ಶಾಸನ ಶಿಲೆಗಳನ್ನು ಹೊರತುಪಡಿಸಿದರೆ, ವೀರಗಲ್ಲು ಮತ್ತು ಮಾಸ್ತಿಕಲ್ಲುಗಳು ಒಂದು ನಾಡಿನ ಇತಿಹಾಸದಲ್ಲಿ ವೈಶಿಷ್ಟ್ಯಮಯವಾದ ದಾಖಲೆಗಳಾಗಿ ಉಳಿದು ಬರುತ್ತವೆ. ಇತಿಹಾಸ ಅನ್ನುವುದು ಬರಿಯ ರಾಜಮಹಾರಾಜರ ನಡುವೆ ನಡೆದು ಹೋದ ಕದನಗಳ ಜಯಾಪಜಯಗಳ ಪಟ್ಟಿಯಲ್ಲ. ಅದು ನಮ್ಮ ಇತಿಹಾಸ. ನಮಗಾಗಿಯೇ ಇಟ್ಟಿರುವ ತಪ್ಪು ಒಪ್ಪುಗಳ ಪಾಠ. ಅದು ಆಗಿನ ಜನರ ಆಸೆ ಆಕಾಂಕ್ಷೆಗಳ, ಶಕ್ತಿ ಸಾಮರ್ಥ್ಯಗಳ, ಸಂಪ್ರದಾಯ ಕಟ್ಟುಪಾಡುಗಳ ಉಗಮ. ಇತಿಹಾಸದ ಬೆಳಕಿನಾಚೆಯ ಅಜ್ಞಾನದ ಕತ್ತಲೆಯೊಳಗೆ ಅವಿತುಕೊಂಡಿರುವ ಅದರ ಗತಕಲಾಸ ಅರಿವೆ ದಾರಿದೀವಿಗೆ.

ಇತಿಹಾಸದ ಮೇಲೆ ಗಾಢವಾದ ಬೆಳಕನ್ನು ಚೆಲ್ಲುವ ಇಂತಹ ಸ್ಮಾರಕಗಳಿಂದ ದಕ್ಕದ ಮಾಹಿತಿಗಳನ್ನು ವಿಶ್ಲೇಷಿಸುವುದರಿಂದ ಆ ಶಿಲ್ಪವನ್ನು ಪ್ರತಿನಿಧಿಸುವ ವೀರ, ವೀರಸ್ತ್ರೀಯ ಹೋರಾಟದ ತ್ಯಾಗದ ಬಗೆಯ ಪರಿಚಯ ಆಗುತ್ತದೆ. ಮಡಿದವರ ಮೌಲ್ಯಯುತ ಬದುಕನ್ನು ಅರಿಯಲು ಸಹಾಯಕವಾಗುವುದು. ಅಂದಿನ ಸಮಾಜದ ಸಾಮಾಜಿಕ ಜನ-ಜೀವನದ ಆಚರಣೆ, ಮತ್ತು ಅದರ ಮೇಲೆ ನಡೆದ ಆಕ್ರಮಣಗಳ ನೆನಪು ಸಿಕ್ಕುತ್ತದೆ.

ವೀರತ್ವ ಅನ್ನುವುದು ಕೇವಲ ಆಳರಸರ ಸೊತ್ತಾಗಿರದೇ ಅದು ವೀರನಾದವನ ಸ್ವಾಭಿಮಾನ, ಶೌರ್ಯ, ಮಹತ್ವಾಕಾಂಕ್ಷೆ ಇವುಗಳನ್ನು ಪ್ರತಿಬಿಂಬಿಸುತ್ತದೆ. ಅರಸನಲ್ಲಿಯೂ, ಅವನ ಆಳಿನಲ್ಲಿಯೂ ವೀರತ್ವದ ಲಕ್ಷಣಗಳು ಸಮಾನಿಸಿ ಇರುವುದನ್ನು ಕಂಡುಕೊಂಡ ನಮ್ಮ ಪೂರ್ವಿಕರು ’ವೀರತ್ವ’ ವೀರನ ಲಕ್ಷಣ ಎಂದು ಪ್ರತಿಪಾದಿಸಿದ್ದಾರೆ. ಸ್ವತಃ ಸೇನಾನಿಯೂ ಆಗಿದ್ದ ಆದಿಕವಿ ಪಂಪನು ತನ್ನ “ವಿಕ್ರಮಾರ್ಕ ವಿಜಯಂ”ನಲ್ಲಿ ವೀರರೆಲ್ಲರೂ ಒಂದೇ ಕುಲದವರು ಎಂದು ಹೇಳುತ್ತಾನೆ.

“ಕುಲಮೆಂಬುದುಂಟೆ ಬೀರಮೇ |
ಕುಲಮಲ್ಲದೆ ಕುಲಮನಿಂತು ಪಕ್ಕದರಿಂ ನೀ
ನೊಲಿದಲ್ಲಿ ಪುಟ್ಸಿ ವೆಳೆದರೂ
ಕುಲಮಿರ್ದುದೇ ಕೊಡದೊಳಂ ಶರಸ್ಥಂಭದೊಳು”

ಉಂಡ ಅನ್ನದ ಋಣವ ತೀರಿಸಲು ಪ್ರಾಣವನ್ನೂ ಲೆಕ್ಕಿಸದೆ ಒಡೆಯನ ಪರವಾಗಿ ಹೋರಾಡುವ ಆಳೊಬ್ಬನ ನಿಷ್ಠೆಯನ್ನು ನಮ್ಮ ಇತಿಹಾಸ ಗುರುತಿಸಿ ಪ್ರಶಂಸಿಸಿದೆ. ಬರೀ ಅನ್ನದ ಋಣಕ್ಕಾಗಿಯೇ ಇವರು ಹೋರಾಡಿ ಮಡಿದಿದ್ದರೂ ಇವರನ್ನು ವೀರರೆಂದು ಗುರುತುಮಾಡಿದೆ. ಬುದ್ಧಿಬಲ ಅಧಿಕಾರದ ಬಲ ಇವರಲ್ಲಿ ಇಲ್ಲವಾಗಿದ್ದರೂ ಉಪ್ಪಿಟ್ಟು ಸಲುಹುತ್ತಿದ್ದ ಒಡೆಯನಿಗಾಗಿ ಆತ್ಮತ್ಯಾಗಕ್ಕೂ ಇವರು ಹಿಂಜರಿದವರಲ್ಲ. ಕಾಳಗದಲ್ಲಿ ಒಡೆಯನಿಗಿಂತ ಮುಂದಾಗಿ ತಾನೇ ಹೋರಾಡುತ್ತಿದ್ದರು; ತಾವೇ ಮಡಿಯುತ್ತಿದ್ದರು. ತಮ್ಮಗಳ ಪ್ರಾಣಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿ ಅದರ ಮೇಲೆಯೇ ತಮ್ಮ ಒಡೆಯನನ್ನು ವಿಜಯದ ಗದ್ದುಗೆಗೆ ಏರಿಸುತ್ತಿದ್ದರು. ಈ ಮಾತನ್ನು ಹೊಯ್ಸಳ ಎರಡನೇಯ ಬಲ್ಲಾಳನ ಕಾಲದ ಈ ಶಾಸನ ಪದ್ಯ ಪುಷ್ಟೀಕರಿಸುತ್ತದೆ.

