ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಒಂದು. ಇದು ಚಿತ್ರದುರ್ಗದಿಂದ ಬಳ್ಳಾರಿಗೆ ಹೋಗುವ ಮುಖ್ಯ ರಸ್ತೆಯಲ್ಲಿ ೮೪ ಕಿ. ಮೀ ದೂರದಲ್ಲಿದೆ. ದೈತ್ಯಾಕಾರದ ಬೆಟ್ಟ-ಗುಡ್ಡ, ಹಳ್ಳ-ಕೊಳ್ಳ, ಕೆರೆ-ಕಟ್ಟಳೆಗಳಿಂದ ಕೂಡಿದ ಈ ಪ್ರದೇಶ ಸಹಜವಾಗಿಯೇ ಸುಂದರವಾಗಿದೆ. ಆದ್ದರಿಂದಲೇ ಬ್ರೂಸ್‌ಫೂಟ್‌ಈ ಪರಿಸರವನ್ನು ವಿಶಿಷ್ಟ ಸೌಂದರ್ಯದಿಂದ ಕೂಡಿದ ಪ್ರದೇಶವೆಂದು ಬಣ್ಣಿಸಿರುವುದು.[1] ಇತ್ತೀಚಿನ ದಿನಗಳಲ್ಲಿ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ಪ್ರದೇಶವೆಂಬ ಹಣೆಪಟ್ಟಿಯನ್ನು ಹೊತ್ತುಕೊಂಡಿದ್ದರೂ ಚಾರಿತ್ರಿಕ ದೃಷ್ಟಿಯಿಂದ ದಕ್ಷಿಣ ಭಾರತದ ಪುರಾತತ್ವ ಅಧ್ಯಯನದ ಮೇಲೆ ಹೊಸ ಬೆಳಕನ್ನು ಚೆಲ್ಲುವ ಮೂಲಕ ವಿಶ್ವ ಪ್ರಸಿದ್ದಿಯನ್ನು ಪಡೆದ ಕೀರ್ತಿಯೂ ಈ ಪರಿಸರಕ್ಕಿರುವುದು ಗಮನಾರ್ಹ.

ಈ ಪರಿಸರದಲ್ಲಿ ಪ್ರಾಚೀನ ಮಾನವನು ತನ್ನ ಬದುಕನ್ನು ರೂಪಿಸಿಕೊಂಡಿದ್ದನು ಎಂಬುದನ್ನು ಸಂಶೋಧನೆಗಳು ಈಗಾಗಲೇ ದೃಢಪಡಿಸಿವೆ. ಇದಕ್ಕೆ ಪುಷ್ಟಿ ಎಂಬಂತೆ ಬ್ರಹ್ಮಗಿರಿ, ಲುಂಕೆಮಲೆ, ಜಟಂಗಿ ರಾಮೇಶ್ವರ, ಸಿದ್ದಾಪುರ, ಹಳಕೆರೆ, ಹಾನಗಲ್, ಮೊಳಕಾಲ್ಮೂರು ಮುಂತಾದ ಸ್ಥಳಗಳಲ್ಲಿ ಬೃಹತ್ ಶಿಲಾ ಸಮಾಧಿಗಳು ದೊರೆತಿವೆ. ಹಾಗೆಯೇ ಸಂತೇಗುಡ್ಡ, ಬ್ರಹ್ಮಗಿರಿಯಲ್ಲಿ ಮುಂತಾದ ಕಡೆಯು ದೊರೆತಿರುವ ಕೆಂಪು ಮತ್ತು ಬಿಳಿಯ ವರ್ಣಚಿತ್ರಗಳು, ಬ್ರಹ್ಮಗಿರಿ ಮತ್ತು ಸಿದ್ಧಾಪುರಗಳಲ್ಲಿ ನಡೆದ ಉತ್ಖನನ ವರದಿಗಳು ಕೂಡ ಈ ಭಾಗದಲ್ಲಿ ವಾಸವಾಗಿದ್ದ ಪ್ರಾಚೀನ ಮಾನವನ ಸಾಂಸ್ಕೃತಿಕ ಜೀವನದಮೇಲೆ ಸಾಕಷ್ಟು ಬೆಳಕನ್ನು ಚೆಲ್ಲಿವೆ.

ಮೊಳಕಾಲ್ಮೂರು ಪರಿಸರದಲ್ಲಿರುವ ಬೆಟ್ಟ-ಗುಡ್ಡಗಳು, ಹಳ್ಳ-ಕೊಳ್ಳಗಳು ಪ್ರಾಚೀನ ಮಾನವನ ಜೀವನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಭಾವ ಬೀರಿರುವುದನ್ನು ನಾವು ಇಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದೆ. ಪ್ರಾರಂಭದಲ್ಲಿ ತನ್ನನ್ನೂ ಸೇರಿದಂತೆ ಇತರೆ ಕ್ರೂರ ಪ್ರಾಣಿಗಳಿಂದ, ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಕೃತಕವಾದ ರಕ್ಷಣಾ ವ್ಯವಸ್ಥೆಯನ್ನು ಇಲ್ಲಿ ಮಾಡಿಕೊಂಡಿರುವುದನ್ನು ನಾವು ಕಾಣಬಹುದು. ಆರಂಭದಲ್ಲಿ ತಾನೂ ವಾಸಿಸುವ ಪ್ರದೇಶದ ಸುತ್ತಲೂ ಮಣ್ಣಿನ ದಿಬ್ಬವನ್ನು ಏರಿಸುವುದು ಆಳವಾದ ಕಂದಕವನ್ನು ತೋಡುವುದು ನಂತರ ಇಟ್ಟಿಗೆ ಮತ್ತು ಕಲ್ಲುಗಳಿಂದ ತಡೆಗೋಡೆ ನಿರ್ಮಿಸುವ ಮೂಲಕ ಪ್ರಾರಂಭವಾದ ಈತನ ರಕ್ಷಣಾ ವ್ಯವಸ್ಥೆಯು ಕ್ರಮೇಣ ಜನಸಂಖ್ಯೆ ಮತ್ತು ಆರ್ಥಿಕಾಭಿವೃದ್ಧಿಯ ಹೆಚ್ಚಳದಿಂದಾಗಿ ಶತ್ರುಗಳಿಂದ ಇಡೀ ತನ್ನ ಸಮುದಾಯವನ್ನು ರಕ್ಷಣೆ ಮಾಡುವ ದೃಷ್ಟಿಯಿಂದ ಬೃಹದಾಕಾರವಾದ ರಕ್ಷಣಾ ವ್ಯವಸ್ಥೆಯನ್ನು ರೂಪಿಸಿಕೊಂಡನು.

ವಾಸ್ತವವಾಗಿ ಇಲ್ಲಿ ರಕ್ಷಣೆ ಎಂಬುದು ಕೋಟೆಯಾಗಿದೆ. ಕೋಟೆ ಎಂದರೆ ರಕ್ಷಣಾ ಆವರಣವುಳ್ಳ ಪ್ರದೇಶ ಎಂದರ್ಥ. ಮುಖ್ಯವಾಗಿ ರಾಜ್ಯ ಹಾಗೂ ರಾಜನಿಗೆ ರಕ್ಷಣೆ ಒದಗಿಸಿರುವ ಸ್ಥಳ. ಸಂಸ್ಕೃತ ಸಾಹಿತ್ಯದಲ್ಲಿ ಕೋಟೆಗಳನ್ನು ‘ದುರ್ಗ’ ಎಂದು, ವೈದಿಕ ಸಾಹಿತ್ಯದಲ್ಲಿ ‘ಪುರ’ ಎಂದು, ಹಳೆಗನ್ನಡದಲ್ಲಿ ‘ಕೋಂಟೆ’ ಎಂದು ಹಾಗೂ ಹೊಸಗನ್ನಡದಲ್ಲಿ ಕೋಟೆಯೆಂದು ಕರೆಯಲಾಗುತ್ತಿದೆ. ಆಂಗ್ಲ ಭಾಷೆಯಲ್ಲಿ ಪೋರ್ಟ್‌(Fort) ಎಂದು ಕರೆಯುತ್ತಾರೆ. ಕೋಟೆ ನಿರ್ಮಾಣವು ಮನುಕುಲದ ಒಂದು ಪ್ರಾಚೀನ ಕಲೆಯಾಗಿದೆ. ಕರ್ನಾಟಕದಲ್ಲಿ ಕೋಟೆಗಳ ಪ್ರಾಚೀನತೆಯನ್ನು ಮೌರ್ಯರ ಕಾಲಕ್ಕೆ ಕೊಂಡಯ್ಯಬಹುದು. ಮೌರ್ಯಕಾಲದ ಪಟ್ಟಣಗಳಲ್ಲಿ ಒಂದಾದ ಹಾಗೂ ಮೊಳಕಾಲ್ಮೂರು ಪರಿಸರದಲ್ಲಿರುವ ಬ್ರಹ್ಮಗಿರಿ ಪ್ರದೇಶವು ಕೋಟೆಯಿಂದ ಆವೃತವಾದ ಊರಾಗಿತ್ತೆಂದು ಅಭಿಪ್ರಾಯಪಡಲಾಗಿದೆ.[2] ಹೀಗೆ ಈ ಪರಿಸರದಲ್ಲಿ ಆರಂಭವಾದ ಕೋಟೆ ನಿರ್ಮಾಣ ಕಾರ್ಯವು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ರಚನೆ ಮತ್ತು ಗಾತ್ರದಲ್ಲಿ ಬೆಳವಣಿಗೆಯಾಗಿ ವಿಕಾಸ ಹೊಂದುತ್ತಾ ಪ್ರಾದೇಶಿಕ ಕೋಟೆಗಳ ನಿರ್ಮಾಣದವರೆಗೆ ಸಾಗಿ ಬಂದಿರುವುದನ್ನು ನಾವಿಲ್ಲಿ ಗುರುತಿಸಬಹುದು.

ಮೊಳಕಾಲ್ಮೂರು ಪರಿಸರದಲ್ಲಿ ಕಂಡು ಬರುವ ಬ್ರಹ್ಮಗಿರಿ, ಸಂತೇಗುಡ್ಡ, ಜಟಂಗಿ ರಾಮೇಶ್ವರ, ಲುಂಕೆಮಲೆ, ಉಚ್ಚಂಗಿದುರ್ಗ, ಗುಡ್ಡದಹಳ್ಳಿ, ಮೊಳಕಾಲ್ಮೂರು ಮುಂತಾದ ಸ್ಥಳಗಳಲ್ಲಿ ಕೋಟೆಗಳು ಕಂಡುಬರುತ್ತವೆ. ಇವುಗಳನ್ನು ಕಟ್ಟಿದ ಉದ್ದೇಶ, ರಚನೆ, ತಂತ್ರಗಾರಿಕೆ, ಮತ್ತು ವಿನ್ಯಾಸಗಳಲ್ಲದೆ ಕೋಟೆಗೆ ಸಂಬಂಧಿಸಿದ ಇತರೆ ಸ್ಮಾರಕಗಳಾದ ಬುರುಜು, ಬತೇರಿ, ದೇವಾಲಯ, ಉಗ್ರಾಣ, ನೀರಿನ ಆಶ್ರಯತಾಣಗಳು, ಮದ್ದಿನ ಮನೆ, ದ್ವಾರಬಾಗಿಲು ಹಾಗೂ ಸೈನಿಕರ ವಸತಿ ಮುಂತಾದವುಗಳನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ.

ಬ್ರಹ್ಮಗಿರಿ ಕೋಟೆ

ಬ್ರಹ್ಮಗಿರಿ ವಿಶ್ವಚಾರಿತ್ರಿಕ ಮನ್ನಣೆ ಪಡೆದ ಪ್ರಸಿದ್ಧ ನೆಲೆ. ಇದು ಮೊಳಕಾಲ್ಮೂರಿನಿಂದ ಸುಮಾರು ೨೦ ಕಿ. ಮೀ. ದೂರದಲ್ಲಿದೆ. ಮೊಳಕಾಲ್ಮೂರಿನಿಂದ ಬಳ್ಳಾರಿಗೆ ಹೋಗುವ ರಸ್ತೆಯ ಬಲಬದಿಗೆ ಅಶೋಕ ಸಿದ್ಧಾಪುರವೆಂಬ ರಸ್ತೆಯ ತಿರುವನ್ನು ಬಳಸಿಕೊಂಡು ಬ್ರಹ್ಮಗಿರಿ ಬೆಟ್ಟವನ್ನು ತಲುಪಬಹುದು. ಈ ಬೆಟ್ಟವು ಉತ್ತರ ದಕ್ಷಿಣವಾಗಿ ೩ ಕಿ. ಮೀ. ದೂರ ಹಬ್ಬಿದ್ದು ಸುತ್ತಲ ಪ್ರದೇಶದಿಂದ ಸುಮಾರು ೨೦ ಮೀ ಎತ್ತರದಲ್ಲಿದೆ. ಪೂರ್ವಕ್ಕೆ ರೊಪ್ಪ ಗ್ರಾಮ, ಪಶ್ಚಿಮಕ್ಕೆ ಸಿದ್ಧಾಪುರ ಮತ್ತು ಗುಡ್ಡಗಳಿವೆ. ಉತ್ತರಕ್ಕೆ ಜಟಂಗಿ ರಾಮೇಶ್ವರ ಬೆಟ್ಟ ಶ್ರೇಣಿಗಳಿವೆ. ಭೂ ನಕ್ಷೆಯಲ್ಲಿ ಬ್ರಹ್ಮಗಿರಿಯು ಉತ್ತರ ಅಕ್ಷಾಂಶ ೧೪ ೪೭’ ರಿಂದ ೧೪ ೪೯’ ಹಾಗೂ ಪೂರ್ವ ರೇಖಾಂಶ ೭೬ ೪೮’ ರಿಂದ ೭೬ ೪೯’ರವರೆಗೂ ವ್ಯಾಪಿಸಿಕೊಂಡಿದ್ದು, ಸಮುದ್ರಮಟ್ಟದಿಂದ ೨,೩೪೭ ಅಡಿ ಎತ್ತರದಲ್ಲಿದೆ.

