ಧರ್ಮ ಸಮಾಜವನ್ನು ನಿಯಂತ್ರಿಸುವ ಬಲವಾದ ಸಾಧನ. ರಾಜಕೀಯ ಪ್ರಭುತ್ವಕ್ಕಿಂತಲೂ ಧರ್ಮಕ್ಕಿರುವ ಅಧಿಕಾರ ಮತ್ತು ಸಾಮರ್ಥ್ಯ ಹೆಚ್ಚು. ಇದು ಲೌಕಿಕ ಜಗತ್ತಿನೊಡನೆ ಅಲೌಕಿಕ ಜಗತ್ತನ್ನು ನಿರ್ಮಿಸಿಕೊಂಡು ಜನರ ಬದುಕಿನಲ್ಲಿ ಮಹತ್ತರ ಪಾತ್ರವಹಿಸಿದ್ದು ಗಮನಾರ್ಹ. ತೋರಿಕೆಗೆ ಧರ್ಮ ಧಾರ್ಮಿಕ ಚಟುವಟಿಕೆಗಳಿಗಷ್ಟೇ ಸೀಮಿತವಾದರೂ, ಮಾನವನ ಬದುಕಿನ ಎಲ್ಲ ಮಜಲುಗಳಿಗೂ ಹರಡಿರುವುದು ವಾಸ್ತವ ಸಂಗತಿ. ಚತುಸ್ಸಮಯಗಳಾದ ಬೌದ್ಧ, ಜೈನ, ವೈಷ್ಣವ ಮತ್ತು ಶೈವ ಧರ್ಮಗಳು ಕರ್ನಾಟಕದಲ್ಲಿ ಬಹುಪ್ರಾಚೀನ ಕಾಲದಲ್ಲಿಯೇ ಕಾಣಿಸಿಕೊಂಡವು. ಆದರೆ ಇದರಲ್ಲಿ ಯಾವುದು ಮೊದಲು ಯಾವುದು ನಂತರ ಎಂದು ಖಚಿತವಾಗಿ ಗುರುತಿಸುವುದು ತುಸು ಕಷ್ಟದಾಯಕ ಕರ್ನಾಟಕದ ಅನೇಕ ಆಳರಸರು ಪರಮತ ಸಹಿಷ್ಣುಗಳಾಗಿ ಚತುಸ್ಸಮಯ ಸಮುದ್ಧರಣರೆಂದು ಪ್ರಸಿದ್ಧರಾಗಿದ್ದರು.

ಬೌದ್ಧ ಧರ್ಮ

ಚಿತ್ರದುರ್ಗ ಜಿಲ್ಲೆಯಲ್ಲಿ ಬೌದ್ಧ ಧರ್ಮದ ಅತ್ಯಂತ ಪ್ರಾಚೀನ ಕುರುಹುಗಳೆಂದರೆ ಅಶೋಕನ ಶಾಸನಗಳು. ಮೊಳಕಾಲ್ಮೂರು ತಾಲೂಕಿನ ಬ್ರಹ್ಮಗಿರಿ, ಜಟಂಗಿ ರಾಮೇಶ್ವರ ಮತ್ತು ಸಿದ್ಧಾಪುರ ಗ್ರಾಮಗಳಲ್ಲಿ ಅಶೋಕನ ಶಾಸನಗಳು ದೊರೆತಿದ್ದು,[1] ಆರಂಭದಲ್ಲಿ ಬ್ರಹ್ಮಗಿರಿ ಪರಿಸರವು ಬೌದ್ಧಧರ್ಮದ ನೆಲೆಯಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ಇವುಗಳ ಕಾಲ ಕ್ರಿ.ಪೂ. ೩ನೇ ಶತಮಾನ. ಬ್ರಹ್ಮಗಿರಿ ಶಾಸನದಲ್ಲಿ ದೇವನಾಂಪ್ರಿಯನು ನೀಡಿರುವ ರಾಜಾಜ್ಞೆಗಳನ್ನು ಮೊದಲು ಸುವರ್ಣಗಿರಿಯ ಪ್ರಾಂತ್ಯಾಧಿಕಾರಿಗಳಿಗೆ ತಲುಪಿಸಿ, ಆನಂತರ ಇಸಿಲಾದ ಮಹಾಮಾತ್ರರಿಗೆ ಅಥವಾ ಅಧಿಕಾರಿಗಳಿಗೆ ಕಳುಹಿಸಿದ ವಿಷಯವಿದೆ.[2] ೧೯೨೭-೨೮ರಲ್ಲಿ ಎಂ. ಎಚ್. ಕೃಷ್ಣರವರು ಬ್ರಹ್ಮಗಿರಿಯಲ್ಲಿ ನಡೆಸಿದ ಉತ್ಖನನವು ಬೌದ್ಧಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ಬ್ರಹ್ಮಗಿರಿಯ ಅಶೋಕನ ಶಾಸನ ಸ್ಥಳದಿಂದ ಸುಮಾರು ೨೦೦ ಮೀ. ಆಗ್ನೇಯಕ್ಕೆ ೭X೪.೧೫ ಮೀ ಕ್ಷೇತ್ರಫಲವುಳ್ಳ ಇಟ್ಟಿಗೆಯ ಕಟ್ಟಡದ ಅವಶೇಷ ಪತ್ತೆಯಾಯಿತು. ೫.೨೫X೨.೭೫ ಮೀ. ನಷ್ಟು ವಿಸ್ತಾರವಾದ ಈ ಪಡಸಾಲೆಯು ಪೂರ್ವಾಭಿಮುಖವಾಗಿದ್ದು. ಗಜಪೃಷ್ಟಾಕಾರವಾಗಿದೆ. ವಿದ್ವಾಂಸರು ಗುರುತಿಸುವಂತೆ ಇದು ಬೌದ್ಧಧರ್ಮಕ್ಕೆ ಸಂಬಂಧಪಟ್ಟ ಚೈತ್ಯಾಲಯದ ಕಟ್ಟಡ. ಇಸಿಲ ಪಟ್ಟಣದ ವ್ಯಾಪ್ತಿಯಲ್ಲಿ ಕಂಡುಬರುವ ಏಕೈಕ ವಾಸ್ತುರಚನೆ ಎನ್ನಬಹುದು.