ಅರಸುಗಳೆಂಬುವರ್, ಬವರದೋಳ್ ಪೆರಗಿಂಪೆರಗಿರ್ಪ ಬುದ್ದಿಯಂ
ದರ ನೆಲೆಯೆಂದು ಮಾಡಿ ಪೆರರಂ ಪೆರರಿಂದಮೆ ಗೆರ‍್ವಿರಲ್ಲದಿಂ
ತಿರೆ ಪೆರಗಾಗೆ ಬಲಮನ್ಯ ಬಲಂ ಬೆರಗಾಗಲೊಂದೆ ಸಿರಿ
ಧಾರದೊಳೆ ಗೆಲುವರೆ ಪಗೆಯನಾರ್ ಸಮನಿಂತ ಸಹಾಯ ಶೂರನೋಳ್

ತನ್ನ ಒಡೆಯನಿಗಾಗಿ ಅವನ ಶತ್ರುಗಳೊಂದಿಗೆ ನಡೆಸಿದ ಕದನ ಕಾದಾಟವಿರಲಿ, ಬೇಟೆಯ ಅದಮ್ಯ ಉತ್ಸಾಹದ ಪ್ರಸಂಗಗಳಿರಲಿ, ತುರುಗಳ್ಳರೊಂದಿಗಿನ ಕಲಿತನವಿರಲಿ, ಊರಸ್ತ್ರೀಯರ ಮಾನ ಸಂರಕ್ಷಣೆಯ ಸಂದರ್ಭವಿರಲಿ, ಇಲ್ಲೆಲ್ಲಾ ಇದಕ್ಕಾಗಿಯೇ ಮಡಿದು ಹೋದ ವೀರರ ಸಾಹಸಗಳಿಗೆ ಸಾಕ್ಷಿಯಾಗಿ ನೆಡಲ್ಪಟ್ಟಿರುವ ಈ ವೀರಗಲ್ಲುಗಳು, ಅವರ ಪರಾಕ್ರಮದ ಕಥೆಗಳನ್ನು ಹೇಳುವುದಲ್ಲದೇ ಆ ಪ್ರದೇಶದ ’ವೀರಪರಂಪರೆ’ಯನ್ನು ಅರಿಯಲು ನೆರವಾಗುತ್ತವೆ.

ಪುರುಷನ ಹಾಗೆ ಸ್ತ್ರೀಯೂ ಕೂಡ ಕದನಗಳಲ್ಲಿ ಸ್ವಯಂ ಕಾದಾಡಿದ, ತನ್ನ ಒಡತಿಯ ಸಾವಿನ ನಂತರ ತನ್ನನ್ನು ತಾನು ಸ್ವಸಂತೋಷದಿಂದ ಕೊಂದುಕೊಂಡ, ವೀರಮರಣವನ್ನು ಅಪ್ಪಿದ ತನ್ನ ಪತಿಯನ್ನು ಹಿಂಬಾಲಿಸಿದ, ಸಾಹಸದ, ತ್ಯಾಗದ ಕಥೆಗಳನ್ನು ಸಾರುತ್ತಾ ನಿಂತಿರುವ ಸ್ತ್ರೀಯರ ಸ್ಮಾರಕಶಿಲೆಗಳೂ ವೀರಗಲ್ಲುಗಳ ಸಾಲಿನಲ್ಲಿ ನಿಂತುಕೊಳ್ಳುತ್ತವೆ. ಇಂತಹ ಸ್ತ್ರೀಯರ ಸ್ಮಾರಕ ಶಿಲೆಗಳನ್ನು ’ಮಾಸ್ತಿಕಲ್ಲುಗಳು’ ಎಂದು ಗುರುತಿಸಲಾಗಿದೆ. ಶಿಲ್ಪದಲ್ಲಿನ ಸ್ತ್ರೀಯು ಮಾಸ್ತಿ ಆದುದನ್ನು ಬಿಂಬಿಸಲು ಅವಳ ಒಂದು ಕೈಯನ್ನೋ ಎರಡು ಕೈಯನ್ನೋ ಮೇಲಕ್ಕೆತ್ತಿರುವಂತೆ ಚಿತ್ರಿಸಲಾಗಿದೆ. ಮೇಲಕ್ಕೆತ್ತಿದ, ಕೈಗಳಲ್ಲಿ, ಹೂವೋ, ನಿಂಬೆಹಣ್ಣೋ, ಕಳಶ, ಗಿಣಿ ಮುಂತಾದ ಮಂಗಳಕಾರಕ ವಸ್ತುಗಳ ಇರುತ್ತವೆ. ಹಲವು ಸ್ಮಾರಕಗಳಲ್ಲಿ ಮಾಸ್ತಿಯಾಗಿರುವ ಸ್ತ್ರೀ ಚಿತ್ರದ ಮಗ್ಗುಲಿನಲ್ಲಿ ಚಿಕ್ಕ ಸ್ತ್ರೀ ವಿಗ್ರಹವನ್ನು ಕಾಣಬಹುದು. ಸಾಮಾನ್ಯವಾಗಿ ವೀರಗಲ್ಲುಗಳ ಮೇಲೆ ಕಂಡುಬರುವ ಶಿಲ್ಪ ಪಾಠ ಮಾಸ್ತಿಕಲ್ಲುಗಳಲ್ಲಿ ಕಂಡುಬರುವುದಿಲ್ಲ ಇದರಿಂದಾಗಿಯೇ ಮಹಾಸತಿಯಾದವರ ಹೆಸರು ಮತ್ತು ಉದ್ದೇಶ ನಿಗೂಢವಾಗಿಯೋ ಈ ನಿಗೂಢತೆ ಉಳಿದುಕೊಂಡು ಬಂದಿದ್ದರೂ ಆ ವೀರವನಿತೆಯರ ಸಾಹಸಗಳ ತ್ಯಾಗಗಳ ಪ್ರತೀಕವಾಗಿ ನಿಲ್ಲಿಸಿರುವ ಈ ಅಜ್ಞಾತ ಶಿಲ್ಪಗಳು ಮಾತ್ರ ಅಂದಿನ ಮಹಿಳೆಯ ಉದಾತ್ತವಾದ ಮೌಲ್ಯಯುತವಾದ ಬದುಕಿಗೆ ಸಾಕ್ಷಿ ಎಂಬುದಂತೂ ಸತ್ಯ.