ಬ್ರಹ್ಮಗಿರಿಗೆ ಐತಿಹಾಸಿಕ ಮಹತ್ವ ಬಂದಿದ್ದು, ಬಿ. ಎಲ್. ರೈಸ್‌ರವರಿಂದ ಇವರು ೧೮೯೨ರಲ್ಲಿ ಬೆಟ್ಟದ ಉತ್ತರಕ್ಕಿರುವ ದೊಡ್ಡ ಬಂಡೆಯೊಂದರ ಮೇಲೆ ಅಶೋಕನ ಶಾಸನಗವನ್ನು ಪತ್ತೆಹಚ್ಚಿದರು. ಈ ಬಂಡೆಗೆ ಸ್ಥಳೀಯರು ಅಕ್ಷರ ಗುಂಡು ಎಂದು ಕರೆಯುತ್ತಾರೆ. ಇದೇ ಪರಿಸರದಲ್ಲಿ ಮತ್ತೆರಡು ಶಾಸನಗಳನ್ನು ಸಹ ರೈಸ್‌ರವರು ಪತ್ತೆ ಹಚ್ಚುವ ಮೂಲಕ ಮೂರು ಶಾಸನಗಳನ್ನು ಪ್ರಕಟಿಸಿದ್ದಾರೆ.[3] ಈ ಶಾಸನಗಳಿಂದ ಚಿತ್ರದುರ್ಗ ಜಿಲ್ಲೆಯೂ ಕೂಡ ಮಗಧ ಸಾಮ್ರಾಜ್ಯದ ಒಂದು ಭಾಗವಾಗಿತ್ತೆಂದು ಹೇಳಲಾಗಿದೆ. ಬ್ರಹ್ಮಗಿರಿಯ ಮೌರ್ಯರ ದಕ್ಷಿಣದ ರಾಜಧಾನಿಯಾಗಿತ್ತಲ್ಲದೆ ಪ್ರಮುಖ ಆಡಳಿತ ಕೇಂದ್ರವಾಗಿತ್ತು.

ಬ್ರಹ್ಮಗಿರಿಗೆ ಇಸಿಲಾ,[4] ಹನೆಯ ಕೋಟೆ,[5] ವಿಜಯಗಿರಿ[6] ಮುಂತಾದ ಹೆಸರುಗಳಿವೆ. ಬ್ರಹ್ಮಗಿರಿ ಪ್ರದೇಶದಲ್ಲಿ ಮೌರ್ಯರು, ಶಾತವಾಹನರು, ಕದಂಬರು, ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಚಿತ್ರದುರ್ಗದ ಪಾಳೆಯಗಾರರು ಆಳ್ವಿಕೆ ನಡೆಸಿದ್ದಾರೆ. ಬ್ರಹ್ಮಗಿರಿ ಕೋಟೆಯು ಗಿರಿದುರ್ಗವಾಗಿದ್ದು. ಅನಿಯಮಿತ ಕಾರದ ಭೂಶಿಖರವನ್ನು ಬಳಸಿಕೊಂಡು ಕೋಟೆ ನಿರ್ಮಾಣ ಮಾಡಲಾಗಿದೆ. ಈ ಭೂ ಶಿಖರವು ಉತ್ತರ ಮತ್ತು ದಕ್ಷಿಣದಲ್ಲಿ ಎತ್ತರವಾಗಿದ್ದು, ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ದಕ್ಷಿಣ ಭಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಹಬ್ಬಿರುವ ಬೆಟ್ಟವನ್ನು ಉತ್ತರ ದಕ್ಷಿಣವಾಗಿ ಮೂರು ಕಣಿವೆಗಳು ಭಾಗ ಮಾಡಿವೆ. ಇವುಗಳಿಗೆ ಸೊಟ್ಟಮರದ ಸಂದು, ವಾಲ್ಕೆತ್ತಿನ ಸಂದು, ಪೆದಾಲ್ ಸಂದು ಎಂಬ ಹೆಸರುಗಳಿವೆ. ಈ ಸಂದುಗಳಲ್ಲಿ ಶತ್ರುಗಳು ಒಳಬರದಂತೆ ಅಲ್ಲಲ್ಲಿ ಬೃಹದಾಕಾರದ ಬಂಡೆಗುಂಡುಗಳನ್ನು ಬಳಸಿ ತಡೆಗೋಡೆಯನ್ನು ನಿರ್ಮಿಸಿದ್ದಾರೆ.

ಪೂರ್ವದ ಬೆಟ್ಟದ ಶ್ರೇಣಿಗಳಲ್ಲಿ ಕಾರಕುಟ್ರೆ ಬಂಡೆ, ಏಳೂರು ಪಡೆಗಳ ಬಂಡೆಗಳು ಕಡಿದಾಗಿದ್ದು, ಪ್ರಕೃತಿ ನಿರ್ಮಿತ ತಡೆಗೋಡೆಗಳಾಗಿವೆ. ಉತ್ತರದಲ್ಲಿ ಕಡಿದಾದ ಬಂಡೆಯಿದ್ದು ಇದನ್ನು ಸಿದ್ದರ ಬಯಲಿನ ಬೆಟ್ಟವು ಆವರಿಸಿದೆ. ಪಶ್ಷಿಮದಲ್ಲಿ ಪಗಡೆಸಾಲು ಬೆಟ್ಟ, ಮೇಲ್ದುರ್ಗದ ಬೆಟ್ಟಗಳು ಕೋಟೆಗೆ ನೈಸರ್ಗಿಕ ರಕ್ಷಣೆಗಳಾಗಿವೆ. ಈ ಎಲ್ಲಾ ಬೆಟ್ಟಗಳ ಮಧ್ಯೆ ಇರುವ ವಿಶಾಲವಾದ ಬಯಲಿನಲ್ಲಿ ಹುಲಿಕುಂಟೆಯು ಪಸರಿಸಿದೆ. ನೈಸರ್ಗಿಕ ಬೆಟ್ಟ ಹಾಗೂ ಕಣಿವೆ ಪ್ರದೇಶಗಳನ್ನು ಬಳಸಿಕೊಂಡು ಹುಲಿಕುಂಟೆ ಕೋಟೆಯನ್ನು ನಿರ್ಮಿಸಲಾಗಿದೆ.

ಬ್ರಹ್ಮಗಿರಿಯಲ್ಲಿ ಮೂರು ಹಂತದ ಕೋಟೆಯ ರಚನೆಗಳು ಕಂಡುಬರುತ್ತವೆ, ಮೊದಲನೇ ಹಂತದಲ್ಲಿ ಕಂಡುಬಂದಿರುವ ಪೂರ್ವ, ಪಶ್ಚಿಮ ಹಾಗೂ ದಕ್ಷಿಣದ ಹೊರಸುತ್ತಿನ ಕೋಟೆಗಳು ತುಂಬಾ ಪ್ರಾಚೀನವಾಗಿದೆ. ಕೆಲವು ಕಡೆ ೧೦ ಅಡಿ ಎತ್ತರ ೧೦ ಅಡಿ ಅಗಲವಿದ್ದರೆ ಮತ್ತೊಂದು ಕಡೆ ೩೦ ಅಡಿ ಎತ್ತರ ೧೫ ಅಡಿ ಅಗಲವಿದೆ. ಅನಿಯಮಿತಾಕಾರದ ದೊಡ್ಡ ಗುಂಡುಗಳನ್ನು ಒಂದರ ಪಕ್ಕದಲ್ಲಿ ಒಂದನ್ನು ತಳ್ಳಿ ತಡಗೋಡೆ ನಿರ್ಮಿಸಿದ್ದಾರೆ. ಮತ್ತೆ ಕೆಲವು ಕಡೆ ಈ ಗುಂಡುಗಳ ಮೇಲೆ ಕೋಟೆಯನ್ನು ಕಿರಿದುಗೊಳಿಸುತ್ತಾ ಕಟ್ಟಿದ್ದಾರೆ. ಒಳಮೈಯಲ್ಲಿ ಗಾರೆಬಳಸದೆ ಚಿಕ್ಕ ಚಿಕ್ಕ ಕಲ್ಲು ಮತ್ತು ಮಣ್ಣನ್ನು ಬಳಸಿ ಇರಳಿವೋರೆಯನ್ನು ರಚಿಸಿದ್ದಾರೆ. ಕೋಟೆಯ ಬೃಹತ್‌ಬಂಡೆಗಳನ್ನು ಬಳಸಿಕೊಂಡು ದೊಡ್ಡ-ದೊಡ್ಡ ಕಲ್ಲುಗಳಿಂದ ರಕ್ಷಣಾ ಗೋಡೆಯನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಈ ಗೋಡೆಯಲ್ಲಿ ಯಾವುದೇ ರೀತಿಯ ಬಂದೂಕು ರಂಧ್ರಗಳಲ್ಲಿ ಬಾಗಿಲವಾಡಗಳನ್ನು ಬಳಸಿ ಎಲ್ಲಿಯೂ ಬಾಗಿಲುಗಳನ್ನು ರಚಿಸಿಲ್ಲ. ದೊಡ್ಡ ಬಂಡೆಗಳನ್ನು ಆಸರೆಯಾಗಿಟ್ಟುಕೊಂಡು ಸ್ವಾಭಾವಿಕ ಬಾಗಿಲುಗಳನ್ನು ರಚಿಸಿದ್ದಾರೆ. ಇಲ್ಲಿ ದುರ್ಗ ರಚನೆಗೆ ತಗಲುಬಹುದಾದ ಆರ್ಥಿಕ ವೆಚ್ಚವನ್ನು ಸ್ಥಪತಿಗಳು ಕಡಿಮೆಗೊಳಿಸಿದ್ದಾರೆ. ಜೊತೆಗೆ ಇಂತಹ ಕೋಟೆಗಳನ್ನು ರಚಿಸಲು ಆನೆಯಂತಹ ದೊಡ್ಡ ಪ್ರಾಣಿಗಳನ್ನು ಉಪಯೋಗಿಸಿರುವ ಸಾಧ್ಯತೆ ಇದೆ.

ಎರಡನೇ ಹಂತದ ಕೋಟೆಯು ಮುಂದುವರೆದ ಕಲ್ಲುಕೆಲಸದ ಜ್ಞಾನವು, ಕಟ್ಟಡಗಳ ರಕ್ಷಣಾತ್ಮಕ ಪರಿಚಯಿಸಿದಂತಿದೆ. ಪ್ರಾರಂಭದ ಹಂತದಲ್ಲಿ ಒರಟಾಗಿದ್ದ ಕಲ್ಲುಗಳನ್ನು ನಂತರ ಕ್ರಮಬದ್ಧವಾಗಿ ನಯಗೊಳಿಸಿ ನಿರ್ಮಿಸಿರುವುದು ಕಂಡುಬರುತ್ತದೆ. ಸೈಕ್ಲೋಪಿಯನ್ ಗೋಡೆಗಳಂತೆ ಕಲ್ಲುಗಳಲ್ಲಿ ಗಾತ್ರವಿದ್ದರು ಸೈನಿಕ ವಾಸ್ತು ಶಿಲ್ಪದ ರಚನೆಯನ್ನು ಇಲ್ಲಿ ನೋಡಬಹುದು. ಈ ಅಂಶಗಳನ್ನು ಕೋಟೆಯ ಪೂರ್ವ ಭಾಗದಲ್ಲಿರುವ ಎರಡನೇ ಸುತ್ತಿನ ಕೋಟೆ ಸಾಲು, ಪಶ್ಚಿಮದ ಜಾಲಿಕಟ್ಟೆಯ ಕೋಟೆ ಸಾಲು ಮತ್ತು ಪಗಡೆಸಾಲುಗಳಲ್ಲಿ ಕಾಣಬಹುದು. ಇವು ೨೫ ರಿಂದ ೩೦ ಅಡಿ ಎತ್ತರವಾಗಿದ್ದು, ೧೫ ದಪ್ಪವಾಗಿವೆ. ಈ ಕೋಟೆ ಗೋಡೆಗಳ ಸಾಲಿನಲ್ಲಿ ಕಲ್ಲುಗಳ ಜೋಡಣೆಯ ಪರಿಪೂರ್ಣತೆಯ ಜ್ಞಾನವನ್ನು ಹೊಂದಿರುವುದು ಗೋಚರಿಸುತ್ತದೆ.

ಮೂರನೇ ಹಂತವು ಸೈನಿಕರ ವಾಸ್ತು ಶಿಲ್ಪದ ಒಂದು ವಿಶಿಷ್ಟ ಬೆಳವಣಿಗೆಯಾಗಿದೆ. ಈ ವೇಳೆಗಾಗಲೇ ತುರ್ಕಿ ಅಧಿಕಾರಿಗಳು, ತಂತ್ರಜ್ಞಾನರ ಸಹಾಯದಿಂದ ಬಂದೂಕುಗಳ ಬಳಕೆಯಾಯಿತು. ಈ ಹಿನ್ನೆಲೆಯಲ್ಲಿ ಕೋಟೆಗಳ ಗಾತ್ರ ಮತ್ತು ಸ್ವರೂಪದಲ್ಲಿ ಹೆಚ್ಚಳ ಇಲ್ಲಿ ಗಮನಿಸಬಹುದು. ಕಲ್ಲುಗಳನ್ನು ಸೀಳಿ ವಿವಿಧ ಅಳತೆಗಳಲ್ಲಿ ನಯಗೊಳಿಸಿ ವ್ಯವಸ್ಥಿತವಾಗಿ ಕಟ್ಟಿರುವುದು. ಗೋಡೆಗಳಲ್ಲಿ ಬಂದೂಕು ರಂಧ್ರಗಳನ್ನು ಬಿಟ್ಟಿರುವುದು, ಗೋಡೆಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ಅಲ್ಲಲ್ಲಿ ಕೊತ್ತಲಗಳನ್ನು ರಚಿಸಿರುವುದು, ಕಾವಲು ಗೋಪುರ ಮತ್ತು ಬುರುಜುಗಳ ಗಾತ್ರವನ್ನು ಹೆಚ್ಚಿಸಿರುವುದನ್ನು ಈ ಹಂತದಲ್ಲಿ ಕಾಣಬಹುದು. ಈ ಲಕ್ಷಣಗಳನ್ನು ತ್ರಿಶಂಕೇಶ್ವರ ದೇವಾಲಯ ಮತ್ತು ಸಿದ್ಧರ ಬಯಲಿನ ಕೋಟೆಯಲ್ಲಿ ನೋಡಬಹುದು, ಸೈನಿಕ ವಾಸ್ತುಶಿಲ್ಪದ ಇತಿಹಾಸದಲ್ಲಿ ಈ ವಾಸ್ತು ಬೆಳವಣಿಗೆ ಅತ್ಯಂತ ಮಹತ್ವ ಪಡೆದಿದೆ. ಕೆಲವು ವೃತ್ತಾಕಾರದ ಬುರುಜುಗಳನ್ನು ಕೋಟೆ ಗೋಡೆಯಿಂದ ಬೇರ್ಪಡಿಸಿ ಕೋಟೆಗಿಂತಲೂ ಎತ್ತರದಲ್ಲಿ ಕಟ್ಟಲಾಗಿದೆ. ಇವು ಶತ್ರುಗಳನ್ನು ವೀಕ್ಷಿಸಲು ಮತ್ತು ಹೋರಾಡಲು ತುಂಬಾ ಸಹಾಯಕವಾಗುತ್ತವೆ. ಹೀಗೆ ಬ್ರಹ್ಮಗಿರಿಯಲ್ಲಿ ಮೂರು ಹಂತದ ಕೋಟೆ ರಚನೆಗಳನ್ನು ನಾವು ಗಮನಿಸಬಹುದಾಗಿದೆ.