ಬ್ರಹ್ಮಗಿರಿ ಬೆಟ್ಟವನ್ನೇರುವ ಅಕ್ಕತಂಗಿಯರ ಗುಡಿಯ ಬಳಿಯಲ್ಲಿರುವ ಬಂಡೆಯೊಂದನ್ನು ಸ್ಥಳೀಯರು ಗುರುತಿಸುವುದು ’ಆನೆಯ ಬಂಡ’ ಎಂದು. ಇದಕ್ಕೆ ಕಾರಣ ಬೃಹತ್ ಹುಟ್ಟು ಬಂಡೆಯೊಂದರ ಮೇಲೆ ಕೊರೆದು ಮೂಡಿಸಿದ ಆನೆಯ ರೇಖಾಕೃತಿ ಉತ್ತರ ಪ್ರದೇಶದ ಡೆಹರಾಡೂನ್ ಜಿಲ್ಲೆಯಲ್ಲಿನ ಕಾಲ್ಸೀ ಪಟ್ಟಣದ ಬಳಿಯ ಬಂಡೆಯೊಂದರ ಮೇಲಿನ ಆನೆಯ ರೇಖಾಕೃತಿಗೆ ಇದು ಹೋಲುತ್ತದೆ.[3] ಆನೆ ಬೌದ್ಧರಿಗೆ ಪವಿತ್ರ ಪ್ರಾಣಿ. ಕಾರಣ ಬಿಳಿ ಆನೆ ಬುದ್ಧನನ್ನು ಸಂಕೇತಿಸುವ ಚಿಹ್ನೆ ಬುದ್ಧನ ಜನನ ಪೂರ್ವದಲ್ಲಿ ಆನೆಯು ತನ್ನ ಬುದ್ಧನನ್ನು ಕೆಂಪು ಕಮಲ ಹಿಡಿದ ಮಾಯಾ ದೇವಿಯ ಉದರದಲ್ಲಿ ಸೇರಿತು. ಬೋದಿಸತ್ವನು ಮಾಯೆಯ ಉದರದಲ್ಲಿ ಜನ್ಮಾರಿಕುರ ತಾಳಿದನೆಂಬ ಸೂಚನೆಯಿದು. ಹಾಗಾಗಿ ಆನೆ ಬುದ್ಧನನ್ನು ಸಂಕೇತಿಸುವ ಚಿಹ್ನೆಯೆಂಬುದು ಸ್ಪಷ್ಟ.

ಜಟಂಗಿ ರಾಮೇಶ್ವರ ಬೆಟ್ಟದ ಅಶೋಕನ ಶಾಸನವಿರುವ ಬಂಡೆಯ ಕೆಳಭಾಗದಲ್ಲಿ ಕೊರೆದು ಮೂಡಿಸಿದ ಜೋಡಿಪಾದಗಳ ರೇಖಾಕೃತಿಗಳಿವೆ. ಸಾಮಾನ್ಯವಾಗಿ ಅಶೋಕನ ಶಾಸನಗಳಿರುವ ಎಡೆಯಲ್ಲಿ ಇಂಥಾ ಪಾದದ ರೇಖಾಕೃತಿಗಳಿವೆ. ಕೊಪ್ಪಳದ ಗವಿಮಠದಲ್ಲಿರುವ ಅಶೋಕನ ಶಾಸನದ ಕೆಳಗಿನ ಜೋಡಿ ಪಾದಗಳ ರೇಖಾಕೃತಿ ಇದಕ್ಕೆ ಉತ್ತಮ ನಿದರ್ಶನ. ಇವು ಬುದ್ಧಪಾದಗಳೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.[4] ಇದೇ ಬೆಟ್ಟದ ಮೇಲೆ ಏಕಾಂತ ತೀರ್ಥವೆಂಬ ಕೊಳವಿದೆ. ಏಕಾಂತ ಎಂಬುದು ಬುದ್ಧನ ಮತ್ತೊಂದು ಹೆಸರಾಗಿದ್ದು. ಬೌದ್ಧಧರ್ಮವನ್ನು ಏಕಾಂತ ಧರ್ಮವೆಂದೂ ಕರೆಯುತ್ತಾರೆ.

ಈ ಮೇಲಿನ ಎಲ್ಲಾ ಕರುಹುಗಳು ದೃಢಪಡಿಸುವ ಪ್ರಕಾರ ಇಸಿಲ ಪರಿಸರದಲ್ಲಿ ಮೌರ್ಯರ ಕಾಲದಲ್ಲಿ ಬೌದ್ಧಧರ್ಮ ಅಸ್ತಿತ್ವದಲ್ಲಿತ್ತಲ್ಲದೆ, ಇಸಿಲ ಸಾಕಷ್ಟು ಪ್ರಗತಿಹೊಂದಿದ ನಗರವಾಗಿತ್ತು. ಶಾತವಾಹನರ ಕಾಲದ ವೇಳೆಗೆ ಚಂದ್ರವಳ್ಳಿ ಸಹಿತ ಇತರೆಡೆ ಪಟ್ಟಣಗಳು ಬೆಳೆಯುತ್ತಿದ್ದಂತೆ ಇಸಿಲ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತು. ಇಸಿಲ ಅವನತಿ ಹೊಂದುತ್ತಿದ್ದಂತೆಯೇ ಕ್ರಮೇಣ ಬೌದ್ಧಧರ್ಮವೂ ಈ ಪರಿಸರದಿಂದ ಕಣ್ಮರೆಯಾಯಿತು.