ತಾಲ್ಲೂಕಿನ ಬಾಣರಾವಿ (ಬಂಡ್ರಾವಿ)ಯಲ್ಲಿರುವ ‘ಕಾಮಗೇತಿ ವೀರರು’ ಎಂದು ಸ್ಥಳಿಯರು ಕರೆಯುವ ವೀರಗಲ್ಲಿನಿಂದ ಹಿಡಿದು ಬೊಮ್ಮಗೊಂಡನಕೆರೆಯ ಈಶ್ವರನ ಗುಡಿ ಮುಂದಿನ ಅರಳೀಮರದ ಕಟ್ಟೆಯ ಕೆಳಗೆ ನೆಲದ ಮೇಲೆ ಅಂಗಾತ ಹಾಕಿರುವ ‘ವೀರಮಸ್ತಿಕಲ್ಲು’ವರೆಗೆ ನಡೆಸಲಾದ ಕ್ಷೇತ್ರಕಾರ್ಯದಲ್ಲಿ ಸಂಪಾದಿಸಿರುವ ವೀರಗಲ್ಲುಗಳು ಮಾಸ್ತಿಕಲ್ಲುಗಳು ಈ ತಾಲ್ಲೂಕಿನ ಭೌಗೋಳಿಕ ಪ್ರದೇಶದ ಸಾಂಸ್ಕೃತಿ ಇತಿಹಾಸದ ಮೇಲೆ ಬೆಳಕು ಬೀರುತ್ತವೆ. ಹಸಿಯ ಸಿದ್ಧಾಪುರ (ಅಶೋಕ ಸಿದ್ಧಾಪುರ) ಕಾಡಸಿದ್ದಾಪುರ ಜಟ್ಟಂಗಿ ಬೆಟ್ಟ ಪ್ರದೇಶ ನಾಗಸಮುದ್ರ, ದೇವಸಮುದ್ರ, ಶಿರೇಕೊಳ, ಜಾಲಿಪೆಂಟ,(ಜಹಗಿರ ಬುಡ್ಡೇನಹಳ್ಳಿ) ಭೈರಾಪುರ, ಹಾನಗಲ್ಲ ಪ್ರದೇಶ ಇಲ್ಲಿ ಕಾಣಸಿಗುವ ಈ ಶಿಲ್ಪಗಳು ಆಯಾಯ ಪ್ರದೇಶ ಸ್ಥಾನಿಕ ಜನಜೀವನ ಮೇಲಿನ ತಮ್ಮ ನಿಗೂಢ ಸಂಗತಿಗಳ ಮೂಲಕ ಗಮನ ಸೆಳೆಯುತ್ತವೆ. ತಮ್ಮಗಳ ಮೈಮೇಲಿನ ಏಕಹಂತದಿಂದ ನಾಲ್ಕು ಹಂತಗಳವರೆಗಿನ ವಿವಿಧ ಕಥಾನಕಗಳ ಚಿತ್ರರಚೆಯಿಂದ, ಆ ಪ್ರದೇಶದ ವೀರ ಹಾಗೂ ವೀರಸ್ತ್ರಿಯರ ಸಾಹಸ ತ್ಯಾಗದ ಅಜ್ಞಾತ ಚಾರಿತ್ರಿಕ ಘಟನೆಗಳಿಗೆ ಮೂಕಸಾಕ್ಷಿಯಾಗಿವೆ.

ಇಲ್ಲಿನ ವೀರಗಲ್ಲುಗಳನ್ನು ಅವುಗಳ ರಚನೆ ಮತ್ತು ಶಿಲ್ಪ ಪಾಠದಿಂದಾಗಿ ಈ ಕೆಳಕಂಡ ಪ್ರಭೇದಗಳಾಗಿ ವಿಂಗಡಿಸಿ ವಿಶ್ಲೇಷಿಬಹುದಾಗಿದೆ.

ವೀರಗಲ್ಲುಗಳು:

ಪಲ್ಲಕ್ಕಿ ಅಥವಾ ಮೇನೆಯ ಬಳಕೆ
ಆನೆ ಮತ್ತು ಕುದುರೆಗಳ ಬಳಕೆ

ನೆಲಕಾಳಗ:

ನಾಗಸಮುದ್ರದ ಆಂಜನೇಯನ ಗುಡಿಯ ಬಳಿ ನಿಲ್ಲಿಸಲಾಗಿರುವ ಸುಮಾರು ೪ ಅಡಿ ಎತ್ತರ ೩ ಅಡಿ ಅಗಲದ ಹಸಿರು ಮಿಶ್ರಿತ ಕಪ್ಪು ಲೋಹ ಶಿಲೆಯಲ್ಲಿ ಈ ವೀರಗಲ್ಲಿನಲ್ಲಿ ಪಲ್ಲಕ್ಕಿಯನ್ನು ಉಳಿಸಲಾಗಿದೆ. ನಾಲ್ಕು ಹಂತಗಳ ಈ ಚಿತ್ರ ರಚನೆಯ ನೆಲಹಂತದಲ್ಲಿ ವ್ಯಕ್ತಿಯೋರ್ವನನ್ನು ಅವನ ಸೇವಕರು ಪಾಲಕಿಯಲ್ಲಿ ರಣಭೂಮಿಗೆ ಕರೆದೊಯ್ಯುತ್ತಿರುವ ಚಿತ್ರಣವಿದೆ. ಕೆಲವು ವೀರಮರಣವನ್ನು ಅಪ್ಪಿದ ವೀರರನ್ನು ಅಪ್ಸರೆಯರು ಸ್ವರ್ಗಕ್ಕೆ ಪಲ್ಲಕ್ಕಿಗಳಲ್ಲಿ ಕರೆದೊಯ್ಯುವ ಚಿತ್ರಗಳು ಕಾಣಸಿಗುತ್ತವೆ. ಇದರಿಂದ ಈ ಭಾಗದಲ್ಲಿ ನಡೆದ ಕಾಳಗದಲ್ಲಿ ಸ್ವತಃ ರಾಜನು, ಅವನು ಮಾಂಡಲಿಕನು, ದಳಪತಿಯು, ಭಾಗವಹಿಸಿದ್ದನ್ನು ಇದರಿಂದ ಉಹಿಸಬಹುದು.

ಆನೆ ಅಥವಾ ಕುದರೆಗಳ ಬಳಕೆ

ಇಲ್ಲಿ ಕಂಡುಬರುವ ಬಹುತೇಕ ವೀರಗಲ್ಲುಗಳಲ್ಲಿ ಕಾಳಗದ, ಬೆಟೆಯ, ಗೋಗ್ರಹಣದ ಸಂದರ್ಭದಲ್ಲಿ ಕುದುರೆಯನ್ನು ಉಳಿಸಿರುವುದನ್ನು ಕಾಣಬಹುದು. ಭೈರಾಪುರದ ಕಣಿವೆ ಬಸಪ್ಪನ ಮುಂಬಯಲಿನಲ್ಲಿ ಪೆನ್ನಯ್ಯನ ಹೊಲದಲ್ಲಿ ನಿಲ್ಲಿಸಿರುವ ವೀರಗಲ್ಲು ‘ತುರುಗಾಳದ’ ಕಾಳಗದಲ್ಲಿ ನಿರತವಾಗಿರುವುದನ್ನು ಅದರಲ್ಲಿ ಮಡಿದ ವೀರರನ್ನು ಸ್ವರ್ಗಗಮನ ಗೈಯುತ್ತಿರುವ ದೃಶ್ಯವನ್ನು ಕಾಣಬಹುದು.