ಬೆಟ್ಟದ ಮಧ್ಯದಲ್ಲಿರುವ ಹುಲಿಕುಂಟೆಯನ್ನು ಕೇಂದ್ರವಾಗಿ ಇಟ್ಟುಕೊಂಡು ರಕ್ಷಣಾ ಕೋಟೆಯನ್ನು ನಿರ್ಮಿಸಲಾಗಿದೆ. ಹುಲಿಕುಂಟೆಯ ಪೂರ್ವಕ್ಕೆ ಏಳೂರ ಪಡೆಯ ಕಡಿದಾದ ನೂರು ಅಡಿ ಉದ್ದದ ಬಂಡೆಯ ಕೆಳಭಾಗದಲ್ಲಿ ೨೦೦X೫೦ ಚದುರ ಅಡಿ ವಿಸ್ತೀರ್ಣವುಳ್ಳ ಒಂದು ಗುಹೆ ಇದೆ. ಈ ಗುಹೆಯಲ್ಲಿ ಪ್ರಾಚೀನ ವರ್ಣಚಿತ್ರಗಳಿವೆ. ತ್ರಿಶಂಕೇಶ್ವರ ದೇವಾಲಯದ ಮುಂಭಾಗ ಪೂರ್ವಕ್ಕೆ ಆಯುತಕಾರದ ಕೋಟೆಯನ್ನು ಕಡಿದಾದ ಬಂಡೆಯ ಮೇಲೆ ನಿರ್ಮಿಸಿದ್ದಾರೆ. ಪೂರ್ವಕೆ ೧೦ ಅಡಿ ಎತ್ತರ ಅಗಲವಾದ ಎರಡು ಬುರುಜುಗಳಿವೆ. ಕೋಟೆಗೋಡೆಯನ್ನು ಸೂಕ್ಷ್ಮವಾಗಿ ಗಮನಿಸಿದೆ. ಗೋಡೆಯು ಪುನರ್ ನವೀಕರಣಗೊಂಡಂತಿದೆ. ಈ ಗೋಡೆಯು ೩೦ ಅಡಿ ಎತ್ತರವಿದ್ದೂ ಎಲ್ಲಿಯೂ ಗಾರೆಯನ್ನು ಬಳಸದೆ ಕಲ್ಲುಗಳ ಜೋಡಣೆಯಿಂದಲೇ ಕೋಟೆ ಗೋಡೆಯನ್ನು ಸುಂದರವಾಗಿ ನಿರ್ಮಿಸಲಾಗಿದೆ. ಕೋಟೆ ಗೋಡೆಯ ಮೂಲೆಗಳಲ್ಲಿರುವ ಕಲ್ಲುಗಳನ್ನು ಜೋಡಿಸಿರುವ ಇವರ ತಾಂತ್ರಿಕತೆ ಮೆಚ್ಚುವಂತಹದು. ಒಂದು ಕಲ್ಲನ್ನು ತಗ್ಗಿಸಿ ಮತ್ತೊಂದು ಕಲ್ಲನ್ನು ವಿಭಾಗಿಸಿ ಎರಡನ್ನು ಸೇರಿಸಲಾಗಿದೆ. ಆ ಮೂಲಕ ಗೋಡೆಗೆ ಸಿಮೇಂಟ್‌ನಂತೆ ಭದ್ರತೆ ಒದಗಿಸಿದ್ದಾರೆ.

ಈ ಕೋಟೆಯ ಪಶ್ಚಿಮಕ್ಕೆ ಸಿದ್ಧರ ಬಯಲು ಎಂದು ಕರೆಯುವ ವಿಶಾಲ ಬಯಲು ಇದೆ. ಈ ಭಾಗದಲ್ಲಿ ಆಯತಾಕಾರದ ಕೋಟೆಯನ್ನು ನಿರ್ಮಿಸಿರುವರು. ಈ ಕೋಟೆಯಿಂದ ಹುಲಿಕುಂಟೆಗೆ ಹೋಗಲು ಸೋಪಾನ ಬಾಗಿಲು ನಿರ್ಮಿಸಲಾಗಿದೆ. ಈ ಬಾಗಿಲು ೩.೫ ಅಡಿ ಅಗಲ ೫.೫ ಅಡಿ ಎತ್ತರವಿದ್ದು ಹಿಂಭಾಗದಲ್ಲಿ ಎರಡು ಪಹರೆ ಗೃಹಗಳಿವೆ. ಮುಂಭಾಗದಲ್ಲಿ ಎರಡು ಬೃಹದಕಾರದ ಬಂಡೆಗಳು ಬಾಗಿಲನ್ನು ಕಾಣದಂತೆ ರಕ್ಷಿಸಿವೆ. ಸೋಪನ ಬಾಗಿಲಿನಿಂದ ದಕ್ಷಿಣಕ್ಕೆ ಬಂದೆ ಜಾಲಿಕಟ್ಟೆ ಕೋಟೆ ಗೋಡೆ ಹಾಗೂ ಹುಲಿಕಂಟೆಯ ಕೆರೆ ಏರಿ ಸಿಗುತ್ತದೆ. ಈ ಭಾಗದಲ್ಲಿ ಭಾಗ್ಯಲಕ್ಷ್ಮಿ ದೇವಾಲಯ, ವೀರಗಲ್ಲು, ವೀರಭದ್ರಗುಡಿ, ಮುಂತಾದ ಸ್ಮಾರಕಗಳಿವೆ.

ಹುಲಿಕುಂಟೆಯ ಪಶ್ಚಿಮಕ್ಕೆ ಇರುವುದೆ ಜಾಲಿಕಟ್ಟೆ ಕೋಟೆ ಪ್ರದೇಶ. ೧೫ ಅಡಿ ಎತ್ತರ ೧೦ ಅಡಿ ದಪ್ಪವಾಗಿರುವ ಈ ಕೋಟೆ ಗೋಡೆಯು ಉತ್ತರ ಮತ್ತು ದಕ್ಷಿಣ ಬೆಟ್ಟಗಳ ಮಧ್ಯೆ ರಕ್ಷಣೆಯನ್ನು ಒದಗಿಸಿದೆ. ಇದಕ್ಕೆ ಮೂರು ಸ್ವಾಭಾವಿಕ ಬಾಗಿಲುಗಳಿವೆ. ಇದೇ ಕೋಟೆಯು ಪಗಡೆ ಸಾಲುಗೋಡೆಯನ್ನು ಸುತ್ತುವರೆದಿದೆ. ಈ ಭಾಗದಲ್ಲಿ ಜೈನ ದೇವಾಲಯ, ವರ್ಣಚಿತ್ರ, ಜನವಸತಿ ಇದ್ದ ಕುರುಹುಗಳು, ಅಕ್ಕತಂಗಿಯರ ಗುಡಿಗಳು, ಒಂಟಿ ಬಂಡೆಯ ಒಂದರ ಮೇಲೆ ಕೊರೆದಿರುವ ಆನೆಯ ಗೀರುಚಿತ್ರ ಮುಂತಾದ ಸ್ಮಾರಕಗಳಿವೆ.

ಬ್ರಹ್ಮಗಿರಿಯ ಬೆಟ್ಟದ ಮೇಲೆ ಇತ್ತೀಚೆಗೆ ನಿರ್ಮಾಣವಾದ ಮಹಲ್ ಒಂದಿದೆ. ಇದರ ಹತ್ತಿರದಲ್ಲಿಯೇ ಚಿಕ್ಕದಾದ ಸಿದ್ದೇಶ್ವರ ದೇವಾಲಯವಿದೆ. ಸಿದ್ದೇಶ್ವರನ ಗುಡಿಯ ಮುಂದೆ ಪುಷ್ಕರಣಿ ಇದೆ. ಮಹಲಿನ ಎದುರಿಗೆ ಇರುವ ಕೋಟೆಗೆ ಪ್ರದೇಶವನ್ನು ಮೇಲ್ದುರ್ಗ ಎಂದು ಕರೆಯುತ್ತಾರೆ. ಈ ಮೇಲ್ದುರ್ಗದ ಕೋಟೆಯೊಳಗೆ ಐದು ಅಂಕಣಗಳಿವೆ ಈ ಕೋಟೆ ಪ್ರದೇಶವನ್ನು ಕುಮಾರರಾಮನ ಗರಡಿಮನೆ, ಪುಷ್ಕರಣಿ ಮತ್ತಿತರೆ ಕಟ್ಟಡದ ಅವಶೇಷಗಳಿವೆ.

ತ್ರಿಶಂಕೇಶ್ವರ ದೇವಾಲಯದ ದಕ್ಷಿಣದಿಕ್ಕಿಗೆ ಎರಡು ವೃತ್ತಾಕಾರದ ಬುರುಜುಗಳಿವೆ. ಈ ಕೋಟೆಯ ಸಾಲಿನಲ್ಲಿ ಸ್ವಾಭಾವಿಕವಾದ ಎರಡು ದ್ವಾರಗಳಿವೆ. ಮೊದಲ ಕೋಟೆಯ ದ್ವಾರವನ್ನು ದಾಟಿ ಮುಂದೆ ಸಾಗಿದರೆ ಬಲ ಬದಿಯಲ್ಲಿ ಹುಟ್ಟು ಬಂಡೆಯ ಮೇಲೆ ಹದಿನೈದು ಜನ ಶಸ್ತ್ರ ಸಜ್ಜಿತ ಸೀಪಾಯಿ ಪಡೆಯೊಂದು ಸರದಿಯೋಪಾದಿಯಲ್ಲಿ ಮೆರವಣಿಗೆ ಹೊರಟಿರುವಂತೆ ಉಬ್ಬು ಶಿಲ್ಪಗಳನ್ನು ಕೆತ್ತಲಾಗಿದೆ. ಈ ಬಂಡೆಯ ಮೇಲೆ ಶಾಸನವಿದೆ. ಈ ಶಿಲ್ಪದ ಎದುರಿಗೆ ದೈತ್ಯನೊಬ್ಬನು ತಮಟೆ ಭಾರಿಸುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಇದಕ್ಕೆ ಸಮೀಪದಲ್ಲಿ ಹನುಮಂತನ ಗೀರು ಚಿತ್ರವಿದೆ. ಒಟ್ಟಾರೆ ಬ್ರಹ್ಮಗಿರಿ ಕೋಟೆಯು ಇಂದಿಗೂ ಅಧ್ಯಯನಕ್ಕೆ ಯೋಗ್ಯವಾಗಿದ್ದು ಕೋಟೆ ರಚನೆಯ ಪ್ರಾರಂಭಿಕ ಹಂತದಿಂದ ಆಧುನಿಕ ಹಂತದವರೆಗಿನ ಎಲ್ಲಾ ಲಕ್ಷಣಗಳನ್ನು ಒಳಗೊಂಡಿದೆ ಎನ್ನಬಹುದು.

ಲುಂಕೆಕೋಟೆ

ಲುಂಕೆಕೋಟೆಯು ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೆತ್ರಗಳಲ್ಲೊಂದು. ಮೊಳಕಾಲ್ಮೂರು ಕೋಟೆಯೊಳಗಿನ ಕೂಗುವ ಬಂಡೆಯ ವಾಯುವ್ಯ ದಿಕ್ಕಿಗೆ ೫ ಕಿ. ಮೀ. ದೂರದಲ್ಲಿದೆ. ಲುಂಕೆಕೋಟೆಯು ಉತ್ತರ ಅಕ್ಷಾಂಶ ೨೬ ೪೪’ ಹಾಗೂ ಪೂರ್ವ ರೇಖಾಂಶ ೨೬ ೪೭’ರಲ್ಲಿದ್ದು ಸಮುದ್ರ ಮಟ್ಟದಿಂದ ೨೦೨೦ ಅಡಿ ಎತ್ತರದಲ್ಲಿದೆ. ಈ ಕ್ಷೇತ್ರವನ್ನು ಲುಂಕೆಮಲೆ, ನುಂಕೆಮಲೆ, ದೇವರಗುಡ್ಡ, ನುಂಕೆ ಭೈರವನಬೆಟ್ಟ, ನುಂಕಪ್ಪನ ಗುಡ್ಡ ಮುಂತಾದ ಹೆಸರುಗಳಿಂದ ಕರೆಯಲಾಗುತ್ತಿದೆ.[7] ಈ ಪ್ರದೇಶವು ಪ್ರಕೃತಿ ನಿರ್ಮಿತ ಗುಹೆಗಳಿಂದಲೂ ಕಡಿದಾದ ಪ್ರಪಾತಗಳಿಂದಲೂ ಕೂಡಿದೆ, ಪ್ರಾಚೀನ ಕಾಲದಿಂದಲೂ ಈ ಪ್ರದೇಶ ಮಾನವನ ವಾಸಸ್ಥಾನವಾಗಿತ್ತು. ಇಲ್ಲಿ ನವ ಶಿಲಾಯುಗದ ಅವಶೇಷಗಳು ಕಂಡುಬಂದಿದೆ.