ಜೈನಧರ್ಮ

ಬೌದ್ಧಧರ್ಮದಂತೆ ಜೈನಧರ್ಮವು ಭಾರತದಲ್ಲೇ ಉದಿಸಿದ ಬಹುಪ್ರಾಚೀನ ಧರ್ಮ, ಪ್ರಸ್ತುತ ಬ್ರಹ್ಮಗಿರಿ ಪರಿಸರದಲ್ಲಿ ಕ್ರಿ. ಶ. ೧೩ ಮತ್ತು ೧೪ನೇ ಶತಮಾನದಲ್ಲಿ ಪ್ರಚಲಿತದಲ್ಲಿತ್ತೆನ್ನಲು ಬ್ರಹ್ಮಗಿರಿಯ ಜೈನದೇವಾಲಯ, ಅಲ್ಲಿನ ನಾಲ್ಕು ನಿಸಿಧಿ ಶಾಸನಗಳೇ ಬಹುಮುಖ್ಯ ಸಾಕ್ಷಿ, ಬರಮಗೌಡನ ಹೆಂಡತಿ ಚಕ್ಕಿಗೌಡ್ತಿ[5] ಮತ್ತು ನಾರಣದೇವನ ಮುದ್ದವೆಯು[6] ನಿಸಿಧಿ ಪಡೆದು ಮುಡುಪಿದ ಸ್ತ್ರೀಯರಾದರೆ, ಕಟ್ಟಿಸೆಟ್ಟಿಯ ಮಗ ಯಸಳಮಾಳಯ್ಯ[7] ಮತ್ತು ಅಣಮಲಸೆಟ್ಟಿಯವರು[8] ನಿಸಿಧಿ ಪಡೆದು ಇಲ್ಲಿ ಮುಡುಪಿದ ಪುರುಷರು. ಈ ಶಾಸನಗಳನ್ನು ಗಮನಿಸಿದರೆ ಸ್ತ್ರೀಯರು ಹಾಗೂ ವರ್ತಕವರ್ಗದವರು ಸಲ್ಲೇಖನ ವೃತ ಕೈಗೊಂಡು ಮರ ಹೊಂದುವಂಥ ಧಾರ್ಮಿಕ ಕ್ರಿಯಾ ಚಟುವಟಿಕೆಗಳು ಸಾಂಗವಾಗಿ ನಡೆಯುವಷ್ಟರ ಮಟ್ಟಿಗೆ ಈ ಸ್ಥಳದಲ್ಲಿ ಜೈನಧರ್ಮ ನೆಲೆಗೊಂಡಿತ್ತೆಂಬ ಸಂಗತಿ ವ್ಯಕ್ತಪಡುತ್ತದೆ.

ಶೈವಧರ್ಮ

ಕರ್ನಾಟಕದ ಅತ್ಯಂತ ಪ್ರಾಚೀನ ಪ್ರಬಲ ಧರ್ಮಗಳಲ್ಲಿ ಶೈವಧರ್ಮವೂ ಒಂದು. ಶೈವಪರಂಪರೆಯಲ್ಲಿ ಅನೇಕ ಶಾಖೆಗಳಿವೆ. ಅವುಗಳನ್ನು ಹೀಗೆ ಹೇಳಲಾಗಿದೆ.

” ಕಾಪಾಲಂ ಲಾಕುಲಂ ವಾಮಂ ಭೈರವಂ ಪೂರ್ವಪಶ್ಚಿಮಂ
ಪಂಚರಾತ್ರಂ ಪಾಶುಪತಂ ತಥಾನ್ಯಾನಿಶ್ರೀಹಸ್ತಶಃ” [9]

ಈ ಎಲ್ಲಾ ಶಾಖೆಯವರೂ ಕರ್ನಾಕದಲ್ಲಿದ್ದರು.

ಕಾಳಾಮುಖರು

ಕಾಳಾಮುಖರು ಕರ್ನಾಟಕದಲ್ಲಿ ದೇವಾಲಯ ಸಂಸ್ಕೃತಿಯನ್ನು ವ್ಯಾಪಕವಾಗಿ ಬೆಳೆಸಿದರು. ಮುಖದ ಮೇಲೆ ಕಪ್ಪು ಗೆರೆಗಳನ್ನು ಅಥವಾ ಮಸಿಯನ್ನು ಹಚ್ಚಿ ಕೊಳ್ಳುತ್ತಿದ್ದರಿಂದ ಇವರನ್ನು ಕಾಳಾಮುಖರು ಎಂದು ಕರೆಯುತ್ತಾರೆ.[10] ಕಾಳಾಮುಖ ಮುನಿಗಳ ಹೆಸರು ಅಂತ್ಯಗೊಳ್ಳುವುದು ಶಕ್ತಿ, ಪಂಡಿತ, ದೇವ, ಭಟ್ಟಾರಕ, ಜೀಯ, ಶಿವ, ವ್ರತಿ, ರಾಣಿ ಎಂಬಿತ್ಯಾದಿ ಹೆಸರುಗಳಿಂದ ಇವರು ದೇವಾಲಯಗಳ ಸ್ಥಾನಿಕರಾಗಿರುತ್ತದ್ದರಲ್ಲದೆ, ಅದರ ಕಾರ್ಯಚಟುವಟಿಕೆಗಳ ನಿರ್ವಹಣೆ ಮತ್ತು ವಿದ್ಯಾದಾನ ಇವರ ಬಹುಮುಖ್ಯ ಕರ್ತವ್ಯ ಸಾಧಾರಣವಾಗಿ ಇಲ್ಲಿ ಮಠಗಳೂ ಸಹ ಅಸ್ತಿದಲ್ಲಿರುತ್ತಿದ್ದವು. ಪ್ರಸ್ತುತ ಬ್ರಹ್ಮಗಿರಿ ಪರಿಸರದಲ್ಲಿದ್ದ ಕಾಳಾಮುಖ ಯತಿಗಳೆಂದರೆ.