ನಾಗಸಮುದ್ರದ ಹಳೆಯ ನೀರಿನ ಟ್ಯಾಂಕ್ ಬಳಿ ನಿಲ್ಲಿಸಿರುವ ನಾಲ್ಕು ಹಂತಗಳ ಕೆತ್ತನೆಯ ವೀರಗಲ್ಲು ಬೇಟೆಯ ಸಂದರ್ಭವನ್ನು ನೆನಪು ಮಾಡಿಕೊಡುತ್ತದೆ. ಇಲ್ಲಿಯೂ ವೀರನು ಕುದುರೆಯ ಮೇಲೆ ಕುಳಿತು ಕಾದಾಡುವ ಚಿತ್ರಣವಿದೆ. ಈ ವೀರಗಲ್ಲಿನ ಎರಡನೆಯ ಪಟ್ಟಿಯಲ್ಲಿ ನಾಲ್ವರು ಸ್ತ್ರೀಯರ ಚಿತ್ರಗಳಿದ್ದು. ಅದರಲ್ಲಿ ಓರ್ವ ಸ್ತ್ರೀ ಬೇಲೂರು ಶಿಲಾಬಾಲಕಿಯಂತೆ ಹೋಲುವುದನ್ನು ಕಾಣಬಹುದು. ಶಿರೇಕೊಳ, ದೇವಸಮುದ್ರ, ಕಾಡಸಿದ್ದಾಪುರ. ಹಿರೆಕೆರಹಳ್ಳಿ ಈ ಗ್ರಾಮಗಳ ಹೊರವಲಯದಲ್ಲಿ ಹಾಕಿರುವ ವೀರಗಲ್ಲುಗಳಲ್ಲಿ ಕುದುರೆಯನ್ನು ಬಳಸಿರುವುದನ್ನು ಕಂಡು ಬರುತ್ತದೆ.

ಬೇಟೆಯ ಶಿಲ್ಪಗಳು

ಕೋನಸಾಗರದ ಕಪ್ಪಡ ಬಂಡೆಯ ಬಳಿ ಹಾಗೂ ನಾಗಸಮುದ್ರದ ಹಳೆಯ ನೀರಿನ ಟ್ಯಾಂಕ್ ಬಳಿ ನಿಲ್ಲಿಸಿರುವ ವೀರಗಲ್ಲುಗಳಲ್ಲಿ ಚಿತ್ರ ರಚನೆಗಳು ಬೇಟೆಯ ಪ್ರಸಂಗವನ್ನು ನೆನಪು ಮಾಡಿಕೊಡುತ್ತವೆ.

ಕೋನಸಾಗರದ ಕಪ್ಪಡ ಬಂಡೆ ಬಳಿ ಇರುವ ವೀರಗಲ್ಲು ಇತ್ತೀಚಿನದೆಂದು ತಿಳಿದುಬರುತ್ತದೆ. ಪಶುಪಾಲನೆಯನ್ನು ಕೈಗೊಂಡು ಜೀವನ ಸಾಗಿಸುವ ‘ಮ್ಯಾಸಬೇಡರ’ ಪಂಗಡಕ್ಕೆ ಸೇರಿದ ಯರಮಂಚಯ್ಯ ಎಂಬುವವನು ತನ್ನ ಕುರಿ ಮಂದೆಯ ಮೇಲೆ ಎರಗಿದ ಚಿರತೆಯನ್ನು ನಿರಾಯುಧನಾಗಿ ಎದುರಿಸುತ್ತಿದ್ದು, ಅವನ ನಾಯಿಯು ಚಿರತೆಯ ಕಾಲನ್ನು ಹಿಡಿದುಕೊಳ್ಳುವುದರ ಮೂಲಕ ತನ್ನ ಒಡೆಯನಿಗೆ ಸಹಕರಿಸುತ್ತದೆ. ಇದರ ಅಧ್ಯಯನ ನಡೆಸಿದ ಆರ್, ಶೇಷಶಾಸ್ತ್ರಿಗಳು, ವೀರಗಲ್ಲಿನ ಶಿಲ್ಪ ಸಾಧಾರಣದ್ದೇ ಆದರೂ ಬೇಟೆಯ ಪ್ರಸಂಗವನ್ನು ಶಿಲ್ಪದಲ್ಲಿ ಸಹಜವಾಗಿ ಮೂಡಿಸಲಾಗಿದೆ ಎಂದು ಮೆಚ್ಚಿದ್ದಾರೆ. ಇಂತಹ ಇಪ್ಪತ್ತನೇಯ ಶತಮಾನದ ಕಾಲಘಟ್ಟದಲ್ಲಿ ಬೇಡ ಸಮುದಾಯದವರು ವೀರಗಲ್ಲನ್ನು ನೆಟ್ಟಿರುವುದು ಕುತೂಹಲದ ಸಂಗತಿ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ನಾಗಸಮುದ್ರದಲ್ಲಿರುವ ಈ ವೀರಶಿಲ್ಪದಲ್ಲಿ ಕುದುರೆಯ ಮೇಲೆ ಕುಳಿತ ವೀರನೊಬ್ಬನು ಹುಲಿಯೊಂದಿಗೆ ಕಾದಾಡುವ ದೃಶ್ಯವನ್ನು ಕಾಣಬಹುದು. ಬಹುಶಃ ಹೊಯ್ಸಳರ ಕಾಲದಲ್ಲಿ ಈ ಶಿಲ್ಪವನ್ನು ರಚಿಸಿರುವುದನ್ನು ಶಿಲ್ಪದೊಳಗಣ ಶಿಲ್ಪಗಳಿಂದ ಕಂಡುಬರುತ್ತದೆ. ಎರಡನೆಯ ಹಂತದಲ್ಲಿರುವ ನಾಲ್ವರು ಸ್ತ್ರೀಯರಲ್ಲಿ ಒಬ್ಬಳು ಬೇಲೂರು ಶಿಲಾಬಾಲಕಿಯನ್ನು ಹೋಲುತ್ತಾಳೆ.

ಮಾಸ್ತಿಕಲ್ಲುಗಳು

ತಾಲ್ಲೂಕಿನಲ್ಲಿ ಕಂಡುಬರುವ ಮಾಸ್ತಿಕಲ್ಲುಗಳ ಪೈಕಿ ಒಂದೆರಡು ಶಿಲ್ಪಗಳನ್ನು ಹೊರತುಪಡಿಸಿದರೆ ಉಳಿದವುಗಳೆಲ್ಲಾ ವೀರ ಮಾಸ್ತಿಕಲ್ಲುಗಳು, ಶಿರೇಕೋಳದ ರಾಯರಮಠದ ಒಳಾವರಣದಲ್ಲಿ ಕಂಡುಬರುವ ಸ್ತ್ರೀಶಿಲ್ಪ, ಭೈರಾಪುರದ ಹನುಮೇಶರಾಯರ ಹೊಲದಲ್ಲಿನ ಸ್ತ್ರೀಶಿಲ್ಪ ಸುಂದರವಾದ ರಚನೆಗಳಾಗಿದ್ದು ಇದರಲ್ಲಿ ಮಾಸ್ತಿಯಾದವಳನ್ನು ಶೃಂಗಾರವಾಗಿ ಬಿಡಿಸಲಾಗಿದೆ. ಮುಖ್ಯ ಶಿಲ್ಪದ ಅಕ್ಕಪಕ್ಕದಲ್ಲಿ ಮತ್ತೊಂದು ಚಿಕ್ಕದಾದ ಸ್ತ್ರೀವಿಗ್ರಹಗಳನ್ನೆ ಬಿಡಿಸಲಾಗಿದೆ.