ಈ ಬೆಟ್ಟದಲ್ಲಿರುವ ಶಾಸನಗಳು ಹೇಳುವ ಪ್ರಕಾರ ಅಜವರ್ಮ (ಕ್ರಿ.ಶ. ೯೮೭) ಮತ್ತು ಬೆಂಚರಸ (ಕ್ರಿ.ಶ. ೧೧೦೦) ದೇವರೇ ಕದಂಭ ಮನೆತನದವರು ಚಾಲುಕ್ಯ ಮನೆತನದ ಸಾಮಂತರಾಗಿ ಆಳ್ವಿಕೆ ಮಾಡಿರುವುದು ತಿಳಿದುಬರುತ್ತದೆ. ಈ ಬೆಟ್ಟದ ದೇವಾಲಯದಲ್ಲಿರುವ ಲುಂಕೇಶ್ವರನನ್ನು ಕದಂಬ ವಂಶದ ರಾಜನೊಬ್ಬನು ೧೦ ನೇ ಶತಮಾನದಲ್ಲಿ ಪ್ರತಿಷ್ಟಾಪಿಸಿದನೆಂದು ತಿಳಿದು ಬಂದಿರುತ್ತದೆ. ಇವರು ನಿರ್ಮಿಸಿದ ಲುಂಕೆ ಕೋಟೆಯು ಕಾಲಾನಂತರ ಲುಂಕೆ ಕೋಟೆಯೆಂದೆ ಪ್ರಸಿದ್ಧಿಯಾಗಿದೆ.[8]

ಲುಂಕೆಕೋಟೆಯನ್ನು ಕದಂಬ ಗುಡ್ಡ ಅಥವಾ ದೇವರ ಗುಡ್ಡ ಎಂದು ಕರೆಯು ಬೆಟ್ಟ ಮೇಲೆ ಕಟ್ಟಲಾಗಿದೆ. ಇದು ಗಿರಿದುರ್ಗವಾಗಿದ್ದು, ತುಂಬಾ ಎತ್ತರದ ಹೆಬ್ಬಂಡೆಯ ಮೇಲೆ ಇದೆ. ಬೆಟ್ಟವನ್ನು ಬಳಸಿಕೊಂಡು ಒಂದು ಸುತ್ತಿನ ಕೋಟೆಯನ್ನು ಕಟ್ಟಿದ್ದಾರೆ. ಕೋಟೆಯಲ್ಲಿ ೧೫ ಬುರುಜುಗಳನ್ನೊಳಗೊಂಡಂತೆ ಪೂರ್ವದಲ್ಲಿ ಎರಡು ಹಾಗೂ ಉತ್ತರದಲ್ಲಿ ಎರಡು ಬಾಗಿಲುಗಳಿವೆ. ಮಧ್ಯಮ ಗಾತ್ರದ ಬಿಳಿ ಗ್ರಾನೈಟ್ ಕಲ್ಲುಗಳನ್ನು ಸೀಳಿ ತುಂಡು ತುಂಡು ಕಲ್ಲುಗಳಿಂದ ಗೋಡೆಯನ್ನು ಕಟ್ಟಿದ್ದಾರೆ ಕಲ್ಲುಗಳನ್ನು ನಯಗೊಳಿಸದೆ ಮಧ್ಯದಲ್ಲಿ ಚಿಕ್ಕಕಲ್ಲುಗಳನ್ನಿಟ್ಟು ಗೋಡೆಗೆ ಭದ್ರತೆ ಒದಗಿಸಿದ್ದಾರೆ. ಕೋಟೆ ಗೋಡೆಯು ೩ ಅಡಿ ಅಗಲವಾಗಿದ್ದು, ೬ ರಿಂದ ೧೦ ಅಡಿ ಎತ್ತರವದವರೆಗೆ ಇದೆ. ಎಲ್ಲಿಯೂ ಕೋಟೆಗೆ ಬಂದೂಕು ರಂದ್ರಗಳಿರುವುದಿಲ್ಲ. ಕಡಿದಾದ ಬಂಡೆಯ ಮೇಲೆ ಕೋಟೆಯನ್ನು ನಿರ್ಮಿಸಿರುವುದರಿಂದ ಕದಂಕದ ಅವಶ್ಯಕತೆ ಕಂಡುಬಂದಿಲ್ಲ. ಕಡಿದಾದ ಬಂಡೆಯೇ ಇಲ್ಲಿ ಕದಂಕದ ಪಾತ್ರ ನಿರ್ವಹಿಸಿದೆ.

ಕೆಳದುರ್ಗದಿಂದ ಮೇಲ್ದುರ್ಗದಿಂದ ಮೇಲ್ದುರ್ಗಕ್ಕೆ ಸುಮಾರ ೨೦೦೦ ಅಡಿ ಎತ್ತರದ ಅಂತರವಿದೆ. ಮೇಲ್ದುರ್ಗದಲ್ಲಿ ಅಲ್ಲಲ್ಲಿ ವಸತಿ ಪ್ರದೇಶಗಳಿದ್ದ ಕುರುವುಗಳು ಮಾತ್ರ ಉಳಿದುಕೊಂಡು ಬಂದಿವೆ. ಪೂರ್ವದಲ್ಲಿ ಸ್ವಾಭಾವಿಕ ದ್ವಾರದ ಹಿಂಭಾಗ ನೀರಿನ ದೊಣೆ ಇದೆ. ಕೋಟೆಯ ಮಧ್ಯಭಾಗದಲ್ಲಿ ನೈಸರ್ಗಿಕ ಬಂಡೆಗಳನ್ನು ಹೊಂದಿಕೊಂಡಂತೆ ತ್ರೀಕೋಣ ಸ್ಥಳದಲ್ಲಿ ಮೂರು ಬುರಜುಗಳಿವೆ. ಈ ಬುರಜುಗಳ ಮಧ್ಯೆ ಪೂರ್ವದಿಂದ ಪ್ರವೇಶ ಮಾಡಲು ಬಾಗಿಲುಗಳಿವೆ. ಈ ಬುರುಜುಗಳ ಮಧ್ಯೆ ಪೂರ್ವದಿಂದ ಪ್ರವೇಶ ಮಾಡಲು ಬಾಗಿಲುಗಳಿವೆ. ಮಧ್ಯ ಕೋಟೆಯ ಬಾಗಿಲ ಹತ್ತಿರದ ಬೆಟ್ಟಕ್ಕೆ ಹೊಂದಿಕೊಂಡಂತೆ ೧೦ ಅಡಿ ಅಗಲದ ವೃತ್ತಾಕಾರದ ಬುರುಜು ಇದೆ. ಈ ಬುರುಜಿನ ಮುಂಭಾಗ ಇತ್ತೀಚಿನ ೧೦ ಅಡಿ ಎತ್ತರದ ಚಿಕ್ಕ ದ್ವೀಪಸ್ತಂಭವಿದೆ. ಬೆಟ್ಟದ ಉತ್ತರಭಾಗಕ್ಕೆ ಬೃಹದಾಕಾರದ ಕಡಿದಾದ ಬಂಡೆಯೊಂದಿದೆ. ಇದರ ಮಧ್ಯಭಾಗದಲ್ಲಿ ಕುದುರೆ ಪಡ್ಡೆ ಹನುಮಪ್ಪ ಎಂದು ಕರೆಯುವ ಆಂಜನೇಯ ಚಿತ್ರವಿದೆ.

ಬೆಟ್ಟದ ಪಶ್ಚಿಮ ತಪ್ಪಲಿನಲ್ಲಿರುವ ಪ್ರದೇಶವನ್ನು ಕೋತಲಗೊಂದಿ ಎಂದು ಕರೆಯುತ್ತಾರೆ. ಇದರ ಪೂರ್ವಕ್ಕೆ ಒನಕೆಕಿಂಡಿ ಬಾಗಿಲು ಇದೆ. ಇಲ್ಲಿಂದ ಮುಂದೆ ವಿಶಾಲವಾದ ಬಯಲಿನಲ್ಲಿ ಕದಂಬರ ಶಾಸನಗಳು, ಮಲ್ಲಿಕಾರ್ಜುನ ದೇವಾಲಯ, ರಥಬೀದಿ, ಪುಷ್ಕರಣಿ ಮುಂತಾದ ಸ್ಮಾರಕಗಳಿವೆ. ಪುಷ್ಕರಣಿಯು ೧೦೧.೫ ಅಡಿ ಉದ್ದ ೯೫.೫ ಅಡಿ ಅಗಲವಿದೆ. ಪುಷ್ಕರಣಿಗೆ ನಾಲ್ಕು ಕಡೆಗೂ ಮೆಟ್ಟಿಲುಗಳಿವೆ. ಈ ಭಾಗದಲ್ಲಿ ಲುಂಕೆಭೈರವ ದೇವಾಲಯವಿದೆ. ಪ್ರದಕ್ಷಿಣಾ ಪಥವನ್ನು ಹೊಂದಿರುವ ದೇವಾಲಯದ ಮುಂದೆ ಎರಡು ಕಲ್ಲಿನ ದೀಪ ಸ್ತಂಭಗಳಿವೆ. ಬಲಭಾಗದ ಸ್ತಂಭ ೨೪ ಅಡಿ ಎತ್ತರ, ಎಡಭಾಗದ ಸ್ತಂಭ ೨೫ ಅಡಿ ಎತ್ತರವಾಗಿದೆ. ದೇವಾಲಯದ ಆಗ್ನೇಯ ಭಾಗಕೆ ಕಾಲಭೈರವ ಪೂರ್ವಕ್ಕೆ ಗೋಶಾಲೆ ಮುಂತಾದ ಸ್ಮಾರಕಗಳಿವೆ. ದೇವಾಲಯದ ಎಡಗಡೆ ಅನತಿ ದೂರದಲ್ಲಿ ಯಲ್ಲಮ್ಮ, ಹನುಮದ್ವಯ ವಿಗ್ರಹಗಳಿವೆ ಪರ್ವತದ ತಪ್ಪಲಿನಲ್ಲಿ ತುಪ್ಪದಮ್ಮ ದೇವಾಲಯ ಮೇಲಿನ ಈರ್ಲು, ಕೆಳಗಿನ ಈರ್ಲು, ಎಂಬ ದೇವಾಲಯಗಳಿವೆ. ಲುಂಕೆಮಲೆಗೆ ಪ್ರತಿನಿತ್ಯ ನೂರಾರು ಪ್ರವಾಸಿಗರು, ಬರುತ್ತಿದ್ದು ಇದರಿಂದ ಪ್ರವಾಸೋದ್ಯಮ ಬೆಳೆಯುತ್ತಿದೆ.

ಮೊಳಕಾಲ್ಮೂರು ಕೋಟೆ

ಮೊಳಕಾಲ್ಮೂರು ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲೊಂದು. ಸುತ್ತಲೂ ಬೆಟ್ಟ-ಗುಡ್ಡಗಳಿಂದ ಕೂಡಿದ ಈ ಪ್ರದೇಶದ ಭೂನಕ್ಷೆಯಲ್ಲಿ ಉತ್ತರ ಅಕ್ಷಾಂಶ ೧೪೦.೪೩ ಮತ್ತು ಪೂರ್ವ ರೇಖಾಂಶ ೭೬೦.೪೫ ಇದ್ದು ಸಮುದ್ರ ಮಟ್ಟದಿಂದ ೨೭೬೩ ಅಡಿ ಎತ್ತರದಲ್ಲಿದೆ. ಸುತ್ತಲೂ ಇರುವ ಬೆಟ್ಟದ ಪರಿಸರವನ್ನು ಬಳಸಿಕೊಂಡು ವಿಸ್ತರವಾದ ಗಿರಿ ದುರ್ಗವನ್ನು ಕಟ್ಟಲಾಗಿದೆ. ಮೊಳಕಾಲ್ಮೂರು ಹೆಸರು ಬರಲು ಅನೇಕ ಐತಿಹ್ಯಗಳಿದ್ದು, ಬೆಟ್ಟದ ಮೇಲಿನ ಕೂಗುವ ಬಂಡೆಗೆ ಮೊಳಗುವ ಕಲ್ಲು ಎಂಬ ಹೆಸರಿದ್ದು, ಮೊಳಗುವ ಕಲ್ಲಿನಿಂದಲೇ ಮೊಳಕಾಲ್ಮೂರು ಎಂಬ ಹೆಸರು ಬಂದಿರಬಹುದು.[9] ಮೊಳಕಾಲ್ಮೂರು ಇತಿಹಾಸ ಪೂರ್ವ ಕಾಲದಿಂದಲೂ ಜನ ವಸತಿಯ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು ನಂತರ ಚಿತ್ರದುರ್ಗದ ಪಾಳೆಯಗಾರರು ಆಳ್ವಿಕೆಯನ್ನು ನಡೆಸಿದ್ದಾರೆ.

ಮೊಳಕಾಲ್ಮೂರಿನ ಉತ್ತರ ಬೆಟ್ಟವನ್ನು ಬಳಸಿಕೊಂಡು ದಕ್ಷಿಣದಲ್ಲಿ ಐದು ಸುತ್ತಿನ ಕೋಟೆ, ಪೂರ್ವದಲ್ಲಿ ಎರಡು ಸುತ್ತು, ಪಶ್ಚಿಮದಲ್ಲಿ ಅವಶ್ಯಕತೆ ಇರುವ ಕಡೆ ಒಂದು ಸುತ್ತಿನ ಕೋಟೆಯನ್ನು ಕಟ್ಟಲಾಗಿದೆ. ಭಾರಿ ಕಡಿದಾದ ಬಂಡೆಗಳ ಸಮೂಹವಿರುವ ನೈರುತ್ಯ ದಿಕ್ಕಿನಲ್ಲಿ ಯಾವುದೇ ಕೋಟೆಯ ಸಾಲುಗಳಿಲ್ಲ. ದಕ್ಷಿಣದ ಕೋಟೆಗಿಂತ ಉತ್ತರದ ಕೋಟೆ ಇಂದಿಗೂ ಸುಭದ್ರವಾಗಿ ಉಳಿದುಕೊಂಡು ಬಂದಿದೆ. ಗ್ರಾಮದಲ್ಲಿದ್ದ ಎರಡು ಸುತ್ತಿನ ನೆಲಮಟ್ಟದ ಕೋಟೆಯು ಈಗ ನಾಶವಾಗಿದೆ. ಆದರೆ ಅಲ್ಲಲ್ಲಿ ದ್ವಾರ ಬಾಗಿಲುಗಳ ಅವಶೇಷಗಳು ಮಾತ್ರ ಉಳಿದುಕೊಂಡು ಬಂದಿವೆ. ಇಡೀ ಕೋಟೆಯಲ್ಲಿ ಒಂಭತ್ತು ದ್ವಾರಬಾಗಿಲು ಹತ್ತು ದಿಡ್ಡಿಬಾಗಿಲುಗಳು ಉಳಿದಿವೆ.