೧. ಶಿವಜೀಯ[11]

೨. ಗಜಿಯ ಕಪ್ಪಡೆಯ[12]

೩. ಜ್ಞಾನಾಸಕ್ತಿ ಸರ್ಬ್ಬೇಶ್ವರ ಪಂಡಿತ[13]

೪. ದೇವೇಂದ್ರ ಪಂಡಿತ[14]

೫. ಅಮೃತರಾಸಿ ಪಂಡಿತ[15]

೬. ನೀಲಕಂಠ ಜೀಯ[16]

೧. ಶಿವಜೀಯ

ಜಟಂಗಿ ರಾಮೇಶ್ವರ ಬೆಟ್ಟದ ಕ್ರಿ. ಸ, ೯೬೨ರ ಶಾಸನವು ಶಿವಾಜೀಯನ್ನು ಹೆಸರಿಸುತ್ತದೆ.[17] ಶಿವಾಜಿಯ ಮೊಳಕಾಲ್ಮೂರು ತಾಲೂಕಿನ ಮೊದಲ ಶಾಸನೋಕ್ತ ಕಾಳಾಮುಖಯತಿ. ಜಟಂಗಿ ರಾಮೇಶ್ವರ ದೇವಾಲಯವು ಮೂಲತಃ ಇಟ್ಟಿಗೆಯಿಂದ ಕಟ್ಟಿದ ದೇವಾಲಯವಾಗಿದ್ದು. ಶಿವಾಜೀಯ ತನ್ನ ಭಿಕ್ಷಾವೃತ್ತಿಯಿಂದ ಇಟ್ಟಿಗೆಯ ದೇಗುಲವನ್ನು ಕಳೆದು ಕಲ್ಲೇದೇಗುಲನ್ನು ಕಟ್ಟಿಸಿದನು. ಬಹುಶಃ ಈ ಯತಿ ರಾಮೇಶ್ವರ ದೇಗುಲದ ಸ್ಥಾನಿಕನಿರಬಹುದು. ಕಾಳಾಮುಖ ಯತಿಗಳು ಭಿಕ್ಷಾವೃತ್ತಿಯನ್ನು ಮಾಡುತ್ತಿರೆಂಬುದು ಗಮನಾರ್ಹ ಸಂಗತಿ.

೨. ಗಜಿಯ ಕಪ್ಪೆಡೆಯರ

ಕ್ರಿ. ಶ. ೯೯೮ರ ನುಂಕೆಮಲೆ ಬೆಟ್ಟದ ಶಾಸನದಲ್ಲಿ ಗಜಿಯ ಕಪ್ಪಡೆಯರ ಕಾಲನ್ನು ತೊಳೆದು ಲುಂಕೇಶ್ವರ ದೇವರಿಗೆ ದತ್ತಿ ಬಿಟ್ಟಿದ್ದನ್ನು ತಿಳಿಸುತ್ತದೆ.[18]

೩. ಜ್ಞಾನಾಸಕ್ತಿ ಸಬ್ಬೇಶ್ವರ ಪಂಡಿತ

ನುಂಕೆಮಲೆಯಲ್ಲಿದ್ದ ಮತ್ತೊರ್ವ ಕಾಳಾಮುಖ ಯತಿ ಜ್ಞಾನಾಸಕ್ತಿ ಸರ್ಬ್ಬೇಶ್ವರ ಪಂಡಿತ “ಶ್ರೀ ಲುಂಕೇಶ್ವರ ದೇವರ ರಂಗಬೋಗ ನೈವೇದ್ಯ. ಜೀರ್ಣೋದ್ಧಾರಕ್ಕೆಂದು ಆಸ್ತಾನಪತಿ ಜ್ಞಾನಾಸಕ್ತಿ ಸರ್ಬ್ಬೇಶ್ವರ ಪಂಡಿತವರ್ಗ ಸರ್ವಮಾನ್ಯವಾಗಿ ಬಿಟ್ಟದತ್ತಿ”[19] ಎಂದು ಅಲ್ಲಿನ ತೇದಿರಹಿತ ಶಾಸನವು ತಿಳಿಸುತ್ತದೆ. ಈ ಯತಿಯು ನುಖೇಶ್ವರ ದೇವರ ಸ್ಥಾನಾಚಾರ್ಯನಾಗಿದ್ದನು. ಈ ಮೇಲಿನ ಯತಿಗಳಿಬ್ಬರೂ ಕಾಳಾಮುಖರಾಗಿದ್ದ, ನುಂಕೆಮಲೆಯ ಕಾಳಾಮುಖರ ಕೇಂದ್ರವಾಗಿದ್ದನ್ನು ಇದು ಸೂಚಿಸುತ್ತದೆ.

೪. ದೇವೇಂದ್ರ ಪಂಡಿತ

ಜಟಂಗಿರಾಮೇಶ್ವರ ಬೆಟ್ಟದ ಶಾಸನವೊಂದು ದೇವೆಂದ್ರ ಪಂಡಿತನನ್ನು ಉಲ್ಲೇಖಿಸುತ್ತದೆ.[20] ಈ ಶಾಸನದ ಕಾಲ ಕ್ರಿ. ಶ. ೧೦೬೪ ರಾಮೇಶ್ರ ದೇವರ ಉತ್ಸವಾದಿಗಳ ಸಹಿತ ವೇಶ್ಯೆಯರಿಗೆ ತಫೋಧನರಿಗೆ ಹಾಗೂ ವಿದ್ಯಾದಾನಕ್ಕೆಂದು ದೇವೇಂದ್ರ ಪಂಡಿತರಿಗೆ ದತ್ತಿ ನಿಡಿರುವುದು ಈ ಶಾಸನೋಕ್ತ ಸಂಗತಿ. ಜಟಂಗಿ ರಾಮೇಶ್ವರ ಬೆಟ್ಟವು ಕೇವಲ ಧಾರ್ಮಿಕ ಕೇಂದ್ರವಲ್ಲದೆ ಪ್ರಾಚೀನ ವಿದ್ಯಾಕೇಂದ್ರವಾಗಿತ್ತೆಂಬುದು ಗಮನಾರ್ಹ ಅಂಶ.