ವೀರಮಾಸ್ತಿಕಲ್ಲುಗಳಲ್ಲಿ ಮಾಸ್ತಿಯಾದ ಸ್ತ್ರೀಯ ಜೊತೆಯಲ್ಲಿ ಅವಳ ಪತಿಯನ್ನು ಬಿಡಿಸಿರುವುದನ್ನು ಕಾಣುತ್ತವೆ. ಶಿರೇಕೊಳದ ಊರು ಬಾಗಿಲು, ದೇವಸಮುದ್ರದ ಪಂಪಾಪತಿ ದೇವಸ್ಥಾನ, ಯಲ್ಲಮ್ಮನ ದೇವಸ್ಥಾನ ಮುಂಭಾಗ ಯರ್ರೇನಹಳ್ಳಿ, ಭಟ್ರಹಳ್ಳಿ, ಬೊಮ್ಮದೇವರಹಳ್ಳಿ, ಬಾಂಡ್ರಾವಿ ಇಲ್ಲಿರುವ ವೀರಮಾಸ್ತಿಕಲ್ಲುಗಳಲ್ಲಿ ಪುರುಷ ಮತ್ತು ಸ್ತ್ರೀಯ ಚಿತ್ರಗಳನ್ನು ಬಿಡಿಸಲಾಗಿದೆ. ಈ ಶಿಲ್ಪಗಳಲ್ಲಿ ಶಿಲ್ಪಪಾಠ ಇಲ್ಲದಿರುವುದು. ಈ ಮಾಸ್ತಿಯ ಹೆಸರು, ಉದ್ದೇಶ ಈ ವಿವರಗಳು ಗೊಪ್ಯವಾಗಿ ಉಳಿದುಹೋಗಿವೆ. ಕೆಲವು ಕಡೆ ಈ ಶಿಲ್ಪಗಲನ್ನು ಆರಾಧಿಸಿದರೂ, ಇವರು ಯಾರು ಎಂಬುದು ಸ್ಪಷ್ಟವಾಗುವುದಿಲ್ಲ. ಕಾಡ ಸಿದ್ದಾಪುರದ ಹನೆಯ ನಾಡಿನ ಬಯಲಿನಲ್ಲಿ ದೊರೆತಿರುವ ‘ಹೊನ್ನಿಸಿಡಿತಲೆಯ’ ಮಾಸ್ತಿಕಲ್ಲು, ತನ್ನ ಒಡತಿಯ ಸಾವಿನ ನಂತರ ತಾನೂ ಸ್ವಇಚ್ಛೆಯಿಂದ ಸಾವು ತಂದುಕೊಂಡ ಕತೆಯನ್ನು ಹೇಳುತ್ತದೆ. ಹೊಯ್ಸಳ ದಳಪತಿ (ಅಥವಾ ರಾಜಪ್ರತಿನಿಧಿ) ಸಿವೋದನಾಯಕನ ತಾಯಿ ಹೊನ್ನವ್ವ ನಾಗತಿಯ ಸೇವಕಿಯಾಗಿದ್ದ ಹೊನ್ನಿ ಎಂಬುವವಳು ತನ್ನ ಒಡತಿಯ ಸಾವಿನ ನಂತರ ತಾನೂ ಸಾವು ತಂದುಕೊಳ್ಳುತ್ತಾಳೆ. ಕಾಡಸಿದ್ಧಾಪುರದ ಅಕ್ಕತಂಗಿಯರ ಗುಡಿ ಎದುರು ಇರುವ ವೀರಗಲ್ಲುಗಳಲ್ಲಿ ಸ್ತ್ರೀಯರು ಪುರುಷರೊಂದಿಗೆ ಕಾದಾಡುತ್ತಿರುವ ಹಳೆಗುಂಡ್ಲೂರಿನ ಅಕ್ಕನಾಗಮ್ಮ ಮತ್ತು ವೀರನಾಗಮ್ಮ ಎಂಬ ಮಹಿಳೆಯರು ಪುರುಷನನ್ನು ಎದುರಿಸಿ ಆತ್ಮಾರ್ಪಣೆ ಮಾಡಿಕೊಂಡಿದುದರ ದ್ಯೋತಕವಾಗಿ ಸ್ಮಾರಕಗಳನ್ನು ನೆಡಲಾಗಿದೆ.

ಈ ಮಾಸ್ತಿಕಲ್ಲು, ವೀರಮಾಸ್ತಿಕಲ್ಲುಗಳ ಕುರಿತು ನಿಖರವಾದ ಮಾಹಿತಿಗಳು ಲಭ್ಯವಾಗದೇ ಅವರ ಬದುಕಿನ ಮೌಲ್ಯಯುತ ಗುಣಲಕ್ಷಣಗಳನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತಿಲ್ಲ.

ಶಿಲ್ಪರಚನೆ

ಯಾವುದೇ ಸ್ಮಾರಕಶಿಲೆಗಳಲ್ಲಿ ಸ್ತ್ರೀಯನ್ನು ಸಮಭಂಗಿಯಲ್ಲಿ ನಿಂತಿರುವಂತೆ ಚಿತ್ರಿಸಲಾಗಿರುತ್ತದೆ. ಚಿತ್ರದ ಉಡುಗೆ ತೊಡುಗೆಗಳಿಂದ ಈ ಮಾಸ್ತಿಯು ಸಾಮಾನ್ಯ ಅಥವಾ ರಾಜಸ್ತ್ರೀ ಎಂದು ಗುರುತಿಸಬಹುದಾಗಿದೆ. ರಾಜಪರಿವಾರದ ಸ್ತ್ರೀಯ ಸೀರೆಯ ನೆರಿಗೆಗಳು ಪಾದದವರೆಗೂ ಇಳಿಬಿದ್ದಿದ್ದು, ಕೈಕಾಲುಗಳಲ್ಲಿ ಕಡಗಗಳನ್ನು ಕೊರಳು ಹಾಗೂ ತಲೆಗೂದಲನ್ನು ತಲೆಯ ಎಡಭಾಗದಲ್ಲಿ ಗಂಡು ಹಾಕಿರುವಂತೆ ಚಿತ್ರಿಸಿದ್ದ, ಮುಖಭಾವವನ್ನು ಸುಂದರವಾಗಿ ಬಿಡಿಸಲಾಗಿರುತ್ತದೆ. ಮಾಸ್ತಿಯು ತನ್ನ ಬಲಗೈಯನ್ನೋ ಅಥವಾ ಎರಡೂ ಕೈಯನ್ನೋ ಮೇಲಕ್ಕೆಂತಿದ್ದು. ಎತ್ತಿದ ಕೈಯ ಅಂಗೈಯೊಳಗೆ ಹೂವನ್ನೋ, ನಿಂಬೆಹಣ್ಣನ್ನೋ, ಗಿಣಿಯನ್ನೋ, ಹಿಡಿದಿರುವುದನ್ನು ಕಾಣುತ್ತವೆ. ಸ್ತ್ರೀಚಿತ್ರದ ಪಕ್ಕದಲ್ಲಿರುವ ಪುರುಷನನ ಚಿತ್ರವು ಸ್ತ್ರೀ ಚಿತ್ರರಚನೆಗೆ ಸಮಾನವಾಗಿದ್ದು, ಆತನು ವೀರನೋ ಬೇಟೆಗಾರನೋ, ಸಾಮಾನ್ಯ ಯೋಧನೋ, ರಾಜಪರಿಹಾರದವನೋ, ಎಂದು ಗುರುತಿಸಬಹುದು. ಆ ಪುರುಷನ ಕೈಯಲ್ಲಿ ಬಗೆ ಬಗೆಯ ಆಯುಧಗಳು ಇರುತ್ತವೆ.