ದಕ್ಷಿಣದಿಂದ ಪ್ರವೇಶ ಮಾಡುವಾಗ ನೆಲಮಟ್ಟದಲ್ಲಿ ಸಿಗುವ ಎರಡು ಊರು ಬಾಗಿಲುಗಳನ್ನು ಗ್ರಾಮವು ಆವರಿಸಿಕೊಂಡಿದೆ. ಬಾಗಿಲುವಾಡಗಳ ಮೇಲೆ ಈಶ್ವರ ಮತ್ತು ನಂದಿ ಚಿತ್ರಗಳು ಇರುವುದರಿಂದ ಈ ಬಾಗಿಲುಗಳನ್ನು ಈಶ್ವರನ ಬಾಗಿಲುಗಳು ಎಂದು ಕರೆಯುತ್ತಾರೆ. ಈ ದ್ವಾರಬಾಗಿಲು ೧೩ ಅಡಿ ಎತ್ತರ ಹಾಗೂ ೮ ಅಡಿ ಅಗಲವಿದ್ದು, ಉತ್ತರ ದಕ್ಷಿಣವಾಗಿ ೮ ಅಡಿ ಅಗಲ ಪೂರ್ವ ಪಶ್ಚಿಮವಾಗಿ ೧೧ ಅಡಿ ಉದ್ದವಿದೆ. ಬಾಗಿಲಿನ ವಿಶೇಷತೆಯೆಂದರೆ ನಾಲ್ಕು ಬಾಗಿಲುವಾಡಗಳ ಮಧ್ಯೆಯೆ ೩ ಅಡಿ ಆಳದ ತಗ್ಗನ್ನು ತೋಡಲಾಗಿದೆ. ಈ ತಗ್ಗು ಪ್ರದೇಶಕ್ಕೆ ಕಟ್ಟಡದ ರಚನೆಯಿದೆ. ಈ ರೀತಿಯ ವ್ಯವಸ್ಥೆ ಜಿಲ್ಲೆಯ ಯಾವುದೇ ಕೋಟೆಯ ದ್ವಾರಗಳಿಗೆ ಇಲ್ಲ. ಬಹುಶಃ ಇದರ ತುಂಬ ನೀರನ್ನು ತುಂಬಿ ಶತ್ರುಗಳಿಗೆ ಭಯ ಹುಟ್ಟಿಸುತ್ತಿರಬಹುದು. ಈ ಬಾಗಿಲಿನಿಂದ ಎಡಕ್ಕೆ ಕೋಟೆಯ ಅವಶೇಷಗಳು ಉಳಿದುಕೋಂಡಿವೆ. ಇಲ್ಲಿ ಕೋಟೆಯ ಆಂಜನೇಯ ಊರಬಾಗಿಲ ರಕ್ಷಕನಾಗಿದ್ದಾನೆ. ಈ ಭಾಗದಲ್ಲಿ ಪಾಳೆಯಗಾರರ ಕಾಲದ ಹಿರೇಮಠ, ವೀರಗಲ್ಲುಗಳು ಅನೇಕ ಪುಷ್ಕರಣಿಗಳಿವೆ. ಕೋಟೆಯ ಒಳಭಾಗದಲ್ಲಿ ಆಂಜನೇಯ, ವೆಂಕಟರಾಮಣ, ಈಶ್ವರ ದೇವಾಲಯಗಳು ಇವೆ.

ಬೆಟ್ಟವನ್ನು ಹತ್ತಿ ಮುಂದೆ ನಡೆದಾಗ ವಿಶಾಲವಾದ ವೇದಿಕೆಯ ಕಟ್ಟಡದ ಅವಶೇಷಗಳು ಕಂಡುಬರುತ್ತವೆ. ಈ ಭಾಗದಲ್ಲಿ ೧೨ ಅಡಿ ಎತ್ತರದ ಕೋಟೆಗೋಡೆ ಇದೆ. ಈ ಕೋಟೆಯ ಉತ್ತರ ಭಾಗಕ್ಕೆ ೧೨ ಅಡಿ ಎತ್ತರವಿರುವ ಗೋಡೆಯನ್ನು ನಿರ್ಮಿಸಿ ಪೂರ್ವ ಪಶ್ಚಿಮಕ್ಕೆ ೩೨ ಅಡಿ, ಉತ್ತರ ದಕ್ಷಿಣವಾಗಿ ೧೧ ಅಡಿ ಒಳ ವಿಸ್ತಾರವಿರುವ ಕಣಜವೊಂದನ್ನು ನಿರ್ಮಿಸಲಾಗಿದೆ. ಕೋಟೆ ಗೋಡೆಯನ್ನು ನಿರ್ಮಿಸಲಾಗಿದೆ. ಈ ಕೋಟೆ ಗೋಡೆಯ ಮಧ್ಯಭಾಗದಲ್ಲಿ ಹನುಮಂತ, ಈಶ್ವರ, ನಂದಿಯ ಉಬ್ಬು ಶಿಲ್ಪಗಳಿವೆ. ಕೋಟೆಯ ಪಶ್ಚಿಮಕ್ಕಿರುವ ಬೆಟ್ಟವನ್ನು ಸಂಧಿಸುವ ಸ್ಥಳದಲ್ಲಿ ಪಶ್ಚಿಮಾಭಿಮುಖವಾಗಿ ದ್ವಾರಬಾಗಿಲನ್ನು ನಿರ್ಮಿಸಲಾಗಿದೆ. ಈ ಬಾಗಿಲಿಗೆ ಬಸವನ ಬಾಗಿಲೆಂದು ಕರೆಯುತ್ತಾರೆ. ಈ ಬಾಗಿಲು ಪೂರ್ವ ಪಶ್ಚಿಮವಾಗಿ ೫.೯ ಅಡಿ ಉತ್ತರ ದಕ್ಷಿಣವಾಗಿ ೬.೩ ಅಡಿ ಇದ್ದು ೧೦ ಅಡಿ ಎತ್ತರವಿದೆ. ದ್ವಾರದ ಪಶ್ಚಿಮಕ್ಕೆ ಝಂಡಾಗುಂಡು ಎಂದು ಕರೆಯುವ ಬೃದಕಾರದ ಕಲ್ಲು ಬಂಡೆಯೊಂದಿದೆ.

ಬಸವನ ಬಾಗಿಲು ಮುಂಭಾಗ ವಿಶಾಲವಾದ ನಾಗತೀ ಕೆರೆ ಇದೆ. ಕೆರೆಯ ಹಿಂಭಾಗ ಬಾವಿಯಿದ್ದು, ಈ ಪ್ರದೇಶದಲ್ಲಿದ್ದ ಶೃಂಗಾರ ತೋಟಕ್ಕೆ ಈ ಭಾವಿಯ ನೀರನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಬಾವಿಯ ಪಶ್ಚಿಮಕ್ಕೆ ಇರುವ ಬಂಡೆಯನ್ನು ಕೂಗುವ ಬಂಡೆ ಅಥವಾ ಮೊಳಗುವ ಕಲ್ಲು ಎಂದು ಕರೆಯುತ್ತಾರೆ. ಈ ಬಂಡೆಯಿಂದ ಪ್ರತಿಧ್ವನಿ ಬರುತ್ತದೆ. ಇಲ್ಲಿಂದ ಮುಂದೆ ಸಾಗಿದರೆ ೧೫ ಮೀಟರ್ ಆಳ ಹಾಗೂ ೩೦ ಮೀ. ಉದ್ದವಿರುವ ನೀಲಮ್ಮನ ಕುಂಟೆ ಸಿಗುತ್ತದೆ. ಈ ಕುಂಟೆಯಿಂದ ಪಶ್ಚಿಮಕ್ಕಿರುವುದು ಮೇಲ್ದುರ್ಗದ ಕೋಟೆ.

ಮೇಲ್ದುರ್ಗದ ಕೋಟೆಯನ್ನು ಮಧ್ಯಮ ಗಾತ್ರದ ಕಲ್ಲು ಹಾಗೂ ಗಾರೆಯನ್ನು ಬಳಸಿ ಕಟ್ಟಲಾಗಿದೆ. ೧೦ ಅಡಿ ಅಗಲ ೧೫ ಅಡಿ ಎತ್ತರವಿರುವ ಈ ಕೋಟೆ ಗೋಡೆಗೆ ಬಂದೂಕು ಕಿಂಡಿಗಳಿವೆ. ಪೂರ್ವ ಮತ್ತು ಪಶ್ಚಿಮದ ಗೋಡೆಯಲ್ಲಿ ಚೌಕಾಕಾರದ ಮತ್ತು ಅರ್ಧ ವೃತ್ತಾಕಾರದ ಕೊತ್ತಲಗಳಿವೆ. ಉತ್ತರ ದಕ್ಷಿಣವಾಗಿರುವ ಕೋಟೆಯ ಸಾಲಿನ ಮಧ್ಯಭಾಗದಲ್ಲಿ ಏಣಿಮಾರಮ್ಮನ ದ್ವಾರಬಾಗಿಲಿದೆ. ಬಾಗಿಲು ವಾಡಗಳ ಮೇಲಿರುವ ಖಡ್ಗ ಹಿಡಿದ ಸ್ತ್ರೀ ದೇವತೆಯ ಶಿಲ್ಪದಿಂದ ಈ ಹೆಸರು ಬಂದಿರಬಹುದು. ಈ ದೇವತೆಯನ್ನು ಪೂಜೆಮಾಡಲು ಇತ್ತೀಚೆಗೆ ಕೃತಕ ಏಣಿಯನ್ನು ಹಾಕಿರುವುದರಿಂದ ಏಣಿಮಾರಮ್ಮ ದ್ವಾರಬಾಗಿಲು ಎಂಬ ಹೆಸರು ಬಂದಿದೆ. ಈ ಏಣಿಮಾರಮ್ಮನ ಕೋಟೆಯ ದಕ್ಷಿಣ ಮತ್ತು ಉತ್ತರ ದಿಕ್ಕುಗಳಲ್ಲಿ ವ್ಯವಸ್ಥಿತವಾಗಿರುವ ಎತ್ತರವಾದ ಎರಡು ಬುರುಜುಗಳಿವೆ.

ಏಣಿಮಾರಮ್ಮನ ಬಾಗಿಲಿನ ಪಶ್ಚಿಮಕ್ಕ ವಿಸ್ತಾರವಾದ ಪ್ರದೇಶವನ್ನು ಒಳಗೊಂಡಂತೆ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಎತ್ತರವಾದ ಕೋಟೆಯನ್ನು ಕಟ್ಟಲಾಗಿದೆ. ಈ ಪ್ರದೇಶದಲ್ಲಿ ಅನೇಕ ಪುಷ್ಕರಣಿಗಳು, ನೀರಿನ ಆಶ್ರಯ ತಾಣಗಳು ಹಾಗೂ ದಿಡ್ಡಿ ಬಾಗಿಲು ಇದೆ. ಇವುಗಳ ಮಧ್ಯೆ ಪೂರ್ವ ಪಶ್ಚಿಮವಾಗಿ ೫೫ ಅಡಿ ಮತ್ತು ಉತ್ತರ ದಕ್ಷಿಣವಾಗಿ ೪೫ ಅಡಿ ವ್ಯಾಪ್ತಿಯೊಂದಿರುವ ಕಟ್ಟಡದ ಅವಶೇಷಗಳಿವೆ. ಈ ಕಟ್ಟಡದ ಮುಂಭಾಗದಲ್ಲಿ ದೊಡ್ಡ ಬಂಡೆಗಳ ಮಧ್ಯಭಾಗದಲ್ಲಿ ಗರಡಿ ಸಾಧನೆ ಮಾಡುತ್ತಿರುವ ಚಿತ್ರಗಳಿವೆ. ಏಣಿ ಮಾರಮಮ್ಮನ ಕೋಟೆಯ ಬಾಗಿಲಿನ ಸುತ್ತ ಹೊಂದಿಕೊಂಡಂತೆ ಪೂರ್ವ ಮತ್ತು ಪಶ್ಚಿಮವಾಗಿ ಭಾರಿ ಎತ್ತರದ ಕೋಟೆ ಸಾಲು ಇದೆ. ಈ ಕೋಟೆ ಸಾಲು ನಾಗತಿ ಕೆರೆಯವರೆಗೂ ಮುಂದುವರೆಯುತ್ತದೆ. ಈ ಮಧ್ಯ ವಿಶೆಷ ರಚನೆಯ ದ್ವಾರಬಾಗಿಲಿದೆ. ಈ ಬಾಗಿಲನ್ನ ದಾಟಿ ಮುಂದೆ ಹೋದರೆ ಬಾರಿ ದೊಡ್ಡ ಹೊಂಡವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನುಂಕಿಮಲೆ ಕೋಟೆಗೆ ಪ್ರವೇಶ ಕಲ್ಪಿಸಲಾಗಿದೆ, ಮೇಲ್ದುರ್ಗಕ್ಕೆ ಹೋಗುವ ಬಲಭಾಗದಲ್ಲಿ ಹನುಮನ ಬಾಗಿಲಿದೆ. ಬಾಗಿಲುವಾಡಗಳ ಮೇಲೆ ಸುಂದರವಾದ ಹನುಮಂತನ ಉಬ್ಬು ಶಿಲ್ಪವಿದೆ. ಬಾಗಿಲು ತೋಳುಗಳ ಮೇಲೆ ಮಕರ ಹಾಗೂ ಬಳ್ಳಿ ಸುರುಳಿಗಳಿಂದ ಅಲಂಕರಿಸಲಾಗಿದೆ. ಇವುಗಳ ಮಧ್ಯೆ ಕಮಲದ ಹೂವಿನ ಚಿತ್ರಗಳಿವೆ. ಬಾಗಿಲ ಬೋದಿಗೆಗಳು ಸುರುಳಿಯಾಕಾರದ ವಿಶೇಷ ರಚನೆಯನ್ನು ಹೊಂದಿವೆ. ಈ ಪ್ರದೇಶದಲ್ಲಿ ನೀರಿನ ಕಟ್ಟೆಗಳು, ಖಣಜಗಳು, ವೃತ್ತಾಕಾರದ ಬುರಜುವಿನ ಅವಶೇಷಗಳಿವೆ.