೫. ಅಮೃತರಾಸಿ ಪಂಡಿತ

ಕ್ರಿ.ಶ. ೧೦೭೧ರ ವೇಳೆಗೆ ಜಟ್ಟಂಗಿ ರಾಮೇಶ್ವರ ದೇವಾಲಯದ ಸ್ಥಾನಿನಾಗಿದ್ದನು ಅಮೃತರಾಸಿ ಜೀಯ.[21] ಇವನು ನೊಳಂಬ ಪಲ್ಲವ ಪೆರ್ಮಾಡಿ ಜಯಸಿಂಹನಿಂದ ದತ್ತಿ ಪಡೆದಿದ್ದನು.

೬. ನೀಲಕಠ ಜೀಯ

ಕ್ರಿ.ಶ. ೧೦೭೧ರ ಹಳೇದಡಗೂರು ಶಾಸನವು ನೀಲಕಂಠಜೀಯನನ್ನು ಉಲ್ಲೇಖಿಸುತ್ತದೆ.[22] ಇವನು ದಡಗೂರ ಕಲಿದೇವರ ದೇಗುಲದ ಸ್ಥಾನಿಕನಿದ್ದಿರಬಹುದು.

ಕಾಳಾಮುಖ ಪಂಥವು ಸುಮಾರು ಐದಾರು ಶತಮಾನಗಳ ಕಾಲ ಬೆಳಗಿ ಧಾರ್ಮಿಕ ಮತ್ತು ಸಾಮಾಜಿಕ ಭಾವನೆಗಳ ಬೆಳವಣಿಗೆಗೆ ಕಾರಣವಾಗಿ ಹದಿನಾಲ್ಕನೇ ಶತಮಾನದ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಕಣ್ಮರೆಯಾಯಿತು.

ನಾಥಪಂಥ

ನಾಥಪಂಥ ಶೈವಧರ್ಮದ ಮತ್ತೊಂದು ಶಾಖೆ. ಇದು ಬೌದ್ಧಧರ್ಮದ ವಜ್ರಾಯಾನ ಪಂಥದಿಂದ ಉದಯವಾದದ್ದು ಎಂಬ ಅಭಿಪ್ರಾಯವಿದೆ. ಈ ಮತವನ್ನು ಪ್ರವರ್ತಿಸಿದ ನಾಥರನ್ನು ಚೌರಾಸಿ ಸಿದ್ಧರೆಂದೂ ನವನಾಥರೆಂದೂ ಕರೆಯುವುದುಂಟು ಇವರಲ್ಲಿ ಮಚ್ಚೇಂದ್ರನಾಥ, ಗೋರಖನಾಥ ಚೌರಾಗಿನಾಥ, ಜಾಲಂದರನಾಥ, ಚರ್ಪಟೀನಾಥರು ಪ್ರಮುಖರು ಮೂಲತಃ ವಾಮಾಚಾರದತ್ತವಾಲಿದ್ದ ಈ ಪಂಥವು ಯೋಗ ಪ್ರಧಾನ ಪಂಥವಾದರೂ ಕಾಪಾಲಿಕರು ಅನೇಕ ಲಕ್ಷಣಗಳನ್ನು ಇಂದು ತನ್ನಲ್ಲಿ ಉಳಿಸಿಕೊಂಡಿರುವದರಿಂದ ಕಾಪಾಲಿಕರು ಮತ್ತು ನಾಥರನ್ನು ಬೇರ್ಪಡಿಸಲು ಸಾಧ್ಯವಿಲ್ಲವೆಂಬ ವಿದ್ವಾಂಸರ ಅಭಿಮತ ಸಾಧುವಾದುದು.[23] ಭೈರವನಾಥರ ಆರಾಧ್ಯ ದೈವ, ಭೈರವನ ವಾಹನ ನಾಯಿಯು ನಾಥರಿಗೆ ಶ್ರೇಷ್ಟ ಪ್ರಾಣಿ, ನರಬಲಿ, ಭಸ್ಮಲೇಪನ, ತಲೆಯೋಡಿನಲ್ಲಿ ಜಲಪಾನ ಮತ್ತು ಭೋಜನ, ಯೋಗಸಾಧನೆ, ಗೌಪ್ಯವಾದ ತಾಂತ್ರಿಕ ಆಚರಣೆ, ಧುನಿ, ಸಿದ್ಧಭುಕ್ತಿ, ಝಂಡಿಯಾತ್ರೆಗಳು ನಾಥರ ಬಹುಮುಖ್ಯ ಆಚರಣೆಗಳು.

ಕರ್ನಾಟಕದ ನಾಥಮಠಗಳಲ್ಲಿ ನುಂಕೆಮಲೆ ಮಠವೂ ಒಂದು, ನುಂಕೆಮಲೆ ಚಿತ್ರದುರ್ಗ ಜಿಲ್ಲೆಯ ಮುಖ್ಯ ನಾಥಕೇಂದ್ರ ನಾಥರ ದಾಖಲೆಗಳಲ್ಲಿ ಇದನ್ನು ಕಾಲಭೈರವ ಮಂದಿರ, ಲೋಕಿಮಠ ಎಂದು ಪ್ರಸ್ತಾಪಿಸಲಾಗಿದೆ. ನುಂಕೆಮಲೆಯು ಮೊದಲು ಕಾಳಮುಖರ ಕೇಂದ್ರವಾಗಿದ್ದ ಸಂಗತಿಯನ್ನು ಮೇಲೆ ಹೇಳಿದೆಯಷ್ಟೆ ಆದರೆ ನಾಥರ ಕೇಂದ್ರವಾಗಿ ಇದು ರೂಪಾಂತರವಾದದ್ದು ಯಾವಾಗ? ಹೇಗೆ? ಎಂಬ ಪ್ರಶ್ನೆಗಳಿಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ.

