೇವಾಲಯಗಳೆಂದರೆ ಚಿಕ್ಕೇರಹಳ್ಳಿಯ ಕನ್ನೇರಮ್ಮ ದೇವಾಲಯ, ಅಮಕುಂದಿಯ ವೆಂಕಟರಮಣ, ನಾಗಸಮುದ್ರದ ವೆಂಕಟೇಶ್ವರ, ಅಶೋಕ ಸಿದ್ದಾಪೂರದ ವೆಂಕಟರಮಣ, ವೀರಭದ್ರ ದೇವಾಲಯಗಳು, ಶಿರೇಕೊಳ್ಳದ ಈಶ್ವರ ದೇವಾಲಯ, ಸಂತೆಗುಡ್ಡದ ನಗರೇಶ್ವರ ಮತ್ತು ಕಾಳಮ್ಮ ದೇವಾಲಯಗಳು ಮುಖ್ಯವಾಗಿವೆ.

ಒಟ್ಟಿನಲ್ಲಿ ದೇಗುಲ ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ಹೇಳುವುದಾದರೆ ಅಶೋಕನ ಕಾಲಕ್ಕೆ ಮೊಳಕಾಲ್ಮೂರು ತಾಲುಕು ಧಾರ್ಮಿಕ ವಾಸ್ತುವನ್ನು ಹೊಂದಿತ್ತೆಂಬುದು ಬ್ರಹ್ಮಗಿರಿಯ ಉತ್ಖನನದಲ್ಲಿ ಕಂಡುಬಂದ ಚೈತ್ಯದಿಂದ ಸ್ಪಷ್ಟವಾಗುತ್ತದೆ. ತದನಂತರದ ಅವಧಿಯ ವಾಸ್ತುವಿವರಗಳು ಕಂಡು ಬಂದಿಲ್ಲ. ಆದರೆ ಇಟ್ಟಿಗೆಯ ಅನೇಕ ದೇವಾಲಯಗಳು ಜಟಂಗಿ ಬೆಟ್ಟದ ಮೇಲೆ ಹಾಗೂ ಕೆಳಭಾಗದಲ್ಲಿ ಕಂಡುಬರುವುದರಿಂದ ಕ್ರಿ. ಶ. ೬-೭ನೇಯ ಶತಮಾನಕ್ಕಾಗಲೇ ಶೈವಧರ್ಮ ಈ ಪರಿಸರದಲ್ಲಿ ಪ್ರಬಲವಾಗಿತ್ತು. ಈ ನಿಟ್ಟಿನಲ್ಲಿ ಅನೇಕ ಇಟ್ಟಿಗೆಯ ಶೈವ ದೇವಾಲಯಗಳು ನಿರ್ಮಾಣವಾಗಿದ್ದು, ಇವು ಈ ಭಾಗದ ದೇಗುಲ ವಾಸ್ತುವಿನ ಪ್ರಾಚೀನ ಸ್ಮಾರಕಗಳಾಗಿವೆ.

ಆಕರ ಗ್ರಂಥಗಳು

ಇತಿಹಾಸ ದರ್ಶನ ಸಂಪುಟಗಳು, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಜಯಣ್ಣ, ಯು., ೨೦೦೨, ಮೊಳಕಾಲ್ಮೂರು ತಾಲೂಕಿನ ಪುರಾತತ್ವೀಯ ಪರಿಸರ,

ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಸೋಮಶೇಖರ್, ಎಸ್‌. ವೈ., ೨೦೦೪, ಜಟಂಗಿ ರಾಮೇಶ್ವರ ಸಾಂಸ್ಕೃತಿಕ ದರ್ಶನ.

ಸುಮೇಧ ಪ್ರಕಾಶನ ದೇವಸಮುದ್ರ.ಮೂಳಕಾಲ್ಮೂರು ತಾಲೂಕು, ಸುಂದರ. ಅ., ೧೯೯೭, ಕರ್ನಾಟಕ ಚರಿತ್ರೆ, ಸಂ.೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಸುಂದರ, ಅ., ೧೯೯೪.ಕರ್ನಾಟಕ ಪ್ರಾಗಿತಿಹಾಸ ಚಿತ್ರಕಲೆ. ಕರ್ನಾಟಕ ಚಿತ್ರಕಲಾ ಅಕಾಡೆಮಿ. ಬೆಂಗಳೂರ

ಸುಂದರ. ಅ., ೧೯೭೩ ಬ್ರಹ್ಮಗಿರಿ ಮತ್ತು ಚಂದ್ರವಳ್ಳಿ. ಐ.ಬಿ.ಎಚ್. ಪ್ರಕಾಶನ , ಬೆಂಗಳೂರ

Kirishna, M. H., 1929, Excavations at Chandravalli Suppliment to Annual report, Mysore Archaeology

Wheeler, R.E.M., Brahmagiri and Chandravalli 1947, Ancient India 1984, (Bulletin of A.S.I), No.4,1947-48