ಹನುಮನ ಬಾಗಿಲಿಗೆ ಹೊಂದಿಕೊಂಡಂತಿರುವ ಬೆಟ್ಟವನ್ನು ಬಳಸಿಕೊಂಡು ವ್ಯವಸ್ಥಿತವಾದ ಕೋಟೆಯನ್ನು ಕಟ್ಟಲಾಗಿದೆ. ಈ ಕೋಟೆಗೋಡೆಯ ಉತ್ತರದಿಂದ ದಕ್ಷಿಣಕ್ಕೆ ಕೂಗುವ ಗುಡ್ಡಕ್ಕೆ ಸೇರುತ್ತದೆ. ಇಲ್ಲಿಂದ ಮೇಲ್ದುರ್ಗಕ್ಕೆ ಹೋಗಲು ದುರ್ಗಮವಾದ ಪ್ರದೇಶದಲ್ಲಿ ದಾರಿ ಇದೆ. ಇಲ್ಲಿಂದ ಎತ್ತರವಾದ ಕೋಡುಗಳ್ಳಗಳ ಮಧ್ಯೆ ಕಾಳಿಂಗನ ಗವಿ ಎಂಬ ಪ್ರದೇಶವನ್ನು ಬಳಸಿಕೊಂಡು ಮೇಲ್ದುರ್ಗಕ್ಕೆ ಹೋಗಬಹುದು. ಮೇಲ್ದುರ್ಗದ ಪ್ರದೇಶದಲ್ಲಿ ವಿಶಾಲವಾದ ಮೆಟ್ಟಿಲುಗಳುಳ್ಳ ಬಂಡೆಯ ಮೇಲೆ ವೃತ್ತಾಕಾರದ ದೊಡ್ಡ ಬುರುಜು ಇದೆ. ಇದನ್ನು ಕಾಳಿಂಗನ ಬುರುಜು ಎಂದು ಕರೆಯುತ್ತಾರೆ. ಈ ಭಾಗದಲ್ಲಿ ಅತ್ಯಂತ ಎತ್ತರದ ಬುರಜು ಇದಾಗಿದ್ದು, ಇಲ್ಲಿಂದ ನುಂಕೆಮಲೆ, ಜಟಂಗಿ ರಾಮೇಶ್ವರ, ಬ್ರಹ್ಮಗಿರಿ, ಉಚ್ಚಂಗಿದುರ್ಗದ ಕೋಟೆಗಳ್ನು ವೀಕ್ಷಿಸಬಹುದು. ಇಲ್ಲಿಂದ ಮುಂದೆ ಸಾಗಿದರೆ ವಿನಾಯಕ ಶಿಲ್ಪವಿದೆ. ಈ ಪ್ರದೇಶದಲ್ಲಿ ಅಗಸರ ಹೊಂಡ, ಬೋಸೆದೇವರ ಹೊಂಡ, ಕಂಪಳ ದೇವರ ಹೊಂಡ ಎಂಬ ಹೊಂಡಗಳಿದ್ದು, ಹೊಂಡಗಳ ಮಧ್ಯೆ ತೆರೆದ ಮಂಟಪದಲ್ಲಿ ಈಶ್ವರ ದೇವಾಲಯವಿದೆ. ಮೊಳಕಾಲ್ಮೂರು ಕೋಟೆಯು ಒಂದು ಅಭೇದ್ಯ ಕೋಟೆಯಾಗಿದ್ದು, ತಾಲ್ಲೂಕಿನಲ್ಲಿ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ಅತ್ಯಂತ ದೊಡ್ಡದಾದ ಕೋಟೆ ಇದಾಗಿದೆ.

ಜಟಂಗಿ ರಾಮೇಶ್ವರದ ಕೋಟೆ

ಜಟಂಗಿ ರಾಮೇಶ್ವರವು ಬ್ರಹ್ಮಗಿರಿಯಿಂದ ೩ ಕಿ. ಮೀ ಅಂತರದಲ್ಲಿದ್ದು ಉತ್ತರ ಅಕ್ಷಾಂಶ ೧೪ ೫೦’ ಮತ್ತು ಪೂರ್ವ ರೇಖಾಂಶ ೭೬ ೫೧’ರಲ್ಲಿ ನೆಲೆಗೊಂಡಿದೆ. ಇದು ಜಿಲ್ಲೆಗೆ ಎರಡೇ ಅತೀ ಎತ್ತರದ ಪ್ರದೇಶವಾಗಿದ್ದು ಸಮುದ್ರ ಮಟ್ಟದಿಂದ ೩೪೬೯ ಅಡಿ ಎತ್ತರವಿದೆ. ಈ ಬೆಟ್ಟವು ಬ್ರಹ್ಮಗಿರಿ ಅಷ್ಟೇ ಐತಿಹಾಸಿಕ ಮಹತ್ವ ಪಡೆದಿದೆಯಾದರೂ ಈ ಪ್ರದೇಶ ಹೆಚ್ಚಾಗಿ ಗಮನ ಸೆಳೆದಿರುವುದು ಪೌರಾಣಿಕ ಮಹತ್ವದಿಂದಾಗಿ ವನವಾಸದಲ್ಲಿದ್ದ ಸೀತೆಯನ್ನು ರಾವಣ ಮಾರುವೇಶದಲ್ಲಿ ಅಪಹರಿಸಿಕೊಂಡು ಈ ಮಾರ್ಗದಲ್ಲಿ ಬರುತ್ತಿದ್ದಾಗ ಇದೇ ಬೆಟ್ಟದ ಮೇಲೆ ವಾಸವಾಗಿದ್ದ ಜಟಾಯು ರಾವಣನ ಮೇಲೆ ಹೋರಾಟ ಮಾಡಿತ್ತೆಂದು ಹಾಗೂ ಸೀತೆಯನ್ನು ಅರಸುತ್ತಾ ಬಂದ ರಾಮನಿಗೆ ವಿಷಯ ತಲುಪಿಸಿ ಇಲ್ಲಿ ಅಸುನಿಗಿತ್ತೆಂದು, ನಂತರ ರಾಮನು ಜಟಾಯುನ ಸಮಾಧಿಯನ್ನು ಇಲ್ಲೇ ನೆರವೇರಿಸಿ ಜ್ಞಾಪಕಾರ್ಥವಾಗಿ ಒಂದು ಶಿವಲಿಂಗವನ್ನು ಪ್ರತಿಷ್ಟಾಪಿಸಿದನೆಂಬ ಐತಿಹ್ಯವಿದೆ.[10] ಈ ಬೆಟ್ಟದ ಮೇಲೆ ಅಶೋಕನ ಬಂಡೆಗಲ್ಲು ಶಾಸನವಿದೆ.

ಬೆಟ್ಟದ ಮೇಲೆ ಹಿರಿಯ ಮತ್ತು ಸಣ್ಣ ಜಟಂಗಿ ರಾಮೇಶ್ವರಗಳೆಂಬ ಎರಡು ಬೆಟ್ಟಗಳಿವೆ. ಸಣ್ಣ ಜಟಂಗಿ ರಾಮೇಶ್ವರ ಬೆಟ್ಟದಲ್ಲಿ ಅನೇಕ ಶಾಸನಗಳು, ಪ್ರಾಚೀನ ದೇವಾಲಯಗಳು, ಕೋಟೆಯ ಅವಶೇಷಗಳು ಇವೆ. ಅನಿಯಮಿತಕಾರದಲ್ಲಿ ರಚನೆಗೊಂಡಿರುವ ಈ ಕೋಟೆಯು ಒಂದು ಗಿರದುರ್ಗವಾಗಿದ್ದು, ಪಾಳೆಯಗಾರರ ಕಾಲದಲ್ಲಿ ನಿರ್ಮಾಣಗೊಂಡಂತಿದೆ. ಉತ್ತರದಲ್ಲಿ ಎರಡು ಸುತ್ತು ಉಳಿದ ಕಡೆ ಒಂದು ಸುತ್ತು ಮಾತ್ರ ಕೋಟೆಯಿದೆ. ಈ ಕೋಟೆಯು ತುಂಬಾ ಶಿಥಿಲಗೊಂಡಿದೆ. ಮಧ್ಯಮ ಗಾತ್ರದ ಕಲ್ಲುಗಳಿಂದ ಕಟ್ಟಿದ ಗೋಡೆಯು ೬ ರಿಂದ ೮ ಅಡಿ ಅಗಲ ಹಾಗೂ ೮ ರಿಂದ ೧೦ ಅಡಿ ಎತ್ತರದವರೆಗೆ ಇದೆ. ಹೊರ ಕೋಟೆಗೆ ೧೦ ಬುರುಜುಗಳು ಇದ್ದು ಉತ್ತರ ಹಾಗೂ ಪೂರ್ವಕ್ಕೆ ಎರಡು ಸ್ವಾಭಾವಿಕ ದ್ವಾರಗಳಿವೆ. ಪೂರ್ವದ ಬಾಗಿಲು ಹಿರೇ ಜಟಂಗಿರಾಮೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಮಧ್ಯೆ ಅಲ್ಲಲ್ಲಿ ಸ್ವಾಭಾವಿಕ ಬಂಡೆಗಳ ಮೇಲೆ ವೃತ್ತಾಕಾರದ ಬತೇರಿಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ.

ಜಟಂಗಿ ರಾಮೇಶ್ವರದ ಕೋಟೆಯ ವೀರಭದ್ರ ದೇವಾಲಯದ ಹಿಂಬದಿಯಲ್ಲಿರುವ ಗುಹೆಯನ್ನು ಕುಮಾರಾಮನ ಗರಡಿಮನೆಯೆಂದು ಕರೆಯುತ್ತಾರೆ. ರಾಮೇಶ್ವರ ದೇವಾಲಯದ ಹಿಂಬದಿಯಲ್ಲಿ ನಾಗರಪಟೆ ಎಂದು ಕರೆಯುವ ಬಂಡೆಯ ಮೇಲೆ ಪ್ರಾಚೀನ ಕಾಲದ ಶಿಲಾ ಶಾಸನಗಳು ಮತ್ತು ರೇಖಾ ಚಿತ್ರಗಳು ಇವೆ. ಕೋಟೆಯ ಒಳಭಾಗದಲ್ಲಿ ಗಣೇಶ, ಮಹಿಷಮರ್ದಿನಿ, ಸೂರ್ಯ, ವೀರಭದ್ರ, ಅರ್ಕೇಶ್ವರ, ಓಂಕಾರೇಶ್ವರ, ಪರಶುರಾಮ ಮುಂತಾದ ದೇವಾಲಯಗಳಿವೆ.

ಜಟಂಗಿ ರಾಮೇಶ್ವರದ ಕೋಟೆಯ ರಚನೆ ಮತ್ತು ವಿನ್ಯಾಸವನ್ನು ನೋಡಿದರೆ ಸಾಮಾನ್ಯವಾಗಿ ಈ ಕೋಟೆಯು ಯಾವುದೇ ಶತ್ರುಗಳನ್ನು ಗುರಿಯಾಗಿಟ್ಟುಕೊಂಡು ರಚನೆಯಾಗಿದಿದ್ದರೂ ಮುಖ್ಯವಾಗಿ ಮೇಲಿರುವ ಈ ಐತಿಹಾಸಿಕ ದೇವಾಲಯಗಳಿಗೆ ರಕ್ಷಣಾ ಗೋಡೆಯಂತಿದೆ ಇಲ್ಲವೆ, ಚಿತ್ರದುರ್ಗ ಪಾಳೆಯಗಾರರ ಕಾಲದಲ್ಲಿ ಇಲ್ಲಿ ಕೋಟೆಯೊಂದನ್ನು ಕಟ್ಟಿ ಸೈನಿಕ ಪಡೆಯೊಂದನ್ನು ಇಟ್ಟಿರಬಹುದಾದ ಸಾಧ್ಯತೆಗಳಿವೆ.

ಉಚ್ಚಂಗಿ ದುರ್ಗದ ಕೋಟೆ

ಉಚ್ಚಂಗಿ ದುರ್ಗವು ಮೊಳಕಾಲ್ಮೂರಿನಿಂದ ೧೫ ಕಿ. ಮೀ ದೂರದಲ್ಲಿದೆ. ಮೊಳಕಾಲ್ಮೂರಿನಿಂದ ಹಾನಗಲ್, ನಾಗಸಮುದ್ರ, ಭೈರಾಪುರ ಗ್ರಾಮಗಳ ಮೂಲಕ ಕೋಟೆಯನ್ನು ತಲುಪಬಹುದು ಉಚ್ಚಂಗಿ ದುರ್ಗದ ಕೋಟೆಯು ಪೂರ್ವ ಗುಡ್ಡದ ಮೇಲೆ ನಿರ್ಮಿತವಾಗಿದೆ. ಈ ಗುಡ್ಡಕ್ಕೆ ಹಿರೇ ಆರ್ಯಾರದುರ್ಗ, ಹೀರಾರನಗುಡ್ಡವೆಂತಲು ಕರೆಯುತ್ತಾರೆ.[11] ಈ ಗುಡ್ಡದ ಸುತ್ತಲೂ ಹಿರೇ ಅಡವಿ ಅರಣ್ಯ ಪ್ರದೇಶವಿದೆ. ಭೂನಕ್ಷೆಯಲ್ಲಿ ಉತ್ತರ ಅಕ್ಷಾಂಶ ೧೪ ೪೦’ ಪೂರ್ವ ರೇಖಾಂಶ ೭೪ ೪೭’ರಲ್ಲಿದ್ದುಸಮುದ್ರಮಟ್ಟದಿಂದ ೩೦೨೨ ಅಡಿ ಎತ್ತರದಲ್ಲಿದೆ.

ಗುಡ್ಡದ ಮೇಲಿರುವ ಉಚ್ಚಂಗಿ ಯಲ್ಲಮ್ಮನಿಂದಲೇ ಉಚ್ಚಂಗಿ ದುರ್ಗವೆಂಬ ಹೆಸರು ಬಂದಿದೆ. ಉಚ್ಚಂಗಿ ದುರ್ಗದ ಕೋಟೆಯು ಗಿರಿದುರ್ಗವಾಗಿದ್ದು, ಸುತ್ತಲೂ ವಿಶಾಲವಾದ ಹಿರೇ ಅಡವಿ ಅರಣ್ಯ ಪ್ರದೇಶದಿಂದ ಸುತ್ತುವರೆದಿದೆ. ಕೋಟೆಯನ್ನು ಮೇಲಿರುವ ಎರಡು ಜೋಡಿ ಬಂಡೆ ಗುಡ್ಡಗಳನ್ನು ಬಳಸಿ ಕಟ್ಟಲಾಗಿದೆ. ಈ ಬಂಡೆಗಳು ಪೂರ್ವ ಮತ್ತು ದಕ್ಷಿಣದಲ್ಲಿರುವ ಬಂಡೆಯು ಭಾರೀ ಕಡಿದಾಗಿದ್ದು ಯಾವುದೇ ಕೋಟೆಗೋಡೆಗಳಿಲ್ಲ. ಇಲ್ಲಿ ಬಂಡೆಯೇ ಪ್ರಕೃತಿ ನಿರ್ಮಿತ ಕೋಟೆಯಂತಿದೆ.