ನುಂಕುಮಲೆಯಲ್ಲಿ ಮೂರು ದೈವಗಳಿವೆ. ೧. ಸಿದ್ಧಪ್ಪ ಎಂದು ಪ್ರಸಿದ್ಧವಾಗಿರುವ ಭೈರವೇಶ್ವರ. ಇದನ್ನು ಲಿಂಗಾಯಿತರು ಪೂಜಿಸುತ್ತಾರೆ. ೨. ಭೈರವ ದೇಗುಲದ ಬಲಬದಿಯ ನಾಥಮಠದಲ್ಲಿರುವುದು ಕಾಲಭೈರವ. ಜಟಾಧಾರಿ ಯೋಗಿಗಳ ಶಿಲ್ಪವಿರುವ ದೊಡ್ಡ ಚಚ್ಚೌಕದ ಪೀಠದ ಮೇಲೆ ನೆಟ್ಟಿರುವ ತ್ರಿಶೂಲವೇ ಇಲ್ಲಿ ಕಾಲಭೈರವ. ಇದನ್ನು ನಾಥರು ಆರಾಧಿಸುತ್ತಾರೆ. ಮಠದ ಮುಂದಿನ ದೀಪಸ್ತಂಭದಲ್ಲಿ ಉಚ್ಚೇಂದ್ರನ ಉಬ್ಬುಶಿಲ್ಪವಿದೆ. ಇಲ್ಲಿನ ಮತ್ತೊಂದು ದೈವ ತುಪ್ಪದಮ್ಮ. ಗುಡಿಯಲ್ಲಿನ ಸಿದ್ಧಪ್ಪನಿಗೆ ಸಿದ್ಧಭಕ್ತಿಯಿಲ್ಲ. ಇದಕ್ಕೆ ಕಾರಣ ಲಿಂಗಾಯಿತರು ನಡೆದುಕೊಳ್ಳುವುದು. ಆದರೆ ನಾಥಮಠದಲ್ಲಿ ಕಾಲಭೈರವನಿಗೆ ಸಿದ್ಧಭುಕ್ತಿಯಿದೆ. ಗಮನಾರ್ಹ ಸಂಗತಿಯೆಂದರೆ ಒಂದೇ ದೈವ ಇಲ್ಲಿ ಭೈರವ ಮತ್ತು ಕಾಲಭೈರವ ಎಂದು ವಿಂಗಡಣೆಯಾಗಿರುವುದು. ಬಹುಶಃ ಇದಕ್ಕೆ ಸಮುದಾಯಗಳ ನಡುವಿನ ಸಾಮಾಜಿಕ ತಾರತಮ್ಯ ಕಾರಣವಿದ್ದಿರಬೇಕು.[24] ದೈವಾರಾಧನೆಯ ವಿಷಯದಲ್ಲಿ ಸಂಘರ್ಷ ನಡೆದ ತರುವಾಯ ರಾಜಿಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ನುಂಕೆಮಠ ಅಧಿಪತಿಯನ್ನು ಸ್ಥಳೀಯರು ಭಾವಾಜಿ ಪರದೇಶಿ ಎಂದು ಕರೆಯುತ್ತಾರೆ. ಪ್ರಸ್ತುತ ಮಂಗಲನಾಥ ಮಠದ ಮುಖ್ಯಸ್ಥರಾಗಿದ್ದಾರೆ. ನುಂಕಮಲೆ ಮಠಕ್ಕೆ ೧೨ ಶಾಖಾಮಠಗಳಿದ್ದವು.[25] ಶಾಖಾಮಠಗಳಿಗೆ ಸ್ಥಳೀಯ ಮುಖಂಡರ ನೇಮಕ ಜೋಗಿಗಳಿಗೆ ದೀಕ್ಷೆ ನಿಡುವುದು, ಭಕ್ತರಿರುವ ಹಳ್ಳಿಗಳಲ್ಲಿ ಸರ್ಕೀಟು ಮಾಡುವುದು ಹಾಗೂ ಕಿನ್ನರಿ ಜೋಗಿಗಳಿಗೆ ಭಿಕ್ಷಾಟನಾ ಏರಿಯಾ ನಿಗದಿ ಮಾಡುವುದು ಈ ಮಠದ ಮುಖ್ಯ ಕೆಲಸಗಳು.

ನುಂಕುಮಲೆ ಕಡಿದಾದ ಕಣಿವೆ ಮತ್ತು ಬೃಹತ್ ಗಾತ್ರದ ಬಂಡೆಗಳಿಂದ ಕೂಡಿದ ದುರ್ಗಮ ಪ್ರದೇಶ. ಯೋಗಸಾಧನೆ ಗೌಪ್ಯ ತಾಂತ್ರಿಕ ಆಚರಣೆಗಳಿಗೆ ಸೂಕ್ತಸ್ಥಳ. ಅದಕ್ಕಾಗಿಯೇ ನಾಥರು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಂತಿದೆ. ಭೈರವನಿಗೆ ನರಬಲಿ ನೀಡುವ ಪದ್ಧತಿ ಪ್ರಚತದಲ್ಲಿತ್ತು. ಕರ್ನಾಟಕದ ಹಲವು ಭಾಗಗಳಲ್ಲಿರುವ ಜನಪದ ಕಥೆಗಳು ಮತ್ತು ನರಬಲಿ ಶಿಲ್ಪಗಳು ಇದಕ್ಕೆ ಪುಷ್ಟಿ ನೀಡುತ್ತವೆ. ನುಂಕೆಮಲೆಯ ಹರಳಯ್ಯನ ಗುಡಿಯಲ್ಲಿ ಒಂದು ರುಂಡಶಿಲ್ಪವಿದೆ. ನುಂಕೆಮಲೆಯ ಭೈರವನಿಗೂ ನರಬಲಿ ನೀಡಿದ್ದುದರ ಸೂಚನೆಯಿದು, ಬ್ರಹ್ಮಗಿರಿ ಪರಿಸರ ಸೇರಿದಂತೆ ಇಡೀ ಚಿತ್ರದುರ್ಗ ಜಿಲ್ಲೆಯಲ್ಲಿ ಭೈರವ, ಸಿದ್ಧಪ್ಪ, ಜೋಳಿಗಳಿಗೆ ಸಂಬಂಧಿಸಿದ ಹಲವಾರು ಎಡೆಗಳಿವೆ.[26] ಬ್ರಹ್ಮಗಿರಿ ಪರಿಸರದಲ್ಲಿ ಕಂಡುಬರುವ ಇಂತಹ ಸ್ಥಳವಾಚಕಗಳೆಂದರೆ ಭೈರಾಪೂರ, ಸಿದ್ಧಾಪುರ, ಸಿದ್ದಯ್ಯನಕೋಟೆ, ಜೋಗಿಹಳ್ಳ, ಯರಪೋತ ಜೋಗಿಹಳ್ಳಿ, ಪುರಬೋರನಹಳ್ಳಿಗಳು. ಈ ಗ್ರಾಮಗಳು ಭೈರವನ ಆರಾಧಕರು ನೆಲೆಗೊಂಡ ನೆಲೆಗಳೆಂಬುದು ಸ್ಪಷ್ಟಸಂಗತಿ.