ಬೊಮ್ಮದೇವರಹಳ್ಳಿ ಬೊಮ್ಮಗೊಂಡನ ಕೆರೆ, ಯರ್ರೇನಹಳ್ಳಿ, ಹಳೆಗುಂಡ್ಲೂರು ಭಾಗಗಳಲ್ಲಿ ಕಂಡುಬರುವ ವೀರಮಾಸ್ತಿಕಲ್ಲುಗಳು ರಾಜಪರಿವಾರದವುಗಳೆಂದು ಅವುಗಳ ರಚನೆಯಿಂದ ತಿಳಿದುಬಂದರೆ, ದೇವಸಮುದ್ರ, ನಾಗಸಮುದ್ರ, ಬಾಣರಾವಿ ಇಲ್ಲಿ ಕಂಡು ಬರುವ ಶಿಲ್ಪಗಳು ಸಾಮಾನ್ಯ ಯೋಧರೆಂಬುದು ಮನಗಾಣುತ್ತದೆ. ಹಳೆಯ ಗುಂಡ್ಲೂರು ವೀರಮಾಸ್ತಿ ಕಲ್ಲಿನಲ್ಲಿ ವೀರನು ಹಾಗೂ ಅವನ ಎಡಬಲದಲ್ಲಿ ಇಬ್ಬರು ಸ್ತ್ರೀಯರ ಚಿತ್ರಗಳು ಇರುವುದನ್ನು ಬಿಟ್ಟರೆ ಉಳಿದ ಕಡೆ ಇರುವವುಗಳಲ್ಲಿ ಒಬ್ಬ ಪುರುಷ ಮತ್ತು ಸ್ತ್ರೀ ಇರುವ ರಚನೆಗಳೇ ಪ್ರಧಾನವಾಗಿ ಕಂಡುಬರುತ್ತವೆ.

ನಿಷಧಿಕಲ್ಲುಗಳು

ಜೈನಮುನಿಗಳು, ಸಲ್ಲೇಖನಾ ವೃತದಿಂದ ಪ್ರಾಣತ್ಯಾಗ ಮಾಡಿದುದರ ದ್ಯೋತಕವಾಗಿ ನೆಡುವ ಸ್ಮಾರಕಗಳನ್ನು ನಿಷಧಿಕಲ್ಲುಗಳು ಎಂದು ಗುರುತಿಸಲಾಗುತ್ತಿದೆ. ಇಂತಹ ನಿಷಧಿ ಕಲ್ಲುಗಳು ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ಜಾರಿಮೂಲೆ ಹೊಲದ ಗುಡಿಯ ಬಳಿ ಹಾಕಿಸಲಾಗಿದೆ. ಇದರಲ್ಲಿ ಗುರುವಿನ ಮುಂದೆ ಹೂತು ಭಕ್ತಿಯಿಂದ ಅರ್ಹಂತನ ಸ್ತೋತ್ರವನ್ನು ಮಾಡುವ ಶಿಷ್ಯನ ಚಿತ್ರವಿರುತ್ತದೆ. ಈ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಈ ಶಿಲ್ಪಗಳು ಸಂರಕ್ಷಣೆ ಇಲ್ಲದೆ ಅನಾಥವಾಗಿವೆ.

ಗರುಡರು ಅಥವಾ ವೇಳೆವಾಳಿಗಳು

ತಮ್ಮ ಒಡೆಯರು ಯುದ್ಧಭೂಮಿಯಲ್ಲಿಯೇ, ಬೇಟೆಯಲ್ಲಿಯೇ ಮರಣಿಸಿದರೆ ತಾವೂ ಮರಣಿಸುವುದೆಂದು ಶಪಥಮಾಡಿಕೊಂಡಿದ್ದ ಅವನ ಸೇವಕರು ದೇಹತ್ಯಾಗ ಮಾಡಿದ ಕುರುಹಿಗಾಗಿ ನೆಡುವ ಗರುಡ ಗಂಭದಲ್ಲಿ ಚಿತ್ರಿಸಿರುವವರನ್ನು ಗರುಡರು ಎಂದು ಗುರುತಿಸಲಾಗಿದೆ. ಇಂತಹ ಗರುಡ ಗಂಭಗಳಲ್ಲಿ ಒಬ್ಬ ಪುರುಸ ಮತ್ತು ಸ್ತ್ರೀಚಿತ್ರಗಳು ಇರುತ್ತವೆ. ತಾಲ್ಲೂಕಿನ ಬೊಮ್ಮದೇವರ ಹಳ್ಳಿ ಮತ್ತು ಜಂಬಲ ಮುಲ್ಕ ಹೊಸಹಳ್ಳಿಗಳಲ್ಲಿ ಇಂತಹ ವೇಳೆವಾಳಿಗಳನ್ನು ಕಾಣಬಹುದು.