ಗುಡ್ಡದ ಪಶ್ಚಿಮ ಭಾಗದಲ್ಲಿ ವಾಯುವ್ಯ ಮತ್ತು ದಕ್ಷಿಣಕ್ಕೆ ಮತ್ತೆರೆಡು ದಿಕ್ಕ ಗುಡ್ಡಗಳಿದ್ದು ಇವು ಕೋಟೆ ಇರುವ ಗುಡ್ಡಗಳೊಂದಿಗೆ ಬೆಸೆದುಕೊಂಡಿವೆ. ರಕ್ಷಣಾ ದೃಷ್ಟಿಯಿಂದ ಎರಡು ಗುಡ್ಡಗಳನ್ನು ಬಳಸಿಕೊಂಡು ಕೋಟೆ ಹಾಗೂ ಬುರುಜುಗಳನ್ನು ನಿರ್ಮಿಸಿದ್ದಾರೆ. ಕೋಟೆಗೋಡೆಯು ತುಂಬಾ ಶಿಥಿಲಗೋಂಡಿದ್ದು ಕೆಲವು ಕಡೆ ೪ ಅಡಿ ಅಗಲ ೮ ರಿಂದ ಎತ್ತರವಿದೆ. ಕೋಟೆಗೋಡೆಗೆ ಚಿಕ್ಕಚಿಕ್ಕ ನಯಗೊಳಿಸಿದ ಬಿಳಿ ಕಣ ಶಿಲೆಯ ಆಯತಕಾರದ ಕಲ್ಲುಗಳನ್ನು ಬಳಸಾಲಿದೆ. ಗೋಡೆಯ ಮಧ್ಯಭಾಗದಲ್ಲಿ ಕೆಸರು ಮಣ್ಣನ್ನು ಹಾಕಿ ಭದ್ರತೆ ಮಾಡಿದ್ದಾರೆ. ಕೋಟೆಗೋಡೆಯ ರಚನೆ ಮತ್ತು ವಿನ್ಯಾಸವನ್ನು ಗಮನಿಸಿದರೆ ಸುಮಾರು ೧೬-೧೭ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಬಹುದು.

ಕೋಟೆಯ ಪಶ್ಚಿಮ ಭಾಗದಲ್ಲಿ ಎರಡು ವೃತ್ತಾಕಾರದ ಬುರುಜುಗಳಿವೆ. ಸ್ಥಳೀಯರು ಈ ಬುರುಜಿಗೆ ಕೋಲಾಟದ ಬುರುಜು ಎಂದು ಮತ್ತೊಂದನ್ನು ಗುಡ್ಡದ ಬುರುಜು ಎಂದು ಕರೆಯುತ್ತಾರೆ. ಕೋಲು ಬುರುಜಿನ ಗುಡ್ಡದ ಬದಿಯಲ್ಲಿ ಬಸವಣ್ಣನ ಗುಡಿ ಇದೆ. ಇದರ ಮುಂಭಾಗದಲ್ಲಿಯೇ ಬಂಡೆಯ ಮೇಲೆ ಚಿಕ್ಕದಾದ ಆಂಜನೇಯ ದೇವಾಲಯವಿದೆ ದೇವಾಲಯದ ಪೂರ್ವಕ್ಕೆ ಎರಡು ಬಂಡೆಗಳ ಮಧ್ಯೆ ಸ್ವಾಭಾವಿಕವಾದ ತಗ್ಗು ಪ್ರದೇಶವನ್ನು ಗಾರೆದೊಣೆಯನ್ನಾಗಿ ಮಾಡಿಕೊಳ್ಳಲಾಗಿದೆ. ಈ ಹೊಂಡದ ಮುಂಭಾಗದಲ್ಲಿ ಗುಡ್ಡದ ದೇವತೆ ಯಲ್ಲಮ್ಮ ಇರುವುದರಿಂದ ಇದನ್ನು ಯಲ್ಲಮ್ಮನ ಹೊಂಡ ಎಂದು ಕರೆಯುತ್ತಾರೆ. ದೇವಾಲಯದ ಮುಂಭಾಗದಲ್ಲಿ ೬ ಅಡಿ ಅಗಲ ೨೦ ಅಡಿ ಎತ್ತರದ ಗೋಡೆಯನ್ನು ಕಟ್ಟಲಾಗಿದೆ. ಇಲ್ಲಿಂದ ಮುಂದೆ ಮೇಗಳ ಕೆರೆ, ಕೆಳಗಳ ಕೆರೆ ಮತ್ತು ತಂಗ್ಟೆ ಕುಂಟೆಗೆ ಹೋಗಲು ದಾರಿ ಇದೆ.

ಸಂತೆಗುಡ್ಡದ ಕೋಟೆ

ಸಂತೆಗುಡ್ಡವು ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದಿಂದ ವಾಯ್ಯುವಕ್ಕೆ ೨೦ ಕಿ. ಮೀ. ದೂರದಲ್ಲಿದೆ ರಾಂಪುರದಿಂದ ಮೇಗಳ ಕಣಿವೆ, ಕೆಳಗಳ ಕಣಿವೆ, ಪತೇನಹಳ್ಳಿಗಳ ಮೂಲಕ ಸಂತೇಗುಡ್ಡಕ್ಕೆ ತಲುಪಬಹುದು. ಈ ಗ್ರಾಮಕ್ಕೆ ಸಂತೇಗೋವಿ ಎಂಬ ಹೆಸರಿತ್ತೆಂದು ತಿಳಿದುಬರುತ್ತದೆ.[12] ಸಂತೇಗುಡ್ಡವು ಭೂ ನಕ್ಷೆಯಲ್ಲಿ ಉತ್ತರ ಅಕ್ಷಾಂಶ ೧೪ ೪೩’ ಪೂರ್ವ ರೇಖಾಂಶ ೭೪ ೫೮’ ವರೆಗೆ ವ್ಯಾಪಸಿದ್ದು, ಸಮುದ್ರಮಟ್ಟದಿಂದ ೨೫೮೫ ಅಡಿ ಎತ್ತರದಲ್ಲಿದೆ. ಸಂತೇಗುಡ್ಡವು ಪ್ರಾಚೀನಕಾಲದಿಂದಲೂ ಮಾನವನ ವಾಸಸ್ಥಾನವಾಗಿತ್ತೆಂದು ಇಲ್ಲಿ ಕಂಡುಬಂದ ಅವಶೇಷಗಳಿಂದ ತಿಳಿದುಬರುತ್ತದೆ.

ಗಿರಿದುರ್ಗವಾಗಿದ್ದ ಸಂತೇಗುಡ್ಡದ ಕೋಟೆಯು ಚಿತ್ರದುರ್ಗ ಪಾಳೆಯಗಾರರ ಕಾಲದ ಗಡಿಕೋಟೆಗಳಲ್ಲಿ ಒಂದಾಗಿತ್ತು, ರಾಯದುರ್ಗ, ಜರಿಮಲೆ ಮುಂತಾದ ಪಾಳೆಯಗಾರರ ಉಪಟಳವನ್ನು ತಡೆಯಲು ಇದೊಂದು ಆಯಕಟ್ಟಿನ ಪ್ರದೇಶವಾಗಿತ್ತು. ಇದನ್ನು ಗಮನಿಸಿದ ಚಿತ್ರದುರ್ಗ ಪಾಳೆಯಗಾರರು ಇಲ್ಲಿ ಕೋಟೆಯೊಂದನ್ನು ನಿರ್ಮಿಸಿದ್ದರು. ಈ ಕೋಟೆಯನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗಿದೆ. ಬೂದ್ಲುಗುಂಡು, ಊರುಗುಡ್ಡಗಳ ಮಧ್ಯೆಯಿರುವ ಸ್ಥಳದುರ್ಗ, ಊರುಗುಡ್ಡ ಮತ್ತು ದಕ್ಷಿಣದಲ್ಲಿರುವ ಬೂದ್ಲುಗುಂಡನ್ನು ಬಳಸಿಕೊಂಡು ನಿರ್ಮಿಸಿರುವ ಈ ಕೋಟೆಯಲ್ಲಿ ಈಗಲೂ ಗ್ರಾಮವಿದೆ. ಇದೇ ರೀತಿ ಊರುಕುಂಟೆ ಬುರುಜಿನಿಂದ ಬುರುಜುಗುಂಡಿನ ಮೂಲಕ ಎರಡನೇ ಹಂತದ ಒಂದು ಸುತ್ತಿನ ಕೋಟೆಯನ್ನು ಕಾಣಬಹುದು. ಈ ಭಾಗದಲ್ಲಿ ವಿಶಾಲವಾದ ಊರು ಕುಂಟೆ ಹನುಮಂತನಗುಡ, ನಗರೇಶ್ವರ, ಕಾಳಮ್ಮ, ಮುಂತಾದ ದೇವಾಲಯಗಳಿವೆ. ಅಲ್ಲದೆ ಕಾಳಮ್ಮನ ಬಜಾರು, ತೇರು ಬಜಾರ್, ಕಂಚುಗಾರ ಬೀದಿ, ನೂರಾರು ಬಂಡೆಗಲ್ಲುಗಳು ಈ ಭಾಗದಲ್ಲಿವೆ.

ಮೂರನೇ ಹಂತದ ಕೋಟೆಯು ಮೇಲ್ದುರ್ಗದಲ್ಲಿದ್ದು ತುಂಬಾ ಶಿಥಿಲಗೊಂಡಿದೆ. ೩ ಅಡಿ ಅಗಲ, ೬ ಅಡಿ ಎತ್ತರವಿರುವ ಕೋಟೆಗೋಡೆಗೆ, ಮಧ್ಯಮ ಗಾತ್ರದ ಒರಟುಗಲ್ಲುಗಳನ್ನು ಉಪಯೋಗಿಸಲಾಗಿದೆ. ಕಲ್ಲುಗಳ ಅಂಚುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳದೆ ಉಂಟಾದ ಸಂದಿಗಳಲ್ಲಿ ಚಕ್ಕೆ ಕಲ್ಲುಗಳನ್ನು ಉಪಯೋಗಿಸಿದ್ದಾರೆ. ಈ ಗೋಡೆಗೆ ಸ್ವಾಭಾವಿಕವಾದ ದ್ವಾರವಿದ್ದು, ದ್ವಾರದ ಎರಡೂ ಕಡೆ ಪಹರೆ ಗೃಹದ ಅವಶೇಷಗಳಿವೆ. ಬಾಗಿಲಿನ ಮುಂಭಾಗದಲ್ಲಿ ಆಂಜನೇಯ ದೇವಾಲಯವಿದೆ. ದೇವಾಲಯದ ಮುಂಭಾಗದಲ್ಲಿ ಗರಡಿ ಮನೆ ಹಾಗೂ ಉಪ್ಪು ದೋಣೆಗಳಿವೆ.

ಗರಡಿ ಮನೆಯ ಪೂರ್ವಕ್ಕೆ ವಕ್ರಮ್ಮನ ಗುಂಡುಗಳು ಮತ್ತು ಅಕ್ಕ ತಂಗಿಯರ ದೊಣಿಗಳಿವೆ. ಈ ದೋಣಿಯನ್ನು ನಯಗೊಳಿಸಿದ ಕಲ್ಲುಗಳಿಂದ ನಿರ್ಮಿಸಿದ್ದಾರೆ. ಕಡಿದಾದ ಬಂಡೆಗೆ ಅಡ್ಡಕಟ್ಟಿರುವ ಗಡೆಯು ೫ ಮೀ. ಎತ್ತರವಿದ್ದು, ೪ ಅಡಿ ಅಗಲವಿದೆ. ಇಡೀ ಬೆಟ್ಟದಲ್ಲಿ ವ್ಯವಸ್ಥಿತವಾಗಿ ನಿರ್ಮಿಸಿರುವ ನೀರಿನ ತಾಣ ಇದಾಗಿದೆ. ಈ ಹೊಂಡದ ಮುಂಭಾಗ ಕಾಳಮ್ಮನ ಬುರುಜು ಮತ್ತು ಚಿಲ್ಲಿಕುಂಟೆ ಬುರಜುಗಳನ್ನೊಳಗೊಂಡಂತೆ ಒಂದು ಸುತ್ತಿನ ಕೋಟೆ ಇದೆ. ಈ ಕೋಟೆಯ ಪಶ್ಚಿಮ ಭಾಗದಲ್ಲಿ ಭಾರಿ ಕಡಿದಾದ ಬಂಡೆಯಿದ್ದು ಇದು ಕೋಟೆಗೆ ರಕ್ಷಣೆ ನೀಡಿದೆ. ಈ ಭಾಗಕ್ಕೆ ಜೇನುಗೊಂದಿ ಪ್ರದೇಶ ಎಂದು ಕರೆಯುತ್ತಾರೆ. ಈ ಪ್ರದೇಶದಲ್ಲಿ ಮ್ಯಾದರ ಪಡೆ ಎನ್ನುವ ಗುಹೆಯಲ್ಲಿ ಪ್ರಾಚೀನ ಗುಹಾ ವರ್ಣ ಚಿತ್ರಗಳಿವೆ.