ವೈಷ್ಣವ ಧರ್ಮ

ವೈಷ್ಣವ ಧರ್ಮವೂ ಬಹು ಪುರಾತನವಾದ ಮತ ಇದರ ಅನುಯಾಯಿಗಳು ವಿಷ್ಣು ಹಾಗೂ ಅವನ ವಿವಿಧ ಅವತಾರಗಳಲ್ಲಿ ನಂಬಿಕೆಯಿಟ್ಟು ಪೂಜಿಸುತ್ತಾರೆ. ಶೈವಧರ್ಮದಂತೆ ವೈಷ್ಣವ ಧರ್ಮವೂ ಬ್ರಹ್ಮಗಿರಿ ಪರಿಸರದಲ್ಲಿ ಪ್ರಚಲಿತದಲ್ಲಿತ್ತು. ಇಂದಿನ ಮರಡಿಗ್ರಾಮವು ಬುಕ್ಕರಾಯಪುರ, ಕರಡಿಹಳ್ಳಿಯು ಹರಿಹರರಾಯಪುರವೆಂಬ ಹೆಸರಿನಿಂದ ಪ್ರಸಿದ್ಧವಾಗಿದ್ದ ಅಗ್ರಹಾರಗಳಾಗಿದ್ದವು.[27] ಅಗ್ರಹಾರಗಳು ಸಾಧಾರಣವಾಗಿ ವೈಷ್ಣವರ ವಾಸಸ್ಥಾನಗಳಾಗಿದ್ದು ಶಿಕ್ಷಣ ಕೇಂದ್ರಗಳಾಗಿದ್ದವು. ಬ್ರಹ್ಮಗಿರಿ ಪರಿಸರದಲ್ಲಿ ಇಂದು ನಾಯಕ ಜನಾಂಗದವರು ವಾಸವಾಗಿದ್ದು, ಅಹೋಲ ನರಸಿಂಹನ ಆರಾಧಕರಾಗಿದ್ದಾರೆ.

ಒಟ್ಟಾರೆಯಾಗಿ ಬ್ರಹ್ಮಗಿರಿ ಪರಿಸರದಲ್ಲಿದ್ದ ಬೌದ್ಧ, ಜೈನ, ವೈಷ್ಣವ ಮತ್ತು ಶೈವಧರ್ಮಗಳಿದ್ದವು. ಬೌದ್ಧ ಮತ್ತು ಜೈನಧರ್ಮಗಳು ಅಸ್ತಿತ್ವದಲ್ಲಿದ್ದುದು ಅಲ್ಪಕಾಲ ಮಾತ್ರ ವೈಷ್ಣವ ಧರ್ಮದ ಕರುಹುಗಳು ವಿರಳವಾಗಿದ್ದೂ ಪ್ರಸ್ತುತವೂ ಚಾಲ್ತಿಯಲ್ಲಿದೆ. ಶೈವಧರ್ಮ ಮಾತ್ರ ಈ ಪರಿಸರದಲ್ಲಿ ಪ್ರಬಲವಾಗಿತ್ತು. ೧೨ನೇ ಶತಮಾನದ ಬಸವಾದಿ ಶರಣರ ವೀರಶೈವ ಚಳುವಳಿಯ ಉದಯದ ನಂತರ ಕರ್ನಾಟಕದ ಧಾರ್ಮಿಕ ಪದ್ಧತಿಯಲ್ಲಿ ಮಹತ್ವದ ಮಾರ್ಪಾಡುಗಳಾದವು. ಶೈವಧರ್ಮದ ಪಂಥಗಳಾದ ಕಾಳಾಮುಖ ಮತ್ತು ನಾಥ ಪಂಥಗಳು ಕ್ರಮೇಣ ತಮ್ಮ ಪ್ರಾಮುಖ್ಯತೆ ಕಳೆದುಕೊಂಡು, ವೀರಶೈವ ಚಳವಳಿಯಲ್ಲಿಯೇ ವಿಲೀನವಾದವು. ಲುಂಕೆಮಲೆಯ ನಾಥಪಂಥವು ತನ್ನ ಔತ್ತರೇಯ ರೀತಿರಿವಾಜುಗಳನ್ನು ಬಿಟ್ಟು ಸ್ಥಳೀಕರಣಗೊಂಡಿರುವುದನ್ನು ತಳ್ಳಿಹಾಕುವಂತಿಲ್ಲ.