ಶಿಲ್ಪ ರಚನೆ

ಮಡಿದ ವೀರನು ಸ್ವರ್ಗಲೋಕವನ್ನು ಸೇರುತ್ತಾನೆ ಎಂಬುದು ಎಲ್ಲಾ ವೀರಗಲ್ಲುಗಳ ರಚನೆಯಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ವೀರಗಲ್ಲು ಮೂರು ಹಂತಗಳನ್ನು ಹೊಂದಿರುತ್ತದೆ. ಕೆಳಹಂತದಲ್ಲಿ ವೀರನ ಹೋರಾಟದ ಚಿತ್ರಣವಿದ್ದರೆ ಮಧ್ಯದ ಹಂತದಲ್ಲಿ ಮಡಿದ ವೀರನನ್ನು ಸುರಾಂಗಗನೆಯರು ಸ್ವರ್ಗಕ್ಕೆ ಕರೆದೊಯ್ಯುವ ಚಿತ್ರಣವಿರುತ್ತದೆ. ಮೇಲಿನ ಹಂತದಲ್ಲಿ ಆ ವೀರನು ಶಿವಲೋಕವನ್ನು ಸೇರಿದ್ದಾನೆ ಎಂಬುದನ್ನು ಶಿವಲಿಂಗ ಮತ್ತು ನಂದಿಯನ್ನು ಬಿಡಿಸಿರುವುದೂ, ಶಿವಲಿಂಗದ ಪಕ್ಕ ಆ ವೀರ ನಿಂತಿರುವುದನ್ನು ಬಿಡಿಸಿರುವುದರಿಂದ ಮನಗಾಣಬಹುದು. ಮಡಿದ ವೀರನನ್ನು ಸಾಮಾನ್ಯವಾಗಿ ಶಿಲ್ಪದ ಬಲಬಾಗದಲ್ಲಿ ಬಿಡಿಸಲಾಗುತ್ತದೆ. ಎಡಭಾಗದಲ್ಲಿ ಶತ್ರುವಿನ ಚಿತ್ರ ಬಿಡಿಸಿರುತ್ತವೆ. ಶಿಲ್ಪದ ಉಡುಗೆ ತೊಡುಗೆಗಳ ರಚನೆಯಿಂದ, ಶಿಲ್ಪದಲ್ಲಿರುವ ವೀರನು ಸಾಮಾನ್ಯನೋ, ದಂಡನಾಯಕನೋ, ಅರಸನೋ ಎಂದು ಗುರುತಿಸಬಹುದು. ವೀರರ ಮುಡಿಗಳನ್ನು ಹಲವು ರೀತಿಯಲ್ಲಿ ರಚಿಸಲಾಗಿರುತ್ತದೆ. ಕೂದಲನ್ನು ನೆತ್ತಿಯ ಮೇಲೆ ಉಂಡೆಯಂತೆ, ತಲೆಯ ಹಿಂಭಾಗ ಬಲ ಅಥವಾ ಎಡಭಾಗಗಳಲ್ಲಿ, ಶಿಲ್ಪ ತನಗೆ ಅನುಕೂಲವಾಗುವಂತೆ ಬಿಡಿಸಿರುತ್ತಾನೆ. ವೀರನ ಕೈಯಲ್ಲಿ ಖಡ್ಗ, ಕಠಾರಿ, ಭರ್ಜಿ, ಚಾಕು, ಸಂಬಳ, ಕೊತ್ತ, ಬಿಲ್ಲುಬಾಣ ಕರ್ಕಡೆ, ಗುರಾಣಿ, ಸುರಿಗೆ ಇರುತ್ತವೆ. ಜೊತೆಗೆ ಸೊಂಟದಲ್ಲಿ ಚಿಕ್ಕ ಕಠಾರಿಯನ್ನೋ, ಗುದ್ದುಬಾಕನ್ನೋ ಸಿಕ್ಕಿಸಿಕೊಂಡಿರುತ್ತಾನೆ.

ವೀರರ ಆರಾಧನೆಗಳು

ಯುದ್ಧದಲ್ಲಾಗಲೀ, ಹಿಂಸಾತ್ಮಕ ರೀತಿಯಿಂದಾಗಲೀ ಮರಣವನ್ನಪಿದವರು ಭೂತವೋ ಕ್ಷೇತ್ರಪಾಲಕನೋ ಆಗುತ್ತಾನೆ ಎಂಬುದು ನಮ್ಮ ಪೂರ್ವಿಕರ ನಂಬುಗೆ ಇಂತಹ ವೀರರನ್ನು ಭಯದಿಂದಲೋ ಭಕ್ತಿಯಿಂದಲೋ ಆರಾಧಿಸು ಪರಿಪಾಠ ಬೆಳೆದು ಬಂದಿತು. ಅಂತಹ ವೀರರನ್ನು ಆರಾಧಿಸಿದರೆ ಮಳೆ ಬೆಳೆ, ಜನ ಜಾನುವಾರುಗಳಿಗೆ ತಗಲುವ ಪೀಡೆಗಳು, ಕಾಡ ಮೃಗಗಳ ಹಾವಳಿ, ಕಳ್ಳರನ್ನು ಪತ್ತೆ ಮಾಡುವುದು. ಮುಂತಾದ ಮಾನವ ಸಂಕಷ್ಟಗಳಿಂದ ನೆರೆವೇರಿಸಿಕೊಳ್ಳುತ್ತಿದ್ದರು ಎಂದು ನಂಬಲಾಗುತ್ತಿತ್ತು. ಇಂದಿಗೂ ತಾಲ್ಲೂಕಿನ ಹಲವು ಕಡೆ ಇಂತಹ ವೀರರ ಬಗೆಗೆ ಇಂತಹ ಆಚರಣೆಗಳು ಬಳಕೆಯಲ್ಲಿರುವುದನ್ನು ಕಾಣುತ್ತೇವೆ. ರಾಯಾಪುರದಲ್ಲಿರುವ ‘ವೀರಗಲ್ಲು’, ‘ವೀರಗಾರನ ಗುಡಿ’ ಎಂದು ಭಾವಿಸಿಕೊಂಡು ಪೂಜಿಸಲಾಗುತ್ತಿದೆ. ಅದರಂತೆ ಅಕ್ಕನಾಗಮ್ಮ, ವೀರನಾಗಮ್ಮ ಬಾಣರಾವಿಯ ವೀರರು, ಬೊಮ್ಮದೇವರ ಹಳ್ಳಿಯ ಪೌಳ ವಿರರು, ಕೊಂಡ್ಲಹಳ್ಳಿಯ ಮರಗಲ ಈರಣ್ನ, ಚಿಕ್ಕೇರೆಹಳ್ಲಿಯ ವೀರಜಂಪಣ್ನ ಇವರುಗಳು ಇಂದಿಗು ಆಯಾ ಜನಾಂಗದವರಿಂದ ಪೂಜೆಗೊಳ್ಳುತ್ತಿವೆ.

ವೀರಗಲ್ಲುಗಳು ಎಲ್ಲಿರುತ್ತಿದ್ದವು?

ಸಾಮಾನ್ಯವಾಗಿ ವಿರಗಲ್ಲುಳನ್ನಾಗಲೀ, ಮಾಸ್ತಿ ಕಲ್ಲುಗಳನ್ನಾಗಲೀ ಊರ ಮುಂದಿನ ದೇವಾಲಯ, ಚಾವಡಿ, ಊರುಬಾಗಿಲುಗಳ ಬಳಿ, ಕೆರೆ, ಹೊಂಡ, ಹೊಲಗದ್ದೆಗಳ ಬಯಲುಗಳಲ್ಲಿ, ತೋಪುಗಳಲ್ಲಿ ಹಾಕಿಸುತ್ತಿದ್ದರು. ಆಯಾಯ ಸಮುದಾಯಕ್ಕೆ ಪಂಥಕ್ಕೆ ಸೇರಿದವನನ್ನು ಆಯಾಯಪಂಥದ ದೇವಾಲಯಗಳ ಬಳಿ ಹಾಕಿಸುತ್ತಿದ್ದರು. ಇದರಿಂದಲೇ ವೀರನು ಇಂತಹ ಸಮುದಾಯ ಅಥವಾ ಪಂಥಕ್ಕೆ ಸೇರಿದವನೆಂದು ಗುರುತಿಸಬಹುದಾಗಿತ್ತು. ವೀರರು ದೈವರೂಪಿಗಳು, ದೇವಾಲಯಗಳ ಮುಂದೆ ಇದ್ದರೆ ಅವರೂ ಪೂಜ್ಯಾರ್ಹವಾಗುವರು ಎಂಬುದನ್ನು ಮನಗಂಡಿದ್ದರು. ಹೊಲಗದ್ದೆಗಳಲ್ಲಿ ಇರುವ ವೀರರನ್ನು ವೀರಗಾರ ದೇವರುಗಳ ಭಾವಿಸಿ, ಹೊಲದಲ್ಲಿ ಉತ್ತುಬಿತ್ತುವಾಗ, ದವಸಧಾನ್ಯ ಕೃಷಿ ಮಾಡುವಾಗ ಅವುಗಳಿಗೂ ಪೂಜೆ ಸಲ್ಲಿಸಿ ತಮ್ಮ ಪ್ರಕೃತಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ಸಾಮಾನ್ಯವಾಗಿ ವೀರನು ಎಲ್ಲಿಯೇ ಮಡಿದಿರಲಿ ಅವನ ಸ್ಮಾರಕವನ್ನು ಅವನ ಊರಿನಲ್ಲಿ ಹಾಕಿಸುವುದು ವಾಡಿಕೆ.