ಗುಡ್ಡದಹಳ್ಳಿ ಕೋಟೆ

ಗುಡ್ಡದಹಳ್ಳಿ ಮೊಳಕಾಲ್ಮೂರಿನಿಂದ ಸುಮಾರು ೮ ಕಿ. ಮೀ. ದೂರದಲ್ಲಿದೆ ಗುಡ್ಡದ ಪಕ್ಕದಲ್ಲಿ ಗ್ರಾಮವಿರುವುದರಿಂದ ಗುಡ್ಡದಹಳ್ಳಿ ಎಂದು ಹೆಸರಾಗಿದೆ. ಭೂ ನಕ್ಷೆಯಲ್ಲಿ ೧೪” ೪೭’ ಉತ್ತರ ಅಕ್ಷಾಂಶ ಮತ್ತು ೭೬” ೪೪’ ಪೂರ್ವ ರೇಖಾಂಶದಲ್ಲಿದ್ದು ಸಮುದ್ರಮಟ್ಟದಿಂದ ೧೮೦೦ ಅಡಿ ಎತ್ತರದಲ್ಲಿದೆ. ಕೋಡು ಬಂಡೆಗಳ ಮಧ್ಯೆ ಎರಡು ಸುತ್ತಿನ ಕೋಟೆ ಇದೆ. ಕೋಟೆಯು ಚಿತ್ರದುರ್ಗ ಪಾಳೆಯಗಾರರ ಅವಧಿಯಲ್ಲಿ ನಿರ್ಮಾಣವಾದಂತೆ ಕಂಡು ಬರುತ್ತದೆ.

ಕೋಟೆಯನ್ನು ಸ್ವಾಭಾವಿಕ ಕೋಡುಗಲ್ಲುಗಳನ್ನು ಬಳಸಿಕೊಂಡು ಕಟ್ಟಲಾಗಿದೆ. ಹೊರ ಕೋಟೆ ಗೋಡೆಯು ೫ ಅಡಿ ಅಗಲವಿದ್ದು, ೬ ಅಡಿ ಎತ್ತರವಿದೆ. ಮಧ್ಯಮ ಗಾತ್ರದ ಬಿಳಿ ಗ್ರಾನೈಟ್ ಕಲ್ಲುಗಳಿಂದ ಕೋಟೆ ನಿರ್ಮಾಣ ಮಾಡಲಾಗಿದೆ. ಹೊರಸುತ್ತಿನ ಕೋಟೆಯು ಗುಡ್ಡದಹಳ್ಳಿಯ ಪಶ್ಚಿಮ ಭಾಗವನ್ನು ಸುತ್ತುವರೆದಿದೆ. ಪೂರ್ವದಿಂದ ಪ್ರವೇಶವನ್ನು ಕಲ್ಪಿಸಲಾಗಿದೆ. ಹೊರಕೋಟೆಯ ಪ್ರಾರಂಭದಲ್ಲಿ ಭರಮಪ್ಪನ ದೇವಾಲಯವಿದ್ದರೂ ಯಾವುದೇ ಮೂರ್ತಿ ಶಿಲ್ಪಗಳೀಲ್ಲ ಹೊರಸುತ್ತಿನ ಕೋಟೆಗೆ ನಾಲ್ಕು ಬರುಜುಗಳಿವೆ.

ಒಳಸುತ್ತಿನಲ್ಲಿ ಬೆಟ್ಟದ ಕೊಡುಗಲ್ಲುಗಳನ್ನು ಬಳಸಿಕೊಂಡು ನಿರ್ಮಿಸಿರುವ ಕೋಟೆಯ ಸಾಲು ಇದೆ. ಈ ಕೋಟೆಗೆ ಐದು ಬುರುಜುಗಳಿವೆ, ಕೋಟೆಯೊಳಗಡೆ ಚಿಕ್ಕದಾದ ಅಕ್ಕಮ್ಮನ ದೇವಾಲಯವಿದೆ. ಇದರ ಪಕ್ಕದಲ್ಲಿಯೇ ವ್ಯವಸ್ಥಿತವಾಗಿ ನಿರ್ಮಾಣಗೊಂಡಿರುವ ೧೦ ಅಡಿ ಸುತ್ತಳತೆಯ ೧೨ ಅಡಿ ಎತ್ತರದ ಕಣಜವಿದೆ. ಸಮೀಪದಲ್ಲಿ ದೊಡ್ಡ ಹಾಗೂ ಆಂಜನೇಯನ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ಕೋಟೆಯ ಮುಂಭಾಗದಲ್ಲಿ ಗದ್ದುಗೆ ರೀತಿಯ ವ್ಯವಸ್ಥಿತವಾದ ಕಟ್ಟಡವಿದ್ದು ಇದನ್ನು ಕಣಶಿಲೆಯ ಚಪ್ಪಡಿಕಲ್ಲುಗಳಿಂದ ನಿರ್ಮಿಸಲಾಗಿದೆ. ಸ್ಥಳೀಯರು ಇದನ್ನು ಕೊಲ್ಲಾರಮ್ಮನ ಗುಡಿ ಎಂದು ಕರೆಯುವರು. ಚಪ್ಪಡಿಕಲ್ಲುಗಳ ಮೇಲೆ ಸುಂದರವಾದ ಸಿಂಹ, ಹಂಸ, ಪದ್ಮ, ಆನೆ, ಕುದುರೆ, ಬಿಲ್ಲು ಬಾಣದ ಉಬ್ಬು ಶಿಲ್ಪಗಳಿವೆ.

ಸಮಾರೋಪ

ಯುದ್ಧ ತಂತ್ರ ಮತ್ತು ರಕ್ಷಣಾ ದೃಷ್ಟಿಯಿಂದ ನಿರ್ಮಿಸಿರುವ ಈ ಕೋಟೆಗಳು ರಕ್ಷಣೆಯ ಪ್ರತಿರೂಪಗಳು. ಈ ಪ್ರಾದೇಶಿಕ ಕೋಟೆಗಳು ಮಾನವನ ಜೀವನ ವಿಧಾನಕ್ಕೆ ಸಾಕ್ಷಿಯಾಗಿವೆ. ಅಂದಿನ ಮಾನವನ ಸಾಂಸ್ಕೃತಿಕ ಪರಂಪರೆಯ ಮುಖ್ಯ ಸ್ಮಾರಕಗಳಾಗಿ ಉಳಿದು ಕೊಂಡು ಬಂದಿದ್ದ ಈ ಕೋಟೆ ಕೊತ್ತಲುಗಳು ಒಂದಲ್ಲ ಒಂದು ಕಾರಣದಿಂದ ವಿನಾಶದ ಅಂಚನ್ನು ತಲುಪುತ್ತಿವೆ. ಇವು ಪೂರ್ಣವಾಗಿ ನಾಶವಾಗುವುದಕ್ಕಿಂತ ಮುಂಚೆ ಇವುಗಳನ್ನು ರಕ್ಷಿಸಿ ಉಳಿಸಬೇಕಾದ ಅಗತ್ಯತೆ ಇದೆ. ಆ ಮೂಲಕ ಕೋಟೆಗಳ ಸಮಗ್ರ ಚಿತ್ರಣ, ಅವುಗಳ ಮಹತ್ವ, ವೈಭವ ಮತ್ತು ಸಾಂಸ್ಕೃತಿ ಕತೆಯ ವಿವಿಧ ಮಗ್ಗಲುಗಳನ್ನು ಮುಂದಿನ ಪಿಳಿಗೆಯವರೆಗೆ ದೊರೆಯುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಮೊಳಕಾಲ್ಮೂರು ಪ್ರದೇಶದಲ್ಲಿ ಕಂಡುಬರುವ ಈ ವಿಶಿಷ್ಟ ಕೋಟೆಗಳು ದಕ್ಷಿಣ ಭಾರತದ ರಕ್ಷಣಾ ವ್ಯವಸ್ಥೆಯ ಬೆಳವಣಿಗೆ ಮತ್ತು ವಿಕಾಸಕ್ಕೆ ಪೂರಕವಾದ ಅಂಶಗಳನ್ನು ಒದಗಿಸುತ್ತವೆ. ಹಾಗೆಯೇ ಮೌರ್ಯರಿಂದ ಮೈಸೂರು ಒಡೆಯರ ಕಾಲದವರೆಗೆ ರಕ್ಷಣಾ ವ್ಯವಸ್ಥೆಯು ಬೆಳೆದು ಬಂದ ಬಗ್ಗೆ ಸಮಗ್ರ ಚಿತ್ರಣಗಳು ನಮಗೆ ಲಭ್ಯವಾಗುತ್ತವೆ. ಆನೆಯಿಂದ ಕಲ್ಲುಗುಂಡುಗಳನ್ನು ತಳ್ಳಿಸಿ ತಡೆಗೊಡೆಯನ್ನು ನಿರ್ಮಿಸುವ ಮೂಲಕ ಆರಂಭವಾದ ಈ ರಕ್ಷಣಾ ವ್ಯವಸ್ಥೆಯು ಬೆಟ್ಟ-ಗುಡ್ಡಗಳನ್ನು ಬಳಸಿಕೊಂಡು ಧೈತ್ಯಾಕಾರದ ಗಿರಿದುರ್ಗಗಳ ನಿರ್ಮಾಣದವರೆಗಿನ ವಿವಿಧ ಹಂತದ ವಾಸ್ತು ವಿನ್ಯಾಸವನ್ನು ನಾವು ಈ ಕೋಟೆಗಳಲ್ಲಿ ಕಾಣಬಹುದು.

ವಿಶೇಷತೆ ಎಂದರೆ ಈ ಭಾಗದಲ್ಲಿ ಕಂಡು ಬರುವ ಎಲ್ಲಾ ಕೋಟೆಗಳು ಗಿರಿದುರ್ಗಗಳಾಗಿದ್ದು, ಅನಿಯಮಿತಾಕಾರದಲ್ಲಿ ನಿರ್ಮಾಣಗೊಂಡಿವೆ. ಸಾಮಾನ್ಯವಾಗಿ ಈ ಕೋಟೆಗಳು ಅಲ್ಲಿನ ಭೌಗೋಳಿಕ ಲಕ್ಷಣಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿವೆ. ಕೋಟೆ ನಿರ್ಮಾಣಕ್ಕೆ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳನ್ನೇ ಬಳಸಿಕೊಳ್ಳಲಾಗಿದೆ. ಕೆಲವು ಕೋಟೆಗಳು ರಚನೆ, ಗಾತ್ರ, ವಿನ್ಯಾಸವನ್ನು ಗಮನಿಸಿದರೆ ಇವು ಯಾವುದೇ ಹೊರಗಿನ ಪ್ರಬಲವಾದ ಆಕ್ರಮಣಗಳನ್ನು ಎದುರಿಸಲು ನಿರ್ಮಾಣವಾದ ಕೋಟೆಗಳಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಕೋಟೆಗಳನ್ನು ಸ್ಥಳೀಯ ಆಕ್ರಮಣ ಇಲ್ಲವೇ ವಿರೋಧವನ್ನು ಎದುರಿಸಲು ನಿರ್ಮಿಸಿಕೊಟ್ಟ ಕೋಟೆಗಳೆಂಬುದು ಗಮನಾರ್ಹ ಅಂಶ. ಇಂತಹ ಕೋಟೆಗಳನ್ನು ಈ ಭಾಗದಲ್ಲಿ ಆಳ್ವಿಕೆ ನಡೆಸಿದ ಅರಸರು ತಮ್ಮ ಆರ್ಥಿಕ ಶಕ್ತಿಗನುಗುಣವಾಗಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೋಟೆಗಳನ್ನು ನಿರ್ಮಿಸಿರುವುದು. ಸ್ಪಷ್ಟವಾಗುತ್ತದೆ. ಅಲ್ಲದೆ ಇವು ಆಯಾಯ ಅರಸರ ಆಳ್ವಿಕೆ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಒಟ್ಟಾರೆ ಪರಿಸರಕ್ಕೆ ದಕ್ಕೆಯಾಗದಂತೆ ಕೋಟೆಕೊತ್ತಲಗಳನ್ನು ನಿರ್ಮಿಸಿಕೊಂಡು ಸ್ಥಳೀಯ ಆಡಳಿತವನ್ನು ವ್ಯವಸ್ಥೆಗೊಳಿಸುವಲ್ಲಿ ಇಲ್ಲಿಯ ಕೋಟೆಗಳು ಮಹತ್ತರವಾದ ಪಾತ್ರವಹಿಸಿದೆ.

 

[1] ಚಿತ್ರದುರ್ಗ ಜಿಲ್ಲಾ ಗೆಜೆಟಿಯರ್, ಪುಟ-೭

[2] ಕನ್ನಡ ವಿಷಯ ವಿಶ್ವಕೋಶ, ಪುಟ-೪೦೫

[3] ಎಫಿಗ್ರಫಿಯಾ ಕರ್ನಾಟಕ ಸಂ. ೧೧, ಮೊಳಕಾಲ್ಮೂರು-೨೧, ೨೨, ೩೪

[4] ಎಫಿಗ್ರಫಿಯಾ ಕರ್ನಾಟಕ ಸಂ. ೧೧, ಮೊಳಕಾಲ್ಮೂರು-೨೧

[5] ಎಫಿಗ್ರಫಿಯಾ ಕರ್ನಾಟಕ ಸಂ. ೧೧, ಮೊಳಕಾಲ್ಮೂರು- ೧೨

[6] ಎಫಿಗ್ರಫಿಯಾ ಕರ್ನಾಟಕ ಸಂ. ೧೧, ಮೊಳಕಾಲ್ಮೂರು- ೨೦

[7] ತಿಪ್ಪೇಸ್ವಾಮಿ. ಎಸ್, ರಕ್ಷಣಾ ವಾಸ್ತುಶಿಲ್ಪ, ಚಿತ್ರದುರ್ಗ ಜಿಲ್ಲೆ (ಅಪ್ರಕಟಿತ ಪಿಎಚ್.ಡಿ ಮಹಾ ಪ್ರಬಂಧ) ಕನ್ನಡ ವಿಶ್ವವಿದ್ಯಾಲಯ – ೨೦೦೪, ಪುಟ – ೧೬೪

[8] ಕನ್ನಡ ವಿಷಯ ವಿಶ್ವಕೋಶ, ಪುಟ- ೧೨೦೪

[9] ಭೀಮರೆಡ್ಡಿ ಕೆ.ಎಸ್, (೧೯೮೭) ಮೊಳಕಾಲ್ಮೂರು ದರ್ಶನ, ಪುಟ – ೧೦

[10] ಕನ್ನಡ ವಿಷಯ ವಿಶ್ವಕೋಶ, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಪುಟ-೬೩೪

[11] ಭೀಮರೆಡ್ಡಿ ಕೆ. ಎಸ್. (೧೯೮೭) ಮೊಳಕಾಲ್ಮೂರು ದರ್ಶಣ, ಪುಟ – ೧೭

[12] ಎಫಿಗ್ರಫಿಯಾ ಕರ್ನಾಟಕ ಸಂ. ೧೧, ಮೊಳಕಾಲ್ಮೂರು-೨೫