 

[1] ಎಪಿಗ್ರಾಫಿಯ ಕರ್ನಾಟಕ, ಸಂ. ೧೧, ಮೊಳಕಾಲ್ಮೂರು ೧೪, ೨೧. ೩೪

[2] ಈಗ ವ್ಯಕ್ತಪಟ್ಟಿರುವಂತೆ ‘ಇಸಿಲ’ ಅಶೋಕನ ಪ್ರಾಂತ್ಯಾಧಿಕಾರಿಯಿದ್ದ ಪ್ರಾದೇಶಿಕ ರಾಜಧಾನಿಯಾಗಿದ್ದಿತು. ಆದರೆ ಇಸಿಲದ ಗುರುತಿಸುವಿಕೆಯಲ್ಲಿ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಎಂ. ಎಚ್. ಕೃಷ್ಣರವರು ಬ್ರಹ್ಮಗಿರಿಮತ್ತು ಅದರ ಸುತ್ತಮುತ್ತಲಿನ ಪರಿಸರವೇ ಇಸಿಲ ಆಗಿದ್ದಿತು. ಶಾತವಾಹನ ಯುಗ, ಲಕ್ಷ್ಮಣ್ ತೆಲಗಾವಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪು.೪೭-೫೦

[3] ಅದೇ, ಪು. ೭೬

[4] ಸುಂದರ ಅ., ೧೯೯೭, ಕರ್ನಾಟಕ ಚರಿತ್ರೆ, ಸಂ.೧, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೨೯೭

[5] ಎ.ಕ ಪೂರ್ವೋಕ್ತ, ೧೬

[6] ಅದೇ, ಪು. ೧೭

[7] ಅದೇ, ಪು. ೧೮

[8] ಅದೇ, ಪು. ೧೯

[9] ವಾಸುದೇವ ಬಡಿಗೇರ, ೨೦೦೮, ಹಾನಗಲ್ಲು, ಪು. ೬೬

[10] ಚಿದಾನಂದಮೂರ್ತಿ ಎಂ., ೨೦೦೨, ಕನ್ನಡ ಶಾಸನಗಳು ಸಾಂಸ್ಕೃತಿಕ ಅಧ್ಯಯನ, ಪು. ೧೪೨

[11] ಎ.ಕ. ಪೂರ್ವೋಕ್ತ, ೨೭; ಎಸ್, ವೈ. ಸೋಮಶೇಖರ್, ಜಟಂಗಿ ರಾಮೇಶ್ವರ ಸಾಂಸ್ಕೃತಿಕ ದರ್ಶನ, ೨೦೦೪. ಸುಮೇಧ ಪ್ರಕಾಶನ, ದೇವಸಮುದ್ರ.

[12] ಅದೇ, ಪು. ೪೦

[13] ಅದೇ, ಪು. ೪೧

[14] ಅದೇ, ಪು. ೨೯

[15] ಅದೇ, ಪು. ೨೮

[16] ಅದೇ, ಪು. ೪೭

[17] ಅದೇ, ಪು. ೨೭

[18] ಅದೇ, ಪು. ೪೦

[19] ಅದೇ, ಪು. ೪೧

[20] ಅದೇ, ಪು. ೨೯

[21] ಅದೇ, ಪು. ೨೮

[22] ಅದೇ, ಪು. ೪೭

[23] ರಾಜಶೇಖರಪ್ಪ ಬಿ. ೨೦೦೩, ಪ್ರಾಚೀನ ಚಿತ್ರದುರ್ಗ (ಅಪ್ರಕಟಿತ ಪಿ.ಎಚ್.ಡಿ ಮಹಾ ಪ್ರಬಂಧ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ. ಪು ೧೭೩

[24] ರಹಮತ್ ತರೀಕೆರೆ, ೨೦೦೬, ಕರ್ನಾಟಕ ನಾಥಪಂಥ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪು. ೧೪೫-೧೪೬

[25] ಹೇಮಾವತಿ, ಚದುರಗೋಳ (ರಾಯದುರ್ಗ), ವೇಣುಕಲ್ಲುಗುಡ್ಡ, ಕಾರಿತಿಹಳ್ಳಿ, ವದ್ದಿಕೆರೆ (ಹಿರಿಯೂರು), ಹೊಳಲ್ಕೆರೆ, ಹುಲಿಗೊಂದಿ, ಕಪ್ಪಗೆರೆ, ಬಾಗೂರು (ಹೊಸದುರ್ಗ) ಕಣಕುಪ್ಪೆ ಕುಮ್ತಿ, ಪಗಡಲಬಂಡೆ ಮಟಗಳೇ ಈ ೧೨ ಮಠಗಳು.

[26] ಜೋಗಿಮಟ್ಟಿ ಬೆಟ್ಟದ ದಕ್ಷಿಣ ದಿಕ್ಕಿನ ತಪ್ಪಲಿನಲ್ಲಿ ಉಪ್ಪನಾಯಕನಹಳ್ಳಿ ಎಂಬ ಗ್ರಾಮವಿದೆ. ಇಲ್ಲಿ ಬ್ರಹ್ಮಕಪಾಲಿ ಅಥವಾ ಜನಾಂಗ ಕರೆಯುವ ಜಾನಾಂಗ ಆಸವಾಗಿದೆ. ಇವರು ತಮ್ಮ ಮೂಲಗುರುಗಳು ಮಚ್ಛೇಂದ್ರನಾಥ ಮತ್ತು ಗೋರಖನಾಥ ಎನ್ನುತ್ತಾರೆ. ಇವರ ಆಚರಣೆಗಳೆಲ್ಲವೂ ನಾಥರ ಆಚರಣೆಳಿಗೆ ಹೋಲಿಕೆಯಿರುವುದು ಗಮನಾರ್ಹ. ಹೆಚ್ಚಿನ ಮಾಹಿತಿಗಾಗಿ ನೋಡಿ ನಾಗರಾಜಪ್ಪ ಎಸ್, ೨೦೦೮, ಚಿತ್ರದುರ್ಗ ಪರಿಸರದ ದೇವಾಲಯಗಳು (ಅಪ್ರಕಟಿತ ಎಂ. ಫಿಲ್. ಪ್ರೌಢಬಂಧ), ಪು. ೧೦೦-೧೦೩

[27] ಎ. ಕ., ಪೂರ್ವೋಕ್ತ. ೪-೫