ತಾಲ್ಲೂಕಿನ ವೀರಗಲ್ಲು ಮಾಸ್ತಿಕಲ್ಲುಗಳಲ್ಲಿನ ರಚನೆಗಳನ್ನು ಗಮನಿಸಿದರೆ ವೀರರು ತಮ್ಮ ಕೈಗಳಲ್ಲಿ ಹಿಡಿದುಕೊಂಡಿರುವ ಆಯುಧಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ ಕಂಡುಬರುತ್ತವೆ. ಶಿರೆಕೊಳ, ದೇವಸಮುದ್ರ, ಹನೆಯನಾಡು ಜಟಂಗಿ ಬೆಟ್ಟದ ಆಸುಪಾಸು, ಪುಕುರ್ತಿ, ಜಹಗೀರ ಬುಡ್ಡೆನಹಳ್ಳಿ, ಈ ಭಾಗದಲ್ಲಿ ಕಾಣಸಿಗುವ ವೀರಗಲ್ಲುಗಳಲ್ಲಿ ಅಥವಾ ವೀರಮಾಸ್ತಿಕಲ್ಲುಗಳಲ್ಲಿ ವೀರನು ತನ್ನ ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವುದು ಕಂಡುಬಂದರೆ ಹಗರಿಯ ದಕ್ಷಿಣ ಭಾಗದಲ್ಲಿ ಕಂಡುಬರುವ ವೀರಗಲ್ಲು ಅಥವಾ ವೀರಮಾಸ್ತಿಕಲ್ಲುಗಳಲ್ಲಿ ಬಿಲ್ಲುಬಾಣ, ಕತ್ತಿ, ಬಾಕು, ಶೂಲ ಮುಂತಾದ ಆಯುಧಗಳು ಇರುವುದನ್ನು ಕಾಣುತ್ತವೆ. ಬಂದೂಕುಗಳು ವಿಜಯನಗರದ ಅರಸರ ಕಾಲದಲ್ಲಿ ಬಳಕೆಗೆ ಬಂದುದರಿಂದ ಈ ಸ್ಮಾರಕ ಶಿಲೆಗಳನ್ನ ಆ ಕಾಲಮಾನದಲ್ಲಿ ಹಾಕಿದವುಗಳೆಂದು ಊಹಿಸಬಹುದು. ಹಗರಿ ದಕ್ಷಿಣ ಭಾಗದಲ್ಲಿ ಕಂಡುಬರುವ ಸ್ಮಾರಕಗಳು ಹೆಚ್ಚಾಗಿ ಬೇಟೆ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದು, ಹೊಯ್ಸಳರ ಅಥವಾ ಅದಕ್ಕೂ ಮುಂದಿನ ಕಾಲಮಾನದಲ್ಲಿ ಹಾಕಿಸಿದವುಗಳೆಂದು ಭಾವಿಸಬಹುದು. ಇದರಿಂದಾಗಿ ಈ ಪ್ರದೇಶದಲ್ಲಿ ಹಿಂದಿನಿಂದಲೂ ಬೇಟೆ ಸಂಸ್ಕೃತಿ ಇತ್ತೆಂದೂ ಅನ್ನಿಸುತ್ತದೆ.

ಸಮಾರೋಪ

ಒಂದು ಪ್ರದೇಶದ, ಚಾರಿತ್ರಿಕ, ಸಾಮಾಜಿಕ, ಸಾಂಸ್ಕೃತಿ ಪ್ರತಿನಿಧಿಗಳಂತೆ ಇತಿಹಾಸದ ಮೂಲ ದಾಖಲೆಗಳಾಗಿ ಉಳಿದಿರುವ ಈ ಸ್ಮಾರಕಗಳು ನಮ್ಮ ಐತಿಹಾಸಿಕ ಅವಪ್ರಜ್ಞೆಗೆ ಸಾಕ್ಷಿಯಾಗಿ ನಿಂತಿವೆ. ಹಲವು ಕಡೆ ಸುಂದರವಾದ ಸ್ಮಾರಕಗಳ್ನು ನಿಧಿಗಳ್ಳರು ನಿಧಿಯ ಆಸೆಗಾಗಿ ಕಿತ್ತು ಒಡೆದು ನೆಲದ ಮೇಲೆ ಚೆಲ್ಲಿಹೋಗಿದ್ದಾರೆ. ಕೆಲವು ಶಿಲ್ಪಗಳಲ್ಲಿನ ಚಿತ್ರರಚನೆಗಳು ಮಾನವ ಚೇಷ್ಟೆಗಳಿಗೆ ಗುರಿಯಾಗಿ ವಿರೂಪವಾಗುತ್ತಿವೆ. ಮಾನವ ಸಂಕಷ್ಟಗಳಿಗೆ ಗುರಿಯಾದ ಕೆಲವು ಸ್ಮಾರಕಗಳು ತಮ್ಮ ಮೂಲ ನೆಲೆಯಿಂದ ಸ್ಥಳಾಂತರಗೊಂಡು, ಅನಾಥ ಸ್ಥಿತಿಯಲ್ಲಿ ನಲುಗಿ ಹೋಗುತ್ತಿವೆ. ಬ್ರಹ್ಮಗಿರಿ ತಪ್ಪಲಿನ ಹನೆಯ ನಾಡಿನ ಬಯಲಿನಲ್ಲಿ ಅನಾಥವಾಗಿ ಬಿದ್ದುಹೋಗಿರುವ ಎಷ್ಟೋ ವೀರಗಲ್ಲುಗಳು ನಮ್ಮ ಸಾಂಸ್ಕೃತಿಯ ಅಧಃಪತನವನ್ನು ಸೂಚಿಸುತ್ತವೆ. ಇಂತಹ ಸ್ಮಾರಕ ಶಿಲ್ಪಗಳ ಸಂರಕ್ಷಣೆ ಮತ್ತು ರಾಷ್ಟ್ರೀಯ ಅಧ್ಯಯನ ಸ್ಥಾನಿಕ ಇತಿಹಾಸದ ದೃಷ್ಟಿಯಿಂದ ತೀರಾ ಅತ್ಯವಶ್ಯವೆನಿಸುತ್ತದೆ.