ನೋಡಿದೋ ಬ್ರಹ್ಮಗಿರಿ : ತಾಯಿ ಶ್ರೀಕಾವೇರಿ
ಸಂಭವಿಪ ಶಿವಜೂಟ. ಸುತ್ತ ಆದಿಶೇಷನ
ಭೂಮತನು ಸುತ್ತುವರಿದಂತಿಹುದು ಪರ್ವತಾ-
ರಣ್ಯ ಶೈಲಿ ! ಮುಗಿಲಿಗೆ ಮುಡಿಯನೆತ್ತಿಹರಿಲ್ಲಿ
ನೂರು ಗಿರಿ ಗೊಮ್ಮಟರು ! ಕ್ಷೀರಸಾಗರವನ್ನು
ಗಗನ ಕುಂಭದಿ ತಂದು ಮಸ್ತಕಕೆ ಅಭಿಷೇಕ
ಗೈಯವೊಲು ತೋರುತಿವೆ ಸುತ್ತ ನೆರೆದಿಹ ಮೋಡ !
ಕ್ರಿಸ್ತಬುದ್ಧರ ಕರುಣೆ ಎತ್ತಲೂ ಸುರಿದಂತೆ
ಹೊಂಬಿಸಿಲು ! ಗಾಂಧೀಜಿಯ ಪ್ರಾರ್ಥನೆಯ ಗಾಂಭೀರ್ಯ
ಹೊಮ್ಮಿದೊಲು ಘನಮೌನ ! ವನಮಾಲಿ ನುಡಿಸುತಿಹ
ಕೊಳಲಿನೋಂಕಾರದೊಲು ಬೀಸಿರಲು ಸುಯ್‌ಗಾಳಿ
ಮಂತ್ರಮುಗ್ಧರ ತೆರದಿ ಮಲಗಿಹುದು ವಿಪಿನಾಳಿ !
ಕಾವೇರಿಯುದ್ಭವಕೆ ದಿವ್ಯಶಕ್ತಿಯ ತವರು
ಈ ಬ್ರಹ್ಮಗಿರಿ ನೋಡು ; ಸ್ವರ್ಗವೀಯೆಡೆ ಚೂರು !